ಭುವನೇಶ್ವರದಲ್ಲಿ 500ಕ್ಕೂ ಹೆಚ್ಚು ದೇವಾಲಯಗಳಿದ್ದರೂ ಸಹ ಅವುಗಳಲ್ಲಿ ಲಿಂಗರಾಜ ದೇವಾಲಯ ವಾಸ್ತುಶೈಲಿಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ. ಒರಿಸ್ಸಾದಲ್ಲಿ ನಿರ್ಮಿತವಾಗಿರುವ ಮೊಟ್ಟಮೊದಲ ಅತಿ ದೊಡ್ಡ ದೇವಾಲಯವಾಗಿರುವುದಲ್ಲದೆ, ಒರಿಸ್ಸಾದ ಶೈವ ದೇವಾಲಯಗಳಲ್ಲಿಯೇ ದೊಡ್ಡ ದೇವಾಲಯವಾಗಿರುವ ಲಿಂಗರಾಜ ದೇವಾಲಯ `ಕಳಿಂಗ ವಾಸ್ತುಶೈಲಿ’ಯ ಅತಿ ಸುಂದರ ಉದಾಹರಣೆಯಾಗಿದೆ. ಕ್ರಿ.ಶ. 6-7ನೇ ಶತಮಾನದಲ್ಲಿ ಆರಂಭವಾದ ಒರಿಸ್ಸಾ ದೇವಾಲಯಗಳ ವಾಸ್ತು ಶಿಲ್ಪ ನಿರ್ಮಾಣ 11ನೇ ಶತಮಾನದಲ್ಲಿ ಲಿಂಗರಾಜ ದೇವಾಲಯದ ನಿರ್ಮಾಣದ ಹೊತ್ತಿಗೆ ಉತ್ತುಂಗಕ್ಕೇರಿತ್ತು. ಆ ವಾಸ್ತು ನಿರ್ಮಾಣ 13ನೇ ಶತಮಾನದ ನಂತರ ಕ್ರಮೇಣ ಕಡಿಮೆಯಾಯಿತು.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಮತ್ತೊಂದು ಬರಹ ನಿಮ್ಮ ಓದಿಗೆ

ಒರಿಸ್ಸಾವನ್ನು `ಉತ್ಕಲ’- ಸುಂದರ ಕಲೆಗಳ ನಾಡು ಎಂದೂ ಕರೆಯಲಾಗುತ್ತದೆ. ಅಲ್ಲಿನ ದೇವಾಲಯಗಳು ತಮ್ಮ ವಾಸ್ತುಶೈಲಿ ಹಾಗೂ ಶಿಲ್ಪಕಲೆಯಿಂದಾಗಿ ವಿಶ್ವವಿಖ್ಯಾತವಾಗಿವೆ. ಆ ದೇಗುಲಗಳ ಕಲಾ ಸಿರಿವಂತಿಕೆಗೆ ಹಾಗೂ ತಾಂತ್ರಿಕ ಅದ್ಭುತಕ್ಕೆ ಸರಿಸಾಠಿಯಾದುದಿಲ್ಲ. ಒರಿಸ್ಸಾದ ರಾಜಧಾನಿಯಾಗಿರುವ ಭುವನೇಶ್ವರದಲ್ಲಿ ಸುಮಾರು ಐದುನೂರು ದೇವಾಲಯಗಳಿದ್ದು ಆ ನಗರವನ್ನು `ದೇವಾಲಯಗಳ ನಗರ’ವೆಂದೇ ಕರೆಯಲಾಗುತ್ತದೆ. ಭುವನೇಶ್ವರವನ್ನು ದೇವಾಲಯಗಳ ಮ್ಯೂಸಿಯಂ ಎಂದೇ ಹೇಳಬಹುದು, ಏಕೆಂದರೆ ಒರಿಸ್ಸಾದ ದೇವಾಲಯಗಳ ವಾಸ್ತುಕಲೆ ಆರಂಭವಾದಂದಿನಿಂದ (ಕ್ರಿ.