ದೇವರಿಗೆ ಉಡುಪಾಗಿ ನೇಯುವುದು ಒಂದಾದರೆ, ದೇವರನ್ನೇ ನೇಯುವುದು ಕೂಡ ಇನ್ನೊಂದು ಬಗೆಯ ವಸ್ತ್ರಕಲೆ. ಗುಜರಾತಿನಲ್ಲಿ ಬಟ್ಟೆಯ ಮೇಲೆ ಚಿತ್ರ ಬರೆಯುವ ಮಾತಾ ನಿ ಪಚ್ಚೆಡಿ ಅನ್ನುವ ಸಂಪ್ರದಾಯ ಇದೆ. ಇದನ್ನು ಮಾಡುವವರು ಜಲ್ಲಿ ಕಲ್ಲು ಒಡೆಯುವ, ಅಷ್ಟೇನೂ ಅನುಕೂಲಸ್ಥರಲ್ಲದ ವರ್ಗ. ಅವರಿಗೆ ದೇವಾಲಯಕ್ಕೆ ಪ್ರವೇಶ ಕೊಡಲಿಲ್ಲ ಅಂತ ಬಟ್ಟೆಯ ಮೇಲೆ ದೇವಿಯ ಚಿತ್ರ ಬರೆದರು. ಗುಡಿಯ ಹಾಗೆ ಹಿಂದೆ ಒಂದು ಪರದೆ, ಅದರ ಮೇಲೆ ಒಂದು ಬಟ್ಟೆ ಹಾಕಿ ಅದನ್ನೇ ಪೂಜೆ ಮಾಡುತ್ತಾ ಬಂದ ಕ್ರಾಂತಿಕಾರಿ ಸಮುದಾಯ ಇದು. ಇವರು ಸೀರೆಗಳ ಮೇಲೆ ವಿಧವಿಧವಾದ ದೇವಿಚಿತ್ರಗಳನ್ನು ಕಲಾತ್ಮಕವಾಗಿ, ಗಾಢ ಬಣ್ಣಗಳಲ್ಲಿ ಬಿದಿರಿನ ಕಡ್ಡಿಗಳಿಂದ ಮೂಡಿಸುತ್ತಾರೆ. ಅದನ್ನು ಗುಜರಾತಿನ ಕಲಮ್‌ಕಾರಿ ಎನ್ನುತ್ತಾರೆ. ಅವರಿಗೆ ಅದು ಬರಿ ಬಟ್ಟೆಯಲ್ಲ, ದೇವಿಯ ಆರಾಧನೆ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’
ಇತ್ತೀಚೆಗೆ ಕಂಬಳಿಯನ್ನು ಮುಂಚೂಣಿಗೆ ತರುವ ಒಂದು ಕಾರ್ಯಕ್ರಮ ಇತ್ತು. ನಾನು ಅದರ ಟೀಂ ನಲ್ಲಿ ಇದ್ದುದರಿಂದ ಅದರಲ್ಲಿ ಭಾಗವಹಿಸಿದ್ದೆ. ಅಲ್ಲಿಗೆ ಕಂಬಳಿ ನೇಯುವ ಕಾಯಕದ ನೇಕಾರರ ತಂಡವೊಂದು ಉತ್ತರಕರ್ನಾಟಕದ ಬೆಳಗಾವಿಯಿಂದ ಬಂದಿತ್ತು. ಕಾರ್ಯಕ್ರಮದ ಭಾಗವಾಗಿ ಅವರು ಕಂಬಳಿ ಕಥೆ ಹೇಳುವುದರ ಜೊತೆ ಕಂಬಳಿಯ ಜೊತೆ ಜೊತೆಯೇ ನೇಯ್ದ ಹಾಡುಗಳೂ ಅವರ ಕಥೆಯ ಭಾಗವಾಗಿತ್ತು. ಅವರ ಕಥೆ ಹೀಗಿತ್ತು. ಶಿವನ ರೂಪವಾದ ಬೀರಪ್ಪನು ಭೂಮಂಡಲದ ಸೃಷ್ಟಿಯನ್ನು ಮಾಡಿದಾಗ ಅವನು ಕುರಿಯನ್ನೂ ಸೃಷ್ಟಿಸಿ ಅದನ್ನು ನೋಡಿಕೊಳ್ಳಲು ಕುರುಬರನ್ನು ನೇಮಿಸುತ್ತಾನೆ. ಜೊತೆಗೆ ಯಾರಿಗೂ ಅನ್ಯಾಯ ಮಾಡದಂತೆ, ಕುರಿಯಿಂದ ಬರುವ ಉಣ್ಣೆಯನ್ನು ತೆಗದು ಅದರಲ್ಲಿ ಕಂಬಳಿ ಮಾಡಿ ಬದುಕುವಂತೆ ಆಜ್ಞೆ ಮಾಡುತ್ತಾನೆ. ಅಂದಿನಿಂದ ಆ ಸಮುದಾಯ ಕಂಬಳಿ ನೇಯುವುದು ಬರೀ ಹೊಟ್ಟೆಪಾಡಿಗಲ್ಲ ಅದು ಶಿವನ ಆದೇಶ, ಶಿರಸಾವಹಿಸಿ ಮಾಡಬೇಕು ಎಂದು ನಂಬಿಕೊಂಡು ಬಾಳುವೆ ಮಾಡುತ್ತದೆ.
