Advertisement
ಮಂಜುನಾಥ್ ಕುಣಿಗಲ್ ಬರೆದ ಈ ಭಾನುವಾರದ ಕತೆ

ಮಂಜುನಾಥ್ ಕುಣಿಗಲ್ ಬರೆದ ಈ ಭಾನುವಾರದ ಕತೆ

ಅಮ್ಮನಿಗೆ ವಿಷಯ ತಿಳಿದರೆ ಎದೆಹೊಡೆದು ಕುಸಿದುಬಿದ್ದಾಳು! ಆಕೆ ತನ್ನ ಜೀವನ ಒತ್ತೆಯಿಟ್ಟು ಅದೂ-ಇದೂ ಚಾಕರಿ ಮಾಡುತ್ತಾ ನಮ್ಮನ್ನು ಸಾಕಿದ್ದು. ಆಕೆಗೆ ಏನು ಸುಖ ಕೊಟ್ಟಿದ್ದೆ? ಅದ್ಯಾವುದೋ ನನ್ನ ಕಂಪ್ಯೂಟರ್ ಕೋರ್ಸಿಗೆ ಹನ್ನೆರೆಡು ಸಾವಿರವನ್ನು ಹೊಂಚಲು ಎಲ್ಲೆಲ್ಲೋ ಹೊಟ್ಟೆಬಟ್ಟೆ ಕಟ್ಟಿ ಅದೆಷ್ಟು ಕಷ್ಟಪಟ್ಟಳು? ಆ ದುಡ್ಡನ್ನು ನಾನಿನ್ನೂ ವಾಪಸ್ ಕೊಟ್ಟಿಲ್ಲ! ಹೊಟ್ಟೆಯಲ್ಲಿ ಏನೋ ಕಟ್ಟಿಕೊಂಡ ಸಂಕಟ!
ಮಂಜುನಾಥ್ ಕುಣಿಗಲ್ ಹೊಸ ಕಥಾ ಸಂಕಲನ “ದೂರ ದೇಶದ ದೇವರು” ಕೃತಿಯ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಓದಿಗೆ

ವಾರಾಂತ್ಯದಲ್ಲಿ ಸಾಮಾನ್ಯಕ್ಕೆ ಅಗಾಧ ಹರವಿನ ‘ಜುಮೆರಾ’ ಬೀಚಿಗೆ ಹೋಗುತ್ತಿದ್ದವರು ಅಂದು ಮನಸ್ಸು ಬದಲಿಸಿ ದೂರದ ‘ಬುರ್ಜ್ ಅಲ್ ಅರಬ್’ ಹೋಟೆಲಿನ ಪಕ್ಕಕ್ಕಿದ್ದ ಚಿಕ್ಕ ಬೀಚಿಗೆ ಹೋಗಿದ್ದು ಅದ್ಯಾವ ವಿಧಿಯ ಸೆಳೆತಕ್ಕೋ ಗೊತ್ತಿರಲಿಲ್ಲ. ಹೌದು, ಅದೊಂದು ಮಹಾಸೆಳೆತವೇ… ಹುಣ್ಣಿಮೆಯ ಕಡಲ ಅಲೆಯು ಎಲ್ಲರನ್ನೂ ಬಾಚಿ ತನ್ನೊಡಲೊಳಗೆ ಸೆಳೆದುಬಿಟ್ಟಿತ್ತು!
ಬೃಹತ್ ಹಾಯಿದೋಣಿಯೊಂದು ಸಾಗರದ ಕಿನಾರೆಯಲ್ಲಿ ಲಂಗರುಹಾಕಿ ತೇಲುತ್ತಾ ನಿಂತಿದೆಯೆಂಬ ದೃಶ್ಯವೈಭವ ಅರಬ್ಬೀನಾಡಿನ ಆ ಸಪ್ತತಾರೆ ಹೋಟೆಲಿನದ್ದು. ಆ ಅಗಾಧ ಶ್ರೀಮಂತ ರೂಪವನ್ನು ಕಣ್ತುಂಬಿಕೊಳ್ಳಬಹುದೆಂಬ ನೆವವೂ ನಮಗಿದ್ದಿರಬೇಕು. ‘ಕೇವಲ ಹೊರಗಿನ ತಳುಕಲ್ಲ, ಒಳಗೂ ರಾಜೋಚಿತ ಶ್ರೀಮಂತಿಕೆಯಂತೆ. ಊಟದ ತಟ್ಟೆಲೋಟಗಳು ಒತ್ತಟ್ಟಿಗಿರಲಿ, ಹಲ್ಲಿಗೆ ಚುಚ್ಚುವ ಕಡ್ಡಿಯೂ ಚಿನ್ನದ್ದಂತೆ’ ಎಂದೆಲ್ಲಾ ಕೇಳಿದ್ದೆವು. ಹೊರಗಷ್ಟೇ ದೂರದಲ್ಲಿ ನಿಂತುನೋಡುವ ಶಕ್ತಿಯಿದ್ದ ನಮಗೆ ಆ ಶ್ರೀಮಂತಿಕೆಯ ಗೊಡವೆ ಏಕೆ ಬೇಕು? ಹೊರಗಿನಿಂದ ವೈಭವ ನೋಡಿದೆವಾ, ಪಕ್ಕದ ಸಮುದ್ರ ಕಿನಾರೆಯಲ್ಲಿ ಸಂಜೆ ಒಂದಷ್ಟು ಹೊತ್ತು ಈಜಿದೆವಾ, ಅಷ್ಟೇ… ಅಂದು ಕೂಡ ಹಾಗೆಯೇ ಅಲ್ಲಿಗೆ ಹೋಗಿದ್ದು.
***
ಅರುಣ, ಪಾಟೀಲ ಮತ್ತು ನಾನು ಸಂಜೆಬೀಚಿನ ಸಂಗಡಿಗರು. ಅರುಣ ಈಜಿನಲ್ಲಿ ನಿಪುಣ. ಎಲ್ಲರಿಗಿಂತ ಒಂದಷ್ಟು ದೂರ ದಾಟಿ ಈಜುತ್ತಿದ್ದ. ನಾನು ಮತ್ತು ಪಾಟೀಲ ನೀರಿನಲ್ಲಿ ಪದತಲಸ್ಪರ್ಶವಾಗುವವರೆಗೆ ಮಾತ್ರ ನಡೆದು ನಿಂತುಬಿಡುತ್ತಿದ್ದೆವು. ಜಿದ್ದಿಗೆ ಬಿದ್ದಂತೆ ಒಂದರಮೇಲೊಂದು ಆತುಕೊಂಡು ಬರುತ್ತಿದ್ದ ಅಲೆಗಳು ನಮ್ಮ ತಲೆಯ ಮೇಲೆ ಹಾಯ್ದು ಮುಳುಗಿಸುವ ಹಾಗೆ ಮಾಡುವಾಗ ನಾವು ಎತ್ತರಕ್ಕೆ ಚಿಮ್ಮಿ ಅಲೆಯ ಸಂಗಡ ಬುಡುಬುಡನೆ ಕೈಕಾಲುಬಡಿದು ದಡದತ್ತ ತೇಲುತ್ತಾಹೋಗುವ ಮಕ್ಕಳಾಟವೇ ನಮಗೆ ಈಜು! ಸಾಕಷ್ಟು ಮಕ್ಕಳು-ದೊಡ್ಡವರೆಲ್ಲರೂ ನೀರಿನಾಟದಲ್ಲಿದ್ದರು.
ಹೀಗೆಯೇ ತುಂಬಾ ಹೊತ್ತಿನಿಂದ ಆಡಿದ್ದೆವು. ಕೆಂಪನೆಯ ಹಣ್ಣಿನಂತಿದ್ದ ಐದಾರು ವರ್ಷದ ಅರಬ್ಬೀ ಪೋರಿಯೊಬ್ಬಳು ನಮ್ಮ ಆಟವನ್ನು ನಕಲಿಸುತ್ತಾ ಮೋಜುಮಾಡುತ್ತಿದ್ದುದನ್ನು ನೋಡಿ ನಮಗೂ ಎಂಥದೋ ಪುಳಕ! ಶುಕ್ರವಾರದ ಸಂಜೆಯದು. ನೆಲದಿಂದ ಹೊರಬಂದು ರೆಕ್ಕೆಬಡಿಯುವ ಈಸಲುಹುಳುವಿನ ಗುಂಪಿನ ಹಾಗೆ ತಪತಪನೆ ನೀರಿಗೆ ಕೈನಲ್ಲಿ ಬಡಿಯುತ್ತಿರುವ ಜನಜಂಗುಳಿಯ ದೃಶ್ಯ ಆ ಕಿನಾರೆಗೆ ಅವ್ಯಕ್ತ ಜೀವಂತಿಕೆಯೊಂದನ್ನು ತಂದಿತ್ತು. ಜಗತ್ತಿನ ಅದಮ್ಯ ಖುಷಿಯೆಲ್ಲವೂ ಅಲ್ಲಿಯೇ ಒಟ್ಟಾಗಿದ್ದ ಅಪರೂಪದ ಕ್ಷಣ. ಮುಖ ಕೆಂಪಗೆ ಮಾಡಿಕೊಂಡಿದ್ದರೂ ತಂಪಾಗಿಯೇ ಇದ್ದ ಸೂರ್ಯ ದಿಗಂತದತ್ತ ಜಾರುತ್ತಿದ್ದರೆ, ಇತ್ತ ಹುಣ್ಣಿಮೆ ಚಂದ್ರ ಬೆಳ್ಳನೆ ಮುಖವನ್ನಗಲಿಸಿ ನಸುನಗುತ್ತಾ ಮೆಲ್ಲನೆ ಏರುತ್ತಿದ್ದ. ಇವೆರೆಡರ ಮಧ್ಯೆ ಉಂಟಾದ ಸಣ್ಣ ಮಬ್ಬುಗತ್ತಲಲ್ಲಿ ಕಡಲು ಉಕ್ಕೇರುತ್ತಿದ್ದುದು ನಮ್ಮ ಗಮನಕ್ಕೆ ಬರಲೇ ಇಲ್ಲ!
ಇಷ್ಟು ಸಮಯ ನಮ್ಮ ಬಳಿಯಲ್ಲೇ ಆಡುತ್ತಿದ್ದ ಆ ಹುಡುಗಿಯನ್ನು ದೈತ್ಯ ಅಲೆಗಳ ಗುಂಪೊಂದು ಅಚಾನಕ್ಕಾಗಿ ಎತ್ತಿಕೊಂಡು ಹೋಗುತ್ತಿದ್ದುದನ್ನು ಗಮನಿಸಿದ ಅರುಣ,
“ಏ ಮಗಾ, ಅಲ್ನೋಡೋ…! ಪಾಪ, ಆ ಹುಡ್ಗಿ ಕೊಚ್ಕೊಂಡ್ ಹೋಗ್ತಿದೆ!” ಎಂದು ಗಾಬರಿಯಿಂದ ಕಿರುಚಿದ.
ಹೌದು, ಆ ಮಬ್ಬಿನಲ್ಲೂ ಅವನ ದಿಟ್ಟಿ ಸ್ಪಷ್ಟವಿತ್ತು. ನಾನು ಗಾಬರಿಯಾಗಿ ಅತ್ತ ನೋಡುತ್ತಿದ್ದೆನೇ ಹೊರತು ಏನು ಮಾಡಬೇಕೆಂದು ತೋಚಲಿಲ್ಲ! ನನ್ನ ಪ್ರತಿಕ್ರಿಯೆಗೂ ಕಾಯದೆ ಆತ ಒಮ್ಮೆಗೇ ಜಿಗಿದು ಈಜುತ್ತಾ “ನನ್ನ ಹಿಂದೆ ಬನ್ನಿ…” ಎಂದು ಇಬ್ಬರಿಗೂ ಕೂಗಿಹೇಳಿದ. ನಮಗೆ ಈಜು ನೆಟ್ಟಗೆ ಬರುವುದಿಲ್ಲವೆಂಬ ಕನಿಷ್ಠಪ್ರಜ್ಞೆಯನ್ನೂ ಆ ಕಾಲರಭಸದಲ್ಲಿ ಕಳೆದುಕೊಂಡ ನಾವು ನೀರನ್ನು ಸೀಳುತ್ತಾ ಅರುಣನ ಹಿಂದೆ ಬಿದ್ದೆವು.
ಅದ್ಯಾವ ವೇಗದಲ್ಲಿ ತಲುಪಿದ್ದನೋ ಅವನು?

(ಮಂಜುನಾಥ್ ಕುಣಿಗಲ್)

ಕೈಮೇಲೆತ್ತಿ ಮುಳುಗುತ್ತಿದ್ದ ಹುಡುಗಿಯ ಬಟ್ಟೆಯನ್ನು ಗಟ್ಟಿಹಿಡಿದು ಎಳೆದುಕೊಂಡು ಬರುತ್ತಿದ್ದ ಆತ ಹತ್ತಾರು-ಮಾರು ದೂರದಲ್ಲಿ ಕಾಣಿಸಿದ್ದಷ್ಟೇ!

