ಈ ಭೂಗೋಳದ ಬಹುತೇಕ ರಾಷ್ಟ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಜಗಳ, ಕದನ, ವೈಮನಸ್ಸು, ಪ್ರತಿಭಟನೆ, ಆಗ್ರಹಗಳು ನಡೆಯುತ್ತಲೇ ಇರುವುದನ್ನು ಓದಿದಾಗ, ಕೇಳಿದಾಗ ಮನುಷ್ಯನ ಮನಸ್ಸು ಅದೆಷ್ಟು ಅತಂತ್ರವೆನಿಸುತ್ತದೆ. ಆ ಮನಸ್ಸುಗಳು ಅದೆಷ್ಟು ಸುಲಭವಾಗಿ ಆಕ್ರಮಣಶೀಲತೆಯನ್ನು ಅಪ್ಪಿಕೊಳ್ಳುತ್ತವೆ ಎಂದು ಗೋಚರಿಸುತ್ತದೆ. ತಾನು ಮುಖ್ಯ, ತನ್ನದು ಮುಖ್ಯ, ತನ್ನದೇ ಮೇಲು, ತನ್ನದನ್ನು ವಾದಿಸುತ್ತಾ ಮುಂದಿರಿಸಬೇಕು, ಎನ್ನುವುದು ಬರೀ ಮನುಷ್ಯ ಸ್ವಭಾವವೇ ಹೌದು. ಒಮ್ಮೊಮ್ಮೆ ಅದು ಎಲ್ಲ ಪ್ರಾಣಿಗಳ ಸಾರ್ವತ್ರಿಕ ಸ್ವಭಾವ ಎನ್ನುವುದಾದರೂ ಪ್ರಾಣಿಪ್ರಪಂಚವನ್ನು ಗಮನಿಸಿದಾಗ ಈ ಬಗೆಯ ವೈಮನಸ್ಯಗಳು ಕಾಣುವುದಿಲ್ಲ.
ಡಾ. ವಿನತೆ ಶರ್ಮಾ ಬರೆಯುವ “ಆಸ್ಟ್ರೇಲಿಯಾ ಪತ್ರ”
ತಾವು ಹುಟ್ಟಿದ ನೆಲದಲ್ಲಿ ಎಲ್ಲರೂ ಸ್ವತಂತ್ರರೆ. ಎಲ್ಲರೂ ಸಮಾನರೆ. ಒಂದೇ ನಾಡಿನಲ್ಲಿ ಎಲ್ಲರೂ ಪರಸ್ಪರತೆಯಿರುವ ನೆರೆಹೊರೆಯವರೆ. ಇಪ್ಪತ್ತೊಂದನೆ ಶತಮಾನದ ತಾಂತ್ರಿಕ ಅಭಿವೃದ್ಧಿ, ಬಾಹ್ಯಾಕಾಶದ ನಂಟಿನ ವಿಜ್ಞಾನ ಯುಗದಲ್ಲಿ ಇದು ಸರ್ವೇಸಾಮಾನ್ಯವಾಗಿರಬೇಕಾದ ಸಂಗತಿ. ಆದರೆ ಅದು ಎಲ್ಲರ ಅನುಭವಕ್ಕೂ ಬರುತ್ತಿಲ್ಲ. ಒಬ್ಬರ ಮೇಲೆ ಇನ್ನೊಬ್ಬರ ಪ್ರಾಬಲ್ಯ ಎನ್ನುವುದೇ ಚಲಾವಣೆಯಲ್ಲಿದೆ. ಹಿಂದೆಲ್ಲ ಇವರು ಅವರ ಮೇಲೆ ದಂಡೆತ್ತಿ ಹೋಗಿ ಜಯಿಸುತ್ತಿದ್ದರು. ಇಲ್ಲವೇ ಅವರು ಇವರ ನಾಡಿಗೆ ಬಂದು ಕಾಲೂರಿ ಮೆರೆಯುತ್ತಿದ್ದರು. ಈಗಂತೂ ಅವಷ್ಟೇ ಅಲ್ಲದೆ ದೇಶದೊಳಗೇ, ಸ್ವದೇಶಿಗಳ ನಡುವಿನಲ್ಲೇ ಜರುಗುತ್ತಿರುವ ಭಿನ್ನತೆಯ ಮನೋಭಾವಗಳು ವಿಪರ್ಯಾಸದ ವಿಷಯ.
