ಆ ವೇಳೆಗಾಗಲೇ ಅವಳಿಗೆ ತಾನು ಗರ್ಭಿಣಿ ಎನ್ನುವುದರ ಅರಿವಾಗಿರುತ್ತದೆ. ಆದರೆ ಅವಳ ಪ್ರೇಮಿ ಎನ್ನಿಸಿಕೊಂಡವನು ಅವಳೊಡನೆ ನಡೆದುಕೊಳ್ಳುವ ರೀತಿಯಿಂದ ಇವನೊಬ್ಬ ಮನುಷ್ಯನೇ ಎಂದು ಅವಳೇಕೆ, ಎಂಥವರಿಗೂ ಅನಿಸುತ್ತದೆ. ಅವನೊಬ್ಬ ಎಲ್ಲ ವಿಷಯಕ್ಕೂ ಬೌಂಡರಿಯಿಂದಾಚೆ ಇರಲು ಲಾಯಕ್ಕಾದವನು. ವಯಸ್ಸಿನ ಒತ್ತಡ ಬಿಟ್ಟರೆ ಅವನನ್ನು ಹತ್ತಿರ ಬಿಟ್ಟುಕೊಳ್ಳುವುದಕ್ಕೆ ಅವಳಿಗೆ ಬೇರೆ ಯಾವ ಕಾರಣವಿರಲು ಸಾಧ್ಯವಿಲ್ಲ. ಅವರಿಬ್ಬರಲ್ಲಿರುವ ಅಂತರಕ್ಕೊಂದು ದೃಶ್ಯರೂಪವೂ ಇದೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಕೊಲಂಬಿಯಾದ ಮರಿಯಾ ಫುಲ್‌ ಆಫ್‌ ಗ್ರೇಸ್‌ʼ ಸಿನಿಮಾದ ವಿಶ್ಲೇಷಣೆ

 

ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಒಂದಾದ ಕೊಲಂಬಿಯಾ ನಮ್ಮ ದೇಶದ ಸಾಂಸ್ಕೃತಿಕ ನೆಲೆ, ಜನಜೀವನ ಮತ್ತು ಒಟ್ಟಾರೆ ಬದುಕಿನ ರೀತಿಗೆ ಸಾಮ್ಯತೆ ಹೊಂದಿರುವುದನ್ನು ಕಾಣಬಹುದು. ಅಲ್ಲಿ ಸಿನಿಮಾಗೆ ಸಂಬಂಧಪಟ್ಟ ಹಾಗೆ ಜರ್ಮನಿ, ಫ್ರಾನ್ಸ್‌ ಸೇರಿದಂತೆ ಕೆಲವು ದೇಶಗಳನ್ನು ಹೊರತುಪಡಿಸಿದರೆ ಇತರ ಯುರೋಪ್ ದೇಶಗಳಂತೆ ಹೆಚ್ಚಿನ ಪ್ರಗತಿಯಾಗಲಿಲ್ಲ. ಸಿನಿಮಾದ ವಸ್ತು, ಕಥನ ಹಾಗೂ ನಿರೂಪಣೆಯ ವಿನ್ಯಾಸಗಳಲ್ಲಿ ವ್ಯತ್ಯಾಸಗಳಾಗಿದ್ದರೂ ಹೆಚ್ಚಾಗಿ ಸ್ಪ್ಯಾನಿಶ್ ಭಾಷೆಯನ್ನು ಅವಲಂಬಿಸಿ ಅದು ಪ್ರಚಲಿತವಿರುವ ಇತರ ದೇಶಗಳಲ್ಲಿ ಮಾತ್ರ ವಿಸ್ತಾರಗೊಂಡಿತು. ಆ ಭಾಷೆಯ ಸಿನಿಮಾಗಳ ಜನಪ್ರಿಯತೆ, ಸ್ಪರ್ಧೆ ಮತ್ತು ಹಿತಮಿತವಾದ ಆಶಯಗಳು ಒಂದು ಚೌಕಟ್ಟಿನೊಳಗೆ ಜರುಗುತ್ತಿತ್ತು. ಇಂದಿಗೂ ಅದೇ ರೀತಿಯಲ್ಲಿದೆ ಎನ್ನಬಹುದು. ಸಿನಿಮಾ ರಂಗವೂ ಕೂಡ ಅಲ್ಲಿನ ರಾಜಕೀಯ, ಪ್ರಭುತ್ವ ಇತ್ಯಾದಿಗಳ ಏರಿಳಿತ ಮುಂತಾದವುಗಳನ್ನು ಅನುಸರಿಸಿ ತನ್ನ ಮಿತಿ ಹಾಗೂ ವಿಸ್ತಾರಗಳಲ್ಲಿ ಕಾರ್ಯಪ್ರವೃತ್ತವಾಗುವ ಅಗತ್ಯ ಮತ್ತು ಅನಿವಾರ್ಯತೆ ಕಂಡಿದೆ.

