ಅಲ್ಲೊಂದು ಸಹಜ ಜಲ ಬಾವಿ ಇತ್ತು ಅನಾದಿಯಿಂದಲೂ. ಅದರ ಪವಿತ್ರ ಜಲದಿಂದಲೇ ಆ ಕಾಲದ ವೈದಿಕರು ಧರ್ಮ ಕಾರ್ಯ ಎಸಗುತ್ತಿದ್ದುದು… ಅದಕೆಂದೇ ಆ ಗೊಂಡಾರಣ್ಯ ಪ್ರಸಿದ್ಧವಾಗಿತ್ತು ಆ ಕಾಲಕ್ಕೆ. ಈಗದು ಒಂದು ಹೊಂಡವಾಗಿತ್ತು. ಬೇಸಿಗೆಯಲ್ಲಿ ದಾಹಕ್ಕಿಳಿದ ಪ್ರಾಣಿಗಳು ಆ ಸನಾತನ ಜಾರಿನ ಹೂಳಿನಲ್ಲಿ ಸಿಲುಕಿ ಎದ್ದು ಬರಲಾರದೆ ಅಲ್ಲೇ ಸಮಾಧಿ ಆಗಿದ್ದವು. ಬಾಯಾರಿ ಅಲ್ಲಿ ಸಿಲುಕಿದವರ ಪಾಡನ್ನು ಅರ್ಥಮಾಡಿಕೊಳ್ಳಿ! ಧರ್ಮ ಸೂಕ್ಷ್ಮವನ್ನು ನಾಳೆ ಅರ್ಥ ಮಾಡಿಕೊಳ್ಳಿ ಮಕ್ಕಳೇ; ಈಗಲೇ ಹೇಳಬಾರದು!
ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿ.
ಆ ಮುದುಕ ಬಂಗಿಸೊಪ್ಪಿನ ಅಮಲಲ್ಲಿ ಏನೇನೊ ಅಸಂಗತವನಾಡಿದ್ದ. ಆದರೂ ಅಂತಹ ಮಾತುಗಳಿಂದಲೂ ಏನೊ ಹೊಳೆಯುತ್ತಿತ್ತು. ಯಾಕೊ ಯಾರೂ ಬೇಡ ಎನಿಸಿತು. ತಮ್ಮನ ದತ್ತು ಪಡೆದ ನಂತರ ತಾಯಿ ಸತ್ತಂತಿದ್ದಳು. ಅದಾಗಲೇ ಅವನು ಮೈಸೂರಿನ ಅರಮನೆಯ ಮುಂದೆ ನಿಂತಿದ್ದ. ಭವ್ಯವಾದ ದೀಪಾಲಂಕಾರದ ಅರಮನೆಯ ಕಣ್ಣಿಗೆ ತುಂಬಿಕೊಂಡಿದ್ದ. ತರಾವರಿ ಪೋಸುಗಳಲ್ಲಿ ಚಿತ್ರ ಪಟ ತೆಗೆಸಿದ್ದರು. ಕುದುರೆ ಸವಾರಿ ಮಾಡಿಸಿದ್ದರು. ಇಂಗ್ಲೀಷ್ ಕಾನ್ವೆಂಟಿಗೆ ಸೇರಿಸಿದ್ದರು. ಪತ್ರ ಬರೆದು ದೊಡ್ಡಣ್ಣ ತಿಳಿಸಿದ್ದ. ಅಪ್ಪನಿಗೂ ಓದು ಬರಹ ಗೊತ್ತಿತ್ತು. ಹೋಟೆಲಲ್ಲಿ ತನ್ನ ಕಿರಿ ಮಗನ ವೈಭೋಗವನ್ನು ರಂಜಿಸಿ ಹೇಳುತಿದ್ದ. ಜನ ‘ಆಹಾ ಓಹೊ’ ಎನ್ನುತ್ತಿದ್ದರು. ಹೊಗಳಿಕೆಗೆ ಅಪ್ಪನ ದರ್ಬಾರಲ್ಲಿ ಬರವೇ…
‘ನಿನ್ನ ಮಗ ಮೈಸೂರು ದೊರೆಯಾದ ಬಿಡಣ್ಣಾ’
‘ಡೀಸಿಯಾಗಿ ಬರ್ಬೇಕು ನೋಡಣ್ಣಾ… ಆಗ ಎಂಗಿರ್ತದೇ ಗೊತ್ತಣ್ಣಾ…’
‘ನಮ್ಮ ಜನಕ್ಕೆಲ್ಲ ಸರ್ಕಾರದಿಂದ ಭೂಮಿ ಸಿಕ್ಕೋಯ್ತದೇ!’
‘ನಾವಾಗ ತ್ವಾಟ ತುಡಿಕೆ ಹೊಲಗದ್ದೆಗಳ ಮಾಲೀಕರಾಗ್ತೀವಿ’
‘ಬರವೆಲ್ಲ ವೋಯ್ತದೆ; ಸುಖವೆಲ್ಲ ಬತ್ತದೆ’
‘ಕೇರಿನೇ ಸ್ವರ್ಗ ಆಯ್ತದೆ… ಮೈಸೂರ ದಸರವೇ ನಮ್ಮೂರಿಗೆ ಬರ್ತದೇ… ಅರಮನೆಯಾಯ್ತದೆ ನಮ್ಮ ಗುಡುಸ್ಲು ಮನೆ’
‘ಎಲ್ರು ಮನೆಗೂ ಕರೆಂಟು ಬತ್ತದೇ; ಬಣ್ಣದ ಬೆಳಕು ಬತ್ತವೇ…ʼ
ತಾತ ಒಂದು ಬಗೆಯಲ್ಲಿ ಸಂತೈಸಿ ಅವರ ಅಮಲು ಕನಸಿನ ಮಾತುಗಳ ತಡೆದ. ಅವರಿಗೆ ಅವು ಬೇಕಿರಲಿಲ್ಲ. ಅಪ್ಪ ಮಹಾರಾಜನಂತೆ ಕೂತಿದ್ದ. ಅಂತಹದೊಂದು ಕುರ್ಚಿ ಇದ್ದದ್ದು ಆಗ ನಮ್ಮ ಮನೆಯಲ್ಲೇ… ಅದರ ಸಂದುಗಳಲ್ಲೊ ಎಷ್ಟೋ ತಲೆಮಾರಿನ ತಿಗಣೆಗಳಿದ್ದವು. ಜೀಗುಟ್ಟುತಿತ್ತು. ಮುಪ್ಪಾನು ಮುದುಕರ ಮಂಡಿಗಳಂತೆ. ಅರಮನೆಯ ಹಳೆ ವಸ್ತುಗಳ ಸಾರ್ವಜನಿಕ ಖರೀದಿಯಲ್ಲಿ ಆಗ ಅದ ತಂದಿದ್ದರಂತೆ. ಯಾವ ದಿವಾನರು ಅದರಲ್ಲಿ ಕೂತಿದ್ದರೊ! ಯಾವ ರಾಜ ಮಂತ್ರಿ ಅದರಲ್ಲಿ ಹೂಸಿದ್ದನೊ? ಸದ್ಯಕ್ಕೆ ಅಪ್ಪನ ದರ್ಬಾರು ಮುಂದುವರೆದಿತ್ತು.
