ಈ ಮೊದಲು ತಿಳಿಸಿದಂತೆ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳನ್ನು ಯೋನಿ ಛೇದನದಿಂದ ರಕ್ಷಿಸುವ ಹೊಣೆಗಾರಿಕೆಯನ್ನು ಕೋಲೆ ವಹಿಸಿಕೊಂಡು ʻಮೂಲಾಡೆʼ ಮಾಡುತ್ತಾಳೆ.. ಇದು ಎಲ್ಲ ಗಂಡಸರ ಕೋಪಕ್ಕೆ ಕಾರಣವಾಗುತ್ತದೆ. ಕೋಲೆಗೆ ಯೋನಿ ಛೇದನಕ್ಕೆ ಒಳಗಾಗದ ಮಗಳು ಅಮಾಸಟೋ ಜೊತೆಗೆ ಮದುವೆಯಾಗುವ ಸಂಭವವಿರುವ ಮತ್ತು ಆಗಷ್ಟೆ ಪ್ಯಾರಿಸ್ ನಿಂದ ಬಂದ ಹಳ್ಳಿಯ ಯಜಮಾನ ದುಗೋಟಿಗಿನ ಮಗ ಇಬ್ರಾಹಿಂ ಮತ್ತು ಹಳ್ಳಿಗರಿಗೆ ಅಗತ್ಯ ವಸ್ತುಗಳನ್ನು ಮಾರುವ ಮರ್ಸಿನರಿಯ ಬೆಂಬಲವೂ ಇರುತ್ತದೆ.
ಎ. ಎನ್.‌ ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್ʼನಲ್ಲಿ ಸರಣಿಯಲ್ಲಿ ಆಫ್ರಿಕಾದ ‘ಮೂಲಾಡೆʼ ಸಿನಿಮಾ

ಅಲ್ಲಿ ದೊಡ್ಡ ಅಂಗಳದಲ್ಲಿ ಕೆಲವು ಅಲ್ಲಿನ ಹೆಂಗಸರು ಅತ್ತಿತ್ತ ಓಡಾಡುತ್ತ ಗುಡಿಸಲುಗಳ ಆವರಣದೊಳಗೆ ಕೆಲಸ ಮಾಡುತ್ತಿರುತ್ತಾರೆ. ಆದರೆ ಅವರಂತೆ ಕೆಲಸ ಮಾಡುವ ಗಂಡಸರು ಯಾರೂ ಇರುವುದಿಲ್ಲ. ಆಗಲೇ ಅಷ್ಟು ದೂರದಿಂದ ಆರೆಂಟು ವರ್ಷ ವಯಸ್ಸಿನ ನಾಲ್ಕು ಹೆಣ್ಣುಮಕ್ಕಳು ಓಡಿ ಬಂದು ಅಲ್ಲೊಬ್ಬಳ ಹೆಂಗಸಿನ ಕಾಲಿಗೆ ಬಿದ್ದು, “ಕಾಪಾಡು… ಕಾಪಾಡು…” ಎಂದು ಅಳುತ್ತಾ ಗೋಗರೆಯುತ್ತಾರೆ. ಆಕೆಗೆ ಆ ಹೆಣ್ಣುಮಕ್ಕಳು ʻಶುಚಿತ್ವʼಕ್ಕೆ ಅಂದರೆ ಯೋನಿ ಛೇದನ ಮಾಡಿಸಿಕೊಳ್ಳುವುದರಿಂದ ಹೇಗೋ ತಪ್ಪಿಸಿಕೊಂಡು ಬಂದಿದ್ದಾರೆಂದು ಗೊತ್ತಾಗುತ್ತದೆ. ಗಂಭೀರಳಾದ ಆ ಹೆಂಗಸು ಕ್ಷಣ ಕಾಲ ಯೋಚಿಸಿ, ಅವರಿಗೆ ರಕ್ಷಣೆ ಕೊಡಲು ನಿರ್ಧರಿಸುತ್ತಾಳೆ. ಹಾಗೆ ನೋಡಿದರೆ ಬಂದ ಹುಡುಗಿಯರ ಜೊತೆ ಇನ್ನಿಬ್ಬರು ಇರಬೇಕಾಗಿತ್ತು. ಆದರೆ ಅವರು ಯೋನಿ ಛೇದನಕ್ಕೆ ಮನಸ್ಸಿಲ್ಲದೆ, ಬೇರೆ ದಾರಿ ಕಾಣದೆ, ಆತುರಾತುರವಾಗಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.

ಇದು ಸೊಂಬೇನ ಉಸ್ಮಾನಿ ನಿರ್ದೇಶನದ ʻಮೂಲಾಡೆʼ ಚಿತ್ರದ ಆರಂಭದ ಮೂರು ನಿಮಿಷಗಳ ನಿರೂಪಣೆಯಲ್ಲಿ ಕಂಡು ಬರುತ್ತದೆ. ಈ ಚಿತ್ರ ಪೂರ್ವ ಆಫ್ರಿಕಾದ ಉಪ-ಸಹಾರಾ ವಿಸ್ತಾರದಲ್ಲಿರುವ ದೇಶಗಳಲ್ಲೊಂದಾದ ಸೆನೆಗಲ್‌ ದೇಶಕ್ಕೆ ಸಂಬಂಧಿಸಿದ್ದು. ಅದರಲ್ಲೊಂದು ಹಳ್ಳಿ. ಹೆಸರು ಬುರ್ಕಿನಾ ಫಾಸೊ. ಸುಮಾರು ಮುನ್ನೂರು-ನಾನೂರು ಜನಸಂಖ್ಯೆ ಇರಬಹುದಾದ ಚಿಕ್ಕ ಹಳ್ಳಿ. ಅಲ್ಲಿ ಆಡಳಿತ ಭಾಷೆ ಫ್ರೆಂಚ್‌ ಆದರೂ ಜನರಾಡುವುದು ಓಲೊಫ್ (Wolof) ಎನ್ನುವ ಗ್ರಾಮೀಣ ಭಾಷೆ. ಅರೇಬಿಕ್ ಭಾಷೆಯ ಸ್ಥಳೀಯ ರೂಪಾಂತರದಲ್ಲಿದೆ. ಅಲ್ಲಿ ಶೇಕಡ ತೊಂಬತ್ತೈದಕ್ಕೂ ಹೆಚ್ಚು ಮುಸ್ಲಿಮರಿದ್ದಾರೆ. ಉಳಿದಂತೆ ಒಂದಷ್ಟು ಫ್ರೆಂಚರು ಇತ್ಯಾದಿ.