ಐವತ್ತರ ದಶಕದಲ್ಲಿ ಇತರ ಕ್ಷೇತ್ರಗಳಲ್ಲಿ ತಮ್ಮ ಸಾಹಿತ್ಯ ಕೃಷಿಯಲ್ಲಿ ಪ್ರಖ್ಯಾತರಾದ ಗಾಬ್ರಿಯಲ್‌ ಗಾರ್ಸಿಯಾ ಮಾರ್ಕ್ವೆಸ್ ಮತ್ತು ಚಿತ್ರಕಲೆಯಲ್ಲಿ ಖ್ಯಾತರಾದ ಎನ್ರಿಕೆ ಗ್ರಾ ಒಟ್ಟುಗೂಡಿ ಸಿನಿಮಾ ಕ್ಷೇತ್ರದಲ್ಲಿಯೂ ಕೆಲಸಮಾಡುವ ಅಭಿಲಾಷೆಯನ್ನು ಹೊಂದಿದ್ದರು. ಅವರು ಜೊತೆಗೂಡಿ ನಿರ್ಮಿಸಿದ್ದು. “ದ ಬ್ಲೂ ಲಾಬ್ಸ್ಟರ್‌” ಎನ್ನುವ ಅತಿವಾಸ್ತವ ಸ್ವರೂಪದ ಚಿತ್ರವನ್ನು. ಅವರು ತಮ್ಮ ಚಟುವಟಿಕೆಯನ್ನು ಸ್ಪ್ಯಾನಿಷ್ ಭಾಷೆಯ ಚಿತ್ರಗಳಿಗೆ ಸಂಬಂಧಿಸಿದಂತೆ ಚಿತ್ರಕತೆ ಮತ್ತು ಚಿತ್ರ ನಿರ್ಮಾಣವನ್ನು ಮಿತಿಗೊಳಿಸಿಕೊಂಡಿದ್ದರು. ಕೆಲವು ವರ್ಷಗಳ ನಂತರ ಎನ್ರಿಕೆ ಗ್ರಾ ಚಿತ್ರಕಲೆಗೆ ಮಾತ್ರ ಸೀಮಿತಗೊಳಿಸಿಕೊಂಡರು. ಮಾರ್ಕ್ವೆಸ್ ಚಿತ್ರಕಥೆ ಬರೆಯುವುದನ್ನು ಮುಂದುವರಿಸಿದರು. ಮಾರ್ಕ್ವೆಸ್ ನ ʻಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ʼ ಕಾದಂಬರಿಗೆ 1982ರಲ್ಲಿ ನೊಬೆಲ್ ಪ್ರಶಸ್ತಿ ದೊರಕಿದ್ದು ತಿಳಿದ ವಿಷಯವೇ.

(ಹೋಶುವಾ ಮಾರ್ಸಟನ್‌)

2004 ರ ʻಮರಿಯಾ ಫುಲ್ ಆಫ್ ಗ್ರೇಸ್ʼ ಚಿತ್ರ ಪ್ರಪಂಚದ ಸಿನಿಮಾಸಕ್ತರ ಗಮನ ಸೆಳೆಯುವಂತಾಯಿತು. ಆಸ್ಕರ್‌ ಚಿತ್ರೋತ್ಸವದಲ್ಲಿ ಆ ಚಿತ್ರದ ಕ್ಯಾಟಲಿನಾ ಸ್ಯಾಂಡಿನೋ ಮೊರೆನೋಗೆ ಶ್ರೇಷ್ಠ ಅಭಿನೇತ್ರಿ ಎಂಬ ಆಸ್ಕರ್ ಪ್ರಶಸ್ತಿ ದೊರಕಿದ್ದು ಇಡೀ ಚಿತ್ರಪ್ರಪಂಚ ಅದರ ಕಡೆಗೆ ಗಮನ ಹರಿಸುವಂತಾಯಿತು. ಪ್ರಾಸಂಗಿಕವಾಗಿ ಈ ಪ್ರಶಸ್ತಿಯ ವಿಷಯದತ್ತ ಗಮನಹರಿಸಿದರೆ ಒಂದು ಸಂಗತಿ ಸ್ಪಷ್ಟವಾಗುತ್ತದೆ. ಇಂಗ್ಲಿಷ್ ಭಾಷೆಯ ಸಿನಿಮಾಗಳನ್ನು ಹೊರತುಪಡಿಸಿ ಶ್ರೇಷ್ಠ ಅಭೀನೇತ್ರಿ ಎನ್ನುವ ಆಸ್ಕರ್ ಪ್ರಶಸ್ತಿಯನ್ನು ಪಡೆದ ಉದಾಹರಣೆ ಬಹಳ ಕಡಿಮೆ. ಇಂದಿನವರೆಗಿನ ಸರಿಸುಮಾರು 140ಕ್ಕೂ ಹೆಚ್ಚಿನ ಬಾರಿ ಪ್ರಶಸ್ತಿಗಳು ಇಂಗ್ಲಿಷ್ ಭಾಷೆಯ ಚಿತ್ರಗಳಿಗೆ ಕೊಡಲ್ಪಟ್ಟಿದ್ದರೆ, ಕೇವಲ ಹನ್ನೆರಡು ಬಾರಿ ಮಾತ್ರ ಬೇರೆ ಭಾಷೆಯ ಚಿತ್ರಗಳಿಗೆ ಲಭಿಸಿದೆ. ಹೀಗೆಂದಾಗ ಅನೇಕ ಪದರುಗಳುಳ್ಳ ಆಲೋಚನೆಗಳು ಉದ್ಭವವಾಗುವುದು ಸಹಜ. ಆದರಿದು ವಾಸ್ತವ. ಅದೇನಿದ್ದರೂ ಇಂದಿಗೂ ಆಸ್ಕರ್ ಪ್ರಶಸ್ತಿ ತನ್ನ ಹಿರಿಮೆಯನ್ನು ಉಳಿಸಿಕೊಂಡಿದೆ ಎನ್ನುವುದನ್ನು ಒಪ್ಪದಿರುವುದು ಅಸಾಧ್ಯ. ಕೊಲಂಬಿಯಾದ ಪ್ರತಿಷ್ಠಿತ ಅಕಾಡೆಮಿ 2019ರಲ್ಲಿ ಅಲೆಜಾ಼ಂಡ್ರೊ ಲ್ಯಾಡಿಸ್‌ನ ʻಮೊನೋಸ್ʼ ಚಿತ್ರವನ್ನು ವರ್ಷದ ಚಿತ್ರವೆಂದು ಪರಿಗಣಿಸಿ ಬಹುತೇಕ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗಳನ್ನು ಗಳಿಸಿದೆ.

