ಸೆಲ್ವಮ್ ದೇಹದ ಹತ್ತಿರ ಕನಕ, ಮಣಿ ಮತ್ತು ಸುಮತಿ ನಿಂತುಕೊಂಡು ರೋದನೆ ಮಾಡುತ್ತಿದ್ದರು. ಸಾರ್ವಜನಿಕರು, ಕಾರ್ಮಿಕರು, ಅಧಿಕಾರಿಗಳು ಎಲ್ಲರೂ ಬಂದು ಸತ್ತವರಿಗೆ ಹೂಮಾಲೆಗಳನ್ನು ಅರ್ಪಿಸಿದರು. ಹೂಮಾಲೆಗಳು ಎತ್ತಿನ ಬಂಡಿಗಳು ತುಂಬುವಷ್ಟು ಬಿದ್ದಿದ್ದವು. ಕೊನೆಗೆ ಐದೂ ಮೃತ ದೇಹಗಳನ್ನು ಮೂರು ವ್ಯಾನ್‌ಗಳಲ್ಲಿ ಹಾಕಿಕೊಂಡು ಕುಪ್ಪಂ ರಸ್ತೆಯಲ್ಲಿ ರೋಜರಸ್ ಕ್ಯಾಂಪ್ ಹತ್ತಿರ ಇರುವ ಗಣಿ ಕಾರ್ಮಿಕರ ಸಮಾಧಿ ಕಡೆಗೆ ಮೆರವಣಿಗೆಯಲ್ಲಿ ಹೋಗಿ ಗೌರವಪೂರ್ವಕವಾಗಿ ಅವರವರ ಕುಟುಂಬಗಳಿದ್ದ ಸಮಾಧಿಗಳ ಮಧ್ಯೆ ಸಮಾಧಿ ಮಾಡಲಾಯಿತು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಎಂಟನೆಯ ಕಂತು ನಿಮ್ಮ ಓದಿಗೆ
ಬೆಳಿಗ್ಗೆ ಸೆಲ್ವಮ್ ತಿಂಡಿ ತಿಂದು, ಯುನಿಫಾರ್ಮ್ ಧರಿಸಿ ಎಂದಿನಂತೆ ಸೈಕಲ್ ತೆಗೆದುಕೊಂಡು ಕೆಲಸಕ್ಕೆ ಹೊರಟರು. ಕನಕ, ಸೆಲ್ವಮ್ ಹೋಗುವುದನ್ನೇ ಹಿಂದಿನಿಂದ ನೋಡಿ ಸೆಲ್ವಮ್ ಮರೆಯಾದ ಮೇಲೆ ಮನೆ ಒಳಕ್ಕೆ ಬಂದು ಮತ್ತೆ ಕೆಲಸದಲ್ಲಿ ತೊಡಗಿಕೊಂಡಳು. ಮಣಿ ಮಾಮೂಲಿಯಾಗಿ ಉದ್ದಂಡಮ್ಮಾಳ್ ಗುಡಿ ಮುಂದೆ ಸೆಲ್ವಿ ಮತ್ತು ಅವಳ ಗೆಳತಿಯರಿಗಾಗಿ ಕಾಯುತ್ತಿದ್ದು ಅವರು ಬಂದಿದ್ದೆ ಅವರ ಹಿಂದೆ ಹೊರಟ. ವಿಶೇಷ ಎಂಬಂತೆ ಸೆಲ್ವಮ್ ಕೈಯಲ್ಲಿ ಎರಡು ಪುಸ್ತಕಗಳನ್ನು ಹಿಡಿದುಕೊಂಡಿದ್ದನು. ಸೆಲ್ವಿ ಕಾಲೇಜ್ ಒಳಗೆ ಸುಮ್ಮನೆ ಸುತ್ತಾಡುವುದರ ಬದಲು ಲೈಬ್ರರಿಯಲ್ಲಿ ಕುಳಿತುಕೊಂಡು ಓದುವಂತೆ ಮಣಿಗೆ ಆಜ್ಞೆ ಮಾಡಿದ್ದಳು. ಮಣಿ ಓದುತ್ತೇನೆಂದು ಪ್ರಮಾಣ ಮಾಡಿ ಕಾಲೇಜಿಗೆ ಬರುತ್ತಿದ್ದನು. ಮಣಿ ಮತ್ತು ಸೆಲ್ವಿಯನ್ನು ಜೋಡಿಯಾಗಿ ನೋಡಿದ ಕೂಡಲೇ ವಿದ್ಯಾರ್ಥಿಗಳು “ಒನ್ ಎಫ್, ಒನ್ ಪಿ” ಎಂದು ಗುಸುಗುಸು ನಗುತ್ತಿದ್ದರು. ಬಹಳ ದಿನಗಳು ಸೆಲ್ವಿ ಮತ್ತು ಮಣಿಗೆ ಅದು ಅರ್ಥವಾಗಲಿಲ್ಲ. ಕೊನೆಗೆ ತಿಳಿದ ವಿಷಯವೆಂದರೆ ಒನ್ ಫೇಲ್ ಮತ್ತು ಒನ್ ಪಾಸ್ ಎನ್ನುವುದು.
