ಒಂದು ಸಲ ಒಬ್ಬ ಗಿರಾಕಿ ಬಂದ. ಆಗ ನಾವು ಬಾಗಿಲ ಬಳಿ ನಿಂತಿದ್ದೆವು. ಅವನು ಏನೋ ಮಾತನಾಡುತ್ತ ‘ನಿಮ್ಮ ಚಪ್ಪಲಿ ಚೆಂದ ಅದಾವು’ ಎಂದು ಹೇಳಿದ. ಆಗ ಅವರು ‘ನೀನೇ ಕೊಡಿಸಿದ್ದು’ ಎಂದು ಹೇಳಿದರು. ಅವನಿಗೆ ವಿಚಿತ್ರ ಎನಿಸಿತು. ‘ಈ ಅಂಗಡಿ ಮತ್ತು ನಾನು ಉಟ್ಟುಕೊಂಡ ಬಟ್ಟೆ ನೀನೇ ಕೊಡಿಸಿದ್ದು’ ಎಂದು ಹೇಳಿದರು. ಅವನಿಗೆ ಇನ್ನೂ ವಿಚಿತ್ರ ಎನಿಸಿ ಗಾಬರಿಯಾದ. ‘ನಿಮಂಥ ಗಿರಾಕಿಗಳು ನಮ್ಮ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡಿದಾಗ. ಇದೆಲ್ಲ ದಕ್ಕಿದ್ದು’ ಎಂದು ಮಾಮಾ ಹೇಳಿದಾಗ ಅವನಲ್ಲಿ ಹೆಮ್ಮೆ ಮೂಡುವ ಬದಲು ಕೃತಜ್ಞತಾ ಭಾವ ಮೂಡಿತು. ತೃಪ್ತಿಯಿಂದ ಅಂಗಡಿಯ ಒಳಗೆ ಹೋದ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 74ನೇ ಕಂತು ನಿಮ್ಮ ಓದಿಗೆ

50 ವರ್ಷಗಳಷ್ಟು ಹಿಂದಿನ ಮಾತು. ನಾನು ಬಿ.ಎ. ಪಾಸಾದ ಮೇಲೆ ಎಂ.ಎ. ಓದಲು ಕಳಿಸಬೇಕೆಂಬುದು ಪ್ರೊ. ಎ.ಎಸ್. ಹಿಪ್ಪರಗಿ ಮತ್ತು ಪ್ರೊ. ಎಸ್.ಬಿ. ಸಾರಂಗಮಠ ಅವರ ಇಚ್ಛೆಯಾಗಿತ್ತು. ಈ ಕುರಿತು ಭೋಜಣ್ಣ ಬೀಳಗಿ ಅವರ ಜೊತೆ ಚರ್ಚಿಸಿ ನನಗೆ ತಿಳಿಸಿದರು. ಸೋಮನಾಥ ಕ್ಲಾಸ್ ಸೆಂಟರ್‌ಗೆ ಹೋದೆ. ಭೋಜಣ್ಣನವರು ಏನೂ ಕೇಳದೆ 200 ರೂಪಾಯಿ ಕೊಟ್ಟರು. ಅದು ಅವರ ಜೊತೆಗಿನ ನನ್ನ ಮೊದಲ ಭೇಟಿಯಾಗಿತ್ತು. ಆದರೆ ಅವರನ್ನು ಬಹಳ ಸಲ ದೂರದಿಂದ ನೋಡಿದ್ದೆ. ಅವರು ಸ್ಕೂಟರ್ ಮೇಲೆ ಟೆನಿಸ್ ಬ್ಯಾಟ್‌ ಇಟ್ಟುಕೊಂಡು ಟೆನಿಸ್ ಕೋರ್ಟ್ ಕಡೆಗೆ ಹೋಗುವಾಗ ಚಿತ್ರನಟನ ಹಾಗೆ ಕಾಣುತ್ತಿದ್ದರು. ಸ್ಫುರದ್ರೂಪಿಯಾಗಿದ್ದ ಅವರು ಬಹಳ ಮಿತಭಾಷಿ. ಸಂಗೀತ ಅವರ ಪ್ರಾಣಜೀವಾಳ, ಕಲೆ, ಸಾಹಿತ್ಯ, ಟೆನಿಸ್ ಮುಂತಾದವು ಅವರ ನೆಚ್ಚಿನ ಕ್ಷೇತ್ರಗಳು.

ಮೊದಲಿಗೆ ಇಷ್ಟೆಲ್ಲ ನನಗೆ ಗೊತ್ತಿದ್ದಿದ್ದಿಲ್ಲ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದಲ್ಲಿ ಎಂ.ಎ. ಗೆ ಸೇರಿದಾಗ, ಅವರ ಅಕ್ಕನ ಮಗಳು ವನಮಾಲಾ ಕೂಡ ಭಾಷಾವಿಜ್ಞಾನ ವಿಭಾಗ ಸೇರುವುದರ ಮೂಲಕ ನನ್ನ ಸಹಪಾಠಿಯಾದರು. ಎಂ.ಎ. ಮುಗಿದ ಮೆಲೆ ನಾನು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ‘ಕೃಷಿಪೇಟೆ’ ಮಾಸಪತ್ರಿಕೆಯ ಉಪ ಸಂಪಾದಕನಾಗಿ ಸೇರಿದೆ. ಅಲ್ಲಿಂದ ಮೈಸೂರು ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ.ಎಂ.ಎಂ. ಓದಲು ಮಾರಾಟ ಮಂಡಳಿ ಡೆಪ್ಯೂಟೇಷನ್ ಮೇಲೆ ಕಳುಹಿಸಿತು. ವನಮಾಲಾ ಮೈಸೂರಿನ ಸಿ.ಐ.ಐ.ಎಲ್.ನಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿ ಸೇರುವ ಸಂದರ್ಭದಲ್ಲಿ ನಾನು ಕೂಡ ವನಮಾಲಾ ಮತ್ತು ಭೋಜಣ್ಣನವರ ಕೂಡ ಓಡಾಡಿದೆ. ಆ ಸಂದರ್ಭದಲ್ಲಿ ಅವರ ಜೊತೆ ನನಗೆ ಗಾಢವಾದ ಸಂಬಂಧ ಬೆಳೆಯಿತು. ನಾನು ಕೂಡ ಅವರನ್ನು ಮಾಮಾ ಎಂದೇ ಕರೆಯುತ್ತಿದ್ದೆ.

(ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪ್ರಭುದೇವ ಸರ್ದಾರ)

ಬೆಂಗಳೂರು ಮತ್ತು ಮೈಸೂರಿನಿಂದ ವಿಜಯಪುರಕ್ಕೆ ಬಂದಾಗಲೆಲ್ಲ ಬಹಳಷ್ಟು ಸಮಯವನ್ನು ಅವರ ಬಟ್ಟೆ ಅಂಗಡಿಯಲ್ಲೇ ಕಳೆಯುತ್ತಿದ್ದೆ. ಅವರ ವಿಶಾಲವಾದ ಅಂಗಡಿ ಸಂಗೀತ ಮತ್ತು ಕಲೆಯ ಕೇಂದ್ರದ ಹಾಗೆ ಇದೆ. ಅವರ ಅಂಗಡಿಯಲ್ಲಿ ಕುಳಿತು ದೇಶಪ್ರಸಿದ್ಧ ಹಿಂದುಸ್ತಾನಿ ಗಾಯಕರ ಮತ್ತು ವಿವಿಧ ವಾದ್ಯಗಳ ವಾದಕರ ಸುಮಧುರ ಸಂಗೀತ ಕೇಳುವುದೇ ಆನಂದ. ಸಾಯಂಕಾಲ ಅವರ ಮಿತ್ರವೃಂದ ಬರುತ್ತಿತ್ತು. ಪ್ರೊ. ಹಿಪ್ಪರಗಿ, ಸಾರಂಗಮಠ ಸರ್, ಸುಶೀಲಾ ಪಟ್ಟಣಶೆಟ್ಟಿ ಮೇಡಂ ಮುಂತಾದವರು ಸೇರುತ್ತಿದ್ದರು. ಜೊತೆಗೆ ಇನ್ನಿತರ ಸಂಗೀತಪ್ರಿಯರೂ ಇರುತ್ತಿದ್ದರು. ಕೆಲವೊಂದು ಸಲ ಅಂಗಡಿಯ ಮೊದಲ ಮಹಡಿಗೆ ಹೋಗಿ ಚುರಮುರಿ, ಸೇವು ಚೂಡಾ ರಾಶಿಯ ಮುಂದೆ ಕುಳಿತು ತಿನ್ನುತ್ತ ಅದೆಷ್ಟೋ ವಿಚಾರಗಳ ವಿನಿಮಯ ಮಾಡಿಕೊಳ್ಳುತ್ತಿದ್ದೆವು. ಒಮ್ಮೊಮ್ಮೆ ಮೈಸೂರು ರೆಸ್ಟೊರೆಂಟ್‌ಗೆ ಮತ್ತು ಗೋಳಗುಮ್ಮಟದ ಕಡೆಗೆ ನಮ್ಮ ನಡಿಗೆ ಸಾಗುತ್ತಿತ್ತು.

ಅವರು ಬಹಳ ಸೂಕ್ಷ್ಮಜೀವಿಯಾಗಿದ್ದರು. ಅವರು ಎಂದೂ ಗಲ್ಲೆ ಮೇಲೆ ಕುಳಿತದ್ದನ್ನು ನಾನು ನೋಡಲಿಲ್ಲ. ಏನಿದ್ದರೂ ಅಂಗಡಿಯ ಒಳಗಿನ ಭಾಗದಲ್ಲೇ ಅವರು ಕೆಳಗೆ ಕೂಡುತ್ತಿದ್ದರು. ನಾವೆಲ್ಲ ಅಲ್ಲೇ ಹೋಗಿ ಕೂಡುತ್ತಿದ್ದೆವು. ಒಂದು ಸಲ ಒಬ್ಬ ಗಿರಾಕಿ ಬಂದ. ಆಗ ನಾವು ಬಾಗಿಲ ಬಳಿ ನಿಂತಿದ್ದೆವು. ಅವನು ಏನೋ ಮಾತನಾಡುತ್ತ ‘ನಿಮ್ಮ ಚಪ್ಪಲಿ ಚೆಂದ ಅದಾವು’ ಎಂದು ಹೇಳಿದ. ಆಗ ಅವರು ‘ನೀನೇ ಕೊಡಿಸಿದ್ದು’ ಎಂದು ಹೇಳಿದರು. ಅವನಿಗೆ ವಿಚಿತ್ರ ಎನಿಸಿತು. ‘ಈ ಅಂಗಡಿ ಮತ್ತು ನಾನು ಉಟ್ಟುಕೊಂಡ ಬಟ್ಟೆ ನೀನೇ ಕೊಡಿಸಿದ್ದು’ ಎಂದು ಹೇಳಿದರು. ಅವನಿಗೆ ಇನ್ನೂ ವಿಚಿತ್ರ ಎನಿಸಿ ಗಾಬರಿಯಾದ. ‘ನಿಮಂಥ ಗಿರಾಕಿಗಳು ನಮ್ಮ ಅಂಗಡಿಯಲ್ಲಿ ಬಟ್ಟೆ ಖರೀದಿ ಮಾಡಿದಾಗ. ಇದೆಲ್ಲ ದಕ್ಕಿದ್ದು’ ಎಂದು ಮಾಮಾ ಹೇಳಿದಾಗ ಅವನಲ್ಲಿ ಹೆಮ್ಮೆ ಮೂಡುವ ಬದಲು ಕೃತಜ್ಞತಾ ಭಾವ ಮೂಡಿತು. ತೃಪ್ತಿಯಿಂದ ಅಂಗಡಿಯ ಒಳಗೆ ಹೋದ.

(ಸ್ಮರಣೋತ್ಸವ ಪ್ರಯುಕ್ತ ಸಂಗೀತ ಕಾರ್ಯಕ್ರಮ)

ಅವರ ಬದುಕಿನಲ್ಲಿ ಕೊನೆಯವರೆಗೂ ಕಾಡಿದ್ದು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಯುವಕನ ಆತ್ಮಹತ್ಯೆ. ಅವರು ಎಷ್ಟೊಂದು ಮನಸ್ಸಿಗೆ ಹಚ್ಚಿಕೊಂಡಿದ್ದರೆಂದರೆ ಅದು ತಮ್ಮ ಬಳಗದಲ್ಲಿ ಆದ ಘಟನೆ ಎಂದೇ ಭಾವಿಸಿದ್ದರು. ಅಂಗಡಿಯ ಯಾವುದೇ ಕೆಲಸದ ಆಳಿನ ಕಡೆಗೆ ಅವರು ಅಂತಃಕರಣದಿಂದಲೇ ನೋಡುತ್ತಿದ್ದರು. ಆಳುಗಳಿಗೆ ಬಯ್ಯುವುದು, ಗದರಿಸುವುದು ಅವರಿಂದಾಗುತ್ತಿರಲಿಲ್ಲ. ಅವರ ವ್ಯವಹಾರ ಕೂಡ ಅಷ್ಟೇ ಚೊಕ್ಕ. ಅಲ್ಲಿ ಹೆಚ್ಚಿಗೆ ಹೇಳಿ ಕೊಸರಾಟದಲ್ಲಿ ಸ್ವಲ್ಪ ಬೆಲೆ ಇಳಿಸಿ ಬಟ್ಟೆ ಮಾರಾಟ ಮಾಡುವುದು ಅವರಿಗೆ ಸೇರುತ್ತಿರಲಿಲ್ಲ. ಕೆಲವೊಂದು ಗಿರಾಕಿಗಳು ಬಂದು ಸೀರೆ ಮುಂತಾದ ಬಟ್ಟೆಬರೆಗಳನ್ನು ಖರೀದಿಸಿ ಬಿಲ್ ಮಾಡುವ ವೇಳೆ ರೇಟ್ ಇಳಿಸಲು ಕಿರಿಕಿರಿ ಮಾಡುತ್ತಿದ್ದರು. ಹಾಗಾದರೆ ಬೇರೆ ಕಡೆ ಕೊಳ್ಳುವುದಾಗಿ ಹೇಳಿ ಹೋಗುತ್ತಿದ್ದರು. ಒಂದು ಸಲ ಕುಳಿತಾಗ ಹೀಗೇ ಆಯಿತು. ಒಬ್ಬಾತ ಬಟ್ಟೆ ಖರೀದಿಸಿ, ಗಂಟು ಕಟ್ಟಲು ಹೇಳಿದ ನಂತರ ಬೆಲೆಯ ಕೊಸರಾಟದಲ್ಲಿ ಬಿಟ್ಟು ಹೋದ. ಆಳುಗಳು ಮತ್ತೆ ಆ ಗಂಟು ಬಿಚ್ಚಿ ಸೀರೆ ಬಟ್ಟೆಗಳನ್ನು ಆಯಾ ಜಾಗದಲ್ಲಿ ಇಡಲು ಸಿದ್ಧವಾದರು. ಆಗ ಗಂಟು ಹಾಗೇ ಇರಲಿ ಎಂದು ಮಾಮಾ ಹೇಳಿದರು. ಆ ವ್ಯಕ್ತಿ ಬೇರೆ ಅಂಗಡಿ ಸುತ್ತಾಡಿ ಸುಸ್ತಾಗಿ ಕೊನೆಗೆ ಇವರ ಅಂಗಡಿಗೇ ಬಂದರು. ಹಣ ಕೊಟ್ಟು ಆ ಗಂಟನ್ನು ಒಯ್ದರು. ಆ ವ್ಯಕ್ತಿಗೆ ಖಂಡಿತವಾಗಿಯೂ ಅನಿಸಿತ್ತು. ‘ಈ ಅಂಗಡಿಯಲ್ಲಿ ಮೋಸ ಇಲ್ಲ’ ಎಂಬುದು. ಇದು ಅವರ ವ್ಯವಹಾರದ ವೈಖರಿ.

