ಅಮೆರಿಕೆಯಲ್ಲಿನ ಸಿರಿತನ ಬಡತನ ಎರಡೂ ನೋಡಿದೆ. ಅತಿಯಾಗಿ ಖರ್ಚು ಮಾಡುವವರನ್ನೂ ಕಂಡೆ, ಮಿತವಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚುವವರನ್ನೂ ನೋಡಿದ್ದೆ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಜಿಮ್ ಎಂಬ ಒಬ್ಬ ಸಹೋದ್ಯೋಗಿ ಹತ್ತು ಡಾಲರ್‌ಗೆ ತೊಳೆದು ಇಸ್ತ್ರಿ ಮಾಡಿ ಮಾರುತ್ತಿದ್ದ ಸಂಸ್ಥೆಯೊಂದರಿಂದ ಸೆಕಂಡ್ ಹ್ಯಾಂಡ್ ಟೀ ಶರ್ಟ್ ಕೊಂಡೆ ಅಂತ ಹೆಮ್ಮೆಯಿಂದ ಬೀಗಿದ್ದನ್ನು ನೋಡಿದ್ದೆ. ಜೀವನ ನಡೆಸಲು ದುಡ್ಡು ಇಲ್ಲ, ಡೊನೇಷನ್ ಕೊಡಿ ಅಂತ ಕೇಳುವ ಅಲ್ಲಿನವರನ್ನು ನೋಡಿದ್ದೆ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಕೊನೆಯ ಬರಹ

ಅವತ್ತು ಬ್ಲಾಕ್ ಫ್ರೈಡೆ ಡೀಲ್‌ನಲ್ಲಿ ನನ್ನ ಕಣ್ಣಿಗೆ ಸಿಕ್ಕಿದ್ದು ಗ್ರಾಮೋಫೋನ್ ಅಥವಾ ರೆಕಾರ್ಡ್ ಪ್ಲೇಯರ್! ಟೇಪ್ ರೆಕಾರ್ಡರ್‌ಗಿಂತ ಮೊದಲು ಇದ್ದಂತಹ, CD ಗಳ ಅಪ್ಪ ಅಂತ ಹೇಳಬಹುದಾದ, ಹಾಡು ಹೇಳುವ ಸಾಧನ ಅದು. ನಮ್ಮ ಮನೆಯಲ್ಲಿ ಈಗಾಗಲೇ ನನ್ನ ಅಪ್ಪನ ಕಾಲದಲ್ಲಿ ಕೊಂಡಿದ್ದು ಇತ್ತು. ಆದರೆ ಅದರ ಮುಳ್ಳು ಕಳೆದುಹೋಗಿತ್ತು. ನಮ್ಮ ಮನೆಯಲ್ಲಿ ಎಷ್ಟೋ ಹಳೆಯ ಕನ್ನಡ, ಹಿಂದಿ ಹಾಡುಗಳ ರೆಕಾರ್ಡ್‌ಗಳು ಇದ್ದರೂ ಅವುಗಳನ್ನು ಕೇಳಲು ಆಗುತ್ತಿರಲಿಲ್ಲ ಅಂತ ನನಗೆ ಹಾಗೂ ನನ್ನ ಅಪ್ಪನಿಗೆ ತುಂಬಾ ಬೇಸರ ಇತ್ತು. ಅಂತಹ ಸಾಧನವನ್ನು ಅಮೆರಿಕೆಯ ಅಂಗಡಿಯಲ್ಲಿ ನೋಡಿದಾಗ ಸಹಜವಾಗಿ ಅದನ್ನು ಕೈಗೆ ಎತ್ತಿಕೊಂಡಿದ್ದೆ. ಅದನ್ನು ಮನೆಗೆ ತಂದು ವಿಡಿಯೋ ಕರೆ ಮಾಡಿ ಅಪ್ಪನಿಗೆ ತೋರಿಸಿದ್ದೆ ಕೂಡ. ಅವರೂ ಖುಷಿ ಪಟ್ಟರು.

“ಯಾರರೆ ಬೆಂಗಳೂರಿಗೆ ಬರೋರು ಇದ್ದರ ಅವರ ಜೋಡಿ ಅದನ್ನ ಕಳಿಸಿ ಕೊಡತೀನಿ ಅಪ್ಪ” ಅಂದಿದ್ದೆ.

“ನೀನs ತೊಗೊಂಡ ಬಾರಲೇ ಮಗನs.. ” ಅಂತ ಬೊಚ್ಚು ಬಾಯಲ್ಲಿ ನಕ್ಕಿದ್ದರು. ಆ ನಗುವಿನಲ್ಲಿ ನನಗೊಂದು ಬೇಸರ ಕಂಡಿತ್ತು. ಮೊದಲೇ ವಾಪಸ್ಸು ಹೋಗಬೇಕು ಅನ್ನುತ್ತಿದ್ದ ನಾನು ಅಪ್ಪ ಹೀಗೆ ಹೇಳಿದ ಕೂಡಲೇ ಮತ್ತೂ ವಿಷಣ್ಣ ವದನನಾದೆ. ಅಪ್ಪ ನಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಮತ್ತೆ ಮತ್ತೆ ಹೀಗೆ ಅರಿವಿಗೆ ಬರುತ್ತಿತ್ತು.

