ಕನ್ನಡ ರಂಗಭೂಮಿಯ ಪೂರ್ಣಪ್ರಮಾಣದ ಕೃಷಿಕ  ಚನ್ನಕೇಶವ ತೀರಿಕೊಂಡಿದ್ದಾರೆ. ನಾಟಕ ಆಡುವುದು, ಆಡಿಸುವುದು,ಆಡುವುದನ್ನು ಕಲಿಸುವುದು, ನಾಟಕ ವಿನ್ಯಾಸ, ರಸಗ್ರಹಣ ಹೀಗೆ ತನ್ನ ಪೂರ್ಣ ಹೊತ್ತನ್ನು ರಂಗಭೂಮಿಯಲ್ಲೇ ಕಳೆಯುತ್ತಿದ್ದವರು ಅವರು. ಕಳೆದ ಶುಕ್ರವಾರ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿಧನರಾದರು. ಬದುಕನ್ನು ಬಹಳ ಬದ್ಧತೆಯೊಂದಿಗೆ ಪ್ರೀತಿಸುತ್ತಿದ್ದ ಅವರು ಸಮಾಜವನ್ನು, ಜನರನ್ನು ಗ್ರಹಿಸುತ್ತಿದ್ದ ರೀತಿ ವಿಭಿನ್ನ ರೀತಿಯದ್ದಾಗಿತ್ತು. ರಂಗಭೂಮಿ, ಚಿತ್ರಕಲೆ ಅವರ ಪ್ರೀತಿಯ ಕ್ಷೇತ್ರವಾಗಿತ್ತು. ಅವರ ಅದಮ್ಯ ಜೀವನ ಪ್ರೀತಿಯ ನೆನಪಿಗಾಗಿ ಕೆಂಡಸಂಪಿಗೆಗೆ ಅವರು ಈ ಹಿಂದೆ ಬರೆಯುತ್ತಿದ್ದ `ರಂಗಪುರಾಣ’ ಸರಣಿಯ ಒಂದು ತುಣುಕು.

 

ಫೋಟೋ: ಲೀಲಾ ಅಪ್ಪಾಜಿ

ಸ್ವಯಂ ವಿಮರ್ಶೆಸ್ವಯಂ ವಿರೋಧ

ನಾವು ಒಂದಷ್ಟು ಜನರಿದ್ದೇವೆ. ಎಲ್ಲಿಯಾದರೂ ಒಟ್ಟಾಗಿ ಸೇರಿದರೆ ಸಾಕು ನಮ್ಮ ಕಥಾ ಕಾಲಕ್ಷೇಪ ಶುರುವಾದಂತೆಯೇ. ಸಾಮಾನ್ಯವಾಗಿ ನಾಲ್ಕಾರು ಜನ ಒಟ್ಟಿಗೆ ಸೇರಿದರೆ ಹೀಗೆ ಕಥೆ ಕಟ್ಟುವುದು ಸಹಜವಾದದ್ದೇ. ಆದರೂ ನಮ್ಮ ಈ ಬೇನಾಮಿ ಕಮಿಟಿಯಲ್ಲಿ ಬೇರೆಬೇರೆ ಕಾಲದ ರಂಗಕ್ರಿಯೆಗಳಲ್ಲಿ ತೊಡಗಿಕೊಂಡಿದ್ದ- ತೊಡಗಿಕೊಂಡಿರುವ, ಬೇರೆಬೇರೆ ವಯಸ್ಸಿನವರಿದ್ದೇವೆ. ಕೆಲವೊಂದು ಸಲ ‘ಕಂಡವರ ಕಾಲೆಳೆಯುವುದು’ ಅಂತಲೋ ಅಥವಾ ‘ಪರನಿಂದನೆ’ ಕಾರ್ಯಕ್ರಮ ಎಂತಲೋ ನಮ್ಮ ಪ್ರೋಗ್ರಾಮ್‌ಗೆ ನಾವೇ ಹೆಸರಿಟ್ಟುಕೊಳ್ಳುತ್ತೇವೆ. ಈ ಕಥಿಸುವ ಕಾರ್ಯದಲ್ಲಿ ನಮ್ಮ ಕಲ್ಪನೆಯ, ಭವಿಷ್ಯದ ರಂಗಭೂಮಿಯ ಕನಸನ್ನೂ ಕಾಣುತ್ತಿರುತ್ತೇವೆ. ಭೂತದ ಆಳದಿಂದ ಹೊರಬಂದ ನಮ್ಮ ರಂಗಭೂಮಿಗಳ ಭವಿಷ್ಯವು ಅಂತಹ ವರ್ತಮಾನಗಳಲ್ಲೇ ಎಷ್ಟೋ ಬಾರಿ ಮೊಳಕೆಯೊಡೆದು ಅರಳಿಕೊಂಡಿದೆ. ಪರನಿಂದೆಯನ್ನು ಪ್ರೀತಿಯಿಂದಲೂ, ವಿಮರ್ಶಾತ್ಮಕ ದೃಷ್ಟಿಯಿಂದಲೂ ಕಂಡಿದ್ದೇವೆ. ಇದರಲ್ಲಿ ಪರನಿಂದೆ ಮಾತ್ರವಲ್ಲದೆ, ಸ್ವ-ವಿಮರ್ಶೆ, ಸ್ವ-ವಿರೋಧಗಳೂ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ನಮ್ಮ ಅನುಭವಗಳಿಗೊದಗಿಬಂದಿರುವ ರಂಗಪ್ರಸಂಗಗಳನ್ನು ಕಲ್ಪನೆಯ ಕಿರೀಟಕ್ಕೇರಿಸಿ ತೊಟ್ಟು ನಲಿಯುತ್ತೇವೆ. ಆ ರೀತಿಯ ಅನುಭವಗಳ ಕಥನವೇ ಈ ಪುರಾಣ.

ನಾನು ನೀನಾಸಮ್‌ನಲ್ಲಿ ಕಲಿತವನು, ಅದರೊಟ್ಟಿಗೆ ಕೆಲಸ ಮಾಡಿದವನು-ಮಾಡುತ್ತಿರುವವನು ಎನ್ನುವುದನ್ನು ಬಿಟ್ಟರೆ, ನೀನಾಸಮ್ ಸಂಸ್ಥೆಯ ಒಳಗೆ ನನಗೇನೂ ಅಂತಹ ನೇರವಾದ ಸಂಬಂಧವಿಲ್ಲ. ಆದರೆ ಈ ಸಂಬಂಧ ಅನ್ನೋದು ದೊಡ್ಡದು ನೋಡಿ, ಹಾಗಾಗಿ ಅದು ಯಾವಯಾವುದೋ ಕಾರಣಗಳಿಂದಾಗಿ ಯಾವಯಾವುದೋ ಕ್ರಿಯೆಯ ಒಳಗಡೆಗೆ ತಳುಕು ಹಾಕಿಕೊಂಡುಬಿಡುತ್ತದೆ. ಅದು ನನ್ನದು ಎನ್ನುವ ಪ್ರೀತಿಯ ಭಾವನೆಯ ಮುಂದೆ ಮಿಕ್ಕೆಲ್ಲ ತಾತ್ವಿಕ ನಿಲುವು-ವಿಚಾರಗಳು ಗೌಣವಾಗುತ್ತವೆ. ನನ್ನ ಹಾಗೇ, ನೀನಾಸಮ್‌ನ ಬಗ್ಗೆ ಪ್ರೀತಿಯ ಭಾವನೆಗಳನ್ನು ಇರಿಸಿಕೊಂಡ ಅನೇಕರನ್ನು ನಾನು ಕಂಡಿದ್ದೇನೆ. ನೀನಾಸಮ್‌ನಲ್ಲಿ ವರ್ಷಕ್ಕೊಮ್ಮೆ ನಡೆಯುವ ಸಂಸ್ಕೃತಿ ಶಿಬಿರಕ್ಕೆ ಬರುವವರು, ತಿರುಗಾಟದ ನಾಟಕವನ್ನು ತಪ್ಪದೇ ನೋಡುವವರು, ತಮ್ಮ ಊರುಗಳಲ್ಲಿ ಈ ನಾಟಕಗಳನ್ನು ಆಡಿಸುವವರು…. ಹೀಗೆ ನೀನಾಸಮ್ ಬಗೆಗೆ ಪ್ರೀತಿಯನ್ನೋ ಇಲ್ಲಾ ಅದರೊಟ್ಟಿಗೆ ತಾತ್ವಿಕ ಭಿನ್ನಾಭಿಪ್ರಾಯವನ್ನೋ ಇಟ್ಟುಕೊಂಡಿರುತ್ತಾರೆ. ಇಲ್ಲಿನ ರಂಗಶಿಕ್ಷಣ ಕೇಂದ್ರದಲ್ಲಿ ಕಲಿತಿರುವವರ ಸಂಖ್ಯೆ ೪೦೦ ಮೀರಿದೆ ಎಂದ ಮೇಲೆ, ತಿರುಗಾಟಕ್ಕೆ ೨೪ ವರ್ಷ ಆಯ್ತು ಎಂದರೆ ನೀವೇ ಊಹಿಸಬಹುದು, ನೀನಾಸಮ್‌ನ ಬಳಗ ಎಷ್ಟು ವಿಸ್ತಾರವಾಗಿದೆ ಎಂದು. ಎಷ್ಟೋ ಜನ ನೀನಾಸಮ್‌ ಅನ್ನು ಕಟುವಾಗಿ, ಕೇವಲ ಟೀಕೆಗಾಗಿಯೇ ಟೀಕಿಸುವವರೂ ಇದ್ದಾರೆ. ಆದರೆ ಈ ನಾಟಕದ ನಾನಾ ತರದ ಸಂಬಂಧಗಳಲ್ಲಿ, ಅವು ತಂದೊಡ್ಡುವ ಸಂದರ್ಭಗಳ ಯಾವುದೋ ಸಂದಿನಲ್ಲಿ ಅವರು ಅದನ್ನು ಮೆಚ್ಚಿಕೊಳ್ಳುವುದೂ ಇದೆ. ಇರಲಿ ಬಿಡಿ, ಕೆಲವು ಸಲ ಮೆಚ್ಚುವುದೂ, ಚುಚ್ಚುವುದೂ ಒಂದೇ ಬಿಲ್ಲೆಯ ಎರಡು ಮುಖಗಳಿದ್ದಂತೆ ಇರುತ್ತವೆ.

