ನೀ ಬಿಡು, ಅತ್ತೂ ಕರೆದೋ, ಪೆಚ್ಚು ಮೋರೆ ಹಾಕಿ ಕುಳಿತುಕೊಂಡೋ, ಸಲ್ಲದ ವರ ಬಂದಾಗ ಅಪ್ಪನ ಮುಂದೆ ಸೊಲ್ಲೆತ್ತದೆ, ಅವ್ವನ ಕಿವಿಯೂದಿ ನಿನ್ನಿಚ್ಛೆಯ ಹುಡುಗ ಸಿಕ್ಕಾಗ ಗ್ರೀನ್ ಸಿಗ್ನಲ್ ತೋರಿದವಳು. ಇದು ಬಲ್ಲಿದರ ಕಾರು ದಾರಿಯ ರಸ್ತೆಯಲ್ಲ, ಬಡವರ ಬಂಡೀ ರಸ್ತೆ ಎಂದರಿತರೂ ಬಂಡೀ ನಡೆಸುವವನ ಯೋಗ್ಯತೆ ಅರಿತು ಹತ್ತಿ ಕುಳಿತವಳು. ಹಾಗಾಗಿ ಉರುಳುವ ಬಂಡಿಯ ಗಾಲಿಗೆ ಕೀಲದ ಕಡೆಗೇ ನಿನ್ನ ಗಮನವಿತ್ತು. ಎಂಥ ತಗ್ಗು ದಿಣ್ಣೆಗಳು ಬಂದರೂ, ಏರು ಇಳುವುಗಳು ಬಂದರೂ ನಿನ್ನವನ ತೋಳಿನ ಶಕ್ತಿಯಾಗಿ ಸಾಗಿದೆ.
ಡಾ. ನಿಂಗು ಸೊಲಗಿ ಬರೆದ “ನನ್ನಿನ್ನ ನಗಿ ನೋಡಿ” ಪುಸ್ತಕದ ಒಂದು ಪತ್ರ ನಿಮ್ಮ ಓದಿಗೆ
“ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೆ ಒರೆಯನಿಟ್ಟು
ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು”
ಓಯ್ ಚಿನ್ನಮ್ಮ…. ನಾನು ಕೊಟ್ಟು ಬಂದಿರುವ ಕೆ.ಎಸ್. ನರಸಿಂಹಸ್ವಾಮಿಯವರ ‘ಮೈಸೂರು ಮಲ್ಲಿಗೆ’ ಕವನ ಸಂಕಲನ ಓದಿರುವಿ ಎಂದಾಯ್ತು. ಖುಷಿಯಾಯ್ತು ಚಿನ್ನ. ಪ್ರತೀ ಪತ್ರದಲ್ಲೂ ಏನಾದರೊಂದು ಹೊಸದನ್ನು ಹೆಣೆಯುತ್ತ; ಹೊಸದನ್ನು ಹುಡುಕಿ ಬರೆಯುತ್ತ ಕವಯಿತ್ರಿ ಆಗುತ್ತಿದ್ದೀಯಾ. ಇಷ್ಟಿದ್ದರೂ “ಬರೆಯುವುದೇನಿದ್ದರು ನಿಮ್ಮದು, ನನ್ನದೇನಿದ್ದರು ನಿಮ್ಮೊಟ್ಟಿಗೆ ಖುಷಿಯಾಗಿ ಬಾಳುವುದು” ಎನ್ನುತ್ತಿ. ಹೌದು ರಾಣಿ… ಖುಷಿಯಾದ ಬಾಳುಕಟ್ಟುವುದೂ ಕೂಡ ಒಂದು ಕುಶಲ ಕಸೂತಿ ಕಲೆಯಷ್ಟು ಸೂಕ್ಷ್ಮ ಸೃಜನ ಕ್ರಿಯೆ. ನೀನು ಕುಶಲಮತಿ. ಸರಿ ತಪ್ಪುಗಳರಿತು ನಡೆಯುತ್ತೀಯಾ. ಒರೆಗೆ ಹಚ್ಚಿ ನೋಡುತ್ತೀಯ. ಸರಿ ದಾರಿ ಕಂಡುಕೊಳ್ಳತ್ತೀಯ.
