ಅಕ್ಷತಾ ನದಿ ಹಾಗೂ ಸಮುದ್ರ ಎರಡನ್ನು ಕಂಡವರು. ಕಾಳಿ ನದಿಯಲ್ಲಿ ಈಜಾಡಿದವರು. ಅರಬ್ಬೀ ಸಮುದ್ರವನ್ನು ಅಪ್ಪಿಕೊಂಡಿದ್ದವರು. ಕಾಳಿ ಅಣೆಕಟ್ಟು ಒಡೆದಿದೆ ಎಂಬ ಗಾಳಿ ಸುದ್ದಿ ಹರಡಿದಾಗ ಜನರಲ್ಲಿ ಎದ್ದ ಕೋಲಾಹಲವನ್ನು ಬಹಳ ಸಮರ್ಥವಾಗಿ ಕವಿತೆಯೊಂದರಲ್ಲಿ ಕಟ್ಟಿಕೊಟ್ಟಿದ್ದಾರೆ. ಅದೇ ಕಾಳಿಯನ್ನು ಅಣೆಕಟ್ಟಿನಲ್ಲಿ ಬಂಧಿಸಿ ಖೈದಿ ಮಾಡಿದ್ದನ್ನು ಅವರು ಇನ್ನೊಂದು ಕವಿತೆಯಲ್ಲಿ ಚಿತ್ರಿಸಿದ್ದಾರೆ. ಕಣ್ಣೆದುರು ನಡೆಯುವ ಈ ಪ್ರಸಂಗಗಳಿಗೆ ಕವಯತ್ರಿ ಶಬ್ದಗಳ ರೂಪದಲ್ಲಿ ಮಾತನಾಡಿಸಿದ್ದಾರೆ. ಅಕ್ಷತಾ ಅವರ ಕಾವ್ಯದ ಕೇಂದ್ರ ಬಿಂದು ಪ್ರೀತಿ ಪ್ರಣಯ. ಕರಾರುರಹಿತವಾದ ಈ ಪ್ರೀತಿಯ ಮೇಲೆ ಸಂಶಯದ ಕಾರ್ಮೋಡಗಳು ಮುಸುಕಲಾರಂಭಿಸಿದಾಗ ಕವಯತ್ರಿಯು ಮುದುಡಿ ಹೋಗುತ್ತಾಳೆ.
ಅಕ್ಷತಾ ಕೃಷ್ಣಮೂರ್ತಿ ಬರೆದ ‘ನಾನು ದೀಪ ಹಚ್ಚಬೇಕೆಂದಿದ್ದೆ’ ಕವನ ಸಂಕಲನಕ್ಕೆ ಡಾ. ಸರಜೂ ಕಾಟ್ಕರ್ ಬರೆದ ಮಾತುಗಳು
ಹಳೆಯ ಜಮಾನಾದ ನಯಾ ಕವಿತೆಗಳು
ಯುವ ಕವಯತ್ರಿ ಅಕ್ಷತಾ ಕೃಷ್ಣಮೂರ್ತಿ ಅವರ ಈ ಸಂಕಲನದ ಹೆಸರು `ನಾನು ದೀಪ ಹಚ್ಚಬೇಕೆಂದಿದ್ದೆ.’ ಈ ಹೆಸರಿನ ಕವಿತೆಯು ಈ ಸಂಕಲನದಲ್ಲಿದೆ. ಸಂಕಲನದ ಹೆಸರು ಕೇಳಿ ನನಗೆ ಅಚ್ಚರಿಯಾಯಿತು. ಅದಕ್ಕೆ ಕಾರಣ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ಅಂಗವಾಗಿ ನಡೆದ ಕವಿಗೋಷ್ಠಿಯಲ್ಲಿ ನಾನು ಓದಿದ ಕವಿತೆಯ ಹೆಸರೂ `ನಾನು ದೀಪ ಹಚ್ಚಬೇಕೆಂದಿದ್ದೆ’ ಎಂದೇ ಇತ್ತು. ಆ ಕವಿತೆಯ ಆಶಯ ಮತ್ತು ಅಕ್ಷತಾ ಅವರ ಈ ಕವಿತೆಯ ಆಶಯ ಬೇರೆ ಬೇರೆಯಾಗಿದ್ದರೂ ಕವಿತೆಯ ತಲೆಬರಹ ಒಂದೇ ಆಗಿದ್ದುದ್ದು ನನಗೆ ಅಚ್ಚರಿಯನ್ನುಂಟು ಮಾಡಿತ್ತು. ಇಂತಹ ಅಚ್ಚರಿ, ವಿಸ್ಮಯ ಹುಟ್ಟಿಸುವ ಅನೇಕ ಕವಿತೆಗಳು ಈ ಸಂಕಲನದಲ್ಲಿವೆ.
