ಕರ್ನಾಟಕ ಸರಕಾರವು ೧೯೭೬ರಲ್ಲಿ ಪರಿಶಿಷ್ಟ ಜಾತಿ, ಪಂಗಡದ ಅಮೆಂಡ್‌ಮೆಂಟನ್ನು ಪಾಸು ಮಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ ‘ಗಂಟಿಚೋರ್’ ಹೆಸರು ಮಾತ್ರ ಸೇರಿ ಅದರ ಜತೆ ಇದ್ದ ಸಮಾನಾಂತರ ಪದಗಳನ್ನು ಕೈಬಿಡಲಾಯಿತು. ಈ ಪಟ್ಟಿಯು ಗಂಟಿಚೋರ್ ಸಮುದಾಯಕ್ಕೆ ಬಿಕ್ಕಟ್ಟನ್ನು ತಂದಿಟ್ಟಿತು. ಕಾರಣ ಒಂದೇ ಸಮಾನಾಂತರ ಪದಗಳಾದ ಭಾಮ್ಟಾ, ಉಚಲ್ಯ, ವಡ್ಡರ್, ತುಡುಗವಡ್ಡರ್, ಗಿರಣಿವಡ್ಡರ್, ಠಕಾರಿ, ಪಾತ್ರೂಟ್ ಹೊರಗುಳಿದವು. ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯಲ್ಲಿ ಹೊಸ ಬರಹ   

ಗಂಟಿಚೋರ್, ಭಾಮ್ಟಾ, ಗಿರಣಿವಡ್ಡರ್, ತುಡುಗವಡ್ಡರ್, ಕಳ್ಳವಡ್ಡರ್, ಪಾತ್ರೂಟ್, ಠಕಾರಿ, ಉಚಲ್ಯ, ವಡಾರಿ, ವಡ್ಡರ್ ಇವೆಲ್ಲಾ ಒಂದೇ ಸಮುದಾಯದ ಹೆಸರುಗಳು ಮತ್ತು ಸಮಾನಾಂತರ ಪದಗಳು. ಇವರೆಲ್ಲಾ ಬೇರೆ ಬೇರೆ ಉದ್ಯೋಗಗಳನ್ನು ಕೈಗೊಂಡ ಕಾರಣಕ್ಕೆ ಇದಕ್ಕೆ ಪೂರಕವಾಗಿ ಈ ಹೆಸರುಗಳು ಬಂದಿವೆ. ಅಂತೆಯೇ ಇವರು ಬಾಂಬೆ ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದರು. ಅಂತೆಯೇ ಭಾರತದ ಇತರೆ ರಾಜ್ಯಗಳಲ್ಲೂ ನೆಲೆಸಿದ್ದಾರೆ. ಈ ಸಂಗತಿಯನ್ನು 1901ರಲ್ಲಿ ಎಂ.ಕೆನಡಿ ಅವರು ತಮ್ಮ ಕೃತಿಯಲ್ಲಿ ವಿಶ್ಲೇಷಿಸಿದ್ದಾರೆ.

ಗಂಟಿಚೋರ್ ಸಮುದಾಯವು ಹಿಂದೆ ಹೊಟ್ಟೆಪಾಡಿಗಾಗಿ ವಿವಿಧ ಬಗೆಯ ಕಳ್ಳತನಗಳನ್ನು ಮಾಡುತ್ತಿತ್ತು. ಹೀಗಾಗಿ ಈ ಸಮುದಾಯವನ್ನು ಕ್ರಿಮಿನಲ್ ಟ್ರೈಬ್ ಎಂತಲೂ, ಬ್ಯಾಕ್‌ವರ್ಡ್ ಟ್ರೈಬ್ ಎಂತಲೂ, ಡಿ ನೋಟಿಫೈಡ್ ಟ್ರೈಬ್ ಎಂತಲೂ ಬ್ರಿಟಿಷ್ ಸರಕಾರ ಮತ್ತು ಭಾರತ ಸರಕಾರವು ಬೇರೆ ಬೇರೆ ನೆಲೆಗಳಲ್ಲಿ ಗುರುತಿಸಿದೆ. ಬ್ರಿಟಿಷ್ ಸರಕಾರವು ಈ ಸಮುದಾಯವನ್ನು ಸುಧಾರಿಸಲು ಸೆಟ್ಲ್‍ಮೆಂಟುಗಳನ್ನು ರಚಿಸಿ ಅವರನ್ನು ಅಲ್ಲಿಟ್ಟು ಅವರನ್ನು ಸುಧಾರಿಸಲು ಪ್ರಯತ್ನಿಸಿತು.