ಸಿನಿಮಾವೊಂದರಲ್ಲಿ ಅದರ ವಸ್ತು, ಕಥನ, ನಿರೂಪಣೆ ಮುಂತಾದವುಗಳ ಜೊತೆ ಹಿನ್ನೆಲೆ ಸಂಗೀತ ಕೂಡ ತನ್ನ ಕೊಡುಗೆಯನ್ನು ಎಷ್ಟರಮಟ್ಟಿಗೆ ಕೊಟ್ಟಿದೆ ಎನ್ನುವುದು ಆಯಾ ಸಿನಿಮಾದ ಶ್ರೇಷ್ಠತೆಗೆ ಕಾರಣವಾಗುತ್ತದೆ. ಇವುಗಳ ಜೊತೆ ನಿಶ್ಯಬ್ದವನ್ನು ಚಿತ್ರದಲ್ಲಿ ಎಷ್ಟು ಪರಿಣಾಮಕಾರಿಯಾಗಿ ಉಪಯೋಗಿಸಲ್ಪಟ್ಟಿದೆ ಎನ್ನುವುದೂ ಅತ್ಯಂತ ಮುಖ್ಯವಾಗುತ್ತದೆ. ಏಕೆಂದರೆ ಸಂದರ್ಭ ಮತ್ತು ಪಾತ್ರದ ಭಾವನೆಗಳನ್ನು ಗರಿಷ್ಠ ಮಟ್ಟದಲ್ಲಿ ಧ್ವನಿಸುವ ಸಾಮರ್ಥ್ಯವಿರುವ ಗುಣ ನಿಶ್ಯಬ್ದದ್ದು. ಈ ಎಲ್ಲ ಅಂಶಗಳನ್ನು ʻಮರಿಯಾ ಫುಲ್‌ ಆಫ್ ಗ್ರೇಸ್‌ʼ ಉಚಿತ ರೀತಿಯಲ್ಲಿ ಬಳಸಿಕೊಂಡಿದೆ.

ಕೊಲಂಬಿಯ ಎಂದಕೂಡಲೆ ಅದು ಅಮೆರಿಕ ಇತ್ಯಾದಿ ದೇಶಗಳಿಗೆ ಡ್ರಗ್ಸ್ ಸರಬರಾಜು ಮಾಡುವ ದೇಶ ಎಂದು ಪ್ರಚಲಿತವಾಗಿರುವುದನ್ನು ವಸ್ತುವಾಗಿರಿಸಿಕೊಂಡು ಚಿತ್ರ ನಿರ್ಮಾಣವಾಗಿದೆ. ಹೀಗೆಂದ ಕೂಡಲೆ ಅದನ್ನು ವಸ್ತುವಾಗಿಟ್ಟುಕೊಂಡು ಮಾಡಿದ ಅನೇಕಾನೇಕ ಚಿತ್ರಗಳು ಕಣ್ಣಮುಂದೆ ಸುಳಿಯುವುದು ಸಹಜವೇ. ಎಲ್ಲದರಲ್ಲಿಯೂ ಸಾಮಾನ್ಯವಾಗಿ ಕಾಣುವಂತಹದ್ದು, ಪೋಲಿಸರ ವರ್ತನೆ, ಗುಂಡುಗಳ ಸುರಿಮಳೆ, ಡ್ರಗ್ಸ್ ಸಾಗಿಸುವವರಿಗೆ ಉಂಟಾಗುವ ಪರಿತಾಪ ಮತ್ತು ಅಂತಿಮವಾಗಿ ಅವರಿಗೆ ಉಂಟಾಗುವ ತೊಂದರೆ, ಸಾವು. ಇವಕ್ಕೆ ಬೆಂಬಲವಾಗಿ ಅಳತೆ ಮೀರಿದ ವೇಗದಲ್ಲೋಡುವ ಕಾರು ಮುಂತಾದ ವಾಹನ ಇತ್ಯಾದಿಗಳಿರುವುದು ತೀರ ಸಾಮಾನ್ಯ. ಇವೆಲ್ಲವುಗಳ ಕಿಂಚಿತ್ ಸಂಪರ್ಕವಿಲ್ಲದೆ ಅತ್ಯಂತ ಭಿನ್ನವಾಗಿ, ತನ್ನದೇ ಆದ ವಿಶಿಷ್ಟ ರೀತಿಯ ಪರಿಕಲ್ಪನೆಯಲ್ಲಿ ತನ್ನ ಮೊದಲ ಚಿತ್ರದಲ್ಲಿಯೇ ಪ್ರಸ್ತುತಪಡಿಸುತ್ತಾನೆ ನಿರ್ದೇಶಕ ಹೋಶುವಾ ಮಾರ್ಸಟನ್‌.

