ಈ ಕಾಲ ವಿಲಿಯಮ್ ಬ್ಲೇಕ್ ನನ್ನು ಆಂಗ್ಲ ಕವಿ, ಚಿತ್ರಕಾರ, ಮುದ್ರಣಕಾರ ಎಂದು ಗೌರವದಿಂದ ನೆನೆಯುತ್ತದೆ. ಬದುಕಿದ್ದಾಗ ವಿಶೇಷವಾದ ಗುರುತು ಪ್ರಸಿದ್ಧಿ ಇಲ್ಲದವನನ್ನು ಈ ಕಾಲ, ಕಾವ್ಯ ಚರಿತ್ರೆಯಲ್ಲಿ ಕ್ರೀಯಾಶೀಲ, ರೋಮ್ಯಾಂಟಿಕ್ ಕಾಲದ ದೃಶ್ಯ ಕಲೆಯನ್ನು ಪ್ರತಿನಿಧಿಸುವವನು ಎಂದೆಲ್ಲ ಸ್ಮರಿಸುತ್ತದೆ. ವಿಕ್ಷಿಪ್ತ ವ್ಯಕ್ತಿತ್ವಕ್ಕಾಗಿ ಹುಚ್ಚ ಎಂದು ಸಮಕಾಲೀನರಿಂದ ಕರೆಸಿಕೊಂಡರೂ, ಮರಣಾನಂತರದ ಅವನ ಅಭಿಪ್ರಾಯ, ಸೃಜನಶೀಲತೆ, ಅಭಿವ್ಯಕ್ತಿಗಳ ಬಗ್ಗೆ ವಿಮರ್ಶಕರಿಂದ ವಿಶೇಷ ಗೌರವ ಮೆಚ್ಚುಗೆ ವ್ಯಕ್ತವಾಗಿದೆ.
‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಕವಿ, ಕಲಾವಿದ ವಿಲ್ಲಿಯಮ್‌ ಬ್ಲೇಕ್‌ನ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

ಬದುಕಿದ ಎಪ್ಪತ್ತು ವರ್ಷಗಳಲ್ಲಿ ಅರವತ್ತೇಳು ವರ್ಷಗಳನ್ನು ಲಂಡನ್ ನಲ್ಲಿ ಕಳೆದ ಕವಿ ಚಿತ್ರಕಲಾವಿದ ಕೆತ್ತನೆಗಾರ ಮುದ್ರಣಕಾರನನ್ನು ಅಪರೂಪದ “ಪೂರ್ಣಾವಧಿ ಲಂಡನ್ನಿಗ” ಎನ್ನಬಹುದು. ಲಂಡನ್ ನಲ್ಲಿ ಹಲವು ಬೀದಿಗಳಲ್ಲಿ ಮತ್ತೆ ಮತ್ತೆ ಮನೆ ಬದಲಿಸಿದಾತ ಲಂಡನ್ ಇಂದ ಹೊರಗೆ ಕಾಲಿರಿಸಲೇ ಇಲ್ಲ ಎಂದು ವಾದಿಸಬಹುದು. ದಕ್ಷಿಣ ಇಂಗ್ಲೆಂಡ್ ನ ಸಮುದ್ರ ತಟದ ಊರು ಫೆಲ್ಪ್ಹ್ಯಾಮ್ ನಲ್ಲಿ ಮೂರು ವರ್ಷ ಕಳೆದದ್ದು ಮಾತ್ರ ವಾದಕ್ಕೆ ಅಪವಾದ. ಇನ್ನು ಲಂಡನ್ ನ ಒಳಗೂ ನಡೆಯುವುದು ಅವನಿಗೆ ಇಷ್ಟ ಇರಲಿಲ್ಲ. ಬದಲಿಗೆ ನಡೆಯುವವರ ಬಗ್ಗೆ ಕರುಣೆ ತೋರಿಸುತ್ತಿದ್ದ. ಚಿತ್ರಗಳು, ಮೂರ್ತಿಗಳು ಮತ್ತು ಪುಸ್ತಕಗಳು ಅವನ ಅತಿ ಆಪ್ತ ಸಂಗಾತಿಗಳಾಗಿದ್ದವು, ಯಾವುದೇ ಮನುಷ್ಯರಿಗಿಂತಲೂ.