ಈ ಸಂಗತಿ ಹಲವಾರು ದೇಶಗಳಲ್ಲಿ ನಡೆಯುತ್ತಿರುವ ವಿದ್ಯಮಾನ. ಅಮೆರಿಕದಲ್ಲಿ ‘ಬ್ಲಾಕ್ ಲೈವ್ಸ್ ಮ್ಯಾಟರ್’, ಆಸ್ಟ್ರೇಲಿಯಾದಲ್ಲಿ ‘ಅಬೊರಿಜಿನಲ್ ಲೈವ್ಸ್ ಮ್ಯಾಟರ್’ ಚಳವಳಿಗಳು, ಯುರೋಪಿನ ದೇಶಗಳಲ್ಲಿ ಹೊಗೆಯಾಡುತ್ತಿರುವ ಇಸ್ಲಾಮಾಫೋಬಿಯ, ಭಾರತ ಉಪ-ಖಂಡದ ದೇಶಗಳಲ್ಲಿ ಎಂತೆಂಥದ್ದೊ ವಿಭಜನೆಗಳು – ಭಾರತವೂ ಸೇರಿ ಥೈಲ್ಯಾಂಡ್, ಮ್ಯಾನ್ಮಾರ್, ನೇಪಾಳಗಳಲ್ಲಿ ಇವರ ಕಂಡರೆ ಅವರಿಗೆ ಅಸಹನೆ, ಅವರ ಕಂಡರೆ ಇವರಿಗೆ ಕಣ್ಣುರಿ. ದಕ್ಷಿಣ ಅಮೆರಿಕೆಯ ದೇಶಗಳಲ್ಲಿ ಯಾವಾಗಲೂ ನಡೆದೇ ಇರುವ ಮೂಲನಿವಾಸಿಗಳ ಚಳವಳಿಗಳು, ಆಫ್ರಿಕಾ ಖಂಡದ ಹಲವಾರು ದೇಶಗಳಲ್ಲಿನ ದಳ್ಳುರಿ, ಮಧ್ಯಪ್ರಾಚ್ಯ ದೇಶಗಳಲ್ಲಿ ಜರುಗುವ ಯುದ್ಧಗಳು… ಒಂದೇ.. ಎರಡೇ.. ಶಾಂತಿ ಮಂತ್ರದ ಅನುಷ್ಠಾನ ಮೆಲ್ಲನೆ ಮಾಯವಾಗುತ್ತಿರುವಂತಿದೆ.
ಈ ಭೂಗೋಳದ ಬಹುತೇಕ ರಾಷ್ಟ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಜಗಳ, ಕದನ, ವೈಮನಸ್ಸು, ಪ್ರತಿಭಟನೆ, ಆಗ್ರಹಗಳು ನಡೆಯುತ್ತಲೇ ಇರುವುದನ್ನು ಓದಿದಾಗ, ಕೇಳಿದಾಗ ಮನುಷ್ಯ ಮನಸ್ಸು ಅದೆಷ್ಟು ಅತಂತ್ರವೆನಿಸುತ್ತದೆ. ಆ ಮನಸ್ಸುಗಳು ಅದೆಷ್ಟು ಸುಲಭವಾಗಿ ಆಕ್ರಮಣಶೀಲತೆಯನ್ನು ಅಪ್ಪಿಕೊಳ್ಳುತ್ತವೆ ಎಂದು ಗೋಚರಿಸುತ್ತದೆ. ತಾನು ಮುಖ್ಯ, ತನ್ನದು ಮುಖ್ಯ, ತನ್ನದೇ ಮೇಲು, ತನ್ನದನ್ನು ವಾದಿಸುತ್ತಾ ಮುಂದಿರಿಸಬೇಕು, ಎನ್ನುವುದು ಬರೀ ಮನುಷ್ಯ ಸ್ವಭಾವವೇ ಹೌದು. ಒಮ್ಮೊಮ್ಮೆ ಅದು ಎಲ್ಲ ಪ್ರಾಣಿಗಳ ಸಾರ್ವತ್ರಿಕ ಸ್ವಭಾವ ಎನ್ನುವುದಾದರೂ ಪ್ರಾಣಿಪ್ರಪಂಚವನ್ನು ಗಮನಿಸಿದಾಗ ಈ ಬಗೆಯ ವೈಮನಸ್ಯಗಳು ಕಾಣುವುದಿಲ್ಲ. ಮನುಷ್ಯರು ಬುದ್ಧಿಪೂರ್ವಕವಾಗಿ ತಮ್ಮ ದೃಷ್ಟಿಕೋನಗಳಲ್ಲಿ, ನಂಬಿಕೆಗಳಲ್ಲಿ, ಮನೋಭಾವಗಳಲ್ಲಿ, ಚರ್ಯೆಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು. ಆದರೆ ಹಾಗಾಗಿಲ್ಲ. ಮನುಷ್ಯರೆಂದರೆ ಅದೇ ಅಲ್ಲವೇ! ತಾನು ಬದಲಾಗಬೇಕು ಎನ್ನುವ ವಿಷಯ ಮನುಷ್ಯರಿಗೆ ಬಿಸಿತುಪ್ಪವಿದ್ದಂತೆ. ಅದರ ಹಿಂದೆ ಇರುವುದು ಭಯ ಮತ್ತು ಹೆದರಿಕೆ. ತನ್ನಲ್ಲಿ ತನಗೆ ಸಂಪೂರ್ಣ ನಂಬಿಕೆಯಿಲ್ಲದಿರುವುದು. ಇತರರಲ್ಲಿ ನಂಬಿಕೆ ಮತ್ತು ವಿಶ್ವಾಸವಿಲ್ಲದಿರುವುದು.