ಮಾರುಕಟ್ಟೆಯಲ್ಲಿ ಹೊಸ ಹೊಸ ನಮೂನೆಯ ಹೊದಿಕೆಗಳಿರುವಾಗ ಚುಚ್ಚುವ ಕಂಬಳಿ ಯಾರಿಗೆ ಬೇಕು? ಜನರ ಆಸಕ್ತಿಗಳು ಬದಲಾಗಿದ್ದಾವೆ. ಕಂಬಳಿ ಹಳೆಯ ಫ್ಯಾಷನ್ ಆಗಿದೆ. ಇಂತಹ ಸಮಯದಲ್ಲಿ ಕುರುಬರವರ ಸಂಕಟ ಏನೆಂದರೆ “ನಮ್ಮ ಮಕ್ಕಳೆಲ್ಲಾ ಹೊಸ ವೃತ್ತಿಯ ಹಿಂದೆ ಹೋಗುತ್ತಿದ್ದಾರೆ. ಹೀಗಾದರೆ ಬೀರಪ್ಪನಿಗೆ ಕೊಟ್ಟ ನಮ್ಮ ಪೂರ್ವಿಕರ ಮಾತಿಗೆ ಹೇಗೆ ಬದ್ಧರಾಗಿರುವುದು. ಹೀಗೆ ಮಾಡಿದರೆ ಬೀರಪ್ಪನಿಗೆ ಬೇಜಾರಾಗಲ್ಲವಾ ಅಂತ ಮುಗ್ಧವಾಗಿ ಪ್ರಶ್ನಿಸುತ್ತಾರೆ.
ಇದು ನಮ್ಮ ಉಡುಗೆ ತೊಡುಗೆಗಳಲ್ಲಿ ಹಾಸುಹೊಕ್ಕಾಗಿರುವ ದೇವಸ್ಪರ್ಶ. ನಮ್ಮ ದೇಶದಲ್ಲಿ ಅದೆಷ್ಟು ಬಗೆಯ ಕೈಮಗ್ಗಗಳಿವೆ! ಅದರಲ್ಲಿ ಬಹುಪಾಲು ದೇವರೊಂದಿಗೆ ಸಮೀಕರಿಸಿಕೊಂಡೋ, ದೇವರಿಗೋಸ್ಕರ ಧರಿಸಲು ನೇಯುವ ಪದ್ಧತಿಯಿಂದ ಬಂದಂತಹವೇ ಹೆಚ್ಚು. ಹಾಗಾಗಿ ಅವೆಲ್ಲ ಬರೀ ಕೈಮಗ್ಗಗಳಲ್ಲ, ದೇವಮಗ್ಗಗಳು. ಕಂಬಳಿಯೂ ಅಂತಹ ನೂರಾರು ವರ್ಷಗಳ ಇತಿಹಾಸವಿರುವ ದೇವಮಗ್ಗ. ನನ್ನ ತಲೆಮಾರಿನ ಅನೇಕರ ಬಾಲ್ಯದ ಬೆಚ್ಚಗಿನ ನೆನಪುಗಳೆಲ್ಲಾ ಕಂಬಳಿಯ ಒಳಗೆ ಹುಟ್ಟಿದಂತಹವು. ನಮ್ಮೂರಿನ ಅಹೋರಾತ್ರಿಯ ಬಯಲಾಟವನ್ನು ಕಂಬಳಿಯೊಳಗೆ ಕವುಚಿ ಕೂತು ನೋಡಿದ್ದು ಇನ್ನೂ ಹಸಿರು ನೆನಪು. ಕಂಬಳಿಯೊಂದಿಗೆ ಬೀರಪ್ಪನ ನಂಟು.
