ಮೂರು ಸಾರಿ ಬಂದಿದ್ದಳು. ಅವಳ ಸಂಸ್ಕಾರ ಮಾಡಿ ಸ್ಮಶಾನದಿಂದ ವಾಪಸ್ಸು ಒಂದು ಗಂಟೆಯೊಳಗೆ ಬಂದಳು. ಅದು ಮೊದಲನೆ ಸಾರಿ. ನಾನು ಇಲ್ಲಿಗೆ ಹೊರಡುವ ಒಂದು ದಿನ ಮೊದಲು ಇನ್ನೊಂದು ಸಾರಿ, ಪ್ರಯಾಣದಲ್ಲಿ, ಬೆಳಗಿನ ಜಾವ ಮಲಯ ವಿಶೇರ ಸ್ಟೇಶನ್ನಿಗೆ ಬಂದಿದ್ದಳು. ಮೂರನೆ ಸಾರಿ ಬಂದಿದ್ದು ಎರಡು ಗಂಟೆ ಮೊದಲು, ನನ್ನ ರೂಮಿನಲ್ಲಿ ಒಬ್ಬನೇ ಇದ್ದಾಗ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ನಾಲ್ಕನೆಯ ಭಾಗದ ಮೊದಲನೆಯ ಅಧ್ಯಾಯ

 

‘ಇನ್ನೂ ಕನಸೇನಾ?’ ಅಂದುಕೊಂಡ ರಾಸ್ಕೋಲ್ನಿಕೋವ್ ಅನಿರೀಕ್ಷಿತ ಅತಿಥಿಯನ್ನು ಗುಮಾನಿಯಿಂದ ನೋಡಿದ.

ಗೊಂದಲವಾಗಿ. ‘ಸ್ವಿದ್ರಿಗೈಲೋವ್? ಹೌದಾ!? ನಾನ್ಸೆನ್ಸ್!’ ಅಂದ.

ಬಂದಿದ್ದ ಮನುಷ್ಯನಿಗೆ ಆ ಮಾತು ಕೇಳಿ ಆಶ್ಚರ್ಯವೇನೂ ಆಗಲಿಲ್ಲ.

‘ಎರಡು ಕಾರಣಕ್ಕೆ ಇಲ್ಲಿಗೆ ಬಂದಿದೇನೆ. ಮೊದಲನೆಯದು ನಿನ್ನನ್ನ ಮುಖತಃ ನೋಡಬೇಕು. ಯಾಕೆಂದರೆ ನಿನ್ನ ಬಗ್ಗೆ ಬಹಳ ಕಾಲದಿಂದ ತುಂಬ ಒಳ್ಳೆ ಮಾತು ಕೇಳಿ ನಿನ್ನ ನೋಡಬೇಕು ಅನಿಸಿತ್ತು. ಎರಡನೆಯದು, ನಿನ್ನ ತಂಗಿಗೆ ನೇರವಾಗಿ ಸಂಬಂಧಪಟ್ಟ ವಿಷಯ. ನೀನು ಸಹಾಯ ಮಾಡದೆ ಇರಲ್ಲ ಅಂತ ನಂಬಿ ಬಂದಿದೇನೆ. ನಿನ್ನ ತಂಗಿ ತಪ್ಪು ತಿಳಕೊಂಡಿದ್ದಾಳೆ. ನಾನಾಗಿಯೇ ಹೋದರೆ ಮನೆಯ ಅಂಗಳಕ್ಕೆ ಕಾಲಿಡುವುದಕ್ಕೂ ಬಿಡಲ್ಲ ಅವಳು. ನೀನು ಶಿಫಾರಸು ಮಾಡಿದರೆ ಕೆಲಸ ಆದೀತು ಅಂತ…ʼ

‘ಅದೆಲ್ಲ ನಡೆಯಲ್ಲ, ಬಿಡಿ,’ ಅಂದ ರಾಸ್ಕೋಲ್ನಿಕೋವ್.

