ಅಮೆರಿಕ ರಕ್ಷಣಾ ವಿಭಾಗದ ಪೆಂಟಗನ್ ಪೇಪರುಗಳಿಗೆ ಸಂಬಂಧಿಸಿದಂತೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಒದಗಿದ ಅವಸ್ಥೆಯನ್ನು ತಿಳಿದಿದ್ದರೂ ಬೆನ್ ಬ್ರಾಡ್ಲಿ ತಾವೇಕೆ ಆ ಮಾಹಿತಿಯನ್ನು ಪ್ರಸಾರ ಮಾಡಕೂಡದು ಎಂದು ಯೋಚಿಸುತ್ತಾನೆ. ಅದು ಹೊಳೆದ ಕೂಡಲೆ ಡೇನಿಯಲ್ ಎಲ್‌ಬರ್ಗ್ ನನ್ನು ಸಂಪರ್ಕಿಸಿ ಉದ್ದೇಶಿತ ಮಾಹಿತಿಯನ್ನು ಪಡೆಯಲು ಸಫಲನಾಗುತ್ತಾನೆ. ನ್ಯೂಯಾರ್ಕ್ ಟೈಮ್ಸ್‌ನಿಂದ ಯುದ್ಧದ ಸತ್ಯವಾದ ಮಾಹಿತಿ ಸಾರ್ವಜನಿಕರಿಗೆ ತಿಳಿಯಲಾಗದ ಪರಿಸ್ಥಿಗೆ ಎಲ್‌ಬರ್ಗ್ ನೊಂದುಕೊಂಡಿರುತ್ತಾನೆ. ತನ್ನಲ್ಲಿರುವ ವಿಷಯಗಳಿಗೆ ಉದ್ದೇಶಿತ ಬಿಡುಗಡೆ ಸಿಗದೆ ಹೋದದ್ದು ಅವನಿಗೆ ತೀವ್ರವಾದ ಅಸಮಾಧಾನ ಉಂಟುಮಾಡಿದ್ದರೆ ಅದು ಸಹಜವೇ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಅಮೆರಿಕದ ʻದ ಪೋಸ್ಟ್ʼ ಸಿನಿಮಾದ ವಿಶ್ಲೇಷಣೆ
ʻದ ಪೋಸ್ಟ್ʼ ಚಿತ್ರ ಪತ್ರಿಕಾ ಸ್ವಾತಂತ್ರ್ಯವನ್ನು ಕುರಿತದ್ದು. ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನು ಸಂಶೋಧನೆ ಮಾಡಿ ಅದರ ಸತ್ಯಾಸತ್ಯಗಳನ್ನು ಸಮುದಾಯಕ್ಕೆ ತಿಳಿಸುವ ಜವಾಬ್ದಾರಿ ಹಾಗೂ ಹಕ್ಕು ಮತ್ತು ನೈತಿಕತೆಯನ್ನು ಕುರಿತ ಚಿತ್ರವಿದು. ಚಿತ್ರ ಅಮೆರಿಕದ ವಿಯೆಟ್ನಾಮ್ ಯುದ್ಧಕ್ಕೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿದ್ದರೂ ಇಡೀ ಪ್ರಪಂಚದಲ್ಲಿನ ಪತ್ರಿಕೋದ್ಯಮಕ್ಕೆ, ಅದರಲ್ಲಿಯೂ ಮುಖ್ಯವಾಗಿ ಪ್ರಜಾತಂತ್ರದ ಆಡಳಿತವಿರುವ ದೇಶಗಳಿಗೆ ಅನ್ವಯಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
ಅದು ಅರವತ್ತರ ದಶಕದ ಮಧ್ಯ ಭಾಗ. ಅಮೆರಿಕ ವಿಯಟ್ನಾಂ ಯುದ್ಧದಲ್ಲಿ ತೊಡಗಿದ್ದ ಕಾಲ. ಇದಕ್ಕೆ ಸಂಬಂಧಿಸಿದಂತೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಮ್ಯಾಕ್ನಮಾರ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಅವರ ಬಳಿ ಡೇನಿಯಲ್ ಎಲ್ಸ್‌ಬರ್ಗ್(ಮ್ಯಾಥ್ಯೂ ರೈಸ್) ಮಿಲಿಟರಿ ವಿಷಯಗಳನ್ನು ವಿಶ್ಲೇಷಿಸುವ ಅಧಿಕಾರಿ. ಕಾಲ ಉರುಳಿದಂತೆ ಅವನಿಗೆ ತಾನು ಮಾಡುತ್ತಿರುವ ಸಂಗತಿಗಳ ಸತ್ಯಾಂಶದ ಬಗ್ಗೆ ಸಂದೇಹಗಳು ಒಟ್ಟುಗೂಡುತ್ತ ಹೋಗುತ್ತವೆ. ಯುದ್ಧದ ವಿಷಯಗಳಿಗೆ ಸಂಬಂಧಿಸಿದಂತೆ ಇಡಿ ಅಮೆರಿಕ ಜನಸಮುದಾಯಕ್ಕೆ ಮೋಸ ಮಾಡುವ ರೀತಿಯಲ್ಲಿ ಸುಳ್ಳುಗಳನ್ನು ತಿಳಿಸುತ್ತಿದ್ದೇವೆ ಎನ್ನುವುದು ಮನದಟ್ಟಾಗುತ್ತದೆ. ಅವನು ತನ್ನ ಕೆಲಸದ ಬಗ್ಗೆಯೇ ಜಿಗುಪ್ಸೆಯುಂಟಾಗಿ ಅದನ್ನು ಮುಂದುವರಿಸಲಾಗದೆ ಕೆಲಸದಲ್ಲಿನ ಗೋಪ್ಯ ವಿಷಯಗಳನ್ನು ಒಳಗೊಂಡ ಪೆಂಟಗನ್ ಸ್ಟಡೀಸ್ ಎಂದು ಕರೆಯಲಾದ ಸಮಸ್ತವನ್ನು ಯಾರಿಗೂ ಕಾಣದಂತೆ ತೆಗೆದುಕೊಂಡು ೧೯೭೧ರಲ್ಲಿ ಹೊರನಡೆಯುತ್ತಾನೆ. ಅವನಲ್ಲಿ ಅನೇಕ ಬಗೆಯ ತುಮುಲಗಳೇರ್ಪಟ್ಟಿರುತ್ತವೆ. ಯುದ್ಧ ಪ್ರಾರಂಭವಾಗಿ ವರ್ಷಗಳಾಗಿದ್ದರೂ ಇಡೀ ಅಮೆರಿಕದ ಜನಸಮುದಾಯಕ್ಕೆ ಮತ್ತು ಪ್ರಪಂಚಕ್ಕೆ ಯುದ್ಧದ ವಿಷಯವಾಗಿ ಹೇಳುತ್ತಿರುವ ಸುಳ್ಳು ಮಾಹಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಯುದ್ಧಕ್ಕೆ ಸಂಬಂಧಿಸಿದಂತೆ ಮ್ಯಾಕ್ನಮಾರಗೆ ಯುದ್ಧದಲ್ಲಿ ಅಮೆರಿಕ ಗೆಲ್ಲುವುದಿಲ್ಲ ಎನ್ನುವುದು ತಿಳಿದಿರುತ್ತದೆ. ಚಿತ್ರದಲ್ಲಿ ಇದನ್ನು ಕುರಿತಂತೆ ಸ್ಪಷ್ಟ ಮಾತುಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ಹಲವು ವರ್ಷಗಳ ಕಾಲ ಸಾವಿರಾರು ಅಮೆರಿಕದ ಸೈನಿಕರ ಹತ್ಯೆಯಾಗಿರುತ್ತದೆ. ಇದು ಯಾರೂ ಕ್ಷಮಿಸದ ಸಂಗತಿ ಎನ್ನುವುದು ಅವನ ಅಚಲ ನಿಲುವು.
ಡೇನಿಯಲ್ ಎಲ್ಸ್‌ಬರ್ಗ್ ವಿಯಟ್ನಾಂ ವಿಷಯದ ಬಗ್ಗೆ ಹೊಂದಿರುವ ಮಾಹಿತಿಯನ್ನು ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ನ ಸಂಪಾದಕವರ್ಗ ಪಡೆಯಲು ಬಯಸುತ್ತದೆ. ಕೂಡಲೇ ಈ ಮಹತ್ವದ ಮತ್ತು ಸೂಕ್ಷ್ಮ ಮಾಹಿತಿಯನ್ನು ಹೊಂದಿರುವ ಡೇನಿಯಲ್ ಎಲ್ಸ್‌ಬರ್ಗನನ್ನು ಸಂಪರ್ಕಿಸಿ ಅವನಲ್ಲಿದ್ದ ಮಾಹಿತಿಯನ್ನು ಬಳಸಿಕೊಂಡು ಪ್ರಸಾರ ಮಾಡಲು ಉದ್ದೇಶಿಸುತ್ತದೆ. ಹೀಗೆ ಮಾಡುವುದರಿಂದ ಅಮೆರಿಕದ ಸಮಸ್ತ ಜನರು ಮತ್ತು ತನ್ಮೂಲಕ ಪ್ರಪಂಚದೆದುರು ವಿಯಟ್ನಾಂ ಯುದ್ಧದ ಬಗ್ಗೆ ಸತ್ಯವನ್ನು ನಿರೂಪಿಸಿ ತನ್ನ ಹಿರಿಮೆಯನ್ನು ದ್ವಿಗುಣಗೊಳಿಸಲು ಆಲೋಚಿಸಿರುತ್ತದೆ. ಆದರೆ ಈ ಸಂಗತಿಯನ್ನು ತನ್ನದೇ ಆದ ಮೂಲಗಳಿಂದ ಅರಿತ ಅಮೆರಿಕದ ಅಧ್ಯಕ್ಷ ನಿಕ್ಸನ್ ನ ಅಧಿಕಾರ ವ್ಯವಸ್ಥೆ, ಸರ್ಕಾರದ ಗೌಪ್ಯ ವಿಷಯಗಳಿಗೆ ಧಕ್ಕೆ ತರುವಂಥ ಮಾಹಿತಿಯನ್ನು ಪ್ರಚಾರಗೊಳಿಸುವಂತಿಲ್ಲ ಮತ್ತು ಅದು ರಾಷ್ಟ್ರದ ಹಿತಕ್ಕೆ ಧಕ್ಕೆ ತರುತ್ತದೆ ಎಂದು ಫೆಡರೆಲ್ ನ್ಯಾಯಾಲಯದಿಂದ ತಡೆಯಾಜ್ಞೆಯನ್ನು ತಂದಿರುತ್ತದೆ. ಪರಿಣಾಮವಾಗಿ ನ್ಯೂಯಾರ್ಕ್ ಟೈಮ್ಸ್ ವಿಯಟ್ನಾಂ ಯುದ್ಧದ ಆಂತರ್ಯದ ವಿಷಯದ ವಿವರಗಳನ್ನು ಪ್ರಕಟಿಸುವ ಉದ್ದೇಶವನ್ನು ಸ್ಥಗಿತಗೊಳಿಸಬೇಕಾಗುತ್ತದೆ. ಇಂಥ ಉನ್ನತ ಮಟ್ಟದ ವಿಷಯ ಸಾರ್ವಜನಿಕರ ಗಮನ ಸೆಳೆಯಿತೇ ಇಲ್ಲವೇ ಮತ್ತು ಹಾಗಿದ್ದ ಪಕ್ಷದಲ್ಲಿ ಉಂಟಾದ ಪ್ರಭಾವ ಹಾಗೂ ಪರಿಣಾಮದ ವಿವರಗಳು ನಿಜಕ್ಕೂ ಆಸಕ್ತಿ ಉಂಟುಮಾಡುವಂಥವು.
ʻದ ನ್ಯೂಯಾರ್ಕ್ ಟೈಮ್ಸ್ʼ ಪತ್ರಿಕೆಯಷ್ಟು ಪ್ರತಿಷ್ಠಿತ ಹಾಗೂ ಪ್ರಬಲವಾಗಿರದಿದ್ದರೂ ಪ್ರಾದೇಶಿಕ ಪತ್ರಿಕೆಯ ರೀತಿಯಲ್ಲಿ ʻದ ವಾಷಿಂಗ್ಟನ್ ಪೋಸ್ಟ್ʼ ಕಾರ್ಯನಿರ್ವಹಿಸುತ್ತಿರುತ್ತದೆ. ಈ ಪತ್ರಿಕೆಯನ್ನು ಮೊದಲು ನಡೆಸಿಕೊಂಡು ಹೋಗುತ್ತಿದ್ದ ತನ್ನ ತಂದೆ ಮತ್ತು ಗಂಡ ಇಬ್ಬರೂ ತೀರಿಕೊಂಡ ನಂತರ ಅದನ್ನು ನಡುವಯಸ್ಸಿನ ಕೆ. ಗ್ರೆಹಾಮ್(ಮೆರಿಲ್ ಸ್ಟ್ರೀಪ್)ನಡೆಸಿಕೊಂಡು ಹೋಗುತ್ತಿರುತ್ತಾರೆ. ಮುಖ್ಯ ಸುದ್ದಿ ಸಂಪಾದಕರಾಗಿ ಬೆನ್ ಬ್ರಾಡ್ಲಿ(ಟಾಮ್ ಹ್ಯಾಂಕ್ಸ್) ಕಾರ್ಯ ನಿರ್ವಹಿಸುತ್ತಿರುತ್ತಾರೆ.
ಅಮೆರಿಕ ರಕ್ಷಣಾ ವಿಭಾಗದ ಪೆಂಟಗನ್ ಪೇಪರುಗಳಿಗೆ ಸಂಬಂಧಿಸಿದಂತೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ಒದಗಿದ ಅವಸ್ಥೆಯನ್ನು ತಿಳಿದಿದ್ದರೂ ಬೆನ್ ಬ್ರಾಡ್ಲಿ ತಾವೇಕೆ ಆ ಮಾಹಿತಿಯನ್ನು ಪ್ರಸಾರ ಮಾಡಕೂಡದು ಎಂದು ಯೋಚಿಸುತ್ತಾನೆ. ಅದು ಹೊಳೆದ ಕೂಡಲೆ ಡೇನಿಯಲ್ ಎಲ್‌ಬರ್ಗ್ ನನ್ನು ಸಂಪರ್ಕಿಸಿ ಉದ್ದೇಶಿತ ಮಾಹಿತಿಯನ್ನು ಪಡೆಯಲು ಸಫಲನಾಗುತ್ತಾನೆ. ನ್ಯೂಯಾರ್ಕ್ ಟೈಮ್ಸ್‌ನಿಂದ ಯುದ್ಧದ ಸತ್ಯವಾದ ಮಾಹಿತಿ ಸಾರ್ವಜನಿಕರಿಗೆ ತಿಳಿಯಲಾಗದ ಪರಿಸ್ಥಿಗೆ ಎಲ್‌ಬರ್ಗ್ ನೊಂದುಕೊಂಡಿರುತ್ತಾನೆ. ತನ್ನಲ್ಲಿರುವ ವಿಷಯಗಳಿಗೆ ಉದ್ದೇಶಿತ ಬಿಡುಗಡೆ ಸಿಗದೆ ಹೋದದ್ದು ಅವನಿಗೆ ತೀವ್ರವಾದ ಅಸಮಾಧಾನ ಉಂಟುಮಾಡಿದ್ದರೆ ಅದು ಸಹಜವೇ. ಹೀಗಿರುವಾಗ ಈಗ ವಾಶಿಂಗ್‌ಟನ್ ಪೋಸ್ಟ್ ಪತ್ರಿಕೆ ಮುಖಾಂತರ ಇನ್ನೊಂದು ಅವಕಾಶ ಉಂಟಾಗಿದ್ದು ಅವನಲ್ಲಿ ನಿಜಕ್ಕೂ ಸಂತೋಷ ಹಾಗೂ ಅನೇಕ ಬಗೆಯ ನಿರೀಕ್ಷೆಗಳು ನೆಲೆಯೂರಲು ಕಾರಣವಾಗುತ್ತದೆ.. ಹಾಗಾಗಿ ವಾಶಿಂಗ್‌ಟನ್ ಪೋಸ್ಟ್ ಗೆ ಡೇನಿಯಲ್ ಎಲ್ಸ್‌ಬರ್ಗ್ ಸಂಪೂರ್ಣ ಸಹಕಾರ ಒದಗಿಸುತ್ತಾನೆ.
