ಅಂದು ಚೆಲುವಾಂಬ ಆಸ್ಪತ್ರೆಯ ಹೆರಿಗೆಯ ಕೋಣೆಯಲ್ಲಿ ಸಾಲು ಸಾಲು ಹೆರಿಗೆಗಳಾದವು. ಅಂದು ಇದ್ದದ್ದು ಮೂರು ಜನ ದಾದಿಯರು ಮತ್ತು ತರಬೇತಿ ವೈದ್ಯನಾಗಿ ನಾನು ಮಾತ್ರ. ಹಿರಿಯ ವೈದ್ಯರು ಅಗತ್ಯಬಿದ್ದರೆ ಮಾತ್ರ ಕರೆಸಿಕೊಳ್ಳುವ ಹಾಗೆ ಅಲ್ಲಿಯೇ ಪಕ್ಕದಲ್ಲಿದ್ದ ಕೊಠಡಿಯಲ್ಲಿ ಇದ್ದರು. ಕೋಣೆಯಲ್ಲಿದ್ದ ಆರೂ ಹೆರಿಗೆಯ ಮಂಚಗಳ ಮೇಲೆ ವಿವಿಧ ರೀತಿಯ ಆಕ್ರಂದನಗಳು ನನಗಂತೂ ಹೊಸ ಅನುಭವ. ಆದರೆ, ತನ್ನ ಮಗುವಿನ ಮೊದಲ ಅಳುವನ್ನು ಕೇಳಿದಾಗ ಒಬ್ಬ ತಾಯಿಯರ ಮುಖಾರವಿಂದದಲ್ಲಿ ಮೂಡಿ ಬರುವ ಮಂದಹಾಸವನ್ನು ಮಾತ್ರ, ನಾವು ಸ್ವತಃ ನೋಡಿ ಆನಂದಿಸಬೇಕೇ ಹೊರತು ಅಕ್ಷರಗಳಲ್ಲಿ ವರ್ಣಿಸಿದರೆ ಅದು ಅರ್ಥ ಆಗಲಾರದು.
ಡಾ.ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಬರಹ:

 

ನನ್ನ ವೈದ್ಯಕೀಯ ವಿಧ್ಯಾಭ್ಯಾಸ ನಡೆದದ್ದು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ. ಈಗಾಗಲೇ ಅಲ್ಲಿನ ಕೆಲವು ಅನುಭವಗಳನ್ನು ನಾನು ಬೇರೆ ಬರಹಗಳ ಮೂಲಕ ನಿಮ್ಮ ಮುಂದೆ ಇಟ್ಟಿದ್ದೇನೆ. ಐದು ವರ್ಷಗಳ ಎಲ್ಲಾ ವಿಭಾಗದ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದ ನಂತರ, ನಾವು ಡಾಕ್ಟರ್ ಅನ್ನಿಸಿಕೊಳ್ಳಲು, ಹೌಸ್ ಸರ್ಜರಿ ಎಂಬ ಒಂದು ವರ್ಷದ ತರಬೇತಿಯನ್ನು ಅಲ್ಲಿನ ಆಸ್ಪತ್ರೆಯಲ್ಲಿ ಮಾಡಬೇಕಿತ್ತು. ನಮಗೆ ಉಳಿದು ಕೊಳ್ಳಲು ವೈದ್ಯಕೀಯ ಹಾಸ್ಟೆಲ್ ನಿಂದ ದೂರ, ಕೆ.ಆರ್. ಆಸ್ಪತ್ರೆಯ ಸರ್ಜಿಕಲ್ ಬ್ಲಾಕ್ ಕಟ್ಟಡದ ನಾಲ್ಕನೆಯ ಮಹಡಿಯಲ್ಲಿದ್ದ ಕೋಣೆಗಳನ್ನು ಒದಗಿಸಿ ಕೊಡಲಾಗಿತ್ತು. ಅದು, ಆಗ ಸ್ಟೋನ್ ಬಿಲ್ಡಿಂಗ್ ಎಂದೇ ಪ್ರಸಿದ್ಧಿ ಹೊಂದಿದ್ದ, ಕರಿ ಕಲ್ಲಿನ, ಹೊರಗೆ ಸಿಮೆಂಟ್ ತೇಪೆ ಇಲ್ಲದ, ಒಂದು ದೊಡ್ಡ ಕಟ್ಟಡ. ಅದು ಎತ್ತರದ ಸ್ಥಳವಾಗಿದ್ದು, ಅಲ್ಲಿಂದ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳು, ಪಕ್ಕದಲ್ಲೇ ಇದ್ದ ವಾರ್ಷಿಕ ದಸರಾ ವಸ್ತು ಪ್ರದರ್ಶನ ನಡೆಯುತ್ತಿದ್ದ ಜಕ್ಕರಾಯನ ಕೆರೆ ಮೈದಾನ ಕೂಡಾ ಕಾಣುತ್ತಿದ್ದವು.

