ರವೀಂದ್ರ ಭಟ್ಟರು ನಿರೂಪಿಸಿದ ಪ್ರಸಂಗ ಮತ್ತು ಅಂತಿಮ ಅಭಿಪ್ರಾಯದಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯವಿದೆ. ಮಹಾಭಾರತದ ರಾಜಪ್ರಭುತ್ವವು ಜನಪರವಾಗಿರಬೇಕೆಂದು ಅಂದಿನ ಶ್ರೀಕೃಷ್ಣ ಬಯಸಿದಂತೆ, ಪ್ರಜಾಪ್ರಭುತ್ವದ ಇಂದಿನ ಜನರು ಆಗ್ರಹಿಸುತ್ತಾರೆ. ಅಂದಿನ ಶ್ರೀಕೃಷ್ಣನ ಅಭಿಮತ ಮತ್ತು ಇಂದಿನ ಜನರ ಆಗ್ರಹವು, ಪ್ರಭುತ್ವವು ಮೌಢ್ಯಾಚರಣೆಗಳನ್ನು ಮೀರಿದ ಜನಹಿತ ಕೆಲಸಗಳಲ್ಲಿ ಪುಣ್ಯವನ್ನು ಗಳಿಸ ಬೇಕೆಂಬ ನೀತಿಪಾಠವನ್ನು ಒಳಗೊಂಡಿದೆ. ಅಂದಿನ ಪ್ರಸಂಗದಲ್ಲಿರುವ ‘ಶ್ರೀಕೃಷ್ಣ’ ಒಂದು ‘ರೂಪಕ’ವಾಗಿ ಇಂದಿನ ಆಶಯವನ್ನೂ ಅಭಿವ್ಯಕ್ತಿಸುವುದು ಗಮನೀಯ.
ರವೀಂದ್ರ ಭಟ್ಟ ಐನಕೈ ಅವರ “ರಾಜಕಾರಣದಲ್ಲಿ ನಿಂಬೆ – ಹಾಗಲ” ಅಂಕಣ ಬರಹಗಳ ಸಂಕಲನಕ್ಕೆ ಬರಗೂರು ರಾಮಚಂದ್ರಪ್ಪ ಬರೆದ ಮುನ್ನುಡಿ

ಈ ಕೃತಿಯ ಶೀರ್ಷಿಕೆಯಾದ ‘ರಾಜಕಾರಣದಲ್ಲಿ ನಿಂಬೆ – ಹಾಗಲ’ ಎಂಬ ಅಂಕಣ ಬರಹವು ಮಹಾಭಾರತದ ಒಂದು ಪ್ರಸಂಗದಿಂದ ಆರಂಭವಾಗುತ್ತದೆ. ಕುರುಕ್ಷೇತ್ರವಾದ ಮೇಲೆ ರಾಜ್ಯದ ಒಳಿತಿಗಾಗಿ ಧರ್ಮರಾಯಾದಿಗಳು ತೀರ್ಥಯಾತ್ರೆ ಹೋಗಲು ನಿರ್ಧರಿಸಿ ಶ್ರೀಕೃಷ್ಣನನ್ನೂ ಜೊತೆಗೆ ಬರಲು ಆಹ್ವಾನಿಸುತ್ತಾರೆ. ಶ್ರೀಕೃಷ್ಣ ತನ್ನ ಕಾರ್ಯಭಾರದಿಂದ ಬರಲಾಗದೆಂದು ಹೇಳಿ, ತನ್ನ ಪ್ರತಿನಿಧಿಯಾಗಿ ಒಂದು ಹಾಗಲಕಾಯಿ ಕೊಡುತ್ತಾನೆ. ಅದರೊಂದಿಗೆ ಪಾಂಡವರು ತೀರ್ಥಯಾತ್ರೆ ಮುಗಿಸಿ ವಾಪಸ್ ಬರುತ್ತಾರೆ. ಆಗ ಶ್ರೀಕೃಷ್ಣ, ಹಾಗಲಕಾಯನ್ನು ಕತ್ತರಿಸಿ ತುಂಡು ತುಂಡು ಮಾಡಿ ಹಂಚಲು ಅರ್ಜುನನಿಗೆ ಹೇಳುತ್ತಾನೆ. ಅರ್ಜುನ ತುಂಡು ಮಾಡಿಕೊಟ್ಟ ಹಾಗಲಕಾಯಿ ಪ್ರಸಾದವನ್ನು ತಿಂದ ಪಾಂಡವರು ಕಹಿಯೆಂದು ಮುಖ ಕಿವುಚುತ್ತಾರೆ. ಆಗ ಕೃಷ್ಣ ಹೇಳುತ್ತಾನೆ: ‘ಅರೆ! ಅದು ಇನ್ನೂ ಕಹಿಯಾಗಿಯೇ ಇದೆಯೆ? ಎಲ್ಲ ದೇವರ ದರ್ಶನ ಮಾಡಿದ ನಂತರವೂ, ತೀರ್ಥಕ್ಷೇತ್ರದಲ್ಲಿ ಪುಣ್ಯಸ್ನಾನ ಮಾಡಿದ ನಂತರವೂ ಅದರ ಕಹಿ ಹೋಗಿಲ್ಲವೆ?’ – ಹೀಗೆ ಪ್ರಶ್ನಿಸಿದ ಶ್ರೀಕೃಷ್ಣ ಆನಂತರ ಹೀಗೆ ಹೇಳಿದ : ‘ಪುಣ್ಯ ಸ್ನಾನ ಮಾಡುವುದರಿಂದ, ದೇವರ ಪೂಜೆ ಮಾಡುವುದರಿಂದ ಅಂತರಂಗದಲ್ಲಿ ಇರುವ ಕಹಿ ಹೋಗುವುದಿಲ್ಲ. ಧರ್ಮರಾಜ, ಈಗ ನೀನು ಹಸ್ತಿನಾವತಿಯ ಚಕ್ರವರ್ತಿ. ನಿನ್ನ ಆಡಳಿತದಲ್ಲಿ ಜನರಿಗೆ ಒಳ್ಳೆಯದಾದರೆ ಮಾತ್ರ ನಿನ್ನ ಪಾಪ ನಿವಾರಣೆಯಾಗುತ್ತದೆಯೇ ವಿನಾ ದೇವರ ಪೂಜೆ, ತೀರ್ಥಕ್ಷೇತ್ರಗಳ ದರ್ಶನದಿಂದ ಅಲ್ಲ’.

