ನನಗೆ ಒಂದು ಆಶ್ಚರ್ಯ ಅಂತ ಅನ್ನಿಸಿದ್ದು, ಕತೆ ನಡೆಯವ ಆ ಸಮಯ ಏನಿದೆ ಆಗ ಸಿದ್ದಾಪುರದಲ್ಲಿ ಸ್ವಾತಂತ್ರ್ಯ ಹೋರಾಟ ಏರುಗತಿಯಲಿದ್ದ ಸಮಯ. ಪ್ರತಿ ಮನೆಯಲ್ಲೂ ಒಬ್ಬರಲ್ಲಾ ಒಬ್ಬರು ಜೈಲಿಗೆ ಹೋಗಿದ್ದ ಪರಿಸ್ಥಿತಿ ಇತ್ತು. ಮನೆ ಗಂಡಸ್ರೆಲ್ಲಾ ಜೈಲಲ್ಲಿ, ಈ ಕಡೆ ಜಪ್ತಿ ಮಾಡಲೆ ಬಂದಾಗ ಹೆಂಗಸ್ರೇ ಅಡ್ಡ ನಿಂತು ಪೋಲೀಸರ ವಿರುದ್ಧ ಹೋರಾಡಿದ ಸನ್ನಿವೇಶದ ಘಟನೆಗಳು ಬಹಳ ನಡೆದಿವೆ. ಇಡೀ ಸಿದ್ದಾಪುರ ತಾಲೂಕು ಜಾತಿ ಮತ ಬೇಧ ಇಲ್ಲದೇ ಒಂದಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಸಿಡಿದೆದ್ದು ನಿಂತಿದ್ದ ಸಮಯ.
“ಓದುವ ಸುಖ” ಅಂಕಣದಲ್ಲಿ ವಿ.ಟಿ. ಶೀಗೇಹಳ್ಳಿ ಬರೆದ ತಲೆಗಳಿ ಕಾದಂಬರಿಯ ಬಗ್ಗೆ ಬರೆದಿದ್ದಾರೆ ಗಿರಿಧರ್‌ ಗುಂಜಗೋಡ್

ನಿಜ ಹೇಳಬೇಕು ಅಂದರೆ ೨೦೧೦ರ ಆಸುಪಾಸಲ್ಲೇ ಪ್ರಕಟವಾದ ‘ತಲೆಗಳಿ’ ಹೇಳುವ ಒಂದು ಕಾದಂಬರಿ ಇದೆ; ಅದರ ಇಡೀ ಕತೆ ನನ್ನೂರ ಆಸುಪಾಸೇ ಇರುವ ಗ್ರಾಮಗಳಾದ ಕವಲಕೊಪ್ಪ, ಹೂವಿನಮನೆ ಇತ್ಯಾದಿಗಳೆಡೆಗೇ ನಡೆಯುತ್ತದೆ ಅನ್ನುವ ವಿಷಯವೇ ಗೊತ್ತಿರಲಿಲ್ಲ‌. ಒಂದಿನ ಫೇಸ್‌ಬುಕ್ಕಲ್ಲಿ ಯಾವ್ದೋ ಚರ್ಚೆಯಾಗ್ತಾ ಇರಬೇಕಾದರೆ ಪ್ರಶಾಂತ್ ಭಟ್ ಈ ಪುಸ್ತಕದ ಬಗ್ಗೆ ಹೇಳಿದ್ರು, ಭಾರೀ ಅದ್ಭುತ ಕಾದಂಬರಿ ವಿಟಿ ಶೀಗೆಹಳ್ಳಿಯವರು ಬರದಿದ್ದು, ಹವ್ಯಕನಾಗಿ ಈ ಕಾದಂಬರಿ ಓದಿದ್ದಿಲ್ಲೆ ಅಂದ್ರೆ ಹೇಗೆ ಎಂದು. ನಮ್ಮೂರಲ್ಲಿ ಬಿಡುಗಡೆ ಆದ ಒಂದು ಕಾದಂಬರಿ ಹೆಸರೇ ಕೇಳಿ ಗೊತ್ತಿಲ್ಲವೆನ್ನುವ ವಿಷಯ ನಿಜಕ್ಕೂ ಬೇಜಾರಿನದ್ದಾಗಿತ್ತು. ಪುಸ್ತಕವನ್ನು ಖರೀದಿಸಲು ಆನ್‌ಲೈನಿನಲ್ಲು ಹುಡುಕಿದಾಗ ಸಿಗಲು ೪-೫ ದಿನ ಆಗುವ ವಿಷಯ ಗೊತ್ತಾಯಿತು. ಆದರೆ ಅಲ್ಲಿವರೆಗೆ ಕಾಯುವ ತಾಳ್ಮೆಯಂತೂ ಖಂಡಿತ ಇರಲಿಲ್ಲ. ಅದನ್ನ ಗುಂಜಗೋಡಿನ ನಮ್ಮನೆ ವಿಳಾಸಕ್ಕೆ ಆರ್ಡರ್ ಮಾಡಿ, ಇ-ಪುಸ್ತಕವನ್ನು ಖರೀದಿಸಿ ಡೌನ್‌ಲೋಡ್ ಮಾಡಿಕೊಂಡೆ. ಅಪ್ಪ ಅಮ್ಮಂಗೂ ಓದುವ ಹವ್ಯಾಸ ಜಾಸ್ತಿನೇ ಇರುವುದರಿಂದ ಅವರೂ ಇದನ್ನು ಆಸಕ್ತಿಯಿಂದ ಓದಬೇಕು ಎಂದು ಅನ್ನಿಸಿತು. ಸಂಜೆ ಮನೆಗೆ ಫೋನ್ ಮಾಡಿದಾಗ ಅಪ್ಪನ ಹತ್ತಿರ, ನಿಂಗೆ ವಿಟಿ ಶೀಗೆಹಳ್ಳಿ ಅವರ ಗೊತ್ತಿದೆಯಾ ಎಂದು ಕೇಳಿದೆ. ಅಪ್ಪಂಗೆ ಅವರ ಪರಿಚಯ ಇದ್ದಿದ್ದರೂ ಆ ಕಾದಂಬರಿ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಹಾಗೆಯೇ ‘ತಲೆಗಳಿ’ ಅಂದ್ರೆ ಅರ್ಥ ಗೊತ್ತಿದೆಯಾ? ಎಂದು ಕೇಳಿದಾಗ, ತಲೆಗಳಿ ಅಂದರೆ ತಲೆಮಾರು ಅಂತ ಹೇಳಿದ.

ಕಾದಂಬರಿಯೇ ‘ಕನ್ನಡ ಕಂದ’ ಪದ್ಯದ ಒಂದು ಚಂದದ‌ ಸಾಲಿನಿಂದ ಶುರುವಾಗುತ್ತದೆ.

‘ಉಂಬಲಿಲ್ಲೆ ತಿಂಬಲಿಲ್ಲೆ
ಹಂಬಲ ಕನ್ನಡಕ್ಕೆಂತ ಕಡಾ

ಗೇಯ್ಕಂಡ್ ತಿನ್ಲಿ ಬೇಡ್ಕಂಡ್ ತಿನ್ಲಿ
ಮನೆ ಹೇಳಿ ಒಂದು ಇರವಡ
ಅದಕ್ಕಾಗಿ ಕನ್ನಡ ಬಿಟ್ಟಿಕಡ’ ಹೇಳಿ.

ಏನೇ ಆದರೂ ಕನ್ನಡ ಬಿಡಬೇಡ ಎಂಬುದು ಇದರ ತಾತ್ಪರ್ಯ.