ತಮಗೆ ಲಭ್ಯವಾದ ವಿಷಯವನ್ನು ಪ್ರಕಟಿಸಲು ಪತ್ರಿಕೆಯ ಒಡತಿಯ ಅನುಮತಿಯನ್ನು ಬೆನ್ ಬ್ರಾಡ್ಲಿ ಕೇಳುತ್ತಾನೆ. ಇಂತಹ ಪರಿಸ್ಥಿತಿ ಉದ್ಭವವಾದಾಗ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಗೆ ಎರಡು ವಿಷಯಗಳು ಪ್ರಮುಖವಾಗುತ್ತವೆ. ಲಿಂಗ ಸಮಾನತೆಯ ವಿಷಯವಾಗಿ ಪತ್ರಿಕೆಯನ್ನು ನಡೆಸುತ್ತಿರುವುದು ಹೆಣ್ಣು ಎನ್ನುವುದು ಒಂದಾದರೆ, ಪತ್ರಿಕೆಯ ಒಟ್ಟಾರೆ ಹಿತದೃಷ್ಟಿಯ ಕಾರಣ ಆ ಬಗೆಯ ಜವಾಬ್ದಾರಿಯನ್ನು ಹೊರುವುದು ಉಚಿತವೇ ಎನ್ನುವುದು ಇನ್ನೊಂದು. ಮೊದಲನೆಯ ಪ್ರಶ್ನೆಗೆ ಅಮೆರಿಕದ ಪತ್ರಿಕೋದ್ಯಮದಲ್ಲಿ ಹಿಂದೆಂದೂ ಇರದಂಥ ವಾಸ್ತವ ಪರಿಸ್ಥಿತಿಯೇ ಉತ್ತರ ಒದಗಿಸುತ್ತದೆ. ಯಾರಾದರೂ ಲಿಂಗ ಸಮಾನತೆಯನ್ನು ಪುರಸ್ಕರಿಸುವಂಥದೇ ಆದ್ದರಿಂದ ಅದೊಂದು ವಿಶೇಷವೆಂದೇ ಪರಿಗಣಿಸುವಂತಿರುತ್ತದೆ. ಇನ್ನೊಂದು ಪ್ರಶ್ನೆಯ ಉತ್ತರಕ್ಕೆ ಆಯ್ಕೆಗಳುಂಟು. ಯಾವ ಬಗೆಯ ವಿಪರೀತ ಆಲೋಚನೆಗಳನ್ನೂ ಕಾರ್ಯರೂಪಕ್ಕೆ ತರದೆ ಇರುವ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುವುದೊಂದು. ಇದು ಅತ್ಯಂತ ಕ್ಷೇಮವಾದ ಆಯ್ಕೆ. ಅದಲ್ಲದೆ ತೀವ್ರ ಸ್ವರೂಪದ ಗಂಡಾಂತರಕ್ಕೆ ಅವಕಾಶವಿರುವಂತೆ ವಿಷಯಗಳನ್ನು ಪ್ರಚಾರ ಮಾಡಿದರೆ ಅದರ ಪರಿಣಾಮ ಬಹುವಿಧವಾದದ್ದು. ಸಹಜವಾಗಿಯೇ ನಿಕ್ಸನ್ ಸರ್ಕಾರ ಪ್ರಚಾರಕ್ಕೆ ತಡೆಯೊಡ್ಡಲು ಕೋರ್ಟ್ ನಲ್ಲಿ ತಮ್ಮ ಪತ್ರಿಕೆಯ ವಿರುದ್ಧ ದಾವೆ ಹೂಡುತ್ತದೆ. ಪತ್ರಿಕೆ ಸರ್ಕಾರವನ್ನು ಕೋರ್ಟಿನಲ್ಲಿ ಎದುರಿಸಬೇಕಾಗುತ್ತದೆ. ಈ ಹೋರಾಟದಲ್ಲಿ ತಮ್ಮ ಪತ್ರಿಕೆಯ ಪರವಾಗಿ ಗೆಲುವು