ಲೋಕದ ಕಣ್ಣಿಗೆ ಚಚ್ಚೂ ನಾಪತ್ತೆಯಾದ ಪಟ್ಟಿಯಲ್ಲೇ ಇರಬೇಕಿದೆ. ಏಕೆಂದರೆ ಉಳಿದ ಜೀವಗಳ ಉಸಿರು ಬಂಧನದ ಬೇಗೆಗೆ ಬಿದ್ದು ಸುಡಬಾರದೆಂದರೆ ಆ ಘಟನೆಯನ್ನು ಮರೆಯಲೇ ಬೇಕಿದೆ. ಹೀಗೆ ದಿನ ಕಳೆದಾಗ ಮತ್ತೆ ಅಪ್ಪು ಪಿಳ್ಳೆ ಎಲ್ಲವನ್ನೂ ಮರೆತು ಹೋಗುತ್ತಾರೆ. ಮರಳಿ ತನಿಖೆ, ಮತ್ತದೇ ಕಹಿಯ ಅಂತ್ಯ ಎಲ್ಲವೂ ಮೋಟಾರಿನ ಚಕ್ರದಂತೆ ಮತ್ತದೇ ಆರಂಭ ಅದೇ ಅಂತ್ಯ. ಇತ್ತ ಚಚ್ಚೂವನ್ನು ಹುಡುಕುತ್ತಾ ಅಜೇಯನ್ ಅಪರ್ಣ ಉತ್ತರದ ರಾಜ್ಯಕ್ಕೆ ತೆರಳುತ್ತಿದ್ದಾರೆ ಕತ್ತಲಿನ ಬಾನಿನಲ್ಲಿ ಭಾನು ಪ್ರತ್ಯಕ್ಷನಾಗುತ್ತಾನೆ ಎಂಬ ಅವಾಸ್ತವಿಕ ಭಾವದೊಂದಿಗೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಮಲಯಾಳಂನ ‘ಕಿಷ್ಕಿಂದಾ ಕಾಂಡಮ್’ ಸಿನಿಮಾದ ವಿಶ್ಲೇಷಣೆ
ಸುರಿದ ಮಳೆಯು ಹನಿಯ ಮರೆತಿದೆ,
ಮಲಗಿದ ನೇಸರ ಚಂದಿರನ ಮರೆತಂತೆ
ಅವಳೂ ಮರೆತಿದ್ದಾಳೆ ನನ್ನ,
ಭರಪೂರ ನೆನಪುಗಳ ಉಳಿಸಿ
ಮರೆಯಲೇ, ಮುಳುಗಲೇ ಮರೆತೇ ಹೋಗಿದೆ….
-ಮರಕುಟಿಗ

(ದಿನಿಜಿತ್)
ಮರೆವು ಮಳೆಯಂತೆ. ನಿಯಂತ್ರಣದಲ್ಲಿದ್ದರೆ ವರ. ಚಿತ್ತ ಕೆಟ್ಟರೆ ಶಾಪ. ಬದುಕಿನ ಪ್ರತೀ ನಿಮಿಷಗಳೂ ದಾಖಲಾದರೂ ನೆನಪು ಅಪ್ಪಿಕೊಳ್ಳುವುದು ಕೆಲವೊಂದು ಕ್ಷಣಗಳಿಗಷ್ಟೇ. ಉಳಿದೆಲ್ಲವ, ಪಯಣಿಗರನ್ನು ಇಳಿಸಿ ನಿರ್ಭಾವುಕವಾಗಿ ಸಾಗುವ ಬಸ್ಸಿನಂತೆ, ಸಂಜೆಯಾಗುತ್ತಿದ್ದಂತೆಯೇ ಯಾವ ಚೌಕಾಸಿಗೂ ತಲೆ ಕೆಡಿಸಿಕೊಳ್ಳದೇ ನಾಪತ್ತೆಯಾಗುವ ಸೂರ್ಯನಂತೆ ಅಳಿಸುತ್ತಾ ಸಾಗುತ್ತದೆ ತೀರದ ಮೇಲೆ ಅರಳಿದ ಚಿತ್ತಾರಗಳ ಸಾಗರದ ಅಲೆಗಳು ಕರುಣೆಯೇ ಇಲ್ಲದೆ ನುಂಗುವಂತೆ. ಮರೆವೆಂಬುದು ವಿಚಿತ್ರವೂ ಹೌದು. ನಾವು ಓದಿದ ಪಾಠಗಳು, ವಿಷಯಗಳು, ಬುದ್ಧಿಮಾತುಗಳು ಯಾವುದೂ ತಲೆಯಲ್ಲಿ ನಿಲ್ಲದೇ ಕಾಲಿಗೆ ಬುದ್ಧಿ ಹೇಳುತ್ತದೆ. ಆದರೆ ಸಚಿನ್ ಬ್ಯಾಟಿಂಗ್, ರವೀನಾ ಟಂಡನ್ ಡ್ಯಾನ್ಸು, ಅವಳ ನಗು, ಅವನ ಕೋಪ ಎಲ್ಲವೂ ಅನಂತ ಕಾಲಗಳೇ ಖಾಲಿಯಾದರೂ ನೆನಪಿನ ತಂಗುದಾಣವನ್ನು ತೊರೆಯುವುದಿಲ್ಲ. ಅದರೆ, ಮರೆವೆಂಬುದು ಅನಿವಾರ್ಯತೆಯ ಪಟ್ಟಿಯಲ್ಲಿಯೂ ಸೇರುತ್ತದೆ. ಮಗನನ್ನು ಕಳೆದುಕೊಂಡ ತಾಯಿಗೆ ಆ ಅಗಲುವಿಕೆಯ ಸಣ್ಣ ಪ್ರಮಾಣದ ಮರೆವು ಜೊತೆಯಾದರಷ್ಟೇ ಜೀವನದ ಸಾಗುವಿಕೆ ಸಾಧ್ಯ ಇಲ್ಲವೆಂದರೆ ಬದುಕು ದುಸ್ತರ. ಹೀಗೆ ಬದುಕಿನಲ್ಲಿ ನಡೆದ ವಿಲಕ್ಷಣ ಆಘಾತವೊಂದು, ಮರೆವಿನ ದೆಸೆಯಿಂದ ಹೇಗೆ ಮುಚ್ಚಿ ಹೋಗಿರುವ ನಾಳೆಯ ಬಾಗಿಲನ್ನು ಸದಾ ತೆರೆಯುತ್ತದೆ ಎಂಬ ಎಳೆಯನ್ನು ಹಿಡಿದು ಹೊಲಿದ ಭಾವ ಪೂರ್ಣ ಸಂಕಥನವೇ ‘ಕಿಷ್ಕಿಂಧಾ ಕಾಂಡಮ್ ‘.
ಅವರು ಅಪ್ಪು ಪಿಳ್ಳೆ. ಭಾರತೀಯ ಸೈನ್ಯದ ನಿವೃತ್ತ ಅಧಿಕಾರಿ. ಮಗ ಅಜೇಯನ್. ಪತ್ನಿ ಅಪರ್ಣ. ತನ್ನ ಮೊದಲ ಪತ್ನಿವಿಯೋಗದ ನಂತರ ಜೊತೆಯಾದವಳಾಕೆ. ಇಬ್ಬರೂ ರಿಜಿಸ್ಟರ್ ಮದುವೆಯಾಗಿ ಮನೆಗೆ ಬರುತ್ತಿದ್ದಂತೆಯೇ ಪೋಲೀಸರ ಕರೆ ಬರುತ್ತದೆ. ಚುನಾವಣಾ ಸಮಯ. ನೆನಪೋಲೆ ಕಳುಹಿಸಿದರೂ ಅಪ್ಪು ಪಿಳ್ಳೆ ಬಳಿಯಿರುವ ರಿವಾಲ್ವರ್ ಅನ್ನು ಪೊಲೀಸ್ ಸುಪರ್ದಿಗೆ ಒಪ್ಪಿಸಿಲ್ಲ. ಆದಷ್ಟೂ ಬೇಗ ಒಪ್ಪಿಸಿ ಎಂಬುದು ಅವರ ಸಂದೇಶ. ಆದರೆ ಅಪ್ಪು ಪಿಳ್ಳೆಯ ರಿವಾಲ್ವರ್ ಅವರಿಂದ ಕಳೆದು ಹೋಗಿದೆ. ಅದು ಯಾರದಾದರೂ ಕೈಗೆ ಸಿಕ್ಕಿ, ಅವಘಡವಾದರೆ ಆ ಅಪರಾಧ ಅವರ ಖಾತೆಗೆ ಜಮೆಯಾಗುತ್ತದೆ. ಆದ್ದರಿಂದ ಆ ರಿವಾಲ್ವರ್ ಹುಡುಕುವ ಕೆಲಸ ಆರಂಭವಾಗುತ್ತದೆ. ಅವರ ಮನೆಯ ಮುಂದಣ ಮರಗಳ ರಾಶಿಯಿದೆ. ಸಹಜವೆನ್ನುವಂತೆಯೇ ವಾನರರ ಗುಂಪುಗಳು ವೃಕ್ಷಕ್ಕೊಂದರ ಲೆಕ್ಕದಂತಿದೆ. ಅವುಗಳೋ ತರಲೆ ಸಾಮ್ರಾಜ್ಯದ ಅಧಿಪತಿಗಳು. ಮನೆಯ ಮುಂದೆ ಒದರುತ್ತಿದ್ದ ಆಕಾಶವಾಣಿಯನ್ನು ಎತ್ತಿಕೊಂಡು ಹೋಗಿ, ಆಗಸಕ್ಕೆ ಮುಖ ಮಾಡಿದ ರೆಂಬೆಯ ಕೈಗೆ ಕಟ್ಟಿರುವ ಪರಿಯೇ ಅದಕ್ಕೆ ಸಾಕ್ಷಿ.

