Advertisement
ಅಂತ್ಯವಿಲ್ಲದೊಂದು ಕತೆ: ನಿ”ಶಾಂತ” ಬರಹ

ಅಂತ್ಯವಿಲ್ಲದೊಂದು ಕತೆ: ನಿ”ಶಾಂತ” ಬರಹ

ಆಮೇಲೆ ಬರುಬರುತ್ತಾ ನಮ್ಮ ಭೇಟಿಯ ದಿನಗಳು ಕ್ಷೀಣಿಸಿದವು. ಆದರೂ ಯಾಕೋ ಆ ಕಾರಣಕ್ಕೆ ಇಬ್ಬರೂ ಜಗಳ ತೆಗೆಯುವುದನ್ನು ನಿಲ್ಲಿಸಿದ್ದೆವು. ಒಬ್ಬರು ಸಿಗ್ತಿಯಾ ಅಂದಾಗ, ಬೆಂಗಳೂರಿನ ಆ ತುದಿಯಲ್ಲಿದ್ದರೂ ಬಂದು ಭೇಟಿ ಮಾಡಿಹೋಗುತ್ತಿದ್ದೆವು. ಮತ್ತೆ ಮುಂದಿನ ಭೇಟಿ ಬಗ್ಗೆ ಮಾತೇ ಇಲ್ಲ… ಸುಮ್ಮನೇ ನಮ್‌ನಮ್ಮ ಕೆಲಸಗಳ ಕುರಿತು, ಮನೆಯ ಪರಿಸ್ಥಿತಿಗಳ ಕುರಿತ ಮಾತಷ್ಟೇ. ಅಲ್ಲಿ ಯಾವುದೇ ಕವಿತೆಗೂ, ಗಜಲ್‌ಗೂ ಅವಕಾಶವಿರುತ್ತಿರಲಿಲ್ಲ. ಅದು ಇಬ್ಬರಿಗೂ ಬೇಕಾಗೂ ಇರಲಿಲ್ಲವೆನ್ನಿಸುತ್ತೆ. ಹಾಗಾಗಿ ಮೂರು ವರ್ಷಗಳ ಒಡನಾಟದ ಸಲುವಾಗಿಯಾದರೂ ಒಂದು ಗುಡ್‌ಬೈ ಸಹ ಹೇಳದೇ ನಮ್ಮ ನಮ್ಮ ಬದುಕಿನ ಹಾದಿಯಲ್ಲಿ ಸಿಕ್ಕ ತಿರುವುಗಳಲ್ಲಿ ನಡೆದುಹೋಗಿಬಿಟ್ಟಿದ್ದೆವು.
 “ದಡ ಸೇರದ ದೋಣಿ” ಹೊಸ ಸರಣಿಯಲ್ಲಿ ಅಂತ್ಯ ಸಿಕ್ಕದ ಪ್ರೇಮವೊಂದರ ಕುರಿತು ನಿ”ಶಾಂತ” ಬರಹ

ಹೌದು ಅವತ್ತು ನಾನು ನಿನ್ನ ಫೋನ್‌ ರಿಸೀವ್‌ ಮಾಡಿಬಿಡಬೇಕಿತ್ತು… ಯಾಕೆ ಹಾಗೆ ಸುಮ್ಮನಾದೆ.. ಇವತ್ತಿಗೂ ಗೊತ್ತಿಲ್ಲ…