ಶ. 6ನೇ ಶತಮಾನ) ಅಂತ್ಯದವರೆಗೂ (ಕ್ರಿ.ಶ. 13ನೇ ಶತಮಾನ) ನಿರ್ಮಿತವಾಗಿರುವ ದೇವಾಲಯಗಳು ವಾಸ್ತು ವಿನ್ಯಾಸದ ವಿಕಾಸದ ಮಾದರಿಗಳಾಗಿ, ಕಲಾಮಂದಿರಗಳಾಗಿ ನಿಂತಿವೆ. ಭುವನೇಶ್ವರಕ್ಕೆ 60 ಕಿ.ಮೀ. ದೂರದಲ್ಲಿರುವ ಕೊನಾರ್ಕ್‌ನಲ್ಲಿನ 13ನೇ ಶತಮಾನದಲ್ಲಿ ನಿರ್ಮಿತವಾಗಿರುವ ಸೂರ್ಯ ದೇವಾಲಯ ತನ್ನ ಅಗಾಧತೆ ಹಾಗೂ ಶಿಲ್ಪಕಲೆಯ ಸೌಂದರ್ಯದಿಂದಾಗಿ ಪ್ರಖ್ಯಾತವಾಗಿದೆ. ಪುರಿ, ಭುವನೇಶ್ವರದಿಂದ 60 ಕಿ.ಮೀ. ದೂರದಲ್ಲಿದ್ದು ಅಲ್ಲಿನ ಜಗನ್ನಾಥ ಮಂದಿರದಿAದಾಗಿ ಹಿಂದೂ ಭಕ್ತಾದಿಗಳಿಗೆ ಪುಣ್ಯಕ್ಷೇತ್ರವಾಗಿದೆ. ಈ ಮೂರೂ ಪ್ರಸಿದ್ಧ ಸ್ಥಳಗಳನ್ನು ಪ್ರವಾಸಿಗಳ ದೃಷ್ಟಿಯಿಂದ `ಸುವರ್ಣ ತ್ರಿಕೋನ’ವೆಂದು ಕರೆಯುತ್ತಾರೆ.

(ಡಾ. ಜೆ. ಬಾಲಕೃಷ್ಣ)

ಭುವನೇಶ್ವರದಲ್ಲಿ 500ಕ್ಕೂ ಹೆಚ್ಚು ದೇವಾಲಯಗಳಿದ್ದರೂ ಸಹ ಅವುಗಳಲ್ಲಿ ಲಿಂಗರಾಜ ದೇವಾಲಯ ವಾಸ್ತುಶೈಲಿಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ. ಒರಿಸ್ಸಾದಲ್ಲಿ ನಿರ್ಮಿತವಾಗಿರುವ ಮೊಟ್ಟಮೊದಲ ಅತಿ ದೊಡ್ಡ ದೇವಾಲಯವಾಗಿರುವುದಲ್ಲದೆ, ಒರಿಸ್ಸಾದ ಶೈವ ದೇವಾಲಯಗಳಲ್ಲಿಯೇ ದೊಡ್ಡ ದೇವಾಲಯವಾಗಿರುವ ಲಿಂಗರಾಜ ದೇವಾಲಯ `ಕಳಿಂಗ ವಾಸ್ತುಶೈಲಿ’ಯ ಅತಿ ಸುಂದರ ಉದಾಹರಣೆಯಾಗಿದೆ. ಕ್ರಿ.ಶ. 6-7ನೇ ಶತಮಾನದಲ್ಲಿ ಆರಂಭವಾದ ಒರಿಸ್ಸಾ ದೇವಾಲಯಗಳ ವಾಸ್ತು ಶಿಲ್ಪ ನಿರ್ಮಾಣ 11ನೇ ಶತಮಾನದಲ್ಲಿ ಲಿಂಗರಾಜ ದೇವಾಲಯದ ನಿರ್ಮಾಣದ ಹೊತ್ತಿಗೆ ಉತ್ತುಂಗಕ್ಕೇರಿತ್ತು. ಆ ವಾಸ್ತು ನಿರ್ಮಾಣ 13ನೇ ಶತಮಾನದ ನಂತರ ಕ್ರಮೇಣ ಕಡಿಮೆಯಾಯಿತು.