ಈ ಪ್ರಸಂಗವನ್ನು ಆರಂಭದಲ್ಲಿ ನಿರೂಪಿಸಿದ ಲೇಖಕ ಶ್ರೀ ರವೀಂದ್ರ ಭಟ್ಟ ಅವರು ಕೊನೆಗೆ ಹೇಳುತ್ತಾರೆ: ‘ಪೂಜೆ ಮಾಡುವುದರಿಂದ, ಪುಣ್ಯಸ್ನಾನ ಮಾಡುವುದರಿಂದ, ಹೋಮ ಹವನದಿಂದ ಹಾಗಲಕಾಯಿ ಸಿಹಿಯಾಗುವುದಿಲ್ಲ. ಆಡಳಿತದ ಕುರ್ಚಿಯಲ್ಲಿ ಕುಳಿತವರು ರಾಜ್ಯದ ಸಂಕಷ್ಟಗಳಿಗೆ ಸ್ಪಂದಿಸುವುದರಿಂದ ಅವರಿಗೂ ಒಳಿತು, ಜನರಿಗೂ ಒಳಿತು’.

(ರವೀಂದ್ರ ಭಟ್ಟ ಐನಕೈ)

ರವೀಂದ್ರ ಭಟ್ಟರು ನಿರೂಪಿಸಿದ ಪ್ರಸಂಗ ಮತ್ತು ಅಂತಿಮ ಅಭಿಪ್ರಾಯದಲ್ಲಿ ಪ್ರಜಾಪ್ರಭುತ್ವದ ಮೂಲ ಆಶಯವಿದೆ. ಮಹಾಭಾರತದ ರಾಜಪ್ರಭುತ್ವವು ಜನಪರವಾಗಿರ ಬೇಕೆಂದು ಅಂದಿನ ಶ್ರೀಕೃಷ್ಣ ಬಯಸಿದಂತೆ, ಪ್ರಜಾಪ್ರಭುತ್ವದ ಇಂದಿನ ಜನರು ಆಗ್ರಹಿಸುತ್ತಾರೆ. ಅಂದಿನ ಶ್ರೀಕೃಷ್ಣನ ಅಭಿಮತ ಮತ್ತು ಇಂದಿನ ಜನರ ಆಗ್ರಹವು, ಪ್ರಭುತ್ವವು ಮೌಢ್ಯಾಚರಣೆಗಳನ್ನು ಮೀರಿದ ಜನಹಿತ ಕೆಲಸಗಳಲ್ಲಿ ಪುಣ್ಯವನ್ನು ಗಳಿಸ ಬೇಕೆಂಬ ನೀತಿಪಾಠವನ್ನು ಒಳಗೊಂಡಿದೆ. ಅಂದಿನ ಪ್ರಸಂಗದಲ್ಲಿರುವ ‘ಶ್ರೀಕೃಷ್ಣ’ ಒಂದು ‘ರೂಪಕ’ವಾಗಿ ಇಂದಿನ ಆಶಯವನ್ನೂ ಅಭಿವ್ಯಕ್ತಿಸುವುದು ಗಮನೀಯ. ಹೀಗೆ ಕಥಾ ಪರಂಪರೆಯ ಮೂಲಕ ಸಮಕಾಲೀನ ವಾಸ್ತವವನ್ನು ವಿವರಿಸಿ ಅಭಿಪ್ರಾಯ ವನ್ನು ರೂಪಿಸುವ ಲೇಖಕರ ಅಪೇಕ್ಷೆ ‘ಪುರಾಣ ಪ್ರಸಂಗ’ವಾಗದೆ ‘ಪ್ರಸ್ತುತ ಪ್ರತೀಕ’ವೂ ಆಗುವುದು ಒಂದು ವಿಶೇಷ.

ರವೀಂದ್ರ ಭಟ್ಟರ ಬಹುಪಾಲು ಬರಹಗಳು ‘ಪ್ರಸಂಗಾನುಸಂಧಾನ’ದ ಸ್ವರೂಪವನ್ನು ಪಡೆದಿವೆ. ನಿರ್ದಿಷ್ಟ ಪ್ರಸಂಗ ಅಥವಾ ಘಟನೆಯೊಂದನ್ನು ನಿದರ್ಶನವಾಗಿ ನೀಡಿ ಬರಹದ ವಸ್ತು ವಿಶ್ಲೇಷಣೆ ಮಾಡುವುದು ರವೀಂದ್ರ ಭಟ್ಟರ ವಿಶಿಷ್ಟ ಅಭಿವ್ಯಕ್ತಿ ವಿಧಾನ ವಾಗಿದೆ. ಈ ವಿಧಾನದ ಮೂಲಕ ಅವರ ಬರಹಗಳು ಹೆಚ್ಚು ಸಂವಹನಶೀಲವಾಗಿವೆ; ಸಂವಹನದ ಕಾರಣಕ್ಕಾಗಿ ಸಂವೇದನೆ ಕುಂಠಿತವಾಗದಿರುವುದು ರವೀಂದ್ರ ಭಟ್ಟರ ಬರಹಗಳ ಒಂದು ಮೌಲ್ಯವಾಗಿದೆ. ವಿಶೇಷವಾಗಿ ಸಮಕಾಲೀನ ರಾಜಕಾರಣಕ್ಕೆ ಮುಖಾಮುಖಿಯಾಗುವ ಅವರೊಳಗೆ, ಒಳಿತಿನ ಪರವಾದ ಸಂವೇದನಾಶೀಲ ತುಡಿತ ಜೀವಂತವಾಗಿದೆ. ಹೀಗಾಗಿಯೇ ಸಮಾಜದ ಒಳಿತನ್ನು ಬಯಸುವ ರಾಜಕಾರಣದ ಪರವಾಗಿ ಅವರ ಬರಹಗಳು ನೇರ ನುಡಿಯ ದನಿಯಾಗುತ್ತವೆ. ರಾಜಕಾರಣವೊಂದೇ ಅಲ್ಲ, ಅಂದಂದಿನ ಇತರೆ ವಿದ್ಯಮಾನಗಳಿಗೂ ಪ್ರತಿಕ್ರಿಯೆಯಾಗುತ್ತವೆ. ಎದುರಿಗೆ ಸಂಭವಿಸು ತ್ತಿರುವ ಘಟನೆಗಳಿಗೆ ಎದುರಾಗುತ್ತಲೇ ಎಂದೆಂದಿಗೂ ಅನ್ವಯಿಸುವಂತಹ ಸಾಮಾನ್ಯೀಕೃತ ಮೌಲ್ಯ ನಿರ್ಣಯಕ್ಕೆ ಬರುವ ಬರಹಗಳೂ ಈ ಕೃತಿಯಲ್ಲಿವೆ. ಇರುವುದನ್ನು ಇದ್ದಂತೆಯೇ ಹೇಳುತ್ತ, ಒಳಿತು-ಕೆಡುಕುಗಳನ್ನು ವಿಂಗಡಿಸಿ ನಿರೂಪಿಸುವ ವಿಧಾನವನ್ನು ಈ ಕೃತಿಯುದ್ದಕ್ಕೂ ಕಾಣಬಹುದಾಗಿದೆ. ಏಕಮುಖೀ ಅಭಿಪ್ರಾಯದ ಬದಲು ಮತ್ತೊಂದು ಮಗ್ಗುಲ ಸತ್ಯವನ್ನೂ ಕಾಣುವ ಕಣ್ಣು ರವೀಂದ್ರ ಭಟ್ಟರ ಬರಹಗಳಲ್ಲಿದೆ.