ನಿಂಗೊತ್ತಲ್ವ… ನಾನು ನೀನು ಇಬ್ಬರೂ ಮೊದಲು ಭೇಟಿಯಾದದ್ದು ಕಲಾಕ್ಷೇತ್ರದ ಕ್ಯಾಂಟೀನಿನಲ್ಲಿ… ನಮ್ಮಿಬ್ರಿಗೂ ಯಾಕೋ ಅಲ್ಲಿನ ಊಟ ವಿಪರೀತ ಇಷ್ಟ… ನಾನು ನನ್ನ ನಾಟಕದ ರಿಹರ್ಸಲ್ಸ್‌ ಮುಗಿಸಿಕೊಂಡು ಅಲ್ಲಿಗೆ ಬರೋದಕ್ಕೂ, ನೀನು ನಿನ್ನ ನಾಟಕದ ಕೆಲಸಗಳನ್ನು ಮುಗಿಸಿಕೊಂಡು ಅಲ್ಲಿಗೆ ಬರೋ ಸಮಯವೂ ಸಾಕಷ್ಟು ಸಲ ಒಂದೇ ಆಗಿರುತ್ತಿತ್ತು ಅಥವಾ ಒಂಚೂರು ಆಕಡೆ ಈಕಡೆ ಅನ್ನು… ಸದಾ ನಮ್‌ ನಮ್ಮ ನಾಟಕಗಳ ಗುಂಪಿನೊಟ್ಟಿಗೇ, ಯದ್ವಾತದ್ವಾ ಜೋರಾಗಿ ಮಾತಾಡಿಕೊಂಡು ಓಡಾಡಿಕೊಂಡಿರುತ್ತಿದ್ದ ನಮ್ಮಿಬ್ಬರಿಗೂ ಅದು ಹೇಗೆ ಬೇರೆ ಬೇರೆ ಗುಂಪಿನ ನನ್ನ-ನಿನ್ನ ಮೇಲೆ ಒಬ್ಬರ ಮೇಲೊಬ್ಬರಿಗೆ ಕಣ್ಣು ಬೀಳಲಾರಂಭಿಸಿದ್ದು. ಬರೀ ಕಣ್ಣೋಟಗಳಲ್ಲೇ ಸುಮ್ಮನಾಗಿದ್ದ ನಾವು, ಪ್ರೀತಿ ಕಣ್ಣಿಂದ ದಾಟಿ ತುಟಿಯಂಚಿಗೆ ಜಾರಿ, ನಗಲೇ ಆರು ತಿಂಗಳ ಮೇಲೆ ಹಿಡಿದದ್ದನ್ನು ನೆನಪಿಸಿಕೊಂಡರೆ ಈಗಲೂ ನಗು ಬರುತ್ತದೆ. ಆಮೇಲೆಯೂ ಅಷ್ಟೇ ನಮ್ಮ “ಪ್ರೀತಿ” ಬೆಳೆಯುತ್ತಾ ಹೋದದ್ದು ತೀರಾ ನಿಧಾನ ಗತಿಯಲ್ಲಿ ಅಂತಲೇ ಹೇಳಬೇಕು… ಗುಂಪಿನಿಂದ ಬಿಡಿಸಿಕೊಂಡು ಬಂದು ಮಾತನಾಡೋದು, ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳೋದು, ಫೋನ್‌ ನಂಬರ್‌ ಹಂಚಿಕೊಂಡು ಆಗಾಗ ಮೆಸೇಜು, ಫೋನ್‌ ಕಾಲ್‌ ಎಂದೆಲ್ಲ ಮುಂದುವರಿಯುವ ಹೊತ್ತಿಗೆ, ನಾನಿನ್ನ ನೋಡಿ ನೀ ನನ್ನ ನೋಡಿ ಒಂದು ವರ್ಷವೇ ಆಗಿತ್ತು…

ಆಮೇಲೆ ಎಲ್ಲವೂ ಚೂರು ವೇಗವಾಗಿಯೇ ನಡೆದವು ಅಲ್ವ.. ನಾನು, ನಿನ್ನ ನಿರ್ದೇಶನದ ನಾಟಕಗಳಿಗೆ ಬರೋದು, ನೀ ನನ್ನ ಅಭಿನಯದ ನಾಟಕಗಳಿಗೆ ಬರೋದು… ಗುಂಪಿನಲ್ಲಿ ಯಾರಿಗೂ ಗೊತ್ತಾಗದಂತೆ ಕದ್ದುಮುಚ್ಚಿ ಭೇಟಿಯಾಗಲು ಪಟ್ಟ ಕಷ್ಟಗಳೆಲ್ಲವನ್ನ ಈಗ ನೆನೆಸಿಕೊಂಡರೆ ಎಷ್ಟು ಬಾಲಿಶ ಅನ್ನಿಸುತ್ತದೆ. ಯಾಕಂದ್ರೆ ಹಾಗೆ ಹೆದರಿ ಸಾಯ್ತಿದ್ದದ್ದು ನಾನು ಮಾತ್ರವೇ. ನೀನು “ಈಗಿನಂತೆ” ಆಗಲೂ ತಟಸ್ಥ. ಊರವರ ಮಾತಿಗೆ ತಲೆಕೆಡಿಸಿಕೊಳ್ಳುವವನಲ್ಲ. ಆದರೆ ನನ್ನ ಕತೆ ಬೇರೆಯದೇ ಇತ್ತು. ನನ್ನನ್ನು ಇಂಜಿನಿಯರ್‌ ಮಾಡಬೇಕೆಂದು ಆಸೆ ಹೊತ್ತು ಬೆಳೆಸಿದ್ದ ಅಪ್ಪ-ಅಮ್ಮನ “ಆಸೆ”ಗಳಿಗೆ ತಣ್ಣೀರೆರಚಿ ನಾನು ನಾಟಕ ರಂಗಕ್ಕೆ ಬಂದಿದ್ದೆ. ಹಾಗಾಗಿ ನಿನ್ನೊಂದಿಗೆ ಪ್ರೀತಿಯಲ್ಲಿ ಬಿದ್ದಾಗಿನಿಂದ ನನಗೆ ನಾನೇನೋ ಏನೋ ಮಹಾಪರಾಧ ಮಾಡುತ್ತಿರುವ ಸಂಕಟ. ಯಾರಾದರೂ ನೋಡಿ ಅಪ್ಪ-ಅಮ್ಮಂಗೆ ಹೇಳಿಬಿಟ್ರೆ ಅನ್ನೋ ಭಯ ಬೆನ್ನಿಗೆ ಬಿದ್ದ ಭೂತದಂತೆ ಕಾಡುತ್ತಿತ್ತು. ಹಾಗಾಗಿ ಹೆದರಿದ ಜಿಂಕೆಯಂತೆ ಕದ್ದೂಮುಚ್ಚಿ ನಿನ್ನ ಭೇಟಿಮಾಡುವಷ್ಟರಲ್ಲಿ ಸಾಕುಸಾಕಾಗಿ ಹೋಗ್ತಿತ್ತು ಮಾರಾಯಾ.