ನಿಶ್ಚಿತವಲ್ಲ. ಒಂದು ವೇಳೆ ಅದರಲ್ಲಿ ಸೋಲುಂಟಾದರೆ ಆರ್ಥಿಕ ದಂಡವೂ ಸೇರಿದಂತೆ ಪತ್ರಿಕೆಯ ಒಡತಿ ಹಾಗೂ ಸಂಪಾದಕ ವರ್ಗದ ಕೆಲವರಿಗೆ ಅದರಲ್ಲಿಯೂ ಮುಖ್ಯ ಸುದ್ದಿ ಸಂಪಾದಕರಿಗೆ ಜೈಲುವಾಸವೂ ಇರುತ್ತದೆ. ಇಂತಹ ಗಂಭೀರ ವಸ್ತುವನ್ನು ಕುರಿತು ೨೦೧೭ರ ಸ್ಪೀಲ್‌ಬರ್ಗ್ ನಿರ್ದೇಶನದ ಚಿತ್ರ ʻದ ಪೋಸ್ಟ್ʼ. ಚಿತ್ರದ ಚಿತ್ರಕಥೆಯ ಸಿದ್ಧತೆ ಮತ್ತು ನಿರ್ಮಾಣಕ್ಕಾಗಿ ಇತರ ಎಲ್ಲ ಸಂಗತಿಗಳು ಕೇವಲ ಒಂಬತ್ತು ತಿಂಗಳಲ್ಲಿ ಪೂರೈಸಿದ್ದು ಕೂಡ ಚಿತ್ರಾಸಕ್ತರ ಗಮನ ಸೆಳೆಯಲು ಕಾರಣವಾಗಿತ್ತು.
ಯುದ್ಧ ಪ್ರಾರಂಭವಾಗಿ ವರ್ಷಗಳಾಗಿದ್ದರೂ ಇಡೀ ಅಮೆರಿಕದ ಜನಸಮುದಾಯಕ್ಕೆ ಮತ್ತು ಪ್ರಪಂಚಕ್ಕೆ ಯುದ್ಧದ ವಿಷಯವಾಗಿ ಹೇಳುತ್ತಿರುವ ಸುಳ್ಳು ಮಾಹಿತಿಯನ್ನು ಒಪ್ಪಿಕೊಳ್ಳಲು ಸಾಧ್ಯವಾಗುವುದಿಲ್ಲ. ಯುದ್ಧಕ್ಕೆ ಸಂಬಂಧಿಸಿದಂತೆ ಮ್ಯಾಕ್ನಮಾರಗೆ ಯುದ್ಧದಲ್ಲಿ ಅಮೆರಿಕ ಗೆಲ್ಲುವುದಿಲ್ಲ ಎನ್ನುವುದು ತಿಳಿದಿರುತ್ತದೆ. ಚಿತ್ರದಲ್ಲಿ ಇದನ್ನು ಕುರಿತಂತೆ ಸ್ಪಷ್ಟ ಮಾತುಗಳಿವೆ.
ಇಡೀ ಕಥನದ ನಿರೂಪಣೆ ಡೇನಿಯಲ್ ಎಲ್‌ಬರ್ಗ್ ವಿಯಟ್ನಾಂ ಯುದ್ಧಕ್ಕೆ ಸಂಬಂಧಿಸಿದ ನೂರಾರು ಪುಟಗಳ ಸೂಕ್ಷ್ಮ ಗೋಪ್ಯ ಮಾಹಿತಿಯ ಫೈಲುಗಳನ್ನು ತೆಗೆದುಕೊಂಡು ಹೋಗುವುದರೊಂದಿಗೆ ಪ್ರಾರಂಭವಾಗುತ್ತದೆ. ಫೈಲುಗಳ ಪ್ರಾಮುಖ್ಯತೆಯ ಬಗ್ಗೆ ಸ್ಪಷ್ಟವಾಗಿರಲು ಮೊದಲನೆ ಫೈಲಿನ ಮೇಲೆ ನಿರ್ದೇಶಕ ಕ್ಲೋಸ್ ಚಿತ್ರಿಕೆಯಿಂದ ನಮಗೆ ತಿಳಿಯುತ್ತದೆ. ಹೀಗಾಗಿ ಮುಂದೇನು ಎನ್ನುವುದು ಮೊದಲ ನಿಮಿಷದಿಂದಲೇ ಕುತೂಹಲ ಉಂಟಾಗುವಂತೆ ಮಾಡುವ ನಿರ್ದೇಶಕರ ಉದ್ದೇಶ ಸಫಲವಾಗುತ್ತದೆ.
