ಪಕ್ಕದ ಊರಿಗೆ ಒಂದೆರಡು ಬಾರಿ ಹೋದಾಗ ಅವರ ಮನೆಗೆ ನಾವು ಹೋಗಿದ್ದೆವು. ಆದರೆ ಹಿರಿಮಗ ಪಾಂಡುರಂಗನ ಮೇಲೆ ಬಹಳಷ್ಟು ಜವಾಬ್ದಾರಿ ಇತ್ತು. ಆತ ದುಡಿದ… ದುಡಿಯುತ್ತಲೆ ಇದ್ದ. ತಂಗಿಯ ಮದುವೆಯನ್ನು ಬಹಳ ಜೋರಾಗಿಯೆ ಮಾಡಿದ. ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ತಮ್ಮನ ಮದುವೆಯೂ ಆಗಿ ಆತ ಬೇರೆಯಾದನು. ಪಾಂಡುರಂಗ ಎಲ್ಲ ಜವಾಬ್ದಾರಿಗಳ ನಡುವೆ ಒಂದಿಷ್ಟು ಸಾಲಗಾರನಾದ. ಅದೆ ಸಮಯಕ್ಕೆ ಆತ ವಾಸವಾಗಿದ್ದ ಊರಿನಲ್ಲಿ ನವೀನ ರೀತಿಯ ಬಟ್ಟೆಯ ಅಂಗಡಿಗಳು ಪ್ರಾರಂಭವಾದವು. ಆಗ ಆತ ದಿನೆ ದಿನೆ ಕುಸಿಯತೊಡಗಿದ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ

ನಾಲ್ಕೈದು ಮನೆಗಳಿದ್ದ ಕೇರಿ ನಮ್ಮದು. ಹಾಗೆ ನೋಡಿದರೆ ಇಡಿ ಊರಿನಲ್ಲಿ ನೂರರಿಂದ ನೂರಿಪ್ಪತ್ತು ಮನೆಗಳಿದ್ದಿರಬಹುದು. ಈಗ ಮನೆಗಳ ಸಂಖ್ಯೆ ಒಂದಿಷ್ಟು ಜಾಸ್ತಿಯಾಗಿರಬಹುದು. ಇಡೀ ಕೇರಿಯಲ್ಲಿ ಅನ್ಯೋನ್ಯತೆ ಇತ್ತು. ಬೇರೆ ಬೇರೆ ಪಂಗಡಕ್ಕೆ ಸೇರಿದ್ದರೂ ಸಹ ಭಾಂದವ್ಯಕ್ಕೆ ಯಾವ ತೊಂದರೆಯೂ ಇರಲಿಲ್ಲ. ಹಬ್ಬ ಹರಿದಿನಗಳಲ್ಲಿ ನನ್ನ ಓರಗೆಯವರೊಂದಿಗೆ ಇಡಿ ದಿನ ತಿರುಗಾಡುತ್ತಿದ್ದೆನು. ಬಾಲ್ಯದ ಸಂವೇದನೆಗಳು ಆಗಾಗ ಮನಸ್ಸನ್ನು ತಿಳಿಗೊಳಿಸುತ್ತಲೊ ಕನಸ್ಸಿಗೆ ಮೈ ಒಡ್ಡುತ್ತಲೊ ಯಾವ ದುಃಖ ದುಮ್ಮಾನಗಳಿಗೂ ರಾಜಿಯಾಗದೆ ನಗುನಗುತ್ತಲೆ ಆಟವಾಡುತ್ತಲೆ ಪಾಠ ಕಲಿಯುತ್ತ, ಬದುಕನ್ನು ತಿಳಿಯುತ್ತ ಸಾಗುತ್ತಿರುತ್ತದೆ ಎಂದೇ ನನ್ನ ಭಾವನೆ.