‘ನಿನ್ನೆ ತಾನೆ ಬಂದರು ಅವರು, ಅಲ್ಲವಾ?’

ರಾಸ್ಕೋಲ್ನಿಕೋವ್ ಮಾತಾಡಲಿಲ್ಲ.

‘ಗೊತ್ತು. ನಾನು ಬಂದಿದ್ದು ನಿನ್ನೆಯಲ್ಲ, ಮೊನ್ನೆ. ನನ್ನ ಪರವಾಗಿ ನಾನೇ ಹೇಳಿಕೊಳ್ಳಬಾರದು, ಆದರೂ, ಹೇಳು—ನ್ಯಾಯವಾಗಿ ನೋಡಿದರೆ ಈ ಇಡೀ ವ್ವವಹಾರದಲ್ಲಿ ನಾನು ತಪ್ಪು ಮಾಡಿದೇನೆ, ಅಪರಾಧ ಮಾಡಿದೇನೆ ಅನಿಸತ್ತಾ ನಿನಗೆ?’

ರಾಸ್ಕೋಲ್ನಿಕೋವ್ ಮಾತಾಡದೆ ಸುಮ್ಮನೆ ನೋಡುತ್ತಲೇ ಇದ್ದ.

‘ಕೈಲಾಗದ ಹುಡುಗಿಗೆ ನಮ್ಮ ಮನೆಯಲ್ಲೇ ನಾನು ಕಾಟ ಕೊಟ್ಟೆ, ‘ಮದುವೆಯ ಕೆಟ್ಟ ಪ್ರಸ್ತಾಪ’ ಮಾಡಿದೆ ಅಂತ ತಾನೇ? (ನೋಡು, ನಿನ್ನ ಮನಸಿನಲ್ಲಿರೋದೇ ಹೇಳುತ್ತಾ ಇದ್ದೇನೆ!) ‘ನಾನೂ ಎಲ್ಲಾ ಮನುಷ್ಯರ ಥರಾ ಇರೋನು, ಎಲ್ಲಾರಿಗೂ ಏನು ಬೇಕೋ ಅದು ನನಗೂ ಬೇಕು ಅನ್ನುವುದನ್ನ ಸ್ವಲ್ಪ ಮನಸ್ಸಿಗೆ ತಗೋ. ಹುಡುಗಿಯರು ನನ್ನ ಮನಸ್ಸು ಸೆಳೆಯುತ್ತಾರೆ, ನಾನೂ ಪ್ರೀತಿಗೆ ಬೀಳತೇನೆ, ಇಂಥಾ ವಿಚಾರದಲ್ಲಿ ಬೇಡ ಅಂದರೂ ಮನಸ್ಸು ಕೇಳಲ್ಲ, ಹೀಗೆ ನಡೆದಿದ್ದ ಎಲ್ಲಾನೂ ಸಹಜವಾಗೇ ವಿವರಿಸಬಹುದು. ನಾನು ರಾಕ್ಷಸನೋ ಬಲಿಪಶುವೋ? ಅದು ಪ್ರಶ್ನೆ. ನಾನೇ ಬಲಿಪಶು ಆಗಿರಬಹುದಲ್ಲವಾ? ನನ್ನ ಮನಸ್ಸು ಸೆಳೆದವಳಿಗೆ, ‘ಅಮೆರಿಕಕ್ಕೋ ಸ್ವಿಟ್ಸರ್‍ಲ್ಯಾಂಡಿಗೋ ಓಡಿ ಹೋಗಣ!’ ಅಂತ ಹೇಳಿದಾಗ ನನ್ನ ಮನಸಿನಲ್ಲಿ ಘನವಾದ, ಗಂಭೀರವಾದ ಗೌರವದ ಭಾವನೆ, ನಮ್ಮಿಬ್ಬರ ಸುಖಕ್ಕೆ ತಕ್ಕ ವ್ಯವಸ್ಥೆ ಮಾಡುವ ಭರವಸೆ ಇದ್ದಿರಬಹುದು ಅಲ್ಲವಾ? ಆವೇಶ ಇದ್ದಾಗ ವಿಚಾರಕ್ಕೆ ಜಾಗ ಇರಲ್ಲ. ಅವಳಿಗೆ ಅಂಥ ಮಾತು ಹೇಳಿ ನನಗೆ ನಾನೇ ನಷ್ಟ ಮಾಡಿಕೊಂಡೆ!’ ಅಂದ ಸ್ವಿದ್ರಿಗೈಲೋವ್.

