ಸುಲಲಿತವಾದ ಪ್ರಬಂಧಗಳಿಗೆ ಅವರು ಆಯ್ದುಕೊಳ್ಳುವ ವಿಷಯಗಳೇನೂ ಅಸಾಮಾನ್ಯವಾದುದಲ್ಲ. ಹೆಚ್ಚಿನವು ದಿನನಿತ್ಯ ಜರುಗುವ ಸಂಗತಿಗಳೇ. ಆದರೆ ಅದನ್ನು ಹೇಳುವ ಶೈಲಿ ಇದೆಯಲ್ಲಾ, ಅದು ಮಾತ್ರ ನಿಜಕ್ಕೂ ಅದ್ಭುತ. ಅತ್ಯಂತ ಚಿಕ್ಕದಾಗಿ, ಚೊಕ್ಕದಾಗಿ ಮತ್ತು ಸರಳವಾಗಿ ನಿರೂಪಣೆ‌ ಮಾಡುತ್ತಾರೆ. ಮಧ್ಯಾಹ್ನ ಮಾಡುವ ಅಡುಗೆಗೆ ಸಂಬಂಧಿತ ಲಹರಿ ಬಂದರೆ ಅದುವೇ ಒಂದು ಪ್ರಬಂಧವಾಗುತ್ತದೆ. ಯಾರದೋ ಫೋನ್ ಕಾಲ್ ಬಂದರೆ ಅದು ಕೂಡಾ ಒಂದು ಪ್ರಬಂಧದ ವಿಷಯ. ಎಲ್ಲಕ್ಕಿಂತ ಹೆಚ್ಚಾಗಿ ಕೃಷಿಕ ಕುಟುಂಬಗಳಿಗೆ ಬೇಡವಾಗಿರುವ ಹೋರಿಕರುವನ್ನು ಕೊಡುವ ಘಟನೆಯನ್ನಂತೂ ಕಣ್ಣಲ್ಲಿ ನೀರು ತುಂಬುವಂತೆ ನಿರೂಪಿಸುತ್ತಾರೆ.
‘ಓದುವ ಸುಖ’ ಅಂಕಣದಲ್ಲಿ ಗಿರಿಧರ್‌ ಗುಂಜಗೋಡು ಬರಹ

ಕನ್ನಡದ ಬರಹಗಾರ್ತಿಯರೆಲ್ಲರ ಉದ್ಯೋಗಗಳ ಬಗ್ಗೆ ಕಣ್ಣಾಡಿಸಿದಾಗ ವಿವಿಧ ಉದ್ಯೋಗಳನ್ನು ಮಾಡುವವರು ಕಾಣುತ್ತಾರೆ. ಉಪನ್ಯಾಸಕಿಯರ ಅದರಲ್ಲೂ ಮಾನವಿಕ ವಿಭಾಗದ ಉಪನ್ಯಾಸಕಿಯರ ಸಂಖ್ಯೆ ಸ್ವಲ್ಪ ಜಾಸ್ತಿ. ಹಾಗೆಯೇ ವೈದ್ಯೆಯರು,ವಿಜ್ಞಾನಿಗಳು, ವಕೀಲರುಗಳು ಇಂಜಿನಿಯರುಗಳು, ಗೃಹಿಣಿಯರು ಹೀಗೆ ವಿವಿಧ ರೀತಿಯ ಉದ್ಯೋಗ ಮಾಡುವವರು ಸಿಗುತ್ತಾರೆ. ಅವರಲ್ಲಿ ರೈತ ಮಹಿಳೆಯರು ಸ್ವಲ್ಪ ಕಮ್ಮಿಯೇ ಅಥವಾ ನನಗೆ ತಿಳಿದಿರುವ ಹಾಗೆ ಯಾರೂ ಇಲ್ಲ. ಮತ್ತೆ, ಗೊತ್ತಿದ್ದೋ ಗೊತ್ತಿಲ್ಲದೆಯೋ ಬರಹಗಾರರ ಬಗ್ಗೆ ಕೆಲ ಪೂರ್ವಗ್ರಹಗಳು ನಮ್ಮಲ್ಲಿ ಮನೆ ಮಾಡಿರುತ್ತವೆ. ಸಶಕ್ತ ಬರಹಗಾರರು/ಬರಹಗಾರ್ತಿಯರು ದೊಡ್ಡ ನಗರಗಳಲ್ಲಿ ನೆಲೆಸಿರುವವರು, ಉನ್ನತ ವಿದ್ಯಾ ಸಂಸ್ಥೆಗಳಲ್ಲಿ ಓದಿದವರು, ದೊಡ್ಡ ದೊಡ್ಡ ಸಂಸ್ಥೆ/ವಿಶ್ವವಿದ್ಯಾಲಯಗಳಲ್ಲಿ ಕೆಲಸ ಮಾಡುತ್ತಿರುವವರು, ಯಾರ ಕೈಗೂ ಸಿಗದವರು, ತಮ್ಮದೇ ಪ್ರಪಂಚದಲ್ಲಿ ಇರುವವರು ಇತ್ಯಾದಿ ಇತ್ಯಾದಿ.