ಸ್ವಾತಂತ್ರ್ಯಾನಂತರ 1950ರ ಅಮೆಂಡ್‍ಮೆಂಟನ್ನು ಸರಕಾರ ಪಾಸು ಮಾಡಿತು. ಇದರಲ್ಲಿ ಸಮುದಾಯಗಳನ್ನು ಪರಿಶಿಷ್ಟ ಜಾತಿ, ಪಂಗಡ, ಇತರೆ ಹಿಂದುಳಿದ ಜಾತಿಗಳೆಂದು ಮೂರು ಗುಂಪುಗಳನ್ನಾಗಿ ಮಾಡಲಾಯಿತು. ಬಾಂಬೆ ಸರಕಾರವು ಪ್ರಕಟಿಸಿದ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಯಲ್ಲಿ 36, ಪಂಗಡದಲ್ಲಿ 24, ಇತರೆ ಹಿಂದುಳಿದ ಜಾತಿಗಳಲ್ಲಿ 160 ಸಮುದಾಯಗಳನ್ನು ಸೇರಿಸಲಾಯಿತು. ಆಗ ಗಂಟಿಚೋರ್ ಮತ್ತು ಅದರ ಸಮಾನಾಂತರ ಪದಗಳಾದ ಭಾಮ್ಟಾ, ಠಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗುವಡ್ಡರ್, ಪಾತ್ರೂಟ್‍ನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಸೇರಿಸಿತು. 1950ರಲ್ಲಿ ಬೆಳಗಾಂವ, ದಾರವಾಡ, ಕಾರವಾರ, ಬಿಜಾಪುರಗಳು ಬಾಂಬೆ ಸ್ಟೇಟ್‍ನ ವ್ಯಾಪ್ತಿಗೆ ಬರುತ್ತಿದ್ದವು. 1956ರ ಏಕೀಕರಣದ ನಂತರ ಇವು ಕರ್ನಾಟಕಕ್ಕೆ ಸೇರಿದವು.

ನಂತರದಲ್ಲಿ ಇತರೆ ಹಿಂದುಳಿದ ಜಾತಿ ಪಟ್ಟಿಯ ಸಮುದಾಯಗಳನ್ನು ವರ್ಗೀಕರಿಸಿದ ಬಾಂಬೆ ಸರಕಾರವು ಡಿನೋಟಿಫೈಡ್ ಟ್ರೈಬ್ಸ್, ನೊಮ್ಯಾಡಿಕ್ ಟ್ರೈಬ್ಸ್, ಸೆಮಿ ನೊಮ್ಯಾಡಿಕ್ ಟ್ರೈಬ್ಸ್, ಬ್ಯಾಕ್‍ವರ್ಡ್ ಟ್ರೈಬ್ಸ್ ಎಂದು ವಿಭಾಗಿಸಲಾಯಿತು. ಇದೇ ಪಟ್ಟಿಯನ್ನು ಮೈಸೂರ್ ಸ್ಟೇಟ್ ಅನುಮೋದಿಸಿ ಪ್ರಕಟಿಸಿತು. ಇದರಲ್ಲಿ ಭಾಮ್ಟಾ, ಗಂಟಿಚೋರ್, ಉಚಲ್ಯ, ವಡ್ಡರ್, ತುಡುಗವಡ್ಡರ್, ಗಿರಣಿವಡ್ಡರ್, ಠಕಾರಿ ಒಂದೇ ಸಮಾನಾಂತರ ಪದದ ಸಮುದಾಯವನ್ನು ಡಿನೋಟಿಫೈಡ್ ಟ್ರೈಬ್ಸ್ ಪಟ್ಟಿಯಲ್ಲಿ ಸೇರಿಸಲಾಯಿತು. ಇದರಲ್ಲಿ ಪಾತ್ರೂಟ್ ಒಂದನ್ನು ಕೈಬಿಡಲಾಯಿತು.

ಮುಂದುವರಿದು 1975ರಲ್ಲಿ ಕರ್ನಾಟಕ ಸರಕಾರದ ಮೊದಲ ಹಿಂದುಳಿದ ವರ್ಗಗಳ ಆಯೋಗವು ಹಿಂದುಳಿದ ವರ್ಗಗಳನ್ನು ಮೀಸಲಾತಿಯ ಕಾರಣಕ್ಕೆ ಸಂವಿಧಾನದ 16(4)ರ ವಿಧಿಯಂತೆ ವರ್ಗಾವಣೆ ಮಾಡಿತು. ಹೀಗೆ ವಿಭಾಗಿಸಿದಾಗ ಹಿಂದುಳಿದ ಬುಡಕಟ್ಟುಗಳ ಪಟ್ಟಿಯಲ್ಲಿ ಗಂಟಿಚೋರ್, ಉಚಲ್ಯಾ, ಭಾಮ್ಟಾ, ಠಕಾರಿ, ಗಿರಣಿವಡ್ಡರ್, ತುಡುಗುವಡ್ಡರ್ ಪದಗಳನ್ನು ಒಂದೇ ಗುಂಪಿಗೆ ಸೇರಿಸಿತ್ತು. ಇಲ್ಲಿಯೂ ಪಾತ್ರೂಟ್ ಒಂದನ್ನು ಕೈಬಿಡಲಾಯಿತು.

ಹೀಗಿರುವಾಗ ಕರ್ನಾಟಕ ಸರಕಾರವು 1976ರಲ್ಲಿ ಪರಿಶಿಷ್ಟ ಜಾತಿ, ಪಂಗಡದ ಅಮೆಂಡ್‍ಮೆಂಟನ್ನು ಪಾಸು ಮಾಡಿ ಇದರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ ‘ಗಂಟಿಚೋರ್’ ಹೆಸರು ಮಾತ್ರ ಸೇರಿ ಅದರ ಜತೆ ಇದ್ದ ಸಮಾನಾಂತರ ಪದಗಳನ್ನು ಕೈಬಿಡಲಾಯಿತು. ಈ ಪಟ್ಟಿಯು ಗಂಟಿಚೋರ್ ಸಮುದಾಯಕ್ಕೆ ಬಿಕ್ಕಟ್ಟನ್ನು ತಂದಿಟ್ಟಿತು. ಕಾರಣ ಒಂದೇ ಸಮಾನಾಂತರ ಪದಗಳಾದ ಭಾಮ್ಟಾ, ಉಚಲ್ಯ, ವಡ್ಡರ್, ತುಡುಗವಡ್ಡರ್, ಗಿರಣಿವಡ್ಡರ್, ಠಕಾರಿ, ಪಾತ್ರೂಟ್ ಹೊರಗುಳಿದವು.

