ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ದಿತಿ ರೋನೆನ್‌ರ ಕವನಗಳಲ್ಲಿ ಅವರ ಎಲ್ಲಾ ಆಸ್ಥೆಗಳ, ನಂಬಿಕೆಗಳ, ಕಾಳಜಿಗಳ ಉದಾಹರಣೆಗಳನ್ನು ಕಾಣಬಹುದು. ಹಿಟ್ಲರ್‌ನ ಕಾಲದ ಜರ್ಮನಿ ಯಹೂದಿಗಳ ವಿರುದ್ಧ ನಡೆಸಿದ ಹತ್ಯಾಕಾಂಡದ ನೆನಪುಗಳು ಗಾಯಗಳು ಎಂದೂ ಮರೆಯಾಗಲ್ಲ. ಈ ಹತ್ಯಾಕಾಂಡದಿಂದ ಬದುಕುಳಿದವರ ಮಗಳಾಗಿ ದಿತಿ ರೋನೆನ್‌ ಅವರು ಇದರ ಬಗ್ಗೆ ಬಹು ಮಾರ್ಮಿಕವಾಗಿ ಬರೆಯುತ್ತಾರೆ. “ಹೋಗು ನೀನು ಅವ್ಶ್‌ವಿಟ್ಜ಼್-ಗೆ” ಮನಸ್ಸಿಗೆ, ಹೃದಯಕ್ಕೆ ತುಂಬ ನೋವು ತರಿಸುವಂತಹ ಕವನ,,,
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಇಸ್ರೇಯಿಲ್ ದೇಶದ ಕವಿ ದಿತಿ ರೋನೆನ್‌ರ (Diti Ronen) ಅವರ ಕಾವ್ಯದ ಕುರಿತ ಬರಹ ನಿಮ್ಮ ಓದಿಗೆ

ದಿತಿ ರೋನೆನ್ ಅವರ ಕಾವ್ಯವು ಒಂದು ಆದರ್ಶಪ್ರಾಯವಾದ ಮನೆಯ ಬಗೆಗಿನ ಭಾವುಕ ಹಂಬಲದ ಆವಾಹನೆಯಿಂದ ನಿರೂಪಿಸಲ್ಪಟ್ಟಿದೆ; ತಮ್ಮ ಬಾಲ್ಯವನ್ನು ಕಳೆದ ಆ ಮನೆ, ಹಾಗೂ ಆ ಮನೆಯ ಮೂಲಕ ತಮ್ಮ ಕುಟುಂಬದ ಇತಿಹಾಸವನ್ನು ಕಂಡುಕೊಳ್ಳುತ್ತಾರೆ. ಅವರ ಕಾವ್ಯವು ಮಾನವ ಬಹುತ್ವದ, ತಾಯ್ನಾಡಿನ ಹುಡುಕಾಟದಲ್ಲಿ ಅಲೆದಾಡುವಿಕೆಯ, ಪ್ರೀತಿ ಮತ್ತು ಶಾಂತಿಯ ಸಂಕೇತವಾಗಿದೆ; ದೃಢವಾದ ಸ್ತ್ರೀವಾದ ಮತ್ತು ಪ್ರೀತಿಯಿಂದಲೂ ಕೂಡಿದೆ.

ಟೆಲ್ ಅವಿವ್‌-ನಲ್ಲಿ ಜನಿಸಿದ ಡಾ. ದಿತಿ ರೋನೆನ್ ಅವರು ಇಸ್ರೇಲ್ ದೇಶದ ಪ್ರಮುಖ ಕವಿ ಹಾಗೂ ವಿದ್ವಾಂಸರು. ಅವರು ಹನ್ನೆರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ ಹಾಗೂ ಅವರ ಕವನಗಳನ್ನು ಹತ್ತಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲಾಗಿದೆ. ವಿಶ್ವಾದ್ಯಂತ ಸಾಹಿತ್ಯ ಪತ್ರಿಕೆಗಳಲ್ಲಿ ಅವರ ಕವನಗಳು ಪ್ರಕಟವಾಗಿವೆ. ಪ್ರಸಿದ್ಧ ಅಂತಾರಾಷ್ಟ್ರೀಯ ಕಾವ್ಯದ ಉತ್ಸವಗಳಲ್ಲಿ ತಮ್ಮ ಕವನಗಳನ್ನು ಓದಲು ರೋನೆನ್‌ರನ್ನು ನಿಯಮಿತವಾಗಿ ಆಹ್ವಾನಿಸುತ್ತಿರುತ್ತಾರೆ. ರೋನೆನ್-ರು ಹಲವಾರು ಕವಿತೆಗಳನ್ನು ಹೀಬ್ರೂ ಭಾಷೆಗೆ ಅನುವಾದಿಸಿದ್ದಾರೆ ಮತ್ತು ಪ್ರಕಟಿಸಿದ್ದಾರೆ, ದಿತಿ ರೋನೆನ್ ಪ್ರಸ್ತುತ ಕವನ ಸಂಪಾದಕರಾಗಿದ್ದು ಹಾಗೂ ಹದಿನೈದಕ್ಕೂ ಹೆಚ್ಚು ಕವನ ಸಂಕಲನಗಳನ್ನು ಸಂಪಾದಿಸಿದ್ದಾರೆ. ರೋನೆನ್‌ರ ಕಾವ್ಯಕ್ಕೆ ಜಿ. ಎಫ಼್. ಮ್ಯೂಸಿಯಮ್-ನಿಂದ ಕಲಾ ಪ್ರಶಸ್ತಿ, ACUM ಕಾವ್ಯ ಪ್ರಶಸ್ತಿ. ಸಾಹಿತ್ಯಕ್ಕಾಗಿ KUGEL ಪ್ರಶಸ್ತಿ, ಟೆರಾ ಪೊಯೆಟಿಕಾ (The Terra Poetica Prize) ಪ್ರಶಸ್ತಿಗಳ ಜತೆ ಹಲವಾರು ಸನ್ಮಾನಗಳು ದೊರಕಿವೆ. ಈ ವರ್ಷ ಅವರ ಕವನ ಸಂಕಲನಗಳು ಮೂರು ಭಾಷೆಗಳಲ್ಲಿ ಪ್ರಕಟವಾಗಲಿವೆ – ಹೀಬ್ರೂ ಭಾಷೆಯಲ್ಲಿ “ದಿ ಬುಕ್ ಆಫ್ ಕ್ರಾನಿಕಲ್ಸ್” (The Book of Chronicles), ಇಂಗ್ಲಿಷ್-ನಲ್ಲಿ “ದಿ ಮಲ್ಬರಿ ಟ್ರೀ” (The Mulberry Tree) ಹಾಗೂ ಜರ್ಮನ್ ಭಾಷೆಯಲ್ಲಿ “ಉಕ್ರೇನ್” (Ukraine).