ಒಟ್ಟು 42 ಕವಿತೆಗಳ ಸಂಕಲನ ಇದು. ಕೊನೆಯ ಆರು ಕವಿತೆಗಳು ಮಕ್ಕಳ ಕವಿತೆಗಳೆಂದು ಹೆಸರಿಸಬಹುದಾದರೂ ಕೂಡ ಅವು ಚಂದದ ಕವಿತೆಗಳೇ ಆಗಿವೆ. ಬಾಲ್ಯದ ನೆನಪುಗಳ ಓಣಿಯಲ್ಲಿ ಅಡ್ಡಾಡಿಸುವ ಈ ಮಕ್ಕಳ ಕವಿತೆಗಳು ಲಯದ ದೃಷ್ಟಿಯಿಂದ ಸಹಜವಾಗಿ ಮಕ್ಕಳ ತುದಿನಾಲಿಗೆಯ ಮೇಲೆ ನಡೆದಾಡುವ ಕವಿತೆಗಳಾಗಿವೆ. ಈ ಕವಿತೆಗಳನ್ನು ಓದಿದ ಓದುಗ ಖಂಡಿತವಾಗಿ ತನ್ನ ಬಾಲ್ಯದ ನೆನಪಿಗೆ ಜಾರುತ್ತಾನೆ.
ಉಳಿದ ಕವಿತೆಗಳನ್ನು ಓದುತ್ತಿದ್ದಂತೆಯೇ ನನಗೆ ಇನ್ನೊಂದು ವಿಸ್ಮಯ ಕಾದಿತ್ತು. ನಾನು ಕಾಲೇಜು ದಿನಗಳಲ್ಲಿ ಬರೆದ ಕವಿತೆಗಳಂತೆ ಇವು ಇದ್ದವು. ಕಾಲ ಪುನರಾವರ್ತಿತವಾಗಿ ತಿರುಗಿ ಆರಂಭದ ಬಿಂದುವಿಗೆ ಮರಳಿತ್ತು. ಅದೇ ಪ್ರೀತಿ, ಪ್ರೇಮ, ವಿರಹ, ಮಳೆ, ಸೂರ್ಯ, ಚಂದ್ರ, ವಿಶ್ವಾಸದ್ರೋಹ, ನಿಸರ್ಗ ಇವುಗಳೆಲ್ಲ ನಲ್ವತೈದು ವರ್ಷಗಳ ನಂತರ ಎದುರು ಬಂದು ನಿಂತಿದ್ದವು. ಕವಿ ಬದಲಾಗಿದ್ದ ಆದರೆ ಕವಿತೆಗಳ ಭಾವ ಅವೇ ಆಗಿದ್ದವು. ಅಕ್ಷತಾ ಕೃಷ್ಣಮೂರ್ತಿ ತುಂಬ ಲವಲವಿಕೆ ತುಂಬಿಕೊಂಡಿರುವ ಹುಡುಗಿ. ಗಲಗಲಾಂತ ಮಾತನಾಡುತ್ತ, ನಡುವೆ ಸಂತೋಷ ಉಕ್ಕುವಂತೆ ನಗುವ, ಆ ನಗುವಿನಲ್ಲಿ ಅತೀವ ಆತ್ಮವಿಶ್ವಾಸವನ್ನು ಪ್ರಕಟಿಸುವ ಶುದ್ಧ ಮನಸ್ಸಿನ ಪ್ರತಿಭಾವಂತ ಕವಯತ್ರಿ. ಅವರ ಮಾತುಗಳು ಪರಿಶುದ್ಧ ಸ್ಫಟಿಕ. ಅಂತೆಯೇ ಮನಸ್ಸು ಕೂಡ.