ಎಷ್ಟೊಂದು ನೆನಪುಗಳಿವೆ ಈ ಬಾಲ್ಯವೆಂಬ ಬುತ್ತಿಯಲ್ಲಿ; ರಜೆ ಬಂತೆಂದರೆ ಸಾಕು ಬುಗುರಿ, ಚಿನ್ನಿದಾಂಡು, ಜೂಟಾಟ, ಚಕ್ರ ಉರುಳಿಸುವುದು ಎಲ್ಲವೂ ನೆನಪಾಗಿ ಮತ್ತೆ ಮತ್ತೆ ಬಾಲ್ಯವನ್ನು ನೆನಪಿಸುತ್ತದೆ. ನೋಡ ನೋಡುತ್ತಲೆ ನಮ್ಮ ಮನೆಯ ಮುಂಭಾಗದಲ್ಲಿದ್ದ ಕುಟುಂಬವೊಂದು ಬದುಕಿನ ತುತ್ತಿನ ಚೀಲವ ತುಂಬಿಸಿಕೊಳ್ಳಲು ಅನ್ನದ ದಾರಿಯ ಹಿಡಿದರು. ಕೆಲವರು ಸ್ಥಿತಿವಂತರೂ ಆದರು. ಆ ಕುಟುಂಬದಲ್ಲಿ ಆರೇಳು ಜನ ಇದ್ದಿದ್ದರಿಂದ ಒಬ್ಬೊಬ್ಬರು ಒಂದೊಂದು ವೃತ್ತಿಯನ್ನು ಅರಸುತ್ತಾ ಹೋದರು ಎಂಬುದಾಗಿ ಮನೆಯಲ್ಲಿ ತಿಳಿಸಿದ್ದರು. ನಾನು ಚಿಕ್ಕವನಿದ್ದಾಗಲೆ ಇದೆಲ್ಲವನ್ನೂ ನನ್ನಜ್ಜಿಯೆ ಹೇಳುತ್ತಿದ್ದಳು. ಬರಿದಾದ ಬದುಕು ಏನೆಲ್ಲವನ್ನು ಕಲಿಸುತ್ತದೆ. ನೆಲೆಗೆ ದಾರಿಯಾಗುತ್ತದೆ ಎನಿಸುತ್ತಿತ್ತು.

ಆ ಕುಟುಂಬದ ಹಿರಿಯನಾಗಿದ್ದ ಯಲ್ಲಪ್ಪ ಮಾತ್ರ ಅದ್ಹೇಗೊ ಊರಲ್ಲೆ ಉಳಿದ. ಅವರು ಬಂಗಾರದ ಒಡವೆ ಮಾಡುವ ಆಚಾರ್ರು ಆಗಿದ್ರು. ಈ ಯಲ್ಲಪ್ಪನಿಗೆ ಮಾತ್ರ ಆ ಕೆಲಸ ಬರುತ್ತಿರಲಿಲ್ಲ. ಯಾರಾದ್ರು ಒಡವೆ ಮಾಡ್ಸಿಕೊಡು ಅಂದ್ರೆ ಅದೆಲ್ಲಿಂದಲೊ ತಯಾರಿಸಿಕೊಂಡು ಬರುತ್ತಿದ್ದ. ನಮಗೆ ಇದೆಲ್ಲ ತಿಳಿಯುತ್ತಿರಲಿಲ್ಲವಾದ್ದರಿಂದ ಅದರ ಬಗ್ಗೆ ನಾವು ಯಾರನ್ನೂ ಕೇಳುತ್ತಿರಲಿಲ್ಲ. ಆ ಯಲ್ಲಪ್ಪನಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಇಬ್ಬರು ಗಂಡು ಮಕ್ಕಳು. ಹೆಚ್ಚು ಕಡಿಮೆ ಎಲ್ರೂ ಬಟ್ಟೆ ಹೊಲಿಯುವುದನ್ನು ಕಲಿತಿದ್ದರು. ನನಗೆ ಅಕ್ಷರ ಕಲಿಸಿದ್ದು ಅವರ ಎರಡನೆಯ ಮಗ ಕಿಟ್ಟಪ್ಪ. ಪ್ರತಿದಿನ ಅಭ್ಯಾಸ ಮಾಡಿಸಿ ಓದುವುದಕ್ಕೆ ಅಡಿಪಾಯ ಹಾಕಿದವರು. ಆತನ ಅಣ್ಣ ಪಾಂಡುರಂಗ ಬಟ್ಟೆ ಹೊಲೆದೆ ಇಡಿ ಕುಟುಂಬವನ್ನು ಸಾಕುತ್ತಿದ್ದ. ನನಗೆ ಒಂದಿಷ್ಟು ಬುದ್ದಿ ಬರುವುದರೊಳಗೆ ಆತ ಕುಡಿತಕ್ಕೆ ದಾಸನಾಗಿದ್ದ. ಮನೆಯ ಜವಾಬ್ದಾರಿಯೆಲ್ಲ ಪಾಂಡುರಂಗನ ಹೆಗಲಿಗೆ ಬಿದ್ದಿತ್ತು. ಮೊದಲ ಮಗಳ ಮದುವೆಯನ್ನು ಹೇಗೊ ಮಾಡಿದರು. ಮನೆಯ ಸಂಸಾರ ಹೀಗೆಯೆ ನಡೆಯುತ್ತಿತ್ತು. ಮನೆಯಲ್ಲಿ ಬೀಡಿ ಸುತ್ತುವ ಕೆಲಸ ಮಾಡುತ್ತಿದ್ದರು. ನಮ್ಮ ಕುಟುಂಬದೊಂದಿಗೆ ಒಳ್ಳೆಯ ಭಾಂದವ್ಯವಿತ್ತು. ಯಲ್ಲಪ್ಪ ಕುಡಿದು ಬಂದಾಗಲೆಲ್ಲಾ ಗಲಾಟೆ ನಡೆಯುತ್ತಿತ್ತು.

ಆ ಕುಟುಂಬದಲ್ಲಿ ಆರೇಳು ಜನ ಇದ್ದಿದ್ದರಿಂದ ಒಬ್ಬೊಬ್ಬರು ಒಂದೊಂದು ವೃತ್ತಿಯನ್ನು ಅರಸುತ್ತಾ ಹೋದರು ಎಂಬುದಾಗಿ ಮನೆಯಲ್ಲಿ ತಿಳಿಸಿದ್ದರು. ನಾನು ಚಿಕ್ಕವನಿದ್ದಾಗಲೆ ಇದೆಲ್ಲವನ್ನೂ ನನ್ನಜ್ಜಿಯೆ ಹೇಳುತ್ತಿದ್ದಳು. ಬರಿದಾದ ಬದುಕು ಏನೆಲ್ಲವನ್ನು ಕಲಿಸುತ್ತದೆ. ನೆಲೆಗೆ ದಾರಿಯಾಗುತ್ತದೆ ಎನಿಸುತ್ತಿತ್ತು.