‘ನೀನು ಸರಿಯೋ ತಪ್ಪೋ ಅನ್ನುವುದು ಮುಖ್ಯ ಅಲ್ಲ,’ ರಾಸ್ಕೋಲ್ನಿಕೋವ್ ಅಸಹ್ಯಪಡುತ್ತ ಅವನ ಮಾತು ತಡೆದ. ‘ನಿನ್ನ ನೋಡಿದರೆ ಅಸಹ್ಯ… ನಿನ್ನ ಜೊತೆ ಮಾತಾಡಕ್ಕೆ ಇಷ್ಟ ಇಲ್ಲ. ನೀನು ಬೇಕಾದ್ದು ಮಾಡು. ನನ್ನ ತಂಗಿ, ತಾಯಿ ನಿನ್ನ ಬೈದು ಓಡಿಸುತ್ತಾರೆ, ಹೊರಡು ಇಲ್ಲಿಂದ!’

ಸ್ವಿದ್ರಿಗೈಲೋವ್ ತಟ್ಟನೆ ಬಹಳ ಪ್ರಾಮಾಣಿಕವಾಗಿ ನಗುತ್ತ ಹೇಳಿದ, ‘ನುಣುಚಿಕೊಳ್ಳುವುದಕ್ಕೆ ನೋಡಿದೆ, ನಿನ್ನನ್ನ ದಾರಿ ತಪ್ಪಿಸಕ್ಕೆ ಆಗಲಿಲ್ಲ, ನೀನು ನೇರ ವಿಷಯಕ್ಕೇ ಬಂದುಬಿಟ್ಟೆ!’

‘ಈಗಲೂ ನುಣುಚಿಕೊಳ್ಳುತ್ತಲೇ ಇದ್ದೀಯ.’

‘ಅದರಲ್ಲೇನಿದೆ!’ ಅನ್ನುತ್ತ ಸ್ವಿದ್ರಿಗೈಲೋವ್ ಮನತೆರೆದು ನಕ್ಕ. ‘ಯುದ್ಧದಲ್ಲಿ ಪ್ರೀತಿಯಲ್ಲಿ ಏನು ಮಾಡಿದರೂ ಸರಿ ಅನ್ನುತಾರಲ್ಲಾ! ನುಣುಚಿಕೊಳ್ಳುವ ಆಟ ನ್ಯಾಯವಾದದ್ದೇ ಅಲ್ಲವಾ?… ಇರಲಿ. ನೀನೇ ನನ್ನ ಮಾತಿಗೆ ಅಡ್ಡಿ ಮಾಡಿದೆ. ಮತ್ತೆ ಹೇಳತೇನೆ, ಅವತ್ತು ತೋಟದಲ್ಲಿ ನಡೆದ ಘಟನೆ ನಡೆಯದೆ ಇದ್ದಿದ್ದರೆ ಯಾರಿಗೂ ಯಾವ ಥರದ ಕಿರಿಕಿರಿಯೂ ಆಗುತ್ತಿರಲಿಲ್ಲ. ನನ್ನ ಹೆಂಡತಿ ಮಾರ್ಫಾ ಪೆಟ್ರೋವ್ನಾ…’