ದಿತಿ ರೋನೆನ್-ರು ಟೆಲ್ ಅವಿವ್ ವಿಶ್ವವಿದ್ಯಾಲಯದಲ್ಲಿ ರಂಗಭೂಮಿಯ ಬಗ್ಗೆ ಅಧ್ಯಯನ ಮಾಡಿದರು ಹಾಗೂ “ನಟನೆಯ ಸಿದ್ಧಾಂತ” (Theory of Acting Selves) ವಿಷಯದ ಬಗ್ಗೆ ಡಾಕ್ಟರೇಟ್ ಪಡೆದಿರುವರು. ಅವರ ಸಾಹಿತ್ಯಿಕ ಕೆಲಸದ ಜೊತೆಗೆ ರೋನೆನ್ ಸಂಶೋಧಕರು ಹಾಗೂ ಉಪನ್ಯಾಸಕರೂ ಕೂಡ. ಸಾಹಿತ್ಯ, ರಂಗಭೂಮಿ, ಕಲೆ ಮತ್ತು ಸಾಂಸ್ಕೃತಿಕ ನೀತಿಯ ಸಲಹೆಗಾರರಾಗಿದ್ದಾರೆ. ಅವರು ಜೆರುಸಲೆಮ್‌ನ ಹೀಬ್ರೂ ವಿಶ್ವವಿದ್ಯಾಲಯದಲ್ಲಿ ಕಲಾ ನೀತಿಯ ಉಪನ್ಯಾಸಕರಾಗಿದ್ದರು, ಟೆಲ್ ಅವಿವ್ ಪುರಸಭೆಯ ಕಲಾ ವಿಭಾಗದಲ್ಲಿ ಕೆಲಸ ಮಾಡಿದರು, ಹಾಗೂ ಇಸ್ರೇಯಿಲ್‌ನ ಸಂಸ್ಕೃತಿ ಸಚಿವಾಲಯದಲ್ಲಿ “ಥಿಯೇಟರ್, ಲಿಟ್ರೇಚರ್ ಎಂಡ್ ಕಲ್ಚರಲ್ ಪಾಲಿಸಿ” ವಿಭಾಗಗಳ ಮುಖ್ಯಸ್ಥರಾಗಿದ್ದರು. ರೋನೆನ್ ಅವರು ರಂಗಭೂಮಿ ಹಾಗೂ ಕಲೆಯ ವಿಷಯಗಳಲ್ಲಿ ಸಹ ಹಲವು ಕೃತಿಗಳನ್ನು ಹಾಗೂ ಲೇಖನಗಳನ್ನು ಬರೆದಿದ್ದಾರೆ. ಸದ್ಯ ಅವರು “ಆಕ್ಟಿಂಗ್ ಇನ್ ಥಿಯೇಟರ್” ವಿಷಯದ ಕುರಿತು ಹೊಸ ಪುಸ್ತಕವನ್ನು ಬರೆಯುವಲ್ಲಿ ನಿರತರಾಗಿದ್ದಾರೆ. ಹೀಗೆ, ಇಸ್ರೇಯಿಲ್‌ನ ಸಾಂಸ್ಕೃತಿಕ ಲೋಕದಲ್ಲಿಯೂ ಸಹ ದಿತಿ ರೋನೆನ್ ಅವರು ತಮ್ಮನ್ನು ಆಳವಾಗಿ ತೊಡಗಿಸಿಕೊಂಡಿದ್ದಾರೆ.

ಹಿಂಸೆಗೆ ಬಲಿಯಾದ ಅಲ್ಪಸಂಖ್ಯಾತರ ಭಾಗವಾಗಿರುವ ಅವರ ವೈಯಕ್ತಿಕ ನಿರೂಪಣೆಯಿಂದ ಮತ್ತು ಕಾಲ್ಪನಿಕ ಪರ್ಯಾಯ ನಿರೂಪಣೆಗಳಿಂದ ರೋನೆನ್‌ರ ಕಾವ್ಯವು ಜನ್ಮ ಪಡೆದಿದೆ. ಹಾಗೆಯೇ, ರೋನೆನ್‌ರ ಕಾವ್ಯವು ಸ್ತ್ರೀವಾದಿ ಕಾವ್ಯವೂ ಹೌದು, ಉದಾಹರಣೆಗೆ, “ಇನ್ನರ್ ಮೂನ್: ನೋಟ್ ಬುಕ್” (Inner Moon: Notebook, 2002) ಸಂಕಲನದಲ್ಲಿ ಚಂದ್ರನ ಮಾಸಿಕ ಚಕ್ರಕ್ಕೆ ಸ್ತ್ರೀಯ ಋತುಚಕ್ರಕ್ಕೆ ಹೋಲಿಸಿದ್ದಾರೆ. ಇಲ್ಲಿ ಬರುವ ಕವನಗಳ ಸರಣಿಯು ಒಬ್ಬ ಸ್ತ್ರೀಯ ಮಾಸಿಕ ಋತುಚಕ್ರ ಮತ್ತು ಅದರ ಸಹಾಯಕ, ಮೌಖಿಕ ಮತ್ತು ಆಧ್ಯಾತ್ಮಿಕ ಪರಿಣಾಮಗಳ ಬಗ್ಗೆ ಮಾತಾಡುತ್ತವೆ. ಇಲ್ಲಿ ಅನುವಾದವಾಗಿರುವ ಅವರ ಕವನ “ಪ್ರಥಮ ಚತುರ್ಥ: ವಕ್ರಚಂದ್ರ” ಇದಕ್ಕೆ ಪ್ರತೀಕವಾಗಿದೆ; ಹಾಗೆಯೇ, “ಒಂದು ಸ್ತನ” ಹೆಸರಿನ ಕವನ. “ಲಿಟಲ್ ಬರ್ಡ್” (Little Bird, 2010) ಸಂಕಲನವು ಅವರ ಮನೆತನದ ನೆನಪುಗಳು ಹಾಗೂ ಹತ್ಯಾಕಾಂಡದ ಒಂದು ನಿರ್ದಿಷ್ಟ ಘಟನೆಗೆ ಸಂಬಂಧಿಸಿದೆ. “ದಿ ರಿಟರ್ನ್ ಆಫ್ ದಿ ಹೌಸ್ ಅಂಡ್ ಇಟ್ಸ್ ವಾಂಡರಿಂಗ್ಸ್” (The return of the house and its wanderings, 2016) ಸಂಕಲನವು ಪ್ರಯಾಣ ಹಾಗೂ ಅವರ “ಮನೆಗಾಗಿ ಹುಡುಕಾಟ” ವಿಷಯಕ್ಕೆ ಸಂಬಂಧಿಸಿದೆ (ಈ ಪುಸ್ತಕಕ್ಕೆ ‘ಕುಗೆಲ್ ಸಾಹಿತ್ಯ ಪ್ರಶಸ್ತಿ’ ನೀಡಲಾಯಿತು). ಅವರ ಇನ್ನೊಂದು ಸಂಕಲನ “ಮೆನಿ ಮದರ್ಸ್” (Many Mothers) ಹಿಂದಿನ ತಲೆಮಾರುಗಳಲ್ಲಿ ಸ್ತ್ರೀ-ಅಸ್ತಿತ್ವದ ಅವರ ಸಾಮೂಹಿಕ-ವೈಯಕ್ತಿಕ ನೆನಪುಗಳಿಗೆ ಸಂಬಂಧಿಸಿದೆ.