(ವಿಲ್ಲಿಮಯ್‌ ಬ್ಲೇಕ್‌)

1789ರಿಂದ 1799ರ ಕಾಲದಲ್ಲಿ ಬ್ರಿಟನ್ನಿನ ನೆರೆಯ ದೇಶವಾದ ಫ್ರಾನ್ಸ್ ನಲ್ಲಿ ಕ್ರಾಂತಿ ನಡೆಯಿತು. 1775ರಿಂದ 1783ರ ನಡುವೆ ಅಮೆರಿಕದಲ್ಲಿ ಕ್ರಾಂತಿಯ ಕಾರಣಕ್ಕೆ ಯುದ್ಧ ನಡೆಯಿತು. ಪಶ್ಚಿಮದ ದೇಶಗಳ ಪರಿವರ್ತನೆಯ ಕಾಲವಾದ ಅದೇ ಹದಿನೆಂಟನೆಯ ಶತಮಾನ ಅಂತ್ಯದಲ್ಲಿ ಇಂಗ್ಲೆಂಡ್ ಕೈಗಾರಿಕೀಕರಣದ ಮಹಾಮಾರ್ಪಾಟಿನಲ್ಲಿ ಸಿಕ್ಕಿಕೊಂಡು ಜನಜೀವನ, ಸಾಮಾಜಿಕ ವ್ಯವಸ್ಥೆಗಳು ತೀವ್ರವಾಗಿ ಬದಲಾಗುತ್ತಿದ್ದವು. ನಗರೀಕರಣದ ನವಶಿಶು ಲಂಡನ್, ಪ್ರಗತಿಪಥದಲ್ಲಿ ಹೊರಹೊಮ್ಮುವ ಯತ್ನದಲ್ಲಿ ಒಂದು ವರ್ಗದ ಜನರ ಬದುಕನ್ನು ದುಸ್ತರವಾಗಿಸಿತ್ತು, ಕರಾಳವಾಗಿಸಿತ್ತು. ಆ ಕಾಲದ ಸಮಾಜದ ಸ್ಥಿತ್ಯಂತರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆಯಾಗಿ “ಲಂಡನ್” ಎಂಬ ಕವಿತೆಯೊಂದು ಹುಟ್ಟಿಕೊಂಡಿತ್ತು.

“ಅಲೆಯುತ್ತೇನೆ ನಾನು ಅಧಿಕಾರದ ನಿರ್ಬಂಧಕ್ಕೊಳಪಟ್ಟ ಪ್ರತಿ ರಸ್ತೆಯಲ್ಲಿ,
ಶಾಸನಕ್ಕೊಳಪಟ್ಟು ಹರಿಯುವ ಥೇಮ್ಸ್ ಸಮೀಪದಲ್ಲಿ.
ಎದುರಾಗುವ ಪ್ರತಿ ಮುಖದಲ್ಲೂ ಇದೆ ಗಾಯ
ಬಳಲುವಿಕೆಯ ಗಾಯ, ಸಂಕಟದ ಕಲೆ.

ಪ್ರತಿ ಮನುಷ್ಯನ ಪ್ರತಿ ಕೂಗಿನಲ್ಲೂ
ಪ್ರತಿ ಶಿಶುವಿನ ಬೆದರಿಕೆಯ ಅಳುವಿನಲ್ಲೂ,
ಪ್ರತಿ ಧ್ವನಿಯಲ್ಲಿ, ಪ್ರತಿ ನಿರ್ಬಂಧದಲ್ಲಿ
ಮನಸುಗಳು ಬೆಸೆದ ಸರಪಳಿಯ ಬಂಧನ

ಹೊಗೆಕೊಳವೆ ಸಫಾಯಿ ಮಾಡುವವರ ಅಳಲು,
ಪ್ರತಿ ಕರಾಳ ಚರ್ಚು ಮೂಡಿಸುವ ದಿಗಿಲು.
ನಿರ್ಭಾಗ್ಯ ಸೈನಿಕರ ನಿಟ್ಟುಸಿರು,
ಇಳಿಯುತ್ತಿದೆ ಅರಮನೆಯ ಗೋಡೆಗಳಲ್ಲಿ ರಕ್ತವಾಗಿ.