ಚಿನ್ನ… ಸುಖ ಸಂಸಾರಕ್ಕೆ ಹನ್ನೆರಡು ಸೂತ್ರಗಳೆಂಬುದನ್ನು ಎಲ್ಲೋ ಕೇಳಿದ್ದೆ. ಮದುವೆಯಾದ ಕೆಲ ವರ್ಷಗಳಲ್ಲಿ ತಿಳಿಯಿತು ಹನ್ನೆರಡು ಸೂತ್ರಗಳೆಂಬುದು ಶುದ್ಧ ಸುಳ್ಳು, ಸಾವಿರ ಸೂತ್ರಗಳೇ ಬೇಕೆಂದು. ಕಾಲ ಕಳೆದಂತೆ ಇನ್ನೂ ಅರ್ಥವಾಯಿತು. ಸಾವಿರ ಸೂತ್ರಗಳೂ ಸಾಕಾಗೊದಿಲ್ಲ, ಇನ್ನಷ್ಟು ಖಾಲಿ ಹಾಳೆಗಳಿರಬೇಕು. ಕಂಡುಕೊಂಡ ಹೊಸ ಸೂತ್ರಗಳನ್ನು ದಾಖಲಿಸುತ್ತ ಹೋಗಬಹುದೆಂದು ಮನವರಿಕೆಯಾಯಿತು. ಹೌದು, ಸಂಸಾರವೆಂದರೇ ಹೀಗೆ. ಅದು ಸಸಾರವಲ್ಲ, ಸಸಾರಗೊಳಿಸಬೇಕು ಅಷ್ಟೆ. ಸಮರಸದ ಜೀವನ ಸಾಧ್ಯವಾಗಬೇಕಾದರೆ ‘ಸಮರಸಭಾವ’ ಇಬ್ಬರದೂ ಆಗಬೇಕು. ಇದು ಇಬ್ಬರಲ್ಲೂ ಇರಬೇಕಲ್ಲ!? ಇದ್ದಿರಬಹುದು ಇಲ್ಲದಿರಲೂಬಹುದು. ಇದು ಸಾಧ್ಯವಾಗಬೇಕಾದರೆ ಹೊಂದಾಣಿಕೆ ಮುಖ್ಯ. ನಾನು ಕಂಡುಕೊಂಡಂತೆ ಹೊಂದಾಣಿಕೆಯೆಂಬ ಮೂಲ ಮಂತ್ರವರಿಯದ ಹೊರತು ‘ಸುಖ ಸಂಸಾರಕ್ಕೆ ಸಾವಿರ ಸೂತ್ರಗಳೂʼ ಸಾಲವು. ಹೊಂದಾಣಿಕೆಯೇ ಈ ಎಲ್ಲ ಸೂತ್ರಗಳ ತಾಯಿ ಬೇರು ಎಂಬುದನ್ನರಿತು ಸಾಗಿದ್ದರಿಂದಲೇ ನಾವು ಗೆಲ್ಲುತ್ತ ಸಾಗಿದ್ದೇವೆ ಅಲ್ಲವೆ?
ನೀ ನಡೆವ ದಾರಿಯಲಿ
ಪ್ರೀತಿ ಹೂವು ಹರಡಿರುವೆ
ನಲುಗದೇ ನಡೆ ಮುಂದೆ ನನ್ನ ಗೆಳತಿ
ನೀ ಮುಡಿದ ಮಲ್ಲಿಗೆಯ
ಪರಿಮಳದಿ ನಾನಿರುವೆ
ಸವಿಯುತ್ತ ಸರಿದೂರ ಸಾಗು ನನ್ನೊಡತಿ
ಸಂತೋಷ ಸಂಕಷ್ಟ
ಏನೆ ಬಂದರೂ ಸರಿಯೆ
ಸಮರಸದಿ ಸರಿದೂಗಿಸೆನ್ನ ನೇತ್ರಿ
ಹೊಸತನದ ತುಡಿತದಲಿ
ಹೊಸತನದ ಮಿಡಿತದಲಿ
ನಿನ್ನ ಕನಸಿಗೆ ಬಣ್ಣ ನಾ ಕನಸುಗಾತಿ
***
ಹೊಸತನದಿ ಹಸೆಮನೆ ಏರಿ, ಹುಟ್ಟಿದ ಮನೆ, ಕಟ್ಟಿಕೊಂಡ ಹೆತ್ತ ಅಪ್ಪ ಅಮ್ಮ ಮೊದಲಾದವರ ಬಾಂಧವ್ಯ ದೂರ ಸರಿಸಿ, ಹೊಸಮನೆಗೆ ಬಂದು, ಹೊಸಬರೊಡಗೂಡಿ; ಹೊಸಜಾಗದಲುಳಿದು, ಹೊಸ ಭಾವದಿ ಹೊಸ ಜೀವನ ಆರಂಭಿಸುವುದಿದೆಯಲ್ಲ… ಅಬ್ಬಾ! ಜೀವನದಲ್ಲಿ ಇದಕ್ಕಿಂತ ಭಿನ್ನ ಟರ್ನಿಂಗ್ ಪಾಯಿಂಟ್ ಇರಲಿಕ್ಕಿಲ್ಲ ಎಂದುಕೊಂಡಿದ್ದೇನೆ. ಈ ಟರ್ನಿಂಗ್ ಪಾಯಿಂಟ್ ನಲ್ಲಿ ಸರಿಯಾಗಿ ಸ್ಟೇರಿಂಗ್ ತಿರುಗಿಸಿ, ನಿಮ್ಮ ಗಾಡಿಯನ್ನು ಒಂದು ಕುಟುಂಬದಿಂದ ಇನ್ನೊಂದು ಕುಟುಂಬಕ್ಕೆ ತಿರುಗಿಸಿ ಸರಿಯಾದ ರಸ್ತೆಯಲ್ಲಿ ಮುನ್ನಡೆಸಿದಿರೋ ನೀವು ಗೆದ್ದಿರಿ. ಬದಲಾಗುವ ಈ ರಸ್ತೆಗಳು ಈವರೆಗೆ ಸಾಗಿದ ರಸ್ತೆಯಂತೆ ಟಾರ್ ರೋಡ್ ಆಗಿದ್ದರೆ ನೀವು ಲಕ್ಕಿ, ಒಂದು ವೇಳೆ ಅದ್ದು ಕಚ್ಚಾ ರಸ್ತೆಯಾಗಿದ್ದರೆ ಸ್ವಲ್ಪ ಕಷ್ಟಪಟ್ಟು ತಗ್ಗು ದಿನ್ನೆಗಳಿಗೆ ಬಿದ್ದು ಎದ್ದು ಸಾಗುವಂತಿದ್ದರೆ, ಇದ್ದವರ ಮೈಮನಸುಗಳಿಗೆ ಬಾಧೆಯಾಗದಂತೆ ಮುನ್ನಡೆಸುವ ಕೌಶಲ ನಿಮ್ಮದಾಗಿರಬೇಕು. ಒಂದು ವೇಳೆ ಕಲ್ಲು ಮುಳ್ಳುಗಳೇ ಹಾಸಿದ ರಸ್ತೆಯಾಗಿದ್ದರೆ ನೀವು ತುಂಬಾ ಜಾಗರೂಕರಾಗಿರಬೇಕು. ಧೈರ್ಯಗುಂದದೇ ಕಟ್ಟೆಚ್ಚರದಿ ಮುಂದೆ ಸಾಗಬೇಕು. ಅಂತೆಯೇ ನಮ್ಮ ಜೀವನದ ಪಥ ಬದಲಿಸುವಾಗ ಆಯ್ಕೆ ಮಾಡಿಕೊಳ್ಳುವ ದಾರಿಯ ಬಗ್ಗೆ ಬಹು ಎಚ್ಚರದಿಂದಿರಬೇಕು.
