ತಿಂಗಳಿಗಾಗುವಷ್ಟು ಆಹಾರವನ್ನು ಅಪ್ಪ ಹಿತ್ತಿಲ ಸೌದೆ ಮನೆಯಲ್ಲಿ ತರಿಸಿಇಟ್ಟಿರುತ್ತಿದ್ದ. ಅಷ್ಟೇ ಅವನ ಕೆಲಸ. ಆಗಾಗ ನಾನೇ ಅವುಗಳ ಎಲ್ಲ ಕೆಲಸ ಮಾಡುತ್ತಿದ್ದುದು. ಅಪ್ಪ ಬಂದು ನೋಡಿದ ಕೂಡಲೆ ಗಕ್ಕನೆ ಎದ್ದು ಮೂಲೆ ಸೇರಿ ಭಯದಿಂದ ನೋಡುತ್ತಿದ್ದವು. ಅಪ್ಪ ಹಂದಿಗಳಿಗೆ ಒಮ್ಮೆಯೂ ದಂಡಿಸುವುದಿಲ್ಲ; ಆದರೂ ಯಾಕೆ ಇವು ನನ್ನಂತೆಯೇ ಬೆದರಿ ನನ್ನ ಬಳಿ ಬಂದು ಗಾಬರಿಯಾಗುತ್ತವಲ್ಲಾ… ಹೇಗೆ ಗೊತ್ತಾಯಿತು ಈ ಹಂದಿಗಳಿಗೆ ಅಪ್ಪನ ಅವತಾರಗಳು ಎಂದು ಅಚ್ಚರಿಯಾಗುತ್ತಿತ್ತು. ಮೊಗಳ್ಳಿ ಗಣೇಶ್‍ ಬರೆಯುವ  ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯ ಹೊಸ ಕಂತು ನಿಮ್ಮ ಓದಿಗಾಗಿ. 

 

ನನಗೂ ತಾಯಿಗೂ ಮನೆಯೇ ಯಾತನೆಯ ಶಿಬಿರವಾಗಿತ್ತು. ಹಿಟ್ಲರನ ‘ಡೆತ್ ಕ್ಯಾಂಪ್’ಗಳು ಹೇಗಿದ್ದವು ಎಂದು ಜಾಲತಾಣಗಳಲ್ಲಿ ದಯವಿಟ್ಟು ಹುಡುಕಿ. ನನ್ನ ಬಾಲ್ಯ ಅದೇ ಸ್ಥಿತಿಯಲ್ಲಿತ್ತು. ಈ ಮೊಗಳ್ಳಿ ಗೋಳಾಡಿಸುತ್ತಾರೆ ಎಂದು ಹಗುರವಾಗಿ ಭಾವಿಸಬೇಡಿ. ನನ್ನ ಆತ್ಮದಲ್ಲಿರುವುದನ್ನು ಮುಚ್ಚು ಮರೆಯಿಲ್ಲದೆ ಬರೆದುಕೊಳ್ಳುತ್ತಿರುವೆ. ಅಪ್ಪನ ಭಯದಿಂದಾಗಿ ಅವರಿವರ ಮನೆಗಳಲ್ಲಿ ಅವರ ಕಾಲ ಬಳಿಯ ಪುಟ್ಟ ಜಾಗಗಳಲ್ಲಿ ಮುದುರಿಕೊಂಡು ಮಲಗುತ್ತಿದ್ದೆ. ಅಂತವನು ನಾನೀಗ ಸುಪ್ಪತ್ತಿಗೆಯ ಮೇಲೆ ಮಲಗಿದರೂ ನಿದ್ದೆ ಬರದೆ ಹೊರಳಾಡುತ್ತೇನೆ. ಏನೇನೊ ಗತವ ನೆನೆಯುತ್ತಾ ತಡವಾಗಿ ಮಲಗಿ ಎದ್ದು; ರಾತ್ರಿಯ ದುಃಸ್ವಪ್ನಗಳ ಹ್ಯಾಂಗೋವರಿನಲ್ಲಿ ನನ್ನ ದೇಹದ ಸಕ್ಕರೆಯ ಮಟ್ಟ ಎಷ್ಟಿದೆ? ಹೃದಯದ ಬಡಿತದ ಪ್ರಮಾಣ ಏನು ಎಂದು ಚಡಪಡಿಕೆಯಲ್ಲಿ ನಿದ್ದೆ ಸಾಲದೆ ನೋಡಿಕೊಂಡು ಡೈರಿಯಲ್ಲಿ ದಾಖಲಿಸಿ; ಚಹಾ ಗುಟುಕರಿಸುತ್ತ ನಿತ್ಯ ಅನಿತ್ಯಗಳ ಮಧ್ಯೆ ಕೂತು ಮನೆಯ ಮುಂದಿನ ಗಿಡಮರಗಳ ಜೊತೆ ಏನೋ ಮೌನದಲ್ಲಿ ಮಾತನಾಡುತ್ತೇನೆ.

ನನ್ನ ಉಸಿರಾಟದಲ್ಲಿ ಗತಕಾಲ ಬೇರು ಬಿಟ್ಟಿದೆ. ನನ್ನ ಅಪ್ಪ ಶೋಕಿಗಾಗಿ ಹೈಬ್ರೀಡ್ ಹಂದಿಗಳ ತಂದು ಸಾಕುತ್ತಿದ್ದ. ಜೂಜಿಗೆ ಹುಂಜಗಳ ಕಾಲುಗಳಿಗೆ ಅವುಗಳಿಗೆಂದೇ ತಯಾರಿಸಿದ್ದ ಹರಿತವಾದ ಚಾಕುಗಳ ಕಟ್ಟಿ ಕಚ್ಚಾಡಲು ಬಿಡುತ್ತಿದ್ದ. ಆಗ ಅದೊಂದು ಐಶಾರಾಮಿ ಕುಳಗಳ ಪ್ರತಿಷ್ಟೆಯ ಜೂಜಾಗಿತ್ತು. ಅಪ್ಪನ ಬಳಿ ಸಾಕಷ್ಟು ಕಾಳಗದ ಹುಂಜಗಳಿದ್ದವು. ಹಂದಿ ಮಾಂಸವನ್ನು ಅಪ್ಪ ತಿನ್ನುತ್ತಿರಲಿಲ್ಲ. ಬಹಳ ಮೇಲರಿಮೆಯವನು. ನಡೆದರೆ ಅವನದೇ ನಡೆಯಬೇಕು! ಯಾವ ಊರ ಗೌಡರೂ ಅವನಿಗೆ ಎದುರಾಡುತ್ತಿರಲಿಲ್ಲ. ಮದವೇರಿದ ಸರ್ವಾಧಿಕಾರಿಯಂತಿದ್ದ… ಆ ದಡೂತಿ ಬಿಳಿಹಂದಿಗಳಿಗೆಂದೇ ಹಿತ್ತಲಲ್ಲಿ ಒಂದು ಗುಂಡಿ ಮನೆಯಿತ್ತು. ಯಾವ ಕಾಣಕ್ಕೂ ಅವು ಮೇಲೆ ಹತ್ತಿ ಬರಲು ಸಾಧ್ಯವಿರಲಿಲ್ಲ. ಮೇಲೆ ಗರಿಗಳನ್ನು ಹೊದಿಸಿದ್ದರು. ತಳದಲ್ಲಿ ಭತ್ತದ ರಾಶಿ ಹೊಟ್ಟ ಹಾಕಿ ಮೆತ್ತನೆ ನೆಲವಾಗಿ ಮಾಡಿ ಅದರಲ್ಲಿ ಹಂದಿಗಳ ಸಾಕುವುದಿತ್ತು. ಪುಟ್ಟ ಏಣಿಯ ಮೂಲಕ ಒಳಗಿಳಿದು ಹಂದಿ ಲದ್ದಿಯ ಮಂಕರಿಗೆ ಗುಡಿಸಿ ತುಂಬಿ ಮೇಲೆ ಅದೇ ಏಣಿ ಏರಿ ತಂದು ತಿಪ್ಪೆಗೆ ಸುರಿಯಬೇಕಿತ್ತು. ಇಂಡಿ ಬೂಸಾ ಕಲೆಸಿ ಉಣಿಸಿ ನೀರು ಇಡಬೇಕಿತ್ತು. ವಾಕರಿಕೆಯ ಆ ಕೆಲಸ ಇದು ಅಸಹ್ಯ ಎಂದು ಯಾವತ್ತೂ ಅನಿಸಿರಲಿಲ್ಲ. ಮೂರು ಹಂದಿಗಳಿದ್ದವು. ಅವುಗಳ ಮೈಯನ್ನು ಆಗಾಗ ಮಾಲಿಸ್ ಮಾಡಬೇಕಿತ್ತು. ಆ ಹಂದಿಗಳೂ ನನ್ನೊಡನೆ ಬಹಳ ಹೊಂದಿಕೊಂಡಿದ್ದವು. ಪೇಟೆಗಳ ಹಂದಿಗಳು ಹೇಸಿಗೆ ನಿಜಾ. ಅಪ್ಪ ಸಾಕುತ್ತಿದ್ದ ಹಂದಿಗಳು ಹಸನಾಗಿದ್ದವು. ಒಳಗೆ ಹೋದ ಕೂಡಲೆ ಅವು ನನ್ನನ್ನು ಮುತ್ತಿಕೊಳ್ಳುತ್ತಿದ್ದವು. ಗದರಿದರೆ ದೀನವಾಗಿ ಸದ್ದು ಮಾಡುತ್ತಿದ್ದವು. ಐದಾರು ಭಾರಿ ಆ ಹಂದಿಗಳ ಜೊತೆಯೇ ಯಾರಿಗೂ ಬೇಡವಾದ ಹಂದಿಯಂತೆಯೆ ಅವುಗಳ ನಡುವೆ ಅಪ್ಪನ ಭಯವಳಿದು ಮುಲಗಿಬಿಡುತ್ತಿದ್ದೆ. ಆ ಹಂದಿಗಳು ನನ್ನನು ಕಾಯುವಂತೆ ಆಗಾಗ ಎಚ್ಚರದ ಸದ್ದು ಹೊರಡಿಸುತ್ತಿದ್ದವು.

ತಿಂಗಳಿಗಾಗುವಷ್ಟು ಆಹಾರವನ್ನು ಅಪ್ಪ ಹಿತ್ತಿಲ ಸೌದೆ ಮನೆಯಲ್ಲಿ ತರಿಸಿ ಇಟ್ಟಿರುತ್ತಿದ್ದ. ಅಷ್ಟೇ ಅವನ ಕೆಲಸ. ಆಗಾಗ ನಾನೇ ಅವುಗಳ ಎಲ್ಲ ಕೆಲಸ ಮಾಡುತ್ತಿದ್ದುದು. ಅಪ್ಪ ಬಂದು ನೋಡಿದ ಕೂಡಲೆ ಗಕ್ಕನೆ ಎದ್ದು ಮೂಲೆ ಸೇರಿ ಭಯದಿಂದ ನೋಡುತ್ತಿದ್ದವು. ಅಪ್ಪ ಹಂದಿಗಳಿಗೆ ಒಮ್ಮೆಯೂ ದಂಡಿಸುವುದಿಲ್ಲ; ಆದರೂ ಯಾಕೆ ಇವು ನನ್ನಂತೆಯೇ ಬೆದರಿ ನನ್ನ ಬಳಿ ಬಂದು ಗಾಭರಿಯಾಗುತ್ತವಲ್ಲಾ… ಹೇಗೆ ಗೊತ್ತಾಯಿತು ಈ ಹಂದಿಗಳಿಗೆ ಅಪ್ಪನ ಅವತಾರಗಳು ಎಂದು ಅಚ್ಚರಿಯಾಗುತ್ತಿತ್ತು.

