ಎಳೆಯ ಕಾಯಿಗಳು ಬಲಿತು, ಕರ್ರಗೆ ಹೊಳೆಯುವ ಆ ಹಣ್ಣುಗಳು ಕಣ್ಣಿಗೆ ಬಿದ್ದರೆ ಮುಗಿಯಿತು. ಸ್ಪರ್ಧೆಗೆ ಬಿದ್ದವರಂತೇ, ನುಗ್ಗಿ ನುಗ್ಗಿ ಹಣ್ಣುಗಳನ್ನು ಕೊಯ್ದು ಚಪ್ಪರಿಸುತ್ತಿದ್ದೆವು. ಹುಳಿಯ ಜೊತೆಗೆ ಸವಿ ಬೆರೆತ ಆ ಮಧುರ ರುಚಿ ನೆನೆದರೆ, ಈಗಲೂ ಬಾಯಲ್ಲಿ ನೀರೂರುತ್ತದೆ. ಈ ಕವಳಿ ಕಾಯಿ ಕೊಯ್ದರೆ, ಹಾಲಿನಂಥ ಜಿಗುಟು ವಸರುತ್ತದೆ. ಈ ಜಿಗುಟಿನಿಂದ ನಮ್ಮ ಅಂಗಿಯೆಲ್ಲ ಕಲೆಯಾಗಿ, ಮನೆಯಲ್ಲಿ ನಿತ್ಯ ಬೈಗುಳದ ಹೂ ತಲೆಗೇರುತ್ತಿತ್ತು. ಆ ರುಚಿ ಹಣ್ಣಿನ ಮುಂದೆ, ಬೈಗುಳ, ಬಡಿತ ಇವೆಲ್ಲ ಯಾವ ಲೆಕ್ಕದ್ದು ಹೇಳಿ?
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಐದನೆಯ ಕಂತು
ಇಂದಿನ ದಿನಮಾನಗಳಲ್ಲಿ, ಹಣ್ಣುಗಳು ಅಂದ ತಕ್ಷಣ, ಕಿತ್ತಳೆ, ಮುಸಂಬಿ, ದ್ರಾಕ್ಷಿ, ಸಪೋಟಾ, ಸೇಬು ಇತ್ಯಾದಿ ಇತ್ಯಾದಿಗಳ ಪಟ್ಟಿಯೇ ಕಣ್ಣ ಮುಂದೆ ಬರುತ್ತದೆ. ಈಗಿನ ಜನರೇಶನ್ನವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಕಿವಿ, ಪೀಚ್, ಡ್ರ್ಯಾಗನ್, ಚೆರ್ರಿ, ಸ್ಟ್ರಾಬೆರಿ, ಬ್ಲೂ ಬೆರ್ರಿ ಹೀಗೇ ವಿದೇಶಿ ಹಣ್ಣುಗಳ ಇಷ್ಟುದ್ದ ಲೀಸ್ಟ್ ನೀಡಿ, ಅದರಷ್ಟು ನ್ಯೂಟ್ರಿಶನ್ ಇನ್ಯಾವುದರಲ್ಲೂ ಇಲ್ಲ ಎಂದು ಲೆಕ್ಚರ್ ಕೊಡ್ತಾರೆ. ಈಗಂತೂ ಆಧುನಿಕ ಬೇಸಾಯ ಪದ್ಧತಿಯಲ್ಲಿ ಎಲ್ಲ ಹಣ್ಣುಗಳೂ ವರ್ಷವಿಡೀ ಗ್ರಾಹಕರಿಗೆ ಲಭ್ಯವಿರುತ್ತದೆ. ಅದರ ಮೋಹಕ ಬಣ್ಣಕ್ಕೆ, ಗಾತ್ರಕ್ಕೆ ಮರುಳಾಗದಿರುವವರೇ ಇಲ್ಲ. ಅದರೊಳಗಿನ ಸತ್ವದ ಬಗ್ಗೆ ವಿಚಾರ ಮಾಡುವವರಾರು?
ಆದರೆ, ನಾನು ಈಗ ಬರೆಯುತ್ತಿರುವುದು ಈ ಮೇಲೆ ಕಾಣಿಸಿದ ಯಾವ ಹಣ್ಣಿನ ಕುರಿತೂ ಅಲ್ಲ. ನಾನೀಗ ನಿಮಗೆ ಹೇಳ ಹೊರಟಿರುವುದು, ನಮ್ಮ ಬಾಲ್ಯದಲ್ಲಿ ನಾವು ಸವಿದ ವೈವಿಧ್ಯಮಯ ಅಪ್ಪಟ ಮಲೆನಾಡಿನ ಕಾಡಲ್ಲಿ ದೊರೆಯುವ ಹಣ್ಣುಗಳ ಕುರಿತು. ಯಾರ ಆರೈಕೆಯಿಲ್ಲದೇ, ಯಾವ ಗೊಬ್ಬರ ಬೇಡದೇ, ಕಾಡ ನಡುವೆ ಆಯಾಯಾ ಋತುಗಳಿಗೆ ಅನುಸಾರವಾಗಿ, ತನ್ನಷ್ಟಕ್ಕೆ ಬಿಡುತ್ತಿದ್ದ ಇಂಥ ಹಣ್ಣುಗಳ ರುಚಿ ಸವಿದವರೇ ಬಲ್ಲರು. ಅದನ್ನು ಶಬ್ಧದಲ್ಲಿ ವರ್ಣಿಸೋದೇ ಕಷ್ಟ.
