ಲ್ಯಾಟ್ವಿಯಾದ ಪ್ರಮುಖ ಕವಿ ಮಾರಿಸ್ ಸಲೇಯ್ಸ್-ರ ಪ್ರಕಾರ ರೊನಲ್ಡ್ಸ್ ಬ್ರಾಯ್ಡಿಸ್-ರು ತಮ್ಮ ನಾಲ್ಕನೆಯ ಸಂಕಲನ “ಜೀರೋ ಸಮ್”-ನಲ್ಲಿ ತಮ್ಮ ಹಿಂದಿನ ಕವನ ಸಂಕಲನಗಳ ಪ್ರತಿಧ್ವನಿಗಳನ್ನು ಸಮತೋಲಿತ ವಿನ್ಯಾಸದಲ್ಲಿ ಹೊಸ ಮೋಟೀಫ಼್-ಗಳೊಂದಿಗೆ ಸಂಯೋಜಿಸುವ ಮೂಲಕ ತನ್ನ ಕಾವ್ಯ-ಕಾರ್ಯದ ಒಂದು ಹಂತಕ್ಕೆ ಮುಕ್ತಾಯದ ಗಂಟು ಹಾಕುತ್ತಾರೆ. ಆದರೆ ನಗುವಿನ ಮೂಲ ಸ್ವರೂಪ ಮತ್ತು ನಗುವ ಸಾಮರ್ಥ್ಯದ ಪ್ರಶ್ನೆಯು ಇಲ್ಲಿಯೂ ಕೇಂದ್ರದಲ್ಲೇ ನೆಲೆಸಿದೆಯೆಂದನ್ನುತ್ತಾರೆ ಸಲೇಯ್ಸ್.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲ್ಯಾಟ್ವಿಯಾ ದೇಶದ ಕವಿ ರೊನಲ್ಡ್ಸ್ ಬ್ರಾಯ್ಡಿಸ್ -ರ (Ronalds Briedis) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ರೊನಲ್ಡ್ಸ್ ಬ್ರಾಯ್ಡಿಸ್ ಅವರ ಕವನಗಳು ಪಾಶ್ಚಿಮಾತ್ಯ ಮತ್ತು ಪೂರ್ವದ ಸಾಂಸ್ಕೃತಿಕ ಸಂಹಿತೆಗಳಲ್ಲಿ ಆಧುನಿಕೋತ್ತರ ವ್ಯಂಗ್ಯದ ಒಂದು ನಿರ್ದಿಷ್ಟ ಭೇದನದ ಜತೆಗೆ ಶಾಸ್ತ್ರೀಯ ಕಾವ್ಯಾತ್ಮಕ ರೂಪಗಳ ನಿಖರವಾದ ಹಿಡಿತದೊಂದಿಗೆ ಸಂಯೋಜಿಸಲ್ಪಟ್ಟಿವೆ. ಲ್ಯಾಟ್ವಿಯಾದ ಹೆಸರಾಂತ ಹಿರಿಯ ಕವಿ ಯಾನಿಸ್ ರಾಕ್ಪೆಲ್ನಿಸ್‌ರ ಪ್ರಕಾರ, “ರೊನಲ್ಡ್ಸ್ ಬ್ರಾಯ್ಡಿಸ್ ಅವರ ಕಾವ್ಯವು ಬೌದ್ಧಿಕತೆ ಮತ್ತು ಸ್ವಾಭಾವಿಕ ಭಾವನೆಯ ಅಪರೂಪದ ಸಾವಯವ ಮಿಶ್ರಣವನ್ನು ಪ್ರಸ್ತುತಪಡಿಸುತ್ತದೆ. ಅವರೊಬ್ಬ ಸ್ವಾಭಾವಿಕವಾದ ನಗರದ ಕವಿ (urban poet). ಲ್ಯಾಟ್ವಿಯಾದಲ್ಲಿ ನಾವು ರೀಗಾ ನಗರವನ್ನು ಮಾತ್ರ ನಿಜವಾದ ನಗರ ಕೇಂದ್ರವೆಂದು ಪರಿಗಣಿಸುತ್ತೇವೆ (ಬಹುಶಃ ‘ಲಿಯೆಪಾಯ’ ನಗರವೂ ಕೂಡ – Liepāja), ಆದರೆ ರೊನಲ್ಡ್ಸ್ ಬ್ರಾಯ್ಡಿಸ್ ಅವರ ಸ್ಥಳೀಯ ಊರು ಯಾಕಬ್‌ಪಿಲ್ಸ್ (Jēkabpils); ಯಾಕಬ್‌ಪಿಲ್ಸ್ ನಗರದ ಜನರ ದೇಶಪ್ರೇಮ ತುಂಬಾ ಪ್ರಬಲವಾದದ್ದು, ಹಾಗೆಯೇ ಅದು ಹೆಚ್ಚಾಗಿ ನಗರ-ಕೇಂದ್ರಿತವಾದ ದೇಶಪ್ರೇಮವು ಹೌದು.”