ಹಿರಿಮಗ ಪಾಂಡುರಂಗ ಗಲಾಟೆ ಮಾಡುವಂತಹವನಲ್ಲ. ದಿನವಿಡಿ ಬಟ್ಟೆ ಹೊಲಿಯುತ್ತಿದ್ದ. ಒಂದಿಷ್ಟು ನೆಮ್ಮದಿಯತ್ತ ಕುಟುಂಬ ಸಾಗುತ್ತಿತ್ತು ಎನ್ನುವಾಗಲೆ ಈ ಯಲ್ಲಪ್ಪನಿಗೆ ಆರೋಗ್ಯದಲ್ಲಿ ಏರುಪೇರಾಯಿತು. ಒಂದಿಷ್ಟು ದಿನ ಅದು ತನ್ನ ಕರ್ತವ್ಯವೆಂಬಂತೆ ಮಗ ಪಾಂಡುರಂಗ ನೋಡಿಕೊಂಡ. ಅದರ ಸಲುವಾಗಿ ಒಂದಿಷ್ಟು ದಿನ ಊರು ಬಿಟ್ಟರು. ಹಿರಿಮಗ ಪಾಂಡುರಂಗನಿಗೆ ಬಟ್ಟೆ ಹೊಲೆಯುವ ಕೆಲಸದ ಜೊತೆ ಜೊತೆಯಲ್ಲಿಯೆ ಬಟ್ಟೆ ವ್ಯಾಪಾರ ಮಾಡುವುದಕ್ಕೆ ಪ್ರಾರಂಭಿಸಿದ. ಅದರಿಂದ ಒಳ್ಳೆಯ ಲಾಭವೆ ಬರುತ್ತಿತ್ತು. ಆತ ಅದನ್ನು ಇನ್ನಷ್ಟು ಹೆಚ್ಚು ಮಾಡಿದ. ಹಳ್ಳಿಗಳಲ್ಲಿ ಮಾರಿ ಸಾಯಂಕಾಲ ಬಟ್ಟೆ ಹೊಲಿಯುತ್ತಿದ್ದ. ನಾನು ಮೊದಲು ಒಳ್ಳೆಯ ಪ್ರಿಂಟೆಡ್ ಬಟ್ಟೆ ಹಾಕಿದ್ದೆ ಆತ ಕೊಟ್ಟದ್ದರಿಂದ ಎಂದೆ ಹೇಳಬೇಕು. ನೋಡ ನೋಡುತ್ತಿದ್ದಂತೆ ವ್ಯಾಪಾರ ಜಾಸ್ತಿಯಾಯಿತು. ಪಕ್ಕದ ಊರಿನಲ್ಲಿ ಎಲ್ಲ ಅನುಕೂಲವಿದ್ದುದರಿಂದ ಅಲ್ಲಿಯೆ ಮನೆ ಮಾಡಿ, ಇಡೀ ಕುಟುಂಬವೆ ಬೇರೆ ಊರಿಗೆ ಶಿಫ್ಟಾಯಿತು. ಯಲ್ಲಪ್ಪ ಒಂದಿಷ್ಟು ದಿನ ಕುಡಿತ ಬಿಟ್ಟಿದ್ದಾನೆ ಎಂದು ಆಗಾಗ ಬಟ್ಟೆ ಮಾರಲು ಬಂದಾಗ ಮನೆಯಲ್ಲಿ ಹೇಳುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆ ಯಲ್ಲಪ್ಪ ಮತ್ತು ಆತನ ಹೆಂಡತಿ ವಾಪಸ್ಸು ನಮ್ಮೂರಿಗೆ ಬಂದರು. ಆತ ಮಗನೊಂದಿಗೆ ಜಗಳ ಮಾಡಿಕೊಂಡು ಬಂದಿದ್ದ. ಪಾಂಡುರಂಗ ಜಗಳ ಮಾಡುವಂತಹವನಲ್ಲ. ಆದರೆ ಈ ಯಲ್ಲಪ್ಪನೆ ಮತ್ತೆ ಕುಡಿತ ಪ್ರಾರಂಭಿಸಿದ್ದರಿಂದ ಇದರ ಸಲುವಾಗಿಯೆ ಜಗಳವಾಗಿತ್ತು. ಅವರ ಈ ಹಿಂದಿನ ಮನೆಯಲ್ಲಿ ಬಹಳ ದಿನ ಯಾರು ಇಲ್ಲದ್ದರಿಂದ ಮಳೆಗಾಲದಲ್ಲಿ ಸೋರಿ ಒಂದೆರಡು ಅಂಕಣ ಬಿದ್ದಿದ್ದವು. ಉಳಿದ ಜಾಗದಲ್ಲಿ ಇಬ್ಬರೆ ಇದ್ದರು.

