ಹೀಗೆಲ್ಲಾ ಓದುತ್ತಾ, ಫೋಟೊ ತೆಗೆಯುತ್ತಾ ಮುಂದೆ ಹೋಗುತ್ತಿದ್ದೆ. ಅಲ್ಲೇ ಅಲ್ಲೇ ಇನ್ನೊಂದು ಫಲಕ. ಅದರಲ್ಲಿ ಸಣ್ಣಸಣ್ಣ ಅಕ್ಷರಗಳು. ಆಸ್ಪತ್ರೆಯಲ್ಲಿ ಒಳರೋಗಿಯಾಗಿದ್ದವರಿಗೆಲ್ಲಾ ತಿಳಿದೇ ಇರುತ್ತದೆ ರೋಗಿಯ ಹಾಸಿಗೆಯ ಪಕ್ಕದಲ್ಲಿ ಒಂದು ಕರೆಗಂಟೆಯ ಸ್ವಿಚ್ ಇರುತ್ತದೆ ಎನ್ನುವುದು. ಆಮ್ಲಜನಕದ ಸಿಲಿಂಡರ್ ಒಂದೊಮ್ಮೆ ಖಾಲಿಯಾಗಿದ್ದರೂ ಆತಂಕಗೊಳ್ಳದ ವ್ಯಕ್ತಿ ಈ ಕರೆಗಂಟೆ ಕೆಲಸ ಮಾಡದಿದ್ದರೆ ಮಾತ್ರ ಸಾವಿನಷ್ಟೇ ಭಯಬೀಳುವುದು ಖಚಿತ. ದಾದಿಯರ ತಾಣಕ್ಕೆ ರೋಗಿಯ ಜೀವನಾಡಿಯನ್ನು ಸೇತುವೆಯಾಗಿಸುವ ಈ ಕರೆಗಂಟೆಯ ವ್ಯವಸ್ಥೆ ಆರಂಭವಾಗಿದ್ದು ಫ್ಲಾರೆನ್ಸ್‌ಳ ಬುದ್ಧಿವಂತಿಕೆಯಿಂದ ಮತ್ತು ಆಸ್ಪತ್ರೆಯ ಮ್ಯಾನೇಜ್‍ಮೆಂಟ್ ಜೊತೆಗೆ ಮಾಡಿದ ಹಠದಿಂದ ಎಂದು ಅಲ್ಲಿ ಬರೆದಿತ್ತು.
ಅಂಜಲಿ ರಾಮಣ್ಣ ಬರೆಯುವ ಪ್ರವಾಸ ಅಂಕಣ
“ಸಾಯುಜ್ಯ ನನಗೆ ಬೇಕಾದರೆ ಸಾವೂ ನನ್ನದೇ ಆಗಬೇಕಲ್ಲವೇ?!” ಸೋಮಾರಿತನದಿಂದ ಹೊರಬರಬೇಕು ಎಂದುಕೊಂಡಾಗಲೆಲ್ಲಾ ಸ್ವಂತಕ್ಕೆ ಹೀಗೆ ಹೇಳಿಕೊಳ್ಳುತ್ತಲೇ ಇರುತ್ತೇನೆ. ಹಾಗಂತ ಧಿಡೀರ್ ಅಂತ ಮೇಲೆದ್ದು ಕೆಲಸಕ್ಕೆ ತೊಡಗುವ ಜಿಂಕೆಯಂಥವಳು ನಾನು ಎಂದೆಲ್ಲಾ ಭಾವಿಸುವ ಅವಶ್ಯಕತೆ ಇಲ್ಲ. ಯಾಕೆಂದರೆ, ಸತ್ಯ ಅದಕ್ಕೆ ವಿರುದ್ಧವಾಗಿ ಇದೆ. ಹರಿಣಿ ಭಾವಕ್ಕೆ ಘೇಂಡಾಂಮೃಗ ದೇಹ ಜೊತೆಯಾಗಿದೆ. ಆದರೆ ಹೀಗೇ ಬದುಕಿದವಳೊಬ್ಬಳ ಭೇಟಿಯಾಗಿ ಬಂದೆ ಎನ್ನುವುದಷ್ಟೇ ಹೆಮ್ಮೆ.