ನಾವು ತೀರ ಚಿಕ್ಕವರಿರುವಾಗ (೧ ರಿಂದ ೪ ನೆ ತರಗತಿ) ನಮ್ಮನೆ ಸುತ್ತ ಮುತ್ತಲಿರುವ ಹಣ್ಣುಗಳಷ್ಟೇ ನಮಗೆ ಪರಿಚಯವಿತ್ತು. ಬೇಸಿಗೆಯ ರಜ ಬಂತೆಂದರೆ, ನಮ್ಮನೆಯ ಸುತ್ತಲಿನ ಬೆಟ್ಟ ಗುಡ್ಡ ತಿರುಗಾಡಿ ಹಣ್ಣು ಅರಸುವುದೇ ನಮಗೆ ಬಹು ಮುಖ್ಯ ಕೆಲಸವಾಗಿತ್ತು. ನಮ್ಮನೆಯ ಎದುರಿನ ಗದ್ದೆಯ ಗಡಿ ಬೇಲಿ ದಾಟಿದರೆ, ಅಲ್ಲೊಂದು ಸೊಪ್ಪಿನ ಬೆಟ್ಟವಿತ್ತು. ಅಲ್ಲಿ ಎರಡು ಬಲವಾದ ನೇರಳೆ ಮರಗಳಿದ್ದವು. ರಜೆಗೆ ಸರಿಯಾಗಿ, ಅದರಲ್ಲಿ ಗೊಂಚಲು ಗೊಂಚಲು ಹಣ್ಣು ಬಿಡುತ್ತಿತ್ತು. ದಿನದ ಬಹುತೇಕ ವೇಳೆ ನಾನು ಆ ಮರದಡಿಗೆ ಬಗ್ಗಿ ಬಗ್ಗಿ ಹಣ್ಣು ಆರಿಸುವುದರಲ್ಲೇ ಇರುತ್ತಿದ್ದೆ. ನನ್ನ ಎರಡನೆ ಅಕ್ಕನ ಗುರಿ ತುಂಬ ನಿಖರವಾಗಿತ್ತು. ನಾನೂ ಮತ್ತೂ ನನ್ನ ಮೂರನೆ ಅಕ್ಕ, ಅವಳನ್ನು ಪೂಸಿ ಹೊಡೆದು ಮರದ ಬಳಿ ಕರೆತರುತ್ತಿದ್ದೆವು. ಅವಳು ನೆಲಕ್ಕೆ ಬಲವಾಗಿ ಕಾಲೂರಿ ನಿಂತು, ಮೇಲಕ್ಕೆ ರಿಂವ್ವನೆ ಬಡಿಗೆ ಬೀಸುತ್ತಿದ್ದರೆ, ಗೊಂಚಲು ಗೊಂಚಲು ಹಣ್ಣುಗಳು ಪಟ ಪಟನೆ ನೆಲಕ್ಕೊರಗುತ್ತಿದ್ದವು. ನಾವು ಜಿಗಿದಾಡುತ್ತ ಹೋಗಿ ಹಣ್ಣುಗಳನ್ನು ಆಯ್ದು ಚಪ್ಪರಿಸುತ್ತಿದ್ದೆವು. ಹಾಗೇ ನೆಲ್ಲಿ ಮರದತ್ತಲೂ ಅವಳನ್ನು ಕರೆತಂದು “ನೆಲ್ಲಿಕಾಯಿ ಉದುರಿಸಿ ಕೊಡೆ” ಎಂದು ಗೋಗರೆಯುತ್ತಿದ್ದೆವು. ಮತ್ತೆ ಮಡಿಲ ತುಂಬ ಕಾಯಿ ತುಂಬಿಕೊಂಡು, ಎಲ್ಲರೂ ಚಪ್ಪರಿಸುತ್ತಿದ್ದೆವು. ಅವಳಿಗೊಂದು ದೊಡ್ಡ ಪಾಲು ಕೊಟ್ಟು, ಮೆಹರ್ಬಾನ್ ಮಾಡೋದು ಎಂದೂ ಮರೆಯುತ್ತಿರಲಿಲ್ಲವೆನ್ನಿ.