ಕಾಲೇಜ್ ಹಾಸ್ಟೆಲಿನಲ್ಲಿ ಇದ್ದಾಗ ನಮಗೆ ಅಲ್ಲಿಯೇ ಊಟದ ವ್ಯವಸ್ಥೆ ಇತ್ತು. ಡಾಕ್ಟರ್ ಎಂಬ ಹಣೆ ಪಟ್ಟಿಯೊಂದಿಗೆ ಆ ಹಾಸ್ಟೆಲನ್ನು ತೊರೆದು ಇಲ್ಲಿಗೆ ಬಂದ ನಂತರ ಊಟಕ್ಕೆ ನಾವೇ ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು. ಹಾಗಾಗಿ, ನಮ್ಮಲ್ಲಿ ಕೆಲವು ಮಿತ್ರರು ಹೋಟೆಲಿಗೆ ಹೋಗಿ ತಿನ್ನುತ್ತಿದ್ದರು. ದಿನಾ ಹೋಟೆಲ್ ಊಟ ಹಿಡಿಸದ ನಾವು ಕೆಲವರು, ನಮ್ಮ ಕೋಣೆಯಲ್ಲಿ ಒಂದು ಸ್ಟೋವ್ ಇಟ್ಟುಕೊಂಡು ಒಟ್ಟಾಗಿ ಸೇರಿ ಅಡುಗೆ ಮಾಡಿಕೊಳ್ಳುತ್ತಿದ್ದೆವು. ಬೆಳಿಗ್ಗೆಗೆ ಹೆಚ್ಚಾಗಿ ಬ್ರೆಡ್ಡು ಆಮ್ಲೆಟು, ಕೆಲವೊಮ್ಮೆ ಉಪ್ಪಿಟ್ಟು, ಇತ್ಯಾದಿ ಸುಲಭವಾಗಿ ಮಾಡಿಕೊಳ್ಳುವಂತಹ ತಿಂಡಿ ತೀರ್ಥಗಳು. ಮಧ್ಯಾಹ್ನ ಹಾಗೂ ರಾತ್ರಿಗೆ ಹೆಚ್ಚಾಗಿ ಗಂಜಿಯನ್ನು ಮಾಡಿಕೊಂಡು, ಅದರ ಜೊತೆಗೆ ಉಪ್ಪಿನಕಾಯಿ ಮತ್ತು ಯಾವುದಾದರೂ ಪಲ್ಯವನ್ನು ಮಾಡಿ ತಿನ್ನುತ್ತಿದ್ದೆವು.

ನಮ್ಮ ರೂಮಿನ ಗಂಜಿ, ಆಗ ನಮ್ಮ ಮಿತ್ರರಲ್ಲಿ ಬಹಳ ಪ್ರಸಿದ್ಧಿ. ಅವರು, ನಮಗೆ ಎಮ್.ಆರ್.ಸಿ.ಓ.ಜಿ ಎಂದು ಬಿರುದು ಇತ್ತಿದ್ದರು. ಅದು ಇಂಗ್ಲೆಂಡಿನಲ್ಲಿ ಓದಿದ ವೈದ್ಯರಿಗೆ ಆಗ ಕೊಡುತ್ತಿದ್ದ ಒಂದು ದೊಡ್ದ ಪದವಿ ( Member/Fellow of Royal College of Obstetricians and Gyneacologists).

MRCOG ಪದವಿಗೆ ಲೋಕದಾದ್ಯಂತ ಬಹಳ ಗೌರವ ಇದ್ದರೂ, ನಮಗಿದು ಗೆಳೆಯರು ಇಟ್ಟ ಅಡ್ಡ ಹೆಸರು. ಅಂದರೆ ರಾಯಲ್ ಕಾಲೇಜ್ ಆಫ್ ಗಂಜಿ! ಇದರ ಸದಸ್ಯರಲ್ಲಿ ಮಾಧವ್ ರಾವ್ ಅಮೆರಿಕಕ್ಕೆ ಹೋಗಿ ಈಗ ಅಲ್ಲಿನ ಒಬ್ಬ ಪ್ರಸಿದ್ಧ ಹೃದಯ ತಜ್ಞರಾಗಿ (ಕಾರ್ಡಿಯಾಲಜಿಸ್ಟ್) ಹೆಸರು ಮಾಡಿದ್ದಾರೆ. ಇನ್ನೊಬ್ಬರು ಆನಂದ ರಾವ್ ಮಣಿಪಾಲದಲ್ಲಿ ಶಸ್ತ್ರ ಚಿಕಿತ್ಸಾ ವಿಭಾಗದ ಅತ್ಯುನ್ನತ ಸ್ಥಾನವನ್ನು ಪಡೆದರೆ, ನಾನೊಬ್ಬ ಮಾತ್ರ ಅಲ್ಲಿ ಇಲ್ಲಿ ಹೀಗೆ ನಿಮ್ಮೊಂದಿಗೆ ಇದ್ದೇನೆ! ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಆಗ ನಮಗೆ ಸಿಗುತ್ತಿದ್ದ ತಿಂಗಳ ಸ್ಟೈಫಂಡ್, ಇನ್ನೂರು ರೂಪಾಯಿ ಮಾತ್ರ. ಆನಂತರ ಕೆಲವರು ಸತ್ಯಾಗ್ರಹೀ ಸಹಪಾಠಿಗಳ ಅನುಗ್ರಹದಿಂದ ನಾನು ಬಿಡುವ ವೇಳೆಗೆ ಅದು ನಾನೂರು ರೂಪಾಯಿಗೆ ಏರಿತ್ತು. ಐದೂವರೆ ವರ್ಷ ತಂದೆ-ತಾಯಿಗಳಿಗೆ ಭಾರವಾಗಿದ್ದ ನಾವು ಡಾಕ್ಟರ್ ಎಂದು ಕರೆಸಿಕೊಂಡ ನಂತರವೂ ಅವರನ್ನು ಅವಲಂಬಿಸಬೇಕಲ್ಲಾ ಎಂಬ ಚಿಂತೆಯಿಂದ, ಸಿಕ್ಕ ಸ್ಟೈ ಫಂಡ್ ನಲ್ಲೇ ಖರ್ಚು ವೆಚ್ಚವನ್ನು ಹೊಂದಿಸಿಕೊಂಡು ಹೋಗುತ್ತಿದ್ದೆವು.