‘ಮಾರ್ಫಾ ಪೆಟ್ರೋವ್ನಾ ಬೇಗ ಪ್ರಾಣ ಕಳಕೊಳ್ಳೋ ಹಾಗೆ ಮಾಡಿದ್ದು ನೀನೇ ಅಂತೆ?’ ರಾಸ್ಕೋಲ್ನಿಕೋವ್ ಒರಟಾಗಿ ಕೇಳಿದ
‘ಓಹೋ, ಅದು ನಿನ್ನ ಕಿವಿಗೂ ಬಿತ್ತೋ? ಬೀಳದೆ ಇರೋಕೆ ಹೇಗೆ ಸಾಧ್ಯ? ಈ ವಿಚಾರದಲ್ಲಿ ನಾನು ಬಚ್ಚಿಡಬೇಕಾದದ್ದು ಏನೂ ಇಲ್ಲ, ಮನಸ್ಸು ಸ್ವಚ್ಛವಾಗಿದೆ, ಏನು ಹೇಳಲಿ? ತಿಳೀತಿಲ್ಲ. ಇಷ್ಟೇ, ಆ ವಿಚಾರದಲ್ಲಿ ನಾನು ಭಯಪಡಬೇಕಾದ್ದು ಏನೂ ಇಲ್ಲ. ಕ್ರಮಬದ್ಧವಾದ ವಿಚಾರಣೆ ನಡೆಯಿತು. ನನ್ನ ಹೆಂಡತಿ ಭಾರೀ ಊಟ ಮುಗಿಸಿ, ತಕ್ಷಣ ಸ್ನಾನಮಾಡಿ, ವೈನು ಕುಡಿದದ್ದರಿಂದ ಅಪೋಪ್ಲೆಕ್ಸಿ ಆಗಿ ಜೀವ ಹೋಗಿದೆ. ಡಾಕ್ಟರು ಪರೀಕ್ಷೆ ಮಾಡಿ ಹಾಗಂತ ಹೇಳಿದರು… ನಾನೂ ಯೋಚನೆ ಮಾಡತ್ತಿದ್ದೆ,- ಹೀಗೆಲ್ಲ ಆಗುವುದರಲ್ಲಿ ನನ್ನ ಪಾಲೂ ಇರಬಹುದೇ, ಎಷ್ಟು? ಮನಸಿಗೆ ಕಿರಿಕಿರಿ ಆಗುವಹಾಗೆ ನಾನು ನಡಕೊಂಡು ಅವಳು ಪ್ರಾಣಕಳಕೊಂಡಳೋ ಅಂತ, ಇಲ್ಲಿಗೆ ರೈಲಿನಲ್ಲಿ ಬರುತ್ತ ತುಂಬ ಯೋಚನೆ ಮಾಡಿದೆ. ಕೊನೆಗೆ ಅವಳ ಸಾವಿನಲ್ಲಿ ನನ್ನ ಪಾಲು ಇಲ್ಲ ಅನ್ನಿಸಿತು.’

ರಾಸ್ಕೋಲ್ನಿಕೋವ್ ನಕ್ಕ.