ಆದರೆ ಮೇಲಿನ ನನ್ನೆಲ್ಲಾ ಪೂರ್ವಗ್ರಹಗಳು ಸುಳ್ಳು ಎಂಬುದು ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೋದವಳು’ ಮತ್ತು ‘ಇದು ಬರಿ ಮಣ್ಣಲ್ಲ’ ಅನ್ನುವ ಎರಡು ಪುಸ್ತಕಗಳನ್ನು ಓದಿದ ಮೇಲೆ ಧೃಡವಾಯಿತು. ಒಂದು ದಿನ ಬೆಂಗಳೂರಿನಲ್ಲಿರುವ ಅಶ್ವಿನಿ ಅತ್ತಿಗೆಯ ಮನೆಗೆ ಹೋದಾಗ ಬೋರಾಗ್ತಾ ಇದ್ದು ಯಾವುದಾರೂ ಹೊಸ ಪುಸ್ತಕವಿದ್ದರೆ ಓದಲು ಕೊಡು ಅಂದೆ. ಎದುರಿಗೇ ಇದ್ದ ಸಹನಾ ಕಾಂತಬೈಲ್ ಅವರ ‘ಇದು ಬರಿ ಮಣ್ಣಲ್ಲ’ ಕೃತಿಯ ತೋರಿಸಿದಳು. My bad, ಅಲ್ಲಿಯವರೆಗೆ ಅವರ ಹೆಸರನ್ನೇ ಕೇಳಿರದ ಕಾರಣ ಯಾಕೋ ನಿರ್ಲಕ್ಷಿಸಿ ಬೇರೆ ಪುಸ್ತಕವೊಂದನ್ನು ಹಿಡಿದು ಓದಲು ಕುಳಿತೆ. ಹೊರಡುವ ಹದಿನೈದು ನಿಮಿಷಗಳ ಮುನ್ನ ಅವರ ಪುಸ್ತಕದ ಒಂದು ಪ್ರಬಂಧ ಓದಿದಾಗ ನಾನು ಮಾಡಿದ ತಪ್ಪಿನ ಅರಿವಾಯಿತು. ಲಗುಬಗೆಯಿಂದ ೪-೫ ಪ್ರಬಂಧಗಳನ್ನು ಓದಿ ಮುಗಿಸಿದೆ. ಆಮೇಲೆ ‘ಆನೆ ಸಾಕಲು ಹೊರಟವಳು’ ಇ- ಪುಸ್ತಕವನ್ನು ‘ಋತುಮಾನ’ದಲ್ಲಿ ಖರೀದಿಸಿದೆ ಮತ್ತು ‘ಇದು ಬರಿ ಮಣ್ಣಲ್ಲ’ ಕೃತಿಯನ್ನು ಅವರ ಹತ್ತಿರವೇ ಕೇಳಿ ತರಿಸಿಕೊಂಡೆ. ಈ ಲೇಖನದಲ್ಲಿ ಆನೆ ಸಾಕಲು ಹೋದವಳು ಕೃತಿಯ ಬಗ್ಗೆ ಬರೆಯುತ್ತಿದ್ದೇನೆ.