ದಿತಿ ರೋನೆನ್‌ರು ಕರ್ನಾಟಕಕ್ಕೆ, ಕನ್ನಡ ಸಾಹಿತ್ಯ ಲೋಕಕ್ಕೆ ಹೊಸಬರೇನಲ್ಲ. “ಪೊಯೆಟ್ ಇನ್ ರೆಸಿಡೆನ್ಸ್” ಕಾರ್ಯಕ್ರಮದ ಭಾಗವಾಗಿ ಮೈಸೂರು ವಿಶ್ವವಿದ್ಯಾಲಯವು 2010-2011-ರಲ್ಲಿ ಹಾಗೂ ಕುವೆಂಪು ವಿಶ್ವವಿದ್ಯಾಲಯವು 2012-2013-ರಲ್ಲಿ ಇವರನ್ನು ಆಹ್ವಾನಿಸಿ ಸನ್ಮಾನಿಸಿದರು. ಈ ಸಮಯದಲ್ಲಿ ಇವರು ಕರ್ನಾಟಕದಲ್ಲಿ ಬಂದುಳಿದಿದ್ದರು. 2022-ರ ಅಕ್ಟೋಬರ್ ತಿಂಗಳಲ್ಲಿ ಬಳ್ಳಾರಿಯಲ್ಲಿ ನಡೆದ ವಿಶ್ವ ಕವಿ ಸಮ್ಮೇಳನ ‘ಸಂಗಂ’ ನಲ್ಲಿ ದಿತಿ ರೋನೆನ್‌ ಅವರು ವಿಶೇಷ ಅತಿಥಿಯಾಗಿ ಪಾಲ್ಗೊಂಡು ತಮ್ಮ ಕೆಲವು ಕವಿತೆಗಳನ್ನು ಓದಿದರು. ಇಲ್ಲಿ ಅನುವಾದಿಸಿದ ಕೆಲವು ಕವನಗಳನ್ನು ಈ ವಿಶ್ವ ಕವಿ ಸಮ್ಮೇಳನಕ್ಕಾಗಿ ಅನುವಾದಿಸಿರುವೆ.

ನಾನು ಇಲ್ಲಿ ಕನ್ನಡಕ್ಕೆ ಅನುವಾದಿಸಿರುವ ದಿತಿ ರೋನೆನ್‌ರ ಕವನಗಳಲ್ಲಿ ಅವರ ಎಲ್ಲಾ ಆಸ್ಥೆಗಳ, ನಂಬಿಕೆಗಳ, ಕಾಳಜಿಗಳ ಉದಾಹರಣೆಗಳನ್ನು ಕಾಣಬಹುದು. ಹಿಟ್ಲರ್‌ನ ಕಾಲದ ಜರ್ಮನಿ ಯಹೂದಿಗಳ ವಿರುದ್ಧ ನಡೆಸಿದ ಹತ್ಯಾಕಾಂಡದ ನೆನಪುಗಳು ಗಾಯಗಳು ಎಂದೂ ಮರೆಯಾಗಲ್ಲ. ಈ ಹತ್ಯಾಕಾಂಡದಿಂದ ಬದುಕುಳಿದವರ ಮಗಳಾಗಿ ದಿತಿ ರೋನೆನ್‌ ಅವರು ಇದರ ಬಗ್ಗೆ ಬಹು ಮಾರ್ಮಿಕವಾಗಿ ಬರೆಯುತ್ತಾರೆ. “ಹೋಗು ನೀನು ಅವ್ಶ್‌ವಿಟ್ಜ಼್-ಗೆ” ಮನಸ್ಸಿಗೆ, ಹೃದಯಕ್ಕೆ ತುಂಬ ನೋವು ತರಿಸುವಂತಹ ಕವನ; ಅನುವಾದ ಮಾಡುವಾಗ ದುಃಖ ತಡೆಯಲಾಗಲಿಲ್ಲ; ಅಲ್ಲಲ್ಲಿ ನಿಂತು ನಿಂತು ಮೆಲ್ಲ ಮೆಲ್ಲನೆ ಮುಂದಕ್ಕೆ ಹೋದೆ. “ಮನೆ”ಯ ಬಗ್ಗೆ, ಮನೆಯ ಹುಡುಕಾಟದ ಬಗ್ಗೆ ಬಹಳಷ್ಟು ಕವನಗಳನ್ನು ಬರೆದಿದ್ದಾರೆ. ಯಹೂದಿ ಸಮುದಾಯಕ್ಕೆ “ಮನೆ” “ರಾಷ್ಟ್ರ” ತುಂಬಾ ಕಾಡುವ ಪ್ರಶ್ನೆಗಳು. ಇಲ್ಲಿ “ಮನೆ”ಯ ಕವನಗಳೂ ಇವೆ. ಇಲ್ಲಿ ಕಂಡು ಬರುವ “ಪ್ರಥಮ ಚತುರ್ಥ: ವಕ್ರಚಂದ್ರ” ಹಾಗೂ “ಒಂದು ಸ್ತನ” ಕವನಗಳು ಅವರ ಸ್ವಂತ ಅನುಭವದಿಂದ ಹುಟ್ಟಿದ ಸ್ತ್ರೀ ಸಂವೇದನೆಯನ್ನು ಸೂಚಿಸುವ ಕವನಗಳು.