‘ಅಂದಿಗೊಳ್ ಜೊತೆ ಸೇರ್ಕಂದು ಅಂದಿಯೇ ಆಗ್ಬುಟ್ಟ’ ಎಂದು ನನ್ನ ತಂದೆಯ ತಾಯಿ,  ಅಜ್ಜಿಯಾದವಳು ನನ್ನನ್ನು ಮನೆಯ ಒಳಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ‘ಅತ್ರ ಬರ್‍ಬ್ಯಾಡ ದೂರ ನಿಂತ್ಕಲಾ’ ಎನ್ನುತ್ತಿದ್ದಳು. ಎಷ್ಟೇ ಆಗಲಿ ಸಾಹೇಬನ ತಾಯಿ. ನನ್ನ ತಾಯಿ ‘ತೊರೆಗೆ ವೋಗಿ ತೊಳ್ಕಂದು ಬರೋಗು’ ಎಂದು ಕಳಿಸುತ್ತಿದ್ದಳು. ನೀರಲ್ಲಿ ಆಡಿ ಬರುತ್ತಿದ್ದೆ. ವಿಪರೀತ ಕೋಳಿಗಳಿದ್ದವು. ಅವನ್ನು ಜೋಪಾನ ಮಾಡಬೇಕಾದ ಚಾಕರಿಯನ್ನು ಅಪ್ಪ ನನ್ನ ಮೇಲೇ ಹಾಕಿದ್ದ. ಕೋಳಿಗಳೆಂದರೆ ನನಗೆ ಬಲು ಇಷ್ಟ… ವಾರಕ್ಕೆ ಒಮ್ಮೆಯಾದರೂ ಆ ಕೋಳಿಗಳ ಗೂಡನ್ನು ನಾನೇ ಸ್ವಚ್ಛಮಾಡಬೇಕಿತ್ತು. ಆ ಪುಟ್ಟ ಕೋಳಿಗೂಡಿನ ಒಳಕ್ಕೆ ನುಗ್ಗಿ ಮೋಟು ಕಡ್ಡಿ ಬರಲಿಂದ ಕೋಳಿ ಕಸವ ಕೆರೆದು ಮೊರಕ್ಕೆ ತುಂಬಿಕೊಳ್ಳುವಷ್ಟರಲ್ಲಿ ಉಸಿರುಗಟ್ಟಿರುತ್ತಿದ್ದೆ. ಸಾಕಪ್ಪ ದೇವರೇ ಯಾಕಪ್ಪ ನನಗೆ ಇಷ್ಟೊಂದು ಕಷ್ಟ ಎಂದು ಕಂಗಾಲಾಗುತ್ತಿದ್ದೆ. ಬೇರೆ ದಾರಿಯೇ ಇರಲಿಲ್ಲ. ನನ್ನ ವಾರಿಗೆಯ ಹುಡುಗರೆಲ್ಲ ನಗುತ್ತಿದ್ದರು. ಏನೂ ಹೇಳಲು ಮಾತೇ ಬರುತ್ತಿರಲಿಲ್ಲ. ಆದರೆ ನಾನು ಹೈಸ್ಕೂಲಿಗೆ ಬಂದು ಚಿಕ್ಕಪ್ಪನ ಮನೆ ಸೇರಿದ ಮೇಲೆ ಹೊರ ಜಗತ್ತಿನ ಜೊತೆ ಮಾತು ಕಲಿಯಲೇ ಬೇಕಾಯಿತು. ಇಡೀ ಹಗಲೆಲ್ಲ ಶಾಲೆ, ಮೈದಾನ, ಆಟವೊ ಆಟ ಹತ್ತನೇ ತರಗತಿ ಸಕತ್ ಹುಡುಗಾಟ. ಕಲಿಯಲು ಆರಂಭಿಸಿದ್ದೆ ‘ಲವ್ ಲೆಟರ್’. ಹುಡುಗ ಹುಡುಗಿಯರು ಒಟ್ಟಿಗೇ ಕಲಿಯುತ್ತಿದ್ದ ಶಾಲೆ. ನನಗಾಗಲೇ ಬರವಣಿಗೆ ಬೆರಳ ತುದಿಗೆ ಬಂದು ಏನಾದರೂ ಗೀಚು ಎಂದು ಒತ್ತಾಯಿಸುತ್ತಿತ್ತು. ಅಷ್ಟೊತ್ತಿಗಾಗಲೇ ಹೈಸ್ಕೂಲಿನಲ್ಲಿ ಪ್ರಬಂಧ ಸ್ಪರ್ಧೆ ಏರ್ಪಾಟಾಗಿತ್ತು. ಹಾಗೆ ಸ್ಪರ್ಧೆ ಮಾಡುವ ಕ್ರಮ ಇದೆ ಎಂಬುದೇ ಗೊತ್ತಿರಲಿಲ್ಲ. ಬಾಲರಾಜ್ ಎಂಬ ಗೆಳೆಯ ಬಿಡಿಸಿ ಹೇಳಿ ಸ್ಪರ್ಧೆಗೆ ನನ್ನ ಹೆಸರನ್ನೂ ಬರೆಸಿದ್ದ. ವಿಷಯ ‘ಭಾರತ ದೇಶದ ಬಡತನ’ ಎಂದಿತ್ತು.

ಭಾರತ ದೇಶ ಬಡವಾದುದ್ದಲ್ಲ. ಬಡವರ ಸಂಪತ್ತು ಎಷ್ಟೊಂದು ಲೂಟಿ ಆಗುತ್ತಿದೆ ಎಂದು ದೀರ್ಘ ವಿವರಣೆಗಳ ಪ್ರಬಂಧ ಬರೆದಿದ್ದೆ. ಎರಡನೇ ಬಹುಮಾನ ಬಂದಿತ್ತು. ಕನ್ನಡ ಮಾಸ್ತರು ಕಾರಿಡಾರಿನಲ್ಲಿ ಬೆನ್ನು ತಟ್ಟಿದ್ದರು. ತಾತ ಊರಿಂದ ಬಂದಾಗ ಇದನ್ನೆಲ್ಲ ಹೇಳಿಕೊಳ್ಳಬೇಕೆನಿಸಿತ್ತು. ಬರ್ಬರ ಲೋಕದಿಂದ ನಿರ್ಭಯ ಪಟ್ಟಣಕ್ಕೆ ಬಂದಿದ್ದೆ. ಅಲ್ಲಿ ಯಾರು ನೀನು ಯಾವ ಜಾತಿ ಎಂದು ಕೇಳುತ್ತಿರಲಿಲ್ಲ. ಒಲ್ಲದ ಪ್ರಶ್ನೆಗಳ ಸದ್ದೇ ಇರಲಿಲ್ಲ. ಆದರೆ ಗಣಿತದ ತರಗತಿ ಬಂದಾಗ ಸತ್ತು ಹೋಗುತ್ತಿದ್ದೆ. ಏನು ಮಾಡಿದರೂ ತಲೆಗೆ ಅದು ಬರುತ್ತಲೇ ಇರಲಿಲ್ಲ. ಬರೆವ ತುಡಿತ ಆಗ ತಾನೆ ಆರಂಭವಾಗಿತ್ತು. ಸಪ್ಪಗೆ ಒಂದೆಡೆ ಕೂತುಬಿಡುತ್ತಿದ್ದೆ. ಚಿಕ್ಕಪ್ಪ ಯಾವತ್ತೂ ಒಂದು ಚಿಕ್ಕ ಪ್ರಶ್ನೆಯನ್ನೂ ಕೇಳುತ್ತಿರಲಿಲ್ಲ. ಪೋಲಿಸ್ ಇಲಾಖೆಗೆ ಅವರು ಲಾಯಕ್ ಆಗಿರಲಿಲ್ಲ. ಬಹಳ ಸೌಮ್ಯ ಶಾಂತ ಸ್ವರೂಪದ ಚಿಕ್ಕಪ್ಪ ಅಪರಾಧಿಗಳೆಂದು ಸ್ಟೇಷನ್‌ನ ಕಂಬಿ ಸೇರಿದವರ ಪರವಾಗಿದ್ದ. ‘ರೈಟರ್’ ಎಂಬ ಸ್ಥಾನದಲ್ಲಿದ್ದ ಅವರು ಎಫ್.ಐ.ಆರ್. ಪ್ರತಿ ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದರು. ಇಂಡಿಯನ್ ಪೋಲಿಸ್ ವ್ಯವಸ್ಥೆಯ ಬಗ್ಗೆ ಇಂಗ್ಲೀಷಿನ ಪುಸ್ತಕಗಳ ಓದುತ್ತಿದ್ದರು. ಇನ್ನೂ ಮದುವೆ ಆಗಿರಲಿಲ್ಲ. ಸುಮ್ಮನೆ ಅವರ ಪುಸ್ತಕಗಳ ತಿರುವಿ ಹಾಕುತ್ತಿದ್ದೆ. ನನ್ನೊಳಗನ್ನು ನಾನೇ ತಡಕಿಕೊಳ್ಳುವ ಭಾವನೆಗಳು ಮಗ್ಗಲು ಬದಲಿಸುತ್ತಿದ್ದವು. ಶಾಲೆ ಮುಗಿದ ಕೂಡಲೆ ಪೇಟೆಯ ಹುಡುಗರ ಕ್ರಿಕೆಟ್ ಆಟದಲ್ಲಿ ತಲ್ಲೀನನಾಗುತ್ತಿದ್ದೆ. ಬರೀ ಫೀಲ್ಡಿಂಗೇ ಖಾಯಂ ಆಟವಾಗಿತ್ತು. ಕೆಲವೊಮ್ಮೆ ಆಟ ನೋಡ ನೋಡುತ್ತಲೇ ಒಂದು ಮಟ್ಟದ ಆಟದ ಕೌಶಲ್ಯ ಬಂದು ಬಿಟ್ಟಿರುತ್ತದೆ. ಪೋಲಿಸ್ ಕ್ವಾಟ್ರಸ್ಸಿಗೆ ಅಂಟಿಕೊಂಡೇ ವಿಶಾಲ ಆಟದ ಮೈದಾನವಿತ್ತು. ದೊಡ್ಡವರ ಮ್ಯಾಚ್‌ಗಳೂ ನಡೆಯುತ್ತಿದ್ದವು.
ಆಗುವುದಾದರೆ ನಾನು ಮುಂದೆ ಒಬ್ಬ ಆಲ್‌ರೌಂಡ್ ಕ್ರಿಕೆಟರ್ ಆಗಬೇಕು ಎಂಬ ಬಲವಾದ ಆಸೆ ಮೂಡುತ್ತಿತ್ತು. ಆದರೆ ಅಂತಹ ದೇಹ ಸಾಮರ್ಥ್ಯ ನನಗಿರಲಿಲ್ಲ. ಹಾಗೆಂದು ಸುಮ್ಮನೆ ಆಟ ನೋಡುತ್ತ ಕೂತಿರಲಿಲ್ಲ. ದೊಡ್ಡವರು ನೆಟ್ ಪ್ರಾಕ್ಟೀಸ್ ಮಾಡುತ್ತಿರುವಾಗ ಆಚೀಚೆ ಹೋದ ಬಾಲುಗಳ ಎತ್ತಿಕೊಡುವ ಬಾಲ್‌ಬಾಯಿ ಕೆಲಸ ಮಾಡುತ್ತಿದ್ದೆ. ಸುಮ್ಮನೆ ಓಡಿಬಂದು ಬೌಲಿಂಗ್ ಮಾಡುವ ರೀತಿಯನ್ನು ಅನುಕರಿಸುತ್ತಿದ್ದೆ. ಆ ದೊಡ್ಡ ಆಟಗಾರರು ಹತ್ತಿರ ಕರೆದು ಬಾಲನ್ನು ಕೈಗಿತ್ತು ಆ ಬ್ಯಾಟರ್‌ಗೆ ಬೌಲ್ ಮಾಡು ಎಂದರು. ತಮಾಷೆಗೆ ಎಂದುಕೊಂಡೆ. ‘ಹೇ; ಮಾಡೊ’ ಎಂದು ತೀಕ್ಷ್ಣವಾಗಿ ಆದೇಶಿಸಿದರು. ಈಗವರು ಎಲ್ಲಿದ್ದಾರೊ… ಯಾರೂ; ಗೊತ್ತಿಲ್ಲ. ಅಷ್ಟೊತ್ತಿಗಾಗಲೆ ಸಾಕಷ್ಟು ಕ್ರಿಕೆಟ್ ಕಲಿತಿದ್ದೆ. ಓಡಿ ಬಂದು ಚೆಂಡು ಎಸೆದಿದ್ದೆ. ಆ ಬಾಲು ಮಾಯವಾಗಿತ್ತು. ಬ್ಯಾಟರ್ ಆ ಬಾಲನ್ನು ಎಷ್ಟು ದೂರ ಹೋಗುವಂತೆ ಹೊಡೆದಿದ್ದ ಎಂದರೆ ಇನ್ನೆಂದು ನಾನು ಬಾಲನ್ನು ಕೈಯಿಂದ ಹಿಡಿಯಲಾಗದಂತೆ. ಆ ಹಿರಿಯ ಕ್ರಿಕೆಟರ್ ತಕ್ಷಣ ಬಂದು ಬೆನ್ನು ಸವರಿ; ‘ಆಟ ಎಂದರೆ ಹೀಗೆನೇ… ಯಾರನ್ನಾದರೂ ಯಾರಾದರೂ ಹೊಡೆದು ಸೋಲಿಸಬಹುದು, ಇಲ್ಲವೇ ಗೆಲ್ಲಬಹುದು. ಇನ್ನೂ ಐದು ಬಾಲುಗಳಿವೆ ಒಂದು ಓವರಿನಲ್ಲಿ. ಪ್ರಯತ್ನ ಪಡು ಎಂದು ಚೆಂಡನ್ನು ತೊಡೆಗೆ ಉಜ್ಜಿಕೊಂಡು ಕೊಟ್ಟು ಹೆಜ್ಜೆ ಗುರುತು ಹಾಕಿಕೊಟ್ಟರು.

