ಸರ್ ಐಸಾಕ್ ನ್ಯೂಟನ್ ಹೊಸ ಬದುಕಿನ ಹುಡುಕಾಟದಲ್ಲಿ ಲಂಡನ್ ಗೆ ಬಂದಮೇಲೆ, ಹಿಂದಿನ ಸೈದ್ಧಾಂತಿಕ ಅನ್ವೇಷಕ ವೃತ್ತಿಗಿಂತ ಸಂಪೂರ್ಣ ಭಿನ್ನವಾದ ವೃತ್ತಿ ಆರಂಭಿಸುವ ಅವಕಾಶ ಸಿಕ್ಕಿತು. “ರಾಯಲ್ ಮಿಂಟ್” ಎನ್ನುವ ಸರಕಾರಿ ಸ್ವಾಮ್ಯದ ನಾಣ್ಯ ತಯಾರಿ ಕಂಪೆನಿಯ ಉದ್ಯೋಗಿಯಾದ. ಮಿಂಟ್ ಕಂಪೆನಿಯ ಮತ್ತು ಬ್ರಿಟನ್ನಿನ ಆರ್ಥಿಕ ಸ್ಥಿತಿಯೂ ಆ ಸಮಯದಲ್ಲಿ ಹದಗೆಟ್ಟಿತ್ತು. ಕಳ್ಳನಾಣ್ಯಗಳು ಎಲ್ಲೆಲ್ಲೂ ಚಲಾವಣೆಯಲ್ಲಿದ್ದವು. ಬಳಕೆಯಲ್ಲಿದ್ದ ನಾಣ್ಯಗಳಲ್ಲಿ ಐದರಲ್ಲಿ ಒಂದು ನಕಲಿ ಆಗಿರುತ್ತಿತ್ತು. ಮಿಂಟ್ ನ ಮೇಲ್ವಿಚಾರಕನಾಗಿ ಖೋಟಾ ಹಣದ ಜಾಲವನ್ನು ನ್ಯೂಟನ್ ಸಮರ್ಥವಾಗಿ ಪ್ರತಿಬಂಧಿಸಿದ.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಸರ್ ಐಸಾಕ್ ನ್ಯೂಟನ್‌ರ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ
ಇದೀಗ ಲಂಡನ್ನಿನ “ಬ್ರಿಟಿಷ್ ಲೈಬ್ರರಿ”ಯ ಒಳಹೊಕ್ಕುವ ತಯಾರಿಯಲ್ಲಿ ನೀವಿದ್ದರೆ ಇವನ ಉಪಸ್ಥಿತಿಯನ್ನು ಗಮನಿಸದೇ ಮುಂದುವರಿಯುವುದು ಸಾಧ್ಯ ಇಲ್ಲ. ಹಾಗಂತ ಹತ್ತಿರ ಯಾರು ಬಂದರೂ ಏನು ಘಟಿಸಿದರೂ ಇವನಂತೂ ಲಕ್ಷಿಸುವವನೂ ಅಲ್ಲ. ಸುತ್ತಲಿನ ಬಗೆಗಿನ ದಿವ್ಯ ಘನ ನಿರ್ಲಕ್ಷ್ಯವೇ ಆತ ಮಾಡಿದ ಅದ್ಭುತ ಆವಿಷ್ಕಾರಗಳಿಗೂ ಹಾಗು ಅವನ ಕುರಿತಾದ ಕಟು ಟೀಕೆಗಳಿಗೂ ಕಾರಣ ಇರಬೇಕು. ಇರಲಿ ಬಿಡಿ, ಇಲ್ಲೀತ ಹನ್ನೆರಡು ಅಡಿ ಎತ್ತರದ ಕಂಚಿನ ದೇಹವನ್ನು ಕುಳಿತಲ್ಲಿಂದಲೇ ಮುಂದೆ ಬಾಗಿಸಿ ತನ್ನದೇ ಲೋಕದಲ್ಲಿ ಮಗ್ನವಾಗಿದ್ದಾನೆ.
ಬ್ರಿಟಿಷ್ ಲೈಬ್ರರಿಯ ಮುಂದೆ 1995ರಲ್ಲಿ ಜೀವಪಡೆದ ಈ ಪ್ರತಿಮಾಪುರುಷ ಹುಟ್ಟಿದ್ದು 1642ರಲ್ಲಿ ಇಲ್ಲಿಂದ ತುಸು ದೂರದ ಲ್ಯಾಂಕಾಶೈರ್ ಪ್ರಾಂತ್ಯದಲ್ಲಿ. ಲಂಡನ್ ನಿಂದ 180 ಕಿಲೋಮೀಟರ್ ಉತ್ತರಕ್ಕೆ. ಲಂಡನ್ ಗೆ ಬಂದಿದ್ದು 1696ರಲ್ಲಿ. ಇದೀಗ ಬ್ರಿಟಿಷ್ ಲೈಬ್ರರಿಯ ಮುಂದೆ ನಿತ್ಯ ಕಾಣಿಸುವಾತ ಎಡಗೈಯಲ್ಲಿ ಹಿಡಿದ ಕೈವಾರದಿಂದ ನೆಲದ ಮೇಲೆ ಏನನ್ನೋ ಅಳೆಯುತ್ತಿದ್ದಾನೆ ಅಥವಾ ಏನನ್ನೋ ಬರೆಯುತ್ತಿದ್ದಾನೆ… ಕಣ್ಣುಗಳಿಂದ ಶೋಧಿಸುತ್ತಿದ್ದಾನೆ. ಅಂಗಾಗಗಳೆಲ್ಲ ಯಂತ್ರದ ಭಾಗಗಳಂತೆ ಇದ್ದು, ಬೋಲ್ಟು ನಟ್ಟುಗಳಿಂದ ಜೋಡಿಸಲಾಗಿದೆ. ಪ್ರಕೃತಿ ಮತ್ತು ವಿಜ್ಞಾನಗಳ ನಡುವಿನ ಹದಬೆರಕೆ ಎಂದರೆ ಹೀಗೆ ಇರಬೇಕು. ಎಡ್ವಾರ್ಡೊ ಪಾವಲೋಝಿ ಎನ್ನುವ ಶಿಲ್ಪಿ ನಿರ್ಮಿಸಿದ ಈ ಕಂಚಿನ ಮೂರ್ತಿ- ಸರ್ ಐಸಾಕ್ ನ್ಯೂಟನ್ ನದು.
