Advertisement
ಊರು ಕೇರಿ ಬಿಟ್ಟು ಬಂದು…: ಶುಭಶ್ರೀ ಭಟ್ಟ ಬರಹ

ಊರು ಕೇರಿ ಬಿಟ್ಟು ಬಂದು…: ಶುಭಶ್ರೀ ಭಟ್ಟ ಬರಹ

ತುಸುವೂ ಪರಿಚಯವೇ ಇಲ್ಲದ ಹೊಸ ಬೀದಿಯ ಅಪರಿಚಿತ ಸದ್ದಿಗೆ, ಆ ರಾತ್ರಿಯ ನೀರವತೆಗೆ, ಪರಿಮಳವಿಲ್ಲದ ಹಗಲಿಗೆ, ನಮ್ಮವರೇ ಕಾಣಿಸದ ಆಗಂತುಕ ರಸ್ತೆಯ ಚಲನೆಗೆ ವಿನಾಕಾರಣ ನಿಟ್ಟುಸಿರು ಉಮ್ಮಳಿಸಿ ಬರುತ್ತಿತ್ತು. ಅಡುಗೆ ಮನೆಯ ಬಿಡುವಿಲ್ಲದ ಕೆಲಸ, ಮಾಡಲೇ ಬೇಕಾದ ಕೆಲವು ಮನೆ ಕೆಲಸ, ಆಫೀಸಿನ ಹೊಸ ಪ್ರಾಜೆಕ್ಟಿನ ಶೆಡ್ಯೂಲ್, ಮಗನನ್ನು ಹೊಸ ಶಾಲೆಗೆ ರೂಢಿ ಮಾಡಿಸಬೇಕಾದ ಅಗತ್ಯ, ಬಿಡಲಾರದ ಬರವಣಿಗೆ-ಓದು ಹೀಗೆ ದಿನದ ಅರೆ ಕ್ಷಣವನ್ನೂ ವ್ಯಯಿಸದೆ ಎಲ್ಲವನ್ನೂ ನಿಭಾಯಿಸುತ್ತಾ ದಿನ ಕಳೆಯುತ್ತಿತ್ತು. ಆದರೂ ಕೆಲವೊಮ್ಮೆ ಸಂಜೆಯಾಗುವಷ್ಟರಲ್ಲಿ ಖಾಲಿತನ ಆವರಿಸಿಕೊಳ್ಳುತ್ತಿತ್ತು.
ಮಹಾನಗರದ ಭಾಗವಾಗಿ ವಾಸಿಸುವ ಅನುಭವದ ಕುರಿತು ಶುಭಶ್ರೀ ಭಟ್ಟ ಬರಹ ನಿಮ್ಮ ಓದಿಗೆ