ಆದರೆ ಬಹುತೇಕ ಮಧ್ಯರಾತ್ರಿಗಳಲ್ಲಿ ರಸ್ತೆಗಳಿಂದ ನಾನು ಕೇಳುವ
ಯೌವ್ವನಸ್ಥ ವೇಶ್ಯೆಯರ ಶಾಪ
ಬೆದರಿಸುತ್ತದೆ ಹೊಸ ಜನನದ ಶಿಶುಗಳ ಕಣ್ಣೀರನ್ನು
ಮತ್ತು ಹಾಳುಗೆಡವುತ್ತದೆ ಮದುವೆಯ ಶವಪೆಟ್ಟಿಗೆಯನ್ನು”

ಈ ಸಾಲುಗಳನ್ನು ಬರೆದ ಕವಿ ಮಹಾಶಯ ವಿಲಿಯಮ್ ಬ್ಲೇಕ್, ಹುಟ್ಟಿದ್ದು 1757ರ ನವೆಂಬರ್ 28ರಂದು. ಲಂಡನ್ ನ ಸೊಹೊ ಪ್ರಾಂತ್ಯದ ಮನೆಯ ನೆಲ ಮಹಡಿಯಲ್ಲಿ ಅವನ ತಂದೆಯ ಬಟ್ಟೆ ಅಂಗಡಿ ಇತ್ತು. ಈ ಕಾಲದಷ್ಟು ಬೆಳೆದಿರದ ಲಂಡನ್ ಅಲ್ಲಿ ಸೊಹೊ ಅತಿ ಉತ್ತರಕ್ಕಿದ್ದ ಗ್ರಾಮಾಂತರ ಪ್ರದೇಶ. ಎಳೆಯ ಬ್ಲೇಕ್ ನಿಗೆ ಸುತ್ತಲಿನ ಹಳ್ಳಿಯ ದರ್ಶನ ಸುಲಭವಾಗಿ ಆಗುತ್ತಿತ್ತು. 1767ರಲ್ಲಿ ಹತ್ತು ವರ್ಷದ ಬ್ಲೇಕ್ ಚಿತ್ರಕಲೆ ಕಲಿಸುವ ಶಾಲೆಗೇ ಕಳುಹಿಸಲ್ಪಟ್ಟ. ನಾಲ್ಕು ವರ್ಷ ಪ್ಲಾಸ್ಟರ್ ಅಚ್ಚುಗಳನ್ನು ನಕಲಿ ಮಾಡುವುದನ್ನು ಅಭ್ಯಾಸ ಮಾಡಿದ. ಬ್ಲೇಕ್ ನ ತಂದೆಗೆ ಮಗನನ್ನು ಪ್ರಸಿದ್ಧ ಚಿತ್ರಕಾರರ ಬಳಿ ಶಿಕ್ಷಣಕ್ಕೆ ಕಳಿಸುವಷ್ಟು ಹಣ ಇರಲಿಲ್ಲ. 1771ರಲ್ಲಿ, 14 ವರ್ಷದ ಬ್ಲೇಕ್ ಕೊರೆಯುವ ಕೆತ್ತನೆ ಮಾಡುವ ಕೆಲಸ ಮಾಡುವಲ್ಲಿ ಶಿಕ್ಷಾರ್ಥಿಯಾಗಿ ಸೇರಿಕೊಂಡ. ಕೆತ್ತನೆ ಕೆಲಸ ಆ ಕಾಲದದಲ್ಲಿ ಬೇಡಿಕೆ ಇದ್ದ ವ್ಯಾಪಾರ ಆಗಿತ್ತು. ಚಿತ್ರಕಲೆಗಿಂತ ಹೆಚ್ಚು ವಿಶ್ವಾಸಾರ್ಹ ಉದ್ಯೋಗವೂ ಅದಾಗಿತ್ತು. ಏಳು ವರ್ಷಗಳ ಕಾಲ ಕೆತ್ತನೆಗಾರನಾಗಿ ಕೆಲಸ ಮಾಡಿದ. ಹಳೆಯ ಚರ್ಚುಗಳ ಮೇಲೆ ಸಮಾಧಿಗಳ ಮೇಲೆ, ಸ್ಮಾರಕಗಳ ಮೇಲೆ ಕೆತ್ತನೆ ಮಾಡಲು ಬ್ಲೇಕ್ ನನ್ನು ಕರೆಸಲಾಗುತ್ತಿತ್ತು. ಉತ್ಸಾಹಿ ಬ್ಲೇಕ್, ಚಿತ್ರಗಳು ಸರಿಯಾಗಿ ಬರುವ ಉದ್ದೇಶದಿಂದ ಸಮಾಧಿಗಳ ಮೇಲೆಯೇ ಹತ್ತಿ ಚಿತ್ರ ಬರೆಯುತ್ತಿದ್ದ. ಲಲಿತ ಕಲೆ, ಸೌಂದರ್ಯ ಶಾಸ್ತ್ರ ಅವನನ್ನು ಆಕರ್ಷಿಸಿತು. ಇದೇ ಮುಂದೆ ಚಿತ್ರಕಾರನಾಗುವುದಕ್ಕೆ ಪ್ರೇರೇಪಿಸಿತು. ಧರ್ಮ, ರಾಜಕೀಯ ಹಾಗು ಇತಿಹಾಸಗಳನ್ನು ಕೂಡಿದ ತನ್ನದೇ ಕಲಾಸಿದ್ಧಾಂತವನ್ನು ಬೆಳೆಸುವಂತಾಯಿತು.