ಅವರು ಬಹಳ ಶಿಸ್ತಿನ ವ್ಯಕ್ತಿಯಾಗಿದ್ದರು. ಅವರ ಜೊತೆ ಪ್ರವಾಸ ಮಾಡುವಾಗ ಅವರ ಬ್ಯಾಗಿಗಿಂತಲೂ ನನ್ನ ಬ್ಯಾಗು ದೊಡ್ಡದಾಗಿರುತ್ತಿತ್ತು. ಆದರೆ ನನ್ನ ವಸ್ತುಗಳನ್ನೆಲ್ಲ ಬ್ಯಾಗಲ್ಲಿ ಇಡಲು ಒದ್ದಾಡುತ್ತಿದ್ದೆ. ಅವರ ಬ್ಯಾಗು ನನ್ನ ಬ್ಯಾಗಿಗಿಂತ ಚಿಕ್ಕದಾಗಿರುತ್ತಿತ್ತು. ಆದರೆ ನನ್ನ ವಸ್ತುಗಳಿಗಿಂತ ಹೆಚ್ಚಿನ ವಸ್ತುಗಳನ್ನು ಅವರು ಆ ಬ್ಯಾಗಿನಲ್ಲಿ ಜೋಡಿಸಿ ಇಡುತ್ತಿದ್ದರು. ಅವರ ಜೊತೆ ಪ್ರವಾಸ ಮಾಡುವಾಗ ನನಗೆ ಖರ್ಚಿಗೆ ಹಣ ಕೊಡುತ್ತಿದ್ದರು. ನನಗೆ ಲೆಕ್ಕ ಇಡುವ ಅಭ್ಯಾಸವೇ ಇಲ್ಲ. ಆದರೆ ರಾತ್ರಿ ಮಲಗುವಾಗ ಆ ದಿನದ ಖರ್ಚಿನ ಎಲ್ಲ ಲೆಕ್ಕವನ್ನು ಬರೆದಿಡುತ್ತಿದ್ದರು. ‘ನಿಮ್ಮ ಧನವನ್ನು ನೀವು ಅನ್ಯಾಯವಾಗಿ ವ್ಯಯಿಸಬಾರದು’ ಎಂದು ಪವಿತ್ರ ಕುರಾನ್‌ನಲ್ಲಿ ಹೇಳಲಾಗಿದೆ. ನಾವು ದುಡಿದದ್ದು ಸತ್ಪಾತ್ರಕ್ಕೆ ಸಲ್ಲಬೇಕು ಎಂಬುದು ಆ ಸೂಕ್ತದ ತಾತ್ಪರ್ಯ. ಮಾಮಾ ಹಾಗೇ ಇದ್ದರು. ಅವರು ತಮ್ಮ ಧನವನ್ನು ಎಂದು ಮನಬಂದಂತೆ ಬಳಸಲಿಲ್ಲ. ಸತ್ಪಾತ್ರಕ್ಕೆ ವ್ಯಯಿಸುವಾಗ ಯೋಚನೆ ಮಾಡುತ್ತಿರಲಿಲ್ಲ. ಅವರು ತಮ್ಮ ಬಹುಪಾಲು ಹಣವನ್ನು ಸಂಗೀತ, ಕಲೆ, ಕಲಾವಿದರಿಗೆ ನೆರವಾಗುವುದು, ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವುದು ಮುಂತಾದವುಗಳಿಗೆ ವ್ಯಯಿಸುತ್ತಿದ್ದರು. ಆದರೆ ಆ ಕುರಿತು ಎಂದೂ ಯಾರೊಂದಿಗೂ ಮಾತನಾಡುತ್ತಿರಲಿಲ್ಲ.

ಅವರು ‘ಸುರಸಿಂಗಾರ’ದ ಆತ್ಮವಾಗಿದ್ದರು. ಬಹುತೇಕ ಭಾರತದ ಎಲ್ಲ ಜಗತ್ಪ್ರಸಿದ್ಧ ಸಂಗೀತಗಾರರಿಗೆ ಅವರು ವಿಜಯಪುರದ ದರ್ಶನ ಮಾಡಿಸಿದ್ದಾರೆ. ಭಾರತರತ್ನ ಬಿಸ್ಮಿಲ್ಲಾಖಾನ್ ಅಂಥವರನ್ನೂ ಅವರು ಕರೆಸಿದ್ದಾರೆ. ಅವರ ದೃಷ್ಟಿಯಲ್ಲಿ ಯಾರೂ ಸಣ್ಣವರಲ್ಲ. ಸಂಗೀತ ಪ್ರೇಮಿಗಳೆಂದರೆ ಅವರಿಗೆ ಪಂಚಪ್ರಾಣ. ಬಿಸ್ಮಿಲ್ಲಾಖಾನ್ ಅವರು ಬಂದಾಗ ಅವರ ಜೊತೆ ಒಬ್ಬ ಸಂಗೀತಪ್ರಿಯ ಬಡ ಮಡಿವಾಳ ವ್ಯಕ್ತಿ ಇದ್ದರು. ಬಿಸ್ಮಿಲ್ಲಾಖಾನರ ಕಡೆ ಹೋಗುವಾಗ ಕೂಡ ಮಾಮಾ ಆ ವ್ಯಕ್ತಿಯನ್ನು ಕರೆದುಕೊಂಡೇ ಹೋಗಿದ್ದರು. ಬಿಸ್ಮಿಲ್ಲಾಖಾನ್ ಬಗ್ಗೆ ಮಾಮಾಗೆ ಬಹಳ ಗೌರವವಿತ್ತು. ತನ್ನ ಜೊತೆ ಶಹನಾಯಿ ವಾದಕರಲ್ಲಿ ಒಬ್ಬನಾಗಿದ್ದ ತನ್ನ ಮಗನ ಬಗ್ಗೆ ಬಿಸ್ಮಿಲ್ಲಾಖಾನ್ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಇನ್ನೊಬ್ಬ ಸಂಬಂಧಿಕನಿಗಿಂತಲೂ ಹೆಚ್ಚಿನ ಕಾಳಜಿ ಅವರ ನೋಟದಲ್ಲಿ ಕಾಣುತ್ತದೆ ಎಂದು ತಿಳಿಸಿದ್ದರು. ಅವರ ಸೂಕ್ಷ್ಮ ಗ್ರಹಿಕೆ ನನ್ನನ್ನು ಯೋಚನೆಗೆ ಹಚ್ಚಿತು.