1980-ರಲ್ಲಿ ಲ್ಯಾಟ್ವಿಯಾ ದೇಶದ ಐಜ಼್‌ಕ್ರೌಕಲ್‌ (Aizkraukle) ನಗರದಲ್ಲಿ ಜನಿಸಿದ ರೊನಲ್ಡ್ಸ್ ಬ್ರಾಯ್ಡಿಸ್, ಯಾಕಬ್‌ಪಿಲ್ಸ್ (Jēkabpils) ನಗರದಲ್ಲಿ ಬೆಳೆದರು ಹಾಗೂ ಅಲ್ಲಿನ Jēkabpils State Gymnasium-ನಿಂದ ಶಾಲಾ ಹಾಗೂ ಪದವಿಪೂರ್ವ ವ್ಯಾಸಂಗ ಮುಗಿಸಿ, ಲ್ಯಾಟ್ವಿಯನ್ ಅಕಾಡೆಮಿ ಆಫ಼್ ಕಲ್ಚರ್‌-ನಿಂದ ಸ್ನಾತಕ ಮತ್ತು ಕಲ್ಚರ್ ಥಯರಿ ವಿಷಯದಲ್ಲಿ ಎಂ.ಎ. ಪದವಿ ಪಡೆದರು. ಬ್ರಾಯ್ಡಿಸ್‌ರು ಕವಿ, ನಾಟಕಕಾರ, ವಿಮರ್ಶಕ, ಹಾಗೂ ಅನುವಾದಕರಾಗಿ ಲ್ಯಾಟ್ವಿಯಾ ದೇಶದಲ್ಲಿ ಹೆಸರು ಗಳಿಸಿದ್ದಾರೆ.

ರೊನಲ್ಡ್ಸ್ ಬ್ರಾಯ್ಡಿಸ್‌ ಅವರು 1997-ರಿಂದ ತಮ್ಮ ಕವಿತೆಗಳನ್ನು ಪ್ರಕಟಿಸುತ್ತಿದ್ದಾರೆ ಮತ್ತು 2004-ರಲ್ಲಿ ಪ್ರಕಟವಾದ ಅವರ ಮೊದಲ ಕವನ ಸಂಕಲನ Tear Gas ಓದುಗರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಈ ಸಂಕಲನಕ್ಕೆ ಆ ವರ್ಷದ Poetry Days Festival ಪ್ರಶಸ್ತಿಯನ್ನು ನೀಡಲಾಯಿತು, ಹಾಗೂ 2004-ರಲ್ಲಿ ಪ್ರಕಟವಾದ ಅತ್ಯುತ್ತಮ ಮೊದಲ ಸಂಕಲನವೆಂದು ತೀರ್ಮಾನಿಸಿ Annual Literature Award for Best Début ಪ್ರಶಸ್ತಿಯನ್ನೂ ನೀಡಲಾಯಿತು. ಬ್ರಾಯ್ಡಿಸ್ ಅವರ ಎರಡನೇ ಕವನ ಸಂಕಲನ Karaoke-ಗೆ 2008-ರಲ್ಲಿ Ojārs Vācietis ಪ್ರಶಸ್ತಿಯನ್ನು ನೀಡಲಾಯಿತು. ಈವರೆಗೆ ಅವರು ನಾಲ್ಕು ಕವನ ಸಂಕಲನಗಳು ಹಾಗೂ ಒಂದು ನಾಟಕವನ್ನು (The Great Hide and Seek, 2004) ಪ್ರಕಟಿಸಿದ್ದಾರೆ. ಅವರ ಕವನಗಳನ್ನು ಇಂಗ್ಲಿಷ್, ಜರ್ಮನ್, ರಷ್ಯನ್, ಸ್ಪ್ಯಾನಿಷ್, ಫ್ರೆಂಚ್, ಹಂಗೇರಿಯನ್ ಮತ್ತು ಮೆಸಡೋನಿಯನ್ ಭಾಷೆಗಳಿಗೆ ಅನುವಾದಿಸಲಾಗಿದೆ. ಹಂಗೇರಿಯನ್ ಭಾಷೆಗೆ ಅನುವಾದಿಸಲಾದ ಅವರ ಆಯ್ದ ಕವನಗಳ ಸಂಕಲನವನ್ನು 2005-ರಲ್ಲಿ ಹಂಗೇರಿಯಲ್ಲಿ ಪ್ರಕಟವಾಯಿತು. ಅವರು ರಷ್ಯನ್ ಮತ್ತು ಇಂಗ್ಲಿಷ್‌ನಿಂದ ಕವನಗಳನ್ನು ಅನುವಾದಿಸುತ್ತಾರೆ.