ವಿಂಬಲ್ಡನ್ ಎನ್ನುವ ಆಧುನಿಕ ಗ್ರಾಮದಿಂದ ಹಿಂದಿರುಗಿ ಅದೇ ಗುಂಗಿನಲ್ಲಿ, ಬೇಗ ಕತ್ತಲಾಗುವ ಸೀಸನ್‌ನಲ್ಲಿ ಹೋಟೆಲ್ ರೂಮು ಸೇರಲು ಲಂಡನ್‍ನ ಬೀದಿಗಳಲ್ಲಿ ಹೆಜ್ಜೆ ಹಾಕುತ್ತಿದ್ದೆ. ಅದು ಯಾವುದೋ ರಸ್ತೆ ಬದಿಯಲ್ಲಿ ಜನರನ್ನು ನೋಡುತ್ತಾ ಕೂರುವ ಎನಿಸಿ ಜಗುಲಿಯ ಮೇಲೆರಿ ಕುಳಿತೆ. “365 Days in London” ಎನ್ನುವ ಪುಸ್ತಕ ಶೋಕೇಸ್‍ನಿಂದ ಕಾಣುತ್ತಿತ್ತು ಎದುರಿನ ಪುಸ್ತಕದಂಗಡಿಯಲ್ಲಿ. ಸೀದಾ ಹೋಗಿ ಪುಸ್ತಕ ಕೈಗೆತ್ತಿಗೊಂಡೆ. ಓಹ್, ಈ ಜಾಗಕ್ಕೆ ಅದೆಷ್ಟು ಹತ್ತಿರದಲ್ಲಿ ಇದ್ದೇನೆ. “ಇನ್ನು ನಿಧಾನ ಸಲ್ಲ, ಹೊರಡು ಹೊರಡು ಎಲೆ ಬಾಲೆ” ಎಂದು ಥೇಟ್ ಚಂದ್ರಹಾಸ ನಾಟಕದ ಶೈಲಿಯಲ್ಲಿ ಹೇಳಿಕೊಂಡು ಎದ್ದೆ. ಕೆಲವೇ ನಿಮಿಷಗಳಲ್ಲಿ ಏದುಸಿರುಬಿಡುತ್ತಾ ಆ ಜಾಗದ ಬಾಗಿಲಿನಲ್ಲಿ ನಿಂತಿದ್ದೆ.
ಮ್ಯೂಸಿಯಂ ಬಾಗಿಲು ಹಾಕಲು ಇನ್ನರ್ಧ ಗಂಟೆ ಮಾತ್ರ ಇತ್ತು. ದಡಬಡಗುಟ್ಟಿಕೊಂಡು ಹೋದೆ. ಪ್ರವೇಶ ದರ £7 . ಸ್ವಾಗತಕಾರಿಣಿ “ಅರ್ಧಗಂಟೆಗೋಸ್ಕರ ಅಷ್ಟು ದುಡ್ಡು ಕೊಡಬೇಡಿ ನಾಳೆ ಬನ್ನಿ ಎಂದಳು”. ಉಹುಂ ನನಗೆ ನೋಡಲೇಬೇಕೆಂಬ ಹಠ ಬಂದಿತ್ತಲ್ಲ. “ಇಲ್ಲಿಗೆ ಪ್ರವಾಸಿಗರು ಬರುವುದೇ ಇಲ್ಲ ಆದರೆ ನೀವು ಇಂಡಿಯಾ ಅಷ್ಟು ದೂರದಿಂದ ಬಂದಿದ್ದೀರಿ ನಿಮಗಾಗಿ ಇನ್ನೂ ಅರ್ಧ ಗಂಟೆ ತೆರೆದಿರುತ್ತೀನಿ ಹೋಗಿ ನೋಡಿ” ಎಂದು ಟಿಕೆಟ್ ಹರಿದುಕೊಟ್ಟವಳ ಕೈಗೆ ಮುತ್ತಿಡುತ್ತಾ ಒಳ ಹೊಕ್ಕೆ.