‘ಅಣ್ಣಾ; ನಿನ್ಮಗ ವೋದಿ ಮುಂದೆ ಬಂದ್ರೆ ಸಮುದ್ರ ದಾಟಬೋದೂ’
‘ಅಂಗಂದ್ರೇ… ಅದೇನ್ಲಾ ಸಮುದ್ರಾ… ಯಾವುರ್ಲಾ ಎಲ್ಲಿದ್ದದ್ಲಾ’
‘ಯೇಯ್; ಅದ್ರು ತಿಕಾ ಮೊಕಾ ನಿನ್ಗೇನ್ ಗೊತ್ತು, ಸುಮ್ನೆ ಕುತ್ಕೋ’
‘ಯೇಯ್ ಗೀಯ್ ತಿಕ ಮೊಕಾ ಅನಬ್ಯಾಡಾ; ಬೆಲೆಕೊಟ್ಮಾತಾಡ್ಲಾ.ʼ
‘ಅನ್ನೇರ್ಡು ಮಕ್ಕಳ ವುಟ್ಟಿಸಿವಿನೀ… ನಾನೊಂದೆಂಗ್ಸ ತಿಕ ಮೊಕವ ನೋಡ್ದಾಗ; ನೀನೊಂದು ಕತ್ತೆ ತಿಕನೂ ನೋಡಿರ್ಲಿಲ್ಲಾ… ನಾಯಿ ಬಾಲವ ಅಲ್ಲಾಡ್ಸಿದ್ದೇನೊ…ಏನೊ…?ʼ
‘ತಾಡಣ್ಣೋ… ಸಮುದ್ರ ಎಲ್ಲದೆ ಗೊತ್ತೆ ನಿನಗೇ… ಪ್ರಪಂಚ ಎಂಗದೆ ಗೊತ್ತೆ ನಿನಗೇ.. ವೋಕ್ಕಲಿ ನಮ್ಮೂರು ಯಾವ ಹೊಬಳೀಲಿ, ತಾಲೂಕೆಲಿ, ಜಿಲ್ಲೆಲಿ, ದೇಶ್ದೆಲಿ ಇದೆ ಅನ್ನೊದಾದ್ರೂ ಗೊತ್ತೇ…?ʼ
‘ನಂತರಡು ಎಲ್ಲಿವೆ ಅಂತಾ ಗೊತ್ತು ಕಲಾ… ಅವುಕಿಂತ್ಲೂ ದೊಡ್ಡುದ್ಲಾ ಸಮುದ್ರಾ’
‘ಸರ್ಯಾಗಿ ಮಾತಾಡೊ ಮಾವಾ… ಅವ್ನೆನು ಗೌಡ್ರ ಬಾವಿ ಎಲ್ಲವೆ ಅಂತಾ ಕೇಳುದ್ನೇ; ಕೆರೆ ಕಟ್ಟೆ ತಾಲುಕೆಲಿ ಎಷ್ಟಿವೆ ಅಂತಾ ಲಾ ಪಾಯಿಂಟು ಆಕಿದ್ನೇ… ನೆನಪಿರ್ಲಿ ಮಾವಾ… ನಿನ್ನ ದಡ್ಡತನದ ದರ್ಬಾರ್ ಅಲ್ಲ ಇದೂ! ಹುಷಾರ್! ನಿನ್ನ ತರಡು ನಿನ್ನ ಜೊತೆಯೇ ಉಳಿದಿದ್ದಾವೊ ಇಲ್ಲವೊ ಎಂಬುದು ಈಗಲೇ ಬಿಚ್ಚಿ ಪರೀಕ್ಷೆ ಮಾಡಿ ಬಿಡುತ್ತೇವೆ. ಸಮುದ್ರಕ್ಕೆ ಅವಮಾನ ಮಾಡ್ತೀಯಾ… ನಿನ್ನ ಬೀಜ ಜೊಳ್ಳಾಗಿ ಶತಮಾನಗಳೇ ಕಳೆದು ಹೋಗಿವೆ’
ಅಲ್ಲಿಗೆ ದರ್ಬಾರಿನ ಜಗಳ ಮುಗಿದಿತ್ತು. ಹೊಗಳಿಕೆ ಮರೆತಿತ್ತು. ಎಲ್ಲರೂ ಚೆನ್ನಾಗಿ ಎಂಡ ಕುಡಿದಿದ್ದರು. ಅಲ್ಲಾವನೊ ಒಬ್ಬ ಎಡಬಿಡಂಗಿ ಸುಮ್ಮನಿರಲಾರದೆ ನನ್ನ ಪರ ವಹಿಸಿ, ‘ಇವನು ಯಾವೂರ ರಾಜಕುಮಾರ’ ಎಂದು ಕುಶಾಲಿನಿಂದ ಕೇಳಿದ. ‘ಇವನಾ; ಲದ್ದಿರಾಜ’. ‘ಯಾಕಣ್ಣ ಅಂಗಂದಿಯೆ, ದೇವ್ರು ಎಲ್ರುಗೂ ಏನಾರ ಒಂದೊಳ್ಳೆದಾ ಕೊಟ್ಟಿರ್ತನೇ’
‘ಏನ್ಲಾ; ನನ್ನ ಲವಡವಾ ಕೊಟ್ಟಿರುದೂ ಅವುನೂ’
‘ನಿನ್ಗೆ ಬೇಕಾದ್ದೆಲ್ಲನೂ ಕೊಟ್ಟವನಲ್ಲಣ್ಣಾ’
‘ಇಂತಾವಂಗೆ ವಣ ಬೇರ ಕೊಟ್ಟವನೆ ನೋಡೂ’
‘ದೇವ್ರ ತಿಸ್ಣೇ ಅಂದ್ರೆ ಅವುನಿಂದ್ಲೆ ತಾನೆ ವುಟ್ಟುದೂ…
ಇಂತಾ ತಿಸ್ಣೆ ಕೊಡ್ಬೇಕು ಅನಿಸ್ತು; ಕೊಟ್ಟ… ಅದ್ಕೆ ಇವುನ ಯಾಕಣ್ಣ
ಲದ್ದಿರಾಜ ಅಂದಿಯೇ… ಹಂದಿ ಕತ್ತೆ ನಾಯಿಗೆ ವಡ್ದಂಗೆ ವಡಿಬ್ಯಾಡ ಕನಣ್ಣೊ… ಕರ್ಮ ಸುತ್ಕತದೇ’
‘ಸುತ್ಕಂದು ತರ್ಕಲಿ ಬಿಡ್ಲಾ’
‘ಅಂಗನ್ನಬ್ಯಾಡ ದೇವರ ಮುಂದೇ… ತಪ್ಪಾಯ್ತದೆ’
‘ಆಗ್ಲಿ ಬಿಡ್ಲಾ; ದೇವ್ರೇನು ಸಾಚಾಬ್ಲಾ… ಮಾಡ್ಬಾರ್ದೆಲ್ಲನು ಅವನು ಮಾಡಿರುದ್ನೆ ನಾವೂ ಅದ್ನೇ ಮಾಡ್ತಿದ್ದೀವಿ ಕಲಾ’
ಅವರ ಮಾತಿನ ನಡುವೆ ನಾನು ಜಾರಿ ಮರೆಗೆ ಬಂದಿದ್ದೆ. ಮಡಕೂಸಮ್ಮನ ಬೀದಿ ಅದು. ಬೀದಿಯೇ ಮನೆ ಮುಂದಿನ ಅಂಗಳ. ತೆಂಗಿನ ಗರಿ ಹಾಸಿ ಮಲಗಿದ್ದರು. ಆಕೆ ಏನೋ ಗಹನವಾದ ಕತೆ ಹೇಳುತ್ತಿದ್ದಳು. ಯಾವುದೊ ಒಂದು ನಾಯಿ ಹೋಗಿ ಅಲ್ಲಿ ಕೆಡೆದುಕೊಂಡಂತೆ ಮಲಗಿದ್ದ ಹೈಕಳ ಜೊತೆ ಕುಳಿತೆ. ‘ಬಾ; ಮಲಕೊ’ ಎಂದಳು ಶಿವನಿ. ಪುಟ್ಟ ಬಾಲಕಿ. ‘ಬಾಲ ಮೊಗ’ ಎಂದಳು ಮಡಕೂಸಮ್ಮ. ಸುಖಾಂತವಾಗಿ ಕತೆ ಮುಗಿದಿತ್ತು. ಕೇಳಿದೆ ಶಿವನಿಯಾ… ಓ; ಅದಾ… ಗೊತ್ತು ಗೊತ್ತು ಆ ಕತೆಯ ನಮ್ಮತ್ತೆಯರು ಹೇಳಿದ್ದರು ಎಂದೆ. ಅದೊಂದು ಹೂ ಮರದ ಹುಡುಗಿಯ ಕತೆಯಾಗಿತ್ತು. ನಿರಾಶೆ ಆಗಿರಲಿಲ್ಲ.