ಇತ್ತ ಮಂಗಗಳು ಆ ಬಂದೂಕನ್ನು ತೆಗೆದುಕೊಂಡು ಹೋಗಿರುವ ಸಾಧ್ಯತೆಯಿದೆಯೇ ಎಂಬ ಅನುಮಾನ ಅವರೆಲ್ಲರ ಮನಸ್ಸಿನಲ್ಲಿಯೂ ಇದೆ. ಅಂತೆಯೇ ಹುಡುಕಾಟ ಜಾರಿಯಲ್ಲಿರುತ್ತದೆ. ಇತ್ತ ಅಜೇಯನ್ ನಾಪತ್ತೆಯಾಗಿರುವ ತನ್ನ ಮಗನ ಹುಡುಕಾಟಕ್ಕೆ NGO ಒಂದರ ನೆರವು ಪಡೆದಿದ್ದಾನೆ. ತನ್ನ ಮೊದಲ ಪತ್ನಿಯ ಚಿಕಿತ್ಸೆಯ ಸಂದರ್ಭದಲ್ಲಿ ಕಾಣೆಯಾದ ಆತನ ಸುಳಿವೇ ಇರುವುದಿಲ್ಲ. ಆತ ಎಲ್ಲಿದ್ದಾನೆ, ಕಾಲಗಳ ಸುಳಿಯಲ್ಲಿ ಮುಳುಗಿದ್ದಾನೆಯೇ? ಉಹೂಂ, ಉತ್ತರವಿಲ್ಲದ ಪ್ರಶ್ನೆಯದು. ಇತ್ತ ಅಪ್ಪು ಪಿಳ್ಳೆಯ ಕೋಪಿಷ್ಟ ಮನಸ್ಥಿತಿ, ಎಲ್ಲವ ಮರೆತು ಕಂಗೆಟ್ಟು ಹೋಗುವ ಸ್ವಭಾವ, ಅತಿರೇಕ ಎಲ್ಲವೂ ಅಪರ್ಣಳಿಗೆ ಅನುಮಾನವ ಬಿತ್ತುತ್ತದೆ. ದೂರವಾಣಿ ಸಂಖ್ಯೆಯಿಂದ ತೊಡಗಿ, ತನ್ನ ಭೇಟಿಯಾದವರ ಬಗೆಗಿನ ವಿವರಗಳನ್ನು ನೋಟ್ಸ್ ಮಾಡಿಕೊಂಡು ಮುಂದೆ ಅವುಗಳ ನೆರವಿನಿಂದ ಮಾತುಕತೆಗೆ ತೊಡಗುವುದು, ಮತ್ತೆ ಮತ್ತೆ ಕಾಗದಗಳ ರಾಶಿಯನ್ನು ತನ್ನ ಕೋಣೆಯಿಂದ ತಂದು ಮರಗಳ ಮಧ್ಯೆ ಸುಟ್ಟು ಹಾಕುವುದು ಎಲ್ಲವೂ ಅವಳ ಮನಸ್ಸನ್ನು ಕಲಕುತ್ತದೆ, ಕಾಡುತ್ತದೆ. ಕಾಣೆಯಾದ ರಿವಾಲ್ವರ್, ಮಗನ ಹುಡುಕಾಟ, ಅಪ್ಪು ಪಿಳ್ಳೆಯ ನಡವಳಿಕೆಯ ಬಗ್ಗೆ ಅಪರ್ಣಳ ಅನುಮಾನ ಈ ಮೂರು ಸಂಗತಿಗಳು ಮುಖ್ಯ ಭೂಮಿಕೆಯಲ್ಲಿರುತ್ತದೆ. ಹೀಗಿರುವಾಗ ಅಪ್ಪು ಪಿಳ್ಳೆಯು ತನ್ನ ಮರೆವಿನಿಂದ ಮಾಡಿಕೊಂಡ ತೊಂದರೆಗಳಿಂದ ಸೈನ್ಯದಿಂದ ವಿಮುಕ್ತರಾದ ಸಂಗತಿ ತಿಳಿಯುತ್ತದೆ. ಅಷ್ಟೇ ಅಲ್ಲ ಸುಮದತ್ತನೆಂಬ ಮಿತ್ರನನ್ನು ಸದಾ ಕಾಲ ಭೇಟಿಯಾಗುತ್ತಿದ್ದ ಅಪ್ಪು