***
ಬೆಳಿಗ್ಗೆ ಒಂತ್ತು ಗಂಟೆ ಸಮಯ. ಕನಕ ಮತ್ತು ಸುಮತಿಯ ಜೊತೆಗೆ ಇನ್ನಿಬ್ಬರು ಮಹಿಳೆಯರು ಕನಕಳ ಮನೆಯಲ್ಲಿ ಕುಳಿತುಕೊಂಡಿದ್ದಾರೆ. ಕನಕ ಮೈನಿಂಗ್ ಕೂಪನ್‌ನಲ್ಲಿ ಹಾಕಿಸಿಕೊಂಡು ಬಂದಿದ್ದ ಅಕ್ಕಿಯನ್ನು ಮೊರದಲ್ಲಿ ತೆಗೆದುಕೊಂಡು ಕೇರುತ್ತಿದ್ದಾಳೆ. ಅದೇ ವೇಳೆಗೆ ದಿಢೀರನೆ ಯಾವುದೋ ಗಣಿಯಲ್ಲಿ ಶಿಲಾಸ್ಫೋಟಗೊಂಡು ಭೂಮಿ ದೊಡ್ಡದಾಗಿ ಕಂಪಿಸಿ ಎಲ್ಲರೂ ಕಿರುಚಿಕೊಂಡರು. ಬಿದರು ದಬ್ಬೆ ಗೋಡೆಗಳ ಮೇಲಿದ್ದ ಸಾಮಾನುಗಳೆಲ್ಲ ದಡದಡನೆ ಕೆಳಕ್ಕೆ ಬಿದ್ದವು. ಮಡಿಕೆ ಕುಡಿಕೆ ಗ್ಲಾಸು ತಟ್ಟೆಗಳು ಮನೆಯೆಲ್ಲ ಉರುಳಾಡಿದವು. ಬಿದಿರು ದಬ್ಬೆಗಳು ಮತ್ತು ಜಿಂಕ್ ಶೀಟ್‌ಗಳಿಂದ ಕಟ್ಟಿರುವ ಮನೆಯಾದ್ದರಿಂದ ಮನೆ ಕುಸಿಯುವ ಸಮಸ್ಯೆ ಇರಲಿಲ್ಲ. ಎಲ್ಲರೂ ಒಂದೇ ಸಮನೆ ಅಳತೊಡಗಿದರು. ಭೂಮಿ ಕಂಪಿಸುವ ಸದ್ದು ಕಡಿಮೆಯಾಗಿದ್ದೆ ಮೂವರೂ ಮಹಿಳೆಯರು ತಮ್ಮ ಕೊರಳುಗಳಲ್ಲಿದ್ದ ಹಳದಿ ದಾರದ ತಾಳಿಗಳನ್ನು ಎರಡೂ ಕೈಗಳಲ್ಲಿ ಹಿಡಿದುಕೊಂಡು ಕಣ್ಣುಗಳಿಗೆ ಒತ್ತಿಕೊಳ್ಳುತ್ತಾ “ಉದ್ದಂಡಮ್ಮಾ ನಮ್ಮ ಗಂಡಂದಿರನ್ನು ಕಾಪಾಡಮ್ಮ ತಾಯೆ” ಎಂದು ಬೇಡಿಕೊಂಡರು. ಕನಕ, “ಯಾವ ಗಣಿಯಲ್ಲಿ ರಾಕ್‌ಬರ್ಸ್ಟ್ ಆಯಿತೊ? ಎಷ್ಟು ಜನ ಸತ್ತರೋ ಏನೋ?” ಎಂದು ಆತಂಕ ವ್ಯಕ್ತಪಡಿಸಿದಳು.
