ʻಲವ್ಲೀ ಮ್ಯಾನ್‌ʼ ಕೇವಲ ಎಪ್ಪತ್ತಾರು ನಿಮಿಷಗಳ ಚಿತ್ರ. ಬೇರೆ ಚಿತ್ರಗಳಿಗೆ ಹೋಲಿಸಿದರೆ ಕಡಿಮೆ ಅವಧಿಯದು. ಚಿತ್ರದಲ್ಲಿ ತನ್ನ ಆಶಯವನ್ನು ಪೂರ್ಣಗೊಳಿಸಲು ಕೇವಲ ಒಂದು ದಿನದ ಅವಧಿಯಲ್ಲಿ ನಡೆಯುವ ಕಥಾ ಹಂದರವಿರುವ ಕಥನವನ್ನು ಪ್ರಸ್ತುತಪಡಿಸುತ್ತಾನೆ. ಚಿತ್ರದಲ್ಲಿ ತೀವ್ರತರ ಭಾವನೆಗಳನ್ನು ಉಂಟುಮಾಡುವ ಸನ್ನಿವೇಶಗಳನ್ನು ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಿರೂಪಿಸುತ್ತಾನೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಇಂಡೊನೇಷಿಯದ ʻಲವ್ಲಿ ಮ್ಯಾನ್‌ʼಸಿನಿಮಾದ ವಿಶ್ಲೇಷಣೆ

 

ಅದು ಎರಡನೆ ಮಹಾಯುದ್ಧದ ಕಾಲ. ಇಂಡೋನೇಷಿಯದಲ್ಲಿ ಆಡಳಿತ ನಡೆಸುತ್ತಿದ್ದ ಜಪಾನ್‌ ಚಿತ್ರೋದ್ಯಮದ ಕಡೆ ಹೆಚ್ಚು ಆಸಕ್ತಿ ವಹಿಸಲಿಲ್ಲ. ಚಲನಚಿತ್ರವನ್ನು ತಮ್ಮ ಪ್ರಚಾರಕ್ಕಾಗಿ ಮಾತ್ರ ಉಪಯೋಗಿಕೊಂಡರು ಎನ್ನುವ ಅಭಿಪ್ರಾಯವಿದೆ. ಹೀಗಿರುವಾಗ ಸ್ಥಳೀಯರಿಗೆ ಚಿತ್ರೋದ್ಯಮ ವಿಷಯದಲ್ಲಿ ಪಾಲ್ಗೊಳ್ಳುವಿಕೆಗೆ ಆಸ್ಪದ ಕಡಿಮೆಯೇ. ಇದರಿಂದ ಚಿತ್ರೋದ್ಯಮದ ಬೆಳವಣಿಗೆಗಾಗಲಿ, ವಿಸ್ತಾರಕ್ಕಾಗಲಿ ಸ್ಥಳೀಯರ ಕೊಡುಗೆ ಮನಸೆಳೆಯುವ ಹಾಗಿರಲಿಲ್ಲ.

(ಪೆಡ್ಡಿ ಸೋಯಾತ್ನಜ)

ಇಂಡೋನೇಷಿಯ ಸ್ವಾತಂತ್ರ್ಯ ಗಳಿಸಿದ ನಂತರ 60ರ ದಶಕದ ಮಧ್ಯಭಾಗದಿಂದ 20ನೇ ಶತಮಾನದ ಅಂತ್ಯದವರೆಗೆ ಜನರಲ್ ಸೋಹಾರ್ತೋನ ಆಡಳಿತದಲ್ಲಿತ್ತು. ಆ ಅವಧಿಯಲ್ಲಿ ವಿದೇಶಿ ಚಿತ್ರಗಳಿಗೆ ನಿಷೇಧ ವಿಧಿಸಲಾಗಿತ್ತು. ಇದರ ಪರಿಣಾಮವೋ ಹೇಗೋ ಜಾಗತಿಕ ಚಲನಚಿತ್ರ ಕ್ಷೇತ್ರದಲ್ಲಿ ಉಂಟಾಗುತ್ತಿದ್ದ ಬೆಳವಣಿಗೆಯ ಪರಿಚಯವಿಲ್ಲದ ಸ್ಥಳೀಯರು ನಿರ್ಮಾಣ ಮಾಡಿದ ಚಿತ್ರಗಳು ಹೇಳಿಕೊಳ್ಳುವಂತಿರಲಿಲ್ಲ. ಜನರಲ್ ಸುಹಾರ್ತೋ ಸರ್ಕಾರ ಅಂತ್ಯವನ್ನು ಕಂಡ‌ ನಂತರ 21ನೇ ಶತಮಾನ ಪ್ರಾರಂಭದಲ್ಲಿ ಚಲನಚಿತ್ರ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಉಂಟಾಯಿತು. 21ನೇ ಶತಮಾನದ ಪ್ರಾರಂಭದಲ್ಲಿ ಬ್ರುಸೆಲ್ಸ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಗಳಿಸಿದ ನಿಯಾ‌ ದಿ ನಾತಾಳ ʻಲವ್ ಫಾರ್‌ ಶೇ‌ರ್ʼ(2006) ಮತ್ತು ಅದೇ ವರ್ಷದ ಗರಿನ್ ನುಗ್ರೊಹೋನಾ ʻರೆಕ್ವಿಯಂ ಫ್ರಂ ಜಾವಾʼ ಚಿತ್ರಗಳು ಆಸಕ್ತರ ಗಮನವನ್ನು ಸೆಳೆದವು. ಸರಿಸುಮಾರು ಇವರ ಪಟ್ಟಿಗೆ ಸೇರಿಕೊಳ್ಳುವ ಹೆಸರು ಪೆಡ್ಡಿ ಸೋಯಾತ್ನಜ.

