ಹಳ್ಳಿಕೊಂಪೆಯ ಮೂಲಮನೆಯ ಕಾಲ ಗರ್ಭದ ಹಿಂದಿನ ದಿನಗಳಲ್ಲಿ ಯಾರ್ಯಾರೋ ಹಿರಿಯರು ಕಾಲವಾದಾಗ ಹೇಳಿಸುತ್ತಿದ್ದ ಗರುಡಪುರಾಣದ ವಿವರಗಳೆಲ್ಲ ಇಲ್ಲಿ ಈಗ ಜೀವನದಲ್ಲಿ ಮೊದಲ ಅನುಭವವಾಗಿ ಬಾಲ್ಕನಿಯಲ್ಲಿ ನಿಂತು ಹೊಸ ಬದುಕಿನ ಹುಡುಕಾಟವನ್ನು ನಡೆಸುತ್ತಿದ್ದ ಗಂಗಮತ್ತೆಯ ನೆನಪಿಗೆ ಬಂದು ನಿಜವೆನಿಸತೊಡಗುತ್ತಿದ್ದಂತೆ ಒಂದು ದಿನ ಪಕ್ಕದ ಫ್ಲಾಟಿನ ವಿರಸ ದಾಂಪತ್ಯದ ಸಾಫ್ಟ್ವೇರ್ ಉದ್ಯೋಗದ ಎಳೆಯ ತರುಣಿ ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿ ಅಂತ್ಯವನ್ನು ಕಂಡಾಗ….
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಉದ್ಯಾವರ ಮಾಧವ ಆಚಾರ್ಯ ಕತೆ “ಮಹಾಪ್ರಸ್ಥಾನ”
ಹೊರಡುವ ಕ್ಷಣ. ಎಲ್ಲರೂ ಸಿದ್ಧರಾಗಿದ್ದಾರೆ. ಪಡಸಾಲೆಯ ಒಳಬಾಗಿಲನ್ನು ದೂಡಿ ಗಂಗಮತ್ತೆ ಹೊರಬರುವುದೊಂದೇ ಬಾಕಿ. ತಡ ಮಾಡದೆ ಅವರೂ ಹೊರಬಂದೇ ಬಿಟ್ಟರು. ಯಾವ ಉದ್ವೇಗವೂ ಇಲ್ಲದೆ. ಯಾರು ಯಾರಿಗೂ ಹೇಳದಿದ್ದರೂ ಎಲ್ಲರ ಮನಸ್ಸಿನೊಳಗೆ ಒಂದು ಆತಂಕ ಬಲವಾಗಿ ಹೊಗೆಯಾಡಿಕೊಂಡೇ ಇತ್ತು… ಮತ್ತೇನಲ್ಲ. ಆಖೈರಿಯಾಗಿ ಆ ಹಳ್ಳಿಕೊಂಪೆಯ `ಮೂಲಮನೆ’ಯನ್ನು ತೊರೆದು ಬಹು ದೂರದ ಮಹಾನಗರಿಯಲ್ಲಿರುವ ಹಿರಿಯ ಮಗನೊಂದಿಗೆ ಖಾಯಂ ವಾಸ್ತವ್ಯ ಹೂಡಲು ಎಂಬತ್ತು ದಾಟಿದ ಗಂಗಮತ್ತೆ ಹೊರಡುವ ಆ ಕ್ಷಣವೇನು ಸಾಮಾನ್ಯವಾದುದೇ – ಖಂಡಿತ ಗಂಗಮತ್ತೆ ಕಾರುತಿಂಗಳಲ್ಲಿ ಮಳೆ ಸುರಿದ ಹಾಗೆ ಧೋ ಎಂದು ಕಣ್ಣೀರು ಸುರಿಸುತ್ತ ಕುಸಿಯುತ್ತಾರೆ ಎಂದೇ ಎಲ್ಲರ ಎಣಿಕೆ.
ಅಡುಗೆ ಮನೆಯಲ್ಲೊಮ್ಮೆ, ಸದಾ ನಂದಾದೀಪ ಉರಿಯುತ್ತಿದ್ದ ವಿಶಾಲವಾದ ದೇವರಕೋಣೆಯ ಬಾಗಿಲ ಬಳಿಯಲ್ಲೊಮ್ಮೆ, ಜಗುಲಿಯ ಆ ಕೆತ್ತನೆಯ ಕಂಬದ ಬುಡದಲ್ಲೊಮ್ಮೆ ಅಲ್ಲೊಮ್ಮೆ ಇಲ್ಲೊಮ್ಮೆ ಗೋಡೆಗೊರಗಿ ಕನ್ನಂಬಾಡಿ ಕಟ್ಟೆಯಿಂದ ಗೇಟು ತೆರೆದಾಗ ಹೊರಗೆ ಹಾರುವ ಕಾವೇರಿ ಪ್ರವಾಹದಂತೆ ಗಂಗಮತ್ತೆ ಕಣ್ಣೀರು ಸುರಿಸಿಯೇ ಸುರಿಸುತ್ತಾರೆ ಎಂದು ಹೊರಟ ಎಲ್ಲರೂ ಮಾತ್ರವಲ್ಲ ಬೀಳ್ಕೊಡಲು ಬಂದ ಅಕ್ಕಪಕ್ಕದ ಎಲ್ಲರೂ ಬಲವಾಗಿ ನಂಬಿದ್ದರೆ ಏನೂ ಆಗಲಿಲ್ಲ ಎಂಬಂತೆ ಗಂಗಮತ್ತೆ ಅಂಗಳದಲ್ಲಿ ಬಂದು ನಿಂತಿದ್ದ ಜೀಪು ಹತ್ತಿದರು.
ಇದೇನು, ಸಾಮಾನ್ಯ ವಿಷಯವೇ! ಒಂದೆರಡು ವರ್ಷಗಳ ಅಲ್ಪ ಅವಧಿಯಲ್ಲಿ ವಾಸವಾಗಿದ್ದ ಬಾಡಿಗೆ ಮನೆಯನ್ನು ತೊರೆದು ಊರಿಂದೂರಿಗೆ ಹೊರಡುವಾಗಲೇ ಎಷ್ಟೊಂದು ಭಾವನಾತ್ಮಕ ಒತ್ತಡಗಳಿಂದ ಬಳಲುತ್ತೇವೆ ನಾವೆಲ್ಲ. ತಮ್ಮ ಜೀವಿತದ ಬಹುಪಾಲು – ಹೆಚ್ಚು ಕಡಿಮೆ ಅರವತ್ತು-ಎಪ್ಪತ್ತು ವರ್ಷಗಳ ದೀರ್ಘ ಅವಧಿಯಲ್ಲಿ ಗೂಟ ಹೊಡೆದು ಹಗ್ಗ ಕಟ್ಟಿ ಮೇಯಲು ಬಿಟ್ಟ ಹಸುವಿನಂತೆ ಆ ಮೂಲಮನೆಗಂಟಿದ್ದ ಗಂಗಮತ್ತೆ ಶಾಶ್ವತವಾಗಿ ಎಂದೂ ಕಾಣದ ಮಹಾನಗರಿಯ ಬಹುಮಹಡಿ ಸೌಧದ ಹದಿನಾಲ್ಕನೆಯ ಅಂತಸ್ತಿನ ಮನೆಯೊಂದರಲ್ಲಿ ಶೇಷಾಯುಷ್ಯವನ್ನು ಕಳೆಯಲು ಹೊರಟಿದ್ದಾರೆ ಎಂದರೆ ಅದೇನು ಸಾಮಾನ್ಯ ವಿಷಯವೇ. . . .
ಸುಮಾರು ನಾಲ್ಕೈದು ವರ್ಷಗಳಿಂದಲೂ `ಗುಸುಗುಸು’ ಎಂಬಂತೆ ಹೊಗೆಯಾಡಿಕೊಂಡಿದ್ದ ಯೋಚನೆ….
ಯೋಜನೆ… ಯಾರು ಆ ಘಟ್ಟದ ಬುಡದ ಹಾಡಿಯ ನಡುವಿರುವ `ಹಳ್ಳಿಕೊಂಪೆ’ಯ ಮೂಲಮನೆಯನ್ನು ನೋಡಿಕೊಳ್ಳುವುದು? ಎಕ್ರೆಗಟ್ಟಲೆ ಗದ್ದೆ ಬೇಸಾಯ ಮಾಡಿಕೊಂಡಿರುವುದು? ಅದೆಲ್ಲಕ್ಕಿಂತ ಮುಖ್ಯವಾಗಿ ಎಂಬತ್ತು ತುಂಬುತ್ತಿರುವ ‘ಮಾತುಶ್ರೀ’ಯನ್ನು ನೋಡಿಕೊಳ್ಳುವುದು.