ಮುಂದೆ ಕರ್ನಾಟಕ ಸರಕಾರದ ಸಮಾಜಕಲ್ಯಾಣ ಸಚಿವಾಲಯವು 1986ರಲ್ಲಿ ಮೀಸಲಾತಿಯ ಕಾರಣಕ್ಕೆ ಸಂವಿಧಾನದ 16(4)ರ ವಿಧಿಯಂತೆ ಹಿಂದುಳಿದ ಜಾತಿಗಳನ್ನು ವರ್ಗಗಳನ್ನಾಗಿಸಿ ಹೊಸ ಬಗೆಯ ವಿಭಾಗ ಮಾಡಿತು. ಇದರಲ್ಲಿ ಇಂದುಳಿದ ವರ್ಗಗಳನ್ನು ಎ.ಬಿ.ಸಿ.ಡಿ.ಇ. ಎಂದು ವಿಭಾಗಿಸಿತು. ಈ ಪಟ್ಟಿಯಲ್ಲಿ ಹಿಂದುಳಿದ ವರ್ಗದ ‘ಎ’ ಗುಂಪಿನಲ್ಲಿ ಭಾಮ್ಟಾ, ಠಕಾರಿ, ಉಚಲ್ಯಾ ಒಂದು ಗುಂಪಾಗಿಯೂ, ವಡ್ಡರ್, ಬೋವಿ ಜಾತಿಯ ಸಮಾನಾಂತರ ಪದಗಳಾಗಿ ಗಿರಣಿವಡ್ಡರ್, ತುಡುಗುವಡ್ಡರ್ ಪದಗಳನ್ನು ಸೇರಿಸಿತು. ಇಲ್ಲಿ ಸ್ಪಷ್ಟವಾಗಿ ‘ಗಂಟಿಚೋರ್’ನ್ನು ಒಂದು ಪ್ರತ್ಯೇಕ ಸಮುದಾಯದಂತೆ ಸಂಬಂಧ ಕತ್ತರಿಸಿತು. ಇಲ್ಲಿಯೂ ಪಾತ್ರೂಟ್ ದಾಖಲಾಗಲಿಲ್ಲ.

ಈ ಸಂದರ್ಭದಲ್ಲಿ ಭಾರತ ಸರಕಾರದ ‘ಮಿನಿಸ್ಟ್ರಿ ಆಪ್ ಹೋಮ್ ಅಫೇರ್ಸ್, 1979ರ ಒಂದು ಪತ್ರ ಬಂಜಾರಾ, ಭೋವಿ, ಕೊರಚ, ಕೊರಮ ಈ ನಾಲ್ಕು ಜಾತಿಯ ಸಮಾನಾಂತರ ಪದಗಳನ್ನು ಅನುಮೋದಿಸಿತ್ತು. ಈ ಅನುಮೋದನೆಯಲ್ಲಿ ಭೋವಿಗೆ ಸಮಾನಾಂತರ ಪದಗಳಾಗಿ ಓಡ್, ಒಡ್ಡೆ, ವಡ್ಡರ್, ವೊಡ್ಡರ್, ಓಡ್ಡರ್, ಒಡ್ಡರ್ ಇರುವುದಾಗಿಯೂ ಸೂಚಿಸಿದೆ. ಇಲ್ಲಿ ಸ್ಪಷ್ಟವಾಗಿ ಗಿರಣಿವಡ್ಡರ್, ತುಡುಗು ವಡ್ಡರ್ ಜಾತಿಯು ಬೋವಿಗೆ ಸಮಾನಾಂತರ ಪದವಲ್ಲ ಎನ್ನುವುದನ್ನು ಸ್ಪಷ್ಟವಾಗಿ ಸೂಚಿಸುತ್ತಿದೆ. ಆದರೂ ಕರ್ನಾಟಕದಲ್ಲಿ ಬೋವಿಯ ಸಮಾನಾಂತರ ಪದವಾಗಿ ಗಿರಣಿವಡ್ಡರ್, ತುಡುಗುವಡ್ಡರ್ ಪದಗಳನ್ನು ಗುರುತಿಸಲಾಗುತ್ತಿದೆ.

ಇಂತಹ ಸ್ಪಷ್ಟ ನಿರ್ದೇಶನವಿದ್ದಾಗಲೂ 1994ರಲ್ಲಿ ಕರ್ನಾಟಕ ಸರಕಾರ ಮಾಡಿದ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಭಾಮ್ಟಾ, ಠಕಾರಿ, ಉಚಲ್ಯಾಗಳನ್ನು ಒಂದು ಗುಂಪಾಗಿಯೂ, ಬೋವಿ ಅಥವಾ ಬೋಯಿಯ ಸಮಾನಾಂತರ ಗುಂಪಾಗಿ ಗಿರಣಿವಡ್ಡರ್ ತುಡುಗುವಡ್ಡರ್ ಪದವನ್ನಾಗಿಯೂ ಸೂಚಿಸಲಾಗಿದೆ. ಈ ಎಲ್ಲಾ ಕಾರಣದಿಂದ ಆರಂಭದಲ್ಲಿ ಗಂಟಿಚೋರ್ ಸಮುದಾಯದ ಸಮಾನಾಂತರ ಪದಗಳಾಗಿದ್ದ ಭಾಮ್ಟಾ, ಠಕಾರಿ, ಉಚಲ್ಯಾ, ಗಿರಣಿವಡ್ಡರ್, ತುಡುಗುವಡ್ಡರ್, ಪಾತ್ರೂಟ್ ಇವುಗಳನ್ನು ಹಿಂದುಳಿದ ವರ್ಗಗಳಿಂದ ಬಿಡುಗಡೆ ಮಾಡಿ ಪರಿಶಿಷ್ಟ ಜಾತಿಯಲ್ಲಿ ಸೇರ್ಪಡೆ ಮಾಡಬೇಕಾಗಿದೆ.

