ನಾನು ಇಲ್ಲಿ ಕುಳಿತು ಮಾತಾಡುತ್ತಿರುವ ನನ್ನ ‘ಈಗ’, ನೀವು ಕೇಳುತ್ತಿರುವ ನಿಮ್ಮ ‘ಈಗ’ ಒಂದೇ ಅಲ್ಲ. ಇಡೀ ಬ್ರಹ್ಮಾಂಡದ ಹೋಲಿಕೆಯಲ್ಲಿ ನಾವು ಸಣ್ಣವರಾದ್ದರಿಂದ ಈ ವಿಪರ್ಯಾಸ ಗೋಚರ ಆಗುತ್ತಿಲ್ಲ. ಹಾಟ್ ಬಲೂನಿನ ಮೇಲೆ ಇರುವ ಇರುವೆಗೆ ತನ್ನ ಜಾಗ ಮಟ್ಟಸ ಎಂದೇ ತೋರುತ್ತದೆ. ಮನುಷ್ಯನಿಗೆ ನಿಂತ ಜಾಗ ಮಟ್ಟಸ ಅನ್ನಿಸುವುದೂ ಹೀಗೆಯೇ. ನಾವು ಭೂಮಿಯ ಗಾತ್ರಕ್ಕೆ ಹೋಲಿಸಿ, ತುಂಬಾ ಗಾತ್ರ ಇದ್ದಿದ್ದರೆ ಅದು ದುಂಡು ಎಂದು ಕಣ್ಣಿಗೇ ಕಾಣಿಸುತ್ತಿತ್ತು. ಕರಣಂ ಪವನ್‌ ಪ್ರಸಾದ್‌ ಬರೆದ ‘ಸತ್ತು’  ಎಂಬ ಹೊಸ  ಕಾದಂಬರಿಯಿಂದ ಕೆಲವು ಪುಟಗಳು ನಿಮ್ಮ ಓದಿಗೆ

ಅವನಿಗೆ ತಲೆಯಾಡಿಸುತ್ತಲೇ ಸುದಿಪ್ತೋ “ಭ್ರಮೆಯಲ್ಲೂ ಕೂಡ ನಾವು ನಮಗೆ ಬೇಕಾದ ಧೋರಣೆಯ ಭ್ರಮೆಯನ್ನೇ ಕಟ್ಟಿಕೊಳ್ತೇವೆ ದೇಬ್”. ಸುಪರ್ಣಾ ಸುದಿಪ್ತೋ ಹೇಳಿದ ಮಾತನ್ನು ಮಥಿಸಿಕೊಳ್ಳುತ್ತಲೇ, ದ್ರವವನ್ನು ಚಪ್ಪರಿಸಿ ಗಂಟಲಿನ ಶಾಖವನ್ನು ಅನುಭವಿಸುತ್ತಿದ್ದಳು. ಸುದಿಪ್ತೋ ಮಾತನ್ನು ಮುಂದುವರೆಸಿದ್ದ “… ಹಾಗೇ ಸಮಯ ಅನ್ನೋದು ಕೂಡ ಭ್ರಮೆ. ಸಮಯ ಅನ್ನೋದೆ ಇಲ್ಲ. ನಿಮಗೆ ಹೇಳಿದ್ದನಲ್ಲ ದೇಬ್ ನಾನು ಕೆಲಸ ಮಾಡುತ್ತಿರುವ ಡಾಕ್ಯುಮೆಂಟರಿಯ ಬಗ್ಗೆ. ಇದು ನನ್ನ ಮಾತಲ್ಲ. ಹಲವು ಪ್ರಯೋಗಗಳ ಮೂಲಕ ವಿಜ್ಞಾನಿಗಳು ಈಗ ಒಪ್ಪುತ್ತಿರುವ ಸಂಗತಿ” ಎಂದ. ಗೋಡೆಗೆ ನೇತು ಹಾಕಿದ್ದ ದ ಲಾಸ್ಟ್ ಡೇ ಆಫ್ ಪೊಂಪೆ ಚಿತ್ರವನ್ನು ಗಮನಿಸುತ್ತಾ ದೇಬಶೀಷ ತೀರಾ ಕೆಳದನಿಯಲ್ಲಿ ನಿಧಾನವಾಗಿ…

“ಅಲ್ಲಯ್ಯಾ ಈಗ ಸೌಂದರ್ಯ ಇಲ್ಲ ಅಂದೆ, ಆಗ ಸಮಯ ಇಲ್ಲ ಅಂದೆ, ನಾಳೆ ನಾವೇ ಇಲ್ಲ ಅಂತೀಯಾ, ಹಂಗಾರೆ ಏನಯ್ಯಾ ಇದೆ? ಈ ಕೋಳಿ ಎದೆ ಕಾಣಿಸ್ತಾ ಇದ್ಯಾ ಹೇಳು? ನೋಡು ನಾನು ತಿಂತಾ ಇದೀನಿ. ಸರಿಯಾಗಿ ನೋಡು. ಆಮೇಲೆ ಇಲ್ಲ ಅನ್ನಬೇಡ. ಇದು ಗ್ಲಾಸ್ ಕುಡಿತಾ ಇದ್ದೀನಿ ನೋಡು, ಈ ಮೀನು ಸಖತ್ ಆಗಿದೆ ತಿಂದೆ ನೋಡ್ತಾ ಇದೆಯಾ” ಎಂದು ಹೇಳಿ ಗೊಣಗಿದ. ಅವನ ವರಸೆಯನ್ನ ಸುಪರ್ಣಾ ಬಾಗಿಕೊಂಡು ಅಭ್ಯಾಸವಿದ್ದ ನೋಟದಲ್ಲಿ ನೋಡಿದಳು.

(ಕರಣಂ ಪವನ್‌ ಪ್ರಸಾದ್‌)

“ಇಲ್ಲ ಅಂದರೆ ಇದೆ ಅಂತಲೂ ಹೌದು…”

“ಸುಪರ್ಣಾ ಇವನ್ನ ರೂಮಿಗೆ ಕಳಿಸು, ಔಟ್ ಫುಲ್ ಔಟ್. ಒಂದೇ ಲೋಟಕ್ಕೆ ಸತ್ಯನಾಶ. ಹೋಗೋ ಮಲ್ಕೋ ಹೋಗು. ನನ್ನ ಕೈಯಲ್ಲಿ ಇನ್ನ ಆಗಲ್ಲ. ಯಾರೋ ನೀನು ತಂದೆ. ಇಲ್ಲ ಅಂದರೆ ಇದೆ ಅಂತೆ!”

ಸುಪರ್ಣಾ ಸೋಫಾದ ಮೇಲೆ ಉರುಳಿ ನಗಾಡುತ್ತಿದ್ದಳು. ಅವಳು ಕಣ್ಣು ಕೆಂಪಾಗಿ ಬಿಕ್ಕಿದಳು, ಸುದಿಪ್ತೋ ಕೂಡ ಹೊಟ್ಟೆ ಹಿಡಿದು ನಗತೊಡಗಿದ. ದೇಬಶೀಷ ಗಂಭೀರವಾಗಿ “ಹೌದು ಕಣೋ ಸುದಿಪ್ತೋ. ನೋಡು ಮೀನು ಇಲ್ಲ, ಮೂಳೆ ಇದೆ. ಇಲ್ಲ ಅಂದರೆ ಇದೆ ಎಂದರ್ಥ ವ್ಹಾ!” ತಟ್ಟೆಯನ್ನು ಮೇಲೆತ್ತಿ ತೋರಿಸಿದ. ನಗುವನ್ನು ಹತೋಟಿಗೆ ತಂದುಕೊಂಡ ಸುದಿಪ್ತೋ…

“ದೇಬ್ ನಾನು ಗಂಭೀರವಾಗಿ ಹೇಳ್ತಾ ಇದೀನಿ. ಈಗ ಸಮಯ ಇಲ್ಲ ಅಂದರೆ ನಾವು ಮಾಡಿಕೊಂಡ ಮಾಪನ ಇದೆ. ಇಲ್ಲ ಅಂತ ಸಾಧಿಸಲು ಕೂಡ ಕ್ಲಾಕ್ಸ್ ಇವೆ. ಅದು ಸೌಂದರ್ಯಕ್ಕೆ ಹೇಳಿದಂತೆ ಒಂದು ಕಿಂಚಿತ್ ಅವಧಿಯನ್ನು ಗುರುತಿಸಲು ಬಳಸುವುದು. ನಾನು ಮತ್ತು ನೀವು ಹೀಗೆ ಕೂತಿರುವುದನ್ನು ನಾವೇ ಸೆಕೆಂಡ್, ನಿಮಿಷ ಎಂಬ ಮಾಪನ ಬಿಟ್ಟು ಹೊಸದು ಮಾಡಿಕೊಂಡು ಹೀಗೆ ಹೇಳಬಹುದು… ಒಂದು ಸಿಪ್ ಕುಡಿಯಲು ಬೇಕಾದ ಅವಧಿ ಎನ್ನಬಹುದು, ಮಳೆ ಬರುತ್ತಿದ್ದರೆ ಇಷ್ಟು ಹನಿ ಬಿದ್ದ ಅವಧಿ ಎನ್ನಬಹುದು, ಚಂದ್ರನ ಚಲನೆ, ಭೂಮಿಯ ಚಲನೆ ನೋಡೋದು ಕೂಡ ಈ ತರಹವೇ ಆದರೆ ಅದು ಒಂದೇ ಗತಿ ಮತ್ತು ಮಧ್ಯಂತರ ಹೊಂದಿರಬೇಕಾಗುತ್ತದೆ.