ಚಿತ್ರದ ನೆಲಗಟ್ಟು ಅತ್ಯಂತ ನಿಷ್ಠುರ ಹಾಗೂ ಖಚಿತವಾದ ವಾಸ್ತವತೆಯ ಮೇಲೆ. ಎಲ್ಲಿಯೂ ಯಾವ ಸನ್ನಿವೇಶದಲ್ಲಿಯೂ ಕೊಂಚವೂ ಉತ್ಪ್ರೇಕ್ಷೆ ಎನ್ನುವುದರ ಸುಳಿವಿಲ್ಲ. ಒಂದಿಲ್ಲೊಂದು ಬಗೆಯಲ್ಲಿ ಉನ್ಮಾದಕರ, ರೋಚಕ ಸರಕನ್ನು ಚಿತ್ರದಲ್ಲಿ ನಿರೀಕ್ಷಿಸುವವರಿಗೆ ದೊಡ್ಡ ನಿರಾಶೆ ಉಂಟಾಗುತ್ತದೆ.

ಚಿತ್ರ ತೆರೆದುಕೊಳ್ಳುವುದು ಸಾಮಾನ್ಯ ರೀತಿಯಲ್ಲಿ. ಚಿತ್ರದ ವಸ್ತು ಸರಳ. ಡ್ರಗ್ಸ್ ಕಳ್ಳ ಸಾಗಾಣಿಕೆಗೆ ಆಕಸ್ಮಿಕವಾಗಿ ಸಿಲುಕಿಕೊಂಡ ಹರೆಯದ ಯುವತಿಯೊಬ್ಬಳು ಆ ಕಾರಣದಿಂದ ಉಂಟಾಗುವ ಅನೇಕ ರೀತಿಯ ಕ್ಲಿಷ್ಟ ಸಂದರ್ಭಗಳನ್ನು ಎದುರಿಸುವ ರೀತಿಯನ್ನು ತೆರೆದಿಡುತ್ತದೆ. ಈ ಪರೀಕ್ಷೆಗೆ ಒಳಗಾಗುವುದು ಮುಖ್ಯವಾಗಿ ಡ್ರಗ್ಸ್ ಸಂಬಂಧಿತ ಚಟುವಟಿಕೆಗಳಲ್ಲ. ಪರೀಕ್ಷೆಗೆ ಒಳಗಾಗುವುದು ಅಪರಿಚಿತ ಮತ್ತು ಅನಿರೀಕ್ಷಿತ ಸಂದರ್ಭವನ್ನು ಎದುರಿಸುವ ಯುವತಿಯ ವ್ಯಕ್ತಿತ್ವ ಯಾವ ಬಗೆಯದು ಎನ್ನುವುದು.

ಅದೊಂದು ಕಾರ್ಖಾನೆ. ಹೂಗಳನ್ನು ಬೇರೆ ಕಡೆ ಕಳಿಸುವುದು ಉದ್ಯೋಗ. ಅಲ್ಲಿ ದೊಡ್ಡ ಹಾಲ್ ನಲ್ಲಿ ಉದ್ದಗಲಕ್ಕೂ ಜೋಡಿಸಿರುವ ಟೇಬಲ್ಲುಗಳ ಮೇಲೆ ಹರಡಿರುವ ಬಳ್ಳಿಯ ತುಂಡುಗಳಲ್ಲಿರುವ ಎಲೆಗಳನ್ನು ಕಿತ್ತು, ಹೂವಿರುವುದನ್ನು ಮಾತ್ರ ಪಕ್ಕದಲ್ಲಿ ಜೋಡಿಸಿಡುವ ಮಾಡುವ ಕೆಲಸ ಹುಡುಗಿಯರದ್ದು. ಅವರಲ್ಲಿ ಹದಿನೇಳರ ಮರಿಯಾ ಅಲ್ವಾರೆಜ಼್ ಕೂಡ ಒಬ್ಬಳು. ಅವರೆಲ್ಲರೂ ಮಾಡುವ ಕೆಲಸವನ್ನು ಸೂಪರ್ ವೈಸ್ ಮಾಡುವವನಿಗೂ ಮತ್ತು ಮರಿಯಾಳಿಗೂ ಎಣ್ಣೆ ಸೀಗೇಕಾಯಿ. ಆಗಾಗ ಬಾತ್ ರೂಮಿಗೆ ಹೋಗುವುದನ್ನು ಒಪ್ಪದ ವ್ಯಕ್ತಿ ಅವನು. ಆದರೆ ಆಗವಳು ಮಾತನಾಡುವುದಿಲ್ಲ. ಅದೊಂದು ಅಪಮಾನ ಎಂದು ತಿಳಿದು ತನ್ನ ದೊಡ್ಡ ಕಣ್ಣುಗಳಿಂದ ಸಿಗಿದು ಹಾಕುವಂತೆ ನೋಡಿ ಕೂಡಲೇ ಹೊರಡುತ್ತಾಳೆ. ಮನೆಗೆ ಹಿಂತಿರುಗಿ ತಾನಿನ್ನು ಆ ಕೆಲಸ ಮಾಡುವುದಿಲ್ಲವೆಂದು ಹೇಳಿ ಮನೆಯವರನ್ನು ಆಕ್ರೋಶಕ್ಕೆ ಗುರಿಯಾಗುತ್ತಾಳೆ. ಆದರೆ ಅವಮಾನದಿಂದ ತನಗುಂಟಾದ ನೋವನ್ನು ಮರೆಯಲು ಸಾಧ್ಯವಿಲ್ಲದೆ ಅವಳು ಮರಳಿ ಕಾರ್ಖಾನೆಗೆ ಹೋಗುವುದಿಲ್ಲ.