ಈ ನೇರಳೇ ಹಣ್ಣಿನ ಜೊತೆ, ಅದೇ ವೇಳೆಯಲ್ಲಿ ಸಿಗುತ್ತಿದ್ದ ಇನ್ನೊಂದು ಹಣ್ಣೆಂದರೆ, ದಡಸಲ ಹಣ್ಣು. ನಸುಗೆಂಪು ಬಣ್ಣದಲ್ಲಿ ಕನ್ನಡದ ‘ದ’ ಆಕಾರದಲ್ಲಿರುವ ಈ ಹಣ್ಣು ಆಕಾರದಲ್ಲಿ ತುಂಬ ಚಿಕ್ಕದಾಗಿದ್ದು, ಸಿಹಿ ಮತ್ತೂ ವಗರು ರುಚಿಯದ್ದು. ಈ ಹಣ್ಣುಗಳ ಗೊಂಚಲುಗಳು ನೋಡಲು ಬಲು ಚಂದ. ರುಚಿಯೂ ಅಷ್ಟೇ. ಆದರೆ, ಈ ಹಣ್ಣು ನನಗೊಬ್ಬಳಿಗೇ ಪ್ರಿಯವಾಗಿತ್ತು. ಅಕ್ಕಂದಿರು ಇದನ್ನು ತಿನ್ನುತ್ತಿರಲಿಲ್ಲ. ಈ ಹಣ್ಣು ನೆಲದ ಮೇಲೆ ಬಿತ್ತೆಂದರೆ, ಅದಕ್ಕೆ ಒಂದು ರಾಶಿ ಗೊದ್ದದ ಗಾತ್ರದ ಇರುವೆಗಳು ಮುತ್ತಿಕೊಂಡು ತಿಂದುಹಾಕಿ ಬಿಡುತ್ತಿದ್ದವು. ಅದಕ್ಕೇ ಇರುವೆ ಮುಟ್ಟದ ಇಡೀ ಹಣ್ಣಿಗಾಗಿ, ನೆಲಕ್ಕೆ ಹಾಸಿ ಬಿದ್ದ ಒಣ ಎಲೆಗಳನ್ನು ಸರಿಸುತ್ತ, ಕಣ್ಣಲ್ಲಿ ಕಣ್ಣಿಟ್ಟು ತಾಸುಗಟ್ಟಲೇ ಹುಡುಕ ಬೇಕಾಗುತ್ತಿತ್ತು. “ಇರುವೆ ಮುಟ್ಟಿದ ಹಣ್ಣು ತಿಂದ್ರೆ, ಮೈ ತುಂಬ ಕಜ್ಜಿ ಆಗ್ತದೆ ನೋಡು” ಅಂತ ಅಕ್ಕಂದಿರು ಬೇರೆ ಹೆದರಿಸುತ್ತಿದ್ದರು. ಇದರ ಹೊರತಾಗಿ, ನಮ್ಮ ಬೆಟ್ಟಕ್ಕೆ ಹತ್ತಿದ ಒಂದು ಬೇಣದಲ್ಲಿ ಇನ್ನೆರಡು ವಿಶೇಷ ಹಣ್ಣಿನ ಮರಗಳಿದ್ದವು. ಅವುಗಳೆಂದರೆ, ಗುಡ್ಡೆ ಗೇರು ಹಣ್ಣಿನ ಮರ ಮತ್ತೂ ನುರುಕಲು ಹಣ್ಣಿನ ಮರ. ಈ ಗುಡ್ಡೇ ಗೇರು ಹಣ್ಣು ಬಹಳ ವಗರು ರುಚಿಯದ್ದು. ಇದರ ತುದಿಗೆ ಅಂಟಿಕೊಂಡ ಬೀಜದೊಳಗೆ ಒಳ್ಳೆ ಕೊಬ್ಬರಿಯಂಥ ರುಚಿಯ ಬೀಜ ಇರುತ್ತದೆ. ಆದರೆ, ಇದರ ಸೊನೆ, (ಗೇರು ಎಣ್ಣೆ) ಕೈಗೆ ಬಾಯಿಗೆ ತಾಗಿದರೆ, ಸುಟ್ಟು, ಚರ್ಮ ಕಿತ್ತು ಹೋಗುತ್ತದೆ. ಅದಕ್ಕೆ, ನಾವು ಅದರ ಬೀಜ ಜಜ್ಜುವ, ಕಚ್ಚಿ ಒಡೆಯುವ ಸಾಹಸಕ್ಕೆ ಹೋಗುತ್ತಿರಲಿಲ್ಲ. ನುರಕಲು ಹಣ್ಣಿನ ಮರ ದೊಡ್ಡ ಗಾತ್ರದ್ದು. ಕೆಳಗೆ ಉದುರಿದ ಹಣ್ಣು, ಹುಳಿ, ಸಿಹಿ ರುಚಿಯದ್ದು ಆಗಿರುತ್ತಿತ್ತು.