ಹಾಗಾಗಿಯೇ ಪೆಂಡುಲಮ್ ಸರಿಯಾದ ಉಪಕರಣ. ಅರ್ಥಾತ್ ನಿಲ್ಲಿಸದೇ ಒಂದೇ ಗತಿಯಲ್ಲಿ ಇಷ್ಟು ಸಲ ಹೀಗೆ ಹೋಗಿ ಹೀಗೆ ಬಂದರೆ ಇಷ್ಟು ಕ್ಷಣ. ಒಟ್ಟಿನಲ್ಲಿ ಚಲನೆಯ ಧೋರಣೆಗೆ ಕಟ್ಟಿಕೊಂಡ ಭ್ರಮೆ ಇದು. ಈಗ ನಮ್ಮ ಮನೆಯಲ್ಲಿ ಒಂದು ನಿಮಿಷಕ್ಕೆ ಇಷ್ಟು ಸಲ ಪೆಂಡುಲಮ್ ಆ ಕಡೆಯಿಂದ ಈ ಕಡೆ ಓಡಾಡಿದ್ದು ಇನ್ನೆಲ್ಲೋ ಬ್ಲಾಕ್ ಹೋಲಿನಲ್ಲಿ ಅದಕ್ಕೆ ಅರ್ಥವೇ ಇಲ್ಲ. ಈ ಅವಧಿಯಲ್ಲಿ ಇನ್ನೇನೋ ಆಗಿರುತ್ತದೆ. ಗುರುತ್ವ, ಚಲನೆ, ಗಾತ್ರ ಹೀಗೆ ಭಿನ್ನವಾದಂತೆ ಮಾಪನ ಬೇರೆ ಆಗುವಾಗ ಸಮಯ ಅಥವಾ ನೌ-ಈಗ ಎಂಬುದು ಇಲ್ಲವೇ ಇಲ್ಲ. ಅವತ್ತು ನಾನು ನಿಮಗೆ ವಿವರಿಸಿದ್ದೆ. ನಾನು ಇಲ್ಲಿ ಕುಳಿತು ಮಾತಾಡುತ್ತಿರುವ ನನ್ನ ‘ಈಗ’, ನೀವು ಕೇಳುತ್ತಿರುವ ನಿಮ್ಮ ‘ಈಗ’ ಒಂದೇ ಅಲ್ಲ. ಇಡೀ ಬ್ರಹ್ಮಾಂಡದ ಹೋಲಿಕೆಯಲ್ಲಿ ನಾವು ಸಣ್ಣವರಾದ್ದರಿಂದ ಈ ವಿಪರ್ಯಾಸ ಗೋಚರ ಆಗುತ್ತಿಲ್ಲ. ಹಾಟ್ ಬಲೂನಿನ ಮೇಲೆ ಇರುವ ಇರುವೆಗೆ ತನ್ನ ಜಾಗ ಮಟ್ಟಸ ಎಂದೇ ತೋರುತ್ತದೆ. ಮನುಷ್ಯನಿಗೆ ನಿಂತ ಜಾಗ ಮಟ್ಟಸ ಅನ್ನಿಸುವುದೂ ಹೀಗೆಯೇ. ನಾವು ಭೂಮಿಯ ಗಾತ್ರಕ್ಕೆ ಹೋಲಿಸಿ ತುಂಬಾ ಗಾತ್ರ ಇದ್ದಿದ್ದರೆ ಅದು ದುಂಡು ಎಂದು ಕಣ್ಣಿಗೇ ಕಾಣಿಸುತ್ತಿತ್ತು.”

“ಸುದಿಪ್ತೋ ನೋಡಿಲ್ಲಿ ಈ ಬಾಟಲ್ ಯಾವ ಬಣ್ಣವಿದೆ ಹೇಳು…”

“ಯಾಕೆ?”