ಹಾಂಕಾಂಗ್‌ನಲ್ಲಿ 2012ರಲ್ಲಿ ಜರುಗಿದ ಏಷಿಯನ್‌ ಚಿತ್ರೋತ್ಸವದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮತ್ತು ಶ್ರೇಷ್ಠ ನಟ ಪ್ರಶಸ್ತಿಗಳನ್ನು ಗಳಿಸಿದ ಚಿತ್ರ ʻಲವ್ಲಿ ಮ್ಯಾನ್‌ʼ. ಪೆಡ್ಡಿ ಸೋಯಾತ್ನಜ ಇಂಗ್ಲೆಂಡಿನಲ್ಲಿ ಪದವಿ ಗಳಿಸಿದ. ವಿದ್ಯಾಭ್ಯಾಸದ ಕಾಲದಲ್ಲಿಯೇ ದೃಶ್ಯ ಮಾಧ್ಯಮದ ಕಡೆ ಒಲವಿದ್ದು ಟ್ವೆಂಟಿನ್‌ ಟಾರೆಂಟೆರೋನ ʻರಿಸರ್ವಾಯರ್‌ ಡಾಗ್ಸ್‌ʼ ಚಿತ್ರದಿಂದ ಸಾಕಷ್ಟು ಪ್ರಭಾವಿತನಾದ. ಚಲನಚಿತ್ರರಂಗವನ್ನು ವೃತ್ತಿಯನ್ನಾಗಿ ಮಾಡಿಕೊಳ್ಳುವುದರ ಮಟ್ಟಿಗೆ ಅದರ ಪರಿಣಾಮವಾಯಿತು. ಹಾಗಾಗಿ ೨೦೦೦ದಲ್ಲಿ ತಯಾರಿಸಿದ ʻಕಿಡ್ನಾಪ್ʼ ಚಿತ್ರ ಸ್ಥಳೀಯ ಖ್ಯಾತ ನಿರ್ದೇಶಕ ಮಿರ ಲಸ್ಮನಾರ ಗಮನ ಸೆಳೆದು ಪೆಡ್ಡಿ ಸೋಯಾತ್ನಜಗೆ ಉತ್ತೇಜನ ನೀಡಲು ಮುಂದಾದರು. ಪರಿಣಾಮವಾಗಿ ಅವನು ʻಬ್ಲೂ ಬನ್ಯಾʼ(೨೦೦೬) ಚಿತ್ರದಲ್ಲಿ ಸೇಲ್ಸ್‌ ಮನ್‌ ಜೀವನವನ್ನು ಆಧರಿಸಿ ಸರಕನ್ನು ಮಾರುವ ಕ್ರಿಯೆಯಲ್ಲಿನ ಅನುಭವವನ್ನು ನಿರೂಪಿಸಿದ. ಅವನ ʻಮೈದಾ ಹೌಸ್ʼ(2009) ಚಿತ್ರದ ವಸ್ತು ಹೆಂಗಸೊಬ್ಬಳು ಕಟ್ಟಡ ನಿರ್ಮಾಣದವರಿಂದ ಪುರಾತನ ಮನೆಯನ್ನು ಕಾಪಾಡುವ ಪ್ರಯತ್ನವನ್ನು ನಿರೂಪಿಸುತ್ತದೆ.

ಆಧುನಿಕ ಜಗತ್ತಿನ ಜಾಗತೀಕರಣದ ಫಲವಾಗಿ ಇಂಡೋನೇಷಿಯಾದಲ್ಲಿ ಉಂಟಾದ ಪರಿಣಾಮಗಳನ್ನು ಜಗತ್ತಿನ ಎದುರು ಪ್ರಸ್ತುತಪಡಿಸುವ ಪ್ರಯತ್ನವೇ ಅವನ ʻಲವ್ಲಿ ಮ್ಯಾನ್ʼ ಚಿತ್ರದ ಹಿಂದಿರುವ ಪರಿಕಲ್ಪನೆ. ಸಂಸಾರವೊಂದರ ಮೇಲೆ ಉಂಟುಮಾಡುವ ವಿಷಾದಪೂರ್ಣ ಪರಿಣಾಮ ಅದರ ಕಥಾವಸ್ತು. ಇದಕ್ಕಾಗಿ ತಂದೆ-ಮಗಳ ಸಂಬಂಧವಿರುವ ಕಥಾಹಂದರವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಪೆಡ್ಡಿ ಸೋಯಾತ್ನಜ.