(ಸೊಂಬೇನ ಉಸ್ಮಾನಿ)

ಆಫ್ರಿಕಾ ದೇಶ ಎಂದ ಕೂಡಲೆ ಆಸಕ್ತರ ಮನಸ್ಸಿಗೆ ಬರುವುದು ಅಲ್ಲಿನ ಚಿನುವಾ ಅಚಿಬೆ ಮತ್ತು ಓಲೆ ಸೋಯಿಂಕ ಬರೆದ ಕಾದಂಬರಿಗಳಿಂದ. ಅಲ್ಲಿನ ಜನರು ವಸಾಹತು ಆಡಳಿತದ ಅವಧಿಯಲ್ಲಿ ಒಳಗಾದ ತುಳಿತ, ಸಂಕಷ್ಟ, ಮತ್ತಿತರ ಬವಣೆಗಳು ಜಗತ್ತಿಗೆ ತಿಳಿಯುವಂತಾದದ್ದು ಅವರ ಕೃತಿಗಳಿಂದ.

ಆಫ್ರಿಕಾದ ಉಪ-ಸಹಾರ ಪ್ರದೇಶದಲ್ಲಿರುವ ಐವತ್ತಕ್ಕೂ ಹೆಚ್ಚು ದೇಶಗಳು ಸುಮಾರು ಮೂರು ಶತಮಾನಗಳಿಂದ ವಿವಿಧ ವಸಾಹತು ಆಡಳಿತದಲ್ಲಿದ್ದವು. ಅವುಗಳಲ್ಲೊಂದಾದ ಸೆನೆಗಲ್ ಫ್ರೆಂಚ್‌ ರ ಆಡಳಿತದಲ್ಲಿತ್ತು. ಆ ದೇಶದ ಜನಸಮುದಾಯ ಕೂಡ ಇದೇ ರೀತಿಯ ಒತ್ತಡ, ಶೋಷಣೆ, ತುಳಿತ ಮತ್ತು ಎಲ್ಲ ಬಗೆಯ ಸಂಕಷ್ಟಗಳಿಗೆ ಒಳಗಾಗಿತ್ತು. ಸೆನೆಗಲ್‌ ನಲ್ಲಿ ಮೂವತ್ತೈದರಿಂದ ನಲವತ್ತು ಬೇರೆಬೇರೆ ಪ್ರಾಂತೀಯ ಭಾಷೆಗಳಿವೆ.

೧೯೬೦ರಲ್ಲಿ ಸ್ವತಂತ್ರವಾದ ಸೆನೆಗಲ್ ದೇಶದ ರಾಜಧಾನಿ ಡಕರ್. ಜನಸಂಖ್ಯೆ ಸುಮಾರು ಒಂದೂವರೆ ಕೋಟಿ. ಸುಮಾರು ಮೂರು ಶತಮಾನಗಳ ಕಾಲ ಫ್ರೆಂಚ್ ಆಡಳಿತದಲ್ಲಿ ವಸಾಹತು ಪ್ರದೇಶವಾಗಿದ್ದ ಆ ದೇಶದಲ್ಲಿ ಫ್ರೆಂಚ್ ಆಡಳಿತ ಭಾಷೆಯಾದರೂ ಅರೇಬಿಕ್ ಭಾಷೆ ಪ್ರಚಲಿತ. ಮುಸ್ಲಿಮ್ ಸೋದರತ್ವದ ಹತೋಟಿಯಲ್ಲಿ ಅದರ ಪ್ರಭುತ್ವ.

ಸೆನೆಗಲ್ ನಲ್ಲಿ ಮುಸ್ಲಿಂ ಜನಾಂಗದವರು ಹೆಚ್ಚಾಗಿ‌ದ್ದು ಇಸ್ಲಾಂ ಧರ್ಮವನ್ನು ತಮ್ಮ ಸ್ವಾರ್ಥ ಪೂರೈಕೆಗಾಗಿ ತಿರುಚಿಸಲಾಗಿದೆ ಎಂಬ ಅಭಿಪ್ರಾಯವಿದೆ. ಅಲ್ಲಿನ ಆಡಳಿತದಲ್ಲಿ ಎಲ್ಲ ವಿಷಯಗಳಿಗೂ ಸಂಬಂಧಪಟ್ಟಂತೆ ಪುರುಷರದೇ ಮೇಲುಗೈ. ಅವರು ಹೇಳಿದ್ದೇ ಅಖೈರು. ಇದು ಒಂದು ಬಗೆಯಾದರೆ ಅಲ್ಲಿನ ಹೆಣ್ಣುಮಕ್ಕಳ ಜೀವನಕ್ಕೆ ಉಂಟಾಗುತ್ತಿದ್ದ ಅತ್ಯಂತ ಅಮಾನವೀಯ ದೌರ್ಜನ್ಯ ಯಾರೂ ತಡೆಯದೆ ಮುಂದುವರೆದಿದೆ ಎಂದು ಹೇಳಲಾಗಿದೆ. ಅದೆಂದರೆ ಹೆಣ್ಣುಮಕ್ಕಳು ಒಳಗಾಗುವ ಯೋನಿ ಛೇದದ ಬವಣೆ. ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಇದಕ್ಕೆ ಗುರಿಪಡಿಸಲಾಗುತ್ತದೆ. ಉಪ-ಸಹಾರಾ ಆಫ್ರಿಕಾದ ನಲವತ್ತಕ್ಕೂ ಹೆಚ್ಚು ದೇಶಗಳಲ್ಲಿ ಇದು ರೂಢಿಯಲ್ಲಿದೆ ಎಂದು ಭಾವಿಸಲಾಗಿದೆ. ಇಸ್ಲಾಮ್‌ ಧರ್ಮದಲ್ಲಿ ಹೆಣ್ಣು ಮಕ್ಕಳಿಗೆ ಹೀಗೆ ಮಾಡಬೇಕೆಂದು ಹೇಳಿಲ್ಲವೆಂದು ಆ ಧರ್ಮದ ಬಗ್ಗೆ ತಿಳಿದವರು ಹೇಳುತ್ತಾರೆ.
ಸೊಂಬೇನ ಉಸ್ಮಾನಿ ಎಳೆವೆಯಲ್ಲಿ ಮದ್ರಸಾಗಳಲ್ಲಿ ಕಲಿತವನು. ಸುಮಾರು ಹದಿನೈದು ವರ್ಷದವನಾದಾಗ ತನ್ನ ಪ್ರದೇಶವನ್ನು ಆಳುತ್ತಿದ್ದ ವಸಾಹತು ಫ್ರೆಂಚ್ ವಸಾಹತುಕಾರರು ಪಾಲ್ಗೊಂಡ ಎರಡನೇ ಮಹಾಯುದ್ಧದ ಕಾಲದಲ್ಲಿ ಸೈನಿಕನಾಗಿ ಸೇರ್ಪಡೆಗೊಂಡ. ಇದು ಅವನಿಗೆ ಇನ್ನಿಲ್ಲದಷ್ಟು ಸಹಾಯವಾಯಿತು. ತನ್ನ ಹಳ್ಳಿಯ ಸೀಮಿತ ಅನುಭವಗಳಿಂದ ದೂರವಾಗಿ ಪ್ರಪಂಚದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸುವ ಅವಕಾಶವಾಯಿತು.