ಪಾವಲೋಝಿ ನಿರ್ಮಿಸಿದ ಈ ಪ್ರತಿಮೆ, ಹಿಂದೆ ಪ್ರಸಿದ್ಧ ಕವಿ, ಚಿತ್ರಕಾರ ವಿಲಿಯಂ ಬ್ಲೇಕ್ ನ ಜಲವರ್ಣಚಿತ್ರದಿಂದ ಸ್ಪೂರ್ತಿ ಪಡೆದದ್ದು. ಬ್ಲೇಕ್ ನ ಮೂಲ ಚಿತ್ರಕಲೆಯಲ್ಲಿ ನಿಸರ್ಗದ ವೈಭವ ನ್ಯೂಟನ್ ನನ್ನು ಸುತ್ತುವರಿದಿದೆ. ಆದರೆ ನ್ಯೂಟನ್, ಆಸನದಿಂದ ಮುಂದೆ ಬಾಗಿ ತದೇಕಚಿತ್ತನಾಗಿ ಹಾಳೆಯ ಮೇಲೆ ಕೈವಾರ ಇಟ್ಟು ಸಂಕೀರ್ಣ ವಿಶಾಲ ಪ್ರಪಂಚವನ್ನು, ಗಣಿತ ಶಾಸ್ತ್ರದ ಹುಲು ರೇಖೆ ಆಕೃತಿಗಳ ಮೂಲಕ ಅಭಿವ್ಯಕ್ತಿಸುವ ಪ್ರಯತ್ನದಲ್ಲಿದ್ದಾನೆ. ಬ್ಲೇಕ್ ಚಿತ್ರ ಬರೆದ ಎರಡು ಶತಮಾನಗಳ ನಂತರ ಸಿದ್ಧವಾದ ಪಾವಲೋಝಿಯ ಶಿಲ್ಪಕಲಾಕೃತಿ, ಬ್ಲೇಕ್ ಹಾಗು ನ್ಯೂಟನ್ ಇಬ್ಬರಿಂದಲೂ ಪ್ರಭಾವಿತವಾಗಿದೆ. ಒಬ್ಬ ವಿಜ್ಞಾನದ ಅವಧೂತ ಇನ್ನೊಬ್ಬ ಕಾವ್ಯದ ಪ್ರತಿನಿಧಿ. ಬ್ರಿಟಿಷ್ ಲೈಬ್ರರಿಯ ಮುಂದೆ ಪ್ರತಿಷ್ಠಾಪನೆಯಾಗಿರುವ ಪ್ರತಿಮೆ ಇವರಿಬ್ಬರ ಸಮಾಗಮ ಆಗುವುದೇ ಸೂಕ್ತ ಎಂದು ಪಾವಲೋಝಿಗೆ ಅನಿಸಿತು. ಆದರೆ ಬ್ಲೇಕ್ ನ ಚಿತ್ರ, ಪ್ರಕೃತಿಯನ್ನು ಗಣಿತದೊಳಗೆ ತರುವ ಹುಚ್ಚು ಪ್ರಯತ್ನದಲ್ಲಿರುವ ನ್ಯೂಟನ್ ನ ವಿಡಂಬನೆ ಎಂದು ವಿಶ್ಲೇಷಿಸುತ್ತಾರೆ.