ಗಂಟಿಚೋರ್ ಸಮುದಾಯವು ಹಿಂದೆ ಹೊಟ್ಟೆಪಾಡಿಗಾಗಿ ವಿವಿಧ ಬಗೆಯ ಕಳ್ಳತನಗಳನ್ನು ಮಾಡುತ್ತಿತ್ತು. ಹೀಗಾಗಿ ಈ ಸಮುದಾಯವನ್ನು ಕ್ರಿಮಿನಲ್ ಟ್ರೈಬ್ ಎಂತಲೂ, ಬ್ಯಾಕ್‌ವರ್ಡ್ ಟ್ರೈಬ್ ಎಂತಲೂ, ಡಿ ನೋಟಿಫೈಡ್ ಟ್ರೈಬ್ ಎಂತಲೂ ಬ್ರಿಟಿಷ್ ಸರಕಾರ ಮತ್ತು ಭಾರತ ಸರಕಾರವು ಬೇರೆ ಬೇರೆ ನೆಲೆಗಳಲ್ಲಿ ಗುರುತಿಸಿದೆ.

ಗಂಟಿಚೋರ್ ಬುಡಕಟ್ಟಿನಿಂದ ಪರಿಶಿಷ್ಟ ಜಾತಿಯೆಡೆಗೆ

ಕರ್ನಾಟಕ ಸರಕಾರವು 1976ರಲ್ಲಿ ‘ಗಂಟಿಚೋರ್’ ಸಮುದಾಯವನ್ನು ಪರಿಶಿಷ್ಟ ಜಾತಿಯಲ್ಲಿ ಸೇರಿಸಿತು. ಇದು ಒಂದು ‘ಬುಡಕಟ್ಟು’ ಜಾತಿಯಾಗಿ ಬದಲಾಯಿತು. ಇದು ಇದ್ದಕ್ಕಿದ್ದಂತೆ ಆದದ್ದಲ್ಲ. ಬದಲಾಗಿ ಅದಕ್ಕೊಂದು ಚಾರಿತ್ರಿಕ ಮಾನದಂಡವೂ ಇದೆ. ಅದನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಬುಡಕಟ್ಟಿಗೆ ಕೆಲವು ಲಕ್ಷಣಗಳನ್ನು ಸಿದ್ಧಪಡಿಸಲಾಯಿತು. ಈ ಲಕ್ಷಣಗಳು ಇರುವ ಸಮುದಾಯವು ಬುಡಕಟ್ಟು ಅಥವಾ ಇಲ್ಲದಿರುವ ಸಮುದಾಯ ಜಾತಿಯ ಚೌಕಟ್ಟಿಗೆ ಸೇರಿಸಲಾಯಿತು.

ಪ್ರಸಿದ್ಧ ಮಾನವಶಾಸ್ತ್ರಜ್ಞನಾದ ಮಜುಂದಾರ್ ಅವರು ‘ಯಾವುದೇ ಬುಡಕಟ್ಟು ಹಲವು ಕುಟುಂಬಗಳ ಒಂದು ಗುಂಪು. ಅವರೆಲ್ಲರೂ ಒಂದೇ ಹೆಸರಿನಿಂದ ಕರೆಯಲ್ಪಡುತ್ತಾರೆ. ಗುಂಪಿನ ಸದಸ್ಯರು ಒಂದು ಸೀಮೆಯಲ್ಲಿ ವಾಸಿಸುತ್ತಾರೆ. ಒಂದೇ ಬಗೆಯ ಭಾಷೆಯನ್ನು ಬಳಸುತ್ತಾರೆ. ಮದುವೆ, ವೃತ್ತಿ, ವಾಸದ ನೆಲೆ ಮೊದಲಾದವು ಹಲವು ಬಗೆಯ ನಿಷೇಧ ಮತ್ತು ಕಟ್ಟುಪಾಡುಗಳಿಗೆ ಪರಸ್ಪರರು ಬದ್ಧರಾಗಿರುತ್ತಾರೆ. ಸ್ವಗೋತ್ರಗಳಿದ್ದು, ಹಲವಾರು ಕುಲಗಳು ಸಮ್ಮಿಲನವಾಗಿ ಒಂದು ಬುಡಕಟ್ಟು ರೂಪುಗೊಂಡಿರುತ್ತದೆ’ (ಮಜುಂದಾರ್: 1961:367) ಎಂದು ಒಂದು ನಿರ್ದಿಷ್ಟ ಲಕ್ಷಣಗಳನ್ನು ಹೇಳುತ್ತಾರೆ.