“ನಿನ್ನ ಆರೋಗ್ಯ ಸರಿ ಇದ್ದೀಯಾ ಪರೀಕ್ಷೆ ಮಾಡ್ತಾ ಇದೀನಿ…” ದೇಬಶೀಷ್ ಕುಹಕದ ನಗುವಲ್ಲಿ ಹೇಳಿ ಸುಪರ್ಣಾಳ ಕಡೆ ನೋಡಿದ. ಲೋಟವನ್ನು ಪಕ್ಕಕ್ಕಿಟ್ಟ ಅವಳು ಸೋಫಾಕ್ಕೆ ತಲೆ ಕೊಟ್ಟಿದ್ದಳು. “ನೋಡು ಇವಳು ಮಲಗೇಬಿಟ್ಟಳು. ಇದರಲ್ಲಿ ಇವಳಿಗೆ ಆಸಕ್ತಿಯೇ ಇಲ್ಲ. ಈಗ ಹೇಳು… ಕಪ್ಪು ತುಳಿತಕ್ಕೆ ಒಳಗಾದವರ ಸಂಕೇತ, ಬಿಳಿ ತುಳಿದವರ ಸಂಕೇತ ಅಂತ, ಧಗ್ ಅಂತ ಎದ್ದು ಭಾಷಣ ಮಾಡ್ತಾಳೆ.”

ಅವಳು ಕಣ್ಣು ಕೆಂಪಾಗಿ ಬಿಕ್ಕಿದಳು, ಸುದಿಪ್ತೋ ಕೂಡ ಹೊಟ್ಟೆ ಹಿಡಿದು ನಗತೊಡಗಿದ. ದೇಬಶೀಷ ಗಂಭೀರವಾಗಿ “ಹೌದು ಕಣೋ ಸುದಿಪ್ತೋ. ನೋಡು ಮೀನು ಇಲ್ಲ, ಮೂಳೆ ಇದೆ. ಇಲ್ಲ ಅಂದರೆ ಇದೆ ಎಂದರ್ಥ ವ್ಹಾ!” ತಟ್ಟೆಯನ್ನು ಮೇಲೆತ್ತಿ ತೋರಿಸಿದ. ನಗುವನ್ನು ಹತೋಟಿಗೆ ತಂದುಕೊಂಡ ಸುದಿಪ್ತೋ…

“ಕೇಳಿಸಿಕೊಳ್ತಾ ಇದೀನಿ” ಬೆಳಕಿಗೆ ಕೈ ಅಡ್ಡ ಇಟ್ಟು ಕಣ್ಣನ್ನು ಮುಚ್ಚಿಕೊಂಡಿದ್ದ ಸುಪರ್ಣಾ ಹೇಳಿದಳು. ಸುದಿಪ್ತೋ ಮಾತಿನ ಲಹರಿಯಲ್ಲಿದ್ದ, ಅವನು ದೇಬಶೀಷನನ್ನು ಉದ್ದೇಶಿಸಿ “ಬಣ್ಣ ಅನ್ನೋದು ಕೂಡ…” ಎನ್ನುವ ಹೊತ್ತಿಗೆ….

“ಅದನ್ನೂ ಇಲ್ಲ ಅನ್ನಬೇಡ, ಇಲ್ಲೇ ಬಾಟಲಿಯಿಂದ ತಲೆಗೆ ಹೊಡೆದುಕೊಂಡು ಪ್ರಾಣಾರ್ಪಣೆ ಮಾಡಿಬಿಡ್ತೀನಿ…” ದೇಬಶೀಷ್ ಗಂಭೀರದ ನಗುವಲ್ಲಿ ಹೇಳಿದ.
ಸೋಫಾದ ಮೇಲಿಂದ ಉರುಳಿ ಕೆಳಗೆ ಬಿದ್ದು ಸುಪರ್ಣಾ ನಕ್ಕಳು. ಸುದಿಪ್ತೋ ಕೆಳದುಟಿಯನ್ನು ಕಚ್ಚಿಕೊಂಡು ನಗುವನ್ನು ನುಂಗಿಕೊಂಡ.

“ಬಣ್ಣ ಅಂದರೆ ಬೆಳಕಿನ ಫ್ರಿಕ್ವೆನ್ಸಿ. ಬೆಳಕಿನ ತೂಗಾಡುವಿಕೆಯ ವೇಗ. ತರಂಗ ವೇಗವಾಗಿ ಅಲ್ಲಾಡಿದರೆ ನೀಲಿಯಾಗುತ್ತೆ, ಸ್ವಲ್ಪ ನಿಧಾನವಾದರೆ ಕೆಂಪು ಆಗುತ್ತೆ. ನಮ್ಮ ಕಣ್ಣಿನ ಮೇಲೆ ಅವಲಂಬಿತ, ನಮ್ಮ ಕಣ್ಣಿನ ನರಗಳ ಸೈಕೋ ಫಿಸಿಕಲ್ ರಿಯಾಕ್ಷನ್ ಅದು.”