(ಮುಳ್ಳೇ ಹಣ್ಣು)
ಮಾರ್ಚ್ ಏಪ್ರಿಲ್ ವೇಳೆಗೆ ಸಿಗುವ ಇನ್ನೊಂದು ಹಣ್ಣೆಂದರೆ, ಮುಳ್ಳೇ ಹಣ್ಣು. ಅದರಲ್ಲಿ ಎರಡು ವಿಧ. ಒಂದು, ಕರೀ ಮುಳ್ಳೇ ಹಣ್ಣು (ಪರಗಿ ಹಣ್ಣು) ಮತ್ತೊಂದು ಬಿಳೀ ಮುಳ್ಳೇ ಹಣ್ಣು. ಕರಿಯದು ಹುಳಿ ಸಿಹಿಯಿಂದ ಕೂಡಿರುತ್ತಿತ್ತು. ಆದರೆ, ಬಿಳೀ ಮುಳ್ಳೇ ಹಣ್ಣು ಮಾತ್ರ ತುಂಬ ಮಧುರವಾದ ರುಚಿ ಮತ್ತೂ ಅಪರೂಪದ ಘಮ ಹೊಂದಿರುತ್ತಿತ್ತು. ನಾವೆಲ್ಲ ಉದ್ದನೆಯ ಕೊಕ್ಕೆ ಹಿಡಿದು, ಈ ಹಣ್ಣನ್ನು ಅರಸಿ ಕಾಡು ಸುತ್ತುತ್ತಿದ್ದೆವು. ತಿಳಿ ಹಸಿರು ಎಲೆಗಳ ಗಿಡದಲ್ಲಿ, ಬೆಳ್ಳನೆಯ ಪುಟ್ಟ ಪುಟ್ಟ ದುಂಡು ದುಂಡು ಹಣ್ಣುಗಳ ಆ ಗೊಂಚಲು ಮಲ್ಲಿಗೆ ಮೊಗ್ಗು ಪೋಣಿಸಿಟ್ಟಂತೆ ಕಾಣುತ್ತದೆ. ಗಿಡ ಅಲುಗಾಡಿಸಿ, ಎಲೆಗಳನ್ನು ಸರಿಸಿ, ಚುಪು ಗಣ್ಣು ಹಾಯಿಸಿ ಹುಡುಕುತ್ತಿದ್ದ ನಾವು ಕಾಣುತ್ತಿದ್ದಂತೆಯೇ ಉತ್ಸಾಹದಿಂದ, “ಯೇ ಇಲ್ನೋಡೇ. ಹಣ್ಣಿನ ದೊಡ್ಡ ಗೊಂಚಲು” ಎಂದು ಖುಶಿಯಿಂದ ಕುಣಿದಾಡಿ ಬಿಡುತ್ತಿದ್ದೆವು. ಹೆಸರಿಗೆ ತಕ್ಕಂತೇ, ಈ ಗಿಡಕ್ಕೆ ಸಿಕ್ಕಾಪಟ್ಟೆ ಮುಳ್ಳುಗಳು ಮೇಲ್ಮುಖವಾಗಿ ಚಾಚಿಕೊಂಡಿರುತ್ತವೆ. ಚುಚ್ಚಿದರೆ, ಚರ್ಮ ಕಿತ್ತೇ ಬರುವಷ್ಟು ಬಲವಾದ ಮುಳ್ಳುಗಳಿರುತ್ತವೆ. ಆದರೆ, ಆ ಮುಳ್ಳುಗಳನ್ನು ತಾಕಿಸಿಕೊಳ್ಳದೇ, ಕೊಕ್ಕೆಯಿಂದ ಗಿಡ ಬಗ್ಗಿಸಿ, ಹಣ್ಣು ಕೊಯ್ಯುವ ಕಲೆ, ನಮಗೆಲ್ಲ ಕರಗತವಾಗಿ ಬಿಟ್ಟಿತ್ತು. ಈ ಹಣ್ಣು ತುಂಬ ತಂಪು ಎಂದು ಆಯಿ ಹೇಳುತ್ತಿದ್ದಳು. ಆ ಕಡು ಬೇಸಿಗೆಯ ಉಷ್ಣ ಶಮನಕ್ಕೆ, ಪ್ರಕೃತಿ ಕೊಟ್ಟ ಕೊಡುಗೆ ಇದು.