ʻಲವ್ಲೀ ಮ್ಯಾನ್‌ʼ ಕೇವಲ ಎಪ್ಪತ್ತಾರು ನಿಮಿಷಗಳ ಚಿತ್ರ. ಬೇರೆ ಚಿತ್ರಗಳಿಗೆ ಹೋಲಿಸಿದರೆ ಕಡಿಮೆ ಅವಧಿಯದು. ಚಿತ್ರದಲ್ಲಿ ತನ್ನ ಆಶಯವನ್ನು ಪೂರ್ಣಗೊಳಿಸಲು ಕೇವಲ ಒಂದು ದಿನದ ಅವಧಿಯಲ್ಲಿ ನಡೆಯುವ ಕಥಾ ಹಂದರವಿರುವ ಕಥನವನ್ನು ಪ್ರಸ್ತುತಪಡಿಸುತ್ತಾನೆ. ಚಿತ್ರದಲ್ಲಿ ತೀವ್ರತರ ಭಾವನೆಗಳನ್ನು ಉಂಟುಮಾಡುವ ಸನ್ನಿವೇಶಗಳನ್ನು ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಿರೂಪಿಸುತ್ತಾನೆ.

ಜಾಗತೀಕರಣದ ಫಲವಾಗಿ ಬದಲಾದ ವಾತಾವರಣದಿಂದ ದಿಕ್ಕೆಟ್ಟು ಸಣ್ಣಪುಟ್ಟ ದುಡಿಮೆಯವರು, ದಿನ ನಿತ್ಯದ ಗಳಿಕೆಯಿಂದ ಸಂಸಾರ ನಿರ್ವಹಿಸುವವರು, ಸಣ್ಣಸಣ್ಣ ವ್ಯಾಪಾರಿಗಳು, ಸ್ವಂತ ಊರುಗಳನ್ನು ಬಿಡುವ ಸಂದರ್ಭ ಉಂಟಾಗಿರುತ್ತದೆ. ಚಿಕ್ಕ ಗ್ರಾಮವೊಂದರಲ್ಲಿದ್ದ ಸೈಫುಲ್ ದುಡಿಮೆಗೆ ಅವಕಾಶವಿಲ್ಲದೆ, ಸಂಸಾರ ಸಾಗಿಸಲಾರದೆ, ಹೆಂಡತಿ ಮತ್ತು ನಾಲ್ಕು ವರ್ಷದ ಮಗಳು ಚಹಾಯಾಳನ್ನು ತೊರೆದು ಹೋಗಿರುತ್ತಾನೆ. ಅವನು ಊರನ್ನು ತ್ಯಜಿಸಿ ಹದಿನೈದು ವರ್ಷಗಳಾಗಿರುತ್ತವೆ. ಸೈಫುಲ್‌ ಪಟ್ಟಣದಲ್ಲಿ ಯಾವುದಾದರೂ ಕೆಲಸ ಸಿಗಬಹುದೆಂಬ ನಿರೀಕ್ಷೆಯಲ್ಲಿ ಜಕಾರ್ತಾ ಸೇರಿರುತ್ತಾನೆ. ಅಲ್ಲಿ ಅವನಿಗೆ ಯಾವ ಉದ್ಯೋಗವೂ ಲಭಿಸುವಂತಿರುವುದಿಲ್ಲ. ಹೀಗಿದ್ದರೂ ಅಲ್ಲಿಯೇ ಇದ್ದುಕೊಂಡು ಜೀವನ ನಿರ್ವಹಣೆಗೆ ಮತ್ತು ಊರಿಗೆ ಹಣ ಉಳಿಸುವುದು ಹೇಗೆಂದು ಹಲವು ರೀತಿಯಲ್ಲಿ ಪ್ರಯತ್ನಪಟ್ಟು ಸೋತ ನಂತರ ಹಿಂಜರಿಕೆಯಿಂದ ಊರಿಗೆ ಹಿಂದಿರುಗಲಾಗದೆ ಪಟ್ಟಣದಲ್ಲಿಯೇ ಇದ್ದುಕೊಂಡು ಹೆಣ್ಣಿನ ವೇಷದ ಲೈಂಗಿಕ ಕಾರ್ಯಕರ್ತನಾಗಿರುತ್ತಾನೆ. ಇವೆಲ್ಲವೂ ಚಿತ್ರದ ನಿರೂಪಣೆಯ ಹಿನ್ನೆಲೆಯಾಗುತ್ತದೆ.