ಲ್ಯಾಂಬೆತ್ ಪ್ಯಾಲೆಸ್ ರಸ್ತೆಯಲ್ಲಿ ಇರುವ ಸೇಂಟ್ ಥಾಮಸ್ ಆಸ್ಪತ್ರೆಯ ಕಾರ್ ಪಾರ್ಕಿಂಗ್ ಜಾಗದ ಎಡಕ್ಕೆ ಇರುವ ದೊಡ್ಡ ಹಜಾರ ಅದು. ಒಳಕ್ಕೆ ಹೊಕ್ಕು ಬಲಕ್ಕೆ ತಿರುಗುತ್ತಲೇ ಎದುರಾಗುತ್ತೆ ಒಂದು ಫಲಕ. ಅದರಲ್ಲಿ ಬರೆಯಲಾಗಿದೆ “If a patient is cold, If a patient is feverish, If a patient is faint, If a patient is sick even after taking food, If a patient has bed soar, It is not the fault of the disease but of the nursing” ಈ ಮಾತುಗಳನ್ನು ಓದಿದರೆ ನಾನೀಗ ನಿಂತಿರುವ ಜಾಗವನ್ನು ಸುಲಭದಲ್ಲಿಯೇ ಊಹಿಸಬಹುದು. ಹೌದು, ಫ್ಲಾರೆನ್ಸ್ ನೈಂಟಿಂಗೆಲ್‌ಳ ಮ್ಯೂಸಿಯಂ.
ಲಂಡನ್‌ನ ಎಲ್ಲಾ ಮ್ಯೂಸಿಯಂಗಳಂತೆ ಇದನ್ನು ಕೂಡ ಬಲು ಒಪ್ಪವಾಗಿರಿಸಿದ್ದಾರೆ. ಆಕೆ ಹುಟ್ಟಿದಾಗಿನಿಂದ ಕೊನೆಯಾಗುವವರೆಗೂ ಮಾಡಿದ ಕೆಲಸ, ತೊಟ್ಟ ಬಟ್ಟೆ, ಆಡಿದ ಮಾತು, ತೋರಿದ ಅಭಿರುಚಿ ಎಲ್ಲವನ್ನೂ ಲಭ್ಯತೆಗೆ ತಕ್ಕಂತೆ ಚಂದಗಾಣಿಸಿ ಇಟ್ಟಿದ್ದಾರೆ. 12 ಮೇ 1820ರಲ್ಲಿ ಲಂಡನ್ ಬಳಿಯ ಎಂಬ್ಲಿಯಲ್ಲಿ ಅತ್ಯಂತ ಪ್ರತಿಷ್ಟಿತ ಕುಟುಂಬದಲ್ಲಿ ಹುಟ್ಟಿದ ಪ್ಲಾರೆನ್ಸ್ ಬಯಸಿದ್ದನ್ನು ಬಯಸುವ ಮೊದಲೇ ಪಡೆಯಬಹುದಾಗಿದ್ದ ಸಮೃದ್ಧ ವಾತಾವರಣದಲ್ಲಿ ಬೆಳೆಯುತ್ತಿದ್ದವಳು. ಎಲ್ಲಾ ಮಕ್ಕಳಂತೆ ಶಾಲೆ ಹೋಗದೇ ಮನೆಯಲ್ಲಿಯೇ ಪ್ರೈವೇಟ್ ಅಧ್ಯಾಪಕರುಗಳಿಂದ ವಿದ್ಯಾಭ್ಯಾಸ ಪಡೆಯುತ್ತಾ, ಟೆನ್ನಿಸ್ ಆಟ, ಕಸೂತಿ, ನೃತ್ಯ, ಪಿಯಾನೋ ನುಡಿತ, ಅಡುಗೆ ಹೀಗೆ ಸಿರಿವಂತರ ಜೀವನ ಶೈಲಿಯನ್ನು ಆಕೆಗೆ ಉದ್ದೇಶಪೂರ್ವಕವಾಗಿ ರೂಢಿಸಿಕೊಡುತ್ತಿದ್ದರು ಪೋಷಕರು. ರಾಣಿವಾಸದೊಡನೆಯೂ ಸಂಪರ್ಕದಲ್ಲಿ ಇದ್ದ ಕುಟುಂಬ. ಸುಂದರಾಂಗ ಹುಡುಗರ ನೋಟ, ಸಹವಾಸ ಎಲ್ಲವೂ ಒದಗಿಸಿಕೊಂಡಿದ್ದ ಬದುಕು.