ಒಂದೇ ಕತೆಗೆ ಮುಗಿಯುವುದಿಲ್ಲ ಇರುಳು. ಒಂದಾದ ಮೇಲೆ ಇನ್ನೊಂದು ಹೇಳು ಎನ್ನುವುದು ಇದ್ದೇ ಇತ್ತು. ಹಾಗೇ ಆಯಿತು. ಮಕ್ಕಳ ಹಠಕ್ಕೆ ಮಿಡಿದಿದ್ದಳು. ಅದೊಂದು ಹುಲಿಯ ಕತೆ. ಪ್ರಾಣಿಗಳ ಕತೆಗಳಲ್ಲಿ ಮನುಷ್ಯರು ಎಷ್ಟೊಂದು ಮೃಗವಾಗಿದ್ದಾರಲ್ಲಾ… ಆಗ ಗೊತ್ತಿರಲಿಲ್ಲ. ಪ್ರಾಣಿಗಳೆ ಮನುಷ್ಯರಿಗಿಂತಲೂ ಮಿಗಿಲಾಗಿವೆಯಲ್ಲಾ…
ಮಡಕೂಸಮ್ಮ ಹೇಳಿದ್ದ ಕತೆಯ ನನ್ನ ರೀತಿಯಲ್ಲಿ ಮತ್ತೆ ಹೇಳುವೆ:
ಒಂದಾನೊಂದು ಗೊಂಡಾರಣ್ಯ. ಅಲ್ಲೂ ದೂರದ ಊರಿಗೆ ಹೋಗಿ ಬರಲು ಕಾಲುದಾರಿಯಿತ್ತು. ಯಾತ್ರೆ ಜಾತ್ರೆಯ ಜನ ಹೋಗಿ ಬರುವುದಿತ್ತು. ಅಂತಾ ಒಂದು ಕಾಡು, ಮಳೆ ಇಲ್ಲದೆ ಬರಗೆಟ್ಟಿತ್ತು. ಹಳ್ಳ ಕಟ್ಟೆಗಳು ಬತ್ತಿದ್ದವು. ರಕ್ತ ಕುಡಿಯಲು ಹುಲಿಗಳಿಗೆ ಮಿಕಗಳೇ ಸಿಗುತ್ತಿರಲಿಲ್ಲಾ… ದಾಹ ದಾಹ ಎಲ್ಲದಕ್ಕೂ ದಾಹ!
ಕೊಂದು ದಿನವೆಸ್ಟಾಯಿತು; ತಿಂದು ಕಾಲ ಎಷ್ಟಾಯಿತು? ಏನೂ ಸಿಕ್ಕಿಲ್ಲವಲ್ಲಾ… ಗಂಟಲು ಒಣಗಿ ಸಾವು ಬಾಯಿಗೆ ಬಂದು ಜೀವ ಬಿಡು ಎನ್ನುತ್ತಿದೆಯಲ್ಲಾ! ಎಲಾ; ಸಾವೇ! ನನ್ನಂತಹ ಹುಲಿಗೆ ಕೇಳುವ ಮಾತೇ ಇದೂ… ಕೊಂದರೆ ತಾನೆ ನನ್ನ ಜೀವ ಉಳಿಯುವುದೂ? ನೀನೇ ಕಲಿಸಿದ್ದಲ್ಲವೇ ದೇವರೇ ಈ ಎಲ್ಲ ತರದ ಬೇಟೆಗಳಾ! ಹುಲ್ಲು ತಿನ್ನು ಎಂದು ಕಲಿಸಿದ್ದರೆ ಹುಲ್ಲನ್ನೇ ತಿಂದು ಬದುಕುತ್ತಿದ್ದೇನಲ್ಲಾ… ನೀನೇ ಕಲಿಸಿದ ಆಯ್ಕೆಯ ಪಾಠ… ದುರ್ಬಲರನ್ನೇ ಹಿಡಿದು ತಿನ್ನಬೇಕಲ್ಲಾ… ಎಂತಹ ಧರ್ಮ ಸಂಕಟ ನನ್ನದು? ಹುಲ್ಲೆಯ ಮಾಂಸ ತಿನ್ನಲೊ ಹುಲ್ಲ ತಿಂದು ನನ್ನತನವ ನಾನೇ ನಾನೇ ಕೊಂದುಕೊಳ್ಳಲೊ? ಯಾರನ್ನು ಕೊಲ್ಲಲಿ ಎಂದು ಹುಲಿ ಬಡಕಲಾಗಿ ಗೊಂಡಾರಣ್ಯವನ್ನೆಲ್ಲ ಹುಡುಕಾಡಿತು.
ಅರೇ; ಕಾಡಿನ ಬೇರೆ ಬೇರೆ ಜೀವಿಗಳು ಎಲ್ಲಿ ಹೋದವು? ಯಾವೊಂದು ಹಕ್ಕಿಯೂ ಕಾಣದು… ದಾರಿ ಹೋದವು ಯಾವ ತೀರಕೆ? ಇರುವೆ ಹೋದವು ಯಾವ ನೆಲದಾಳಕೆ? ಕಾಡಿನ ರಾಜ ನಾನೆಲ್ಲಿಗೆ ಹೋಗಲಿ ಈಗಾ! ನನ್ನ ಕಾಡಲ್ಲಿ ನಾನೇ ಬಿರುಗಾಳಿಗೆ ಕಾಡ್ಗಿಚ್ಚಿಗೆ ಹೆದರಿ ಅವಿತುಕೊಳ್ಳುವ ಗತಿ ಬಂತು ಎಂದರೆ; ದೇವರೇ ಏನಿದರ ಅರ್ಥ? ಪಾಪಿ ನಾನೋ ನೀನೋ… ಸುರಿಸಯ್ಯ ಮಳೆಯಾ; ನಂದಿಹೋಗಲಿ ಕಾಡ್ಗಿಚ್ಚು… ತುಂಬಿ ಹರಿಯಲಿ ಹಳ್ಳಗಳೆಲ್ಲ ಉಕ್ಕಿ ಹರಿಯಲಿ. ಬಟಾಬಯಲೆಲ್ಲ ಹುಲ್ಲೆಗಳ ಹಿಂಡಾಗಲೀ… ಬೇಡುವೆ ದೇವರೇ; ಹುಲಿಯ ಬೆವರೇ… ಬೆವರನಾದರೂ ನೆಕ್ಕಿ ಗಂಟಲೊಣಗಿದ್ದನ್ನು ತೇವ ಮಾಡಿಕೊಳ್ಳುತ್ತಿದ್ದೆ… ಗುಟುಕು ನೀರ ದಾರಿಯನಾದರೂ ತೋರೂ…
ಅಲ್ಲೊಂದು ಸಹಜ ಜಲ ಬಾವಿ ಇತ್ತು ಅನಾದಿಯಿಂದಲೂ. ಅದರ ಪವಿತ್ರ ಜಲದಿಂದಲೇ ಆ ಕಾಲದ ವೈದಿಕರು ಧರ್ಮ ಕಾರ್ಯ ಎಸಗುತ್ತಿದ್ದುದು… ಅದಕೆಂದೇ ಆ ಗೊಂಡಾರಣ್ಯ ಪ್ರಸಿದ್ಧವಾಗಿತ್ತು ಆ ಕಾಲಕ್ಕೆ. ಈಗದು ಯಾರಿಗೂ ಗುರುತಿಲ್ಲದ ಒಂದು ಹೊಂಡವಾಗಿತ್ತು. ಬೇಸಿಗೆಯಲ್ಲಿ ದಾಹಕ್ಕಿಳಿದ ಪ್ರಾಣಿಗಳು ಆ ಸನಾತನ ಜಾರಿನ ಹೂಳಿನಲ್ಲಿ ಸಿಲುಕಿ ಎದ್ದು ಬರಲಾರದೆ ಅಲ್ಲೇ ಸಮಾಧಿ ಆಗಿದ್ದವು. ಬಾಯಾರಿ ಅಲ್ಲಿ ಸಿಲುಕಿದವರ ಪಾಡನ್ನು ಅರ್ಥಮಾಡಿಕೊಳ್ಳಿ! ಧರ್ಮ ಸೂಕ್ಷ್ಮವನ್ನು ನಾಳೆ ಅರ್ಥ ಮಾಡಿಕೊಳ್ಳಿ ಮಕ್ಕಳೇ; ಈಗಲೇ ಹೇಳಬಾರದು!
… ಹಿಂತಿರುಗುವಾಗ ಹುಲಿ ಎಷ್ಟೇ ಆಗಲಿ ಸಂಚುಗಾರ ಪ್ರಾಣಿ ಅಲ್ಲವೇ? ಆ ಅನಾದಿ ಸನಾತನ ಬಾವಿಯ ಜಾಡು ಹುಡುಕಿತು. ಅದು ಕತ್ತಲು. ನೀರ ಪಸೆಯ ಗಮ್ಮನೆ ಸುವಾಸನೆ ಹುಲಿಗೆ ಜೀವ ತಂದಿತ್ತು. ಸನಾತನ ಜಾಡು. ಅಲ್ಲಿಳಿದರೆ ಯಾರೇ ಆದರೂ ಜಾರಿಯೇ ಹೊಂಡದ ಹೂಳಲ್ಲಿ ಸಿಲುಕಿ ಸಾಯಬೇಕು! ಅದೇನು ಗೊತ್ತು ಪಾಪ ದಾಹದಲಿ ಬೆಂದಿರುವ ನಿಶ್ಯಕ್ತ ಹುಲಿಗೆ? ಇಳಿಯುತ್ತಿದ್ದಂತೆಯೇ ಜಾರಿ ಆಳವಾದ ಬಾವಿಯ ಆ ಹೊಂಡಕ್ಕೆ ಸಿಲುಕಿತು. ಲಚಲೊಚನೆ ನಾಲಿಗೆಯಲ್ಲಿ ಗತಕಾಲದ ಎಲ್ಲ ಶಕ್ತಿ ಇದ್ದ ನೀರ ಕುಡಿಯಿತು. ಬಲ ಬಂದುಬಿಟ್ಟಿತು. ಹುಲಿಗೆ ತೇಕು ಬಂತು. ನಾಲಿಗೆಯಲ್ಲಿದ್ದ ಸಾವು ಕಣ್ಮರೆಯಾಗಿತ್ತು. ಗತಕಾಲದ ಮೂಳೆಗಳ ಅಲ್ಲಲ್ಲೆ ಮಣ್ಣ ಜೊತೆ ಅಗಿದಗಿದು ನೀರ ಕುಡಿಯಿತು.