“ಹಾಗೇನಿಲ್ಲ, ಡೆಹ್ರಾಡೂನಿನಲ್ಲಿ ಅಂದರೆ ನಮ್ಮ ದೇವಭೂಮಿಗೆ ಹೋದಾಗ ಹಿಮಾಲಯದ ಪವಿತ್ರ ಸಸ್ಯಗಳನ್ನು ಆಸ್ವಾದಿಸಿದಾಗ ನನ್ನ ಕಣ್ಣಿಗೆ ಇಡೀ ಬ್ರಹ್ಮಾಂಡ ಕಲರ್ ಕಲರ್ ಕಾಣುತ್ತೆ!” ಎಂದು ಗಹಗಹಿಸಿ ಸೋಫಾಗೆ ಬಿದ್ದು ದೇಬಶೀಷ್ ಹೇಳಿದ. ಪುನಃ ಸುದಿಪ್ತೋ ಕಡೆ ನೋಡಿ “ಕ್ಷಮಿಸು ನಾನು ಅಡಚಣೆ ಮಾಡಿದೆ, ನೀನು ಹೇಳು”

“ಹಾಗೇ ಈ ಬ್ರಹ್ಮಾಂಡಕ್ಕೆ ಕೇಂದ್ರ ಅನ್ನೋದೆ ಇಲ್ಲ ದೇಬ್”

“ಏಯ್ ನೀನು ಇಲ್ಲ ಇಲ್ಲ ಇಲ್ಲ ಅನ್ನೋ ವಿಚಾರ ಬಿಟ್ಟು ಇರೋದು ಹೇಳಪ್ಪಾ…” ನಗುವನ್ನು ಹತೋಟಿಗೆ ತಂದುಕೊಂಡಿದ್ದ ಸುಪರ್ಣಾ ದೇಬಶೀಷನನ್ನು ನೂಕುತ್ತಾ
“ನನ್ನ ಕೈಯಲ್ಲಿ ಇನ್ನೂ ಎದ್ದು ಕುಳಿತಿರೋಕೆ ಆಗಲ್ಲ. ಮಲಗ್ತೀನಿ. ನೋಡಿ ಈ ಪೇಂಟಿಂಗ್ ರೂಮಿಗೆ ತಂದರೆ ಬಿಸಾಕ್ತೀನಿ. ಬೇಕಾದರೆ ಗ್ಯಾರೇಜಿಗೆ ಹಾಕ್ಕೊಳ್ಳಿ, ದುಡ್ಡು ತಗೊಳೋ ಇದಕ್ಕೆ ಸುದಿಪ್ತೋ… ಬಿಡಬೇಡ. ಬಿಟ್ಟಿ ಮಾಡಿಸಿಕೊಳ್ತಾರೆ, ವ್ಯವಹಾರಸ್ಥ ಅವರು” ಎಂದವಳೇ ಮೆಟ್ಟಿಲು ಹತ್ತಿ ಮೇಲಕ್ಕೆ ಹೊರಟಳು.