ದೇವ ದೇವತೆಗಳು ಅಲಂಕಾರಪ್ರಿಯರು. ಅವರಿಗೆ ರೇಷ್ಮೆಯ ಬಟ್ಟೆ ಎಂದರೆ ಬಲು ಪ್ರೀತಿ. ದೇವಲೋಕದ ನೇಕಾರ, ಋಷಿ ಮಾರ್ಕಂಡೇಯ. ಅವನು ಕಮಲದ ದಂಟಿನ ನಾರಿನಿಂದ ರೇಷ್ಮೆ ಸೀರೆಯನ್ನು ತಯಾರು ಮಾಡುತ್ತಿದ್ದ ಎಂಬುದು ಪುರಾಣದ ಕಥೆ. ಅದಕ್ಕೆ ಮಾರ್ಕಂಡೇಯನನ್ನು ‘ಜಗದ ನೇಕಾರʼ ಎನ್ನುತ್ತಾರೆ. ಸಾವಿರಾರು ವರ್ಷಗಳ ನಂತರವೂ ಅವನ ವಂಶದವರು ನೇಯ್ಗೆಯನ್ನು ಮುಂದುವರೆಸಿದರು. ಅವರೇ ಇವತ್ತಿನ ಸೀರೆಗಳ ರಾಣಿ ಕಾಂಜೀವರಮ್ ಸೀರೆಗಳನ್ನು ನೇಯುವವರು ಅನ್ನೋ ಪ್ರತೀತಿ ಇದೆ. ದಟ್ಟ, ಗಾಢ ಬಣ್ಣಗಳಲ್ಲಿ ಬರುವ ಕಾಂಜೀವರಮ್ ಸೀರೆಗಳನ್ನು ಉಟ್ಟರೆ ಎಲ್ಲರೂ ದಿವ್ಯ ಸುಂದರಿಯರೇ. ಯಾಕೆಂದರೆ ಇದು ಹೇಳಿಕೇಳಿ ದೇವತೆಯರಿಗೆ ತಯಾರಾಗುತ್ತಿದ್ದ ಬಟ್ಟೆ. ಇವತ್ತಿಗೂ ನಮ್ಮ ದೇವಾಲಯಗಳಲ್ಲಿ ಅದರಲ್ಲೂ ತಮಿಳುನಾಡಿನ ದೇವಾಲಯಗಳಲ್ಲಿ ದೇವರಿಗೆ ಕಾಂಜೀವರಮ್ ವಸ್ತ್ರವಿಲ್ಲದೆ ಪೂಜೆ ಪೂರ್ಣವಾಗುವುದಿಲ್ಲ. ದಕ್ಷಿಣ ಭಾರತೀಯರ ಮದುವೆಗಳಲ್ಲಿ ಕಾಂಜೀವರಮ್ ಸೀರೆಗೆ ಖಾಯಂ ಪಟ್ಟ. ಮೂಲತಃ ತಮಿಳುನಾಡಿನ ಕಂಚೀಪುರದಲ್ಲಿ ತಯಾರಾಗುವ ಸೀರೆಗೆ ಆ ಊರಿನ ಹೆಸರೇ ಬಂದಿದೆ. ಕೃಷ್ಣದೇವರಾಯನ ಕಾಲದಲ್ಲಿ ಮುಂಚೂಣಿಗೆ ಬಂದ ಕಾಂಜೀವರಮ್ ಸಾಂಪ್ರದಾಯಿಕ ಸೀರೆಯಲ್ಲಿ ದೇವಾಲಯದ ಹಾಗೂ ದೇವರ ಚಿತ್ರ (ಮೋಟಿಫ್) ಸಾಮಾನ್ಯ. ಹಬ್ಬ ಹರಿದಿನಗಳ ಕಳೆ ಹೆಚ್ಚಿಸುವುದೇ ಮಲಬೆರಿ ರೇಷ್ಮೆಯಿಂದ ತಯಾರಾಗುವ ಕಂಚೀ ಸೀರೆಗಳು.