ನಾನುನೀನು ಸಮ, ಮೀನಾಕ್ಷಮ್ಮ

ಹುಕ್ಕೇರಿ ಬಾಳಪ್ಪನವರು ಹಿಂದೆ ನೀನಾಸಮ್‌ನಲ್ಲಿ ಹಾಡಲೆಂದು ಬಂದಿದ್ದಾಗ ‘ನೀನಾಸಮ್ ಅಂದ್ರ ನೀ-ನಾ ಸಮ’ ಅಂತ ಹೇಳಿದ್ದರಂತೆ. ಮತ್ತೊಮ್ಮೆ ಕೆ.ವಿ. ಅಕ್ಷರ ನೀನಾಸಮ್ ತಿರುಗಾಟದ ಪ್ರದರ್ಶನ ಮಾಡಿಸಲು ಒಪ್ಪಿಕೊಂಡಿದ್ದ ಒಬ್ಬರಿಗೆ ಫೋನ್ ಮಾಡಿದ್ದರಂತೆ. ಅದು ಆ ವ್ಯಕ್ತಿಯ ಸ್ವಂತದ ಫೋನ್ ಆಗಿರಲಿಲ್ಲ. ಪಕ್ಕದ ಮನೆಯದ್ದಾಗಿತ್ತು. ಅದು ಗುಲ್ಬರ್ಗಾದ ಹತ್ತಿರದ ಆಳಂದದ ಬಳಿಯಿರುವ ಒಂದು ಹಳ್ಳಿ. ಆ ಕಡೆ ಫೋನ್ ಎತ್ತಿದಾಗ ಈ ಕಡೆ ಅಕ್ಷರ – ‘ನಾನು ನೀನಾಸಮ್‌ನಿಂದ ಮಾತಾಡ್ತಿದ್ದೀನಿ’ ಅಂದದಕ್ಕೆ ಆ ಕಡೆಯ ವ್ಯಕ್ತಿ ‘ಯಾರೂ ಮೀನಾಕ್ಷಮ್ಮಾನಾ?’ ಅಂದರಂತೆ.

ಹೀಗೆ ಗೊತ್ತಿರುವವರಿಗೆ ಒಂದು ರೀತಿ ಗೊತ್ತಿಲ್ಲದವರಿಗೆ ನಾನಾ ರೀತಿ ಅನ್ನಿಸುತ್ತಲೇ ನೀನಾಸಮ್, ತನ್ನ ವಿಸ್ತಾರವಾದ ಅವಿಭಕ್ತ ಸಂಸಾರದ ಒಳಗಡೆಗೆ ತನಗೆ ಬೇಕಿರುವ ಎಲ್ಲರನ್ನೂ-ಎಲ್ಲವನ್ನೂ ಸೇರಿಸಿಕೊಂಡುಬಿಡುತ್ತದೆ. ಈ ವಿಸ್ತಾರದೊಳಗಡೆ ಎಷ್ಟೊಂದು ಮನಸ್ಸುಗಳು ಪ್ರೀತಿಯಿಂದ ಕೆಲಸ ಮಾಡಿವೆ, ಮಾಡುತ್ತಿವೆ, ಅವುಗಳಲ್ಲಿ ಜಗಳಮಾಡಿದವೆಷ್ಟೋ, ಕೋಪಿಸಿಕೊಂಡದವೆಷ್ಟೋ, ಮುನಿಸಿಕೊಂಡವಿನ್ನೆಷ್ಟೋ… ಇವೆಲ್ಲ ಕ್ರಮೇಣ ಕಥೆಯಾಗಿ ನೆನಪಾಗಿ ಆಗಾಗ ನಮ್ಮಂಥವರ ಬಾಯಿಂದ ಬಾಯಿಗೆ ಹರಿಯುತ್ತಾ ಅಲ್ಲಿ ಬೆಳೆಯುತ್ತಾ ಹೊಸ ಹೊಸ ರೂಪವವನ್ನು ಪಡೆದುಕೊಳ್ಳುತ್ತವೆ.

ಬೆಂಗಳೂರಿನ ಗೋಕುಲದಲ್ಲಿ

ನಾನು ತಿರುಗಾಟದ ನಾಟಕವನ್ನು ಮೊದಲಬಾರಿಗೆ ನೋಡಿದ್ದು ಬೆಂಗಳೂರಿನ ಸುಚಿತ್ರ ಫಿಲ್ಮಂ ಸೊಸೈಟಿಯಲ್ಲಿ, ಅಂದು ‘ಗೋಕುಲ ನಿರ್ಗಮನ’ ನಾಟಕ. ಆಗ ಇಕ್ಬಾಲ್ ಅಹಮದ್ ನಿರ್ದೇಶನದ ಮಹಾಚೈತ್ರ ನಾಟಕದಲ್ಲಿ ನಾನು ಮತ್ತು ನನ್ನ ಚಿತ್ರಕಲಾ ಪರಿಷತ್ತಿನ ಸ್ನೇಹಿತರು ಭಾಗವಹಿಸಿದ್ದೆವು. ಆ ವರ್ಷದ ತಿರುಗಾಟ ನಾಟಕದಲ್ಲಿ ಕಾರಂತರ ಗೊಕುಲ ನಿರ್ಗಮನ ನಾಟಕವಿದೆಯಂತಲೂ ಅದನ್ನು ಎಲ್ಲರೂ ತಪ್ಪದೇ ನೋಡಬೇಕೆಂದು ಇಕ್ಬಾಲ್ ಹೇಳಿದ್ದರು. ನೀನಾಸಮ್ ಬಗ್ಗೆ ಆಗಲೇ ಅನೇಕ ಕಥೆಗಳನ್ನು (ಕಟ್ಟಿ) ನಮಗೆ ರಂಗಾಯಣದಲ್ಲಿದ್ದ ಭೂಷಣ್‌ಭಟ್ಟರು ಹೇಳಿಹೇಳಿ, ನಾವು ಕೇಳಿಕೇಳಿ ಆಗಿತ್ತು. ಹಾಗಾಗಿ ನೀನಾಸಮ್ ನಾಟಕ ಎಂದರೆ ಹೇಗಿರುತ್ತೆ ನೋಡೇಬಿಡೋಣ ಎಂದು ಸುಚಿತ್ರಾ ಕಡೆಗೆ ಸೈಕಲ್ ಹತ್ತಿ ಹೋದೆವು.

ಅಲ್ಲಿಗೆ ಹೋದರೆ ಜಡಿಮಳೆಯ ಕಾರಣದಿಂದಾಗಿ, ಸುಚಿತ್ರಾದ ಹೊರಗಿರುವ ಫೀರ್ ರಂಗಮಂದಿರದಲ್ಲಿ ನಡೆಯಬೇಕಿದ್ದ ನಾಟಕವನ್ನು ಚಿಕ್ಕದಾದ ಒಳಾಂಗಣಕ್ಕೆ ವರ್ಗಾಯಿಸಿದ್ದರು. ಜನವೋ ಜನ. ಸಿಕ್ಕಾಪಟ್ಟೆ. ನಿಂತು ನೋಡಲೂ ಅವಕಾಶವಿರಲಿಲ್ಲ. ಆ ನೂಕು ನುಗ್ಗುಲಲ್ಲಿ ಟಿಕೆಟ್ ತೆಗೆದುಕೊಂಡಿದ್ದೀರಾ ಅಂತ ನಮ್ಮನ್ನು ಕೇಳುವವರು ಯಾರೂ ಇರಲಿಲ್ಲ. ರಂಗಮಂದಿರದ ಎಲ್ಲ ಬಾಗಿಲುಗಳು ನಮಗಾಗಿಯೇ ಎನ್ನುವಂತೆ ತೆರೆದಿತ್ತು. ಆದರೆ ‘ನಿಮಗೆ ಇಲ್ಲಿ ಜಾಗವಿಲ್ಲ’ ಎನ್ನುವಂತೆ ಪ್ರೇಕ್ಷಕರು ಆ ಬಾಗಿಲು-ಕಿಟಕಿಗಳನ್ನೂ ಆಕ್ರಮಿಸಿಕೊಂಡು ದೊಂಬರಾಟ ನೋಡುವಂತೆ ನೋಡುತ್ತ ನಿಂತಿದ್ದರು. ಅಲ್ಲಿ ಅವರ ಮುಂದೆ ನಡೆಯುತ್ತಿರುವುದು ಅದೇನೆಂದು ತಿಳಿದುಕೊಳ್ಳಲು ಹೆಣಗಾಡುತ್ತಾ ನಾವೂ ಹಿಂದಿನಿಂದ ಎಗರೆಗರುತ್ತ ನೋಡುತ್ತಿದ್ದೆವು.

ಅಂತೂ ಇಂತು ನಿಂತೇ ನೋಡಿದೆವು. ಹೆಚ್ಚಾಗಿ ಕೇಳಿಸಿಕೊಂಡೆವು ಎನ್ನಬೇಕು. ಅದೊಂದು ಕನಸೇನೋ ಎನ್ನುವಂತೆ ಕಾಣುತ್ತಿದ್ದ ಲೋಕವಾಗಿತ್ತು ಅದು. ಆ ಬೆಳದಿಂಗಳಂತೆ ಭಾಸವಾಗುತ್ತಿದ್ದ ಬೆಳಕು, ಪುಂಗಿಯ ನಾದದಂತೆ, ಮೋಡಿ ಮಾಡುವಂತಿದ್ದ ಸಂಗೀತ, ಆ ಚಿಕ್ಕ ಆವರಣದಲ್ಲಿ ತುಂಬಿಹೋಗಿದ್ದ ಊದುಬತ್ತಿಯ ಹೊಗೆ ಇವೆಲ್ಲ ಹುಚ್ಚು ಹಿಡಿಸುತ್ತಿದ್ದವು. ಸಾವಿನ ಮನೆಯ ನೆನಪು ನನಗಾದರೂ ಪರಿಸ್ಥಿತಿಯ ಗಂಭೀರತೆಯಿಂದಾಗಿ ಪಕ್ಕದವರೊಡನೆ ಹೇಳಿಕೊಳ್ಳುವಂತಿರಲಿಲ್ಲ. ಮೊಟ್ಟ ಮೊದಲ ಬಾರಿಗೆ ನಾನು ಒಂದು ವೃತ್ತಿನಿರತ ತಂಡವು ನಾಟಕ ಮಾಡುವುದನ್ನು ಕಂಡೆ. ಮಾರುಹೋದದ್ದೂ ನಿಜ. ನನಗೆ ಪರಿಚಯವಿದ್ದ ಸುನಂದ ಅದರಲ್ಲಿ ರಾಧೆಯ ಪಾತ್ರ ಮಾಡುತ್ತಿದ್ದದ್ದು ನನಗೆ ಮತ್ತಷ್ಟು ಆಶ್ಚರ್ಯ, ಆನಂದವನ್ನುಂಟುಮಾಡಿತ್ತು.