ರಾತ್ರಿ ಎರಡಾದರೂ ಸುದಿಪ್ತೋ ಮತ್ತು ದೇಬಶೀಷನ ಮಾತಿನ ತಟಾಪುಟಿ ನಿಂತಿರಲಿಲ್ಲ. ಗಾಜಿನ ಟೇಬಲ್ಲಿನ ಮೇಲೆ ತಿನಿಸೆಲ್ಲಾ ಹರಡಿಬಿದ್ದಿತ್ತು. ಇದು ಕೊನೆಯದು ಎಂದು ನಿರ್ಧಾರವನ್ನು ಘೋಷಿಸಿದ್ದ ದೇಬಶೀಷ ಲೋಟವನ್ನು ಹಿಡಿದೆತ್ತಿ ತೋರಿಸಿದ. “ನೀನು ಹೇಳ್ತಿಯಾ ನಿನ್ನ ಊರು ಯಾವುದು ಎಂದರೆ ಬೆಂಗಳೂರು ಅಂತ. ಆದರೆ ಇದು ನನ್ನ ಊರು ಆಗೋಲ್ಲ. ನಮ್ಮ ಬಾಲ್ಯ ಎಲ್ಲಿ ನಡೆದಿರುತ್ತೋ ಅದು ಮಾತ್ರ ನಮ್ಮ ಊರು. ನನ್ನ ಬಾಲ್ಯ ಕೊಲ್ಕತ್ತಾದಲ್ಲಿ ಮತ್ತು ಡೆಹ್ರಾಡೂನಿನಲ್ಲಿ ನಡೆಯಿತು. ಹಾಗಾಗಿ ಅದು ಮಾತ್ರ ನನ್ನದು ಎನ್ನಿಸುತ್ತೆ. ನಂತರದ ಜೀವನದಲ್ಲಿ ಯಾವೆಲ್ಲಾ ಊರಲ್ಲಿ ನಾವು ವಾಸ ಮಾಡಿದರೂ, ಮೂಸಿದರೂ, ಅದು ನಮ್ಮದಲ್ಲ. ಏಕೆ ಈ ಬಾಲ್ಯದ ನೆನಪು ಅಷ್ಟು ಪ್ರಬಲ? ಅದು ನಮ್ಮನ್ನು ಯಾಕಷ್ಟು ಡ್ರೈವ್ ಮಾಡುತ್ತೆ, ಮತ್ತೆ ಬಾಲ್ಯ ತುಂಬಾ ದೀರ್ಘ ಅನ್ನಿಸುತ್ತೆ. ಆದರೆ ನೋಡು ಸುಪರ್ಣಾಳನ್ನು ಮದುವೆ ಆಗಿ ಎಂಟು-ಒಂಬತ್ತು ವರ್ಷ ಆದರೂ ಮೊನ್ನೆ ಮೊನ್ನೆ ಆದಂತಿದೆ. ಅಷ್ಟು ಬೇಗ ಸಮಯ ಓಡುತ್ತೆ…” ಅರ್ಧಗಂಟೆಯ ಮುಂಚೆ ಕುಡಿಯುವುದನ್ನು ನಿಲ್ಲಿಸಿ ಕುಳಿತಿದ್ದ ಸುದಿಪ್ತೋ ದೇಬಶೀಷನ ಮಾತಿಗೆ ಪರಿಹಾರ ನೀಡುವ ದನಿಯಲ್ಲಿ “ನಿಮಗೆ ಹತ್ತು ವರ್ಷ ವಯಸ್ಸು ಅಂದುಕೊಳ್ಳಿ, ನಿಮ್ಮ ಈ ಹಿಂದಿನ ಐದು ವರ್ಷದ ನೆನಪು ಏನಿರುತ್ತೆ ಅದು ನಿಮ್ಮ ಇಡೀ ಜೀವನ ಅನುಭವದ ಶೇ. 50ರಷ್ಟು ಆಗುತ್ತದೆ. ಅದೇ ನಿಮಗೆ ಈಗ ಐವತ್ತು. ಕಳೆದ ಐದು ವರ್ಷದ ನೆನಪು ನಿಮ್ಮ ಇಡೀ ಜೀವನದ ಒಟ್ಟು ಅನುಭವದ ಶೇ. 5ರಷ್ಟು ಅಷ್ಟೇ. ಮತ್ತು ಅದರಲ್ಲಿ ಹೊಸದಾದ ಎನ್ಕೌಂಟರ್ ತೀರಾ ಕಡಿಮೆ. ನೀವೇನು ಹೊಸತಾಗಿ ರೈಲು ನೋಡಿಲ್ಲ, ಬೆಟ್ಟದ ತುದಿ ನೋಡಿಲ್ಲ, ಹೊಸತಾಗಿ ಉಪ್ಪು, ಹುಳಿ, ಖಾರದ ರುಚಿ ಕಂಡಿಲ್ಲ. ಗಾಡಿಯನ್ನು ಹೊಸದಾಗಿ ಕಲಿತಿಲ್ಲ, ಹೆಣ್ಣನ್ನು ಮೊದಲ ಬಾರಿ ಪ್ರೀತಿಸಿಲ್ಲ, ಪ್ರಣಯ ಮಾಡಿಲ್ಲ, ಹೀಗೆ ಅದೇನು ಪ್ರಥಮವಾಗಿ ಈ ಹಿಂದಿನ 5 ವರ್ಷದಲ್ಲಿ ಆಗಿರೋಲ್ಲ. ಜಗತ್ತಿನ ಪ್ರಾಥಮಿಕ ಎನ್ಕೌಂಟರ್ಗಳು ಇಪ್ಪತ್ತೈದು ವರ್ಷಕ್ಕೆ ಬಹುಪಾಲು ಆಗಿಹೋಗಿರುತ್ತೆ. ಅದು ಬಾಲ್ಯದ ಕೊನೇ ಹಂತ. ಇನ್ನೆಲ್ಲ ಪುನರಾವರ್ತನೆ, ಹಾಗಾಗಿ ಅದು ಸಲೀಸು ಆಗಿಬಿಟ್ಟಿರುತ್ತದೆ. ಜೀವನದ ಒಟ್ಟು ಅನುಭವದ ಶೇ.50ರಷ್ಟು ನಮ್ಮ ನಿಕಟಪೂರ್ವ ನೆನಪಿನಲ್ಲಿ ಇದ್ದಾಗ ಅದು ದೀರ್ಘ ಅನ್ನಿಸುತ್ತೆ. ಜನ ಆತ್ಮಚರಿತ್ರೆ ಬರೀತಾರಲ್ಲ ಅವರು ತಮ್ಮ ಬಾಲ್ಯವನ್ನ ವಿವರಿಸಿದಷ್ಟು ವಿವರವಾಗಿ ನಂತರದ ದಿನಗಳನ್ನ ವಿವರಿಸಲ್ಲ ಗಮನಿಸಿದ್ದೀರಾ? ಏಕೆಂದರೆ ವಿವರಗಳು ಸಲೀಸಾಗಿ ಮಂಕಾಗಿಹೋಗುತ್ತೆ. ಮತ್ತು ಬಾಲ್ಯದ ಬಗ್ಗೆ ಬರೆಯುವಾಗ ಇರುವಷ್ಟು ಪ್ರಾಮಾಣಿಕತೆ, ನಂತರದ ದಿನಗಳ ಬಗ್ಗೆ ಬರೆದದ್ದರಲ್ಲಿ ಇರೋಲ್ಲ…”