ನಮ್ಮಪ್ಪ ತಕ್ಷಣವೇ ನೆನಪಾದ. ಆ ಬ್ಯಾಟರ್ ಕ್ಯಾಪ್ ಹಾಕಿದ್ದ. ನನ್ನಪ್ಪನ ಕಣ್ಣುಗಳಿಗೂ ಅವನಿಗೂ ಹೋಲಿಕೆ ಬಂತು. ಅವನ ಹಿಂದಿದ್ದ ವಿಕೆಟ್ಟುಗಳು ನನಗೂ ತಾಯಿಗೂ ಅವತ್ತು ಬಡಿದಿದ್ದ ಬೆತ್ತದಂತೆ ಕಂಡವು. ಹುಚ್ಚಾಯಿತು ಮನಸ್ಸು. ಬೀಟನ್ ಆಯಿತು ಬಾಲು. ಆ ಹಿರಿಯ ಕ್ರಿಕೆಟರ್ ಹತ್ತಿರ ಬಂದು ‘ಡೊಂಟ್ ಥ್ರೊ ದ ಸೇಮ್ ಬಾಲ್. ಸ್ವಿಂಗ್ ದಿ ಬಾಲ್’ ಎಂದು ಕಿವಿ ಮಾತು ಹೇಳಿದ್ದರು. ಅರ್ಥವಾಗಿತ್ತು. ಬಲವಾಗಿ ಬೀಸಿ ಎಸೆದಿದ್ದೆ. ಮೂರು ವಿಕೆಟ್ಟುಗಳೂ ಉರುಳಿದ್ದವು. ಆ ಬ್ಯಾಟರ್ ಬಂದು ಕೈ ಕುಲುಕಿದ್ದರು. ಮತ್ತೊಬ್ಬರು ಬೆನ್ನು ತಟ್ಟಿದ್ದರು. ಹಿರಿಯರ ಟೀಂನಲ್ಲಿ ಆಡುವ ಕಿರಿಯನಾಗಿ ಅವರ ಜೊತೆ ಸೇರಿಕೊಂಡೆ. ಅವರ ಜೊತೆ ಸಾಕಷ್ಟು ಕಲಿತೆ. ‘ನಿನ್ಗೆ ಬಾಡಿನೇ ಇಲ್ಲಾ ಇಂತಾ ಪರಿ ಬಾಲೆಸಿತೀಯಲ್ಲೊ’ ಎಂದು ಹೊಗಳುತ್ತಿದ್ದರು.

ಅವತ್ತು ಆ ಕ್ರಿಕೆಟ್ ಬಾಲ್ ಎಸೆತದಲ್ಲಿ ಒಂದು ರೀತಿಯ ಕಿಲ್ಲಿಂಗ್ ಇನ್‍ಸ್ವಿಂಗ್ಸ್ ಆಕರ್ಷಿಸುತ್ತಿತ್ತು. ನನಗೆ ಯಾರೂ ಹೊಡೆಯಬಾರದು ಎಂದೇ ಬೌಲಿಂಗ್ ಮಾಡುತ್ತಿದ್ದೆ. ಇನ್‍ಸ್ವಿಂಗ್, ಔಟ್‍ಸ್ವಿಂಗ್, ಯಾರ್ಕರ್ ತಂತ್ರಗಳೆಲ್ಲ ಅದು ಹೇಗೊ ಬಂದು ಬಿಟ್ಟಿದ್ದವು. ಅದೇ ತಾತನ ಹೋಟೆಲಲ್ಲಿ ಹಳ್ಳಿಯಲ್ಲಿ ಕ್ರಿಕೆಟ್ ಕಾಮೆಂಟ್ರಿಯನ್ನು ರೇಡಿಯೋ ಮೂಲಕ ಕೇಳುವುದು, ಅರ್ಥ ಮಾಡಿಕೊಳ್ಳುವುದು ಸುಖ ಎನಿಸುತ್ತಿತ್ತು. ಒಂದಿಷ್ಟು ‘ಬಟ್ಲರ್’ಇಂಗ್ಲೀಷೂ ಬರುತ್ತಿತ್ತು. ಕ್ರಿಕೆಟ್ ಆಟದ ದಂತಕತೆಗಳನ್ನು ಕೇಳುತ್ತ ನಾನು ನನ್ನ ತಾಯ ನೆನಪನ್ನೇ ಮಸುಕು ಮಾಡಿಕೊಳ್ಳುತ್ತಿದ್ದೆ. ಆಟಪಾಠಗಳ ವಯಸ್ಸು; ಅಂತೆಯೇ ಮೀಸೆ ಮೂಡುವ ಸಮಯ. ಆಟದ ಜೊತೆಗೆ ಚೆನ್ನಾಗಿ ಓದಿದ್ದೆ. ಹತ್ತನೇ ತರಗತಿಯ ಎಲ್ಲಾ ವಿಷಯಗಳಲ್ಲಿ ಪಾಸಾಗಿ ಗಣಿತದಲ್ಲಿ ಫೇಲಾಗಿದ್ದೆ. ‘ನಾವೇ ಮೂರು ನಾಲ್ಕು ಬಾರಿ ಫೇಲಾಗಿದ್ದೆವು; ನಿಂದೇನು ಸ್ಪೆಷಲ್ಲು ಬಿಡೊ’ಎಂದು ಸಿಟ್ಟಾಗಿರಲಿಲ್ಲ. ಮಧ್ಯಂತರ ಪರೀಕ್ಷೆಗೆ ಕೂತಿದ್ದೆ. ಆ ನನ್ನ ಗೆಳೆಯ ಬಾಲರಾಜು ಎಂಬಾತನಿಗೆ ಕೈ ಮುಗಿಯಬೇಕು. ದೊಡ್ಡಬಳ್ಳಾಪುರದ ಹತ್ತಿರದ ಹಳ್ಳಿಯಿಂದ ಬರುತ್ತಿದ್ದ. ಅವನೂ ಫೇಲಾಗಿದ್ದ. ಅವನ ಹಿಂದೆಯೇ ನಾನೂ ಕೂತಿದ್ದೆ. ಪ್ರಶ್ನೆ ಪತ್ರಿಕೆ ನೋಡಿ ಅಳುತ್ತಿದ್ದೆ. ನನ್ನ ಚಿಕ್ಕಪ್ಪ ಪೋಲಿಸ್ ಆಗಿದ್ದರಿಂದ ಅಲ್ಲಿ ಡ್ಯೂಟಿಗೆ ಬಂದಿದ್ದ ಪೇದೆಗಳ ಮೂಲಕ ಕಾಪಿ ಮಾಡಲು ಅವಕಾಶ ಮಾಡಿದ್ದ.