ಹಾಗೆಂದು ಗಂಗಮತ್ತೆ ಗಟ್ಟಿಮುಟ್ಟಾಗಿಯೇ ತಮ್ಮ ವೃದ್ಧಾಪ್ಯದ ದಿನಗಳನ್ನು ಆ ಮೂಲಮನೆಯಾಕಿ ಯಾರ ಹಂಗೂ ಇಲ್ಲದೆ ಕಳೆಯುತ್ತಿದ್ದಾರೆ. ಒಂದೇ ಒಂದು ದಿನವೂ ಆ ಜ್ವರ ಈ ಜ್ವರ ಕೆಮ್ಮು ಕಫ ಎಂದು ಚಾಪೆ ಹಿಡಿದು ಬಣ್ಣದ ಮದ್ದು ಕುಡಿದವರಲ್ಲ. ವರ್ಷಕ್ಕೊಮ್ಮೆ ಅಪ್ಪನ ಶ್ರಾದ್ಧಕ್ಕೆಂದು ಮಗ-ಮಗಳಂದಿರೆಲ್ಲ ಒಟ್ಟಾದಾಗ ಯಾವ ಗೊಣಗುವಿಕೆಯೂ ಇಲ್ಲದೆ ಎಲ್ಲಿಲ್ಲದ ಉತ್ಸಾಹ ಹುಮ್ಮಸ್ಸಿನಿಂದ ತಾನೇ ಆ ತಿಂಡಿ ಈ ತಿಂಡಿ ಕಡುಬು ಶ್ಯಾಮಿಗೆ ಪಾಯಸ ಎಂದು ತನ್ನ ಹದದಲ್ಲಿ ಮಾಡಿ ಮನೆಮಂದಿಗೆಲ್ಲ ಬಡಿಸಿ ನಾಲ್ಕಾರು ದಿನಗಳ ಕಾಲ ಕಾಲಗರ್ಭದಲ್ಲಿ ಮುಳುಗಿರುತ್ತಿರುವ ಆ ಮನೆಗೆ ಕಾಯಕಲ್ಪ ಕೊಡುತ್ತಿದ್ದಾರೆ. ಸಾಕಾಯಿತು ಈ ಕೊಂಪೆವಾಸ ಎಂಬ ಯಾವ ವೈರಾಗ್ಯದ ಉದ್ಗಾರವೂ ಇಲ್ಲದೆ ತಾನಿಲ್ಲಿ ಶಾಶ್ವತ ಎಂಬಂತೆ ಇದ್ದ ಈ ಗಂಗಮತ್ತೆಯೇ ಈ ಬಾರಿ ಅದ್ಯಾವ ಮಾಯಕದಿಂದಲೋ ಹಿರಿಯ ಸೊಸೆ `ಶಾಂತಿ’ ಎಂಬವಳು ಒಡಂಬಡಿಸಿ ಅವರ ಗಂಟುಮೂಟೆ ಕಟ್ಟಿಸುವುದರಲ್ಲಿ ಯಶಸ್ವಿಯಾಗಿ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾಳೆ.
ಹೌದಾ? ಹೌದಾ? ಸತ್ಯವಾ? ಗಂಗಮತ್ತೆ ಮನೆಬಿಡಲು ಒಪ್ಪಿಯೇ ಬಿಟ್ಟರಾ? ಎಂದು ಅಚ್ಚರಿಪಡುತ್ತಿದ್ದಂತೆ ಗಂಗಮತ್ತೆ ತಮ್ಮ ಹೆಬ್ಬೆಟ್ಟನ್ನೊತ್ತಿ ಕಾಗದ ಪತ್ರಗಳನ್ನೆಲ್ಲ ಮಕ್ಕಳ ಕೈಗೊಪ್ಪಿಸಿ ಆಗಲೇ ಮಾತುಕತೆ ನಡೆಸಿದಂತೆ ಆ ಮನೆ ತೋಟ ಗದ್ದೆಗಳನ್ನೆಲ್ಲ ಏನೋ ಒಂದು ಮೊಬಲಗಿಗೆ ಕೊಂಡುಕೊಳ್ಳಲು ಒಪ್ಪಿದವರಿಗೆ ಆ ಕಾಗದಪತ್ರಗಳನ್ನೆಲ್ಲ ನೀಡಿ ದೂರದ ಪೇಟೆಯ ಸಬ್ರಿಜಿಸ್ಟ್ರಾರ್ ಕಛೇರಿಯಲ್ಲಿ ರಿಜಿಸ್ತ್ರಿ ಮಾಡಿಸಿ ಮನೆಯನ್ನೆಲ್ಲ ಖಾಲಿ ಮಾಡಿ ಗಂಗಮತ್ತೆ ಸಹಿತ ಎಲ್ಲರೂ ಆ ಹಳ್ಳಿದಾರಿಯಲ್ಲಿ ಓಡಲು ಅರ್ಹತೆಯನ್ನು ಪಡೆದ ಜೀಪನ್ನೇರಿದಾಗ ಅಕ್ಕಪಕ್ಕದ ಒಕ್ಕಲು ಮಕ್ಕಳಲ್ಲಿ ಕೆಲವು ಹಳೆಯ ತಲೆಮಾರಿನವರು ಮಾತ್ರ `ಆಗಬಹುದು ಈ ಗಂಗಮ್ಮ… ದೊಡ್ಡ ಧೈರ್ಯ ಮಾಡಿಯೇ ಬಿಟ್ಟರಲ್ಲ…’ ಎಂದೆಲ್ಲ ತಮ್ಮತಮ್ಮೊಳಗೆ ಮಾತನಾಡುತ್ತ ಕಣ್ಣುಗಳನ್ನೊರೆಸಿಕೊಂಡ ಗಂಗಮತ್ತೆ ಯಾವ ಭಾವೋದ್ವೇಗಕ್ಕೂ ಒಳಗಾಗದೆ ಜೀಪಿನ ಓಲಾಟಕ್ಕೆ ಸರಿಯಾಗಿ ಅತ್ತಿಂದಿತ್ತ ಓಲಾಡುತ್ತ `ಅಯ್ಯಬ್ಬ ಅಮ್ಮಮ್ಮ’ ಎಂದು ಉದ್ಗರಿಸುತ್ತ ಒತ್ತೊತ್ತಿ ಕುಳಿತಿದ್ದ ಮಗಳು ಸೊಸೆಯಂದಿರು ಮೊಮ್ಮಕ್ಕಳನ್ನೆಲ್ಲ ನಗಿಸಿ ವಿಮಾನ ನಿಲ್ದಾಣದವರೆಗೆ ಸಾಗಿ ಜೀವನದಲ್ಲಿ ಮೊದಲಬಾರಿಗೆ ವಿಮಾನವನ್ನೇರಿ ಏನೂ ಆಗದವರಂತೆ ಮಹಾನಗರಿಯ ಕಡೆಗೆ ಪಯಣಿಸಿದರು. . . ತಮ್ಮ ಹಳೆಯ ಕಾಲದ ವಾಸ್ತವ್ಯವನ್ನು ತೊರೆದು. . .
ಅದೂ ಎಂಥ ಮನೆ!
ಹಾಡಿಯ ನಡುವೆ ದೇವಕನ್ಯೆಯಂತಿದ್ದ ಸೊಬಗಿನ ಮನೆ. . .
ಕಾವಿ ಬಣ್ಣದ ಗೋಡೆ. ಉಪ್ಪರಿಗೆ ಇಲ್ಲ. ಬದಲಿಗೆ ಮಧುಮಗನಿಗೆ ಬಾಸಿಂಗ ಕಟ್ಟಿದಂತೆ ಕಾಣುವ ಕಡಕಟ್ಟಿನ ಮನೆ. ಭಾರೀ ಗಾತ್ರದ ಜಂತಿ. ಒಂದೇ ರೀತಿಯ ಕೆತ್ತನೆಯ ಪಕ್ಕಾಸು – ಹೂಬಳ್ಳಿ ಹಕ್ಕಿಕೊಕ್ಕಿನ ಪದ್ಮರೇಖಾ ವಿನ್ಯಾಸದ ಸಾಲುಸಾಲು ಕಂಬಗಳು. ಅಷ್ಟೇ ಚೆಲುವು ತುಂಬಿದ ಬಾಗಿಲು ಕಿಟಕಿ ಪತ್ತಾಸುಗಳು. . .