ಅಂತಹ ಸನ್ನಿವೇಶದಲ್ಲೇ ನಿರ್ದೇಶಕ ಸುರೇಶ್ ಆನಗಳ್ಳಿಯವರು ತಮ್ಮ ಕಳೆದುಹೋದ ಹೆಲ್ಮೆಟ್‌ಗಾಗಿ ಹುಡುಕುತ್ತಿದ್ದರು. ಆ ನೂಕುನುಗ್ಗಲಲ್ಲಿ ಅವರ ಹೆಲ್ಮೆಟ್ ಕಳೆದುಹೋಗಿತ್ತು. ಹಾಗೆಯೇ ಯಾರ್‍ಯಾರು ಏನೇನನ್ನು ಕಳೆದುಕೊಂಡು ಹುಡುಕುತ್ತಿದ್ದರೋ ನನಗೆ ಗೊತ್ತಾಗಲಿಲ್ಲ. ಆದರೆ ಬಹಳಷ್ಟು ಮಂದಿ ತಮ್ಮ ಮನಸ್ಸನ್ನು ನಾಟಕದೊಳಗೆ ಕಳೆದುಕೊಂಡು ಅದನ್ನು ಹುಡುಕುತ್ತಾ ಕುಳಿತ್ತಿದ್ದದ್ದು ನನಗೆ ಗೊತ್ತಾಯಿತು.

ಇದೇ ಗೋಕುಲ ನಿರ್ಗಮನ ನಾಟಕದ ಧಾರವಾಡದ ಪ್ರದರ್ಶನಕ್ಕೆ ಬಂದಿದ್ದ ಕೀರ್ತಿನಾಥ ಕುರ್ತಕೋಟಿಯವರು ಪ್ರದರ್ಶನ ನಂತರ ಪ್ರಸಾದನ ಕೋಣೆಗೆ ಬಂದು ಸುಧಾಮನ ಪಾತ್ರ ಮಾಡಿದ್ದ ಚನ್ನಪ್ಪಯ್ಯನನ್ನು ಕೃಷ್ಣನ ಪಾತ್ರಧಾರಿ ಎಂದು ತಿಳಿದುಕೊಂಡು ಅಳುತ್ತ ತಬ್ಬಿಕೊಂಡಿದ್ದರಂತೆ.

ಗೋಕುಲ ನಿರ್ಗಮನದ ಬೆಂಗಳೂರಿನ ಎಚ್.ಎನ್. ಕಲಾಕ್ಷೇತ್ರದ ಪ್ರದರ್ಶನಕ್ಕೆ ಪು.ತಿ.ನ. ಅವರೂ ಬಂದಿದ್ದರಂತೆ. ಕಣ್ಣು ಮಸುಕಾಗಿ ಕಾಣುತ್ತಿದ್ದ ಅವರು ಡಾ. ಎಚ್.ಎನ್. ಅವರೊಟ್ಟಿಗೆ ಕುಳಿತರು. ಮೂರನೇ ಘಂಟೆ ಮೊಳಗಿ ಕತ್ತಲಾಗಿ ಆಆಆ ಎಂದು ಆಲಾಪ ಶುರುವಾಯ್ತು. ಮಧ್ಯಂತರದ ವೇಳೆಗೆ ನೋಡಿದರೆ, ಪು.ತಿ.ನ ವೇದಿಕೆಯ ಕಡೆಯಿಂದ ಮುಖ ತಿರುಗಿಸಿ, ಪಕ್ಕದಲ್ಲಿರಿಸಿದ್ದ ದೊಡ್ಡ ಸ್ಪೀಕರ್‌ನ ಕಡೆಗೆ ಮುಖ ಮಾಡಿ ಕುಳಿತುಕೊಂಡಿದ್ದರಂತೆ. ಅವರಿಗೆ ಕಣ್ಣು ಅಷ್ಟು ಸರಿಯಾಗಿ ಕಾಣುವುದಿಲ್ಲ ಎಂಬುದು ಗೊತ್ತಿಲ್ಲದ ಕೆಲವರು ಅವರಿಗೆ ನಾಟಕ ಇಷ್ಟವಾಗಲಿಲ್ಲ ಅಂದುಕೊಂಡಿದ್ದೂ ಹೌದು.

ತಿರುಗಾಡುವ ಬಯಕೆ

ನಾನು ನನ್ನ ಚಿತ್ರಕಲಾ ಪದವಿ ಮುಗಿಸಿದ ನಂತರ ಅನೇಕ ದ್ವಂಧ್ವಗಳ ನಡುವೆ ನೀನಾಸಮ್ ರಂಗಶಿಕ್ಷಣ ಕೇಂದ್ರವನ್ನು ಸೇರಿಯಾಗಿತ್ತು. ನಾನು ಅಲ್ಲಿ ವಿಧ್ಯಾರ್ಥಿಯಾಗಿದ್ದಾಗ ತಿರುಗಾಟದಲ್ಲಿ ಬೇಂದ್ರೆಯವರ ಹೊಸ ಸಂಸಾರ, ಯೂರಿಪಿಡೀಸರ ಮೀಡಿಯಾ ಮತ್ತು ಡಿ.ಎಲ್. ರಾಯರ ಷಹಜಹಾನ್ ನಾಟಕಗಳ ತಯಾರಿ ನಡೆಯುತ್ತಿತ್ತು. ಭಾನುವಾರ ಮತ್ತು ಇತರ ಬಿಡುವಿನ ವೇಳೆಗಳಲ್ಲಿ ನಾವು ವಿಧ್ಯಾರ್ಥಿಗಳು ಕದ್ದು ರಿಹರ್ಸಲ್ ನೋಡಲು ಹೋಗುತ್ತಿದ್ದೆವು. ರಿಹರ್ಸಲ್ ಜಾಗಕ್ಕೆ ಹೊರಗಿನವರು ಹೋಗಬಾರದೆಂಬುದು ನಮ್ಮ ನಡುವೆ ಪ್ರಚಲಿತವಿದ್ದ ಮೂಢ ನಂಬಿಕೆಯಾಗಿತ್ತು. ಆದರೂ ಶಿವರಾಮ ಕಾರಂತ ರಂಗಮಂದಿರದ ಲೇಟ್ ಕಮ್ಮರ್ಸ್ ರೂಮಿನಲ್ಲಿ (ಅದು ಒಂದು ಥರದ ಗಾಜಿನಮನೆ) ನಿಶಬ್ಧವಾಗಿ, ಕದ್ದು ಕುಳಿತು ರಿಹರ್ಸಲ್‌ ಅನ್ನು ಗಮನಿಸುತ್ತಿದ್ದೆವು. ಆಗೆಲ್ಲ ನಮಗೂ ಸಹಜವಾಗಿಯೇ ತಿರುಗಾಟದಲ್ಲಿ ತಿರುಗಾಡುವ ಬಯಕೆಯಾಗುತ್ತಿತ್ತು. ತಾಲೀಮಿನಲ್ಲಿ ನಟ-ನಟಿಯರು ತೋರುವ ವೃತ್ತಿಪರತೆ ನಮ್ಮನ್ನು ಭಾವ ಪರವಶರನ್ನಾಗಿ ಮಾಡಿ ಕನಸು ಕಟ್ಟಲು ಪ್ರೇರೇಪಿಸುತ್ತಿದ್ದವು.

ಹಾಡುಗಾರ ಬಿ.ವಿ.ಕಾರಂತ

ಆಗ ಮೀಡಿಯಾ ನಾಟಕದ ತಾಲೀಮಿನಲ್ಲಿ ಕಾರಂತರು ‘ಕೇಳಿದೆಯಾ… ಕೇಳಿದೆಯಾ… ಕರುಳಿರಿಯುವ ಈ ಹೆಣ್ಣಿನ ಕಥೆಯಾ…’ ಹಾಡನ್ನು ಹೇಳಿಕೊಡುತ್ತಿದ್ದರು. ಆ ಕದ್ದು ಕಲಿತ ಚೂರುಪಾರು ಹಾಡನ್ನು ನಾವು ಸ್ನಾನ ಮಾಡುವಾಗ, ಊಟ ಮುಂತಾದ ದಿನಚರಿಯ ಸಮಯಗಳಲ್ಲಿ ನಮಗೆ ತೋಚಿದಂತೆ, ಕೇಳುವವರ ಕರುಳಿರಿಯುವಂತೆ ಹಾಡಿಕೊಳ್ಳುತ್ತಿದ್ದೆವು. ಹಾಗೆಯೇ ಹೊಸ ಸಂಸಾರದ ‘ಕುಣಿಯೋಣು ಬಾರಾ ಕುಣಿಯೋಣು ಬಾ’ ಮತ್ತು ‘ಒಂದೇ ಒಂದೇ ಒಂದೇ ಕರ್ನಾಟಕವೊಂದೇ,’ ಎಂಬ ಹಾಡುಗಳೂ ನಮ್ಮ ಬಾಯಿಗೆ ಸಿಕ್ಕಿ ನಲುಗುತ್ತಿದ್ದವು.

ರಂಗಶಿಕ್ಷಣ ಕೇಂದ್ರದಲ್ಲಿ ಮೊದಮೊದಲಿಗೆ ಪ್ರತಿದಿನವೂ ದಿನಚರಿಯು ಕೋಲಾಟ ಆಡುವುದರೊಂದಿಗೆ ಶುರುವಾಗುತಿತ್ತು. ಹೊಸ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿಗಳು ಅಂದರೆ ತಿರುಗಾಟದ ನಟರೇ ಆಟ ಕಲಿಸುವ ಗುರುಗಳು. ಕ್ರಮೇಣ ನಾವು ಕೋಲಾಟ ಕಲಿತು, ನಮ್ಮ ರೆಕ್ಕೆ ಪುಕ್ಕ ಬಲಿತ ಮೇಲೆ, ನಾವು ‘ಇವರೇನು ನಮಗೆ ಹೇಳಿಕೊಡುವುದು… ಮಹಾ…’ ಎಂದು ಮನಸ್ಸಿನಲ್ಲಿ ಎಣಿಸಲು ಶುರು ಮಾಡುವುದರೊಳಗೇ, ತಿರುಗಾಟದವರು ಕೋಲಾಡಲು ಬರುವುದನ್ನು ನಿಲ್ಲಿಸಿದರು. ‘ತಿರುಗಾಟದವರು ಕೋಲಾಟ ಕೆಡಿಸುತ್ತಾರೆ, ನಮ್ಮ ಕೈಯಲ್ಲಿ ತಪ್ಪು ಮಾಡಿಸಿ ಜಂಬೆಯವರ (ಚಿದಂಬರರಾವ್ ಜಂಬೆಯವರು ಆಗಿನ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲರು) ಕೈಯಲ್ಲಿ ಬೈಯಿಸುತ್ತಾರೆ’ ಎಂಬೆಲ್ಲಾ ಸುದ್ದಿಗಳು ನನ್ನ ಕಿವಿಗಳಿಗೆ ಬೀಳುತ್ತಿತ್ತಾದರೂ ನನಗೆ ನೇರವಾಗಿ ಹಾಗನಿಸಿರಲಿಲ್ಲ.