ಮೂರ್ನಾಲ್ಕು ತಿಂಗಳು ಕಳೆದಿರಬೇಕು. ಮತ್ತೆ ವಾಪಸ್ಸು ಮಗನ ಹತ್ತಿರವೇ ಹೋದರು. ಪಕ್ಕದ ಊರಿಗೆ ಒಂದೆರಡು ಬಾರಿ ಹೋದಾಗ ಅವರ ಮನೆಗೆ ನಾವು ಹೋಗಿದ್ದೆವು. ಆದರೆ ಹಿರಿಮಗ ಪಾಂಡುರಂಗನ ಮೇಲೆ ಬಹಳಷ್ಟು ಜವಾಬ್ದಾರಿ ಇತ್ತು. ಆತ ದುಡಿದ… ದುಡಿಯುತ್ತಲೆ ಇದ್ದ. ತಂಗಿಯ ಮದುವೆಯನ್ನು ಬಹಳ ಜೋರಾಗಿಯೆ ಮಾಡಿದ. ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿತ್ತು. ತಮ್ಮನ ಮದುವೆಯೂ ಆಗಿ ಆತ ಬೇರೆಯಾದನು. ಪಾಂಡುರಂಗ ಎಲ್ಲ ಜವಾಬ್ದಾರಿಗಳ ನಡುವೆ ಒಂದಿಷ್ಟು ಸಾಲಗಾರನಾದ. ಅದೆ ಸಮಯಕ್ಕೆ ಆತ ವಾಸವಾಗಿದ್ದ ಊರಿನಲ್ಲಿ ನವೀನ ರೀತಿಯ ಬಟ್ಟೆಯ ಅಂಗಡಿಗಳು ಪ್ರಾರಂಭವಾದವು. ಆಗ ಆತ ದಿನೆ ದಿನೆ ಕುಸಿಯತೊಡಗಿದ. ಮತ್ತೆ ಮೇಲೇಳಲು ಸಾಧ್ಯವೆ ಆಗಲಿಲ್ಲ. ಒಂದು ದಿನ ಹೀಗೆ ಏನೇನೋ ಕಾರಣಕ್ಕೆ ಅವನು ಸತ್ತೆಹೋದನು. ಆತನ ಮಣ್ಣನ್ನು ಯಾರೊ ಮಾಡಿದರು. ಯಲ್ಲಪ್ಪ ಪೂರ್ತಿ ಕುಸಿದು ಹೋಗಿದ್ದನು. ಪಾಂಡುರಂಗನಿಗಿದ್ದ ಮಗಳನ್ನು ಸಾಕುವ ಜವಾಬ್ದಾರಿಯು ಅವನ ಮೇಲೆಯೆ ಬಿತ್ತು. ಯಲ್ಲಪ್ಪ ಮತ್ತು ಆತನ ಹೆಂಡತಿ ಒಂದು ಪೆಟ್ಟಿಗೆ ಅಂಗಡಿಯನ್ನು ಬಾಡಿಗೆ ಪಡೆದು ಅದರಲ್ಲಿಯೆ ಜೀವನ ಮಾಡುತ್ತಿದ್ದರು. ಕ್ರಮೇಣ ಆತನಿಗೆ ಜಾಂಡೀಸ್ ಖಾಯಿಲೆ ಬಂದು ಆತನೂ ತೀರಿಕೊಂಡನು. ಕೆಲವಾರು ದಿನ ಬದುಕಿದ್ದ ಆತನ ಹೆಂಡತಿ ಮಲಗಿದಲ್ಲೆ ತೀರಿಹೋದಳು ಎಂದು ಊರಿಗೆ ಹೋದಾಗ ಮನೆಯಲ್ಲಿ ಹೇಳಿದರು. ಮನೆಯೆದುರಿನ ಕುಟುಂಬ ಹೀಗೆ ಕಾಲನ ತುಳಿತಕ್ಕೆ ಸಿಕ್ಕಿ ನೋಡು ನೋಡುತ್ತಲೆ ಮರೆಯಾಗಿತ್ತು.