ಮಹಾಯುದ್ಧ ಮುಗಿದ ನಂತರ ಸ್ವದೇಶಕ್ಕೆ ವಾಪಸಾದ. ೧೬೬೦ರಲ್ಲಿ ಫ್ರೆಂಚ್ ವಸಾಹತು ಆಡಳಿತದಿಂದ ಮುಕ್ತವಾದ ತನ್ನ ದೇಶದ ಏಳಿಗೆಗೆ ಬೇಕಾದ ಮಾರ್ಗಗಳು ಮತ್ತು ಅಲ್ಲಿ ಅನುಭವಿಸುತ್ತಿರುವ ಜನಗಳ ತಾಕಲಾಟಗಳನ್ನು ಚಿತ್ರಿಸಿ ತನ್ನ ಮೂವತ್ತೆರಡನೆಯ ವಯಸ್ಸಿಗೆ ೧೯೫೬ರಲ್ಲಿ ಮೊದಲ ಕಾದಂಬರಿ ʻಬ್ಲಾಕ್‌ ಡಾಕರ್‌ʼ ಬರೆದ. ಅನಂತರ ೧೯೬೦ರಲ್ಲಿ ʻಗಾಡ್ಸ್ ಬಿಟ್ಸ್‌ ಆಫ್‌ ವುಡ್‌ʼ ಕಾದಂಬರಿ ಬರೆದು ಪ್ರಪಂಚದ ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ. ತನ್ನ ದೇಶದ ಸ್ಥಿತಿ ಗತಿಗಳ ಬಗ್ಗೆ ಸಾಹಿತ್ಯ ವಲಯದಲ್ಲಿ ಹಾಗೂ ಪತ್ರಿಕಾ ವಲಯದಲ್ಲಿ ಸಾಕಷ್ಟು ಬರಹಗಳನ್ನು ಬರೆದ. ಅವನಿಗೆ ಕ್ರಮೇಣ ಅಕ್ಷರ ಮಾಧ್ಯಮದ ಮಿತಿ ಅರಿವಾಗತೊಡಗಿತು. ದೃಶ್ಯಮಾಧ್ಯಮದ ಪ್ರಭಾವ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದಕ್ಕಿರುವ ಸಂವಹನಶಕ್ತಿ ಮನಸ್ಸನ್ನು ಆವರಿಸಿತು. ಅದಕ್ಕೆಂದೇ ರಷ್ಯಾದಲ್ಲಿ ಹತ್ತು ವರ್ಷಗಳ ಕಾಲ ದೃಶ್ಯಮಾಧ್ಯಮ ಕುರಿತು ಅಭ್ಯಾಸ ನಡೆಸಿದ. ಅದರ ಫಲವಾಗಿ 1966ರಲ್ಲಿ ತನ್ನ ಮೊದಲ ಅರವತ್ತು ನಿಮಿಷದ ಫ್ರಾನ್ಸ್‌ ನಲ್ಲಿ ದುಡಿಯುವ ಕಪ್ಪು ಬಣ್ಣದ ಹುಡುಗಿಯ ಜೀವನವನ್ನು ಕುರಿತ ʻಬ್ಲ್ಯಾಕ್ ಗರ್ಲ್ʼ ಚಿತ್ರವನ್ನು ಪೆನ್ಸಿಲ್ವೇನಿಯ ಥಿಯೇಟರ್ ನಲ್ಲಿ ಪ್ರದರ್ಶಿಸಲು ಸಿದ್ಧನಾದ.