ಅದರ ಮುಂದಿನ ವರ್ಷವೇ ನಾನು ನಾಟಕದಲ್ಲಿ ಡಿಪ್ಲೋಮಾ ಮಾಡಲಾರಂಭಿಸಿದ್ದು. ಹಾಗಾಗಿ ಮನೆ, ಕ್ಲಾಸು, ನಾಟಕ ಪ್ರಾಕ್ಟೀಸು ಅಂತ ನಾವಿಬ್ಬರೂ ಸಿಗೋದೇ ಕಡಿಮೆಯಾಗತೊಡಗಿತ್ತು… ಅದು ಇಬ್ಬರನ್ನೂ ಬಾಧಿಸಲಾರಂಭಿಸಿತ್ತು. ನೀನು ಹೇಳಿದಲ್ಲಿಗೆ ನಾನು, ನಾನು ಹೇಳಿದಲ್ಲಿಗೆ ನೀನು ಬರೋಕೆ ಸಾಕಷ್ಟು ತೊಂದರೆಗಳು…. ನಿನಗೆ ನಿನ್ನದೇ ವಾದಗಳು ನನಗೆ ನನ್ನವೇ ಸಾಕಷ್ಟು ಸಮಜಾಯಿಷಿಗಳು… ಹೀಗೆಲ್ಲ ಆಗಬಾರದೆಂದು ಒಮ್ಮೆ ಇಬ್ಬರೂ ಕೂತು ಮಾತನಾಡಿದಾಗ ನಾನು “ಇನ್ಮುಂದೆ ಭಾನುವಾರ ಸಂಜೆಗಳು ನಮಗಾಗಿ” ಎಂದೆ. ಅದಕ್ಕೆ ನಿನ್ನ ಮುಖ ಊದಿಹೋಗಿ, ಶನಿವಾರ ಭಾನುವಾರಗಳಂದೇ ನಡೆಯುವ ನಿನ್ನ ನಾಟಕಗಳ ಲಿಸ್ಟ್‌ ಕೊಟ್ಟೆ… ಅಯ್ಯೋ.. ಇದ್ಯಾಕೆ ನಾವು ಭೇಟಿಯಾಗಲು ಇಷ್ಟೊಂದು ಅಡ್ಡಿ ಎಂದುಕೊಂಡು ಸಾಧ್ಯವಾದಷ್ಟು ಸಲ ಭೇಟಿಯಾಗಲಾರಂಭಿಸಿದರೂ, ಆ ಭೇಟಿಗಳೂ ಯಾಕೋ ಜಗಳದಲ್ಲೇ ಮುಗಿಯುತ್ತಿದ್ದವು. ಕಾಫಿ ಕೆಫೆ, ಪಾರ್ಕು, ಕಲಾಕ್ಷೇತ್ರದ ಅಕ್ಕಪಕ್ಕ, ಎಂ.ಜಿ. ರಸ್ತೆ, ಎಂಟಿಆರ್…‌ ಅಯ್ಯೋ ಎಲ್ಲೆಲ್ಲ ನಾವು ಮಾತಿಗೆ ಮಾತು ಬೆಳಸಿ ಜಗಳವಾಡಿದ್ದೆವು… ಸಾಕಷ್ಟು ಸಲ ನಿನ್ನ ನೆನಪಾದಾಗಲೆಲ್ಲ ನಾನು ಯೋಚನೆ ಮಾಡ್ತೀನಿ. ನಮ್ಮಿಬ್ಬರ ಮಧ್ಯೆ ಜಗಳವಾಗುತ್ತಿದ್ದದ್ದು ಯಾಕೆ ಅಂತ.. ನೆನಪಾಗೋದೇ ಇಲ್ಲ… ನಿಜಕ್ಕೂ… ಯಾವುದಾದರೂ ಒಂದು ವಿಷಯವಾದರೂ ನೆನಪಾಗಬೇಕೇ.. ಊಹೂಂ… ಹೋಗಲಿ ಬಿಡು ಅಂತ ಬಿಟ್ಟಾಕುತ್ತೇನೆ.