ಈ ಎಲ್ಲವೂ ಈಗ ಪಂಚಾಂಗ ಸಹಿತ ಯಾವುದೋ ಹೆರಿಟೇಜ್ ಸಂಗ್ರಹಾಲಯದಲ್ಲಿ ಮರುಸ್ಥಾಪನೆಗೊಳ್ಳುವಂತೆ ಕಾಗದಪತ್ರಗಳ ವ್ಯವಸ್ಥೆಯಾಗಿದೆ. ಹಿರಿಯರ ಮುತ್ಸದ್ದಿತನದಿಂದಾಗಿ ಗಂಗಮತ್ತೆಯ ಸಂಪೂರ್ಣ ಒಡೆತನಕ್ಕೆ ಬಂದ ಈ ಆಸ್ತಿಪಾಸ್ತಿ ಸಂಪತ್ತೆಲ್ಲ ಅವರ ಹೆಬ್ಬೆಟ್ಟಿನ ಬಲದಿಂದ ಕಾಲಗರ್ಭದಿಂದ ಬಿಡುಗಡೆಗೊಂಡು ಆ ತಾಣಕ್ಕೆ ಅಂಟಿಕೊಳ್ಳಲಾಗದ ಇಂದಿನ ತಲೆಮಾರಿನ ಬಂಧುವರ್ಗ ನಿಟ್ಟುಸಿರುಬಿಡುವಂತಾಗಿದೆ.
ಗಂಗಮತ್ತೆ ಜೀಪುಹತ್ತಿ ಕುಳಿತಾಗ ಅವರಿಗೂ ಸರಪಳಿಯ ಬಿಗಿಯಿಂದ ಬಿಡುಗಡೆಗೊಂಡ ಅನುಭವವಾಗಿರಬಹುದೆ? ತಿಳಿಯದು. ಒಂದಂತು ಸತ್ಯ. ಸುಮಾರು ಅರುವತ್ತು ಎಪ್ಪತ್ತು ವರ್ಷಗಳ ಏಕತಾನದ ಬದುಕಿನ ಬಿಗಿಯಿಂದ ಈ ಗಂಗಮತ್ತೆ ಎಂಬವರು ಹಿರಿಯ ಸೊಸೆಯ ಮಾಯಕದ ಮಧ್ಯಸ್ಥಿಕೆಯಿಂದಾಗಿ ಹೊಸ ಹೆಜ್ಜೆ ಇರಿಸಲು ಹೊರಬಂದಿದ್ದಾರೆ. ಏನಿತ್ತು ಅವರಿಗೆ ಆ ಮನೆಯಲ್ಲಿ? ಹೇಗಿದ್ದರು ಅವರು ಈ ದೀರ್ಘ ಅವಧಿಯಲ್ಲಿ? ಅಂಗಳದಿಂದಿಳಿದು ಹಾಡಿಯ ಗಡಿದಾಟದ ಅವರ ದೇಹ ಆ ಮನೆಯ ಕಂಬದಂತೆ ಕದಲದೆ ಇತ್ತಲ್ಲ…
ಯಾರ ಊಹೆಗೂ ಸಿಗದ ವಿಷಯ…
ಪಡಸಾಲೆಯ ಕಿಟಕಿ ತೆಗೆದರೆ ಮಾತ್ರ ಒಂದಷ್ಟು ಬೆಳಕು… ಗಾಳಿ… ಹೊರಗಿನ ನೋಟ…. ಮತ್ತೆಲ್ಲ ಒಳಗಿನ ಕತ್ತಲು. ಆ ಕತ್ತಲಲ್ಲಿ ಕರಗಿದ ಜೀವ ಅವರದು… ಪಲ್ಲಕಿ ಹತ್ತಿ ಮದುಮಗಳಾಗಿ ಆ ಮನೆಗೆ ಬಂದವಳು….
‘ಇಲ್ಲಿಂದ ಇನ್ನೆಲ್ಲಿಗೂ ಹೋಗಲಾರೆ. ಹೋಗುವುದಿದ್ದರೆ ಅದು ಜೀವ ಹೋದ ಮೇಲೆ. . . ಚಟ್ಟ ಹತ್ತಿ ಕಾಷ್ಟಕ್ಕೇ’ ಎಂದು ಅವರ ಶೈಲಿಯಲ್ಲಿಯೇ ಅಬ್ಬರಿಸುತ್ತಿದ್ದ ಗಂಗಮತ್ತೆ ಅದೇ ಪಡಸಾಲೆಯಲ್ಲಿ ಹಿಂದಿನ ಒಂದೆರಡು ರಾತ್ರಿಗಳಲ್ಲಿ ಚಿಮಿಣಿದೀಪ ಆರಿದ ಮೇಲೆ ಕತ್ತಲಲ್ಲಿ ಹಿರಿಯ ಸೊಸೆ ಶಾಂತಿ ಮತ್ತೆ ಮತ್ತೆ ಹೇಳಿದ ಯಾವ ಬಣ್ಣನೆಯ ಮಾತುಗಳಿಗೆ ಬಲಿಯಾದರೋ…
‘ಮೂಡುಬೆಟ್ಟು ಶ್ರೀನಿವಾಸರಾಯರ ಧರ್ಮಪತ್ನಿಯ ಹೆಬ್ಬೆಟ್ಟು ಎಂದು ಬರೆದು ಯಾರಿಗೆ ಬೇಕೋ ಅವರಿಗೆ ಕೊಡಿ, ಏನು ಬೇಕೋ ಅದನ್ನು ಮಾಡಿ. ಹೇ ಹೇ’ ಎಂದು ಹೇಳುತ್ತ ನಗುವಿನ ಅಲೆಯನ್ನೆಬ್ಬಿಸಿದಾಗ ಆ ತುಂಬಿದ ಸಂಸಾರದ ಎಲ್ಲರೂ ಮೊದಲಬಾರಿಗೆ ಎಂಬಂತೆ ಆ ದೊಡ್ಡಮ್ಮನ ಬಾಯಿಯಿಂದ ಪತಿದೇವರ ಹೆಸರನ್ನು ಕೇಳಿ ತಮ್ಮ ಶ್ರವಣಶಕ್ತಿಯ ಬಗೆಗೇ ಅನುಮಾನಿಸುವಂತಾಗಿತ್ತು… ವಿಮಾನ ಪಯಣದುದ್ದಕ್ಕೂ ಜೊತೆಗಿದ್ದ ಮುಖ್ಯರಾದವರೆಲ್ಲ ಮಾತನಾಡಿಕೊಂಡಿದ್ದ ವಿಷಯ ಒಂದೇ – ‘ಆಗಬಹುದು, ಶಾಂತಿ. . . ಯಾರಿಂದಲೂ ಸಾಧಿಸಲಾಗದ್ದನ್ನು ಸಾಧಿಸಿಯೇ ಬಿಟ್ಟಳು. ಅದೇನೋ ನಮ್ಮ ಪುರಾಣದಲ್ಲಿ ಉಂಟಂತಲ್ಲ, ಮಹಾಪ್ರಸ್ಥಾನ. ಹಾಗೆ ನಮ್ಮ ಗಂಗಮತ್ತೆ ದೊಡ್ಡ ಮನಸ್ಸು ಮಾಡಿಯೇ ಬಿಟ್ಟರಲ್ಲ.’ ಅವರಲ್ಲಿ ಪುರಾಣ ಓದಿದವರು ಯಾರೂ ಇರಲಿಲ್ಲ. ಮಹಾಪ್ರಸ್ಥಾನದ ಅರ್ಥ ಅವರಿಗೆ ತಿಳಿದಿದೆಯೋ ಇಲ್ಲವೋ?