ಬುಡಕಟ್ಟಿನ ಈ ಲಕ್ಷಣಗಳನ್ನು ಗಮನಿಸಿದರೆ, ಗಂಟಿಚೋರ್ ಸಮುದಾಯ ಕಳ್ಳತನದ ಪ್ರವೃತ್ತಿಯ ಕಾರಣಕ್ಕೆ ಒಂದು ಸಾಮಾನ್ಯ ಹೆಸರಿನಿಂದ ಕರೆಯಲ್ಪಡುತ್ತಾರೆ. ಅಂತೆಯೇ ಬೇರೆ ರಾಜ್ಯಗಳಲ್ಲಿಯೂ ಇದೇ ಕಾರಣಕ್ಕೆ ಹಲವು ಹೆಸರುಗಳಿವೆ. ಉದಾ: ಭಾಮ್ಟಾ, ಪಾತ್ರೂಟ್, ಉಚಲ್ಯಾ, ಗಿರಣಿವಡ್ಡರ್, ಕಳ್ಳವಡ್ಡರ್, ಮಣ್ಣವಡ್ಡರ್ ಇವುಗಳೆಲ್ಲಾ ವೃತ್ತಿಯನ್ನಾಧರಿಸಿದ ಹೆಸರುಗಳು. ಈ ಹೆಸರುಗಳು ಕೂಡ ಕಳ್ಳತನದ ಪ್ರವೃತ್ತಿಯಿಂದ ಬಿಡಿಸಿಕೊಳ್ಳಲು ಅವರು ಮಾಡಿದ ಇತರೆ ವೃತ್ತಿಗಳ ಹೆಸರಾಗಿದೆ. ಹಾಗಾಗಿ ಈ ಸಮುದಾಯಕ್ಕೆ ಒಂದು ಏಕರೂಪಿ ಹೆಸರಿಲ್ಲ.

ಅಂತೆಯೇ ಬುಡಕಟ್ಟುಗಳು ಒಂದು ನಿರ್ದಿಷ್ಟ ಬೌಗೋಳಿಕ ವ್ಯಾಪ್ತಿಯಲ್ಲಿ ಜೀವಿಸುತ್ತಿದ್ದು, ಅವು ನಾಗರಿಕ ಸಮುದಾಯಕ್ಕಿಂತಲೂ ಭಿನ್ನವಾದ ಜೀವನಕ್ರಮವನ್ನು ಹೊಂದಿರುತ್ತವೆ. ಆದರೆ ಗಂಟಿಚೋರ್ ಸಮುದಾಯವು ಹಾಗೆ ಒಂದು ನಿರ್ದಿಷ್ಟ ಬೌಗೋಳಿಕ ಪ್ರದೇಶದಲ್ಲಿ ತನ್ನದೇ ಆದ ಗುರುತುಗಳೊಂದಿಗೆ ಜೀವಿಸುವುದಿಲ್ಲ. ಬದಲಾಗಿ ನಾಗರಿಕ ಸಮಾಜದ ವಾಸದ ನೆಲೆಗಳಲ್ಲಿಯೇ ವಾಸಿಸುತ್ತದೆ. ಕಳ್ಳತನಕ್ಕಾಗಿ ಕೆಲವು ದಿನಗಳವರೆಗೆ ವಲಸೆ ಹೋದರೂ ಮತ್ತೆ ಮೂಲ ಸ್ಥಳಕ್ಕೆ ಮರಳುತ್ತಾರೆ.

ಯಾವುದೇ ಬುಡಕಟ್ಟು ಅದರದ್ದೇ ಆದ ಭಾಷೆಯನ್ನು ಹೊಂದಿರುತ್ತದೆ. ಆ ಭಾಷೆಯಲ್ಲಿಯೇ ತನ್ನೊಳಗಿನ ಸಮುದಾಯಗಳ ಜತೆ ಸಂವಾದ ಮಾಡುತ್ತದೆ. ಆದರೆ ಗಂಟಿಚೋರರು ಹಲವು ಭಾಷೆಗಳನ್ನು ಆಡುತ್ತಾರೆ. ಕರ್ನಾಟಕದಲ್ಲಿ ಕನ್ನಡ, ಮಹಾರಾಷ್ಟ್ರದಲ್ಲಿ ಮರಾಠಿ, ಆಂಧ್ರದಲ್ಲಿ ತೆಲುಗು, ಗುಜರಾತಿನಲ್ಲಿ ಗುಜರಾತಿ ಮಾತನಾಡುತ್ತಾರೆ. ಹಾಗಾಗಿ ಗಂಟಿಚೋರರಿಗೆ ಒಂದು ಸಮಾನವಾದ ಸಂವಹನ ಭಾಷೆಯಿಲ್ಲ. ಇವರಲ್ಲಿ ‘ಮರಗು ಭಾಷೆ’ ಇದೆಯಾದರೂ ಅದನ್ನು ತುಡುಗು ಮಾಡುವ ಸಂದರ್ಭಕ್ಕೆ ಮಾತ್ರ ಬಳಸುತ್ತಾರೆ.