ಹಾಗೆ ಇನ್ನೊಬ್ಬರನ್ನು ಕಾಪಿ ಮಾಡಲಾರದಷ್ಟು ನನ್ನ ಕಾಲು ಕೈಗಳು ನಡುಗುತ್ತಿದ್ದವು. ಲೆಕ್ಕಗಣಿತ ಎಂಬ ಆ ವಿಷಯ ಎಷ್ಟು ನಿರ್ದಯವಾಗಿ ನನ್ನ ತಲೆಯನ್ನು ಚಚ್ಚುತ್ತಿತ್ತು ಎಂದರೆ; ನನ್ನ ಅಪ್ಪ ಕೊಲ್ಲುವಂತೆ ನೇತುಹಾಕಿ ಬಡಿಯುತ್ತಿದ್ದಂತೆ ಆಗುತ್ತಿತ್ತು. ಒಂದು ಲೆಕ್ಕವೂ ಬರುತ್ತಿರಲಿಲ್ಲ. ಭೀತಿ ಆವರಿಸಿತ್ತು. ಪರೀಕ್ಷಾ ಕೊಠಡಿಯ ವೀಕ್ಷಕರು ಬಂದರು. ನನ್ನ ಅವಸ್ಥೆಯ ಕಂಡರು. ಅತ್ತ ಹೊರಟು ಹೋದರು. ಮತ್ತೆ ಬಂದರು. ‘ಬಂದಷ್ಟು ಬರೀ ಮತ್ತೆ ಫೇಲಾಗ ಬೇಡ’ ಎಂದು ತಗ್ಗಿದ ದನಿಯಲ್ಲಿ ಸಂತೈಸಿದರು. ಎಲ್ಲರೂ ಬರೆಯುತ್ತಿದ್ದರು. ಇಲ್ಲಿಗೆ ನನ್ನ ಕತೆ ಮುಗಿಯಿತು ಎಂದು ಬಿಕ್ಕಳಿಸಿದೆ. ಕ್ರಿಕೆಟ್ ಆಟ ನೆನಪಾಯಿತು. ಆ ಆಟದ ಮೈದಾನ ಕಿಟಕಿಯಲ್ಲಿ ಕಾಣುತ್ತಿತ್ತು. ಎದ್ದು ಓಡಿ ಹೋಗಬೇಕು ದೂರ ಎಲ್ಲಿಗಾದರೂ ಯಾರಿಗೂ ಕಾಣದಂತೆ ಎಂಬ ತೀವ್ರತೆ ಒತ್ತೊತ್ತಿ ಬರುತ್ತಿತ್ತು. ಎದ್ದು ನಿಂತೆ! ಕಣ್ಮರೆಯಾಗಲು ಪರೀಕ್ಷಕ ತಕ್ಷಣ ಬಂದು ಕೂರಿಸಿದ. ನನ್ನ ಮುಂದಿದ್ದ ಬಾಲರಾಜುವಿನ ಕೈಗೆ ನನ್ನ ಖಾಲಿ ಉತ್ತರ ಪತ್ರಿಕೆಯ ಕೊಟ್ಟು; ಅವನು ಬರೆದಿದ್ದ ಉತ್ತರ ಪ್ರತಿಕೆಯ ನನ್ನ ಮುಂದಿಟ್ಟು ಸುಮ್ಮನೆ ಬರೆದಂತೆ ನಾಟಕ ಮಾಡು ಎಂದು ಸೂಚಿಸಿ ಮೆಲ್ಲಗೆ ಬಾಲರಾಜುಗೆ ಖಡ್ಡಾಯವಾಗಿ ಸರಿ ಲೆಕ್ಕ ಮಾಡಿ ಇದರಲ್ಲಿ ನೀನೇ ಬರೆಯ ಬೇಕು ಎಂದು ಆದೇಶಿಸಿದರು. ನನ್ನ ಸ್ಥಿತಿ ಬಾಲುಗೆ ಗೊತ್ತಿತ್ತು. ಚಕಚಕನೆ ಪಾಸಾಗುವಷ್ಟು ಬೇಗನೆ ಬರೆದಿದ್ದ. ಬೆಲ್ಲು ಹೊಡೆದಿತ್ತು. ಅದಲು ಬದಲಾದವು ಉತ್ತರ ಪತ್ರಿಕೆಗಳು. ಆ ಪರೀಕ್ಷಕರಿಗೆ ಕೈ ಮುಗಿದೆ. ರಿಸಲ್ಟ್ ಬಂದಿತ್ತು. ಮುವ್ವತ್ತೆಂಟು ನಂಬರ್ ಬಂದು ಪಾಸಾಗಿದ್ದೆ. ಅದೇ ಹೊತ್ತಿಗೆ ದೊಡ್ಡಬಳ್ಳಾಪುರದಿಂದ ನೆಲಮಂಗಲಕ್ಕೆ ವರ್ಗವಾಗಿತ್ತು ಚಿಕ್ಕಪ್ಪನಿಗೆ. ಆ ಗೆಳೆಯ ಮತ್ತೆಂದೂ ಸಿಗಲಿಲ್ಲ. ಇವತ್ತಿಗೂ ಅವನ ನೆನಪು ನಿರಂತರವಾಗಿ ಸಾಗಿ ಬಂದಿದೆ. ನನ್ನ ಹಿರಿಮಗಳು ಅದೇ ಹತ್ತನೇ ತರಗತಿಯಲ್ಲಿ ಅದೇ ಗಣಿತ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳ ಪಡೆದು ಪಾಸಾಗಿದ್ದಳು. ಎಂತಹ ವಿಚಿತ್ರವೊ! ಹಾಗೆ ಮತ್ತೆ ಫೇಲಾಗಿದ್ದರೆ; ಅಪ್ಪನ ಬಳಿ ಹೋಗಿದ್ದರೆ ಖಂಡಿತ ಅಪ್ಪ ನನ್ನನ್ನು ಕೊಂದು ಬಿಡುತ್ತಿದ್ದ. ಯಾವ ಯಾವ ರೂಪಗಳಲ್ಲಿ ಅತೀತ ಶಕ್ತಿ ಕೆಲಸ ಮಾಡುತ್ತದೊ ಏನೊ…

ನೆನೆದರೆ ಈಗಲೂ ಅಪ್ಪನ ಭಯವಾಗುತ್ತದೆ. ಹಾಗೆಯೇ ಮನಸ್ಸು ವ್ಯಗ್ರವಾಗಿ ಕೊಂದು ಬಿಡಬೇಕು ಅವನ ಎಂದು ಖಿನ್ನವಾಗುತ್ತದೆ. ಅಪ್ಪನ ಆ ಹಂದಿಗಳ ಶೋಕಿ ಬಹಳ ಕ್ರೂರವಾಗಿತ್ತು. ಒಂದೇ ವರ್ಷಕ್ಕೆ ಅವು ಕೊಬ್ಬಿ ಉಬ್ಬಿ ಬೆಳೆದು ತಿರುಗಾಡಲಾರದೆ ಒಂದೆಡೆ ಬಿದ್ದಿರುತ್ತಿದ್ದವು. ಆಗೆಲ್ಲ ನನ್ನ ಮನಸ್ಸು ಕದಡಿ ಹೋಗುತ್ತಿತ್ತು. ಅವುಗಳ ಹರಾಜಿನ ದಿನಗಳು ಸಮೀಪಿಸುತ್ತಿದ್ದವು ಎಂದಂತೆಲ್ಲ ಎಲ್ಲಿಯಾದರೂ ಹೋರಟು ಹೋಗಬೇಕೆನಿಸಿ ಚಡಪಡಿಸುತ್ತಿದ್ದೆ. ಇಡೀ ಊರಿಗೆಲ್ಲ ಸಾಕಾಗುವಷ್ಟು ಮಾಂಸ ಸಿಗುತ್ತಿತ್ತು. ಆ ಮೂರು ಹಂದಿಗಳಿಗೆ ಹಗ್ಗ ಬಿಗಿದು ಮೇಲೆತ್ತಿ ಬಲವಾಗಿ ಕಾಲುಗಳ ಬಿಗಿಯುತ್ತಿದ್ದರು. ಅಪ್ಪ ಅವುಗಳ ಒಡೆಯ. ಅವುಗಳ ರೋಧನ ಊರಾದ ಊರಿಗೆಲ್ಲ ತುಂಬಿಕೊಳ್ಳುತ್ತಿತ್ತು. ಹರಾಜಿನ ದಿನವನ್ನು ಮೊದಲೆ ನಿಗದಿಪಡಿಸುತ್ತಿದ್ದರು. ಅವುಗಳ ಸಂತೈಸಲು ನನಗೆ ಸಾಧ್ಯವಿತ್ತೇ… ಅಪ್ಪ ಬೇಕಿದ್ದರೆ ಅವುಗಳ ಜೊತೆಗೆ ನನ್ನನ್ನೂ ಹರಾಜು ಹಾಕುತ್ತಿದ್ದ. ಆ ಹಂದಿಗಳ ಗಲಾಟೆ ಮಾಡದಿರುವಂತೆ ನೋಡಿಕೊ ಎಂದು ಅಬ್ಬರಿಸಿ ಹೇಳುತ್ತಿದ್ದ. ನಾನವುಗಳ ಮುಂದೆ ಕೂತು; ಸುಮ್ಮನಿರೀ ತೆಪ್ಪಗಿರಿ ಎಂದು ಕೋರುತ್ತಿದ್ದೆ. ದೇವರ ಮೇಲೆ ತುಂಬ ಸಿಟ್ಟಾಗುತ್ತಿತ್ತು. ಹಿತ್ತಲ ತುಂಬ ಜನವೊ ಜನ. ಹರಾಜು ಕೂಗುವವರ ಲೆಕ್ಕಾಚಾರದ ನಡುವೆ ನನ್ನ ಮುಂಗೈಗಳನ್ನು ಆ ಮೂರು ಹಂದಿಗಳು ಕೊನೆಯ ಬಾರಿಗೆ ನೆಕ್ಕುತ್ತ ನೆಕ್ಕುತ್ತ ಇವತ್ತು ನಮ್ಮ ಸಂಬಂಧ ಕೊನೆ ಎಂಬಂತೆ ಕೀರಲಾಗಿ ಸದ್ದು ಮಾಡಿ ಮಾತಾಡುತ್ತಿದ್ದವು. ನನಗೆ ಅರ್ಥವಾಗುತ್ತಿತ್ತು. ತಾತನಿಗೆ ಆ ವ್ಯಾಪಾರವೇ ಇಷ್ಟವಿರಲಿಲ್ಲ. ಅದರಲ್ಲಿ ಪಾಲುಗೊಳ್ಳುತ್ತಿರಲಿಲ್ಲ. ನಾನು ಕೂಡ; ಇನ್ನು ಸ್ವಲ್ಪ ಹೊತ್ತಾದ ಮೇಲೆ ಇವುಗಳ ಕಡಿದು ಮಾಂಸದ ಗುಡ್ಡೆ ಮಾಡುವರಲ್ಲಾ ಎಂದು ತಲೆ ತಗ್ಗಿಸಿ ಕಣ್ಣೀರು ಸುರಿಸುತ್ತಿದ್ದೆ. ಆ ಹಂದಿಗಳು ಅತೀತವಾಗಿ ಕಣ್ಣುಗಳ ತೇಲಾಡಿಸುತ್ತಿದ್ದವು. ಹರಿತವಾಗಿ ಕತ್ತಿಗಳ ಮಸೆಯುತ್ತಿದ್ದವರು ಸಂಭ್ರಮದಲ್ಲಿ ತೇಲುತ್ತಿದ್ದರು. ಅಪ್ಪ ಲಡಾಸು ಕುರ್ಚಿಯಲ್ಲಿ ಕೂತು ಹರಾಜಿನ ಬೆಲೆ ಇನ್ನೂ ಹೆಚ್ಚಲಿ ಎಂದು ಆಸೆ ಪಡುತ್ತಿದ್ದ. ಮಾಂಸ ಖರೀದಿಸಲು ಬಂದವರು ತುದಿಗಾಲಲ್ಲಿದ್ದರು. ಹೆಚ್ಚಿನ ಬೆಲೆಗೆ ಹರಾಜು ಮುಗಿದಿತ್ತು. ಜನವೆಲ್ಲ ಅಹೊ ಇಹೊ ಎಂದು ಆ ಹಂದಿಗಳ ಕತ್ತರಿಸಲು ಒಂದಾದರು. ಅಲ್ಲಿಂದ ಹಿಂದೆ ಸರಿದಿದ್ದೆ. ಅಪ್ಪ ನೋಟುಗಳ ಕಣ್ಣರಳಿಸಿ ಮೊರ ಮೊರ ಸದ್ದಿನಲಿ ಎಣಿಸುತ್ತ ಒಳಗೆ ಬಂದಿದ್ದ. ಮುಂದೇನಾಯಿತು ಎಂದು ವಿವರಿಸುವ ಶಕ್ತಿ ನನಗಿಲ್ಲ. ಹೊಳೆಯಾಚೆ ಇದ್ದ ಸ್ಮಶಾನದತ್ತ ಹೊರಟು ಹೋಗಿದ್ದೆ. ಆ ಸ್ಮಶಾನವೇ ಸುಖ ಎನಿಸುತ್ತಿತ್ತು. ಅಲ್ಲಿ ನೋವೇ ಇಲ್ಲ! ಎಷ್ಟು ಹೊತ್ತಾದರೂ ಮಸಣದ ಮರೆಯ ಪೊದೆಯ ಒಳಗೆ ಅಡಗಿ ಕೂತರೂ ಯಾರೂ ಸುಳಿಯುತ್ತಿರಲಿಲ್ಲ. ಏನೊ ನೆಮ್ಮದಿ ಸತ್ತು ಮಲಗಿದವರ ಎದೆ ಮೇಲೆ ಬೆಳೆದ ಗಿಡಗಂಟೆಗಳಲ್ಲಿ ಕೂತು ಹಾಡುವ ಆ ಹಕ್ಕಿಗಳ ಗಾನ ಕೇಳಿ; ಯಾವುದೊ ಮಾಯಾ ಲೋಕಕ್ಕೆ ಹೋದಂತೆ ಮನಸ್ಸು ಹಗುರವಾಗುತ್ತಿತ್ತು. ಹಲವು ಸಲ ಅಲ್ಲೇ ಮಲಗಿದ್ದಿದೆ. ಮನೆಯಲ್ಲಿ ಇಲ್ಲದಿದ್ದ ನೆಮ್ಮದಿ, ರಕ್ಷಣೆ ಸ್ಮಶಾನದ ಪೊದೆಯಲ್ಲಿ ಸಿಗುತ್ತಿತ್ತಲ್ಲಾ… ಮರುದಿನ ಹೋಟೆಲಲ್ಲಿ ಆ ಜನರ ಮುಖ ನೋಡಲು ಬೇಸರವಾಗುತ್ತಿತ್ತು. ನಗು ನಗುತ್ತಾ ಅವರಿಗೆ ಸೇವೆ ಮಾಡಬೇಕಿತ್ತು. ಹಿತ್ತಿಲ ಆ ಹಂದಿ ಮನೆಯ ಬಳಿ ಸುಳಿಯುತ್ತಲೆ ಇರಲಿಲ್ಲ. ಕೆಲವೇ ದಿನಗಳು ಕಳೆದಂತೆ ಅಪ್ಪ ಮರಿ ಹಂದಿಗಳ ತಂದು ಆ ಗುಂಡಿಗೆ ಬಿಡುತ್ತಿದ್ದ. ಹೇಳಲಾರೆ ಆ ಎಲ್ಲ ಅದೇ ನರಕವ. ಜೀವ ತಿನ್ನುವ ನೆನಪುಗಳ…

