ಈ ಲಿಸ್ಟ್ ನಲ್ಲಿದ್ದ ಕೆಲವು ಪ್ರಶ್ನೆಗಳನ್ನು ನೋಡಿ ಗಾಬರಿಯಾಗಿದ್ದು ಹೌದು. ಈ ಹುಡುಗರನ್ನು ಕರೆದುಕೊಂಡು ಹೋಗಿ ಅಲ್ಲಿ ಇರುವುದು ಸಾಧ್ಯವೇ ಎಂಬ ಸಂಶಯ ನನ್ನಲ್ಲಿ ಮೂಡಲು ಶುರುವಾಯಿತು. ಇಲ್ಲಿನ ನಗರ ಜೀವನಕ್ಕೆ ಹೊಂದಿಕೊಂಡಿರುವ ಹುಡುಗರು (ನಾನೂ ಸೇರಿ!) ಹಳ್ಳಿಯಲ್ಲಿ ಹೊಂದಿಕೊಳ್ಳುವುದು ತುಸು ಕಷ್ಟಸಾಧ್ಯ ಅನಿಸಿತಾದರೂ ಈ ಎರಡು ಹುಡುಗರು ಬರಲು ತಯಾರಾಗಿದ್ದು ನನ್ನಲ್ಲಿ ಒಂದು ಹೊಸ ಹುರುಪು ಮೂಡಿಸಿತ್ತು. ಅದರಲ್ಲಿ ವಿನೋದ ಅವರು ಇನ್ನೂ ನೌಕರಿ ಮಾಡಿಕೊಂಡಿದ್ದರು. ಅವರು ಸಧ್ಯಕ್ಕೆ ವಾರಾಂತ್ಯಗಳಲ್ಲಿ ಹಾಗೂ ಕೆಲವು ರಜೆಗಳಲ್ಲಿ ಮಾತ್ರ ತಮಗೆ ಹಳ್ಳಿಗೆ ಬರಲು ಸಾಧ್ಯ ಅಂತ ಕೂಡ ಹೇಳಿದ್ದರು.
ಗುರುಪ್ರಸಾದ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಯಾಯಣ ಅಂಕಣ

ಚಿಕ್ಕವನಿದ್ದಾಗ ನನಗೆ ತುಂಬಾ ಪ್ರಭಾವ ಬೀರಿದ ಒಂದು ಸಿನೆಮಾ ಹಿಂದಿಯ “ದೋ ಅಂಖೆ ಬಾರಾ ಹಾತ್”. ಅದನ್ನು ಮೊದಲ ಸಲ ಕುರ್ತಕೋಟಿಯಲ್ಲಿ ನೋಡಿದ ನೆನಪು. ಅದರಲ್ಲಿ ಜೈಲರ್ ಒಬ್ಬರು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಆರು ಜನ ಕೈದಿಗಳನ್ನು ಬಿಡಿಸಿಕೊಂಡು ಹೋಗಿ ಒಂದು ಬಂಜರು ಭೂಮಿಯಲ್ಲಿ ಮನೆ ಮಾಡಿಕೊಂಡು ಅವರನ್ನು ರೈತರನ್ನಾಗಿಸಿ, ತಮ್ಮ ಕಾಲ ಮೇಲೆ ತಾವು ನಿಲ್ಲುವಂತೆ ಮಾಡುವ ಕತೆ ಅದು. ಅವರ ಪಯಣ ಸರಳವಾಗಿರುವುದಿಲ್ಲ. ಜೈಲಿನಿಂದ ಬಿಡುಗಡೆ ಹೊಂದಿದ್ದರೂ ಜೈಲಿನ ತರಹವೇ ಇದೆ ಎಂಬ ಕೈದಿಗಳ ಅಸಮಾಧಾನದಿಂದಲೇ ಶುರುವಾಗುವ ಅವರ ಪಯಣ ಮುಂದೆ ರೋಚಕ ತಿರುವುಗಳನ್ನು ಕಾಣುತ್ತ ಕೈದಿಗಳು ಮತ್ತೆ ಮನುಷ್ಯರಾಗುವಲ್ಲಿಗೆ ಹೊಸದೊಂದು ಪ್ರಾರಂಭ ಕಾಣುತ್ತದೆ.