ವಿದ್ಯಾಭ್ಯಾಸದ ಕಾಲದಲ್ಲಿಯೇ ದೃಶ್ಯ ಮಾಧ್ಯಮದ ಕಡೆ ಒಲವಿದ್ದು ಟ್ವೆಂಟಿನ್‌ ಟಾರೆಂಟೆರೋನ ʻರಿಸರ್ವಾಯರ್‌ ಡಾಗ್ಸ್‌ʼ ಚಿತ್ರದಿಂದ ಸಾಕಷ್ಟು ಪ್ರಭಾವಿತನಾದ. ಚಲನಚಿತ್ರರಂಗವನ್ನು ವೃತ್ತಿಯನ್ನಾಗಿ ಮಾಡಿಕೊಳ್ಳುವುದರ ಮಟ್ಟಿಗೆ ಅದರ ಪರಿಣಾಮವಾಯಿತು.

ತಂದೆಯ ಬಗ್ಗೆ ಏನೂ ತಿಳಿಯದಿರುವ ಚಹಾಯಾ ಜಕಾರ್ತಾಗೆ ಬಂದು ಬರುವುದು ಮತ್ತು ತಂದೆ ಸೈಫುಲ್ಲಾ ಜೊತೆಗಿನ ಭೇಟಿ ಹಾಗೂ ಇದರಿಂದುಂಟಾದ ಬೆಳವಣಿಗೆಯನ್ನು ಚಿತ್ರ ನಿರೂಪಿಸುತ್ತದೆ. ಕಥಾಹಂದರದಲ್ಲಿ ಅಡಕವಾದ ಅಂಶಗಳಲ್ಲಿ ಯಾವ ಅನಿರೀಕ್ಷಿತ ತಿರುವುಗಳಿಗೆ ಆಸ್ಪದವಿಲ್ಲ. ಆದರೆ ಚಿತ್ರಕಥೆಯ ಬಂಧ ಬಿಗಿಯಾಗಿರುವುದರಿಂದ ನಿರೂಪಣೆ ಕುತೂಹಲವನ್ನು ಕಾಪಾಡಿಕೊಳ್ಳುವುದರಲ್ಲಿ ಸಫಲವಾಗುತ್ತದೆ.

ಅಪ್ಪ ಮತ್ತು ಮಗಳು ಬಹಳ ಕಾಲದ ನಂತರ ಭೇಟಿಯಾಗುವುದು ಮತ್ತು ಭೇಟಿಯಾದ ಸಂದರ್ಭದಲ್ಲಿ ಅವರಿಬ್ಬರ ಭಾವಾತಿರೇಕದ ನಡವಳಿಕೆಗೆ ಸಾಕಷ್ಟು ಅವಕಾಶ ಇರುವುದು ನಿಜವಾದರೂ ಅದನ್ನು ಬದಿಗಿಟ್ಟು, ಭಾವತೀವ್ರತೆಯನ್ನು ಅಭಿನಯ ಹಾಗೂ ಪಾತ್ರಗಳ ವರ್ತನೆಗಳಿಂದ ಉದ್ದೇಶಿತ ಪರಿಣಾಮವನ್ನು ಉಂಟುಮಾಡುತ್ತಾನೆ ಪೆಡ್ಡಿ ಸೋಯಾತ್ನಜ. ದೃಶ್ಯ ಸಂಯೋಜನೆ, ಪಾತ್ರಗಳ ವರ್ತನೆ, ಆಂಗಿಕ ಅಭಿನಯ, ಸಂಭಾಷಣೆ, ಭಾವೋನ್ಮಾದ ಪ್ರಕಟಿಸುವಲ್ಲಿ ನಿಯಂತ್ರಣ ಮುಂತಾದವುಗಳಲ್ಲಿ ಪ್ರಬುದ್ಧತೆಯನ್ನು ಕಾಣಬಹುದು.

‌ʻಲವ್ಲಿ ಮ್ಯಾನ್ʼ ಚಿತ್ರದ ಸುರುಳಿ ಬಿಚ್ಚಿಕೊಳ್ಳುತ್ತಿರುವಂತೆ ಟೈಟಲ್ಸ್ ಗಳಿಗಿಂತ ಮುಂಚೆಯೇ ಕೈಯಲ್ಲಿ ಪಾದರಕ್ಷೆಗಳನ್ನು ಹಿಡಿದು ಹೆಜ್ಜೆ ಹಾಕುವ, ವಿಗ್ ಹಾಕಿಕೊಂಡ ಹೆಣ್ಣು ವೇಷದ ಗಂಡಸಿನ ದೇಹದ ವ್ಯಕ್ತಿ ಮೈಭಾಗಗಳನ್ನು ಕುಣಿಸುತ್ತ ಹೆಜ್ಜೆ ಹಾಕುವುದು ಪ್ರೇಕ್ಷಕರ ಆಲೋಚನೆಯನ್ನು ಹಲವು ದಿಕ್ಕುಗಳಲ್ಲಿ ಚಲಿಸುವಂತೆ ಮಾಡುತ್ತದೆ. ಸಾಮಾನ್ಯವಾಗಿ ಈ ಬಗೆಯ ದೃಶ್ಯತುಣುಕುಗಳು ಮುಖ್ಯ ಪಾತ್ರಕ್ಕೆ ಸಂಬಂಧಪಟ್ಟಿರುತ್ತದೆ ಎನ್ನುವುದು ಪ್ರೇಕ್ಷಕರಿಗೆ ತಿಳಿದ ವಿಷಯವೇ.