ಒಮ್ಮೊಮ್ಮೆ ಅನಿಸುತ್ತದೆ; ಆ ನರಕವೇ ನನ್ನನ್ನು ಇಲ್ಲಿ ತನಕ ಕರೆತಂದಿತೇನೊ ಎಂದು. ಹಾಗೆ ಪಾಸಾದ ನಂತರ ನೆಲಮಂಗಲದ ಸರ್ಕಾರಿ ಪಿ.ಯು. ಕಾಲೇಜಿಗೆ ಸೇರಿಕೊಂಡೆ. ಅಲ್ಲೂ ಪೋಲಿಸ್ ಕ್ವಾಟ್ರಸ್ ಇತ್ತು. ಪುಟ್ಟದಾದ ಚೆಂದ ಮನೆ. ಆಟದ ಮೈದಾನ ಅಲ್ಲೇ ಅಂಟಿಕೊಂಡಿತ್ತು; ಕಾಲೇಜಿಗೆ ಹೊಂದಿಕೊಂಡು. ನನ್ನ ಸಡಗರಕ್ಕೆ ಆಕಾಶ ಬಹಳ ಹತ್ತಿರ ಎನಿಸಿತ್ತು. ವಿಜ್ಞಾನಕ್ಕೆ ಸೇರಿಕೊಂಡಿದ್ದೆ. ಹತ್ತೇ ದಿನಗಳಲ್ಲಿ ಸಮಾಜ ವಿಜ್ಞಾನಕ್ಕೆ ಬದಲಿಸಿಕೊಂಡಿದ್ದೆ. ಗಣಿತದ ಸಮಸ್ಯೆ ನನಗೆ ಕಗ್ಗಂಟಾಗಿತ್ತು. ಇವತ್ತಿಗೂ ನನಗೆ ಸರಿಯಾಗಿ ಮಗ್ಗಿ ಬರುವುದಿಲ್ಲ. ಬದುಕಿನ ಲೆಕ್ಕಚಾರವೂ ಅಷ್ಟಕ್ಕಷ್ಟೇ… ನನ್ನನ್ನು ಹಿಂದಿಕ್ಕುವವರು ಕಾಲೇಜಿನಲ್ಲಿ ಯಾರೂ ಇರಲಿಲ್ಲ. ಹತ್ತಿರದಲ್ಲೆ ನಗರ ಸಭೆಯ ಲೈಬ್ರರಿ ಇತ್ತು. ಮುಂಚಿತವಾಗಿಯೇ ಓದಿಕೊಂಡು ತರಗತಿಗೆ ಹೋಗಿ ಮಾಸ್ತರರ ಪಾಠ ಮೀರಿ ಪ್ರಶ್ನೆಗಳ ಕೇಳುತ್ತಿದ್ದೆ. ‘ಎಲಾ; ಇವನಾ’ ಎಂದು ಕಣ್ಣಗಲಿಸಿ ನೋಡುತ್ತಿದ್ದರು. ಆಗಲೇ ನನಗೆ ಓದುವ ತಿಳಿಯುವ ಅದನ್ನು ಮರು ಆಲೋಚಿಸುವ ನಡವಳಿಕೆ ಬಂದದ್ದು.

ಪ್ರಶ್ನಿಸುವ ಸಾಧ್ಯತೆಗಳೇ ಹಳ್ಳಿಯಲ್ಲಿ ಇರಲಿಲ್ಲ. ಹಾಸ್ಯ ಎಷ್ಟೊಂದು ಸಲೀಸಾಗಿ ತಲೆ ತುಂಬಿ ತುಂಬಿ ದೀನನಾಗುತ್ತಿದ್ದೆನಲ್ಲ ಎಂದು ಯೋಚಿಸತೊಡಗಿದೆ. ಅಪ್ಪ; ಅಪ್ಪಾ… ಯಾವ ಶಕ್ತಿ ನನ್ನನ್ನು ಬಚಾವು ಮಾಡಿತು? ಅಷ್ಟೊತ್ತಿಗಾಗಲೇ ತಾಯಿ ಜೀವ ಹೊರಟು ಹೋಗಿತ್ತು. ಆ ಕಥೆಯನ್ನೆಲ್ಲ ಹೇಳುವ ಉತ್ಸಾಹ ನನಗಿಲ್ಲ. ಅಪ್ಪ ಒಬ್ಬರ ಹಿಂದೆ ಒಬ್ಬರ ಕೊಂಡು ಮೂರು ಜನ ಅನಾಥೆಯರ ಮದುವೆ ಮಾಡಿಕೊಂಡು ನಾಲ್ಕನೆಯವಳಿಗಾಗಿ ಹೊಂಚು ಹಾಕಿದ್ದ. ನಾನವಳ ನೋಡಿರಲಿಲ್ಲ. ಆಗ ಮೈಸೂರಿನಲ್ಲಿ ಬಿ.ಎ. ಓದುತ್ತಿದ್ದೆ. ನನ್ನ ಅಪ್ಪ ಅಮ್ಮರ ಬಗ್ಗೆ ಗೆಳೆಯರು ಕೇಳುವಾಗ ಅಪಮಾನದಿಂದ ತಲೆತಗ್ಗಿಸಿ ಒದ್ದೆಯಾದ ಕಣ್ಣುಗಳ ಮುಖವ ಮುಚ್ಚಿಕೊಳ್ಳುತ್ತಿದ್ದೆ. ಆಗ ನನ್ನ ತಲೆಗೂದಲು ಉದುರಲು ಆರಂಭವಾಗಿದ್ದವು. ಆ ವಿಷಯದ ಬಗ್ಗೆ ನಾನೆಂದೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ತಂದೆಯನ್ನು ಕೊಂದು ಬಿಡಬೇಕೆಂದು ವಿಪರೀತ ಕಲ್ಪನೆಯಲ್ಲಿ ಯೋಜನೆ ಹಾಕುತ್ತಿದ್ದೆ. ಅವನ ಶಕ್ತಿ ಸಾಮರ್ಥ್ಯಗಳ ಲೆಕ್ಕಿಸಿ ಹೇಗೆ ಒಬ್ಬನೇ ಮುಗಿಸಿ ಯಾರಿಗೂ ಕಾಣದಂತೆ ಮಾಯವಾಗಬಹುದು ಎಂದು ಖಿನ್ನನಾಗುತ್ತಿದ್ದೆ. ಒಮ್ಮೊಮ್ಮೆ ತಾಯ ನೆನೆದು ಮರೆಯಲ್ಲಿ ಅಳುತ್ತಿದ್ದೆ. ಆಗೆಲ್ಲ ನನ್ನ ವಿಕ್ಷಿಪ್ತ ಮನಸ್ಸನ್ನು ಹದ್ದು ಬಸ್ತಿಗೆ ತರುತ್ತಿದ್ದುದು ಮೈಸೂರು ಮಹರಾಜ ಕಾಲೇಜಿನ ಲೈಬ್ರರಿಯ ಅಪರೂಪದ ಪುಸ್ತಕಗಳು. ಅವುಗಳ ಪ್ರಪಂಚದಲ್ಲಿ ಮುಳುಗಿ ಹೊರ ಬಂದು ತಣ್ಣಗಾಗುತ್ತಿದ್ದೆ.

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ನಾನು ಹೈಸ್ಕೂಲಿಗೆ ಬಂದು ಚಿಕ್ಕಪ್ಪನ ಮನೆ ಸೇರಿದ ಮೇಲೆ ಹೊರ ಜಗತ್ತಿನ ಜೊತೆ ಮಾತು ಕಲಿಯಲೇ ಬೇಕಾಯಿತು. ಇಡೀ ಹಗಲೆಲ್ಲ ಶಾಲೆ, ಮೈದಾನ, ಆಟವೊ ಆಟ ಹತ್ತನೇ ತರಗತಿ ಸಕತ್ ಹುಡುಗಾಟ. ಕಲಿಯಲು ಆರಂಭಿಸಿದ್ದೆ ‘ಲವ್ ಲೆಟರ್ರ’.