ಬುಡಕಟ್ಟುಗಳಿಗೆ ಅವುಗಳದ್ದೇ ಆದ ಪ್ರತ್ಯೇಕ ದೈವಗಳಿರುತ್ತವೆ. ಅವು ಅವರಿಗೆ ಮಾತ್ರ ವಿಶಿಷ್ಟವಾಗಿರುತ್ತವೆ. ಈ ದೈವಗಳು ನಿಸರ್ಗಾರಾಧನೆಗೆ ಪೂರಕವಾಗಿರುತ್ತವೆ. ಆದರೆ ಗಂಟಿಚೋರ್ ಸಮುದಾಯವು ಪ್ರಾದೇಶಿಕವಾಗಿ ಹತ್ತಾರು ದೈವಗಳನ್ನು ಪೂಜಿಸುತ್ತಾರೆ. ಬುಡಕಟ್ಟುಗಳ ಆರ್ಥಿಕತೆ ಸಾಮಾನ್ಯವಾಗಿ ಹಣವಿನಿಮಯಕ್ಕಿಂತ ವಸ್ತುವಿನಿಮಯವನ್ನು ಹೆಚ್ಚು ಅವಲಂಬಿಸಿರುತ್ತದೆ. ಆದರೆ ಗಂಟಿಚೋರ್ ಸಮುದಾಯದ ಆರ್ಥಿಕತೆಯು ಪ್ರಧಾನವಾಗಿ ‘ಹಣ’ವಿನಿಮಯ ಪದ್ಧತಿಯಲ್ಲಿದೆ.

ಬುಡಕಟ್ಟುಗಳು ಸಾಮಾನ್ಯವಾಗಿ ಸಣ್ಣ ಸಣ್ಣ ಗುಂಪುಗಳಲ್ಲಿ ಜೀವಿಸುತ್ತವೆ. ಅಂತೆಯೇ ಇಂತಹ ಇತರೆ ಗುಂಪುಗಳ ಜತೆ ಸಂಬಂಧವನ್ನು ಹೊಂದಿರುತ್ತವೆ. ಆದರೆ ಗಂಟಿಚೋರರು ಒಂದೆಡೆ ನೂರಾರು ಮನೆಗಳ ವಸತಿಯಲ್ಲಿ ಇನ್ನೂರು ಮುನ್ನೂರು ಜನರು ಒಟ್ಟಿಗೆ ಜೀವಿಸುತ್ತಾರೆ. ಇವರು ಸಾಮಾನ್ಯವಾಗಿ ಗ್ರಾಮಗಳಲ್ಲಿ ಜೀವಿಸುವಾಗ ಆಯಾ ಹಳ್ಳಿಯ ಜೀವನವಿಧಾನಕ್ಕೆ ಒಗ್ಗಿಕೊಳ್ಳುತ್ತಾರೆ. ಹೀಗೆ ಈ ಎಲ್ಲಾ ಕಾರಣಗಳಿಂದಾಗಿ ಗಂಟಿಚೋರ್ ಬುಡಕಟ್ಟು ಕಾಲಾನಂತರದಲ್ಲಿ ಬುಡಕಟ್ಟಿನ ಲಕ್ಷಣಗಳನ್ನು ಕಳೆದುಕೊಂಡು ‘ಜಾತಿಯ’ ಲಕ್ಷಣಗಳನ್ನು ಪಡೆದುಕೊಂಡಿದೆ. ಹೀಗೆ ಭಾರತ ಸರಕಾರವು ಸಾಮಾಜಿಕ ಮತ್ತು ಆರ್ಥಿಕ ದುಃಸ್ಥಿತಿಯನ್ನು ನೋಡಿ 1977ರಲ್ಲಿ ಗಂಟಿಚೋರ್ ಬುಡಕಟ್ಟನ್ನು ಪರಿಶಿಷ್ಟಜಾತಿಯ ಪಟ್ಟಿಗೆ ಸೇರಿಸಿತು. ಹೀಗೆ ಹಲವು ಬುಡಕಟ್ಟುಗಳು ತಮ್ಮ ಮೂಲ ಚಹರೆಗಳನ್ನು ಕಳೆದುಕೊಂಡು ಜಾತಿಗಳಾಗಿ ರೂಪಾಂತರ ಹೊಂದಿದವುಗಳೇ ಇಂದು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿವೆ.
‘ಭಾಮ್ಟಾ’ ‘ಗಂಟಿಚೋರ್’ ಪದಪಯಣ