ಈಗ ಕೆಲವು ಅಂಕಣ ಬರಹಗಳ ಮೂಲಕ ನನ್ನ ನೋಟವನ್ನು ನಿರೂಪಿಸ ಬಹುದು. ‘ಆಯಿ ಆಗಲಿ ಬೊಮ್ಮಾಯಿ’ ಎಂಬ ಬರಹವು ಕೇವಲ ಪ್ರಾಸಪ್ರಿಯ ಶೀರ್ಷಿಕೆಯದೆಂದು ಭಾವಿಸಿದರೆ ತಪ್ಪಾಗುತ್ತದೆ. ಆಯಿ-ಬೊಮ್ಮಾಯಿ ಎಂಬ ಪದಗಳಲ್ಲಿ ಅಂತ್ಯ ಪ್ರಾಸವಿರುವುದು ನಿಜ. ಆದರೆ ಆಡಳಿತವೊಂದು ಅಂತಿಮವಾಗಿ ‘ತಾಯಿ’ಯಾಗ ಬೇಕೆಂದು ಬಯಸುವ ಈ ಲೇಖನವು ಶ್ರೀ ಬಸವರಾಜ ಬೊಮ್ಮಾಯಿಯವರ ಆಡಳಿತ ವೈಖರಿಯ ವಿವರಗಳನ್ನು ನಿದರ್ಶನವಾಗಿ ಬಳಸುತ್ತದೆ. ಕೆಲವು ಮುಖ್ಯ ಪ್ರಶ್ನೆಗಳನ್ನೂ ಎತ್ತುತ್ತದೆ. ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ್ದು, ಆಡಳಿತ ಪಕ್ಷ ಅತೀವ ಆಸಕ್ತಿ ವಹಿಸಿ ಪ್ರದರ್ಶನಗಳನ್ನು ಏರ್ಪಡಿಸಿದ್ದು ಈ ಲೇಖನದಲ್ಲಿ ಪ್ರಸ್ತಾಪ ಗೊಂಡು ‘‘ಆದರೆ ಇಂತಹ ಭಾಗ್ಯ ‘ಜೈಭೀಮ್’ ಚಿತ್ರಕ್ಕೆ ಲಭ್ಯವಾಗಲಿಲ್ಲ’’ ಎಂದು ರವೀಂದ್ರ ಭಟ್ಟರು ಹೇಳುತ್ತಾರೆ. ಈ ಒಂದು ಸಾಲು ರಾಜಕಾರಣದ ಪಕ್ಷಪಾತವನ್ನು ಸ್ಪಷ್ಟವಾಗಿ ಹೇಳುತ್ತದೆ. ಲೇಖಕರ ನಿಷ್ಪಕ್ಷಪಾತಕ್ಕೂ ನಿದರ್ಶನವಾಗುತ್ತದೆ.

ಉದ್ದಕ್ಕು ರಾಜಕೀಯ ನೈತಿಕತೆಯನ್ನು ಅಂತರ್ಗತ ಮಾಡಿಕೊಂಡ ಅನೇಕ ಬರಹಗಳು ಈ ಸಂಕಲನದಲ್ಲಿವೆ. ಈ ನೈತಿಕ ನೆಲೆಯಲ್ಲೇ ಲೇಖಕರು ಭ್ರಷ್ಟಾಚಾರವನ್ನು ಕಟುವಾಗಿ ವಿರೋಧಿಸುತ್ತಾರೆ. ‘ಗುರು’ ಲಘುವಾದರೆ ಹೇಗೆ ಸ್ವಾಮಿ? ಎಂಬ ಲೇಖನದ ಕೊನೆಗೆ ಹೀಗೆ ನುಡಿಯುತ್ತಾರೆ : ‘ಇಳಕಲ್ ಸ್ವಾಮೀಜಿ ಮತ್ತು ಇತರ ಕೆಲವು ಮಠಾಧೀಶರು ಒಂದು ಕಾಲದಲ್ಲಿ ಜೋಳಿಗೆ ಹಾಕಿಕೊಂಡು ಭಕ್ತರ ಕೆಟ್ಟ ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕುವಂತೆ ಆಂದೋಲನ ನಡೆಸಿದ್ದರು. ಈಗ ಮಠಾಧೀಶರು ನಮ್ಮ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮನೆ ಮನೆ ಬಾಗಿಲಿಗೆ ಹೋಗಿ – ಭ್ರಷ್ಟಾಚಾರವನ್ನೂ ಲಂಚಗುಳಿತನವನ್ನೂ ಸ್ವಜನ ಪಕ್ಷಪರವನ್ನೂ ಜೋಳಿಗೆಗೆ ಹಾಕಿ – ಎಂದು ಕೇಳುವ ಕಾಲ ಬಂದಿದೆ. ಅದಕ್ಕೆ ಮಠಾಧೀಶರು ಮುಂದಾದರೆ ದೇಶಕ್ಕೆ ಒಳ್ಳೆಯದು’ – ಈ ಸಾಲುಗಳು ಸ್ವಯಂ ಸ್ಪಷ್ಟವಾಗಿದೆ.

ಇನ್ನೊಂದು ಕಡೆ ‘ಪ್ರತಿಜ್ಞೆ ಎಂಬ ಪಾಪದ ಪಾಪು’ ಲೇಖನದಲ್ಲಿ ಸಮಕಾಲೀನ ಸಂದರ್ಭದ – ವಿಶೇಷವಾಗಿ ಆಳುವ ವರ್ಗದ – ಭ್ರಷ್ಟಾಚಾರದ ಬಗ್ಗೆ ವಿಶ್ಲೇಷಿಸುತ್ತ ಕೊನೆಗೆ ಹೇಳುತ್ತಾರೆ : ‘ಮಿಲಿಯನ್ ಡಾಲರ್ ಪ್ರಶ್ನೆ ಏನಪ್ಪ ಎಂದರೆ ಅತ್ಯಂತ ಸರಳ, ಪ್ರಾಮಾಣಿಕ ಎಂದು ಬಿಂಬಿಸಿಕೊಂಡಿರುವ, ಹಾಗೂ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿ.ಜೆ.ಪಿ.ಯ ಮೇಲೆ ಹಿಡಿತ ಹೊಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೂ ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಯಾಕೆ? ಬಹುಶಃ ಶ್ರೀ ರಾಮನೇ ಉತ್ತರಿಸಬೇಕು’.

ಸಂವಹನದ ಕಾರಣಕ್ಕಾಗಿ ಸಂವೇದನೆ ಕುಂಠಿತವಾಗದಿರುವುದು ರವೀಂದ್ರ ಭಟ್ಟರ ಬರಹಗಳ ಒಂದು ಮೌಲ್ಯವಾಗಿದೆ. ವಿಶೇಷವಾಗಿ ಸಮಕಾಲೀನ ರಾಜಕಾರಣಕ್ಕೆ ಮುಖಾಮುಖಿಯಾಗುವ ಅವರೊಳಗೆ, ಒಳಿತಿನ ಪರವಾದ ಸಂವೇದನಾಶೀಲ ತುಡಿತ ಜೀವಂತವಾಗಿದೆ. ಹೀಗಾಗಿಯೇ ಸಮಾಜದ ಒಳಿತನ್ನು ಬಯಸುವ ರಾಜಕಾರಣದ ಪರವಾಗಿ ಅವರ ಬರಹಗಳು ನೇರ ನುಡಿಯ ದನಿಯಾಗುತ್ತವೆ.

ಹೀಗೆ ಆಡಳಿತ ಪಕ್ಷದ ಕೆಡುಕುಗಳನ್ನು ಹೊರಹಾಕಿ ಪ್ರಶ್ನಿಸುವ ರವೀಂದ್ರ ಭಟ್ಟರು ಪ್ರತಿಪಕ್ಷಗಳನ್ನೂ ಪ್ರಶ್ನಿಸುತ್ತಾರೆ. ‘ಖೆಡ್ಡಾದಲ್ಲಿ ಬಿದ್ದ ಪ್ರತಿ ಪಕ್ಷಗಳು’ ಎಂಬ ಲೇಖನ ನನ್ನ ಮಾತಿಗೊಂದು ನಿದರ್ಶನ. ‘ಆಡಳಿತ ಪಕ್ಷ ಬಿಡುತ್ತಿರುವ ಬಾಣಗಳಾಗಲೀ, ವಿರೋಧ ಪಕ್ಷಗಳ ಪ್ರತಿಬಾಣಗಳಾಗಲೀ ಯಾವುದೂ ಜನೋಪಯೋಗಿ ಅಲ್ಲ’ ಎಂದು ನೇರವಾಗಿ ಹೇಳುವ ಲೇಖಕರು ಎರಡೂ ವಲಯದ ಇತಿಮಿತಿಗಳನ್ನು ವಿವರಿಸಿದ್ದಾರೆ. ಕಾಂಗ್ರೆಸ್ ರಾಜಕಾರಣದ ಇತಿಮಿತಿಯನ್ನು – ‘ಗಾಂಧಿ’ ಬಜಾರ್‌ನಲ್ಲಿ ಏಕಾಂಕ – ಎಂಬ ಲೇಖನದಲ್ಲಿ ವಿಡಂಬಿಸಿದ್ದಾರೆ. ‘ನಾಮದ ಬಲವೊಂದಿದ್ದರೆ ಸಾಲದು’ ಎಂಬ ಲೇಖನದಲ್ಲಿ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಗೆ ಸಂಬಂಧಿಸಿದ ವಿಶ್ಲೇಷಣೆ ಮಾಡಿದ್ದಾರೆ. ‘ಇವರು ಎಂಥಾ ನಾಯಕರಯ್ಯ’ ಎಂಬ ಲೇಖನದಲ್ಲಿ ಎಲ್ಲಾ ಪಕ್ಷದವರಿಗೂ ‘ಬುದ್ಧಿವಾದ’ ಹೇಳಿದ್ದಾರೆ.

ಮುಖ್ಯವಾಗಿ ಮೌಲ್ಯಗಳು ಕಳೆದು ಹೋಗುತ್ತಿರುವ ಬಗ್ಗೆ ಲೇಖಕರಲ್ಲಿ ಕಳವಳವಿದೆ. ಈ ಕಳವಳದ ನೆಲೆಯಲ್ಲೇ ಕಳಕಳಿ ಬೆಳೆದು ಬರಹವಾಗುತ್ತದೆ. ‘ಮೌಲ್ಯ: ಕಳೆದಲ್ಲೇ ಹುಡುಕೋಣ’ವೆಂಬ ಲೇಖನದಲ್ಲಿ ಈ ಕಳಕಳಿ ಸಮರ್ಥವಾಗಿ ವ್ಯಕ್ತವಾಗಿದೆ. ರಾಜಕಾರಣದ ಚಾರಿತ್ರಿಕ ನೆನಪುಗಳ ಮೂಲಕ ಪ್ರಸ್ತುತ ಸಂದರ್ಭದ ನೈತಿಕ ದಿವಾಳಿತನ ವನ್ನೂ ಮೌಲ್ಯಗಳ ಕುಸಿತವನ್ನೂ ಲೇಖಕರು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ‘ಜನಪರ ಹೋರಾಟವೇ ರಾಜಕಾರಣದ ಬಂಡವಾಳ ಎನ್ನುವುದು, ಬಂಡವಾಳವೇ ರಾಜಕಾರಣದ ಮೊದಲ ಮೆಟ್ಟಿಲು ಎಂದು ಬದಲಾಗಿದ್ದು, ರಾಸಾಯನಿಕ ಗೊಬ್ಬರವನ್ನು ಮಿತಿ ಮೀರಿ ಬಳಸಿದ್ದರಿಂದ ಕೃಷಿ ಭೂಮಿ ಬರಡಾದ ಹಾಗೆ, ಮಿತಿ ಮೀರಿದ ಬಂಡವಾಳ ಹೂಡಿಕೆಯಿಂದ ರಾಜಕೀಯ ಭೂಮಿಯೂ ಈಗ ಬರಡಾಗುತ್ತಿದೆ’ – ಇದು ರವೀಂದ್ರ ಭಟ್ಟರ ವಿಶ್ಲೇಷಣೆ. ಇಲ್ಲಿ ರಾಜಕಾರಣವನ್ನು ಭೂಮಿಯೊಂದಿಗೆ ಸಮೀಕರಿಸುವ ಮೂಲಕ ಮೌಲ್ಯದ ಅನನ್ಯತೆಯನ್ನು ಅಭಿವ್ಯಕ್ತಿಸಲಾಗಿದೆ. ನಮ್ಮ ಜನಮನಕ್ಕೆ ಭೂಮಿಯೆಂದರೆ ‘ತಾಯಿ’ ಇದ್ದಂತೆ; ಭೂಮಿಯೆಂದರೆ ಅನ್ನದಾತೆ. ರಾಜಕಾರಣವೂ ಇಂತಹ ಮೌಲ್ಯಗಳನ್ನು ಒಳಗೊಳ್ಳಬೇಕೆಂಬ ಧ್ವನ್ಯಾರ್ಥವನ್ನು ಈ ಬರಹವು ಒಳಗೊಂಡಿದೆ; ಕೆಲವು ನೇರ-ನಿಷ್ಠುರ ನುಡಿಗಳನ್ನೂ ಒಳಗೊಂಡಿದೆ. ಒಟ್ಟಾರೆ, ನೈತಿಕತೆ ಮತ್ತು ಪ್ರಾಮಾಣಿಕತೆಗಳು ರಾಜಕಾರಣದ ಕೇಂದ್ರಪ್ರಜ್ಞೆಯಾಗಬೇಕೆಂಬ ಆಶಯ, ಈ ಬರಹದಲ್ಲಿದೆ.