ಹೀಗೆ ಇನ್ನೊಂದಿಷ್ಟು ದಿನಗಳು ಕಳೆದವು. ಕೆಲಸಕ್ಕೆ ಹೋಗೋದು ಬರೋದು, ಅಲ್ಲಿಲ್ಲಿ ಸುತ್ತಾಡೋದು, ಕನ್ನಡ ಸಂಘದಲ್ಲಿ ಹಬ್ಬಗಳು, ಆಚರಣೆಗಳು ಎಲ್ಲವೂ ಒಂದಾದ ಮೇಲೆ ಒಂದರಂತೆ ಬಂದು ಹೋಗುತ್ತಿದ್ದವು. ದಿನಗಳು ಉರುಳಿದ್ದು ಗೊತ್ತೆ ಆಗಲಿಲ್ಲ…

*****

ಅಲ್ಲಿ ಒಮ್ಮೆ ನನ್ನ ಕಾರ್ ಕೈ ಕೊಟ್ಟ ಸಂದರ್ಭದಲ್ಲಿ ಒಂದು Taxy ಯಲ್ಲಿ ಎಲ್ಲಿಗೋ ಹೋಗಿದ್ದೆವು. ಅದನ್ನು ಚಲಾಯಿಸುತ್ತಿದ್ದ ಡ್ರೈವರ್‌ಗೆ ನಾವು ಭಾರತದವರು ಅಂತ ಗೊತ್ತಾದಾಗ, ತನಗೆ ಭಾರತ ತುಂಬಾ ಇಷ್ಟ ಅಂತಲೂ, ತಾನು ನಿಮ್ಮ ಪ್ರಧಾನಿ ಮೋದಿಯವರನ್ನು follow ಮಾಡುತ್ತಿದ್ದೇನೆ; ಅವರು ನಿಮ್ಮ ದೇಶಕ್ಕೆ ತುಂಬಾ ಒಳ್ಳೆಯದು ಮಾಡುತ್ತಾರೆ ಅಂತ ಹೇಳುತ್ತಿದ್ದರು. ಅಮೆರಿಕೆಯಲ್ಲಿ ಡ್ರೈವರ್ ಆಗಿದ್ದ ತಾನು ಆಫ್ರಿಕಾ ಖಂಡದ ಯಾವುದೋ ದೇಶದಲ್ಲಿ ಎಕನಾಮಿಕ್ಸ್ ಕಲಿಸುತ್ತಿದ್ದೆ ಅಂತ ಹೇಳಿದರು. ನನಗೆ ಅವರು ನಮ್ಮ ದೇಶ ಹಾಗೂ ಪ್ರಧಾನಿಯನ್ನು ಹೊಗಳಿದಾಗ ಸಹಜವಾಗಿ ಹೆಮ್ಮೆ ಅನಿಸಿತು. ಅದಾಗಲೇ ಭಾರತದಲ್ಲಿ ಮೋದಿಯವರು Demonetization ಮಾಡಿದ್ದರು. 1000 ಹಾಗೂ 500 ರೂಪಾಯಿಗಳ ಹಳೆಯ ನೋಟುಗಳನ್ನು ಹಿಂಪಡೆಯುವ ನಿರ್ಧಾರವದು. ಅದರ ಸಾಧಕ ಬಾಧಕಗಳ ಬಗ್ಗೆ ಇಡೀ ದೇಶವೇ ಚರ್ಚೆ ಮಾಡುತ್ತಿತ್ತು. Demonetization ನಿಂದ ಎಷ್ಟೋ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಸುದ್ದಿಗಳನ್ನು ಕೇಳಿ ವಿಚಿತ್ರ ಅನಿಸಿತ್ತು. ನಗದನ್ನು ಅಷ್ಟಾಗಿ ಕೂಡಿಟ್ಟಿರದ ನನ್ನಂತಹ ಡಿಜಿಟಲ್ ವ್ಯಕ್ತಿಗಳಿಗಂತೂ ತೊಂದರೆ ಆಗಿರಲಿಲ್ಲ. ಬಡವರಿಗೂ ಸಮಸ್ಯೆ ಆಗುವ ಸಾಧ್ಯತೆ ಇರಲಿಲ್ಲ. ಕಪ್ಪು ಹಣ ಹೊಂದಿದವರಿಗೆ ಖಂಡಿತ ಸಮಸ್ಯೆ ಆಗಿರಬೇಕು. ಹಾಗಾಗಿದ್ದರೆ ಒಳ್ಳೆಯದೇ ಅಲ್ಲವೇ ಅಂತ ಅನಿಸಿತ್ತು. ಅಮೆರಿಕೆಯಲ್ಲೂ ಕೂಡ cash economy ಜಾಸ್ತಿನೇ ಎಂಬಷ್ಟು ಇತ್ತು. ಅಷ್ಟೊಂದು ಮುಂದುವರಿದ ದೇಶ ಅಂತ ಹೇಳಿಕೊಳ್ಳುವ ಅಲ್ಲಿ digital ಬಳಕೆ ಅತಿ ಕಡಿಮೆ ಅನಿಸುವಷ್ಟು ಇತ್ತು. ಎಷ್ಟೋ ಜನರು ಆಗಲೂ ನಗದಿನಲ್ಲಿ ಇಲ್ಲವೇ ಚೆಕ್ ಮುಖಾಂತರ ವ್ಯವಹಾರ ಮಾಡುತ್ತಿದ್ದರು. ನಾವು ಸುಲಭವಾಗಿ ಮಾಡುತ್ತಿದ್ದ ಬ್ಯಾಂಕ್ ಟ್ರಾನ್ಸಫರ್ (NEFT) ಯಂತಹ ವ್ಯವಸ್ಥೆ ಕೂಡ ಆಗ ಅಲ್ಲಿ ಇದ್ದಿದ್ದನ್ನು ನಾನಂತೂ ಕಾಣಲಿಲ್ಲ. ಭಾರತದಲ್ಲಿ ಅದಾಗಲೇ UPI ಪೇಮೆಂಟ್ ಕೂಡ ಶುರು ಆಗಿತ್ತು. ಅದು ನನಗೆ ಕಳೆದ ಸಲ ಭಾರತಕ್ಕೆ ಹೋದಾಗಲೇ ಗೊತ್ತಾಗಿತ್ತು.