ಕೆಲವು ದಿನಗಳ ನಂತರ, ನಾವು ಕೋಲಾಟವಾಡುವ ಹೊತ್ತಿನಲ್ಲಿ ಪಕ್ಕದ ಕೋಣೆಯಿಂದ ‘ಮೀಡಿಯಾ’ ಪಾತ್ರಧಾರಿ ಭವಾನಿಗೆ ಜಂಬೆಯವರು ಮಾತುಗಾರಿಕೆಯನ್ನು ಕಲಿಸುವುದು ನಮಗೆ ಕೇಳಿಸುತಿತ್ತು. ಅವರು ಗಟ್ಟಿಯಾಗಿ ಆಡುತ್ತಿದ್ದ ನಾಟಕದ ಮಾತುಗಾರಿಕೆಗಳು ಬೇಡವೆಂದರೂ ನಮ್ಮ ಕಿವಿಗೆ ಬಿದ್ದು, ಮೈ ನವಿರೇಳಿಸುತ್ತಿದ್ದವು. ಜಂಬೆಯವರು ಉಚ್ಛಾರಣೆಗಳನ್ನು ಬಿಡಿಬಿಡಿಸಿ ಕಲಿಸುತ್ತಿದ್ದರು. ಒಂದು ವೇಳೆ ತಿರುಗಾಟಕ್ಕೆ ಹೋದರೆ ನಾವೂ ಹಾಗೆ ದಕ್ಕಿದ ಪಾತ್ರವನ್ನು ಆವರಿಸಿ ಉದ್ದುದ್ದದ ಮಾತುಗಳನ್ನು ಆಡುತ್ತ ಗಿಟ್ಟಿಸಿಕೊಳ್ಳಬಹುದಾದ ಮನ್ನಣೆಯನ್ನು ಸವಿಯುತ್ತಿದ್ದೆವು. ಹಾಗೆ ಮನಸ್ಸಿನಲ್ಲೇ ಮಂಡಿಗೆ ತಿನ್ನುವಾಗ ಈ ಪೂರ್ವಭಾವಿ ಶಿಕ್ಷಣ ಸಪ್ಪೆಯೆನಿಸುತ್ತಿತ್ತು. ನಾಟಕದಲ್ಲಿ ಪಾತ್ರ ಮಾಡುವುದೆಂದರೆ ಎಷ್ಟೊಂದು ತಯಾರಿಯ ಅಗತ್ಯವಿರುತ್ತದೆಯೆಂದು ಆಗಲೇ ಅರಿವಿಗೆ ಬರತೊಡಗಿದ್ದು.

ಆ ಬಾರಿಯ ತಿರುಗಾಟದ ನಾಟಕಗಳ, ಅದರಲ್ಲಿಯೂ ಮೀಡಿಯಾ ನಾಟಕದ ವಸ್ತ್ರವಿನ್ಯಾಸದ ಕೆಲಸಕ್ಕೆ ಸಹಾಯ ಮಾಡಲು ನನ್ನನ್ನು ಕರೆದಿದ್ದರು. ನಾನು ಚಿತ್ರಕಲಾ ಪದವೀಧರನಾಗಿದ್ದದ್ದು ಅದಕ್ಕೆ ಕಾರಣವಾದರೂ ನನಗೆ ಡಿಸೈನರ್ ಆದಂತೆ ಹಮ್ಮು. ಆಗೆಲ್ಲ ಮತ್ತೆ ಮತ್ತೆ ನಾನೂ ತಿರುಗಾಟದಲ್ಲಿ ತಿರುಗಾಡಬೇಕೆಂಬ ಆಸೆ ಗರಿ ಕೆದರುತ್ತಿತ್ತು.

ಟೆಂಪರರಿ ಗುರುಗಳು

ಮೂರು ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ಮಾಡುತ್ತಿದ್ದ ಆ ತಿರುಗಾಟದ ನಟ-ನಟಿಯರ ಬಗ್ಗೆ ವಿದ್ಯಾರ್ಥಿಗಳಾದ ನಮಗೆ ಪ್ರಾರಂಭದಲ್ಲಿ ವಿಶೇಷವಾದ ಕೌತುಕ-ವಿಸ್ಮಯಗಳು ಉಂಟಾಗುತ್ತಿದ್ದವು. ಎಷ್ಟೋ ಸಲ ನನಗೆ, ಅವರು ಗಂಧರ್ವರೋ-ಕಿನ್ನರರೋ ಅನ್ನಿಸುತ್ತಿದ್ದರು. ಅವರು ಮತ್ತು ನಾವು ಮೆಸ್ಸಿನಲ್ಲಿ ಊಟಕ್ಕೆ ಕುಳಿತುಕೊಳ್ಳುವುದೂ ದೂರ ದೂರವೇ ಆಗಿರುತ್ತಿದ್ದದ್ದರಿಂದ ಆ ಭಾವನೆಗಳು ಮತ್ತೂ ಮತ್ತೂ ಹೆಚ್ಚಾಗುತ್ತಿದ್ದವು. ಅವರ ನಾಟಕದ ಡೈಲಾಗುಗಳನ್ನೂ ಒಳಗೊಂಡ ಮಾತುಗಾರಿಕೆಗಳು, ಗಂಡು-ಹೆಣ್ಣುಗಳೆಂದು ಬೇಧವಿಲ್ಲವೆಂಬಂತೆ ತೋರುವಂತಿದ್ದ ಅವರ ನಡೆ-ನುಡಿಗಳು, ಆ ತರದ ಪರಿಸರಕ್ಕೆ ಹೊಸಬನಾದ ನನ್ನನ್ನು ದಂಗುಬಡಿಸುತ್ತಿದ್ದವು.

ಈಗ ಹಲವಾರು ವರ್ಷಗಳು ಕಳೆದ ಮೇಲೆ ಅನ್ನಿಸುತ್ತದೆ – ಅವರು ಬೇಕಂತಲೇ, ನಮಗೆ ವಿಚಿತ್ರ ಭಾವನೆಗಳನ್ನು ಉದ್ದೀಪಿಸಿ, ನಾವು ಅವರನ್ನು ಮೆಚ್ಚುಗೆಯಿಂದ ಗಮನಿಸುವಂತೆ ಮಾಡುತ್ತಿದ್ದರು ಅಂತ. ನಿಜವಾಗಲೂ ಆಗ ನಾವು ಅವರಷ್ಟು ಗಟ್ಟಿಯಾಗಿ ಮೆಸ್ಸಿನಲ್ಲಾಗಲೀ, ಹೊರಗಡೆಯಲ್ಲಾಗಲೀ ಮಾತನಾಡಲು ಹೆದರುತ್ತಿದ್ದೆವು. ಹುಡುಗಿಯರ ಜೊತೆ ಮಾತನಾಡಲಂತೂ ನಮ್ಮಲ್ಲಿ ತುಂಬಾ ಮಂದಿಗೆ ಹೆದರಿಕೆಯಿತ್ತು. ಮರಿಯಮ್ಮನಹಳ್ಳಿಯ ಹನುಮಕ್ಕ ಮಾತ್ರ ಹೆಚ್ಚು ಕಡಿಮೆ ಎಲ್ಲರನ್ನೂ ಎತ್ತರಿಸಿದ ದನಿಯಲ್ಲಿ ಒರಟಾದ ಬಳ್ಳಾರಿಯ ಕನ್ನಡದಲ್ಲಿ ಮಾತನಾಡಿಸುತ್ತಿದ್ದಳು. ಅವಳು ಜ್ಯೂನಿಯರ್‌ಗಳ ಹತ್ತಿರ ಬೇಕಾದಷ್ಟು ಮಾತಾಡುತ್ತಿದ್ದ ಏಕೈಕ ಹಿರಿಯ ನಟಿಯಾಗಿದ್ದಳು. ಅವಳು ಹಾಕುತ್ತಿದ್ದ ಎಲೆ-ಅಡಿಕೆ, ಪಾನ್‌ಪರಾಗ್ ಒರಟುತನ ಕೆಲವರಿಗೆ ಇಷ್ಟವಾಗುತ್ತಿರಲಿಲ್ಲವಾದರೂ ಅವಳು ಡೋಂಟ್‌ಕೇರ್ ಎಂಬಂತಿದ್ದಳು. ಅವಳು ಎಲ್ಲರೊಡನೆ ಯಾವ ಭಿಡೆಯಿಲ್ಲದೆ ಬೆರೆಯುತ್ತಿದ್ದದ್ದರಿಂದ ಮಿಕ್ಕ ಕೆಲವರು ತಾವೂ ಮಾತನಾಡುವ ಧೈರ್ಯವನ್ನು ತೋರುತ್ತಿದ್ದರು. ಪ್ರಾಯಶಃ ಅವಳು ಅಷ್ಟು ಧೈರ್ಯವಾಗಿದ್ದುದ್ದರಿಂದಲೇ ಯಾರೂ(ಆಡಿಕೊಳ್ಳುವವರು!) ದೂಸರಾ ಅವಳೆದುರು ಮಾತಾಡುತ್ತಿರಲಿಲ್ಲವೇನೋ.