ನಾನು ಹೆಚ್ಚಾಗಿ‌ ಯಾವುದೇ ಪುಸ್ತಕ ಓದಬೇಕಾದರೆ ಮುನ್ನುಡಿ, ಬೆನ್ನುಡಿ ಎಲ್ಲಾ ಓದುವುದು ಅಪರೂಪ. ಆದರೆ ಇದನ್ನ ಮೊದಲ ಸಾಲಿನಿಂದಲೇ ಓದಲು ಶುರುಮಾಡಿದೆ. ಆಗ ಗೊತ್ತಾದ ಮೊದಲನೇ ಸಂಗತಿ ಏನು ಅಂದರೆ ಈ ಪುಸ್ತಕ ಪ್ರಕಟ ಆಗುವ ಮುನ್ನವೇ ಶೀಗೆಹಳ್ಳಿಯವರು ಮರಣ ಹೊಂದಿದರು ಅಂತ. ಏನೇ ಆದರೂ ಇಂತಹ ಅದ್ಭುತ ಕಾದಂಬರಿ ಕೊಟ್ಟ ಅವರು ಇದರ ಯಶಸ್ಸನ್ನ ನೋಡಲಾರೂ ಬದುಕಿರಬೇಕಾಗಿತ್ತು ಅಂತ ಅನ್ನಿಸ್ತು. ಕುತೂಹಲದ ವಿಷಯವೇನೆಂದರೆ ಪುಸ್ತಕ ಬಿಡುಗಡೆಯಾದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳು ಆಗಷ್ಟೇ ಕಣ್ಣು ಬಿಡುತ್ತಾ ಇದ್ದವು. ಹೆಚ್ಚಿನ ಜನರಿಗೆ ಇದರ ಇರುವಿಕೆ ತಲುಪಿರಲಿಲ್ಲ. ಮೂರ್ನಾಲ್ಕು ವರ್ಷಗಳ ಮುಂಚೆ ಒಬ್ಬರು ಶಿಕ್ಷಕಿ/ಬರಹಗಾರ್ತಿ ಇದರ ರಿವ್ಯೂ ಬರೆದ ನಂತರ ಅನೇಕರು ಓದಲು ಶುರುಮಾಡಿದರು. ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ವೈಶಾಲಿ ಹೆಗಡೆ ಮತ್ತು ಶ್ರೀಪಾದ ಹೆಗಡೆಯವರು ಬರೆದ ವಿಮರ್ಶೆ ವೈಯಕ್ತಿಕವಾಗಿ ಇಷ್ಟವಾಗಿವೆ.

ಇರಲಿ ವಿಷಯಾಂತರ ಬೇಡ, ಒಂದು ಪುಸ್ತಕದ ಬಗ್ಗೆ ಬರೆಯಬೇಕಾದರೆ ಆದಷ್ಟೂ ಪುಸ್ತಕದಲ್ಲಿ ಏನಿದೆ ಎಂದು ಹೇಳಬಾರದು ಅಂದುಕೊಂಡರೂ ಈ ಪುಸ್ತಕದ ವಿಷಯದಲ್ಲಿ ಅದು ಸಾಧ್ಯವಿಲ್ಲ. ಎಲ್ಲವನ್ನೂ ಹೇಳಿ ನಿಮ್ಮ ಕುತೂಹಲ ಹಾಳುಮಾಡುವುದಿಲ್ಲ. ಆದರೆ ಕತೆಯ ಹಿನ್ನೆಲೆ ಬಗ್ಗೆ, ಏನು ಆಗುತ್ತದೆ ಎನ್ನುವುದರ ಬಗ್ಗೆ ಒಂದು ನಾಕು ಮಾತು ಹೇಳಲೇಬೇಕು ಅಂತ ಅನ್ನಿಸ್ತಾ ಇದೆ.