1779ರಲ್ಲಿ ಬ್ಲೇಕ್, ರಾಯಲ್ ಅಕಾಡೆಮಿಯ ವಿದ್ಯಾರ್ಥಿಯಾಗಿ ಸೇರಿ ಎಲ್ಲರೂ ಆಯ್ದುಕೊಳ್ಳುವ ವಿಷಯವನ್ನು ಆಯ್ದುಕೊಂಡ. ಓದುತ್ತಿರುವಾಗ ಕೆತ್ತನೆಗಾರನಾಗಿಯೂ ಕೆಲಸ ಮಾಡಿದ. ತನ್ನ ಕಲೆಯನ್ನು ಹಲವು ಬಾರಿ ಅಕಾಡೆಮಿ ಅಲ್ಲಿ ಪ್ರದರ್ಶಿಸಿದ.

1782ರಲ್ಲಿ ಮದುವೆ ಆಗುವ ತನಕವೂ ಸೋಹೋ ದ ಮೂಲ ಮನೆಯಲ್ಲಿಯೇ ಇದ್ದ. ಬ್ಲೇಕ್ ನ ಮೊದಲ ಆತ್ಮ ಕತೆಯ ಲೇಖಕ, “ಮಗನ ಮದುವೆಯನ್ನು ಇಷ್ಟಪಡದೆ ತಂದೆ ಮನೆಯಿಂದ ಹೊರದೂಡಿದ” ಎಂದು ದಾಖಲಿಸಿದ್ದಾನೆ. ಅವಿದ್ಯಾವಂತಳಾದ ಕ್ಯಾಥರಿನ್ ಳನ್ನು ಮಗ ಮದುವೆಯಾಗಿರುವುದು ತಂದೆಗೆ ಸಿಟ್ಟು ತರಿಸಿತ್ತು. ಮನೆ ಬಿಟ್ಟ ಮೇಲೆ, ಲಂಡನ್ ನ ಪೋಲೆಂಡ್ ರಸ್ತೆಯಲ್ಲಿ ಬಿಡಾರ ಮಾಡಿದಾಗ ಬ್ಲೇಕ್ ಒಂದು ಕ್ರಾಂತಿಕಾರಕ ಸಂಶೋಧನೆ ಮಾಡಿದ. ಅಕ್ಷರಗಳು ಮತ್ತು ಚಿತ್ರಗಳನ್ನು ಜೋಡಿಸಿ ಒಂದೇ ಹಾಳೆಯಲ್ಲಿ ಮುದ್ರಿಸುವುದನ್ನು ಕಲಿತುಕೊಂಡ. ಇದು ಕಲಾವಿದ ಬ್ಲೇಕ್ ನನ್ನ ಮರುನಿರೂಪಿಸಿತು.