ಪಿಳ್ಳೆ ಕಾರು ಕೆಟ್ಟಿದೆಯೆಂದು ಹೇಳಿ ಅಜೇಯನ್‌ನನ್ನು ಕರೆಸಿಕೊಳ್ಳುತ್ತಾರೆ. ಆದರೆ ಕಾರು ಹಾಳಾಗಿರಲಿಲ್ಲ, ಬದಲಾಗಿ ಬಂದ ದಾರಿ ಮರೆತೇ ಹೋಗಿರುತ್ತದೆ ಅವರಿಗೆ. ಹೀಗೆ ಅವರ ಮರೆವು, ವಿಲಕ್ಷಣತೆ ಎಲ್ಲವೂ ನಿಗೂಢವೆಂಬಂತೆ ಭಾಸವಾಗುತ್ತದೆ.
ಒಂದು ದಿನ ಅವರ ಮನೆಯ ಸಮೀಪದ ಜಾಗದಲ್ಲಿ ಮಣ್ಣು ಅಗೆಯುತ್ತಿರುವಾಗ ಅಸ್ಥಿ ಪಂಜರವೊಂದು ಪ್ರತ್ಯಕ್ಷಗೊಳ್ಳುತ್ತದೆ. ಎಲ್ಲರೂ ಅದು ಅಜೇಯನ್ ಮಗ ಚಚ್ಚುವಿನದ್ದು ಎಂದು ಭಾವಿಸುತ್ತಾರೆ. ಆದರೆ ಅದು 3 ವರ್ಷದ ಹಿಂದೆ ಸತ್ತ ಕೋತಿಯೊಂದರ ಶವವೆಂದು ತಿಳಿದು ಬರುತ್ತದೆ. ಆದರೆ ಅದು ಸತ್ತಿರುವುದು 3 ವರುಷಗಳ ಹಿಂದೆ ರಿವಾಲ್ವರ್‌ನಿಂದ ಸಿಡಿದ ಗುಂಡಿನಿಂದ ಹಾಗೂ ಆ ಸ್ಥಳವನ್ನು ಅಪ್ಪು ಪಿಳ್ಳೆ ಮಾರಿದ್ದು 2 ಸಂವತ್ಸರಗಳ ಹಿಂದೆ. ಹಾಗೂ ಕಾಡಿಗೆ ಹೋಗಿದ್ದ ಪ್ರವಾಸಿಗರ ಕ್ಯಾಮರಾ ಕಣ್ಣಿಗೆ ಕೋತಿಗಳು ಬಂದೂಕು ಹಿಡಿದ ದೃಶ್ಯ ಸಿಗುತ್ತದೆ. ಇವೆಲ್ಲಾ ಕಾರಣಗಳು ಒಗ್ಗೂಡಿ, ತನಿಖೆಯ ನಳಿಗೆ ಅಪ್ಪು ಪಿಳ್ಳೆಯತ್ತ ತಿರುಗುತ್ತದೆ. ಇತ್ತ ಒಂದೊಂದೇ ಸತ್ಯಗಳು ಅಜೇಯನ್ ಕಡೆಯಿಂದ ಅಪರ್ಣಳಿಗೆ ಅರಿವಾಗುತ್ತದೆ. ಅಪ್ಪು ಪಿಳ್ಳೆಗೆ ಮರೆವಿನ ಸಮಸ್ಯೆಯಿದೆ. ಅವರನ್ನು ನೋಡಲು ಬರುತ್ತಿದ್ದ ಆಫೀಸರ್ ಒಬ್ಬರು ನಿಜವಾದ ಸೈನ್ಯಾಧಿಕಾರಿಯಲ್ಲ, ಬದಲಾಗಿ ಮನೋವೈದ್ಯರು. ಚಿಕಿತ್ಸೆಯ ಕಾರಣದಿಂದ ಅಧಿಕಾರಿ ಸೋಗಿನಲ್ಲಿ ಇರುತ್ತಾರೆ. ಚಚ್ಚು ಈ ಹಿಂದೆ ಒಳಗೆ ಭದ್ರವಾಗಿದ್ದ ಗನ್ ತೆಗೆದುಕೊಂಡು ಹೋಗಿ ತಪ್ಪಿ ಟ್ರಿಗರ್ ಎಳೆದಿರುತ್ತಾನೆ. ಕಾರಣ ಕೋತಿಗೆ ಗುಂಡು ತಗುಲಿ ಅದು ಸತ್ತು ಹೋಗಿರುತ್ತದೆ. ಅಪ್ಪು ಪಿಳ್ಳೆಗೆ ವಿಷಯ ತಿಳಿದು ಅವನ ಮೇಲೆ ಕೂಗಾಡುತ್ತಾರೆ. ಕೊನೆಗೆ ಸುಮದತ್ತನಿಗೆ ತಿಳಿಸಿ ಕೋತಿಯನ್ನಲ್ಲೇ ಮಣ್ಣು ಮಾಡುತ್ತಾರೆ. ಆದರೆ ಕೆಲ ಕ್ಷಣಗಳಲ್ಲೇ ಒಳ ಹೋದ ಅಪ್ಪು ಪಿಳ್ಳೆ ಏನೂ ನಡೆದೇ ಇಲ್ಲವೆಂಬಂತೆ ಚಚ್ಚೂವಿನ ಹುಟ್ಟುಹಬ್ಬಕ್ಕೆಂದು ಪಾಯಸ ಹಿಡಿದು ಹೊರಬರುತ್ತಾರೆ. ಆಗ ಸುಮದತ್ತನಿಗೂ ಅರಿವಾಗುತ್ತದೆ ಅವರ ನೆನಪಿನ ಚೀಲದ ಸಮಸ್ಯೆ. ಕಂಡ ಕನಸು ಕಣ್ ಬಿಟ್ಟಾಗ ಮರೆಯಾಗುವಂತೆ, ಬೇಸಗೆ ಆಕ್ರಮಿಸಿದಾಗ ನೀರೇ ಕಾಣದ ಮರುಭೂಮಿಐಂತಾಗುವ ನದಿಯ ಒಡಲಿನಂತೆ ಅವರ ನೆನಪಿನ ಶಕ್ತಿ ಎಂಬುದು ಅವನ ಅರಿವಿಗೆ ಬಂದಿರುತ್ತದೆ.

ಹಾಗೆಯೇ ಒಂದು ರಾತ್ರಿ ಚಚ್ಚು ರಿವಾಲ್ವರ್‌ನೊಂದಿಗೆ ಆಟವಾಡುತ್ತಿರುತ್ತಾನೆ. ಆತನ ತಾಯಿ ಆತನ ಕೈಯಿಂದ ಅದನ್ನು ವಶ ಪಡಿಸಿಕೊಳ್ಳಲು ಹೋದಾಗ ಟ್ರಿಗರ್ ಒತ್ತಡಕ್ಕೆ ಸಿಲುಕಿ ಹಿಮ್ಮುಖವಾಗಿ ಚಲಿಸುತ್ತದೆ. ಪರಿಣಾಮ, ಹೊರಗೆ ಬಂದ ಗುಂಡು ಚಚ್ಚುವಿನ ಉಸಿರು ನಿಲ್ಲಿಸುತ್ತದೆ. ಆ ಘೋರ ಆಘಾತವನ್ನು ತಾಳಲಾರದೆ, ವೇದನೆಯ ಖಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಗುಳಿಗೆಗಳನ್ನು ಒಂದೇ ಸಮನೆ ಸೇವಿಸಿ ಮೂರ್ಛೆ ತಪ್ಪಿ ಬಿದ್ದಿರುತ್ತಾಳೆ. ಆಗ ಅಲ್ಲಿಗೆ ಆಗಮಿಸುವ ಅಜೇಯನ್ ಆ ಪರಿಸ್ಥಿತಿಗೆ ಮರುಗಿ, ಹೃದಯವ ಬಂಡೆಯಾಗಿಸಿ, ಮಗನ ಶವವನ್ನು ರಕ್ತದಲ್ಲಿ ತೋಯಲು ಬಿಟ್ಟು ಪತ್ನಿಯ ಜೀವ ಉಳಿಸಲೆಂದು ಆಸ್ಪತ್ರೆಗೆ ಸಾಗಿಸುತ್ತಾನೆ. ಅಲ್ಲಿ ಆರೈಕೆ ಆರಂಭವಾದ ಮೇಲೆ ಮನೆಗೆ ಧಾವಿಸಿದಾಗ ಮಗನ ಶರೀರವೂ ಇಲ್ಲ, ರುಧಿರ ಸಂಗ್ರಹವೂ ಇಲ್ಲ. ಎಲ್ಲವೂ ನಡೆಯದ ಕಥೆಯಂತೆ ಆ ಕೋಣೆ ಮಾಮೂಲಿಯಂತೆಯೇ ಇದೆ. ಆದರೆ ಅಪ್ಪು ಪಿಳ್ಳೆ ಮಾತ್ರ, ಯಾವ ಭಾವನೆಗಳ ಬವಣೆಯೂ ಇಲ್ಲದೆ, ಭೋಜನ ಸೇವಿಸುತ್ತಿದ್ದಾರೆ. ಮತ್ತದೇ ಮರೆವು. ಮುಂದೆ ಚಚ್ಚುವಿನ ನೆನಪಾದಾಗ, ತನ್ನದೇ ತನಿಖೆಯಲ್ಲಿ ತೊಡಗಿಕೊಳ್ಳುತ್ತಾರೆ. ಸುಮದತ್ತನ ಭೇಟಿಯಿಂದ ತೊಡಗಿ, ಚಚ್ಚುವಿನೊಂದಿಗೆ ಕಳೆದ ಕೊನೆಯ ಕ್ಷಣಗಳವರೆಗೆ ಮರಳಿ ಭೇಟಿ ನೀಡುವ ಸಾಹಸವನ್ನು ಮಾಡುತ್ತಾರೆ. ಕೊನೆಗೂ ಕಳೆದುಹೋದ ಕಥೆಯ ಅರಿವಾಗುತ್ತದೆ. ತಲಾಶಿಗೆ ಬಳಸಿದ ಕಾಗದ ಪಾತ್ರಗಳೆಲ್ಲವ ಸುಟ್ಟು ಹಾಕುತ್ತಾರೆ. ಸುದ್ದಿ ಹೊರ ಬಂದರೆ ಕೊಲೆಯ ಆಪಾದನೆ ಸುತ್ತಿಕೊಳ್ಳುತ್ತದೆ. ಆದ್ದರಿಂದ ಈ ಘಟನೆಯನ್ನು ಮರೆವಿನ ಖಾಯಿಲೆ ಇದ್ದವರೂ, ಪರಿಪೂರ್ಣ ನೆನಪಿನ ಶಕ್ತಿ ಇರುವವರೂ ಮರೆಯಲೇ ಬೇಕಿದೆ.
ಲೋಕದ ಕಣ್ಣಿಗೆ ಚಚ್ಚೂ ನಾಪತ್ತೆಯಾದ ಪಟ್ಟಿಯಲ್ಲೇ ಇರಬೇಕಿದೆ. ಏಕೆಂದರೆ ಉಳಿದ ಜೀವಗಳ ಉಸಿರು ಬಂಧನದ ಬೇಗೆಗೆ ಬಿದ್ದು ಸುಡಬಾರದೆಂದರೆ ಆ ಘಟನೆಯನ್ನು ಮರೆಯಲೇ ಬೇಕಿದೆ. ಹೀಗೆ ದಿನ ಕಳೆದಾಗ ಮತ್ತೆ ಅಪ್ಪು ಪಿಳ್ಳೆ ಎಲ್ಲವನ್ನೂ ಮರೆತು ಹೋಗುತ್ತಾರೆ. ಮರಳಿ ತನಿಖೆ, ಮತ್ತದೇ ಕಹಿಯ ಅಂತ್ಯ ಎಲ್ಲವೂ ಮೋಟಾರಿನ ಚಕ್ರದಂತೆ ಮತ್ತದೇ ಆರಂಭ ಅದೇ ಅಂತ್ಯ. ಇತ್ತ ಚಚ್ಚೂವನ್ನು ಹುಡುಕುತ್ತಾ ಅಜೇಯನ್ ಅಪರ್ಣ ಉತ್ತರದ ರಾಜ್ಯಕ್ಕೆ ತೆರಳುತ್ತಿದ್ದಾರೆ ಕತ್ತಲಿನ ಬಾನಿನಲ್ಲಿ ಭಾನು ಪ್ರತ್ಯಕ್ಷನಾಗುತ್ತಾನೆ ಎಂಬ ಅವಾಸ್ತವಿಕ ಭಾವದೊಂದಿಗೆ.