ಸಾಮಾನ್ಯವಾಗಿ ಕಲ್ಪನೆಗೆ ಬರುವ ವೃದ್ಧ ನ್ಯೂಟನ್ ನ ಬದಲಿಗೆ ಕಟ್ಟುಮಸ್ತಾದ ಯುವ ವಿಜ್ಞಾನಿ, ಸಮುದ್ರ ತಳದಲ್ಲಿ ಪಾಚಿಕಟ್ಟಿದ ಕಲ್ಲುಬಂಡೆಯ ಮೇಲೆ ನಗ್ನನಾಗಿ ಕುಳಿತಿದ್ದಾನೆ. ಸಂಪೂರ್ಣ ಗಮನ ಕಂಪಾಸ್ ಹಿಡಿದು ತ್ರಿಕೋನ ವೃತ್ತ ಎಳೆಯುವುದರಲ್ಲೇ ಇದೆ. ಬ್ಲೇಕ್ ನ ಕಟು ವಿಮರ್ಶೆಯಲ್ಲಿ ನ್ಯೂಟನ್, ಸಂಕುಚಿತ ವೈಜ್ಞಾನಿಕ ಯೋಚನೆಗಳಲ್ಲಿ ಬಂಧಿಯಾದ, ತಾನು ಬಿಡಿಸುತ್ತಿರುವ ರೇಖಾಗಣಿತದ ಸಣ್ಣ ಲೋಕದಲ್ಲಿ ಮುಳುಗಿರುವ, ಸುತ್ತಲಿನ ವರ್ಣಮಯ ಪ್ರಪಂಚದ ಬಗ್ಗೆ ಕುರುಡಾದ ವ್ಯಕ್ತಿ. ಹಾಗಂತ ಪಾವಲೋಝಿ ನಿರ್ಮಿಸಿದ ಪ್ರತಿಮೆ, ಬ್ಲೇಕ್ ಹಾಗು ನ್ಯೂಟನ್ ಎನ್ನುವ ಇಬ್ಬರು ಅಸಾಧಾರಣ ಬ್ರಿಟಿಷ್ ಮೇಧಾವಿಗಳ ಮಿಲನ. ಜೊತೆಯಾಗಿ ಇವರಿಬ್ಬರೂ ಪ್ರಕೃತಿ, ವಿಜ್ಞಾನ, ಕಾವ್ಯ, ಕಲೆ, ಶಿಲ್ಪಕಲೆ ಎಲ್ಲವನ್ನೂ ಬೆಸೆದವರು ಎನ್ನುವ ಕಾರಣಕ್ಕೆ ಮೂಳೆ ಮಾಂಸ ಚರ್ಮಗಳಿಂದ ಮಾಡಿದ ದೇಹವನ್ನು ಯಾಂತ್ರಿಕ ಜೋಡಣೆಯ ಮೂಲಕ ಕೂಡಿಸಿದ, ಪ್ರಕೃತಿ-ವಿಜ್ಞಾನಗಳ ಸಮಾಗಮ.
1795ರಲ್ಲಿ ಬ್ಲೇಕ್ ಬಿಡಿಸಿದ ಚಿತ್ರ ಹಾಗು 1995ರಲ್ಲಿ ಪಾವಲೋಝಿಯ ಕಲ್ಪನೆಯಲ್ಲಿ ಆಕೃತಿ ಪಡೆದ ಪ್ರತಿಮೆ ಎರಡೂ ನ್ಯೂಟನ್ ನನ್ನು ಕಲಾತ್ಮವಾಗಿ ಪ್ರತಿನಿಧಿಸುವ ಪ್ರಯತ್ನವನ್ನೇನೋ ಮಾಡುತ್ತವೆ. ಆದರೆ ನ್ಯೂಟನ್ ಲಂಡನ್ನಿನ ಕಲಾ ಜೀವಂತಿಕೆ, ನಾಟಕ, ಸಂಗೀತಗಳಲ್ಲಿ ಯಾವುದೇ ಆಸಕ್ತಿ ಇದ್ದವನಲ್ಲ. ಆತನ ಗೆಳೆಯ ಹೇಳುವಂತೆ ಒಮ್ಮೆ ಒಂದು ಸಂಗೀತ ನಾಟಕ ನೋಡುವ ಅಂತ ಹೋದವನು ನಡುವೆಯೇ ಎದ್ದು ಓಡಿ ಬಂದನಂತೆ, ನ್ಯೂಟನ್ ನೋಡಿದ ಮೊದಲ ಹಾಗು ಕೊನೆಯ ಕಲಾ ಪ್ರದರ್ಶನ ಅದು. ಬ್ಲೇಕ್ ನಂತಹ ಮಹಾನ್ ಸಾಹಿತಿಯನ್ನು ನ್ಯೂಟನ್ ಪ್ರಚೋದಿಸಿ ಪ್ರೇರೇಪಿಸಿದರೂ ಯಾವುದೇ ಬಗೆಯ ಸಾಹಿತ್ಯ ಮತ್ತು ಕಾವ್ಯ ನ್ಯೂಟನ್ ಮೇಲೆ ಪರಿಣಾಮ ಬೀರಲಿಲ್ಲ. ಬದಲಿಗೆ ಅವೆಲ್ಲ ಹುರುಳಿಲ್ಲದ ಅಥವಾ ಅಸಂಬದ್ಧ ಕೌಶಲ ಜಾಣ್ಮೆಗಳಾಗಿ ನ್ಯೂಟನ್ ನಿಗೆ ಕಂಡಿತು. ವೇಲ್ಸ್ ನ ಪೆಮ್ಬ್ರೋಕ್ ಪ್ರಾಂತ್ಯದ ಗಣ್ಯ ವ್ಯಕ್ತಿಯೊಬ್ಬನ ಬಳಿ ಇದ್ದ ಶಿಲಾಪ್ರತಿಮೆಗಳ ಸಂಗ್ರಹವನ್ನು ನೋಡಿ “ಆತನೊಬ್ಬ ಕಲ್ಲಿನ ಗೊಂಬೆಗಳ ಪ್ರೇಮಿ” ಎಂದು ನಿರಾಸಕ್ತಿಯಿಂದ ಉದ್ಗರಿಸಿದ್ದ. ಲಂಡನ್ ಗೆ ವಲಸೆ ಬರುವ ಮೊದಲು ಕೇಂಬ್ರಿಜ್‌ನಲ್ಲಿ ಪ್ರೊಫೆಸರ್ ಆಗಿದ್ದ ಕಾಲದಲ್ಲಿ ಖಾಸಗಿ ಖಾಲಿ ಸಮಯವನ್ನು ಆಧ್ಯಾತ್ಮಿಕ ಓದಿಗೆ ಮೀಸಲಿಡುತ್ತಿದ್ದ. ಹಾಗಂತ ಆತನ ಬದುಕಲ್ಲಿ ಯಾವುದೇ ಬಗೆಯ ಸೌಂದರ್ಯ ಪ್ರಜ್ಞೆಯೇ ಇರಲಿಲ್ಲವೆಂದಲ್ಲ. ತನ್ನ ಮನೆಯನ್ನು ಸಜ್ಜುಗೊಳಿಸುವಾಗ ಕೆಂಪು ಬಣ್ಣದ ಬಗೆಗೆ ಆತನಿಗಿದ್ದ ಪ್ರೀತಿ ನಿಚ್ಚಳವಾಗಿ ಕಾಣಿಸುತ್ತಿತ್ತು. ಪರದೆ, ಹಾಸಿಗೆ, ಸೋಫಾ ಎಲ್ಲವೂ ಕಡು ಕೆಂಪು ಬಣ್ಣದ್ದಾಗಿದ್ದವು. ಆತನ ವಾರಿಸಿನ ಸಾಮಾನುಗಳ ಪಟ್ಟಿಯಲ್ಲಿ ಉಲ್ಲೇಖಗೊಳ್ಳುವ ಏಕೈಕ ಬಣ್ಣ ಕೆಂಪು ಆಗಿತ್ತು.