 

ಸಿನಿಮಾದ ವಸ್ತು, ಕಥನ ಹಾಗೂ ನಿರೂಪಣೆಯ ವಿನ್ಯಾಸಗಳಲ್ಲಿ ವ್ಯತ್ಯಾಸಗಳಾಗಿದ್ದರೂ ಹೆಚ್ಚಾಗಿ ಸ್ಪ್ಯಾನಿಶ್ ಭಾಷೆಯನ್ನು ಅವಲಂಬಿಸಿ ಅದು ಪ್ರಚಲಿತವಿರುವ ಇತರ ದೇಶಗಳಲ್ಲಿ ಮಾತ್ರ ವಿಸ್ತಾರಗೊಂಡಿತು. ಆ ಭಾಷೆಯ ಸಿನಿಮಾಗಳ ಜನಪ್ರಿಯತೆ, ಸ್ಪರ್ಧೆ ಮತ್ತು ಹಿತಮಿತವಾದ ಆಶಯಗಳು ಒಂದು ಚೌಕಟ್ಟಿನೊಳಗೆ ಜರುಗುತ್ತಿತ್ತು.

ಆ ವೇಳೆಗಾಗಲೇ ಅವಳಿಗೆ ತಾನು ಗರ್ಭಿಣಿ ಎನ್ನುವುದರ ಅರಿವಾಗಿರುತ್ತದೆ. ಆದರೆ ಅವಳ ಪ್ರೇಮಿ ಎನ್ನಿಸಿಕೊಂಡವನು ಅವಳೊಡನೆ ನಡೆದುಕೊಳ್ಳುವ ರೀತಿಯಿಂದ ಇವನೊಬ್ಬ ಮನುಷ್ಯನೇ ಎಂದು ಅವಳೇಕೆ ಎಂಥವರಿಗೂ ಅನಿಸುತ್ತದೆ. ಅವನೊಬ್ಬ ಎಲ್ಲ ವಿಷಯಕ್ಕೂ ಬೌಂಡರಿಯಿಂದಾಚೆ ಇರಲು ಲಾಯಕ್ಕಾದನು. ವಯಸ್ಸಿನ ಒತ್ತಡ ಬಿಟ್ಟರೆ ಅವನನ್ನು ಹತ್ತಿರ ಬಿಟ್ಟುಕೊಳ್ಳುವುದಕ್ಕೆ ಅವಳಿಗೆ ಬೇರೆ ಯಾವ ಕಾರಣವಿರಲು ಅಸಾಧ್ಯ. ಅವರಿಬ್ಬರಲ್ಲಿರುವ ಅಂತರಕ್ಕೊಂದು ದೃಶ್ಯರೂಪವೂ ಇದೆ. ಇಬ್ಬರೇ ನಡೆದಾಡುವ ಕಡೆ ಮರಿಯಾ ಅಷ್ಟೆತ್ತರದ ಗೋಡೆಯ ಮೇಲೆ ಹತ್ತಿ ಕೂತು, ಪ್ರೇಮಿಯನ್ನು ʻಬಾ..ʼ ಎಂದು ಎಷ್ಟು ಕರೆದರೂ ಅವನು ಹೇಡಿಯಂತೆ ಮುಖ ತಿರುಗಿಸಿ ತನ್ನಷ್ಟಕ್ಕೆ ಹೋಗುತ್ತಾನೆ. ಅಲ್ಲಿಗೆ ಅವಳ ಮಟ್ಟಿಗೆ ಅವನ ಸಂಬಂಧ ಮುಗಿದ ಹಾಗೆ. ಆಗ ಪರಿಚಿತಗೊಂಡ ಫ್ರಾಂಕ್ಲಿನ್ ಎಂಬುವನು ಅವಳ ನಿಲುವು, ಚಟುವಟಿಕೆಯಿಂದ ಪ್ರಭಾವಿತನಾಗಿ ಅವಳಿಗೊಂದು ಕೆಲಸ ಕೊಡಿಸುವ ಭರವಸೆ ಕೊಡುತ್ತಾನೆ.

ಅದರಂತೆಯೇ ಅಮೇರಿಕಕ್ಕೆ ಡ್ರಗ್ಸ್ ಸಾಗಿಸುವ ಕಳ್ಳ ಸಾಗಾಣಿಕೆಯ ಮಾಡುವುದೆಂದು ತಿಳಿಸುತ್ತಾನೆ. ಅವಳಿಗೆ ಹೊಸ ಜಗತ್ತು ತೆರೆದಂತೆ ಭಾಸವಾಗುತ್ತದೆ. ತನ್ನತನವನ್ನು ಋಜುವಾತು ಪಡಿಸಿ ಸ್ವತಂತ್ರವಾಗಿ ಚಿಮ್ಮೇರುವ ಅವಕಾಶವೆಂದು ತಿಳಿಯುತ್ತಾಳೆ. ಇಲ್ಲಿಯೂ ಮಧ್ಯಮ ವರ್ಗದವರಲ್ಲಿ ಪುಟಿದೇಳುವ ಪ್ರಶ್ನೆ ಅದೇ. ಅದರಿಂದ ಸಿಗುವ ಹಣವೆಷ್ಟು ಎನ್ನುವುದು. ಅದು ಅವಳಿಗೆ ಪ್ರಮುಖ. ಅದು ತಾನು ಸ್ವತಂತ್ರಳಾಗಿ ನಿಲ್ಲಬಲ್ಲೆ, ಅಷ್ಟೇಕೆ ನಿಂತು ತೋರಿಸುತ್ತೇನೆ ಎಂಬ ಛಲ, ದೃಢ ನಿಲುವಿಗೆ ಬೆಂಬಲವಾಗುತ್ತದೆ. ಹಾಗೆಂದೇ ಅವಳು ಡ್ರಗ್ಸ್ ಸಾಗಿಸುವ ಕೆಲಸವನ್ನು ಒಪ್ಪಿಕೊಳ್ಳುತ್ತಾಳೆ.