ನನಗ್ಯಾಕೋ ಅವರ ಬರಹಗಳ ಓದುತ್ತಿದ್ದರೆ ಇಂಗ್ಲಿಷ್ ವಿಂಗ್ಲಿಷ್ ಚಿತ್ರದ ಶ್ರೀದೇವಿ ಪಾತ್ರದ ನೆನಪಾಗುತ್ತದೆ. ನಾನು ಖಂಡಿತ ಮುಖಸ್ತುತಿ ಮಾಡುತ್ತಿಲ್ಲ. ಒಂದು ಚಿಕ್ಕ ಗ್ರಾಮದಲ್ಲಿ ನೆಲೆಸಿರುವ, ನನಗೆ ತಿಳಿದಂತೆ ಪ್ರಥಮ‌ ಪಿಯುಸಿವರೆಗೆ ಮಾತ್ರ ಓದಿರುವ ಸಹನಾ ಕಾಂತಬೈಲ್ ಇಷ್ಟು ಸಶಕ್ತ ಬರಹಗಳನ್ನು ಬರೆಯಲು ಹೇಗೆ ಸಾಧ್ಯ? ಅನ್ನುವ ಪ್ರಶ್ನೆ ಮನಸ್ಸೊಳಗೆ ಬರುವುದು ಸರಿಯಲ್ಲದಿದ್ದರೂ ಮನಸ್ಸಿನಲ್ಲಿ ಒಮ್ಮೆ ಬಂದು ಹೋಯಿತು (ಅಂದರೆ ಒಬ್ಬರ ಓದು ಮತ್ತು ಪ್ರದೇಶವನ್ನು ನಿರ್ಧರಿಸಿ ಒಬ್ಬರ ಬಗ್ಗೆ ತೀರ್ಪಿಗೆ ಬರಬಾರದು ಅಂತ ಗೊತ್ತಿದ್ದರೂ).

ನಾನು ಕೂಡಾ ಗ್ರಾಮೀಣ ಹಿನ್ನೆಲೆಯ ರೈತ ಕುಟುಂಬದಿಂದ ಬಂದಿರುವ ಕಾರಣ ಒಬ್ಬ ರೈತ ಮಹಿಳೆಗಿರುವ ಕಷ್ಟದ ಬಗ್ಗೆ ಸರಿಯಾದ ತಿಳುವಳಿಕೆಯಿದೆ. ಆಗುವ ಕೆಲಸಗಳು ಆಯಾ ಸಮಯದಲ್ಲಿ ಆಗಲೇಬೇಕು. ಸ್ವಲ್ಪವೂ ಉದಾಸೀನ ಮಾಡುವ ಹಾಗಿಲ್ಲ. ಅದರೊಟ್ಟಿಗೆ ಅಚಾನಕ್ ಆಗಿ ಬರುವ ಅನೇಕ ಕೆಲಸಗಳು. ಬೇರೆ ಊರಿಗೆ ಹೋದರೂ ಸಂಜೆಯ ಒಳಗೆ ಮನೆ ತಲುಪಬೇಕಾಗುತ್ತದೆ. ಹೊರ ಊರಿಗೆ ಹೋಗಬೇಕೆಂದರೆ ಬೇರೆ ಏನಾದರೂ ವ್ಯವಸ್ಥೆ ಮಾಡಿಟ್ಟೇ ಹೋಗಬೇಕು. ಗಂಡ ಹೆಂಡತಿ ಒಟ್ಟಿಗೆ ನಾಲ್ಕು ದಿನ ಎಲ್ಲಾದರೂ ಹೋಗುವುದೆಂತು ಹೆಚ್ಚುಕಮ್ಮಿ ಅಸಾಧ್ಯವಾದ ವಿಷಯವೇ (ಇದುವರೆಗೂ ನನ್ನ ತಂದೆ ತಾಯಿ ಒಟ್ಟಾಗಿ ಒಮ್ಮೆಯೂ ನಮ್ಮ ಮನೆಗೆ ಬಂದಿಲ್ಲ, ಕಾರಣ ಮನೆಯ ಜವಾಬ್ದಾರಿಯೇ). ಇದೆಲ್ಲದಕ್ಕೂ ಕಳಶವಿಟ್ಟಂತೆ ನೆಟ್‌ವರ್ಕ್ ವಿದ್ಯುತ್ ಮುಂತಾದ ಸಮಸ್ಯೆಗಳು. ಈಗ ಪರವಾಗಿಲ್ಲವಾದರೂ ೭-೮ ವರ್ಷಗಳ ಮುಂಚಿನವರೆಗೂ ಪರಿಸ್ಥಿತಿ ಉತ್ತಮವಾಗೇನೂ ಇರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಬರಹಗಾರ್ತಿಯಾಗುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ರೈತರಾಗಿರುವ ಪುರುಷರಿಗೆ ಎಷ್ಟು ಕಷ್ಟವೋ ಅದರ ಎರಡರಷ್ಟು ಕಷ್ಟ ರೈತ ಮಹಿಳೆಯರಿಗೆ. ಬರಹದಲ್ಲಿ ಆಸಕ್ತಿಯಿರುವ ಮಹಿಳೆಯರ ನಿಜವಾದ ಕಷ್ಟದ ಅರಿವಾಗಬೇಕೆಂದರೆ ಅವರ ‘ಮತ್ತೆಂದೂ ಅವಳು ಬರೆಯುವ ಸಾಹಸಕ್ಕೆ ಕೈ ಹಾಕಲಿಲ್ಲ’ ಲೇಖನವನ್ನೊಮ್ಮೆ ಓದಿ. ಕೆಲವೊಮ್ಮೆ ಪ್ರವಾಹಕ್ಕೆದುರಾಗಿ ಈಜುವ ಪರಿಸ್ಥಿತಿ ಬಂದಾಗ ಅಂದರೆ ಸಮಾಜ ಇನ್ನೂ ಮುಕ್ತವಾಗಿ ಸ್ವೀಕರಿಸಲು ಸಿದ್ಧವಿಲ್ಲದ ವಿಷಯಗಳ ಬಗ್ಗೆ ಬರೆದಾಗ ಎದುರಿಸಿ ನಿಲ್ಲುವ ಕಷ್ಟ ನಗರಕ್ಕಿಂತ ಗ್ರಾಮೀಣ ಭಾಗದಲ್ಲಿ ಇರುವವರಿಗೆ ಜಾಸ್ತಿ, ಮಹಿಳೆಯರಿಗೆ ಇನ್ನೂ ಜಾಸ್ತಿ. ಕೇಳಬಾರದ ಮಾತುಗಳನ್ನು ತೀವ್ರವಾಗಿಯೇ ಕೇಳಬೇಕಾಗುತ್ತದೆ. ಆದರೂ ಇವೆಲ್ಲ ಅಡೆತಡೆಗಳನ್ನು ಸವಾಲಾಗಿ ಸ್ವೀಕರಿಸಿ ಬರೆಯುತ್ತಾರೆ.