ಯಾವುದೋ ಯುಗದಲ್ಲಿ ಆ ಮಹಾಪ್ರಸ್ಥಾನಕ್ಕೆ ದ್ರೌಪದಿ ಸಹಿತ ಪಾಂಡವರು ಹಿಮಾಲಯವನ್ನೇರತೊಡಗಿದಂತೆ ಗಂಗಮತ್ತೆ ವಿಮಾನದಲ್ಲಿ ಕುಳಿತು ಮಹಾನಗರಿಯ ಕಡೆಗೆ ಸಾಗುತ್ತಿದ್ದಾಗಲೇ. . . ನಿಜ ಏನೆಂದರೆ ಆ ಕ್ಷಣ ಅವರಿಗೆ ತಾನು ಹಳ್ಳಿಕೊಂಪೆಯಿಂದ ಹೊರಟ ಜೀಪಿನಲ್ಲಿ ಕುಳಿತಿದ್ದೇನೆಯೆ? ಅಥವಾ ಆಕಾಶದ ಮಧ್ಯದಲ್ಲಿ ಭಾರೀ ಗಾತ್ರದ ವಿಮಾನದಲ್ಲಿ ಕುಳಿತು ಹಾರುತ್ತಿದ್ದೇನೆಯೇ ಎಂಬ ಯಾವ ವ್ಯತ್ಯಾಸದ ಅನುಭವವೂ ಆಗಿರಲಿಲ್ಲ…. ಬದಲು ಸೊಸೆ ಶಾಂತಿಯ ಸಂಧಾನದ ಮಾತುಗಳ ಮೆಲುಕು ಮಾತ್ರ ಅವರ ಮನಸ್ಸಿನಲ್ಲಿ ತುಂಬಿತ್ತು…. ಜೀಪು ಹತ್ತಿ ಇಳಿದು ವಿಮಾನ ಏರಿ ಸಾಗಿ ಮತ್ತೆ ಕಾರಲ್ಲಿ ಒಂದಷ್ಟು ಹೊತ್ತು ಪಯಣಿಸಿ ಆ ದೊಡ್ಡ ಬಹುಮಹಡಿ ಸೌಧದ ಲಿಫ್ಟನ್ನೇರಿ ಹದಿನಾಲ್ಕನೆಯ ಅಂತಸ್ತಿನ ಮಗನ ಮನೆಯ ಹೊಸ್ತಿಲೇ ಇಲ್ಲದ ಬಾಗಿಲನ್ನು ದೂಡಿ ಒಳಬಂದವರೆ ಪ್ರಯಾಣದ ಆಯಾಸವನ್ನೂ ಲೆಕ್ಕಿಸದೆ ಗಂಗಮತ್ತೆ ಎಲ್ಲರನ್ನೂ ಅಬ್ಬರಿಸಿ ಕೇಳಿದ್ದೊಂದೇ ವಿಷಯ – ಮಕ್ಕಳೇ, ಶಾಂತಿ ಅದೆಂಥದೋ ಬಾಲ್ಕಣ್ಣಿ. . . ಅಲ್ಲಿ ನಿಂತ್ರೆ ಸ್ವರ್ಗದ ಬಾಗಿಲೇ ಕಾಣುತ್ತೇ ಅತ್ತೆ ಅಂದಿದ್ದಳಲ್ಲ – ಎಲ್ಲಿ ಮಕ್ಕಳೇ ಆ ಬಾಲ್ಕಣ್ಣಿ. . . ಈ ಮನೆಯೊಳಗೆಯಾ ಅಥವಾ ಬೇರೆ ಕಡೆಯಾ… ತೋರ್ಸಿ ಮೊದ್ಲು ನಂಗೆ. . .’
ತಮ್ಮ ನಿಂತ ನೀರಿನಂತಿದ್ದ ಸುದೀರ್ಘ ಜೀವನಕ್ಕಂಟಿದ ಹಳ್ಳಿಕೊಂಪೆಯ ಹೆಚ್ಚು ಕಡಿಮೆ ತಲೆ ತಗ್ಗಿಸಿಯೇ ಅಡ್ಡಾಡಬೇಕಿದ್ದ ಅಟ್ಟ ಮಾತ್ರವಿದ್ದ ಮೂಲಮನೆಯಲ್ಲಿಲ್ಲದ ಆ ಎತ್ತರದ ಬಾಲ್ಕನಿ ಎಂಬ ಆಧುನಿಕ ವಾಸ್ತುವಿನಲ್ಲಿ ಹೊಸ ಕಣ್ಣು ಹೊಸ ನೋಟ ಹೊಸ ಬದುಕು ಖಂಡಿತ ಸಾಧ್ಯ ಎಂಬ ನಂಬಿಕೆಯ ನಿರೀಕ್ಷೆಯ ಬಲದಿಂದಲೇ ಇಲ್ಲಿಯವರೆಗೆ ಮಂತ್ರಮುಗ್ಧರಂತೆ ಬಂದ ಮುದುಕಿ ಗಂಗಮತ್ತೆ ಮತ್ತೆ ಮತ್ತೆ ಕೇಳಿದರು – ಬಾಲ್ಕನಿ ಎಲ್ಲೇ? ಆ ಬದಿಯಾ ಈ ಬದಿಯಾ ಮೇಲಾ, ಕೆಳಗಾ? ಬಾಲ್ಕನಿ ತೋರ್ಸಿಯಾ…..?’
ತಿಂಗಳ ಕಾಲ ಕಾಣದ ಈ ಮನೆಯ ಅಕ್ಕಪಕ್ಕದವರೆಲ್ಲ ಇವರು ಬಂದ ವಿಷಯ ತಿಳಿದು ಒಬ್ಬೊಬ್ಬರಾಗಿಯೇ ಬಂದು ಗಂಗಮತ್ತೆ ಅರಿಯದ ಭಾಷೆಯಲ್ಲಿ ಬಡಬಡಿಸಿ ವಿಚಾರಿಸುತ್ತಿದ್ದರೂ ಅದ್ಯಾವುದಕ್ಕೂ ಕಿವಿಗೊಡದ ಗಂಗಮತ್ತೆ ತನ್ನವರನ್ನು ಮತ್ತೆ ಮತ್ತೆ ಕೇಳಿದರು ‘ಬಾಲ್ಕನಿ ಎಲ್ಲಿಯಾ…. ಬಾಲ್ಕನಿ ತೋರ್ಸಿಯಾ…. ಶಾಂತಿ ಹೇಳಿದ ಸ್ವರ್ಗದ ಬಾಗಿಲು ಎಲ್ಲಿಯಾ?’
ಮೂಲೆಕೊಂಪೆಯ ಮೂಲಮನೆಯಿಂದ ಶಾಶ್ವತವಾಗಿ ಗಂಗಮತ್ತೆಯನ್ನು ಹೊರಡಿಸಲು ಸೊಸೆ ಶಾಂತಿ ಪ್ರಯೋಗಿಸಿದ ಮೂರಕ್ಷರಗಳ ಮಹಾಮಂತ್ರ ಇದೀಗ ರಹಸ್ಯವಾಗಿ ಉಳಿಯಲಿಲ್ಲ. ಹದಿನಾಲ್ಕನೆಯ ಅಂತಸ್ತಿನ ಮಗನ ಆ ಫ್ಲಾಟನ್ನು ಸೇರಿದ ಕ್ಷಣದಿಂದ ಗಂಗಮತ್ತೆ ಉರು ಹೊಡೆಯುವಂತೆ ಉದ್ಗರಿಸುತ್ತಿದ್ದ `ಬಾಲ್ಕನಿ’ ಎಂಬುದೇ ಆ ಮೂರಕ್ಷರಗಳ ಮಹಾಮಂತ್ರವೆಂದು ಎಲ್ಲರೂ ತಿಳಿದರೂ ಯಾರೂ ಅದನ್ನು ಹಾಸ್ಯಾಸ್ಪದವೆಂದೆಣಿಸದೆ ಗಂಭೀರವಾಗಿ ಪರಿಗಣಿಸಿ -`ತೋರಿಸುವಾ ತೋರಿಸುವಾ. ಪ್ರಯಾಣದ ದಣಿವು ಕಡಿಮೆಯಾಗಲಿ ಅತ್ತೆ, ಪಾನಕ ಆದೀತಾ ಕಾಪಿಯಾ?’ ಎಂದು ಉಪಚರಿಸತೊಡಗಿದರೂ ಗಂಗಮತ್ತೆ ಮಾತ್ರ ತನ್ನ ಬಾಲ್ಕನಿ ಜಪವನ್ನು ನಿಲ್ಲಿಸಲೇ ಇಲ್ಲ. ಹಾಗಾಗಿ ಮೊಮ್ಮಗಳು ಮಂಗಳೆ ಎಂಬವಳಿಗೆ ಅಜ್ಜಿಗೆ ಫ್ಲಾಟಿನ ಉತ್ತರದಿಕ್ಕಿನ ಬಾಲ್ಕನಿಯನ್ನು ತೋರಿಸುವ ಹೊಣೆಗಾರಿಕೆಯನ್ನು ಸರ್ವಾನುಮತದಿಂದ ವಹಿಸಲಾಯಿತು….