ಭೌತಜಗತ್ತಿನ ಬಗೆಗಿನ ಸಾಮಾನ್ಯರ ತಿಳುವಳಿಕೆಗಳಿಂದ ಹಿಡಿದು ಮಹಾನ್ ಸಂಶೋಧಕರ ಅಭಿಪ್ರಾಯಗಳ ತನಕ ತೀವ್ರವಾಗಿ ಪ್ರಭಾವಿಸಿದ ನ್ಯೂಟನ್ ನ ಹೆಸರನ್ನು ಕೇಳದವರು ಇರಲಿಕ್ಕಿಲ್ಲ. ಗುರತ್ವಾಕರ್ಷಣ ಸಿದ್ಧಾಂತ ಹಾಗು ಚಲನೆಯ ನಿಯಮಗಳ ಕುರಿತು ಯಾರೇ ಮಾತನಾಡಿದರೂ ಅಲ್ಲಿ ನ್ಯೂಟನ್ ಮತ್ತೆ ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರೊಫೆಸರ್ ದಿರಿಸಿನಲ್ಲಿ ಎದುರು ಬಂದು ನಿಲ್ಲುತ್ತಾನೆ. ಲ್ಯಾಂಕಾಶೈರ್ ಅಲ್ಲಿ ಹುಟ್ಟಿ ಕೇಂಬ್ರಿಜ್ ಅಲ್ಲಿ ಶಿಕ್ಷಣ ಪಡೆಯುತ್ತಿದ್ದ ನ್ಯೂಟನ್, 1665ರಲ್ಲಿ ಪ್ಲೇಗ್ ಮಾರಿ ಆವರಿಸಿಕೊಂಡಾಗ ಮನೆಗೆ ಮರಳಿ ಏಕಾಂತದಲ್ಲಿ ಓದು ಮುಂದುವರಿಸಬೇಕಾಯಿತು. ನಾಲ್ಕು ಶತಮಾನಗಳ ಹಿಂದೆ ಸಾಂಕ್ರಾಮಿಕ ರೋಗ ಆವರಿಸಿದಾಗಿನ “ಮನೆ ಶಾಲೆ” ಅದು. ಮುಂದಿನ ಎರಡು ವರ್ಷಗಳು ಅವನಲ್ಲಿ ಕೆಲವು ಅಸಾಮಾನ್ಯ ವಿಚಾರಗಳು ಹುಟ್ಟಿದವು. ಕಲನಶಾಸ್ತ್ರ (ಕ್ಯಾಲ್ಕ್ಯುಲಸ್), ದೃಗ್ ವಿಜ್ಞಾನ (ಆಪ್ಟಿಕ್ಸ್), ಗುರುತ್ವಾಕರ್ಷಣೆ, ಹಾಗು ಚಲನೆಯ ಕುರಿತಾಗಿ ಹೊಳಹುಗಳು ಹೊಮ್ಮಿದವು. ಸುಮಾರು ಇಪ್ಪತ್ತು ವರ್ಷಗಳ ಚಿಂತನ ಮಂಥನ ಶೋಧನ ಅನ್ವೇಷಣಗಳ ಫಲವಾಗಿ ಪುಸ್ತಕ ರೂಪದಲ್ಲಿ ಸಿದ್ಧಾಂತಗಳು ಹೊರಬಂದು ಜನಪ್ರಿಯವಾದವು. ಈಗ ನಾವು ಓದುವ ಭೌತ ಶಾಸ್ತ್ರದ ತಳಹದಿಯಾದವು.