ಸೀತೆಯ ಹುಡುಕಾಟದಲ್ಲಿ ರಾಮನಿಗೆ ಬೆಂಬಲವಾಗಿ ನಿಲ್ಲುವ ವಾನರರ ಬಗ್ಗೆ ಹೇಳುವ ರಾಮಾಯಣದ ಅಧ್ಯಾಯವೇ ‘ಕಿಷ್ಕಿಂಧಾ ಕಾಂಡ’. ಅದರಂತೆಯೇ, ಇಲ್ಲಿಯೂ ಅರಣ್ಯವಿದೆ ಹಾಗೂ ಮಂಗಗಳೂ ಇಲ್ಲಿನ ಘಟನೆಗಳ ಪಾತ್ರಧಾರಿಗಳೂ ಹೌದು. ಅದಕ್ಕಿಂತಲೂ ಮುಖ್ಯವಾಗಿ ಕಥೆ ಮಾತನಾಡುವುದು ಬದುಕಿನ ಅನಿವಾರ್ಯತೆಗಳ ಬಗ್ಗೆ. ಒಂದು ಆಕಸ್ಮಿಕ ಅಪಘಾತ, ಮಗ್ಗುಲ ಮುಳ್ಳಾಗಿ ಕಾಡುತ್ತದೆ. ಘೋರ ಕನಸಾಗಿ ಪೀಡಿಸುತ್ತದೆ. ತನ್ನ ಮೊಮ್ಮಗ, ತನ್ನ ಬಂದೂಕಿನ ಕ್ರೂರ ಬಾಯಿಗೆ ಸಿಲುಕಿ ಬಲಿಯಾಗಿದ್ದು, ಅತ್ಯುತ್ತಮ ನೆನಪುಳ್ಳವನನ್ನೂ ಚುಚ್ಚಿ ಸಾಯಿಸುವಂಥದ್ದು. ಅಂತಹ ಸಂದರ್ಭದಲ್ಲಿ ಅಪ್ಪು ಪಿಳ್ಳೆಯ ಮರೆವೇ ಅವರಿಗೆ ಜೀವದ್ರವ್ಯವೆನಿಸಿಕೊಳ್ಳುತ್ತದೆ. ಮನುಷ್ಯನೊಬ್ಬ ಎಲ್ಲಾ ಮಾದರಿಯಿಂದಲೂ ಮಾನವೀಯ ಅಲ್ಲವೆಂದೆನಿಸಿಕೊಂಡರೂ, ಯಾವುದಾದರೊಂದು ಭಾವ ಕೋಶ ಜೀವಂತವಾಗಿರುತ್ತದೆ ಎಂಬಂತೆ, ಪ್ರವಾಹದಂತೆ ಧುಮ್ಮಿಕ್ಕುವ ನದಿಯಂತೆ ಭಾಸವಾಗುವ ಅಪ್ಪು ಪಿಳ್ಳೆಯ ಒಳಗೊಂದು ಪ್ರಶಾಂತ ಸರೋವರವಿದೆ ಎಂದು ಅರ್ಥವಾಗುವುದು, ಅವರು ನಡೆದ ಘಟನೆಗಳೆಲ್ಲವ ಜೀರ್ಣಿಸಿಕೊಂಡು ಬೆಂಕಿಗೆ ಅಹುತಿ ನೀಡಿದಾಗ.