ಅದೇ ಸಮಯಕ್ಕೆ ಕಾಲೇಜ್ ಕ್ಯಾಂಪಸ್‌ನಲ್ಲಿ ಮಾತನಾಡುತ್ತ ನಿಂತಿದ್ದ ವಿದ್ಯಾರ್ಥಿಗಳ ಗುಂಪುಗಳು ಗಲಿಬಿಲಿಗೊಂಡವು. ತರಗತಿಗಳು ಮತ್ತು ಕಾಲೇಜ್ ಕಛೇರಿಯ ಒಳಗಿದ್ದವರೆಲ್ಲ ಹೊರಕ್ಕೆ ಓಡಿಬಂದು ಕಟ್ಟಡಗಳಿಂದ ದೂರ ದೂರಕ್ಕೆ ಸರಿದು ನಿಂತುಕೊಂಡರು. ಹೊರಗೆ ನಿಂತಿದ್ದ ಮಣಿ ಮತ್ತು ಸೆಲ್ವಿ ಕೂಡ ಸ್ವಲ್ಪ ಹೊತ್ತು ಆತಂಕಕ್ಕೆ ಒಳಗಾದರೂ ಇದೆಲ್ಲ ಮಾಮೂಲಿ ಎಂಬಂತೆ ಸುಮ್ಮನಾದರು. ಮೈನಿಂಗ್ ಕಛೇರಿಗಳು, ಕಾಲೋನಿಗಳು, ಮೈನಿಂಗ್ ಕಾರ್ಯಾಗಾರಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಯಂತ್ರಗಳನ್ನು ಆಫ್ ಮಾಡಿ ಹೊರಕ್ಕೆ ಓಡಿಬಂದು ನಿಶ್ಯಬ್ದವಾಗಿ ನಿಂತುಕೊಂಡರು. ಎಲ್ಲಾ ಗಣಿಗಳ ಒಳಕ್ಕೆ ಇಳಿಯುತ್ತಿದ್ದ ಮತ್ತು ಮೇಲಕ್ಕೆ ಬರುತ್ತಿದ್ದ ಕೇಜ್‌ಗಳನ್ನು ಅಲ್ಲಲ್ಲೇ ಸ್ವಲ್ಪ ಹೊತ್ತು ನಿಲ್ಲಿಸಲಾಯಿತು. ಎಲ್ಲಾ ಗಣಿಗಳ ಒಳಗೆ ಸುರಂಗಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ದೂರ ದೂರಕ್ಕೆ ಓಡಿಹೋಗಿ ಸುರಕ್ಷಿತ ಸ್ಥಳಗಳಲ್ಲಿ ನಿಂತುಕೊಂಡರು.
ಒಂದು ಗಣಿಯಲ್ಲಿ ರಾಕ್‌ಬರ್ಸ್ಟ್ ಆದರೆ ಸಾಕು 8 ಕಿ.ಮೀ. ಉದ್ದ 2 ಕಿ.ಮೀ. ಅಗಲ ಮತ್ತು 3 ಕಿ.ಮೀ. ಆಳದವರೆಗೂ ಹರಡಿಕೊಂಡಿರುವ ಎಲ್ಲಾ ಗಣಿಗಳು ಮತ್ತು ಅವುಗಳ ಸುರಂಗಗಳು ಕಂಪಿಸಿ ಅಲ್ಲೋಲಕಲ್ಲೋಲ ಆಗಿಬಿಡುತ್ತಿದ್ದವು. ಜೊತೆಗೆ ನೆಲದ ಮೇಲೆ ಹತ್ತಾರು ಕಿ.ಮೀ.ಗಳ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿ ಭೂಕಂಪನದ ಅನುಭವವಾಗುತ್ತಿತ್ತು. ಎಲ್ಲಾ ಗಣಿಗಳ ಎಲ್ಲಾ ಹಂತಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನೆಲ್ಲ ಮೇಲಕ್ಕೆ ಬರುವಂತೆ ಆಜ್ಞೆ ಮಾಡಲಾಯಿತು. ಅದಕ್ಕೆ ಮುಂಚೆ ಗಣಿಯ ಒಳಗೆಯೇ ಎಲ್ಲಾ ಕಾರ್ಮಿಕರು ಕೆಲಸ ಮಾಡುವ ಹಂತಗಳಲ್ಲಿ ಒಟ್ಟು ಸೇರಿಸಿ ತಂಡಗಳ ಮುಖ್ಯಸ್ಥರು, ಮೇಸ್ತ್ರಿಗಳು ಎಲ್ಲರೂ ಕಾರ್ಮಿಕರ ಹೆಸರುಗಳನ್ನು ನೋಂದಣಿಯ ಪುಸ್ತಕದಂತೆ ಕರೆದು ಖಾತರಿಪಡಿಸಿಕೊಂಡ ಮೇಲೆ ತಂಡತಂಡಗಳಾಗಿ ಕೇಜ್‌ಗಳ ಮೂಲಕ ಮೇಲಕ್ಕೆ ಕಳುಹಿಸುತ್ತಿದ್ದರು.