ಒಂದು ಕಾಲದಲ್ಲಿ ದೊಡ್ಡ ಸ್ಥಿತಿವಂತರಾಗಿ ಮೆರೆದಿದ್ದ ಕವಲಕೊಪ್ಪ ಎಂಬ ಊರಿನ ಸುಬ್ರಾಯ ಹೆಗಡೆ ಅವನ ಅತಿಯಾದ ದಾನ ಧರ್ಮದಿಂದ, ಹಿಡಿತ ಇಲ್ಲದೇ ಇದ್ದ ಖರ್ಚಿನಿಂದ, ಹೀಗೆ ಬೇರೆ ಬೇರೆ ಕಾರಣಗಳಿಂದ ಇರುವ ಸಂಪತ್ತನೆಲ್ಲಾ ಕಳೆದುಕೊಳ್ಳುತ್ತಾನೆ. ಎಲ್ಲಾ ಕಡೆ ಆಗುವ ಹಾಗೇ ಇಲ್ಲೂ ಆಯಿತು, ದುಡ್ಡಿರುವಾಗ ಇಂದ್ರ ಚಂದ್ರ ಹೇಳ್ತಾ ಇದ್ದ ಬಂಧುಗಳೆಲ್ಲಾ ಆನಂತರ ಒಬ್ಬರೂ ಸಹಾಯಕ್ಕೆ ಬರುವುದಿಲ್ಲ. ಇನ್ನೇನು ತೋಟ ಮನೆ ಹರಾಜಿಗೆ ಬತ್ತು ಹೇಳಬೇಕಾದರೆ ಅವನ ಜೀವನದಲ್ಲಿ ಪವಾಡ ಹೇಳಬಹುದಾದ ಒಂದು ಘಟನೆ ನಡೆಯುತ್ತದೆ. ಕೊನೆ ದಾರಿಯಾಗಿ ಪಕ್ಕದ ಊರಿನ ಸುಬ್ರಾಯ ಹೆಗಡೆ (ಗೊಂದಲ ಮಾಡಿಕೊಳ್ಳಬೇಡಿ, ಇವನು ಬೇರೆ ಸುಬ್ರಾಯ ಹೆಗಡೆ) ಹತ್ತಿರ ಸಹಾಯ ಕೇಳಲು ಹೋಗಿ ಅವನ ಹತ್ತಿರವೂ ಅಪಮಾನಿತನಾಗಿ ಬರಬೇಕಾದರೆ ಒಂದು ದೊಡ್ಡ ಪವಾಡ ಆಗುತ್ತದೆ. ದೇವಿ ದೇವಸ್ಥಾನದಲ್ಲಿ ಅವನಿಗೆ ಸಿಕ್ಕ ನಿಧಿಯಿಂದ ಅವನ ಏರುಗತಿ ಶುರುವಾಗುತ್ತದೆ. ಅಲ್ಲಿಂದ ಮುಂದೆ ಅವನು ಹೇಗೆ ಮತ್ತೆ ಅನುಕೂಲಸ್ಥ ಸ್ಥಾನಕ್ಕೆ ಏರಿದ, ಕಳೆದುಹೋಗಿದ್ದ ಗೌರವವನ್ನ ಹೇಗೆ ಗಳಿಸಿಕೊಂಡ, ಹತ್ತಾರು ಜನಕ್ಕೆ ಉಪಕಾರಿ ಆಗುವ ಹಾಗೆ ಹೇಗೆ ಬದುಕಿದ, ಕೊನೆಗೆ ಅವನ ಅವಸಾನ ಹೇಗಾಯಿತು ಅಂತ ಹೇಳುವುದೇ ಇಡೀ‌ ಕಾದಂಬರಿಯ ಜೀವಾಳ. ಈ‌ ಕಾದಂಬರಿ ಓದಿ ಮುಗ್ಸಿದ ಮೇಲೂ ಸುಬ್ರಾಯ ಹೆಗಡೆ ಪಾತ್ರ ಮನಸ್ಸಲ್ಲಿ ಸಿಕ್ಕಾಪಟ್ಟೆ ದಿನ‌ ಇರುತ್ತದೆ.

ಕುತೂಹಲದ ವಿಷಯವೇನೆಂದರೆ ಪುಸ್ತಕ ಬಿಡುಗಡೆಯಾದ ಸಮಯದಲ್ಲಿ ಸಾಮಾಜಿಕ ಜಾಲತಾಣಗಳು ಆಗಷ್ಟೇ ಕಣ್ಣು ಬಿಡುತ್ತಾ ಇದ್ದವು. ಹೆಚ್ಚಿನ ಜನರಿಗೆ ಇದರ ಇರುವಿಕೆ ತಲುಪಿರಲಿಲ್ಲ. ಮೂರ್ನಾಲ್ಕು ವರ್ಷಗಳ ಮುಂಚೆ ಒಬ್ಬರು ಶಿಕ್ಷಕಿ/ಬರಹಗಾರ್ತಿ ಇದರ ರಿವ್ಯೂ ಬರೆದ ನಂತರ ಅನೇಕರು ಓದಲು ಶುರುಮಾಡಿದರು.