ಅಲ್ಲಿಗೆ ದರ್ಬಾರಿನ ಜಗಳ ಮುಗಿದಿತ್ತು. ಹೊಗಳಿಕೆ ಮರೆತಿತ್ತು. ಎಲ್ಲರೂ ಚೆನ್ನಾಗಿ ಎಂಡ ಕುಡಿದಿದ್ದರು. ಅಲ್ಲಾವನೊ ಒಬ್ಬ ಎಡಬಿಡಂಗಿ ಸುಮ್ಮನಿರಲಾರದೆ ನನ್ನ ಪರ ವಹಿಸಿ, ‘ಇವನು ಯಾವೂರ ರಾಜಕುಮಾರ’ ಎಂದು ಕುಶಾಲಿನಿಂದ ಕೇಳಿದ. ‘ಇವನಾ; ಲದ್ದಿರಾಜ’. ‘ಯಾಕಣ್ಣ ಅಂಗಂದಿಯೆ, ದೇವ್ರು ಎಲ್ರುಗೂ ಏನಾರ ಒಂದೊಳ್ಳೆದಾ ಕೊಟ್ಟಿರ್ತನೇ’
ಆದರೇನು ಮಾಡುವುದೂ… ನುಣ್ಣನೆ ನುಣುಪು ಮಣ್ಣು ಹರಿಶಿಣದಂತೆ. ಯಾವ ಕಾಲದ್ದೋ! ಎಷ್ಟು ಜೀವಗಳು ಕೊಳೆತು ಘಮ್ಮೆಂದ ಮಣ್ಣೋ… ಹುಲಿ ಎದ್ದುಬರಲು ಸಾಧ್ಯವಾಗಲಿಲ್ಲ. ಬದಿ ಬಗ್ಗಡದಲ್ಲಿ ಅದೊಂದು ಯಕಶ್ಚಿತ್ ಕಸವೇನೂ ಆಗಿರಲಿಲ್ಲ. ಹುಲಿ ಹುಲಿಯೇ ತಾನೇ… ನಮ್ಮಂತಹ ನರ ಪ್ರಾಣಿಗಳ ಪಾಡು ಎಲ್ಲೇ ಇದ್ದರೂ ಅಷ್ಟೇತಾನೇ! ನೀನು ರತ್ನ ಸಿಂಹಾಸನದಲ್ಲೇ ಕೂತಿದ್ದರೂ; ನಿನ್ನ ಸ್ಥಾನ ಯಾವುದೋ ಅದೇ ನಿನ್ನ ಹೇಸಿಗೆಯ ಸ್ಥಾನ.
ಬದಲಾಯಿಸಿಕೊಳ್ಳಲಾರದಷ್ಟು ಹೀನವಾಗಿ ಈ ಲೋಕವನ್ನು ದೇವರು ಸೃಷ್ಟಿಸಿದ್ದಾನೆಯೇ? ಆಕಾಶ ನೋಡಲು ಎಷ್ಟೊಂದು ನೂಕಾಟ ನೋಡಿ ಈ ಜಾಣ ಕುರುಡರಿಗೆ… ವಾಪಸ್ಸು ಕತೆಗೆ ಬರುವೆ… ಹುಲಿ ಅಲ್ಲೇ ಬದುಕುಳಿದು ಬದುಕಿತ್ತು. ಅದು ಯಾರಾದರೂ ಬಂದೇ ಬರುವರು ಎಂದು ಕಾಯುತ್ತಿತ್ತು! ಅಂತಿಂತಹ ಹುಲಿ ಅಲ್ಲ ಅದೂ; ಅಲ್ಲೇ ಬದುಕುಳಿವ ಹೋರಾಟದ ತಪಸ್ಸು ಮಾಡುತ್ತಿತ್ತು. ಹೌದೂ; ಈಗ ಅದು ವ್ಯಾಘ್ರನಲ್ಲ, ಮೃಗನಲ್ಲ… ಊಹಿಸಿ ಆಗದು. ಕಥೆ ಮುಗಿಸುವೆ ಮಲೆತು ಕೊಳೆತ ಮಣ್ಣನ್ನೂ ಅದು ತಿಂದಿತ್ತು… ಆದರೆ ಕಾಲುಕಿತ್ತು ಎದ್ದು ಮೇಲೆ ಬರಲು ಆಗುತ್ತಲೇ ಇರಲಿಲ್ಲ. ಯತ್ನಿಸಿದಂತೆಲ್ಲ ಬದಿಯಲ್ಲಿ ಮುಳುಗುತ್ತಿತ್ತು. ಪಕ್ಕ ಬಂದು ಉಸಿರಾಡಿ ಬದುಕಿತ್ತು.
ಅಂತೂ ಮಳೆ ಬಂದಂತಾಗಿತ್ತು. ಕಾಡು ಚಿಗುರಿತ್ತು. ಯಾತ್ರೆ ಜಾತ್ರೆ ಆ ಕಾಡ ದಾರಿಯಲ್ಲಿ ಸಾಗಿತ್ತು. ಹೊಂಚಿನ ಹುಲಿಗೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದನ್ನು ಹೇಳಿಕೊಡಬೇಕೇ? ಯಾರೊ ಒಬ್ಬ ಯಾತ್ರಿ ಬ್ರಾಹ್ಮಣ ಹೊರಟಿದ್ದ. ಬಡವ. ಆಸೆಬುರುಕ. ಸಿರಿವಂತ ಕನಸಲ್ಲೆ ದೇವರ ಸೇವೆ ಮಾಡುವುದರಲ್ಲಿ ನಿರತನಾಗಿದ್ದವನು. ಒಂಟಿ ಬ್ರಾಹ್ಮಣ. ದೇವರ ದರ್ಶನ ಪಡೆದು ನಿಮಗೆ ಪುಣ್ಯ ತರುವೆ ಎಂದು ತಿರುಪತಿಗೆ ಹೊರಟಿದ್ದ. ಅವನಿಗೆ ಏನೊ ಕೆಮ್ಮಿತ್ತು. ಹೊತ್ತೇರಿತ್ತು ಕೆಮ್ಮುತ್ತ ಆ ಸನಾತನ ಬಾವಿ ಬಳಿ ಬಂದಿದ್ದ. ಹುಲಿಗೆ ಅವನ ಸದ್ದು ತಿಳಿಯಿತು. ಕರೆಯಿತು. ಮಮಕಾರದ ದೇವಿಯಂತೆ ಬಾರೊ ಮಗೂ ಎಂದಿತು. ಅಹಾ! ಇದಾವ ದೈವ ಕರೆ ಇಂತಹ ಗೊಂಡಾರಣ್ಯದ ಮಧ್ಯೆ ಎಂದು ಅಚ್ಚರಿಯಾಯಿತು. ಸುತ್ತ ಮುತ್ತ ನೋಡಿದ. ಇಲ್ಲಿ ಬಾವಿಯತ್ತ ನೋಡಪ್ಪಾ… ಬಹು ಕಾಲದಿಂದ ಕಾದಿದ್ದೆ ನಿನಗಾಗಿ! ನಿನ್ನಿಂದ ನನಗೆ ಮುಕ್ತಿ; ನನ್ನಿಂದ ನಿನಗೆ ಮುಕ್ತಿ… ಎಂತಾ ಯೋಗಾಯೋಗವಪ್ಪಾ… ಇಷ್ಟು ಕಾಯಿಸಿ ಬಿಟ್ಟೆಯಲ್ಲಾ; ಬಾವಿಗೆ ಇಳಿದು ಬಾರಪ್ಪಾ ಎಂದು ಹುಲಿ ಕೃಶವಾಗಿ ಕರೆಯಿತು. ಬಗ್ಗಿನೋಡಿದ ಆ ಬಡಪಾಯಿ. ಎಲ್ಲರೂ ಮನುಷ್ಯರೇ ತಾನೇ… ಅಯ್ಯೋ; ಹುಲೀ ಯಾಕಪ್ಪ ಅಲ್ಲಿ ಬಿದ್ದಿದ್ದೀಯೇ… ಏನಾಯ್ತು ನಿನಗೆ? ಕರೆದೆ ಯಾಕೆ ನನ್ನನ್ನೇ?