ನೀ ಬಿಡು, ಅತ್ತೂ ಕರೆದೋ, ಪೆಚ್ಚು ಮೋರೆ ಹಾಕಿ ಕುಳಿತುಕೊಂಡೋ, ಸಲ್ಲದ ವರ ಬಂದಾಗ ಅಪ್ಪನ ಮುಂದೆ ಸೊಲ್ಲೆತ್ತದೆ, ಅವ್ವನ ಕಿವಿಯೂದಿ ನಿನ್ನಿಚ್ಛೆಯ ಹುಡುಗ ಸಿಕ್ಕಾಗ ಗ್ರೀನ್ ಸಿಗ್ನಲ್ ತೋರಿದವಳು. ಇದು ಬಲ್ಲಿದರ ಕಾರು ದಾರಿಯ ರಸ್ತೆಯಲ್ಲ, ಬಡವರ ಬಂಡೀ ರಸ್ತೆ ಎಂದರಿತರೂ ಬಂಡೀ ನಡೆಸುವವನ ಯೋಗ್ಯತೆ ಅರಿತು ಹತ್ತಿ ಕುಳಿತವಳು. ಹಾಗಾಗಿ ಉರುಳುವ ಬಂಡಿಯ ಗಾಲಿಗೆ ಕೀಲದ ಕಡೆಗೇ ನಿನ್ನ ಗಮನವಿತ್ತು. ಎಂಥ ತಗ್ಗು ದಿನ್ನೆಗಳು ಬಂದರೂ, ಏರು ಇಳುವುಗಳು ಬಂದರೂ ನಿನ್ನವನ ತೋಳಿನ ಶಕ್ತಿಯಾಗಿ ಸಾಗಿದೆ. ಕುಟುಂಬದ ಒಬ್ಬೊಬ್ಬರನ್ನೂ ಬಂಡಿಯಲ್ಲಿ ಹತ್ತಿಸಿಕೊಂಡು ಹೋಗುವ ಭರವಸೆ ತೋರಿಸಿದೆ. ಸಾಗುತ್ತ ಬೆಳೆಯುತ್ತ ಬಂಡಿ ಸಾಲದಾದಾಗ ಸಂಸಾರ ಸಾಗರದಿ ಸಾಗಲು ‘ನಾವೆ’ ಏರಿ ಕುಳಿತೆವು. ಆ ನಾವೆಗೆ ತೂತಾಗದಂತೆ ಎಚ್ಚರದಿ ತೇಲುತ್ತ ತೆವಳುತ್ತ ಸಾಗಿದ್ದೇವೆ.
ಸಂಸಾರ ಸಾಗರದಿ ನಾವಿಕರು ನಾವಾಗಿ
ಸಾಗಿಹೆವು ಸಮರಸದಿ ಸವಿಗಾನಗೂಡಿ
ತೆರೆಗಳೇರಿಳಿತಗಳು ತಿಳಿಮೋಡದಲಿ ಕರಗಿ
ಬಾನಬಯಲಲಿ ತೇಲಿ ಸಾಗಿದಂತೆ
ಪ್ರತಿಕ್ಷಣವೂ ಸುಳಿಗಾಳಿ ಒಮ್ಮೊಮ್ಮೆ ಬಿರುಗಾಳಿ
ನಾವೆ ಕಟ್ಟೆಚ್ಚರದಿ ಮುನ್ನಡೆಯಬೇಕು
ಎದ್ದ ತೆರೆಗಳೆಲೆದ್ದು ಮತ್ತಿಳಿದು ಮುನ್ನಡೆಯೆ
ಸಂಸಾರ ‘ನಾವೆ’ ಸುಖಿ ಸಾಗರದಿ ತೇಲಿ
ಸಂಸಾರ ನಾವೆಯಲಿ ನಮ್ಮವರು ಜೊತೆಗೂಡಿ
ಹದವರಿತು ಹನಿಗೂಡೆ ಪ್ರೀತಿ ಫಲ ಸೊಗಸು
ಸಹನೆಯ ತೇರಾಗಿ ಸಂಕಟಗಳ ಸರಿದೂಡಿ
ಸವೆದಷ್ಟು ಸಂಸಾರ ತಾಳ್ಮೆ ಫಲ ಹುಲುಸು
ಸಂಸಾರ ಸಸಾರವಾಗಲು ಸಹನೆ ಸನಿಹದಲಿದ್ದು ತಾಳ್ಮೆ ತಳವೂರಿರಬೇಕು. ಹಾಗಾಗಿ ನೀನು ನನ್ನನ್ನು ಸಹಿಸಿಕೊಂಡಿದ್ದಿಯೇನೋ ಸರಿ, ಆದರೆ ಒಮ್ಮೊಮ್ಮೆ ನಿನ್ನ ನಡೆಗೆ ನಾನು ತಾಳ್ಮೆ ಕಳೆದುಕೊಂಡಿದ್ದೇನೆ. ಇದಕ್ಕೆ ಕಾರಣ ಇಬ್ಬರ ನಡುವಿನ ವಿಚಾರ ಭೇದ, ಅಭಿಪ್ರಾಯ ಭೇದ.