ಮತ್ತೊಂದು ವಿಶೇಷತೆ ಅಂದ್ರೆ ಕಾದಂಬರಿ ಬರೆದ ಭಾಷೆ. ಅಲ್ಲಿ ಬಳಸಲ್ಪಡುವುದು ೭೦-೮೦ ವರ್ಷಗಳ ಹಿಂದೆ ಬಳಸ್ತಾ ಇದ್ದಿದ್ದ ಹವಿಗನ್ನಡ. ಆಗಿನದ್ದಕ್ಕೂ ಈಗಿನದ್ದಕ್ಕೂ ಸಾಕಷ್ಟು ವ್ಯತ್ಯಾಸ ನಮ್ಮ ಕಣ್ಣಿಗೆ ಕಾಣುತ್ತದೆ. ಭಾಷೆಯಲ್ಲಿ ವಿಕಸನ ಸಹಜ. ಆದರೆ ನಮ್ಮ ಕಡೆಯವರು ಅಂದರೆ ಸಿರ್ಸಿ ಸಿದ್ದಾಪುರ ಸಾಗರ ಕಡೆಯವರು ಸ್ವಲ್ಪ ಜಾಸ್ತಿನೇ ವೇಗದಲ್ಲಿ ಜನಪದ ಸೊಗಡನ್ನು ಬಿಟ್ಟು ಆಧುನಿಕ ಶಿಷ್ಟ ಕನ್ನಡದ ಪ್ರಭಾವಕ್ಕೆ ಒಳಗಾಗಿರುವುದು ನಿಜ. ನಮ್ಮ ನುಡಿಯಲ್ಲಿದ್ದಿದ್ದ ಎಷ್ಟೋ ಪದಗಳನ್ನು ಈಗ ನಾವು ಬಳಸುತ್ತಲೇ ಇಲ್ಲ. ಅಲ್ಲಿ ಬರುವ ಎಷ್ಟೋ ಶಬ್ದಗಳನ್ನ ಈಗಿನವರಿಗೆ ಕೇಳೇ ಗೊತ್ತಿಲ್ಲ. ಅದಕ್ಕೇ ನಾನು ಓದಬೇಕಾದರೆ ಅಪ್ಪ ಅಮ್ಮನತ್ರೆ ಹಂಗಂದ್ರೆಂತು ಹಿಂಗಂದ್ರೆಂತು ಎಂದು ಕೇಳಬೇಕಾಗ್ತಾ ಇತ್ತು. ಹಾಗೆ ನೋಡಿದರೆ ಯಲ್ಲಾಪುರ ಕಡೆ, ದಕ್ಷಿಣ ಕನ್ನಡ, ಕಾಸರಗೋಡು ಬದಿ ಹವಿಗನ್ನಡ ಇನ್ನೂ ಜನಪದ‌ ಸೊಗಡನ್ನ ಜಾಸ್ತಿ ಉಳಿಸಿಕೊಂಡಿದೆ.

ಉತ್ತರ ಕನ್ನಡದ ಭಾಗದ ಮಲೆನಾಡಿನ ಪರಿಸರದಲ್ಲಿ ಒಳ್ಳೆ ಕಾದಂಬರಿ ಬಂದಿದ್ದು ಕಮ್ಮಿನೇ. ಕಾಯ್ಕಿಣಿ, ಚಿತ್ತಾಲರು, ವಿವೇಕ ಶಾನಭಾಗ ಇವ್ರೆಲ್ಲಾ ನಮ್ಮ ಜಿಲ್ಲೆಲಿ ಹುಟ್ಟಿ ಬೆಳೆದ ಮಹತ್ವದ ಲೇಖಕರೇ ಆಗಿದ್ರೂ ಇವರ ಕೃತಿಗಳ‌ ಕತೆ ನಡೆಯುವುದು ಮುಂಬೈ, ಬೆಂಗಳೂರು ಬಿಟ್ರೆ ಘಟ್ಟದ ಕೆಳಗಿನ ಅಂದರೆ ಕರಾವಳಿ ಭಾಗದಲ್ಲಿ.