ನನ್ನದೇ ಮನೆಯಲ್ಲಾ ಅಥವಾ: ಕಣ್ಣಾ ಮುಚ್ಚಾಲೆಯಾ
ಮೂಲ: At Home or: Hide and Seek

1.
ನಾನಿಲ್ಲಿಗೆ ಬರುವ ಮುನ್ನ
ನನ್ನ ಈ ನೆಲ ಬೇರೆಯವರದಾಗಿತ್ತು
ಉಳುತ್ತಿದ್ದರು ಅವರು ಅದನ್ನು ಪ್ರೀತಿಯಿಂದ.
ನೀನಿಲ್ಲಿಗೆ ಬರುವ ಮುನ್ನ
ನಿನ್ನ ಆ ನೆಲ ಬೇರೆಯವರದಾಗಿತ್ತು
ಉಳುತ್ತಿದ್ದರು ಅವರು ಅದನ್ನು ಪ್ರೀತಿಯಿಂದ.
ನನ್ನ ಅಮ್ಮ ಅಪ್ಪ ಅವರ ತಾಯ್ನಾಡನ್ನು ಬಿಡುವ ಮುನ್ನ
ವಾಸವಾಗಿದ್ದರು ಅವರದೇ ಮನೆಯಲ್ಲಿ
ಕಟ್ಟಿದ್ದರವರು ಅದನ್ನು ಪ್ರೀತಿಯಿಂದ.
ನೀನು ನಿನ್ನ ತಾಯ್ನಾಡನ್ನು ಬಿಡುವ ಮುನ್ನ
ವಾಸವಾಗಿದ್ದೆ ನಿನ್ನದೇ ಮನೆಯಲ್ಲಿ
ಕಟ್ಟಿದ್ದೆ ನೀನು ಅದನ್ನು ಪ್ರೀತಿಯಿಂದ.
ನಾವು ಇತಿಹಾಸವನ್ನು ನಿರಾಕರಿಸೋಣ.
ಹೀಗೆ ಅಂದುಕೊಳ್ಳೋಣ
ನಾವಿಲ್ಲಿ ಇರಲಿಲ್ಲ ನೀವು ಬರುವ ಮುನ್ನ
ನೀವಿಲ್ಲಿ ಇರಲಿಲ್ಲ ನಾವು ಬರುವ ಮುನ್ನ.
ಚೆಂಡಾಟದ ಬದಲು ಪದಗಳಾಟ ಆಡೋಣ.
ಬೇರೆಯವರಿಗಾಗಿ ಕಟ್ಟಿದ ಮನೆಯಲ್ಲಿ ನಾನಿರುವೆ.
ಬಿಟ್ಟು ಹೋದರವರು ನನ್ನ ಮನೆಯಲ್ಲಿದ್ದವರು
ಬೇರೆಯವರಿಗಾಗಿ ಕಟ್ಟಿದ ಮನೆಯಲ್ಲಿರಲು.
ಬೇರೆಯವರಿಗಾಗಿ ಕಟ್ಟಿದ ಮನೆಯಲ್ಲಿ ನೀನಿರುವೆ
ಬಿಟ್ಟು ಹೋದರವರು ನಿನ್ನ ಮನೆಯಲ್ಲಿದ್ದವರು
ಬೇರೆಯವರಿಗಾಗಿ ಕಟ್ಟಿದ ಮನೆಯಲ್ಲಿರಲು.

2.
ನನಗೆಂದೇ ಕಟ್ಟಿದ ಆ ಒಂದು ಮನೆ
ಯಲ್ಲಿ ಒಕ್ಕಲಿದ್ದಾರೆ ಈಗ ಜನರು
ನನ್ನಮ್ಮನ ಭಾಷೆ ಮಾತಾಡುತ್ತಾರವರು –
ನನ್ನಮ್ಮನ ಸ್ವಂತ ಭಾಷೆ
ನನಗೆ ಗೊತ್ತಿರದ ಭಾಷೆ.
ಪ್ಯಾರಿಸ್, ಮ್ಯಾಡ್ರಿಡ್, ರೋಮ್ ನಗರಗಳ
ಮುಖ್ಯ ರಸ್ತೆಗಳಲ್ಲಿ ನಾನು ನಡೆದಾಡುವಾಗ
ನನ್ನ ಜನರ ಗುರುತುಗಳ ಗುರುತು ಹಿಡಿಯುತ್ತೇನೆ
ಸುಮ್ಮನಾಗುತ್ತೇನೆ.

3.
ಆಕಾಶವನ್ನು ಹಿಡಿದು
ಎಳೆದುಕೊಳ್ಳುತ್ತೇನೆ
ನನ್ನ ತಲೆಯ ಮೇಲೆ ನಾನು
ಸೂರಿಗಾಗಿ
ಆದರೆ ನನ್ನ ಪಾದಗಳನ್ನ ಎಲ್ಲಿ ಕಳಿಸಲಿ.

(Translated from the Hebrew into English by Anna Birkenhaur)

*****

ಪರಿವಿಕಸನ
ಮೂಲ: Epigenetics

1.
ಪರದೆಗಳಲ್ಲಿ ಹಾದು ಹಾಡುವ ಗಾಳಿಯಾಗಿದ್ದೆ ನಾನು / ಹೊರಗಿನ ನೋಟವನ್ನು ನೋಡುವ ಜನ್ನಲಾಗಿದ್ದೆ ನಾನು / ಚಳಿಗಾಳಿಯಲ್ಲಿ ಆರುತ್ತಿರುವ ಒಗೆದ ಬಟ್ಟೆಯಾಗಿದ್ದೆ ನಾನು. / ಮಡಚಿದೆ ನಾನು ಪ್ರೇಮವನ್ನು / ಈ ಮೂಲೆ ಆ ಮೂಲೆ ಹಿಡಿದು / ಇಟ್ಟೆ ನಾನು ಅದನ್ನು / ಜೋಪಾನವಾಗಿ ಜೋಡಿಸಿಟ್ಟ ದುಪ್ಪಟ್ಟಿಗಳ ಮೇಲೆ. / ನನ್ನೆಲ್ಲಾ ಆಶೆಗಳನ್ನು ಕೂಡಿಸಿಟ್ಟೆ ನಾನಲ್ಲಿ. / ಕಾದಿರುವೆನು ನಾನು ಬಾಗಿಲಲಿ ನಿಂತು.

