ಹೊರಗಾದಳು, ಹೊರಗಾಗುವವಳು
ಆರು ತಿಂಗಳಿಂದ ಹೊಟ್ಟೆ ನೋವು
ನಡ ನೋವು, ಏನೋ ಹಸಿ ಹಸಿ
ಹೊರಗಾದಳು ಹನ್ನೆರಡರ ಬಾಲೆ
ಹೆಣ್ಣಾದದ್ದಕ್ಕೆ ಕನ್ಯತ್ವಕ್ಕೆ ಕಡ್ಡಾಯ
ಪ್ರಕೃತಿಯ ಸೂರ್ಯ ಚಂದ್ರರಂತೆ
ಸ್ವಾಭಾವಿಕ ಇರಬೇಕಾದದ್ದು
ಗೆಜ್ಜೆ ಹಾಕಿಕೊಂಡು ಸಣ್ಣ ಕಾಲಲ್ಲಿ
ಲುಟುಲುಟು ಓಡಾಡುವ
ದೊಡ್ಡವಳಾಗುವುದು ಖುಷಿ ಜೊತೆ ದುಃಖ
ಹೆಣ್ತನದ ಮೊದಲ ಹೆಜ್ಜೆ
ಪರ ಮನೆಯ ಸೇರುವ ದೊಡ್ಡ ಹೆಜ್ಜೆ
ಅಲ್ಪ ಸಮಯದಲ್ಲಿ
ಬೆಣ್ಣೆಯಂತ ಬಣ್ಣ
ಗಲ್ಲದ ಮೃದುತ್ವ ಕೈಯಲ್ಲಿ
ನೋಡಿದವರು ಕಣ್ಣು
ಹಚ್ಚಾರೆಂಬ ಸಂಶಯ
ಅಷ್ಟಷ್ಟೇ ನಾಚಿಕೆಯ ಹೊತ್ತು
ಯೌವ್ವನದ ತಯಾರಿ
ಮೊದಲಿನಂತ ಚಲ್ಲು ಚಲ್ಲು ಸಲ್ಲ
ಗಂಭೀರವದನೆಯಾಗಿ
ಯಾರಲ್ಲೂ ಸಲುಗೆ ನಿಷಿದ್ಧ ಸಲಹೆ
ಆಗಾಗ ನಡೆಯುವ ಕಂದಮ್ಮಗಳ
ಅತ್ಯಾಚಾರ ಭಯ ಹುಟ್ಟಿಸಿ
ಮಗಳ ಜವಾಬ್ದಾರಿ ನಿದ್ದೆಗೆಡಿಸಿ
ಆಟ ಆಡಿದ ತಮ್ಮ, ಅಣ್ಣ, ಸ್ನೇಹಿತ,
ಸಾಕಿ ಸಲುಹಿದ ಚಿಕ್ಕಪ್ಪ, ಸಹೋದರ ಮಾಮ,
ಕೊನೆಗೆ ಹಡೆದ ಅಪ್ಪನನ್ನು ನಂಬದಂತೆ
ಮಾಡುವ ನೋಡಿದ, ಕೇಳಿದ
ಜೀವ ಹಿಂಡುವ ಘಟನೆಗಳು ಆಗಾಗ
ಹೊರಗಾದರಷ್ಟೇ ಅಲ್ಲ
ಮಗಳೆಂಬುದು ಯಾವಾಗಲೂ
ಸಿಹಿ ಜವಾಬ್ದಾರಿಯೇ ಸರಿ
ಬರದಿರಲಿ ಹಾರೈಕೆ
ನಾವು ಕಂಡ ನೋವು- ದುಮ್ಮಾನ
ಸಿಗಲಿ ಬಾಳ ನೌಕೆ
ಅಲೆಗಳ ಅಬ್ಬರವಿಲ್ಲದೇ
ಹೆಣ್ಣು ಹಡೆದವರ
ಆಸೆ ಇಷ್ಟೇ.

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