ನೀನು ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಬೆಳೆದು ಬಂದವಳು. ಅಮವಾಸ್ಯೆ ಹುಣ್ಣಿಮೆ, ಹಬ್ಬಗಳ ಆಚರಣೆಗಳು, ಪೂಜೆ ಪುನಸ್ಕಾರಗಳು ನಿನ್ನ ಯೋಚನೆ ಯೋಜನೆಯಲ್ಲೇ ನಡೆಯಬೇಕೆಂಬ ಅಭಿಲಾಷೆ ನಿನ್ನದು. ತನ್ನಿಷ್ಟದಂತೆ ಮಾಡಿಕೊಂಡರೆ ಮಾಡಿಕೊಳ್ಳಲಿ ಎಂದು ಬಿಟ್ಟು ನನ್ನ ಪಾಡಿಗೆ ನಾನಿದ್ದರೆ, ನೀನು ನನ್ನನ್ನೂ ನಿನ್ನಿಷ್ಟದಂತೆ ಬದಲಾಯಿಸಲು ಪ್ರಯತ್ನ ಮಾಡಿದಾಗ ನನಗೆ ಇರುಸುಮುರುಸು.
ನನ್ನದೇನೂ ಅಭ್ಯಂತರವಿಲ್ಲ. ನನ್ನಂತೆ ನೀನಾಗುವುದು ನಿನ್ನಂತೆ ನಾನಾಗುವುದು ಬೇಡ. ಹಾಗೆಂದು ನೀನು ನೀನಾಗಿ ನಾನು ನಾನಾಗಿ ಇರುವುದೂ ಸರಿಯಲ್ಲ. ನಿನ್ನಲ್ಲೊಂದಷ್ಟು ವೈಚಾರಿಕತೆ, ವೈಜ್ಞಾನಿಕತೆ ಮೂಡಲಿ, ನನ್ನಲ್ಲಿ ಒಂದಷ್ಟು ಭಕ್ತಿಭಾವ ಸುಳಿಯಲಿ. ಏಕೆಂದರೆ ಇಬ್ಬರೂ ಬಹುಕಾಲ ಕೂಡಿ ಕಳೆಯಬೇಕು. ನಾವಿಬ್ಬರೂ ಬೆಳೆದ ಪರಿಸರ, ರೂಢಿಸಿಕೊಂಡು ಬಂದ ಆಚಾರ ವಿಚಾರಗಳನ್ನು, ಓದಿನಿಂದ, ಸಂಪರ್ಕದಿಂದ ಗಳಿಸಿಕೊಂಡ ಅನುಭವಗಳ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ, ತರ್ಕಿಸಿ ಸಮನ್ವಯದ ಸರಿದಾರಿ ನಮ್ಮದಾಗಿಸಿಕೊಳ್ಳೋಣ. ಇದೊಂದರಲ್ಲಲ್ಲ ಎಲ್ಲದರಲ್ಲೂ ನನ್ನದೇ ಆಗಬೇಕೆಂಬ ಅಹಮಿಕೆ ದೂರ ತಳ್ಳಿ ಪರಸ್ಪರ ಒಂದು ಹೆಜ್ಜೆ ಹಿಂದೆ, ಒಂದು ಹೆಜ್ಜೆ ಮುಂದೆ ಸರಿದು ನಮ್ಮತನ ಮೆರೆಯೋಣ. ಸಂಸಾರದಲ್ಲಿ ನಾನು ಎಂಬುದಕ್ಕಿಂತ ನಾವು ಎಂಬ ಭಾವ ಬಹು ಮುಖ್ಯ.
ನಾನು ಕಂಡುಕೊಂಡಂತೆ ಹೊಂದಾಣಿಕೆಯೆಂಬ ಮೂಲ ಮಂತ್ರವರಿಯದ ಹೊರತು ‘ಸುಖ ಸಂಸಾರಕ್ಕೆ ಸಾವಿರ ಸೂತ್ರಗಳೂʼ ಸಾಲವು. ಹೊಂದಾಣಿಕೆಯೇ ಈ ಎಲ್ಲ ಸೂತ್ರಗಳ ತಾಯಿ ಬೇರು ಎಂಬುದನ್ನರಿತು ಸಾಗಿದ್ದರಿಂದಲೇ ನಾವು ಗೆಲ್ಲುತ್ತ ಸಾಗಿದ್ದೇವೆ ಅಲ್ಲವೆ?