ಜಾಗ್ರತೆ ಅಜ್ಜಿ…. ಮೆಲ್ಲ ಮೆಲ್ಲ…. ಇದು ಮೂಲಮನೆಯ ಜಗುಲಿ ಅಲ್ಲ. ಇದು ಬಾಲ್ಕನಿ…. ನೀವು ಮಡಿಸೀರೆ ಒಣಗಿಸುವ ಅಟ್ಟ ಅಲ್ಲ, ಮೆಲ್ಲ, ಮೆಲ್ಲ. . . ನೋಡಿ. ಮೇಲೆ ನಿಂತರೆ ಕೆಳಗೆ ಹೇಗೆ ಕಾಣಿಸ್ತದೆ. ಎಂದೆಲ್ಲ ವಿವರಿಸುತ್ತ ಮಂಗಳಾ ಅಜ್ಜಿಯ ಕೈ ಹಿಡಿದು ವಿಶಾಲವಾದ ಆ ಬಾಲ್ಕನಿಯ ಅಡ್ಡಗೋಡೆಯ ಬಳಿ ಕರೆದೊಯ್ದಾಗ ತನ್ನ ಸೀರೆಯ ಸೊಂಟದ ಬಾಳೆಕಾಯಿಯನ್ನು ಸರಿಪಡಿಸಿಕೊಳ್ಳುತ್ತ `ಎಲ್ಲಿ ಎಲ್ಲಿ ಕಾಂಬ ಕಾಂಬ’ ಎಂದು ಹೊರಬಂದು ಆ ಬೀಸುಗಾಳಿಗೆ ನೆರಿಗೆ ಕಟ್ಟಿದ ತನ್ನ ಮುಖವನ್ನೊಡ್ಡಿದ ಗಂಗಮತ್ತೆ ಒಂದೇ ಉಸಿರಿನಲ್ಲಿ ಉದ್ಗರಿಸಿದರು… ‘ಸತ್ಯವಾ! ಶಾಂತಿ ಹೇಳಿದ್ದೆಲ್ಲ ಸತ್ಯ! ಇದು ಸ್ವರ್ಗದ ಬಾಗಿಲೇ….. ಅಗ! ಆಕಾಶ ಎಷ್ಟು ಹತ್ತಿರ… ಹೋ! ಕೆಳಗೆ ನೋಡಾ. . . ಅಬ್ಬ. . . ನರಕ?. . . ಎಷ್ಟು ಆಳ ಮಹರಾಯ್ತಿ.
ಮೇಲೆ ಸ್ವರ್ಗ ಕೆಳಗೆ ನರಕ ನಡುವೆ ಬಾಲ್ಕನಿ ಎಂಬ ಆ ಎತ್ತರದಲ್ಲಿ ಜೀವನದಲ್ಲಿ ಮೊದಲ ಬಾರಿಗೆ ಬಂದು ನಿಂತ ಗಂಗಮತ್ತೆ ತಾಯಿಯ ಕೈಹಿಡಿದು ಮೊದಲ ಹೆಜ್ಜೆ ಇಡಲು ಕಲಿಯುವ ಮಗುವಿನಂತಾದರು. . . ಹಳ್ಳಿಕೊಂಪೆಯ ಆ ಮೂಲಮನೆಯಲ್ಲಿ ಲಾಗಾಯ್ತಿನಿಂದ ಅದೆಷ್ಟೋ ಮಕ್ಕಳ ಕೈ ಹಿಡಿದು ಜಗುಲಿಯಲ್ಲಿ ನಡೆಸಲು ಕಲಿಸಿಕೊಟ್ಟ ಗಂಗಮತ್ತೆ ಮೊಮ್ಮಗಳು ಮಂಗಳೆಯ ಕೈ ಹಿಡಿದು ಇಲ್ಲೀಗ ತಾವೇ ಮಗುವಿನಂತಾದರು. . .
‘ಯಾವಾಗಲೋ ಒಮ್ಮೆ ಶ್ರಾವಣದಲ್ಲಿ ಪುರಾಣ ಪ್ರವಚನಕ್ಕೆ ಪುರಾಣಿಕರನ್ನು ನಮ್ಮವರು ಅದೇ – ನಿನ್ನ ದೊಡ್ಡ ಅಜ್ಜ ಮೂಡುಬೆಟ್ಟು ಶ್ರೀನಿವಾಸರಾಯರು. . . ಎಂಥವರು ಅಂತಿ…. ಕಾಸು ಬಿಡದ ಜಿಪುಣ. ನನ್ನ ಕೈಗೆ ಒಂದೇ ಒಂದು ಕಾಸು ಕೊಟ್ಟವರಲ್ಲ – ಕರೆಸಿ ಮಾಭಾರತವೋ ರಾಮಾಯಣವೋ ಓದಿಸಿದಾಗ. . . ಎಂತ ನಿನ್ನ ಹೆಸ್ರು, ಮಂಗಳೇ. . . ಹಾಂ. ಆ ಪುರಾಣಿಕರು ಅಡಿಗಡಿಗೆ ರಾಗವಾಗಿ ಹೇಳಿದ್ದೆಲ್ಲ ನೆನಪಾಗುತ್ತಿದೆ ನೋಡು. . . ಅದೇ… ನಭೋ ಮಂಡಲದಲ್ಲಿ. . .’ ಎಂದು ಬದಿಯಲ್ಲಿದ್ದ ಮಂಗಳೆಗೇ ಹೇಳುತ್ತಿದ್ದೇನೆ ಎಂಬ ಭ್ರಮೆಯಿಂದ ರಾಗವಾಗಿ ‘ನಭೋಮಂಡಲದಲ್ಲಿ ನಾರದರು’ ಎಂದು ಗಂಗಮತ್ತೆ ಹೇಳತೊಡಗಿದಾಗ ಕೇಳಲು ಮಂಗಳೆ ಎಲ್ಲಿ? ಒಮ್ಮೆ ಈ ಅಜ್ಜಿಯ ಕೈಸೆರೆಯಿಂದ ಬಿಡಿಸಿಕೊಂಡರೆ ಸಾಕೆಂದು ಏನೋ ನೆಪದಲ್ಲಿ ಮಾಯಕವಾಗಿದ್ದರಿಂದ ಗಂಗಮತ್ತೆ ಹಾಡಿದ್ದನ್ನು ಕೇಳಲು ಆ ಬಾಲ್ಕಿನಿಯ ಹೊರಗಿನ ನಭೋಮಂಡಲದಿಂದಲೇ ಯಾರೋ ಬರಬಹುದೆಂಬ ನಿರೀಕ್ಷೆಯ ಗಂಗಮತ್ತೆ ಮಾತ್ರ ಅಲ್ಲಿ ಒಬ್ಬರಾಗಿಯೇ ಉಳಿಯುವಂತಾಯಿತು.
ಮತ್ತೆ ನಡೆದದ್ದೆಲ್ಲ ಅದೇ ಅಲ್ಲವೇ. . . ಆ ಬಾಲ್ಕಣ್ಣಿನ ಬಾಗಿಲ ಬಳಿ ಗಂಗಮತ್ತೆ ದೇವಸ್ಥಾನದ ಮೂಲ ಬಿಂಬದಂತೆ ಸ್ಥಾಪನೆಯಾಗಿಬಿಟ್ಟರು. ಮುಂಜಾನೆ ಮನೆಮಂದಿ ಏಳುವ ಮೊದಲೇ ಎದ್ದು ಬದಿ ಬಚ್ಚಲನ್ನು ಹೊಕ್ಕು ಅಭ್ಯಾಸ ಬಲದಿಂದ ಮೈಮೇಲೆ ಒಂದಿಷ್ಟು ನಳ್ಳಿನೀರು ಸುರಿಸಿಕೊಂಡು – ದೇವರಕೋಣೆ ಎಲ್ಲಿ ಈ ಫ್ಲಾಟಿನಲ್ಲಿ – ಎಂಬ ಪ್ರಶ್ನೆಗೆ ಬಂದ ದಿವಸವೇ ನಕಾರಾತ್ಮಕ ಉತ್ತರ ಸಿಕ್ಕಿದ್ದರಿಂದ – ಮಡಿಸೀರೆ ಉಟ್ಟು ತಾನೇ ಬಾಗಿಲನ್ನು ತೆರೆದು ಬಾಲ್ಕನಿಯ ಅಡ್ಡಗೋಡೆಗೆ ಒರಗಿ ನಿಂತರೆ ಮತ್ತೆ ಗಂಗಮತ್ತೆ ಮನೆಯ ಒಳಗೆ ಬರುವುದೆಂದರೆ ಅದೇ ಕಾಫಿ ತಿಂಡಿ ಊಟಕ್ಕೆ ಮಾತ್ರ ಎನ್ನುವಂತಾಯಿತು. ಬರುವುದು ಎಂದರೆ ಬಂದು ಹೋಗುವುದು ಎಂದೇ ಅರ್ಥ.