ಹೊರಗಿನವರು ಬೈಯ್ದುಕೊಳ್ಳುವಷ್ಟು ಸೆಕೆಯನ್ನೂ ಎದೆಗಪ್ಪಿಕೊಂಡು ಸೊಂಪಾದ ಬಾಲ್ಯ ಕಳೆದು, ಮಲೆನಾಡಿನ ಕಡು ಬಿರುಸಾದ ಮಳೆಗಾಲದ ಆಹ್ಲಾದಕರವಾದ ಸೊಬಗನ್ನೂ ಆಪ್ತವಾಗಿಸಿಕೊಂಡು ತುಸು ಜಾಸ್ತಿಯೇ ಭಾವುಕಳಾಗಿ ಬದುಕ ಕಟ್ಟಿಕೊಂಡವಳಿಗೆ ಮಹಾನಗರಿ ಹೊಸತಾಗಿರಲಿಲ್ಲ. ಮಧ್ಯರಾತ್ರಿಯನ್ನೇ ಕಾಣದೆ ಮಲಗುವ ಊರುಗಳಲ್ಲಿ ದಿನ ಕಳೆದು ಒಂಚೂರೂ ನಿದ್ರಿಸಿದೆ ಸದಾ ಅದೇ ಹೊಸ ಹುಮ್ಮಸ್ಸಿನಿಂದ ಮಿನುಗುತ್ತಿರುವ ಮಹಾನಗರಿಯ ಬಗ್ಗೆ ಮುಗಿಯದ ಅಚ್ಚರಿಯಿತ್ತು. ದಿನ ಬೆಳಗಾದರೆ ಎದುರಾಗುವ ಅದೇ ಪರಿಚಿತ ಮುಖಗಳು, ಅಲ್ಲಿ ವಿನಿಮಯವಾಗುವ ಮುಗುಳ್ನಗು, ಒಂದೆರಡು ನಿಮಿಷಗಳ ಕುಶಲೋಪರಿ ಮಾತು ಎಲ್ಲವೂ ಊರಲ್ಲಿನ ದಿನಗಳನ್ನು ಬೆಚ್ಚಗಿಟ್ಟಿತ್ತು. ಎಲ್ಲರನ್ನೂ ತನ್ನ ತೋಳ್ತೆಕ್ಕೆಯಲ್ಲಿ ಒಳಗೆಳೆದುಕೊಂಡು ಅಮ್ಮನಂತೆ ಅಕ್ಕರೆಗೈವ, ಗೆಳತಿಯಂತೆ ಹೆಗಲಾಗುವ ಮಹಾನಗರಿಯ ಬಗ್ಗೆ ಗೊತ್ತಿಲ್ಲದಿರುವುದು ಏನಿರಲಿಲ್ಲ. ಆದರೂ ಅರ್ಧ ದಶಕಗಳ ನಂತರ ಹೊಸ ಪಾತ್ರವ ಹೊತ್ತು, ಹೊಸತಾದ ಕನಸುಗಳ ಸಾಕಾರಗೊಳಿಸಿಕೊಳ್ಳುವ ಅಂದುಕೊಂಡು ಬರುವಾಗ ಎದೆಯೊಳಗೆ ಪುಟ್ಟದಾದ ಅಳುಕಂತೂ ಖಂಡಿತ ಇತ್ತು.

ತುಸುವೂ ಪರಿಚಯವೇ ಇಲ್ಲದ ಹೊಸ ಬೀದಿಯ ಅಪರಿಚಿತ ಸದ್ದಿಗೆ, ಆ ರಾತ್ರಿಯ ನೀರವತೆಗೆ, ಪರಿಮಳವಿಲ್ಲದ ಹಗಲಿಗೆ, ನಮ್ಮವರೇ ಕಾಣಿಸದ ಆಗಂತುಕ ರಸ್ತೆಯ ಚಲನೆಗೆ ವಿನಾಕಾರಣ ನಿಟ್ಟುಸಿರು ಉಮ್ಮಳಿಸಿ ಬರುತ್ತಿತ್ತು. ಅಡುಗೆ ಮನೆಯ ಬಿಡುವಿಲ್ಲದ ಕೆಲಸ, ಮಾಡಲೇ ಬೇಕಾದ ಕೆಲವು ಮನೆ ಕೆಲಸ, ಆಫೀಸಿನ ಹೊಸ ಪ್ರಾಜೆಕ್ಟಿನ ಶೆಡ್ಯೂಲ್, ಮಗನನ್ನು ಹೊಸ ಶಾಲೆಗೆ ರೂಢಿ ಮಾಡಿಸಬೇಕಾದ ಅಗತ್ಯ, ಬಿಡಲಾರದ ಬರವಣಿಗೆ-ಓದು ಹೀಗೆ ದಿನದ ಅರೆ ಕ್ಷಣವನ್ನೂ ವ್ಯಯಿಸದೆ ಎಲ್ಲವನ್ನೂ ನಿಭಾಯಿಸುತ್ತಾ ದಿನ ಕಳೆಯುತ್ತಿತ್ತು. ಆದರೂ ಕೆಲವೊಮ್ಮೆ ಸಂಜೆಯಾಗುವಷ್ಟರಲ್ಲಿ ಖಾಲಿತನ ಆವರಿಸಿಕೊಳ್ಳುತ್ತಿತ್ತು. ಮಳೆಯನ್ನು ಅತಿಯಾಗಿಯೇ ಇಷ್ಟಪಡುವವಳಿಗೆ ಕೆಲವೊಮ್ಮೆ ಮಹಾನಗರದ ಮಳೆ ತಲೆಚಿಟ್ಟು ಬರಿಸಿಬಿಡುತ್ತಿತ್ತು.

ಹೊರಗಡೆ ಹೋಗುವಂತಿಲ್ಲ, ಮನೆಗೆ ಯಾರೂ ಬರುವಂತಿಲ್ಲದ ವಾತಾವರಣದಲ್ಲಿ ಮನೆಯೂ ಒಮ್ಮೊಮ್ಮೆ ಜೈಲಿನಂತೆ ಅನಿಸಿ ಗಂಟಲುಬ್ಬಿ ಬರುತ್ತಿತ್ತು. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ತನಕ ಮಾಡಿದ ಕೆಲಸವನ್ನೇ ಮಾಡುತ್ತಾ ಅದದೇ ಏಕತಾನತೆಯಿಂದ ಕೆಲವೊಮ್ಮೆ ಕಂಗೆಟ್ಟು ಕಣ್ತುಂಬಿ ವಾಪಸ್ಸು ಊರಿಗೆ ಹೊರಟು ಬಿಡಬೇಕೆಂದು ಅನಿಸಿ ಕುಸಿಯುತ್ತಿದ್ದೆ ಒಳಗೊಳಗೆ. ಮಗನಂತೂ ಊರಿನ ಗೆಳೆಯರನ್ನೂ, ಅವನ ಶಾಲೆಯನ್ನು ನೆನಪಿಸಿಕೊಂಡು ಕೊರಗುವಾಗ, ‘ವಾಪಸ್ಸು ಹೋಗಣ ಅಮಾ’ ಅನ್ನುವಾಗಲೆಲ್ಲ ಬದುಕಲ್ಲಿ ಸೋತುಬಿಟ್ಟೆ ಅಂತಲೇ ಅಂದುಕೊಂಡು ಬಿಕ್ಕಿದ್ದೂ ಇದೆ.

ಇದನ್ನೆಲ್ಲ ಯಾರಲ್ಲಿಯೂ ಹೇಳದೆ ಅಂತರ್ಮುಖಿಯಾಗತೊಡಗಿದಾಗ ಜೊತೆ ನಿಂತದ್ದು ಕೆಲ ಆಪ್ತವಾದ ಜೀವಗಳು. ನಾನು ಏಕಾಂಗಿಯಲ್ಲ ಜೊತೆಗಿದ್ದೇವೆ ಎಂದು ಭರವಸೆ ತುಂಬಿ ಎದೆ ತುಂಬಿದ ದುಗುಡವನ್ನು ಕರಗಿಸತೊಡಗಿದಾಗ, ಹೆಪ್ಪುಗಟ್ಟಿದ ಆತಂಕವೆಲ್ಲವೂ ತುಸು ಕರಗಿ ನಸುಬೆಳಕು ತುಂಬಿದಂತಾಯ್ತು. ನಿಧಾನಕ್ಕೆ ಪಾರ್ಕಿನ ದಾರಿಯಲ್ಲಿ ಸಿಗುವ ಗುಲ್ಮೋಹರಿನ ಮರಗಳು ತಬ್ಬಲು ಬಂದವರಂತೆ ತೂಗಿಕೊಂಡವು, ಗಿಜಿಗುಟ್ಟುವ ದಾರಿಯೂ ತುಸು ಕಳೆಗಟ್ಟಿಸಿಕೊಳ್ಳತೊಡಗಿತು, ಅಚಾನಕ್ಕಾಗಿ ಎದುರಿಗೆ ಕಂಡಾಗ ಅಕ್ಕಪಕ್ಕದವರು ನಗೆ ಮಲ್ಲಿಗೆಯನ್ನು ಉಡಿ ತುಂಬುವಷ್ಟಾದರು, ದಿನವೂ ಮುಸ್ಸಂಜೆ ಸಂಪಿಗೆ ಮಾರಲು ಬರುವ ಹೂವಮ್ಮ ಕಂಡರೆ ವಿನಾಕಾರಣ ಹೂನಗೆ ಅರಳಿಸಿ ಕಷ್ಟ ಸುಖ ಮಾತಾಡತೊಡಗಿದಳು, ಸೊಪ್ಪು ಮಾರುವವ ಹರಿವೆ-ಬಸಳೆ ತಂದರೆ ಮಹಡಿ ಮನೆ ಮೇಲೆ ಸೊಪ್ಪು ಕಟ್ಟು ತಂದಿಡುವಷ್ಟು ಹತ್ತಿರದವನಾದ, ಕೆಲವೊಂದಿಷ್ಟು ಜನ ಕರೆದು ಮಾತಾಡಿ ಮನೆಯಲ್ಲಿ ಮಾಡಿದ ಸಿಹಿ ತಿಂಡಿ ಕಳಿಸಿ ಕೊಡುವಷ್ಟು ನಮ್ಮವರಾದರು, ಮಗನ ಗೆಳೆಯರು ನಿಧಾನಕ್ಕೆ ಮನೆಯೊಳಗಾಡಿ ನಂದಗೋಕುಲದ ಭಾವ ತುಂಬ ತೊಡಗಿದರು. ನಗು ನಗುತ್ತಾ ಬೆನ್ನಿಗಿರಿದವರು, ಮುಖವಾಡ ತೊಟ್ಟು ನಾಟಕವಾಡಿದವರು, ಹಿಂದಿನಿಂದ ಆಡಿಕೊಂಡು ಎದುರಿನಿಂದ ಬಿಗಿದಪ್ಪಿದವರು ಹೀಗೆ ಎಲ್ಲಾ ತರಹದವರೂ ಜೊತೆಗಿದ್ದರು. ಇಂಥವರೆಲ್ಲ ಕೇವಲ ಮಹಾನಗರಕ್ಕಷ್ಟೆ ಮೀಸಲು ಎಂಬ ಮಿಥ್ಯೆಗೆ ಖಂಡಿತ ಕಟ್ಟು ಬಿದ್ದಿಲ್ಲ, ಅಂತವರು ಪ್ರತೀ ಊರಲ್ಲಿಯೂ ಕೇರಿಯಲ್ಲಿಯೂ ಇದ್ದೇ ಇರುತ್ತಾರೆ. ಅವರನ್ನು ಗುರುತಿಸಿ ದೂರವಿರಿಸುವ ಜಾಣ್ಮೆಯ ಅಗತ್ಯ ನಮಗಿರಬೇಕಷ್ಟೆ.

ಹೀಗೆ ಅರಿವಿಲ್ಲದಂತೆ ತನ್ನ ಮಡಿಲಲ್ಲಿ ನಮ್ಮನ್ನಪ್ಪಿ ಕುಳಿತ ಈ ಮಹಾನಗರಿ ಅವ್ಯಕ್ತ ಭಾವದಿಂದ ತೊಳಲಾಡುತ್ತಿದ್ದವರನ್ನು ಬೆಚ್ಚಗಿಡುತ್ತ ಬಂತು. ಪುಟ್ಟ ಊರಿನಿಂದ ಮಹಾನಗರದ ಸಮುದ್ರ ವೈಶಾಲತೆಗೆ ತೆರೆದುಕೊಂಡು ಕಲಿತದ್ದು, ಕಲಿಯುತ್ತಿರುವುದು ಬಹಳ, ಈ ಪಯಣ ಕೂಡ ಅಷ್ಟೆ ನಿರಂತರ.

About The Author

ಶುಭಶ್ರೀ ಭಟ್ಟ

ಶುಭಶ್ರೀ ಭಟ್ಟ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನವರು. ಪ್ರಸ್ತುತ ಶೃಂಗೇರಿಯಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿದ್ದಾರೆ. ಇವರ ಲೇಖನಗಳು, ಕಥೆಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. "ಹಿಂದಿನ ನಿಲ್ದಾಣ" (ಪ್ರಬಂಧಗಳ ಸಂಕಲನ), ಇಹದ ತಳ‌ಹದಿ (ಅಂಕಣ ಬರಹಗಳ ಸಂಕಲನ), ಬಿದಿಗೆ ಚಂದ್ರಮನ ಬಿಕ್ಕು (ಕಥಾಸಂಕಲನ) ಇವರ ಪ್ರಕಟಿತ ಕೃತಿಗಳು.

1 Comment

  1. ಸಿದ್ದಣ್ಣ. ಗದಗ.

    ತುಂಬ ಆಪ್ತವಾದ ಬರಹ.ಮಲೆನಾಡಿನಲ್ಲಿ ಬೆಳೆದು ಮಹಾನಗರಿಯಲ್ಲಿ ಬದುಕು ಕಟ್ಟಿಕೊಳ್ಳುವವರ ನವಿರಾದ ಮನಸ್ಸಿನ ಭಾವನೆಗಳನ್ನು ತೆರೆದಿಟ್ಟಿದೆ. ಓದಿನ ಖುಷಿ ಕೊಟ್ಟಿದೆ. ಧನ್ಯವಾದಗಳು

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