‘ನಗುವುದಕ್ಕೇನಿದೆ ಅದರಲ್ಲಿ? ಕುದುರೆ ಸವಾರಿ ಮಾಡುವಾಗ ಬಳಸುತ್ತೇವಲ್ಲ ಅಂಥ ತೆಳ್ಳನೆ ಕಡ್ಡಿ ತಗೊಂಡು ಎರಡೇ ಎರಡು ಏಟು ಕೊಟ್ಟೆ. ಅವಳ ಮೈ ಮೇಲೆ ಗುರುತು ಕೂಡ ಬೀಳಲಿಲ್ಲ… ನನ್ನನ್ನ ಸಿನಿಕ ಅಂದುಕೋ ಬೇಡ. ನಾನು ಮೃಗದ ಹಾಗೆ ನಡೆದುಕೊಂಡೆ, ದುಷ್ಟ, ಇತ್ಯಾದಿ ಇತ್ಯಾದಿ ಎಲ್ಲಾ ನನಗೆ ಗೊತ್ತಿದೆ. ಹಾಗೇ, ಇದೂ ಗೊತ್ತು. ಏನೆಂದರೆ ನಾನು ಹೊಡೆದದ್ದು… ಹೇಗೆ ಹೇಳಲಿ… ನಾನು ಹೊಡೆದದ್ದು ನನ್ನ ಪ್ರೇಮಾವೇಶದ ಸಾಕ್ಷಿ ಅಂತ ಅವಳು ಖುಷಿಪಟ್ಟಿರಬಹುದಲ್ಲಾ? ನಿನ್ನ ಪ್ರೀತಿಯ ತಂಗಿಯ ವಿಚಾರವಾಗಿ ಇರುವ ಕಥೆಯನ್ನು ಕುಕ್ಕಿ, ಕಸಕಿ, ಕೊಡವಿ ಒಣಗಕ್ಕೆ ಹಾಕಿದ್ದಾಗಿತ್ತು. ಮಾರ್ಫಾ ಎರಡು ದಿನದಿಂದ ಮನೆಯಲ್ಲೇ ಇರಬೇಕಾಗಿ ಬಂದಿತ್ತು. ಟೌನಿಗೆ ಹೋಗುವುದಕ್ಕೆ ನೆಪ ಕೂಡ ಇರಲಿಲ್ಲ. ಟೌನಿನ ಜನಕ್ಕೆಲ್ಲ ಅವಳು ಹೇಳುವ ಕಾಗದದ ಕತೆ ಕೇಳಿ ಚಿಟ್ಟು ಹಿಡಿದಿತ್ತು (ಅವಳು ಮನೆ ಮನೆಗೆ ಹೋಗಿ ಕಾಗದ ಓದಿದ ಕತೆ ಕೇಳಿದ್ದೀಯ, ಅಲ್ಲವಾ?) ದೇವರು ವರ ಕೊಟ್ಟ ಅನ್ನುವ ಹಾಗೆ ನನ್ನ ಚಾವಟಿ ಏಟು ಬಿದ್ದಿತ್ತು! ಅವಳು ಮೊದಲು ಹೇಳಿದ ಮಾತು, ‘ಗಾಡಿಗೆ ಕುದುರೆ ಕಟ್ಟಿ’ ಅಂತ! ಅವಮಾನ ಮಾಡಿದರೆ ಹೆಂಗಸರಿಗೆ ಒಂದೊಂದು ಸಾರಿ ಖುಷಿ ಆಗತ್ತೆ, ಅದನ್ನ ತೋರಿಸದೆ ಕೋಪ ಮಾಡಿಕೊಳ್ಳತಾರೆ, ಅಷ್ಟೆ! ನಾನೀಗ ಅದನ್ನ ಹೇಳತಾ ಇಲ್ಲ. ಮನುಷ್ಯರೇ ಹಾಗೆ, ಅವಮಾನವಾದರೆ ಒಂದೊಂದು ಸಲ ಬಹಳ ಖುಷಿ ಪಡತಾರೆ. ಗಮನಿಸಿದ್ದೀಯಾ? ಆದರೆ ಹೆಂಗಸರಿಗೆ ಮಾತ್ರ ಅವಮಾನವೇ ಮನರಂಜನೆ, ಅವಮಾನವೇ ದಿನ ನಿತ್ಯದ ಆಹಾರ.’

ಎದ್ದು ಹೊರಟುಬಿಡಬೇಕು, ಈ ಭೇಟಿ ಮುಗಿಸಿಬಿಡಬೇಕು ಅನಿಸಿತ್ತು ರಾಸ್ಕೋಲ್ನಿಕೋವ್‍ ಗೆ. ಎಂಥದೋ ಕುತೂಹಲ, ಯಾವುದೋ ಮುನ್ನೆಚ್ಚರಿಕೆಯ ಲೆಕ್ಕಾಚಾರ ಅವನನ್ನು ತಡೆದು ನಿಲ್ಲಿಸಿತ್ತು.