ಇದರ ಜೊತೆಗೆ ರೈಲಿನಲ್ಲಿ ಹುಡುಗಿಯೊಬ್ಬಳು ಪ್ರಯಾಣ ಮಾಡುವ ದೃಶ್ಯದ ತುಣುಕುಗಳನ್ನು ಎದುರಾಗಿಸಿ ಕಥನದ ದೃಶ್ಯರೂಪದ ಹೊಳಹಿನ ಮೊದಲನೇ ಮೆಟ್ಟಿಲನ್ನು ನಿರ್ದೇಶಕ ನಿರ್ಮಿಸುತ್ತಾನೆ. ಜಕಾರ್ತಾಗೆ ಬೆಳಿಗ್ಗೆ ಬಂದಿಳಿಯುವ ಚಹಾಯಾ ತಂದೆಯ ಬಗ್ಗೆ ಇರುವ ಒಂದೇ ಒಂದು ಮಾಹಿತಿ ಎಂದರೆ ಅವನ ವಿಳಾಸ. ಊರೆಲ್ಲಾ ಸುತ್ತಾಡಿ ಅವರಿವರನ್ನು ಕೇಳಿ ವಿಳಾಸ ಪತ್ತೆ ಮಾಡುವುದರಲ್ಲಿ ಸಫಲಳಾಗುತ್ತಾಳೆ. ಸೈಫುಲ್ ಕೆಲಸ ಮಾಡುವುದು ಏನೆಂದು ತಿಳಿಯದ ಚಹಾಯಾಗೆ ಅವನ ನೆರೆಮನೆಯಾಕೆ ದಿಗ್ಭ್ರಮೆಗೊಳಿಸುವ ವಿಷಯ ತಿಳಿಸುತ್ತಾಳೆ. ಅವನದೇನಿದ್ದರೂ ರಾತ್ರಿ ಮಾಡುವ ಕೆಲಸವೆಂದು ಹೇಳುತ್ತಾಳೆ. ಇದರಿಂದಲೇ ಚಾಹಾಯಾಳ ಮುಖ ಬಾಡುತ್ತದೆ. ತನ್ನ ತಂದೆಯ ಬಗ್ಗೆ ಗೊತ್ತಾಗುವ ಈ ವಿಲಕ್ಷಣ ವಿಷಯಕ್ಕೆ ಚಹಾಯಾ ಪ್ರತಿಕ್ರಿಯಿಸುವುದನ್ನು ಅತಿಸಮೀಪ ಚಿತ್ರಿಕೆಯಿಂದ ದಾಖಲುಪಡಿಸಿದ್ದನ್ನು ಕಾಣುತ್ತೇವೆ. ತನ್ನನ್ನು ತಾನೇ ನಿಯಂತ್ರಿಸಿಕೊಂಡು‌, ಆಕೆ ತಿಳಿಸಿದ ಸ್ಥಳಕ್ಕೆ ಹೋದಾಗ ತಂದೆಯ ಭೇಟಿಯಾಗುತ್ತದೆ.