ಒಟ್ಟಿನಲ್ಲಿ ಇಂತಹ ಹಲವಾರು ಸುಧಾರಣೆಗಳು, ಹಾಗೂ ಒಂದಿಷ್ಟು ಗಟ್ಟಿ ನಿರ್ಧಾರಗಳನ್ನು ತ್ವರಿತವಾಗಿ ತೆಗೆದುಕೊಳ್ಳುವ ಒಬ್ಬ ನಾಯಕ ನಮ್ಮ ದೇಶಕ್ಕೆ ಸಿಕ್ಕಿದ್ದಾರೆ ಎಂಬುದು ನನಗೆ ಖಚಿತವಾಗಿತ್ತು. ಇಂತಹ ಸಮಯದಲ್ಲಿ ಭಾರತದಲ್ಲಿ ಇರಬೇಕಿದ್ದ ನಾನು ಅಮೆರಿಕೆಯಲ್ಲಿ ಇದ್ದುಕೊಂಡು ಏನು ಮಾಡುತ್ತಿರುವೆ ಎಂಬಂತಹ ಭಾವನೆ ನನಗೆ ಅತಿಯಾಗಿ ಕಾಡತೊಡಗಿತ್ತು. ಅಪ್ಪನ ನೆನಪಿನ ಜೊತೆಗೆ ಇಂತಹ ಘಟನೆಗಳಿಂದ ದೇಶಕ್ಕೆ ವಾಪಸ್ಸಾಗುವ ತುಡಿತ ಇನ್ನೂ ಜಾಸ್ತಿ ಆಗಿತ್ತು. ಅದು ದೇವರಿಗೂ ಕೇಳಿಸಿತೋ ಏನೋ!