ಬ್ಲೇಕ್ ನ ಕಟು ವಿಮರ್ಶೆಯಲ್ಲಿ ನ್ಯೂಟನ್, ಸಂಕುಚಿತ ವೈಜ್ಞಾನಿಕ ಯೋಚನೆಗಳಲ್ಲಿ ಬಂಧಿಯಾದ, ತಾನು ಬಿಡಿಸುತ್ತಿರುವ ರೇಖಾಗಣಿತದ ಸಣ್ಣ ಲೋಕದಲ್ಲಿ ಮುಳುಗಿರುವ, ಸುತ್ತಲಿನ ವರ್ಣಮಯ ಪ್ರಪಂಚದ ಬಗ್ಗೆ ಕುರುಡಾದ ವ್ಯಕ್ತಿ. ಹಾಗಂತ ಪಾವಲೋಝಿ ನಿರ್ಮಿಸಿದ ಪ್ರತಿಮೆ, ಬ್ಲೇಕ್ ಹಾಗು ನ್ಯೂಟನ್ ಎನ್ನುವ ಇಬ್ಬರು ಅಸಾಧಾರಣ ಬ್ರಿಟಿಷ್ ಮೇಧಾವಿಗಳ ಮಿಲನ.
ಕೇಂಬ್ರಿಜ್‌ನಲ್ಲಿ ಓದಿದ ನ್ಯೂಟನ್ ಅಲ್ಲಿಯೇ ಪ್ರೊಫೆಸರ್ ಆಗಿ ಕೆಲಸ ಮಾಡಿದ. ನಂತರದ ಲಂಡನ್ ನ ಬದುಕನ್ನು ನ್ಯೂಟನ್ ನ ಎರಡನೆಯ ಜನ್ಮ ಅಥವಾ ಹೊಸ ಅಧ್ಯಾಯ ಎನ್ನಬಹುದು. ವಿಶ್ವವಿದ್ಯಾಲಯದ ಜೀವನವನ್ನು ತೊರೆದು ಲಂಡನ್ನಿನಲ್ಲಿ ಪಾಠ, ಅಧ್ಯಯನ ಹಾಗು ಶೋಧನೆಗಳಿಂದ ದೂರವಾದ ಬದುಕನ್ನು ಯಾಕೆ ಆಯ್ದುಕೊಂಡ ಎನ್ನುವುದು ನ್ಯೂಟನ್ ನನ್ನು ಓದುವ ತಿಳಿಯುವ ಎಲ್ಲರಿಗೂ ಕಾಡುವ ಪ್ರಶ್ನೆಯೇ.
1696ರಲ್ಲಿ, ಐವತ್ತೈದರ ನ್ಯೂಟನ್ ಪಾಂಡಿತ್ಯಪೂರ್ಣ ದಿನಚರಿಯ ಕೇಂಬ್ರಿಜ್ ವಿದ್ಯಾಲಯದ ಬದುಕನ್ನು ತೊರೆದು ಲಂಡನ್ನಿನ ಸಾರ್ವಜನಿಕ ಜೀವನಕ್ಕೆ ವಲಸೆ ಹೋದ. ಯುನಿವರ್ಸಿಟಿಯ ಪ್ರೊಫೆಸರ್ ಆಗಿದ್ದ ನ್ಯೂಟನ್ ವಿಲಕ್ಷಣ ಮರೆಗುಳಿ ಮಹಾಮೇಧಾವಿಯಾಗಿದ್ದ. ಸಹೋದ್ಯೋಗಿಗಳು ವಿದ್ಯಾರ್ಥಿಗಳು ಆತನನ್ನು ಗಾಢ ಯೋಚನೆಗಳಲ್ಲಿ ಕಳೆದುಹೋಗಿ, ಅಸ್ತವ್ಯಸ್ತ ಬಟ್ಟೆ ಧರಿಸಿ ಬರುವ, ಊಟ ತಿಂಡಿಗಳನ್ನು ಮರೆಯುವ ವ್ಯಕ್ತಿಯಾಗಿ ಗುರುತಿಸುತ್ತಿದ್ದರು. ನ್ಯೂಟನ್ ನ ವಲಸೆಗೆ ಒಂದು ಕಾರಣ ಆ ಕಾಲಕ್ಕೆ ಕಾಣಿಸಿಕೊಂಡ ನರವೈಫಲ್ಯತೆ. ತನ್ನ ಆಸಕ್ತಿಯ ರಸವಿದ್ಯೆ, ಧರ್ಮಶಾಸ್ತ್ರ, ಭೌತವಿಜ್ಞಾನ ಇತ್ಯಾದಿ ವಿಷಯಗಳ ಬಗೆಗೆ ಅತಿಯಾಗಿ ಅಂದರೆ ವಿರಾಮ ಇಲ್ಲದೆ ಅಧ್ಯಯನ ಮಾಡುತ್ತಿದ್ದ. 1693ರಲ್ಲಿ ನರವೈಫಲ್ಯ ಆಗುವ ಮೊದಲಿನ ಐದು ಹಗಲು ರಾತ್ರಿ ಕಣ್ಣೆವೆ ಇಕ್ಕದೇ ಓದುತ್ತಿದ್ದ. ಆರೋಗ್ಯವನ್ನು ಸುಧಾರಿಸಿಕೊಳ್ಳವುದಕ್ಕಾಗಿ ತನ್ನ ಸಂಶೋಧಕ ಅಧ್ಯಯನಶೀಲ ಸೃಜನಶೀಲ ಬದುಕಿನಿಂದ ವಿಮುಖನಾಗಿ ಹೊಸ ಹಾದಿಯನ್ನು ಅರಸಿದ. ಕೇಂಬ್ರಿಜ್ ದಿನಗಳಲ್ಲಿ ಯಾವುದೇ ಮೂಲಭೂತ ಸಿದ್ಧಾಂತಗಳಿಗೆ ಬದ್ಧನಾಗದ ಅಚಲ ನಿಲುಮೆ, ಕೆಲವು ಆಪ್ತ ಗೆಳೆಯರ ಜೊತೆಗಿನ ಅವಿಶ್ವಾಸ ಸಂಶಯಗಳು ಕೂಡ ಬದಲಿ ಸ್ಥಳ ಉದ್ಯೋಗವನ್ನು ಆಯ್ದುಕೊಳ್ಳಲು ಕಾರಣವಾಗಿದ್ದವು.