ಈ ಭೇಟಿಗೆ ಮುನ್ನ ನಿರ್ದೇಶಕ ಸೈಫುಲ್ ಪಾತ್ರದ ಹೊರರೂಪ ಮತ್ತು ವಿವಿಧ ಭಂಗಿಗಳನ್ನು ವಿಸ್ತಾರವಾಗಿ ಪ್ರಕಟಿಸಿರುವುದು ವಿಶೇಷ ಮತ್ತು ಪಾತ್ರದ ಬೆಳವಣಿಗೆಗೆ ಅವಶ್ಯಕವೆನಿಸುತ್ತದೆ. ಅಂದರೆ ಹೆಣ್ಣಿನ ವೇಷತೊಟ್ಟು ಸಿಗರೇಟು ಸಿಗುತ್ತ, ಲೈಂಗಿಕ ಕಾರ್ಯಕರ್ತೆಯರ ಜೊತೆ ನಿಂತು ವಾಹನಗಳಲ್ಲಿ ಹೋಗುವವರನ್ನು ಆಕರ್ಷಿಸಲು ತಮ್ಮ ಹಾವಭಾವಗಳಿಂದ ನಿರತವಾಗಿರುವ ಅವನ ವರ್ತನೆಗಳನ್ನು ನಿರೂಪಿಸುತ್ತಾನೆ.
ಆ ಸ್ಥಳಕ್ಕೆ ಬರುವ ಚಹಾಯಾ ಭಯ ಬೆರೆತ ಕಣ್ಣುಗಳಿಂದ ತಂದೆಯನ್ನು ನೋಡಿ, ತನ್ನ ಗುರುತನ್ನು ತಿಳಿಸಿ, ಅವನನ್ನು ದಿಗ್ಬ್ರಮೆಗೊಳಿಸುತ್ತಾಳೆ. ತಂದೆಯ ಪರಿಸ್ಥಿತಿಯಿಂದ ಜಿಗುಪ್ಸೆಗೊಂಡು ಅವಳು ಮತ್ತೆ ಮತ್ತೆ ವಾಂತಿ ಮಾಡಿಕೊಳ್ಳುವುದು ಅತ್ಯಂತ ಯುಕ್ತವೆನಿಸುತ್ತದೆ. ಇಬ್ಬರ ಉದ್ವಿಗ್ನತೆಗಳು ಶಮನಗೊಂಡ ಮೇಲೆ, ಸಾವಧಾನದಿಂದ ಸದ್ಯದ ಪರಿಸ್ಥಿತಿಯನ್ನು ಹಂಚಿಕೊಳ್ಳುವ ಮತ್ತು ನಿಯಂತ್ರಿತಗೊಂಡ ಭಾವನೆಗಳಿಂದ ಪರಸ್ಪರ ಪ್ರೀತಿಯನ್ನು ಪ್ರಕಟಿಸುವ ದೃಶ್ಯಗಳನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಲಾಗಿದೆ. ಅವನಲ್ಲಿ ಅವಮಾನದಿಂದ ಉಂಟಾಗುವ ಸಿಟ್ಟು, ಮುಜುಗರ ಹೆಚ್ಚು; ಅವಳಿಗೆ ಆಶ್ಚರ್ಯದಿಂದ ಉಂಟಾದ ನಿರಾಸೆ, ಜಿಗುಪ್ಸೆ ಹೆಚ್ಚು. ಹೀಗೆ ಮಾಡುವುದರ ಜೊತೆಗೆ ಅವರು ಇತರ ವಿಷಯಗಳಿಗೂ ಗಮನ ಕೊಡುತ್ತಾರೆ.

ಹೆಣ್ಣು ವೇಷದ ತನ್ನ ಜೊತೆ ಇರುವ ಮಗಳನ್ನು ಕುರಿತು ತನ್ನನ್ನು ತಿಳಿದವರು ಭಾವಿಸುವ ಬಗ್ಗೆ ಅವಳಿಗೆ ವಿವರಿಸುತ್ತಾನೆ. ಜೊತೆಗೆ ಇತರರು ನಡೆದುಕೊಳ್ಳುವ ಬಗೆಯನ್ನು ಅತ್ಯಂತ ಸಹಜವಾದ ರೀತಿಯಲ್ಲಿ ವಿವರಿಸುತ್ತ, ಅವಳ ಬೇಗುದಿ ಮತ್ತು ದುಗುಡವನ್ನು ನಿವಾರಿಸುವುದಕ್ಕೆ ಸೈಫುಲ್ ಪ್ರಯತ್ನಿಸುತ್ತಾನೆ. ಅವರಿಬ್ಬರೂ ಮಾತನಾಡುತ್ತಲೇ ಸ್ಥಳದಿಂದ ಸ್ಥಳಕ್ಕೆ ಹೋಗುವುದರ ಹಿನ್ನೆಲೆಯಲ್ಲಿ ರಾತ್ರಿಯ ಸಮಯದಲ್ಲಿ ಜಕಾರ್ತಾದಲ್ಲಿ ಜರುಗುವ ಪ್ರಮುಖ ವಿದ್ಯಮಾನಗಳನ್ನು ಬಿಂಬಿಸುತ್ತಾನೆ.