ಕೊಲೆಗಾರನನ್ನು ಕೊಂದವನೂ ಕೊಲೆಗಾರನೇ ಆಗುತ್ತಾನೆ ಎಂದು ಆತ್ಮ ಮೆಲ್ಲಗೆ ಕನಸಿಗೆ ಬಂದು ಎಚ್ಚರಿಸಿತು. ಬೆವೆತಿದ್ದೆ. ಎದ್ದು ಕೂತು ಹೊರ ಬಂದು ಕಾರಿಡಾರಿನಲ್ಲಿ ಅಡ್ಡಾಡಿದೆ. ಆಗ ನಾನು ಮಹರಾಜ ಕಾಲೇಜಿನ ಮಹರಾಜ ಹಾಸ್ಟೆಲಿನಲ್ಲಿದ್ದೆ. ಎಂತಹ ವಿಸ್ಮಯ! ಎಲ್ಲಿದ್ದವನು ಎಲ್ಲಿಗೆ ಬಂದಿದ್ದೆನಲ್ಲಾ… ನನ್ನಪ್ಪನಿಗೆ ಬೇಕಿದ್ದುದು ಒಂದೇ ಗುರಿ… ಮೊದಲ ಹೆಂಡತಿಗೆ ಹುಟ್ಟಿದ ಗಂಡು ಮಕ್ಕಳಲ್ಲಿ ಮೊದಲಿಗನಾಗಿದ್ದ ನಾನು ಬರ್ಬರವಾಗಿ ಸಾಯಬೇಕೆಂದು. ‘ನೀನೆಲ್ಲೇ ಅವುಸ್ಕಂದು ಮಲ್ಗಿರ್ಲಾ… ನಿಂತಲೆ ಮ್ಯಾಲೆ ದಡಿಕಲ್ಲ ಎತ್ತಾಕಿ ಮಿದ್ಲೆ ಕಲಸ್ಕೋವಂಗೆ ಮಾಡ್ದೆ ಇದ್ರೆ ನಾನು ನಮ್ಮಪ್ಪುನ್ಗೆ ಉಡ್ಲೇಯಿಲ್ಲಾ ಅನ್ಕಲಾ… ಲೇ ನಿನ್ನ ಸೀಮೆ ಎಣ್ಣೆ ಸುರ್ದು ಸುಟ್ಟಾಕುದು ದೂರ ಇಲ್ಲಾಕಣ, ನಿನ್ನೆಣ ಉರಿಯೋದಾ ನಾನು ನೋಡ್ಬೇಕು ಕಲಾ ಮಂಗಾಡಳ್ಳಿಯವ್ನ ಮಚ್ಚಲ್ಲಿ ಕೊಚ್ಚಿ ಕೊಚ್ಚಿ ತುಂಡು ಮಾಡಿ ಕೊಂದ್ರಲ್ಲ ಹಂಗೆ ನಿನ್ನ ನಾನು ಕಡಿತಿನಿ ಕಲಾ… ನಿನ್ನೆಣವ ಪಲ್ಲಾ ಚೀಲ್ಕೆ ತುಂಬಿ ಬಾಯ್ಸಾಟ್ಟಿ ಕಲ್ಲಟ್ಟಿ ತೊರೆಗೆಸ್ದು ಮುಳುಗಿಸ್ತಿನಿ ಕಲಾ ಎಂದು ಎಷ್ಟೊಂದು ಸಲಾ ಜೀವ ಬೆದರಿಕೆ ಹಾಕಿ ಮುಗಿಸಿಬಿಡಲು ಕಾಯುತ್ತಿದ್ದನಲ್ಲ. ಆಗ ನನಗೆ ಏನೂ ತಿಳಿಯುತ್ತಿರಲಿಲ್ಲ. ಆ ಭಯಾನಕ ಮಾತುಗಳು ಕಿವಿ ಮೇಲೆ ಬಿದ್ದ ಕೂಡಲೇ ಉಚ್ಚೆ ಒಯ್ದುಕೊಳ್ಳುತ್ತಿದ್ದೆ. ಅಪ್ಪ ವಿಪರೀತ ಕುಡಿದು ಪೆಂಟೆಯಿಂದ ತಡವಾಗಿ ಬಂದು ಹಾಗೆ ಕೋಪತಾಪ ಹತಾಶೆಗಳ ತೋರಿ ಸುಸ್ತಾಗಿ ಮಲಗಿಬಿಡುತ್ತಿದ್ದ. ಆಗಲೂ ಕೇಳಿಕೊಳ್ಳುತ್ತಿದ್ದೆ… ನಮ್ಮಪ್ಪನಿಗೆ ನಾನು ಏನು ಅನ್ಯಾಯ ಮಾಡಿರುವೆ; ಯಾವ ತಪ್ಪೆಸೆಗಿರುವೆ; ಯಾಕೆ ನನ್ನ ಜೀವ ತಿನ್ನುತ್ತಾನೆ ಎಂದು ಮನದೊಳಗೇ ದುಖಿಃಸುತ್ತಾ ಕೇಳಿಕೊಳ್ಳುತ್ತಿದ್ದೆ. ನನ್ಗೆ ವುಟ್ಟಿಲ್ಲ ಕಲಾ ನೀನೂ ಯಾರ್ಗಮ್ಮಿ ಇವ್ನ ಯೆತ್ತಿರುವುದೂ, ಎಂದು ತಾಯಿಯ ತಲೆ ಮೇಲೆ ಬಲವಾಗಿ ಹೊಡೆದು ಕೇಳುತ್ತಿದ್ದ. ಹಲವು ಬಾರಿ ತಾಯಿ ತಲೆ ಸುತ್ತಿ ಬಂದು ಬಿದ್ದು ಹೋಗುತ್ತಿದ್ದಳು. ಅವಳ ಎದೆ ಮೇಲೆ ಕಾಲಿಟ್ಟು ತುಳಿಯುತ್ತಿದ್ದ. ನನ್ನ ಕರಳು ಕಿತ್ತು ಬಂದಂತಾಗುತ್ತಿತ್ತು.

ಅಂತಹ ವಿಕಾರ ತಂದೆ ನನ್ನ ತಾಯಿ ಸತ್ತ ಮೂರೇ ತಿಂಗಳಲ್ಲಿ ಇನ್ನೊಂದು ಮದುವೆಯಾಗಿದ್ದ. ನಾನಾಗ ಒಂಭತ್ತನೆ ತರಗತಿಯಲ್ಲಿದ್ದೆನೇನೊ .ಆ ಹಳ್ಳಿಯಲ್ಲಿ ಬದುಕಿದ್ದ ಕೊನೆಯ ದಿನಗಳು ಅವು. ಎಷ್ಟು ತೀವ್ರವಾಗಿ ರೋಸಿ ಹೋಗಿದ್ದೆ ಎಂದರೆ, ಮನದೊಳಗೆ ಅಪ್ಪನ ಪಿಶಾಚಿ ಯಾವತ್ತು ಕುಣಿದಾಡುತ್ತಿತ್ತು. ಅವನು ಸತ್ತು ಅವನ ಹೆಣ ನನ್ನ ಅಂತರಾಳದಲ್ಲಿ ತೇಲುತ್ತಿದೆ ಎನಿಸಿ ಅಪ್ಪನ ಮುಖವನ್ನು ಯಾವತ್ತು ನೋಡುತ್ತಿರಲಿಲ್ಲ. ಪ್ರತಿಯೊಂದು ದಿನವೂ ಬೇರೆ ಬೇರೆಯಾಗಿಯೇ ಕಾಣಿತ್ತಿದ್ದ ಅವನ ಶವವನ್ನು ಹೊತ್ತುಕೊಂಡು ನಡೆದಂತೆ ಕನಸು ಕಾಣುತ್ತಿದ್ದೆ. ಅವನ ಭೀತಿಯಲ್ಲಿ ನಿದ್ದೆ ಮರೀಚಿಕೆಯಂತಿತ್ತು. ನಿದ್ದೆಯಲ್ಲೂ ಎದ್ದು ನಡೆದಾಡಿದಂತೆ ಭಾಸವಾಗುತ್ತಿತ್ತು. ವಿಚಿತ್ರ ಕಲ್ಪನೆಗಳು ದಾಳಿ ಮಾಡುತ್ತಿದ್ದವು. ಆ ಕ್ಷುದ್ರ ಜಂತುವ ನಾನ್ಯಾಕೆ ಕೊಲ್ಲಬೇಕು? ತನ್ನನ್ನು ತಾನೆ ಅದಾಗಲೇ ಕೊಂದುಕೊಂಡಿರುವನಲ್ಲ ಎನಿಸಿ ಮನದಾಚೆ ಎಸೆದರೂ ಆ ಪಾಪಿ ಹೇಗೊ ಒಳಗೆ ನುಸುಳಿ ಬಂದು ಬಿಡುತ್ತಿದ್ದ. ತಾಯಿಯ ನೆನೆದ ಕೂಡಲೇ ಅವನ ಕೃತ್ಯಗಳೆಲ್ಲ ಸಾಲಾಗಿ ಬಂದೆ ಬರುತ್ತಿದ್ದವು. ಅಕ್ಕಾsss ಅಣ್ಣ ನಮಗ್ಯಾಕೆ ಹಿಂಗೆ ಬಡೀತಾನೆ; ನೀನೇನು ತಪ್ಪು ಮಾಡಿದ್ದೀಯೇ ಎಂದು ಒಂದು ದಿನ ನೋವು ತಿನ್ನುತ್ತಾ ಕೇಳಿದ್ದೆ ತಾಯಿಯ. ಒಂದು ಕ್ಷಣ ದಿಟ್ಟಿಸಿ ನೋಡಿದಳು. ಅಂತಹ ಒಂದು ಮಾತಾ ಯಾವತ್ತು ನಿರೀಕ್ಷಿಸಿರಲಿಲ್ಲ. ಅವಳ ಆ ನೋಟದಲ್ಲಿ ಎಂದೆಂದು ಮುಗಿಯದ ಮಾತುಗಳು ಕಣ್ಣಲ್ಲಿ ತುಳಿಕಿ ಬಂದವು. ಕೈಯಿಂದ ಒರೆಸಿದೆ. ವಿವರಣೆ ಬೇಕಿರಲಿಲ್ಲ. ಜೀವನದಲ್ಲಿ ನನ್ನ ತಾಯಿ ಎಷ್ಟೋ ಪ್ರಶ್ನೆಗಳಿಗೆ ಉತ್ತರವೇ ಗೊತ್ತಿಲ್ಲದೇ ಸತ್ತು ಹೋದಳು. ‘ಭಗವಂತಾ ಯಾಕಪ್ಪ ಇದೆಲ್ಲ ಇಂಗೆ’ ಎಂದು ಪ್ರತಿ ರಾತ್ರಿಯೂ ದೇವರಲ್ಲಿ ಕೇಳಿಯೇ ಕೇಳುತ್ತಿದ್ದಳು. ಅದಕ್ಕೆ ನನಗೆ ಈಗಲೂ ದೇವರ ಮೇಲೆ ಸಿಟ್ಟು ತಿರಸ್ಕಾರ.