(ವಿಲ್ಲಿಮಯ್‌ ಬ್ಲೇಕ್‌ನ ಒಂದು ಕಲಾಕೃತಿ)

ಹಳೆಯ ಚರ್ಚುಗಳ ಮೇಲೆ ಸಮಾಧಿಗಳ ಮೇಲೆ, ಸ್ಮಾರಕಗಳ ಮೇಲೆ ಕೆತ್ತನೆ ಮಾಡಲು ಬ್ಲೇಕ್ ನನ್ನು ಕರೆಸಲಾಗುತ್ತಿತ್ತು. ಉತ್ಸಾಹಿ ಬ್ಲೇಕ್, ಚಿತ್ರಗಳು ಸರಿಯಾಗಿ ಬರುವ ಉದ್ದೇಶದಿಂದ ಸಮಾಧಿಗಳ ಮೇಲೆಯೇ ಹತ್ತಿ ಚಿತ್ರ ಬರೆಯುತ್ತಿದ್ದ. ಲಲಿತ ಕಲೆ, ಸೌಂದರ್ಯ ಶಾಸ್ತ್ರ ಅವನನ್ನು ಆಕರ್ಷಿಸಿತು. ಇದೇ ಮುಂದೆ ಚಿತ್ರಕಾರನಾಗುವುದಕ್ಕೆ ಪ್ರೇರೇಪಿಸಿತು.

1791ರಿಂದ 1800ರ ನಡುವೆ ಲಾಂಬೆತ್ ಪ್ರದೇಶದಲ್ಲಿ ವಾಸವಾಗಿದ್ದ. ಈ ಮನೆಯಲ್ಲಿ “ಲಂಡನ್” ಕವನ ಇರುವ “ಸಾಂಗ್ ಆಫ್ ಎಕ್ಸ್ಪೀರಿಯೆನ್ಸ್” ಸಂಕಲನ ಮತ್ತು ಯುರೋಪ್, ಅಮೆರಿಕಗಳ ಭವಿಷ್ಯದ ಕುರಿತಾದ ಪುಸ್ತಕಗಳನ್ನು ಬರೆದ. ನ್ಯೂಟನ್ ನನ್ನು ವಿಮರ್ಶೆ ಮಾಡುವ, ಗರ್ವಿಷ್ಟ ರಾಜನೊಬ್ಬ ಪ್ರಾಣಿಯಾಗಿ ಬದಲಾಗುವ ಬೈಬಲ್ ನ ನೀತಿಕತೆಯನ್ನು ನಿರೂಪಿಸುವ ಚಿತ್ರ ಸೇರಿ ಹನ್ನೆರಡು ಜಲವರ್ಣ ಚಿತ್ರಗಳನ್ನು ಬರೆದ. ಲಾಂಬೆತ್ ಗೆ ಬ್ಲೇಕ್ ಬರುವಾಗ ಅದು ಲಂಡನ್ ನ ಗ್ರಾಮಾಂತರ ಪ್ರದೇಶದಂತೆ ಇತ್ತು. ಕೈಗಾರಿಕೆಗಳನ್ನು ಬೆಂಬಲಿಸುವ ಶಾಸನ, ಥೇಮ್ಸ್ ನ ಇಕ್ಕೆಲಗಳಲ್ಲಿ ಕಟ್ಟಡಗಳನ್ನು ಕಾರ್ಖಾನೆಗಳನ್ನು ರೂಪಿಸುವ ಅವಕಾಶ ಮಾಡಿಕೊಟ್ಟಿತು. ಶುಭ್ರ ಶಾಂತ ಹಳ್ಳಿಯಾಗಿದ್ದ ಊರು ಬಲುಬೇಗ ಸದ್ದುಗದ್ದಲದ ಕೊಳಚೆ ಅನಾರೋಗ್ಯ ತುಂಬಿದ ಸ್ಥಳವಾಯಿತು. ಹೊಸ ಸಿರಿವಂತರನ್ನು ಹೊಸ ಬಡವರನ್ನು ಸ್ರಷ್ಟಿಸಿತು. ಮನೆಮನೆಯ ಮಾಡಿನ ಮೇಲಿರುವ ಸಪೂರ ಹೊಗೆಕೊಳವೆಯಲ್ಲಿ ಇಳಿದು ಸ್ವಚ್ಛ ಮಾಡಿ ಬದುಕು ಸಾಗಿಸುವ ನತದೃಷ್ಟ ಸಣ್ಣ ಮಕ್ಕಳು, ಎಳವೆಯಿಂದಲೇ ವೇಶ್ಯೆಯರಾಗಿ ದುಡಿಯುವ ಹೆಣ್ಣುಮಕ್ಕಳು ಕೈಗಾರಿಕೀಕರಣ ನಗರೀಕರಣಗಳ ಸಂಕೇತವಾಗಿ “ಲಂಡನ್” ಕವಿತೆಯ ಹುಟ್ಟಿಗೆ ಕಾರಣವಾಯಿತು.