ಅವರ ಕವಿತೆಗಳಲ್ಲಿ ಪ್ರಿಯ ಪ್ರಿಯತಮೆಯರ ಮೌನದ ಮಾತುಗಳಿವೆ. ತಕರಾರುಗಳಿವೆ. ಮುನಿಸು ಇದೆ. ಪ್ರೀತಿ ಒಮ್ಮಿಂದೊಮ್ಮೆಲೆ ಸ್ಫೋಟಗೊಳ್ಳುತ್ತದೆ. ಕೃಷ್ಣ ರಾಧೆಯರ ಸರಸ ಸಲ್ಲಾಪವಿದೆ. ಕೃಷ್ಣ, ರುಕ್ಮಿಣಿ ವಲ್ಲಭನಾಗಿ ಎದುರಿಗೆ ಬಂದಾಗ ಹೊಟ್ಟೆಕಿಚ್ಚು ಇದೆ. ರಾಧೆ ಕೃಷ್ಣನನ್ನು ಪ್ರಶ್ನಿಸುತ್ತಾಳೆ.
ಉಸಿರು ಬಿಗಿಹಿಡಿದು ಕಾದವಳ
ನೆನೆಯದ ಮನಸು
ಓಣಿಯಲ್ಲೆಲ್ಲ ದೇವರಾದದ್ದು ಹೇಗೆ?
ರಾಧೆಯನ್ನೇ ಅರ್ಥೈಸಿಕೊಳ್ಳದವ
ಜಗದೋದ್ಧಾರಕನಾದದ್ದು ಹೇಗೆ?
ಪುರಾಣದ ರಾಧೆ ವರ್ತಮಾನದಲ್ಲಿ ಮಾತನಾಡುವ ವಿಸ್ಮಯವನ್ನು ಅಕ್ಷತಾ ಕೃಷ್ಣಮೂರ್ತಿ ಅವರ ಕವಿತೆ ಸಾಕಾರಗೊಳಿಸುತ್ತದೆ.
ನೆಟ್ವರ್ಕು ವಾಟ್ಸೆಪು
ಎಲ್ಲ ಸತ್ತಿರುವಾಗ
ಬರೆದ ಪತ್ರವು
ವಿಳಾಸ ತಪ್ಪಿದೆ ಎಂದು
ವಾಪಸಾಗಿರುವಾಗ
ರಾಧೆಯ ತಳಮಳವನ್ನು ಬಲು ಪರಿಣಾಮಕಾರಿಯಾಗಿ ಅಕ್ಷತಾ ಇಲ್ಲಿ ಹಿಡಿದಿಟ್ಟಿದ್ದಾರೆ. ಪುರುಷ ಕ್ರೌರ್ಯಕ್ಕೆ ನಲುಗಿದ ಹೆಣ್ಣು ತನ್ನನ್ನು, ತನ್ನ ಆತ್ಮವನ್ನು ಕೊಂದು ಹಾಕಿರುತ್ತಾಳೆ. ಏಳು ಬೆಟ್ಟವೇರಿ ಬೆಟ್ಟವನ್ನೇ ಗೆದ್ದ ಅವಳ ಉತ್ಸಾಹ ಗಂಡನ ಹಿಂಸೆಯ ಎದುರು ಮಂಕಾಗಿ ಬಿಡುತ್ತದೆ. ಏನೇನೋ ಸಾಧಿಸಬೇಕೆಂದವಳಿಗೆ,
ರುಚಿ ಶುಚಿ ಅಡುಗೆ ಮಾಡುತ್ತ
ದುಡಿದ ನನ್ನ ಮೈಗೊಂದಿಷ್ಟು
ನೋವಿನೆಣ್ಣೆಯ ತೈಲ ತಿಕ್ಕುತ್ತ
ಮೈಗಂಟಿ ಮಲಗಿದರೆ ಸಾಕು
ಜನ್ಮಪಾವನ
ಇಲ್ಲಿಗೆ ಅವಳ ಪ್ರತಿಭೆಯೆಲ್ಲ ಕಮರಿ ಹೋಗುತ್ತದೆ. ಮದುವೆ ಎಂಬುದು ಸುಖದ ತಾಣವಾಗುವ ಬದಲು ನರಕದ ಸೆಲೆಯಾಗುತ್ತದೆ.