ನೀನು ಅದೃಷ್ಟವಂತ. ಬರಿದೆ ಹೊಂಡವೆ ಇದೂ. ರಾಜರ ಕಾಲದ ಭಂಡಾರ ಇದು. ಇನ್ನು ಮುಂದೆ ನೀನೆ ಇದರ ರಾಜ ಮಹಾರಾಜ. ಯಾರು ಕೆಮ್ಮುತ್ತ ಒಂದು ದಿನ ಬಾವಿ ಬಳಿ ಬರುವರೊ; ಅವರೇ ನಿನ್ನ ಮುಕ್ತಿಗೆ ದೇವತಾ ಮನುಷ್ಯ. ಅಂತವನಿಗೆ ಸಲ್ಲಬೇಕಾದ ಪಾಲು ಇದು. ನಿನ್ನ ಯಾತ್ರೆ ಸಾಕು! ನೀನು ಬಂದೇ ಬರುವುದ ದೈವ ನನ್ನ ಯೋಗ ನಿದ್ದೆಗೆ ಬಂದು ತಿಳಿಸಿತ್ತು. ಸತ್ಯ ಅಸತ್ಯದ ಪರೀಕ್ಷೆ ಬೇಡಾ… ನಾನೊಂದು ಹಿಮಾಲಯದ ಮುನಿಯಾಗಿದ್ದೆ. ದೇವರ ಅರ್ಚಕನಾಗಿದ್ದೆ ಹಿಂದಿನ ಜನ್ಮದಲ್ಲಿ. ಆಗ ಮಾಡಿದ್ದ ತಪ್ಪಿಗೆ ನಾನೀಗ ಈ ಜನ್ಮದಲ್ಲಿ ಮೃಗ ಅಷ್ಟೇ; ಆದರೆ ನನ್ನ ಪೂರ್ವ ಜನ್ಮಗಳ ಧರ್ಮ ಕರ್ಮಗಳ ಬಿಟ್ಟಿಲ್ಲಾ. ಪ್ರಾಯಶ್ಚಿತ್ತದ ಹುಲಿ ನಾನು; ನಿನಗೆ ದಾರಿ ತೋರಿ ಜೀವ ಬಿಡುವೆ… ಬಾ, ಹೆದರದಿರು. ಮನುಷ್ಯರಂತೆಯೇ ಮಾತಾಡುವ ಧರ್ಮ ನನಗೂ ಇದೆ. ಶಾಪವಿಮೋಚನೆ ನನಗೆ ನಿನ್ನಿಂದಾಗಲಿ ಬಾ… ಬಾ.. ಹಾಗೇ ಮೆಲ್ಲಗೆ ಇಳೀ… ಜಾರೀತು ಜೋಕೇ… ಉಷಾರೂ ಎನ್ನುತ್ತಿದ್ದಂತೆಯೇ ಆ ಆಸೆ ಬುರುಕ ಬಡ ಬ್ರಾಹ್ಮಣ ಸರ್ರನೆ ಜಾರಿ ಹೋಗಿ ಹುಲಿಯ ಬಾಯಿಯ ಬಾಯಿಗೇ ತಲೆ ಇಟ್ಟ.
ಗಬಕ್ಕನೆ ಕಚ್ಚಿ ಹಿಡಿಯಿತು! ಘರ್ಜಿಸಿತು ಆನಂದದಲ್ಲಿ. ಬಡ ಬ್ರಾಹ್ಮಣನಿಗೆ ಜ್ಞಾನೋದಯವಾಯಿತೊ ಏನೋ! ಅಹಾ! ನಂಬಬಾರದು ಮನುಷ್ಯರಂತೆ ಮರಳು ಮಾಡುವ ಸನಾತನ ಈ ಹುಲಿ ಸಿಂಹ ಮೃಗಗಳಾ… ಅವುಗಳ ಕನಸಿನ ಸುಳ್ಳು ಮಾತುಗಳ ಎನ್ನುತ್ತಲೇ ದೇವರೂ ಧರ್ಮ ಕರ್ಮ ಆಚಾರ ವಿಚಾರಗಳನೆಲ್ಲ ಹುಲಿಯ ಬಾಯಿಗೆಸೆದು ಪ್ರಾಣ ಬಿಟ್ಟಿದ್ದ. ನೋಡಿದಿರಾ ಎಂಗಿರುತ್ತಾರೆ ಈ ಜನಾ! ಹುಲಿ ಹೊಟ್ಟೆ ತುಂಬಿ ತೇಗಿತು. ಜೀವ ಬಲ ಬಂತು. ಜಿಗಿದು ಮೇಲೆ ಬಂದು ಅದರ ಮೃಗ ಜಾಡಲ್ಲಿ ಅದು ಹೊರಟು ಹೋಯಿತು… ಹಾಗಾಗಿಯೇ ನಾವು ಯಾವತ್ತೂ ಎಚ್ಚರವಾಗಿರಬೇಕು ಮಕ್ಕಳೆ… ಎಂದು ಮಡಕೂಸಮ್ಮ ಕಥೆ ಮುಗಿಸಿ ಆಕಳಿಸುತ್ತಿದ್ದಳು. ಮಲಗಿದ್ದ ಹೈಕಳಾದ ನಮ್ಮ ಅರಿವಿಗೆ ಎಟುಕಿದಂತೆ.. ‘ಅಯ್ಯೋ ಬಡ ಬ್ರಾಹ್ಮಣನೇ’ ಎಂಬ ವಿಷಾದದಲ್ಲಿ ತೇಲಿ ಬರುತ್ತಿದ್ದ ನಿದ್ದೆಯಲ್ಲಿ ಮುದುರಿಕೊಂಡು ಬಿದ್ದಿದ್ದೆವು.
ತಟ್ಟನೆ ನನ್ನಪ್ಪ ಹುಲಿಯಂತೆ ಜಿಗಿದು ಬಂದು ಎದೆ ಮೇಲೆ ಕೂತಂತಾಯಿತು. ಅಪ್ಪ ಹಬ್ಬಗಳಲ್ಲಿ ಹುಲಿ ವೇಷ ಹಾಕುತ್ತಿದ್ದ. ಎಗರೆಗರಿ ಕುಪ್ಪಳಿಸಿ ಹುಲಿಯಂತೆಯೇ ಆಡುತ್ತಿದ್ದ. ಹುಲಿ ಹೊಟ್ಟೇಲಿ ಇಲಿ ಹುಟ್ಟಿತು ಎಂದಂತೆ ಎಂದು ನನ್ನ ಬಗ್ಗೆ ಅಪ್ಪನೇ ಅಪಪ್ರಚಾರ ಮಾಡಿದ್ದ. ಬೆದರಿ ಎದ್ದು ಕೂತಿದ್ದೆ. ಚಂದ್ರ ಮುಸುಕಾಗಿದ್ದ. ಕಣ್ಣಲ್ಲಿ ನೀರು ಬಟ್ಟಾಡುತ್ತಿದ್ದವು. ದುಃಖಕ್ಕೆ ಕಾರಣವ ವಿವರಿಸಬಾರದು. ಎಲ್ಲರೂ ಮಲಗಿದ್ದರು. ಯಾರಿಗೊ ಹೆರಿಗೆ ಮಾಡಿಸುತ್ತಿರುವಂತೆ ಮಾಡಕೂಸಮ್ಮ ಕನವರಿಸುತ್ತಿದ್ದಳು ವಿಧಿ ಮಾತೆಯಂತೆ. ಅಸ್ಪಷ್ಟ ಚಂದ್ರ ನನ್ನ ಕಂಬನಿಗಳಲ್ಲಿ ನಕ್ಕಂತೆ ಕಂಡ. ಎಲ್ಲೆಲ್ಲು ನಿದ್ದೆ. ದೂರದಲ್ಲಿ ಗೂಬೆಗಳು ಹಾಡುವ ಸದ್ದು. ಜೀರುಂಡೆಗಳ ನಿರಂತರ ಗಾನ. ಅದೇ ಹುಲಿಯ ಕಥೆ ಎದೆಯಲ್ಲೆ ನಿಂತಿತ್ತು. ಆ ಹಾಡು ನೆನಪಾಯಿತು. ಯಾಕೊ ಆ ಸಾಲುಗಳು ಆ ನನ್ನ ಬಾಲ್ಯವನ್ನು ಅಲುಗಾಡಿಸಿ ಉರುಳಾಡಿಸಿ ವಿಲವಿಲನೆ ಒದ್ದಾಡಿಸಿದ್ದವು.