ನೆಲದ ಮೇಲೆ ಕಛೇರಿಗಳಲ್ಲಿದ್ದ ಅಧಿಕಾರಿಗಳು ತಲ್ಲಣಗೊಂಡು ಯಾವ ಗಣಿಯಲ್ಲಿ ರಾಕ್‌ಬರ್ಸ್ಟ್ ಆಗಿರುವುದೆಂದು ವಿಷಯ ಸಂಗ್ರಹಣೆ ಮಾಡತೊಡಗಿದರು. ಕೊನೆಗೆ ತಿಳಿದ ವಿಷಯವೆಂದರೆ ಕೆಲವು ದಿನಗಳ ಹಿಂದೆ ನಡೆದ ಅದೇ ಗಣಿಯ ಇನ್ನೊಂದು ಸುರಂಗದಲ್ಲಿ ಸ್ಫೋಟವಾಗಿದೆ ಎಂದು ತಿಳಿಯಿತು. ಅಧಿಕಾರಿಗಳು ಅಮಾವಾಸೆ ಮತ್ತು ಬಾಬು ಸತ್ತ ಸುರಂಗವನ್ನು ತಾತ್ಕಾಲಿಕವಾಗಿ ಮುಚ್ಚಿ ಅಲ್ಲಿ ಕೆಲಸ ಮಾಡುತ್ತಿದ್ದ ತಂಡವನ್ನು 66ನೇ ಹಂತದ ಇನ್ನೊಂದು ದಿಕ್ಕಿನ ಸುರಂಗದಲ್ಲಿ ಕೆಲಸ ಮಾಡಲು ಬಿಟ್ಟಿದ್ದರು.
***
ಸಾಯಂಕಾಲ ನಾಲ್ಕು ಗಂಟೆ. ಕೊನೆ ತರಗತಿ ಮುಗಿದ ಮೇಲೆ ಸೆಲ್ವಿ ಕೊಠಡಿಯಿಂದ ಹೊರಕ್ಕೆ ಬಂದಿದ್ದೆ ಓಡಿಬಂದ ಮಣಿ, “ಸೆಲ್ವಿ ಚಾಂಪಿಯನ್ ಗಣಿಯಲ್ಲಿ ರಾಕ್‌ಬರ್ಸ್ಟ್ ಆಗಿದೆಯಂತೆ ಎಷ್ಟು ಜನ ಸತ್ತೋಗಿದ್ದಾರೊ ಏನೋ ಗೊತ್ತಿಲ್ಲ. ನಮ್ಮಪ್ಪ ಅದೇ ಗಣಿಯಲ್ಲಿ ಕೆಲಸ ಮಾಡುವುದು. ನಾನು ಹೋಗ್ತೀನಿ. ನೀನು ಬಾ” ಎಂದು ಅಲ್ಲಿ ನಿಲ್ಲದೇ ಒಂದೇ ಓಟ ಓಡಿಹೋದ. ಸೆಲ್ವಿಗೆ ಏನು ಮಾಡುವುದೋ ಗೊತ್ತಾಗಲಿಲ್ಲ. ಅವಳೂ ಕೂಡ ತನ್ನ ಗೆಳತಿಯರೊಡನೆ ತಮ್ಮ ಕ್ಯಾಂಪ್ ಕಡೆಗೆ ಹೊರಟಳು. ಸ್ವಾಮಿ, “ಯಾಕೊ ಮಣಿ, ಸೆಲ್ವಿನಾ ಬಿಟ್ಟು ಒಬ್ಬನೇ ಓಡೋಗ್ತಾ ಇದ್ದಾನೆ” ಎಂದ. ಪಕ್ಕದಲ್ಲಿದ್ದವನು “ಏನೊ ಗಲಾಟೆ ಆಗಿರಬೇಕು?” ಎಂದ. ಮಹೇಂದ್ರ, “ಬೆಳಿಗ್ಗೆ ರಾಕ್‌ಬರ್ಸ್ಟ್ ಆಯಿತಲ್ಲ. ಗಣಿಯಲ್ಲಿ ಯಾರೋ ಅವರ ಕಾಲೋನಿಯವರು ಸತ್ತೋಗಿರಬೇಕು” ಎಂದ. ಅಷ್ಟರಲ್ಲಿ ಇನ್ನೂ ಕೆಲವು ವಿದ್ಯಾರ್ಥಿಗಳು ಓಡಿಹೋದರು. ಯಾಕೆಂದು ಕೇಳಿದಾಗ “ಚಾಂಪಿಯನ್ ಗಣಿಯಲ್ಲಿ ಬೆಳಿಗ್ಗೆ ರಾಕ್‌ಬರ್ಸ್ಟ್ ಆಯಿತಲ್ಲ. ತುಂಬಾ ಜನ ಸತ್ತೋಗಿದ್ದಾರಂತೆ” ಎಂದರು. ಅವರೆಲ್ಲ ಗಣಿಯಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳು. ಕಾಲೇಜಿನಲ್ಲಿ ಓದುತ್ತಿದ್ದ 1ಂಂಕ್ಕೆ 9ಂ ವಿದ್ಯಾರ್ಥಿಗಳು ಗಣಿ ಕಾರ್ಮಿಕರ ಮಕ್ಕಳೇ ಆಗಿದ್ದರು.