ಅಕ್ಷತಾ ಕೃಷ್ಣಮೂರ್ತಿ ಅವರು `ಚಳಿ’ಯ ಬಗ್ಗೆ ಬರೆದ ದೀರ್ಘ ಕವನ ಕನ್ನಡ ಕಾವ್ಯಲೋಕದಲ್ಲಿಯೇ ಹೊಸದು. ಚಳಿಯನ್ನು ನಾನಾ ರೂಪದಲ್ಲಿ ಕಂಡು, ಅನುಭವಿಸಿದ ಅವರು ಅದರ ಅನಂತಾನಂತ ರೂಪಗಳನ್ನು, ಅದರ ವಿಶ್ವರೂಪವನ್ನು ವಿವಿಧ ಆಯಾಮಗಳಲ್ಲಿ ಇಲ್ಲಿ ಹರಡಿದ್ದಾರೆ. ಚಿಕ್ಕ ಚಿಕ್ಕ ಹಾಯ್ಕುಗಳಂತಿರುವ ಈ ಚಳಿ, ಚಳಿ ಕವಿತೆಗಳು ಮನಸ್ಸಿಗೆ ಕಚಗುಳಿಯನ್ನು ಇಡುತ್ತ ಓದುಗನನ್ನು ರೋಮ್ಯಾಂಟಿಕ್ ಭಾವಲೋಕಕ್ಕೆ ಕರೆದುಕೊಂಡು ಹೋಗುತ್ತವೆ.
ಪ್ರೀತಿ, ಪ್ರೇಮ, ವಿರಹ, ಮಳೆ, ಸೂರ್ಯ, ಚಂದ್ರ, ವಿಶ್ವಾಸದ್ರೋಹ, ನಿಸರ್ಗ ಇವುಗಳೆಲ್ಲ ನಲ್ವತೈದು ವರ್ಷಗಳ ನಂತರ ಎದುರು ಬಂದು ನಿಂತಿದ್ದವು. ಕವಿ ಬದಲಾಗಿದ್ದ ಆದರೆ ಕವಿತೆಗಳ ಭಾವ ಅವೇ ಆಗಿದ್ದವು.
ನೆನಪಿದೆಯಾ
ಅಂದು ನಾವಿಬ್ಬರೇ
ಬಿದ್ದ ಎಲೆಗಳನ್ನಾರಿಸುತ್ತಿದ್ದೆವು
ಚಳಿ ಬೆರಗಲಿ
ನಮ್ಮ ನೋಡುತ್ತಿದ್ದರೂ ಲೆಕ್ಕಿಸದೆ
******
ನೀ ಬೊಗಸೆಯಲ್ಲಿಟ್ಟು
ಹೋದ ಚಳಿ
ನನ್ನ ಮುಟ್ಟು ನಿಲ್ಲಿಸಿದ್ದು
ಸೋಜಿಗವೇನಲ್ಲ
ಈ ರೀತಿಯ ಸಾಲುಗಳು ಕನ್ನಡ ಕಾವ್ಯದಲ್ಲಿ ಹೊಸತನವನ್ನು ತಾಜಾತನವನ್ನು ಸೃಷ್ಟಿಸಿವೆ. ಈ ಚಳಿ ಮತ್ತೆ `ನೀನು ಮತ್ತು ಚಳಿ’ ಕವಿತೆಯಲ್ಲಿಯೂ ಮುಂದುವರಿಯುತ್ತದೆ.