ತೀರಕ್ಕೆ ಮೆಲ್ಲಬಡಿದು ಹಿಂದಕ್ಕೆ ಜೋರುನುಗ್ಗುತ್ತಿದ್ದ ದೊಡ್ಡ ಅಲೆಯೊಂದು ನನ್ನ ತಲೆಯ ಮೇಲೆ ಹಾಯ್ದು ನನ್ನನ್ನು ಸೆಳೆದುಕೊಂಡುಹೋಗಿ ಅರುಣನಿದ್ದ ಜಾಗವನ್ನೂ ದಾಟಿಸಿ ಅಲ್ಲೆಲ್ಲೋ ದೂರದಲ್ಲಿ ಬಿಸಾಡಿತ್ತು! ಎಲ್ಲವೂ ರೆಪ್ಪೆಬಡಿಯುವಷ್ಟು ಸಮಯದಲ್ಲಿ ಆದದ್ದು! ನನ್ನ ಕಾಲಿಗೆ ತಳ ನಿಲುಕುತ್ತಿಲ್ಲ. ಕೈಯನ್ನು ಎಷ್ಟುಬಡಿದರೂ ಮುಂದಕ್ಕೆ ಹೋಗುತ್ತಿಲ್ಲ. ಮೂಗಿನ ಹೊಳ್ಳೆಯಿಂದ ನೀರು ಒಳನುಗ್ಗಿ ಉಸಿರುಗಟ್ಟಿತ್ತು. ಕೂಗಲೂ ದನಿ ಬಾರಲಿಲ್ಲ! ನಾನು ಸ್ವಲ್ಪಸ್ವಲ್ಪವೇ ಮುಳುಗುತ್ತಿದ್ದೆ. ಸಾವು ಹತ್ತಿರವಾಗುತ್ತಿದೆಯೇನೋ ಎನಿಸಲು ಶುರುವಾಯ್ತು. ಬದುಕುವ ಛಲವೊಂದು, ಜಾರುತ್ತಿದ್ದ ಜೀವವನ್ನು ಇನ್ನೂ ತುದಿಯಲ್ಲಿ ಹಿಡಿದಿಟ್ಟಿತ್ತಷ್ಟೇ! ಒಮ್ಮೆ ದೇಹದ ಶಕ್ತಿಯನ್ನೆಲ್ಲಾ ಮೇಳೈಸಿಕೊಂಡು ಮುಂದೆ ಕೈಬಡಿಯಲು ಹೋಗಿದ್ದೇ ತಡ, ರಕ್ಕಸರೋಷದ ಅಲೆಯೊಂದು ಮತ್ತೆ ಬಡಿದು ಇನ್ನೊಂದಷ್ಟು ದೂರಕ್ಕೆ ಎತ್ತಿಕೊಂಡು ಹೋಯ್ತು! ಕುಡಿದ ನೀರು ಒಳಗಿಳಿದು ದೇಹ ಭಾರವಾದಂತೆ ಕೆಳಗೆ ಜಾರುತ್ತಿತ್ತು. ಸಮುದ್ರದ ರೌದ್ರತೆಗೆ ಸಂಪೂರ್ಣ ಸೋತು ಶರಣಾದೆ! ಯಾರಾದರೂ ಗಮನಿಸಿ ಇತ್ತ ಬಂದು ನನ್ನ ಕಾಪಾಡಿಯಾರೇನೋ ಎಂಬ ಕಟ್ಟಕೊನೆಯ ಆಸೆಯಿಂದ ಎರಡೂ ಕೈಗಳನ್ನು ಮೇಲೆತ್ತಿದೆ. ಇನ್ನುಳಿದಿದ್ದು ಅರೆಪ್ರಜ್ಞೆ ಮಾತ್ರ!