‘ಚಂಡ ವ್ಯಾಘ್ರನೆ ನೀನಿದೆಲ್ಲ
ವನುಂಡು ಸಂತಸದಿಂದಿರು’
ನನ್ನ ತಾಯಿಗೂ ಇದೇ ಸಾಲುಗಳು ಯಾವತ್ತೂ ಕಾಡುತ್ತಿದ್ದವು. ಅವಳದೇ ಕರುಳುತಾನೆ ನಾನೂ… ನನಗೂ ಕರುಳು ಹಿಂಡುವಂತಾಗುತ್ತಿತ್ತು. ಚಂದ್ರ ಮರೆಯ ಮೋಡಗಳು ಚದುರಿದ್ದವು. ಅವನನ್ನೇ ದಿಟ್ಟಿಸಿ ನೋಡುತ್ತಿದ್ದೆ. ನಾನು ಎಲ್ಲಿ ಬಿದ್ದಿರುವೆ ಎಂದು ಯಾರೂ ಹುಡುಕುತ್ತಿರಲಿಲ್ಲ. ಯಾರಿಗೆ ತಾನೆ ನಾನು ಬೇಕಾಗಿದ್ದೆ? ತಾಯಿ ಮಾತ್ರ ಆಗಾಗ ಕಂಡಾಗ ಅತ್ತು ಊದಿಕೊಂಡಿರುತ್ತಿದ್ದ ಕಣ್ಣುಗಳ ಕಿರುಗುಟ್ಟಿಸಿ; ಹತ್ತಿರ ಕರೆದು ಕೆದರಿದ್ದ ಕೂದಲಿಗೆ ಹರಳೆಣ್ಣೆ ಹಚ್ಚಿ ಬಾಚಿ; ಕನ್ನಡಿಯ ಮುಂದೆ ನಿಲ್ಲಿಸಿಕೊಂಡು ಫೋಟೊ ತೆಗೆದುಕೊಳ್ಳುವ ಪೋಸು ಕೊಡುತ್ತಿದ್ದಳು. ಆದರೆ ಜೀವನದಲ್ಲಿ ಒಂದಾದರೂ ಅವಳ ಚಿತ್ರ ಪಟ ಸಿಗಲಿಲ್ಲ. ಎಷ್ಟು ಮೊದಲುಗಳಿಗೆ ಮೊದಲು ನಮ್ಮ ತಾತನ ಮನೆ. ದೊಡ್ಡಣ್ಣ ಕ್ಯಾಮರಾ ತರುತ್ತಿದ್ದ. ಇಡೀ ಊರಾದ ಊರ ಹಬ್ಬ ಜಾತ್ರೆ ಮದುವೆಗಳ ಫೋಟೊ ಸಿಗುತ್ತವೆ. ನನ್ನ ತಾಯಿ ಯಾವತ್ತೂ ಫೋಟೊ ತೆಗೆಸಿಕೊಳ್ಳಲು ಎಂದೂ ಬಯಸಿರಲಿಲ್ಲ. ಆದರೂ ಇರಲಿ ನೆಪಕ್ಕೆ ಎಂದು ತಾಯಿಯ ಜೊತೆ ನನ್ನ ಕೂರಿಸಿ ಹತ್ತಾರು ಪೋಟೊ ತೆಗೆದಿದ್ದರು. ಮುಂದಿನ ಹಬ್ಬಕ್ಕೆ ಬಂದಾಗ ಫೋಟೊ ತೋರಿಸಿ ಎಂದು ಕೇಳಿದ್ದೆ. ಅವೆಲ್ಲ ಸರಿಯಾಗಿ ಬಾರದೆ ಹಾಳಾದವು ಎಂದಿದ್ದರು. ಅಪ್ಪ ನನ್ನ ತಮ್ಮನ ಎತ್ತಿಕೊಂಡು ಹತ್ತಾರು ಭಂಗಿಗಳಲ್ಲಿ ಚಿತ್ರ ತೆಗೆಸಿಕೊಂಡಿದ್ದ. ಅವೆಲ್ಲ ಬಹಳ ಚೆನ್ನಾಗಿದ್ದವು. ಅವೆಲ್ಲ ನೆನಪಾದವು. ತಮ್ಮ ಮೈಸೂರಿಗೆ ಹೋಗಿ ಸಾಕಷ್ಟು ಸಮಯ ಆಗಿತ್ತು. ನಿದ್ದೆ ಬರಲಿಲ್ಲ ಅಪ್ಪನ ಎಂಡದ ಪಾರ್ಟಿ ಮುಗಿದು ಎಲ್ಲವೂ ಕರಗುತಿತ್ತು.
ಅಲ್ಲಿಂದ ಎದ್ದು ನಡೆದೆ. ಭಯವೇ ನನಗೇ! ಊರ ನೀರವ ಮೌನದಲ್ಲಿ ಒಬ್ಬನೇ ಸುತ್ತಾಡಿದೆ. ನನ್ನ ಅತ್ತೆಯರ ಅಪ್ಪ ದೆವ್ವಗಳ ಪೂಜಾರಿ; ಅವುಗಳ ದೊರೆ; ಅಂತಾದ್ದರಲ್ಲಿ ಭಯವೇ… ಹಗಲಲ್ಲಿ ನೋಡುತ್ತಿದ್ದ ಆ ನನ್ನ ಹಳ್ಳಿ ಇರುಳ ಕತ್ತಲಲ್ಲಿ ಸಂಮೋಹಕವಾಗಿ ಕಂಡಿತು. ಯಾರ ಸದ್ದೂ ಇಲ್ಲಾ ಯಾವ ಮನುಷ್ಯರ ಯಾವ ಸುಳ್ಳುಗಳೂ ಕಿವಿಗೆ ಬೀಳುತ್ತಿರಲಿಲ್ಲ. ಅಸಹ್ಯವಾದದ್ದು ಏನೂ ಕಾಣುತ್ತಿರಲಿಲ್ಲಾ… ಅರೇ; ಇದನ್ನು ನಾನು ಮೊದಲೇ ನೋಡಬೇಕಿತ್ತಲ್ಲಾ… ತಡಮಾಡಿದೆನಲ್ಲಾ… ಎಂದು ರಸ್ತೆ ಬದಿಯ ಹತ್ತಿ ಹಣ್ಣಿನ ಮರದ ಬಳಿ ಬಂದೆ. ಏನು ವಿಸ್ಮಯವೋ; ನಿಶಾಚಾರಿಗಳು ಆ ಮರದ ಹಣ್ಣಿಗೆ ಮುತ್ತಿಕೊಂಡಿದ್ದೆವು. ಊರ ಮಧ್ಯದ ದಾರಿಯಲ್ಲಿ ನಡೆದೆ. ಆಗ ಬೀದಿ ದೀಪಗಳ ಕಲ್ಪನೆಯೆ ಇರಲಿಲ್ಲ. ಶಾಲೆಯ ಬಳಿ ಬಂದೆ! ಅರೇ; ಶಾಲೆಯ ಪಾಠಗಳಿಗೆ ಅಷ್ಟೊಂದು ಹೆದರುವ ನಾನು ಇಲ್ಲಿಗೆ ಈ ಅವೇಳೆಯಲ್ಲಿ ಯಾಕೆ ಬಂದೆ ಎಂದುಕೊಂಡು ಸಿಟ್ಟಾಯಿತು. ಶಾಲೆಯ ಬಾಗಿಲುಗಳಿಗೆ ಕಲ್ಲು ಬೀರಿದೆ. ಮಾರಿಗುಡಿಯತ್ತ ಬಂದೆ. ಭಕ್ತಿ ಬರಲಿಲ್ಲಾ! ಭಕ್ತರು ಮಾಡುವ ದಾನದ ಹಣ ಇಲ್ಲೆಲ್ಲಾದರೂ ಸಿಗಬಹುದೇ ಎಂದು ತಡಕಿದೆ. ಭದ್ರ ಬೀಗ ಬಾಗಿಲು ಇಣುಕಿದೆ. ಗರ್ಭಗುಡಿಯಲ್ಲಿ ದೀಪ ಉರಿಯುತ್ತಲೇ ಇದ್ದವು. ಸುಮ್ಮನೆ ರೂಢಿಯಲ್ಲಿ ಕೈ ಮುಗಿದೆ. ಹಾಗೇ ಮುಂದೆ ಹೊರಟೆ.