‘ಜಗಳ ಆಡುವುದು ನಿನಗಿಷ್ಟವಾ?’ ಮನಸೆಲ್ಲೋ ಇಟ್ಟುಕೊಂಡು ರಾಸ್ಕೋಲ್ನಿಕೋವ್ ಕೇಳಿದ.

‘ಉಹ್ಞುಂ, ಇಲ್ಲ. ನಾನೂ ಮಾರ್ಫಾನೂ ಜಗಳ ಆಡತಾನೇ ಇರಲಿಲ್ಲ, ಚೆನ್ನಾಗಿ ಹೊಂದಿಕೊಂಡು ಬದುಕಿದೆವು,’

ಸ್ವಿದ್ರಿಗೈಲೋವ್ ಶಾಂತವಾಗಿ ಹೇಳಿದ. ನನ್ನ ಜೊತೆ ಸಮಾಧಾನವಾಗಿ ತೃಪ್ತಿಯಿಂದ ಬದುಕಿದ್ದಳು. ಈ ಏಳು ವರ್ಷದಲ್ಲಿ ಎರಡು ಸಾರಿ ಮಾತ್ರ ಚಾವಟಿ ಬಳಸಿದ್ದೆ (ಅಸ್ಪಷ್ಟ ಕಾರಣಕ್ಕೆ ಇನ್ನೊಂದು ಸಾರಿ ಬಳಸಿದ್ದು ಲೆಕ್ಕಕ್ಕಿಲ್ಲ, ಬಿಡು). ಮದುವೆಯಾಗಿ ಎರಡು ತಿಂಗಳಾದಮೇಲೆ ಎಸ್ಟೇಟಿಗೆ ಬಂದ ಹೊಸತರಲ್ಲಿ ಮೊದಲನೆಯ ಸಾರಿ, ಅವಳು ತೀರಿಕೊಳ್ಳುವ ಮೊದಲಿನ ಇನ್ನೊಂದು ಸಾರಿ. ನಾನೇನು ರಾಕ್ಷಸನೋ, ಗುಲಾಮರ ಧಣಿಯೋ ಪ್ರತಿಗಾಮಿಯೋ ಅಂದುಕೊಂಡಿದ್ದೀಯೇನು? ಹ ಹ್ಹ ಹ್ಹಾ… ಅಂದಹಾಗೆ, ರೋಡಿಯೋನ್ ರೊಮಾನೊವಿಚ್, ಕೆಲವು ವರ್ಷದ ಹಿಂದೆ, ವಾಕ್‍ ಸ್ವಾತಂತ್ರ್ಯ ಇದ್ದಾಗ ಪೇಪರುಗಳಲ್ಲೆಲ್ಲ ಬಂದಿತ್ತಲ್ಲ, ಯಾರೋ ಶ್ರೀಮಂತ, ಅವನ ಹೆಸರು ಮರೆತಿದೆ, ಅವನ ಸುದ್ದಿ ದೇಶದಾತ್ಯಂತ ಎಲ್ಲಾ ಪೇಪರಿನಲ್ಲಿ ಬಂದಿತ್ತು. ಅವನು ರೈಲಿನಲ್ಲಿ ಯಾರೋ ಜರ್ಮನ್ ಹೆಂಗಸನ್ನ ಹೊಡೆದಿದ್ದನಂತೆ… ಜ್ಞಾಪಕ ಇದೆಯಾ? ಅದೇ ವರ್ಷವೇ ‘ಯುಗದ ಅತಿರೇಕ’ ಅನ್ನುವ ಲೇಖನ ದಿ ಏಜ್ ನಲ್ಲಿ ಬಂದಿತ್ತು. (ಅದೇ, ಪುಷ್ಕಿನ್ ಬರೆದ ‘ಈಜಿಪ್ಟಿನ ರಾತ್ರಿಗಳು’ ಪುಸ್ತಕವನ್ನು ಸಾರ್ವಜನಿಕವಾಗಿ ಹೆಂಗಸೊಬ್ಬಳು ಓದಿದಳು ಅನ್ನುವ ಕಥೆ. ಎಂಥ ಕಪ್ಪು ಕಣ್ಣು! ಎಂಥ ಸೆಳೆತ! ಎಲ್ಲಿ ಹೋದವೋ ನಮ್ಮ ಯೌವನದ ದಿನಗಳು). ನನ್ನ ಅಭಿಪ್ರಾಯ ಇದು. ಹೆಂಗಸನ್ನು ಹೊಡೆದ ಮನುಷ್ಯನ ಬಗ್ಗೆ ನನಗೆ ಅಯ್ಯೋ ಪಾಪ ಅಂತೇನೂ ಅನ್ನಿಸಲ್ಲ. ಸಹಾನುಭೂತಿ ತೋರಿಸುವುದಕ್ಕೆ ಕಾರಣ ಎಲ್ಲಿದೆ? ಆದರೂ, ಒಂದೊಂದು ಸಾರಿ ಆ ಜರ್ಮನ್ ಹೆಂಗಸರಂಥವರು ಸಿಗುತ್ತಾರೆ, ಗಂಡಸರನ್ನ ಕೆಣಕತಾರೆ, ಈ ಮಾತನ್ನು ಪ್ರಗತಿಪರರೂ ಒಪ್ಪುತ್ತಾರೆ. ರೈಲಿನಲ್ಲಿ ನಡೆದ ಪ್ರಸಂಗವನ್ನು ಈ ದೃಷ್ಟಿಯಿಂದಲೂ ನೋಡಬೇಕು ಅಂತ ನನ್ನ ಅಭಿಪ್ರಾಯ. ಅದು ಮಾನವೀಯತೆ, ಹೌದೋ ಅಲ್ಲವೋ?