ಇದೇ ರೀತಿಯ ಕಥೆ ದೇವಾಂಗ ಸಮುದಾಯದ ಸುತ್ತವೂ ಇದೆ. ಶಿವನು ದೇವಲ ಮಹರ್ಷಿಯನ್ನು ಸೃಷ್ಟಿಸುತ್ತಾನೆ. ದೇವರಿಂದ ಬಂದದ್ದರಿಂದ ದೇವನ ಅಂಗ ದೇವಾಂಗ. ಆದರೆ ಶಿವನೋ ಅಲಂಕಾರ ಪ್ರಿಯನಲ್ಲ. ಮೃಗಚರ್ಮಧಾರಿ. ಶಿವನು ದೇವಲ ಋಷಿಯನ್ನು ವಿಷ್ಣುವಿನ ಬಳಿಗೆ ಕಳಿಸುತ್ತಾನೆ. ವಿಷ್ಣು ಲೋಕ ಕಲ್ಯಾಣಕ್ಕಾಗಿ, ಎಲ್ಲರಿಗೂ ತನ್ನ ನಾಭಿಯ ಕಮಲದ ದಂಟಿನ ನಾರಿನಿಂದ ಬಟ್ಟೆ ನೇಯುವ ಕೆಲಸಕ್ಕೆ ನೇಮಿಸುತ್ತಾನೆ. ದೇವಲ ಋಷಿ ದಾರಿಯಲ್ಲಿ ಬರುವಾಗ ಐದು ಜನ ರಾಕ್ಷಸರು ಸುತ್ತುವರೆಯುತ್ತಾರೆ. ಆಗ ದೇವಲ ಋಷಿಯ ಪ್ರಾರ್ಥನೆಗೆ ಒಲಿದು ದೇವಿಯು ಬಂದು ರಾಕ್ಷಸರನ್ನು ಸಂಹರಿಸುತ್ತಾಳೆ. ಆಗ ಅವರ ಮೈಯಿಂದ ರಕ್ತ ಹಲವಾರು ಬಣ್ಣಗಳಲ್ಲಿ ಹರಿಯುತ್ತದೆ. ಅದರಿಂದಲೇ ಕಮಲದ ನಾರಿಗೆ ಬಣ್ಣಗಾಣಿಸಿ ದೇವಲ ಋಷಿ ಬಟ್ಟೆ ಹೊಲಿಯಲು ಪ್ರಾರಂಭಿಸುತ್ತಾನೆ. ಅವನ ವಂಶಜರೇ ಇಂದಿನ ದೇವಾಂಗ ಜನರು. ಅವರು ದೇವರಿಂದಲೇ ನೇಯುವ ಕೆಲಸಕ್ಕೆ ನೇಮಿಸಲ್ಪಟ್ಟವರು. ಇಂದಿಗೂ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡಿನಲ್ಲಿ ನೆಲೆಸಿದ್ದಾರೆ. ಅವರಿಗೆ ನೇಯುವುದು ಬರೀ ಕೆಲಸವಲ್ಲ, ಅದು ದೇವಸೇವೆ.
ಒರಿಸ್ಸಾ ನಮ್ಮ ದೇಶದ ಕೈಮಗ್ಗದ ಸ್ವರ್ಗ. ಸಾವಿರಾರು ಬಗೆಯ ನೂಲು, ನೇಯ್ಗೆಗಳು. ಪ್ರತಿ ಮನೆಯಲ್ಲೂ ಒಂದಲ್ಲಾ ಒಂದು ಬಗೆಯ ನೂಲಿನ ಕಥೆಗಳು. ಪ್ರತಿ ನೂಲನ್ನೂ ನೇಯುವ ಮೊದಲು ಡಿಸೈನ್‌ಗೆ ತಕ್ಕ ಹಾಗೆ ಬಣ್ಣ ಹಾಕಿ ಮಾಡುವ ‘ಇಕ್ಕತ್ ʼ ತಂತ್ರದ ಬಟ್ಟೆಗಳು ಒರಿಸ್ಸಾದ ಕೈಮಗ್ಗಗಳ ವಿಶೇಷ. ಒರಿಸ್ಸಾ ಅಂದರೆ ಪುರಿಯ ಜಗನ್ನಾಥ. ರಾಜ್ಯದ ತುಂಬಾ ನೇಕಾರರಿವಾಗ ತಮ್ಮ ನೂಲಿನಲ್ಲಿ ಜಗನ್ನಾಥನನ್ನು ಸೇರಿಸದೆ ಬಿಡುವರೆ? ಜಯದೇವ ಕವಿಯ ಗೀತಗೋವಿಂದ ಯಾರಿಗೆ ತಿಳಿಯದು? ಜಯದೇವ ೧೨ನೇ ಶತಮಾನದ ಕವಿ. ಅವನು ತನ್ನ ಕಾವ್ಯವನ್ನು ಅವನ ಊರಾದ ಕೆಂದುಲಿಯ ನೇಕಾರರಿಂದ ಬಟ್ಟೆಯನ್ನು ಇಕ್ಕತ್ ವಿಧಾನದಲ್ಲಿ ನೇಯಿಸಿ ಜಗನ್ನಾಥ, ಬಲರಾಮ, ಸುಭದ್ರೆಗೆ ಅರ್ಪಿಸಿದ್ದನಂತೆ. ಹಾಗಾಗಿ ಜಯದೇವನ ಗೀತಗೋವಿಂದ ಸೀರೆ ಅಲ್ಲಿ ಸುಪ್ರಸಿದ್ಧ. ಕೇವಲ ಒಂದೆರಡು ಮನೆಗಳವರು ಈ ಸಂಪ್ರದಾಯವನ್ನು ಅನೇಕ ವರ್ಷಗಳು ಮುಂದುವರೆಸಿಕೊಂಡು ಬಂದರು. ಅಲ್ಲಿನ ರಾಜನು ಆ ಪಟ್ಟಣದ ಸುತ್ತಮುತ್ತ ಇರುವ ಹಳ್ಳಿಯವರಿಗೆಲ್ಲಾ ನೇಯಲು ಅನುಮತಿ ನೀಡಿದ ಮೇಲೆ ಅವರೆಲ್ಲಾ ಕಾಟನ್, ರೇಷ್ಮೆಯ ಸೀರೆಗಳನ್ನು ನೇಯಲು ತೊಡಗಿದರು. ಅದು ಖಂಡುವಾ ಸೀರೆಗಳು ಅಂತಲೇ ಪ್ರಸಿದ್ಧವಾಗಿದೆ. ಅದರಲ್ಲಿ ಪ್ರಕೃತಿಯ ಎಲ್ಲಾ ತರಹದ ರೂಪಗಳೂ ಡಿಸೈನ್‌ಗಳಾಗಿವೆ. ನಕ್ಷತ್ರಗಳು, ಪ್ರಾಣಿಗಳು, ನಭೋಮಂಡಲ, ಶುಭ ಸೂಚಕಗಳು ಎಲ್ಲವೂ ಸೀರೆಯ ಭಾಗವಾಗಿ ಬಿಟ್ಟಿವೆ. ಇವತ್ತಿಗೂ ಜಗನ್ನಾಥ, ಬಲರಾಮ, ಸುಭದ್ರ ರಿಗೆ ಉಡಿಸುವ ಉಡುಪು ತಯಾರಾಗುವುದು ಖಂಡುವಾ ಸೀರೆಯಲ್ಲೇ. ಆ ಸೀರೆಯನ್ನು ನೇಯುವಾಗ ಅವರು ಉಪವಾಸವಿದ್ದು, ನೇಮ ನಿಷ್ಠೆಯಲ್ಲಿ ಭಕ್ತಿಯಿಂದ ನೇಯುತ್ತಾರೆ. ಯಾಕೆಂದರೆ ಅದು ದೇವಧರಿಸುವ ಬಟ್ಟೆ! ದೇವಮಗ್ಗ! ಅವರ ರಥಯಾತ್ರೆಯಲ್ಲಿ ರಥದ ಮೇಲೆ ಅಲಂಕಾರವಾಗಿ ಹೊದೆಸುವ ಬಟ್ಟೆಯೂ ಆ ಪಟ್ಟಣದ ಸುತ್ತಮುತ್ತ ತಯಾರಾಗುವ ಖಂಡುವಾ ರೇಷ್ಮೆಯ ಬಟ್ಟೆಯೇ.
ದೇವ ದೇವತೆಗಳು ಅಲಂಕಾರಪ್ರಿಯರು. ಅವರಿಗೆ ರೇಷ್ಮೆಯ ಬಟ್ಟೆ ಎಂದರೆ ಬಲು ಪ್ರಿಯ. ದೇವಲೋಕದ ನೇಕಾರ, ಋಷಿ ಮಾರ್ಕಂಡೇಯ. ಅವನು ಕಮಲದ ದಂಟಿನ ನಾರಿನಿಂದ ರೇಷ್ಮೆ ಸೀರೆಯನ್ನು ತಯಾರು ಮಾಡುತ್ತಿದ್ದ ಎಂಬುದು ಪುರಾಣದ ಕಥೆ. ಅದಕ್ಕೆ ಮಾರ್ಕಂಡೇಯನನ್ನು ಮಾಸ್ಟರ್ ವೀವರ್ ಎನ್ನುತ್ತಾರೆ. ಸಾವಿರಾರು ವರ್ಷಗಳ ನಂತರವೂ ಅವನ ವಂಶದವರು ನೇಯ್ಗೆಯನ್ನು ಮುಂದುವರೆಸಿದರು. ಅವರೇ ಇವತ್ತಿನ ಸೀರೆಗಳ ರಾಣಿ ಕಾಂಜೀವರಮ್ ಸೀರೆಗಳನ್ನು ನೇಯುವವರು ಅನ್ನೋ ಪ್ರತೀತಿ ಇದೆ.