ಅದೇ ವೇಳೆಗೆ ನಮ್ಮ ಪ್ರಾಜೆಕ್ಟ್ ಕೂಡ ಮುಗಿಯಲು ಬಂದಿತ್ತು. ನಾನು ಯಾವ ಕಂಪೆನಿಗೆ ಕೆಲಸ ಮಾಡುತ್ತಿದ್ದೆನೋ ಆ ಕಂಪೆನಿಗೆ ನಮ್ಮ ಸಾಫ್ಟವೇರ್ ಕಂಪೆನಿಯಿಂದ ಕೊಡುತ್ತಿದ್ದ ಸೇವೆಯಲ್ಲಿ ಕೆಲವು ತಾಂತ್ರಿಕ ಕೆಲಸಗಾರರನ್ನು ಹೊರತುಪಡಿಸಿ ಮಿಕ್ಕ ಹಲವಾರು ಪ್ರಾಜೆಕ್ಟ್ ಮೇನೇಜ್ಮೆಂಟ್ ತಂಡವನ್ನು ಅಮೆರಿಕೆಯ ಇತರ ರಾಜ್ಯಗಳಲ್ಲಿ ಇರುವ ಬೇರೆ ಬೇರೆ ಪ್ರಾಜೆಕ್ಟ್‌ಗಳಿಗೆ ಕಳಿಸುವಂತೆ ಆದೇಶ ಬಂದಿತ್ತು. ಒಂದೂವರೆ ವರ್ಷದ ಸುದೀರ್ಘ ಅವಧಿಯ ಪ್ರಾಜೆಕ್ಟ್ ಮುಗಿದಿತ್ತು. ನನ್ನ ಮುಂದಿನ assignment ಫ್ಲೊರಿಡ ರಾಜ್ಯದಲ್ಲಿ ಇತ್ತು. ಅದಕ್ಕಾಗಿ ಚೈನಾ ದೇಶದಿಂದ ಬಂದು ನೆಲೆಸಿದ್ದ ಮೇರಿ ಎಂಬ ಬಾಸ್ ನನ್ನ ಸಂದರ್ಶನ ಮಾಡಲು ಕರೆ ಮಾಡಿದಳು. ಅಲ್ಲಿನ ಎಲ್ಲವೂ ಚೈನಾದಿಂದಲೇ ಬರುತ್ತಿರುವಾಗ ಬಾಸ್‌ಗಳು ಯಾಕೆ ಬರಬಾರದು?! ಚೈನಾ ವಸ್ತುಗಳನ್ನು ಅನಿವಾರ್ಯವಾಗಿ ಖರೀದಿ ಮಾಡಲೇಬೇಕಿತ್ತಾದರೂ “ಚೈನಾ ಬಾಸ್” ಅನ್ನು ನಿರಾಕರಿಸುವ ಅಧಿಕಾರ ಹಾಗೂ ಸ್ವಾತಂತ್ರ್ಯ ನನಗಿತ್ತು! ನಾನು ಈಗಾಗಲೇ ವಾಪಸ್ಸು ಹೋಗುವ ಮನಸ್ಸು ಮಾಡಿದ್ದರಿಂದ ಅವಳು ಹೇಳಿದ ಪ್ರಾಜೆಕ್ಟ್ ಅನ್ನು ನಿರಾಕರಿಸಿದೆ. ಅಲ್ಲಿ ಇರುವ ಅನಿವಾರ್ಯತೆ ನನಗೆ ಇರಲಿಲ್ಲ.

ನಾನಿದ್ದ ಕಂಪೆನಿ ನಿಯಮಗಳ ಪ್ರಕಾರ ಒಂದು ಪ್ರಾಜೆಕ್ಟ್ ಮುಗಿದ ಮೇಲೆ ಹದಿನೈದು ದಿವಸಗಳಲ್ಲಿ ಬೇರೆ ಪ್ರಾಜೆಕ್ಟ್‌ಗೆ ಸೇರಲೇಬೇಕು. ಅದಕ್ಕಿಂತ ಹೆಚ್ಚು ದಿನಗಳು ಕೆಲಸ ಇಲ್ಲದೆಯೇ ಅಲ್ಲಿಯೇ ಉಳಿಯುವಂತಿಲ್ಲ. ವಾಪಸ್ಸು ಭಾರತಕ್ಕೆ ಹೋಗಿ ಮತ್ತೆ ಇನ್ನೊಂದು ಪ್ರಾಜೆಕ್ಟ್ ಸಿಕ್ಕರೆ ಹಾಗೂ ವೀಸಾ ಅವಧಿ ಇನ್ನೂ ಇದೆಯೆಂದರೆ ಮತ್ತೆ ಅಮೆರಿಕೆಗೆ ಬರಬಹುದು. ಆದರೆ ನನಗೆ ಅಲ್ಲಿಂದ ಹೋದರೆ ಸಾಕಾಗಿತ್ತು. ನನ್ನ ವೀಸಾ ಅವಧಿ ಇನ್ನೂ ಎರಡು ವರ್ಷಗಳು ಬಾಕಿ ಇತ್ತು.