1800-1803 ತನಕ ಲಂಡನ್ ನಿಂದ ದೂರ ದಕ್ಷಿಣ ಇಂಗ್ಲೆಂಡ್ ತೀರದ ಊರಿನಲ್ಲಿ ಉದಾರಿಯೊಬ್ಬನ ಆಶ್ರಯದಲ್ಲಿ ವಾಸಿಸಿದ. ಸಾರ್ವಜನಿಕವಾಗಿ ನೇಣಿಗೇರಿಸಿ ಮರಣದಂಡನೆ ನೀಡುವ ಸ್ಥಳಕ್ಕೆ ಹತ್ತಿರದ ಮನೆ ಅದಾಗಿತ್ತು. ಫೇಲ್ಫಾಮ್ ವಾಸದಿಂದ ಬೇಸತ್ತು ಲಂಡನ್ ಗೆ ಮರಳುವಾಗ “ಎದೆಯಲ್ಲಿ ಭವಿಷ್ಯದ ಕನಸುಗಳು ತುಂಬಿವೆ, ಖುಷಿಯಲ್ಲಿ ನಲಿಯುತ್ತಿದ್ದೇನೆ ನಡುಗುತ್ತಿದ್ದೇನೆ” ಎಂದು ಉತ್ಸಾಹದಲ್ಲಿ ಕವಿತೆ ಬರೆದಿದ್ದ. ಲಂಡನ್ ಗೆ ಬಹಳ ಕಾತರದಿಂದ ಮರಳಿದ ಬ್ಲೇಕ್ ನ ಆಶಾವಾದಕ್ಕೆ ಕಡು ನಿರಾಶೆ ಕಾಡಿತ್ತು. ಪ್ರಸಿದ್ಧಿ ಹಾಗು ಆರ್ಥಿಕ ಯಶಸ್ಸು ಯಾವಾಗಲೂ ಅವನಿಂದ ತಪ್ಪಿಸಿಕೊಳ್ಳುತ್ತಿತ್ತು. ತೀವ್ರ ಬಡತನ ಜೊತೆಗೆ ಸಂಶಯಗ್ರಸ್ತತೆಯ ಕಾಯಿಲೆ ಅವನನ್ನು ಕಾಡಿತು.1821ರಿಂದ 1827ರಲ್ಲಿ ಸಾಯುವ ತನಕವೂ, ಕೆಂಪು ಇಟ್ಟಿಗೆ ಕಟ್ಟಡದ ಎರಡು ಕೋಣೆಯ ವಸತಿಯಲ್ಲಿ ಇರುತ್ತಿದ್ದ. ಆರ್ಥಿಕ ಸಂಕಷ್ಟದಲ್ಲಿಯೇ ಬದುಕಿದವನು, “ದೇವರು ತನಗಾಗಿ ಎಲ್ಲೋ ಸುಂದರ ಬಂಗಲೆಯನ್ನು ಮಾಡಿಟ್ಟಿದ್ದಾನೆ” ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದ.