ಮನೆಯ ಒಳಗೆ ಕ್ಷಣಕಾಲ. ಹೊರಬಾಲ್ಕನಿಯಲ್ಲಿ ದಿನವಿಡೀ. ಹೊರಗೆ ಧೂಳು… ಬಿಸಿಲಿನ ಕಾವು… ಒಳಗೆ ತಂಪಿನಲ್ಲಿ ಸೋಫಾದ ಮೇಲೆ ಒರಗಿ ರೆಸ್ಟು ಮಾಡಿ ಎಂದು ಯಾರೆಷ್ಟು ಒತ್ತಾಯಿಸಿದರೂ ಗಂಗಮತ್ತೆ ಬಾಲ್ಕನಿಯ ಬಾಗಿಲಿನಿಂದ ಹೊರಗೇ ಹಟ ತೊಟ್ಟವರಂತೆ ಹಗಲಿಡೀ ಉಳಿಯತೊಡಗಿದರು….
ಅಡ್ಡಗೋಡೆಯನ್ನಾಧರಿಸಿ ನಿಲ್ಲುವುದು…. ಒಂದು ಬದಿಯಿಂದ ಇನ್ನೊಂದು ಬದಿಯವರೆಗೆ ಆ ಅಡ್ಡಗೋಡೆಯನ್ನೇ ಆಧರಿಸಿ ಅತ್ತಿಂದಿತ್ತ ನಡೆದಾಡುವುದು… ಸ್ವಲ್ಪ ಬಗ್ಗಿ ಆಳದ ಕೆಳಗಿನ ರಸ್ತೆಯನ್ನು ನೋಡುವುದು…. ಮತ್ತೆ ಅದೇ ನಭೋ ಮಂಡಲವನ್ನು ದಿಟ್ಟಿಸುವುದು. ಇದೇ ಗಂಗಮತ್ತೆಯ ದಿನಚರಿಯಾಯಿತು. ಎಷ್ಟು ಹೇಳಿದರೂ ಬಾಲ್ಕನಿಯ ಸೆರೆಯಿಂದ ಹೊರಬರುವುದಿಲ್ಲ ಎಂದು ಖಾತ್ರಿಯಾದ ಮೇಲೆ `ಅಮ್ಮ ನಿಂತು ನಿಂತು ದಣಿಯಬಾರದು, ಎಂದು ಮಗರಾಯ ತಂದಿರಿಸಿದ ಪ್ಲಾಸ್ಟಿಕ್ ಒರಗು ಮಂಚದ ಮೇಲೆ ಗಂಗಮತ್ತೆ ಕ್ಷಣಕಾಲ ಕುಳಿತರೆ ಕುಳಿತರು. ಒರಗಿ ಮಲಗುವ ಪ್ರಶ್ನೆಯೇ ಇಲ್ಲ. ಕುಳಿತವರು ಫಕ್ಕನೆ ಏನೋ ಸ್ಮರಣೆಗೆ ಬಂದಂತೆ ಎದ್ದು ಅಡ್ಡಗೋಡೆಯ ಮೇಲೆ ಕೈಗಳನ್ನಿರಿಸಿ ತಮ್ಮ ನೋಡುವ ಕೆಲಸವನ್ನು ಮುಂದುವರಿಸುತ್ತಿದ್ದರು.
ಅಷ್ಟು ಮಾತ್ರವೇ? ಉಹುಂ. ಹಳ್ಳಿ ಕೊಂಪೆಯ ಆ ಮೂಲಮನೆಯ ಭದ್ರಕೋಟೆಯಿಂದ ಬಿಡುಗಡೆ ಹೊಂದಿದ ಅಜ್ಜಿಕತೆಯ – ರಕ್ಕಸನಿಂದ ಬಿಡುಗಡೆ ಹೊಂದಿದ ಅದೆಷ್ಟೋ ರಾಜಕುಮಾರಿಯರಲ್ಲಿ ಒಬ್ಬಳಂತಾದರು – ಗಂಗಮತ್ತೆ ಎಂಬ ಎಂಭತ್ತು ದಾಟಿದ ವೃದ್ಧೆ. . .
ಹೊರತೋರಿಕೆಗೆ ಪ್ರಾಯ ಸರಿಯುತ್ತಿರುವ ಮುದುಕಿಯೇ. ವ್ಯತ್ಯಾಸವೇನೂ ಇಲ್ಲ. ಬಾಲ್ಕನಿಯ ಗಾಳಿಗೆ ಇನ್ನಷ್ಟು ಹಾರಾಡುವ ಬೆಳ್ಳಿಕೂದಲು. . . ನೆರಿಗೆ ಕಟ್ಟಿದ ಹಣೆ. . . ಬಾಡಿದ ಕೆನ್ನೆ. . . ಸಡಿಲು ದೇಹ. . . ಒಣಗಿದ ಒಡಲು.
ಆದರೆ ದಿನದಿಂದ ದಿನಕ್ಕೆ ಹೊಸ ಹುರುಪು, ಹೊಸ ಉತ್ಸಾಹ. ಆವೇಶ ಆಸಕ್ತಿ ಆಮೋದ ಆನಂದ! ಎಲ್ಲವೂ ಮತ್ತೆ ಮತ್ತೆ ಮತ್ತೆ ಚಿಗುರಿತಲ್ಲ ಅವರ ಒಳಬಾಳಿನಲ್ಲಿ! ಸೊಸೆ ಶಾಂತಿ ಮೂಲಮನೆ ಬಿಡುವ ಆ ಹಿಂದಿನ ರಾತ್ರಿಗಳಲ್ಲಿ ಒತ್ತಾಸೆಯಾಗಿ ವಕೀಲಿ ಮಾಡಿದ ಬಾಲ್ಕನಿಯಲ್ಲಿ ನಿಂತು ನೀವು ನೋಡಬೇಕು ಅತ್ತೆ ಎಂಬ ಪಲ್ಲವಿ ಅನುಪಲ್ಲವಿಯ ಮಾತುಗಳ ಭ್ರಮಾಲೋಕದಿಂದ ತನ್ನ ನಿಜವನ್ನು ಪಡೆದುಕೊಂಡರೇ ಈ ಗಂಗಮತ್ತೆ ಎಂಬ ಮುದುಕಿ….
ನಡೆದದ್ದು ಅದೇ…. ಸೊಸೆ ಶಾಂತಿ – ಯಾಕಾದರೂ ತಾನು ಅತ್ತೆಯನ್ನು ಹೀಗೆ ಒಡಂಬಡಿಸಿದೆ – ಎಂದು ಪರಿತಪಿಸುವಷ್ಟು ಗಂಗಮತ್ತೆಯ ಬಾಲ್ಕನಿ ಸಹವಾಸ ಹೊಸ ಹೊಸ ರೂಪು ಪಡೆಯತೊಡಗಿತು. . .
ಹೊಸ ನೋಟ, ಹೊಸ ಉದ್ಗಾರ, ಹೊಸ ಬಣ್ಣನೆ… ಸಂದು ಕಡಿಯದ ಮಳೆಯ ಹನಿಯಂತೆ ಅತ್ತೆ ಬಣ್ಣಿಸುತ್ತಾ ಇರಬೇಕು, ಸೊಸೆ ಕೇಳುತ್ತ ಹೋಗುಟ್ಟುತ್ತಲಿರಬೇಕು.
ಅಡ್ಡಗೋಡೆಯನ್ನಾಧರಿಸಿ ನಿಲ್ಲುವುದು… ನಿಂತು ನಿಂತು ದಣಿವಾದರೆ ಒರಗು ಮಂಚದ ಮೇಲೆ ಕ್ಷಣ ಕಾಲ ಕುಳಿತು ದಣಿವಾರಿಸಿಕೊಳ್ಳುವುದು…. ಮತ್ತೆ ನಿಂತು ಕೆಳಗೊಮ್ಮೆ ಮೇಲೊಮ್ಮೆ ನೋಡುವುದು… ಆ ಮಹಾನಗರಿಯ ದಟ್ಟ ಜನಸಂದಣಿಯ ಕೇಂದ್ರಸ್ಥಾನದ ಆ ಬಹುಮಹಡಿ ಫ್ಲಾಟಿನ ಹದಿನಾಲ್ಕನೆಯ ಅಂತಸ್ತಿನ ಎತ್ತರದ ಬಾಲ್ಕನಿಯ ಮೂಲಕ ಪುನರ್ಜನ್ಮ ಪಡೆದ ಗಂಗಮತ್ತೆ ಅಂಗಳದಾಟಿ ಅಂಬೆಗಾಲಿಕ್ಕಿ ಎದ್ದು ಬಿದ್ದು ಸುತ್ತಲನ್ನು ನೋಡುವ ಎಳೆ ಮಗುವಿನಂತಾದರು. . .