ಪೂಜೆ ಆಚರಣೆಗಳು ಕೇವಲ ದೈಹಿಕ ಕ್ರಿಯೆಗಳಲ್ಲ. ಮನಸ್ಸಿಗೆ ವಿಚಾರಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು. ಇವು ಕೇವಲ ಕೃತಕವಾಗಿ ನಡೆಯದೇ, ಮಾಡುವ ಕ್ರಿಯೆಯಲ್ಲಿ ತಾಧ್ಯಾತ್ಮಭಾವದಿ ದೇಹ ಮನಸ್ಸು ಒಂದುಗೂಡಿಸುವ ಪ್ರಕ್ರಿಯೆ. ಇದರೊಟ್ಟಿಗೆ ಉಸಿರನ್ನೂ ಸಮ್ಮಿಳಿತಗೊಳಿಸದರೆ ಯೋಗವಾಗುತ್ತದೆ. ಯೋಗ ಪೂಜಾಪ್ರಕ್ರಿಯೆಯ ಮುಂದುವರೆದ ಹಂತ. ವೈಜ್ಞಾನಿಕವಾದುದು ಮತ್ತು ಆರೋಗ್ಯಪೂರ್ಣವಾದುದು. ನೀನು ನಿತ್ಯ ಮಾಡಿಕೊಳ್ಳುವ ಲಿಂಗಪೂಜೆ ಅದೊಂದು ‘ಶಿವಯೋಗ’. ಅದರಲ್ಲಿ ಪೂರ್ಣ ಗಮನವಿಟ್ಟು, ಹೊರಗಿನ ವಿಚಾರ ಆಲೋಚನೆಗಳಿಗೆ ತಲೆದೂಗದೇ, ಬರುವ ಯೋಚನೆಗಳನ್ನು ಸುಮ್ಮನೇ ಸಾಗಿಸುತ್ತ, ಲಿಂಗದಲ್ಲಿ ಮನ ಕೇಂದ್ರೀಕರಿಸುತ್ತ ಧ್ಯಾನಾಸಕ್ತಳಾಗಿ ಮಾಡಿದೆಯೋ ನಿನ್ನ ಮನಸ್ಸು ಶಾಂತ ಸಾಗರ. ನೀನೋ ಸಮೃದ್ಧ ಸುಖಿ. ಖುಷಿಯಾಗಿರು ಚಿನ್ನ, ಯಾವುದಕ್ಕೂ ಬೇಸರಿಸಿಕೊಳ್ಳದಿರು…
ಬೇಸರಿಸಿಕೊಳ್ಳದಿರು
ಭ್ರಮೆಯಲ್ಲವೀ ಬದುಕು
ಪ್ರೀತಿ ಭರವಸೆ ತೀಡೊ ಸುಳಿಗಾಳಿಯು
ಒಮ್ಮೊಮ್ಮೆ ಗೆಲುವಾಗಿ
ಮತ್ತೊಮ್ಮೆ ಸೋಲಾಗಿ
ಸೋಲು ಗೆಲುವಿನ ನಡುವೆ
ಈ ಪಯಣವು
ನನ್ನಂತೆ ನೀನಿಲ್ಲ ನಿನ್ನಂತೆ ನಾನಿಲ್ಲ
ನಾನು ನೀನುಗಳ ಸಮಪಯನ ಬಾಳು
ಸುಖದುಃಖದೇರಿಳುವು
ನಂಟು ಗಂಟಿನ ತೊಡಕು
ಬಿರುಗಾಳಿ ಬೀಸಿದರೂ
ಬಿಡದ ಬಂಧ
ದುಃಖವನು ದಡದೂಡಿ
ಸವಿದು ಸುಖ ತಿಳಿನೀರ
ಈಜಬೇಕು ಇದ್ದು ಜೈಸಬೇಕು
ಅವರಿವರ ಮಾತೇಕೆ
ಬದುಕಿರುವ ರೀತೇಕೆ
ನನ್ನರಿವು ನನಗೆ ಸರಿ ದಾರಿಯು
ಕೊಳಲುಲಿದ ರಾಗಕ್ಕೆ
ಒಲಿದಂತೆ ಹಾಡುತ್ತ
ಸಂತಸದಿ ನಗುನಗುತ ನಲಿದಾಡುವ
ಬಿರುಗಾಳಿ ಬೀಸಿದರೂ
ನೆಲೆಯೂರಿ ನಲಿದಾಡಿ
ಒಲಿದಂತೆ ನಾ ನಡೆವೆ ನನ್ನ ರಮಣಿ
***
ಸುಮ್ಮನೇ ಬಂಧುಗಳಲ್ಲಿ ಬರುವ ಇರುಸು ಮುರುಸುಗಳಿಗೆ ತಲೆಕೆಡಿಸಿಕೊಳ್ಳಬೇಡ. ನಾವು ತಿಳಿದವರು. ಋಣಾತ್ಮಕ ಆಲೋಚನೆಗಳನ್ನು ದೂರಸರಿಸಿ ನಿತ್ಯ ಸಂಬಂಧಗಳನ್ನು ಕಟ್ಟಿಕೊಳ್ಳುವುದರ ಕಡೆಗೇ ಗಮನಹರಿಸೋಣ. ಆಗ ಸದಾ ನೀನು ನೀನೇ ಆಗಿರುತ್ತಿ. ನಿನ್ನ ಭಾವಬುತ್ತಿ ತೊಳಲಾಡುತ್ತಿರುವವರ ಹಸಿವೆಗೆ ಆಹಾರವಾಗಲಿ. ಅದನುಂಡು ಅವರು ಬದಲಾಗುತ್ತಾರೆ. ಇಲ್ಲದಿದ್ದರೆ ಅವರಿಗೆ ನಾವೇ ಆಹಾರವಾಗುತ್ತೇವೆ. ಆಹುತಿಯಾಗುತ್ತೇವೆ.