ಸುಲಲಿತವಾದ ಪ್ರಬಂಧಗಳಿಗೆ ಅವರು ಆಯ್ದುಕೊಳ್ಳುವ ವಿಷಯಗಳೇನೂ ಅಸಾಮಾನ್ಯವಾದುದಲ್ಲ. ಹೆಚ್ಚಿನವು ದಿನನಿತ್ಯ ಜರುಗುವ ಸಂಗತಿಗಳೇ. ಆದರೆ ಅದನ್ನು ಹೇಳುವ ಶೈಲಿ ಇದೆಯಲ್ಲಾ, ಅದು ಮಾತ್ರ ನಿಜಕ್ಕೂ ಅದ್ಭುತ. ಅತ್ಯಂತ ಚಿಕ್ಕದಾಗಿ, ಚೊಕ್ಕದಾಗಿ ಮತ್ತು ಸರಳವಾಗಿ ನಿರೂಪಣೆ‌ ಮಾಡುತ್ತಾರೆ. ಮಧ್ಯಾಹ್ನ ಮಾಡುವ ಅಡುಗೆಗೆ ಸಂಬಂಧಿತ ಲಹರಿ ಬಂದರೆ ಅದುವೇ ಒಂದು ಪ್ರಬಂಧವಾಗುತ್ತದೆ. ಯಾರದೋ ಫೋನ್ ಕಾಲ್ ಬಂದರೆ ಅದು ಕೂಡಾ ಒಂದು ಪ್ರಬಂಧದ ವಿಷಯ. ಎಲ್ಲಕ್ಕಿಂತ ಹೆಚ್ಚಾಗಿ ಕೃಷಿಕ ಕುಟುಂಬಗಳಿಗೆ ಬೇಡವಾಗಿರುವ ಹೋರಿಕರುವನ್ನು ಕೊಡುವ ಘಟನೆಯನ್ನಂತೂ ಕಣ್ಣಲ್ಲಿ ನೀರು ತುಂಬುವಂತೆ ನಿರೂಪಿಸುತ್ತಾರೆ. ಮನೆಯಲ್ಲಿ ಹುಟ್ಟಿ ಬೆಳೆದ ಕರುವಿನ ಮೇಲಿನ ಪ್ರೀತಿ, ಆದರೆ ಅದನ್ನು ಸಾಕಲಾರದ ಅಸಹಾಯಕತೆ, ಬದಲಾದ ಪದ್ಧತಿಗಳಿಂದ ಕೃಷಿಗೆ ಅನುಪಯುಕ್ತವಾದ ಗಂಡು ಕರುಗಳನ್ನು ಎಲ್ಲಿಯೂ ಕೊಡಲಾಗದ ಪರಿಸ್ಥಿತಿ ಇತ್ಯಾದಿಗಳನ್ನು ಹೇಗೆ ಬರೆದಿದ್ದಾರೆಂದರೆ ನೂರಾರು ಪುಟಗಳ ಫಿಲಾಸಪಿಯನ್ನು ಬರೀ ಮೂರ್ನಾಲಕ್ಕು ಪುಟಗಳಲ್ಲಿ ಹೇಳಿದಂತಿದೆ.

ಅಲ್ಲಿಯವರೆಗೆ ಅವರ ಹೆಸರನ್ನೇ ಕೇಳಿರದ ಕಾರಣ ಯಾಕೋ ನಿರ್ಲಕ್ಷಿಸಿ ಬೇರೆ ಪುಸ್ತಕವೊಂದನ್ನು ಹಿಡಿದು ಓದಲು ಕುಳಿತೆ. ಹೊರಡುವ ಹದಿನೈದು ನಿಮಿಷಗಳ ಮುನ್ನ ಅವರ ಪುಸ್ತಕದ ಒಂದು ಪ್ರಬಂಧ ಓದಿದಾಗ ನಾನು ಮಾಡಿದ ತಪ್ಪಿನ ಅರಿವಾಯಿತು. ಲಗುಬಗೆಯಿಂದ ೪-೫ ಪ್ರಬಂಧಗಳನ್ನು ಓದಿ ಮುಗಿಸಿದೆ.

ಹೊರ ರಾಜ್ಯಗಳಿಗೆ ಮತ್ತು ಹೊರದೇಶಗಳಿಗೆ ಪ್ರಯಾಣಿಸಲು ಸಿಕ್ಕ ಸೀಮಿತ ಅವಕಾಶಗಳನ್ನು ಅವರು ಅತ್ಯಂತ ಫಲಪ್ರದವಾಗಿ ಬಳಸಿಕೊಂಡಿರುವುದನ್ನು ನೀವು ಅವರ ಅಂಕಣಗಳಲ್ಲಿ ಕಾಣಬಹುದು. ಬರೀ ಪ್ರೇಕ್ಷಣೀಯ ಸ್ಥಳಗಳನ್ನು ನೋಡುವುದರಲ್ಲಿ ಕಳೆಯದೇ ಅಲ್ಲಿನ ಸಂಸ್ಕೃತಿ ಸೇರಿದಂತೆ ಅನೇಕ ವಿಷಯಗಳನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಾರೆ. ಅನೇಕ ಜನರನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದಿಸುತ್ತಾರೆ. ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಭಾಷಣ ಮಾಡಲು ಇವರಿಗೆ ಬಂದ ಆಹ್ವಾನ ಇವರ ಸಾಮರ್ಥ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹಾಗೆಯೇ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಅವರು ನಡೆಸಿದ ಅರ್ಥಪೂರ್ಣ ಸಂವಾದಗಳು ಕೂಡಾ.