ಚಿತ್ರದಲ್ಲಿರಬಹುದಾದ ಅಂಶಗಳ ಬಗ್ಗೆ, ತಿಳಿಸಲಿರುವ ವಿವರಗಳ ಬಗ್ಗೆ ಎಲ್ಲರಿಗೂ ಹಲಕೆಲವು ನಿರೀಕ್ಷೆಗಳಿತ್ತು. ಆದರೆ ಚಿತ್ರ ಪ್ರದರ್ಶನ ಮುಗಿಯುತ್ತಿದ್ದ ಹಾಗೆ ಎಲ್ಲವನ್ನೂ ಮತ್ತು ಎಲ್ಲರನ್ನೂ ಜಯಿಸಿ ಪತಾಕೆ ಹಾರಿಸಿದ್ದು ಈಗ ಇತಿಹಾಸ. ಅಂದರೆ ಅವನ ಚಿತ್ರಕ್ಕೆ ಫ್ರಾನ್ಸ್ ನ ಪ್ರೀ ಜಿನ್‌ವಿಗೋ ಪ್ರಶಸ್ತಿ ಲಭಿಸಿ ವಿಶ್ವದ ಸಿನಿಮಾಸಕ್ತರ ಗಮನ ಸೆಳೆಯಿತು. ಅನಂತರ ಚಲನಚಿತ್ರ ನಿರ್ಮಾಣವನ್ನು ಗಂಭೀರವಾಗಿ ತೆಗೆದುಕೊಂಡು ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ. ಅವುಗಳಲ್ಲಿ ವಸಾಹತು ಆಡಳಿತದ ವಸ್ತುನಿಷ್ಠ ವಿಶ್ಲೇಷಣೆ, ಅದರಲ್ಲಿನ ಭೂರ್ಜ್ವಾ ಧೋರಣೆ ಹಾಗೂ ಸ್ಥಳೀಯ ಸ್ತ್ರೀಶಕ್ತಿಯ ಮಹತ್ವ ನಿರೂಪಿತವಾಗಿವೆ. ೧೯೭೫ರಲ್ಲಿ ಅವನದೇ ಕಾದಂಬರಿ ʻಕ್ಸಾಲಾʼ ಆಧರಿಸಿ ಅದೇ ಹೆಸರಿನ ಚಿತ್ರ ನಿರ್ಮಿಸಿದ. ಪುರುಷತ್ವವಿಲ್ಲದ ಪ್ರಭಾವಿಯೊಬ್ಬ ತನ್ನ ದೇಶವನ್ನು ಆಳುವುದನ್ನು ಸಾಂಕೇತಿಕ ರೂಪದಲ್ಲಿ ಪರಿಕಲ್ಪಿಸಿದ ಚಿತ್ರವದು. ೧೯೭೭ರ ʻಸೆಡ್ಡೋʼ ಚಿತ್ರ ಮುಸ್ಲಿಮ್‌ ವಿರೋಧಿ ನಿಲುವನ್ನು ಹೊಂದಿದೆ ಎಂಬ ಕಾರಣಕ್ಕೆ ತೀವ್ರ ಸೆನ್ಸಾರ್‌ ಕಡಿತಕ್ಕೆ ಒಳಗಾಯಿತು. ಆದರೂ ಸೊಂಬೇನ ತನ್ನ ಸಂಕಲ್ಪದಿಂದ ದೂರವಾಗಲಿಲ್ಲ. ತನ್ನ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಉಂಟಾಗುವ ಬವಣೆ ಅವನನ್ನು ಕಾಡುತ್ತಿತ್ತು. ಇಂಥದೊಂದು ಅಮಾನವೀಯ ಕ್ರಿಯೆಯನ್ನು ಒಪ್ಪದೆ ಸ್ತ್ರೀವಾದವನ್ನು ಸಮರ್ಥಿಸುವ ಸಂಕಲ್ಪ ಮಾಡಿ ʻಮೂಲಾಡೆʼ ಚಿತ್ರ ನಿರ್ಮಿಸಿ ಜಗತ್ತಿನ ಮುಂದಿಟ್ಟ.

ಇದು ಅವನ ಹನ್ನೊಂದನೆಯ ಚಿತ್ರ. ಆಗ ಅವನ ವಯಸ್ಸು ೮೧. ಚಿತ್ರ ಜಯಭೇರಿ ಬಾರಿಸಿ ೨೦೦೪ರ ಕಾನ್ ಪ್ರಶಸ್ತಿ ಗಳಿಸಿತು. ಇದಲ್ಲದೆ ಅವನ ಕೆಲವು ಚಿತ್ರಗಳು ವೆನಿಸ್‌ ಚಿತ್ರೋತ್ಸವ, ಕಾರ್ಲೊವಿ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗಳಿಸಿದರೂ ಅವನ ಸ್ವಂತ ದೇಶದಲ್ಲಿ ಮತ್ತು ಒಟ್ಟಾರೆಯಾಗಿ ಪೂರ್ವ ಆಫ್ರಿಕಾದಲ್ಲಿ ಅವನ ಚಿತ್ರಗಳು ಪ್ರಭಾವ ಬೀರಲು ಸಾಧ್ಯವಾಗದಿರುವುದು ದೊಡ್ಡ ದುರಂತ. ʻಮೂಲಾಡೆʼ ಚಿತ್ರದ ಕಥಾವಸ್ತು ಹೆಣ್ಣು ಮಕ್ಕಳಿಗೆ ಯೋನಿ ಛೇದನ ಮಾಡುವುದರ ವಿರುದ್ಧ ಹೆಂಗಸೊಬ್ಬಳು ಪ್ರತಿಭಟಿಸಿ ಗೆಲುವು ಸಾಧಿಸುವುದು.