ಲೇಖಕರ ಕಳಕಳಿಯು ‘ಇದೆಂಥಾ ಪ್ರಜಾಪ್ರಭುತ್ವ ಸ್ವಾಮಿ?’ ಎಂದು ಪ್ರಶ್ನಿಸುತ್ತದೆ. ಜಾತಿ ರಾಜಕೀಯ ಮತ್ತು ಮಠಾಧೀಶರ ಪಾತ್ರವನ್ನು ಈ ಲೇಖನ ವಿಮರ್ಶಿಸುತ್ತದೆ. ‘ನಮಗೆ ಈಗ ಬೇಕಿರುವುದು ಬಿಜೆಪಿ ನಾಯಕನೋ, ಕಾಂಗ್ರೆಸ್ ನಾಯಕನೋ, ಜೆ.ಡಿ.ಎಸ್. ನಾಯಕನೋ ಅಲ್ಲ. ನಮಗೆ ಬೇಕಿರುವುದು ಜನನಾಯಕ’ ಎಂದು ಪ್ರತಿಪಾದಿಸುವ ಈ ಲೇಖನವು ‘ಸರ್ವ ಜನಾಂಗದ ನಾಯಕ ಹುಟ್ಟಿಬರಲಿ’ ಎಂದು ಆಶಿಸುತ್ತದೆ. ಅಂದರೆ ಜನಕೇಂದ್ರಿತ ರಾಜಕಾರಣಕ್ಕೆ ಬದ್ಧವಾದ ಪ್ರಜಾಪ್ರಭುತ್ವ ಮುಖ್ಯ ಎಂಬುದು ಲೇಖಕರ ಕಳಕಳಿಯಾಗಿದೆ. ಜನನಾಯಕರು ನಿರ್ದಿಷ್ಟ ಜಾತಿ ಮತ್ತು ಪಕ್ಷದೊಳಗಿದ್ದೂ ಅವುಗಳನ್ನು ಮೀರಿ ನಿಲ್ಲುವ ನೀತಿ-ನಿಲುವು ತಾಳುವುದು ಇಂದು ಅಗತ್ಯವಾಗಿದೆ ಎಂದು ನನಗನ್ನಿಸುತ್ತದೆ. ಈ ಆಶಯವನ್ನು ರವೀಂದ್ರ ಭಟ್ಟರು ತಮ್ಮದೇ ರೀತಿಯಲ್ಲಿ ಪ್ರತಿಪಾದಿಸಿದ್ದಾರೆ. ನಮ್ಮ ಆಶಯ ಹೀಗಿದ್ದರೂ ಜಾತಿಯ ದುರುಪಯೋಗ ಸಾಕಷ್ಟು ನಡೆಯುತ್ತಿದೆ. ಈ ಅಂಶವನ್ನು ರವೀಂದ್ರ ಭಟ್ಟರು ‘ಕಷ್ಟ ಬಂದಾಗ ಜಾತಿಯೇ ಗುರಾಣಿ’ ಎಂಬ ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ. ಕೆಲವು ರಾಜಕಾರಣಿಗಳು ಜೈಲಿಗೆ ಹೋದಾಗ ಆಯಾ ಜಾತಿಯವರು ನಾಚಿಕೆ ಪಟ್ಟುಕೊಳ್ಳಲಿಲ್ಲವೆಂದೂ ರಾಜಕಾರಣಿಗಳು ತಂತಮ್ಮ ಜಾತಿಯ ‘ದುರುಪಯೋಗ’ (ಸದುಪಯೋಗ!?) ಮಾಡಿಕೊಳ್ಳುವ ಬಗೆಯನ್ನೂ ಲೇಖಕರು ಬಗೆಬಗೆಯಾಗಿ ವಿವರಿಸಿದ್ದಾರೆ. ‘ರಾಜಕಾರಣಿಗಳು, ರಾಜಕೀಯ ಕಾರ್ಯಕರ್ತರು ಬಿಡಿ; ಸಮರ್ಥನೆಗೆ ಅವರಿಗೆ ಏನೇನೊ ಕಾರಣಗಳು ಇರಬಹುದು. ಆದರೆ ಮಠಾಧೀಶರು, ಜಗದ್ಗುರುಗಳು ಎಂದುಕೊಂಡವರಿಗೂ ಇಂತಹ ಸೂಕ್ಷ್ಮಗಳು ಅರ್ಥವಾಗುವುದಿಲ್ಲ ಎಂದರೆ ಅಚ್ಚರಿಯಾಗುತ್ತದೆ’ ಎನ್ನುವ ಲೇಖಕ ತಮ್ಮ ಇತರೆ ಕೆಲವು ಲೇಖನಗಳಲ್ಲೂ ಮಠಾಧೀಶರ ವರ್ತನೆ ಕುರಿತು ವಿಮರ್ಶಿಸಿದ್ದಾರೆ.