ಡೇನಿಯಲ್ ಎಲ್‌ಬರ್ಗ್ ನಿಂದ ಮಾಹಿತಿಯನ್ನು ಪಡೆದ ಮಾಹಿತಿಯ ಪ್ರಕಟಣೆಗೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಪ್ರಮುಖರಾಗುತ್ತಾರೆ. ಪತ್ರಿಕೆಯ ಒಡತಿ ಕೆ ಗ್ರೆಹಾಮ್ ಮತ್ತು ಮುಖ್ಯ ಸುದ್ದಿ ಸಂಪಾದಕ ಬೆನ್ ಬ್ರಾಡ್ಲಿ.
ಕೆ ಗ್ರೆಹಾಮ್ ಪ್ರಾರಂಭಕ್ಕೆ ಈ ವಿಷಯದ ಬಗ್ಗೆ ಉತ್ಸಾಹ ಇದ್ದಂತೆ ತೋರುವುದಿಲ್ಲ. ಚಿತ್ರ ಮುಂದುವರೆಯುತ್ತಿದ್ದ ಹಾಗೆ ಸಂಪಾದಕ ವರ್ಗದ ಫ್ರಿಟ್ಸ್ ಬೀ(ಟ್ರೇಸಿ ಲೆಟ್ಸ್), ಬೆನ್ ಬ್ಯಾಗ್ಟಿಕಿಯಸ್(ಬಾಬ್ ಓಡೆನ್ರಿಕ್)ಮುಂತಾದವರೊಂದಿಗೆ ಜರುಗುವ ಚರ್ಚೆ ಮತ್ತು ಅಭಿಪ್ರಾಯ ವಿನಿಮಯದಲ್ಲಿ ಅವಳ ಮನಸ್ಸಿಲ್ಲಿ ಅನೇಕ ಬಗೆಯ ಭಾವಗಳು ಉಂಟಾಗುತ್ತವೆ. ಇಡೀ ವಿಷಯಕ್ಕೆ ಸಂಬಂಧಿಸಿದಂತೆ ತನ್ನ ಪಾತ್ರವೇನು ಎನ್ನುವುದನ್ನು ಪರಿಸ್ಥಿತಿಗೆ ಸಂಬಂಧಿಸಿದಂತೆ ವಿಶ್ಲೇಷಿಸಿ, ಅತ್ಯಂತ ಕಠಿಣವಾದ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವಳ ವ್ಯಕ್ತಿತ್ವ ಬೆಳೆಯುತ್ತಾ ಹೋಗುತ್ತದೆ. ಇವುಗಳ ನಡುವೆ ಪತ್ರಿಕೆಯ ಆರ್ಥಿಕ ಸ್ಥಿತಿಯನ್ನು ಮನಗಂಡು ಸಾರ್ವಜನಿಕರಿಗೆ ಬಂಡವಾಳ ಹೂಡಲು ಸಾಧ್ಯವಾಗುವಂತೆ ಸ್ಟಾಕ್ ಎಕ್ಸ್ಚೇಂಜ್ ನಲ್ಲಿ ಐಪಿಓ ಮೂಲಕ ಪ್ರಯತ್ನಿಸುವುದೇ ಎಂಬ ಆಲೋಚನೆ ಮತ್ತು ಅದನ್ನು ಕುರಿತು ಪತ್ರಿಕೆಯ ಅಧಿಕಾರಿಗಳ ಜೊತೆ ನಡೆಸಿದ ಚರ್ಚೆಗಳೆಲ್ಲವೂ ಮಣ್ಣುಗೂಡುತ್ತವೆ ಎನ್ನುವುದು ಅವಳಿಗೆ ತಿಳಿದಿರುತ್ತದೆ. ಇದೆಲ್ಲದರ ಒಟ್ಟಾರೆ ಅರ್ಥ ಪತ್ರಿಕೆಯೇ ಮುಳುಗಿದಂತೆ ಹಾಗೂ ಅದರಲ್ಲಿನ ಪ್ರಮುಖ ಸ್ಥಾನದಲ್ಲಿ ಇರುವವರು ಮತ್ತು ತಾನು ನಿರ್ಗತಿಕರಾಗುವ ಸಂಭವವಿರುತ್ತದೆ ಎನ್ನುವ ಸಂಗತಿ. ಇವೆಲ್ಲವು ಕೆ ಗ್ರೆಹಾಮ್ ಳಲ್ಲಿ ಉಂಟುಮಾಡುವ ಮಿಶ್ರ ಭಾವಗಳನ್ನು ಅವಳು ಏಕಾಂತದಲ್ಲಿರುವಾಗ ತೋರುವ ಮೌನದ ಕ್ಷಣಗಳು ಮತ್ತು ಬೆನ್ ಬ್ರಾಡ್ಲಿ ಮತ್ತಿತರೊಂದಿಗೆ ಜರುಗುವ ಮಾತು ಚರ್ಚೆಗಳಲ್ಲಿ ಆಲೋಚನಾ ಭರಿತ ಮಾತುಗಳು ಪ್ರಕಟಿಸುತ್ತವೆ. ಹಾಗೆಂದೇ ತಾನು ತೆಗೆದುಕೊಳ್ಳುವ ನಿರ್ಧಾರ ವೈಯಕ್ತಿಕವಾಗಿ ಎಷ್ಟು ಪ್ರಮುಖವೋ ಅಷ್ಟೇ ಪತ್ರಿಕೆ, ಅದರ ಅಧಿಕಾರ ವರ್ಗದ ಕ್ಷೇಮವೂ ಮುಖ್ಯ ಎನ್ನುವುದನ್ನು ಅರಿತುಕೊಳ್ಳುತ್ತಾಳೆ. ಇಷ್ಟಲ್ಲದೆ ಅಮೆರಿಕದ ಜನಸಮುದಾಯಕ್ಕೆ ಪತ್ರಿಕೆಗಿರುವ ನೈತಿಕ ಜವಾಬ್ದಾರಿಯನ್ನೂ ಪರಿಗಣಿಸುತ್ತಾಳೆ.