ಇದರ ಕಥಾಹಂದರದಲ್ಲಿ ಈ ಮೊದಲು ತಿಳಿಸಿದಂತೆ ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳನ್ನು ಯೋನಿ ಛೇದನದಿಂದ ರಕ್ಷಿಸುವ ಹೊಣೆಗಾರಿಕೆಯನ್ನು ಕೋಲೆ ವಹಿಸಿಕೊಂಡು ʻಮೂಲಾಡೆʼ ಮಾಡುತ್ತಾಳೆ.. ಇದು ಎಲ್ಲ ಗಂಡಸರ ಕೋಪಕ್ಕೆ ಕಾರಣವಾಗುತ್ತದೆ. ಕೋಲೆಗೆ ಯೋನಿ ಛೇದನಕ್ಕೆ ಒಳಗಾಗದ ಮಗಳು ಅಮಾಸಟೋ ಜೊತೆಗೆ ಮದುವೆಯಾಗುವ ಸಂಭವವಿರುವ ಮತ್ತು ಆಗಷ್ಟೆ ಪ್ಯಾರಿಸ್ ನಿಂದ ಬಂದ ಹಳ್ಳಿಯ ಯಜಮಾನ ದುಗೋಟಿಗಿನ ಮಗ ಇಬ್ರಾಹಿಂ ಮತ್ತು ಹಳ್ಳಿಗರಿಗೆ ಅಗತ್ಯ ವಸ್ತುಗಳನ್ನು ಮಾರುವ ಮರ್ಸಿನರಿಯ ಬೆಂಬಲವೂ ಇರುತ್ತದೆ. ಆದರೂ ತನ್ನ ಗಂಡನ ಚಾಟಿಯೇಟುಗಳಿಗೆ ತುತ್ತಾಗುತ್ತಾಳೆ. ಅನಂತರ ಅವಳಿಗೆ ಅಲ್ಲಿನ ಹೆಂಗಸರ ಬೆಂಬಲ ದೊರಕಿ ಜಯ ಗಳಿಸುತ್ತಾಳೆ..

ಹೆಣ್ಣುಮಕ್ಕಳು ಒಳಗಾಗುವ ಯೋನಿ ಛೇದದ ಬವಣೆ. ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ಇದಕ್ಕೆ ಗುರಿಪಡಿಸಲಾಗುತ್ತದೆ. ಉಪ-ಸಹಾರಾ ಆಫ್ರಿಕಾದ ನಲವತ್ತಕ್ಕೂ ಹೆಚ್ಚು ದೇಶಗಳಲ್ಲಿ ಇದು ರೂಢಿಯಲ್ಲಿದೆ ಎಂದು ಭಾವಿಸಲಾಗಿದೆ.

ಕಥೆಯ ನಿರೂಪಣೆಯಲ್ಲಿ ಯೋನಿ ಛೇದನದಿಂದ ರಕ್ಷಣೆಯ ನಿರ್ಧಾರ ತೆಗೆದುಕೊಳ್ಳುವ ಮುಂಚಿನ ಒಂದೆರಡು ಕ್ಷಣ ಅದರ ಆಗುಹೋಗುಗಳ ಬಗ್ಗೆ ಯೋಚಿಸುತ್ತಾಳೆ. ಕಣ್ಣು ಮಿಟುಕಿಸದ ಅವಳ ಮುಖಚಹರೆಯನ್ನು ಸಮೀಪದಿಂದ ಚಿತ್ರಿಸುವ ಮೂಲಕ ಉದ್ದೇಶಿತ ಪರಿಣಾಮವನ್ನು ಉಂಟು ಮಾಡುತ್ತಾನೆ ಸೊಂಬೇನ. ಹೀಗಾಗಿ ಚಿತ್ರ ಪ್ರಾರಂಭವಾಗಿ ಐದು ನಿಮಿಷದಲ್ಲಿ ಇಡೀ ಚಿತ್ರದ ಕೇಂದ್ರ ಸಂಗತಿ ದಾಖಲಾಗುತ್ತದೆ. ಕೋಲೆಯ ನಿರ್ಧಾರದಿಂದ ಸುತ್ತ ನೆರೆದ ಹೆಂಗಸರು ಆಶ್ಚರ್ಯ ಹಾಗೂ ಆತಂಕ ವ್ಯಕ್ತಪಡಿಸುತ್ತಾರೆ.

ಕುತೂಹಲದ ಅಂಶವೆಂದರೆ ಈ ಪ್ರಮುಖ ಘಟನೆ ನಡೆಯುವಾಗ ಮತ್ತು ಅದಕ್ಕೂ ಮೊದಲಿನಿಂದಲೂ ಒಬ್ಬನಾದರೂ ಗಂಡಸಿನ ಸುಳಿವಿರುವುದಿಲ್ಲ. ಇದರಿಂದ ಎರಡು ಸೂಚನೆಗಳು ಕಾಣುತ್ತವೆ. ಒಂದು, ತಮ್ಮ ಕೆಲಸಗಳನ್ನು ಗಂಡಸರ ನೆರವಿಲ್ಲದೆ ಕೇವಲ ಹೆಂಗಸರು ಮಾತ್ರ ನಿರ್ವಹಿಸುತ್ತಾರೆ. ಇನ್ನೊಂದು, ದೈನಂದಿನ ಕೆಲಸ, ಕಾರ್ಯಗಳ ಬಗ್ಗೆ ಗಂಡಸರ ನಿರ್ಲಕ್ಷ್ಯ ಮತ್ತು ಸೋಮಾರಿಗಳು ಎನ್ನುವುದು. ಕೋಲೆ ನಿರ್ಧರಿಸಿದ ನಂತರ ಅದಕ್ಕೆ ಅವಶ್ಯಕವಾದ ಕ್ರಮ ತೆಗೆದುಕೊಳ್ಳಲು ʻಮೂಲಾಡೆʼ ಮಾಡಲು ಮುಂದಾಗುತ್ತಾಳೆ. ಅಂದರೆ ಹೆಣ್ಣುಮಕ್ಕಳನ್ನು ಎತ್ತಿಕೊಂಡು ಹೋಗುವವರು ಅವರು ವಾಸಿಸುವ ಪ್ರದೇಶದೊಳಗೆ ಬರದ ಹಾಗೆ ಬಣ್ಣದ ದಾರವನ್ನು ಪ್ರವೇಶದ್ವಾರಕ್ಕೆ ಕಟ್ಟುತ್ತಾಳೆ. ಈ ಕ್ರಿಯೆಯನ್ನು ಕೊಂಚ ವಿವರವಾಗಿಯೇ ನಿರೂಪಿಸುತ್ತಾನೆ ಸೋಂಬೇನ. ಇದು ಅವಳು ಹುಡುಗಿಯರನ್ನು ರಕ್ಷಿಸುವ ನಿರ್ಧಾರವನ್ನು ಪ್ರಕಟಿಸುವ ರೀತಿ. ಅಲ್ಲಿನ ಸಂಪ್ರದಾಯದಂತೆ ಆ ಹಗ್ಗವನ್ನು ಯಾರೂ ದಾಟಿ ಬಂದು ಮಕ್ಕಳನ್ನು ಮುಟ್ಟುವಂತಿಲ್ಲ. ಹೀಗೆ ಮಾಡುವುದರಿಂದ ಅವಳು ಉನ್ನತ ಮಟ್ಟದ ಮಾನವೀಯ ಪ್ರಜ್ಞೆಯನ್ನು ಮೆರೆಯುತ್ತಾಳೆ. ಆ ಹಗ್ಗವನ್ನು ಬಿಚ್ಚುವ ಅಧಿಕಾರ ಕೇವಲ ಅವಳಿಗಷ್ಟೇ ಇರುತ್ತದೆ. ಇದು ಪದ್ಧತಿ ಹಾಗೂ ಕಟ್ಟಳೆ.