***

“ಅಷ್ಟು ಸುಲಭವಾಗಿ ಸದೃಢ-ಜೀವನವೊಂದನ್ನು ಕಟ್ಟಿಕೊಳ್ಳೋದು ಯಾರಿಗಾದರೂ ಸಾಧ್ಯವಾ? ನನಗೂ ಸುಲಭದ್ದಿರಲಿಲ್ಲ! ಎಷ್ಟೆಷ್ಟೋ ಏಳುಬೀಳುಗಳನ್ನು ದಾಟಿ ಹುಟ್ಟೂರಿನ ಗಲ್ಲಿಯಿಂದ ದುಬೈ ಎನ್ನುವ ಕೊಲ್ಲಿದೇಶಕ್ಕೆ ಬಂದು ನಿಂತಿತ್ತು ಜೀವನ. ಭೌಗೋಳಿಕ ವಾಸ್ತವದಲ್ಲಿ ದುಬೈ ದೇಶವಲ್ಲ. ಆದರೂ ಜನರಿಗೆ ಇದೊಂದು ಸ್ವರ್ಗಸದೃಶ ದೇಶವೇ! ನನಗೂ ಕೂಡ.
ಎಷ್ಟೆಲ್ಲಾ ಕನಸುಗಳನ್ನು ಹೊತ್ತು ಬಂದಿದ್ದೇನೆ ಇಲ್ಲಿಗೆ?
ಮದುವೆಯಾಗಿ ಎರಡು ವರ್ಷವಷ್ಟೇ! ಒಲ್ಲದ ಮನಸ್ಸಿನಿಂದ ಆಕೆಯನ್ನು ಬಿಟ್ಟು ಇಲ್ಲಿ ಬಂದಿರುವುದು ಮುಂದೆ ಒಳ್ಳೆಯ ಜೀವನ ಕಟ್ಟಿಕೊಳ್ಳಲೆಂದು ಹೌದು. ಮಗು ಈಗಲೇ ಬೇಡವೆಂದು ನಿರ್ಧಾರ ಮಾಡಿದ್ದೆವು. ಒಳ್ಳೆಯದೇ ಆಯ್ತು!
ನಾನಿಲ್ಲದೆ ಆಕೆ ಹೇಗೆ ಬದುಕಿಯಾಳು? ಮುಂದೆ ಜೀವನ ಹೇಗೆ? ಇನ್ನೊಂದು ಮದುವೆ? ಛೇ! ಆಕೆಯ ಸ್ವಭಾವಕ್ಕೆ ನನ್ನ ಹೊರತು ಯಾರೂ ಒಪ್ಪುವುದಿಲ್ಲ. ನಾವಿಷ್ಟು ಬೇಗ ಮದುವೆಯಾಗಬಾರದಿತ್ತು!
ಒಂದು ಜೀವವಿಮೆಯನ್ನಾದರೂ ಮಾಡಿಸಿಕೊಳ್ಳಬೇಕಿತ್ತು!
ಒಟ್ಟು ಎಷ್ಟು ಬದುಕಿದ್ದೇನೆ ನಾನು? ಇಪ್ಪತ್ತೈದು ವರ್ಷ! ಅಷ್ಟು ವರ್ಷ ಬದುಕಿದ್ದೆನೇ? ಬಹುಶಃ ಇಲ್ಲ! ಇಲ್ಲಿಯವರೆಗೆ ಬದುಕಲು ಹೆಣಗಿದ್ದಷ್ಟೇ!
ಜೀವನ ಸಂಘರ್ಷದಲ್ಲಿ ಬಿದ್ದು ಒದ್ದಾಡುತ್ತಾ ಈಗಷ್ಟೇ ಇಲ್ಲಿಗೆ ಬಂದು ಒಳ್ಳೆಯದೊಂದು ಬದುಕು ಕಟ್ಟಿಕೊಳ್ಳುತ್ತಿದ್ದೆ.
ಅಮ್ಮನಿಗೆ ವಿಷಯ ತಿಳಿದರೆ ಎದೆಹೊಡೆದು ಕುಸಿದುಬಿದ್ದಾಳು! ಆಕೆ ತನ್ನ ಜೀವನ ಒತ್ತೆಯಿಟ್ಟು ಅದೂ-ಇದೂ ಚಾಕರಿ ಮಾಡುತ್ತಾ ನಮ್ಮನ್ನು ಸಾಕಿದ್ದು. ಆಕೆಗೆ ಏನು ಸುಖ ಕೊಟ್ಟಿದ್ದೆ? ಅದ್ಯಾವುದೋ ನನ್ನ ಕಂಪ್ಯೂಟರ್ ಕೋರ್ಸಿಗೆ ಹನ್ನೆರೆಡು ಸಾವಿರವನ್ನು ಹೊಂಚಲು ಎಲ್ಲೆಲ್ಲೋ ಹೊಟ್ಟೆಬಟ್ಟೆ ಕಟ್ಟಿ ಅದೆಷ್ಟು ಕಷ್ಟಪಟ್ಟಳು? ಆ ದುಡ್ಡನ್ನು ನಾನಿನ್ನೂ ವಾಪಸ್ ಕೊಟ್ಟಿಲ್ಲ! ಹೊಟ್ಟೆಯಲ್ಲಿ ಏನೋ ಕಟ್ಟಿಕೊಂಡ ಸಂಕಟ!
ಅಪ್ಪನೋ, ಜೀವನಸಾಗರದ ನಡುನೀರಿನಲ್ಲಿ ನಮ್ಮನ್ನೆಲ್ಲಾ ಬಿಟ್ಟು ಎಂದೋ ಹೋದ! ನಡುನೀರು…!? ಹೌದು ನಾನು ಈಗ ನಡುನೀರಿನಲ್ಲಿ ಮುಳುಗುತ್ತಿದ್ದೇನೆ…!”
“ಲೇ ಗಣಪ, ನೀ ಕೈಬಡೀಲಿಲ್ಲ ಅಂದ್ರೆ ಮುಂದೆ ಹೋಗೋಲ್ಲ. ಸಿಕ್ಕಾಪಟ್ಟೆ ಭಾರನೋ ನೀನು…” ನನ್ನ ಕೈಯನ್ನು ಎಳೆಯುತ್ತಾ ಒದ್ದಾಡುತ್ತಿದ್ದ ಅರುಣನ ಮಾತು ಅಸ್ಪಷ್ಟವಾಗಿ ತಲುಪಿ ಅರೆಪ್ರಜ್ಞೆಯಲ್ಲಿದ್ದ ನನ್ನ ಸುಪ್ತಮನಸ್ಸಿನಲ್ಲಾದ ಕೆಲವೇ ಕ್ಷಣಗಳ ಆ ಜೀವನದ-ತತ್ವಾಲೋಚನೆಗಳಿಂದ ಹೊರಬಂದೆ.
ಮುಳುಗಿದ್ದ ನನ್ನ ತಲೆ ನೀರಿನ ಮೇಲೆ ಬಂದು ಹೊರಗೆಲ್ಲಾ ತಿಳಿಬೆಳಕು! ಹಾಲ್ನೊರೆಯ ಹೊಳಪಿನ ಅಲೆಗಳು! ಕಣ್ತುಂಬಿದ ಬೆಳ್ಳನೆ ಬೆಳಕು! ಜೀವದ ಬೆಳಕು!
ಇಲ್ಲ, ಆಗಲಿಲ್ಲ! ಅರುಣನೂ ಸೋಲುತ್ತಿದ್ದ. ನನ್ನ ದೇಹ ನನಗಷ್ಟೇ ಅಲ್ಲ, ನೀರಿಗೂ-ಅರುಣನಿಗೂ ಭಾರವಾಗುತ್ತಿತ್ತು!
ಅದ್ಯಾವ ಮಾಯದಲ್ಲಿ ಅದು ಹೇಗೆ ಅಲ್ಲೊಬ್ಬ ಪ್ರತ್ಯಕ್ಷನಾಗಿದ್ದನೋ?
“ಸಾರ್ ಪ್ಲೀಸ್ ಹೆಲ್ಪ್, ಹೆಲ್ಪ್…!” ಎಂದೇನೋ ಆತನತ್ತ ತಿರುಗಿ ಅರುಣ ಕಿರುಚುತ್ತಿದ್ದ.
ಅಷ್ಟರಲ್ಲಿ ವಾಸ್ತವ ಜಗತ್ತಿಗೆ ನಿಧಾನವಾಗಿ ಮರಳಿದ್ದೆ. ಈಜಿಪ್ಶಿಯನ್ನಂತೆ ಕಾಣುತ್ತಿದ್ದ ಸಣ್ಣ ಗುಂಗುರುಗುರುಳಿನ ಕಂದುಬಣ್ಣದ ಸದೃಢ ಮೈಕಟ್ಟಿನ ಆ ಮನುಷ್ಯ ನನ್ನ ಇನ್ನೊಂದು ಕೈಯನ್ನು ಹಿಡಿದ! ಮುಳುಗಿ ಮೇಲೆದ್ದಿದ್ದ ನಾನಿನ್ನೂ ಜಡವಾಗಿಯೇ ತೇಲುತ್ತಿದ್ದೆ. ಪಾದಕ್ಕೆ ತಳಸ್ಪರ್ಶವಿನ್ನೂ ಆಗಿರಲಿಲ್ಲ.
“ಸಾರ್, ಕ್ಯಾನ್ ಯು ಪ್ಲೀಸ್ ಪುಷ್ ಹಿಮ್ ಫ್ರಮ್ ಬಿಹೈಂಡ್? ಹಿ ಈಸ್ ಹೆವಿ ಫಾರ್ ಮಿ…” ಅರುಣ ಆತನಲ್ಲಿ ಬೇಡಿಕೊಂಡದ್ದು ನನಗೆ ಸ್ಪಷ್ಟವಾಗಿ ಕೇಳಿಸಿತು.