ನನ್ನ ಜೊತೆಯಲ್ಲಿಯೇ ಕೆಲಸ ಮಾಡುತ್ತಿದ್ದ ಇನ್ನೊಬ್ಬ ಸಹೋದ್ಯೋಗಿಗೂ ಕೂಡ ಆ ಪ್ರಾಜೆಕ್ಟ್‌ನಿಂದ ಬಿಡುಗಡೆ ಆಗಿತ್ತು. ಅವನು ಮಾತ್ರ ತುಂಬಾ ಬೇಜಾರಲ್ಲಿದ್ದ ಹಾಗೂ ಅತಿ ಒತ್ತಡದಲ್ಲಿದ್ದ. ಅವನು ಆಗತಾನೇ ಸಾಲ ಮಾಡಿ ಹೊಚ್ಚ ಹೊಸ ದುಬಾರಿ ಕಾರ್ ಕೊಂಡುಕೊಂಡಿದ್ದ. ಮನೆಯಲ್ಲಿ ಆಧುನಿಕ ಹಾಗೂ ಬೆಲೆಬಾಳುವ ಪೀಠೋಪಕರಣಗಳನ್ನು ಇತ್ತೀಚೆಗಷ್ಟೇ ಮಾಡಿಸಿದ್ದ. ಅಲ್ಲಿ ಇರುವಷ್ಟೂ ದಿನಗಳು ಅವನು ಅಮೆರಿಕೆಯಲ್ಲಿ ಎಲ್ಲಿಯೂ ಪ್ರವಾಸಕ್ಕೆ ಕೂಡ ಹೋಗಿರಲಿಲ್ಲ. ಅತಿ ಮುಖ್ಯವಾಗಿ ಅವನಿಗೆ ವಾಪಸ್ಸು ಭಾರತಕ್ಕೆ ಹೋಗುವ ಮನಸ್ಸು ಇರಲೇ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಜನ ಏನೆಂದುಕೊಂಡರು ಎಂಬ ಭಯ ಅವನಿಗಿತ್ತು. ಅಲ್ಲಿ ಕೆಲವು ದೇಸಿಗಳು ಹೀಗೆ ಮರ್ಯಾದೆಗೆ ಅಂಜಿ ವಾಪಸ್ಸು ಬರದೇ ಅಲ್ಲಿಯೇ ಏನೋ ಒಂದು ಮಾಡಿಕೊಂಡು ಇದ್ದಾರೆ. ನಾವು ಭಾರತೀಯರಷ್ಟು ಬೇರೆಯವರಿಗಾಗಿ ಬದುಕುವವರು ಜಗತ್ತಿನಲ್ಲಿ ಯಾರೂ ಇರಲಿಕ್ಕಿಲ್ಲ ಅನ್ನೋದು ನನ್ನ ಭಾವನೆ. ಅಮೆರಿಕೆಗೆ ಹೋಗಿ ಅಲ್ಲಿದ್ದ ಮೇಲೆ ಅದೊಂದನ್ನು ಕಲಿತೆವು. ಬೇರೆಯವರು ಏನೆಂದುಕೊಂಡಾರು ಎಂಬ ಕಟ್ಟುಗಳನ್ನು ಕಿತ್ತು ಬಿಸಾಕಿದೆವು. ಇನ್ನು ಮುಂದೆ ನಮಗಾಗಿ ಬದುಕಬೇಕು, ನಾವು ಅಂದುಕೊಂಡಿದ್ದನ್ನು ಮಾಡಬೇಕು ಎಂಬ ದಿಟ್ಟತನ ಕಲಿಸಿದ್ದು ಇದೇ ಅಮೆರಿಕ ದೇಶ. ಅದಕ್ಕೆ ನಾನು ಚಿರ ಋಣಿ!

ಇನ್ನು ಹದಿನೈದು ದಿನಗಳಲ್ಲಿ ಬೇರೆ ಪ್ರಾಜೆಕ್ಟ್ ಸಿಗದೇ ಹೋದರೆ ನನ್ನ ಸಹೋದ್ಯೋಗಿ ಭಾರತಕ್ಕೆ ವಾಪಸ್ಸು ಹೋಗಲೇಬೇಕಿತ್ತು. ಅದು ನನಗೂ ಅನ್ವಯಿಸುತ್ತಿತ್ತು. ನಾನು ವಾಪಸ್ಸು ಹೋಗಲು ತುದಿಗಾಲಲ್ಲಿ ನಿಂತಿದ್ದನ್ನು ನೋಡಿ ಅವನಿಗೆ ಆಶ್ಚರ್ಯ ಆಗಿತ್ತು. ನನ್ನ ಬಳಿ ಅತಿ ಕಡಿಮೆ ಬೆಲೆಯ ಸೆಕಂಡ್ ಹ್ಯಾಂಡ್ ಕಾರ್ ಇತ್ತು, 100 ಡಾಲರ್ ನ ಟಿವಿ ಇತ್ತು, ವಯಸ್ಸಾದವರು ಬಂದರೆ ಇರಲಿ ಅಂತ 100 ಡಾಲರ್ ಕಿಂತ ಕಡಿಮೆ ಬೆಲೆಯ ಸೋಫಾ ಇತ್ತು. ಇಂತಹ ನಿರ್ಜೀವ ವಸ್ತುಗಳ ಮೇಲೆ ವ್ಯಾಮೋಹ ಬೆಳೆಸಿಕೊಂಡರೆ ಅಲ್ಲಿಯೇ ಇದ್ದುಬಿಟ್ಟೇವು ಎಂಬ ಕಾರಣಕ್ಕೆ ಅತಿ ಅವಶ್ಯಕ ವಸ್ತುಗಳನ್ನು ಮಾತ್ರ ಇಟ್ಟುಕೊಂಡಿದ್ದೆವು. ಅದೂ ಅಲ್ಲದೆ ಅಮೆರಿಕೆಯ ಹಲವಾರು ಕಡೆ ಪ್ರವಾಸಕ್ಕೆ ಹೋಗಿ ದೇಶ ಸುತ್ತಿದ ತೃಪ್ತಿ ಇತ್ತು.. ಹೀಗಾಗಿ ಈ ದೇಶವನ್ನು ಬಿಟ್ಟು ಹೋಗಲು ನನಗೇನೂ ದುಃಖ ಇರಲಿಲ್ಲ. ನನ್ನ ಆಗಿನ ಸ್ಥಿತಿ “ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ” ಎಂಬಂತಿತ್ತು.