ಈ ಕಾಲ ವಿಲಿಯಮ್ ಬ್ಲೇಕ್ ನನ್ನು ಆಂಗ್ಲ ಕವಿ, ಚಿತ್ರಕಾರ, ಮುದ್ರಣಕಾರ ಎಂದು ಗೌರವದಿಂದ ನೆನೆಯುತ್ತದೆ. ಬದುಕಿದ್ದಾಗ ವಿಶೇಷವಾದ ಗುರುತು ಪ್ರಸಿದ್ಧಿ ಇಲ್ಲದವನನ್ನು ಈ ಕಾಲ, ಕಾವ್ಯ ಚರಿತ್ರೆಯಲ್ಲಿ ಕ್ರೀಯಾಶೀಲ, ರೋಮ್ಯಾಂಟಿಕ್ ಕಾಲದ ದೃಶ್ಯ ಕಲೆಯನ್ನು ಪ್ರತಿನಿಧಿಸುವವನು ಎಂದೆಲ್ಲ ಸ್ಮರಿಸುತ್ತದೆ. ವಿಕ್ಷಿಪ್ತ ವ್ಯಕ್ತಿತ್ವಕ್ಕಾಗಿ ಹುಚ್ಚ ಎಂದು ಸಮಕಾಲೀನರಿಂದ ಕರೆಸಿಕೊಂಡರೂ, ಮರಣಾನಂತರದ ಅವನ ಅಭಿಪ್ರಾಯ, ಸೃಜನಶೀಲತೆ, ಅಭಿವ್ಯಕ್ತಿಗಳ ಬಗ್ಗೆ ವಿಮರ್ಶಕರಿಂದ ವಿಶೇಷ ಗೌರವ ಮೆಚ್ಚುಗೆ ವ್ಯಕ್ತವಾಗಿದೆ. ಆತನ ಕಾವ್ಯದಲ್ಲಿನ ವಿಲಕ್ಷಣತೆ ಹಾಗು ವಿಶಿಷ್ಟತೆಗಳಿಂದಾಗಿ ಒಂದು ಪಂಥಕ್ಕೆ ಸೇರಿಸುವುದು ಅಸಾಧ್ಯ ಎಂದು ಹಿರಿಯ ಓದುಗರು ವಿಮರ್ಶಕರು ಹೇಳುತ್ತಾರೆ. ಹತ್ತೊಂಬತ್ತನೆಯ ಶತಮಾನದ ವಿದ್ವಾಂಸ ವಿಲಿಯಮ್ ಮೈಕಲ್ ರೊಸೆಟಿ ಬ್ಲೇಕ್ ನನ್ನ “ಅದ್ಭುತ ಪ್ರತಿಭಾಶಾಲಿ”, ತನ್ನ ಹಿಂದಿನವರಿಂದ ಪ್ರಭಾವಿಸಲ್ಪಡದ, ಸಮಕಾಲೀನರೊಂದಿಗೆ ಹೋಲಿಸಲು ಬಾರದ, ತಿಳಿದಿರುವ ಯಾರಿಂದಲೂ ಸ್ಥಾನಪಲ್ಲಟಗೊಳಿಸಲು ಆಗದ, ಇವನಿಗೊಬ್ಬ ಉತ್ತರಾಧಿಕಾರಿ ಹುಟ್ಟುವುದನ್ನು ಕಲ್ಪಿಸಲೂ ಆಗದ ಅಪೂರ್ವ ವ್ಯಕ್ತಿ ಎಂದಿದ್ದಾನೆ.