ಬಾಲೇಖಾನ್ ಸಿತಾರ್, ಬಿಸ್ಮಿಲ್ಲಾಖಾನ್ ಶಹನಾಯಿ, ಮಾಲಿನಿ ರಾಜೂರಕರ್, ಪ್ರಭಾ ಆತ್ರೆ ಹಾಡುಗಾರಿಕೆ ಹೀಗೆ ನಾನು ಮರೆತುಹೋದ ಅನೇಕ ಕಲಾವಿದರ ಬಗ್ಗೆ ಅವರು ಪಡುತ್ತಿದ್ದ ಹೆಮ್ಮೆ ಅನುಕರಣೀಯವಾಗಿದೆ. ತಮ್ಮ ಕಾಲಿಗೆ ನೋವಾದರೂ ಅವರು ಪುಣೆಯ ಸಂಗೀತ ಕಾರ್ಯಕ್ರಮವನ್ನು ತಪ್ಪಿಸುತ್ತಿರಲಿಲ್ಲ. ನನಗೆ ಬಹಳ ಸಲ ಪುಣೆಗೆ ಕರೆದರು ಕೂಡ ಕಾರ್ಯಬಾಹುಳ್ಯದಿಂದ ಹೋಗಲಿಕ್ಕಾಗಲಿಲ್ಲ.

(ಖ್ಯಾತ ಹಿಂದೂಸ್ತಾನಿ ಗಾಯಕಿ ಪ್ರಭಾ ಅತ್ರೆ)

ವ್ಯಾನ್ ಗೋ ಕಲಾಕೃತಿಗಳೆಂದರೆ ಅವರಿಗೆ ಬಹಳ ಇಷ್ಟ. ನಾನು ನೆದರ್‌ಲ್ಯಾಂಡ್ಸ್‌ನ ಆಮಸ್ಟರ್‌ಡ್ಯಾಂ ನಗರದಲ್ಲಿ ಹದಿನೈದು ದಿನಗಳವರೆಗೆ ಇದ್ದಾಗ, ವ್ಯಾನ್ ಗೋ ಕಲಾಗ್ಯಾಲರಿಯನ್ನು ನವೀಕರಣಕ್ಕಾಗಿ ಮುಚ್ಚಲಾಗಿತ್ತು. ಆ ದೇಶವನ್ನು ಸುತ್ತುವಾಗ ಕಾಣುವ ಸಾಂಪ್ರದಾಯಿಕ ವಿಂಡ್ ಮಿಲ್‌ಗಳು, ಬಣ್ಣಬಣ್ಣದ ಟುಲಿಪ್ ಹೂಗಳ ನೂರಾರು ಎಕರೆ ಉದ್ದನೆಯ ತೋಟಗಳು, ಹಸಿರು ವನಗಳು, ಹಳ್ಳಿಗಳು ವ್ಯಾನ್ ಗೋ ಕಲಾಕೃತಿಗಳನ್ನು ನೆನಪಿಗೆ ತರುತ್ತಿದ್ದವು. ಆದರೆ ಅವನ ಮೂಲಕಲಾಕೃತಿಗಳನ್ನು ನೋಡಲಿಕ್ಕಾಗದೆ ಪ್ರತಿಕೃತಿಗಳನ್ನು ಮಾತ್ರ ನೋಡಲು ಸಾಧ್ಯವಾಯಿತು. ವ್ಯಾನ್ ಗೋ ಚಿತ್ರಗಳಿರುವ ಸುಂದರ ಪುಸ್ತಕವೊಂದನ್ನು ಖರೀದಿಸಿ ಭಾರತಕ್ಕೆ ವಾಪಸಾದ ಮೇಲೆ ಮಾಮಾಗೆ ಕೊಟ್ಟೆ. ಅವರು ಅದನ್ನು ನೋಡಿ ಬಹಳ ಖಷಿಪಟ್ಟಿದ್ದರು.

ನಾವು ಕೂಡಿದಾಗೆಲ್ಲ ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮುಂತಾದ ವಿಷಯಗಳ ಕುರಿತೇ ಬಹಳಷ್ಟು ಮಾತನಾಡುತ್ತಿದ್ದೆವು. ಅವರು ಮಾತನಾಡುವುದಕ್ಕಿಂತಲೂ ಕೇಳುವುದರಲ್ಲೇ ಹೆಚ್ಚಿನ ಆಸಕ್ತಿ ತೋರುತ್ತಿದ್ದರು. ನನ್ನ ನೆಚ್ಚಿನ ಕವಿ ಚಿಲಿಯ ಪಾಬ್ಲೊ ನೆರೂದಾ ಬಗ್ಗೆ ಹೇಳುವಾಗ ಅವರು ಬಹಳ ಆಸಕ್ತಿ ತೋರಿಸಿದರು. ಅವರ ಪುಸ್ತಕ ತಂದುಕೊಡಲು ಹೇಳಿದಾಗ ಬೆಂಗಳೂರಿನಿಂದ ನೆರೂದಾನ ಮೆಮಾರ್ಸ್‌(ಸ್ಮೃತಿಗಳು) ತಂದುಕೊಟ್ಟೆ.