ಆಮೇಲೆ ಈಗ ನಿನಗೆ ಈ ವಿಷಯ ಹೇಳ್ತಾ ಇರೋದಕ್ಕೆ ಕ್ಷಮೆ ಇರಲಿ.. ನಾನು ಯಾವಾಗಲೂ ನನ್ನನ್ನ ಯಾವುದರಲ್ಲೂ ಮುಂದೆ ಅಂತ ಅಂದುಕೊಳ್ಳೋದೇ ಇಲ್ಲ. ಎಲ್ಲರೊಂದಿಗೆ ಸದಾ ಕಾಲ ಕಂಪೇರ್‌ ಮಾಡಿಕೊಳ್ಳುವ ಕೆಟ್ಟ ಚಟವಿದೆ ನಂಗೆ. ಆಗಲೂ ಇತ್ತು; ಈಗಲೂ ಇದೆ. ಹಾಗಾಗಿ ನೀನು ನಿನ್ನ ನಾಟಕದ ಟೀಮಿನ ಹುಡುಗಿಯರ ಜೊತೆ ನಿಂತಾಗಲೆಲ್ಲ ನನಗೆ ಉರಿದುಹೋಗೋದು. ಅಯ್ಯೋ ಎಂದು ಒಳಗೊಳಗೆ ರೋಧಿಸೋದು. ಎಷ್ಟು ಆ ಹೊಟ್ಟೆಕಿಚ್ಚನ್ನು ತೋರಿಸಿಕೊಳ್ಳಬಾರದೆಂದುಕೊಂಡರೂ, ಅದನ್ನು ನನ್ನ ಹತೋಟಿಗೆ ತರಲು ಆಗುತ್ತಲೇ ಇರಲಿಲ್ಲ. ನನಗೆ ನಿನ್ನ ಮೇಲೆ ನಂಬಿಕೆ ಇರಲಿಲ್ಲ ಎಂದಲ್ಲ. ನನ್ನ ಬಗ್ಗೆಯೇ ನನಗೆ ಅಪನಂಬಿಕೆ. ನಾನು ನಿನಗೆ ಅಷ್ಟು ಸೂಟ್‌ ಅಲ್ಲ ಅನ್ನುವ ಅಪನಂಬುಗೆ. ಹಾಗಾಗಿ ಯಾವ ಹುಡುಗಿಯೊಟ್ಟಿಗೆ ನಿನ್ನನ್ನು ನೋಡಿದರೂ ಊರೆಲ್ಲ ಕೇಳುವಂತೆ ರಂಪ ಮಾಡಿ, ಕೊನೆಗೆ ಕಣ್ಣೀರಿಡುತ್ತಾ ಸಾರಿ ಕೇಳುತ್ತಿದ್ದೆ… ಎಂಥ ಲೂಸ್‌ ಪಾರ್ಟಿಯಾಗಿದ್ದೆ ನಾನು… ಛೇ…

ಆಮೇಲೆ ಬರುಬರುತ್ತಾ ನಮ್ಮ ಭೇಟಿಯ ದಿನಗಳು ಕ್ಷೀಣಿಸಿದವು. ಆದರೂ ಯಾಕೋ ಆ ಕಾರಣಕ್ಕೆ ಇಬ್ಬರೂ ಜಗಳ ತೆಗೆಯುವುದನ್ನು ನಿಲ್ಲಿಸಿದ್ದೆವು. ಒಬ್ಬರು ಸಿಗ್ತಿಯಾ ಅಂದಾಗ, ಬೆಂಗಳೂರಿನ ಆ ತುದಿಯಲ್ಲಿದ್ದರೂ ಬಂದು ಭೇಟಿ ಮಾಡಿಹೋಗುತ್ತಿದ್ದೆವು. ಮತ್ತೆ ಮುಂದಿನ ಭೇಟಿ ಬಗ್ಗೆ ಮಾತೇ ಇಲ್ಲ… ಸುಮ್ಮನೇ ನಮ್‌ನಮ್ಮ ಕೆಲಸಗಳ ಕುರಿತು, ಮನೆಯ ಪರಿಸ್ಥಿತಿಗಳ ಕುರಿತ ಮಾತಷ್ಟೇ. ಅಲ್ಲಿ ಯಾವುದೇ ಕವಿತೆಗೂ, ಗಜಲ್‌ಗೂ ಅವಕಾಶವಿರುತ್ತಿರಲಿಲ್ಲ. ಅದು ಇಬ್ಬರಿಗೂ ಬೇಕಾಗೂ ಇರಲಿಲ್ಲವೆನ್ನಿಸುತ್ತೆ. ಹಾಗಾಗಿ ಮೂರು ವರ್ಷಗಳ ಒಡನಾಟದ ಸಲುವಾಗಿಯಾದರೂ ಒಂದು ಗುಡ್‌ಬೈ ಸಹ ಹೇಳದೇ ನಮ್ಮ ನಮ್ಮ ಬದುಕಿನ ಹಾದಿಯಲ್ಲಿ ಸಿಕ್ಕ ತಿರುವುಗಳಲ್ಲಿ ನಡೆದುಹೋಗಿಬಿಟ್ಟಿದ್ದೆವು.