ಯೋನಿ ಛೇದದ ಪರಿಣಾಮವೆಂದರೆ ಲೈಂಗಿಕ ಕ್ರಿಯೆಯಲ್ಲಿ ಹೆಂಗಸಿಗೆ ಸುಖ ಲಭಿಸದಂತಾಗುವುದರ ಜೊತೆಗೆ ಗಂಡಸಿಗೆ ತನ್ನ ಸಂಗಾತಿ ಪರಪುರುಷನ ಸಂಪರ್ಕದ ಸಾಧ್ಯತೆಯಿಂದ ರಕ್ಷಿಸಿಕೊಳ್ಳಲು ಹೆಣ್ಣಿನ ಯೋನಿ ಛೇದನವನ್ನು ಬಯಸುತ್ತಾನೆ ಎಂಬ ಅಭಿಪ್ರಾಯವೂ ಪ್ರಚಲಿತದಲ್ಲಿದೆ.

ಕೋಲೆ ತನ್ನ ಗಂಡನ ಮೂವರು ಹೆಂಡತಿಯರಲ್ಲಿ ಎರಡನೆಯವಳು. ಕೋಲೆಯ ನಿರ್ಧಾರ ಹಳ್ಳಿಯ ಗಂಡಸರಿಗೆ ನಂಬಲು ಸಾಧ್ಯವಾಗುವುದಿಲ್ಲ. ಆದರೆ ಸದ್ಯದ ಪರಿಸ್ಥಿತಿ ಹಳ್ಳಯಲ್ಲಿ ವಿಚಿತ್ರ ಸಂಚಲನವನ್ನು ಉಂಟುಮಾಡುತ್ತದೆ. ಕೋಲೆಯ ಗಂಡ ಆ ಹಳ್ಳಿಯ ಯಜಮಾನ ದುಗೋಟಿಗಿನ ತಮ್ಮ. ತಮ್ಮನ ಹೆಂಡತಿ ಪರಂಪರಾಗತವಾಗಿ ಯೋನಿ ಛೇದ ಮಾಡುವುದನ್ನು ವಿರೋಧಿಸುವುದನ್ನು ಯಜಮಾನ ಒಪ್ಪುವುದಿಲ್ಲ. ಜೊತೆಗೆ ಹಳ್ಳಿಯ ಗಂಡಸರೆಲ್ಲರೂ ಕೋಲೆಯ ಈ ಕ್ರಮದಿಂದ ರೋಷಗೊಂಡಿರುತ್ತಾರೆ. ಅಲ್ಲಿನ ಹೆಂಗಳೆಯರಿಗೆ ಯೋನಿ ಛೇದದ ವಿರುದ್ಧ ಉಂಟಾಗಿರುವ ಆಲೋಚನೆಗೆ ಟ್ರಾನ್ಸಿಸ್ಟರ್‌ ನಿಂದ ಬಿತ್ತರವಾಗುವ ಮಾತು, ಸುದ್ದಿ ಇತ್ಯಾದಿಗಳೇ ಕಾರಣ ಎಂದು ಅವರ ಅಭಿಪ್ರಾಯ. ಇದರ ಜೊತೆಗೆ ಅಲ್ಲಿನ ಹೆಂಗಸರಿಗೆ ಪ್ರಪಂಚದಲ್ಲಿನ ವಿದ್ಯಮಾನಗಳನ್ನು ತಿಳಿಯುತ್ತವೆಂದು ಅವರ ಭಾವನೆ. ಅವರು ಎಲ್ಲರ ಮನೆಯಲ್ಲಿರುವ ಟ್ರಾನ್ಸಿಸ್ಟರ್‌ ಗಳನ್ನು ತಂದು ಹೊರಗಿನ ಅಂಗಳದಲ್ಲಿ ಪೇರಿಸಿ ಸುಡಲು ಪ್ರಾರಂಭಿಸುತ್ತಾರೆ. ಅವರ ಈ ವರ್ತನೆ ಸಾಂಕೇತಿಕವಾಗುತ್ತದೆ. ಅವುಗಳನ್ನು ಸುಡುವ ಬೆಂಕಿ ಹಾಗೂ ಅಷ್ಟೆತ್ತರಕ್ಕೆ ಏಳುವ ಹೊಗೆಯ ದೃಶ್ಯ ಹಳ್ಳಿಯವರನ್ನು ಹಾಗೂ ಪ್ರೇಕ್ಷಕರನ್ನು ಆವರಿಸುತ್ತದೆ.

ಇಷ್ಟಕ್ಕೇ ಬಿಡದೆ ಹಳ್ಳಿಯ ಗಂಡಸರೆಲ್ಲ ಒಗ್ಗೂಡಿ ಪ್ರತಿಭಟನೆ ಮಾಡುತ್ತಿರುವ ಕೋಲೆಗೆ ತಕ್ಕ ಪಾಠ ಕಲಿಸಬೇಕೆಂದು ಎಗರಾಡುತ್ತಾರೆ. ಈ ಪರಿಸ್ಥಿತಿಯಲ್ಲಿ ಊರಿನ ಯಜಮಾನ ದುಗೋಟಿಗಿನ ಮಗ ಇಬ್ರಾಹಿಂ ಪ್ಯಾರಿಸ್ಸಿನಿಂದ ಹಿಂತಿರುಗಿ ಬರುತ್ತಾನೆ. ಅದಕ್ಕಾಗಿ ಹಳ್ಳಿಯಲ್ಲಿ ಸಂಭ್ರಮವೋ ಸಂಭ್ರಮ.