ಲೋಟ ಕೆಳಗಿಟ್ಟ ದೇಬಶೀಷ “ನೀನು ಹೇಳೋದು ಸರಿ, ನನ್ನ ಹೈಸ್ಕೂಲು ದಿನಗಳು ತುಂಬಾ ದೊಡ್ಡದು ಅನ್ನಿಸುತ್ತೆ. ಅದು ಹೆಚ್ಚೆಂದರೆ ಮೂರು ವರ್ಷ ಆಮೇಲೆ ಹನ್ನೊಂದು ಹನ್ನೆರೆಡು. ಈಗ ಮೂರು ವರ್ಷ ಹೋಗುವುದೇ ತಿಳಿಯಲ್ಲ. ಹಾಗೇ ಪ್ರಮುಖವಾಗಿ ವಿವರವಾಗಿ ಹೇಳಲು ಆಗೋಲ್ಲ. ಇನ್ನೊಂದು ಮಾತು, ನಾನು ಬಾಲ್ಯದ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಬಲ್ಲೆ, ಏಕೆಂದರೆ ಚಿಕ್ಕವನು ಎಂಬ ವಿನಾಯಿತಿ ಇರುತ್ತೆ. ದೊಡ್ಡವರಾದ ಮೇಲೆ ಆದ ಅನುಭವ ಬರೆಯೋಕೆ ಹೋದಾಗ ಆ ವಿನಾಯಿತಿ ಸಿಕ್ಕೋಲ್ಲ, ನಮ್ಮನ್ನ ಜಡ್ಜ್ ಮಾಡಲಿಕ್ಕೆ ಶುರು ಮಾಡುತ್ತಾರೆ, ಹಾಗಾಗಿ ಲೇಖಕ ಕರಪ್ಟ್ ಆಗುತ್ತಾನೆ. ಆತ್ಮಕತೆಗಳಲ್ಲಿ ಎಲ್ಲರೂ ಸುಭಗರೇ, ಅದರಲ್ಲೂ ಈ ಲಿಟ್ರೇಚರಿನವರು ಬರೆಯಕ್ಕೆ ಬರುತ್ತೆ ಅಂತ ತಾನು ಎಷ್ಟು ಸುಭಗ ಎಂದು ಕೊಚ್ಚಿಕೊಳ್ಳುತ್ತಾರೆ. ಓದಿದರೆ ಇವನು ದೈವಾಂಶ ಸಂಭೂತ ಅನ್ನಿಸಬೇಕು ಹಾಗೆ, ಠಕ್ಕರು ಅವರು. ಅದಕ್ಕೆ ನಾನು ನಾನ್ ಫಿಕ್ಷನ್ ಮಾತ್ರ ಓದೋದು. ನಾನೂ ನನ್ನ ಆತ್ಮಕತೆಯ ಡೈರಿ ರೀತಿ ಅನ್ನಿಸಿದ್ದು ಹೇಳಿ ರೆಕಾರ್ಡ್ ಮಾಡುತ್ತೇನೆ. ಅಲ್ಲೂ ಕೂಡ ನನ್ನ ಬಗ್ಗೆ ಅನುಕಂಪ ಗಿಟ್ಟಿಸಿಕೊಳ್ಳೊ ತರಾನೆ ಮಾತಾಡಿರ್ತೀನಿ ಅದು ಬೇರೆ ವಿಚಾರ, ಹ್ಹ ಹ್ಹ ಹ್ಹ ಹ್ಹ” ಹೀಗೆನ್ನುತ್ತಿರುವಂತೆ ಈಚೆ “ದೊಬ್ಬ್…” ಎಂದು ಶಬ್ದವಾಯಿತು. ತುಂಬಾ ಜೋರಾದ ಸದ್ದು.