“ಇಲ್ಲಿಗೆ ಪ್ರವಾಸಿಗರು ಬರುವುದೇ ಇಲ್ಲ ಆದರೆ ನೀವು ಇಂಡಿಯಾ ಅಷ್ಟು ದೂರದಿಂದ ಬಂದಿದ್ದೀರಿ ನಿಮಗಾಗಿ ಇನ್ನೂ ಅರ್ಧ ಗಂಟೆ ತೆರೆದಿರುತ್ತೀನಿ ಹೋಗಿ ನೋಡಿ” ಎಂದು ಟಿಕೆಟ್ ಹರಿದುಕೊಟ್ಟವಳ ಕೈಗೆ ಮುತ್ತಿಡುತ್ತಾ ಒಳ ಹೊಕ್ಕೆ.
ಹೀಗಿದ್ದ ಫ್ಲಾರೆನ್ಸ್ ಯೌವ್ವನದ ಹೊಸಿಲಿನ ಒಂದು ಬದಿಯಲ್ಲಿ ನಿಂತು ಹೇಳಿಯೇ ಬಿಟ್ಟಳು “marriage does not tempt me. I hate the idea of being tied forever to a life of society”. ಈಗಿನ ತಂದೆತಾಯಿಯರಂತೆ ಆಗಲೂ ಅವರ ಮನೆಯವರೂ ಇದನ್ನು ವಿರೋಧ ಮಾಡಿದ್ದರು. ಆದರೂ ಫ್ಲಾರೆನ್ಸ್ ‘ದಿ ಇನ್ಸ್ಟಿಟ್ಯೂಷನ್ ಫಾರ್ ದ ಕೇರ್ ಆಫ್ ದಿ ಸಿಕ್ ಜೆಂಟಲ್ ವುಮನ್ ಇನ್ ಡಿಸ್ಟ್ರೆಸ್ಟ್ಡ್ ಸರ್ಕಮ್‍ಸ್ಟೆನ್ಸಸ್” ಇಲ್ಲಿ ಕೆಲಸಕ್ಕೆ ಸೇರಿ ದಣಿವರಿಯದೆ ಕಾರ್ಯ ನಿರ್ವಹಿಸಿ ‘ದೀಪಧಾರಿಣಿ’ ಎನಿಸಿಕೊಂಡಳು.