ಸೋಮವಂಶಿ ದೊರೆಗಳು ಕ್ರಿ.ಶ. 11ನೇ ಶತಮಾನದಲ್ಲಿ ಲಿಂಗದೇವರಾಜ ದೇವಾಲಯವನ್ನು ನಿರ್ಮಿಸಿದರೆಂದು ಹೇಳಲಾಗುತ್ತದೆ. ಮಹಾನದಿ ಕಣಿವೆಯ ಮೇಲ್ಭಾಗದಲ್ಲಿ ರಾಜ್ಯವಾಳುತ್ತಿದ್ದ ಸೋಮವಂಶಿಗಳು ಕಣಿವೆಯ ಕೆಳಭಾಗದಲ್ಲಿ ಹಾಗೂ ಕರಾವಳಿಯ ಉತ್ಕಲವನ್ನು ಗೆದ್ದು ಅಲ್ಲಿಯೂ ತಮ್ಮ ಸಾಂಪ್ರದಾಯಕ ದೇವಾಲಯ ನಿರ್ಮಾಣವನ್ನು ಮುಂದುವರೆಸಿದರು. ಅವರ ಆಶ್ರಯದಲ್ಲಿಯೇ ಒರಿಸ್ಸಾದ ದೇವಾಲಯಗಳ `ಕಳಿಂಗ ಶೈಲಿ’ ವಿಕಾಸಗೊಂಡು ಅಂತಿಮ ರೂಪ ಪಡೆದು ಉತ್ತುಂಗಕ್ಕೇರಿತು. 54.86 ಮೀಟರ್ ಎತ್ತರದ ಅಂಗುಲ ಅಂಗುಲವೂ ಕೆತ್ತನೆಯ ಶಿಖರವಿರುವ ಲಿಂಗರಾಜದೇವಳದ ಮುಖ್ಯ ದೇಗುಲ ಪಂಚ ರಥ ಮಾದರಿಯದು. ಅದಕ್ಕೆ ಹೊಂದಿಕೊಂಡಂತೆ ಜಗಮೋಹನ, ನಾಟ್ಯಮಂದಿರ ಹಾಗೂ ಭೋಗ ಮಂಟಪಗಳಿವೆ. ಅವುಗಳಲ್ಲಿ ನಾಟ್ಯಮಂದಿರ ಹಾಗೂ ಭೋಗಮಂಟಪಗಳನ್ನು ನಂತರದ ಸಮಯದಲ್ಲಿ ನಿರ್ಮಿಸಲಾಗಿದೆಯೆಂದು ನಂಬಲಾಗಿದೆ. ಲಿಂಗರಾಜ ದೇವಾಲಯದ ಆವರಣದಲ್ಲಿ ಹಲವಾರು ಸಣ್ಣ ಸಣ್ಣ ದೇವಾಲಯಗಳಿವೆ. ಅವುಗಳಲ್ಲಿ ಮುಖ್ಯವಾದುವು ಚಂಡೇಶ್ವರ ದೇವ ದೇವಾಲಯ, ಗೋಪಾಲುಣಿ ದೇವಾಲಯ, ಲಡುಕೇಶ್ವರ ದೇವಾಲಯ, ಪಾರ್ವತಿ ದೇವಾಲಯ, ಸಾವಿತ್ರಿ ದೇವಿ ದೇವಾಲಯ, ಸಕ್ರೇಶ್ವರ್ ದೇವಾಲಯ ಹಾಗೂ ಸತಿ ದೇವಿ ದೇವಾಲಯ. ಲಿಂಗರಾಜ ದೇಗುಲದ ಅಗಾಧತೆ ನೋಡುಗರನ್ನು ಬೆರಗುಗೊಳಿಸುತ್ತದೆ. ಅದರ ಕುಸುರಿಯಂಥ ಕೆತ್ತನೆ ಹಾಗೂ ಶಿಲ್ಪ ಸೌಂದರ್ಯ ಮಂತ್ರಮುಗ್ಧಗೊಳಿಸುತ್ತದೆ.