ಒಂದು ವೇಳೆ ವಿಜಯಪುರ ನಗರಲ್ಲಿ ನದಿ ಹರಿದಿದ್ದರೆ, ಆ ನದಿ ದಂಡೆಯ ಮೇಲೆ ಇಬ್ರಾಹಿಂರೋಜಾ ಅನ್ನು ಅಮೃತಶಿಲೆಯಿಂದ ಕಟ್ಟಿದ್ದರೆ ಅದು ತಾಜಮಹಲಿಗಿಂತ ಹೆಚ್ಚು ಭವ್ಯವಾಗಿರುತ್ತಿತ್ತು ಎಂದು ಭಾರತೀಯ ವಾಸ್ತುಶಿಲ್ಪ ತಜ್ಞ ಮತ್ತು ಇತಿಹಾಸಕಾರ ಹೆನ್ರಿ ಕಜಿನ್ಸ್ ಹೇಳಿದ್ದನ್ನು ಮಾಮಾಗೆ ವಿವರಿಸಿದೆ. ಆ ಕ್ಷಣದಲ್ಲಿ ಅವರು ನಿಜಕ್ಕೂ ಪುಳಕಿತಗೊಂಡಿದ್ದರು. ‘ಇಬ್ರಾಹಿಂ ರೋಜಾ ಕಡೆ ಹೋಗೋಣ ನಡಿ’ ಎಂದರು. ಅದನ್ನು ನೋಡುವ ಸಮಯ ಇದಲ್ಲ. ಸೂರ್ಯಾಸ್ತದ ಸಮಯದಲ್ಲಿ ಇಬ್ರಾಹಿಂ ರೋಜಾದ ಹಿಂಭಾದ ಬಯಲಲ್ಲಿ ಸೂರ್ಯನಿಗೆ ಬೆನ್ನು ಮಾಡಿ ನಿಂತು ಇಬ್ರಾಹಿಂ ರೋಜಾ ಮತ್ತು ಅದರ ಪಕ್ಕದಲ್ಲಿರುವ ಬೃಹತ್ ಮಸೀದಿಯ ಮೇಲೆ ಹೊಂಗಿರಣಗಳು ಬಿದ್ದದ್ದನ್ನು ನೋಡಬೇಕು. ಆ ಕ್ಷಣದಲ್ಲಿ ಇಬ್ರಾಹಿಂ ರೋಜಾ, ಅಮೃತಶಿಲೆ ಮತ್ತು ಯಮುನಾನದಿ ಇಲ್ಲದೆಯೂ ತಾಜಮಹಲಿಗಿಂತ ಸುಂದರವಾಗಿ ಕಾಣುತ್ತದೆ ಎಂದು ತಿಳಿಸಿದೆ. ನಾವು ಜೊತೆಯಾಗಿ ಆ ಹೊಂಬೆಳಕಿನಲ್ಲಿ ಇಬ್ರಾಹಿಂ ರೋಜಾ ನೋಡುವ ಕಾಲ ಕೂಡಿ ಬರಲೇ ಇಲ್ಲ. ಅವರ ಒಂದು ಸಣ್ಣ ಇಚ್ಛೆಯನ್ನು ಪೂರೈಸಲಿಲ್ಲ ಎಂಬ ನೋವು ನೆನಪಾದಾಗಲೆಲ್ಲ ಕಾಡುತ್ತದೆ.
ಕಾರ್ಪೆಟ್ ಕಂಪನಿಯೊಂದು ಕೇರಳದ ರಾಜಧಾನಿ ತಿರುವನಂತಪುರದ ಬಳಿಯ ಕೋವಲಂ ಬೀಚ್‌ನಲ್ಲಿ ಇರುವ ಪಂಚತಾರಾ ಹೋಟೆಲ್ ಅಶೋಕದಲ್ಲಿ ಮೂರುದಿನಗಳ ಕಂಪನಿಯ ಸಮ್ಮೇಳನ ಏರ್ಪಡಿಸಿತ್ತು. ಅದರ ಮುಖ್ಯ ಉದ್ದೇಶ ಏಜೆಂಟರನ್ನು ಖುಷಿ ಪಡಿಸುವುದೇ ಆಗಿತ್ತು.

(ಭಾರತ ರತ್ನ ಭೀಮಸೇನ ಜೋಷಿ)

ಅವರ ಬದುಕಿನಲ್ಲಿ ಕೊನೆಯವರೆಗೂ ಕಾಡಿದ್ದು ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಯುವಕನ ಆತ್ಮಹತ್ಯೆ. ಅವರು ಎಷ್ಟೊಂದು ಮನಸ್ಸಿಗೆ ಹಚ್ಚಿಕೊಂಡಿದ್ದರೆಂದರೆ ಅದು ತಮ್ಮ ಬಳಗದಲ್ಲಿ ಆದ ಘಟನೆ ಎಂದೇ ಭಾವಿಸಿದ್ದರು. ಅಂಗಡಿಯ ಯಾವುದೇ ಕೆಲಸದ ಆಳಿನ ಕಡೆಗೆ ಅವರು ಅಂತಃಕರಣದಿಂದಲೇ ನೋಡುತ್ತಿದ್ದರು.

ದೇಶದ ಎಲ್ಲ ಕಡೆಗಳಿಂದ ಏಜೆನ್ಸಿ ಪಡೆದವರು ಬಂದಿದ್ದರು. ಏಜೆನ್ಸಿ ಪಡೆದವರು ತಮ್ಮ ಜೊತೆ ಒಬ್ಬರನ್ನು ಕರೆದುಕೊಂಡು ಬರುವ ಅವಕಾಶವಿತ್ತು. ಇದು 45 ವರ್ಷಗಳ ಹಿಂದಿನ ಮಾತು. ಆಗ ನಾನು ಹುಬ್ಬಳ್ಳಿಯ ಕೃಷಿಪೇಟೆ ಮಾಸಪತ್ರಿಕೆಯ ಉಪ ಸಂಪಾದಕನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಅವರು ನನ್ನನ್ನು ಜೊತೆಯಲ್ಲಿ ಕರೆದುಕೊಂದು ಹೋದರು. ಬೆಂಗಳೂರಿನಿಂದ ಐಲ್ಯಾಂಡ್ ಎಕ್ಸ್ಪ್ರೆಸ್ ಮೂಲಕ ತಿರುವನಂತಪುರಕ್ಕೆ ಹೊರಟೆವು. ಅದೊಂದು ಸುಂದರ ಅನುಭವ. ಕಿಟಕಿಯ ಬಳಿ ಕುಳಿತು ಕೇರಳದ ಹಸಿರು ಪ್ರದೇಶಗಳನ್ನು, ಅರಣ್ಯಗಳನ್ನು ಮತ್ತು ನದಿಗಳನ್ನು ದಾಟುತ್ತ ರೈಲು ಮುಂದೆ ಸಾಗುವಾಗ ಅನೇಕ ಮನಮೋಹಕ ದೃಶ್ಯಗಳು ಕಣ್ಣಿಗೆ ಹಬ್ಬವನ್ನುಂಟುಮಾಡುತ್ತಿದ್ದವು. ಬೆಳಿಗ್ಗೆ ಪುಟ್ಟ ಪುಟ್ಟ ಮಕ್ಕಳು ಶಾಲಾ ಸಮವಸ್ತ್ರ ಧರಿಸಿ, ಛತ್ರಿ ಹಿಡಿದು ಗುಂಪುಗುಂಪಾಗಿ ಜಿನುಗು ಮಳೆಯಲ್ಲಿ ಶಾಲೆಗೆ ಹೋಗುವ ದೃಶ್ಯ ಎಂದೂ ಮರೆಯದಂಥದ್ದು. ಕೇರಳವನ್ನು ‘ಪಾಮ್ ಫಿಂಗರ್ ಪ್ಯಾರಡೈಸ್’ ಎಂದು ಕರೆಯುತ್ತಾರೆ. ಅದನ್ನು ಸಾಕ್ಷರರ ನಾಡು ಎನ್ನುವುದು, ಸ್ವರ್ಗ ಎಂದು ಕರೆಯುವುದಕ್ಕಿಂತಲೂ ಹೆಚ್ಚಿನದು. ಆ ಮಕ್ಕಳು ಶಾಲೆಗೆ ಹೋಗುವ ದೃಶ್ಯವನ್ನು ಭೋಜಣ್ಣ ಮಾಮಾ ತದೇಕ ಚಿತ್ತದಿಂದ ನೋಡುತ್ತಿದ್ದರು. ‘ಜ್ಞಾನ ಸಂಪತ್ತಿಗಿಂತಲೂ ದೊಡ್ಡದಾಗ ಸಂಪತ್ತು ಇನ್ನೊಂದಿಲ್ಲ’ ಎಂದು ಅವರು ಹೇಳಿದ್ದು ಇನ್ನೂ ನೆನಪಿದೆ. ನಿಲ್ದಾಣವೊಂದರಲ್ಲಿ ಆ ಬೆಳಿಗ್ಗೆ ರೈಲು ನಿಂತಾಗ ಕೂಲಿಕಾರರು ಮಲಯಾಳಿ ಭಾಷೆಯ ಪತ್ರಿಕೆಗಳನ್ನು ಕೊಂಡು ತಮ್ಮ ರೈಲಿಗಾಗಿ ಕಾಯುತ್ತಲೇ ಓದುತ್ತ ನಿಂತಿದ್ದನ್ನು ನೋಡಿ ಅವರು ಬಹಳ ಖುಷಿ ಪಟ್ಟಿದ್ದರು.