ಹೀಗೆಲ್ಲಾ ಓದುತ್ತಾ, ಫೋಟೊ ತೆಗೆಯುತ್ತಾ ಮುಂದೆ ಹೋಗುತ್ತಿದ್ದೆ. ಅಲ್ಲೇ ಅಲ್ಲೇ ಇನ್ನೊಂದು ಫಲಕ. ಅದರಲ್ಲಿ ಸಣ್ಣಸಣ್ಣ ಅಕ್ಷರಗಳು. ಆಸ್ಪತ್ರೆಯಲ್ಲಿ ಒಳರೋಗಿಯಾಗಿದ್ದವರಿಗೆಲ್ಲಾ ತಿಳಿದೇ ಇರುತ್ತದೆ ರೋಗಿಯ ಹಾಸಿಗೆಯ ಪಕ್ಕದಲ್ಲಿ ಒಂದು ಕರೆಗಂಟೆಯ ಸ್ವಿಚ್ ಇರುತ್ತದೆ ಎನ್ನುವುದು. ಆಮ್ಲಜನಕದ ಸಿಲಿಂಡರ್ ಒಂದೊಮ್ಮೆ ಖಾಲಿಯಾಗಿದ್ದರೂ ಆತಂಕಗೊಳ್ಳದ ವ್ಯಕ್ತಿ ಈ ಕರೆಗಂಟೆ ಕೆಲಸ ಮಾಡದಿದ್ದರೆ ಮಾತ್ರ ಸಾವಿನಷ್ಟೇ ಭಯಬೀಳುವುದು ಖಚಿತ. ದಾದಿಯರ ತಾಣಕ್ಕೆ ರೋಗಿಯ ಜೀವನಾಡಿಯನ್ನು ಸೇತುವೆಯಾಗಿಸುವ ಈ ಕರೆಗಂಟೆಯ ವ್ಯವಸ್ಥೆ ಆರಂಭವಾಗಿದ್ದು ಫ್ಲಾರೆನ್ಸ್‌ಳ ಬುದ್ಧಿವಂತಿಕೆಯಿಂದ ಮತ್ತು ಆಸ್ಪತ್ರೆಯ ಮ್ಯಾನೇಜ್‍ಮೆಂಟ್ ಜೊತೆಗೆ ಮಾಡಿದ ಹಠದಿಂದ ಎಂದು ಅಲ್ಲಿ ಬರೆದಿತ್ತು.
ಈಕೆ ದೀಪಧಾರಿಣಿ ಫ್ಲೋರೆನ್ಸ್ ನೈಟಿಂಗೇಲ್ ಮಾತ್ರವಲ್ಲ ಕೈ ಬರಹದಲ್ಲೇ 200 ಪುಸ್ತಕ 1400 ಪತ್ರಗಳು ಅದೆಷ್ಟೋ ಕರಪತ್ರ ಲೆಕ್ಕವಿಲ್ಲದಷ್ಟು ಲೇಖನಗಳನ್ನು ಬರೆದಿರುವ ಸಾಹಿತಿಯೂ ಹೌದು ಎನ್ನುವ ಹೊಸ ವಿಷಯ ತಿಳಿಯಿತು. ಆಕೆಯ “Notes on Nursing” ಮತ್ತು “Notes on Nursing what is and what is not” ಎನ್ನುವ ಪುಸ್ತಕಗಳು ಜಗತ್ತಿನಾದ್ಯಂತ ಎಲ್ಲಾ ನರ್ಸಿಂಗ್ ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಾಗಿವೆ. ಇದಕ್ಕಿಂತಲೂ ಮತ್ತೊಂದು ಆಸಕ್ತಿದಾಯಕ ವಿಷಯ ಗೊತ್ತಾಯ್ತು ಅದೆಂದರೆ ಫ್ಲಾರೆನ್ಸ್ ಹೇಳಿದ್ದಾಳೆ “ನರ್ಸಿಂಗ್ ಎನ್ನುವುದು ಒಂದು ಕಲೆ. ಅದೊಂದು ರೋಗಿಯನ್ನು ಶುಷ್ರೂಷೆ ಮಾಡುವ ಕಲೆ, ರೋಗವನ್ನು ಶುಷ್ರೂಷೆ ಮಾಡುವುದಲ್ಲ” ಎಂದು. ಈ ಕರೋನ ಕಾಲದಲ್ಲಿ ನಮ್ಮ ಸರ್ಕಾರ “ರೋಗವನ್ನು ದ್ವೇಷಿಸಿ ರೋಗಿಯನ್ನಲ್ಲ” ಎನ್ನುವ ವ್ಯಾಕ್ಯೋಕ್ತಿಯನ್ನು ಯಾಗಾಗಿ ಪದೇಪದೇ ಹೇಳುತ್ತಿತ್ತು ಎನ್ನುವುದು ಈಗ ಮತ್ತಷ್ಟು ಸ್ಪಷ್ಟ.