ಲ್ಯಾಟ್ವಿಯಾದ ಪ್ರಮುಖ ಕವಿ ಮಾರಿಸ್ ಸಲೇಯ್ಸ್-ರ ಪ್ರಕಾರ ರೊನಲ್ಡ್ಸ್ ಬ್ರಾಯ್ಡಿಸ್-ರು ತಮ್ಮ ನಾಲ್ಕನೆಯ ಸಂಕಲನ “ಜೀರೋ ಸಮ್”-ನಲ್ಲಿ (Zero Sum, 2022) ತಮ್ಮ ಹಿಂದಿನ ಕವನ ಸಂಕಲನಗಳ ಪ್ರತಿಧ್ವನಿಗಳನ್ನು ಸಮತೋಲಿತ ವಿನ್ಯಾಸದಲ್ಲಿ ಹೊಸ ಮೋಟೀಫ಼್-ಗಳೊಂದಿಗೆ ಸಂಯೋಜಿಸುವ ಮೂಲಕ ತನ್ನ ಕಾವ್ಯ-ಕಾರ್ಯದ ಒಂದು ಹಂತಕ್ಕೆ ಮುಕ್ತಾಯದ ಗಂಟು ಹಾಕುತ್ತಾರೆ. ಆದರೆ ನಗುವಿನ ಮೂಲ ಸ್ವರೂಪ ಮತ್ತು ನಗುವ ಸಾಮರ್ಥ್ಯದ ಪ್ರಶ್ನೆಯು ಇಲ್ಲಿಯೂ ಕೇಂದ್ರದಲ್ಲೇ ನೆಲೆಸಿದೆಯೆಂದನ್ನುತ್ತಾರೆ ಸಲೇಯ್ಸ್. ಜೀವನಚರಿತ್ರೆಯ ಚಕ್ರದ ಸೂಕ್ಷ್ಮ ಧ್ರುವೀಯತೆ ಮತ್ತು ಲ್ಯಾಟ್ವಿಯನ್ ಕಾವ್ಯದ ಅಪರೂಪದ ಕಟ್ಟುನಿಟ್ಟಾದ ರೂಪದ ಮೇಲೆ ಅಷ್ಟೇ ಸೊಗಸಾದ ಪಾಂಡಿತ್ಯ ಇಲ್ಲಿರುವ ಸಾನೆಟ್‌ಗಳ ಚಕ್ರದಲ್ಲಿದೆ. ಇದು ನಿಧಾನವಾಗಿ ಮತ್ತು ಪದೇ ಪದೇ ಓದಬೇಕಾದಂತಹ ಕವನ ಸಂಕಲನ, ನಾವು ಜೀವಿಸುತ್ತಿರುವ ಬದುಕಿನ ಹಾಗೆ.

ನಾನು ಕನ್ನಡಕ್ಕೆ ಅನುವಾದಿಸಿದ ಇಲ್ಲಿರುವ ರೊನಲ್ಡ್ಸ್ ಬ್ರಾಯ್ಡಿಸ್-ರ ಆರು ಕವನಗಳಲ್ಲಿ ಮೊದಲ ಐದು ಕವನಗಳನ್ನು ರಿಹಾರ್ಡ್ಸ್ ಕಾಲ್ನಿನ್ಸ್ (Rihards Kalniņš) ಹಾಗೂ ಕೊನೆಯ ಕವನವನ್ನು ಮಾರ್ಟಾ ಜಿಯೆಮೆಲಿಸ್ (Mārta Ziemelis) ಅವರುಗಳು ಮೂಲ ಲ್ಯಾಟ್ವಿಯನ್ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.