ಅವತ್ತೊಂದಿನ ಇದ್ದಕ್ಕಿದ್ದ ಹಾಗೆ ನನಗೆ ನಿನ್ನಿಂದ ಕರೆ ಬಂದಿತ್ತು. ನನಗೆ ನಿಜಕ್ಕೂ ನಿನ್ನೊಂದಿಗೆ ಮಾತನಾಡುವ ಯಾವ ಉತ್ಸಾಹವೂ, ಚೈತನ್ಯವೂ ಇರಲಿಲ್ಲ. ಆಸ್ಪತ್ರೆಯಲ್ಲಿದ್ದೆ. ಏಳು ತಿಂಗಳ ಗರ್ಭಿಣಿ ಆಗ. ವಿಪರೀತ ವಾಂತಿ, ಮೂರು ವಾರಗಳಿಂದ ಹಗಲೂ ರಾತ್ರಿ ನಿದ್ದೆಯಿಲ್ಲದೇ ಸುಸ್ತಿನಿಂದ ಹೈರಾಣಾಗಿಹೋಗಿ, ನಡೆಯಲು ಆಗದಷ್ಟು ಬಳಲಿಹೋಗಿದ್ದೆ. ಹಾಗಾಗಿ ಅಪ್ಪ-ಅಮ್ಮ ಇಬ್ಬರೂ ಕ್ಯಾಬ್‌ ಮಾಡಿಕೊಂಡು ನನ್ನನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಹಾಗಾಗಿ ನಿನ್ನ ಫೋನ್‌ ಕರೆ ನನ್ನಲ್ಲಿ ಯಾವ ಭಾವವನ್ನೂ ಉಂಟು ಮಾಡಿರಲಿಲ್ಲ.