ಫ್ಲಾರೆನ್ಸ್ ಒಮ್ಮೆ ಗ್ರೀಕ್ ದೇಶದ ಅಥೆನ್ಸ್‌ಗೆ ಹೋಗಿದ್ದಾಗ ಅಲ್ಲೊಂದು ಗಾಯಗೊಂಡಿದ್ದ ಗೂಬೆಯನ್ನು ರಕ್ಷಿಸಿದ್ದಳಂತೆ. ಆ ಗೂಬೆ ಗುಣವಾದ ನಂತರ ಯಾವಾಗಲೂ ಆಕೆಯ ಭುಜದ ಮೇಲೆ ಕುಳಿತಿರುತ್ತಿತ್ತಂತೆ ಅಥವಾ ಆಕೆಯ ಗೌನ್‌ನ ಜೇಬಿನಲ್ಲಿ ಇರುತ್ತಿತ್ತಂತೆ. ಆಕೆ ಅದಕ್ಕೆ ಗ್ರೀಕರ ಬುದ್ಧಿ ದೇವತೆ ಅಥಿನಾಳ ಹೆಸರನ್ನೇ ಇಟ್ಟಿದ್ದಳಂತೆ. ಓದುತ್ತಾ, ನೋಡುತ್ತಾ, ಕ್ಯಾಮೆರಾದಲ್ಲೂ ಕಾಣುತ್ತಾ ಹೊರ ಬರುವಾಗ ಮನಸ್ಸಿನಲ್ಲಿ ನಿಂತದ್ದು ದಾದಿ ಫ್ಲೋರೆನ್ಸ್‌ಳ ಈ ಮಾತು – “Now I know what it takes to love life !”
ಇನ್ನೇನು ಹೊರ ಬರುವವಳಿದ್ದೆ ಅಷ್ಟರಲ್ಲಿ ಹಿಂದಿನಿಂದ ಅಟ್ಟಿಸಿಕೊಂಡು ಬಂದ ಒಬ್ಬಾಕೆ ನನ್ನ ಕ್ಯಾಮೆರಾ ಕಡೆಗೆ ಕೈ ತೋರಿಸುತ್ತಾ ನನಗೆ ಮತ್ತು ಅಲ್ಲಿದ್ದ ಸ್ವಾಗತಕಾರಿಣಿಗೂ ಅರ್ಥವೇ ಆಗದ ಭಾಷೆಯಲ್ಲಿ ಜೋರಾಗಿ ಜಗಳದಂತೆ ಹೇಳುತ್ತಾ ಕೈಬಾಯಿ ಬೀಸಲಾರಂಭಿಸಿದಳು. ಹತ್ತದಿನೈದು ನಿಮಿಷವಾದರೂ ಬಗೆ ಹರಿಯುತ್ತಿಲ್ಲ. ಅವಳಿಗೆ ಹೇಳದೆ ಅವಳ ಫೋಟೋ ತೆಗೆದಿದ್ದೇನೆ ಎನ್ನುತ್ತಿದ್ದಾಳೇನೋ ಎಂದುಕೊಂಡು ಸಮಜಾಯಿಷಿ ಕೊಡುತ್ತಿದ್ದೆ ನಾ ಇಂಗ್ಲಿಷ್‌ನಲ್ಲಿ. ಉಹುಂ ಅವಳು ಮಾತು ನಿಲ್ಲಿಸಳು. ನನಗೆ ಅರ್ಥವೂ ಆಗದವಳು ಏಕ್ದಂ ಬಿಗಿಯಾಗಿ ಅಪ್ಪಿಬಿಟ್ಟಳು.