ವಾಸ ಆಸ್ಪತ್ರೆಯ ಒಳಗಡೆ ಇದ್ದುದರಿಂದ ಹಗಲು-ಇರುಳು ಎನ್ನದೆ ನಮಗೆ ಕರ್ತವ್ಯವನ್ನು ನಿರ್ವಹಿಸಲು ಅದು ಬಹಳ ಸಹಕಾರಿಯಾಗುತ್ತಿತ್ತು. ಆಗ ರಾತ್ರಿಯ ಪಾಳಿಯ ಕೆಲಸಗಳು ಜಾಸ್ತಿ ಇದ್ದು, ನಾವು ಸಾಕಷ್ಟು ಮುತುವರ್ಜಿ ವಹಿಸಿ ಕೆಲಸ ಕಲಿಯುವ ಪ್ರಯತ್ನವನ್ನು ಮಾಡುತ್ತಿದ್ದೆವು. ಕೆಲವು ಶಸ್ತ್ರಚಿಕಿತ್ಸಾ ತಜ್ಞರೊಂದಿಗೆ ನನಗಿದ್ದ ನಿಕಟ ಸಂಪರ್ಕ ಇದಕ್ಕೆ ಬಹಳ ಸಹಕಾರಿ ಆಗಿತ್ತು. ಕೆಲವೊಮ್ಮೆ ಚಿಕ್ಕ ಪುಟ್ಟ ಶಸ್ತ್ರ ಚಿಕಿತ್ಸೆಗಳನ್ನು ಅವರು ಪಕ್ಕದಲ್ಲೇ ನಿಂತುಕೊಂಡು ನನ್ನ ಕೈಯಲ್ಲೇ ಮಾಡಿಸುತ್ತಿದ್ದರು. ಅದರಲ್ಲೂ ಹೆರಿಗೆ ವಿಭಾಗದಲ್ಲಿ ಇದ್ದ ಡಾಕ್ಟರ್ ಗೌರಮ್ಮರನ್ನು ನಾನೆಷ್ಟು ಸ್ಮರಿಸಿದರೂ ಸಾಲದು. ಅಲ್ಲಿ ಡ್ಯೂಟಿಯಲ್ಲಿದ್ದ ಎರಡು ತಿಂಗಳುಗಳು ರಾತ್ರಿ ಪಾಳಿ ಇಲ್ಲದಿದ್ದರೂ ಪ್ರತೀ ದಿನ ಹೋಗುತ್ತಿದ್ದೆ. ಹಾಗೇ ಅವರು, ನನ್ನ ಕಲಿಯವ ಉತ್ಸಾಹವನ್ನು ಕಂಡು ಪ್ರತಿಯೊಂದು ಹೆರಿಗೆಯ ಸಂದರ್ಭಗಳಲ್ಲೂ, ನನ್ನ ಕೈಗೆ ಗ್ಲೋವ್ಸ್ ಕೊಟ್ಟು, ತಮಗೆ ಸಹಾಯ ಮಾಡಲು ಹೇಳುತ್ತಿದ್ದರು. ಎಲ್ಲಾ ಹೆರಿಗೆಗಳನ್ನೂ ನಾನೇ ಸ್ವತಃ ಮಾಡಿಸುವಷ್ಟು ನನಗೆ ತರಬೇತಿಯನ್ನು ಕೊಟ್ಟು ಬಿಟ್ಟಿದ್ದರು. ಇದಕ್ಕಾಗಿ ಅವರಿಗೆ ನಾನು ಚಿರಋಣಿ.