ಯಾರೊ ಹಿಂಬಾಲಿಸುತ್ತಿದ್ದಾರೆಂದು ಮತ್ತೆ ಮತ್ತೆ ಹಿಂತಿರುಗಿ ನೋಡಿದೆ. ನಾಯಿ! ಕುಯ್ ಎಂದು ಕ್ಷೀಣ ದನಿಯಲ್ಲಿ ಕಾಲ ಬಳಿ ಬಂದು ನಿಂತು… ಯಾಕೆ ಹೀಗೆ ಅಲೆವೆ; ಹೋಗು ಮಲಗು ಎಂಬಂತೆ ಆಕಳಿಸಿ ಸದ್ದು ಮಾಡಿತು. ಹೋಗು ಬರಬೇಡ ಎಂದೆ ಆ ನಟ್ಟಿರುಳಲ್ಲಿ. ನನ್ನ ದನಿಯೇ ನನಗೆ ಭಯ ಹುಟ್ಟಿಸಿತು. ಅರೇ; ಇಂತಹ ಕಲ್ಲು ನೀರು ಕರಗುವ ಹೊತ್ತಲ್ಲಿ ಮನುಷ್ಯನ ದನಿ ಮನುಷ್ಯನನ್ನೇ ಬೆದರಿಸುತ್ತದಲ್ಲಾ… ಮತ್ತೊಮ್ಮೆ ಜೋರಾಗಿ ಗದರಿದೆ. ಆಕಾಶ ಕೇಳಿಸಿಕೊಂಡಂತೆ ಬಾಸವಾಯಿತು! ತಬ್ಬಲಿಯ ಹುಚ್ಚುತನಾ ಇದು ಎಂದು ಅದಾಗಲೇ ನನ್ನ ಬಗ್ಗೆ ಆರೋಪಿಸಿದರೂ ಬೆರೆಯುತ್ತಿರಲಿಲ್ಲ. ನನ್ನ ತಮ್ಮನೇ ನನ್ನ ಹುಚ್ಚ ಎಂದಿದ್ದ. ನನ್ನ ಜೊತೆ ಬೆರೆಯುತ್ತಿರಲಿಲ್ಲ. ಅದೆಲ್ಲ ಬೇರೆ ಊರ ತುಂಬ ಬೀದಿ ಬೀದಿಗಳ ಸುತ್ತಿದೆ. ಏನ ಕಂಡೆ! ಕತ್ತಲೆಯ ಸುಖ ಎನಿಸಿತ್ತು. ಹಿಂಸಿಸುವರೆಲ್ಲ ಮಲಗಿದ್ದಾರೆ. ನಯವಂಚಕ ಮಾತುಗಳ ಬಾಯಿಗೆ ಬೀಗ ಬಿದ್ದಿವೆ. ಅಲ್ಲಲ್ಲಿ ಎಲ್ಲೊ ಜೋಗುಳದ ಸದ್ದು ತೇಲಿ ಬರುತ್ತಿದೆ. ಅತ್ತು ಕರೆವ ಸಂತೈಸುವ ತಾಯಂದಿರ ಕ್ಷೀಣದನಿ… ಹಗಲು ರಾತ್ರಿಗಳ ಲೆಕ್ಕ ಉಂಟೇ… ಯಾವುದೊ ನಾಯಿ ಊಳಿಡುತ್ತಿದೆ! ಜಗದ ಯಾವ ಹಿಂಸೆಯು ವಿರುದ್ಧವೊ; ಇಲ್ಲವೇ ಮನುಷ್ಯ ವಿಧಿಯ ವಿನಾಶದ ಬಗೆಗೂ ನಟ್ಟಿರುಳಲ್ಲಿ ಸುಡುಗಾಡು ಸಿದ್ದರು ಭವಿಷ್ಯ ಹೇಳುವಂತೆ… ಬೊಗಳುವ ಅದರ ಪರಿಗೆ ಪರಿಹಾರವೇ ಇಲ್ಲ ಎಂಬಂತೆ.
ಎಲ್ಲೂ ಮಲಗಲು ಬಯಕೆಯೆ ಬರಲಿಲ್ಲ. ಅತ್ತಿತ್ತ ಸುತ್ತಾಡಿ ಊರ ಹೊಲ ಮಾಳ ತೋಟ ತುಡಿಕೆ ಹೊಳೆ ಹಳ್ಳ ಕೆರೆಗಳತ್ತ ಹೋಗಲು ಮನಸ್ಸಾಯಿತು. ಇವೆಲ್ಲ ಅಸಹಜ ಬಾಲ್ಯದ ಅನುಭವಗಳಿರಬಹುದು. ನಾನಿವನ್ನೆಲ್ಲ ಹೇಗೆ ದಾಟಿ ಬಂದೆನೊ!
ಹೊಳೆ ಜುಳು ಜುಳು ಹರಿಯುತ್ತಿತ್ತು ನಿರುಮ್ಮಳ ರಾತ್ರಿಯಲ್ಲಿ. ಅಂತಹ ಹೊತ್ತಲ್ಲಿ ಪ್ರಶಾಂತ ಮಡುವಿಗೆ ಕಲ್ಲೆಸೆದರೆ ಹೇಗಿರಬಹುದು? ಒಂದು ದೊಡ್ಡ ಕಲ್ಲನ್ನೇ ಎತ್ತಿ ದಂಡೆಯಲ್ಲಿ ನಿಂತು ಬಿಸಾಡಿದೆ.. ಅಹಾ! ಶಿವ ಶಿವಾ! ನಾನೆಂದೂ ಅಂತಹ ಶಬ್ದ ಮಾಂತ್ರಿಕ ವಿಸ್ಮಯವ ಕಂಡೇ ಇರಲಿಲ್ಲ. ಹೊಳೆಯು ಯವ್ವನದ ಕುದುರೆಯಂತೆ ಕೆನೆಯಿತು. ಅಹಹಹಾ ಬಾ ಎಂದು ಕರೆದಂತೆ ಸದ್ದಾಯಿತು. ನನ್ನಿಂದ ನನಗೇ ಭಯವಾಗಿತು. ಹೊಳೆ ದಂಡೆಯ ಆಚೆ ಊರ ಸ್ಮಶಾನವಿತ್ತು. ರಾತ್ರಿ ಮಾತ್ರ ಊರುಕೇರಿಯಾಗಲಿ ಸ್ಮಶಾನವಾಗಲೀ ಒಂದೇ ತರ ಇರುತ್ತವೇನೊ. ದುಡಿದು ಬಂದವರೆಲ್ಲ ದಣಿದು ಜೀವನ ಸುಧಾರಿಸಿಕೊಳ್ಳುತ್ತಾರೆ. ಆ ಸ್ಮಶಾನದಲ್ಲಿ ಮಲಗಿರುವವರೊ ಗಾಡಾಂಧಕಾರದ ನಿದ್ದೆಯಲ್ಲಿ ಲೀನವಾಗಿ ಮಣ್ಣಲ್ಲಿ ಮಣ್ಣೇ ಆಗಿ ರೂಪಾಂತರವಾಗಿ ಬಿಟ್ಟಿರುತ್ತಾರೆ. ಸಾಮ್ಯ ವ್ಯತ್ಯಾಸಗಳಿಗೆ ಅಷ್ಟು ದೊಡ್ಡ ಅಂತರವೇ ಇಲ್ಲಾ!