ಅಂತಹ ಬಿಗುವಿನ ವೇಳೆಯಲ್ಲಿ ಯಾರಿಗಾದರೂ ಮಂದಸ್ಮಿತ ಭಾವ ಸಾಧ್ಯವಾ? ಅಥವಾ ನನ್ನ ಭ್ರಮೆಯಾ? ಕಂಡೂ-ಕಾಣದಂತಹ ಸಣ್ಣ ನಗೆಹೊದ್ದಂತೆ ನನಗೆ ಕಂಡನಾತ. ಹಿಂದೆ ಸರಿದು ನನ್ನನ್ನು ನೂಕುವ ಪ್ರಯತ್ನ ಮಾಡುತ್ತಿದ್ದ!
“ಮಗಾ, ಈಗ ನೀನ್ ಶಕ್ತಿ ಹಾಕ್ಬೇಕು. ಇಲ್ಲಾಂದ್ರೆ ಮುಂದೆ ಹೋಗಲ್ಲ” ಎನ್ನುತ್ತಿದ್ದ ಅರುಣನ ದನಿ ಸೋಲುತ್ತಿತ್ತು! ಅವನ ಹಿಡಿತ ತಪ್ಪುತ್ತಿತ್ತು. ಅವನ ಶಕ್ತಿಯೂ ಉಡುಗುತ್ತಿತ್ತು.
“ಪುಷ್-ಪುಷ್… ಯು ಕ್ಯಾನ್…” ಹಿಂದಿನಿಂದ ಉತ್ತೇಜಿಸುತ್ತಿತ್ತು ಆ ದನಿ.
ಈ ಬಾರಿಯಂತೂ ಹಿಂದಿನಿಂದ ಆದದ್ದು ಮಹಾಪ್ರಹಾರ! ಬಹುಶಃ ಕಾಲಿನಲ್ಲಿ ಬಲವಾಗಿ ಒದ್ದದ್ದು. ಆ ತಾಡನಕ್ಕೆ ನನ್ನ ದೇಹ ಎತ್ತಿ ಎಸೆದಂತಾಯ್ತು. ಆ ಕ್ಷಣ ಅದ್ಯಾವುದೋ ಅವ್ಯಕ್ತ ಶಕ್ತಿ ನನ್ನೊಳಗೆ ಪ್ರವಹಿಸಿದಂತಾಗಿ ಕೈಕಾಲುಗಳನ್ನು ತಪತಪನೆ ಬಡಿದೆ!
ಎದ್ದು ನಿಂತಾಗ ಅಲೆಗಳು ಮಂಡಿಯವರೆಗೆ ತಾಗುತ್ತಿತ್ತು. ದಡದಲ್ಲಿದ್ದ ಜನರು ಹರ್ಷದಿಂದ ಚಪ್ಪಾಳೆ ತಟ್ಟುತ್ತಾ ಹೋಕಾರ ಮಾಡುತ್ತಿದ್ದರು. ಆಗ ನನ್ನ ಕಾಲಡಿಯ ಮರಳು ಕರಗಿ ಕುಬ್ಜನಾಗುತ್ತಿದ್ದೇನೆಂಬ ಭಾವ!
ಪಾಟೀಲನೂ ನನ್ನ ಪಕ್ಕನಿಂತು ನನ್ನಂತೆಯೇ ಏದುಸಿರು ಬಿಡುತ್ತಾ ಬಲವಂತವಾಗಿ ನೀರನ್ನು ಕಕ್ಕುವ ಪ್ರಯತ್ನ ಮಾಡುತ್ತಿದ್ದ. ಆ ಮುಳುಗು-ತೇಲು ಮಹಾಪ್ರಸಂಗದಲ್ಲಿ ಪಾಟೀಲನ ಇರವು ನನಗೆ ಮರೆತೇಹೋಗಿತ್ತು!
“ಅವ್ನವ್ವುನ್, ಸತ್ತೇ ಹೋಗ್ಬಿಟ್ಟಿದ್ದೆ! ಅದ್ಯಾವ್ ದೇವ್ರು ನನ್ ದಬ್ತೋ ಏನೋ?” ಎಂದ ಪಾಟೀಲನ ಆ ಉದ್ಗಾರ ನನ್ನದಾಗಬೇಕಿತ್ತಲ್ಲವಾ?
ತಕ್ಷಣ ಹಿಂದೆ ತಿರುಗಿ ನೋಡಿದೆ. ಅರುಣ ಈಜಿಕೊಂಡು ನಮ್ಮ ಬಳಿ ಬರುತ್ತಿದ್ದ. ಆದರೆ ಆ ಮನುಷ್ಯ ಕಾಣಲಿಲ್ಲ. ಕಣ್ಣಳತೆ ತಾಕುವವರೆಗೆ ನೋಡುತ್ತಾ ನಿಂತೆ. ಅವನು ಮಾತ್ರ ಕಾಣಲಿಲ್ಲ!
“ಆ ಮನುಷ್ಯ ಎಲ್ಲೋದ?” ಅರುಣನಿಗೆ ಸುಧಾರಿಸಿಕೊಳ್ಳಲೂ ಅನುವು ಮಾಡಿಕೊಡದೆ ಕೇಳಿದೆ.
“ನಿಮ್ಮ್ ಹಿಂದೇನೆ ಈಜಿಕೊಂಡು ಬಂದ್ನಲ್ಲ. ಏನ್ ನನ್ಮಕ್ಳೋ ನೀವು? ಸತ್ತೋಗ್ತಿದ್ರಲ್ರೋ…” ಅರುಣ ಉಸಿರು ನುಂಗುತ್ತಾ ಹೇಳಿದ.
ನನ್ನ ನೋಟ ಅವನನ್ನು ಹುಡುಕುತ್ತಲೇ ಇತ್ತು. ತಿಳಿಬೆಳಕು ಹಾಸಿದ್ದ ತೀರದಲ್ಲಿ ಈ ಕೊನೆಯಿಂದ ಆ ಕೊನೆಯವರೆಗೂ ಹುಚ್ಚನಂತೆ ಓಡಿದೆ. ಅವ ಸಿಗಲಿಲ್ಲ! ಎಲ್ಲರೂ ನನ್ನತ್ತಲೇ ಬಿಟ್ಟಕಣ್ಣಿನಲ್ಲಿ ವಿಚಿತ್ರವಾಗಿ ನೋಡುತ್ತಿದ್ದರು.
ನನಗೆ ಅವನ ‘ಮಂದಸ್ಮಿತ ಕಂದುಮುಖ’ ಕಣ್ಮುಂದೆ ಬರುತ್ತಿತ್ತೇ ಹೊರತು ಅಲ್ಲಿಯ ಇನ್ಯಾವ ಸಂಗತಿಗಳು ಮನದಲ್ಲಿ ದಾಖಲಾಗುತ್ತಿರಲಿಲ್ಲ. ಎಲ್ಲಿಯಾದರು ಮುಳುಗಿಹೋದನೇ ಎಂದೆನಿಸಿ ಕ್ಷಣ ಗಾಬರಿಯಾಗಿ ಮತ್ತೆ ಸಮುದ್ರದೊಳಗೆ ಓಡಿದೆ! ಅರುಣ, ಪಾಟೀಲ ಮತ್ತೊಂದಷ್ಟು ಜನ ಹಿಂದೆಯೇ ಓಡಿಬಂದು ನನ್ನನ್ನು ಹಿಡಿದು, ಬೈದು, ಎಳೆದು ತೀರಕ್ಕೆ ತಂದರು.
“ಹುಚ್ ಹಿಡಿತೇನೋ ನಿಂಗೆ?” ಪಾಟೀಲ ಗದರುತ್ತಿದ್ದ. ಅಲ್ಲೆಲ್ಲೋ ಮಬ್ಬಿನಲ್ಲಿ ಚೀರಾಟ ಇನ್ನೂ ಸಣ್ಣಗೆ ಕೇಳುತ್ತಲೇ ಇತ್ತು!
***
“ಯಾವುದು ಜೀವನಕ್ಕೆ ಕೆಟ್ಟದ್ದೋ ಅದೇ ಒಳ್ಳೆಯದಾಗಬಹುದಲ್ವೇ? ಒಳ್ಳೆಯದು, ಕೆಟ್ಟದ್ದು ಅಂತ ಮೂಲಭೂತವಾಗಿ ಒಂದಿಲ್ಲ. ಬದುಕಿಸೋ ವಸ್ತುವೇ ಸಾಯಿಸುವ ವಸ್ತುವಾಗಬಹುದು. ನೀರು ಉತ್ತಮ ಉದಾಹರಣೆ!” ಗುರು ಬನ್ನಂಜೆ ಗಜೇಂದ್ರಮೋಕ್ಷದ ಕುರಿತಾಗಿ ಮಾತನಾಡುತ್ತಿದ್ದ ಆಡಿಯೋ ಕೇಳುತ್ತಿದ್ದೆ.
“ಮೋಹವೇ ಮಕರ. ಮೋಹವೇ ಮಮಕಾರ. ಆನೆಯನ್ನು ಹಿಡಿದದ್ದು ಅದರ ಮಮಕಾರವೇ. ಹರಿಯಿಂದ ಮಮಕಾರ ಹರಿದು ಗಜನ ಉದ್ಧಾರವಾಯ್ತು. ನಿನ್ನ ಉದ್ಧಾರ ಹೇಗೋ?” ನನಗೇ ಗುರುಗಳು ನೇರಪ್ರಶ್ನೆ ಮಾಡಿದ ಹಾಗಾಯ್ತು.
ನನಗೆ ಯಾವ ಮಮಕಾರ ಹಿಡಿದದ್ದು?
ಬಹುಶಃ ಬದುಕಿನದ್ದಿರಬೇಕು!
ಹರಿಯ ರೂಪದಲ್ಲಿ ಆ ಮನುಷ್ಯ ಬಂದಿದ್ದನ್ನು ನಿರಾಕರಿಸಲಿ ಹೇಗೆ?