ಚಳಿಯ ಎದೆಯೊಳಗೆ ನಿನ್ನುಸಿರಿನ
ಕಂಪನವಿರುವಾಗ ನಡಗುವ
ನನ್ನ ಕೈ
ನೀ ಹಿಡಿಯದೇ ಇರಲಾರೆ
ಚಳಿಯ ಬಗೆಗಿನ ಈ ರೀತಿಯ ಆಪ್ತ ಕವಿತೆಗಳು ಓದುಗನ ಹೃದಯದಲ್ಲಿ ಕಂಪನವನ್ನುಂಟು ಮಾಡದೇ ಇರಲಾರವು. ಪ್ರಿಯ ಪ್ರಿಯತಮೆಯರ ಮುನಿಸು ಒಳಗೊಳಗೆ ಹೊಗೆಯಾಡುತ್ತಿರುತ್ತದೆ. `ನೀ ಮಾತನಾಡಿಸದ ಮೇಲೆ’ ಎಂದೇ ಇಬ್ಬರಿಗೂ ಅನಿಸುತ್ತದೆ. `ನೀ ಮೌನ ಮುರಿಯಬೇಕು’ ಎಂದು ಇಬ್ಬರ ಮನಸ್ಸುಗಳು ಮಾತನಾಡುತ್ತಿರುತ್ತವೆ.
ಒಲವಲಿ ಮೌನ
ಮಾತಾಗಿ ಮುತ್ತಾಗುವುದು
ಸಾಮಾನ್ಯ ತಾನೇ?
ಮುನಿಸು ಮುಗಿದು ಪ್ರೀತಿಯ ಒರತೆ ಮತ್ತೆ ಇಬ್ಬರಲ್ಲಿಯೂ ಜಿನುಗಲಾರಂಭಿಸುತ್ತದೆ. ಮುನಿಸು ಮತ್ತು ಒಲವಿನ ಈ ಹೆಜ್ಜೆಗಳನ್ನು ಅಕ್ಷತಾ ಇಲ್ಲಿ ಪರಿಣಾಮಕಾರಿಯಾಗಿ ಶಬ್ದಗಳ ಮೂಲಕ ಚಿತ್ರಿಸಿದ್ದಾರೆ.
ಅಕ್ಷತಾ ನದಿ ಹಾಗೂ ಸಮುದ್ರ ಎರಡನ್ನು ಕಂಡವರು. ಕಾಳಿ ನದಿಯಲ್ಲಿ ಈಜಾಡಿದವರು. ಅರಬ್ಬೀ ಸಮುದ್ರವನ್ನು ಅಪ್ಪಿಕೊಂಡಿದ್ದವರು. ಕಾಳಿ ಅಣೆಕಟ್ಟು ಒಡೆದಿದೆ ಎಂಬ ಗಾಳಿ ಸುದ್ದಿ ಹರಡಿದಾಗ ಜನರಲ್ಲಿ ಎದ್ದ ಕೋಲಾಹಲವನ್ನು ಬಹಳ ಸಮರ್ಥವಾಗಿ ಕವಿತೆಯೊಂದರಲ್ಲಿ ಕಟ್ಟಿಕೊಟ್ಟಿದ್ದಾರೆ. ಅದೇ ಕಾಳಿಯನ್ನು ಅಣೆಕಟ್ಟಿನಲ್ಲಿ ಬಂಧಿಸಿ ಖೈದಿ ಮಾಡಿದ್ದನ್ನು ಅವರು ಇನ್ನೊಂದು ಕವಿತೆಯಲ್ಲಿ ಚಿತ್ರಿಸಿದ್ದಾರೆ. ಕಣ್ಣೆದುರು ನಡೆಯುವ ಈ ಪ್ರಸಂಗಗಳಿಗೆ ಕವಯತ್ರಿ ಶಬ್ದಗಳ ರೂಪದಲ್ಲಿ ಮಾತನಾಡಿಸಿದ್ದಾರೆ.