ಅಮೆರಿಕೆಯಲ್ಲಿನ ಸಿರಿತನ ಬಡತನ ಎರಡೂ ನೋಡಿದೆ. ಅತಿಯಾಗಿ ಖರ್ಚು ಮಾಡುವವರನ್ನೂ ಕಂಡೆ, ಮಿತವಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚುವವರನ್ನೂ ನೋಡಿದ್ದೆ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಜಿಮ್ ಎಂಬ ಒಬ್ಬ ಸಹೋದ್ಯೋಗಿ ಹತ್ತು ಡಾಲರ್‌ಗೆ ತೊಳೆದು ಇಸ್ತ್ರಿ ಮಾಡಿ ಮಾರುತ್ತಿದ್ದ ಸಂಸ್ಥೆಯೊಂದರಿಂದ ಸೆಕಂಡ್ ಹ್ಯಾಂಡ್ ಟೀ ಶರ್ಟ್ ಕೊಂಡೆ ಅಂತ ಹೆಮ್ಮೆಯಿಂದ ಬೀಗಿದ್ದನ್ನು ನೋಡಿದ್ದೆ. ಜೀವನ ನಡೆಸಲು ದುಡ್ಡು ಇಲ್ಲ, ಡೊನೇಷನ್ ಕೊಡಿ ಅಂತ ಕೇಳುವ ಅಲ್ಲಿನವರನ್ನು ನೋಡಿದ್ದೆ. ಬರಿ ಭಾರತದ ಬಡತನದ ಬಗ್ಗೆ ಜಗತ್ಪ್ರಸಿದ್ಧಿ ನೀಡುವ ಅಮೆರಿಕೆ ನಿಜವಾಗಿಯೂ ಶ್ರೀಮಂತ ರಾಷ್ಟ್ರ ಹೌದೇ ಅಥವಾ ಬರಿ ತೋರಿಕೆಯೇ ಎಂಬ ಸಂಶಯ ಇಂತಹದ್ದನ್ನೆಲ್ಲ ನೋಡಿದಾಗ ಇನ್ನೂ ಬಲವಾಗುತ್ತಿತ್ತು. ಒಟ್ಟಿನಲ್ಲಿ ವಿದೇಶದ ಎಲ್ಲವೂ ನಮ್ಮ ಕಣ್ಣಿಗೆ ನುಣ್ಣಗೆ ಕಾಣುತ್ತದೆ; ಅಲ್ಲಿನ ಭಿಕ್ಷುಕರನ್ನೂ ಸೇರಿಸಿ! ನಮ್ಮವರು ಅಲ್ಲಿನ ಒಳ್ಳೆಯದನ್ನೇ ಹೇಳುತ್ತಾ ಇರುತ್ತಾರೆ ಹಾಗೂ ನಮ್ಮ ದೇಶದಲ್ಲಿ ಎಲ್ಲವೂ ಕೆಟ್ಟದ್ದು ಅಂತ ಬಿಂಬಿಸುತ್ತಾರೆ! ಎಲ್ಲ ಕಡೆಯೂ ಒಳ್ಳೆಯದು ಕೆಟ್ಟದ್ದು ಎರಡೂ ಇದೆ. ಆದರೆ ನಮ್ಮವರಿಗೆ ಯಾವಾಗಲೂ imported ವಸ್ತುಗಳೆ ಶ್ರೇಷ್ಟ ಎಂಬುದನ್ನು ಬ್ರಿಟಿಷರು ಕಲಿಸಿ ಹೋಗಿದ್ದರಲ್ಲ.