ನಮ್ಮನೆಯ ಗದ್ದೆ ಬೇಲಿಯ ಪಕ್ಕಕ್ಕೆ, ಕಾಕೇ ಹಣ್ಣಿನ ಗಿಡ, ಕಾಡು ಟೊಮೇಟೋ ಗಿಡಗಳಿದ್ದವು. ಕಾಕೇ ಹಣ್ಣಿನ ಗಿಡ, ಮೆಣಸಿನ ಗಿಡವನ್ನೇ ಹೋಲುವ ಪುಟ್ಟಗಿಡ. ಅದರಲ್ಲಿ ಕರ್ರನೆಯ ಪುಟ್ಟ ಪುಟ್ಟ ಹಣ್ಣುಗಳು ವರ್ಷವಿಡೀ ದೊರೆಯುತ್ತಿದ್ದವು. ವಾರದಲ್ಲಿ ಒಂದೆರಡು ದಿನ ಈ ಗಿಡಕ್ಕೆ ಸುತ್ತುಹಾಕಿ, ಹಣ್ಣು ಮೆಲ್ಲುವದನ್ನು ಎಂದೂ ಮರೆಯುತ್ತಿರಲಿಲ್ಲ. ಹಾಗೇ ಪುಟಾಣಿ ಕೆಂಪು ಕೆಂಪು ಹಣ್ಣು ಬಿಡುವ ಕಾಡು ಟೊಮೇಟೋ (ಈಗಿನ ಚೆರ್ರೀ ಟೊಮೇಟೊ) ಹಣ್ಣು, ನನ್ನ ಪ್ರೀತಿಯ ಹಣ್ಣುಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿತ್ತು.

(ಕಾಕೇ ಹಣ್ಣಿನ ಗಿಡ)
ನಾನು ಮೊದಲೇ ತಿಳಿಸಿದಂತೇ, ನಮ್ಮೂರಲ್ಲಿ ಬರೇ ನಾಲ್ಕನೆಯ ತರಗತಿಯ ತನಕ ಮಾತ್ರ ಶಾಲೆ ಇತ್ತು. ಆ ಕಾರಣ ನಂತರ ಓದಬೇಕಾದವರು, ಬೇರೆ ಊರಿಗೆ ಹೋಗಿ, ಅಲ್ಲಿರುವ ಬಂಧುಗಳ ಮನೆಗಳಲ್ಲೋ, ಆತ್ಮೀಯರ ಮನೆಗಳಲ್ಲೋ ಉಳಿದು, ಮುಂದಿನ ಓದು, ಓದುತ್ತಿದ್ದರು. ಆದರೆ, ನನಗೆ ಮಾತ್ರ, ಅಂಥ ಯಾರ ಮನೆಯ ಅನುಕೂಲವೂ ಸಿಗದ ಕಾರಣ ನಮ್ಮೂರಿಂದ ೫-೬ ಮೈಲಿ ದೂರವಿರುವ ಸರ್ಕಾರಿ ಶಾಲೆಗೆ ದಿನಾ ನಡೆದೇ ಹೋಗುವ ಅನಿವಾರ್ಯತೆ ಉಂಟಾಯಿತು. ಅದು ಹುಡುಗಾಟದ ವಯಸ್ಸು. ಯಾವುದಕ್ಕೂ ಚಿಂತೆ ಮಾಡದ, ನಿಶ್ಚಿಂತ ಮನಸ್ಸು. ಅಂತೆಯೇ, ಪಾಟೀ ಚೀಲ ಹೊತ್ತು ಹೊರಟೇ ಬಿಟ್ಟಿದ್ದೆ ಒಬ್ಬಂಟಿಯಾಗಿ. ಹಳ್ಳಿಯಲ್ಲೇ ಹುಟ್ಟಿ ಬೆಳೆದಿದ್ದರಿಂದ, ನನಗೆ ಭಯವೆಂದರೇನೆಂದೇ ಗೊತ್ತಿರಲಿಲ್ಲ. ಅದೃಷ್ಟವಶಾತ್, ಆ ಮೂರು ವರ್ಷಗಳಲ್ಲಿ ನಮ್ಮನೆ ಸುತ್ತ ಮುತ್ತ ಕಾಣದ ಅಪರೂಪದ ಹಣ್ಣುಗಳನ್ನು ಸವಿಯುವ ಅವಕಾಶ ಸಿಕ್ಕಿಬಿಟ್ಟಿತ್ತು.