1
ಕೊನೆಯ ಕವಿ ಈ ಲೋಕವ ಬಿಟ್ಟಾಗ
ಮೂಲ: When the last poet leaves this world

ಕೊನೆಯ ಕವಿ ಈ ಲೋಕವ ಬಿಟ್ಟಾಗ
ಯಾರೂ ಉಳಿದಿರಲ್ಲ ಮರುಗಲು
ಹಾರಗಳ್ಳರು ಹೂಗಳ್ಳರು ಮಾತ್ರ ಬರುವರು
ಇಂದು ಯಾರ ಸಂಸ್ಕಾರ ಎಂದು ನೋಡಲು

ಶವವಾಹನಗಳು ಮರಳಿ ತಮ್ಮ ಮನೆಗಳತ್ತ ಧಾವಿಸುತ್ತವೆ
ಸೂರ್ಯ ಹೊಳೆಯುತ್ತಿರುತ್ತಾನೆ
ಚರ್ಚಿನ ಗಂಟೆಬಾಜಕರ ನಾಲಗೆ ಬಿಗಿಯಾಗುತ್ತವೆ
ದೇವರೊಬ್ಬ ಮಾತ್ರ ಹಾಜರಿರುತ್ತಾನೆ
ತನ್ನ ಆಟದಗೊಂಬೆಯನ್ನು ಕಳಕೊಂಡ ಮಗುವಿನಂತೆ ಅಳುತ್ತಾನೆ

2
ಕತ್ತಲ ವೇಗದಲ್ಲಿ ನಿನ್ನತ್ತ ನಾ ಬರುವೆ
ಮೂಲ: I move towards you at the speed of darkness

ಕತ್ತಲ ವೇಗದಲ್ಲಿ
ನಿನ್ನತ್ತ ನಾ ಬರುವೆ

ರಾತ್ರಿಯಲಿ
ದಾರಿದೀಪಗಳಿಂದ,
ಅಂಗಡಿಗಳ ವಸ್ತುಪ್ರದರ್ಶನ ಕಿಟಕಿಗಳಿಂದ
ದೂರವಿರುವೆ

ಆದರೆ ಹಗಲಿನಲಿ
ನೆಲದೊಳಗೆ ಆಳಕ್ಕೆ ಕೊರೆದು
ಮರಬೇರುಗಳ ಮಧ್ಯೆ ತುರುಕಿಸಿಕೊಂಡು
ನಿನ್ನತ್ತ ದಾರಿ ಕಾಣುವೆ

ಬೆಳಕಿನ
ಗತಿ ಅತಿ ನಿಧಾನ
ಮಿಲಿಯಾಂತರ ವರ್ಷಗಳವರೆಗೂ
ನಕ್ಷತ್ರಬೆಳಕು
ನಮ್ಮನ್ನು ತಲುಪಲ್ಲ

ಕತ್ತಲ ವೇಗದಲ್ಲಿ
ನಿನ್ನತ್ತ ನಾ ಬರುವೆ

3
ಬೀಳುವ ತಾರೆಗಳು
ಮೂಲ: Falling Stars

ಪ್ರತಿ ರಾತ್ರಿ
ಬೀಳುವ ತಾರೆಗಳು
ನಕ್ಷತ್ರ-ನಕ್ಷೆಗಳನ್ನ
ಯದ್ವಾತದ್ವವಾಗಿಸುತ್ತವೆ

ಇವುಗಳ ಬಳಸಿ
ದಾರಿ ಗಣಿಸುತ್ತಿದ್ದ
ಹಡಗುಗಳು
ದಿಕ್ಕುಪಾಲಾಗುತ್ತವೆ

4
ಕೂತಿದ್ದೆವು ನಾವು ಮಾತಿಲ್ಲದೆ
ಮೂಲ: We sat quietly

ಕೂತಿದ್ದೆವು ನಾವು ಮಾತಿಲ್ಲದೆ
ಒಬ್ಬರಿಗೊಬ್ಬರು ಕಣ್ಣು ಕೂಡಿಸದೆ
ಸಕ್ಕರೆ ಬೆರೆಸಿದ ಕಾಫಿ ಕುಡಿಯುತ್ತಿದ್ದೆವು
ಬನ್ನುಗಳನ್ನು ಚೂರುಚೂರೇ ಕಚ್ಚುತ್ತ
ಅದರ ಮೇಲೆ ಚಿಮುಕಿಸಿದ ಗಸಗಸೆಯನ್ನು ಸವಿಯುತ್ತ