ಹೀಗೆಯೇ ಒಂದು ರಾತ್ರಿ ಪಾಳಿಯ ಕೆಲಸ. ಅಂದು ಚೆಲುವಾಂಬ ಆಸ್ಪತ್ರೆಯ ಹೆರಿಗೆಯ ಕೋಣೆಯಲ್ಲಿ ಹೆರಿಗೆಗಳ ಸರಮಾಲೆ ನಡೆದು ಹೋಗಿದ್ದವು. ಅಂದು ಇದ್ದದ್ದು ಮೂರು ಜನ ದಾದಿಯರು ಮತ್ತು ತರಬೇತಿ ವೈದ್ಯನಾಗಿ ನಾನು ಮಾತ್ರ. ಹಿರಿಯ ವೈದ್ಯರು ಅಗತ್ಯಬಿದ್ದರೆ ಮಾತ್ರ ಕರೆಸಿಕೊಳ್ಳುವ ಹಾಗೆ ಅಲ್ಲಿಯೇ ಪಕ್ಕದಲ್ಲಿದ್ದ ಕೊಠಡಿಯಲ್ಲಿ ಇದ್ದರು. ಕೋಣೆಯಲ್ಲಿದ್ದ ಆರೂ ಹೆರಿಗೆಯ ಮಂಚಗಳ ಮೇಲೆ ವಿವಿಧ ರೀತಿಯ ಆಕ್ರಂದನಗಳು ನನಗಂತೂ ಹೊಸ ಅನುಭವ. ಆದರೆ, ತನ್ನ ಮಗುವಿನ ಮೊದಲ ಅಳುವನ್ನು ಕೇಳಿದಾಗ ಒಬ್ಬ ತಾಯಿಯರ ಮುಖಾರವಿಂದದಲ್ಲಿ ಮೂಡಿ ಬರುವ ಮಂದಹಾಸವನ್ನು ಮಾತ್ರ, ನಾವು ಸ್ವತಃ ನೋಡಿ ಆನಂದಿಸಬೇಕೇ ಹೊರತು ಅಕ್ಷರಗಳಲ್ಲಿ ವರ್ಣಿಸಿದರೆ ಅದು ಅರ್ಥ ಆಗಲಾರದು.

ಆ ದಿನ, ಒಟ್ಟು ಹನ್ನೆರಡು ಹೆರಿಗೆಯಾಗಿತ್ತು. ರಾತ್ರಿ ಇಡೀ ನಿದ್ದೆಗೆಟ್ಟ ನಮಗೆ ಬೆಳಗಿನ ಜಾವದಲ್ಲಿ ತೀರಾ ಸುಸ್ತಾಗಿ ಹೋಗಿತ್ತು. ನಿದ್ರೆಯ ಮಂಪರಿನಲ್ಲಿ, ಮೇಜಿನ ಮೇಲೆ ತಲೆ ಇಟ್ಟು ಸುಧಾರಿಸಿಕೊಳ್ಳುತ್ತಿದ್ದೆವು.

ಕೆಲವು ಶಸ್ತ್ರಚಿಕಿತ್ಸಾ ತಜ್ಞರೊಂದಿಗೆ ನನಗಿದ್ದ ನಿಕಟ ಸಂಪರ್ಕ ಇದಕ್ಕೆ ಬಹಳ ಸಹಾಯಕಾರಿ ಆಗಿತ್ತು. ಕೆಲವೊಮ್ಮೆ ಚಿಕ್ಕ ಪುಟ್ಟ ಶಸ್ತ್ರ ಚಿಕಿತ್ಸೆಗಳನ್ನು ಅವರು ಪಕ್ಕದಲ್ಲೇ ನಿಂತುಕೊಂಡು ನನ್ನ ಕೈಯಲ್ಲೇ ಮಾಡಿಸುತ್ತಿದ್ದರು. ಅದರಲ್ಲೂ ಹೆರಿಗೆ ವಿಭಾಗದಲ್ಲಿ ಇದ್ದ ಡಾಕ್ಟರ್ ಗೌರಮ್ಮರನ್ನು ನಾನೆಷ್ಟು ಸ್ಮರಿಸಿದರೂ ಸಾಲದು.

ಆಗ ನಡೆದ ಒಂದು ಘಟನೆ ನನ್ನ ಮನದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದೆ. ರಾಧಮ್ಮ ಎಂಬ ಹೆಂಗಸು ನಂಜನಗೂಡಿನಿಂದ ತನ್ನ ಐದನೇ ಹೆರಿಗೆಗಾಗಿ ಬಂದಿದ್ದರು. ಅವರಿಗೆ ನೋವು ಕಂಡ ಕೆಲ ಕ್ಷಣಗಳಲ್ಲೇ ಸುಸೂತ್ರವಾಗಿ ಹೆರಿಗೆಯಾಗಿ ಹೋಗುತ್ತದೆ ಎಂದು ನೆಮ್ಮದಿಯಿಂದ ಇದ್ದ ನಮಗೆ ತಲೆಯ ಮೇಲೆ ತೂಗುತ್ತಿದ್ದ ಕತ್ತಿಯ ಶಕ್ತಿ ಗೊತ್ತಾಗಿದ್ದು ಆಮೇಲೆ.