ಈ ಅಡ್ಡ ಮಾರ್ಗದ ವ್ಯವಹಾರಕ್ಕೆ ಸಂಬಂಧಿಸಿದ ವ್ಯಕ್ತಿಯನ್ನು ರಾಜಧಾನಿ ಬೊಗೋಟಾದಲ್ಲಿ ಅವಳಿಗೆ ಪರಿಚಯಿಸುತ್ತಾನೆ. ಅಲ್ಲಿ ಮಾಡಬೇಕಾದ ಕೆಲಸ ಮತ್ತು ಅದರಿಂದ ತನಗೆ ಸಿಗುವ ಹಣ ಎರಡೂ ಅವಳಿಗೆ ತಿಳಿಯುತ್ತದೆ. ಅಲ್ಲಿಯೇ ಆ ಗುಂಪಿನಲ್ಲಿದ್ದು ಆ ರೀತಿ ಕೆಲಸ ಮಾಡುವ ಲೂಸಿ ಎನ್ನುವ ಹುಡುಗಿಯ ಸ್ನೇಹವೂ ಉಂಟಾಗುತ್ತದೆ.

ಡ್ರಗ್ಸ್ ಸಾಗಿಸಲು ಹುಡುಗಿಯರನ್ನು ಉಪಯೋಗಿಸಿಕೊಳ್ಳುವುದರ ಜೊತೆಗೆ ಅವರು ಅದನ್ನು ನಿರ್ವಹಿಸುವ ಕ್ರಿಯೆ ಕೂಡ ನಮಗೆ ಹೊಸದೆನಿಸುವ ರೀತಿಯಲ್ಲಿದೆ. ಇದೊಂದು ಚಿತ್ರದ ಪ್ರಮುಖ ಸಂದರ್ಭ. ಮರಿಯಾಳಿಗೆ ಡ್ರಗ್ಸ್‌ ಗುಳಿಗೆಗಳನ್ನು ಸಾಗಿಸುವುದು ಹೇಗೆ ಎನ್ನುವುದರ ಅಭ್ಯಾಸ ಅಲ್ಲಿನ ಹುಡುಗಿ ಲೂಸಿಯಾ ತೋರಿಸಿಕೊಡುತ್ತಾಳೆ. ಡ್ರಗ್ಗನ್ನು ತೋರು ಬೆರಳಿನ ಅರ್ಧದಷ್ಟು ಭಾಗದಂತೆ ಕಾಣುವಂತೆ ಒತ್ತರಿಸಿಟ್ಟು ಸುತ್ತಿ, ಅದರ ಮೇಲ್ಮೈಯಲ್ಲಿ ಸಲೂಷನ್‌ ಒಂದರಲ್ಲಿ ಅದ್ದಿ, ಅನಂತರ ಅದನ್ನು ನುಂಗುವುದು. ಲೂಸಿ ಸಲೀಸಾಗಿ ಬಾಯಿಯೊಳಗೆ ಹಾಕಿಕೊಂಡು ನುಂಗುತ್ತಾಳೆ. ಮರೀನಾಳ ಕಣ್ಣರಳುತ್ತದೆ. ಇಷ್ಟು ಸಲೀಸಾಗಿ ಸಾಧ್ಯವೇ ಎಂದು ಹಾಗೆಯೇ ಮಾಡಲು ಮರಿಯಾ ಪ್ರಯತ್ನಿಸುತ್ತಾಳೆ. ಅದು ಗಂಟಲಲ್ಲಿ ಸಿಕ್ಕಿ ಹಾಕಿಕೊಂಡು ಅವಳು ಒದ್ದಾಡುವ ಪರಿ ನಮ್ಮನ್ನೂ ತಟ್ಟುತ್ತದೆ. ಮರಿಯಾ ಪ್ರಯತ್ನ ನಿಲ್ಲಿಸುವುದಿಲ್ಲ. ಅವಳಿಗದು ಸವಾಲು. ತನಗೆ ಅತ್ಯಂತ ಅಪರಿಚಿತವಾದ ಕ್ರಿಯೆಯಲ್ಲಿ ನಿರತಳಾಗುವ ಮರಿಯಾಳ ಮುಖಚರ್ಯೆ ಅತ್ಯಂತ ವಾಸ್ತವ ರೂಪದಲ್ಲಿ ವ್ಯಕ್ತವಾಗುತ್ತದೆ. ಕನಿಷ್ಠ ರೀತಿಯ ಮುಖದ ಸ್ನಾಯುಗಳ ಚಲನೆ ಮತ್ತು ವ್ಯತ್ಯಾಸ ತೋರಿಸುವ ಕಣ್ಣುಗಳ ಬಳಕೆ. ಈ ಪ್ರಯತ್ನದಲ್ಲಿ ಮರಿಯಾ ಸಫಲಳಾಗುವುದು ನಿರೀಕ್ಷಿತವೇ.