ಇಷ್ಟು ಹೇಳಿ ಸ್ವಿದ್ರಿಗೈಲೋವ್ ಯಾಕೋ ಮತ್ತೆ ನಕ್ಕ. ಈ ಮನುಷ್ಯ ಮನಸ್ಸಲ್ಲಿ ಏನೋ ಇಟ್ಟುಕೊಂಡು ಬಂದಿದಾನೆ, ಮನಸಿನಲ್ಲಿರುವ ಮಾತು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ ಅನ್ನಿಸಿತು ರಾಸ್ಕೋಲ್ನಿಕೋವ್‍ ಗೆ.

‘ಬೇರೆಯವರ ಹತ್ತಿರಾನೂ ಮಾತನಾಡಿ ಬಹಳ ದಿನ ಆಗಿರಬೇಕು, ಅಲ್ಲವಾ?’ ರಾಸ್ಕೋಲ್ನಿಕೋವ್ ಕೇಳಿದ.

‘ಹೆಚ್ಚು ಕಮ್ಮಿ ನಿಜ. ಅದಕ್ಕೇನೀಗ? ಪರಿಚಯದವನ ಹಾಗೆ ಮಾತಾಡುತ್ತೇನೆ ಅಂತಲಾ?’

‘ಬರೀ ಪರಿಚಯದವನ ಹಾಗಲ್ಲ, ಅತೀ ಪರಿಚಯದವನ ಹಾಗೆ ಮಾತಾಡುತ್ತಿದ್ದೀಯ.’