ಕೋಲೆಯ ಮಗಳು ಅಮಾಸಟೋ ಮತ್ತು ಇಬ್ರಾಹಿಂ ಮದುವೆಯಾಗಬೇಕಾಗಿರುತ್ತದೆ. ಆದರೆ ಅದೀಗ ಸಂದಿಗ್ಧದಲ್ಲಿ ಸಿಲುಕಿಕೊಳ್ಳುತ್ತದೆ. ಕಾರಣ ಕೋಲೆ ತನ್ನ ಮಗಳು ಅಮಾಸಟೋಗೆ ಯೋನಿ ಛೇದನ ಮಾಡಲು ಅವಕಾಶ ಕೊಟ್ಟಿರುವುದಿಲ್ಲ. ಅದರಿಂದ ಅವಳು ಶುಚಿಯಲ್ಲ ಎಂಬ ಅಭಿಪ್ರಾಯ ಇಬ್ರಾಹಿಂನ ತಂದೆ ದುಗೋಟಿಗಿಯದು. ಆದರೆ ಉತ್ಸಾಹ ತುಂಬಿದ ಆಧುನಿಕ ದೃಷ್ಟಿಕೋನದ ಇಬ್ರಾಹಿಂ ಅದನ್ನೊಪ್ಪಲು ಸಿದ್ಧವಿರುವುದಿಲ್ಲ. ಅವನಿಗೆ ಹಳ್ಳಿಯ ಹೊರಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಮರ್ಸಿನರಿಯೊಬ್ಬನ ಬೆಂಬಲ ದೊರಕುತ್ತದೆ. ಈ ಮರ್ಸಿನರಿ ಕೂಡ ಆ ಹಳ್ಳಿಗೆ ಬರುವುದಕ್ಕೆ ಮುಂಚೆಯೇ ದೌರ್ಜನ್ಯಕ್ಕೆ ಒಳಗಾಗಿ ಬಂದವನು. ವಿಪರ್ಯಾಸವೆಂದರೆ ಯೋನಿ ಛೇದನದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಾಗೂ ಇಂಥ ಸಾಂದರ್ಭಿಕ ವಿದ್ಯಮಾನಗಳ ನಡುವೆಯೂ ಅಲ್ಲಿನ ಹುಡುಗಿಯೊಬ್ಬಳ ಯೋನಿ ಛೇದನ ಕ್ರಿಯೆ ಜರುಗುತ್ತದೆ. ಅದನ್ನು ನೆರವೇರಿಸಿದ ಹೆಂಗಸರು ಮಿತಿ ಮೀರಿ ಅಳುವ ಆ ಹುಡುಗಿಯನ್ನು ಕಿಂಚಿತ್‌ ಸಮಾಧಾನ ಪಡಿಸುವ ಪ್ರಯತ್ನ ಮಾಡದೆ ಎತ್ತಿಕೊಂಡು ಹೋಗುತ್ತಾರೆ.

ಅಶುಚಿಯಾದ ಕೋಲೆಯ ಮಗಳ ಜೊತೆ ಇಬ್ರಾಹಿಂ ಮದುವೆ ಆಗುವುದನ್ನು ಗಂಡಸರು ವಿರೋಧಿಸುತ್ತಾರೆ ಮತ್ತು ಅಭಿಪ್ರಾಯಗಳು ಒಗ್ಗೂಡಿ ಭುಗಿಲೇಳುತ್ತದೆ. ಈ ಅವಧಿಯಲ್ಲಿ ಆಗಾಗ ಕೆಂಪು ಬಣ್ಣದ ಉಡುಗೆಯನ್ನು ತೊಟ್ಟ ರಾಕ್ಷಸಿಯರಂತೆ ಕಾಣುವ ಐದಾರು ಹೆಂಗಸರು ಕೋಲೆಯ ಆಶ್ರಯ ಪಡೆದ ಮಕ್ಕಳನ್ನು ಎತ್ತಿಕೊಂಡು ಹೋಗಿ ಯೋನಿ ಛೇದನ ಮಾಡಲು ʻಮೂಲಾಡೆʼಯ ಹೊರಗೆ ಮತ್ತೆ ಮತ್ತೆ ಬಂದು ನಿಲ್ಲುತ್ತಾರೆ. ಅವರು ಅದನ್ನು ದಾಟುವಂತಿರುವುದಿಲ್ಲ.