ಕಾಲ ಕ್ರಮೇಣ ಕೆಲವು ತಿರುಗಾಟದ ನಟರು ನನ್ನ ಒಂದಿಬ್ಬರು ಸಹಪಾಠಿಗಳಿಗೆ ತುಂಬಾ ಹತ್ತಿರದ ಸಂಬಂಧಿಗಳೇನೋ ಎನ್ನುವಂತೆ ಹತ್ತಿರವಾದರು. ಅವರ ಆತ್ಮೀಯತೆಯನ್ನು ಕಂಡ ನಾವು- ಅವರು ಸಂಬಂಧಿಗಳೇನೋ ಎಂದು ಅರ್ಥೈಸುತ್ತಿದ್ದೆವು. ಹಾಗೆ ನೋಡಿದರೆ, ಅವರುಗಳು ಒಂದೇ ಊರು ಅಥವಾ ಜಿಲ್ಲೆಯವರಾಗಿರುತ್ತಿದ್ದರು ಅಷ್ಟೇ. ಆತ್ಮೀಯರಾಗಲು ಅಷ್ಟಾದರೂ ಕಾರಣ ಸಾಕಷ್ಟೇ. ಪರ ಊರಿನಲ್ಲಿ, ಅನ್ಯ ಪರಿಸ್ಥಿತಿಯಲ್ಲಿ ಇರುವಾಗ; ಒಂದೇ ಊರಿನವರು, ಒಂದೇ ಭಾಷೆಯವರು, ಒಂದೇ ಜಾತಿಯವರು, ಒಂದೇ ವೃತ್ತಿಯವರು, ಅಭಿರುಚಿಯವರು ಎನ್ನುವ ಭಾವನೆಗಳು ವಿಚಿತ್ರವಾದ ಶಕ್ತಿಯನ್ನು, ಕೆಲವೊಮ್ಮೆ ಸಹಜವಾದ ಆತ್ಮವಿಶ್ವಾಸವನ್ನು ಹುಟ್ಟಿಸುತ್ತವೆ. ಈ ಕಾರಣಗಳಿಂದಲೇ ಕೆಲವು ವ್ಯಕ್ತಿಗಳ ಸಂಬಂಧವು ನಿಕಟವಾಗುತ್ತದೆ. ಆದರೆ ಬೆಂಗಳೂರಿನಿಂದ ಬಂದ ನನಗೆ ತಿರುಗಾಟದಲ್ಲಿ ಬೆಂಗಳೂರಿನವರೂ ಇದ್ದರು ಎನ್ನುವುದು ಗೊತ್ತಾಗಿದ್ದು ತಿರುಗಾಟದವರು ತಿರುಗಾಡಲು ಹೊರಟುಹೋದ ಮೇಲೆ. ಆದರೆ ಆಮೇಲೆ ಯೋಚಿಸಿದರೆ, ಆ ಬೆಂಗಳೂರಿನ ಮಿತ್ರರೂ, ನಾನೂ ನಿಜವಾಗಿ ಮೂಲತಃ ಬೆಂಗಳೂರಿನವರೇ ಆಗಿಲ್ಲ.

ಗಾರ್ಕಿಯ ಲೋಯರ್ ಡೆಪ್ತ್ಸ್ ನಾಟಕದ ದೃಶ್ಯ

ಕೆಲವು ರಾತ್ರಿಗಳಲ್ಲಿ ಈ ಹಿರಿಯ ‘ಸಂಬಂಧಿ’ ಸ್ನೇಹಿತರು ವಿದ್ಯಾರ್ಥಿಗಳಾದ ನಮ್ಮ ರೂಮಿಗೆ ಬರುತ್ತಿದ್ದರು. ನಾವು ಆಗಷ್ಟೇ ಕಲಿಯಲು ಶುರು ಮಾಡಿದ್ದ ಮಾಕ್ಸಿಮ್ ಗಾರ್ಕಿಯ ಲೋಯರ್ ಡೆಪ್ತ್ಸ್(ಕನ್ನಡದಲ್ಲಿ ಈ ಕೆಳಗಿನವರು) ನಾಟಕದ ಮಾತುಗಾರಿಕೆಯನ್ನು ಹೇಗೆ ಆಡಬೇಕೆಂದು ಆಯ್ದ ತಮ್ಮ ಕೆಲವೇ ಆತ್ಮೀಯರಿಗೆ ವಾಲಂಟರಿಯಾಗಿ ಕಲಿಸುವ ‘ಕಲಾ ಸೇವೆ’ ಮಾಡುತ್ತಿದ್ದರು. ಅಂತಹ ಸಮಯದಲ್ಲಿ ಇದರಲ್ಲಿ ಒಳಗೊಳ್ಳದ ನಮಗೆ ಭಾರೀ ತಳಮಳವಾಗುತ್ತಿತ್ತು. ನಮಗೆ ಗೊತ್ತಿಲ್ಲದ ಯಾವುದಾದರೂ ಅಸಮಾನ್ಯ ಅಭಿನಯ ತಂತ್ರವನ್ನು ಅವರು ಇವರಿಗೆ ಗೌಪ್ಯವಾಗಿ ಧಾರೆಯೆರೆದುಬಿಟ್ಟರೆ! ಆ ಪ್ರತಿಭೆ ನಮಗೆ ಇಲ್ಲವಾಗಿಬಿಡುತ್ತಲ್ಲ ಎಂದುಕೊಂಡು ನಾವೂ ಆ ಅನಿಯತಕಾಲಿಕ ತರಗತಿಗಳನ್ನು ನೇರವಾಗಿ ಇಲ್ಲ ಓರೆಯಾಗಿ ನೋಡಿ ಅದೇನೆಂದು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೆವು. ಕ್ರಮೇಣ ಮಾತು ತಿದ್ದುವ ಅವರ ಕೆಲಸ ಮಾತುಗಾರಿಕೆಗೆ ಹೊರಳಿ – ಅವರು ವಿದ್ಯಾರ್ಥಿಗಳಾಗಿದ್ದಾಗ ಹೇಗಿತ್ತು, ಈಗ ಏನಾಗಿದೆ ಎಂಬುದನ್ನು, ಬುದ್ಧಿ ಹೇಳುವಂತೆ ಹೇಳುತ್ತಿದ್ದರು. ಜಂಬೆಯವರು ಅವರ ಬ್ಯಾಚುಗಳಲ್ಲಿ ಭಾರೀ ಸ್ಟ್ರಿಟ್ ಆಗಿದ್ದರೆಂದೂ ಈಗ ಅಷ್ಟು ಸ್ಟ್ರಿಟ್ ಅಲ್ಲವೆಂದೂ, ‘ಪರವಾಗಿಲ್ಲ ನೀವೇ ಪುಣ್ಯವಂತರು’ ಎಂದೆಲ್ಲಾ ಹೇಳುತ್ತಿದ್ದರು. ಜಂಬೆಯವರು ಸ್ಟ್ರಿಟ್ ಆಗಿದ್ದರಿಂದಲೇ ತಾವು ಜಾಸ್ತಿ ಕಲಿತದ್ದು ಎನ್ನುವುದನ್ನು ಬಾಯಿಬಿಟ್ಟು ಹೇಳದಿದ್ದರೂ ಮಾತಿನಲ್ಲಿ ‘ಹಾಗೇ ಅಂದುಕೊಳ್ಳಿ’ ಎನ್ನುವ ಧೋರಣೆ ಇರುತ್ತಿತ್ತು.

ಅವರು ಹೇಳುವುದನ್ನೆಲ್ಲ ಕೇಳಿಸಿಕೊಂಡ ‘ಪುಣ್ಯವಂತರಾದ’ ನಾವು ‘ನಮ್ಮದೂ ಒಳ್ಳೆಯ ಬ್ಯಾಚೇ’ ಎಂದು ಒಳಗೊಳಗೇ ಅಂದುಕೊಳ್ಳುತ್ತ ನಮ್ಮ ರೂಮುಗಳಿಗೆ ವಾಪಸ್ಸಾಗುತ್ತಿದ್ದೆವು. ಮಲಗಿದ ಜಾಗದಲ್ಲೇ ನಮ್ಮದೂ ಒಂದು ಸರಳ ಸಭೆ ನಡೆಯುತ್ತಿತ್ತು. ನಾವು ತಿರುಗಾಟದವರಾದಮೇಲೆ, ನಮ್ಮ ನಂತರದ ಬ್ಯಾಚಿನವರಿಗೆ ಯಾವ ಸಂದೇಶವನ್ನು ಹೇಗೆ ಹೇಳಬೇಕೆಂದು ಆಗಲೇ ಮನಸ್ಸಿನಲ್ಲಿ ತಯಾರಿ ನಡೆಸುತ್ತಿದ್ದೆವು. ನಮ್ಮ ನಂತರದ ಆ ಬ್ಯಾಚು ಈಗಲೇ ಇಲ್ಲದ್ದಕ್ಕೆ ಮರುಗುತ್ತಿದ್ದೆವು. ಆಗ ಒಂದು ವರ್ಷದ ಈ ಕೋರ್ಸು, ಮೂರು ವರ್ಷಗಳಾಗಿದ್ದಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಐಡಿಯಾ ಕೂಡಾ ಬರುತ್ತಿತ್ತು. ಹೀಗೆ, ಮಾತುಕತೆಯಲ್ಲಿ ಮನೆ ಕಟ್ಟುತ್ತಾ ಭವಿಷ್ಯದ ಕನಸು ಕಾಣುತ್ತಿದ್ದೆವು.

ತಿರುಗಾಟದ ತಾಲೀಮು ಹೇಗೆ ನಡೆಯುತ್ತದೆ ಎಂದು ಕದ್ದು ನೋಡಿ ಬಲ್ಲ ನಮಗೆ, ಅಲ್ಲಿಗೆ ಹೋದರೆ ರಾತ್ರಿಯಲ್ಲಿ ನಮಗೆ ಗುರುಭೋದನೆ ಮಾಡಿ ಅಲ್ಲಿ ತಾಲೀಮಿನಲ್ಲಿ ನಿರ್ದೇಶಕರ ಹತ್ತಿರ ಬೈಗುಳ ತಿನ್ನುವ ನಮ್ಮ ತಾತ್ಕಾಲಿಕ ಗುರುಗಳ ಫಜೀತಿಯನ್ನು ಕಂಡು ಆಶ್ಚರ್ಯವಾಗುತ್ತಿತ್ತು. ಇಷ್ಟಲ್ಲದೇ, ತಿರುಗಾಟದ ನಾಟಕಗಳ ಬಗ್ಗೆ, ನಟ-ನಟಿಯರ ಬಗ್ಗೆ, ಅವರ ಪ್ರತಿಭೆಯ ಬಗ್ಗೆ ನಾನಾ ಕಥನಗಳು ನಮ್ಮ ನಡುವೆ ಹರಿದಾಡುತ್ತಿದ್ದವು. ಯಾರ್‍ಯಾರ ಅಭಿನಯ ಸಾಮರ್ಥ್ಯ ಎಂತಹುದು, ಯಾವ ಯಾವ ನಿರ್ದೇಶಕರು ಯಾವ ಯಾವ ರೀತಿಗಳಲ್ಲಿ ನಿರ್ದೇಶನ ಮಾಡುತ್ತಾರೆ ಎನ್ನುವ ಕಥೆಗಳು ಅದು ಹೇಗೋ ಸೃಷ್ಟಿಯಾಗಿ ಬಾಯಿಂದ ಬಾಯಿಗೆ ಹರಿದು, ಆ ಹರಿದ ಪ್ರತಿಯೊಂದು ಬಾಯಿಯಲ್ಲೂ ಕಲ್ಪನೆಗನುಸಾರವಾಗಿ ಬೇರೆ ಬೇರೆ ಆಕಾರ-ರೂಪಗಳನ್ನು ಪಡೆದು, ಅದು ನಮ್ಮಂತಹವರ ಕಿವಿಗಳಿಗೂ ಬಿದ್ದು, ಸ್ಫೋಟಗೊಂಡು, ನಮ್ಮ ಕಿವಿಗಳು ಊದಿಕೊಂಡು ನಮಗೆ ನಟನೆ-ನಿರ್ದೇಶನದ ಬಗ್ಗೆ ವಿಚಿತ್ರಾವರಿ ಕಲ್ಪನೆಗಳು ಮೂಡುತ್ತಿದ್ದವು. ತಿರುಗಾಟಕ್ಕೆ ಹೋದರೆ ನಾನು ಹಾಗಿರಬಾರದು, ಹೀಗಿರಬೇಕು ಎನ್ನುವ ಮಾದರಿಗಳು ಆಗ ನಮ್ಮಲ್ಲೇ ರೂಪುಗೊಳ್ಳುತ್ತಿದ್ದವು.