ಅತಿಚತುರ ಕೊಳೆನೀರ ಹಳ್ಳಗಳು
ಆಕಾಶದೆಡೆಗೆ ಮಳೆಹನಿಗಳ ಉಗಿದವು
ಮತ್ತೆ ನೀನು ಹೊರಟುಹೋದಾಗ
ಕೂತಿದ್ದೆ ನಾನಲ್ಲೇ ದಿಟ್ಟಿಸುತ್ತಾ ಬಲು ಹೊತ್ತು
ನಿನ್ನ ಮುಖದ ಪ್ರತಿಬಿಂಬವನ್ನು
ನನ್ನ ಕುಡಿಯದೆ ಉಳಿಸಿದ ಕಾಫಿಯಲ್ಲಿ

5
ನಿನ್ನ ಗೌರವಾರ್ಥ ಮರುನಾಮಕರಣ ಮಾಡಿದೆ
ಮೂಲ: I renamed in your honour

ನಾನು ನಡೆದಾಡುವ
ಎಲ್ಲಾ ಬೀದಿಗಳನ್ನ
ನಿನ್ನ ಗೌರವಾರ್ಥ
ನಿನ್ನ ಹೆಸರಿಟ್ಟು
ಮರುನಾಮಕರಣ ಮಾಡಿದೆ
ನಾನು ಭೇಟಿ ನೀಡುವ
ಎಲ್ಲಾ ಶಹರಗಳನ್ನ
ಎಲ್ಲಾ ದೇಶಗಳನ್ನ
ಭೂಖಂಡಗಳನ್ನ
ಗ್ರಹಗಳನ್ನ ನಕ್ಷತ್ರಗಳನ್ನ
ನಿನ್ನ ಗೌರವಾರ್ಥ
ನಿನ್ನ ಹೆಸರಿಟ್ಟು
ಮರುನಾಮಕರಣ ಮಾಡಿದೆ

ಕ್ಯಾಲೆಂಡರ್-ನಿಂದ
ಬೇರೆ ಎಲ್ಲಾ ಹೆಸರುಗಳನ್ನ ಅಳಿಸಿ
ನಿನ್ನ ಹೆಸರನ್ನ ಬರೆದೆ
ಮುನ್ನೂರ ಅರವತ್ತೈದು ಸಲ

ಅಕ್ಷರಮಾಲೆಯಿಂದ
ಬೇರೆ ಎಲ್ಲಾ ಅಕ್ಷರಗಳನ್ನ ಅಳಿಸಿ
ನಿನ್ನ ಹೆಸರಿನಲ್ಲಿರುವ ಅಕ್ಷರಗಳನ್ನ
ಮಾತ್ರ ಉಳಿಸಿಕೊಂಡೆ

ನಿನ್ನದೇ ಹೆಸರಿರುವ ಮಿಕ್ಕ ಹೆಂಗಸರು
ಎಷ್ಟು ಅದೃಷ್ಟ ಮಾಡಿರಬೇಕು

ನಿನ್ನ ಗೌರವಾರ್ಥ
ಅವರಿಗೆ ಹೆಸರಿಟ್ಟಿದ್ದಾರೆಂದು ತಿಳಿದು
ಎಷ್ಟು ಹೆಮ್ಮೆ ಪಡಬಹುದು ಅವರು

6
ರಾತ್ರಿಯಲ್ಲಿ ರೀಗಾ*
ಮೂಲ: Riga by night

ರಾತ್ರಿಯಲ್ಲಿ ರೀಗಾ
ಟ್ಯಾಕ್ಸಿಗಳ, ಚದುರಂಗಗಳ,
ಅಡ್ಡಾದಿಡ್ಡಿ ಮಾರ್ಗಗಳ
ನಗರವಾಗುತ್ತೆ,
ಗೊಂದಲಮಯ ಪದಬಂಧದ
ನುಡಿಯಾಟದಂತೆ.

ನನ್ನಿಂದ ಓದಲಾಗುವುದಕ್ಕಿಂತ
ಹೆಚ್ಚಾಗಿಯೇ ಬರೆದಿರುವೆ.
ಯಾಕೆ ಹೀಗೆ ಉತ್ಪಾದಿಸುತ್ತಿರಬೇಕು?
ಈ ಕಳೆದ ವರ್ಷದ ಹರ್ಷದ ಕ್ಷಣಗಳು
ಎಣಿಕೆಗೆ ಬರುವಷ್ಟಿದೆಯಷ್ಟೆ.