“ದೋ ಅಂಖೆ” ಅಂದರೆ ಎರಡು ಕಣ್ಣುಗಳು ಜೈಲರ್ ದು ಹಾಗೂ “ಬಾರಾ ಹಾತ್” ಅಂದರೆ ಹನ್ನೆರಡು ಕೈಗಳು, ಆರು ಜನ ಕೈದಿಗಳವು. ಆ ಸಿನೆಮಾದ ಆಶಯ, ದೃಶ್ಯಗಳು ನನ್ನಲ್ಲಿ ಎಷ್ಟು ಬೇರೂರಿ ಬಿಟ್ಟಿದ್ದವೆಂದರೆ ನಾನೂ ಕೂಡ ಒಂದು ದಿನ ಹಾಗೆಯೆ ಒಂದು ಸಂಘಟನೆ ಮಾಡಬೇಕು ಅಂತ ಚಿಕ್ಕಂದಿನಿಂದಲೂ ಅನಿಸೋದು. ನಾನು ಹೊಲ ಕೊಂಡುಕೊಳ್ಳಲು ಅದೂ ಒಂದು ಸ್ಪೂರ್ತಿಯೇ ಇರಬೇಕು. ಅಂತೂ ಈಗ ಅದಕ್ಕೆ ಸಮಯ ಕೂಡಿ ಬಂದಿತ್ತು!

(“ದೋ ಅಂಖೆ ಬಾರಾ ಹಾತ್” ಚಲನಚಿತ್ರದ ದೃಶ್ಯ)

ಅದೇ ಕಾರಣಕ್ಕೆ ನಾನು ನನ್ನ ಹೊಲದಲ್ಲಿ ಅಂತಹ ಆರು ಜನರನ್ನು ಕರೆದೊಯ್ಯುವ ಸಾಹಸಕ್ಕೆ ಕೈ ಹಾಕಿದ್ದೆ. ಆರು ಜನ ಕೈದಿಗಳ ಬದಲು ನಾನು ಆರಿಸಿಕೊಂಡಿದ್ದು ಕಾರ್ಪೊರೇಟ್ ಜೀವನದಲ್ಲಿ ಸಿಲುಕಿ ಒದ್ದಾಡುತ್ತಿದ್ದ ಕೈದಿಗಳು (ದಯವಿಟ್ಟು ಅಪಾರ್ಥ ಬೇಡ! ಯಾರಿಗೆ ಆ ಜೀವನ ತಮ್ಮದಲ್ಲ ಅಂತ ಅನಿಸುತ್ತದೋ ಅಂಥವರಿಗೆ ಕೈದಿಗಳು ಅಂದಿದ್ದು!) ನನ್ನ ಶಿಷ್ಯಂದಿರಲ್ಲಿ ತುಂಬಾ ಜನ ಅಂಥವರೇ. ನನ್ನ ಹಾಗೆಯೇ IT ಕ್ಷೇತ್ರದಲ್ಲಿ ಸಿಲುಕಿ ಹೊರಬರದೆ ಒದ್ದಾಡುತ್ತಿದ್ದವರು, ಇಲ್ಲವೇ ಹೊರಬಂದು ಏನು ಮಾಡಬೇಕು ಎಂಬ ಅರಿವಿಲ್ಲದವರು. ನಾನಂತೂ ಆ ಸೆರೆಯಿಂದ ಮುಕ್ತನಾಗಿದ್ದೆ, ನನ್ನದೇ ಆದ ಒಂದು ದಾರಿಯನ್ನೂ ಕಂಡುಕೊಂಡಿದ್ದೆ. ಆದರೆ ಬೇರೆಯವರಿಗೂ ಒಂದು ಮಾರ್ಗದರ್ಶನ ನೀಡಬೇಕಲ್ಲ! ಅವರನ್ನು ಅಲ್ಲಿಂದ ಕರೆತಂದು ಮುಕ್ತಗೊಳಿಸುವ ಜೈಲರ್ ನಾನಾಗಬಯಸಿದ್ದೆ!

ನನ್ನ ಈ ರೈತ ಬಳಗವೆಂಬ ಪ್ರಯೋಗಕ್ಕೆ ಆರು ಜನ ಬೇಕು ಅಂತ ಕಳಿಸಿದ್ದ ಇಮೇಲ್ ಗೆ ಆಶ್ಚರ್ಯ ಎಂಬಂತೆ ೧೦ ಜನ ತಮ್ಮ ಆಸಕ್ತಿ ತೋರಿಸಿದ್ದರು. ನನಗೆ ಬರಿ ಆಸಕ್ತಿ ಇರುವವರು ಬೇಕಿರಲಿಲ್ಲ, ಧೃಡ ನಿಶ್ಚಯ ಮಾಡಿದವರು ಬೇಕಿತ್ತು. ಆದರೂ ಇಷ್ಟಾದರೂ ಸಿಕ್ಕ ಸ್ಪಂದನೆ ನನಗೆ ಖುಷಿ ಕೊಟ್ಟಿದ್ದು ಹೌದು. ಅವರೆಲ್ಲರ ಒಟ್ಟಿಗೆ ಸೇರಿಸಿ ಒಂದು ಸಭೆ ಮಾಡಿ ನನ್ನ ಯೋಜನೆಯ ಕುರಿತು ಹೇಳಿದೆ. ಆರು ಜನರನ್ನೇ ಯಾಕೆ ಹುಡುಕುತ್ತಿರುವೆ ಅಂತಲೂ ಹೇಳಿದೆ. ಒಟ್ಟಿನಲ್ಲಿ ನನಗೆ ಹಳ್ಳಿಯಲ್ಲೊಂದು ಸ್ವಪ್ರೇರಿತ, ಪರಸ್ಪರ ಸಹಕಾರ ನೀಡುವ ಕೂಡು ಕುಟುಂಬವೊಂದನ್ನು ನಿರ್ಮಿಸಬೇಕಿತ್ತು. ಅಲ್ಲಿ ಯಾರ ಮೇಲೂ ಅವಲಂಬನೆ ಇರದಂತಹ ಪರಿಸರವನ್ನು ಸೃಷ್ಟಿಸುವುದು ನನ್ನ ಮೂಲ ಉದ್ದೇಶವಾಗಿತ್ತು. ಅಲ್ಲಿನ ಹೆಚ್ಚಿನ ಕೆಲಸಗಳನ್ನು ನಾವೇ ಮಾಡುವುದು, ನಮಗೆ ಬೇಕಾಗಿದ್ದನ್ನೆಲ್ಲ ಬೆಳೆದು ನಮ್ಮಲ್ಲಿ ಹಂಚಿಕೊಳ್ಳುವುದು. ಇದಕ್ಕಿಂತ ದೊಡ್ಡ ಸ್ವರ್ಗ ಬೇರೆಲ್ಲಿರಲು ಸಾಧ್ಯ?!

ಆ ಯೋಜನೆಯ ಕೊನೆಯ ಸುತ್ತಿಗೆ ೬ ಜನ ಉಳಿದರು. ಇಬ್ಬರು ಉತ್ತರ ಭಾರತದವರು. ಮಿಕ್ಕವರು ನಮ್ಮ ಕನ್ನಡದವರು. ಅದರಲ್ಲಿ ಇಬ್ಬರು ಶಿಷ್ಯಂದಿರು ತುಂಬಾ ಸೀರಿಯಸ್ ಆಗಿ ನನ್ನ ಜೊತೆ ಬರಲು ಅಸ್ಥೆ ತೋರಿದರು. ಇಬ್ಬರೂ ಕನ್ನಡದವರೇ. ಒಬ್ಬರ ಹೆಸರು ನಾಗಣ್ಣ ಇನ್ನೊಬ್ಬರು ವಿನೋದ. ಉಳಿದವರು ಕರೋನಾ ಕಾರಣದಿಂದ ಕ್ರಮೇಣ ಹಿಂದೆ ಸರಿದರು.

ನಾಗಣ್ಣ ನನ್ನ ಹಾಗೆಯೇ ಒಂದು ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದವರು, ಆಗಷ್ಟೇ ಕೆಲಸ ಬಿಟ್ಟಿದ್ದರು. ಅವರಿಗೂ ಕೃಷಿ ಮಾಡುವ ಹುಚ್ಚು. ಮನೆಯಲ್ಲಿ ಅಷ್ಟೊಂದು ಬೆಂಬಲವಿರಲಿಲ್ಲ. ಇಂತಹ ಹುಚ್ಚಿಗೆ ಯಾರು ತಾನೇ ಬೆಂಬಲಿಸಿಯಾರು ಅಲ್ಲವೇ? ಆದರೆ ಅಂಥವರಿಗಾಗಿ ನಾನಿದ್ದೇನಲ್ಲ. ನಮ್ಮದು ಹುಂಬತನವೋ, ಹುಚ್ಚೋ ಒಟ್ಟಿನಲ್ಲಿ ನಾವು ಬೇರೆಯವರಿಗಿಂತ ಭಿನ್ನವಾಗಿ ಯೋಚಿಸಿದ್ದಂತೂ ಹೌದು!


ನನ್ನ ಶಿಷ್ಯಂದಿರಲ್ಲಿ ತುಂಬಾ ಜನ ಅಂಥವರೇ. ನನ್ನ ಹಾಗೆಯೇ IT ಕ್ಷೇತ್ರದಲ್ಲಿ ಸಿಲುಕಿ ಹೊರಬರದೆ ಒದ್ದಾಡುತ್ತಿದ್ದವರು, ಇಲ್ಲವೇ ಹೊರಬಂದು ಏನು ಮಾಡಬೇಕು ಎಂಬ ಅರಿವಿಲ್ಲದವರು. ನಾನಂತೂ ಆ ಸೆರೆಯಿಂದ ಮುಕ್ತನಾಗಿದ್ದೆ, ನನ್ನದೇ ಆದ ಒಂದು ದಾರಿಯನ್ನೂ ಕಂಡುಕೊಂಡಿದ್ದೆ. ಆದರೆ ಬೇರೆಯವರಿಗೂ ಒಂದು ಮಾರ್ಗದರ್ಶನ ನೀಡಬೇಕಲ್ಲ!

ನಾಗಣ್ಣ, ತಾವು ಈಗಲೇ ಹಳ್ಳಿಗೆ ಬರಲು ತಯಾರಿದ್ದೇನೆ, ಆದರೆ ತನ್ನವು ಒಂದಿಷ್ಟು ಪ್ರಶ್ನೆಗಳಿವೆ ಅಂದರು. ಅವು ಹೀಗಿದ್ದವು…

೧. ಎಷ್ಟು ಗಂಟೆ ಹೊಲದಲ್ಲಿ ಕೆಲಸ ಮಾಡಬೇಕಾದೀತು

೨. ನಮಗೆ ಪಾರ್ಟ್ ಟೈಮ್ ಅಥವಾ ಆಫೀಸ್ ಕೆಲಸ ಮಾಡೋಕೆ ಅಲ್ಲಿ ಸಮಯ ಸಿಗುತ್ತೆಯೇ?

೩. ಅಲ್ಲಿ ದುಡ್ಡು ಗಳಿಸೋಕೆ ಅವಕಾಶಗಳಿವೆಯೇ?

೪. ದೈಹಿಕ ಶ್ರಮ ತುಂಬಾ ಇರುತ್ತದೆಯೇ?

೫. ಬೇರೆ ರೈತರನ್ನು ಭೇಟಿಯಾಗುವ ಅವಕಾಶ ಇರುತ್ತದೆಯೇ?

೬. ಸರಕಾರದ ರೈತ ಸ್ನೇಹಿ ಯೊಜನೆಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಇರುತ್ತದೆಯೇ?

೭. ಬಾಡಿಗೆ, ಊಟ, ಸಾರಿಗೆಗೆ ಎಷ್ಟು ಖರ್ಚು ಆದೀತು?

೮. ಅಡಿಗೆ ನಾವೇ ಮಾಡಬೇಕೆ? ಅಲ್ಲಿ ವಾಶಿಂಗ್ ಮಷೀನ್ ಇದೆಯೇ / ಅಥವಾ ನಾವೇ ಕೈಯಿಂದ ಒಗೆಯಬೇಕೆ …

ಇತ್ಯಾದಿ ಪ್ರಶ್ನೆಗಳು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಅಲ್ಲಿನ ಪರಿಸರಕ್ಕೆ ಹೊಂದಿಕೊಂಡಿದ್ದ ನಾಗಣ್ಣ ಅವರ ತಲೆಯಲ್ಲಿ ಈ ಪ್ರಶ್ನೆಗಳು ಮೂಡಿದ್ದು ಸಹಜವೇ ಆಗಿತ್ತು. ನಿಜ ಹೇಳಬೇಕೆಂದರೆ ಎಷ್ಟೋ ಪ್ರಶ್ನೆಗಳಿಗೆ ಅಲ್ಲಿ ಹೋಗಿಯೇ ಉತ್ತರ ಕಂಡುಕೊಳ್ಳಬೇಕಿತ್ತು. ಅದನ್ನೇ ಅವರಿಗೆ ಹೇಳಿದೆ ಕೂಡ. ಅಲ್ಲಿಯ ಮನೆಗಳಲ್ಲಿ ಎಷ್ಟು ಮೂಲ ಸೌಕರ್ಯಗಳಿವೆ ಎಂಬುದು ಕೂಡ ಅಷ್ಟೊಂದು ಸ್ಪಷ್ಟ ಇರಲಿಲ್ಲ.