ಒಳ್ಳೆಯವನು ಯಾವ ಕ್ಷಣದಲ್ಲಾದರೂ ಸರ್ವಾಧಿಕಾರಿ ಆಗಿಬಿಡಬಹುದಲ್ಲಾ… ಕೆಟ್ಟವನು ಕೂಡ ದಿವ್ಯ ಸ್ಥಾನಕ್ಕೆ ಏರಬಹುದಲ್ಲಾ… ಯಾರಿಗೆ ಯಾವ ಹೆಸರಿಡುವುದೂ… ನಾನೊಂದು ಹಂದಿಯೇ… ಹೊಳೆ ದಂಡೆಗೆ ಹಾಗೆ ದಡುಮ್ಮೆಂದು ಸೈಜುಗಲ್ಲ ಎಸೆದ ಕೂಡಲೇ ಮಲಗಿದ್ದ ನದಿಗೆ ಭಯವಾಗಿ ಎಚ್ಚರವಾಯಿತೇನೊ.. ನೀರಿನ ಅಲೆಗಳು ತಲ್ಲಣಿಸಿ ಈ ನೀರವತೆಯ ಜೊತೆ ಈ ಬಾಲಕನಿಗೆ ಯಾವ ಆಟವೊ ಏನೊ ಎಂದುಕೊಂಡಿರಬೇಕು. ಸ್ಮಶಾನದ ಕಡೆಯಿಂದ ನರಿಗಳು ಊಳಿಟ್ಟಿದ್ದವು. ಬಾವಲಿಗಳು ದಂಡೆಯಲ್ಲಿದ್ದ ದೈತ್ಯ ಅರಳಿ ಮರದಲ್ಲಿ ಬೀಡು ಬಿಟ್ಟಿದ್ದವು ಒಂದೇ ಸಲಕ್ಕೆ ಹಾರಿದ್ದವು. ಆ ಸದ್ದಿಗೆ ಮರಕ್ಕೆ ಅಂಟಿಕೊಂಡಿದ್ದೆ. ಇರುಳ ಲೋಕವೇ ಬೇರೆ. ಅದನ್ನು ನಾನು ಕಲಿಯಬೇಕು ಎಂದು ಅವತ್ತೇ ತೀರ್ಮಾನಿಸಿದ್ದೆ. ಅತ್ತ ಇತ್ತ ತಿರುಗಾಡಿದೆ. ಚಂದ್ರ ಮುಳುಗಿದ್ದ. ಅಲ್ಲೆಲ್ಲೊ ಒಂದು ಜಾಗ ಕಂಡಿತು. ಅಲ್ಲೇ ಮಲಗಿದೆ. ಅತ್ತೆಯರ ತಂದೆ ಅಂತಹ ಶಕ್ತಿಯನೆಲ್ಲ ಕಲಿಸಿದ್ದ. ಮಲಗಿದೆ.
ಬೆಳಿಗ್ಗೆ ಎದ್ದು ಬೆಚ್ಚಿದೆ.. ಅದೇ ಹೊಳೆಯಲ್ಲಿ ಮಿಂದೆದ್ದು ಬಂದೆ. ತಾತನ, ಅಪ್ಪನ ದೈನಂದಿನ ಹೋಟೇಲು, ದರ್ಬಾರು, ಅದೇ ಗಿರಾಕಿಗಳು; ಅದದೇ ಜೀವನ ವಿವರಗಳು ಸುಮ್ಮನೆ ಸಾಗುತ್ತಿದ್ದವು. ತಾತನಿಗೆ ಮಾತ್ರ ಮೋಕ್ಷದ ಮಾತೆಂದರೆ ಮಮಕಾರ. ಅದಕಷ್ಟೇ ಕರಗುತ್ತಿದ್ದ. ಅಂತಹ ಹಾಡುಗಾರರ ಕರೆಸಿ ಹಾಡಿಸಿ ಸನ್ಮಾನಿಸುತ್ತಿದ್ದ. ಅಪ್ಪ ಅಂತಹ ಯಾವ ಗಾಯಕರಿಗೂ ಬಿಡಿಗಾಸಿನ ಗೌರವವನ್ನೂ ಕೊಡುತ್ತಿರಲಿಲ್ಲ. ಹೋಟೆಲ ಚಾಕರಿಗೆ ಬಂದಿದ್ದೆ. ವಿಪರೀತ ಕೆಲಸ. ಎಂಡದ ಬಾಬತ್ತಿನವರೇ ತಾತನ ಮುಖ್ಯ ಗಿರಾಕಿಗಳು. ಅವತ್ತು ಭಾನುವಾರ. ಮಟನ್ ದಿನ. ಗಿರಾಕಿಗಳು ತಾತ ಮಾಡುವ ಕೈಮಾ, ಬೋಟಿ, ಚಾಪ್ಸ್‌ಗಳಿಗಾಗಿ ಯಾವತ್ತೂ ಕಾಯುತ್ತಿದ್ದರು. ತಾತನ ಅಡುಗೆ ನೈಪುಣ್ಯವೇ ಬೇರೆ. ಅದನ್ನು ಅನುಕರಿಸಲು ಯಾರಿಂದಲೂ ಸಾಧ್ಯವಿರಲಿಲ್ಲಾ. ದೂರದ ಊರುಗಳಿಂದ ಬಂದು ಆ ಭಾನುವಾರದ ಮಾಂಸದ ಊಟಕ್ಕೆಂದೇ ನೆಂಟರ ಮನೆಯಲ್ಲಿ ನೆಪ ಹೇಳಿ ಉಳಿದಿದ್ದು; ಚೆನ್ನಾಗಿ ಉಂಡು ತಿಂದು; ನಂತರ ಕರಿಯನ ಇಸ್ಪೇಟಾಟದ ಅಖಾಡಕ್ಕೆ ಹೋಗಿ ಆಡಿ ಕಾಸು ಕಳೆದುಕೊಂಡೊ; ಸಂಪಾದಿಸಿಕೊಂಡೊ ಹೋಗುವುದು ಅವತ್ತಿನ ಅವರ ಪ್ರವಾಸ ಸುಖವಾಗಿತ್ತು.
ಅಂತೆಯೇ ಊರಲ್ಲಿ ಸಲೀಸಾಗಿ ಮಲಗಲು ಹೆಂಗಸರು ಸಿಗುತ್ತಿದ್ದರು. ಅಂತಹ ಮನೆಗಳಿಗೆ ‘ನೀರು’ ಕೊಡ್ರವ್ವಾ ಎಂದು ಕೇಳಿದ್ದರೆ ಸಾಕಿತ್ತು. ಬಾರಣ್ಣಾ ಎಂದು ಕೂರಿಸಿ ಬೇಕಾದವಳ ಕರೆಸಿ ಮಲಗಿಸಿ ಬಿಡುತ್ತಿದ್ದರು. ಅತ್ತ ಪೆಂಟೆಗೆ ಹೋಗಿ ಎಂಡ ಕುಡಿದು ಎಂಜಿಆರ್ ಟೆಂಟ್ ಸಿನಿಮಾ ನೋಡಿ ಮಲಗುವವರದೇ ಒಂದು ಕಿನ್ನರ ಲೋಕ. ಅಪ್ಪನಿಗೆ ಈಗ ಅಲ್ಲಷ್ಟು ಧೈರ್ಯ ಇಲ್ಲ. ಇತ್ತ ತಾತನ ಹೋಟೆಲ ಮಾಂಸದೂಟವೇ ಬೇರೆ. ಉಂಡು ತಿಂದು ನೆಂಟರಿಗೆ ನಮಸ್ಕರಿಸಿ ಬೆಳಿಗ್ಗೆ ಹೊರಟು ಹೋಗುತ್ತಿದ್ದರು. ಅಂತಿಂತಹ ಊರಲ್ಲವಾಗಿತ್ತು. ಒಂದು ಕಾಲಕ್ಕೆ ನಮ್ಮ ಊರು. ಆ ಹೈದರ್ ಟಿಪ್ಪು ಕಾಲಕ್ಕಾಗಲೇ ನಮ್ಮೂರು ನಂದನ ವನವಾಗಿತ್ತು. ತೆಂಗು ಬಾಳೆ ಅಡಿಕೆ ತೋಟಗಳ ಜೊತೆ ಹಣ್ಣಿನ ತೋಟಗಳಿದ್ದವು. ಸದಾ ಹರಿವ ಹೊಳೆ ಇತ್ತು. ಕರೆಯ ನೀರಿತ್ತು. ಮಹರಾಜರು ಉಣ್ಣುವ ಆ ಸೀಮೆಯ ರಾಜಮುಡಿ ಬತ್ತವನ್ನೆ ಅವರು ಬೆಳೆಯುತ್ತಿದ್ದರು. ಉಣ್ಣುತ್ತಿದ್ದರು. ಟಿಪ್ಪು ಪ್ರಭಾವದಿಂದಾಗಿ ನಮ್ಮೂರು ರೇಶಿಮೆಯ ನಾಡಾಗಿತ್ತು. ನನ್ನ ಅಪ್ಪ ಬಹಳ ದುಷ್ಟ. ಆದರೆ ಅವನಿಗೆ ಪ್ರಿಯವಾಗಿದ್ದ ಕೆಲಸ ಎಂದರೆ ರೇಶಿಮೆ ಹುಳು ಸಾಕಿ ಅವು ಗೂಡಾದಾಗ ಮಾರಿ ಹೆಮ್ಮೆ ಪಡುವುದು! ನಾನಿವತ್ತಿಗೂ ಅಪ್ಪನ ರೇಶಿಮೆಯ ಈ ಪ್ರೀತಿಯ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವನು ಅಷ್ಟೆಲ್ಲ ವಿಕಾರಗಳ ಪೂರ್ವದಲ್ಲಿ ರೇಷ್ಮೆಹುಳು ಸಾಕಾಣಿಕೆಯಲ್ಲೆ ಬಹಳ ಸಮಯ ಕಳೆದಿದ್ದ.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.