ಮಮಕಾರ ಹರಿಯಿತೇ?

ಅಷ್ಟೆಲ್ಲಾ ತಾತ್ವಿಕತೆ ಗೊತ್ತಿಲ್ಲ, ಆದರೆ ಆ ನನ್ನ ಹರಿಯ ಮುಖ ಮತ್ತೊಮ್ಮೆ ನೋಡಲಾಗಲಿಲ್ಲ, ಸಣ್ಣ ಕೃತಜ್ಞತೆಯೊಂದನ್ನು ಸಲ್ಲಿಸಲಿಲ್ಲವೆಂಬ ಕೊರತೆ ಮಾತ್ರ ಎಡಬಿಡದೆ ಕಾಡುತ್ತಿತ್ತು! ಆ ದೃಶ್ಯ ನೆನೆದಾಗಲೆಲ್ಲಾ ಗಂಟಲು ಉಬ್ಬಿಬರುತ್ತಿತ್ತು.
ಅಂದು ಸಂಜೆ ಆ ಪುಟ್ಟಹುಡುಗಿ, ನಾನು ಮತ್ತು ಪಾಟೀಲನ ಹಾಗೆಯೇ ಹಲವರು ನೀರಿನಲ್ಲಿ ಸಿಕ್ಕಿಬಿದ್ದಿದ್ದರಂತೆ. ಎಲ್ಲರೂ ಪವಾಡಸದೃಶ ರೀತಿಯಲ್ಲಿ ಉಳಿದರು. ಬೀಚ್-ರೆಸ್ಕ್ಯೂ ತಂಡ ಬರಲು ತಡವಾಗಿ, ‘ಯಾರ ದೆಸೆಗೋ ಏನೋ’ ಅಲ್ಲಿಗೆ ಬಂದಿದ್ದ ಸಿ‌ಐ‌ಡಿಯವರೇ ನೀರಿಗೆ ಬಿದ್ದರಂತೆ!
 