ಗಾಢ ಬಣ್ಣಗಳಲ್ಲಿ ಬರುವ ಕಾಂಜೀವರಮ್ ಸೀರೆಗಳನ್ನು ಉಟ್ಟರೆ ಎಲ್ಲರೂ ದಿವ್ಯ ಸುಂದರಿಯರೇ. ಯಾಕೆಂದರೆ ಇದು ಹೇಳಿಕೇಳಿ ದೇವತೆಯರಿಗೆ ತಯಾರಾಗುತ್ತಿದ್ದ ಬಟ್ಟೆ. ಇವತ್ತಿಗೂ ನಮ್ಮ ದೇವಾಲಯಗಳಲ್ಲಿ ಅದರಲ್ಲೂ ತಮಿಳುನಾಡಿನ ದೇವಾಲಯಗಳಲ್ಲಿ ದೇವರಿಗೆ ಕಾಂಜೀವರಮ್ ವಸ್ತ್ರವಿಲ್ಲದೆ ಪೂಜೆ ಪೂರ್ಣವಾಗುವುದಿಲ್ಲ.
ಸೀರೆಗಳಲ್ಲೆಲ್ಲಾ ಅತಿ ದುಬಾರಿಯಾದ, ಆದರೆ ಕಲಾತ್ಮಕತೆಯಲ್ಲಿ, ನೇಯುವ ನಿಪುಣತೆಯಲ್ಲಿ, ಕರಾರುವಾಕ್ಕಾದ ಡೆಸೈನ್‌ನ ಮತ್ತು ನೂಲಿಗೆ ಬಣ್ಣ ಹಚ್ಚುವ ಕುಶಲತೆಯಲ್ಲಿ ಮೊದಲ ಸ್ಥಾನ ಪಡೆವ ಸೀರೆ ಪಾಟನ್ ಕಾ ಪಟೋಲಾ. ಇದು ಇಕ್ಕತ್ ಶೈಲಿಯ ಸೀರೆ. ನಾನು ಗುಜರಾತಿನ ಪಾಟನ್‌ಗೆ ಹೋಗಿದ್ದಾಗ ಪಟೋಲಾ ನೇಯುವ ಒಂದು ಮನೆಗೆ ಹೋಗಿದ್ದೆ. ಅಲ್ಲಿ ತನಕ ಸೀರೆ ನೇಯುವುದು ಸುಲಭ ಎಂದು ತಿಳಿದಿದ್ದ ನನಗೆ ಪಟೋಲಾ ನೇಯುವ ಕ್ಲಿಷ್ಟ ಪ್ರಕ್ರಿಯೆಯನ್ನು ಕಣ್ಣಾರೆ ನೋಡಿ ಬಂದ ದಿನದಿಂದ ಭಾರತದ ಅಷ್ಟೂ ಕೈಮಗ್ಗಗಳ ಭಾರೀ ಅಭಿಮಾನಿಯಾಗಿ ಹೋದೆ. ನಿಬ್ಬೆರಗಾಗುವ ನಿಖರತೆ ಬೇಡುವ, ಗಣಿತ, ಕಲೆ, ತಾಳ್ಮೆ ಬೇಡುವ ಒಂದು ಪಟೋಲಾ ಸೀರೆ ನೇಯಲು ನಾಕಾರು ತಿಂಗಳುಗಳು ಬೇಕು. ಅದಕ್ಕೇ ಅದರ ಬೆಲೆ ಲಕ್ಷಕ್ಕೂ ಅಧಿಕ. ಈ ಸೀರೆಗೆ ಸಾವಿರ ವರ್ಷಗಳ ಇತಿಹಾಸ. ಅಂದಿನ ಜೈನ ರಾಜ ಕುಮಾರಪಾಲನ ಕಾಲದಲ್ಲಿ ಕರ್ನಾಟಕದಿಂದ ವಲಸೆ ಹೋದ ಸಾಲ್ವಿ ನೇಕಾರರು ನೇಯುವ ಸೀರೆಗಳು ಜಗತ್ಪ್ರಸಿದ್ಧ. ದೇವರ ಪೂಜೆಗೆ ರಾಜ ನಿತ್ಯವೂ ಹೊಸ ಮೇಲುಹೊದಿಕೆಯನ್ನು ಹೊದ್ದು ಹೋಗುತ್ತಿದ್ದ ಎನ್ನುತ್ತಾರೆ.