ರಾಜಕೀಯ ಸಂಗತಿಗಳಿಗೆ ನೇರ ನುಡಿಗಳಲ್ಲಿ ಪ್ರತಿಕ್ರಿಯಿಸುವ ರವೀಂದ್ರ ಭಟ್ಟರು ತಾವು ಉಲ್ಲೇಖಿಸುವ ಕೆಲವು ಪ್ರಸಂಗಗಳಲ್ಲೇ ರೂಪಕವನ್ನು ಕಾಣುತ್ತಾರೆ; ಕಾಣಿಸುತ್ತಾರೆ. ನೇರ ರೂಪಕವನ್ನೂ ಬಳಸುವುದಕ್ಕೆ ‘ವಿಧಾನಸೌಧವೆಂಬ ಮೃತ ಸಮುದ್ರ!’ ಎಂಬ ಲೇಖನವೂ ಉತ್ತಮ ನಿದರ್ಶನವಾಗಿದೆ. ಇಸ್ರೇಲ್‌ನಲ್ಲಿ ಮೃತ ಸಮುದ್ರದ ಕಲ್ಪನೆಯಿರುವು ದನ್ನು ಉಲ್ಲೇಖಿಸಿ ಅದನ್ನು ವಿಧಾನ ಸೌಧಕ್ಕೆ ಸಮೀಕರಿಸುವ ವಿಧಾನವು ರವೀಂದ್ರ ಭಟ್ಟರ ಬರಹಗಳಲ್ಲಿರುವ ಮತ್ತೊಂದು ಆಯಾಮವನ್ನು ಅನಾವರಣಗೊಳಿಸುತ್ತದೆ. ಇದೇ ಲೇಖನದಲ್ಲಿ ಚಂದ್ರಗುಪ್ತ ಮೌರ್ಯ ಮತ್ತು ಚಾಣಕ್ಯನ ಪ್ರಸಂಗವೊಂದನ್ನು ನಿರೂಪಿಸಿ ಸಮಕಾಲೀನ ರಾಜಕೀಯಕ್ಕೆ ರೂಪಕವಾಗಿಸಿರುವುದನ್ನು ಇಲ್ಲಿ ಗಮನಿಸ ಬಹುದು. ‘ಎಲ್ಲಿಯವರೆಗೆ ನಾವು ತೆಗೆದುಕೊಳ್ಳುವುದರಲ್ಲಿಯೇ ಖುಷಿ ಪಡುತ್ತೇವೆಯೋ ಅಲ್ಲಿಯವರೆಗೆ ನಾವು ಮೃತ ಸಮುದ್ರದಂತೆಯೇ ಇರುತ್ತೇವೆ’ ಎನ್ನುವ ಮೂಲಕ ‘ಮೃತ ಸಮುದ್ರ’ ಕಲ್ಪನೆಯನ್ನು ವಿಧಾನ ಸೌಧದಾಚೆಗೂ ವಿಸ್ತರಿಸಿದ್ದು ಕೂಡ ಗಮನಾರ್ಹ.

ಕೇವಲ ರಾಜಕಾರಣವೆ ಇಲ್ಲಿನ ಬರಹಗಳ ವಸ್ತುವಾಗಿಲ್ಲ. ಕೆಲವು ಸಾಮಾಜಿಕ- ಸಾಂಸ್ಕೃತಿಕ ಸಂಗತಿಗಳನ್ನು ಕುರಿತ ಬರಹಗಳನ್ನೂ ಈ ಕೃತಿಯು ಒಳಗೊಂಡಿದೆ. ‘ಪ್ರೀತಿಯ ಅಪ್ಪುಗೆಗೆ ಕಾಯ್ದೆ ಬೇಡವೆ?’ ಎಂಬ ಬರಹವು ಮತಾಂತರದ ಸಮಸ್ಯೆಯನ್ನು ಸರಿಯಾಗಿ ವಿಶ್ಲೇಷಿಸುತ್ತದೆ. ದಲಿತರ ಬದುಕನ್ನು ಹಸನುಗೊಳಿಸದೆ ಮತಾಂತರ ತಡೆಗೆ ಕಾಯಿದೆ ತರುವ ಕ್ರಮವನ್ನು ವಿಮರ್ಶೆಗೆ ಒಡ್ಡುತ್ತದೆ. ‘ನಮ್ಮವರನ್ನು ನಮ್ಮಲ್ಲಿಯೇ ಉಳಿಸಿಕೊಳ್ಳಲು ನಿರ್ವಾಜ್ಯ ಪ್ರೀತಿ ಬೇಕು. ಹೃದಯಾಂತರಾಳದ ಸೇವೆ ನೀಡಬೇಕು. ಸಂತೋಷದಿಂದ ಸಂತೃಪ್ತಿಯಿಂದ ಬದುಕುವ ವಾತಾವರಣವನ್ನು ಸೃಷ್ಟಿಸಬೇಕು. ಮೇಲು ಕೀಳು ಎಂಬ ಅಸಮಾನತೆಯನ್ನು ದೂರ ಮಾಡಬೇಕು’ ಎಂದು ನೇರವಾಗಿ ನುಡಿಯುವ ಲೇಖಕರು ‘ಒಂದು ಪ್ರೀತಿಯ ಅಪ್ಪುಗೆಯನ್ನು ನೀಡಿದರೆ, ವಿಶ್ವಾಸದ ಸಲುಗೆಯನ್ನು ನೀಡಿದರೆ ಅವರು ಧರ್ಮವನ್ನು ಬಿಟ್ಟು ಇನ್ನೊಂದು ಧರ್ಮಕ್ಕೆ ಹೋಗುವುದಿಲ್ಲ. ಮೊದಲು ಮೇಲಿದ್ದವರು ಬಾಗಬೇಕು, ಕೈಚಾಚಬೇಕು, ಬಾಗಿ ತಬ್ಬಿಕೊಳ್ಳಬೇಕು, ಅಷ್ಟೆ. ಇಲ್ಲವಾದರೆ ಮುಂದೊಂದು ದಿನ ಪ್ರೀತಿಯ ಅಪ್ಪುಗೆಗೂ ಕಾಯ್ದೆ ತರಬೇಕಾದೀತು!’ ಎಂದು ಕಳಕಳಿಯಿಂದ ಹೇಳುತ್ತಲೇ ‘ಅಸ್ಪೃತೆಯ ಕೂಪದಲ್ಲಿ ಸಿಲುಕಿದವರು ಕೇಳುತ್ತಿರುವುದು ಕಾಯ್ದೆಯನ್ನಲ್ಲ. ಅವರ ಕೋಪ, ತಾಪ, ಆಕ್ರಮಣ ಎಲ್ಲ ಇರುವುದು ಪ್ರೀತಿಗಾಗಿ, ಸಮಾನತೆಗಾಗಿ, ಮಾನವೀಯ ಸ್ಪರ್ಶಕ್ಕಾಗಿ, ಅಷ್ಟೆ’ ಎಂದು ಸ್ಪಷ್ಟ ಮಾತು ಗಳಲ್ಲಿ ಸಾಮಾಜಿಕ ಪ್ರಜ್ಞೆಯ ಒಬ್ಬ ಪ್ರತಿನಿಧಿಯಾಗುತ್ತಾರೆ.