ಅಕ್ಷತಾ ಅವರ ಕಾವ್ಯದ ಕೇಂದ್ರ ಬಿಂದು ಪ್ರೀತಿ ಪ್ರಣಯ. ಕರಾರುರಹಿತವಾದ ಈ ಪ್ರೀತಿಯ ಮೇಲೆ ಸಂಶಯದ ಕಾರ್ಮೋಡಗಳು ಮುಸುಕಲಾರಂಭಿಸಿದಾಗ ಕವಯತ್ರಿಯು ಮುದುಡಿ ಹೋಗುತ್ತಾಳೆ. ಈ ರೀತಿಯ ಕವಿತೆಯ ಛಾಯೆಯನ್ನು ನಾನು ಅಮೃತಾ ಪ್ರೀತಂ ಅವರ ಕವಿತೆಗಳಲ್ಲಿ ಕಂಡಿದ್ದೇನೆ. ಅಮೃತಾ ಪ್ರೀತಂ ಚಿರ ಪ್ರಣಯಿನಿ ಜೊತೆಗೆ ಚಿರವಿರಹಿಣಿ. ಈ ಎರಡು ಭಾವಗಳು ಅವರ ಕವಿತೆಯಲ್ಲಿ ಒಡಮೂಡಿದಂತೆ, ಅಕ್ಷತಾ ಅವರ ಕಾವ್ಯದಲ್ಲಿಯೂ ಹೆಪ್ಪುಗಟ್ಟಿವೆ. ಅಕ್ಷತಾ ಅವರ ಈ ಸಂಕಲನದ ಎಲ್ಲ ಕವಿತೆಗಳು ಲವಲವಿಕೆಯಿಂದ ಕೂಡಿವೆ. ಜೊತೆಗೆ ಓದುಗನಲ್ಲಿಯೂ ಲವಲವಿಕೆ ಮೂಡಿಸುತ್ತವೆ.
ಈ ಸಂಕಲನ ಪ್ರಕಟನೆ ಪೂರ್ವದಲ್ಲಿಯೇ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ಭಾಜನವಾಗಿದೆ. ಹುಟ್ಟುವ ಮುಂಚೆ ಭವಿಷ್ಯದ ಕೀರ್ತಿ ಪಸರಿಸುವಂತೆ ಈ ಸಂಕಲನದ ಕವಿತೆಗಳು ಪ್ರಶಸ್ತಿಯನ್ನು ಬಾಚಿಕೊಂಡಿವೆ. ಇದು ಈ ಕವಿತೆಗಳ ತಾಕತ್ತನ್ನು ಸಾಬೀತುಪಡಿಸುತ್ತವೆ.
ಅಕ್ಷತಾ ಕೃಷ್ಣಮೂರ್ತಿ ಅವರ ಕವಿತೆಗಳನ್ನು ಓದುತ್ತಿದ್ದಾಗ ಅಥವಾ ಅವರ ಜೊತೆಗೆ ಮಾತನಾಡುತ್ತಿದ್ದಾಗ ಅವರು ನನಗೆ ಅಪರಿಚಿತರೆಂದು ಅನ್ನಿಸಲೇ ಇಲ್ಲ. ನಲ್ವತ್ತು ನಲ್ವತೈದು ವರ್ಷಗಳ ಹಿಂದೆ ಹುಬ್ಬಳ್ಳಿ ಧಾರವಾಡದಲ್ಲಿ ಕವಿತೆಗಳನ್ನು ಬರೆಯುತ್ತ, ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತ, ಗೆಳೆಯರ ಜೊತೆಗೆ ಖುಲ್ಲಂಖುಲ್ಲಾಗಿ ಹರಟುತ್ತ, ಆಕಾಶದ ಕಾಮನಬಿಲ್ಲನ್ನು ಕೈಯಲ್ಲಿ ಹಿಡಿದ ದಿನಗಳು ನೆನಪಾದವು. ಆ ಗೆಳೆಯರ ಜೊತೆಯಲ್ಲಿ ಈ ಅಕ್ಷತಾಳೂ ಇದ್ದಳೇ? ಎಂದು ಭಾಸವಾಗತೊಡಗಿತು. ಹೌದು ಅಲ್ಲಿ ಅಕ್ಷತಾಳೂ ಇದ್ದಳು; ಅವಳ ಕವಿತೆಗಳೂ ಇದ್ದವು!
(ಪುಸ್ತಕ: ನಾನು ದೀಪ ಹಚ್ಚಬೇಕೆಂದಿದ್ದೆ (ಕವನ ಸಂಕಲನ) ಲೇಖಕರು: ಅಕ್ಷತಾ ಕೃಷ್ಣಮೂರ್ತಿ, ಪ್ರಕಾಶಕರು: ಪಂಚಮಿ ಪ್ರಕಾಶನ, ಬೆಲೆ: 110)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