ನಮ್ಮೂರು ಬ್ರಿಸ್ಬೇನ್ನಲ್ಲಿ ಕಳೆದ ಶನಿವಾರದಂದು ನಡೆದ ಭಾರತದ ಎಪ್ಪತ್ತಾರನೆಯ ಸ್ವಾತಂತ್ರ್ಯ ದಿನಾಚರಣೆಯ ಹಬ್ಬಕ್ಕೆ ಹೋಗಿದ್ದೆ. ಕೋವಿಡ್-೧೯ ಕಾರಣದಿಂದ ಹೋದ ಎರಡು ವರ್ಷಗಳು ಈ ಹಬ್ಬ ನಡೆಯಲಿಲ್ಲ. ಆ ದಿನ ಬಿಟ್ಟೂ ಬಿಟ್ಟೂ ಮಳೆ ಸುರಿಯುತ್ತಿತ್ತು. ಆದರೂ ಕೂಡ ಉತ್ಸಾಹದಿಂದ ವಾಟರ್ಪ್ರೂಫ್ ಕೋಟ್ ಹಾಕಿಕೊಂಡು, ಕ್ಯಾಂಪಿಂಗ್ ಖುರ್ಚಿಗಳನ್ನು, ಛತ್ರಿಗಳನ್ನು ಹೊತ್ತುಕೊಂಡು ಹೋಗಿದ್ದೆವು. ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಬಿಸಿಲೇರುತ್ತಿರುತ್ತದೆ. ಈ ವರ್ಷ ಹವಾಮಾನ ವೈರುಧ್ಯಗಳು ಹೆಚ್ಚಾಗಿವೆ.
ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳನ್ನು ನೋಡುತ್ತಾ ಕೂತಿದ್ದಾಗ ನನಗೆ ನೆನಪಾಗಿದ್ದು ಗಾಂಧೀಜಿಯವರ ‘ಮೈ ಎಕ್ಸ್ಪೆರಿಮೆಂಟ್ಸ್ ವಿಥ್ ಟ್ರುಥ್’ ಪುಸ್ತಕ, ರವೀಂದ್ರನಾಥ್ ಟಾಗೋರರ ‘ಸ್ಟ್ರೀರ್ ಪತ್ರ’ (A Wife’s Letter) ಕಥೆ. ಆ ಕಥೆಯನ್ನು ನಾನು ಇಂಗ್ಲೀಷಿನಲ್ಲಿ ಓದಿರುವುದು. ೧೯೯೦ರ ದಶಕದಲ್ಲಿ ನನಗೆ ಬಹಳ ಇಷ್ಟವಾಗಿದ್ದ ಕಥೆಯದು. ಕಥೆಯಲ್ಲಿ ಬರುವ ಎರಡನೇ ಸೊಸೆ ಮೃಣಾಲ್ ಹೇಳುವ ‘ಐ ಫೌಂಡ್ ಮೈಸೆಲ್ಫ್ ಬ್ಯೂಟಿಫುಲ್ ಅಸ್ ಎ ಫ್ರೀ ಹ್ಯೂಮನ್ ಮೈಂಡ್’ ಮಾತನ್ನು ನನ್ನ ಎಮ್. ಎಡ್. ಥೀಸಿಸಿನಲ್ಲಿ ಒಂದೆಡೆ ಉಲ್ಲೇಖಿಸಿದ್ದೆ. ಹೆಣ್ಣನ್ನು ಬಂಧಿಸಿಡುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ಮೃಣಾಲ್ ಪ್ರಶ್ನಿಸುತ್ತಾ ವಿರೋಧಿಸುತ್ತಾಳೆ. ಕಡೆಗೆ ಅವನ್ನು ತಿರಸ್ಕರಿಸಿ ತನ್ನ ಮನಸ್ಸಾಕ್ಷಿಗೆ ಅನುಗುಣವಾಗಿ ನಡೆಯುತ್ತಾಳೆ.