ದಡಗುಟ್ಟುಕೊಂಡು ಬಾಗಿಲು ತೆರೆದು ತನ್ನ ಪೈಜಾಮವನ್ನು ನಡುವಲ್ಲಿ ಸರಿಮಾಡಿಕೊಂಡು ದೇಬಶೀಷ್ ಮಂದೆ ಬಂದರೆ, ಸುದಿಪ್ತೋ ಕೂಡ ಹೊರಗೆ ನಡೆದು ಬಂದ. ಮನೆಯ ಬಲಭಾಗದಲ್ಲಿ ನಿಂತು ನೋಡಿದರೆ, ಸಂಜೆ ಅಂಗಡಿಗೆ ಹೋಗಿ ಬಾಟಲಿಗಳನ್ನು ತಂದು ಗ್ಯಾರೇಜಿಗೆ ಹಾಕದೇ… ಗೇಟಿನ ಒಳಗೆ, ಗ್ಯಾರೇಜಿನ ಹೊರಭಾಗಕ್ಕೆ, ಸುಪರ್ಣಾಳ ಕಾರಿನ ಮುಂದೆ ನಿಲ್ಲಿಸಿದ್ದ ವೋಲ್ವೋ ಎಕ್ಸಿ90 ಕಾರಿನ ಗಾಜಿನ ಮೇಲೆ ದಪ್ಪ ಕಲ್ಲು ಬಿದ್ದಿದೆ. ಕಾರಿನ ಗಾಜು ಪುಡಿಪುಡಿಯಾಗಿ ಉದುರಿಹೋಗದೇ ಪದರಪದರವಾಗಿ, ಬಿದ್ದಜಾಗದಲ್ಲಿ ಗಾಢವಾಗಿ ಬಿರುಕು ಬಿಟ್ಟಿದ್ದರೆ, ವೃತ್ತಾಕಾರವಾಗಿ ಪೂರ್ಣಗಾಜಿನಲ್ಲಿ ಜೇಡರಬಲೆಯಂತೆ ಬಿರುಕು ಬಿಟ್ಟಿದೆ. ಆ ಹಳ್ಳಬಿದ್ದ ಗಾಜಿನಲ್ಲಿ ಕಲ್ಲು ಸ್ತಬ್ಧವಾಗಿ ಕುಳಿತಿತ್ತು. ಮುಖ ಮಾಂಸವನ್ನೆಲ್ಲಾ ಹಿಂಜಿ ಕ್ಯಾಕರಿಸಿದ ದೇಬಶೀಷ್ ಬೇರೆ ಕಡೆ ಏಟಾಗಿದೆಯಾ? ಎಂದು ಪರೀಕ್ಷಿಸುತ್ತಿದ್ದರೆ, ಸುಪರ್ಣಾ ಕೂಡ ಶಬ್ದವನ್ನು ಕೇಳಿ ಕೆಳಗಿಳಿದು ಬಂದಿದ್ದಳು.

(ಕೃತಿ: ಸತ್ತು (ಕಾದಂಬರಿ), ಲೇಖಕರು: ಕರಣಂ ಪವನ್‌ ಪ್ರಸಾದ್‌, ಪ್ರಕಾಶನ: ಕಾನ್‌ಕೇವ್‌ ಮೀಡಿಯಾ ಅಂಡ್‌ ಪಬ್ಲಿಷರ್‌, ಬೆಲೆ: 120/-)