ಬಾಲಭಾಷೆಯ ತೊದಲು ಮೊದಲು. ಮೆಲ್ಲ. ನಿಧಾನ. . . ಜೋರು ಜೋರು ಕೊನೆಗೆ. ನಿಲ್ಲದ ಕಾರು ತಿಂಗಳ ರಭಸದ ಮಳೆಯಂತೆ ಗಂಗಮತ್ತೆಯ ಉದ್ಗಾರಗಳು ಅವರ ಮಡುಗಟ್ಟಿದ ಏಕಾಂತದ ಮೌನವೆಲ್ಲ ಮಾತುಗಳ ಸರಪಳಿಯ ರೂಪವನ್ನು ಪಡೆದಾಗ ಅವರ ಆ ಮಾತುಗಳಿಗೆ ಹುಂಗುಟ್ಟುತ್ತಾ ‘ಹೌದು ಅತ್ತೆ ಹಾಂ ಅತ್ತೆ’ ಎಂದೆಲ್ಲ ಉತ್ತರಿಸುತ್ತಾ ಸೊಸೆ ಶಾಂತಿ ಸುಸ್ತಾಗುವಂತಾಯಿತು. ಕ್ಷಣ ಕ್ಷಣ ದಿನವೂ.
ಕೆಳಗೆ ಸಾಲುಗಟ್ಟಿ ಸಾಗುತ್ತಿರುವ ವಾಹನಗಳನ್ನು ದಿಟ್ಟಿಸಿ ಒಂದು ಉದ್ಗಾರ. ಮೇಲೆ ಆಗೊಮ್ಮೆ ಈಗೊಮ್ಮೆ ಹಾರುವ ವಿಮಾನದ ಸದ್ದು ಕೇಳಿ ಇನ್ನೊಂದು ಉದ್ಗಾರ- ‘ಇವರೆಲ್ಲ ಎಲ್ಲಿಗೆ ಹೋಗುತ್ತಾರಾ ಶಾಂತಿ… ಹೋದವರೆಲ್ಲ ವಾಪಾಸು ಇದೇ ದಾರಿಯಲ್ಲಿ ಬರುತ್ತಾರಾ ಶಾಂತಿ… ಮೇಲೆ ಹಾರುವ ಅವರಿಗೆಲ್ಲ ಗಂಧರ್ವರು, ದೇವತೆಗಳು ಸಿಕ್ಕೇ ಸಿಗುತ್ತಾರಲ್ಲ ಶಾಂತಿ…. ಅಗ ಅಗ ಗಂಟೆ ಬಡಿದುಕೊಂಡು ಅದೆಂಥ ಪೂಜೆ ಮಾರಯ್ತಿ… ದೇವಸ್ಥಾನ ಎಲ್ಲಿಯಾ?…. ಮಂಗಳಾರತಿ ಕಾಂಬುದಕ್ಕೆ ಇಲ್ಲವಲ್ಲ ಮಾರಾಯ್ತಿ… ಅಷ್ಟು ಜೋರು ಗಂಟೆ ಯಾಕೆ ಶಾಂತಿ… ಅದ್ಯಾಕೆ ನಾಯಿಗೆ ಸರಪಳಿ ಕಟ್ಟಿ ಎಳೆದುಕೊಂಡು ಹೋಗುತ್ತಾರಾ? ಅದೆಂಥ ರಾಶಿಗಟ್ಟಲೆ ಒಟ್ಟುಮಾಡಿ ಕಸ ತುಂಬಿಸಿಕೊಂಡು ಗಾಡಿಗೆ ಹಾಕುತ್ತಾರಲ್ಲ ಮಾರಾಯ್ತಿ …’ ಪ್ರಶ್ನೆಗಳ ಮೇಲೆ ಪ್ರಶ್ನೆ…. ಉದ್ಗಾರಗಳ ಸುರಿಮಳೆ- ‘ಅತ್ತೆ ಅದು ದೇವಸ್ಥಾನದ ಗಂಟೆ ಅಲ್ಲ… ಎಲ್ಲಿಯೋ ಬೆಂಕಿಯೋ ಏನೋ ಅನಾಹುತ ಆಗಿರಬೇಕು. ಫಯರ್ ಅಂಬುಲೆನ್ಸ್ ಇರಬೇಕು. ನೀವು ಕೇಳಿದ್ದು ಅಂಬುಲೆನ್ಸ್ ಗಂಟೆ ‘ ಎಂದೆಲ್ಲ ಒಳಗಿನ ಅಡುಗೆಮನೆಯಿಂದಲೇ ಸೊಸೆ ಶಾಂತಿ ಉತ್ತರಿಸಿದರೂ ಅದೆಲ್ಲ ಅರ್ಥವಾಗದೆ ಗಂಗಮತ್ತೆ ತಮ್ಮ ಕಲ್ಪನಾ ಲಹರಿಯಲ್ಲಿಯೇ ಮುಳುಗಿರುತ್ತಿದ್ದರು…..
ಹೆರಿಗೆ ಬೇನೆಯ ಬಸುರಿಗಾಗಿ ಆಸ್ಪತ್ರೆಗೆ ಧಾವಿಸುವ ಆಂಬುಲೆನ್ಸ್ … ಆಸ್ಪತ್ರೆಯಿಂದ ಮಸಣದೆಡೆಗೆ ಸಾಗುವ ಶವವಾಹನ. ಕುದುರೆಯೇರಿ ಬ್ಯಾಂಡು ಬಿರುದಾವಲಿಗಳೊಂದಿಗೆ ಬರುತ್ತಿರುವ ಮದುಮಗನ ಮೆರವಣಿಗೆ, ಸಮವಸ್ತ್ರ ಧರಿಸಿದ ಶಾಲಾ ಮಕ್ಕಳ ಸಾಲು ಸಾಲು. ಒಂದೇ ಎರಡೇ. ದಿನ ದಿನ ಕ್ಷಣ ಕ್ಷಣ ಗಂಗಮತ್ತೆಯ ಬಾಲ್ಕನಿ ವೀಕ್ಷಣೆಗೆ ವಿರಾಮವೇ ಸಿಗದಂತ ನೋಟಗಳು. ಇದಕ್ಕೆಲ್ಲ ಒಗ್ಗಿ ಜಡ್ಡುಗಟ್ಟಿದ ಸೊಸೆ ಶಾಂತಿಯ ಸ್ಪಂದನಕ್ಕೆಲ್ಲ ಎಲ್ಲಿ ಕೊನೆ? ಕ್ರಮೇಣ ತಮ್ಮ ಬಾಲ್ಕಣ್ಣಿನ ಉದ್ಗಾರಗಳಿಗೆ ಪ್ರತಿಕ್ರಿಯೆ ಬರಲಿ, ಬರದಿರಲಿ, ಗಂಗಮತ್ತೆಯ ಮಾತಿನ ಉಯ್ಯಾಲೆಯಾಟ ನಿಲ್ಲುತ್ತಲೇ ಇರಲಿಲ್ಲ. ಈ ಹೊಸ ಹೊಸ ನೋಟಗಳ ಮೂಲಕ ಅವರು ತಮ್ಮ ಬಾಳಿನ ಹಿನ್ನೋಟಕ್ಕೂ ಹವಣಿಸತೊಡಗಿದರು. ತಮ್ಮ ಹಳ್ಳಿ ಕೊಂಪೆಯ ಹಾಡಿಗಳ ಕತ್ತಲಿನಲ್ಲಿ ಅಡಗಿದ್ದ ಕೆಲವು ನೆನಪುಗಳನ್ನು ಹುಡುಕತೊಡಗಿದರು.
ಹಾಂ…. ಹೌದಲ್ಲ ಶಾಂತಿ ಒಂದು ಬಾರಿ ಹಾಡಿ ಬದಿಯ ಒಕ್ಕಲು ಮನೆಯ ದನದ ಕೊಟ್ಟಿಗೆಗೆ ಬೆಂಕಿ ಬಂದಿತ್ತಲ್ಲ…. ಆಗ ಯಾರೂ ಗಂಟೆ ಬಡಿಯಲಿಲ್ಲ ಶಾಂತಿ. ಇದ್ದವರೆಲ್ಲ ಓಡಿ ಬಂದು ಚೊಂಬು ಕೊಡಪಾನ ಅದು ಇದು ಎಂದು ಸಿಕ್ಕಿದ ಒಟ್ಟೆ ತಟ್ಟೆಗಳಿಂದಲೇ ಬಾವಿ ಕೆರೆ ತೋಡಿನಿಂದ ನೀರು ಮೊಗೆದು ಚೆಲ್ಲಿ ಬೆಂಕಿ ನಂದಿಸಿದರಲ್ಲ. ಶಾಂತಿ. ಇದೆಂಥ ಗಂಟೆ ಬಡಿದು ಬೆಂಕಿ ನಂದಿಸುವುದು?’ ಎಂದು ಸೊಸೆಯ ಹೇಳಿಕೆಗಳಿಗೆ ತಮ್ಮ ನೆನಪಿನ ಉದ್ಗಾರಗಳನ್ನು ಜೋಡಿಸುತ್ತಿದ್ದರು.