ಇದನ್ನ ಓದಿ ಆದ್ಮೇಲೆ ಊರ್ಕಡೆ ಸುಮಾರು ಜನಕ್ಕೆ ಗೆಳೆಯರಿಗೆ ಹೇಳಿ ಹೇಳಿ ಓದಿಸಿದೆ. ಮತ್ತೆ ನಮ್ಮೂರ ಕಡೆ ಕತೆ ನಡೆಯೋ ಕಾರಣ ನನಗೆ ಸ್ವಲ್ಪ ಜಾಸ್ತಿ ಪ್ರೀತಿ ಇರುವುದೂ ಸಹಜ‌. ಹಾಗಾದರೆ ಈ‌ ಕಾದಂಬರಿಲಿ ಬರೀ ನನಗಿಷ್ಟವಾದ ವಿಷಯಗಳು ಮಾತ್ರ ಇದ್ದವಾ? ಇಷ್ಟ ಆಗದೇ ಹೋದ ಯಾವ ವಿಷಯಗಳೂ ಇರಲಿಲ್ವಾ? ಅಂತ ಕೇಳಿದರೆ, ಖಂಡಿತ ಇವೆ. ಇವನು ಏನು ಮೊಸರಲ್ಲಿ ಕಲ್ಲು ಹುಡುಕ್ತಿದಾನೆ ಎಂದು ದಯವಿಟ್ಟು ತಿಳಿಬೇಡಿ. ಕೆಲವೊಂದು ‘ಹಿಂಗಿದ್ದಿದ್ರೆ ಚನ್ನಾಗಿ ಇರ್ತಿತ್ತು’ ಹೇಳುವಂತಹ ವಿಷಯಗಳು ಅಷ್ಟೇ.

ಈ ಕಾದಂಬರಿಯಲ್ಲಿ ಒಂದು ಹೆಣ್ಣು ವಿಧವೆ ಆಗುವ ಒಂದು ಘಟನೆ ಬರುತ್ತದೆ. ಅಲ್ಲಿ ಶೀಗೆಹಳ್ಳಿಯವರ ಅಭಿಪ್ರಾಯ ವಿಧವಾ ವಿವಾಹದ ಪರವಾಗಿದ್ದು ಅಂತ ಅನ್ನಿಸಿದರೂ ಅವಳಿಗೆ ಮತ್ತೆ ಮದುವೆ ಮಾಡಿಸುವಷ್ಟು ಗಟ್ಟಿ ನಿರ್ಧಾರ ಅವನಿಂದ ಬರುವುದಿಲ್ಲ. ಅದರ ಬದಲಿಗೆ ಅವಳ ಜೀವನಕ್ಕೆ ಆಸ್ತಿ ಮಾಡಿದ ರೀತಿ ಬರುತ್ತದೆ. ಅಲ್ಲಿ ಪುನರ್ವಿವಾಹದ ಘಟನೆ ಇದ್ದಿದ್ರೆ ಇನ್ನೂ ಒಳ್ಳೆಯದಿರ್ತಿತ್ತು ಎನ್ನಿಸುತ್ತದೆ.

ಮತ್ತೂ‌ ಕೆಲವೊಂದು ಸಾರಿ ಸುಬ್ರಾಯ ಹೆಗಡೆಯನ್ನು ಸ್ವಲ್ಪ ಜಾಸ್ತಿಯೇ ಹೊಗಳಿದ ಹಾಗೇ ಅನ್ನಿಸುತ್ತದೆ. ಅದನ್ನ ಸ್ವಲ್ಪ ಕಮ್ಮಿ ಮಾಡಿ ಬೇರೆ ಯಾವ್ದಾದ್ರೂ ಎಳೆ‌ ತೆಗೆದುಕೊಳ್ಳಬಹುದಿತ್ತೇನೋ ಅನ್ನುವ ಭಾವನೆ ಬಂದಿತ್ತು. ಆ ಕ್ಷಣದ ನನ್ನ ಯೋಚನೆ. ಎಲ್ಲಾ ನಮಗೆ ಬೇಕಾದಂಗೆ ಬರೆಯಲು ಸಾಧ್ಯವಿಲ್ಲ ಬಿಡಿ. ಒಂದು ಮಹಾ ಕಾದಂಬರಿ ಆಗುವ ಶಕ್ತಿ ಇದ್ದಂತ ಇದು ಬರೀ ಅತ್ಯುತ್ತಮ‌ ಕಾದಂಬರಿ ಹಂತದಲ್ಲೇ ನಿಂತುಬಿಟ್ಟಿತೇನೋ ಅಂತ ಅನ್ನಿಸ್ತು ಅಷ್ಟೇ ಬಿಟ್ರೆ ಇನ್ನೇನಿಲ್ಲ.

ನನಗೆ ಒಂದು ಆಶ್ಚರ್ಯ ಅಂತ ಅನ್ನಿಸಿದ್ದು, ಕತೆ ನಡೆಯವ ಆ ಸಮಯ ಏನಿದೆ ಆಗ ಸಿದ್ದಾಪುರದಲ್ಲಿ ಸ್ವಾತಂತ್ರ್ಯ ಹೋರಾಟ ಏರುಗತಿಯಲಿದ್ದ ಸಮಯ. ಪ್ರತಿ ಮನೆಯಲ್ಲೂ ಒಬ್ಬರಲ್ಲಾ ಒಬ್ಬರು ಜೈಲಿಗೆ ಹೋಗಿದ್ದ ಪರಿಸ್ಥಿತಿ ಇತ್ತು. ಮನೆ ಗಂಡಸ್ರೆಲ್ಲಾ ಜೈಲಲ್ಲಿ, ಈ ಕಡೆ ಜಪ್ತಿ ಮಾಡಲೆ ಬಂದಾಗ ಹೆಂಗಸ್ರೇ ಅಡ್ಡ ನಿಂತು ಪೋಲೀಸರ ವಿರುದ್ಧ ಹೋರಾಡಿದ ಸನ್ನಿವೇಶದ ಘಟನೆಗಳು ಬಹಳ ನಡೆದಿವೆ. ಇಡೀ ಸಿದ್ದಾಪುರ ತಾಲೂಕು ಜಾತಿ ಮತ ಬೇಧ ಇಲ್ಲದೇ ಒಂದಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಸಿಡಿದೆದ್ದು ನಿಂತಿದ್ದ ಸಮಯ. ಆದರೆ ಇದರ ಬಗ್ಗೆ ಕಾದಂಬರಿಲಿ ಒಂದು ಉಲ್ಲೇಖನವೂ ಇಲ್ಲ. ಈ ಕುರಿತು ಊರಕಡೆ ಒಬ್ಬರ ಹತ್ತಿರ ಕೇಳಿದಾಗ ಅವರು ಅದರ ಕಾರಣ ವಿವರಿಸಿದರು. ಅದನ್ನ ಇಲ್ಲಿ ಹೇಳುವುದು ಅಷ್ಟು ಸರಿ ಅನಿಸದು. ಹಾಗಂತ ಇಲ್ಲಿ ಲೇಖಕರ ತಪ್ಪಿದೆ ಅಂತಲ್ಲ. ಅವರಿಗೆ ಒದಗಿದ ಏನೋ ಅನಿವಾರ್ಯತೆ ಅಷ್ಟೇ.

ಹವಿಗನ್ನಡ ಪರಿಚಯವಿರುವ ಮಲೆನಾಡು ಮತ್ತು ಕರಾವಳಿ ಭಾಗದವರಿಗೆ ಈ ಕಾದಂಬರಿ ಓದುವುದು ಅಷ್ಟು ಕಷ್ಟವಾಗಲಾರದು. ಉಳಿದವರಿಗೆ ಸ್ವಲ್ಪ ಇದನ್ನು follow ಮಾಡೋದು ಸ್ವಲ್ಪ ಕಷ್ಟವಾದೀತು. ಆದರೆ ಇಲ್ಲಿ ಹೆಚ್ಚಿನ ಸಂಭಾಷಣೆ ಮಾತ್ರ ಹವಿಗನ್ನಡದಲ್ಲಿದ್ದು ನಿರೂಪಣೆ ಸಾಮಾನ್ಯ ಕನ್ನಡದಲ್ಲೇ ಇದೆ. ಅದಕ್ಕೆ ಓದಲು ಖಂಡಿತಾ ಪ್ರಯತ್ನಿಸಬಹುದು.