ಗುರುವಾರ ಸಂಜೆಯಾಯಿತೆಂದರೆ ಬರ್ದುಬೈನ ‘ಯಾರ್ಕ್-ಹೊಟೇಲ್’ ಬಳಿ ನಿಂತು ಅಲ್ಲಿ ಬಹಿರಂಗವಾಗಿ ನಡೆಯುವ ವೇಶ್ಯಾವಾಟಿಕೆಯ ಚಟುವಟಿಕೆಗಳನ್ನು ಅಲ್ಲೆಲ್ಲೋ ಮೂಲೆಯಲ್ಲಿ ನೋಡುತ್ತಾ ನಿಲ್ಲುವ ಅವ್ಯಕ್ತ ಹುಚ್ಚು ನಮಗೆ. ರಷಿಯಾ ಮೂಲದ ಹುಡುಗಿಯರು ಎಲ್ಲರ ಕಣ್ಣುಕುಕ್ಕುವಂತೆ ವೈಯ್ಯಾರದಿಂದ ನಡೆದಾಡುವ ದೃಶ್ಯವೇ ಸ್ವರ್ಗಸದೃಶದ್ದು! ಸ್ಥಾನಿಕ ಅರಬ್ಬರೇ ವಿಟರು. ಧನಿಕ ವಲಸಿಗರೂ ಹೊರತಲ್ಲ. ನಮಗೂ ಎಂಥದ್ದೇ ಆಸೆ ಒಳಗಿದ್ದರೂ ದಕ್ಕಿಸಿಕೊಳ್ಳಬಹುದಾದ ಸುಖವಲ್ಲವದು ಎಂಬ ವಾಸ್ತವದ ಪರಿವೆಯಿತ್ತು. ಥೇಟ್ ‘ಬುರ್ಜ್-ಅಲ್-ಅರಬ್’ ಹೋಟೆಲಿನ ಹೊರಗೆ ನಿಂತು ಮನಸಿನಲ್ಲಿ ಮಂಡಿಗೆ ಚಪ್ಪರಿಸುತ್ತಿದ್ದ ಹಾಗೆ!
ಭಂಡಧೈರ್ಯವೋ ಅಥವಾ ತಿಳುವಳಿಕೆಯ ಕೊರತೆಯೋ ಗೊತ್ತಿಲ್ಲ? ಮೊದಮೊದಲು ಹೊಟೇಲ್ ಮುಖ್ಯದ್ವಾರದ ಬಳಿಯೇ ರಾಜಾರೋಷವಾಗಿ ನಿಲ್ಲುತ್ತಿದ್ದೆವು. ನಮ್ಮಲ್ಲಿಗೆ ಬಂದ ಕೆಲ ಅರಬ್ಬರು “ಯಾರ್ ನೀನು? ಇಲ್ಯಾಕ್ ನಿಂತೆ? ಲೇಬರ್-ಕಾರ್ಡ್ ತೋರ್ಸು, ಪಾಸ್ಪೋರ್ಟ್ ತೋರ್ಸು! ಇಲ್ ನಿಲ್ಬೇಡ!” ಎಂದೆಲ್ಲಾ ಗದರುತ್ತಿದ್ದರು.
“ಅವರು ಪೊಲೀಸ್-ಸಿ‌ಐ‌ಡಿ ಜನ. ಪೊಲೀಸ್ ವರ್ದಿ ಹಾಕಿರೊಲ್ಲ ಅಷ್ಟೇ. ವಿನಾಕಾರಣ ಜೈಲಿಗೆ ಹಾಕಿ ಬಿರ್ಯಾನಿ ತಿನ್ನಿಸ್ತಾರೆ, ಹುಷಾರು!” ಎಂದು ನಮ್ಮಲ್ಲಿದ್ದ ಹಿರಿಯರು ಹೆದರಿಸಿದ್ದರು.
ಆ ನೀರಿನ ದೇವರು ಸಿಗಬಹುದಾ ಎಂಬ ಸಣ್ಣ ಆಸೆಯಿಂದ ಮತ್ತೆಮತ್ತೆ ನಾನು ಇಲ್ಲಿ ಬಂದು ದೂರದ ಮೂಲೆಯಲ್ಲಿ ನಿಲ್ಲುತ್ತಿದ್ದೆ!
ಡಿಸ್ಕೋತೆಕ್ಕುಗಳಲ್ಲಿ ಕುಡಿದು ಬೊಂಬಡವೆಬ್ಬಿಸುವ ಜನರನ್ನು ಹಿಡಿದು ಒಳಗೆ ಹಾಕುವ, ಏರ್ರ್ಪೋರ್ಟಿನಲ್ಲೋ ಅಥವಾ ಮಾಲ್‌ಗಳಲ್ಲೋ ಸುಖಾಸುಮ್ಮನೆ ಅನುಮಾನಾಸ್ಪದವಾಗಿ ಅಲೆಯುವ ಹುಡುಗರನ್ನು ಹಿಡಿದು ಪ್ರಶ್ನಿಸುವ ಇವರನ್ನು ನಾನು ಈ ಮೊದಲೇ ನೋಡಿದ್ದೆನಾದರೂ ಇಲ್ಲಿಯವರೆಗೆ ಅವರ ಬಗ್ಗೆ ಅಷ್ಟು ಕುತೂಹಲವಿರಲಿಲ್ಲ. ಅಪರಾಧ ಬೇಧಿಸುವಲ್ಲಿ ದುಬೈ ಸಿ‌ಐ‌ಡಿಯವರದ್ದು ‘ಸ್ಕಾಟ್ಲಂಡ್-ಯಾರ್ಡ್’ ಪೊಲೀಸ್ ನಂತರದ ಸ್ಥಾನವಂತೆ ಎಂದೆಲ್ಲಾ ಹುಡುಗರು ಅಂತೆಕಂತೆ ಮಾತನಾಡಿಕೊಳ್ಳುತ್ತಿದ್ದರು. ಈಗ ಅಂತಹ ವಿಷಯಗಳಿಗೆ ನನ್ನ ಕಿವಿ-ನಿಮಿರುತ್ತಿತ್ತು! ಇತ್ತೀಚೆಗೆ ಸಮಯ ಸಿಕ್ಕಾಗಲೆಲ್ಲ ಡಿಸ್ಕೋ-ತೆಕ್ಕು, ಏರ್ಪೋರ್ಟ್ ಮತ್ತು ಮಾಲ್‌ಳಿಗೆ ವಿನಾಕಾರಣ ಹುಚ್ಚನಂತೆ ಸುತ್ತುವುದನ್ನು ರೂಢಿಸಿಕೊಂಡಿದ್ದೆ!
***
‘ಏರ್ಪೋರ್ಟ್ ಫ್ರೀ-ಝೋನ್’ನಲ್ಲಿದ್ದ ನಮ್ಮ ಆಫೀಸಿನಲ್ಲಿ ಅಂದು ಅತಿಯಾದ ಕೆಲಸವಿತ್ತು. ಸಿಟಿ-ಬಸ್ಸುಗಳು ಸಂಜೆ ಏಳರ ಮೇಲೆ ಅಲ್ಲಿಗೆ ಬರುವುದಿಲ್ಲ. ಅಲ್ಲಿಂದ ಐದಾರು ಕಿ.ಮೀ ದೂರದ, ಹೆಚ್ಚಾಗಿ ಅರಬ್ಬರೇ ವಾಸವಿದ್ದ ‘ಅಲ್ ರಶೀದಿಯಾ’ದಲ್ಲಿ ನಮ್ಮ ರೂಮಿದ್ದದ್ದು. ಯಾವ ಟ್ಯಾಕ್ಸಿ ಕೂಡ ಸಿಗಲಿಲ್ಲ. ಎಂತಹ ದುರದೃಷ್ಟದ ದಿನವಿದೆಂದು ಶಪಿಸಿಕೊಂಡದ್ದಷ್ಟೇ ಬಂತು. ಒಂದು ತಾಸು ಬಿರುನಡಿಗೆಯಾದರೆ ತಲುಪಬಹುದೆಂಬ ನಿರ್ಧಾರಕ್ಕೆ ಅದು ಹೇಗೆ ಬಂದೇನೋ ನಾ ಕಾಣೆ. ‘ಅಲ್ ಕುಡ್ಸ್’ ರಸ್ತೆಯನ್ನು ದಾಟಿ, ‘ಬೈರತ್ ಸ್ಟ್ರೀಟ್’ ಹೊಕ್ಕು ದುಬೈ ಏರ್ಪೋರ್ಟಿನ ರನ್-ವೇ ಕೆಳಗೆ ಹಾದುಹೋಗುವ ಬರೋಬ್ಬರಿ ಎರಡು ಕಿ.ಮೀ ಉದ್ದದ, ಸಾಕಷ್ಟು ಗಾಳಿಬೆಳಕಿಲ್ಲದ ನೆಲಸುರಂಗದಲ್ಲಿ ನಡೆದುಹೋಗುತ್ತಿದ್ದೆ. ದಾರಿಹೋಕರಿಗೆ ಪ್ರವೇಶವಿಲ್ಲ ಎಂಬ ಫಲಕ ಓದಿಯೂ ನಾನು ಹುಂಬನಂತೆ ಮುಂದುವರೆದಿದ್ದು ಹೇಗೆ ಎನ್ನುವುದಕ್ಕೆ ನನಗಿನ್ನೂ ಉತ್ತರ ಸಿಕ್ಕಿಲ್ಲ! ಯಾವುದಕ್ಕೆ ಯಾವ ದಿವ್ಯಕಾರ್ಯಕಾರಣವು ಬೆಸೆದುಕೊಂಡು ಕುಳಿತಿರುತ್ತದೋ ಏನೋ?
ಗಾಡಿಗಳು ಅತಿವೇಗದಲ್ಲಿ ರೊಯ್ಯನೆ ಹೋಗುತ್ತಿದ್ದುದರ ಶಬ್ದ ಮತ್ತು ಅಲ್ಲಿದ್ದ ದೊಡ್ಡ ಏರ್-ಬ್ಲೋವರಿನ ‘ಬರ್ರೋ’ ಎಂಬ ಆರ್ಭಟ ಅನುರಣನವಾಗಿ ಕಿವಿ ಚಿಟ್ಟುಹಿಡಿಯುತ್ತಿತ್ತು! ಉಸಿರಾಡಲು ಕಷ್ಟವಾಗಿ ಎದೆಕಟ್ಟಿದ ಹಾಗಾಯ್ತು. ಅಲ್ಲಿಂದ ವಾಪಸ್ ಹೋಗಿ ‘ಅಲ್ ತ್ವಾರ್’ ಪ್ರದೇಶ ಬಳಸಿಕೊಂಡು ರಶೀದಿಯಾ ತಲುಪಲು ಇನ್ನೈದು ಕಿ.ಮೀ ಹೆಚ್ಚುದೂರ. ಇನ್ನೊಂದು ಹೆಚ್ಚು ತಾಸು. ಹಿನ್ನಡೆಯಲು ಮನಸ್ಸು ಒಪ್ಪಲಿಲ್ಲ! ಏನಾದರಾಗಲಿ ಎಂದು ಕುದುರೆಗೆ ಕಣ್ಪಟ್ಟಿ ಕಟ್ಟಿದ ಹಾಗೆ ನೇರನೋಡುತ್ತಾ ನಡೆಯುತ್ತಿದ್ದೆ.
ಸ್ವಲ್ಪ ಹೊತ್ತಾಗಿತ್ತಷ್ಟೇ, ಯಾವುದೋ ಮಾಯದಲ್ಲಿ ಪೊಲೀಸ್-ಕಾರೊಂದು ‘ಒಯ್ಯೋsss’ ಎನ್ನುವ ಸೈರನ್ ಹೊಡೆಯುತ್ತಾ ಬಂದು ನನ್ನ ಪಕ್ಕಕ್ಕೆ ನಿಲ್ಲಬೇಕೆ?
ಒಳಗಿನಿಂದ, ಹಿಂದೆ ಕೂರುವಂತೆ ಗದರುತ್ತಿದ್ದ ಧ್ವನಿ!
ಯಾವ ರೀತಿಯ ಪ್ರತಿಕ್ರಿಯೆ ತೋರಬೇಕೆಂದು ತೋಚದೆ ಬಿಮ್ಮನೆ ಕಾರೊಳಗೆ ಕೂರುವಂತೆ ಮಾಡಿತ್ತು ಆ ಕ್ಷಿಪ್ರಘಟನೆ.
ಗಾಡಿ ವೇಗ ಪಡೆದುಕೊಂಡು ಹೊರಟಿತು. ಮುಂದೇನೋ ಎಂದು ಅತೀವ ಗಾಬರಿಯಾಗಿದ್ದೆ. ನನಗೇ ನನ್ನ ಎದೆಬಡಿತ ಕೇಳಿಸುತ್ತಿತ್ತು! ಇದೆಲ್ಲವೂ ಕೆಲವೇ ಕ್ಷಣದಲ್ಲಿ ನಾಟಕೀಯವಾಗಿ ನಡೆದುಹೋಯ್ತು!
ಅರೆನಿಮಿಷ ಮೌನದ ನಂತರ ಆ ಪೊಲೀಸ್ ನನ್ನನ್ನು ಮಾತಿಗಿಳಿಸಿದ.
“ಆರ್ ಯು ಇಂದಿಯನ್?”
“ಯೆಸ್ ಸರ್…”
“ಗಿವ್ ಮಿ ಯುವರ್ ಲೇಬರ್-ಕಾರ್ದ್…!” ಪಕ್ಕಾ ಅರಬ್-ಇಂಗ್ಲಿಷ್ ಉಲಿಕೆಯದು.
ಲೇಬರ್-ಕಾರ್ಡ್ ಕೊಟ್ಟೆ. ನೋಡಿ ವಾಪಸ್ ಕೊಟ್ಟು ಮತ್ತೆ ಮಾತಿಗಿಳಿದ.
“ದೋಂತ್ ಯು ನೋ ದ ರೂಲ್ಸ್?”
“ಐ ಡಿಂಟ್ ಸರ್, ಐಯಾಮ್ ನ್ಯೂ ಹಿಯರ್. ಸಾರೀ…”
“ದಿಂತ್ ಯು ರೀದ್ ಸೈನ್-ಬೋರ್ದ್…?”
ನಾನು ಮಾತನಾಡಲಿಲ್ಲ.
ಆತ ಜೋರು ದನಿಯಲ್ಲಿ ಕೇಳಿದ್ದನ್ನೇ ಮತ್ತೆ ಒತ್ತಿ ಕೇಳುತ್ತಾ ತನ್ನ ಕತ್ತನ್ನು ಹಿಂದೆ ತಿರುಗಿಸಿ ನನ್ನನ್ನು ಸಿಟ್ಟಿನಿಂದ ನೋಡಿದ್ದಷ್ಟೇ…!
ಚಳಕ್ಕನೆ ಮಿಂಚಿನ ಬೆಳಕೊಂದು ಹಾದುಹೋದಂತಾಯ್ತು! ಎದೆಬಡಿತ ಇನ್ನಷ್ಟು ತೀವ್ರವಾಗಿಹೋಯ್ತು. ಕಾರಿನ ಎಸಿಯ ಚಳಿಯಲ್ಲೂ ಮೈಬೆವೆತು ಪಸೆಯಾಯ್ತು. ಮೈಮನಸ್ಸುಗಳು ತಾಳಮೇಳವಿಲ್ಲದಂತೆ ತಮ್ಮಿಷ್ಟಕ್ಕೆ ತಾವು ಏನೇನೋ ಮಾಡಹತ್ತಿದವು. ಗಂಟಲುಬ್ಬಿ ಬಂದು ಬಾಯಿತೆರೆದರೂ ಏನೊಂದು ಶಬ್ದವೂ ಹೊರಗೆ ಬರಲಿಲ್ಲ!
ಆತನೂ ಪದೇಪದೇ ತಿರುಗಿ ನನ್ನತ್ತ ನೋಡುತ್ತಿದ್ದ. ನನ್ನ ನಿರ್ವಿಣ್ಣ ಮುಖ ನೋಡಿ ಅವನ ಹುಬ್ಬುಗಳು ಗಂಟಿಕ್ಕಿದ್ದು ಕಾಣಿಸಿತು. ಸುರಂಗ ದಾಟಿ ರಶೀದಿಯಾ ರಸ್ತೆಗೆ ಬಂದಾಗ ಮತ್ತೆ ಕೋರೈಸುವ ಹೆಬ್ಬೆಳಕು!
ಆತ “ವೇರ್ ಯು ವಾಂತ್ ತು ಗೋ?” ಎಂದಾಗಲೇ ನನಗೆ ಮತ್ತೆ ಎಚ್ಚರ!
ನನಗೆ ಮಾತು ಬರಲಿಲ್ಲ. ಅಪ್ರಜ್ಞಾಪೂರ್ವಕವಾಗಿಯೇ ಮುಂದಕ್ಕೆ ಕೈತೋರಿಸಿದೆ.
ಪಕ್ಕಕ್ಕಿದ್ದ ಬಸ್-ಸ್ಟಾಪಿನಲ್ಲಿ ಗಾಡಿ ನಿಲ್ಲಿಸುವಂತೆ ಡ್ರೈವರಿಗೆ ಹೇಳಿದ.
“ದೋಂತ್ ದು ದಿಸ್ ಎಗೈನ್! ಇತೀಸ್ ದೇಂಜರಸ್…ಓಕೆ…” ಎಂದು ಹೇಳಿ ಮತ್ತೊಮ್ಮೆ ನನ್ನ ಮುಖ ನಿರುಕಿಸಿದ.
ನಾನು ಕೆಳಗಿಳಿಯುವ ಅಷ್ಟೂ ಹೊತ್ತು ಅವನೂ ಕೂಡ ಏನನ್ನೋ ಯೋಚಿಸುತ್ತಿದ್ದಂತೆ ನನ್ನತ್ತ ತಿರುಗಿ ನೋಡುತ್ತಲೇ ಇದ್ದ!
ಅಲ್ಲಿ ನನ್ನನ್ನಿಳಿಸಿದರು.