ಇದೇ ರೀತಿಯಲ್ಲಿ ಮಾಡಿ ಹೊಟ್ಟೆಯನ್ನು ಭರ್ತಿ ಮಾಡಿಕೊಂಡು ಮರಿಯಾ ನ್ಯೂಯಾರ್ಕಿಗೆ ಹೊರಡುತ್ತಾಳೆ. ಅವಳು ಹೊರಟ ಏರೋಪ್ಲೇನ್ ನಲ್ಲಿಯೇ ಇದನ್ನೇ ವೃತ್ತಿಯಾಗಿಟ್ಟುಕೊಂಡ ಹುಡುಗಿಯರ ರಕ್ಷಣೆ ಇತ್ಯಾದಿ ಕೆಲಸ ಮಾಡುವ ಒಂದಿಬ್ಬರು ಗಾರ್ಡುಗಳಂಥ ವ್ಯಕ್ತಿಗಳಿರುತ್ತಾರೆ. ಅವರ ಜೊತೆಯಲ್ಲಿಯೇ ಲೂಸಿ, ಬ್ಲಾಂಕಾ ಮುಂತಾದವರು ಇರುವುದು ಗೊತ್ತಾಗುತ್ತದೆ. ಲೂಸಿ ಈ ಮೊದಲೇ ಈ ಕೆಲಸ ಮಾಡಿದ ಅನುಭವದ ಜೊತೆಗೆ ನ್ಯೂಯಾರ್ಕಿನಲ್ಲಿ ಅವಳ ಅಕ್ಕನ ಮನೆಯಿದೆ. ಈ ಎರಡರಿಂದಲೂ ದೂರ ಮರಿಯಾ.

ಏರ್ಪೋರ್ಟಿನಲ್ಲಿಯೇ ಅವಳ ವರ್ತನೆ ಅವಳನ್ನು ತಪಾಸಣೆಗೆ ದೂಡುತ್ತದೆ. ಆಗವಳು ಕೊಂಚ ಅದುರುತ್ತಾಳೆ. ಹೊಸ ಜೀವನ ಹುಡುಕಿಕೊಂಡು ಬಂದವಳಿಗೆ ಮೊದಲ ಹೆಜ್ಜೆಯಲ್ಲೇ ದುಡುಂ ಎಂದು ಆಳ ಕಾಣದ ಬಾವಿಯೊಳಕ್ಕೆ ಬೀಳಬಹುದೇನೋ ಎಂಬ ಆತಂಕ. ಆದರವಳು ಚಾಲಾಕಿ. ತನ್ನಂತರಂಗದ ತುಮುಲವನ್ನು ಕಿಂಚಿತ್‌ ತೋರಿಸಿಕೊಳ್ಳುವುದಿಲ್ಲ. ಅದು ಡ್ರಗ್ಸ್‌ ಕಳ್ಳ ಸಾಗಾಣಿಗೆ ಒಪ್ಪುವಾಗ ಇದ್ದ ಮನಸ್ಥಿಯ ಇನ್ನೊಂದು ರೂಪ. ಆಗ ನರಗಳನ್ನು ಹಿಡಿದು ಇನ್ನು ತನ್ನ ಜೀವನ ಹೊಸ ದಿಕ್ಕಿನಲ್ಲಿದೆ ಎಂದು ನಿರ್ಧರಿಸುವಾಗ ಎಲ್ಲ ಶಕ್ತಿಗಳನ್ನು ಒಗ್ಗೂಡಿಸಿದಂತೆಯೇ ನ್ಯೂಯಾರ್ಕಿನ ಕಸ್ಟಮ್ಸ್‌ ಅಧಿಕಾರಿಗಳೆದುರು ಮೈ, ಮುಖ ಸಡಿಲಿಸಿ ಸಹಜ ನೋಟ, ನಡೆಯಿಂದ ವರ್ತಿಸುತ್ತಾಳೆ. ಆದರೆ ತಪಾಸಣೆಯಿಂದ ಆಚೆಗೆ ಹಾರುವ ಅವಕಾಶ ಅವಳಿಗಾಗುತ್ತದೆ. ಕಾರಣ ಅವಳು ಗರ್ಭಿಣಿ ಎನ್ನುವ ಕಾರಣದಿಂದ ಎಕ್ಸ್‌ರೇಯಿಂದ ಮಾಫಿ. ಇದರಿಂದ ಮರಿಯಾಳಿಗೆ ಹಿಗ್ಗು. ಆದರೆ ಇಂತಹ ಅನುಕೂಲ, ಅವಕಾಶ ಲೂಸಿಗಿಲ್ಲವಾಗುತ್ತದೆ. ಜೊತೆಗೆ ನುಂಗಿದ ಡ್ರಗ್ಸ್‌ ಗುಳಿಗೆ ಹೊಟ್ಟೆಯಲ್ಲಿ ಒಡೆದು ಹೋಗಿ ರಂಪವಾಗಿ ಅವಳ ಸಾವಿಗೆ ಮೂಲವಾಗುತ್ತದೆ. ಅವಳ ಅನುಭವದ ಬೆಂಬಲದಲ್ಲಿ ಮುಂದೋಡುವ ಮರಿಯಾಳ ನಿರೀಕ್ಷೆ ಹುಡಿಯಾಗುತ್ತದೆ. ಅವಳಿಗೆ ಬ್ಲಾಂಕಾ ಎನ್ನುವ ಹುಡುಗಿ ಜೊತೆಯಾಗುತ್ತಾಳೆ.