ನನ್ನದು ಯಾವಾಗಲೂ ಕೋಳಿ ನಿದ್ರೆ. ಒಂದು ಚಿಕ್ಕ ಶಬ್ದಕ್ಕೂ ಎಚ್ಚರಗೊಳ್ಳುವ ಸ್ಥಿತಿ. ಅಂದು ಮೇಜಿನ ಮೇಲೆ ತಲೆ ಇಟ್ಟದ್ದೆ ತಡ, ದೂರದಲ್ಲೆಲ್ಲೋ ಮಗು ಅತ್ತ ಧ್ವನಿ ಕೇಳಿ, ಪಟ್ಟಂತ ಎದ್ದ ಹೋಗಿ ನೋಡಿದ ನನಗೆ ಕಂಡದ್ದು, ರಾಧಮ್ಮ ಇದ್ದ ಹಾಸಿಗೆ ಖಾಲಿ. ಪಕ್ಕದಲ್ಲಿದ್ದ ಹಾಸಿಗೆಯವರು ನಿದ್ರೆಯಲ್ಲಿ ಇದ್ದಾರೆ. ಕಿವಿ ಕೊಟ್ಟು ಆಲಿಸಿದಾಗ, ಅಲ್ಲೇ ಪಕ್ಕದಲ್ಲೇ ಇದ್ದ ಟಾಯ್ಲೆಟ್ ನಿಂದ ಬಂದಿತ್ತು ಒಂದು ಕ್ಷೀಣವಾದ ದ್ವನಿ. ಎರಡೇ ಜಿಗಿತ್ತಕ್ಕೆ ನಾನು ಅದರ ಬಾಗಿಲ ಬಳಿ ಹೋಗಿ ನೋಡಿದಾಗ, ಪುಣ್ಯಕ್ಕೆ ಒಳಗಿನಿಂದ ಚಿಲಕ ಹಾಕಿರಲಿಲ್ಲ. ಬಾಗಿಲು ತೆರೆದು ನೋಡಿದರೆ ಕಣ್ಣಿಗೆ ಕಂಡದ್ದು, ಅಲ್ಲಿ ಕುಳಿತಿದ್ದ ರಾಧಮ್ಮ, ಕೆಳಗೆ ಟಾಯ್ಲೆಟ್ ಟ್ರೇಯಲ್ಲಿ ಇದ್ದ ನವಜಾತ ಶಿಶು! ಅದೃಷ್ಟವಶಾತ್ ಹೊಕ್ಕಳ ಬಳ್ಳಿ ಹಾಗೇ ಇತ್ತು. ಅಕಸ್ಮಾತ್ ಮಗುವಿನ ತಲೆ ಕೆಳಗೆ ಜರಗಬಹುದು ಎಂಬ ಯೋಚನೆ ತಲೆಗೆ ಬಂದದ್ದೇ ತಡ, ಎಲ್ಲೀ, ಏನು ಎತ್ತ ಎಂದು ಯೋಚಿಸದೆ, ಮರು ಕ್ಷಣವೇ ಮಂಡಿ ಊರಿ ಕುಳಿತು ನನ್ನ ಕೈಗಳಿಂದ ಕೆಳಗಿದ್ದ ಮಗುವನ್ನು ಮೇಲೆತ್ತಿ ಹಿಡಿದುಕೊಂಡಿದ್ದೆ. ಅಲ್ಲಿಂದಲೇ ಬೊಬ್ಬೆ ಹೊಡೆದು ಸಿಸ್ಟರನ್ನು ಕರೆದು ಹೊಕ್ಕಳ ಬಳ್ಳಿಯನ್ನು ಕತ್ತರಿಸಲು ಬೇಕಾದ ಸಾಧನಗಳನ್ನು ತರಿಸಿಕೊಂಡಿದ್ದೆ. ಕುಳಿತಲ್ಲೇ ರಾಧಮ್ಮನಿಗೆ ತನ್ನ ಎರಡು ಕಾಲುಗಳನ್ನು ಅಗಲಿಸಲು ಹೇಳಿ, ಹೊಕ್ಕಳು ಬಳ್ಳಿಯನ್ನು ಹಿಡಿಕಟ್ಟು (clamp ) ಮಾಡಿ, ಕತ್ತರಿಸಬೇಕಾಯಿತು. ಇಕ್ಕಟ್ಟಾದ ಆ ಸ್ಥಳದಲ್ಲಿ ಕುಳಿತಿದ್ದ, ನಾನು ಅದೇ ಭಂಗಿಯಲ್ಲೇ ನಿಧಾನಕ್ಕೆ ಮಗುವನ್ನು ಎತ್ತಿ ಬಹಳ ಕಷ್ಟಪಟ್ಟು ಹಿಂದೆ ನಿಂತ ದಾದಿಯ ಕೈಗೆ ರವಾನಿಸಿ, ಎದ್ದು ನಿಂತು ನೋಡಿದರೆ, ಪ್ಯಾಂಟಿನ ಎರಡೂ ಮೊಣಕಾಲಿನಲ್ಲಿ ಅಲ್ಲಿದ್ದ ಗಲೀಜು ಅಂಟಿತ್ತು.! ಆದರೆ ಮಗುವೊಂದನ್ನು ಉಳಿಸಿದ ಸಂತೋಷದ ಎದುರು ಈ ಎಲ್ಲಾ ಗಲೀಜು, ಹೇಸಿಗೆ, ಇವೆಲ್ಲವೂ ನನಗೆ ನಗಣ್ಯವಾಗಿತ್ತು. ಅಲ್ಲೇ ಪಕ್ಕದಲ್ಲಿದ್ದ ನಲ್ಲಿಯ ನೀರಿನಲ್ಲಿ ತೊಳೆದುಕೊಂಡು ಹೊರ ಬಂದಿದ್ದೆ. ಈಗ ಕುಳಿತು ಯೋಚಿಸುವಾಗ ಅದೆಲ್ಲಾ ನನ್ನಿಂದ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಮನಸ್ಸಿಗೆ ಬರದೆ ಇಲ್ಲ. ಅತೀ ಇಕ್ಕಟ್ಟಾದ, ಆ ಟಾಯ್ಲೆಟ್, ಅದರ ಒಳಗೆ ಕುಳಿತ ಸ್ಥಿತಿಯಲ್ಲಿದ್ದ ಓರ್ವ ಹೆಂಗಸು, ಟಾಯ್ಲೆಟ್ ಬೇಸಿನ್ ನಲ್ಲಿದ್ದ ಒಂದು ಮಗು. ಎಲ್ಲವೂ ಒಂದು ಕ್ಷಣಾರ್ಧಲ್ಲಿ ತೆಗೆದುಕೊಂಡ ನಿರ್ಧಾರ, ನಿಜಕ್ಕೂ ರೋಚಕವೆನಿಸುತ್ತದೆ. ಅಂದು ಹೆಚ್ಚು ಹೊಟ್ಟೆ ನೋವು ಇಲ್ಲದ ರಾಧಮ್ಮ ಮಲ ವಿಸರ್ಜನೆ ಬಂದಂತೆ ಆಗಿ ಟಾಯ್ಲೆಟ್ ಕಡೆ ಹೋಗಿದ್ದಾಳೆ. ಅಲ್ಲಿ ಮಲದ ಬದಲು ಮಗು ಹೊರ ಬಂದು ಎಲ್ಲವೂ ಗೋಜಲಾಗಿ ಹೋಗಿತ್ತು.