ಚಳಿಗಾಲ ಮುಗಿಯಿತೆಂದರೆ, ಅದು ಸಾಮಾನ್ಯವಾಗಿ ಹಣ್ಣುಗಳು ಬಿಡುವ ಸಮಯ. ಅಂದರೆ, ಸುಮಾರು ಜನೆವರಿ, ಫೆಬ್ರವರಿಯಲ್ಲಿ ಆರಂಭವಾಗಿ, ಮೇ ತನಕವೂ ಕಾಡಲ್ಲಿ ವೈವಿಧ್ಯಮಯ ಹಣ್ಣುಗಳು ದೊರೆಯುತ್ತಿದ್ದವು. ನಮ್ಮನೆಯಿಂದ ನಮ್ಮ ಮಾಧ್ಯಮಿಕ ಶಾಲೆಗೆ ೫ ಕಿ.ಮೀ ಅಂತರ. ಅಲ್ಲಿಗೆ ಹೋಗಲು ಅಗಲವಾದ ಮಣ್ಣು ರಸ್ತೆ ಇತ್ತು. ಬೇಸಿಗೆಯಲ್ಲಿ ಅದೇ ರಸ್ತೆಯಲ್ಲಿ ಬಸ್ಸು ಓಡಾಡುತ್ತಿತ್ತು. ನನಗೆ ಆ ದೊಡ್ಡ ರಸ್ತೆಯಲ್ಲಿ ಓಡಾಡುವುದೆಂದರೆ, ತುಂಬ ಬೋರು ಹೊಡೆಯುತ್ತಿತ್ತು. ಅದರ ಬದಲು, ಕಾಡ ನಡುವೆ ಗೀಟು ಹೊಡೆದಂತೆ ಇರುವ ಪುಟ್ಟ ಪುಟ್ಟ ಕಾಲುದಾರಿಗಳಲ್ಲಿ ನಡೆದು ಹೋಗುವುದೆಂದರೆ, ನನಗೆ ತುಂಬ ಇಷ್ಟವಾಗಿತ್ತು. ನಮ್ಮ ತಲೆ ಮೇಲಿನ ಬೈತಲೆಯಂತೆ ಕಿರಿದಾಗಿ ತೆರೆದುಕೊಳ್ಳುವ ಆ ಹಾದಿಯಲ್ಲಿ ಎಷ್ಟುದ್ದ ನಡೆದರೂ ಆಯಾಸವೇ ಆಗುತ್ತಿರಲಿಲ್ಲ. ನಾನು ಅಂತಹಾ ೪, ೫ ಕಾಲು ದಾರಿಗಳನ್ನು ಹುಡುಕಿಕೊಂಡಿದ್ದೆ. ಆ ದಾರಿಗುಂಟ ನಡೆದರೆ, ಆಯಾ ಕಾಲದಲ್ಲಿ ದೊರೆಯುವ ವೈವಿಧ್ಯಮಯ ಹಣ್ಣುಗಳನ್ನು ತೃಪ್ತಿಯಾಗುವಷ್ಟು ಮೆಲ್ಲಬಹುದಾಗಿತ್ತು.

(ಹಲಗೆ ಹಣ್ಣು)
ಡಿಸೆಂಬರ್ ತಿಂಗಳು ಬಂತೆಂದರೆ, ನಾವೆಲ್ಲ ಮೊದಲು ಕವಳೀ ಮಟ್ಟಿಯಲ್ಲಿ ಹಣಕಲು ಆರಂಭಿಸುತ್ತಿದ್ದೆವು. ಆಗ ತಾನೇ ಬಿಟ್ಟಿರುತ್ತಿದ್ದ ಹಸಿರು ಕಾಯಿಗಳನ್ನು ಕೊಯ್ದು, ತಿನ್ನುತ್ತಿದ್ದೆವು. ಮಲ್ಲಿಗೆಯಂತೆ ಬೆಳ್ಳಗಿರುವ ಇದರ ಹೂ ಕೂಡಾ ಹುಳಿಯೇ. ಕಾಯಿ ಬಿಡುವ ಮೊದಲು, ಹೂ ಕೂಡಾ ಚಪ್ಪರಿಸಿ ಖುಶಿಪಡುತ್ತಿದ್ದ ಹುಂಬತನದ ಕಾಲವದು. ಈ ಕವಳೀ ಗಿಡದಲ್ಲೂ ಬಲವಾದ ಮುಳ್ಳುಗಳು ಬಾಚಿಯಂತೇ ಚಾಚಿರುತ್ತವೆ. ನಾವು ಎಷ್ಟು ಹುಶಾರಿಯಿಂದ ಮಟ್ಟಿ (ಪೊದೆ)ಯೊಳಗೆ ನುಗ್ಗುತ್ತೇವೆಂದರೂ, ಕೈ ಕಾಲುಗಳಿಗೆ ಸಾಕಷ್ಟು ತರಚುಗಾಯಗಳು ಆಗಿಯೇ ಆಗುತ್ತಿದ್ದವು. ಮೈ ತರಚಿದರೂ ಚಿಂತೆಯಿಲ್ಲ, ಅಂಗಿ ಹರಿದು ಹೋಗಬಾರದೆಂಬ ಸಿದ್ಧಾಂತ ನಮ್ಮದು. ಎಳೆಯ ಕಾಯಿಗಳು ಬಲಿತು, ಕರ್ರಗೆ ಹೊಳೆಯುವ ಆ ಹಣ್ಣುಗಳು ಕಣ್ಣಿಗೆ ಬಿದ್ದರೆ ಮುಗಿಯಿತು. ಸ್ಪರ್ಧೆಗೆ ಬಿದ್ದವರಂತೇ, ನುಗ್ಗಿ ನುಗ್ಗಿ ಹಣ್ಣುಗಳನ್ನು ಕೊಯ್ದು ಚಪ್ಪರಿಸುತ್ತಿದ್ದೆವು. ಹುಳಿಯ ಜೊತೆಗೆ ಸವಿ ಬೆರೆತ ಆ ಮಧುರ ರುಚಿ ನೆನೆದರೆ, ಈಗಲೂ ಬಾಯಲ್ಲಿ ನೀರೂರುತ್ತದೆ. ಈ ಕವಳಿ ಕಾಯಿ ಕೊಯ್ದರೆ, ಹಾಲಿನಂಥ ಜಿಗುಟು ವಸರುತ್ತದೆ. ಈ ಜಿಗುಟಿನಿಂದ ನಮ್ಮ ಅಂಗಿಯೆಲ್ಲ ಕಲೆಯಾಗಿ, ಮನೆಯಲ್ಲಿ ನಿತ್ಯ ಬೈಗುಳದ ಹೂ ತಲೆಗೇರುತ್ತಿತ್ತು. ಆ ರುಚಿ ಹಣ್ಣಿನ ಮುಂದೆ, ಬೈಗುಳ, ಬಡಿತ ಇವೆಲ್ಲ ಯಾವ ಲೆಕ್ಕದ್ದು ಹೇಳಿ?