ನಾವು ಹೋಗುವ ನಿರ್ಧಾರ ಕೇಳಿ ಹಲವರು ಬೇಜಾರು ಮಾಡಿಕೊಂಡರು. ಕೆಲವರು ಬೈದರು. ಅಲ್ಲಿ ಹೋಗಿ ಏನು ಮಾಡ್ತೀಯಾ? ಅಂತ ಕೇಳಿದರು. ಅದೇಕೋ ಅಲ್ಲಿನ ತುಂಬಾ ಜನರಿಗೆ ಭಾರತಕ್ಕೆ ವಾಪಸ್ಸು ಹೋದರೆ ಏನು ಮಾಡಬೇಕು ಎಂಬ ಬಗ್ಗೆ ದೊಡ್ಡ ಚಿಂತೆ ಇರುತ್ತದೆ. ಅಲ್ಲಿ ಏನೂ ಅವಕಾಶಗಳೆ ಇಲ್ಲವೇನೋ ಎಂಬಂತೆ ವರ್ತಿಸುತ್ತಾರೆ. ಅದಕ್ಕೆ ಕಾರಣ ಅಮೆರಿಕೆಯಲ್ಲಿನ ಅತಿ ಸರಾಗವಾದ ಜೀವನ ಶೈಲಿಯೇ ಇದ್ದೀತು. ಕೆಲವರು ನಾವು ಹೊರಟಿದ್ದೇವೆ ಅಂತ ತಿಳಿದು ತಮ್ಮ ಮನೆಗೆ ಊಟಕ್ಕೆ ಕರೆಯತೊಡಗಿದರು. ಇದೆ ನೆಪದಲ್ಲಿ ಒಂದಿಷ್ಟು ಕಡೆಗಳಲ್ಲಿ ಮೃಷ್ಟಾನ್ನ ಭೋಜನ ಸವಿಯವ ಅವಕಾಶ ಸಿಕ್ಕಿತು. ನಾನಿದ್ದ ಒಂದೂವರೆ ವರ್ಷಗಳಲ್ಲಿ ತುಂಬಾ ಜನರನ್ನು ಅಲ್ಲಿ ಹಚ್ಚಿಕೊಂಡಿದ್ದೆವು. ನಾನು ಆಗಿನ ವರ್ಷದ ಕನ್ನಡ ಸಂಘದ ಅಧ್ಯಕ್ಷ ಕೂಡ ಆಗಿದ್ದೇ. ಏನೇನೋ ಹೊಸ ಹೊಸ ಪ್ರಯೋಗಗಳನ್ನು ಮಾಡಿದ್ದೆ. ಅಲ್ಲಿದ್ದರೆ ಇನ್ನೂ ಏನೇನೋ ಮಾಡಬಹುದಿತ್ತು. ಆದರೆ ಆ ಕ್ಷಣಕ್ಕೆ ವಾಪಸ್ಸು ಹೋಗುವುದು ನನ್ನ ಆದ್ಯತೆಯಾಗಿತ್ತು. ಮತ್ತೆ ಬನ್ನಿ ಅಂತ ಕೂಡ ಹಲವರು ಹೇಳಿದರು. “ನಿನ್ನಷ್ಟು ಬಿಸಿ ರಕ್ತ ಇರೋವರು ಯಾರೂ ಬಂದಿರಲಿಲ್ಲ ಬಿಡಲಾ..” ಅಂತ ಚಂದ್ರು ಹೊಗಳಿದ್ದ. ನಾನು ಹಾಗೂ ಆಶಾ ಎಲ್ಲ ಸಭೆ ಸಮಾರಂಭಗಳಲ್ಲಿ ತುಂಬಾ ಉತ್ಸಾಹದಿಂದ ಪಾಲ್ಗೊಳ್ಳುವ ಬಗೆ ಹಾಗೂ ಕೆಲವು ವಿನೂತನ ಕಾರ್ಯಕ್ರಮಗಳನ್ನು ನಾನು ಮಾಡಿದ ರೀತಿ ಇವೆಲ್ಲ ಅವನಿಗೆ ಇಷ್ಟ ಆಗಿದ್ದವು. ಹೋದ ಮೇಲೆ ಟಚ್‌ನಲ್ಲಿ ಇರೋಣ ಅಂದಿದ್ದಕ್ಕೆ “ಔಟ್ ಆಫ್ ಸೈಟ್ ಈಸ್ ಔಟ್ ಆಫ್ ಮೈಂಡ್” ಅಂತ ಹೇಳಿ, ಮುಂದೆ ನಾನು ನೀನು ಮಾತಾಡೋದು ಕೂಡ ಸಾಧ್ಯ ಆಗಲಿಕ್ಕಿಲ್ಲ ಎಂಬ ಮುನ್ಸೂಚನೆ ಕೊಟ್ಟಿದ್ದ! ಅದು ಪಕ್ಕಾ ಅಮೆರಿಕನ್ ಯೋಚಿಸುವ ರೀತಿ. ಅದನ್ನು ಮಾತ್ರ ಅವರಿಂದ ನಾನು ಕಲಿಯಲಿಲ್ಲ!