‘ಆ ಹಂದಿಗೊಳ ಹರಾಜು ಹಾಕ್ದಂಗೆ ನಿನ್ನೂ ಹರಾಜು ಹಾಕುದ್ರೆ ಯೇನ್ ಮಾಡಿಯೇ’ ಎಂದು ತಾಯಿ ಕೇಳಿದಳು. ‘ತಪ್ಪಿಸ್ಕತಿನಿ’ ಎಂದು ಮುಗ್ದವಾಗಿ ಭರವಸೆ ಕೊಟ್ಟಿದ್ದೆ. ‘ತಪ್ಪಿಸ್ಗಂದಿಯಾ… ಆದದೆ ಬಿಟ್ಟನೇ ನಿಮ್ಮಪ್ಪ ನಿನ್ನ ಎಂದು ಒಳ ಹೋದ ಕಣ್ಣುಗಳ ಸಾಧ್ಯಂತೆ ಅರಳಿಸಿ ಕೇಳಿದಳು. ‘ಎಲ್ಲಾರ ದೂರ ನಿನ್ನ ಕರ್ಕಂದು ದೂರ ವೋಯ್ತಿನಲ್ಲ ಆಗ ಅದೆಂಗೆ ಬಂದಾನು’ ಎಂದಿದ್ದೆ. ತಾಯಿ ಕತ್ತೆತ್ತಿ ಅನಂತ ಆಕಾಶಕ್ಕೆ ಕಣ್ಣು ನೆಟ್ಟಂತೆ ದೀನವಾಗಿ ಪ್ರಾರ್ಥಿಸುವಂತೆ ಮೌನವಾಗಿದ್ದಳು. ಅಪ್ಪ ಕೂಗಿದ್ದ. ಬೆದರಿದ್ದೆ ‘ಜೋಪಾನ ಯಾವತ್ತು ಪ್ರಾಣಪಕ್ಷಿಯ ಮರೆಯಲ್ಲೆ ಇಟ್ಟುಕೊʼ ಎಂದಿದ್ದಳು. ಓಡಿ ಹೋಗಿ ಅಪ್ಪನ ಮುಂದೆ ಒಂದು ಅಳತೆಯ ದೂರದಲ್ಲಿ ನಿಂತಿದ್ದೆ. ಸಲುಗೆಯಿಂದ ಹತ್ತಿರ ಹೋಗುವಂತಿರಲಿಲ್ಲ. ಅಪ್ಪ ಯಾವುದಕ್ಕೆ ಸಜ್ಜಾಗಿ ನಿಂತಿದ್ದಾನೆ ಎಂಬುದ ಅರಿತೆ. ‘ಆ ಕೆಂಪುಂಜವ ಹಿಡ್ಕಂಡು ಬಾ’ ಎಂದಾದೇಶಿಸಿದ. ಜೂಜಿನ ಹುಂಜಗಳನ್ನು ದೊಡ್ಡ ಬಿದಿರಿನ ಪಂಜರದಲ್ಲಿ ಸಾಕುತ್ತಿದ್ದೆವು. ಬಾ ಎಂದು ಹತ್ತಿರ ಕರೆದು ಹಿಡಿದು ಕಂಕುಳಲ್ಲಿ ಮಗುವ ಅಪ್ಪಿ ಹಿಡಿದಂತೆ ಅಪ್ಪನನ್ನು ಹಿಂಬಾಲಿಸಿದೆ. ಎದೆ ಡವ ಡವ ಎನ್ನುತ್ತಿತ್ತು ಕಾಳಗದ ಹುಂಜ.. ಅಪ್ಪ ಅಂತಹ ಹತ್ತಾರು ಹುಂಜಗಳ ಸಾಕಿದ್ದ. ಅವನಿಗೆ ಅದು ಕೂಡ ಪ್ರತಿಷ್ಠೆಯ ಮೋಜಾಗಿತ್ತು. ನಮ್ಮೂರಿನ ಪಕ್ಕದಲ್ಲೆ ಹೊಂಗನೂರಿತ್ತು. ಮುಸಲ್ಮಾನರು ಅಲ್ಲಿ ಸಾಕಷ್ಟು ಸಂಖ್ಯೆಯಲ್ಲಿದ್ದರು. ಟಿಪ್ಪು ಕಾಲಕ್ಕೆ ಅವರೆಲ್ಲ ನಮ್ಮೂರಲ್ಲೆ ಇದ್ದರೂ ಸಾಮರಸ್ಯವಾಗದೇ ಆ ಹೊಂಗನೂರಿಗೆ ಇಡಿಯಾಗಿ ಹೊರಟು ಹೋಗಿದ್ದರು. ನಮ್ಮ ತಾತನ ಜೊತೆ ಚೆನ್ನಾಗಿದ್ದರು. ಅವರಿಗೆ ಕಾಳಗದ ಹುಂಜಗಳ ಆಟ ಬಹಳ ಇಷ್ಟವಾಗಿತ್ತು.

ಅಲ್ಲೊಂದು ದೊಡ್ಡ ತೆಂಗಿನ ತೋಟವಿತ್ತು. ಅಲ್ಲೊಂದು ವಿಶಾಲ ಕಣವಿತ್ತು; ಬೇಕಾದರೆ ಹುಂಜಗಳು ಕಾದಾಡುವ ರಣರಂಗ ಎನ್ನಿ. ಜನ ನೆರೆದಿದ್ದರು. ಅವರಲ್ಲಿ ಬಹುತೇಕರು ಜೂಜುದಾರರು ಸುತ್ತೇಳು ಊರುಗಳ ದೊಡ್ಡ ಗೌಡರು ಬರುತ್ತಿದ್ದರು. ಅವರಿಗೆ ಒಂದೇ ಗುರಿ; ಆ ಸಾಬರ ಹುಂಜಗಳ ಕತ್ತ ಕತ್ತರಿಸಬೇಕು ಎಂಬುದಾಗಿತ್ತು. ಯಾಕೆಂದು ನನಗಂತು ಆಗ ಗೊತ್ತಿರಲಿಲ್ಲ. ನಮ್ಮಪ್ಪ ಆ ಗೌಡರ ಪ್ರತಿನಿಧಿಯಾಗಿದ್ದ. ಬಲವಾದ ಕೆಂಪು ಹುಂಜ. ನನಗೆ ಪ್ರತಿಸಲವು ಹರಿವ ರಕ್ತವ ಕಂಡು ತಲೆ ಸುತ್ತು ಬರುತ್ತಿತ್ತು. ಗೆದ್ದ ಅಪ್ಪನ ಆ ಹುಂಜಗಳು ರಕ್ತಸಿಕ್ತವಾಗಿರುತ್ತಿದ್ದವು. ಗೆದ್ದೆ ಎಂಬ ಅಹಂನಲ್ಲಿ ಅಪ್ಪ ಬೀಗುತ್ತ ಮುಂದೆ ನಡೆವಾಗ ಹಿಂದೆ ನಾನು ಹೋರಾಡಿ ಅರೆ ಜೀವವಾಗಿದ್ದ ಹುಂಜವ ಹಿಡಿದುಕೊಂಡು ಮನೆ ತಲುಪುವಷ್ಟರಲ್ಲಿ ನಾನೂ ಕೂಡ ಅದರ ರಕ್ತದಲ್ಲಿ ಬೆರೆತವನಂತೆ ಕರೆಗಟ್ಟಿರುತ್ತಿದ್ದೆ. ಆ ಹುಂಜವ ಅಪ್ಪ ಆರೈಕೆ ಮಾಡಿ ಎಂತದೊ ಅರಿಶಿಣದ ಔಷಧ ಹಚ್ಚುತ್ತಿದ್ದ. ನನಗೊ; ನಾನೇ ಅಪ್ಪನ ಇಚ್ಛೆಯ ಮೇರೆಗೆ ಆ ಹುಂಜದಂತೆ ಹೋರಾಡಿ ಸಾವಿನಿಂದ ತಪ್ಪಿಸಿಕೊಂಡಿರುವೆ ಎಂಬಂತೆ ಭಾವಿಸುತ್ತಿದ್ದೆ. ಅಪ್ಪ ನನ್ನತ್ತ ತಿರುಗಿಯೂ ನೋಡುತ್ತಿರಲಿಲ್ಲ. ಆ ಹುಂಜಕ್ಕಾದ ಗಾಯಗಳು ನನಗೂ ಆಗಿವೆ ಎಂದು ಬಾದೆ ಪಡುತ್ತಿದ್ದೆ. ನಿಜಾ; ಚಾಕುವಿನಿಂದ ಇರಿಸಿಕೊಂಡಿದ್ದ ಆ ಹುಂಜ ಸುಧಾರಿಸಿಕೊಳ್ಳುತ್ತ ನನ್ನತ್ತಲೇ ವಿಶೇಷವಾಗಿ ನೋಡುತ್ತಿತ್ತು.

ಕಾಳಗದ ಆ ಹುಂಜಗಳ ಕಾಲಿಗೆ ಚಿಕ್ಕದಾದ ಚಾಕುವನ್ನು ಬಲವಾಗಿ ಕಟ್ಟುತ್ತಿದ್ದರು. ಸಣ್ಣಪುಟ್ಟ ಹುಂಜಗಳಲ್ಲ ಅವು. ಜೂಜಿಗೆಂದೇ ಹೋರಾಡಿ ಸಾಯಲೆಂದೇ ಬೆಳೆಸಿ ಪಳಗಿಸಿದ್ದ ಹುಂಜಗಳು ಅವು. ಬಹಳ ಎತ್ತರಕ್ಕಿದ್ದವು. ರೆಕ್ಕೆಯಗಲಿಸಿ ನಿಂತರೆ ಚಾಕು ಕಟ್ಟಿದ ಹುಂಜಗಳ ಮುಂದೆ ನಿಲ್ಲಲು ಹೆದರುತ್ತಿದ್ದರು. ದುಂಡಾದ ಆ ಕಣದ ಸುತ್ತ ಜೂಜುಕೋರರು ಹುಂಜಗಳ ನೋಡಿ ಯಾವುದು ಗೆಲ್ಲಬಹುದು ಎಂದು ಅಂದಾಜು ಮಾಡಿ ಜೂಜಾಡುತ್ತಿದ್ದರು. ಅಪ್ಪ ಸೋಲುವವನಲ್ಲ. ಮೀಸೆ ತಿರುವುತ್ತಿದ್ದ. ಹುಂಜದ ಕುತ್ತಿಗೆಯ ಸವರಿ ಗೆಲ್ಲಲೇ ಬೇಕು ಎಂದು ಮುಟ್ಟಿ ಮುಟ್ಟಿ ಹೇಳುತ್ತಿದ್ದ. ಆ ಬಡಪಾಯಿ ಸಾಬರು ಯಾವಾಗಲೂ ಸೋಲುತ್ತಿದ್ದರು. ಇದು ಹೇಗೆ ಸಾಧ್ಯ ಎಂದು ಯೋಚಿಸಿ ಈ ಬಾರಿ ಹೊಸ ತಳಿಯ ಹುಂಜವ ತಂದಿದ್ದರು. ಅಪ್ಪ ಕಾಗೆಯ ತಳಿ ತಂದವರೆ ಎಂದು ಹಂಗಿಸುತ್ತಿದ್ದ. ಕೋಳಿ ಹುಂಜಗಳ ಆ ಆಟಕ್ಕೂ ಒಬ್ಬ ರೆಫರಿ ಇದ್ದ. ಕಾಳಗದ ನಿಯಮಾನುಸಾರ ಆಟ ಶುರುವಾಯಿತು. ಒಂದಳತೆಯ ದೂರದಲ್ಲಿ ಅವರವರು ತಮ್ಮ ಹುಂಜಗಳ ಹಿಡಿದು ಬಿಟ್ಟು ಹಿಂದೆ ಸರಿಯಬೇಕು. ಮುಂದಿನದು ಕಾಳಗದ ಹುಂಜಗಳ ಸಾವು ಬದುಕಿನ ಹೋರಾಟ. ನಾನು ನೋಡಿದೆ ಅಪ್ಪ ಹೇಳಿದ ಆ ಕಾಗೆ ತಳಿಯ ಹುಂಜವ. ಅಪ್ಪನ ಉಡಾಫೆಯ ಪರಾಕಾಷ್ಟೆ ಅದು. ಅದು ರಣಹದ್ದುಗಳಿಂದ ‘ಕ್ರಾಸ್’ ಆಗಿದ್ದ ತಳಿಯ ಹುಂಜ.
ಉದ್ದವಾದ ಬಲಿಷ್ಟ ಕಾಲುಗಳು. ದೇಹವನ್ನು ರಕ್ಷಿಸಿಕೊಳ್ಳುವ ವಿಶಾಲ ರೆಕ್ಕೆಗಳು. ಅದರ ಕೊಕ್ಕೋ ರಣ ಹದ್ದಿನ ಹರಿತವಾದ ದಪ್ಪ ಕೊಕ್ಕಿನಂತೆಯೇ ಇತ್ತು. ಉಗುರುಗಳಂತೂ ನೀಳವಾಗಿ ಚೂಪಾಗಿ ಚಾಚಿಕೊಂಡಿದ್ದವು. ಅದಕ್ಕೆ ಚಾಕು ಕಟ್ಟುವ ಅವಶ್ಯಕತೆಯೇ ಇರಲಿಲ್ಲ. ರೋಷದಿಂದ ನೆಗೆದು ಎರಡೂ ಕಾಲಿಂದ ತಿವಿದರೆ; ಚಾಕು ಎದೆಗೆ ನಾಟಿ ಆ ಕ್ಷಣವೇ ಎದುರಾಳಿ ಹುಂಜದ ಕೊರಳೇ ಹರಿದು ಹೋಗುತ್ತಿತ್ತು. ಕೆಲವೊಮ್ಮೆ ರೆಕ್ಕೆಯೇ ತುಂಡಾಗಿ; ಕುತ್ತಿಗೆಯೇ ಬೇರ್ಪಟ್ಟು ರಕ್ತ ಚಿಲ್ಲನೆ ಚಿಮ್ಮುತ್ತಿತ್ತು. ಅಹಾ! ಆಗ ಜೂಜುದಾರರ ಎಷ್ಟೊಂದು ಉದ್ಘಾರ… ಮನುಷ್ಯರ ಆನಂದ ಮಾರ್ಗಗಳನ್ನು ಅರ್ಥಮಾಡಿಕೊಳ್ಳುವುದು ಆ ನತದೃಷ್ಟ ಹುಂಜಗಳಿಗೆ ಹೇಗೆ ತಾನೆ ಗೊತ್ತಾಗುವುದು… ರೆಫರಿಯ ಕೈಯಲ್ಲಿ ಉದ್ದವಾದ ಬಿದಿರಿನ ಕೋಲು ಇತ್ತು. ಗೆದ್ದ ಹುಂಜದ ದಾಳಿಯನ್ನು ತಡೆಯಲು ಅದು ಬೇಕಿತ್ತು.