ಇದೇ ಹೊತ್ತಿಗೆ ದೊರೆಯುತ್ತಿದ್ದ ಇನ್ನೊಂದು ಬಗೆಯ ಹಣ್ಣೆಂದರೆ, ‘ಹಲಗೆ ಹಣ್ಣು’. ನಸು ಗುಲಾಬಿ ಬಣ್ಣದ ಉದ್ದ ಆಕಾರದ ಈ ಹಣ್ಣಿನ ಮೇಲೆ ರವೆ ಅಂಟಿಕೊಂಡಂತೆ ಒಂಥರಾ ದೊರಗು ಪುಡಿ ಅಂಟಿಕೊಂಡಿರುತ್ತದೆ. ಇದೂ ಹುಳಿ, ಸಿಹಿ ರುಚಿಯದ್ದೇ. ಇದನ್ನು ತಿಂದರೆ, ನಾಲಿಗೆ ಒರಟಾಗಿ, ಮರಗಟ್ಟಿದ ಅನುಭವವಾಗುತ್ತದೆ. ಬಹುಶಃ ಅದಕ್ಕೇ ಆ ಹೆಸರು ಬಂದಿರ ಬಹುದು. ಆದರೆ, ಇವು ಕವಳಿ ಹಣ್ಣಿನಷ್ಟು ಸಮೃದ್ಧವಾಗಿ ದೊರೆಯುತ್ತಿರಲಿಲ್ಲ. ನಮ್ಮ ದಾರಿಯಲ್ಲಿ ಒಂದೋ, ಎರಡೋ ಪೊದೆಗಳು ಮಾತ್ರ ಇದ್ದವು.

(ಸಂಪಿಗೆ ಹಣ್ಣು)
ಆಗ ದೊರೆಯುತ್ತಿದ್ದ, ಇನ್ನೊಂದು ಅಪರೂಪದ ಅಷ್ಟೇ ರುಚಿಯಾದ ಹಣ್ಣೆಂದರೆ, ‘ಸಂಪಿಗೆ ಹಣ್ಣು’ ಇದು ಮಾಮೂಲಿ ಹೂ ಬಿಡುವ ಸಂಪಿಗೆ ಮರ ಅಲ್ಲ. ಬರೀ ಕಾಯಿ, ಹಣ್ಣು ಮಾತ್ರ ಬಿಡುವ ಗಿಡ ಇದು. ಎಲ್ಲೋ ಚಿಕ್ಕದಾಗಿ ಹೂ ಬಿಡುತ್ತಿರಬಹುದು. ಆದರೆ, ಮುಡಿಯುವ ಸಂಪಿಗೆ ಹೂ ಅಲ್ಲ. ಇದರದ್ದು ಒಂದೇ ಒಂದು ಮರ ನಮ್ಮ ದಾರಿಯ ಪಕ್ಕಕ್ಕೆ ಇತ್ತು. ತುಂಬ ಎತ್ತರದ ಮರ. ಹಾಗಾಗಿ, ಬಿದ್ದ ಹಣ್ಣಷ್ಟೇ ನಮಗೆ ಲಭ್ಯವಾಗಿತ್ತು. ಇದರ ರುಚಿ ತುಂಬ ಮಧುರ.