ಹೆಂಡತಿಯ ಹಟಮಾರಿತನ, ಚಿಕ್ಕವಯಸ್ಸಿನ ಮಗಳ ಜೊತೆ ನೀರ್ಗುಳ್ಳೆಯನ್ನು ಬಿಡುತ್ತ ಕಳೆದ ಮಧುರ ದಿನಗಳ ನೆನಪು ಮಾಡಿಕೊಳ್ಳುವುದು ಹಾಗೂ ಪ್ರತಿ ತಿಂಗಳು ಹಣ ಕಳಿಸುತ್ತಿರುವ ಭೂತಕಾಲದಿಂದ ಪ್ರಾರಂಭಿಸಿ, ವರ್ತಮಾನದ ತನ್ನ ಜೀವನದ ನೆಲೆಗಳನ್ನು ಕುರಿತು ಮಾತನಾಡುತ್ತಲೇ ಸೈಫುಲ್, ತಕ್ಕಮಟ್ಟಿಗೆ ತನ್ನ ಕರ್ತವ್ಯ ಪೂರೈಸುತ್ತಿದ್ದರೂ ಜಿಗುಪ್ಸೆಯ ಜೀವನಕ್ಕೆ ಒಗ್ಗಿ ಹೋಗಿದ್ದೇನೆಂದು ಮಗಳಿಗೆ ತಿಳಿಸುತ್ತಾನೆ. ಅನಂತರ ಅವಳೊಂದಿಗೆ ಒಂದು ದಿನ ಮಾತ್ರ ಕಳೆಯಲು ಸಾಧ್ಯವೆಂದು ಒಪ್ಪಿಸುತ್ತಾನೆ. ಬಿಗಿತಗೊಂಡಿದ್ದ ಮನಸ್ಸನ್ನು ಕೊಂಚ ಹಗುರ ಮಾಡಿಕೊಂಡ ನಂತರ ಅವನ ವಾಸ್ತವ ನೆಲೆಯನ್ನು ಅರಿತ ಮೇಲೆ ಅವಳು ತನ್ನದನ್ನು ತೆರೆದಿಡುತ್ತಾಳೆ.

ಇನ್ನೂ ಮದುವೆಯಾಗದ ಹತ್ತೊಂಭತ್ತರ ತಾನು ಒಬ್ಬನನ್ನು ಪ್ರೇಮಿಸುತ್ತಿದ್ದು ಪರಿಣಾಮವಾಗಿ ಎರಡು ತಿಂಗಳ ಬಸುರಿಯಾಗಿರುವುದನ್ನು ತಿಳಿಸುತ್ತಾಳೆ. ಇದರಿಂದ ಸೈಫುಲ್‌ ಸ್ವಲ್ಪವೂ ಉದ್ವಿಗ್ನನಾಗದೆ ಸಹಜ ವಾತ್ಸಲ್ಯವನ್ನು ಪ್ರಕಟಿಸುತ್ತಾನೆ.

ಸೈಫುಲ್ ಗೆ ತಿಂಡಿ ತಂದುಕೊಡಲು ಚಹಾಯಾ ಹೋದಾಗ, ಮೂವತ್ತು ಮಿಲಿಯನ್ ರೂಪಯ್ಯದಷ್ಟು ಭಾರಿ ಮೊತ್ತದ ಹಣವನ್ನು ವಾಪಸು ಕೊಡಬೇಕೆಂದು ಅವನನ್ನು ಒತ್ತಾಯಿಸಿ ಹೊಡೆಯುವ ಗುಂಪೊಂದು, ಹಣ ವಾಪಸಾತಿಗೆ ಅಂತಿಮ ಅವಧಿ ನಿಗದಿಪಡಿಸುವ ಪ್ರಕರಣ ನಡೆಯುತ್ತದೆ. ಚಿತ್ರದಲ್ಲಿ ಅವನಿಗೆ ಒಳ್ಳೆ ಕೆಲಸ ಸಿಗದಿರುವುದರ ಬಗ್ಗೆ ಹೇಗೆ ಸಮರ್ಥನೆ ದೊರಕುವುದಿಲ್ಲವೋ ಹಾಗೆಯೇ ಮೈಕೈ ತುಂಬಿಕೊಂಡು ಸಾಕಷ್ಟು ಶಕ್ತಿಯುತನಂತೆ ಕಾಣುವ ಅವನಿಗೆ ಪಟ್ಟಣದಲ್ಲಿಯೂ ಯಾವ ಕೆಲಸ ಮತ್ತು ದುಡಿಮೆಗೆ ಅವಕಾಶ ಸಿಗದಿರುವುದನ್ನು ಕುರಿತು ಸ್ಪಷ್ಟ ಸೂಚನೆ ಸಿಗುವುದಿಲ್ಲ. ಹಾಗೆಯೇ ಅವನಿಗೆ ಅಷ್ಟೊಂದು ಹಣದ ಅವಶ್ಯಕತೆ ಉಂಟಾದದ್ದು ಹೇಗೆ ಎನ್ನುವುದಕ್ಕೆ ಕೂಡ.