ಆಸ್ಪತ್ರೆಯಿಂದ ಮನೆಗೆ ಬಂದು ಒಂದಷ್ಟು ಮೆಡಿಸಿನ್‌, ಅದೂಇದೂ ಅಂತೆಲ್ಲ ತೆಗೆದುಕೊಂಡು ಚೂರು ಹಗೂರವಾಗಿದ್ದೆ. ಹಾಗಾಗಿ ರಾತ್ರಿ ಬೇಗನೇ ನಿದ್ದೆ ಹತ್ತಿತ್ತು. ನಡುರಾತ್ರಿ ಒಮ್ಮಿಂದೊಮ್ಮೆಲೆ ನಿನ್ನ ಕಾಲ್‌ ಬಂತು. ಬೆಚ್ಚಿ ಎದ್ದರೆ ನಿನ್ನ ಕರೆ… ಸಿಟ್ಟು ನೆತ್ತಿಗೇರಿತ್ತು. ಮೂರು ವಾರಗಳಲ್ಲಿ ಮೊದಲ ಸಲ ಕಣ್ತುಂಬ ನಿದ್ದೆ ಬಂದಿದ್ದರಿಂದ, ಆ ನಿದ್ದೆಯ ಮುಂದೆ ಯಾರೆಂದರೆ ಯಾರೂ ಮುಖ್ಯರಲ್ಲ ಎನ್ನಿಸಿತ್ತು. ಹಾಗಾಗಿ ಫೋನನ್ನು ಸೈಲೆಂಟ್‌ ಮೋಡಿಗೆ ಹಾಕಿಟ್ಟು ಬೆಚ್ಚಗೆ ರಗ್ಗು ಹೊದ್ದುಕೊಂಡು ಮಲಗಿಬಿಟ್ಟೆ. ಬೆಳಗ್ಗೆ ಎಚ್ಚರವಾದದ್ದೇ ರೂಢಿಯಂತೆ ಫೋನ್‌ನತ್ತ ಕೈ ಹೋಗಿತ್ತು. ತೆಗೆದುಕೊಂಡು ನೋಡಿದರೆ ಗಂಟೆ ಒಂಭತ್ತಾಗಿತ್ತು. ಖುಷಿಯೋ ಖುಷಿ ನನಗೆ. ಅಬ್ಬಾ.. ಎಷ್ಟೊಳ್ಳೆ ನಿದ್ದೆ ಆಯ್ತಲ್ಲ ಅಂತ ಸಮಾಧಾನ. ಎಷ್ಟೋ ದಿನದ ನಿದ್ದೆಯಿಲ್ಲದ ಸುಸ್ತು ಒಂದೇ ರಾತ್ರಿಗೆ ಬಂದು ಮೈಮನಸ್ಸೆಲ್ಲ ಹಗೂರವಾದಂತಿತ್ತು. ಹಾಗಾಗಿ ನೋಟಿಫಿಕೇಷನ್ನಿನಲ್ಲಿ ಕಂಡ ನಿನ್ನ ಕಾಲ್‌ಗಳಿಗೆ ನಾನು ಕ್ಯಾರೆ ಅನ್ನೋಕೆ ಆಗಲೇ ಇಲ್ಲ. ಎದ್ದು ಅದೆಷ್ಟೋ ದಿನಗಳಿಂದ ನೆಟ್ಟಗೆ ಊಟವನ್ನೂ ಮಾಡಲಾಗದಿದ್ದ ನಾನು ಅಂದು ಬೆಳಗ್ಗೆ ಚೆನ್ನಾಗಿ ತಿಂದು, ದೊಡ್ಡ ಲೋಟದ ತುಂಬ ಇದ್ದ ಸ್ಟ್ರಾಂಗ್‌ ಕಾಫಿ ಕುಡಿದೆ… ಆಹಾ… ಅದೇನು ನಿರಾಳತೆ… ಯಾಕೋ ಆ ನಿರಾಳತೆಯೂ ಚೂರು ಅಸಹಜ ಅನ್ನಿಸಿದರೂ ಹಾಗೊಂದು ಬ್ರೇಕ್‌ ಬೇಕಿತ್ತು ನನಗೆ… ಒಂಥರಾ ವಿಚಿತ್ರ ಸಮಾಧಾನ… ಹೊಟ್ಟೆಯಲ್ಲಿ ಮಗುವೂ ಆರಾಮದಿಂದಿದೆ ಅನ್ನಿಸಿತ್ತು. ಹಾಗಾಗಿ ನನಗಾಗಿ ಕಾಯುತ್ತಿದ್ದ ಒಂದಷ್ಟು ಮಾತ್ರೆಗಳನ್ನು ನುಂಗಿ, ಒಂಚೂರು ತಾಜಾ ಗಾಳಿ ತೆಗೆದುಕೊಳ್ಳಲು ಮನಸ್ಸಾಗಿ, ಮೊಬೈಲ್‌ ಹಿಡಿದುಕೊಂಡು ಟೆರೆಸ್ಸಿಗೆ ಹೋಗಿ ಸುತ್ತಮುತ್ತ ನೋಡುತ್ತಾ ನಿಂತು ಐದು ನಿಮಿಷವೂ ಕಳೆದಿರಲಿಲ್ಲವಷ್ಟೇ… ಹರ್ಷನ ಕರೆ ಬಂತೂ… ಅವನು ನನ್ನ ನಾಟಕ ರಂಗದ ಸ್ನೇಹಿತ… ನಾನು ಮದುವೆಯಾದಾಗಿನಿಂದ ಅವನೊಂದಿಗೆ ಅಷ್ಟಾಗಿ ಮಾತನಾಡಲಾಗಿರಲಿಲ್ಲ. “ಮದ್ವೆ ಇರ್ಬೇಕು… ಅದ್ಕೆ ಕಾಲ್‌ ಮಾಡಿರ್ಬೇಕು..” ಅಂತಂದುಕೊಂಡು ನಗುತ್ತಲೇ ಕರೆ ಸ್ವೀಕರಿಸಿದ್ದೆ…