ಇವೆಲ್ಲದರ ನಡುವೆ, ನಮಗಾದ ಸಂತೋಷವನ್ನು ಎಲ್ಲರೊಡನೆ ಹಂಚಿಕೊಂಡು ಅನುಭವಿಸುತ್ತಾ ಇದ್ದ ನಮಗೆ ಬೆಳಗಾಗಿದ್ದೇ ಅರಿವಾಗಿರಲಿಲ್ಲ. ಹಾಗೆಯೇ ರೂಮಿಗೆ ಹೋಗಿ ಸ್ನಾನ ಮಾಡಿಕೊಂಡು ತಿಂಡಿ ತಿಂದು ಹತ್ತು ಗಂಟೆಯ ಹೊತ್ತಿಗೆ ವಾರ್ಡಿಗೆ ಬರುವಷ್ಟರಲ್ಲಿ ಅಲ್ಲಿ ಒಂದು ದೊಡ್ಡ ರಾಮಾಯಣವೇ ನಡೆಯುತ್ತಿತ್ತು.

ರಾತ್ರಿ ಹೆರಿಗೆಯಾಗಿದ್ದ ರಾಧಮ್ಮನ ಕಡೆಯವರು ಬೊಬ್ಬೆ ಹೊಡೆಯುತ್ತಿದ್ದಾರೆ. ಅವರ ಕೈಯಲ್ಲಿ ಹಿಂದಿನ ರಾತ್ರಿ ಸಿಸ್ಟರ್ ಬರೆದು ಇಟ್ಟಿದ್ದ ಕೇಸ್ ಶೀಟ್ ಹಿಡಿದು ನಿಂತಿದ್ದಾರೆ. ಸಾಧಾರಣವಾಗಿ ಆಸ್ಪತ್ರೆ ದಾಖಲೆಗಳು ಇತರರಿಗೆ ಸಿಗುವುದು ಬಹಳ ಅಪರೂಪ. ಆದರೆ ಆ ವಾರ್ಡಿನಲ್ಲಿದ್ದ ಅವರ ದೂರದ ಸಂಬಂಧಿಯಾದ ಒಬ್ಬ ಟ್ರೈನಿಂಗ್ ಗಿಗೆ ಬಂದಿದ್ದ ಹುಡುಗಿ ಅದನ್ನೆತ್ತಿ ಅವರ ಕೈಗೆ ಕೊಟ್ಟಿದ್ದಾಳೆ.