ನೀನು ಯಾವಾಗಲೂ ಅವರು ಹಾಗಂದರು, ಇವರು ಹೀಗೆಂದರು; ಅಪ್ಪ ಹಾಗೆ ಹೀಗೆ, ಅಣ್ಣ ಹೀಗೆ ಎಂದೆಲ್ಲ ಗೊಣಗುತ್ತ, ಕೊರಗುತ್ತ ಕೂತರೆ ಪ್ರಯೋಜನವಿಲ್ಲ. ಕೆಲವರು ಅನ್ನುವುದಕ್ಕಾಗಿಯೇ ಇರ್ತಾರೆ. ಅದು ಅವರ ಸ್ವಭಾವ. ಅದನ್ನು ಬದಲಿಸುವುದು ಅಷ್ಟು ಸುಲಭವಲ್ಲ. ಅವರ ಮಾತಿಗೆ ಕಿವಿಗೊಡದೇ ನಾವು ಬದಲಾಗುವುದು ಒಳ್ಳೆಯದು. ಕಿವಿಗೊಟ್ಟರೂ ಅದನ್ನು ಧನಾತ್ಮಕವಾಗಿ ತೆಗೆದುಕೊಂಡು ಇನ್ನಷ್ಟು ಗಟ್ಟಿಗೊಳ್ಳಬೇಕು. ಕುಟುಂಬವೆಂದರೆ ಕೇವಲ ನಾನು ನೀನಲ್ಲ. ನನ್ನ ನಿನ್ನ ತಂದೆ-ತಾಯಿ, ಅಣ್ಣ-ತಮ್ಮ, ಅಕ್ಕ-ತಂಗಿ, ಅಜ್ಜ-ಅಜ್ಜಿ, ಜೊತೆಗೆ ಹಚ್ಚಿಕೊಂಡವರು, ನಮ್ಮನ್ನು ನೆಚ್ಚಿಕೊಂಡವರು ಹೀಗೆ ಎಲ್ಲರೂ ನಮ್ಮ ಕುಟುಂಬದ ಸದಸ್ಯರೇ. ಪರಸ್ಪರ ಕಷ್ಟ ನಷ್ಟಗಳಿಗೆ ನಾವಾಗಬೇಕು. ನಮ್ಮ ಕಷ್ಟ ನಷ್ಟಗಳಿಗೆ ಅವರಾಗಬೇಕು. ನಾವು ಅವರಿಗೆ ನೆರವಾಗೋದು, ಪಾಲನೆ ಪೋಷಣೆ ಮಾಡೋದು ನಮ್ಮ ಧರ್ಮ. ಅದಕ್ಕೆ ಫಲಾಪೇಕ್ಷೆ ಬಯಸದಿರುವುದೇ ಒಳಿತು. ನಾವು ಮಾಡಿದ್ದಕ್ಕೆ ಒಳ್ಳೆಯದೆಂದಾರು, ಕೆಟ್ಟದೆಂದಾರು ಎಂದು ಯೋಚಿಸುತ್ತ ಕೂರದೇ ನಾವು ಮಾಡಬೇಕಷ್ಟೆ. ಮನಸಾರೆ ಮಾಡಿ, ಹೃದಯಾರೆ ಹರಿಸಿ ಇದ್ದುಬಿಡಬೇಕು. ಜನಮೆಚ್ಚಿಕೊಳ್ಳುವುದು ಮುಖ್ಯವಲ್ಲ ಮನ ಮೆಚ್ಚಿಕೊಳ್ಳಬೇಕು. ಒಂದು ವೇಳೆ ಮಾಡುವ ಕಾರ್ಯಕ್ಕೆ ಜನಮನ್ನಣೆಯೂ ದೊರೆತರೆ ನಾವೇ ಭಾಗ್ಯಶಾಲಿಗಳು.