ಚಿತ್ರದಲ್ಲಿ ಇದು ಅತ್ಯಂತ ಮುಖ್ಯವಾದ ದೃಶ್ಯ. ಇವುಗಳನ್ನು ಕುರಿತು ಧೈರ್ಯದಿಂದ ಮುಂದುವರೆಯಲು ಆಲೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾದ ಕೆ ಗ್ರೆಹಾಮ್, ಆಕೆಯ ಜೊತೆಗಿರುವ ಸಂಪಾದಕ ವರ್ಗ ಹಾಗೂ ಕಾರ್ಮಿಕ ವರ್ಗ.
ಮಿಶ್ರ ಭಾವಗಳು ಬೆರೆತ ಮನಸ್ಸನ್ನು ನಿಯಂತ್ರಿಸಿ ವಿಷಯ ಪ್ರಕಟಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಪದಗಳ ಸಂಯೋಜನೆ ಇತ್ಯಾದಿ ಎಲ್ಲವನ್ನೂ ಸಿದ್ಧಪಡಿಸಿ ಮುದ್ರಣ ಯಂತ್ರಗಳೊಂದಿಗೆ ತನ್ನ ಸೂಚನೆಗೆ ಮುಖಮಾಡಿರುವ ಕಾರ್ಮಿಕ ಸಮುದಾಯವನ್ನು ಸಮೀಪ ಚಿತ್ರಿಕೆಗಳಲ್ಲಿ ಕಾಣುತ್ತೇವೆ. ಪ್ರತಿ ಕ್ಷಣವೂ ಪ್ರಮುಖವೆನಿಸುವ ಹಂತದಲ್ಲಿ ಕೆ ಗ್ರೆಹಾಮ್ ಗ್ರೀನ್ ಸಿಗ್ನಲ್ ಕೊಡುತ್ತಾಳೆ. ಹಾಗೆ ಸೂಚಿಸಿದ ಮರುಕ್ಷಣದಲ್ಲಿ ಯಂತ್ರಗಳು ಕಾರ್ಯೋನ್ಮುಖವಾಗುತ್ತವೆ. ಚಿತ್ರದುದ್ದಕ್ಕೂ ಪ್ರಮುಖ ಸನ್ನಿವೇಶಗಳಿಗೆ ತಕ್ಕಂತೆ ಜಾನ್ ವಿಲಿಯಮ್ಸ್ ಹಿನ್ನೆಲೆ ಸಂಗೀತ ಒದಗಿಸಿರುವುದು ಗಮನ ಸೆಳೆಯುತ್ತದೆ.
ಪ್ರಜಾತಂತ್ರ ಅಂಗವಾಗಿ ದೇಶದ ಜನತೆಗೆ ಸಮಸ್ತ ವಿಷಯಗಳ ತಿಳಿವಳಿಕೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುವಾಗ ವಾಶಿಂಗ್ ಟನ್ ನಲ್ಲಿ ಇಡೀ ಸ್ತ್ರೀ ಸಮುದಾಯ ಕೆ ಗ್ರೆಹಾಮ್‌ಳಿಗೆ ಬೆಂಬಲ ಸೂಚಿಸುತ್ತದೆ. ಗುಂಪು ನೆರೆದ ಅವರ ನಡುವಿನಿಂದ ಬೆಂಬಲಿಗಳೊಬ್ಬಳ ನೆರವಿನಿಂದ ಕೋರ್ಟಿನ ಪ್ರತ್ಯೇಕ ದ್ವಾರದ ಕಡೆ ಅವಳು ಹೋಗುವುದು ಇದನ್ನು ನಿರೂಪಿಸುತ್ತದೆ. ಇಂಥ ಪ್ರಮುಖ ಸೂಕ್ಷ್ಮ ಸಂಗತಿಗಳನ್ನು ನಿರ್ದೇಶಕರು ಮಧ್ಯಮ ಚಿತ್ರಿಕೆಗಳಲ್ಲಿ ಮನಗಾಣಿಸಿದ್ದಾರೆ.