ಬ್ಲೇಕ್ ವಾಸಿಸಿದ ಮನೆಗಳು ಈಗಿಲ್ಲವಾದರೂ, ಅತಿಥಿಯಾಗಿ ಉಳಿದ ಹ್ಯಾಂಪ್ಸ್ಟೆಡ್ ಪ್ರಾಂತ್ಯದ ಮನೆಯಲ್ಲಿ ನೆನಪಿನ ನೀಲಿ ಫಲಕವನ್ನು 1975ರಲ್ಲಿ ನೆಡಲಾಗಿದೆ. 1809ರಲ್ಲಿ ಬ್ಲೇಕ್ ನ ಚಿತ್ರಕಲೆಯನ್ನು ಪ್ರತಿಷ್ಠಿತ ರಾಯಲ್ ಅಕಾಡೆಮಿಯ ಬೇಸಿಗೆ ಪ್ರದರ್ಶನದಲ್ಲಿ ಆಯ್ಕೆ ಮಾಡಿರಲಿಲ್ಲ. ಬದಲಿಗೆ ಟರ್ನರ್ ಎನ್ನುವ ಕಲಾವಿದನ ಚಿತ್ರಗಳನ್ನು “ಅತ್ಯಂತ ಪರಿಪೂರ್ಣ ಪ್ರದರ್ಶನ” ಎಂದು ಬಣ್ಣಿಸಿ ಸ್ವೀಕರಿಸಲಾಗಿತ್ತು. ಬ್ಲೇಕ್ ತನ್ನನ್ನು ಚಿತ್ರಪ್ರದರ್ಶನದಲ್ಲಿ ಸೇರಿಸಿಕೊಳ್ಳದಿರುವ ಬಗ್ಗೆ ಆರೋಪ ಮಾಡಿದ್ದ. ಕೊನೆಗೆ ಸೊಹೊ ದಲ್ಲಿರುವ ತನ್ನ ಅಣ್ಣನ ಬಟ್ಟೆ ಅಂಗಡಿಯ ಮೇಲೆ ಪ್ರತಿಭಟನೆಯಾಗಿ ತನ್ನ ಚಿತ್ರಗಳ ಪ್ರದರ್ಶನ ಮಾಡಿದ್ದ. ಆ ಕಾಲದಲ್ಲಿ ಬ್ಲೇಕ್ ತನ್ನ ಕಲೆ, ಕವಿತೆ, ಕೆತ್ತನೆಗಳಿಗಾಗಿ ಪ್ರಸಿದ್ಧನಾಗಿರಲಿಲ್ಲ, ಬದಲಿಗೆ ಅವನ ಹುಚ್ಚು ವರ್ತನೆಗಾಗಿ ಜನಪ್ರಿಯನಾಗಿದ್ದ. ಇದೀಗ ಬ್ರಿಟನ್ನಿನ ಪ್ರತಿಷ್ಠಿತ ಕಲಾಭವನಗಳಲ್ಲಿ ಅಂದು ನಿರ್ಲಕ್ಷಿಸಲ್ಪಟ್ಟ ಚಿತ್ರಗಳನ್ನು ಹುಡುಕಿ ಆಯ್ದು ಪ್ರದರ್ಶಿಸಲಾಗುತ್ತಿದೆ. ಬ್ಲೇಕ್ ನ ಪರವಾಗಿ ತಡವಾಗಿ ಗುರುತಿಸುವಿಕೆ ಹಾಗು ಪ್ರಸಿದ್ಧಿಯ ಗಾಳಿ ಬೀಸಿದೆ.

ಬ್ಲೇಕ್ ನ ಮರಣಾನಂತರ ಪ್ರಸಿದ್ಧ ಕವಿ ವರ್ಡ್ಸ್‌ವರ್ತ್ “ಈ ಮನುಷ್ಯ ಮರುಳ ಎನ್ನುವುದರಲ್ಲಿ ಯಾವ ಸಂಶಯ ಇಲ್ಲ, ಆದರೆ ಇವನ ಹುಚ್ಚಾಟದೊಳಗೆ ಮಹಾಕವಿ ಕಲಾವಿದರಿಗಿಂತಲೂ ಹೆಚ್ಚು ಕುತೂಹಲ ಮೂಡಿಸುವ ಸಂಗತಿಗಳಿವೆ” ಎಂದಿದ್ದ. ವಿಲಿಯಂ ಬ್ಲೇಕ್ ಕನಸು ಮನಸಿನಲ್ಲೂ ಊಹಿಸದಂತೆ, ಮಡಿದ ಇನ್ನೂರು ವರ್ಷಗಳ ನಂತರ ಅವನ ಸೃಷ್ಠಿಗಳು ಬ್ರಿಟನ್ ನ ಅತ್ಯಂತ ಪ್ರಸಿದ್ಧ ಪ್ರದರ್ಶನಗಳಲ್ಲಿ ಅಗ್ರಸ್ಥಾನ ಪಡೆಯುತ್ತಿವೆ, ಕವಿತೆಗಳು ಸಂಕಲನಗಳು ಈಗಲೂ ವಿಶೇಷ ಆಸಕ್ತಿಯಿಂದ ಓದಲ್ಪಡುತ್ತಿವೆ. “ಲಂಡನ್” ಕವಿತೆಯ ಕೊನೆಯ ಪಂಕ್ತಿಗಳ ಅರ್ಥ ಸಂಕೀರ್ಣತೆಗಳು ಗ್ರಹಿಕೆಗೆ ಸಮರ್ಪಕವಾಗಿ ಒಗ್ಗದೆ ಬಗ್ಗದೆ ವಿಮರ್ಶಕರಿಗೂ ಹೊಸಹೊಸ ಹೊಳಹನ್ನು ನೀಡುತ್ತಿವೆ.