ನ್ಯೂಯಾರ್ಕಿನ ಅಬ್ಬರ, ಆಟಾಟೋಪಗಳಿಗೆ ಅವಳು ಹೆದರುವುದಿಲ್ಲ. ಆದರೆ ಲೂಸಿಗೊದಗಿದ ಸಾವಿನ ಜೊತೆ ತಾನು ಹೋಗಬೇಕಾದ ವಿಳಾಸವನ್ನೂ ಕಳೆದುಕೊಂಡು ದಿಕ್ಕೆಟ್ಟವಳಾಗುತ್ತಾಳೆ. ಆದರೆ ಅವಳ ಮನಸ್ಸಿಗೆ ಭಯದ ಪ್ರವೇಶವಿಲ್ಲ. ಏನನ್ನು ಬೇಕಾದರೂ ಎದುರಿಸಿಯೇನು ಎನ್ನುವ ದೃಢ ಶಕ್ತಿ ಅವಳದ್ದು. ಅದರಂತೆಯೇ ಅವಳು ಲೂಸಿಯ ಅಕ್ಕನ ಬಳಿಗೆ ಹೋಗಲು ನಿರ್ಧರಿಸಿದರೆ ಬ್ಲಾಂಕಾಳ ಆಲೋಚನೆಯ ದಿಕ್ಕು ಬೇರಾವುದೋ ಕಡೆಗೆ. ತಾವೇ ದುಃಸ್ಥಿತಿಯಲ್ಲಿದ್ದರೂ ಲೂಸಿಯ ಅಕ್ಕನಿಗೆ ತಂಗಿಯ ಗೆಳತಿ ಎನ್ನುವ ಮರಿಯಾಳನ್ನು ಪ್ರೀತಿಯಿಂದ ಕಾಣುತ್ತಾಳೆ ಲೂಸಿಯ ಅಕ್ಕ. ಇಷ್ಟಾಯಿತು ಮುಂದೇನು -ಎನ್ನುವ ಗೊಂದಲದಲ್ಲಿರುವ ಮರಿಯಾ ಮತ್ತು ಬ್ಲಾಂಕಾ ಮತ್ತೆ ಒಟ್ಟಾಗುತ್ತಾರೆ. ಆದರೆ ಅವರ ಹೊಟ್ಟೆಯೊಳಗಿನ ಡ್ರಗ್ಸ್‌ ತುಂಡುಗಳನ್ನು ಬೆನ್ನಟ್ಟಿದ್ದ ಆ ಗುಂಪಿನವರಿಬ್ಬರು ಅವರನ್ನು ಪತ್ತೆ ಮಾಡಿ ಎಲ್ಲವನ್ನೂ ಪಡೆಯುತ್ತಾರೆ. ಅವರನ್ನು ಅತ್ಯಂತ ತುಚ್ಛವಾಗಿ ಕಂಡು ಅಬ್ಬರಿಸಿ, ತಮ್ಮ ನಿಜ ಸ್ವರೂಪವನ್ನು ಹೊರ ಚೆಲ್ಲಿ ಮುಂದೋಡುವುದರಲ್ಲಿದ್ದ ಅವರನ್ನು ಅಡ್ಡಗಟ್ಟಿ, ತಮಗೆ ಬರಬೇಕಾದ ಹಣವನ್ನು ವಸೂಲು ಮಾಡುತ್ತಾರೆ. ಅದೆಲ್ಲಿಂದಲೋ ಸಣ್ಣ ಊರಿಂದ ಬಂದ ಹುಡುಗಿಯರು ಆ ಇಬ್ಬರನ್ನು ತರಾಟೆಗೆ ತೆಗೆದುಕೊಳ್ಳುವ ರೀತಿ ನಮ್ಮ ತುಟಿಯ ಮೇಲೆ ಮೆಚ್ಚುಗೆಯ ನಸುನಗೆ ಮೂಡಿಸುತ್ತದೆ.

ಆ ದಿನ ಲೂಸಿಯ ಅಕ್ಕನ ಮನೆಯಲ್ಲಿ ಮರಿಯಾ ಮತ್ತು ಬ್ಲಾಂಕ್‌ ಆಡಿದ ಆಟಕ್ಕೆ ತೆರೆ. ಅವಳು ಸತ್ತದ್ದನ್ನು ತಿಳಿಸದೆ ತಮ್ಮನ್ನು ಮೋಸಗೊಳಿಸಿದ್ದಕ್ಕೆ ಅವಳು ಮರಿಯಾ ಮತ್ತು ಬ್ಲಾಂಕ್‌ ಇಬ್ಬರನ್ನೂ ಆಚೆಗಟ್ಟುತ್ತಾಳೆ. ಹೆಚ್ಚು ಹೋರಾಟವಿರದ ತನ್ನ ಬೇಡಿಕೆಗಳನ್ನು ಈಡೇರಿಸುವ ಕೊಲಂಬಿಯಾಗೆ ಹಿಂತಿರುಗಿ ಹೋಗಲು ಇಷ್ಟ ಪಡುವ ಬ್ಲಾಂಕ್‌ಳನ್ನು ಏರ್ಪೋರ್ಟಿನಲ್ಲಿ ಬೀಳ್ಕೊಡುವ ಮರಿಯಾಳಿಗೆ ಮತ್ತದೇ ಪ್ರಶ್ನೆ. ಮುಂದೇನು. ಆದರೆ ಸೋಲು ತನಗಲ್ಲ, ತನ್ನ ದಾರಿ ನಿರ್ಮಿಸಿಕೊಳ್ಳುತ್ತೇನೆ ಎಂಬ ಛಲ ಅವಳಿಡುವ ಹೆಜ್ಜೆಗಳಲ್ಲಿರುತ್ತದೆ.