ಹೊಸ ಬದುಕಿನ ಹುಡುಕಾಟದಲ್ಲಿ ಲಂಡನ್ ಗೆ ಬಂದಮೇಲೆ, ಹಿಂದಿನ ಸೈದ್ಧಾಂತಿಕ ಅನ್ವೇಷಕ ವೃತ್ತಿಗಿಂತ ಸಂಪೂರ್ಣ ಭಿನ್ನವಾದ ವೃತ್ತಿ ಆರಂಭಿಸುವ ಅವಕಾಶ ಸಿಕ್ಕಿತು, “ರಾಯಲ್ ಮಿಂಟ್” ಎನ್ನುವ ಸರಕಾರಿ ಸ್ವಾಮ್ಯದ ನಾಣ್ಯ ತಯಾರಿ ಕಂಪೆನಿಯ ಉದ್ಯೋಗಿಯಾಗಿ. ಕ್ರಿಸ್ತಶಕ 886ರಲ್ಲಿ ಪ್ರಾರಂಭಗೊಂಡು ದೀರ್ಘ ಇತಿಹಾಸ ಇರುವ ಮಿಂಟ್ ಕಂಪೆನಿಯ ಮಾತ್ರವಲ್ಲದೇ ಬ್ರಿಟನ್ನಿನ ಆರ್ಥಿಕ ಸ್ಥಿತಿಯೂ ಆ ಸಮಯದಲ್ಲಿ ಹದಗೆಟ್ಟಿತ್ತು. ಕಳ್ಳನಾಣ್ಯಗಳು ಎಲ್ಲೆಲ್ಲೂ ಚಲಾವಣೆಯಲ್ಲಿದ್ದವು. ಬಳಕೆಯಲ್ಲಿದ್ದ ನಾಣ್ಯಗಳಲ್ಲಿ ಐದರಲ್ಲಿ ಒಂದು ನಕಲಿ ಆಗಿರುತ್ತಿತ್ತು. ಮಿಂಟ್ ನ ಮೇಲ್ವಿಚಾರಕನಾಗಿ ಖೋಟಾ ಹಣದ ಜಾಲವನ್ನು ನ್ಯೂಟನ್ ಸಮರ್ಥವಾಗಿ ಪ್ರತಿಬಂಧಿಸಿದ. ಹಿನ್ನೆಲೆಯಲ್ಲಿದ್ದ ವ್ಯಕ್ತಿಗಳನ್ನು ಶೋಧಿಸಿ ಬಂಧಿಸಿ ಶಿಕ್ಷೆಗೆ ಒಳಗಾಗುವಂತೆ ಮಾಡಿದ. ನಾಣ್ಯಗಳ ಗುಣಮಟ್ಟ ಪರೀಕ್ಷೆಯನ್ನು ಸುಧಾರಿಸಿದ. ನಾಣ್ಯದ ತಯಾರಿಯಲ್ಲಿ ಬಳಕೆಯಾಗುವ ತೂಕ ಹಾಗು ಅಳತೆಗಳನ್ನು ಪರಿಷ್ಕರಿಸಿದ. ಇಂತಹ ಪರಿವರ್ತನೆಗಳ ಕಾರಣಕ್ಕೆ ಮಿಂಟ್ ನ ಸರ್ವೋನ್ನತ ಅಧಿಕಾರಿಯಾಗಿ ಭಡ್ತಿ ಪಡೆದ. ಈ ಸ್ಥಾನ ನ್ಯೂಟನ್ ಗೆ ರಾಜಕೀಯ ಪ್ರಭಾವವನ್ನೂ ನೀಡಿತು.
1707ರಲ್ಲಿ ಸ್ಕಾಟ್ಲೆಂಡ್ ನ ನಾಣ್ಯಗಳನ್ನು ಇಂಗ್ಲೆಂಡ್ ನ ತಯಾರಿಯ ಕ್ರಮಕ್ಕೆ ಬದಲಾಯಿಸಿದ. ನಾಣ್ಯತಯಾರಿಯ ನಿಖರತೆಯನ್ನು ಹೆಚ್ಚಿಸಿದ. ನಾಣ್ಯ ಉತ್ಪಾದನೆಯಲ್ಲಿ “ರಾಯಲ್ ಮಿಂಟ್”ಗೆ ಈಗಲೂ ಇರುವ ಪ್ರಸಿದ್ಧಿಯ ಹಿಂದೆ ಅಂದು ನ್ಯೂಟನ್ ತಂದ ಸುಧಾರಣೆಗಳು ಕೂಡ ದುಡಿದಿವೆ.