ತೂಕಡಿಸುತ್ತಿರುವ ಏಟಿಯೆಮ್-ನಿಂದ
ನನ್ನ ಪಗಾರವನ್ನು ಬಿಡಿಸಿಕೊಂಡೆ.
ಈ ರಾತ್ರಿ ನಾನು ವಾಕಿಂಗ್ ಹೋಗಲಾರೆ.
ವಾಹನ ನಿನಗೆ ಕಲಿಸುತ್ತೆ ಪಯಣಿಸಲು,
ಆಯಾಮದಲ್ಲಲ್ಲ, ಆದರೆ ಕಾಲದ ಮೂಲಕ.
ಇನ್ನೇನು, ಮನೆ ಕಾಣಿಸತೊಡಗಿದೆ.

ನಾನು ಹೊರಗೆ ಹೋಗುವೆ
ಆ ಎತ್ತರದ ಇಟ್ಟಿಗೆ ಗೋಡೆಯ ಹಾರಿ.
ನನ್ನನ್ನು ಪ್ರೇಮಿಸದ ನಾಲ್ಕು ಬಿಲಿಯನ್ ಹೆಂಗಸರು
ನಡೆದಾಡುವ
ನೆಲವ ಚುಂಬಿಸುವೆ.

ಜೀವನದ ಅರ್ಥ
ತಲೆ-ಮೊದಲಾಗಿ ಆಗಮಿಸುತ್ತೆ
ಆದರೆ ಕಾಲುಗಳಿಂದ ನಿರ್ಗಮಿಸುತ್ತೆ.
ಟ್ರ್ಯಾಫಿಕ್ ಬೆಳಕುಗಳ ಕಣ್ಣುಗಳು
ಅತ್ತೂ ಅತ್ತೂ ಕೆಂಪಾಗಿವೆ.
ನನಗೆ ಸವಾರಿ ಸಿಗಲ್ಲ ಅಂತನಿಸುತ್ತೆ.

ಕಿಟಕಿಯ ಆಚೆ ಕಡೆ
ಮಗುವೊಂದು ಅಳುತ್ತೆ ಮೌನವಾಗಿ,
ಅದೇ ವೇಳೆ ದೊಡ್ಡವರು
ಅರಚುತ್ತಿದ್ದಾರೆ ಬೊಬ್ಬಿಡುತ್ತಿದ್ದಾರೆ.

ನಾನು ಯಾವತ್ತಿನಿಂದಲೂ ಬಯಸಿದ್ದೇನೆಂದರೆ
ನನ್ನ ಸೂರು ಇನ್ನೊಬ್ಬರ ನೆಲವಾಗಬೇಕೆಂದು.

ಮೆಟ್ಟಿಲುಗಳ ಹತ್ತುವೆ
ಕೊನೆಯಿಲ್ಲದ ಹಂಗಾಮಿ ಮನೆಗಳಲ್ಲಿ.
ನನ್ನ ಕಾಲುಗಳಲ್ಲಿ ಬೊಕ್ಕೆಬಿಟ್ಟಿವೆ
ಆದರೂ ನಾನು ಹತ್ತುವೆ.
ಎರಡು ವಕ್ರ ರೇಖೆಗಳು
ಒಂದನ್ನೊಂದು ಅಡ್ಡಹಾಯುವುದಕ್ಕಿಂತ
ಹೆಚ್ಚಾಗಿ
ಒಂದು ನೇರ ರೇಖೆ
ತನ್ನನ್ನು ತಾನೇ ಅಡ್ಡಹಾಯ್ದುಕೊಳ್ಳುತ್ತೆ.

ನನ್ನ ಅಸ್ಥಿಪಂಜರವ ನೇತು ಹಾಕಿದಾಗ
ನನ್ನ ದೇಹ ನೆರಳು ಬೀರುತ್ತದೆ,
ಹಾಗೆಯೇ, ನನ್ನ ಅತ್ಮ ನನ್ನ ದೇಹವ ಬೀರುತ್ತೆ.
ಇಬ್ಬರಿಗೂ ಇಕ್ಕಟ್ಟಾಗದಿರಲಿಯಂತ
ನಾನು ಕುರ್ಚಿಯೊಳಗೆ ಮೆಲ್ಲನೆ ಇಳಿದು ಕೂತೆ,
ನನ್ನನ್ನು ತೂರಿಕೊಂಡು
ಆಗ ಹಿನ್ನೆಲೆಯು ಮುಂಬರುತ್ತೆ.

* ಲ್ಯಾಟ್ವಿಯಾ ದೇಶದ ರಾಜಧಾನಿ ನಗರ