ಗಂಟಿಚೋರ್ ಪದವನ್ನು ಆರಂಭದಲ್ಲಿ ಭಾಮ್ಟಾ ಸಮುದಾಯದ ಸಮಾನಾಂತರ ಅಥವಾ ಪರ್ಯಾಯ ಪದವನ್ನಾಗಿ ಬಳಸಲಾಗಿದೆ. ಹಾಗಾಗಿ ಆರಂಭದ ಅಧ್ಯಯನ ಮತ್ತು ದಾಖಲೆಗಳು ‘ಭಾಮ್ಟಾ’ ಸಮುದಾಯ ಎನ್ನುವ ಹೆಸರಲ್ಲಿದೆ. ಮರಾಠಿಯಲ್ಲಿ ಭಾಮ್ಟಾ ಎಂದರೆ ಕಳ್ಳತನವನ್ನು ಒಳಗೊಂಡ ಅಪರಾಧಿ ಚಟುವಟಿಕೆಗಳಲ್ಲಿ ತೊಡಗಿದ ಸಮುದಾಯವನ್ನೇ ಸೂಚಿಸುತ್ತಿದೆ. ಹಾಗಾಗಿ ಈ ಭಾಮ್ಟಾ ಸಮುದಾಯವನ್ನು ವಿವರಿಸುವಾಗ ಸಮಾನಾಂತರ ಪದವಾಗಿ ಪ್ರಾದೇಶಿಕ ಭಿನ್ನತೆಯಾಗಿ ಗಂಟಿಚೋರ್ ಸಮುದಾಯವನ್ನು ಉಲ್ಲೇಖಿಸಲಾಗಿದೆ. 1908ರಲ್ಲಿ ಎಂ. ಕೆನಡಿ ಅವರು, 1910ರಲ್ಲಿ ಗೇಯರ್ ಜಿ.ಡಬ್ಲ್ಯೂ ಅವರು, 1915ರಲ್ಲಿ ಫಾರ್ಕರ್, 1920ರಲ್ಲಿ ಎಂಥೋವನ್, 1920ರಲ್ಲಿಯೇ ಹಸನ್ ಅವರು ತಮ್ಮ ಅಧ್ಯಯನಗಳಲ್ಲಿ ‘ಭಾಮ್ಟಾ’ ಹೆಸರಿನ ಸಮುದಾಯದ ಪರಿಚಯದಲ್ಲಿ ಸಮಾನಾಂತರ ಪದವಾಗಿ ‘ಗಂಟಿಚೋರ್’ ಪದ ಉಲ್ಲೇಖಿಸಲಾಗಿದೆ. ಸೆಟ್ಲ್‍ಮೆಂಟ್ ಅಧಿಕಾರಿ ಸ್ಟಾರ್ಟೆ ಅವರ 1926ರಲ್ಲಿ ವಾರ್ಷಿಕ ವರದಿಯಲ್ಲಿ ನೇರವಾಗಿ ಗಂಟಿಚೋರ್ ಪದವನ್ನು ಬಳಸಿ ಪರಿಚಯಿಸಿದ್ದಾರೆ.

‘ಗಂಟಿಚೋರ್’ ಪದದ ಅರ್ಥದ ಬೆನ್ನತ್ತಿದರೆ ಹಲವು ಬಗೆಯ ದಾರಿಗಳು ತೆರೆದುಕೊಳ್ಳುತ್ತವೆ. ಗಂಟಿ ಎಂದರೆ ದೇವಸ್ಥಾನದಲ್ಲಿ ಬಾರಿಸುವ ಗಂಟೆ ಎಂತಲೂ, ಕಳ್ಳತನಕ್ಕೆ ಏನೂ ಸಿಗದಿದ್ದಾಗ ದೇವರ ಗಂಟೆಯನ್ನು ಕದ್ದರು ಎಂತಲೋ, ಗಂಟೆ ಬಾರಿಸಿ ಸೂಚನೆ ನೀಡಿ ಕಳ್ಳತನ ಮಾಡುತ್ತಿದ್ದರು ಎಂತಲೋ ಹಲವು ಬಗೆಯ ಅಭಿಪ್ರಾಯಗಳಿವೆ. ಆದರೆ ಇವುಗಳಲ್ಲಿ ಬಹುತೇಕ ‘ಗಂಟಿಚೋರ್’ ಎನ್ನುವ ಪದಬಳಕೆ ಸಮುದಾಯದ ಜನರಲ್ಲಿ ಅಥವಾ ಈ ಸಮುದಾಯವನ್ನು ಹೊರಗಿನವರಾಗಿ ನೋಡುವವರಲ್ಲಿ ಹುಟ್ಟಿದ ಕುತೂಹಲಕ್ಕೆ ಪೂರಕವಾದ ಉತ್ತರರೂಪಿ ಸಂಗತಿಗಳಿವು. ಗಂಟಿ ಎನ್ನುವುದು ‘ಉ’ಕಾರವು ಜನಬಳಕೆಯಲ್ಲಿ ‘ಇ’ ಕಾರವಾಗಿ ಬದಲಾಗಿ ಗಂಟು ಗಂಟಿಯಾಗಿದೆ. ‘ಗಂಟು’ ಎನ್ನುವ ಅರ್ಥದ ಬಳಕೆಯೇ ಸರಿಯಾದ ಬಳಕೆ ಎನ್ನುವುದನ್ನು ಗಮನಿಸಬೇಕು. ಕಾರಣ ಗಂಟು ಅಂದರೆ ಇಂಗ್ಲಿಷಿನಲ್ಲಿ ಬಂಡಲ್ ಎನ್ನುವ ಸಮಾನಾರ್ಥಕ ಪದವಿದೆ. ‘ಬಂಡಲ್ ಥೀವ್ಸ್’ ಎನ್ನುವ ಅರ್ಥದಲ್ಲಿ ಈ ಸಮುದಾಯವನ್ನು ಗುರುತಿಸಲಾಗಿದೆ. ಇದನ್ನು ನೋಡಿದರೆ ‘ಗಂಟುಕಳ್ಳರು’ ಎನ್ನುವ ಪದವೇ ‘ಗಂಟಿಚೋರ್’ ಎಂದು ಬಳಕೆಯಾಗಿರಲಿಕ್ಕೆ ಸಾಧ್ಯವಿದೆ.