ಸಹ್ಯಾದ್ರಿಕಾಂಡ ನಾಟಕದ ದೃಶ್ಯ

ಚನ್ನಕೇಶವ ರಂಗಪುರಾಣ : ಮರಾಮರಾಮರಾಮರಾಮ

ಬಿ.ವಿ. ಕಾರಂತರು ಸಂಗೀತದಲ್ಲೇ ನಾಟಕದ ಸಮಗ್ರ ಸಾರವನ್ನು ಹಿಡಿಯುತ್ತಾರೆ ಎಂಬ ವಿಷಯ ನನಗೆ ನೇರವಾಗಿ ಅನುಭವಕ್ಕೆ ಬಂದಿರಲಿಲ್ಲ. ಆದರೆ ಗೋಕುಲ ನಿರ್ಗಮನದ ಹಲವಾರು ಹಾಡುಗಳು ನನಗೆ ಪರಿಚಿತವಾಗಿದ್ದವು. ಪ್ರಾಯಶಃ ಆಧುನಿಕ ಕನ್ನಡ ರಂಗಭೂಮಿಯ ಒಂದು ನಾಟಕದ ಹಾಡುಗಳು ಅಷ್ಟು ಜನ-ಮನದಲ್ಲಿ ಉಳಿದ ಉದಾಹರಣೆ ಇದೊಂದೇ ಎನ್ನಿಸುತ್ತದೆ. ಅಷ್ಟೇ ಏಕೆ ಕಾರಂತರಿಗೂ ಬಹಳ ಮನ್ನಣೆ ತಂದುಕೊಟ್ಟ ನಾಟಕ ಇದೇ. ಮುಂದೆ ಕಾರಂತರೊಡನೆ ನಾನು ಕೆಲಸ ಮಾಡುವಾಗ ಅವರೇ ನನಗೆ ‘ಅದು ಹೇಗಾಯ್ತೋ ಗೊತ್ತಿಲ್ಲ… ಮ್ಯಾಜಿಕ್… ಆಗಿಬಿಡ್ತು’ ಅಂದಿದ್ದರು.

ಕಾರಂತರ ಬಗ್ಗೆ ಮೊದಲೇ ನಾನು ಅಲ್ಪ ಸ್ವಲ್ಪ ತಿಳಿದುಕೊಂಡಿದ್ದೆ. ನಾನು ಕಲಿಯುತ್ತಿದ್ದ ಚಿತ್ರಕಲಾ ಪರಿಷತ್ತಿನಲ್ಲಿ ರಂಗಾಯಣವು ಮೊಕ್ಕಾಂ ಮಾಡಿದ್ದಾಗ ಅವರನ್ನು ನೋಡಿದ್ದೆ. ಅವರ ‘ಕಿಂದರಿಜೋಗಿ’ ನಾಟಕವನ್ನೂ ನೋಡಿದ್ದೆ. ಕುಸುಮಬಾಲೆಯ ಅವರ ಸಂಯೋಜನೆಯ ‘ವಾಲಾಡುವ ಸಂಗೀತವು’ ನನಗೆ ಬಾಯಿಪಾಠವಾಗಿತ್ತು. ಆಗ ಕುಸುಮಬಾಲೆ ನಾಟಕವನ್ನು ನಾನು ಹತ್ತು ಸಲ ನೋಡಿದ್ದೆ. ನೀನಾಸಮ್‌ಗೆ ಬಂದಮೇಲೆ ಕಾರಂತರ ಬಗೆಗಿನ ಐತಿಹ್ಯಗಳು ಹೆಚ್ಚು ಹೆಚ್ಚು ಪರಿಚಯವಾದವು.

ಗೋಕುಲ ನಿರ್ಗಮನಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದ ಆ ದಿನಗಳಲ್ಲಿ ಕಾರಂತರು ಬೆಳಿಗ್ಗೆಯೇ ಎದ್ದು ಹಾರ್ಮೋನಿಯಮ್ ಹಿಡಿದು ಕಾಡಿನೊಳಗೆ ಹೋಗಿಬಿಡುತ್ತಿದ್ದರಂತೆ. ಅಲ್ಲಿ ಹಕ್ಕಿ-ಪಕ್ಷಿಗಳ ದನಿಯನ್ನು ಕೇಳಿಸಿಕೊಳ್ಳುತ್ತಾ, ಅದರಿಂದ ಸ್ಪೂರ್ತಿಯನ್ನು ಪಡೆಯುತ್ತಿದ್ದರಂತೆ. ‘ಆ ಮರ… ಈ ಮರ… ಎಂದು ಮರ ಮರಗಳನ್ನು ನೋಡನೋಡುತ್ತಾ ‘ಮರಾಮರಾಮರಾಮರಾಮ…’ ಎಂದು ಒಂದು ರಾಗವನ್ನೂ ಮಾಡಿ, ಗೋಕುಲದೊಳಗೆ ಹಾಕಿದ್ದಾರಂತೆ. ಇದನ್ನೆಲ್ಲಾ ಕೇಳಿದ ನನಗೆ ಜೀವನದಲ್ಲಿ ಒಮ್ಮೆಯಾದರೂ ನಾನು ಕಾರಂತರ ಜೊತೆ ಕೆಲಸ ಮಾಡಬೇಕು ಅನ್ನಿಸುತ್ತಿತ್ತು.

ಕಾರಂತರು ತುಂಬಾ ಮುಗ್ದರು, ಮಗುವಿನಂತೆ – ಎನ್ನುವುದನ್ನು, ಅವರನ್ನು ಬಲ್ಲ ಹೆಚ್ಚಿನ ಎಲ್ಲರೂ ನಂಬುತ್ತಾರೆ. ಅವರ ಮುಗ್ಧತೆಗೆ ಹೆಸರಾದ ಒಂದೆರಡು ಐತಿಹ್ಯಗಳು ತುಂಬಾ ಸ್ವಾರಸ್ಯಕರವಾಗಿವೆ. ಅವುಗಳನ್ನು ಐತಿಹ್ಯಗಳೆಂದೇ ಕರೆಯುವುದೊಳಿತು. ಏಕೆಂದರೆ ಒಂದೇ ಘಟನೆಯನ್ನು ಬೇರೆಬೇರೆ ಜನರು ಬೇರೆಬೇರೆ ರೀತಿ ಹೇಳಿದ್ದನ್ನು ನಾನು ಕೇಳಿದ್ದೇನೆ. ಅವರ ಸಂಗೀತ ಪ್ರೀತಿಯ ಬಗ್ಗೆ ಪ್ರಚಲಿತವಿರುವ ಒಂದು ಐತಿಹ್ಯ ಮಜವಾಗಿದೆ.

ಸಂಗೀತ ಪ್ರಿಯ ಕೇಶ

ಕಾರಂತರು ಮೈಸೂರಿನಲ್ಲಿ ರಂಗಾಯಣದ ನಿರ್ದೇಶಕರಾಗಿದ್ದಾಗ ತಿಂಗಳಿಗೊಮ್ಮೆ ತಲೆ ಕೂದಲು ಕಟ್ ಮಾಡಿಸಲು ಹೋಗುತ್ತಿದ್ದರಂತೆ. ಅದೂ ಯಾವಾಗಲೂ ಒಂದೇ ಅಂಗಡಿಗೆ. ಕಾರಂತರನ್ನು ನೋಡಿದರೆ ಒಂದು ರೀತಿ ಅನ್ಯಮನಸ್ಕರಂತೆ, ಯಾವುದೋ ಆಲೋಚನೆಯಲ್ಲಿರುವಂತೆ, ಹೆಚ್ಚಿನ ಸಲ ಮೌನವಾಗಿದ್ದುಕೊಂಡು, ಚಿಂತಕರಂತೆ ಕಾಣುತ್ತಿದ್ದದ್ದರಿಂದ ಅವರನ್ನು ಸುಮ್ಮನೆ ಮಾತಾಡಿಸಲು ಅಪರಿಚಿತರಿಗೆ ಮಾತ್ರವಲ್ಲದೇ, ಅವರನ್ನು ಅಲ್ಪ ಸ್ವಲ್ಪ ಬಲ್ಲವರಿಗೂ ಕಷ್ಟ. ಅವರು ಚಿಂತನಾಮಗ್ನರಾದರೆಂದರೆ, ಅವರಿಗೆ ಪಕ್ಕದಲ್ಲಿ ಏನು ನಡೆದರೂ ಗೊತ್ತಾಗುತ್ತಿರಲಿಲ್ಲ.

ಇಂತಹ ಕಾರಂತರು ಆ ಹೇರ್ ಸಲೂನಿಗೆ ಹೋಗಿ ಕುಳಿತಾಗ ಆ ಹೇರ್‌ಕಟ್ ಮಾಡುವವನು ಇವರ ಅನ್ಯಮನಸ್ಕತೆಯನ್ನು ಧಿಕ್ಕರಿಸಿ ‘ನೀವು ಕಾರಂತರಲ್ಲವಾ…’ ಅಂದನಂತೆ. ಕಾರಂತರು ಆಶ್ಚರ್ಯಚಕಿತರಾಗಿ ‘ಹೌದು… ಹಾಂ’ ಅಂದರಂತೆ… ಅದಕ್ಕವನು ‘ಅದೇ ಸಂಗೀತದವರು…! ಅದೇ ಕಾರಂತರಲ್ಲವಾ?’ ಅಂದನಂತೆ. ಕಾರಂತರು ‘ಹೌದೌದು… ಸಂಗೀತ… ಏನು… ಯಾಕೆ?’ ಎಂದರು. ಅವನು ‘ಏನಿಲ್ಲ’ ಎಂದು ಹೇಳಿ ಮೌನ ಧರಿಸಿ, ಹೇರ್ ಕಟ್ ಮಾಡಿ ಮುಗಿಸಿದ. ಅವನು ಕಟ್ ಮಾಡುವಾಗ ಕಾರಂತರು ಅವನು ಹೀಗೆ ಯಾಕೆ ಕೇಳಿರಬಹುದು ಎಂದು ಲೆಕ್ಕಾಚಾರ ಮಾಡತೊಡಗಿದರು. ಆ ಹಜಾಮನ ಕತ್ತರಿಯ ಬಾಚಣಿಗೆಯ ಲಯಗಾರಿಕೆಗೆ ತಲೆ ಕೊಟ್ಟ ಕಾರಂತರು ಕೊನೆಯಲ್ಲಿ ಇದನ್ನು ಕೇಳಬೇಕೆಂದುಕೊಂಡರೂ ಮರೆತರು.