ದೇವರಿಗೆ ಉಡುಪಾಗಿ ನೇಯುವುದು ಒಂದಾದರೆ, ದೇವರನ್ನೇ ನೇಯುವುದು ಅಥವಾ ದೇವರ ಚಿತ್ರಗಳನ್ನು ಬಟ್ಟೆಯ ಮೇಲೆ ಚಿತ್ರಿಸುವುದು ಕೂಡ ಇನ್ನೊಂದು ಬಗೆಯ ದೇವರೊಂದಿಗೆ ಬೆರೆತ ವಸ್ತ್ರಕಲೆ. ಗುಜರಾತಿನಲ್ಲಿ ಮಾತಾ ನಿ ಪಚ್ಚೆಡಿ ಅನ್ನುವ ಬಟ್ಟೆಯ ಮೇಲೆ ಚಿತ್ರ ಬರೆಯುವ ಸಂಪ್ರದಾಯ ಇದೆ. ಇದನ್ನು ಮಾಡುವವರು ಜಲ್ಲಿ ಕಲ್ಲು ಒಡೆಯುವ, ಅಷ್ಟೇನೂ ಅನುಕೂಲವಲ್ಲದ ವರ್ಗ. ಅವರು ದೇವಿಪೂಜಕರು ಅಂತ ಗುರುತಿಸಿಕೊಳ್ಳುತ್ತಾರೆ. ಅವರಿಗೆ ದೇವಾಲಯಕ್ಕೆ ಪ್ರವೇಶ ಕೊಡಲಿಲ್ಲ ಅಂತ ಬಟ್ಟೆಯ ಮೇಲೆ ದೇವಿಯ ಚಿತ್ರ ಬರೆದು ಅದರಿಂದ ಗುಡಿಯ ಹಾಗೆ ಹಿಂದೆ ಒಂದು ಪರದೆ, ಮೇಲೆ ಒಂದು ಬಟ್ಟೆ ಹಾಕಿ ಅದನ್ನೇ ಪೂಜೆ ಮಾಡುತ್ತಾ ಬಂದ ಕ್ರಾಂತಿಕಾರಿ ಸಮುದಾಯ ಇದು. ಇವರು ಸೀರೆಗಳ ಮೇಲೆ ದೇವಿ ವಿಧವಿಧವಾದ ಚಿತ್ರಗಳನ್ನು ಕಲಾತ್ಮಕವಾಗಿ, ಗಾಢ ಬಣ್ಣಗಳಲ್ಲಿ ಬಿದಿರಿನ ಕಡ್ಡಿಗಳಿಂದ ಮೂಡಿಸುತ್ತಾರೆ. ಅದನ್ನು ಗುಜರಾತಿನ ಕಲಮ್‌ಕಾರಿ ಎನ್ನುತ್ತಾರೆ. ಅವರಿಗೆ ಅದು ಬರಿ ಬಟ್ಟೆಯಲ್ಲ, ದೇವಿಯ ಆರಾಧನೆ.
ಹಾಗೆಯೇ ಮಧುಬನಿ ಕಲಾಕಾರರು ದೇವರ ಮಧುಬನಿ ಚಿತ್ರಗಳನ್ನು ಸೀರೆಯ ಮೇಲೆ ಚಿತ್ರಿಸುತ್ತಾರೆ. ಒಟ್ಟಿನಲ್ಲಿ ಬಟ್ಟೆಯ ಪ್ರಪಂಚವೂ ಕೂಡ ದೇವಪ್ರಪಂಚ ಎಂಬಷ್ಟು ಕಲೆ ಮತ್ತು ಭಕ್ತಿ ವಸ್ತ್ರಲೋಕದಲ್ಲಿ ಒಂದಾಗಿದೆ. ಹಾಗಾಗಿಯೇ ನನಗೆ ಈ ಕೈಮಗ್ಗದ ಜಗತ್ತು ಎಂದರೆ ಮುಗಿಯದ ಬೆರಗು. ಎಲ್ಲಿಂದ ಎಲ್ಲಿಗೆ ಹಾಸುಹೊಕ್ಕಾಗಿದೆ. ಭಾಷೆಯ ಹಾಗೇ ಊರಿಗೊಂದರಂತೆ ಬೇರೆ ಬೇರೆ ಕೈಮಗ್ಗಗಳು. ಎಂದೋ ದೇವರು ಹೇಳಿದ್ದಾನೆ ಅಂತ ಇಂದಿಗೂ ಅದನ್ನೇ ಕಾಯಕವಾಗಿಸಿಕೊಂಡ ನೇಕಾರರು! ಅದರ ಹಿಂದಿನ ನಂಬಿಕೆ ಮತ್ತು ಅದನ್ನೇ ಬದುಕಾಗಿಸಿಕೊಂಡ ಶ್ರದ್ಧೆ!!