ನಾನು ಅಮೆರಿಕಾದಲ್ಲಿದ್ದಾಗ ಅಲ್ಲಿನ ವಾಚನಾಲಯಗಳನ್ನು ನೋಡಿ ಬೆರಗುಗೊಂಡಿದ್ದೆ ಮತ್ತು ಅದು ಸಂಸಾರ ಸಮೇತ ಆಗಾಗ್ಗೆ ಭೇಟಿಕೊಡುವ ಜಾಗವಾಗಿತ್ತು. ಅಲ್ಲಿನ ವಾಚನಾಲಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಲೇಖನ ಕೂಡ ಬರೆದಿದ್ದೆ. ಸಹನಾ ಅವರು ಕೂಡ ಅವುಗಳ ಬಗ್ಗೆ ವಿವರವಾದ ಲೇಖನ ಬರೆದಿದ್ದು ನೋಡಿ ಬಹಳ ಖುಷಿಯಾಯಿತು. ಅಮೆರಿಕಾ ಬಗ್ಗೆ ಬರೆಯುವವರು ಹಲವಾರು ಮಂದಿ ಸಿಗುತ್ತಾರೆ ಆದರೆ ಅಲ್ಲಿನ ವಾಚನಾಲಯಗಳ ಬಗ್ಗೆ ಇಷ್ಟು ಆಸ್ಥೆಯಿಂದ ಬರೆದವರು ಕಮ್ಮಿಯೇ ಎಂದು ಹೇಳಬಹುದು.

‘ಎಲ್ಲಾ ಯುವಕರು ಮುಂದೊಂದು ದಿನ ಮುದಕರಾಗಲಿದ್ದಾರೆ’ ಪ್ರಬಂಧದಲ್ಲಿ ವೃದ್ಧಾಪ್ಯದ ಕಷ್ಟ ಮತ್ತು ಯೌವನ ಅಮಲಿನಲ್ಲಿರುವ ಯುವಜನತೆಗೆ ಸೂಕ್ಷ್ಮವಾದ ಪಾಠವನ್ನು ಹೇಳುತ್ತಾರೆ.

ಕೃತಿಯ ಶೀರ್ಷಿಕೆಯಾದ ಪ್ರಬಂಧ ‘ಆನೆ ಸಾಕಲು ಹೊರಟವಳು’ ಕೊನೆಯಲ್ಲಿ ಬರುತ್ತದೆ. ಅನೇಕ ರೈತರಿಗೆ ಕಾಡು ಪ್ರಾಣಿಗಳ ಉಪಟಳ ಬಹಳ. ಅದರಲ್ಲೂ ಮಲೆನಾಡ ಭಾಗದ ರೈತರಿಗೆ ಆ ಸಮಸ್ಯೆ ಜಾಸ್ತಿಯೇ ಇರುತ್ತದೆ. ಇದಕ್ಕೆ ಉಪಟಳ ಅನ್ನುವ ಪದ ಬಳಸಲು ಮನಸ್ಸು ಕೊಂಚ ಹಿಂಜರಿಯುತ್ತದೆ. ಯಾಕೆಂದರೆ ಅವುಗಳ ಜಾಗದಲ್ಲಿ ನಿಂತ ನೋಡಿದರೆ ಅದು ಅಪರಾಧವೆಂದು ನನಗೆನ್ನಿಸದು. ವಿಷಯ ಬಿಟ್ಟು ಎಲ್ಲೋ ಹೋದೆ, ಮನ್ನಿಸಿ. ರೈತರಾದ ಲೇಖಕಿ ಕೃಷಿಭೂಮಿಗೆ ದಾಳಿಯಿಟ್ಟು ಬೆಳೆ ತಿನ್ನುವ ಆನೆಗಳಿಗೋಸ್ಕರ ಕಾಡು ಬಾಳೆ ಬೆಳೆಸುವ ಸಂಗತಿಯೇ ಆನೆ ಸಾಕಲು ಹೊರಟವಳು. ಇದೊಂತರಾ ಆನೆಗಳೊಟ್ಟಿಗೆ You Win I Win ಒಪ್ಪಂದ ಮಾಡಿಕೊಂಡಂತೆ. ಅವುಗಳಿಗೆ ಪ್ರಿಯವಾದ ಆಹಾರ ಬೆಳೆಸಿ ಕೃಷಿ ಭೂಮಿಗೆ ಲಗ್ಗೆಯಿಡದಂತೆ ನೋಡಿಕೊಳ್ಳುವುದು. ಈ ರೀತಿ ಅವರು ಆನೆಗಳನ್ನು ಸಾಕಲು ಹೊರಡುತ್ತಾರೆ.