ಓಯ್ ಚಿನ್ನ, ಪ್ರತಿಯೊಂದಕ್ಕೂ ಮತ್ತೊಬ್ಬರನ್ನೇ ದೂರುವುದು ಬೇಡ. ನಾವೂ ನಮ್ಮ ನಡೆಯನ್ನು ಪರಾಂಬರಿಸಿಕೊಂಡು ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಏನಂತಿ? ನನ್ನ ಅಭಿಪ್ರಾಯಕ್ಕೆ ನೀನು ಮನ್ನಣೆ ಕೊಟ್ಟೇ ಕೊಡ್ತಿಯಾ ಅಂತ ಗೊತ್ತು. ಹಾಗಾಗಿ ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳೋಣ, ಯಾವುದೇ ಗಳಿಗೆಯಲ್ಲಿ ನಡೆದ ಕೆಲವು ನೋವಿನ ಘಟನೆಗಳನ್ನು ಶಾಶ್ವತವಾಗಿ ಉಳಿಸಿಕೊಂಡು ವೈಷಮ್ಯ ಬೆಳೆಸಿಕೊಳ್ಳುವುದು ಬೇಡ. ತಪ್ಪು ಯಾರದೇ ಇರಲಿ ಕಾಲಕಳೆದಂತೆ ಕಹಿಘಟನೆಗಳನ್ನು ಮರೆತು ಮತ್ತೆ ಒಂದಾಗುವುದೊಳಿತು. ಯಾಕೆಂದರೆ ಕೂಡಿದ ಈ ಸಂಬಂಧಗಳು ಇದೊಂದೇ ಜೀವನಕ್ಕೆ ಎಂಬುದು ನೆನಪಿರಲಿ. ನಮ್ಮ ಸಂಸಾರ ಸಸಾರವಾಗಿರಲು ಹೀಗೆ ಹೊಸ ಸೂತ್ರಗಳನ್ನು ಹೊಸೆಯುತ್ತಲೇ ಪರಸ್ಪರ ಬೆಸೆದುಕೊಳ್ಳುತ್ತಲೇ ಸಾಗಬೇಕು. ನಕ್ಕು, ಅತ್ತು ಭಾವನೆಗಳನ್ನು ಹೊರಹಾಕಿ, ಆತಂಕಗಳ ದೂಡಿ ಮೈಕೊಡವಿ ಮುಂದೆ ಸಾಗಬೇಕು. ಏನಂತಿಯಾ..?
ನಕ್ಕು ಬಿಡು ಗೆಳತಿ, ಅತ್ತು ಬಿಡು ಒಮ್ಮೆ,
ಆತಂಕ ದುಗುಡಗಳ ದೂಡಿಬಿಡು
ಭಯ ಬೇಡ ಭವಿತದಲಿ ಭರವಸೆಯು ಒಡಮೂಡಿ
ಬದುಕಿನಲಿ ಸಮರಸದಿ ಸವಿಗಾನ ಕೂಡಿ
ಬಯಸಿದ್ದು ಕನಸಿದ್ದು ಕೈಗೂಡದಿರಲಾಗ
ಬೆಚ್ಚಿ ಬಸವಳಿಯದಿರು ಸಾಗು ಮುಂದೆ
ಸೌಖ್ಯದ ಸುಳಿಗಾಳಿ ಬೀಸುವುದು ಕಾದಿರಲು
ಹನಿಗೂಡಿ ಭರವಸೆಯ ಬೀಜ ಮೊಳೆತು
ಹದವಾಗೊ ಸಮಯಕ್ಕೆ ಹಾತೊರೆಯುತಿರು ಮತ್ತೆ
ಮೂಡುವುದು ಕಣ್ಣಂಚಿನಾಸೆ ಚಿಗುರಿ
ಭಾವಜೀವಗಳೆರಡು ಕೂಡಿ ಕಟ್ಟಿದ ಕನಸು
ಮನದ ಹೊಲದಲಿ ಬೆಳೆದ ಪ್ರೀತಿ ಹುಲುಸು
ಬಾ ಸಖಿಯೆ ಬೆಳಕಾಗು ಕಾರ್ಗತ್ತಲು ಕರಗಲು
ತನುಮನವು ತಂಪಾಗಿ ಚಿಂತೆಚಿತೆಯಾರಲು
***
ಈಗ ನೋಡು ರಕ್ಷಾಬಂಧನದ ಹಬ್ಬಕ್ಕೆ ನಿನ್ನ ಪ್ರೀತಿಯ ತಮ್ಮನಿಗೆ ರಾಖಿ ಕಟ್ಟಲು ಹೋಗಿದ್ದೀಯಾ. ಅಕ್ಕ-ತಮ್ಮ, ಅಣ್ಣ-ತಂಗಿಯರ ಬಾಂಧವ್ಯ ಬೆಸೆಯೋ ಈ ಹಬ್ಬ ಎಷ್ಟೊಂದು ಸಡಗರ ಅಲ್ಲವೆ? ನಮ್ಮ ಎಲ್ಲ ಹಬ್ಬಗಳನ್ನು ನೆನೆಸಿಕೊ. ಒಂದೊಂದು ಹಬ್ಬವೂ ನಮ್ಮ ಸಂಬಂಧಗಳನ್ನು ಬೆಸೆಯಲು ಹವಣಿಸುತ್ತದೆ. ದಸರಾ ಹಬ್ಬದಲ್ಲಿ ಬನ್ನಿ ಕೊಟ್ಟು “ನಾವೂ ನೀವು ಬಂಗಾರದಂಗಿರೋಣ” ಅಂತೀವಿ. ಸಂಕ್ರಾಂತಿ ಹಬ್ಬದಲ್ಲಿ “ಎಳ್ಳು ಬೆಲ್ಲದಂಗಿರೋಣ”, ಯುಗಾದಿ ಹಬ್ಬದಲ್ಲಿ “ಬೇವು-ಬೆಲ್ಲದ ರೀತಿ ಸಿಹಿ-ಕಹಿ ಸಮನಾಗಿ ಸ್ವೀಕರಿಸೋಣ” ಎಂದುಕೊಳ್ಳುತ್ತೇವೆ. ಹೀಗೆ ಪ್ರೀತಿ ಬೆಸೆಯುತ್ತ, ಹಂಚಿಕೊಂಡು ತಿನ್ನುತ್ತ, ನಿಸರ್ಗಪ್ರೀತಿಯೊಂದಿಗೆ ಖುಷಿಯಿಂದ ಹಬ್ಬ ಆಚರಿಸುತ್ತೇವೆ. ಆದರೆ ಇತ್ತೀಚೆಗೆ ಅರ್ಥಪೂರ್ಣ ಆಚರಣೆಗಿಂತ ಆಡಂಬರ ಹೆಚ್ಚುತ್ತಿದೆ. ಆಡಂಬರಕ್ಕಿಂತ ಅರ್ಥಪೂರ್ಣತೆ ಮುಖ್ಯ.