“ಹಲೋ.. ಮಧು… ವೆರಿ ಸಾರಿ… ನಿಶಾಂತ್‌ ತೀರಿಕೊಂಡದ್ದು ಕೇಳಿ ತುಂಬಾ ಬೇಸರ ಆಯ್ತು… ವೆರಿ ಸಾರಿ….” ಅಂದನಷ್ಟೇ… ನಂಬಲಾಗಲಿಲ್ಲ ನನಗೆ… ವಿಷಯ ಗೊತ್ತಿಲ್ಲದ ನಾನು ಹರ್ಷನನ್ನೇ ವಿಷಯದ ಕುರಿತು ಕೇಳಿ ತಿಳಿದುಕೊಂಡೆ… ನಂತರ ನಿಶಾಂತನ ಇಬ್ಬರು ಮೂವರು ಸ್ನೇಹಿತರಿಗೆ ಫೋನಾಯಿಸಿ ಕೇಳಿದೆ… “ಈಗ ಬೆಳಗ್ಗೆ ಮಾಡಿಕೊಂಡಿದ್ದಾನಂತೆ ಕಣೇ…” ಅಂತಲೇ ಮಾತು…

ಏನು ಹೇಳಬೇಕಿತ್ತೋ ನೀನು ನನಗೆ… ನೆನ್ನೆ ನಾನು ನಿನ್ನ ಕಾಲ್‌ ರಿಸೀವ್‌ ಮಾಡಿದ್ರೆ ನೀನು ಬದ್ಕಿರ್ತಿದ್ಯಾ… ಅಥವಾ… ಅಯ್ಯೋ ನನಗ್ಯಾಕೆ ನೆನ್ನೆ ನಿನ್ನ ಕಾಲ್‌ ರಿಸಿವ್‌ ಮಾಡಲು ಶಕ್ತಿಯಿರಲಿಲ್ಲ…

ನನಗೆ, ಒಬ್ಬರನ್ನೊಬ್ಬರು ಅಷ್ಟು ಪ್ರೀತಿಸುತ್ತಿದ್ದ ನಾವ್ಯಾಕೆ ಹಾಗೆ ಜಗಳವಾಡುತ್ತಿದ್ದೆವು, ಯಾಕೆ ದೂರವಾದೆವು ಅನ್ನುವುದೇ ಸದಾ ಕಾಡುವ ಪ್ರಶ್ನೆ ಆಗಿರುವಾಗ, ನೀನ್ಯಾಕೆ ಹೀಗೆ ನಿನ್ನವರೆಲ್ಲರನ್ನೂ ಬಿಟ್ಟು ಹೋದೆ…

ಇದೆಲ್ಲ ಆಗಿ ಇಪ್ಪತ್ತು ವರ್ಷಗಳೇ ಕಳೆದಿವೆ… ಈಗಲೂ ಇವ್ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ…

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Vasantha kumar

    ಇದೊಂದು ಕಥೆಯೋ, ಪ್ರಬಂಧವೋ, ಸ್ವಾನುಭವವೋ ಏನು ಬೇಕಾದರೂ ಆಗಿರಬಹುದು. ಹೀಗೆಯೇ ಅನೇಕ ಕಥೆಗಳು(ಸಂಬಂಧಗಳು) ಹೀಗೆ ಹುಟ್ಟಿ, ಹೇಗೇಗೋ ಬೆಳೆದು ಹಾಗೆಯೇ ಮಲಗಿಬಿಡುತ್ತವೆ. ಇಂಥವು ಅಸಂಖ್ಯ ನಮ್ಮ ಸಮಾಜದಲ್ಲಿ. ಓದಿ ಮನದಲ್ಲಿ -ಅಥವಾ ಕಿಬ್ಬೊಟ್ಟೆಯಲ್ಲಿ-ಒಂದು ರೀತಿಯ ತಣ್ಣನೆಯ ಸಂಕಟ ಉಂಟಾದದ್ದು ಸುಳ್ಳಲ್ಲ.

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