2.
ಈ ಮನೆಯಲ್ಲಿ / ನಿನ್ನ ಮುಖವನ್ನು ಸಂಯೋಜಿಸಲಾಗಿದೆ / ನಿನ್ನ ಕಣ್ಣುಗಳು ನಾಲಿಗೆಯ ಪ್ರತ್ಯಯಗಳ ಜತೆ ಗುದ್ದಾಡುತ್ತಿವೆ / ಅದು ಹೃದಯದ ಬಡಿತವನ್ನು / ನಿನ್ನ ನರಗಳಲ್ಲಿ ಚಲಿಸುತ್ತಿರುವ ನೆತ್ತರಿನ ವಾಕ್‌ಶೈಲಿಯನ್ನು ಆದೇಶಿಸುತ್ತಿದೆ. / ರೋದನವೊಂದು ನಗುವಾಗಿ ಮಾರ್ಪಡುತ್ತದೆ / ಕೋಣೆಗಳ ಚಕ್ರವ್ಯೂಹದಲ್ಲಿ ಸ್ಥಳತಪ್ಪಿದ ನರಳಿಕೆಯಂತೆ. / ನಿನ್ನ ರೂಪ ಹಜಾರದಲ್ಲಿ ನೇತಾಡುವ ಕನ್ನಡಿಯಲ್ಲಿ ಪ್ರತಿಬಿಂಬಿಸುತ್ತಿದೆ. / ನಾನೀಗ ಎರಡಾಗಿದ್ದೇನೆ ಅಂದರೆ ಒಂದೇ.

3.
ಸಬ್ಬತಿನ ಬೆಳಗ್ಗೆ ಮನೆ ಒಮ್ಮೆಲೆ ನಿಂತುಬಿಟ್ಟಿತು. / ಕಿಂಡಿಗಳನ್ನು ಮುಚ್ಚಿಕೊಂಡಿತು / ಉಸಿರು ಹಿಡಕೊಂಡಿತು. / ಪೆಟ್ಟಿಗೆಗಳಲ್ಲಿದ್ದ ಬೊಂಬೆಗಳು / ಕಪಾಟುಗಳಲ್ಲಿದ್ದ ಪುಸ್ತಕಗಳು / ಕೊಂಡಿಗಳಲ್ಲಿ ನೇತಾಡುತ್ತಿದ್ದ ಕಪ್ಪುಗಳು / ಹೂಜಿಯಲ್ಲಿದ್ದ ನೀರು / ಪಾತ್ರೆಯಲ್ಲಿದ್ದ ಅನ್ನ, ಎಲ್ಲ ನೆಟ್ಟಗಾದವು. / ಬಿರುಕುಗಳೆಲ್ಲ ತಯಾರಾಗಿ ನಿಂತವು / ಯಾವನೊಬ್ಬ ಗಂಡಸೂ ತುಟಿಕ್ ಪಿಟಿಕ್ ಅನ್ನಲಿಲ್ಲ / ಹೆಂಗಸರು ಕೂಡ./

4.
ಈಗ ಜಿಂಕೆಗಳೂ ಹೋಗಿಬಿಟ್ಟಿವೆ / ಅಡವಿಯಲ್ಲಿ ಅವುಗಳ ಹೆಜ್ಜೆಸಪ್ಪಳ ನಿಂತಿದೆ. / ಚಳಿಗಾಳಿಯೂ ಒಂದು ದನಿಯೇ / ದೂರದ ಸಂಗೀತವೂ / ನಿದ್ದೆಯಲ್ಲಿ ಮಗ್ಗಲು ತಿರುಗಿದನೊಬ್ಬ / ಮನೆಯ ಕನಸು ಕಾಣುತ್ತಾ. / ಯಾವುದೂ ಸಾಧ್ಯವೇ./ ಸಂಗೀತದ ದನಿ ಹೆಚ್ಚಾಗುತ್ತೆ / ಗಾಳಿ ನಲಿಯುತ್ತೆ/ ಕಣಿವೆಯ ಅಂಚಿನಲ್ಲಿ ಜಿಂಕೆಗಳು ಕುಣಿದಾಡುತ್ತವೆ / ಅವುಗಳ ಗೊರಸು-ಗುರುತುಗಳು ಅಡವಿಯ ನೆಲದಲ್ಲಿ ಅಚ್ಚೊತ್ತಿವೆ.

(Translated from the Hebrew into English by Joanna Chen)

*****

ಹೋಗು ನೀನು ಅವ್ಶ್‌ವಿಟ್ಜ಼್-ಗೆ/ಬೇರು ಭಂಗ
ಮೂಲ: Go to Auschwitz / Breaching Roots

1.
ಹೋಗು ನೀನು ಅವ್ಶ್‌ವಿಟ್ಜ಼್-ಗೆ / ನಿಲ್ಲು ಅಲ್ಲಿ ಪ್ಲಾಟ್‌ಫಾರ್ಮಿನ ಮೇಲೆ / ಹಿಂದೆಂದೂ ಅಲ್ಲಿ ನಿಂತಿರದ ಹಾಗೆ.

2.
ಆಯ್ಕೆಯ ನಂತರ / ಅಜ್ಜಿ, ಅಮ್ಮ, ನಾನು / ಪ್ಲಾಟ್‌ಫಾರ್ಮಿನಲ್ಲಿ ನಿಂತು / ಅಜ್ಜನನ್ನು ನೋಡುತ್ತೇವೆ / ಅವನ ಬಲಗೈ ಪುಟ್ಟ ಯೆಹೊಶುವಾನ ಕೈಯೊಳಗೆ / ಎಡಗೈಯಲ್ಲಿ ಮಗು ಡೇವಿಡ್-ನ್ನು ಎತ್ತಿಕೊಂಡಿದ್ದಾನೆ / ಅವನ ಬೆನ್ನು ನಮ್ಮ ಕಡೆಗೆ / ಅವನು ನಡೆಯುತ್ತಿದ್ದ.// ಎಷ್ಟೊಂದು ದೂರ ಹೋಗಿದ್ದಾನೆ / ಇಷ್ಟು ವರುಷಗಳಲ್ಲಿ / ಹೋಗುತ್ತಾ ಹೋಗುತ್ತಾ ಹೋಗುತ್ತಾ / ಮತ್ತೆ ನಾವಲ್ಲೆ ನಿಂತು ನೋಡುತ್ತೇವೆ // ಎಷ್ಟು ವರುಷಗಳಾಗಿವೆ // ನಾವು ನೋಡುತ್ತೇವೆ // ಅವನ ಬೆನ್ನು ನಮ್ಮ ಕಡೆಗೆ // ಇಂದಿನ ವರೆಗೂ // ಎಂದೆಂದಿಗೂ // ಅವನ ಬೆನ್ನು ನಮ್ಮ ಕಡೆಗೆ // ಪುಟ್ಟ ಯೆಹೊಶುವಾ // ಮಗು ಡೇವಿಡ್ // ಅವನ ಬೆನ್ನು ನಮ್ಮ ಕಡೆಗೆ // ಅವನು ಹೋಗುತ್ತಿದ್ದ ಹಾಗೆ.