ಮುಂದಿನ ತಿಂಗಳೂ ಒಂದು ಚೂರೂ ತಪ್ಪದೇ ಇದೇ ರೀತಿ ನಡೆಯಿತು. ಕೇಳಬೇಕೆಂದುಕೊಂಡರೂ ಕಾರಂತರು ಮರೆತರು.

ಮೂರು ತಿಂಗಳು ಹೀಗೇ ಆದನಂತರ ನಾಲ್ಕನೆಯ ತಿಂಗಳು ಹೇರ್‌ಕಟ್‌ಗೆ ಹೋಗುವ ಮುಂಚೆಯೇ ಕಾರಂತರು ನಿರ್ಧರಿಸಿಬಿಟ್ಟರು. ಈ ಸಲ ಅವನು ಉತ್ತರ ಹೇಳುವವರೆಗೆ ತಮ್ಮ ಕೂದಲು ಕೊಂಕಲೂ ಬಿಡಬಾರದು ಎಂದು.

ಸಲೂನ್‌ಗೆ ಹೋಗಿ ಕುಳ್ಳಿರುತ್ತಿದ್ದಂತೆಯೇ ಅವರಿಗೆ ಬಿಳಿಯ ಹೊದ್ದಿಕೆ ತೊಡಿಸಿ, ಕತ್ತರಿಯನ್ನು ಝಳಪಿಸುತ್ತಾ ಆ ಹಜಾಮರವನು ಕೇಳಿದ ‘ನೀವು ಅದೇ, ಸಂಗೀತ… ಕಾರಂತರಲ್ಲವೇ…?’ ಅಂತ. ಕಾರಂತರು ‘ಹೌದೌದು… ಏನೀಗ… ಅದಕ್ಕೆ ನಾನೇನು ಮಾಡ್ಬೇಕು?’ ಅಂದರು. ಅವನು ‘ಏನಿಲ್ಲ’ ಎಂದು ಕೆಲಸ ಶುರುಮಾಡಿದ. ಕಾರಂತರು ತಲೆಯಾಡಿಸುತ್ತ ‘ನಿಲ್ಲಿ… ನೀವು ನನಗೆ ಯಾವಾಗಲೂ ಹೀಗೇ ಕೇಳ್ತೀರಲ್ಲ ಯಾಕೆ? ಹೇಳದಿದ್ದರೆ ನಾನು ನಿಮ್ಮ ಹತ್ರ ಇನ್ನು ಬರೊಲ್ಲ…’ ಎಂದರಂತೆ. ಹಜಾಮರವನು ಕೊಂಚ ಅಳುಕುತ್ತಲೇ ‘ಹಾಗೇನಿಲ್ಲ ಸಾರ್, ನಿಮ್ಮ ಕೂದಲು ಯಾವಾಗಲೂ ಮಲಗಿಕೊಂಡೇ ಇರುತ್ತೆ. ‘ಸಂಗೀತ’ ಎಂದ ತಕ್ಷಣ ನಿಮಿರಿ ನಿಲ್ಲುತ್ತೆ, ಆಗ ನನಗೆ ಕಟ್ ಮಾಡಲು ಸುಲಭ ಆಗುತ್ತೆ…’ ಎಂದನಂತೆ. ತಮ್ಮ ಕೂದಲಿನ ಸಂಗೀತ ಪ್ರಜ್ಞೆಗೆ ಆಶ್ಚರ್ಯವಾಗಿ ಕಾರಂತರು ಅವನೆದುರು ತಲೆದೂಗಿದರು. ಮುಂದೆ ತಮ್ಮ ಸಂಗೀತ ಪ್ರಿಯ ಕೂದಲನ್ನು ಬಲಿಕೊಡಬಾರದೆಂದು ಒಂದೆರಡು ತಿಂಗಳು ಕಟಿಂಗೇ ಮಾಡಿಸಿರಲಿಲ್ಲವಂತೆ. ಅವರ ಗಡ್ಡ ಮತ್ತು ತಲೆ ಕೂದಲ ಅವತಾರವನ್ನು ನೋಡಲಾಗದ ಅವರ ಶಿಷ್ಯರು ಬಲವಂತವಾಗಿ ಎಳೆದೋಯ್ದು ಕಟಿಂಗ್ ಮಾಡಿಸಿದರಂತೆ!ಬಿ ವಿ ಕಾರಂತ

ಕಾರಂತರ ಫ್ರೆಂಡುಗಳು ಮತ್ತು ಹೊಸರುಚಿ

ಕಾರಂತರು ನೀನಾಸಮ್‌ನಲ್ಲಿ ನಾಟಕವಾಡಿಸುವ ಹೊತ್ತಿನಲ್ಲಿ ಮೆಸ್ಸಿನಲ್ಲಿ ಊಟ ಮಾಡುತ್ತಿರಲಿಲ್ಲ. ಅಂದರೆ, ನಾವೆಲ್ಲರು ಮೆಸ್‌ನಲ್ಲಿ ಊಟ ಮಾಡುವ ಹೊತ್ತಿಗೆ ಮೆಸ್ಸಿನ ವಿದ್ಯಾನೋ ಅಧವಾ ಶ್ರೀಧರನೊ ಕಾರಂತರ ರೂಮಿಗೇ ಅವರ ಊಟ ಕೊಂಡೊಯ್ಯುತ್ತಿದ್ದರು. ಆಗ ಒಮ್ಮೊಮ್ಮೆ ಕಾರಂತರು ‘ನನಗೆ ರಾತ್ರಿಗೆ ಒಂದೇ ಚಪಾತಿ ಸಾಕು’ ಅಂತಲೋ ಅಥವಾ ‘ಬರೀ ಮೊಸರನ್ನ ಸಾಕು’ ಅಂತಲೋ ತಮ್ಮ ಮೆನುವನ್ನು ನಿಸ್ಸಂಕೋಚವಾಗಿ ಹೇಳುತ್ತಿದ್ದರು.

ಸಾಮಾನ್ಯವಾಗಿ ನಮ್ಮ ಮೆಸ್ಸಿನ ಮೆನು ಯಾರೇ ಗಣ್ಯವ್ಯಕ್ತಿಗಳು ಬಂದರೂ ಒಂದೇ ಆಗಿರುತ್ತದೆ. ಯಾರಿಗೇ ಆಗಲಿ ಅನ್ನ-ಸಾಂಬಾರು-ತಿಳಿಸಾರು-ಮಧ್ಯಾಹ್ನ ಒಂದು ಪಲ್ಯ-ರಾತ್ರಿಗೆ ಮೊಸರು; ಇದು ತಲ-ತಲಾಂತರದಿಂದ ಕಟ್ಟುನಿಟ್ಟಾಗಿ ಮೆಸ್ಸಿನವರು ಪಾಲಿಸಿಕೊಂಡು ಬಂದಿರುವ ಸಾಮಾಜಿಕ ನ್ಯಾಯ. ಕಾರಂತರಂತಹ ಹಿರಿಯರಿಗೆ ಮಾತ್ರ ಈ ‘ಸಮಾಜವಾದ’ದ ಮೆನು ಸ್ವಲ್ಪ ಹಿಗ್ಗಿಕೊಳ್ಳುತ್ತಿತ್ತು. ಕಾರಂತರ ಮೆನು ಕೆಲವೊಮ್ಮೆ ಸರಳಗೊಳ್ಳುತ್ತಾ, ಒಮ್ಮೊಮ್ಮೆ ‘ನನಗೆ ರಾತ್ರಿಗೆ ಪಾಯಸ ಮಾತ್ರ ಸಾಕು’ ಅಂತಲೋ ‘ಸ್ವಲ್ಪ ಕೇಸರಿಬಾತು ಬೇಕು’ ಅಂತಲೋ ಕಠಿಣವೂ ಆಗುತ್ತಿತ್ತು. ಆಗ ಮೆಸ್ಸಿನ ಅಡುಗೆ ಮನೆಯಲ್ಲಿ ಕರೆಂಟ್ ಇಲ್ಲದಿದ್ದರೂ ವಿದ್ಯುತ್ ಸಂಚಾರವಾಗುತ್ತಿತ್ತು. ಮೈಯೆಲ್ಲಾ ಬಾಯಾಗಿದ್ದ ನಾವು, ಒಂದು ಬಾಯನ್ನು ಯಾವಾಗಲೂ ಮೆಸ್ಸಿನ ಕಡೆಗೇ ತಿರುಗಿಸಿಕೊಂಡಿರುತ್ತಿದ್ದೆವು.

ಒಂದು ಸ್ವಲ್ಪ ಕೇಸರಿಬಾತನೆಂತು ಮಾಡುವುದು ಎಂದುಕೊಂಡು ಮೆಸ್ಸಿನವರು, ಇನ್ನೊಂದು ಚೂರು ನಮಗೂ (ಅಂದರೆ ಮೆಸ್ಸಿನವರಿಗೆ. ಅವರ ವಾಸ್ತವ್ಯವು ಅಲ್ಲೇ ಇದೆ.) ಮಾಡಿಕೊಂಡರಾಯಿತು ಎಂದುಕೊಂಡು, ಅದು ಚೂರು ಚೂರೇ ಬೆಳೆದು ಅರ್ಧ ಬಕೆಟಿನಷ್ಟಾಗುತ್ತಿತ್ತು. ವಿಶೇಷ ಅತಿಥಿಗಳೂ, ಮೆಸ್ಸಿನವರೂ ತಿಂದ ನಂತರ ಉಳಿದ ಅಲ್ಪ-ಸ್ವಲ್ಪವಾದರೂ, ಮೆಸ್ಸಿನ ವಿದ್ಯಾಧರನ ದೆಸೆಯಿಂದ ನಮ್ಮಂತಹ ‘ಮೆಸ್ಸಿಗೆ ವಿಧೇಯರಾದ’ ವಿದ್ಯಾರ್ಥಿಗಳ ಪಾಲಿಗೆ ಗುಟ್ಟಾಗಿ ಸಿಗುತ್ತಿತ್ತು.