ನಂತರ ಗೊತ್ತಾಗಿದ್ದು ಅವಳು ಚಿಲಿ ದೇಶದಲ್ಲಿ ನರ್ಸ್ ಆಗಿದ್ದಾಳೆ. ಈ ಮ್ಯೂಸಿಯಂನಲ್ಲಿ ನಾನು ತೆಗೆದ ಫೋಟೋಗಳನ್ನು ತನ್ನ ಜೊತೆ ಈಮೇಲಿನಲ್ಲಿ ಹಂಚಿಕೊಳ್ಳಲು ಕೇಳುತ್ತಿದ್ದಾಳೆ ಎಂದು. ಅಲ್ಲಿಂದ ನಮ್ಮಿಬ್ಬರ ದ್ವಿಭಾಷಾ ಗೆಳೆತನ ಆರಂಭವಾಯಿತು. ಆಲೇ ಫ್ಲಾರೆನ್ಸ್‌ಳ ಎದೆಮಟ್ಟದ ಮೂರ್ತಿ ಎದುರು ಇಬ್ಬರೂ ಪಕ್ಕಪಕ್ಕ ನಿಂತು ಫೋಟೊ ತೆಗೆಸಿಕೊಂಡೆವು. ಅಲ್ಲಿ ಫ್ಲಾರೆನ್ಸ್‌ಳ ಮಾತು ಬರೆದಿತ್ತು “I attribute my success to this, I never gave or took an excuse” ಕಲಿಯಬೇಕಿದೆ ನನಗೂ ಇದನ್ನು.
ಜೊಹಾನಾಳಿಗೆ ಇಂಗ್ಲಿಷ್‌ನಲ್ಲಿ ಆಗಾಗ್ಗೆ ಈಮೇಲ್ ಕಳುಹಿಸುತ್ತಿರುತ್ತೇನೆ ಅದಕ್ಕೆ ಅವಳು ಸ್ಪ್ಯಾನಿಷ್ ಭಾಷೆಯಲ್ಲಿ ಉತ್ತರಿಸುತ್ತಾಳೆ. ಅನುವಾದ ಮಾಡಿಕೊಂಡು ಓದುತ್ತೇನೆ. “ನೋಟ ಬದಲಾಗದೆ ದೃಷ್ಟಿಯೂ ಬದಲಾಗದು” ಎನ್ನುವ ಪಾಠ ಹೇಳಿಕೊಟ್ಟ ಜೋಹನಾಗೆ ನೆನ್ನೆಯೂ ದಾದಿಯರ ದಿನದ ಶುಭಾಶಯ ಕಳುಹಿಸಿದ್ದೆ. “ಚಿಲಿಗೆ ಬಾ” ಎಂದು ಸ್ನೇಹಪೂರ್ವಕವಾಗಿ ಕರೆದಿದ್ದಾಳೆ. ಹೋಗಬೇಕಿದೆ ಅಲ್ಲಿಗೂ. “ಅಲ್ಲಿದೆ ನನ್ನ ಮನೆ ಇಲ್ಲಿ ಬಂದೆ ಸುಮ್ಮನೆ” ಎಂದು ಹೇಳಲಾದರೂ.
ಅಂಜಲಿ ರಾಮಣ್ಣ ಲೇಖಕಿ, ಕವಯಿತ್ರಿ, ಅಂಕಣಗಾರ್ತಿ, ನ್ಯಾಯವಾದಿ ಹಾಗೂ ಸಾಮಾಜಿಕ ಕಾರ್ಯಕರ್ತೆ. ‘ರಶೀತಿಗಳು – ಮನಸ್ಸು ಕೇಳಿ ಪಡೆದದ್ದು’, ‘ಜೀನ್ಸ್ ಟಾಕ್’ ಇವರ ಲಲಿತ ಪ್ರಬಂಧಗಳ ಸಂಕಲನ.
Wah Endinate tumbaa sogasada Lekhana Anjaliyavre
Thank you
Anjali Ramanna