ಮಣಿ ಒಂದೇ ಸಮನೆ ಅಳುತ್ತಾ ಚಾಂಪಿಯನ್ ಗಣಿಗಳ ಕಡೆಗೆ ಓಡತೊಡಗಿದ. ದಾರಿಯಲ್ಲಿ ಕೇಳಿದವರಿಗೆ ಚಾಂಪಿಯನ್ ಗಣಿಯಲ್ಲಿ ರಾಕ್‌ಬರ್ಸ್ಟ್ ಆಗಿದೆಯಂತೆ ಎಂದು ಜೋರಾಗಿ ಹೇಳುತ್ತಾ ಓಡುತ್ತಿದ್ದ. ವಾಡೆಯರ್ ರಸ್ತೆಯಲ್ಲಿ ಸೈಕಲ್‌ಗಳಲ್ಲಿ ಎದುರಿಗೆ ಬರುತ್ತಿದ್ದ ಗಣಿ ಕಾರ್ಮಿಕರನ್ನು ನಿಲ್ಲಿಸಿದ ಮಣಿ ಅದೇ ವಿಷಯ ಕೇಳಿದ. ಸೈಕಲ್ ನಿಲ್ಲಿಸಿದ ಕಾರ್ಮಿಕನೊಬ್ಬ ಮಣಿಯನ್ನು “ನೀನು ಯಾರ ಮಗ?” ಎಂದ. ಮಣಿ ಜೋರಾಗಿ ಉಸಿರಾಡುತ್ತ “ನಾನು ಸೆಲ್ವಮ್ ಮಗ” ಎಂದ. ಆ ಕಾರ್ಮಿಕ ಸೈಕಲ್‌ಅನ್ನು ನೆಲಕ್ಕೆ ತಳ್ಳಿ ಹುಡುಗನ ಹತ್ತಿರಕ್ಕೆ ಬಂದು ಭುಜ ತಟ್ಟಿ “ತಮ್ಮ ಸಮಾಧಾನ ಮಾಡಿಕೊಳ್ಳಪ್ಪ” ಎಂದ. ಅಷ್ಟರಲ್ಲಿ ನಾಲ್ಕಾರು ಕಾರ್ಮಿಕರು ಸೈಕಲ್ ನಿಲ್ಲಿಸಿ ಅವರನ್ನು ಸುತ್ತುವರಿದರು. ಒಬ್ಬ ಕಾರ್ಮಿಕ, “ಹುಡುಗ ಸೆಲ್ವಮ್ ಮಗನಾ? ಅದೇ ತರಹ ಇದ್ದಾನೆ ಪಾಪ” ಎಂದು ದುಃಖ ವ್ಯಕ್ತಪಡಿಸಿದ. ಮಣಿ, “ನಮ್ಮಪ್ಪ?” ಎಂದ. ಇನ್ನೊಬ್ಬ ಕಾರ್ಮಿಕ, “ರಾಕ್‌ಬರ್ಸ್ಟ್ ಆಗಿ ಐದು ಜನ ಕಾರ್ಮಿಕರು ಶಿಲೆಗಳ ಕೆಳಗೆ ಸಿಕ್ಕಿಕೊಂಡಿದ್ದಾರೆ. ಅದರಲ್ಲಿ ನಿಮ್ಮಪ್ಪನೂ ಕೂಡ ಇದ್ದಾನಂತೆ. ಎಲ್ಲರೂ ಅಲ್ಲೇ ಗಣಿ ಹತ್ತಿರವೇ ಇದ್ದಾರೆ” ಎಂದಿದ್ದೆ ಸೆಲ್ವಮ್ ಅಲ್ಲಿಂದ ಮತ್ತೆ ಓಡಿದ.
ಈಗ ಚಾಂಪಿಯನ್ ಗಣಿಯ 66ನೇ ಹಂತದ 4ನೇ ಸುರಂಗ ಕುಸಿದಿರುವುದಾಗಿ ಸ್ಪಷ್ಟವಾಗಿ ತಿಳಿದುಕೊಳ್ಳಲಾಗಿತ್ತು. ತುರ್ತು ಕೆಲಸದ ಮೇಲಿದ್ದ ಪಾರಿಗಾಣಿಕ ತಂಡ ಮತ್ತು ಅಗ್ನಿಶಾಮಕ ದಳ ಅಲ್ಲಿಗೆ ತಲುಪಿತು. ಅದು ಹೊಸದಾದ ಸುರಂಗವಾಗಿದ್ದು ಕೇವಲ 200 ಮೀಟರುಗಳ ಉದ್ದ ತೋಡಲಾಗಿತ್ತು. ಅದರಲ್ಲಿ ಮೊದಲ 100 ಮೀಟರುಗಳ ದೂರದವರೆಗೂ ಕಬ್ಬಿಣ ರಿಮ್‌ಗಳನ್ನಾಕಿ ಅವುಗಳಿಗೆ ರಿವಿಟ್‌ಗಳನ್ನು ಬಡಿದು ಶಿಲೆಗಳು ಕುಸಿಯದಂತೆ ತಡೆಯಲಾಗಿತ್ತು. ಆದರೆ ಉಳಿದ 100 ಮೀಟರುಗಳಲ್ಲಿ 50 ಮೀಟರುಗಳ ಸುರಂಗ ಕುಸಿದಿದ್ದು ಸುರಂಗ ಮಾಡುತ್ತಿರುವ ಕಡೆ 50 ಮೀಟರುಗಳು ಉಳಿದುಕೊಂಡಿರುವುದಾಗಿ ಲೆಕ್ಕ ಹಾಕಲಾಯಿತು. ಈಗ ಐವರು ಕಾರ್ಮಿಕರು ಕುಸಿದಿರುವ ಶಿಲೆಗಳ ಕೆಳಗೆ ಸಿಕ್ಕಿಕೊಂಡಿದ್ದಾರೋ ಇಲ್ಲ ಅದರ ಆಕಡೆ ಸುರಂಗದಲ್ಲಿ ಸಿಕ್ಕಿಕೊಂಡಿದ್ದಾರೊ ತಿಳಿಯಲಿಲ್ಲ.