ಸರಿ, ರಾಖಿ ಹಬ್ಬ ಮುಗಿದು ಐದು ದಿನವಾಯ್ತು. ಯಾವಾಗ ಬರ್ತಿ….. ನೀರಿಲ್ಲದೂರಿನಲಿ ಇರಬಹುದು ಗೆಳತಿ. ನೀನಿಲ್ಲದೂರಿನಲಿ ಇರುವುದು ಬಲು ಕಷ್ಟ. ಕಾಯಿಸದೇ ಬೇಗ ಬಾ ನನ್ನೆದೆಯ ಒಡತಿ. ಹೇಳಿಕೇಳಿ ಇದು ಮಳೆಗಾಲ, ಅನುರಾಗದ ಸಮಯ, ನನ್ನಂತರಂಗದರಸಿ ಮನೆಯಲಿರದಿದ್ದರೆ ಹೇಗೆ? ನಿನಗೆ ಗೊತ್ತು ನಾನು ಯಾವಾಗಲೂ ಮನೆಯಲ್ಲಿ ಬಂಧಿಯಲ್ಲ, ನನ್ನವಳ ತೋಳ ಬಂಧಿ ಎಂದು.
ಚಿನ್ನ…. ಬಹುತೇಕ ಎಲ್ಲರೂ ಸಪ್ತಪದಿ ತುಳಿದು ಮದುವೆಯಾಗಿದ್ದೇವೆ ಎನ್ನುತ್ತಾರೆ. ನನ್ನ ಅನಿಸಿಕೆಯಲ್ಲಿ ಕೇವಲ ಒಮ್ಮೆ ಸಪ್ತಪದಿ ತುಳಿದರೆ ಸಾಲದು ಪರಸ್ಪರ ಜೀವನದುದ್ದಕ್ಕೂ ಪ್ರೀತಿಪದಿ ತುಳಿಯುತ್ತಿರಬೇಕು.
ಸಪ್ತಪದಿಗಳ ತುಳಿದು
ಸತಿಪತಿಗಳಾಗುತ್ತಾರೆ
ಜೀವನವಿಡೀ ಒಟ್ಟಿಗೆ ಹೆಜ್ಜೆ ಹಾಕೋಣ
ಎಂಬ ಶಪಥದೊಂದಿಗೆ.
ಗೆಳತಿ,
ನಾನೂ ನೋಡುತ್ತಿದ್ದೇನೆ,
ಅದೆಷ್ಟೋ ದಿನ ತಿಂಗಳು ವರ್ಷಗಳಿಂದ
ನನ್ನ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತ
ಹೃದಯಬಡಿತಕ್ಕೆ ತಾಳವಾಗುತ್ತ
ಉಸಿರಿಗೆ ಉಸಿರಾಗಿ
ಹಸಿವಿಗೆ ಕಸುವಾಗಿ
ಕವಿತೆಗೆ ಕಲ್ಪನೆಯಾಗಿ
ವಿಚಾರಕ್ಕೆ ವಿಮರ್ಶಕಿಯಾಗಿ
ಸೋಲಿಗೆ ಗೆಲುವಾಗಿ
ಸಾಗುತ್ತಿರುವಿ.
ಇದಕ್ಕೆ ಏನೆನ್ನಬೇಕು
ಪ್ರೀತಿಪದಿ ಎಂದರಾಗದೇ
ಹೌದು ನನ್ನರಸಿ, ನಾವಿಬ್ಬರೂ ಪ್ರೀತಿಪದಿ ತುಳಿಯುತ್ತಲೇ ಇದ್ದೇವೆ. ನಿನ್ನ ಬಿಟ್ಟು ಒಂದು ಕ್ಷಣಾನೂ ದೂರ ಇರಲಾರೆ. ನೀನೆಲ್ಲೋ…. ನಾನಲ್ಲೆ…. ಈ ಜೀವ ನಿನ್ನಲ್ಲೆ… ಎಂಬ ಸಿನೆಮಾ ಹಾಡಿನಂತೆ.
(ಕೃತಿ: ನನ್ನಿನ್ನ ನಗಿ ನೋಡಿ (ಪತ್ರಗಳು), ಲೇಖಕರು: ಡಾ. ನಿಂಗು ಸೊಲಗಿ, ಪ್ರಕಾಶಕರು: ಕಾಯಕ ಪ್ರಕಾಶನ, ಬೆಲೆ: 100/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಮನದ ಮಾತುಗಳು ಕೇಳಲು ಹಿತವಾಗಿ ರೋಮಾಂಚನಗೊಳಿಸಬಲ್ಲವು. ಅದ್ಭುತ ಕಾವ್ಯ ಯೋಲೆ.
ದಾಂಪತ್ಯ ಜೀವನದ ಪ್ರೀತಿಯನ್ನು ಹೆಚ್ಚಿಸುವ ಪತ್ರಗಳು. ಪೂರ್ಣ ಪುಸ್ತಕ ಓದುವ ಆಸೆ ಹೆಚ್ಚಿಸಿದೆ.??