ಟಾಗೋರರ ‘ಭಯವಿಲ್ಲದ ಸ್ವತಂತ್ರ ಮನಸ್ಸು’ ನನಗೆ ಪ್ರಿಯವಾದದ್ದು. ಅವರ ಮತ್ತು ಗಾಂಧೀಜಿಯವರ ಬರಹಗಳಲ್ಲಿ ತಮ್ಮಲ್ಲಿನ ಒಬ್ಬ ವ್ಯಕ್ತಿಯ ಬಗ್ಗೆ ನಿರಂತರ ಶೋಧವಿದೆ, ಬೆಳವಣಿಗೆಯಿದೆ, ಅದರಿಂದಾದ ಬದಲಾವಣೆಗಳಿವೆ. ಸಂಕೋಲೆಗಳನ್ನು ತೊಡೆಸುವ ವ್ಯವಸ್ಥೆಗಳನ್ನು ಪ್ರಶ್ನಿಸುವ ಧೈರ್ಯವಿದೆ. ಅದೇ ಧೈರ್ಯದಲ್ಲಿ ತಾಳ್ಮೆ, ಅಹಿಂಸೆ ಇದೆ. ಉದ್ವೇಗವಿರದ ಶಾಂತತೆಯಿದೆ. ಅವಲ್ಲಿ ಭಯವಿಲ್ಲ, ಹೆದರಿಕೆಯಿಲ್ಲ. ಮುಂದೆ ಸಾಗುವ ತಣಿಯದ ಕುತೂಹಲವಿದೆ. ಅಹಂ ಇಲ್ಲ. ತಾನೆಂಬ ತನ್ನನ್ನು ಬಿಟ್ಟುಕೊಂಡು ಮುನ್ನಡೆಯುವ ಹಂಬಲವಿದೆ. ಅತ್ಯಂತ ಮುಖ್ಯವಾಗಿ ಸ್ವತಂತ್ರ ಮನಸ್ಸಿದೆ. ಈ ಸ್ವತಂತ್ರತೆಯಲ್ಲಿ ಇರುವುದು ಸ್ವಾವಲಂಬನೆ, ಸ್ವಯಂ-ನಿರ್ಣಯ ಮತ್ತು ಸಮಷ್ಟಿ ದೃಷ್ಟಿ.
ಅಂತಹ ಮನಸ್ಸುಗಳಿಗೆ ಸಾಕ್ಷಿಯಾದ ಇದೇ ಪ್ರಪಂಚದಲ್ಲಿ ಇಂದು ಇನ್ನೂ ‘ತಾನೆಂಬ’ ಅಹಮ್ಮಿನಲ್ಲಿ ಬಂಧಿತವಾದ ಮನಸ್ಸುಗಳ ಪ್ರಾಬಲ್ಯವಿದೆ. ಅಂತಹ ಬಂಧಿತ ಮನಸ್ಸುಗಳು ತಮ್ಮ ಅಧಿಕಾರವನ್ನು ಬಳಸಿಕೊಂಡು ಸಾಮಾನ್ಯ ಜನರ ಮನಸ್ಸುಗಳನ್ನು ವಶಕ್ಕೆ ತೆಗೆದುಕೊಂಡು ಅವರನ್ನು ದಾರಿ ತಪ್ಪಿಸುತ್ತಿರುವುದು ನಿರಾಸೆಯ ವಿಷಯ.