ಮೊದಲ ಐದು ವರ್ಷಗಳ ಕಾಲ ಲಂಡನ್ ವಾಸದಲ್ಲಿಯೇ ನ್ಯೂಟನ್ ವಿಜ್ಞಾನ ಬೋಧನಾ ಸಂಶೋಧನಾ ಕ್ಷೇತ್ರದಿಂದ ಪೂರ್ತಿ ಹೊರಬಂದು ಪ್ರಭಾವಿ ರಾಜಕೀಯ ವ್ಯಕ್ತಿಯಾಗಿ ಬೆಳೆದಿದ್ದ. 1689-1690 ಹಾಗು 1701-1702, ಎರಡು ಅವಧಿಗಳಲ್ಲಿ ಸಂಸತ್ ನ ಕೆಳಮನೆಯ ಸದಸ್ಯನ ಜವಾಬ್ದಾರಿಯನ್ನೂ ನಿರ್ವಹಿಸಿದ. ಮರು ವರ್ಷ ಬ್ರಿಟನ್ನಿನ ಪ್ರತಿಷ್ಠಿತ ವಿಜ್ಞಾನ ಸಂಸ್ಥೆ “ರಾಯಲ್ ಸೊಸೈಟಿ ಆಫ್ ಲಂಡನ್” ನ ಅಧ್ಯಕ್ಷನಾಗಿ ನಿಯೋಜಿತನಾದ. 1660ರಲ್ಲಿ ಸ್ಥಾಪಿತವಾದ ರಾಯಲ್ ಸೊಸೈಟಿ, ಜಗತ್ತಿನ ವೈಜ್ಞಾನಿಕ ಚಿಂತಕರು, ಸಂಶೋಧನೆಗಳನ್ನು ಅನುಭವ ಅಭಿಪ್ರಾಯಗಳನ್ನು ಪ್ರಕಟಿಸುವ ವೇದಿಕೆಯಾಗಿತ್ತು. 17ನೆಯ ಶತಮಾನದ ಕೊನೆಗೆ ಕಾರ್ಯಕ್ರಮಗಳು ನಿಧಾನಗೊಂಡು, ನಾಯಕತ್ವದ ಕೊರತೆಯಿಂದ ಸದಸ್ಯರ ಸಂಖ್ಯೆ ಹಿಂದಿಗಿಂತ ಕಡಿಮೆ ಆಗಿತ್ತು. ನ್ಯೂಟನ್ ನ ನಿಯುಕ್ತಿ ಅವಿರೋಧ ಅಲ್ಲದಿದ್ದರೂ, ಆತನ ಆಡಳಿತ ಕೌಶಲ ಹಾಗು ಸಾಮರ್ಥ್ಯದಿಂದ ಸೊಸೈಟಿಯ ಚಟುವಟಿಕೆಗಳು ಮತ್ತೆ ಉತ್ತೇಜನ ಕಂಡವು. ಹಿಂದಿನ ಅಧ್ಯಕ್ಷರಂತಲ್ಲದ ನ್ಯೂಟನ್ ಎಲ್ಲ ಕೌನ್ಸಿಲ್ ಸಭೆಗಳಲ್ಲೂ ಮುತುವರ್ಜಿಯಿಂದ ಭಾಗವಹಿಸುತ್ತಿದ್ದ. ಹೊಸ ಸಂಶೋಧನಾ ವಿಭಾಗಗಳನ್ನು ಆರಂಭಿಸಿದ. ವಿದ್ಯುತ್ ಶಕ್ತಿ ಕಣ್ಣಿಗೆ ಕಾಣುವಂತಹ ಮೊದಲ ಸಾರ್ವಜನಿಕ ಪ್ರದರ್ಶನ ಆ ಸಮಯದಲ್ಲೇ ನಡೆಯಿತು.
ರಾಯಲ್ ಸೊಸೈಟಿ ಗೆ ನ್ಯೂಟನ್ ಕಾಲದಲ್ಲಿ ಸ್ಥಿರತೆ ಬಂತು. 24 ವರ್ಷಗಳ ಕಾಲ, ಸಾವಿನ ತನಕವೂ ಅಧ್ಯಕ್ಷನಾಗಿ ಮುಂದುವರಿದ. 1705ರಲ್ಲಿ ಜೀವಮಾನದ ಸಾಧನೆಗಾಗಿ ಪ್ರತಿಷ್ಠಿತ “ನೈಟ್ ಹುಡ್” ಪಡೆದು “ಸರ್” ಆದ. ವಿಜ್ಞಾನಿ, ಓದುಗ, ಆಧ್ಯಾತ್ಮ ಜೀವಿ, ಸಾರ್ವಜನಿಕ ವ್ಯಕ್ತಿ, ಆಡಳಿತಗಾರ ಹೀಗೆ ಬಹುಮುಖಿ ಹಾಗು ಪ್ರಸಿದ್ಧ ವ್ಯಕ್ತಿತ್ವದ ನ್ಯೂಟನ್ ನನ್ನು ಮರಣಾನಂತರ ಆಡಂಬರದ ಆಚರಣೆಗಳೊಡನೆ ಲಂಡನ್ ನ ವೆಸ್ಟ್ ಮಿನಿಸ್ಟರ್ ಆ್ಯಬಿಯಲ್ಲಿ ಹೂಳಲಾಯಿತು (ಲಂಡನ್ ಅಲ್ಲಿರುವ ಕೈಸ್ತ ಧಾರ್ಮಿಕ ಸ್ಥಳ), ಸ್ಮಾರಕವನ್ನು ಕಟ್ಟಲಾಯಿತು.