ಮೇಲೆ ಹೇಳಿದ ದೇವಲ ಋಷಿಯ ಕತೆ ಒಂದೆಡೆಯಾದರೆ, ನಮ್ಮ ಕನ್ನಡದ ೧೦ನೆಯ ಶತಮಾನದ ವಚನಕಾರ ದೇವರ ದಾಸಿಮಯ್ಯರದ್ದೂ ನೇಯ್ಗೆಯ ಕತೆಯಿದೆ. (ದಾಸಿಮಯ್ಯನೇ ದೇವಲ ಋಷಿ ಎನ್ನುತ್ತಾರೆ). ದಾಸಿಮಯ್ಯರು ನೇಕಾರರು. ಅವರು ರಾಮನಾಥ ಎಂಬ ಅಂಕಿತದಿಂದ ವಚನಗಳನ್ನು ಬರೆಯುತ್ತಿದ್ದರು. ಕನ್ನಡದ ಪ್ರಮುಖ ಕವಿ ಸು.ರಂ. ಎಕ್ಕುಂಡಿ ಒಂದು ಕವನದಲ್ಲಿ ದಾಸಿಮಯ್ಯ ಮತ್ತು ಅವರ ಹೆಂಡತಿ ದುಗ್ಗಲೆ ಇವರಿಬ್ಬರ ನೇಕಾರ ಕಾಯಕ ನಿಷ್ಠೆ, ತನ್ಮಯತೆಯನ್ನು ಸೊಗಸಾಗಿ ವರ್ಣಿಸಿದ್ದಾರೆ. ಮಗ್ಗ, ಲಾಳಿ, ಗಂಟೆ, ಹಾಸು-ಹೊಕ್ಕು ಇವುಗಳು ವಚನದ ಭಕ್ತ ಸ್ಥಲದ ಭಿತ್ತಿಯಲ್ಲಿ ಮೂಡಿ ಬಂದಿದೆ.
ಒಂದು ಮಹಾಕೃತಿ ಬರೆಯಲು ಐದು ವರ್ಷಗಳು ತೆಗೆದುಕೊಳ್ಳುವಂತೆ ಒಂದು ಬಟ್ಟೆ ನೇಯಲೂ ತಿಂಗಳುಗಳು, ವರ್ಷಗಳೂ ಬೇಕು. ಭಕ್ತಿಯೆಂಬ ಮಗ್ಗದಲ್ಲಿ ಬದುಕೆಂಬ ಬಟ್ಟೆಯನ್ನು ನೇಯ್ದು ಜಗದ ನೇಕಾರನಿಗೆ ಸಮರ್ಪಿಸುವ ಕಾಸ್ಮಿಕ್ ಕ್ರಿಯೆ ಇದು. ಭಾರತೀಯ ಮನಸ್ಸು ಲೌಕಿಕ ಮತ್ತು ಅಲೌಕಿಕಗಳನ್ನು ವಾರ್ಪ್ ಮತ್ತು ವೆಫ್ಟ್ (ಅಡ್ಡ ಮತ್ತು ಉದ್ದ ನೂಲುಗಳು) ಗಳ ವಿನ್ಯಾಸದಲ್ಲಿ ನೇಯುತ್ತಲೇ ಇರುವ ಸೋಜಿಗ ಈ ದೇವಮಗ್ಗ.
ಆರೆಂಟು ವರ್ಷಗಳ ಅಪರೂಪ ನೂಲೆಳೆದು
ದುಗ್ಗಲೆಯು ನೀಡಿರುವ ಲಡಿಯ ಹೊಯ್ದ
ಮನವೆಂಬ ಮಗ್ಗದಲಿ ನೆನಹೆಂಬ ಎಳೆಬಿಟ್ಟು
‘ರಾಮನಾಥಾ ʼ ಎಂಬ ಬಟ್ಟೆ ನೇಯ್ದ
ಗಿರಿಜಾ ರೈಕ್ವ ವೃತ್ತಿಯಲ್ಲಿ ಕಾರ್ಪೋರೇಟ್ ರಿಯಲ್ ಎಸ್ಟೇಟ್ ಮತ್ತು ಫೆಸಿಲಿಟಿಸ್ ಉದ್ಯೋಗಿ. ಅಲೆದಾಟ, ತಿರುಗಾಟ, ಹುಡುಕಾಟ ಆಸಕ್ತಿ ಮತ್ತು ರಂಗಭೂಮಿಯಲ್ಲಿ ಒಲವು ಹೊಂದಿದ್ದಾರೆ.
Beautiful article !!!
An ode to Indian crafts! Very relevant in the times when people are floored by the western clothes with no history at all! and paying a bomb for brands!
Keep wriitng Girija!
ABBA ESHTELLA VISHAYAGALU . LEKHANA BAHALA CHENNAGIDE.
What an extensive study you must have done to write this special article.. the love and passion you have towards the saree and their weaving is well send here.. superb work Girija..