ಅವರ ಗಲಾಟೆಗೆ ಮುಖ್ಯ ಕಾರಣ ಮಗುವಿನ ಲಿಂಗಕ್ಕೆ ಸಂಬಂಧಿಸಿದ ವಿಷಯ. ರಾಧಮ್ಮನ ಪಕ್ಕದಲ್ಲಿ ಇದ್ದದ್ದು ರಾತ್ರಿ ಹುಟ್ಟಿದ ಹೆಣ್ಣು ಮಗು. ಆದರೆ ಕೇಸ್ ಶೀಟಿನ ಒಂದೆಡೆ, ರಾತ್ರಿಯ ಸಿಸ್ಟರ್ ಕೈ ತಪ್ಪಿ ಗಂಡು ಎಂದು ಬರೆದುಬಿಟ್ಟಿದ್ದರು. ಅವರದ್ದು ಗಂಡು ಮಗು, ಆಸ್ಪತ್ರೆಯವರು ಮಗುವನ್ನು ಬದಲಾಯಿಸಿ ಹೆಣ್ಣು ಮಗುವನ್ನು ತಾಯಿಯ ಪಕ್ಕದಲ್ಲಿ ಇಟ್ಟಿದ್ದಾರೆ ಎಂಬ ಆರೋಪ ರಾಧಮ್ಮನ ಕಡೆಯವರದ್ದು. ಬೆಳಗಿನ ಡ್ಯೂಟಿಯಲ್ಲಿ ಇದ್ದವರಿಗೆ ರಾತ್ರಿ ನಡೆದಿದ್ದ ಯಾವುದೇ ವಿವರಗಳು ಸರಿಯಾಗಿ ತಿಳಿದಿರಲಿಲ್ಲ. ರಾತ್ರಿಯ ಪಾಳಿಯಲ್ಲಿದ್ದ ಎಲ್ಲರಿಗೂ ಕರೆ ಕಳುಹಿಸಿದ್ದರು. ಅಲ್ಲಿ ಸಹಿ ಹಾಕಿದ್ದ ಹಿರಿಯ ವೈದ್ಯರು, ಮತ್ತು ಸಿಸ್ಟರ್ ಅವರ ಮನೆ ದೂರದಲ್ಲಿದ್ದು, ಆಗೆಲ್ಲಾ ದೂರವಾಣಿ ಸಂಪರ್ಕ ವ್ಯವಸ್ಥೆ ಈಗಿನಂತೆ ಇರಲಿಲ್ಲ.

ಅದೇ ಸಮಯಕ್ಕೆ ವಾರ್ಡಿಗೆ ನನ್ನ ಪ್ರವೇಶ ಆಗಿತ್ತು ನನ್ನನ್ನು ಕಂಡ ಕೂಡಲೇ ಪ್ರೊಫೆಸರ್ ಕೌಲಗೊಡ್, ಏರಿದ ದನಿಯಲ್ಲಿ ಏನಾಗುತ್ತಿದೆ ಇಲ್ಲಿ, ಇದು ಯಾಕೆ ಹೀಗಾಯಿತು ಎಂದು ರೇಗತೊಡಗಿದರು. ಬಹಳ ಸೌಮ್ಯ ಸ್ವಭಾವದವರು ಎಂದೇ ಪ್ರಸಿದ್ಧಿ ಹೊಂದಿದ್ದ ಅವರು ಈ ರೀತಿ ಸಿಟ್ಟಿಗೆದ್ದಿದ್ದನ್ನು ಅದುವರೆಗೆ ಯಾರೂ ನೋಡಿರಲಿಲ್ಲ. ರಾಧಮ್ಮನಿಗೆ ಹೆಣ್ಣು ಮಗು ಆಗಿದ್ದೇ ನಿಜ ಎಂದು ಸಾಬೀತು ಪಡಿಸಲು ನನ್ನ ಡೈರಿಯಲ್ಲಿ ರಾತ್ರಿ ಬರೆದಿಟ್ಟಿದ್ದನ್ನು ತೋರಿಸಿ, ಜನನ ಮರಣದ ವರದಿಯನ್ನು ಕಳುಹಿಸುವ ಪ್ರತಿಯನ್ನು ಕೂಡಾ ತೋರಿಸಿ ಅದರಲ್ಲೂ ಹೆಣ್ಣು ಮಗು ಎಂಬ ಬರೆದಿದ್ದನ್ನು ಅವರಿಗೆ ತೋರಿಸಿದ ನಂತರವೂ ಅವರು ಅದನ್ನು ಒಪ್ಪಲು ತಯಾರಿರಲಿಲ್ಲ. ಅಷ್ಟು ಹೊತ್ತಿಗೆ ಆಗಲೇ ಜನರ ಗಲಾಟೆ ಹೆಚ್ಚಾಗತೊಡಗಿತ್ತು.