ದಲಿತಪರ ಕಾಳಜಿಯಂತೆಯೇ ರೈತಪರ ಕಾಳಜಿಯನ್ನೂ ಲೇಖಕರು ದಾಖಲಿಸಿದ್ದಾರೆ. ‘ಅನ್ನದಾತ ಆಟಕ್ಕುಂಟು, ಊಟಕ್ಕಿಲ್ಲ’ ಎಂಬ ಲೇಖನದಲ್ಲಿ ರೈತ ವರ್ಗದ ಬಗ್ಗೆ ಆಡಳಿತಗಾರರು ತೋರುತ್ತಿರುವ ಅನಾದರ ಮತ್ತು ಅದರ ಪರಿಣಾಮ ಗಳನ್ನು ಚಿತ್ರಿಸಿದ್ದಾರೆ. ತಮ್ಮ ಅಂಕಣ ಬರಹಗಳ ಒಂದು ಮುಖ್ಯ ಮಾದರಿಯಾಗಿರುವ ‘ಪ್ರಸಂಗಾವಧಾನ’ವನ್ನು ಈ ಲೇಖನದಲ್ಲಿ ಬಳಸಿದ್ದಾರೆ. ರಾಜ ಮತ್ತು ರೈತನಿಗೆ ಸಂಬಂಧಿಸಿದ ಕಥಾಪ್ರಸಂಗದ ಮೂಲಕ ಇಂದಿನ ಸಂದರ್ಭದ ಸಂಕಟವನ್ನು ವಿವರಿಸಿದ್ದಾರೆ. ‘ಅನ್ನದಾತನಿಗಿಲ್ಲ ಲಾಕ್‌ಡೌನ್’ ಎಂಬ ಲೇಖನ ಕೂಡ ರೈತಪರ ಕಾಳಜಿಯಿಂದ ಮೂಡಿಬಂದಿದೆ. ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತದೆ.

‘ನಿಸರ್ಗ ಮುನಿದರೆ ಮನುಷ್ಯನಿಗಷ್ಟೇ ಕಷ್ಟ’ ಎಂಬುದೊಂದು ವಿಶಿಷ್ಟ ಲೇಖನ. ನಿಸರ್ಗದ ಅನನ್ಯತೆಯ ಜೊತೆಗೆ ಮಾನವೀಯ ಮನೋಧರ್ಮಕ್ಕೆ ಚ್ಯುತಿ ತಂದುಕೊಳ್ಳು ತ್ತಿರುವ ಮನುಷ್ಯ ಕುಲದ ಕೊರತೆಯನ್ನು ಈ ಲೇಖನದಲ್ಲಿ ಕಳಕಳಿಯಿಂದ ಕಟ್ಟಿಕೊಡ ಲಾಗಿದೆ. ‘ನಿಮ್ಮ ಮನೆಯಲ್ಲಿ ಸಾಕಿದ ಬೆಕ್ಕು, ಹಸು ಕೂಡ ಮಾನವನ ಭಾಷೆಯನ್ನು ಅರ್ಥ ಮಾಡಿಕೊಳ್ಳಬಲ್ಲವು. ಆದರೆ ನಾಯಿ ಕೂಗಿದರೆ, ಬೆಕ್ಕು ಕೂಗಿದರೆ, ಹಸು ಅಂಬಾ ಎಂದರೆ ಆಧುನಿಕ ಮಾನವನಿಗೆ ಅರ್ಥವಾಗುವುದಿಲ್ಲ. ಅವು ಕೂಗಿದಷ್ಟೂ ಇವನಿಗೆ ಕಿರಿಕಿರಿ ಆಗುತ್ತದೆ ಅಷ್ಟೆ. ನಿಸರ್ಗಕ್ಕೆ ಸಂಬಂಧಿಸಿದಂತೆ ಮನುಷ್ಯ ಬುದ್ಧಿವಂತ ಎನ್ನುವುದು ಭ್ರಮೆ ಅಷ್ಟೆ’ – ಇವು ಲೇಖಕರ ಮಾತುಗಳು. ಆಧುನಿಕರೆಂದು ಭಾವಿಸಿದ ಮನುಷ್ಯರಿಗೂ ನಿಸರ್ಗಕ್ಕೂ ನಡುವೆ ಕ್ರೂರಕಂದಕವೊಂದು ನಿರ್ಮಾಣವಾಗುತ್ತಿರುವ ನೋವು ಈ ನುಡಿಗಳಲ್ಲಿದೆ.

‘ರಾಜಕಾರಣಿಗಳ ಪುಸ್ತಕ ಪ್ರೀತಿ’ – ಉಲ್ಲೇಖಿಸಬೇಕಾದ ಬರಹ. ಈ ಬರಹ ಕೂಡ ಬಂಗಾಳದ ಪ್ರಸಂಗವೊಂದರಿಂದ ಪ್ರಾರಂಭವಾಗುತ್ತದೆ. ಹಿಂದೆ ಮತ್ತು ಇಂದು ಕೆಲವು ರಾಜಕಾರಣಿಗಳಲ್ಲಿರುವ ಪುಸ್ತಕ ಪ್ರೀತಿಯನ್ನು ಪ್ರಸ್ತಾಪಿಸಿ, ಬಹುಪಾಲು ಇಂದಿನ ರಾಜಕಾರಣಿಗಳಲ್ಲಿ ಓದುವ ಅಭಿರುಚಿಯ ಅಭಾವ ಇರುವುದನ್ನು ತೋರಿಸುತ್ತದೆ. ‘ಬೇಕಿರುವುದು ಸೌಹಾರ್ದದ ಮಂದಿರ’ವೆಂಬ ಲೇಖನವು ದೇವರನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ರಾಜಕೀಯವನ್ನು ಕೇಂದ್ರವಸ್ತುವಾಗಿಸಿಕೊಂಡಿದೆ. ಮೂಲ ರಾಮಾಯಣದ ಪ್ರಸಂಗಗಳನ್ನು ವಿವರಿಸುತ್ತಲೇ ಈಗ ಶ್ರೀರಾಮನ ಸುತ್ತ ಹಬ್ಬಿರುವ ರಾಜಕೀಯವನ್ನು ವಿಶ್ಲೇಷಿಸುತ್ತದೆ.