ನಮ್ಮ ಗ್ರಾಮೀಣ ಭಾಗದಲ್ಲಿ ಗಂಟುಕಳ್ಳರು ಎನ್ನುವುದು ಸಮುದಾಯ ಸೂಚಕವಲ್ಲ, ಬದಲಾಗಿ ಗುಣವಾಚಿ ಪದವಾಗಿ ತುಂಬಾ ಬಳಕೆಯಲ್ಲಿರುವ ನುಡಿಗಟ್ಟು. ಈಗಲೂ ಈ ಪದ ಬಳಕೆಯಲ್ಲಿರುವುದನ್ನು ಗಮನಿಸಬಹುದು. ಗಂಟು ಎಂದರೆ ‘ಸಂಪತ್ತು’ ‘ಹಣ’ ಎಂಬ ಅರ್ಥವಿದೆ. ಸಾಲ ಪಡೆದವನು ಆ ಹಣವನ್ನು ವಾಪಸು ಮಾಡದಿದ್ದರೆ ಆತನನ್ನು ‘ಗಂಟುಕಳ್ಳ’ ಎಂದು ಗುರುತಿಸಲಾಗುತ್ತದೆ. ಅಂತೆಯೇ ಅಣ್ಣತಮ್ಮಂದಿರ ಆಸ್ತಿ ಸಂಪತ್ತನ್ನು ಹಿರಿಯ ಅಣ್ಣನೊಬ್ಬ ತನ್ನ ತಮ್ಮಂದಿರಿಗೆ ತಿಳಿಯದಂತೆ ಲಪಟಾಯಿಸಿದರೆ ಆತನನ್ನು ಗಂಟುಕಳ್ಳ ಎಂದು ಕರೆಯುವಿಕೆ ಇದೆ. ಅಂತೆಯೇ ಸಾಲವಾಗಿ ಪಡೆದ ಹಣವನ್ನು ಹಿಂತಿರುಗಿಸದೆ ಇರುವುದು, ಅನ್ಯರ ಆಸ್ತಿಯನ್ನು ತಾನೇ ಇಟ್ಟುಕೊಂಡು ಅನುಭವಿಸುವುದು ಮುಂತಾದ ಕಾರಣಕ್ಕೆ ‘ಗಂಟುಕಳ್ಳ’ ಎನ್ನುವ ನಿಂದನಾತ್ಮಕ ಪದವಿದೆ. ಅಂತೆಯೇ ಈ ಪದವು ಜನಪದ ನುಡಿಗಟ್ಟಾಗಿ ವ್ಯಕ್ತಿಗತ ಗುಣವಾಚಿಯಾಗಿ ಬಳಕೆಯಲ್ಲಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಈ ಪದ ಕಳ್ಳತನ ಮಾಡುವವರಿಗೆ ಬಳಸುವ ಪದವಲ್ಲ. ಬದಲಾಗಿ ಕಳ್ಳತನವೆಂಬ ವೃತ್ತಿಯನ್ನು ಮಾಡದೆಯೂ ಅನ್ಯರದನ್ನು ತನ್ನದಾಗಿಸಿಕೊಳ್ಳುವ ಮನುಷ್ಯನ ಪ್ರವೃತ್ತಿಗೆ ಪರ್ಯಾಯವಾಗಿ ಬಳಸಲಾಗಿದೆ. ಹಾಗಾಗಿ ಜನಸಮುದಾಯದಲ್ಲಿ ಬಳಕೆಯಲ್ಲಿರುವ ಗಂಟುಕಳ್ಳ ಎನ್ನುವ ಪದವು ಸಮುದಾಯವೊಂದನ್ನು ಗುರುತಿಸುತ್ತಿಲ್ಲ.

ಹೀಗೆ ವ್ಯಕ್ತಿಗಳ ಗುಣವಾಚಿಯಾಗಿದ್ದ ‘ಗಂಟುಕಳ್ಳರು’ ಎನ್ನುವ ಪದವೊಂದು ಸಮುದಾಯವಾಚಿ ಪದವಾಗಿ ಬದಲಾದ ಕಾಲಘಟ್ಟವನ್ನು ಖಚಿತವಾಗಿ ಗುರುತಿಸುವುದು ಕಷ್ಟ. ಆದರೆ ಇದು 18ನೇ ಶತಮಾನದ ಕೊನೆ ಮತ್ತು 19ನೇ ಶತಮಾನದ ಮೊದಲ ದಶಕಗಳಲ್ಲಿ ಈ ಪದ ಒಂದು ತುಡುಗು ಮಾಡುತ್ತಿದ್ದ ಒಂದು ಗುಂಪನ್ನು ಅಥವಾ ಇಂತಹ ಗುಂಪನ್ನು ಪ್ರತಿನಿಧಿಸುವ ಸಮುದಾಯವನ್ನು ಗುರುತಿಸುವ ಪದವಾಗಿ ಬಳಕೆಯಾಗಿರಲಿಕ್ಕೆ ಸಾಧ್ಯವಿದೆ. ಹಾಗೆ ನೋಡಿದರೆ ಹಿಂದಿನ ಸಂಚಿಕೆಯಲ್ಲಿ ಚರ್ಚಿಸಿದಂತೆ 10ನೇ ಶತಮಾನದ ಕನ್ನಡದ ಶಿವಕೋಟ್ಯಾಚಾರ್ಯನ ವಡ್ಡಾರಾಧನೆ ಕೃತಿಯಲ್ಲಿ ಬರುವ ‘ವಿದ್ಯೂಚ್ಚೋರನೆಂಬ ರಿಷಿಯ’ ಕಥೆಯಲ್ಲಿ ಬರುವ ಚೋರ ಎನ್ನುವ ಪದಕ್ಕೂ ಈ ಸಮುದಾಯದ ‘ಗಂಟುಚೋರ’ ಪದ ಬಳಕೆಗೂ ಆಳದ ನಂಟಿರಬಹುದೇ ಎನ್ನುವ ಚಿಕ್ಕ ಸಂಶಯವೂ ಇದೆ.