ಇನ್ನು ಏನು ಮಾಡುವುದು… ಕೊನೆಯ ಪ್ರಯತ್ನ ಎಂದು ನಾನು ರಾಧಮ್ಮನ ಹಾಸಿಗೆಯ ಬಳಿ ಹೋಗಿ ಅವಳ ತಲೆಯನ್ನು ನೇವರಿಸುತ್ತಾ ರಾತ್ರೆ ನಾವು ಪಟ್ಟ ಕಷ್ಟವನ್ನು ಅವಳಿಗೆ ನೆನಪಿಸಿದಾಗ ಅವಳ ಕಣ್ಣು ತೇವಗೊಂಡಿತ್ತು. ಆಗ ಅವಳ ಕಣ್ಣಲ್ಲಿ ಕಣ್ಣಿಟ್ಟು,
“ನೀನು ಹೆತ್ತ ಹೆಣ್ಣು ಮಗುವನ್ನು ನಾನೇ ನಿನಗೆ ತೋರಿಸಿದ್ದು ನಿಜವಲ್ಲವೇ” ಎಂದು ಕೇಳಿದಾಗ ಅವಳು ತಲೆ ತಗ್ಗಿಸಿದ್ದಳು. ಅಲ್ಲಿಗೆ ಅವಳಿಗೆ ನಿಜ ಸಂಗತಿ ಏನು ಎಂದು ಗೊತ್ತಿದೆ ಎಂದು ನನಗೆ ಮನದಟ್ಟಾಗಿ.
“ಈ ವಿಷಯವನ್ನು ನೀನು ಯಾಕೆ ಯಾರಿಗೂ ತಿಳಿಸಲಿಲ್ಲ” ಎಂದು ಕೇಳಿದೆ.
ಜೋರಾಗಿ ಅಳುತ್ತಾ ಆಕೆ ಹೇಳಿದ ಮಾತು ಇದು.
“ನನಗೆ ಈಗಾಗಲೇ ನಾಲ್ಕು ಜನ ಹೆಣ್ಣುಮಕ್ಕಳು ಇದ್ದಾರೆ. ಈ ಸಲ ಬಸಿರಾದ ದಿನದಿಂದ ನನ್ನ ಅತ್ತೆ ಹೇಳುತ್ತಾ ಬಂದಿದ್ದು ಒಂದೇ ಮಾತು. ಈ ಮಗು ಕೂಡಾ ಹೆಣ್ಣು ಆದರೆ ನೀನು ಮತ್ತೆ ಈ ಮನೆಯ ಹೊಸ್ತಿಲು ತುಳಿಯ ಬೇಡ, ತಿರುಗಿ ಮನೆ ಒಳಗೆ ಬರ ಕೂಡದು ಎಂದು ತಾಕೀತು ಮಾಡಿದ್ದಾರೆ. ನನಗಾಗಿದ್ದು ಗಂಡು ಮಗು ಎಂದು ತಪ್ಪಾಗಿ ಬರೆದಿದ್ದಾರೆ ಎಂದು ತಿಳಿದರೂ ಕೂಡಾ ಯಾರಿಗೂ ನಿಜವನ್ನು ಹೇಳುವ ಧೈರ್ಯ ನನಗೆ ಬರಲಿಲ್ಲ.” ಅಲ್ಲಿಗೆ ನನಗೆ ವಿಷಯ ಸ್ಪಷ್ಟವಾಗಿತ್ತು.


ಅವಳ ಗಂಡನನ್ನು ಪಕ್ಕಕ್ಕೆ ಕರೆದು, ಅವನಿಗೆ ಎಲ್ಲಾ ವಿವರಗಳನ್ನೂ ಹೇಳಿ ಅವನಿಗೆ ಮನವರಿಕೆ ಮಾಡಿದ ಮೇಲೆ, ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡ ಅವನು ತನ್ನ ಹೆಂಡತಿ ಮತ್ತು ಮಗುವನ್ನು ಕರೆದುಕೊಂಡು ನಂಜನಗೂಡಿಗೆ ತೆರಳಿದ್ದ. ಆಮೇಲೆ ಮನೆಯಲ್ಲಿ ಏನಾಯ್ತೋ ದೇವರೇ ಬಲ್ಲ.

ಸಂಚಿಯ ಹೊನ್ನಮ್ಮ ಹೇಳಿದ ‘ಪೆಣ್ಣು ಪೆಣ್ಣೆಂದು ಬೀಳುಗಳೆವರು ಕಣ್ಣು ಕಾಣದ ಗಾವಿಲರು’ ಎಂಬ ಮಾತಿನ ಪೂರ್ಣ ಅರ್ಥ ಅಂದು ನನಗಾಯಿತು.