ನಾವು ಭಾರತಕ್ಕೆ ಮರಳುವುದಕ್ಕಿಂತ ಸ್ವಲ್ಪ ಮುಂಚೆ ಅಲ್ಲಿನ ಚಿತ್ರ ಮಂದಿರ ಒಂದರಲ್ಲಿ “ಕಿರಿಕ್ ಪಾರ್ಟಿ” ಸಿನೆಮಾ ಪ್ರದರ್ಶನ ಇತ್ತು. ಅದೇ ನಾನು ಅಲ್ಲಿ ನೋಡಿದ ಕೊನೆಯ ಚಲನಚಿತ್ರ. ಅದರಲ್ಲಿನ ಜಯಂತ ಕಾಯ್ಕಿಣಿ ಬರೆದ “ಸಿಕ್ಕೀತೆ ಮುದಿನ ದಾರಿ” ಎಂಬ ಹಾಡು ನನಗೆ ಬಹಳ ಇಷ್ಟವಾಗಿತ್ತು. ಬಹುಶಃ ಆಗಿನ ನನ್ನ ಪರಿಸ್ಥಿತಿಗೆ ಅದು ಹೇಳಿ ಹಾಡಿಸಿದಂತಿತ್ತು. ಭಾರತಕ್ಕೆ ಹೋಗಿ ಮತ್ತೆ ಸಾಫ್ಟವೇರ್ ಕೆಲಸದಲ್ಲಿ ಸಿಕ್ಕಿಕೊಳ್ಳುವ ಮನಸ್ಸು ನನಗೆ ಇರಲಿಲ್ಲ. ಇಪ್ಪತ್ತು ವರ್ಷ ದುಡಿದಿದ್ದು ಸಾಕು ಅನಿಸಿತ್ತು. ಕೆಲಸ ಬಿಟ್ಟು ಏನಾದರೂ ಮಾಡಬೇಕು ಎಂಬ ವಿಚಾರ ಬಂತು. ಅಮೆರಿಕೆಯಿಂದ ನೋಡಿದಾಗ ಭಾರತದಲ್ಲಿ ಎಷ್ಟೊಂದು ಅವಕಾಶಗಳು ಇವೆಯಲ್ಲ ಅಂತ ಅನಿಸಿತು. ಕೈಯಲ್ಲಿ ಒಂದಿಷ್ಟು ಹಣವೂ ಇತ್ತು. ಮುಂದೊಮ್ಮೆ ಕೆಲಸ ಬಿಟ್ಟಾಗ ಇರಲಿ ಅಂತ ಕೊಂಡುಕೊಂಡಿದ್ದ ನಾಲ್ಕು ಎಕರೆ ಹೊಲ ದಾಸನಕೊಪ್ಪದಲ್ಲಿ ಹಾಗೆಯೇ ಬಿಟ್ಟು ಬಂದಿದ್ದೆನಲ್ಲ! ಕೆಲಸ ಬಿಟ್ಟು ಏನು ಮಾಡ್ತೀಯಾ ಎಂಬ ಆಶಾಳ ಪ್ರಶ್ನೆಗೆ ಏನೋ ಒಂದು ಮಾಡ್ತೀನಿ ಬಿಡಲೇ ಎಂಬ ಉತ್ತರ ಕೊಟ್ಟಿದ್ದೇನಾದರೂ, ಮನಸ್ಸಿನಲ್ಲಿ “ಸಿಕ್ಕೀತೆ ಮುಂದಿನ ದಾರಿ” ಹಾಡು ನನ್ನೆಲ್ಲ ಕಲ್ಪನೆಗಳನ್ನು ಮೀರಿ ಏನೋ ಒಂದು ಯೋಜನೆಯನ್ನು ಆಸ್ಪಷ್ಟವಾಗಿ ತೋರಿಸುತ್ತಿತ್ತು. ನಾನು ಕಣ್ಣು ಮುಚ್ಚಿ ಕೂತಿದ್ದೆ. 16 ಗಂಟೆಗಳ flight ನನ್ನಂತಹ ಎಷ್ಟೋ ಜನರನ್ನು ಹೊತ್ತು ತನ್ನ ಗತಿಯಲ್ಲಿ ತಾನು ಆಕಾಶದಲ್ಲಿ ತೇಲುತ್ತ ಸಾಗಿತ್ತು. ನಾನು ಬರುತ್ತಿರುವುದನ್ನು ಅಪ್ಪ ಕಾತುರನಾಗಿ ಕಾಯುತ್ತಿದ್ದ ಚಿತ್ರ ಕಣ್ಣ ಮುಂದೆ ಬಂತು. ನಾನು ಇನ್ನು ಕೆಲವೇ ಗಂಟೆಗಳಲ್ಲಿ ಭಾರತವನ್ನು ಮುಟ್ಟುವ ತವಕದೊಂದಿಗೆ ತುದಿಗಾಲಲ್ಲಿ ಕೂತಿದ್ದೆ..

(ಸಧ್ಯಕ್ಕೆ ಮುಗಿಯಿತು… )
(ಹಿಂದಿನ ಕಂತು: “ಡೀಲ್‌” ಬೆನ್ನಟ್ಟಿದ ಕುರಿಗಳು ಸಾರ್‌ ಕುರಿಗಳು)