3.
ಇಲ್ಲಿ ಬರಬೇಡ ಮಗಳೇ // ಗೋರಿಗಳು ಇಲ್ಲಿ ಮೊಳೆಯೊಲ್ಲ. // ಕಣಿವೆ ಶಾಂತವಾಗಿದೆ / ಹಸಿರಾಗಿದೆ // ಜನರು ಒಳ್ಳೆಯವರು.// ಇಲ್ಲಿ ಬರಬೇಡ ಮಗಳೇ // ಇಲ್ಲಿ ಕೇಡು ಮಲಗಿದೆ. // ಪ್ರವಾಸಿಗರು ಬರುತ್ತಾರೆ ಹೋಗುತ್ತಾರೆ // ಯಾರೂ ಉಳಿದುಕೊಳ್ಳುವುದಿಲ್ಲ. // ಇಲ್ಲಿ ಬರಬೇಡ ಮಗಳೇ / ಗತಿಸಿದ ಕಾಲದಿಂದ ಕಲಿಯುವಂತಹದ್ದು ಏನೂ ಇಲ್ಲ. // ಈಗ ಮರಗಳಲ್ಲಿ ಹಾದು ಬರುವ ಗಾಳಿಗೆ // ನೆತ್ತರಿನ ಕಂಪಿನ ನೆನಪಿಲ್ಲ. // ಇಲ್ಲಿ ಬರಬೇಡ ಮಗಳೇ / ನಿನ್ನಿಂದ ಏನೂ ಅಳಿಸಲಾಗಲ್ಲ. // ನಿನ್ನ ದೇಹದ ಗಾಯಕಲೆಗಳು ಇಲ್ಲಿನ ದೃಶ್ಯಾವಳಿಗಿಂತ ದಿಟವಾಗಿವೆ. / ಒಂದು ನಿರರ್ಥಕ ಪಯಣವಿದು.

4.
ಬಿಳಿ ಮೋಡಗಳು ರಸ್ತೆಯ / ಅಂಚುಗಳನ್ನು ಅಲಂಕರಿಸಿವೆ. / ತೇವಭರಿತ ಮಂಜು ಸ್ವಾಗತಿಸುತ್ತಿದೆ / ನನ್ನ ಚರ್ಮವನ್ನು / ನನ್ನ ಕಣ್ಣುಗಳನ್ನು / ಹಿಮಚೆಕ್ಕೆಗಳು ಲಿಂಡನ್ ಮರದ ಕೊಂಬೆಗಳ ಮೇಲೆ ನೆಲೆಸಿವೆ / ಪೇರಿಕೊಂಡಿವೆ / ನನ್ನನ್ನು ಪರೀಕ್ಷಿಸಲು / ನಾನು ನನ್ನ ಪೂರ್ವಜರ ನೆಲಕ್ಕೆ ಮರಳುತ್ತಿರುವಂತೆ. / ಈ ನೆಲವನ್ನು ನಾನು ಚುಂಬಿಸಲಾರೆ.

5.
ಹೋಗು, ಹೋಗು ನೀನು ಅವ್ಶ್‌ವಿಟ್ಜ಼್-ಗೆ. / ಕವನಗಳು ಕೆಲವು ದೊರಕಿಯಾವು ಈ ಪಯಣದಿಂದ.

(Translated from the Hebrew into English by Joanna Chen)

*****

ಒಂದು ಸ್ತನ
ಮೂಲ: One Breast

1.
ನೀಲಿ ಶಾಯಿಯಲ್ಲಿ, ಕನ್ನಡಿಯ ಮುಂದೆ ನಿಂತು,
ನಾನು ನನ್ನಮ್ಮನ ಮಾಜಿ ಸ್ತನದ
ಕೊಯ್ಯುವಿಕೆಯ
ಜಾಗದ ಸುತ್ತ ಗೆರೆ ಎಳೆಯುವೆ.

ಗೆರೆ ಮೇಲಕ್ಕೆ ಹೋಗುತ್ತೆ, ಸುರುಳಿ ತಿರುಗಿ,
ಬೀಳುತ್ತೆ ನಿಸ್ಸಹಾಯಕವಾಗಿ
ಕಂಕುಳಿನ ಕುಳಿಯೊಳಗೆ.

ಈಗ ಅಡ್ಡಗೆರೆ ಎಳೆಯೋಣ,
ಆದರೆ ಕೈ ಚಲಿಸಲು ಆಗುತ್ತಾ ಇಲ್ಲ.

2.
ಕಾಣೆಯಾದ ಸ್ತನದ ಗಾಯಕ್ಕೆ ಹತ್ತಿ ಇಟ್ಟು
ಮೃದುವಾದ ಬಹು ಚುಂಬಿತ ಕಟ್ಟುಗಳನ್ನು
ಒಂದರ ಮೇಲೆ ಒಂದು ಇಡುವೆ ಮೆತ್ತಗೆ
ನಿನ್ನ ನೋವನ್ನು ತಣಿಸಲು,
ನನ್ನನ್ನು ನಾನು ಕಟುಕನಿಂದ ಮರೆಮಾಡಿಕೊಳ್ಳಲು.