ಕೋವಲಂ ಬೀಚ್‌ನ ಪಂಚತಾರಾ ಹೋಟೆಲ್‌ನಲ್ಲಿ ನಮಗಾಗಿ ಒಂದು ಕೋಣೆಯನ್ನು ರಿಸರ್ವ್‌ ಮಾಡಿ ಇರಿಸಲಾಗಿತ್ತು. ಅದೊಂದು ಸ್ವಂತಂತ್ರವಾದ ಪುಟ್ಟ ಮನೆಯಂತೆ ಇತ್ತು. ಕೋಣೆಯ ಹಿಂದಿನ ಸಿಟ್‌ಔಟ್ ಬೀಚ್‌ಗೆ ಹತ್ತಿಕೊಂಡೇ ಇತ್ತು. ಅಲ್ಲಿ ಕುಳಿತು ತೆರೆಗಳನ್ನು ನೋಡುವುದೇ ಒಂದು ಆನಂದ. ಭರತದ ಸಂದರ್ಭದಲ್ಲಿ ತೆರೆಗಳು ಬಹಳ ಸಮೀಪ ಬರುತ್ತಿದ್ದವು. ಅರ್ಧಚಂದ್ರಾಕಾರದ ಆ ಕೋವಲಂ ಬೀಚ್ ಜಗತ್ಪ್ರಸಿದ್ಧ ಸಮುದ್ರದಂಡೆಗಳಲ್ಲಿ ಒಂದಾಗಿದೆ. ಇದೆಲ್ಲ ನನಗೆ ಹೊಸ ಅನುಭವವಾಗಿತ್ತು.

(ಖ್ಯಾತ ಕೊಳಲು ವಾದಕ ವೆಂಕಟೇಶ ಗೋಡಖಿಂಡಿ)

ಮಾಮಾ ನನಗೆ ಕರೆದುಕೊಂಡು ಬೀಚ್‌ನಲ್ಲಿ ಸುತ್ತಾಡುವಾಗ ಸೇಂಗಾ ಮಾರುವ ಹುಡುಗನೊಬ್ಬ ಇಂಗ್ಲಿಷ್‌ನಲ್ಲಿ ಸೇಂಗಾ ಬೇಕೆ ಎಂದು ಕೇಳಿದ. ಯಾವ ಕ್ಲಾಸಿನಲ್ಲಿ ಓದುತ್ತಿರುವಿ ಎಂದು ನಾನು ಕೇಳಿದೆ. ಆತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದ ಬಡತನದ ಕಾರಣ ಉಳಿದ ಸಮಯದಲ್ಲಿ ಶೇಂಗಾ ಮಾರುತ್ತಿದ್ದ. ಮಾತೃಭಾಷೆಯಲ್ಲಿ ಆತ ಬಹುಶಃ ಮೂರನೇ ತರಗತಿಯ ವಿದ್ಯಾರ್ಥಿಯಾಗಿರಬಹುದು. ನೀನು ಇಂಗ್ಲಿಷ್ ಹೇಗೆ ಕಲಿತೆ ಎಂದು ಕೇಳಿದ್ದಕ್ಕೆ ಈ ಬೀಚ್ ಮತ್ತು ಶೇಂಗಾ ನನಗೆ ಇಂಗ್ಲಿಷ್ ಕಲಿಸಿದವು ಎಂದು ಹೇಳಿದ. ನಂತರ ವಿವರಿಸಿದ. ಇಲ್ಲಿ ವಿದೇಶಿ ಪ್ರವಾಸಿಗರು ಬಹಳ ಬರುತ್ತಾರೆ. ಅವರಿಗೆ ಶೇಂಗಾ ಮಾರುವಾಗ ಅವರ ಮಾತುಗಳನ್ನು ಲಕ್ಷ್ಯಗೊಟ್ಟು ಕೇಳುತ್ತ ಇಂಗ್ಲಿಷ್ ಕಲಿತೆ. ಹೊಟ್ಟೆಪಾಡು ಎಲ್ಲವನ್ನೂ ಕಲಿಸುತ್ತದೆ ಎಂದು ಅನುಭಾವಿಯ ಹಾಗೆ ಹೇಳಿದ. ನಾನು ಭಾಷಾವಿಜ್ಞಾನ ಓದುವಾಗ, ಕಲಿಕೆಗೆ ಅವಶ್ಯಕತೆಯೂ ಒಂದು ಕಾರಣ ಎಂದು ಓದಿದ್ದು ನೆನಪಾಯಿತು. ಇಂಥ ಜನರ ಅನುಭವವನ್ನು ನಾವಿಬ್ಬರು ಬಹಳ ಖುಷಿಯಿಂದ ಪಡೆಯುತ್ತಿದ್ದೆವು.

ಸಾಯಂಕಾಲ ಒಂದಿಷ್ಟು ವ್ಯಾಪಾರದ ಮಾತುಗಳನ್ನು ಕಂಪನಿಯ ಮ್ಯಾನೇಜರ್, ನಿರ್ದೇಶಕರು ಮುಂತಾದವರು ಆಡುತ್ತಿದ್ದರು. ಅದೆಲ್ಲ ಊಟದ ಸಮಯಕ್ಕೆ ಮೊದಲಿನ ಮದ್ಯಪಾನದ ಸಮಯ ಬರುವವರೆಗೆ ಮಾತ್ರ. ನಂತರ ಎಲ್ಲರೂ ಕುಡಿಯುವುದರಲ್ಲಿ ತಲ್ಲೀನರಾಗುತ್ತಿದ್ದರು. ನಾವು ಆರೆಂಜ್ ಜ್ಯೂಸ್ ಕುಡಿಯುತ್ತ ಮಾತಿನಲ್ಲಿ ತಲ್ಲೀನರಾಗುತ್ತಿದ್ದೆವು.