ಅದರ ಮೂಲಕ ಆ ಹುಂಜವ ನಿಯಂತ್ರಿಸಿ ಅದರ ಯಜಮಾನ ಹಿಡಿದುಕೊಳ್ಳುತ್ತಿದ್ದ. ಕಾಳಗದ ಅಂತಹ ಹುಂಜಗಳ ಸಲೀಸಾಗಿ ಕೈಹಾಕಿ ಹಿಡಿಯುವಂತಿರಲಿಲ್ಲ. ಅಪ್ಪ ಠೇಂಕಾರ ಮಾಡುತ್ತಿದ್ದ. ಆ ಹುಂಜ ಕಾಲು ಕೆರೆಯುತ್ತಿದ್ದ ರೀತಿಯಲ್ಲೇ ಮುಂದೇನಾಗುವುದು ಎಂಬ ಅಂದಾಜಾಗಿತ್ತು. ಆ ಮುಸಲ್ಮಾನನೂ ಅಪ್ಪನೂ ಮುಖಾಮುಖ ನೋಡಿಕೊಂಡರು. ಆತ ನಕ್ಕ; ಅಪ್ಪ ಕೆಂಗಣ್ಣು ಬಿಟ್ಟ. ಬಹಳ ಜನ ಸೇರಿದ್ದರು. ಆ ಕಾಳಗಕ್ಕೆ ಅಪ್ಪನೇ ನನ್ನನ್ನು ಜೂಜಿಗೆ ಬಿಟ್ಟಿರುವಂತೆ ಭಯವಾಯಿತು. ಹೋರಾಟ ಆರಂಭವಾಯಿತು. ಅಪ್ಪನ ಕೆಂಪು ಹುಂಜ ಆ ಕಪ್ಪನೆಯ ರಣಹದ್ದಿನಂತಹ ಹುಂಜವ ಕಂಡು ಅಧೀರವಾಗಿದೆ ಎಂಬುದನ್ನು ಗ್ರಹಿಸಿದೆ. ಬಿಟ್ಟರು ಎದುರಾ ಬದುರಾ ಹುಂಜಗಳ. ಆ ರಣಹುಂಜ ಅಬ್ಬರಿಸಿಕೊಂಡು ಬಂತು. ಅಪ್ಪನ ಕೆಂಪು ಹುಂಜ ಹೋರಾಡುವುದಿರಲೀ… ತಪ್ಪಿಸಿಕೊಳ್ಳಲು ದಾರಿ ಹುಡುಕಿ ಅತ್ತ ಓಡಿ ಹೋಗಿ ಜನರ ಕಾಲ ನಡುವೆ ನುಸುಳಿ ಹೊರಗೆ ಹೋಯಿತು. ಆ ಸಾಬರ ಹುಂಜ ಅಟ್ಟಿಸಿಕೊಂಡು ನೆಗೆಯುತ್ತಿತ್ತು. ರೆಫರಿ ಘೋಷಿಸಿದ; ‘ಮೊಗಳ್ಳಿಯ ಹುಂಜ ಖತಂ ಆಯ್ತು, ಹೊಂಗನೂರಿನ ಹುಂಜ ಗೆದ್ದುಬಿಟ್ಟಿತು’ ಸಾಬರ ಆ ಗೆಲುವನ್ನು ರೆಫರಿ ಅಸಮಧಾನದಲ್ಲಿ ಹೇಳಿದ್ದ. ಅಪ್ಪನಿಗೆ ಆಗಿದ್ದ ಅಪಮಾನದ ಮಟ್ಟವನ್ನು ಅಳೆಯಲು ಸಾಧ್ಯವಿರಲಿಲ್ಲ. ಎರಡೂ ಹುಂಜಗಳ ಹಿಡಿದರು. ಚಾಕು ಬಿಚ್ಚಿದರು. ರಣರಂಗ ಖಾಲಿ ಖಾಲಿಯಾಗಿ ಎಲ್ಲರೂ ಅವರವರ ದಾರಿಯತ್ತ ಹೊರಟಿದ್ದರು. ಸಾಬರು ಆ ದೊಡ್ಡ ಗೆಲುವಿನಿಂದ ತಾವೇ ಹೆದರಿ; ಇದರ ಪರಿಣಾಮ ಏನಾಗುವುದೊ ಎಂದು ಆತಂಕಕ್ಕೆ ಒಳಗಾಗಿದ್ದರು.

ಈ ಸೋಲಿನಿಂದ ಎಲ್ಲಿ ಅಪ್ಪ ನನ್ನ ಕತ್ತು ಮುರಿದು ಬಿಡುವನೊ ಎಂದು ಆ ಹುಂಜವ ಹಿಡಿದು ಹಿಂಬಾಲಿಸಿದೆ. ಸದ್ಯ ಬದುಕಿದೆ ಎಂಬಂತೆ ನನ್ನ ಅಂಗಿಯ ಗುಂಡಿಯ ಕುಟುಕಿ ಮಾತಿಗೆಳೆಯುತ್ತಿತ್ತು. ನಾನು ಜೋರಾಗಿ ಉಸಿರು ಬಿಡಲೂ ಆಗದೆ ಕಂಪಿಸುತ್ತಿದ್ದೆ. ಹತ್ತಿರವಾಯಿತು ಮನೆ. ಮುಂದೇನೊ ಎಂದು ಏನೇನೊ ಕಲ್ಪನೆ. ತಾಯಿಗೆ ಮೊದಲು ಹೇಳಿ ಎಚ್ಚರವಹಿಸಬೇಕು ಎಂದುಕೊಂಡೆ. ಮನೆ ಮುಂದೆ ನಿಂತೆ. ಅಷ್ಟೊತ್ತಿಗಾಗಲೆ ವಿಷಯ ಗೊತ್ತಾಗಿ ಅಪ್ಪನ ಅಭಿಮಾನಿಗಳು ಸಪ್ಪೆ ಮೊರೆಯಲ್ಲಿ ಸ್ವಾಗತಿಸಿದರು. ‘ಇಲ್ಲೇ ನಿಂತಿರು’ ಎಂದು ಮನೆಯ ಒಳಕ್ಕೆ ರೋಷದಿಂದ ಹೋದ ಬಾಗಿಲ ನಿಲಕ್ಕೆ ಸಿಕ್ಕಿಸಿದ್ದ ಕುಡುಲ ಚರಕ್ಕನೆ ಎಳೆದು ತಂದ. ತಾಯಿ ಹಿಂದೆ ಬಂದು ನಿಂತಿದ್ದಳು. ಒಂದು ಕೈ ನೋಡೇ ಬಿಡುವಾ ಎಂದು. ಮುಂಬಾಗಿಲ ಹೊಸಿಲಲ್ಲಿ ನಿಂತು ಅಪ್ಪ ಕರೆದ. ಗೊತ್ತಾಗಿತ್ತು ಅಪ್ಪ ಏನು ಮಾಡುವನೆಂದು. ಹುಂಜದಂತೆ ಓಡಿ ಹೋಗಿದ್ದರೆ ಅವನು ಹಿಂಬಾಲಿಸಿ ಬಂದು ನನ್ನನ್ನು ಹಿಡಿದೇ ಹಿಡಿಯುತ್ತಿದ್ದ. ‘ಬ್ಯಾಡ ಅಣ್ಣಾ’ ಎಂದೆ.’ ‘ಇಡ್ಕ ಬಾರಲೇ’ ಎಂದಬ್ಬರಿಸಿದ. ಹೊಸಿಲ ಮೇಲೆ ಅದರ ಕತ್ತ ಇಡು ಎಂದ. ಇಟ್ಟೆ ಉಬ್ಬಿದ ನನ್ನ ಕೊರಳ ದುಃಖವ ತಡೆಯಲಾರದೆ ಬಿಕ್ಕಳಿಸುತ್ತ. ಕಚಕ್ಕನೆ ಕಡಿದ ಅದರ ಕತ್ತ. ಪಿಲ್ಲನೆ ಚಿಮ್ಮಿತು ನೆತ್ತರು. ಹಾss ಎಂದು ಭೀತಿಯಿಂದ ಕೈ ಬಿಟ್ಟಿದ್ದೆ. ಅದರ ಕತ್ತು ಅತ್ತ ಬಿದ್ದಿತ್ತು. ವದರಾಡುತ್ತಿತ್ತು ಅದರ ದೇಹ. ಅಂಟಿಕೊಂಡಿತ್ತು ನನ್ನ ಕೆನ್ನೆಗೂ ಅದರ ರಕ್ತ. ತಾಯಿ ಅತ್ತ ಮರೆಯಾದಳು. ಆ ಹುಂಜ ತಣ್ಣಗಾಗುತ್ತಿತ್ತು. ಜನ ನೋಡುತ್ತಿದ್ದರು. ಅದರ ರೆಕ್ಕೆ ಹಿಡಿದು ಬೀದಿಗೆ ಎಸೆದು; ‘ಎತ್ಕಂಡೋಗಿ ತಿನ್ನಿ’ ಇದಾ ಎಂದು ಎತ್ತಲೊ ಹೊರಟು ಹೋಗಿದ್ದ. ಅಜ್ಜಿ ಬಂದು ಹೊಸಿಲ ತೊಳೆದಿದ್ದಳು. ಯಾರೊ ಆ ಹುಂಜವ ಎತ್ತಿಕೊಂಡು ಹೋಗಿದ್ದರು.


ಅಪ್ಪನ ವರ್ತನೆಯೇ ಅಂತಾದ್ದು. ಬಿಕ್ಕಿ ಬಿಕ್ಕಿ ಅತ್ತೇ ತಾಯ ಮುಂದೆ. ತಲೆಸವರುತ್ತ ಸಂತೈಸುತ್ತಿದ್ದಳು. ಆ ಕೆಂಪು ಹುಂಜವ ಹಿಡಿದು ಹೋಗುವ ಮುನ್ನ ತಾಯ ಕೇಳಿದ್ದ ಪ್ರಶ್ನೆ ನೆನಪಾಯಿತು. ಜೋಪಾನ ನಿನ್ನ ಪ್ರಾಣ ಪಕ್ಷಿಯ ಯಾವತ್ತೂ ಬಚ್ಚಿಡು ಎಂದಿದ್ದಳಲ್ಲಾ… ಎಂದು ಏನೊ ಊಹಿಸಿದೆ. ನೆತ್ತರ ಒಗಟುಗಳನ್ನು ಬಿಡಿಸುವುದು ಕಷ್ಟ..