ಅಂತಹ ನಿರಾಸೆಗಳ ನಡುವೆಯೆ ‘ಜೊತೆಯಾಗಿ ನಡೆಯೋಣ’ ಎನ್ನುತ್ತಿರುವ ಮನಸ್ಸುಗಳ ಪುನರ್ಚೇತನವಿದೆ. ನಮ್ಮ ಆಸ್ಟ್ರೇಲಿಯನ್ ಪ್ರಧಾನಿ ಇನ್ನೂ ಅದೇ ಮಾತನ್ನು ಹೇಳುತ್ತಿರುವುದು ನೋಡಿ ಜಡ್ಡುಗಟ್ಟಿದ್ದ ಮನಸ್ಸುಗಳು ಅರಳುತ್ತಿವೆ. ಮೊನ್ನೆ ಟೊರ್ರೆ ಸ್ಟ್ರೇಟ್ ದ್ವೀಪಗಳಿಗೆ ಪ್ರಧಾನಿಯವರು ಭೇಟಿ ಕೊಟ್ಟು ಜನರೊಂದಿಗೆ ಬೆರೆತು ಕುಶಲೋಪರಿ ವಿಚಾರಿಸಿದ್ದರು. ‘ಹೃದಯದಿಂದ ಹೊಮ್ಮಿದ ಊಲುರೂ ಮಾತನ್ನು’ ಮತ್ತೊಮ್ಮೆ ಮೂಲನಿವಾಸಿ ಜನರ ಮುಂದಿಟ್ಟು ಅವರ ಅಭಿಪ್ರಾಯವನ್ನು ಕೇಳುತ್ತಿದ್ದಾರೆ. ಆಸ್ಟ್ರೇಲಿಯನ್ ಸಂವಿಧಾನದಲ್ಲಿ ಮೂಲನಿವಾಸಿ ಜನರ ದನಿಯನ್ನು (ಅಭಿಪ್ರಾಯ ಮಂಡನೆ) ಸೇರಿಸುವ ನಿಟ್ಟಿನಲ್ಲಿ ಕೆಲಸ ಮುನ್ನಡೆದಿದೆ.
ಮತ್ತೆ ‘ಭಯವಿಲ್ಲದ ಸ್ವತಂತ್ರ ಮನಸ್ಸು’ ಗಳ ನೆನಪಾಗುತ್ತಿದೆ. ಹಿಂದಿನ ಸರಕಾರಗಳು ಸಂವಿಧಾನದಲ್ಲಿ ಮೂಲನಿವಾಸಿ ಜನರ ದನಿಯನ್ನು ಸೇರಿಸಲು ಯಾಕೆ ಹಿಂದೆಮುಂದೆ ನೋಡುತ್ತಿದ್ದರು, ಅವರಿಗೆ ಇರುವ ಭಯ ಯಾತರದ್ದು ಎಂಬ ಪ್ರಶ್ನೆಯೇಳುತ್ತದೆ. ದೇಶದ ಒಟ್ಟೂ ೨೫ ಮಿಲಿಯನ್ ಜನಸಂಖ್ಯೆಯಲ್ಲಿ ಕೇವಲ ೩.೫ % ರಷ್ಟು ಅಂದರೆ ಒಂದು ಮಿಲಿಯನ್ನಿಗೂ ಕಡಿಮೆ ಇರುವ ಮೂಲನಿವಾಸಿಗಳ ದನಿ ಗಟ್ಟಿಯಾದರೆ ಬಿಳಿಯರ ಪ್ರಾಬಲ್ಯಕ್ಕೆ ಕುತ್ತು ಬರುವುದೆಂಬ ಹೆದರಿಕೆಯೇ? ಈ ಕ್ಷಣಕ್ಕೆ ನೆನಪಾಗುತ್ತಿರುವುದು ಖ್ಯಾತ ಅಬೊರಿಜಿನಲ್ ಬರಹಗಾರ್ತಿ, ಕಲೆಗಾರ್ತಿ ಮತ್ತು ಯೂನಿವರ್ಸಿಟಿ ಪ್ರಾಧ್ಯಾಪಕಿ ಆಂಟಿ ಲೈಲಾ ವಾಟ್ಸನ್ ಹೇಳಿದ ಮಾತು – ‘ನಮಗೆ ಸಹಾಯ ಮಾಡಲೆಂದು ನೀವು ಬರುವ ಅಗತ್ಯವಿಲ್ಲ. ಆದರೆ, ನಮ್ಮ ಬಿಡುಗಡೆಯೊಂದಿಗೆ ನಿಮ್ಮ ಬಿಡುಗಡೆಯೂ ತಳಕು ಹಾಕಿಕೊಂಡಿದೆಯಾದರೆ ಬನ್ನಿ, ಜೊತೆಯಾಗಿ ನಡೆಯೋಣ.’ ಆ ಮಾತಿನಲ್ಲಿ ಸ್ವಾತಂತ್ರ್ಯದ ಸ್ವಚ್ಛತೆ ಕಾಣುತ್ತದೆ. ‘ಜೊತೆಯಾಗಿ ನಡೆಯೋಣ’ ಎನ್ನುವುದು ಸರ್ವವ್ಯಾಪಿಯಾಗಲಿ. ಸುಗ್ರೀವಾಜ್ಞೆಯಾಗಲಿ. ಬದ್ಧತೆಯಿಂದ ಕೂಡಿದ ಸರ್ವೋಚ್ಚ ನ್ಯಾಯವಾಗಲಿ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.