ಎಲ್ಲ ಹೊತ್ತೂ ಅಂಬುಲೆನ್ಸ್ ಓಡಾಡುವುದಿಲ್ಲವಲ್ಲ. ಆದರೂ ಗಂಗಮತ್ತೆಯ ವೀಕ್ಷಣೆಗೆ ಏನಾದರೂ ಹೊಸ ಹೊಸ ವಸ್ತುಗಳು ಸಿಕ್ಕೇ ಸಿಗುತ್ತಿವೆ. ಆ ದಟ್ಟ ಜನಸಂದಣಿಯ ಕೆಳರಸ್ತೆಯಲ್ಲಿ…. ‘ಅದು ಯಾರಾ ಶಾಂತಿ… ಕೈ ಚಪ್ಪಾಳೆ ತಟ್ಟಿ ತಟ್ಟಿ ಗಂಡಸರನ್ನು ಎಳೆಯುತ್ತಾರಲ್ಲ ಮಾರಾಯ್ತಿ…. ಅದು ಗಂಡಸಾ ಹೆಂಗಸಾ…. ನಂಗೆಂತ ತೋರುವುದಿಲ್ಲವಾ… ಈ ಎತ್ತರದಲ್ಲಿ ಇರುವೆಗಳ ಹಾಗೆ ಕಾಣುತ್ತಾರೆ ಮಾರಾಯ್ತಿ. ಅವರೆಲ್ಲ….’ ಹೀಗೆ ಹೊಸ ಹೊಸ ನೋಟಗಳು ಗಂಗಮತ್ತೆಯ ಕಿವಿಯನ್ನು ಇನ್ನಷ್ಟು ಚುರುಕುಗೊಳಿಸತೊಡಗಿದವು. ಕಣ್ಣುಗಳನ್ನು ಮತ್ತಷ್ಟು ಸೂಕ್ಷ್ಮಗೊಳಿಸತೊಡಗಿದವು. ಗಂಗಮತ್ತೆಯ ಉದ್ಗಾರಗಳ ಸುರಿಮಳೆ ನಿಲ್ಲದೆ ಸಾಗುತ್ತಿತ್ತು. ಅವರ ಕುಟುಂಬದ ಯಾರೋ ನಪುಂಸಕನಿಗೆ ಆಸ್ತಿ ಸಿಗದಂತೆ ಮಾಡಲು ಕಂಪೆನಿ ಅಧಿಕಾರಿಗಳ ಮುಂದೆ ಅವನ ನಪುಂಸಕತ್ವ ಸಾಬೀತು ಪಡಿಸಿದ್ದರಿಂದ ಹಿಡಿದು ಊರುಕೇರಿಗಳಲ್ಲಿ ನಡೆದ ಮಾರಾಮಾರಿ, ಹಾದರ, ಆದರಗಳೆಲ್ಲ ಅವರ ಸ್ಮೃತಿಪಟಲದಲ್ಲಿ ಹಾದು ಬಾಲ್ಕನಿಯ ನೋಟಗಳೊಂದಿಗೆ ಬೆರೆಯತೊಡಗಿದವು. ಉದ್ಗಾರಗಳು ತೀವ್ರವಾಗತೊಡಗಿದವು. ಮಕ್ಕಳು ಶಾಲೆಗೆ, ದೊಡ್ಡವರು ಆಫೀಸಿಗೆ ಹೋಗಿ ಮನೆಯಲ್ಲಿ ಒಬ್ಬಳಾಗಿ ಉಳಿಯುವ ಸೊಸೆ ಶಾಂತಿಯ ಕಿವಿ ಕೆಪ್ಪಾಗುವಷ್ಟು…

(ಉದ್ಯಾವರ ಮಾಧವ ಆಚಾರ್ಯ)
ಹೀಗೇ…. ಹಳ್ಳಿಕೊಂಪೆಯ ಮೂಲಮನೆಯ ಕಾಲ ಗರ್ಭದ ಹಿಂದಿನ ದಿನಗಳಲ್ಲಿ ಯಾರ್ಯಾರೋ ಹಿರಿಯರು ಕಾಲವಾದಾಗ ಹೇಳಿಸುತ್ತಿದ್ದ ಗರುಡಪುರಾಣದ ವಿವರಗಳೆಲ್ಲ ಇಲ್ಲಿ ಈಗ ಜೀವನದಲ್ಲಿ ಮೊದಲ ಅನುಭವವಾಗಿ ಬಾಲ್ಕನಿಯಲ್ಲಿ ನಿಂತು ಹೊಸ ಬದುಕಿನ ಹುಡುಕಾಟವನ್ನು ನಡೆಸುತ್ತಿದ್ದ ಗಂಗಮತ್ತೆಯ ನೆನಪಿಗೆ ಬಂದು ನಿಜವೆನಿಸತೊಡಗುತ್ತಿದ್ದಂತೆ ಒಂದು ದಿನ ಪಕ್ಕದ ಫ್ಲಾಟಿನ ವಿರಸ ದಾಂಪತ್ಯದ ಸಾಫ್ಟ್ವೇರ್ ಉದ್ಯೋಗದ ಎಳೆಯ ತರುಣಿ ತನ್ನ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಿ ಅಂತ್ಯವನ್ನು ಕಂಡಾಗ….
ತಾನು ನಿಂತ ಬಾಲ್ಕನಿಯ ಅಡ್ಡಗೋಡೆಯನ್ನು ಆಧರಿಸಿ ಮನೆಮಂದಿಯೊಂದಿಗೆ ಆ ದುರಂತದ ನೋಟವನ್ನು ನೋಡುತ್ತಾ – ಪೋಲಿಸ್ ವ್ಯಾನು ಬಂದದ್ದು, ಅಂಬುಲೆನ್ಸ್ ಬಂದದ್ದು, ಆ ತರುಣಿಯ ಛಿದ್ರ ಛಿದ್ರ ದೇಹವನ್ನೆತ್ತಿ ಸಾಗಿದ್ದು…… ಜನಸಂದಣಿ ಒಟ್ಟಾಗಿ ಗುಂಪುಗೂಡಿ ಮತ್ತೆ ಕರಗಿ ಎಂದಿನಂತೆ ವಾಹನಗಳ ಸಾಲು, ತಳ್ಳುಗಾಡಿ, ಕಸದ ಲಾರಿ, ಸರಪಳಿ ಬಿಗಿತದ ನಾಯಿ, ಕೈಯ ಬಳೆಯ ಗರತಿಯರ ಹರಿದಾಟ ಜೀವಂತಗೊಳ್ಳತೊಡಗಿದಾಗ-ಎಲ್ಲವನ್ನು ನೋಡುತ್ತ ಗಂಗಮತ್ತೆ ಉದ್ಗರಿಸಿದ್ದು ಒಂದೇ ಮಾತು….
ಇಷ್ಟೊಳ್ಳೆ ಬಾಲ್ಕನಿ ಎತ್ತರದಿಂದ ಆ ಮಹಾಪ್ರಸ್ಥಾನಕ್ಕೆ ಹೊರಟವಳಿಗೆ ಮೇಲಕ್ಕೆ ಹಾರಿದ್ದರೆ ಸ್ವರ್ಗ ಸಿಗುತಿತ್ತಲ್ಲೇ ಶಾಂತೀ, ಕೆಳಗೆ ಬಿದ್ದು ನರಕಕ್ಕೆ ಯಾಕೆ ಹೋದಳೇ….
ಇಷ್ಟನ್ನು ಹೇಳುತ್ತ ತಾನು ಎಂದೂ ಕಾಣದ ಮತ್ತು ಮಾತನಾಡಿಸದ ಬೇರೆಯೇ ಭಾಷೆ ಬೇರೆಯೇ ಉಡುಗೆ ತೊಡುಗೆಯ ಆ ಎಳೆಯ ತರುಣಿಗಾಗಿ ಕಣ್ಣೀರು ಸುರಿಸುತ್ತ ಒಳಸರಿದ ಗಂಗಮತ್ತೆ ಅವರ ಮಾತಿನ ಬಾಲ್ಕಣ್ಣಿನ ಕಡೆಗೆ ಮುಖಮಾಡಲೇ ಇಲ್ಲ. . . ಕೊನೆಯವರೆಗೂ…

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