ಕೋಲೆ ಮಾಡುವುದನ್ನು ದುಗೊಟಗಿಗೆ ಸಹಿಸುವುದು ಅಸಾಧ್ಯವಾಗುತ್ತದೆ. ಕೋಲೆಗೆ ಹೊಡೆದು ಅವಳು ʻಮೂಲಾಡೆʼಯನ್ನು ತೆರವುಗೊಳಿಸುವಂತೆ ಮಾಡಲು ತನ್ನ ತಮ್ಮನಿಗೆ ಚಾಟಿಯನ್ನು ಕೊಟ್ಟು ಕೋಲೆಗೆ ಹೊಡೆದು ದಾರಿಗೆ ತರುವಂತೆ ಆಗ್ರಹ ಪಡಿಸುತ್ತಾನೆ. ಈ ಅಪ್ಪಣೆಯನ್ನು ತಿರಸ್ಕರಿಸಲಾಗದೆ ಸುತ್ತ ನೆರೆದ ಎಲ್ಲ ಹಳ್ಳಿಗರ ಎದುರು ಅವಳಿಗೆ ಚಾಟಿಯಿಂದ ಇನ್ನಷ್ಟು ಮತ್ತಷ್ಟು ಹೊಡೆಯುತ್ತಾನೆ. ಇದನ್ನು ವೃತ್ತಾಕಾರವಾಗಿ ಚಲಿಸುವ ಕ್ಯಾಮೆರಾ ಹಾಗೂ (ಕ್ಲೋಸ್) ಚಿತ್ರಿಕೆಗಳಿಂದ ನಿರೂಪಿಸುತ್ತಾನೆ ಸೊಂಬೇನ. ಈ ಅಮಾನವೀಯ ಘಟನೆಯ ದೃಶ್ಯದ ಭಾವವನ್ನು ಹಿನ್ನಲೆ ಸಂಗೀತವೂ ಬೆಂಬಲಿಸುತ್ತದೆ. ಇಡೀ ಚಿತ್ರದಲ್ಲಿ ಹಿನ್ನಲೆ ಸಂಗೀತದ ಅರಿವು ಉಂಟಾಗುವುದು ಈ ಬಗೆಯ ಕೆಲವೇ ಭಾವತೀವ್ರತೆಯ ದೃಶ್ಯಗಳಲ್ಲಿ. ಮುಖ್ಯವಾಗಿ ಊರಿನ ಗಂಡಸರು ಕೋಲೆ ವಿರುದ್ಧ ಧ್ವನಿ ಎತ್ತುವುದರ ಪ್ರಕರಣಗಳಲ್ಲಿ ಅದು ಎದ್ದು ಕಾಣುತ್ತದೆ. ಉಳಿದಂತೆ ಸಾಂದರ್ಭಿಕ ಶಬ್ದಗಳು ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತದೆ.

ಕೋಲೆ ತನಗೆ ಬೀಳುತ್ತಿದ್ದ ಹೊಡೆತದಿಂದ ಕಂಗೆಡುವುದಿಲ್ಲ. ಹೊಡೆದಷ್ಟೂ ಅವಳ ನಿಗ್ರಹಶಕ್ತಿ ಮತ್ತೆಮತ್ತೆ ಪುಟಿಯುತ್ತದೆ. ಕೋಲೆ ಅವಡುಗಚ್ಚಿ ತನ್ನ ನಿರ್ಧಾರ ಬದಲಾಯಿಸದೆ ಎದುರಿಸುತ್ತಾಳೆ. ಅವಳ ಕಣ್ಣು, ಮುಖಚಹರೆ ಉದ್ದೇಶಿತ ಪರಿಣಾಮ ಉಂಟುಮಾಡುತ್ತದೆ. ಅವಳ ಈ ಸಂಕಲ್ಪದಿಂದ ಅಲ್ಲಿನ ಹೆಂಗಸರಲ್ಲಿ ಬದಲಾವಣೆಯಾಗಿ ಅವಳ ಬೆಂಬಲಕ್ಕೆ ನಿಲ್ಲುತ್ತಾರೆ. ಇದರಿಂದ ಹಳ್ಳಿಯ ವಾತಾವರಣವೇ ಬದಲಾಗಿ ಕೆಂಪು ಉಡುಗೆಯ ಯೋನಿ ಛೇದನ ಮಾಡುವ ಹೆಂಗಸರೆಲ್ಲ ಜೋಲು ಮುಖ ಹಾಕಿಕೊಂಡು ಬಂದು, ನಾಲ್ಕೈದು ಇಂಚಿನ ಚಾಕುಗಳನ್ನು ಕೆಳಗೆ ಎಸೆಯುತ್ತಾರೆ. ಅತ್ಯಂತ ಪ್ರಮುಖವಾದ ಈ ವರ್ತನೆಯನ್ನು ಚಾಕುಗಳು ನೆಲಕ್ಕೆ ಹರಡಿದ ಎರಡಡಿ ಬಟ್ಟೆಯ ಮೇಲೆ ಬೀಳುವುದನ್ನು ಸಮೀಪ ಚಿತ್ರಿಕೆಯಲ್ಲಿ ತೋರಿಸಲಾಗಿದೆ.

ಈ ನಡುವೆ ಚಾಟಿ ಹೊಡೆತದಿಂದ ಕೋಲೆ ಪ್ರಜ್ಞೆ ತಪ್ಪುವ ಪರಿಸ್ಥಿತಿ ಉಂಟಾದಾಗ ಮರ್ಸಿನರಿ ಹೊಡೆಯುವುದನ್ನು ನಿಲ್ಲಿಸಲು ಆಗ್ರಹ ಪಡಿಸುತ್ತಾನೆ. ಇದರಿಂದ ಉರಿದೆದ್ದ ಗಂಡಸರು ಮರ್ಸಿನರಿಯನ್ನು ಹಳ್ಳಿಂದಾಚೆ ಹೋಗುವಂತೆ ಒತ್ತಾಯಿಸುತ್ತಾರೆ. ಅನಂತರ ಬೆನ್ನಟ್ಟಿ ಹೋಗಿ ಕೊಲ್ಲುತ್ತಾರೆ. ಆದರೆ ಇಬ್ರಾಹಿಂ ಹಳ್ಳಿಯ ಗಂಡಸರು ಉದ್ಧಟತನದಿಂದ ಟ್ರಾನ್ಸಿಸ್ಟರಗಳನ್ನು ಸುಟ್ಟರೇನು ಅವುಗಳಿಗಿಂತ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುವ ಟೀವಿ ಬರುವಂತೆ ಏರ್ಪಾಡು ಮಾಡುತ್ತಾನೆ.

ಸ್ತ್ರೀಶಕ್ತಿಯನ್ನು ವಿಶಿಷ್ಟ ರೂಪದಲ್ಲಿ ನಿರೂಪಿಸುವ ಚಿತ್ರದ ಆಶಯ ವಿಶ್ವದೆಲ್ಲ ಕಡೆ ಹರಡಬೇಕಾದದ್ದು ತೀರಾ ಅವಶ್ಯಕವೆಂದು ಸೊಂಬೇನನ ಅಭಿಮತ.