ವೈಚಾರಿಕತೆ ಬರೀ ಇನ್ನೊಬ್ಬರ ದೂಶಿಸುವುದರಲ್ಲಿ, ಸಂಸ್ಕೃತಿಯನ್ನು ಹಳಿಯುವುದರಲ್ಲಿ ಅಥವಾ ಬುದ್ಧಿವಾದ ಹೇಳುವುದರಲ್ಲಿ ಇರುವುದಿಲ್ಲ. ಲಲಿತ ಪ್ರಬಂಧಗಳ‌ ಮೂಲಕ ಕೂಡಾ ವೈಚಾರಿಕತೆಯನ್ನು ಅತ್ಯಂತ ಶಕ್ತಿಯುತವಾಗಿ ಹೇಳಬಹುದು. ಅದನ್ನು ಕನ್ನಡದ ಅನೇಕ ಬರಹಗಾರರು ನಿರೂಪಿಸಿದ್ದಾರೆ. ಅದೇ ರೀತಿ ಸಹನಾ ಅವರ ಪ್ರಬಂಧಗಳು ಕೂಡಾ ಅನೇಕ ವಿಷಯಗಳನ್ನು ನಮ್ಮ ಅರಿವಿಲ್ಲದೇ ನಮಗೆ ತಿಳಿಯಪಡಿಸುತ್ತಾ ಹೋಗುತ್ತವೆ.

ಎಷ್ಟೋ ಸಾರಿ ನಮಗೆ ಬಹಳ ಓದಲು ಸಮಯವಿರುವುದಿಲ್ಲ. ಕೆಲವರಿಗೆ ಕನ್ನಡ ಪುಸ್ತಕಗಳ ಓದಬೇಕೆಂಬ ಮನಸ್ಸಿರುತ್ತದೆ ಆದರೆ ದೊಡ್ಡ ಕಾದಂಬರಿಗಳನ್ನಾಗಲೀ ಇಲ್ಲಾ ದೀರ್ಘವಾದ ಯಾವುದೇ ಪುಸ್ತಕಗಳನ್ನು ಓದುವಷ್ಟು ತಾಳ್ಮೆಯೂ ಇರುವುದಿಲ್ಲ. ಅಂತವರಿಗೆ ಈ ಪುಸ್ತಕವನ್ನು ಓದಲು ಹೇಳಿ. ಋತುಮಾನದಲ್ಲಿ ಇ-ಪುಸ್ತಕ ಕೂಡಾ ಕಮ್ಮಿ ಬೆಲೆಗೆ ಸಿಗುತ್ತದೆ. ಸಂಜೆಯ ಕಾಫಿಯೊಟ್ಟಿಗೆ ಇಲ್ಲಾ ಪ್ರಯಾಣದ ಸಮಯದಲ್ಲಿ ಒಳ್ಳೆಯ ಓದುವ ಖುಷಿ‌ ನಿಮ್ಮದಾಗುತ್ತದೆ.