ಸುಪ್ರೀಂಕೋರ್ಟಿನ ತೀರ್ಪು ಹೊರಬರುವುದನ್ನು ವಾಷಿಂಗ್ಟನ್ ಪೋಸ್ಟ್‌ನ ಎಲ್ಲರನ್ನೂ ಕುತೂಹಲದಿಂದ ಎದುರು ನೋಡುವಂತೆ ಮಾಡುತ್ತದೆ. ಆಗ ಪ್ರತಿ ಕ್ಷಣಗಳೂ ಅಮೂಲ್ಯ.. ಅಲ್ಲಿ ಕೋರ್ಟಿನಲ್ಲಿ ಬಿತ್ತರಿಸಲಾದ ತೀರ್ಮಾನವನ್ನು ಎಲ್ಲರಿಗೆ ತಿಳಿಸುವಂತೆ ವಾಷಿಂಗ್ಟನ್ ಪೋಸ್ಟಿನ ಕಾರ್ಯಕರ್ತೆಯೊಬ್ಬಳು, ನಿರ್ಧಾರ ತಮ್ಮ ಪತ್ರಿಕೆಯ ಪರವಾಗಿದೆ ಎನ್ನುವ ತೀರ್ಪಿನ ಮಾತುಗಳನ್ನು ಪುನರುಚ್ಚರಿಸಿ ತಿಳಿಸುತ್ತಾಳೆ. ಆಗ ಅಲ್ಲಿ ಉಂಟಾದ ಹರ್ಷಕ್ಕೆ ಮಿತಿಯೆಲ್ಲಿ!
ವಾಷಿಂಗ್ಟನ್ ಪೋಸ್ಟ್ ತನ್ನ ಪರವಾಗಿ ಕೋರ್ಟ್ ತೀರ್ಮಾನ ವ್ಯಕ್ತಪಡಿಸಿದ್ದನ್ನು ಸಂಭ್ರಮಿಸುವುದು ಒಂದೆಡೆಯಾದರೆ ಇಡೀ ಪ್ರಕರಣ ಪ್ರಪಂಚದ ಪತ್ರಿಕೋದ್ಯಮವನ್ನು ಕುರಿತ ಸಂಗತಿಯಾಗುತ್ತದೆ. ಚಿತ್ರದಲ್ಲಿ ಸಾಮಾನ್ಯವಾಗಿ ಕಾಣುವಂತಹ ಯಾವುದೇ ನಾಟಕೀಯ ತಿರುವುಗಳಿಲ್ಲ. ಆದರೆ ಪ್ರಮುಖ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುವ ಚರ್ಚೆಗಳಲ್ಲಿ ಅದು ಉಂಟುಮಾಡುವ ವಿಚಾರ ಮತ್ತು ಭಾವನೆಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಪ್ರಮುಖ ಪಾತ್ರಧಾರಿಗಳು ಸಮರ್ಥರಾಗಿದ್ದಾರೆ.
ಸರಿಸುಮಾರು ಈ ಚಿತ್ರಕ್ಕೆ ಒಂದಷ್ಟು ಹೋಲಿಕೆಯಾಗುವಂತೆ ಪತ್ರಿಕಾ ಸ್ವಾತಂತ್ರ್ಯವನ್ನು ಹಾಗೂ ಜವಾಬ್ದಾರಿಯನ್ನು ಕುರಿತ 2016ರ ಟಾಮ್ ಮೆಕಾರ್ತಿ ನಿರ್ದೇಶನದ ಚಿತ್ರ ʻಸ್ಪಾಟ್‌ಲೈಟ್ʼ ಚಿತ್ರದಲ್ಲಿ ಪತ್ರಿಕೆಯೊಂದು ಸಮರ್ಪಕ ರೀತಿಯಲ್ಲಿ ಕಾರ್ಯನಿರ್ವಹಿಸುವಾಗ ತಲೆದೋರುವ ಸಂಗತಿಗಳನ್ನು ವಿಸ್ತಾರವಾಗಿ ನಿರೂಪಿಸುತ್ತದೆ. 1976ರ ಅಲೆನ್ ಜೆ ಪಾಕುಲ ನಿರ್ದೇಶನದ ʻಆಲ್ ದ ಪ್ರೆಸಿಡೆಂಟ್ಸ್ ಮೆನ್ʼ ಚಿತ್ರದಲ್ಲಿಯೂ ಈ ಸಂಗತಿಯ ವಿಸ್ತೃತ ರೂಪವನ್ನು ಪ್ರಸ್ತುತಪಡಿಸಲಾಗಿದೆ. ಆದರೆ ವಿಶೇಷ ಗುಣಗಳಿರುವ ʻದ ಪೋಸ್ಟ್ʼ ಪ್ರತ್ಯೇಕತೆಯನ್ನು ಹೊಂದಿರುವುದಕ್ಕೆ ಆ ಬಗೆಯ ಆಶಯ ಹೊಂದಿದ ನಿರ್ದೇಶಕ ಸ್ಪೀಲ್ ಬರ್ಗ್ ಮತ್ತು ನಟವರ್ಗ ಕಾರಣ, ಇದರಿಂದ ಅದಕ್ಕೆ ಲಭಿಸಿದ ಮನ್ನಣೆ ಹಾಗೂ ಪ್ರಶಸ್ತಿಗಳು ನಿಜಕ್ಕೂ ಅರ್ಥಪೂರ್ಣ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.