ಮಾಧ್ಯಮಿಕ ಶಾಲೆ ಮುಗಿಸಿ, ಹೈಸ್ಕೂಲಿನ ಓದಿಗಾಗಿ ನಾನು ನಮ್ಮ ದೂರದ ಬಂಧುಗಳ ಮನೆಯಲ್ಲಿ ಮೂರು ವರ್ಷ ಉಳಿಯಬೇಕಾಯಿತು. ಹಾಗಾಗಿ, ಅಲ್ಲಿಯ ಕಾಡಲ್ಲಿ ದೊರೆವ ಹಣ್ಣಿನ ರುಚಿ ಕೂಡಾ ಸವಿಯುವ ಭಾಗ್ಯ ನನ್ನದಾಯಿತು. ಗುಡ್ಡೇ ದಾಸವಾಳದ ಹಣ್ಣು, ಹುಳಿ ಮಜ್ಜಿಗೆ ಹಣ್ಣು, ಪೀ ಪೀ ಹಣ್ಣು, ಬಿಕ್ಕೆ ಹಣ್ಣು ಇವೆಲ್ಲ ಆ ಊರ ಪಕ್ಕದ ಕಾಡಲ್ಲಿ ನಮಗೆ ಹೇರಳವಾಗಿ ದೊರೆಯುತ್ತಿದ್ದವು. ಇವೆಲ್ಲ ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾತ್ರ ದೊರೆಯುವ ಹಣ್ಣುಗಳು. ಆಗೆಲ್ಲ ಬಯಲು ಶೌಚಾಲಯದ ಕಾಲ. ನಾವೆಲ್ಲ ಶಾಲೆ ಬಿಟ್ಟು ಬಂದ ಮೇಲೆ ಬಹಿರ್ದೆಸೆಯ ನೆಪಮಾಡಿಕೊಂಡು, ಈ ಹಣ್ಣುಗಳನ್ನು ಅರಸಿ, ಹೊರಟು ಬಿಡುತ್ತಿದ್ದೆವು. ಮತ್ತೆ ಮನೆ ತಲುಪುವುದು ಕತ್ತಲಾದ ಮೇಲೆಯೇ.
ಈಗ ಈ ಹಣ್ಣುಗಳೆಲ್ಲ ಬರೀ ನೆನಪು ಮಾತ್ರ. ಹಳ್ಳಿಗರು ಕೂಡಾ ಈಗ ಆ ಥರದ ಹಣ್ಣುಗಳನ್ನು ತಿನ್ನುತ್ತಿಲ್ಲವೆನ್ನುವುದು ನಿಜಕ್ಕೂ ವಿಷಾದನೀಯ. ಅಲ್ಲೂ ಕಾಡೆಲ್ಲ ಕಡಿಮೆಯಾಗಿದೆ. ಅಲ್ಲದೇ ಕವಳೀ ಅಂಥ ಹಣ್ಣುಗಳನ್ನು ತಂದು ಮಾರುವ ಆಸೆಯಿಂದ ಆ ಗಿಡಗಳನ್ನು ಕಡಿದೋ, ಮುರಿದೋ ಹಾಳುಮಾಡುವ ಕಾಡುಗಳ್ಳರ ಕಾಟ ಬೇರೆ. ನಿಜಕ್ಕೂ ಅದೊಂದು ಸುವರ್ಣಯುಗ. ಅಂಥ ಹಣ್ಣುಗಳನ್ನು ಸವಿದು ಬೆಳೆದ ನಾವೇ ಭಾಗ್ಯಶಾಲಿಗಳು.

ರೂಪಾ ರವೀಂದ್ರ ಜೋಶಿ ಮೂಲತಃ ಶಿರಸಿ ತಾಲ್ಲೂಕಿನ ದಾನಂದಿ ಗ್ರಾಮದವರು. ಸಧ್ಯ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ವೃತ್ತಿಪರ ಲೆಕ್ಕಪತ್ರ ಬರಹಗಾರರಾಗಿ ಕೆಲಸ ಮಾಡುತ್ತಿರುವ ಇವರಿಗೆ ವಿವಿಧ ಪ್ರಕಾರದ ಸಾಹಿತ್ಯ ಬರವಣಿಗೆ ಹಾಗೂ ಅಧ್ಯಯನದಲ್ಲಿ ಮತ್ತೂ ರಂಗಭೂಮಿಯಲ್ಲೂ ಆಸಕ್ತಿ. ಸಾಗುತ ದೂರಾ ದೂರಾ (ಕಥಾ ಸಂಕಲನ), ಅಜ್ಞಾತೆ (ಸಾಮಾಜಿಕ ಕಾದಂಬರಿ) ೨೦೧೭ (ಲೇಖಿಕಾ ಪ್ರಶಸ್ತಿ ದೊರೆತಿದೆ), ಕಾನುಮನೆ (ಪತ್ತೆದಾರಿ ಕಾದಂಬರಿ) ೨೦೧೯ (ಕ ಸಾ ಪ ದತ್ತಿ ಪ್ರಶಸ್ತಿ ದೊರೆತಿದೆ, ಶೃಂಖಲಾ (ಸಾಮಾಜಿಕ ಕಾದಂಬರಿ) ೨೦೨೦ ( ರತ್ನಮ್ಮ ಹೆಗ್ಗಡೆ ಪ್ರಶಸ್ತಿ ದೊರೆತಿದೆ), ವಾಟ್ಸಪ್ ಕಥೆಗಳು (ಕಿರುಕಥಾ ಸಂಕಲನ), ಹತ್ತರ ಕೂಡ ಹನ್ನೊಂದು (ಪ್ರಬಂಧಗಳ ಸಂಕಲನ), ಚಿಗುರು ಬುತ್ತಿ (ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು.