1903ರಿಂದ ಕ್ಯೂಬಾ ದೇಶವು ಗ್ವಾಂಟನಾಮೊ ಹೆಸರಿನ ಕೊಲ್ಲಿಯನ್ನು ಅಮೇರಿಕಾಕ್ಕೆ ಗುತ್ತಿಗೆ ನೀಡಿತ್ತು. ಇದಕ್ಕೆ ಸಂಬಂಧಪಟ್ಟ ಒಪ್ಪಂದವನ್ನು ಮಾಡಿಕೊಂಡಿತ್ತು. ಇದರ ಹೊರತಾಗಿಯೂ ಕೆರಿಬಿಯನ್ ಸಮುದ್ರದಲ್ಲಿ ಸೈನಿಕ ನೆಲೆಯಾಗಿ ಈ ಕೊಲ್ಲಿಯನ್ನು ಬಳಸಲು ಅಮೇರಿಕಾ ಪ್ರಯತ್ನಿಸಿತ್ತು. ಶಸ್ತ್ರಾಸ್ತ್ರಗಳ ಬಳಕೆಯ ಮೂಲಕ ಕ್ಯೂಬಾವನ್ನು ಮೆತ್ತಗಾಗಿಸುವ ಪ್ರಯತ್ನವನ್ನೂ ನಡೆಸಿತ್ತು. ಅಮೇರಿಕಾದ ಈ ಬಗೆಯ ನಡತೆಯಿಂದಾಗಿ ಅದರ ಜೊತೆಗಿನ ಒಪ್ಪಂದ ಅನ್ಯಾಯಕರವಾದದ್ದು ಎನ್ನುವುದು ಕ್ಯೂಬಾದ ಜನರ ಅರಿವಿಗೆ ಬಂತು. ಈ ಕಾರಣಕ್ಕೆ ಅವರು ಕೈಗೊಂಡ ನಿರ್ಧಾರವೆಂದರೆ, ಗ್ವಾಂಟನಾಮೊ ಕೊಲ್ಲಿಯ ಬಳಕೆಗಾಗಿ ಅಮೇರಿಕಾ ಪ್ರತೀವರ್ಷ ಪಾವತಿ ಮಾಡುವ ಹಣವನ್ನು ನಿರಾಕರಿಸುವುದು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಕ್ಯೂಬಾ ದೇಶದ ಕುರಿತ ಬರಹ ನಿಮ್ಮ ಓದಿಗೆ
ಭೂಮಿಯ ಮೇಲಿನ ಅತೀ ದೊಡ್ಡ ದ್ವೀಪ ಎನಿಸಿಕೊಂಡಿದೆ ಕ್ಯೂಬಾ. ಅತೀ ಹೆಚ್ಚು ಜನಸಂಖ್ಯೆ ಇರುವ ಕೆರಿಬಿಯನ್ ದ್ವೀಪಗಳ ಪೈಕಿ ಇದಕ್ಕೆ ಮೂರನೆಯ ಸ್ಥಾನ. ಒಂದು ಕೋಟಿಗೂ ಹೆಚ್ಚು ಜನರು ಈ ದ್ವೀಪದಲ್ಲಿ ಬದುಕುತ್ತಿದ್ದಾರೆ. ಕ್ಯೂಬಾ ವಿದ್ಯಾವಂತರಿಂದ ತುಂಬಿರುವ ದೇಶ. ಇಲ್ಲಿನ 99.67 ಶೇಕಡಾದಷ್ಟು ಜನರು ಸಾಕ್ಷರರಾಗಿದ್ದಾರೆ. ಲ್ಯಾಟೀನ್ ಅಮೇರಿಕಾದ ಬೇರೆ ಯಾವ ದೇಶಗಳಲ್ಲಿಯೂ ಈ ಬಗೆಯ ಶೈಕ್ಷಣಿಕ ಸಾಧನೆ ಆಗಿಲ್ಲ. ಅವುಗಳನ್ನೆಲ್ಲಾ ಹಿಂದಿಕ್ಕಿ ಅಗ್ರಸ್ಥಾನದಲ್ಲಿದೆ ಕ್ಯೂಬಾ. ಕ್ರಾಂತಿ ಆರಂಭಗೊಂಡ ಮೊದಮೊದಲ ವರ್ಷಗಳಲ್ಲಿ ಇಲ್ಲಿದ್ದ ಪ್ರತಿಭಾವಂತರು ಸಂಘರ್ಷದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಬೇರೆ ದೇಶಗಳನ್ನು ಸೇರಿಕೊಂಡಿದ್ದರು. ಭಾರೀ ದೊಡ್ಡ ಪ್ರಮಾಣದಲ್ಲಿ ಪ್ರತಿಭಾ ಪಲಾಯನ ನಡೆದಿತ್ತು. ಇದರಿಂದಾಗಿ ಕ್ಯೂಬಾ ಆ ಸಂದರ್ಭದಲ್ಲಿ ವಿದ್ಯಾವಂತರಿಲ್ಲದ, ಪರಿಣತರ ಕೊರತೆಯಿರುವ ದೇಶ ಎನಿಸಿಕೊಂಡಿತ್ತು. ಶಾಲೆ ಸೇರಿಕೊಳ್ಳುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿತ್ತು. ಇದೊಂದು ಗಂಭೀರ ಸಮಸ್ಯೆಯಾಗಲಿಕ್ಕಿದೆ ಎನ್ನುವುದನ್ನು ಅರ್ಥಮಾಡಿಕೊಂಡ ಆಗಿನ ಕ್ಯೂಬಾ ಸರ್ಕಾರವು ಸಾಕ್ಷರತಾ ಅಭಿಯಾನವನ್ನು 1961ರಲ್ಲಿ ಆರಂಭಿಸಿತು. ಅನಕ್ಷರತೆಯನ್ನು ಇನ್ನಿಲ್ಲವಾಗಿಸುವ ಮಹತ್ತರ ಗುರಿಯನ್ನು ಇಟ್ಟುಕೊಳ್ಳಲಾಗಿತ್ತು. ಇದಕ್ಕಾಗಿ ದೇಶದ ಸುಮಾರು ಎರಡು ಲಕ್ಷ ಪರಿಣತರು ಜನತೆಯನ್ನು ಸಾಕ್ಷರರಾಗಿಸುವ ದಿಶೆಯಲ್ಲಿ ಕೆಲಸ ಮಾಡತೊಡಗಿದರು. ಇಂತಹ ಪರಿಣತರ ಜೊತೆ ವಿದ್ಯಾರ್ಥಿಗಳೂ ಸೇರಿಕೊಂಡರು. ಇದರಿಂದಾಗಿ ಅಭಿಯಾನವು ಇನ್ನಷ್ಟು ಚೈತನ್ಯ ಗಳಿಸಿಕೊಂಡಿತು.
ಇದರಲ್ಲಿ ಪಾಲು ಪಡೆದವರ ಸಂಖ್ಯೆ ಹತ್ತು ಲಕ್ಷ ಮೀರಿತು. ಇದರ ಪರಿಣಾಮವಾಗಿ ವರ್ಷದ ಅಂತ್ಯದ ಹೊತ್ತಿಗೆ ಏಳು ಲಕ್ಷಗಳಿಗೂ ಹೆಚ್ಚು ಜನರು ಅಕ್ಷರ ಜ್ಞಾನ ಪಡೆದರು. ಒಮ್ಮಿಂದೊಮ್ಮೆಗೆ ಸಾಕ್ಷರತೆಯ ಪ್ರಮಾಣ ತೊಂಬತ್ತೈದು ಪ್ರತಿಶತದ ಗಡಿಯನ್ನು ದಾಟಿತು. ಈ ಬಗೆಯ ಪರಿಶ್ರಮದಿಂದಾಗಿಯೇ ಕ್ಯೂಬಾ ಇಂದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸ್ಥಾನವನ್ನು ಗಳಿಸಿಕೊಂಡಿದೆ.

(ಫಿಡೆಲ್ ಕ್ಯಾಸ್ಟ್ರೋ)
ಕ್ಯೂಬಾ ಕ್ರಾಂತಿ ಆರಂಭವಾದದ್ದು 1953ರ ಜುಲೈ 26ರಂದು. ಸ್ಯಾಂಟಿಯಾಗೊ ಡಿ ಕ್ಯೂಬಾ ಹೆಸರಿನ ನಗರದಲ್ಲಿ ಕ್ರಾಂತಿ ಹುಟ್ಟಿಕೊಂಡಿತು. ಕ್ರಾಂತಿಕಾರಿಗಳ ಗುಂಪಿನ ನಾಯಕತ್ವವನ್ನು ವಹಿಸಿದವರು ಫಿಡೆಲ್ ಕ್ಯಾಸ್ಟ್ರೋ. ಮೊಂಕಾಡಾ ಬ್ಯಾರಕ್ಗಳ ಮೇಲೆ ದಾಳಿ ನಡೆಸುವ ಮೂಲಕ ಕ್ರಾಂತಿ ಶುರುವಾಯಿತು. ಕ್ರಾಂತಿ ಕೊನೆಗೊಂಡದ್ದು ಆರು ವರ್ಷಗಳ ನಂತರ. 1959ರ ಜನವರಿ 1ರಂದು ಸಿಟಿ ಹಾಲ್ನ ಬಾಲ್ಕನಿಯಲ್ಲಿ ಕ್ಯಾಸ್ಟ್ರೋ ಅವರು ಕ್ರಾಂತಿಗೆ ಗೆಲುವಾಗಿದೆ ಎಂಬ ಘೋಷಣೆ ಹೊರಡಿಸಿದರು. ಫಿಡೆಲ್ ಕ್ಯಾಸ್ಟ್ರೋ ಅವರ ಬಗೆಗೆ ವಿವರಿಸದೆ ಕ್ಯೂಬಾದ ಕುರಿತಾದ ವಿಚಾರಗಳು ಸಂಪೂರ್ಣವಾಗುವುದಿಲ್ಲ. ಕ್ರಾಂತಿಕಾರಿಯಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿದ್ದ ಇವರು 1959ರಿಂದ 2008ರವರೆಗೆ ಕ್ಯೂಬಾದ ನಾಯಕರಾಗಿದ್ದವರು. ಇವರಿಗೆ ಅಮೇರಿಕಾದ ಜೊತೆಗೆ ತೀವ್ರತರವಾದ ಭಿನ್ನಾಭಿಪ್ರಾಯ ಇತ್ತು. ಈ ಕಾರಣಕ್ಕೆ ಅಮೇರಿಕಾದ ಕೇಂದ್ರ ಗುಪ್ತಚರ ಸಂಸ್ಥೆ(CIA) ಕ್ಯಾಸ್ಟ್ರೋ ಅವರನ್ನು ಕೊಲ್ಲಲು, ಅವರ ಧೈರ್ಯಗುಂದಿಸಲು ಅನೇಕಾನೇಕ ಪ್ರಯತ್ನಗಳನ್ನು ಮಾಡುತ್ತಲೇ ಬಂದಿದೆ. ಅವರ ನಾಯಕತ್ವದ ಸುದೀರ್ಘ ಅವಧಿಯಲ್ಲಿ ಸುಮಾರು ಆರುನೂರು ಸಲ ಹತ್ಯೆಯ ಯತ್ನಗಳಿಗೆ ಒಳಗಾಗಿದ್ದಾರೆ. ಎಲ್.ಎಸ್.ಡಿ. ಹೆಸರಿನ ರಾಸಾಯನಿಕವನ್ನು ಕ್ಯಾಸ್ಟ್ರೋ ಅವರಿದ್ದ ಬ್ರಾಡ್ಕಾಸ್ಟಿಂಗ್ ಸ್ಟುಡಿಯೋದಲ್ಲಿ ಸಿಂಪಡಿಸಲಾಗಿತ್ತು. ನೀರಿನಲ್ಲಿ ಈಜುವಾಗ ಅವರು ರಕ್ಷಣೆಗಾಗಿ ತೊಡುತ್ತಿದ್ದ ಉಡುಪನ್ನು ಹಾಳುಮಾಡುವ ಮೂಲಕ ನೀರಿನಲ್ಲಿ ಮುಳುಗಿ ಸಾಯುವಂತೆ ಕುತಂತ್ರ ಮಾಡಲಾಗಿತ್ತು. ಕೆಟ್ಟ ಮಾತುಗಳನ್ನು ಬಳಸಿ ಅವರನ್ನು ತೆಗಳುವ ಮೂಲಕ ಅವರ ಮನೋಸ್ಥೈರ್ಯವನ್ನು ಇನ್ನಿಲ್ಲವಾಗಿಸುವ ಪ್ರಯತ್ನ ನಡೆದಿತ್ತು. ಹೀಗೆ ಹೊಸ ಹೊಸ ಪ್ರಯತ್ನಗಳನ್ನು ಅಮೇರಿಕಾ ನಡೆಸುತ್ತಲೇ ಇತ್ತು. ಆದರೆ ಯಾವುದರಲ್ಲಿಯೂ ಯಶಸ್ಸು ಸಿಗಲಿಲ್ಲ. ಕ್ಯಾಸ್ಟ್ರೋ ಅವರನ್ನು ಹೇಗಾದರೂ ಮಾಡಿ ಕೊಂದುಮುಗಿಸಬೇಕೆಂಬ ಅಮೇರಿಕಾದ ಉದ್ದೇಶ ಪೂರ್ಣವಾಗಲೇ ಇಲ್ಲ. ಕೊನೆಗೆ ತಮ್ಮ ತೊಂಭತ್ತನೇ ವಯಸ್ಸಿನಲ್ಲಿ ಕ್ಯಾಸ್ಟ್ರೋ ಅವರು ಕ್ಯೂಬಾದ ಹವಾನಾ ಹೆಸರಿನ ಪ್ರದೇಶದಲ್ಲಿ ತೀರಿಕೊಂಡರು.
ಕ್ಯೂಬಾದಲ್ಲಿ ಕ್ರಾಂತಿ ನಡೆಯುವುದಕ್ಕೂ ಮೊದಲು ‘ಯಾಂಕ್ ಟ್ಯಾಂಕ್ಸ್’ ಹೆಸರಿನ ವಿಂಟೇಜ್ ಶೈಲಿಯ ಕಾರುಗಳು ಅಲ್ಲಿ ಭರಪೂರವಾಗಿದ್ದವು. ಈ ಕಾರುಗಳನ್ನು ಕ್ಯೂಬಾ ಅಮೇರಿಕಾದಿಂದ ಆಮದು ಮಾಡಿಸಿಕೊಂಡಿತ್ತು. ಆದರೆ ಕ್ರಾಂತಿಯ ನಂತರ ಅಮೇರಿಕಾ ಸರ್ಕಾರವು ಕ್ಯೂಬಾದ ಜೊತೆಗೆ ಎಲ್ಲಾ ರೀತಿಯ ವ್ಯಾಪಾರಗಳನ್ನು ನಿಲ್ಲಿಸಿತು. ಇದರಿಂದಾಗಿ ಕ್ಯೂಬಾದ ಕಾರು ಮಾರಾಟಗಾರರು ಕಾರುಗಳನ್ನು ಅಮೇರಿಕಾದಿಂದ ತರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಕಾರು ತಯಾರಿಸುವವರಿಗೆ ವಿಂಟೇಜ್ ಕಾರಿನ ಬಿಡಿಭಾಗಗಳೂ ಸಿಗಲಿಲ್ಲ. ಇದರಿಂದಾಗಿ ಕ್ರಾಂತಿಗೂ ಮೊದಲು ತರಿಸಿಕೊಂಡಿದ್ದ ಕಾರುಗಳು ಮಾತ್ರವೇ ಕ್ಯೂಬಾದ ಬಳಿ ಉಳಿಯುವಂತಾಯಿತು. ಇವುಗಳನ್ನೇ ಮಾರುವಂತೆ ಮತ್ತು ಉಪಯೋಗಿಸುವಂತೆ ಅಲ್ಲಿಯ ಕಮ್ಯುನಿಸ್ಟ್ ಸರ್ಕಾರ ಆದೇಶ ಹೊರಡಿಸಿತು. ಈ ಬಗೆಯ ನಿರ್ಬಂಧ 2010ರವರೆಗೂ ಮುಂದುವರಿಯಿತು. ಈಗಲೂ ಅಮೇರಿಕನ್ ವಿಂಟೇಜ್ ಕಾರುಗಳು ಕ್ಯೂಬಾದಲ್ಲಿವೆ. ಇವುಗಳ ಸಂಖ್ಯೆ ಸುಮಾರು ಒಂದು ಲಕ್ಷದ ಅರುವತ್ತು ಸಾವಿರಗಳಷ್ಟು ಎನ್ನುವುದು ಒಂದು ಅಂದಾಜು. ಕ್ಯೂಬಾದಲ್ಲಿ ಎರಡು ರೀತಿಯ ಕರೆನ್ಸಿಗಳಿವೆ. ಕ್ಯೂಬನ್ ಪೆಸೊ ಮತ್ತು ಕ್ಯೂಬನ್ ಕನ್ವರ್ಟಿಬಲ್ ಪೆಸೊ ಎನ್ನುವ ಎರಡು ಬಗೆಯ ಕರೆನ್ಸಿ ವ್ಯವಸ್ಥೆಗಳನ್ನು ಇಲ್ಲಿ ಕಾಣಬಹುದು.

ಇವುಗಳಲ್ಲಿ ಕ್ಯೂಬನ್ ಕನ್ವರ್ಟಿಬಲ್ ಪೆಸೊ ಕರೆನ್ಸಿಯನ್ನು ಅಮೇರಿಕನ್ ಡಾಲರ್ಗೆ ಸರಿಸಮವಾಗಿ ರೂಪಿಸಲಾಗಿದೆ. ಅಮೇರಿಕಾ ಜೊತೆಗಿನ ವ್ಯಾಪಾರದ ಸಂದರ್ಭದಲ್ಲಿ, ವಿನಿಮಯ ಮಾಡಿಕೊಳ್ಳುವುದಕ್ಕಾಗಿ ಇದು ನೆರವಿಗೆ ಬರುತ್ತದೆ. ಕ್ಯೂಬನ್ ಪೆಸೊ ಕರೆನ್ಸಿಯನ್ನು ಸ್ಥಳೀಯರು ಪ್ರತೀ ದಿನ ಬಳಸುತ್ತಾರೆ. ಸೋವಿಯತ್ ಒಕ್ಕೂಟ ವ್ಯವಸ್ಥೆಯು ಪತನಗೊಂಡ ನಂತರ ಆರ್ಥಿಕತೆಯನ್ನು ಸ್ಥಿರಗೊಳಿಸುವುದಕ್ಕಾಗಿ ಕ್ಯೂಬಾ ಈ ಎರಡು ಕರೆನ್ಸಿ ವ್ಯವಸ್ಥೆಯನ್ನು ರೂಪಿಸಿಕೊಂಡಿತು. ಆದರೆ ಇದರಿಂದಾಗಿ ಹಣಕಾಸು ವ್ಯವಹಾರದ ಗೊಂದಲ ಹೆಚ್ಚಾಯಿತು. ಈ ಕಾರಣದಿಂದಾಗಿ 2021ರಲ್ಲಿ ಈ ವ್ಯವಸ್ಥೆಯನ್ನು ಕೈಬಿಡಲಾಗಿದೆ. ಈಗ ಸ್ಥಳೀಯರು ಬಳಸುವ ಕರೆನ್ಸಿಯಾದ ಕ್ಯೂಬನ್ ಪೆಸೊ ಮಾತ್ರ ಉಳಿದುಕೊಂಡಿದೆ.
ಕ್ಯೂಬಾದ ಜನರು ಸ್ವಾಭಿಮಾನದ ವಿಚಾರದಲ್ಲಿ ಯಾವತ್ತೂ ರಾಜಿ ಮಾಡಿಕೊಳ್ಳುವವರಲ್ಲ ಎನ್ನುವುದನ್ನು ನಿರ್ದಿಷ್ಟ ವಿಚಾರವೊಂದರ ಮೂಲಕ ಅರ್ಥಮಾಡಿಕೊಳ್ಳಬಹುದು. 1903ರಿಂದ ಕ್ಯೂಬಾ ದೇಶವು ಗ್ವಾಂಟನಾಮೊ ಹೆಸರಿನ ಕೊಲ್ಲಿಯನ್ನು ಅಮೇರಿಕಾಕ್ಕೆ ಗುತ್ತಿಗೆ ನೀಡಿತ್ತು. ಇದಕ್ಕೆ ಸಂಬಂಧಪಟ್ಟ ಒಪ್ಪಂದವನ್ನು ಮಾಡಿಕೊಂಡಿತ್ತು. ಇದರ ಹೊರತಾಗಿಯೂ ಕೆರಿಬಿಯನ್ ಸಮುದ್ರದಲ್ಲಿ ಸೈನಿಕ ನೆಲೆಯಾಗಿ ಈ ಕೊಲ್ಲಿಯನ್ನು ಬಳಸಲು ಅಮೇರಿಕಾ ಪ್ರಯತ್ನಿಸಿತ್ತು. ಶಸ್ತ್ರಾಸ್ತ್ರಗಳ ಬಳಕೆಯ ಮೂಲಕ ಕ್ಯೂಬಾವನ್ನು ಮೆತ್ತಗಾಗಿಸುವ ಪ್ರಯತ್ನವನ್ನೂ ನಡೆಸಿತ್ತು. ಅಮೇರಿಕಾದ ಈ ಬಗೆಯ ನಡತೆಯಿಂದಾಗಿ ಅದರ ಜೊತೆಗಿನ ಒಪ್ಪಂದ ಅನ್ಯಾಯಕರವಾದದ್ದು ಎನ್ನುವುದು ಕ್ಯೂಬಾದ ಜನರ ಅರಿವಿಗೆ ಬಂತು. ಈ ಕಾರಣಕ್ಕೆ ಅವರು ಕೈಗೊಂಡ ನಿರ್ಧಾರವೆಂದರೆ, ಗ್ವಾಂಟನಾಮೊ ಕೊಲ್ಲಿಯ ಬಳಕೆಗಾಗಿ ಅಮೇರಿಕಾ ಪ್ರತೀವರ್ಷ ಪಾವತಿ ಮಾಡುವ ಹಣವನ್ನು ನಿರಾಕರಿಸುವುದು. ಹೀಗೆ ತಮ್ಮ ಆತ್ಮಗೌರವದ ಕಾರಣಕ್ಕಾಗಿ ಕ್ಯೂಬಾ ವರ್ಷವರ್ಷವೂ ನಾಲ್ಕು ಸಾವಿರ ಡಾಲರ್ಗೂ ಹೆಚ್ಚಿನ ಹಣವನ್ನು ನಿರಾಕರಿಸುತ್ತಾ ಬಂದಿದೆ. ಯಾವುದೋ ಒಂದು ವರ್ಷ ಮಾತ್ರ ಅಮೇರಿಕಾ ಕಳುಹಿಸಿಕೊಟ್ಟ ಚೆಕ್ಕನ್ನು ಸ್ವೀಕರಿಸಿದೆ. ಆದರೆ ಅದು ಕಣ್ತಪ್ಪಿನಿಂದಾಗಿ ಆದದ್ದು ಎಂದಿದೆ ಕ್ಯೂಬಾ.
ಅಟ್ಲಾಂಟಿಕ್ ಮಹಾಸಾಗರದಲ್ಲಿ ಜಾರ್ಡಿನ್ಸ್ ಡೆ ಲಾ ರೀನಾ ಹೆಸರಿನ ಪ್ರದೇಶವಿದೆ. ಇದು ಕೆರಿಬಿಯನ್ ಗ್ಯಾಲಪಗೋಸ್ ಎಂದು ಪ್ರಸಿದ್ಧವಾಗಿದೆ. ಗ್ಯಾಲಪಗೋಸ್ ಎಂದರೆ ರಾಣಿ ಅಥವಾ ಒಡತಿ ಎಂದರ್ಥ. ಸ್ಪೇನ್ನ ರಾಣಿಯ ಗೌರವಾರ್ಥವಾಗಿ ಈ ಪ್ರದೇಶಕ್ಕೆ ಜಾರ್ಡಿನ್ಸ್ ಡಿ ಲಾ ರೀನಾ ಎಂಬ ಹೆಸರು ಬಂದಿದೆ. ಈ ಹೆಸರನ್ನು ಕೊಟ್ಟವರು ಪ್ರಸಿದ್ಧ ಅನ್ವೇಷಕರಾದ ಕ್ರಿಸ್ಟೋಫರ್ ಕೊಲಂಬಸ್. ಸ್ಪೇನ್ ರಾಣಿ ಒಂದನೇ ಇಸಾಬೆಲ್ಲಾ ಅವರು ಕೊಲಂಬಸ್ ಅವರಿಗೆ ಉತ್ತರ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾದ ಅನೇಕ ಪ್ರದೇಶಗಳಿಗೆ ಭೇಟಿ ಕೊಡುವುದಕ್ಕೆ ಹಣದ ಸಹಾಯ ಮಾಡಿದ್ದರು. ಹೀಗೆ ಉದಾರಿಯಾಗಿದ್ದ ರಾಣಿಗೆ ಗೌರವ ಸೂಚಿಸುವುದಕ್ಕಾಗಿ ಕೊಲಂಬಸ್ ಅವರು ಕ್ಯೂಬಾದಲ್ಲಿ ತಾವು ಕಂಡ ಪ್ರದೇಶಕ್ಕೆ ಜಾರ್ಡಿನ್ಸ್ ಡಿ ಲಾ ರೀನಾ ಎಂಬ ಹೆಸರು ಕೊಟ್ಟರು. ಕ್ಯೂಬಾದ ದಕ್ಷಿಣ ಕರಾವಳಿಯಲ್ಲಿ ನೆಲೆಗೊಂಡಿರುವ ಈ ಪ್ರದೇಶದಲ್ಲಿ ಆರುನೂರಕ್ಕೂ ಹೆಚ್ಚು ಹವಳ ದ್ವೀಪಗಳಿವೆ. ಬೇರೆ ದೇಶಗಳ ಜನರು ಕೈಬೀಸಿ ಕರೆಯುವ ರೀತಿಯಲ್ಲಿ ಆಕರ್ಷಣೀಯವಾಗಿದೆ. ಅಳಿವಿನಂಚಿಗೆ ಸರಿದ ಅನೇಕ ಜೀವಿಗಳು ಇಲ್ಲಿ ಕಂಡುಬರುತ್ತವೆ. ಹಸಿರು ಆಮೆ, ಗ್ರೇಟ್ ಹ್ಯಾಮರ್ ಹೆಡ್ ಶಾರ್ಕ್, ನಸ್ಸೌ ಗ್ರೂಪರ್ ಮೊದಲಾದ ಅಪಾಯದಲ್ಲಿರುವ ಜೀವಪ್ರಭೇದಗಳು ಇಲ್ಲಿವೆ.
ವಿಶ್ವದ ಅತೀ ಚಿಕ್ಕ ಹಕ್ಕಿ ಕಾಣಸಿಗುವುದು ಕ್ಯೂಬಾದಲ್ಲಿ. ಇಲ್ಲಿನ ಹಮ್ಮಿಂಗ್ ಬರ್ಡ್ ಹಕ್ಕಿ ಜಗತ್ತಿನಲ್ಲಿಯೇ ಸಣ್ಣ ಗಾತ್ರದ ಹಕ್ಕಿಯಾಗಿ ಗುರುತಿಸಿಕೊಂಡಿದೆ. ಇದನ್ನು ಬೀ ಹಮ್ಮಿಂಗ್ ಬರ್ಡ್ ಎಂದೂ ಕರೆಯಲಾಗುತ್ತದೆ. ಕೊಕ್ಕಿನಿಂದ ಬಾಲದವರೆಗಿನ ಇದರ ಉದ್ದ ಕೇವಲ 2.2 ಇಂಚುಗಳು ಮಾತ್ರ. ಇದು ಅತ್ಯಂತ ವೇಗವಾಗಿ ಝೇಂಕರಿಸುವ ಹಕ್ಕಿಯೂ ಹೌದು. ಒಂದು ಕ್ಷಣದಲ್ಲಿ ಎಂಬತ್ತು ಸಲ ರೆಕ್ಕೆಗಳನ್ನು ಬಡಿಯುತ್ತದೆ. ಬರಿಯ ಕಣ್ಣೋಟದ ಮೂಲಕ ಈ ಲೆಕ್ಕಾಚಾರವನ್ನು ನಡೆಸಲು ಸಾಧ್ಯವಿಲ್ಲ. ಒಂದು ಕಾಲಕ್ಕೆ ಪ್ರಪಂಚದ ಅತೀ ಚಿಕ್ಕ ಕಪ್ಪೆಯೂ ಕೂಡಾ ಕ್ಯೂಬಾದಲ್ಲಿತ್ತು. ಇದನ್ನು ಮಾಂಟೆ ಐಬೆರಿಯಾ ಎಲುಯೆತ್ ಎನ್ನಲಾಗುತ್ತದೆ. ಇದರ ಗಾತ್ರ ಕೇವಲ 0.40 ಇಂಚುಗಳು ಮಾತ್ರ. ಆದರೆ ಇದಾದ ನಂತರ ಪಪುವಾ ನ್ಯೂಗಿನಿಯಾದಲ್ಲಿ ಅಮೌ ಹೆಸರಿನ ಕಪ್ಪೆಯನ್ನು ಪತ್ತೆಹಚ್ಚಲಾಯಿತು. ಇದು ಕ್ಯೂಬಾದ ಕಪ್ಪೆಗಿಂತಲೂ ಚಿಕ್ಕ ಗಾತ್ರದ್ದಾಗಿದೆ. ಈ ಎರಡೂ ಕಪ್ಪೆಗಳು ಒಂದು ನಾಣ್ಯದ ಮೇಲೆ ಕುಳಿತುಕೊಳ್ಳುವಷ್ಟು ಸಣ್ಣ ಗಾತ್ರದಲ್ಲಿವೆ.

ಇಸ್ಲಾ ಡೆ ಲಾ ಜುವೆಂಟುಡ್ ಎನ್ನುವುದು ಕ್ಯೂಬಾದಲ್ಲಿರುವ ಪ್ರಮುಖ ದ್ವೀಪವಾಗಿದ್ದು, ಕೆರಿಬಿಯನ್ ಸಮುದ್ರದ ಜೊತೆ ನಿಕಟ ಸಂಪರ್ಕ ಇಟ್ಟುಕೊಂಡಿದೆ. ಒಂದು ಕಾಲಕ್ಕೆ ಇಲ್ಲಿ ಕಡಲ್ಗಳ್ಳರಿದ್ದರು. ಬೇರೆಡೆಯಲ್ಲಿ ಸಂಪತ್ತನ್ನು ದೋಚಿದವರು ಈ ದ್ವೀಪಕ್ಕೆ ಬಂದು ಅಡಗಿಕೊಳ್ಳುತ್ತಿದ್ದರು. ದಕ್ಷಿಣ ಅಮೇರಿಕಾದಿಂದ ಹವಾನಾ ಪ್ರದೇಶಕ್ಕೆ ಸಾಗುವ ಸ್ಪೇನ್ ಹಡಗುಗಳನ್ನು ಇಲ್ಲಿ ದೋಚಲಾಗುತ್ತಿತ್ತು. ಹೀಗೆ ಅನ್ಯಾಯದಿಂದ ಸಂಪಾದಿಸಿದ ಸಂಪತ್ತನ್ನು ದ್ವೀಪದಲ್ಲಿಯೇ ಮರೆಮಾಚಿ ಇಡಲಾಗುತ್ತಿತ್ತು. ಹೀಗೆ ಕಡಲ್ಗಳ್ಳರ ಪಾಲಿನ ಸ್ವರ್ಗವಾಗಿತ್ತು ಈ ದ್ವೀಪ. ಸಂಪತ್ತಿನ ದ್ವೀಪ ಎಂದೇ ಕರೆಸಿಕೊಂಡಿತ್ತು. ಇಂತಹ ದುಷ್ಕೃತ್ಯದ ಇತಿಹಾಸ ಇರುವ ದ್ವೀಪದ ಬಗೆಗೆ ‘ಟ್ರೆಶರ್ ಐಲ್ಯಾಂಡ್’, ‘ಪೀಟರ್ ಪ್ಯಾನ್’ ಮೊದಲಾದ ಕಥೆಗಳು ಬಂದಿವೆ.
ಕ್ಯೂಬಾದ ಆಹಾರ ತಯಾರಿಯಲ್ಲಿ ಅಕ್ಕಿಗೆ ಮೊದಲ ಪ್ರಾಶಸ್ತ್ರ. ಹಂದಿ ಮತ್ತು ಕೋಳಿ ಮಾಂಸ ಇಲ್ಲಿನ ಜನರಿಗೆ ಪ್ರಿಯವಾದದ್ದು. ಮಸಾಲೆಯ ಬಳಕೆ ಕಡಿಮೆ. ಕಪ್ಪು ಬೀನ್ಸ್ ಮತ್ತು ಅಕ್ಕಿಯನ್ನು ಸೇರಿಸಿ ತಯಾರಿಸಲಾಗುವ ಮೊರೊಸ್ ವೈ ಕ್ರಿಸ್ಟಿಯಾನೋಸ್ ಎನ್ನುವುದು ಜನಪ್ರಿಯ ಖಾದ್ಯ. ಅಜಿಕಾವೊ ಎನ್ನುವುದು ಮಾಂಸ ಮತ್ತು ತರಕಾರಿಗಳ ಸ್ಟ್ಯೂ. ಹಂದಿಯನ್ನು ಹುರಿದು ಲೆಚನ್ ಅಸಾಡೊ ತಯಾರಿಸಲಾಗುತ್ತದೆ. ಡಾರ್ಕ್ ಕಾಫಿ ಕ್ಯೂಬನ್ನರ ನೆಚ್ಚಿನ ಪಾನೀಯವೆನಿಸಿದೆ. ಕ್ಯೂಬಾದಲ್ಲಿ ಯುನೆಸ್ಕೋ ಒಂಭತ್ತು ವಿಶ್ವ ಪರಂಪರೆಯ ತಾಣಗಳನ್ನು ಗುರುತಿಸಿದೆ. ಹಳೆಯ ಹವಾನಾ, ಟ್ರಿನಿಡಾಡ್ ಮತ್ತು ವ್ಯಾಲಿ ಡಿ ಲಾಸ್, ಸ್ಯಾನ್ ಪೆಡ್ರೊ ಡೆ ಲಾ ರೋಕಾ ಕೋಟೆ, ವಿನಾಲ್ಸ್ ಕಣಿವೆ ಮೊದಲಾದವು ಈ ಬಗೆಯಲ್ಲಿ ಗುರುತಿಸಿಕೊಂಡ ಕೆಲವು ತಾಣಗಳಾಗಿವೆ. ವಿನಾಲ್ಸ್ ಕಣಿವೆಯು ಮ್ಯೂರಲ್ ಡೆ ಲಾ ಪ್ರಿ ಹಿಸ್ಟೋರಿಯಾಕ್ಕೆ ನೆಲೆ ಎನಿಸಿಕೊಂಡಿದೆ. ಇದನ್ನು ಪ್ರಿ ಹಿಸ್ಟರಿ ಮ್ಯೂರಲ್ ಎಂದೂ ಕರೆಯಲಾಗುತ್ತದೆ. ಈ ಕಲಾಕೃತಿಯು ನಾಲ್ಕುನೂರು ಅಡಿಗಳಷ್ಟು ಉದ್ದವಾಗಿದ್ದು, ಡೈನೋಸಾರ್, ಸಮುದ್ರ ರಾಕ್ಷಸ, ಬೃಹತ್ ಗೂಳಿ, ಮನುಷ್ಯ ಎಲ್ಲದರ ಚಿತ್ರಣವಿದೆ. ಈ ಕಲಾಕೃತಿಯನ್ನು ರೂಪಿಸಲು ಹದಿನೆಂಟು ಜನ ಕಲಾವಿದರು ನಿರಂತರವಾಗಿ ದುಡಿದಿದ್ದಾರೆ. ನಾಲ್ಕು ವರ್ಷಗಳಷ್ಟು ಸಮಯ ಬೇಕಾಗಿದೆ.

ಸ್ಯಾಂಟೆರಿಯಾ ಎನ್ನುವುದು ಕ್ಯೂಬಾದಲ್ಲಿ ನಡೆದ ಪ್ರಮುಖ ಧಾರ್ಮಿಕ ಚಳುವಳಿ. ಇದು ಪಶ್ಚಿಮ ಆಫ್ರಿಕನ್ ಮೂಲದ ಅನೇಕ ಸಂಪ್ರದಾಯಗಳನ್ನು ಆಧರಿಸಿಕೊಂಡಿದೆ. ಒರಿಶಾಗಳೆಂಬ ದೇವದೂತರನ್ನು ಪ್ರಾರ್ಥಿಸುವ ಪರಿಪಾಠ ಈ ಧರ್ಮದಲ್ಲಿದೆ. ಇದರ ಕೆಲವು ಆಚರಣೆಗಳು ರೋಮನ್ ಕ್ಯಾಥೋಲಿಕ್ ಧರ್ಮದ ಜೊತೆಗೆ ಸಾಮ್ಯತೆ ಹೊಂದಿದೆ. ದೇಶದ ನಲುವತ್ತು ಪ್ರತಿಶತ ಜನರು ರೋಮನ್ ಕ್ಯಾಥೋಲಿಕ್ ಧರ್ಮದ ಅನುಯಾಯಿಗಳು. ಆದರೆ ಹೀಗೆ ಗುರುತಿಸಿಕೊಂಡವರೆಲ್ಲರೂ ಧರ್ಮಾಚರಣೆಯ ಬಗೆಗೆ ಒಲವು ತೋರಿಲ್ಲ. ಕೆಲವರು ಮಾತ್ರವೇ ಧಾರ್ಮಿಕ ಅಭ್ಯಾಸಗಳನ್ನು ಇಟ್ಟುಕೊಂಡಿದ್ದಾರೆ. ಪ್ರೊಟೆಸ್ಟೆಂಟ್ಗಳ ಸಂಖ್ಯೆ ಕಡಿಮೆ ಇದ್ದರೂ, ವೇಗವಾಗಿ ಈ ಸಂಖ್ಯೆ ಹೆಚ್ಚುವ ಲಕ್ಷಣ ಕಂಡುಬರುತ್ತಿದೆ. ಉಳಿದವರು ಯಹೂದಿಗಳು ಮತ್ತು ಮುಸ್ಲಿಮರು. ಇವರ ಸಂಖ್ಯೆ ತೀರಾ ಕಡಿಮೆ. ಸುಮಾರು ಇಪ್ಪತ್ತು ಶೇಕಡಾದಷ್ಟು ಜನರು ಯಾವುದೇ ಧರ್ಮದ ಜೊತೆಗೆ ಗುರುತಿಸಿಕೊಂಡಿಲ್ಲ. ನಾಸ್ತಿಕವಾದದ ಕಡೆಗೆ ಆಕರ್ಷಿತರಾಗಿದ್ದಾರೆ.
ಕ್ಯೂಬಾದಲ್ಲಿ ಸ್ಪ್ಯಾನಿಷ್ ಭಾಷೆಯ ಬಳಕೆಯಿದೆ. ಇಲ್ಲಿ ಅನೇಕ ಜನಾಂಗಗಳಿವೆ. ಆದರೂ ಯಾವುದೇ ಉಪಭಾಷೆಗಳಿಲ್ಲ. ಜನಾಂಗಗಳು ಸ್ಪ್ಯಾನಿಷ್ ಭಾಷೆಯನ್ನೇ ಬೇರೆ ಬೇರೆ ಉಚ್ಚಾರಣಾ ರೀತಿಯಲ್ಲಿ ಆಡುವುದರಿಂದ ತುಸು ಬದಲಾವಣೆ ಕಂಡುಬರುತ್ತದೆ. ಇಲ್ಲಿ ಬದುಕುತ್ತಿರುವ ಆಫ್ರಿಕನ್ನರಿಂದಾಗಿ ಕೆಲವು ಆಫ್ರಿಕನ್ ಪದಗಳು ಸೇರಿಕೊಂಡಿವೆ. ಅನುನಾಸಿಕ ಶೈಲಿಯ ಉಚ್ಚಾರಣೆ ಕಂಡುಬರುತ್ತದೆ. ಇಲ್ಲಿರುವ ಭಾರತೀಯರು ತಮ್ಮ ಬಳಕೆಯ ಪದಗಳನ್ನು ಇಲ್ಲಿನ ಭಾಷೆಗೆ ಸೇರಿಸಿದ್ದಾರೆ. ಕನ್ನಡದ ಪದಗಳೂ ಸಹ ಕ್ಯೂಬನ್ ಭಾಷೆಯ ಜಾಯಮಾನಕ್ಕೆ ತಕ್ಕಂತೆ ಬದಲಾಗಿದೆ. ಆರಾಮ ಎಂಬ ಪದ ಅಲ್ಲಿಯ ಭಾಷೆಯಲ್ಲಿ ಹಮಾಕಾ ಎಂದಾಗಿದೆ. ಕ್ಯೂಬಾದ ಸಾಹಿತ್ಯ ಕ್ಷೇತ್ರಕ್ಕೆ ವಿಸ್ತೃತವಾದ ಇತಿಹಾಸವಿಲ್ಲ. ಹದಿನೆಂಟನೇ ಶತಮಾನದ ಕೊನೆಯಲ್ಲಿ ಕ್ಯೂಬಾ ಸಾಹಿತ್ಯ ಗುರುತಿಸುವಿಕೆಗೆ ಒಳಗಾಯಿತು. ಹತ್ತೊಂಬತ್ತನೇ ಶತಮಾನದ ಮೊದಲಿಗೆ ಅನೇಕ ಬರಹಗಾರರು ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ಆಧುನಿಕತಾವಾದಿ ಬರವಣಿಗೆಯೂ ಸಹ ಇದೇ ಸಮಯದಲ್ಲಿ ಕಾಣಿಸಿಕೊಂಡಿತು. ಸ್ಪೇನ್ನಿಂದ ಸ್ವಾತಂತ್ರ್ಯವನ್ನು ಪಡೆಯಲು ಬೇಕಾದ ಮನೋಭೂಮಿಕೆಯನ್ನು ಸೃಜಿಸುವ ಪ್ರಯತ್ನ ತೀವ್ರತರವಾಗಿ ನಡೆಯಿತು. ಸಮಾಜದಲ್ಲಿರುವ ದೋಷಗಳನ್ನು ಹೋಗಲಾಡಿಸುವುದಕ್ಕಾಗಿ ಸಿಡಿದೇಳುವ ಮನೋಭಾವವನ್ನು ಕ್ಯೂಬಾದ ಸಾಹಿತಿಗಳು ಕ್ಯಾಸ್ಟ್ರೋ ಆಡಳಿತಕ್ಕೂ ಮೊದಲೇ ವ್ಯಕ್ತಪಡಿಸಿದ್ದಾರೆ.

ಇಪ್ಪತ್ತನೇ ಶತಮಾನದ ವೇಳೆಗೆ ಸಾಹಿತ್ಯ ರಚನೆಗಳಲ್ಲಿ ಸಣ್ಣಕಥೆಗೆ ಪ್ರಾಧಾನ್ಯತೆ ದೊರಕಿತು. ಕಾದಂಬರಿಗಳೂ ಸಹ ಬಂದವು. ಕ್ರಾಂತಿಯ ನಂತರದ ಕಾಲಘಟ್ಟದಲ್ಲಿ ಸಾಕಷ್ಟು ಜನ ಬರಹಗಾರರು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದುಕೊಂಡರು. ಅವರಲ್ಲಿ ಕೆಲವರು ಆಡಳಿತಾರೂಢ ಸರ್ಕಾರವನ್ನು ಎದುರುಹಾಕಿಕೊಂಡು ದೇಶದಿಂದ ಹೊರಹಾಕಲ್ಪಟ್ಟರು. ಇಪ್ಪತ್ತೊಂದನೇ ಶತಮಾನದಲ್ಲಿ ಕ್ಯೂಬಾ ಸಾಹಿತ್ಯ ವಲಯದಲ್ಲಿ ಕಾದಂಬರಿಗಳು ಪ್ರಮುಖವಾಗಿವೆ. ನಿಯತಕಾಲಿಕಗಳಿಗೂ ಒಳ್ಳೆಯ ಸ್ಥಾನ ದೊರಕಿದೆ.

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ), ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.