ಕಾರ್ಮಿಕರ ಜೊತೆಗೆ ಸಂಪರ್ಕ ಮಾಡುವ ಯಾವುದೇ ಸಾಧನಗಳು ಇರಲಿಲ್ಲ. ಪ್ರವೇಶದ ಕಡೆ ಸುರಂಗದಲ್ಲಿ ಕಬ್ಬಿಣ ರಿಮ್ಸ್ ಹಾಕಿರುವುದರಿಂದ ಸ್ವಲ್ಪ ಮಟ್ಟಿಗೆ ಸುರಂಗ ಕುಸಿಯುವ ಭಯ ಇಲ್ಲದ ಕಾರಣ ಕುಸಿದಿರುವ ಕಲ್ಲುಮಣ್ಣನ್ನು ಎಚ್ಚರಿಕೆಯಿಂದ ಬಾಚುವ ಕೆಲಸವನ್ನು ತ್ವರಿತವಾಗಿ ಪ್ರಾರಂಭಿಸಲಾಯಿತು. ಐವರು ಕಾರ್ಮಿಕರು ಸುರಂಗದಲ್ಲಿ ಸಿಕ್ಕಿಕೊಂಡಿರುವ ವಿಷಯ ಕೆಜಿಎಫ್ ಗಣಿ ನಗರವಲ್ಲದೆ ರಾಜ್ಯ, ದೇಶ, ವಿದೇಶಗಳಲ್ಲೂ ಪ್ರಸಾರವಾಗತೊಡಗಿತು. ಸುರಂಗದಲ್ಲಿ ಕುಸಿದುಬಿದ್ದಿರುವ ಕಲ್ಲು-ಮಣ್ಣನ್ನು ಎಷ್ಟೇ ತ್ವರಿತವಾಗಿ ತೆಗೆಯುತ್ತಿದ್ದರೂ ಮುಗಿಯುತ್ತಲೇ ಇಲ್ಲ. ರಾಶಿರಾಶಿ ಮಣ್ಣು ಅದರ ಜೊತೆಗೆ ಕೆಲಸ ಮಾಡುವ ಕಾರ್ಮಿಕರಿಗೆ ಭಯವೂ ಇತ್ತು. ಆದರೂ ತಮ್ಮ ಜೊತೆಗಿನ ಕಾರ್ಮಿಕರನ್ನು ರಕ್ಷಿಸುವ ಕೆಲಸವಾದ್ದರಿಂದ ಕಾರ್ಮಿಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೆಲಸ ಮಾಡತೊಡಗಿದರು.
