ಕಾಡು ಕಣಿವೆಯ ಮುಗಿಯದ ಹಾಡು
ಕಾಡು ಕಣಿವೆಯೊಳಗಿಂದ ಸೂರ್ಯೆ
ಮೈ ಮುರಿದು ಮೇಲೇಳುವಾಗಲೇ
ಅವಳೊಡಲಿಂದಲೇ ಹೊರಟಂತೆ
ಸುಳಿ ಸುಳಿಯಾಗಿ ಗಾಳಿ ಮೇಲೇರುತ್ತದೆ
ಏರೇರುತ್ತ
ಗುಡ್ಡ ಗುಡ್ಡಗಳನೇ ತಟ್ಟಾಡುತ್ತ
ತುಂಡು ಮೋಡಗಳ ನೇವರಿಸುತ್ತ
ಸಾಲು ಪರ್ವತಗಳೆದೆ ಕಡೆಯುತ್ತ
ಸಂಜೆಯೇರುತಿರೆ ಭರ್ರೋ ಘರ್ಜಿಸುತ್ತ
ಸೀದಾ ಎದೆಯೊಳಗೆ ನುಗ್ಗಿ ಕುಳಿತುಬಿಡುತ್ತದೆ
ಬೆನ್ನ ಮೂಟೆ ಹೊತ್ತು ಊರ ಬಾಗಿಲು ದಾಟಿ
ಹಸಿ ನೆಲಕ್ಕೆ ಅಂಗಾಲೊತ್ತಿ
ಬೆರಳ ಮೂಲೆಮುಡುಕುಗಳ ನೆಲಕಂಟಿಸಿ
ಗಿರಿ ಕಂದರಗಳಲಿ ಕಣ್ಣು ನೆಟ್ಟು ಉಸ್ತಾದ್ ಖಾನನ
ಸಾರಂಗಿ ತಂತಿ ಮ್ಯಾಲ ಕಮಾನು ನಡೆದಂಗೆ ನಡೆಯುತ್ತ
ಸಾಗುವ ಹಸಿ ಮನಸಿನ ಜನರೆದೆಯೊಳಗೆ
ಗರಿ ಬಿಚ್ಚಿದ ನವಿಲು ಕುಣಿತ ಕೆನೆತ ಮೊರೆತ
ಕೊನೆಯಿರದ ವಿರಹದ ಕಂಪಿತ ಸವೆತ
ಕಣಿವೆಯಿಂದೇಳುವ ಸೂರ‍್ಯಳ ನಡೆಯೆಂದರೆ ಹೆಜ್ಜೆ ಮೇಲೊಂದ್ಹೆಜ್ಜೆ
ಅವಳ ಒಂದೊಂದು ನಡೆಗೂ ಕಾದು ಕಾವೇರುವ ನೆಲ ಬಾನಿಗೆ
ಗಾಯಕುದುರಿಸಿದ ಉಪ್ಪಂತೆ
ಬಣ್ಣದೋಕುಳಿಯ ಮಳೆ ಹನಿಸಿ
ಪರ್ವತಗಳ ದಾಟಿ ದಾಟಿ ಸಟಕ್ಕನೆ ಕಣ್ಣು ಮಿಟುಕಿಸಿ
ಗಿರಿ ಕಂದರದ ಮಕ್ಕಳಿಗೆ ಕಪ್ಪು ಚಾದರ ಹೊದೆಸಿ
ಒಳಗೆ ಬೀಸುಗಾಳಿಯ ತೂರಿಸಿ
ಕಣ್ಣಾಚೆಯ ಕಣಿವೆಯೊಳಗೆ
ಸಳಕ್ಕನೆ ಇಳಿದು ಹೋಗುತ್ತಾಳೆ ಮಾಯಗಾತಿ ಬಂಗಾರದ ಜಿಂಕೆ
ಮತ್ತೆ ಮೈ ಮುರಿದು ಮೇಲೇಳಲು.

 

ಅನುಪಮಾ ಪ್ರಸಾದ್ ಹೆಸರಾಂತ ಕಥೆಗಾರ್ತಿ ಮತ್ತು ಕವಯಿತ್ರಿ.
ಮೂಲತಃ ಉತ್ತರ ಕನ್ನಡದ ಶಿರಸಿಯವರು.ಈಗ ಕಾಸರಗೋಡಿನ ನೀರ್ಚಾಲಿನಲ್ಲಿ ವಾಸ.
ಜೋಗತಿ ಜೋಳಿಗೆ ಇವರ ಇತ್ತೀಚಿನ ಕಥಾ ಸಂಕಲನ.