ನ್ಯೂಟನ್ ನ ಸಿದ್ಧಾಂತಗಳು ಹದಿನೆಂಟನೆಯ ಶತಮಾನದ ವೈಜ್ಞಾನಿಕ ಚಿಂತನೆಗಳನ್ನು ತೀವ್ರವಾಗಿ ಪ್ರಭಾವಿಸಿದವು. ಲಂಡನ್ನಿನ ಕಾಫಿ ಅಂಗಡಿಗಳಿಂದ ಹಿಡಿದು, ಉಪನ್ಯಾಸ ಸಭೆಗಳು, ವಿಜ್ಞಾನ ಪಂಡಿತರ ಸೊಸೈಟಿಗಳಲ್ಲಿ ಚರ್ಚಿತವಾದವು. ನ್ಯೂಟನ್ ನ ಸಾಂಸ್ಕೃತಿಕ ಪ್ರಭಾವ ಇಂದಿಗೂ ಲಂಡನ್ನಿನಲ್ಲಿ ಅನುಭವಕ್ಕೆ ಬರುತ್ತದೆ. ಬ್ರಿಟನ್ನಿನ ಬಹುಶ್ರುತ ಪುಸ್ತಕಾಲಯವಾದ “ಬ್ರಿಟಿಷ್ ಲೈಬ್ರರಿ” ಯ ಎದುರು ಬ್ಲೇಕ್ ಮತ್ತು ಪಾವಲೋಝಿ ಬೇರೆಬೇರೆ ಕಾಲದಲ್ಲಿ ಕಲ್ಪಿಸಿದಂತೆ, ಯಾರನ್ನೂ ಯಾವುದನ್ನೂ ಗಮನಿಸದೆ ಜಗತ್ತನ್ನು ತನ್ನ ಗಣಿತದ ಲೆಕ್ಕಾಚಾರದಲ್ಲಿ ತರುವ ಯತ್ನದಲ್ಲಿ ಈಗಲೂ ಮುಳುಗಿದ್ದಾನೆ. ಲಂಡನ್ ನ ಲ್ಲಿ ನ್ಯೂಟನ್ ಮೊದಲ ತಂಗಿದ್ದು ಜೆರ್ಮಿನ್ ರಸ್ತೆಯ 88 ನಂಬರದ ಮನೆಯಲ್ಲಿ, ಮಿಂಟ್ ಕಚೇರಿಯ ಹತ್ತಿರ. 1700ರಲ್ಲಿ ನೆರೆಯ 87 ನೆಯ ನಂಬ್ರದ ಮನೆಗೆ ವಾಸ್ತವ್ಯ ಬದಲಾಯಿಸಿದ. ಹದಿನೇಳನೆಯ ಶತಮಾನದ ಕೊನೆಯಲ್ಲಿ ಕಟ್ಟಲಾಗಿದ್ದ ಆ ಮನೆಯ ಗೋಡೆಯ ಮೇಲೆ ಭೌತವಿಜ್ಞಾನಿಯ ನೆನಪಿಗೆ 1908ರಲ್ಲಿ ನೀಲಿ ಫಲಕವನ್ನು ಇರಿಸಲಾಯಿತು. ಶಿಥಿಲಗೊಂಡಿದ್ದ ಹಳೆಯ ಮನೆಯನ್ನು 1915ರಲ್ಲಿ ಅಳಿದು ನವೀನ ಕಟ್ಟಡ ಕಟ್ಟಿದಾಗ ಹೊಸ ಗೋಡೆಯ ಮೇಲೆ ಹಳೆಯ ನೀಲಿ ಫಲಕವನ್ನು ಮರು ಸ್ಥಾಪಿಸಲಾಯಿತು. ನ್ಯೂಟನ್ ತೇಲಿಬಿಟ್ಟು ಹೋದ ಸಂಶೋಧನೆ, ತರ್ಕ, ಸಿದ್ಧಾಂತಗಳು ಮಾತ್ರವಲ್ಲದೆ, ಭೌತಿಕ ಲೌಕಿಕ ಜಗತ್ತಿನಲ್ಲಿ, ಲಂಡನ್ ನ ಹೊರಗೆ ಬ್ರಿಟನ್ನಿನ ಬೇರೆ ಭಾಗಗಳಲ್ಲಿ ಯುರೋಪಿನಾದ್ಯಂತ ಪ್ರತಿಮೆ, ಚಿತ್ರಗಳು, ಪುಸ್ತಕಗಳು, ಕತೆ, ದಂತಕತೆಗಳು ನ್ಯೂಟನ್ ನ ನೆನಪು ಬಿತ್ತುತ್ತಿವೆ. ಸ್ಮರಣೆಯ ವ್ಯಾಪಕ ನಿರಂತರ ಹರಿವಿನಲ್ಲಿ ನ್ಯೂಟನ್ ನ ಸಮಾಧಿಯ ಮೇಲೆ ಬರೆಯಲಾದ ಆ ಕಾಲದ ಪ್ರಸಿದ್ಧ ಕವಿ, ಅನುವಾದಕ, ವಿಮರ್ಶಕ ಅಲೆಕ್ಸಾಂಡರ ಪೋಪ್ ನ ಸಾಲುಗಳ ಜುಳುಜುಳುವೂ ಕೇಳಿಸುತ್ತಿದೆ.
“ಪ್ರಕೃತಿ ಮತ್ತದರ ನಿಯಮಗಳು ಅಡಗಿದವು ಕತ್ತಲಲಿ
ದೇವರು ಹೇಳಿದ, ನ್ಯೂಟನ್ ಹುಟ್ಟಲಿ! ಬೆಳಕಾಯ್ತು ಜಗದಲಿ”
(Nature, and Nature’s Laws lay hid in Night;
God said, Let Newton be! and All was light.)
ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ “ಏರ್ ಬಸ್” ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ.