ಅಮೆರಿಕದ ಜನ ಈಗಲೂ ತಲೆ ತಗ್ಗಿಸಿ ಕತೆ ಹೇಳುವ ತಗ್ಗಿನ ಸ್ಮಾರಕ ‘ವಿಯೆಟ್ನಾಂ ಮೆಮೋರಿಯಲ್’. ವಿಯೆಟ್ನಾಂನಲ್ಲಿ 1955ರಿಂದ 75ರವರೆಗೆ ಸತತ ಇಪ್ಪತ್ತು ವರ್ಷಗಳ ಕಾಲ ಹೋರಾಟ ನಡೆಸಿ ಅಮೆರಿಕ ಕೊನೆಗೂ ಯಶ ಗಳಿಸಲಾಗದೇ ಸೋತು ಹಿಮ್ಮೆಟ್ಟಿದ್ದು ಈ ಮಹಾನ್ ದೇಶಕ್ಕೆ ಎಂದೂ ಮರೆಯಲಾಗದ ಮುಖಭಂಗ. ಆ ಯುದ್ಧದಲ್ಲಿ ಮಡಿದವರಿಗಾಗಿ ಅಮೆರಿಕದಲ್ಲಿ ನಿರ್ಮಿಸಿದ ಸ್ಮಾರಕಗಳಿಗೆ ಕೊಳ್ಳೇಗಾಲದ ‘ವೆರಿಸ್ಪೆಷಲ್’ ಕಲ್ಲುಚಪ್ಪಡಿಗಳನ್ನು ಅಂದರೆ ಗ್ರಾನೈಟನ್ನು ಬಳಸಲಾಗಿದೆ. ಈ ಕಲ್ಲುಚಪ್ಪಡಿಗಳನ್ನು ರೂಪಿಸಲು ಜೀವತೆತ್ತವರಿಗೆ ಸ್ಮಾರಕ ಬೇಡವೇ…
ನಾಗೇಶ್ ಹೆಗಡೆ ಅವರು ಬರೆದ ಗಗನ ಸಖಿಯರ ಸೆರಗ ಹಿಡಿದು ಕೃತಿಯ ಒಂದು ಅಧ್ಯಾಯ ಇಂದಿನ ಓದಿಗೆ.
ಅರ್ಧ ಅಮೆರಿಕವೇ ಅಂದು ಬೀದಿಗೆ ಇಳಿದಂತಿತ್ತು. ರಾಜಧಾನಿ ವಾಷಿಂಗ್ಟನ್ ನಗರದ ರಸ್ತೆ ತುಂಬ ಜನ. ಆಟದ ಮೈದಾನಗಳ ತುಂಬ ಜನ. ಪೊಟೊಮ್ಯಾಕ್ ನದಿಗುಂಟ ನಾವೆಗಳ ತುಂಬ ಜನ. ಉದ್ಯಾನ-ಉಪವನಗಳ ತುಂಬ ಜನ.
ಅಂದು ಅಕ್ಟೋಬರ್ 8, ‘ಕೊಲಂಬಸ್ ಡೇ’.
ಅಮೆರಿಕಾ ಖಂಡವನ್ನು ಶೋಧಿಸಿದ ನಾವಿಕ ಕೊಲಂಬಸ್ನ ನೆನಪಿಗಾಗಿ ಇಡೀ ಅಮೆರಿಕಕ್ಕೆ ರಾಷ್ಟ್ರೀಯ ರಜೆ. ಸರಕಾರ ಮಾತ್ರ ಸಮರ ಸಿದ್ಧತೆ ನಡೆಸಿತ್ತು.
ಟಿವಿಯಲ್ಲಿ ದಿನಕ್ಕೆ ಹತ್ತು ಬಾರಿ ಯುದ್ಧ ಸಿದ್ಧತೆಯ ಸುದ್ದಿ. ಸೌದಿ ಅರೇಬಿಯಾದ ರಣ ರಣ ಬಿಸಿಲಿನಲ್ಲಿ ಬೇಯುತ್ತಿರುವ ಅಮೆರಿಕನ್ ಯುವ ಯೋಧರ ಸುದ್ದಿ. ದಾಳಿಯ ತಾಲೀಮು ಮಾಡುತ್ತಲೇ ಮಡಿದ ಹದಿ ಯುವಕರ ಸುದ್ದಿ. ಅವರ ದೇಶಪ್ರೇಮ, ಅವರ ಧೈರ್ಯ ಶೌರ್ಯ, ಅವರ ಅಪ್ಪ ಅಮ್ಮನ ತ್ಯಾಗದ ಶೋಕದ ವಿದ್ರಾವಕ ದೃಶ್ಯಗಳ ವರ್ಣನೆ. ಮೀಸೆ ಚಿಗುರುವ ಮೊದಲೇ ಫೈಟರ್ ಜೆಟ್ ಪೈಲಟ್ಗಳಾದ ವೀರರ ಸಂದರ್ಶನ. ಅವರ ಗರ್ಲ್ ಫ್ರೆಂಡ್ಗಳ ಸಂದರ್ಶನ.
ಇಷ್ಟೆಲ್ಲ ಲವಲವಿಕೆ ತುಂಬಿದ, ಬಣ್ಣದ ಟಿವಿ ಪೆಟ್ಟಿಗೆಯ ಎದುರು ಈ ಅಮೆರಿಕದ ಜನರು ನಮ್ಮ ಹಾಗೆ ಅಂಟಿ ಕೂರುವ ಬದಲು ರಜಾ ದಿನಗಳಲ್ಲೂ ಯಾಕೆ ಬೀದಿಗೆ ಬಿಸಿಲಿಗೆ ನುಗ್ಗುತ್ತಾರೊ ?
ಹೊರಗಡೆ ರಣಘೋಷ ಮೊಳಗುತ್ತಿತ್ತು: “ಯುದ್ಧ ಬೇಡ, ಶಾಂತಿ ಬೇಕು!” ನಮ್ಮ ಎಳೆ ಯುವಕರನ್ನು ಬಲಿ ಹಾಕಬೇಡಿ”, “ಅರಬರ ಜಗಳದಲ್ಲಿ ತಲೆ ತೂರಿಸಬೇಡಿ” ಎಂದೆಲ್ಲ ಘೋಷಣೆ ಪತ್ರ ಹಿಡಿದ ಜನರು ಚಿತ್ರವಿಚಿತ್ರ ಮುಖವಾಡ ಹೊತ್ತು ಮೆರವಣಿಗೆ ನಡೆಸುತ್ತಿದ್ದರು. ಅವರಷ್ಟೇ ಸಂಖ್ಯೆಯ ಪೊಲೀಸರು, ಅವರಷ್ಟೇ ಸಂಖ್ಯೆಯ ಟಿವಿ ಕ್ಯಾಮರಾಗಳು, ಅವರಷ್ಟೇ ಸಂಖ್ಯೆಯ ಟ್ರಾಫಿಕ್ ವಾರ್ಡನ್ಗಳು.
ಅವರೊಂದಿಗೆ ಬೆರೆಯುತ್ತ ಅವರಿಂದ ಬೇರೆಯಾಗುತ್ತ ಅವರು ನೀಡಿದ ಪೋಸ್ಟರ್ಗಳನ್ನೂ ಅಂಟುಚೀಟಿಗಳ ಹೊರೆಯನ್ನೂ ಕಂಕುಳಲ್ಲಿ ಪೇರಿಸುತ್ತ, ಅವನ್ನೇ ಕಂಡವರಿಗೆ ದಾನ ಕೊಡುತ್ತ ನಾವು ಶ್ವೇತಭವನದ ಎದುರು ಬಂದೆವು. ಅಲ್ಲಿ ಸುಣ್ಣ ಬಳಿಯುವ ಕೆಲಸ ನಡೆಯುತ್ತಿತ್ತು. ಶಾಂತಿ ಸಂಕೇತದ ಪಾರಿವಾಳಗಳು ಅಲ್ಲೆಲ್ಲೂ ಕಪ್ಪು ಚುಕ್ಕಿ ಇಡದಂತೆ ಬಿಳಿ ಬಳಿಯುವ ಕೆಲಸ ಅಲ್ಲಿ ಸದಾ ನಡೆದೇ ಇರುತ್ತದೇನೋ. ಎದುರು ವಿಶಾಲ ಹಾಸಿನಲ್ಲಿ ಅನೇಕರು, ಕಾವಲು ಪಡೆಯವರೇ ಇರಬೇಕು, ಬಿಸಿಲಿಗೆ ಮೈಯೊಡ್ಡಿ ಕಾಯಕ್ಕೆ ಕಾವು ಕೊಡುತ್ತ ಅಡ್ಡಾಡುತ್ತಿದ್ದರು.
‘ಲೆಟಸ್ ಗೋ ಟು ಪೊಟೊಮ್ಯಾಕ್’ ಎಂದಳು, ಜತೆಗಾರ್ತಿ ಶಾನನ್. ಪೊಟೊಮ್ಯಾಕ್ ನದಿಯ ದಂಡೆಯಲ್ಲಿ ಕಣ್ಣ ಹಾಯಿಸಿದಷ್ಟು ದೂರವೂ ಹಸಿರೇ ಹಸಿರು. ಕಾಲು ಸೋಲುವಷ್ಟು ಸುತ್ತಿದರೂ ನೋಡಿ ಮುಗಿಯದಷ್ಟು ಸುಂದರ ಸ್ಮಾರಕಗಳು. ಗಗನಚುಂಬಿ ವಾಷಿಂಗ್ಟನ್ ಮೆಮೋರಿಯಲ್; ಅರವತ್ತಾಳೆತ್ತರ ಲಿಂಕನ್ ಮೈಮೋರಿಯಲ್; ಹೆಡಿಗೆ ಗಾತ್ರದ ತಲೆ ಹೊತ್ತ ಐನ್ಸ್ಟೀನ್ ಪ್ರತಿಮೆ.
‘ಕತ್ತು ನೋಯುತ್ತದೆಯೆ? ಎತ್ತರ ಸ್ಮಾರಕ ನೋಡಿದ್ದು ಸಾಕು. ತಗ್ಗಿನ ಸ್ಮಾರಕ ನೋಡೋಣ ಬನ್ನಿ’ ಎಂದಳು ಶಾನನ್.
ಅಮೆರಿಕದ ಜನ ಈಗಲೂ ತಲೆ ತಗ್ಗಿಸಿ ಕತೆ ಹೇಳುವ ತಗ್ಗಿನ ಸ್ಮಾರಕ ‘ವಿಯೆಟ್ನಾಂ ಮೆಮೋರಿಯಲ್’. ವಿಯೆಟ್ನಾಂನಲ್ಲಿ 1955ರಿಂದ 75ರವರೆಗೆ ಸತತ ಇಪ್ಪತ್ತು ವರ್ಷಗಳ ಕಾಲ ಹೋರಾಟ ನಡೆಸಿ ಅಮೆರಿಕ ಕೊನೆಗೂ ಯಶ ಗಳಿಸಲಾಗದೇ ಸೋತು ಹಿಮ್ಮೆಟ್ಟಿದ್ದು ಈ ಮಹಾನ್ ದೇಶಕ್ಕೆ ಎಂದೂ ಮರೆಯಲಾಗದ ಮುಖಭಂಗ. ಆ ಸತತ ಯುದ್ಧದಲ್ಲಿ ಅಂದಾಜು 20 ಸಾವಿರ ಕೋಟಿ (200,000,000,000) ಡಾಲರ್ ವೆಚ್ಚವಾಯಿತು. ಅಮೆರಿಕದ ಸುಮಾರು ಅರವತ್ತು ಸಾವಿರ ಯೋಧರು ಮಡಿದರು. ಚುರುಕು ಬುದ್ದಿಯ, ಅನುಕೂಲಸ್ಥ ಕುಟುಂಬದ ಹುಡುಗರು ಕಾಲೇಜಿನಲ್ಲಿ ಓದಲು ಹೋದರೆ, ದಡ್ಡರನ್ನೂ ದನಿ ಇಲ್ಲದವರನ್ನೂ ಹುಂಬರನ್ನೂ ಹುರಿದುಂಬಿಸಿ ವಿಯೆಟ್ನಾಂ ರಣಭೂಮಿಗೆ ಕಳಿಸಲಾಯಿತು. ಯುದ್ಧ ಕೊನೆಗೂ ಕೊನೆಗೊಂಡಾಗ ಅಮೆರಿಕದ ಪ್ರಜೆಗಳ ಪಾಲಿಗೆ ಕಹಿ ನೆನಪು ಮಾತ್ರ ಉಳಿಯಿತು.
ಅಮೆರಿಕ ಸರಕಾರ ಈ ಕರಾಳ ಚರಿತ್ರೆಯ ಸ್ಮಾರಕ ನಿರ್ಮಿಸಲು ಇಷ್ಟಪಡಲಿಲ್ಲ. ಆದರೆ ಬದುಕಿ ಬಂದ ಮಾಜಿ ಯೋಧರು ಬಿಡಲಿಲ್ಲ. ಅವರ ಒತ್ತಾಯಕ್ಕೆ ಕಟ್ಟುಬಿದ್ದು ಸರಕಾರ ಕೊನೆಗೂ ಸ್ಮಾರಕಕ್ಕೆ ಸಮ್ಮತಿ ನೀಡಿತು. ಅತ್ಯಂತ ವಿಶಿಷ್ಟವಾದ ಸ್ಮಾರಕ ನಿರ್ಮಿಸಲೆಂದು ಮಾಜಿ ಯೋಧರು ರಾಷ್ಟ್ರೀಯ ಸ್ಪರ್ಧೆ ಏರ್ಪಡಿಸಿದರು. ಸಹಸ್ರಾರು ಹಿರಿಕಿರಿಯ ತಜ್ಞರೂ ವಾಸ್ತುಶಿಲ್ಪಿಗಳೂ ತಮ್ಮ ತಮ್ಮ ವಿನ್ಯಾಸ ಸಲ್ಲಿಸಿದರು.
ಮಾಯಾ ಯಿಂಗ್ ಲಿನ್ ಎಂಬ ಚೀನೀ ಮೂಲದ 21ರ ಹರಯದ ವಾಸ್ತುಶಿಲ್ಪ ವಿದ್ಯಾರ್ಥಿನಿ ಕೂಡಾ ಈ ಸ್ಫರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದಳು. ಯೇಲ್ ವಿಶ್ವವಿದ್ಯಾನಿಲಯದಿಂದ ಹೀಗೇ ಪೊಟೋಮ್ಯಾಕ್ ನದಿ ತೀರದ ಗಿಡಮರಗಳ ಮಧ್ಯೆ ಹುಲ್ಲು ಹಾಸಿನ ಮೇಲೆ ನಮ್ಮ ಹಾಗೇ ಕಾಲ್ನಡಿಗೆಯಲ್ಲಿ ಬಂದಳು – ಸ್ಥಾರಕಕ್ಕೆ ಮೀಸಲಾದ ಸ್ಥಳ ನೋಡಿದ ನಂತರವೇ ಸ್ಮಾರಕದ ವಿನ್ಯಾಸ ರೂಪಿಸುವ ಉದ್ದೇಶ ಅವಳದ್ದಾಗಿತ್ತು.
ಆಕೆ ಬಂದಳು, ಸ್ಥಳ ನೋಡಿದಳು, ಗೆರೆ ಎಳೆದಳು, ಬಹುಮಾನ ಗೆದ್ದೇಬಿಟ್ಟಳು.
“ಇದೇ ನೋಡಿ ಆ ಸ್ಮಾರಕ !” ಎಂದು ಹಠಾತ್ತಾಗಿ ಶಾನನ್ ಉದ್ಗರಿಸಿ ನಮ್ಮ ಕಾಲ ಬಳಿ ಕೈ ಬೆರಳು ತೋರಿದಾಗ ನಾನು ಹಿಮ್ಮೆಟ್ಟಿದೆ. ಇನ್ನೂ ಮೈಲುಗಟ್ಟಲೆ ನಡೆಯಬೇಕೆಂದು ಊಹಿಸಿದವನಿಗೆ, ಸಮೀಪದಲ್ಲೇ ಯಾವ ಮುನ್ಸೂಚನೆ ಇಲ್ಲದೇ ಧಿಗ್ಗನೆ ವಿಯೆಟ್ನಾಂ ಸ್ಮಾರಕ ಎದುರಾಗಿತ್ತು. ನಮ್ಮ ಬಾಯಿ ಕಟ್ಟಿತ್ತು.
ಪ್ರಾಯಶಃ ವಿಯೆಟ್ನಾಂ ಯೋಧರು ಹೀಗೇ ಅನಿರೀಕ್ಷಿತವಾಗಿ ಧುತ್ತೆಂದು ಎರಗಿ ಅಮೆರಿಕದ ಸೈನಿಕರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಿರಬೇಕು. ಅದಕ್ಕೇ ಈ ಬಗೆಯ ಸ್ಮಾರಕವೆ ?
ಹಾಗಲ್ಲ; ವಿಯೆಟ್ನಾಂ ಯುದ್ಧವೆಂದರೆ ಅಮೆರಿಕನ್ ಪ್ರಜೆಗಳ ಪಾಲಿಗೆ ಎಂದೂ ಮಾಸದ ಗಾಯ. ಎದೆಯಾಳದಲ್ಲಿ ಸದಾ ನೋವಿರುವ ತಿವಿತ. ಅದರ ಪ್ರತಿರೂಪವಾಗಿ ಇಲ್ಲಿ ಈ ಸಮತಟ್ಟು ನೆಲದಲ್ಲಿ ಆಳವಾದ ‘ಗಾಯ’ ಮಾಡಿ ಸ್ಮಾರಕ ಸೂಚಿಸಿದ್ದಾಳೆ. ಮಾಯಾ ಯಿಂಗ್ ಲಿನ್.
ಈ ಹೊಂಡ ಹೇಗಿದೆ ಎಂದರೆ, ಭಾರೀ ಗಾತ್ರದ ತ್ರಿಕೋನಾಕೃತಿಯ ಗುದ್ದಲಿಯನ್ನು ಹಸಿ ನೆಲಕ್ಕೆ ಇಳಿಸಿ ಬಲವೊತ್ತಿ ಒಮ್ಮೆಲೇ ಮಣ್ಣನ್ನು ದೂರ ಚಿಮ್ಮಿದಾಗ ಉಂಟಾಗುವ ತಗ್ಗಿನಂತಿದೆ. ಹೀಗೆ ನಿರ್ಮಿತವಾದ ಕಡಿದಾದ ಗೋಡೆಗೆ ಕನ್ನಡಿ ಜೋಡಿಸಿದ ಹಾಗೆ ಕಪ್ಪು ಗ್ರಾನೈಟ್ ಹಲಗೆಗಳನ್ನು ನಿಲ್ಲಿಸಲಾಗಿದೆ. ಅವುಗಳ ಪಕ್ಕದಲ್ಲಿ ಇಳಿಜಾರು ಹಾದಿಗುಂಟ ಈ ತಗ್ಗಿನಲ್ಲಿ ಸಾಗುತ್ತ ಹೋದ ಹಾಗೆ ನಮ್ಮ ಬಲಗಡೆಗೆ ಒಂದರ ಪಕ್ಕ ಒಂದರಂತೆ ಜೋಡಿಸಿ ನಿಲ್ಲಿಸಿದ ಶಿಲಾ ಹಲಗೆಗಳು ಕಾಣುತ್ತವೆ. ಇಳಿದು, ತಗ್ಗಿನ ಮಧ್ಯಭಾಗಕ್ಕೆ ಬಂದಂತೆ ಗ್ರಾನೈಟ್ ಹಲಗೆಗಳು ಉದ್ದವಾಗುತ್ತ ಆಗುತ್ತ ಹದಿಮೂರಡಿ ಆಳದಲ್ಲಿ ನಿಂತಿರುವುದನ್ನು ಕಾಣುತ್ತೇವೆ. ಹಾಗೆಯೇ ಮುಂದುವರೆದು ತ್ರಿಕೋನದ ಇನ್ನೊಂದು ಭುಜದಗುಂಟ ಸಾಗಿದರೆ ಕಲ್ಲು ಹಲಗೆಗಳು ಗಿಡ್ಡವಾಗುತ್ತ ಆಗುತ್ತ ಬಂದಂತೆ ನಾವು ತಗ್ಗಿನಿಂದ ಮೇಲೆದ್ದು ನಮಗರಿವಿಲ್ಲದೇ ನೆಲಮಟ್ಟ ತಲುಪಿರುತ್ತೇವೆ.
ನಮಗರಿವಿಲ್ಲದೇ ತಲುಪಿರುತ್ತೇವೆ. ಏಕೆಂದರೆ ಈ ಕರಿ ಕಲ್ಲು ಹಲಗೆಗಳು ಅಷ್ಟು ಮೋಹಕವಾಗಿವೆ. ಕನ್ನಡಿಯಂತೆ, ನಿಚ್ಚಳ ಪ್ರತಿಬಿಂಬ ಮೂಡಿಸುವ ಈ ಹಲಗೆಗಳ ಮೇಲೆ ಸಾಲಾಗಿ ಎಲ್ಲ 57,692 ಮೃತ ಯೋಧರ ಹೆಸರುಗಳನ್ನು ಮುದ್ದಾಗಿ ಕೊರೆಯಲಾಗಿದೆ.
ಆ ಅಷ್ಟೂ ಸಾವಿರ ಹೆಸರುಗಳ ಮಧ್ಯೆ ತಮ್ಮ ಬಿಂಬವನ್ನೇ ನೋಡುತ್ತ ಕಂಬನಿ ಮಿಡಿಯುತ್ತ ಬಂಧು ಬಾಂಧವರ ಹೆಸರು ಹುಡುಕುತ್ತ, ತಡವುತ್ತ ಹೂ ಗುಚ್ಚ ಏರಿಸುತ್ತ, ಶಾಂತಿಗಾಗಿ ಪ್ರಾರ್ಥಿಸುತ್ತ ನಿಂತ ನೂರಿನ್ನೂರು ಮಂದಿ ಅಲ್ಲಿ ಎಂದೆಂದೂ ಕಾಣ ಸಿಗುತ್ತಾರೆ. ದೇಶದ ಗೌರವ ಕಾಪಾಡಲೆಂದು ದೂರ ದೇಶದಲ್ಲಿ ಪ್ರಾಣ ತೆತ್ತ ಮಗನನ್ನೋ, ಅಣ್ಣನನ್ನೋ, ತಂಗಿಯನ್ನೋ, ನೆನೆಸಿಕೊಂಡು, ಹುಟ್ಟು ಹಬ್ಬದ ದಿನ ಎರಡು ಹನಿ ಕಣ್ಣೀರು ಸುರಿಸಿ ಹೋಗಲು ಬಂದವರು ಹೆಜ್ಜೆ ಹೆಜ್ಜೆಗೆ ಎಡತಾಕುತ್ತಾರೆ.
ಪ್ರಾಣತೆತ್ತ ಯೋಧರ ಹೆಸರುಗಳನ್ನು ಇಲ್ಲಿ ಅಕಾರಾದಿಯಾಗಿ ಬರೆದಿಲ್ಲ. ಹಾಗೆ ಬರೆದಿದ್ದಿದ್ದರೆ ಐದು ನೂರು ಜಾನ್ ರಾಬರ್ಟ್ಗಳೂ, ಆರೆಂಟು ನೂರು ಬಿಲ್ ಹ್ಯಾರಿಸನ್ಗಳೂ, ಮೂರು ನಾಲ್ಕು ನೂರು ಎಡ್ವರ್ಡ್ಗಳೂ ಒಂದೇ ಕಡೆ ಬಂದು ಇನ್ನಷ್ಟು ಗೊಂದಲ ಆಗುತ್ತಿತ್ತು. ಹೂಗುಚ್ಛ ಏರಿಸ ಬಂದವರು, ಕೈಪಿಡಿಯಲ್ಲಿ ಸೂಚಿಸಿದ ಸೂತ್ರದ ಪ್ರಕಾರ ತಮ್ಮ ಬಂಧುವಿನ ಹೆಸರು ಎಲ್ಲಿದೆ ಎಂದು ಪತ್ತೆ ಮಾಡುತ್ತಾರೆ. ಕಣ್ಣು ಮಂಜು ಮಾಡಿಕೊಂಡು ಬ್ರೇಲ್ಲಿಪಿ ಓದುವವರ ಹಾಗೆ ಅಲ್ಲಿ ಕೊರೆದ ಅಕ್ಷರಗಳನ್ನು ತಡವುತ್ತಾರೆ.
‘ವಿಯೆಟ್ನಾಂನಲ್ಲಿ ಮಡಿದ ಯೋಧರ ಸರಾಸರಿ ವಯಸ್ಸು ಎಷ್ಟಿತ್ತು ಗೊತ್ತೆ? ಹದಿನೆಂಟು ವರ್ಷ, ಎಂಟು ತಿಂಗಳು. ಕೇವಲ ಹದಿನೆಂಟು ವರ್ಷ ಎಂಟು ತಿಂಗಳು!’ ಶಾನನ್ ಒತ್ತಿ ಹೇಳುತ್ತಾಳೆ.
“ಜಗತ್ತನ್ನೇ ಸರಿಯಾಗಿ ಕಣ್ಣುಬಿಟ್ಟು ನೋಡಿರದ ಈ ಎಳೆಯರನ್ನು ನಮ್ಮ ದೇಶ ಬಲಿ ಕೊಟ್ಟಿದೆ. ಇವರ ಶವ ಪೆಟ್ಟಿಗೆಗಳನ್ನು ಒಂದರ ಪಕ್ಕ ಒಂದರಂತೆ ಇಡುತ್ತ ಹೋಗಿದ್ದಿದ್ದರೆ ಮೂವತ್ತು ಮೈಲ್ ಉದ್ದದ ಸಾಲು ಆಗುತ್ತಿತ್ತು” ಎನ್ನುತ್ತಾಳೆ.
ಇವಳಿಗೆ ಅಂದಾಜೇ ಇಲ್ಲ. ಅದೇ ಯುದ್ಧದಲ್ಲಿ ತಮ್ಮ ಮಾತೃಭೂಮಿಯ ರಕ್ಷಣೆಗೆಂದು ಹೋರಾಡಿ ಮಡಿದ ವಿಯೆಟ್ನಾಮೀ ಯುವ ಯೋಧರ ಶವಗಳನ್ನೆಲ್ಲ ಭುಜಕ್ಕೆ ಭುಜ ತಾಗಿಸಿ ಮಲಗಿಸಿದರೆ ನೂರ ಎಂಭತ್ತು ಮೈಲ್ ಉದ್ದದ ಸಾಲು ಕಾಣುತ್ತಿತ್ತು.
“ಇಷ್ಟೇ ಅಲ್ಲ ಇವರೇ, ಈ ಯುದ್ಧ ಸಂದರ್ಭದಲ್ಲಿ ಪ್ರಾಣತೆತ್ತ ವೈದ್ಯರು, ದಾದಿಯರು, ಅಡುಗೆಯವರು, ಸರಂಜಾಮು ವಾಹಕರು, ರೆಡ್ಕ್ರಾಸ್ ಸೇವಕರು ಇವರನ್ನೆಲ್ಲ ಈ ಸ್ಮಾರಕದಲ್ಲಿ ಪ್ರತ್ಯೇಕವಾಗಿ ಹೆಸರಿಸಿಯೇ ಇಲ್ಲ ಅವರೆಲ್ಲರ ಪರವಾಗಿ ಈ ಒಂದು ಪುಟ್ಟ ಕಲ್ಲು ನೆಟ್ಟಿದ್ದಾರೆ ನೋಡಿ” ಎಂದು ತೋರಿಸುತ್ತಾಳೆ. ಅಷ್ಟು ಹೊತ್ತಿಗೆ ನಾವೆಲ್ಲ ತಗ್ಗಿನಿಂದ ಮೇಲೆದ್ದು ನೆಲಮಟ್ಟಕ್ಕೆ ಬಂದಿದ್ದೆವು.
“ಹಾಗಿದ್ದರೆ ಇನ್ನೂ ಒಂದು ಪುಟ್ಟ ಕಲ್ಲು ನೆಡಬೇಕಿತ್ತು ಇಲ್ಲೇ” ಎಂದು ನಾನು ಮಧ್ಯೆ ಬಾಯಿ ಹಾಕಿದೆ. ಆಚೀಚಿನ ಜನ ನನ್ನತ್ತ ನೋಡಿದರು.
“ಯಾಕೆ ?” ಎಂದಳು ಈಕೆ.
“ಯಾಕೆಂದರೆ ಈ ‘ವೆರಿ ಸ್ಪೆಶಲ್’ ಗ್ರಾನೈಟ್ ಕಲ್ಲುಗಳನ್ನು ನನ್ನ ತಾಯ್ನಾಡಿನಿಂದ ಒಡೆದು ಸಾಗಿಸಿ ತರಿಸಿ ನೆಟ್ಟಿದ್ದೀರಿ ನೀವು. ಈ ಕಲ್ಲುಗಳಿಗಾಗಿ ಜೀವ ತೆತ್ತವರಿಗೂ ಒಂದು ಸ್ಮಾರಕ ಬೇಡವೆ?” ಕೇಳಿದೆ.
ತೆಳ್ಳನ್ನ ಬೆಳ್ಳನ್ನ ಕೋಲುಮುಖದ ಈ ಯುವತಿ ಒಂದು ಕ್ಷಣದ ಮಟ್ಟಿಗೆ ಟ್ಯೂಬ್ಲೈಟ್ ಆದಳು. ಬೆಪ್ಪಾಗಿ, ಪಕಪಕ ನಕ್ಕು ಮಿಂಚು ಹೊಳೆದಂತೆ ಛಕ್ಕೆಂದು ಪ್ರಭೆ ಹೊಮ್ಮಿದಳು.
“ಹೌದು, ನಾನು ಹೇಳಲು ಮರೆತೇಬಿಟ್ಟಿದ್ದೆ; ಈ ಸುಂದರ ಕಲ್ಲುಗಳನ್ನು ಇಂಡಿಯಾದಿಂದ ತರಿಸಿದ್ದು. ಅವುಗಳ ಹೊಳಪು, ಗಾಂಭೀರ್ಯ ನೋಡಿ. ಶೋಕತಪ್ತರ ಭಾವನೆಗಳನ್ನು ಹೇಗೆ ಪ್ರತಿಫಲಿಸುತ್ತವೆ ನೋಡಿ” ಅಂದಳು ಲಲನೆ.
“ಹಾಗಲ್ಲ ಮೇಡಂ”, ಸೌಂದರ್ಯ, ಗಾಂಭೀರ್ಯ ಎಲ್ಲ ಬದಿಗೊತ್ತಿ ಹೇಳಿದೆ: “ಈ ಕಲ್ಲು ಚಪ್ಪಡಿಗಳನ್ನು ಕೊಳ್ಳೇಗಾಲದ ಕಾಡಿನಿಂದ ಎತ್ತಿ ತಂದಿದ್ದಾರೆ. ನನ್ನೂರಿನ ಕಾಡನ್ನು ಇದಕ್ಕೆಂದೇ ಧ್ವಂಸ ಮಾಡಿದ್ದಾರೆ. ಡೈನಮೈಟ್ ಸಿಡಿಸಿ, ವನ್ಯಜೀವಿಗಳನ್ನು ಓಡಿಸಿ, ನೀರಿನ ಸೆಲೆಯನ್ನು ಬತ್ತಿಸಿ, ಕಲ್ಲಿನ ಚಕ್ಕೆ ಚೂರುಗಳನ್ನು ಅಲ್ಲೇ ಚಲ್ಲಾಪಿಲ್ಲಿ ಮಾಡಿ, ಇಲ್ಲಿ ತಂದು ಪಾಲಿಶ್ ಮಾಡಿದ್ದಾರೆ. ಅಲ್ಲಿ ನಮ್ಮೂರಿನಲ್ಲಿ ಬಂಡೆಯಡಿ ಸಿಕ್ಕಿ ಸತ್ತ ಕೂಲಿನಾಲಿಗಳ ಲೆಕ್ಕ ಯಾರೂ ಇಟ್ಟಿಲ್ಲ. ದೂಳು, ಕೆಮ್ಮು ದಮ್ಮು ಕ್ಷಯರೋಗಕ್ಕೆ ಬಲಿಯಾದವರ ಲೆಕ್ಕ ಇಟ್ಟಿಲ್ಲ. ಬಾಂಬ್ ದಾಳಿಗೆ ತುತ್ತಾದ ವಿಯೆಟ್ನಾಮಿನ ಅರಣ್ಯಗಳ ಹಾಗೆ ನಮ್ಮ ಊರಿನ ಅರಣ್ಯಗಳೂ ಈ ಸ್ಮಾರಕಗಳಿಗಾಗಿ ಭಗ್ನಗೊಂಡಿವೆ. ಅಸಂಖ್ಯ ಜೀವಜಂತುಗಳ ಬಲಿದಾನ ಆಗಿದೆ. ಅವುಗಳ ಸ್ಮರಣೆಗೆ ಒಂದು ಪುಟ್ಟ ಕಲ್ಲನ್ನು ಇಲ್ಲೇ ನೆಡಬೇಕಿತ್ತು” ಎಂದೆ.
ಕೊಂಚಕಾಲ ಸ್ಮಶಾನ ಮೌನ.
“ನಮಗೆ ಗೊತ್ತೇ ಇರಲಿಲ್ಲ ಇವೆಲ್ಲ” – ಎಂದಳು, ತಗ್ಗಿದ ದನಿಯಲ್ಲಿ ಶಾನನ್. ಮರುಕ್ಷಣವೇ ಅವಳಿಗೆ ಅಮೆರಿಕನ್ ಪ್ರಜ್ಞೆ ಮರಳಿತು.
ʼನಾವು ತುಂಬ ಹಣಕೊಟ್ಟು ಈ ಚಪ್ಪಡಿಗಳನ್ನು ಖರೀದಿಸಿದ್ದೇವೆʼ, “ಆ ಹಣ ಏನಾಯಿತು?” ಎಂಬಂತೆ ನೋಡಿದಳು.
ಅದೂ ನಿಜವೇ. ಅಮೆರಿಕದ ಗಣಿಗಳಿ೦ದಲೇ ಈ ಗ್ರಾನೈಟ್ ಎತ್ತಿದ್ದಿದ್ದರೆ ಪ್ರಾಯಶಃ ಅದರಿಂದ ದೊರೆತ ಹಣದ ದೊಡ್ಡ ಪಾಲು ಗಣಿ ಪರಿಸರದ ಪುನರುತ್ಥಾನಕ್ಕೆ ಹಾಗೂ ಗಣಿ ಕಾರ್ಮಿಕರ ಕಲ್ಯಾಣಕ್ಕೆ ಹಿಮ್ಮುಳುಮೆ ಆಗುತ್ತಿತ್ತು. ಭಾರತದಲ್ಲಿ ಅದೆಲ್ಲಿ ಸಾಧ್ಯ? ಡಾಲರ್ ಹಣದ ಬಹುಪಾಲು ಬೆಂಗಳೂರಿಗೆ ಬಂತು ನಿಜ. ಆದರೆ ಭ್ರಷ್ಟ ಅಧಿಕಾರಿಗಳಿಗೆ ಬೆನ್ನುಲುಬಾಗಿ ನಿಂತ ರಾಜಕಾರಣಿಗಳಿಗೆ, ಅವರ ಪಾರ್ಟಿ ನಿಧಿಗೆ, ಮಧ್ಯವರ್ತಿ ದಲ್ಲಾಳಿಗೆ ಹಣದ ಹಲವು ಪಾಲು ಹರಿಯುತ್ತಲೇ ಹೋಯಿತು. ಗಣಿ ಇನ್ನಷ್ಟು ಆಳ, ಅಗಲವಾಗುತ್ತಲೇ ಹೋಯಿತು. ಈಗ ಕೊಲ್ಲಿ ಯುದ್ಧದಲ್ಲಿ ಮಡಿದವರಿಗಾಗಿ ಇನ್ನೊಂದು ಸ್ಮಾರಕ ತಲೆ ಎತ್ತಿದರೆ ಕೊಳ್ಳೇಗಾಲದ ಗಣಿ ಇನ್ನಷ್ಟು ಆಳವಾಗುತ್ತವೆ.
ಕೊಳ್ಳೇಗಾಲದ ನಿಸರ್ಗ ಸಂಪತ್ತೂ ಪೂರ್ತಿ ಕೊಳ್ಳೆ ಹೋಗುತ್ತದೆ. ಶ್ರೀಗಂಧ, ಆನೆ ದಂತಗಳಂತೂ ವೀರಪ್ಪನ್ ಕೃಪೆಯಿಂದಾಗಿ ಕೈಬಿಟ್ಟು ಹೋದವು. ಹಿಟ್ಲರ್ನ ಕಾಲದಲ್ಲಿ ಯಹೂದ್ಯರಿಗೆ ಒದಗಿದ ಸ್ಥಿತಿಯ ಹಾಗೆ ಇಲ್ಲಿನ ವನ್ಯಜೀವಿಗಳೆಲ್ಲ ದಂತ, ಕೊಂಬು, ಗೊರಸು, ತೊಗಲುಗಳಾಗಿ ಬಿಡಿಬಿಡಿಯಾಗಿ ಪೆಟ್ಟಿಗೆ ಸೇರಿ ದೂರ ಸಾಗಿದವು.
ಕರ್ನಾಟಕದ ಅತ್ಯಂತ ಸಮೃದ್ಧ ವನ್ಯ ಸಂಪತ್ತಿದ್ದ ಈ ಪ್ರದೇಶ ಈಗ ಭಣಗುಡುತ್ತಿದೆ. ಜನವರಿಯಲ್ಲೇ ಹಳ್ಳಕೊಳ್ಳ ಹಾಗಿರಲಿ, ಪಾಲಾರ್ ನದಿ ಕೂಡಾ ಬತ್ತಿ ಹೋಗಿದೆ. ಮಳೆ ಸುರಿಯುತ್ತಿಲ್ಲ. ಆದರೆ ಪೊಲೀಸರ ಏಕೆ-47 ರೈಫಲ್ಗಳಿಂದ ಗುಂಡಿನ ಮಳೆ ಅಲ್ಲಲ್ಲಿ ಸುರಿಯುತ್ತಿದೆ –ವೀರಪ್ಪನ್ ತಂಡವನ್ನು ಬೇಟೆಯಾಡಲು ಒಣ ಅರಣ್ಯವನ್ನು ಜಾಲಾಡಲಾಗುತ್ತಿದೆ.
ಅಳಿದುಳಿದ ವನ್ಯಪ್ರಾಣಿಗಳು ಎಲ್ಲಿ ಹೋಗಬೇಕು? ಹನ್ನೆರಡು ಗಣಿ ಕಂಪನಿಗಳು ಅದೇ ರಕ್ಷಿತ ಅರಣ್ಯದಲ್ಲಿ ಗ್ರಾನೈಟ್ ಬಂಡೆ ಒಡೆದು ಸಾಗಿಸಲು ಗುತ್ತಿಗೆ ಪಡೆದಿವೆ. ಮೊದಲು ಸರಕಾರಿ ಸ್ವಾಮ್ಯದ ‘ಮೈಸೂರು ಮಿನರಲ್ಸ್’ ಕಂಪನಿ ಸೇರಿದಂತೆ ಮೂರು ಕಂಪನಿಗಳು ಇಲ್ಲಿ ಗುಡ್ಡ ಸೀಳುತ್ತಿದ್ದವು. ಈಗ ಅಮೆರಿಕ ಜಪಾನ್ಗಳಿಗೆ ಗ್ರಾನೈಟ್ ರಫ್ತು ಮಾಡಲೆಂದು ಹೊಸ ಹೊಸ ಕಂಪನಿಗಳು ಅರಣ್ಯಕ್ಕೆ ದಾಳಿ ಇಕ್ಕುತ್ತಿವೆ. ಅವುಗಳ ಒಂದೊಂದು ಡೈನಮೈಟ್ ಸಿಡಿತ ಮೂವತ್ತು ಕಿಲೊಮೀಟರ್ ದೂರದವರೆಗಿನ ಪರ್ವತ ಶ್ರೇಣಿಯಲ್ಲಿ ಪ್ರತಿಧ್ವನಿಸುತ್ತದೆ. ಅಹೋರಾತ್ರಿ ಭಾರೀ ಲಾರಿಗಳು ಕಾಡಿನ ಮಧ್ಯೆ ಡೊಂಕು ಘಟ್ಟಗಳಲ್ಲಿ ಗಂವ್ಗುಡುತ್ತ ಸಾಗುತ್ತವೆ. ಜಿಂಕೆ, ಕಡವೆಗಳು ಬಾಯಾರಿಕೆಗೆಂದು ಅತ್ತ ಹೋದರೆ ಲಾರಿ, ಇತ್ತ ಹೋದರೆ ಗಣಿ, ಪೂರ್ವಕ್ಕೆ ಹೋದರೆ ಪೊಲೀಸರ ಹಾವಳಿ; ಪಶ್ಚಿಮಕ್ಕೆ ಹೋದರೆ ಗಣಿ ಕಾರ್ಮಿಕರ ಬೇಟೆ ನಾಯಿಗಳ ಹಾವಳಿ.
ವಿಯೆಟ್ನಾಂ ಸ್ಮಾರಕಕ್ಕೆ ನಿಲ್ಲಿಸಿದ ಒಂದೊಂದು ಕಲ್ಲಿಗೂ ಅದರ ಒಂಬತ್ತು ಸಾವಿರ ಪಾಲು ಕಲ್ಲುಗಳು ಇಲ್ಲಿ ನುಚ್ಚು ನೂರಾಗಿ ವಿಕಾರವಾಗಿ ರಾಶಿ ಬಿದ್ದಿವೆ. ನೀರಿನ ಸೆಲೆಯನ್ನು ಬತ್ತಿಸಿ, ಗಿಡಮರಗಳಿಗೆ ದೂಳಿನ ಚಾದರ ಸುತ್ತಿಸಿ, ಬೆಂಗಳೂರಿನ ಗಣಿಧನಿಗಳ ಮನೆಯಲ್ಲಿ ರತ್ನಗಂಬಳಿ ಹಾಸಿವೆ.
ಇವುಗಳಿಗೆ ಸ್ಮಾರಕ ಬೇಕಿಲ್ಲ ನಿಜ. ಇವುಗಳಿಗೆ ಇವೇ ಸ್ಮಾರಕ. ಮುಂದಿನ ಐದುನೂರು ವರ್ಷಗಳವರೆಗೆ ಕೊಳ್ಳೇಗಾಲದ ಕಲ್ಲು ಬಂಡೆಗಳು ದುರಂತ ಕತೆ ಸಾರುತ್ತಿರುತ್ತವೆ. ಅದಕ್ಕೆಂದು ನೆಲ ಅಗೆದು ಉತ್ಖನನ ಕೂಡ ಮಾಡಬೇಕಿಲ್ಲ. ಎಲ್ಲವೂ ನೆಲದ ಮೇಲೆಯೇ ಬಿದ್ದಿರುತ್ತವೆ. ಆದರೂ ವಾಷಿಂಗ್ಟನ್ನ ನೆಲದ ಕೆಳಗಿನ ಆ ಶೋಕಭಿತ್ತಿಗೆ ನಮ್ಮ ಈ ದಾಖಲೆ ಸೇರ್ಪಡೆಯಾಗಬೇಕು. ಅಲ್ಲಿ ಆ ಛಪ್ಪನ್ನೇಳು ಸಾವಿರ ಮೃತಯೋಧರ ಪಟ್ಟಿಯಲ್ಲಿ ಛಪ್ಪನ್ನಾರು ದೇಶಗಳ ಹೆಸರು ಹುದುಗಿದೆ. ಅಂದರೆ, ಅಮೆರಿಕಕ್ಕೆ ವಲಸೆ ಹೋಗಿ, ಪ್ರಜೆಗಳಾಗಿ, ಮಕ್ಕಳು ಮರಿ ಯುವ ಯೋಧರಾಗಿ ವಿಯೆಟ್ನಾಂನಲ್ಲಿ ಪ್ರಾಣಬಿಟ್ಟ ಸ್ಪ್ಯಾನಿಶ್ ಜನ, ಮೆಕ್ಸಿಕನ್ ಜನ, ಚೀನೀ ಜನ, ಆಫ್ರಿಕನ್ ಮೂಲದ ನಿಗ್ರೊ ಜನ, ದಕ್ಷಿಣ ಅಮೆರಿಕದ ರೆಡ್ಇಂಡಿಯನ್ ಜನ, ಜರ್ಮನ್ ಜನ – ಹೀಗೆ ಪ್ರಪಂಚದ ಎಲ್ಲ ಮೂಲೆಗಳ ಜನರ ಹೆಸರಿದೆ. ಚೆನ್ನಾಗಿ ಹುಡುಕಿದ್ದರೆ ಭಾರತೀಯ ಹೆಸರುಗಳೂ ಕಾಣ ಬರುತ್ತಿದ್ದುವೇನೋ, ನನಗೆ ಸಿಗಲಿಲ್ಲ. ಆದರೆ ಆ ಇಡೀ ಸ್ಮಾರಕ ನಮ್ಮದು. ಜಗತ್ತಿನ ದುರ್ಬಲರ ಮೇಲೆ ಸಾರಿದ ಮಹಾ ಸಮರದ ಆ ಸಂಕೇತದಲ್ಲಿ ನಮ್ಮ ಕೊಳ್ಳೇಗಾಲದ ಹೆಸರೇ ಇಲ್ಲವೆಂದರೆ ?
ಇಲ್ಲಿನ ದುರ್ಬಲ ಜೀವ ಜಂತುಗಳನ್ನು ಮೆಟ್ಟಿ ತುಳಿದದ್ದೆಲ್ಲ ವ್ಯರ್ಥವೇ ಆದಂತಲ್ಲವೇ ?
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