ಒಂದು, ಎರಡು ದಿನಗಳಾದವು. ಸುರಂಗದಲ್ಲಿ ಸಿಕ್ಕಿಕೊಂಡಿರುವ ಐವರು ಕಾರ್ಮಿಕರ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಮೇಲಿಂದ ಡ್ರಿಲ್ಲಿಂಗ್ ಮಾಡಿ ಕೊಳವೆ ಮೂಲಕ ಗಾಳಿ ನೀರು ಆಹಾರ ಸರಬರಾಜು ಮಾಡೋಣವೆಂದರೆ 2.50 ಕಿ.ಮೀ. ಆಳಕ್ಕೆ ಅಷ್ಟು ಬೇಗನೆ ಕೊಳವೆಬಾವಿ ಮಾಡುವ ಯಾವ ವ್ಯವಸ್ಥೆಯೂ ಇರಲಿಲ್ಲ. ಅದು ಹೊಸ ಸುರಂಗವಾಗಿದ್ದು ಅದರ ಮೇಲೆ ಸುರಂಗ ಇದ್ದಿದ್ದರೆ ಕೇವಲ 100 ಮೀಟರುಗಳ ಆಳದ ಕೊಳವೆ ಬಾವಿ ಕೊರೆದು ಕಾರ್ಮಿಕರಿಗೆ ಕನಿಷ್ಠ ಗಾಳಿಯನ್ನಾದರೂ ದೂಡಬಹುದಿತ್ತು. ಆಹಾರ ನೀರು ಮುಂದಿನ ಮಾತು. ಮೂರೂ ಶಿಫ್ಟ್‌ಗಳಲ್ಲಿ ತ್ವರಿತ ವೇಗದಲ್ಲಿ ಕೆಲಸ ನಡೆಯುತ್ತಿತ್ತು. ಆದರೂ ಕಾರ್ಮಿಕರು ಬದುಕಿದ್ದಾರೊ ಸತ್ತಿದ್ದಾರೊ ಒಂದೂ ತಿಳಿಯಲಿಲ್ಲ. ನಾಲ್ಕು ದಿನಗಳಾಯಿತು. ಗಣಿಯ ಮೇಲೆ ಸಾವಿರಾರು ಕಾರ್ಮಿಕರು ಮತ್ತು ಅವರ ಕುಟುಂಬಗಳ ಜನರು ನೆರೆದಿದ್ದು ಅವರನ್ನು ನಿಭಾಯಿಸುವುದೇ ಒಂದು ದೊಡ್ಡ ಕೆಲಸವಾಗಿತ್ತು. ಪೊಲೀಸರು, ಅಧಿಕಾರಿಗಳು, ಕಾರ್ಮಿಕರ ದಂಡೇ ಅಲ್ಲಿ ಸೇರಿಕೊಂಡಿತ್ತು.
ಕೊನೆಗೆ ಐದನೇ ದಿನ ಕಲ್ಲುಮಣ್ಣನ್ನು ಬಾಚುತ್ತಿದ್ದಾಗ ಒಂದು ದೇಹ ಕಾಣಿಸಿಕೊಂಡು ಕಾರ್ಮಿಕರಲ್ಲಿ ಚಲನೆ ಉಂಟಾಗಿ ಇನ್ನಷ್ಟು ಬೇಗನೆ ತೆಗೆಯತೊಡಗಿದರು. ಒಂದು, ಎರಡು, ಮೂರು, ನಾಲ್ಕು, ಐದು ದೇಹಗಳನ್ನು ತೆಗೆಯಲಾಯಿತು. ಆದರೆ ಐವರಲ್ಲಿ ಒಬ್ಬರೂ ಬದುಕಿರಲಿಲ್ಲ. ಎಲ್ಲಾ ಕಾರ್ಮಿಕರು ಶಿಲೆಗಳ ಕೆಳಗೆ ಸಿಲುಕಿಕೊಂಡು ಉಸಿರಾಡಲಾಗದೆ ಪ್ರಾಣ ಕಳೆದುಕೊಂಡಿದ್ದರು. ಎಲ್ಲಾ ಮೃತ ದೇಹಗಳನ್ನು ಕೇಜ್‌ಗಳ ಮೂಲಕ ಗಣಿಯ ಮೇಲಕ್ಕೆ ತಂದು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಎಲ್ಲಾ ಕಾರ್ಮಿಕರ ದೇಹಗಳನ್ನು ಮರಣೋತ್ತರ ಪರೀಕ್ಷೆ ಮಾಡಿದ ಮೇಲೆ ಮೈಸೂರು ಮೈನ್ಸ್ ಮೈದಾನದಲ್ಲಿ ಸಾರ್ವಜನಿಕರು ನೋಡಲು ಇಡಲಾಯಿತು. ಇಡೀ ನಗರವೇ ಮೃತ ಕಾರ್ಮಿಕರನ್ನು ನೋಡಲು ಹರಿದು ಬಂದಿತ್ತು.