ಒಮ್ಮೊಮ್ಮೆ ಕಾರಂತರು ‘ಇವತ್ತು ನನ್ನ ಜೊತೆ ನನ್ನ ಫ್ರೆಂಡ್ ಊಟಕ್ಕಿರ್ತಾರೆ, ಎರಡು ಊಟ ತನ್ನಿ’ ಅಂತ ಹೇಳುತ್ತಿದ್ದರು. ನಮ್ಮ ವಿದ್ಯಾಧರ ಮೊದಮೊದಲಿಗೆ ‘ಯಾರವರು! ಫ್ರೆಂಡು!?’ ಎಂದು ಗಾಬರಿಯಾಗುತ್ತಿದ್ದನಂತೆ. ಮೆಸ್ಸಿನವರಿಗೆ ಗೊತ್ತಾಗದಂತೆ ಯಾವ ಅತಿಥಿಗಳೂ ನೀನಾಸಮ್‌ನಲ್ಲಿ ಉಳಿಯುವುದಿಲ್ಲವಲ್ಲ ಎಂದು ಆಶ್ಚರ್ಯಪಡುತ್ತಿದ್ದನಂತೆ. ಮೆಸ್ಸಿನಲ್ಲಿ ಊಟಕ್ಕೆ ಉಳಿಯುವವರು ಯಾರೆಂದು ಅವನಿಗೆ ಮೊದಲೇ ಗೊತ್ತಾಗಲೇಬೇಕು.

ಒಮ್ಮೆ ವಿದ್ಯಾ- (ವಿದ್ಯಾಧರ ಮತ್ತು ಶ್ರೀಧರ ಇಬ್ಬರೂ ಅಣ್ಣ-ತಮ್ಮಂದಿರು. ಮೆಸ್ಸಿನ ಪಾಲಕರು) ಕಾರಂತರ ರೂಮಿಗೆ, ಅವರ ಸ್ನೇಹಿತರಿಗೂ ಸೇರಿ, ಎರಡು ಊಟ ಕೊಂಡೊಯ್ದನು. ರೂಮನ್ನು ಪ್ರವೇಶಿಸುವುದಕ್ಕೆ ಮೊದಲೇ ಕಾರಂತರು ಅವರ ಸ್ನೇಹಿತರ ಜೊತೆ ಮಾತಾಡುತ್ತಿದ್ದದ್ದು ಕೇಳಿತು. ಯಾರೋ ಲೋಕಲ್ ಸ್ನೇಹಿತರಿರಬೇಕೆಂದು ಅವನು ಊಹಿಸಿ ಒಳಗೆ ಕಾಲಿಟ್ಟಾಗಲೇ ತಿಳಿದದ್ದು, ಆ ಸ್ನೇಹಿತ ಮಹಾಶಯರು, ನಮ್ಮ ಮೆಸ್ಸಿನ ‘ಬುಡಾನ್’ ಎಂಬ ನಾಯಿ ಅಂತ.
ನಮ್ಮ ಮೆಸ್ಸಿನ ಬಳಿ ಅಲೆದಾಡಿಕೊಂಡಿರುವ ಬುಡಾನ್, ಗುಂಡಾ, ಪಿಟ್ರಿ, ಈಡಿಪಸ್, ಎಲ್ಜಿ (ಎಲಿಜಿಬೆತ್), ಒಫೀಲಿಯಾ, ಜೂಲಿಯೆಟ್ ಮುಂತಾದ ನಾಯಿಗಳು ಬಹಳ ಧೈರ್ಯವಾಗಿ, ಕಾರಂತರ ರೂಮಿಗೆ ಗೆಸ್ಟ್‌ಗಳಾಗಿ ಹೋಗಿ ಮೃಷ್ಟಾನ್ನ ತಿನ್ನುತ್ತಿದ್ದರೆ ನಮಗೆ ಆ ನಾಯಿಗಳ ಮೇಲೆ ಸಿಟ್ಟು ಬರುತ್ತಿತ್ತು. ಈ ನಾಯಿಗಳಿಗೆ ಪ್ರತಿವರ್ಷವೂ ಹೊಸ ವಿದ್ಯಾರ್ಥಿಗಳು ಬಂದಾಗ ಹೊಸ-ಹೊಸ ಹೆಸರುಗಳು ನಾಮಕರಣವಾಗುತ್ತಿತ್ತು. ಆದರೆ ಅವೆಲ್ಲವೂ ಹೆಚ್ಚೂ ಕಡಿಮೆ ಪಾಶ್ಚಾತ್ಯ ಶಾಸ್ತ್ರೀಯ ನಾಟಕಗಳ ಪ್ರಸಿದ್ಧ ಪಾತ್ರಗಳಾಗಿರುತ್ತಿದ್ದವು.

ಈ ನಾಯಿಗಳ ಮೇಲೆ ಸಿಟ್ಟು ಬರಲು ಮತ್ತೊಂದು ಕಾರಣವೆಂದರೆ – ಈ ಪಿಟ್ರಿಯೋ, ಎಲ್ಜಿಯೋ ಅಥವಾ ಯಾವುದೋ; ಐದಾರು ಮಕ್ಕಳನ್ನು ಹೆತ್ತು, ಆ ಮರಿಗಳು ನಾವು ಓಡಾಡುವಾಗಲೆಲ್ಲ ಕೈ ಕಾಲಿಗೆ ಸಿಕ್ಕುತ್ತಾ, ನಮ್ಮ ನಾಟಕದ ಸೆಟ್ಟಿನ ಮೇಲೆಲ್ಲಾ ಕಕ್ಕಸ್ಸು ಮಾಡಿಬಿಡುತ್ತಿದ್ದವು. ನಮ್ಮ ಸೆಟ್ ಡಿಸೈನ್ ತರಗತಿಗಳು ಮುಗಿದಮೇಲೆ, ಬಣ್ಣದ ಡಬ್ಬಗಳನ್ನೆಲ್ಲಾ ಹಾಗೇ, ಅಲ್ಲಿಯೇ ಬಿಟ್ಟು ರೂಮಿಗೆ ಹೋಗುತ್ತಿದ್ದೆವು. ಬೆಳಿಗ್ಗೆ ಬಂದು ನೋಡಿದರೆ ಬಣ್ಣಗಳೆಲ್ಲಾ ಮಾಯವಾಗಿರುತ್ತಿದ್ದವು. ಇಲ್ಲ ಸ್ಥಳಾಂತರಗೊಂಡಿರುತ್ತಿದ್ದವು. ಬಣ್ಣಗಳನ್ನೆಲ್ಲ ಈ ನಾಯಿಗಳ ಹೊಸ ಸಂತತಿಯು, ಹೊಸರುಚಿಗಳನ್ನಾಗಿ ಮಾಡಿಕೊಂಡಿರುವುದು ನಮ್ಮ ಅರಿವಿಗೆ ಬಂದದ್ದು, ನಮ್ಮ ಸೆಟ್ಟಿನ ಮೇಲೆ ಅವುಗಳ ಒಣಗಿದ ಬಣ್ಣಬಣ್ಣದ ಕಕ್ಕದ ತುಂಡುಗಳು ದೊರೆತಮೇಲೆಯೇ.

ಲೇಖಕ ಚನ್ನಕೇಶವ. ಫೋಟೋ: ಎ.ಎನ್.ಮುಕುಂದ

ಲೇಖಕ ಚನ್ನಕೇಶವ. ಫೋಟೋ: ಎ.ಎನ್.ಮುಕುಂದ

ಒಂದು ಸಲ ಯಾವಾಗಲೋ ಕಾಣೆ ನಮ್ಮ ರಂಗಮಂದಿರದ ಕೀಲಿಕೈ ಕಾಣೆಯಾಯ್ತು. ಸಾಮಾನ್ಯವಾಗಿ ಕೀಲಿಕೈಗಳು ಒಂದು ನಿಗದಿತ ಜಾಗದಲ್ಲಿರುತ್ತವೆ. ಅಕಸ್ಮಾತ್ ಆ ಕೀಲಿಕೈಗಳು ಆ ಜಾಗದಲ್ಲಿರದಿದ್ದರೆ ನಮ್ಮ ವಿಟ್ಠಣ್ಣ, ಬಂಗಾರಣ್ಣ ಅಥವಾ ರಾಜೇಶ (ಇವರು ನೀನಾಸಮ್‌ನಲ್ಲಿ, ಬಹಳ ವರ್ಷಗಳಿಂದಿರುವ ಸಹಾಯಕರು.) ಅವನ್ನು ಬೇರೆಡೆಗೆ, ಅಗತ್ಯ ಕಾರಣಗಳಿಗಾಗಿ ವರ್ಗಾಯಿಸಿರುತ್ತಾರೆ. ಅವತ್ತು ಕಾರಂತರಾದಿಯಾಗಿ ಎಲ್ಲರೂ ಕೀಲಿಗೊಸುಗ ರಂಗಮಂದಿರದ ಹೊರಗೇ ಕಾಯುವಂತಾಯ್ತು. ಕೆಲವರು ಅದನ್ನು ತಪಾಸು ಮಾಡುವ ಕೆಲಸವನ್ನು ಮಾಡುತ್ತಿದ್ದರು. ರಂಗಮಂದಿರದ ಹೊರಗೆ ಇರುವ ಕಲ್ಲುಬೆಂಚಿನ ಮೇಲೆ ಕುಳಿತ ಕಾರಂತರಿಗೆ ತೆಂಗಿನ ಮರದ ಮೇಲೆ ಕುಳಿತ ಕಾಗೆ ಕಾಣಿಸಿತು. ಆಗ ಅವರು- ‘ಕಾಗೆ… ಕಾಗೆ… ಸುಬ್ಬಣ್ಣನವರ ಮನೆಗೆ ಹೋಗಿ ಬೀಗದ ಕೈ ತರ್ತೀಯಾ?’ ಅಂತ ಅದನ್ನು ಮಾತಾಡಿಸಿದರಂತೆ. ಅದಕ್ಕೆ ಆ ಕಾಗೆ ‘ಅದು ಅಲ್ಲಿಲ್ಲ’ ಎಂದಿತಂತೆ. ಈ ಕಥೆಯ ಇನ್ನೊಂದು ಅವತರಣಿಕೆಯಲ್ಲಿ ಅವರು ಮಾತಾಡಿದ್ದು ನಾಯಿಯ ಜೊತೆ ಎಂದಿದೆ. ಒಟ್ಟಿನಲ್ಲಿ ಕಾರಂತರ ಪ್ರಾಣಿ-ಪಕ್ಷಿ ಪ್ರೀತಿಯನ್ನು ಹೇಳುವ ಹಲವಾರು ಕಥೆಗಳು ಇನ್ನೂ ಇವೆ.

(ಮುಂದುವರಿಯುವುದು)