ಶಬರಿಮಲೆ ಪ್ರಕರಣವೂ ಪ್ರಸ್ತಾಪಗೊಂಡಿದೆ. ‘ಎಲ್ಲರ ಹೃದಯಗಳಲ್ಲಿ ಸೌಹಾರ್ದದ ಮಂದಿರ ಬೇಕು’ ಎನ್ನುವುದು ಲೇಖಕರ ಆಶಯವಾಗಿದೆ. ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಪಕ್ಷರಾಜಕೀಯ ಪ್ರವೇಶ ಮಾಡುವುದು ಸಲ್ಲದು ಎಂಬ ಅಭಿಮತವನ್ನು ‘ಕಸಾಪ ಅಂಗಳದಲ್ಲಿ ಕಮಲದ ಕಮಟು’ ಎಂಬ ಲೇಖನ ಸ್ಪಷ್ಟ ನುಡಿಗಳಲ್ಲಿ ತಿಳಿಸುತ್ತದೆ. ಸಾಂಸ್ಕೃತಿಕ ಆರೋಗ್ಯಕ್ಕೆ ಪಕ್ಷ ರಾಜಕೀಯದ ಪ್ರವೇಶದಿಂದಾಗುವ ಅನಾಹುತಗಳ ಅರಿವು ಈ ಲೇಖನದಲ್ಲಿ ಅನಾವರಣಗೊಂಡಿದೆ.

(ಡಾ. ಬರಗೂರು ರಾಮಚಂದ್ರಪ್ಪ)

ರವೀಂದ್ರ ಭಟ್ಟರ ಒಟ್ಟು ಬರಹಗಳ ಒಳಗೊಂದು ಮಾನವೀಯ ತುಡಿತವಿದೆ. ಮಾನವೀಯತೆಗೆ ಧಕ್ಕೆಯಾದಾಗ, ವ್ಯಾಕುಲಗೊಳ್ಳುವ ಮನಸ್ಸಿದೆ. ‘ಬೆತ್ತಲಾಗುತ್ತಲೇ ಇದೆ ಮನುಷ್ಯತ್ವ’ ಎಂಬ ಲೇಖನದಲ್ಲಿ ಮನಸ್ಸಿನ ಮಿಡಿತವಿದೆ. ಚಾಮರಾಜನಗರದಲ್ಲಿ ದಲಿತನೊಬ್ಬ ದೇಗುಲ ಪ್ರವೇಶ ಮಾಡಿದನೆಂದು ಸವರ್ಣೀಯರು ಬೆತ್ತಲೆ ಮೆರವಣಿಗೆ ಮಾಡಿದ್ದು, ಮೈಸೂರಲ್ಲಿ ಬಡ್ಡಿ ಹಣಕ್ಕೆ ಸಾಲಗಾರನ ಮಗಳ ಅಪಹರಣ ಮಾಡಿದ್ದು, ಲೈಂಗಿಕ ದೌರ್ಜನ್ಯ – ಇಂತಹ ಘಟನೆಗಳ ಹಿನ್ನೆಲೆಯಲ್ಲಿ ಮನುಷ್ಯತ್ವವಿಲ್ಲದ ಕ್ರೌರ್ಯಕ್ಕೆ ಮಾನವೀಯ ಮುಖಾಮುಖಿಯಾಗುವ ಲೇಖನವಿದು. ಇದೊಂದು ಪ್ರಾತಿನಿಧಿಕ ಬರಹವೂ ಹೌದು.

ಒಟ್ಟಾರೆ, ಇದ್ದದ್ದನ್ನು ಇದ್ದಂತೆಯೇ ಹೇಳುವುದು ರವೀಂದ್ರ ಭಟ್ಟರ ಬರಹಗಳ ಲಕ್ಷಣ. ನೇರಾ ನೇರ ಮಾತು; ಸಾದಾ ಸೀದ ಅಭಿಪ್ರಾಯ, ಕ್ಲಿಷ್ಟತೆ ಇಲ್ಲ; ಸ್ಪಷ್ಟತೆ ಇದೆ. ಚುಚ್ಚು ಮಾತು ಇಲ್ಲ; ಬಿಚ್ಚು ಮಾತು ಇದೆ. ಬಹುಮುಖ್ಯವಾಗಿ ಸಮಕಾಲೀನ ರಾಜಕೀಯ ವಿದ್ಯಮಾನಗಳ ಸಂಕ್ಷಿಪ್ತ ಇತಿಹಾಸವೂ ಇದೆ. ಈ ಇತಿಹಾಸದ ಅಂಶವು ಘಟನಾವಳಿಗಳ ಉಲ್ಲೇಖದಲ್ಲಿ ದಾಖಲಾಗಿದೆ. ಮುಂದೊಂದು ದಿನ ಇಂದಿನ ವಿದ್ಯಮಾನಗಳು ಇತಿಹಾಸದ ಅಂಶಗಳಾಗಿ ಮುಖ್ಯವಾಗುತ್ತವೆ.


ಪತ್ರಿಕೆಯಲ್ಲಿ ಪ್ರಕಟವಾದಾಗ ಬಿಡಿ ಬಿಡಿಯಾಗಿ ಓದಿದ್ದ ಈ ಬರಹಗಳನ್ನು ‘ಮುನ್ನುಡಿ’ಯ ನಿಮಿತ್ತ ಇಡಿಯಾಗಿ ಓದುವ ಅವಕಾಶ ಒದಗಿದೆ. ಈ ಇಡಿಯಾದ ಓದಿನಿಂದ ರವೀಂದ್ರ ಭಟ್ಟರು ಮತ್ತಷ್ಟು ಅರ್ಥವಾಗಿದ್ದಾರೆ; ಹತ್ತಿರವಾಗಿದ್ದಾರೆ.

(ಕೃತಿ: ರಾಜಕಾರಣದಲ್ಲಿ ನಿಂಬೆ – ಹಾಗಲ(ಅಂಕಣ ಬರಹಗಳು), ಲೇಖಕರು: ರವೀಂದ್ರ ಭಟ್ಟ ಐನಕೈ, ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು, ಬೆಲೆ : ರೂ. 250/-)