ನಾನು ಬೆಂಗಳೂರಿನಲ್ಲಿ ಇದ್ದಾಗ, ಅವರು ಬಟ್ಟೆ ಅಂಗಡಿಗಾಗಿ ರೇಷ್ಮೆಸೀರೆ ಖರೀದಿಗೆ ಬಂದಾಗಲೆಲ್ಲ ನಾನು ಅವರ ಜೊತೆ ಇರುವ ಅವಕಾಶ ಸಿಗುತ್ತಿತ್ತು. ಅವರು ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವಾಗ ನನಗೆ ನೋವಾಗುತ್ತಿತ್ತು. ಇಷ್ಟಕ್ಕೆಲ್ಲ ನೋವು ಮಾಡಿಕೊಂಡರೆ ಹೇಗೆ ಎಂದು ಅವರು ಹೇಳುತ್ತಿದ್ದರು. ಇದೆಲ್ಲ ಜೀವನದಲ್ಲಿ ಇರುವಂಥದ್ದೆ. ಮಧುಮೇಹ ಜೀವನಕ್ಕೆ ಒಂದು ಶಿಸ್ತನ್ನು ತರುತ್ತದೆ ಎಂದು ಅವರು ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿದ್ದರು. ಮಧುಮೇಹ ಬರಲು ಅವರು ಕಾರಣ ತಿಳಿಸಿದರು. ಅವರ ಅಂಗಡಿ ಅಣ್ಣತಮ್ಮಂದಿರಲ್ಲಿ ಇಬ್ಭಾಗವಾದಾಗ ಅವರು ಆ ಅಗಲಿಕೆಯ ನೋವಿನಿಂದ ನಿದ್ರೆಯಿಲ್ಲದ ರಾತ್ರಿಯನ್ನು ಕಳೆಯುತ್ತಿದ್ದರು. ಕಣ್ಣು ತೆರೆದುಕೊಂಡೇ ಗಾಢವಾದ ವಿಷಾದದಲ್ಲಿ ಮಲಗುತ್ತಿದ್ದರು. ಆ ದಿನಗಳಲ್ಲೇ ಮಧುಮೇಹ ಅಂಟಿಕೊಂಡಿತು ಎಂದು ತಿಳಿಸಿದರು.

ಕಲೆ, ಸಂಗೀತ ಮತ್ತು ವಿದ್ವಜ್ಜನರ ಜೊತೆಗಿನ ಮಾತುಕತೆಗಳಲ್ಲಿ ಅವರು ಎಲ್ಲ ನೋವನ್ನು ಮರೆಯುತ್ತಿದ್ದರು. ಪ್ರೊಫೆಸರ್‌ಗಳಾದ ಬಿ.ಎಸ್. ಸಾರಂಗಮಠ ಮತ್ತು ಎ.ಎಸ್. ಹಿಪ್ಪರಗಿ ಮುಂತಾದವರು ಅವರ ಬದುಕಿನ ಭಾಗವೇ ಆಗಿದ್ದರು. ಅನೇಕ ಸಂಗೀತಪ್ರಿಯ ಯುವಕರು ಮಾಮಾ ಮಾಮಾ ಎನ್ನುತ್ತ ಅವರ ಸುತ್ತ ಸುತ್ತುತ್ತಲೇ ಇದ್ದರು. ಅವರದು ರೋಗ ರುಜಿನುಗಳಿಗೆ ಬೆದರದ ಮನಸು. ಅವರಿಗೆ ವಿವಿಧ ರೀತಿಯ ದೈಹಿಕ ನೋವುಗಳು ಕಾಣಿಸಿಕೊಂಡರೂ ಎಂದೂ ಅವುಗಳ ಬಗ್ಗೆ ಚಕಾರವೆತ್ತಲಿಲ್ಲ. ಬುದ್ಧನ ವಿಪಶ್ಶನ ಧ್ಯಾನ ಅವರಿಗೆ ಬಹಳ ಹಿಡಿಸಿತ್ತು. ಹೊರಗಿನ ಯಾವುದರ ಮೇಲೂ ಅವಲಂಬಿತವಾಗದಂಥ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದರು. ಆದರೆ ಎಲ್ಲ ಒಳ್ಳೆಯದರ ಬಗ್ಗೆ ಗೌರವಭಾವ ತಾಳಿದ್ದರು.

ನನಗೆ ನೌಕರಿ ಸಿಕ್ಕ ಮೇಲೆ ತಮ್ಮ, ತಂಗಿ, ತಮ್ಮಂದಿರ ಹೆಂಡಿರು ಮಕ್ಕಳಿಗಾಗಿ ಬಹಳ ಬಟ್ಟೆ ಖರೀದಿಸುತ್ತಿದ್ದೆ. ಅಂಗಡಿಯಲ್ಲಿ ಕುಳಿತಾಗ ಹೊಸದಾಗಿ ಬಂದವುಗಳಲ್ಲಿ ಆಕರ್ಷಕವೆನಿಸಿದ್ದನ್ನು ಮತ್ತು ಹಬ್ಬಹರಿದಿನಗಳಲ್ಲಿ ಖರೀದಿಸಿ ಸಾಲದ ಲೆಕ್ಕ ಬರೆಸುತ್ತಿದ್ದೆ. ನಂತರ ದೀಪಾವಳಿ ಸಂದರ್ಭದಲ್ಲಿ ಮುಟ್ಟಿಸುವುದು ವಾಡಿಕೆಯಾಗಿತ್ತು. ಅವರು ಒಂದು ಸಲ ‘ನಿನಗಾಗಿ ಒಂದು ತುಂಡು ಬಟ್ಟೆಯಾದರೂ ಖರೀದಿಸು’ ಎಂದು ಹೇಳಿದರು. ನಾನು ನಕ್ಕು ಸುಮ್ಮನಾದೆ. ಎಷ್ಟೊಂದು ವರ್ಷಗಳಾದರೂ ನನಗಾಗಿ ಏನೂ ಖರೀದಿಸದೆ ಇದ್ದುದು ನನಗೆ ಎಂದೂ ನೆನಪಿಗೇ ಬಂದಿರಲಿಲ್ಲ. ಕೊನೆಗೂ ಖರೀದಿಸಲಿಲ್ಲ. ಆದರೆ ಅವರ ಆಪ್ಯಾಯಮಾನವಾದ ಮಾತು ಮನದಲ್ಲೇ ಹಸಿರಾಗಿ ಉಳಿದಿದೆ.

(ಕೊಳಲು ಮಾಂತ್ರಿಕ ಹರಿಪ್ರಸಾದ ಚೌರಾಸಿಯಾ)

ಹಿರಿಯ ಮಗ ಸೋಮನಾಥ ಬಗ್ಗೆ ಅವರು ಬಹಳ ಸಲ ಚಿಂತೆ ಮಾಡಿದ್ದುಂಟು. ಸೋಮನಾಥ ಸಂತನ ಹಾಗೆ ಇರುವವರು. ಅವರು ಮದುವೆ ಆಗಲಿಲ್ಲ. ಎಲ್ಲದಕ್ಕೂ ಮುಗುಳ್ನಗೆಯೆ ಉತ್ತರ. ಕಿರಿಯ ಮಗ ಈಶು ಬಹಳ ಜವಾಬ್ದಾರಿಯಿಂದ ಅಂಗಡಿ ನಡೆಸುತ್ತ ಬೆಳೆಯುತ್ತಿರುವುದು ಅವರಿಗೆ ಸಮಾಧಾನ ತಂದಿತು. ಈಶೂಗೆ ಹೆಣ್ಣು ನೋಡಲು ಜಮಖಂಡಿಗೆ ಹೋಗಿದ್ದೆವು. ನನಗೆ ನೆನಪಿದ್ದ ಹಾಗೆ ಅವರು ಮೊದಲ ಬಾರಿಗೆ ಹೆಣ್ಣು ನೋಡಲು ಹೋಗಿದ್ದರು. ಮತ್ತು ಆ ಮನೆಯ ಮಗಳು ತಮ್ಮ ಮನೆತನಕ್ಕೆ ತಕ್ಕ ಸೊಸೆ ಎಂದು ನಿರ್ಧರಿಸಿದರು. ಈಶೂನ ಶ್ರೀಮತಿಯ ಬಗ್ಗೆ ಮಾಮಾಗೆ ಬಹಳ ಗೌರವವಿತ್ತು. ಅಷ್ಟು ದೊಡ್ಡ ಮನೆಯನ್ನು ಅವರು ಅವಿಶ್ರಾಂತವಾಗಿ ನಿಭಾಯಿಸುವ ಶಕ್ತಿ ಎಂಥವರನ್ನೂ ಬೆರಗುಗೊಳಿಸುವಂಥದ್ದು.