ಇಂತಹ ಆಳ ಭಾವ, ಅರ್ಥವಿರುವ ಕಥಾನಕವನ್ನು ತನ್ನ ಹೆಗಲ ಮೇಲೆ ಹೊತ್ತು ಸಾಗಿದ್ದು ಅಪ್ಪು ಪಿಳ್ಳೆಯಾಗಿ ವಿಜಯ ರಾಘವನ್. ಉತ್ತರಾರ್ಧವ ದಾಟುತ್ತಿರುವ ಮನುಷ್ಯನೊಬ್ಬನ ಸಿಟ್ಟು- ಸೆಡವು, ಗೊಂದಲ, ತಳಮಳಗಳನ್ನು ತೋರ್ಪಡಿಸಿರುವ ರೀತಿ ಅತ್ಯಮೋಘ. ಅಜೇಯನ್ ಆಗಿ ಆಸೀಫ್ ಅಲಿ ಮತ್ತು ಅಪರ್ಣ ಪಾತ್ರದಲ್ಲಿ ಅಪರ್ಣ ಬಾಲಮುರಳಿ ಸಹಜ ಸುಂದರ ಅಭಿವ್ಯಕ್ತಿ. ಗಂಭೀರ ಸಾಹಿತ್ಯದ ಓದಿನಂತೆ ಭಾಸವಾಗುವ ಈ ಚಿತ್ರದ ಕಥೆಗಾರ ಬಾಹುಲ್ ರಮೇಶ್. ಹಾಗೂ ಕಲ್ಪನೆಗೆ ಬಣ್ಣ ಹಚ್ಚಿದ್ದು, ದಿನಿಜಿತ್. ಚಿತ್ರದ ಶೀರ್ಷಿಕೆಯ ಕೆಳಗೆ ಬರೆದಿರುವ ‘A tale of three wise monkeys’ ಎನ್ನುವ ಅಜೇಯನ್, ಅಪ್ಪು ಪಿಳ್ಳೆ ಹಾಗೂ ಅಪರ್ಣರಿಗೆ ಮಾಡಿದ ಹೋಲಿಕೆಯೇ ಬರಹದ ಹಿಂದಿನ ಆಲೋಚನೆಗಳ ಮಟ್ಟಕ್ಕೆ ಹಿಡಿದ ಕೈಗನ್ನಡಿ. ಒಟ್ಟಾರೆಯಾಗಿ, ಪರಿಸ್ಥಿತಿಗಳೆಂಬ ಹದಗೆಟ್ಟ ಹವಾಮಾನವ ದಿಟ್ಟವಾಗಿ ಎದುರಿಸಿ ತಟವ ತಲುಪಿ ನಿಟ್ಟುಸಿರು ಬಿಡುವ ಹಡಗಿನಂತೆ ಬದುಕುವ ಮನುಷ್ಯರ ಕಥೆಯೇ ಈ ‘ಕಿಷ್ಕಿಂಧಾ ಕಾಂಡಮ್’.

ಮುಗಿಸುವ ಮುನ್ನ :
ಎಲ್ಲರ ಬದುಕಿನಲ್ಲಿಯೂ ಹೆಚ್ಚು ಕಡಿಮೆ ಒಂದು ಕತ್ತಲು ಮುಸುಕಿದ ಕಥೆಯಿರುತ್ತದೆ. ಅದು ಯಾರಿಗೂ ಕಾಣದಂತೆ ಕಂಬಳಿ ಹೊದ್ದು ಮಲಗಿರುತ್ತದೆ. ಆದರೆ ಕೆಲವು ಕಹಿ ರುಚಿಗಳು ಅಸಂಖ್ಯ ರಾತ್ರಿಗಳನ್ನು ಎಚ್ಚರವಿಡುತ್ತದೆ. ಪುತ್ರ ಶೋಕ, ಅಮ್ಮನ ಅಗಲಿಕೆ, ಪ್ರೀತಿಯ ಅಂತ್ಯ ಎಲ್ಲವೂ ಬದುಕಿಗೆ ತುಕ್ಕು ಹಿಡಿಸುತ್ತದೆ. ಆಗ ಬಣ್ಣವಾಗಿ ಬರುವುದೇ ಮರೆವೆಂಬ ಅಮೃತ. ಆದ್ದರಿಂದ ‘ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ’ ಎನ್ನುತ್ತಾ ಹಳೆಯ ಜಂಕ್ ಫೈಲ್‌ಗಳನ್ನು ಅಳಿಸಲೇಬೇಕು ನಾಳೆಯ ನೆನಪುಗಳು ಜೀವ ಪಡೆಯಲು, ಕನಸುಗಳು ಮತ್ತೆ ಚಿಗುರಲು…

ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು….