ಆದರೂ ಈ ಲಿಸ್ಟ್ ನಲ್ಲಿದ್ದ ಕೆಲವು ಪ್ರಶ್ನೆಗಳನ್ನು ನೋಡಿ ಗಾಬರಿಯಾಗಿದ್ದು ಹೌದು. ಈ ಹುಡುಗರನ್ನು ಕರೆದುಕೊಂಡು ಹೋಗಿ ಅಲ್ಲಿ ಇರುವುದು ಸಾಧ್ಯವೇ ಎಂಬ ಸಂಶಯ ನನ್ನಲ್ಲಿ ಮೂಡಲು ಶುರುವಾಯಿತು. ಇಲ್ಲಿನ ನಗರ ಜೀವನಕ್ಕೆ ಹೊಂದಿಕೊಂಡಿರುವ ಹುಡುಗರು (ನಾನೂ ಸೇರಿ!) ಹಳ್ಳಿಯಲ್ಲಿ ಹೊಂದಿಕೊಳ್ಳುವುದು ತುಸು ಕಷ್ಟಸಾಧ್ಯ ಅನಿಸಿತಾದರೂ ಈ ಎರಡು ಹುಡುಗರು ಬರಲು ತಯಾರಾಗಿದ್ದು ನನ್ನಲ್ಲಿ ಒಂದು ಹೊಸ ಹುರುಪು ಮೂಡಿಸಿತ್ತು. ಅದರಲ್ಲಿ ವಿನೋದ ಅವರು ಇನ್ನೂ ನೌಕರಿ ಮಾಡಿಕೊಂಡಿದ್ದರು. ಅವರು ಸಧ್ಯಕ್ಕೆ ವಾರಾಂತ್ಯಗಳಲ್ಲಿ ಹಾಗೂ ಕೆಲವು ರಜೆಗಳಲ್ಲಿ ಮಾತ್ರ ತಮಗೆ ಹಳ್ಳಿಗೆ ಬರಲು ಸಾಧ್ಯ ಅಂತ ಕೂಡ ಹೇಳಿದ್ದರು. ಬೆಂಗಳೂರಿನಲ್ಲಿ ನನ್ನ ಸ್ವಂತದ ವ್ಯವಹಾರ ಇದ್ದ ಕಾರಣ ನಾನೂ ಕೂಡ ಬಂದು ಹೋಗಿ ಮಾಡುವವನಿದ್ದೆ. ಹೀಗಾಗಿ ಹಳ್ಳಿಯಲ್ಲಿ ಮನೆ ಮಾಡಿಕೊಂಡು ಹೆಚ್ಚು ದಿನಗಳು ಇರಬೇಕಾಗಿದ್ದು ನಾಗಣ್ಣ ಮಾತ್ರ ಅಂತ ಆಗಿತ್ತು.

ಅವತ್ತೊಂದು ದಿನ ನಾಗಣ್ಣ, ಬೆಂಗಳೂರಿನಲ್ಲಿದ್ದ ನಾವು ಮೂವರೂ ಸೇರಿ ಹಳ್ಳಿಗೆ ಒಂದು ಟ್ರಿಪ್ ಹೋಗಿ ಬರೋಣವೇ ಅಂದರು. ಗಂಟು ಮೂಟೆ ಕಟ್ಟಿಕೊಂಡು ಹೋಗುವ ಮೊದಲು ಹಳ್ಳಿಯನ್ನು ಅವರಿಗೆ ಒಂದು ಸಲ ತೋರಿಸುವುದು ನನಗೂ ಸಮಂಜಸ ಅನಿಸಿ, ಕೂಡಲೇ ಯೋಜನೆ ತಯಾರಾಗಿ ಹೊರಟೆ ಬಿಟ್ಟೆವು. ಅದೂ ನಾಗಣ್ಣ ಅವರ ಜಿಪ್ಸಿ ಗಾಡಿಯಲ್ಲಿ! ಅದೊಂದು ಅದ್ಭುತ ಸವಾರಿ! ಅದರ ಕಿಟಕಿಗಳಿಗೆ ಗಾಜುಗಳೇ ಇಲ್ಲ. ಹೀಗಾಗಿ ಅದು ಚಲಿಸುವಾಗ ಸಿಕ್ಕಾಪಟ್ಟೆ ಸಪ್ಪಳ. ಅದರ ವೇಗ, ಆರ್ಭಟ ನೋಡಿ ಸುಸ್ತಾದೆ. ಅದರ ಜೊತೆಗೆ ಟ್ರಕ್ಕುಗಳಿಗೆ ಹಾಕ್ತಾರಲ್ಲ ಅದೇ ತರದ ಹಾರ್ನು. ಅದಕ್ಕೆ ಬಾಸುರಿ ಅಂತಾರಂತೆ. ಕೊಳಲಿನ ಶಬ್ದವೂ ಕೆಲವು ಸಲ ಇಷ್ಟು ಕರ್ಕಶವಾಗಿರುತ್ತೆ ಎಂಬುದನ್ನು ಮೊತ್ತ ಮೊದಲ ಬಾರಿ ಕೇಳಿ ತಿಳಿದೆ. ಇನ್ನೊಮ್ಮೆ ನಿಮ್ಮ ಜೊತೆ ಜಿಪ್ಸಿಯಲ್ಲಿ ಮಾತ್ರ ಬರಲಾರೆ ಎಂದು ಅವರಿಗೆ ಖಡಾಖಂಡಿತವಾಗಿ ಹೇಳಿದೆ. ಅದೊಂದು ತುಂಬಾ ರಫ್ ಅಂಡ್ ಟಫ್ ಗಾಡಿ. ೨೦೧೯ ರ ನಂತರ ಮಾರುತಿಯವರು ಅದನ್ನು ತಯಾರಿಸುವುದನ್ನು ನಿಲ್ಲಿಸಿದ್ದಾರೆ. ನಾಗಣ್ಣ ಕೊಂಡುಕೊಂಡಿದ್ದು ಅಂತಹ ಲಿಮಿಟೆಡ್ ಎಡಿಷನ್ ಗಾಡಿ ಆಗಿತ್ತು. ಅವರಿಗೆ ಅದರ ಮೇಲೆ ತುಂಬಾ ಅಭಿಮಾನ. ಇರಲಿ ನಮಗೂ ನಮ್ಮ ಜೀವದ ಮೇಲೆ ಅಭಿಮಾನ! ಅವರು ಓಡಿಸುವ ಸ್ಪೀಡಿಗೆ ನನ್ನ ಜೀವ ಕೈಯಲ್ಲೇ ಹಿಡಿದು ಕೂತಿದ್ದು ಹೌದು!

ಅಂತೂ ನನ್ನ ಹೊಲ ಹಾಗೂ ಹಳ್ಳಿಯನ್ನು ನೋಡಿಕೊಂಡು, ಹತ್ತಿರದ ಪಟ್ಟಣವಾದ ಶಿರಸಿಗೂ ಹೋಗಿ ಅವರಿಗೆಲ್ಲ ಪರಿಚಯಿಸಿಕೊಂಡು ಬಂದೆ. ಒಟ್ಟಿನಲ್ಲಿ ನಮ್ಮ ರೈತ ಬಳಗದ ಮೊದಲ ಟೀಂ ತಯಾರಾಗಿತ್ತು. “ನನ್ನ ಎರಡು ಕಣ್ಣುಗಳು, ನಾವು ಮೂವರ ಆರು ಕೈಗಳು” ಸೇರಿ ಮುಂದಿನ ತಯಾರಿ ಶುರು ಮಾಡಿದ್ದೆವು. ಅಲ್ಲೊಂದು ಮನೆ ಹುಡುಕಬೇಕಿತ್ತು, ವಾಶಿಂಗ್ ಮಷೀನ್ ಅಲ್ಲದಿದ್ದರೂ ನಿತ್ಯ ಉಪಯೋಗಿಸುವ ಕೆಲವು ಸಾಮಾನುಗಳನ್ನು ಕೊಳ್ಳಬೇಕಿತ್ತು. ಎಲ್ಲವನ್ನೂ ಯೋಜನೆ ಹಾಕುತ್ತ, ಅದೇ ಜಿಪ್ಸಿಯಲ್ಲಿ ಮತ್ತೆ ಕೈಯಲ್ಲಿ ಅದೇ ಜೀವ ಹಿಡಿದುಕೊಂಡು ಬೆಂಗಳೂರಿನ ಮನೆಗೆ ವಾಪಸ್ಸು ಬಂದು ಬದುಕಿದೆಯಾ ಬಡ ಜೀವವೇ ಅಂತ ನಿಟ್ಟುಸಿರು ಬಿಟ್ಟೆ…

(ಮುಂದುವರಿಯುವುದು)