3.
ಅಮ್ಮಾ, ಬಹುಶಃ
ಖಾತ್ರಿ ಮಾಡಿಕೊಳ್ಳುವುದು ಒಳ್ಳೆಯದು
ನಾವು ಸದ್ದು ಮಾಡದೇ ಈ ರಾತ್ರಿ ಹೋಗಿ
ಆ ಕೊಯ್ದ ಸ್ತನವನ್ನು ಹೂತುಬಿಡೋಣ
ನೆಲದಲ್ಲಿ, ಆಳದಲ್ಲಿ,
ತುಳಿದು ಬಿಡೋಣ, ಹೊಸಕಿ ಹಾಕೋಣ
ಮಣ್ಣನ್ನು ಕಾಲಿಂದ.
ಹೊಡಿಯೋಣ, ಬಡಿಯೋಣ
ನಾನು ನೀನು ಸೇರಿ,
ಥೂ ಉಗುಳೋಣ ಮೂರು ಸಲ ಎಲ್ಲಾ ಗಾಳಿದಿಕ್ಕುಗಳೆಡೆಗೆ
ಗಿರಕಿ ಹೊಡೆಸೋಣ ಕತ್ತಿಗಳನ್ನು ಗಾಳಿಯಲ್ಲಿ
ಚುಚ್ಚೋಣ ಒದರೋಣ ಅಂಗೈ ಮೇಲಕ್ಕೆತ್ತಿ
ಬೇಡೋಣ ಹಾಡೋಣ,
ಮೇಲಕ್ಕೆದ್ದು ಕೈತೊಳೆದು
ಮತ್ತೆ ಎಲ್ಲಾ ಗಾಳಿದಿಕ್ಕುಗಳೆಡೆಗೆ ಮೂರು ಸಲ ಥೂ ಉಗುಳಿ
ಹೊರಟುಹೋಗೋಣ.
ಮತ್ತೆ, ಮನೆಗೆ ಹೋದ ಮೇಲೆ,
ಗಟ್ಟಿಯಾಗಿ ಕಣ್ಣುಮುಚ್ಚಿಕೊಂಡು
ಬೆರಳುಗಳನ್ನ ಶಿಲುಬೆಮುದ್ರೆ ಮಾಡಿ ಪ್ರಾರ್ಥಿಸುತ್ತಾ
ಹತ್ತು ವರುಷಗಳ ಕಾಲವನ್ನು ಎಣಿಸುತ್ತಾ
ಉಸಿರುಹಿಡಿದುಕೊಂಡು
ಕಾಯೋಣ.

(Translated from the Hebrew into English by Heather H. Thomas with the poet)

*****

ಐದನೆಯ ಹಕ್ಕಿ
ಮೂಲ: Fifth Bird

ಆ ಐದನೆಯ ಹಕ್ಕಿ ನಿನ್ನ ಹೊಸ್ತಿಲಲ್ಲಿ ಬಂದು ಇಳಿಯುತ್ತೆ
ನಿನ್ನ ಪಾದಗಳಲ್ಲಿ ಮಡಿಯಲೆಂದು.
ಮತ್ತೆ ನಿನ್ನನ್ನು ಕರೆಯಲಾಗುತ್ತೆ ಆಕಾಶವ ತೆರೆಯಲು,
ನಿನ್ನ ಚಿತ್ರ-ಪ್ರಾರ್ಥನೆಯ ಕಳಿಸಲು,
ಅನಂತ ಕ್ಷಣವೊಂದರ
ಚಲನೆಯ ಪ್ರತಿಮೆಯದು.
ಮತ್ತೆ ನೀನು ಕವಿತೆಯ ದೇಹದೊಳಕ್ಕೆ
ಅಗೆಯುತ್ತಾ ಇಳಿಯುವೆ.
ನಾನು ಗಮನವಿಟ್ಟು ಆಲಿಸುವೆ,
ಪತ್ರಗಳ ಬರೆಯುವೆ ನಾನು
ನಮ್ಮ ಸಾಧಾರಣ ಸಂಪ್ರತಿಗಳ ಬಗ್ಗೆ,
ನಮ್ಮ ಬದುಕಿನ, ನಮ್ಮ ಸಾವಿನ ಬಗ್ಗೆ,
ಮತ್ತೆ ಮತ್ತೆ ಮರಳಿ ಬರುತ್ತವೆ ಅವು
ಆಕಾಶದಿಂದ, ಭೂಮಿಯಿಂದ.

(Translated from the Hebrew into English by Elazar Tal Ronen)

*****

ಇತ್ತೀಚಿನ ರಾತ್ರಿಗಳಲ್ಲಿ
ಮೂಲ: On recent nights

ಇತ್ತೀಚಿನ ರಾತ್ರಿಗಳಲ್ಲಿ
ನಾನು ನನ್ನ ಮನೆಗಾಗಿ ಹುಡುಕಾಡುವೆ
ಅಲೆದಾಡುವೆ ನಾನು ಬ್ರಹ್ಮಾಂಡದ ದಾರಿಗಳಲ್ಲಿ
ಅದನ್ನರಸುತ್ತಾ
ಅದು ಹೋದ ದಾರಿಯ ತಡಕಾಡುತ್ತಾ
ಹಂಗೇರಿಯನ್ ಭಾಷೆಯಲ್ಲಿ ಅದಕ್ಕಾಗಿ ಹಾಡುವೆ ನಾನು
ಹೀಬ್ರೂ ಭಾಷೆಯಲ್ಲಿ ಅದನ್ನು ಕರೆಯುವೆ ನಾನು
ಬಾ, ಬಾ, ಬಾ.

(Translated from the Hebrew into English by Linda Stern Zisquit)

*****

ಒಂದು ಮನೆಯೆಂದರೆ ಏನದು ಕೊನೆಗೆ?
ಮೂಲ: And what is a house anyway?

ಒಂದು ಮನೆಯೆಂದರೆ ಏನದು ಕೊನೆಗೆ?
ದೇಹಗಳ ಬುನಾದಿಗಳ ಮೇಲೆ,
ಪದಗಳ ಒಡಂಬಡಿಕೆಯ ಮೇಲೆ
ನಿಂತಿರುವ ಒಂದು ಕಟ್ಟಡ.
ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡು
ಈ ತರದ ಪದಗಳನ್ನು
ಒಂದು ಜನ ಇನ್ನೊಂದು ಜನಕ್ಕೆ ಹೇಳುವುದಾದರೆ
ಬಿರುಕುಗಳು ತಮ್ಮ ಬಾಯಿಗಳನ್ನು
ಅಗಲವಾಗಿ ತೆರೆದುಕೊಳ್ಳುತ್ತಾವೆ,
ಗೋಡೆಗಳನ್ನು ಬೀಳಿಸುತ್ತಾವೆ,
ಮತ್ತೆ ಮನೆ ಕುಸಿದು ಬೀಳುತ್ತೆ
ಅದರಲ್ಲಿ ಬಾಡಿಗೆಗಿರುವವರ ಮೇಲೆ.