ನನಗೆ ಕಾಡುವುದು ಯಾವಾಗಲೂ ಇಂತಹ ಬದುಕಿನ ಕತೆಗಳೆ ಅಪರಿಮಿತ ಜೀವನೋತ್ಸಾಹದಿಂದ ಬದುಕುತ್ತಿದ್ದ ಪಾಂಡುರಂಗನ ಬದುಕು ಹೀಗೇಕಾಯಿತು? ಆತ ಎಡವಿದ್ದೆಲ್ಲಿ? ಎಂದು ಎಷ್ಟು ಯೋಚಿಸಿದರೂ ಉತ್ತರವಿಲ್ಲದ ಪ್ರಶ್ನೆ ಅದು ಎನಿಸುತ್ತದೆ. ಊರಿಗೆ ಹೋದಾಗಲೆಲ್ಲಾ ಬಿದ್ದು ನೆಲಸಮವಾಗಿರುವ ಆ ಮನೆಯ ಜಾಗ ನೋಡಿದಾಗ ಇಷ್ಟೆಲ್ಲ ನೆನಪಾಯಿತು.

ಬಾಲ್ಯದಲ್ಲಿ ಓಡಾಡಿಕೊಂಡಿದ್ದ ಆ ಜಾಗ ಅವರ ಮನೆಯ ಹೊರ ಅಂಗಳದಲ್ಲಿ ಒಂದಿಷ್ಟು ಎತ್ತರಕ್ಕೆ ಜಗಲಿಯಂತಿದ್ದ ಕಟ್ಟಡದ ಮೇಲೆ ನಾವೆಲ್ಲ ಬೀಡಿ ಸುತ್ತುವ ಕೆಲಸ ಮಾಡುತ್ತಿದ್ದೆವು. ಕಿರಿಯ ಮಗ ಕಿಟ್ಟಪ್ಪ ನನಗೆ ಅಲ್ಲಿಯೆ ಪಾಠ ಹೇಳಿಕೊಡುತ್ತಿದ್ದ. ದೀಪಾವಳಿ ಹಬ್ಬ ಬಂತೆಂದರೆ ಸಾಕು ಪಟ್ಲುಗೋವಿ ಮಾಡಿ ಬಾರೆಗುಂಡು ಹಾರಿಸುವುದು ಹೇಗೆ ಎನ್ನುವುದನ್ನು ಹೇಳಿಕೊಡುತ್ತಿದ್ದ ನೆನಪು ಬಂದು ಶಾಂತವಿರುವ ಮನಸ್ಸು ಒಮ್ಮೆ ಕದಡಿದಂತಾಗುತ್ತದೆ. ಇಡಿ ಕೇರಿಯೆ ಬೇಸಿಗೆ ದಿನಗಳಲ್ಲಿ ಹೊರಗಡೆ ಮಲಗಿಕೊಂಡು ಬದುಕಿನ ಬೇರೆ ಬೇರೆ ಕತೆಗಳನ್ನು ಹೇಳಿಕೊಳ್ಳುತ್ತ ಆಕಾಶದ ತುಂಬ ಕಾಣುವ ನಕ್ಷತ್ರಗಳನ್ನು ನೋಡುತ್ತ ಮಲಗುತ್ತಿದ್ದೆವು. ಎಂಬುದನ್ನೆಲ್ಲಾ ನೆನೆದಾಗ ಕಾಲ ಹಿಂದಕ್ಕೋದರಾಗದೆ ನಮ್ಮ ಬಾಲ್ಯ ನಮಗೆ ಮತ್ತೆ ಬಂದರಾಗದೆ ಎನಿಸಿಬಿಡುತ್ತದೆ. ಆದರೆ ಅದು ಸಾಧ್ಯವಾ..!?.

(ಮುಂದುವರಿಯುವುದು)