ತಾವು ಹಿಡಿದ ಜೀವನದ ದಾರಿ ಸರಿಯೋ ತಪ್ಪೋ ಎನ್ನುವುದರ ಗೋಜಿಗೆ ಹೋಗದೆ ಒದಗಿ ಬಂದದ್ದನ್ನು ಸ್ವೀಕರಿಸಿ, ಎದುರಾಗುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬೇಕೆಂಬ ತನ್ನ ನಿಲುವನ್ನು ತಿಳಿಸುತ್ತಾನೆ. ಒಂದು ಬಗೆಯಲ್ಲಿ ಸ್ವಪ್ರಯತ್ನಕ್ಕಿಂತ ಕೈ ಮೀರಿದ ಮತ್ತೊಂದಕ್ಕೆ ಒತ್ತುಕೊಟ್ಟು, ಸೈಫುಲ್ಲಾ ಹೇಳುವುದನ್ನು ಚಹಾಯಾ ಒಪ್ಪಿಕೊಳ್ಳುತ್ತಾಳೆ. ಆ ಎರಡು ಪಾತ್ರಗಳು ಬದುಕಿನಲ್ಲಿ ಸೋಲೊಪ್ಪಿಕೊಳ್ಳಲು ಸಿದ್ಧವಾಗಿರುವಂತೆ ಅಥವ ತಾವಿರುವುದಕ್ಕಿಂತ ಭಿನ್ನವಾದ ಪರಿಸ್ಥಿತಿಯ ನಿರೀಕ್ಷೆಯನ್ನು ಕೈಬಿಟ್ಟ ಹಾಗೆ ತೋರುತ್ತವೆ. ಒಂದು ವಿಧದಲ್ಲಿ ತನ್ನ ಜೀವನ ನಿರ್ಣಾಯಕ ಹಂತ ತಲುಪಿದೆ ಎನ್ನುವುದನ್ನು ಸ್ವೀಕರಿಸುವನಂತೆ ಕಾಣುತ್ತಾನೆ ಸೈಫುಲ್ಲಾ. ತನ್ನವರೆನ್ನುವ ಹೆಂಡತಿ ಮಗಳನ್ನು ಬಿಟ್ಟರೆ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲವಾದ ಕಾರಣ ಎಂಥ ಆಪತ್ತು ಬಂದರೂ ತಾನೆ ನಿಭಾಯಿಸುತ್ತೇನೆ ಎಂಬ ಭಾವನೆ ಅವನಿಗುಂಟಾಗುತ್ತದೆ. ಚಹಾಯಾ ಒಪ್ಪದಿದ್ದರೂ ತನ್ನಲ್ಲಿರುವ ಅಷ್ಟೂ ಹಣವನ್ನು ಹೊರಡುವ ಮುಂಚೆ ಅವಳಿಗೆ ಕೊಡುತ್ತಾನೆ. ಪರಸ್ಪರ ವಿಷಾದ ತುಂಬಿದ ಭಾವನೆಗಳು ಮುತ್ತಿರುವಂತೆಯೇ ದೂರವಾಗುವ ಅನಿವಾರ್ಯತೆ ಉಂಟಾಗುತ್ತದೆ.

ಜಾಗತೀಕರಣದ ಫಲ ವೈಯಕ್ತಿಕ ಬದುಕನ್ನು ನಿರ್ನಾಮ ಮಾಡುವ ಅಪಾಯವನ್ನು ಇದು ಸೂಚಿಸುತ್ತದೆ. ಇದರೊಂದಿಗೆ ಮುಂದಿನ ಜನಾಂಗಕ್ಕೆ ಇಂದಿನವರಿಗಿಂತ ಕೇಡು ಕಾದಿದೆ ಎನ್ನುವುದು ಕೂಡ ಶತಃಸಿದ್ಧ ಎಂಬ ವಿಷಾದ ಸಂಗತಿಯನ್ನು ಮುಂದಿಡುತ್ತದೆ.


ಚಿತ್ರದಲ್ಲಿ ಗಮನಿಸಬೇಕಾದ ಹಲವು ಅಂಶಗಳಲ್ಲಿ ಮುಖ್ಯ ಪಾತ್ರಗಳ ಸಮರ್ಥ ಅಭಿನಯದ ಜೊತೆಗೆ ಬಹುತೇಕ ದೃಶ್ಯಗಳಲ್ಲಿ ಛಾಯಾಗ್ರಹಕ ಐಕಲ್‌ ತುಂಜುಂಗ್‌ ಕ್ಯಾಮರಾವನ್ನು ಕೈಯಲ್ಲಿ ಹಿಡಿದು ಚಿತ್ರೀಕರಣ ಮಾಡಿರುವುದು ಮೆಚ್ಚುಗೆಯಾಗುತ್ತದೆ. ಇವೆಲ್ಲಕ್ಕಿಂತ ಹೆಚ್ಚಾಗಿ ಚಿತ್ರದ ಉದ್ದೇಶ ಸಾಧಿಸುವಲ್ಲಿ ಯಶಸ್ವಿಯಾಗಿರುವ ನಿರ್ದೇಶಕ ಪೆಡ್ಡಿ ಸೋಯಾತ್ನಜನ ಪ್ರತಿಭೆಯನ್ನು ಸೂಚಿಸುತ್ತದೆ.