ದೈನ್ಯತೆಯಿಂದ ಕೈಮಡಚಿ ನಿಂತಲ್ಲೇ ನಿಂತೆ. ಆತನಿಗೆ ಧನ್ಯವಾದ ಹೇಳುವಷ್ಟೂ ದನಿ ಬಂದಿರಲಿಲ್ಲ!

ಪೊಲೀಸ್ ಕಾರು ಮೆಲ್ಲನೆ ಮುಂದೆ ಸಾಗುತ್ತಿತ್ತು.
ಇದ್ದಕ್ಕಿದ್ದ ಹಾಗೆ ಕಾರಿನಿಂದ ತಲೆಯನ್ನು ಹೊರಗೆ ಹಾಕಿ ಆತ ಮತ್ತೊಮ್ಮೆ ನನ್ನನ್ನು ಇಣುಕುವಂತೆ ತಿರುಗಿನೋಡಿದ.
ಬಹುಶಃ ಅದೇ ಮಂದಸ್ಮಿತ ಕಂದುಮುಖ!

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. ಮಂಜುನಾಥ್ ಕುಣಿಗಲ್

    ಧನ್ಯವಾದ ಕೆಂಡಸಂಪಿಗೆ

    Reply
  2. Poorni

    ದೂರದೇಶದಲ್ಲಿ ಎರಡೆರಡು ಬಾರೆ ದೇವರ ಕೃಪಾಕಟಾಕ್ಷ ದೊರಕಿದ ಕತೆ ಚಂದವುಂಟು!

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