ಈಶೂಗೆ ಮೊದಲು ಗಂಡುಮಗು ಆಯಿತು. ನಂತರ ಹೆಣ್ಣು ಮಗು. ಈ ಮೊಮ್ಮಕ್ಕಳು ಅವರ ನಿಜವಾದ ಆಸ್ತಿ ಆಗಿದ್ದರು. ಮೊಮ್ಮಗ ಸ್ವಲ್ಪ ಬೆಳೆದ ಮೇಲೆ ಅವನನ್ನು ಆಂಧ್ರಪ್ರದೇಶದ ಪ್ರಸಿದ್ಧ ವಸತಿ ಶಾಲೆಯೊಂದಕ್ಕೆ ಸೇರಿಸಿದರು. ನನಗೆ ಆಶ್ಚರ್ಯವೆನಿಸಿತು. ಇಷ್ಟೊಂದು ಮುದ್ದು ಮಾಡುವ ಮೊಮ್ಮಗನನ್ನು ಅದು ಹೇಗೆ ಬಿಟ್ಟು ಇರುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿ ಕಾಡಿತು. ಹಿಪ್ಪರಗಿ ಸರ್ ಕೂಡ ಬೇಸರ ವ್ಯಕ್ತಪಡಿಸಿದರು. ಅವರು ಮೊಮ್ಮಗನನ್ನು ಹಾಗೆ ಕಳಿಸುವುದು ನಮಗಿಬ್ಬರಿಗೂ ಇಷ್ಟವಿರಲಿಲ್ಲ. ಆದರೆ ಮೊಮ್ಮಗನ ಉಜ್ವಲ ಭವಿಷ್ಯಕ್ಕಾಗಿ ಅವರು ತೆಗೆದುಕೊಂಡ ನಿರ್ಧಾರ ಸರಿಯಾಗಿಯೆ ಇದೆ ಎಂದು ಸಮಾಧಾನ ಪಟ್ಟುಕೊಂಡೆವು.

ಅವರು ಅನುಭವಿಸಿದ ದೈಹಿಕ ನೋವು ನನ್ನನ್ನು ಘಾಸಿಗೊಳಿಸಿತ್ತು. ಆದರೆ ಅವರ ಆತ್ಮಸ್ಥೈರ್ಯ ನನಗೆ ಹೊಸ ಪಾಠ ಕಲಿಸಿತು. ಅವರು ನೋವಿನಲ್ಲಿ ಕೂಡ ಸಂಗೀತದ ಗುಂಗಿನಲ್ಲೇ ಇರುತ್ತಿದ್ದರು. ನಿಧನರಾಗುವುದಕ್ಕೆ ಕೆಲದಿನಗಳ ಮುಂಚೆ ವೆಂಕಟೇಶಕುಮಾರ ಅವರ ಹಾಡುಗಾರಿಕೆ ಕೇಳಲು ಗೆಳೆಯರೊಂದಿಗೆ ಕಾರಲ್ಲಿ ವಿಜಯಪುರದಿಂದ ಧಾರವಾಡಕ್ಕೆ ಬಂದಿದ್ದರು. ಕಾರ್ಯಕ್ರಮ ಮುಗಿದ ನಂತರ ನಡೆಯಲಿಕ್ಕಾಗದ ಸ್ಥಿತಿಯಲ್ಲಿ ಕೂಡ ಸೃಜನಾ ರಂಗಮಂದಿರದ ಹೊರಗಡೆ ವೆಂಕಟೇಶಕುಮಾರ ಅವರಿಗೆ ನಮಸ್ಕಾರ ಮಾಡಲು ಕಾಯುತ್ತ ನಿಂತರು. ಅಭಿಮಾನಿಗಳಿಂದ ದಾಟಿ ವೆಂಕಟೇಶಕುಮಾರ ಹೊರಗೆ ಬಂದರು. ಮಾಮಾ ಅವರನ್ನು ನೋಡಿದ ಕೂಡಲೆ ಅವರ ಬಳಿ ಬಂದರು. ಅಂದಿನ ಹಾಡುಗಾರಿಕೆಯ ಸಂತೋಷವನ್ನು ಹಂಚಿಕೊಂಡ ನಂತರವೇ ಮಾಮಾಗೆ ಸಮಾಧಾನವಾಯಿತು. ಸಂಗೀತದ ಗಣಿತದ ಬಗ್ಗೆ ಅವರಿಗೆ ಅಪಾರವಾದ ಜ್ಞಾನವಿತ್ತು.

ಧಾರವಾಡದಿಂದ ಅಂದು ಅವರು ವಿಜಯಪುರಕ್ಕೆ ಹೋದ ಸ್ಪಲ್ಪ ದಿನಗಳಲ್ಲೇ ನಿಧನದ ಸುದ್ದಿ ಬಂದೆರಗಿತು. ರಾತ್ರಿ ತಡವಾಗಿದ್ದರಿಂದ ಬೆಳಗಿನ ಜಾವ ಎದ್ದು ವಿಜಯಪುರದ ಹಾದಿ ಹಿಡಿದೆ. ಅವರು ದೇಹದಾನ ಮಾಡಿದ್ದರಿಂದ ಸಮಯಕ್ಕೆ ಸರಿಯಾಗಿ ಆಸ್ಪತ್ರೆಯ ವಾಹನ ಬಂದು ದೇಹವನ್ನು ಒಯ್ಯುವುದರ ಬಗ್ಗೆ ಗೊತ್ತಿದ್ದ ನನಗೆ ಪದೆ ಪದೆ ಡ್ರೈವರ್‌ಗೆ ಜೋರಾಗಿ ಕಾರು ಓಡಿಸಲು ಹೇಳುತ್ತಿದ್ದೆ. ಅವರ ಮನೆಯ ಬಳಿ ಹೋಗಿ ಕಾರು ಇಳಿಯುವಾಗಲೇ ಆಸ್ಪತ್ರೆಯ ಅಂಬ್ಯೂಲನ್ಸ್ ಪಾರ್ಥಿವ ಶರೀರವನ್ನು ಒಯ್ಯುವದನ್ನು ನೋಡಿದೆ. ಅವರು ನನ್ನ ಕಣ್ಣಲ್ಲಿ ಹನಿಯಾದರು.

(ಚಿತ್ರಗಳು: ರಮೇಶ ಚವಾಣ)
(ಮುಂದುವರೆಯುವುದು…)