(Translated from the Hebrew into English by Linda Stern Zisquit)

*****

ನಾನೊಮ್ಮೆ ನನ್ನ ಮೇಲೆ ಪ್ರೇಮವ ಹಾಸಿಕೊಂಡೆ
ಮೂಲ: Once I spread over me love

ನಾನೊಮ್ಮೆ ನನ್ನ ಮೇಲೆ ಪ್ರೇಮವ ಹಾಸಿಕೊಂಡೆ
ಅದರಿಂದ ಮನೆಯೊಂದ ಮಾಡಿಕೊಂಡೆ.
ಒಂದು ತಲೆದಿಂಬನ್ನು
ಒಂದು ಕಂಬಳಿಯನ್ನು ನೇಯ್ದುಕೊಂಡೆ,
ಮಕ್ಕಳು ಹುಟ್ಟಿದ ಸಮಯದಲ್ಲಿ
ಒಂದು ಕಲಾಬತ್ತಿನ ಚಾವಣಿಯನ್ನು ಹೆಣೆದುಕೊಂಡೆ.
ಒಳಗಿರುವವರ ಕಣ್ಣುಗಳ ಮಧ್ಯೆ ಬೆಳಕು ಹರಿದಾಡುತ್ತಿತ್ತು.

ಪರದೆಗಳಲ್ಲಿ ಹಾಡುವ ಗಾಳಿಯಾಗಿದ್ದೆ ನಾನು
ನಿಸರ್ಗದೃಶ್ಯ ನೋಡುತ್ತಿರುವ ಕಿಟಕಿಯಾಗಿದ್ದೆ ನಾನು
ಆರಲು ಹಾಕಿದ ಒಗೆದ ಬಟ್ಟೆಗಳಾಗಿದ್ದೆ ನಾನು.
ಪ್ರೇಮವನ್ನು ಈ ಮೂಲೆ ಆ ಮೂಲೆ ಹಿಡಿದು ಮಡಚಿ
ಮಡಚಿಟ್ಟ ಅಂಗಿಗಳ ನಡುವೆ ಜೋಪಾನವಾಗಿ ಇಟ್ಟೆ.
ನನ್ನೆಲ್ಲಾ ಆಶೆಗಳನ್ನು ಅಲ್ಲಿ ಕೂಡಿಸಿ ಇಟ್ಟೆ.
ನಾನು ಬಾಗಿಲಲಿ ನಿಂತು ಕಾಯುತ್ತಲಿದ್ದೆ.

ನಂತರ ಯುದ‌್ಧ ಶುರುವಾಯಿತು
ಪತ್ರಗಳು ಬರಲು ಶುರುವಾದವು
ಕೆಲವು ಬಂದು ಸೇರಲಿಲ್ಲ.
ನಾನು ಬಾಗಿಲಲ್ಲಿ ನಿಂತು ಕಾಯುತ್ತಲಿದ್ದೆ.
ಬಲು ದೀರ್ಘವಾದ ಶೀತಕಾಲವಾಗಿತ್ತು ಅದು
ಬಲು ಥಂಡಿಯಾದ ಶೀತಕಾಲವಾಗಿತ್ತು ಅದು
ನಂತರ ಪತ್ರಗಳು ನಿಂತವು
ನಾನು ಬಾಗಿಲಲ್ಲಿ ನಿಂತು ಕಾಯುತ್ತಲಿದ್ದೆ.
ನೀನು ಬರಲಿಲ್ಲ
ಆಮೇಲೆ ನೀನು ಬಂದೆ
ಬರದೇ ಇದ್ದ ಹಾಗೆ
ನಾನು ಬಾಗಿಲಲ್ಲಿ ನಿಂತು ಕಾಯುತ್ತಲಿದ್ದೆ.

(Translated from the Hebrew into English by Linda Stern Zisquit)

ಪ್ರಥಮ ಚತುರ್ಥ: ವಕ್ರಚಂದ್ರ
ಮೂಲ: First Quarter: Crescent

ಒಂದಾನೊಂದು ಕಾಲದಲ್ಲಿ ಪೃಥ್ವಿ ಎಂಬುದು ಇರಲಿಲ್ಲ,
ಬ್ರಹ್ಮಾಂಡ ಬರಿದಾಗಿತ್ತು,
ನನ್ನ ಎಲ್ಲಾ ಪಾರ್ಶ್ವಗಳೂ ದೀಪ್ತವಾಗಿದ್ದವು,
ನನ್ನ ಮುಖ ದೀಪ್ತವಾಗಿತ್ತು, ನನ್ನ ಕಣ್ಣುಗಳು ದೀಪ್ತವಾಗಿದ್ದವು,
ನನ್ನ ಅಂಗಾಲುಗಳು ದೀಪ್ತವಾಗಿದ್ದವು,
ನನ್ನ ಅಂಗಾಲುಗಳು ಮೆಟ್ಟಿದ ಜಾಗವೂ ದೀಪ್ತವಾಗಿತ್ತು.

ಸ್ವಲ್ಪವೂ ಬೆಳಗುಂದುವ ಸಾಧ್ಯತೆ ನನ್ನಲ್ಲಿರಲಿಲ್ಲ,
ಬೆಳಗುಂದುವಿಕೆಯ ಅರಿವು ಸಮೀಪ ಬರುವ ಸಾಧ್ಯತೆಯೂ ಇರಲಿಲ್ಲ,
ಆದರೆ ಯಾವ ಕ್ಷಣ ಬೆಳಗುಂದುವಿಕೆಯ ಅರಿವು ಮೂಡಿತೊ,
ಬೆಳಗುಂದುವಿಕೆಗೊಂದು ರೂಪ ಬಂತು.

ನಂತರ ಪೃಥ್ವಿ ಹುಟ್ಟಿತು.
ಅದರ ಪಥದ ಅಳವಿನಲ್ಲಿ ಕುಡುಗೋಲು ಬಂದು ಅಪ್ಪಳಿಸಿತು,
ಮಹಾಸ್ಫೋಟದಲ್ಲಿ ಉಲ್ಕೆ ಬಂದು ಬಿದ್ದಂತೆ.

ನನ್ನ ಜನುಮದ ಗಳಿಗೆಯೇ ನನ್ನ ಮರಣದ ಗಳಿಗೆಯಾಯಿತು ಆಗ.

(Translated from the Hebrew into English by Rachel Tzvia Back)