ಐವರು ಕಾರ್ಮಿಕರ ಕುಟುಂಬಗಳ ಸದಸ್ಯರು ಮೃತದೇಹಗಳ ಹತ್ತಿರ ನಿಂತುಕೊಂಡು ಗೋಳಾಡುತ್ತಿದ್ದರು. ಸೆಲ್ವಮ್ ದೇಹದ ಹತ್ತಿರ ಕನಕ, ಮಣಿ ಮತ್ತು ಸುಮತಿ ನಿಂತುಕೊಂಡು ರೋದನೆ ಮಾಡುತ್ತಿದ್ದರು. ಸಾರ್ವಜನಿಕರು, ಕಾರ್ಮಿಕರು, ಅಧಿಕಾರಿಗಳು ಎಲ್ಲರೂ ಬಂದು ಸತ್ತವರಿಗೆ ಹೂಮಾಲೆಗಳನ್ನು ಅರ್ಪಿಸಿದರು. ಹೂಮಾಲೆಗಳು ಎತ್ತಿನ ಬಂಡಿಗಳು ತುಂಬುವಷ್ಟು ಬಿದ್ದಿದ್ದವು. ಕೊನೆಗೆ ಐದೂ ಮೃತ ದೇಹಗಳನ್ನು ಮೂರು ವ್ಯಾನ್‌ಗಳಲ್ಲಿ ಹಾಕಿಕೊಂಡು ಕುಪ್ಪಂ ರಸ್ತೆಯಲ್ಲಿ ರೋಜರಸ್ ಕ್ಯಾಂಪ್ ಹತ್ತಿರ ಇರುವ ಗಣಿ ಕಾರ್ಮಿಕರ ಸಮಾಧಿ ಕಡೆಗೆ ಮೆರವಣಿಗೆಯಲ್ಲಿ ಹೋಗಿ ಗೌರವಪೂರ್ವಕವಾಗಿ ಅವರವರ ಕುಟುಂಬಗಳಿದ್ದ ಸಮಾಧಿಗಳ ಮಧ್ಯೆ ಸಮಾಧಿ ಮಾಡಲಾಯಿತು. ಗಣಿ ಕಾರ್ಮಿಕರ ಐದು ಕುಟುಂಬಗಳು ದುಃಖದ ಮಡಿಲಲ್ಲಿ ಸಿಲುಕಿಕೊಂಡಿದ್ದಲ್ಲದೇ ಮನೆಯಲ್ಲಿ ದುಡಿಯುತ್ತಿದ್ದ ಏಕೈಕ ಸದಸ್ಯನನ್ನು ಕಳೆದುಕೊಂಡು ಕಂಗಾಲಾಗಿದ್ದವು.
ಕನಕ, ಸುಮತಿ ಮತ್ತು ಮಣಿ ಅವರ ಗುಡಿಸಿಲು ಮನೆಯ ಒಳಗೆ ಗುಬ್ಬಚ್ಚಿಗಳಂತೆ ದಿಕ್ಕು ತೋಚದೆ ಕುಳಿತುಕೊಂಡಿದ್ದಾರೆ. ಅಕ್ಕಪಕ್ಕದ ಮನೆಗಳ ಜನರು ಬಂದು ಅವರನ್ನು ಸಂತೈಯಿಸಿ ಹೋಗುತ್ತಿದ್ದಾರೆ. ಕೆಲವು ಮನೆಗಳವರು ಹಗಲು ರಾತ್ರಿ ಅವರಿಗೆ ಅನ್ನ ಆಹಾರ ತಂದುಕೊಟ್ಟು ಹೋಗುತ್ತಿದ್ದಾರೆ. ಯಾವುದಕ್ಕೂ ತಲೆಕೆಡಸಿಕೊಳ್ಳದ ದಿನಗಳು ಎಲ್ಲವನ್ನೂ ಮಾಯವಾಗಿಸಿ ಮುಂದಕ್ಕೆ ನಡೆಯುತ್ತಿವೆ. ಕನಕಳ ಅಣ್ಣ ಆರ್ಮುಗಮ್ ಮತ್ತು ಅವರ ಪತ್ನಿ ಅಲಮೇಲು (ಸೆಲ್ವಮ್ ಸ್ವಂತ ತಂಗಿ) ಮತ್ತು ಮಗಳು ಸುಶೀಲ ವೆಲ್ಲೂರು ಹತ್ತಿರದ ಸೇನೂರ ಕಡೆಯಿಂದ ಬಂದಿದ್ದಾರೆ. ಅವರಲ್ಲದೇ ಇನ್ನೂ ಕೆಲವು ಸಂಬಂಧಿಗಳು ಬಂದು ನೋಡಿಕೊಂಡು ಹೋದರು. ಯಾರು ಏನೇ ಮಾಡಿದರೂ ಅದು ತಾತ್ಕಾಲಿಕ ಮಾತ್ರ. ದುಃಖ ಮಡುಗಟ್ಟಿ ಕೊನೆ ಇಲ್ಲದೆ ಸಾಗುತ್ತಲೇ ಇತ್ತು. ಮಣಿಗೆ ಏನು ಮಾಡಬೇಕೊ ಗೊತ್ತಾಗದೆ ಕಂಗಾಲಾಗಿ ಹೋಗಿದ್ದಾನೆ. ಪಕ್ಕದ ಮನೆಯ ಗೋವಿಂದ ಮತ್ತು ಅವರ ಕುಟುಂಬ ಯಾವಾಗಲೂ ಅವರ ಜೊತೆಯಲ್ಲೆ ಇದ್ದು ಎಲ್ಲಾ ರೀತಿಯಲ್ಲೂ ಸಂತೈಸುತ್ತಿದ್ದಾರೆ.
(ಹಿಂದಿನ ಕಂತು: ಮನುಷ್ಯನ ಪ್ರಸ್ತಾಪನೆ ದೇವರ ನಿರಾಕರಣೆ)

ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.