‘ನೀನು ನನ್ನ ಜೊತೆ ಒರಟಾಗಿ ಮಾತಾಡಿದ್ದರಿಂದ ನಾನು ಬೇಜಾರು ಮಾಡಿಕೊಂಡಿಲ್ಲ ಅಂತ ಹೀಗನ್ನುತ್ತಿದ್ದೀಯಾ?… ಅಲ್ಲಾ, ಬೇಜಾರು ಯಾಕೆ ಮಾಡಿಕೊಳ್ಳಲಿ? ನೀನು ಕೇಳಿದೆ, ನಾನು ಹೇಳಿದೆ, ಅಷ್ಟೇ.’ ಅವನು ತೀರ ಸರಳ ಮನಸ್ಸಿನ ಉತ್ತರ ಕೊಟ್ಟ.

‘ದೇವರ ದಯ, ನನಗೀಗ ಯಾವುದರಲ್ಲೂ ಅಂಥಾ ವಿಶೇಷ ಆಸಕ್ತಿ ಇಲ್ಲ,’ ಸ್ವಲ್ಪ ವಿಷಾದದ ದನಿಯಲ್ಲಿ ಮಾತು ಮುಂದುವರೆಸಿದ.

‘ಈಗಂತೂ ನನಗೆ ಅಂಥಾ ಕೆಲಸವೂ ಇಲ್ಲ… ಆದರೂ, ನಾನು ನಿನ್ನ ಮನಸ್ಸನ್ನ ನನ್ನ ಕಡೆ ಮಾಡಿಕೊಳ್ಳೋಕೆ ಬಂದಿದೀನಿ ಅಂತ ನೀನು ಅಂದುಕೊಳ್ಳಬಹುದು. ನಿಜ. ಯಾಕೆಂದರೆ ನನ್ನ ಕೆಲಸ ಇರೋದು ನಿನ್ನ ತಂಗಿ ಹತ್ತಿರ. ಅದನ್ನ ಆಗಲೇ ಹೇಳಿದೇನೆ. ನಿಜ ಹೇಳಬೇಕು ಅಂದರೆ ನನಗೆ ಬೋರಾಗಿದೆ. ಅದರಲ್ಲೂ ಕಳೆದ ಮೂರು ದಿನ ತುಂಬಾನೇ ಬೋರಾಗಿದೆ. ಹಾಗಾಗಿ ನಿನ್ನ ಕಂಡು ಬಹಳ ಸಂತೋಷ ಆಯಿತು… ಸಿಟ್ಟು ಮಾಡಿಕೋಬೇಡ, ರೋಡಿಯಾನ್. ಯಾಕೋ ಏನೋ ನೀನು ಭಯಂಕರ ವಿಚಿತ್ರ ಮನುಷ್ಯ ಅನಿಸತ್ತೆ. ನಿನಗೆ ಇಷ್ಟ ಆಗತ್ತೊ ಬಿಡತ್ತೊ ಗೊತ್ತಿಲ್ಲ, ಈಗ, ಅಂದರೆ ಈ ಕ್ಷಣ, ಈ ನಿಮಿಷ ಅಂತಲ್ಲ… ಒಟ್ಟಾರೆಯಾಗಿ… ಸರಿ, ಸರಿ, ನಿಲ್ಲಿಸತೇನೆ, ಮಾತು ನಿಲ್ಲಿಸತೇನೆ. ನೀನು ಅಂದುಕೊಳ್ಳುವ ಹಾಗೆ ನಾನು ಕರಡೀ ಥರದವನಲ್ಲಾ. ನಿಲ್ಲಿಸತೇನೆ. ಸಿಟ್ಟುಮಾಡಿಕೋಬೇಡ!

ರಾಸ್ಕೋಲ್ನಿಕೋವ್ ಮುನಿಸಿನಿಂದ ನೋಡಿದ.

‘ನೀನು ಕರಡಿ ಅಲ್ಲವೇ ಅಲ್ಲ. ಮೇಲು ವರ್ಗದವನು, ನಿನಗೇ ಬೇಕು ಅನಿಸಿದರೆ ಒಂದೊಂದು ಸಾರಿ ಸೌಜನ್ಯದಿಂದ ಕೂಡ ನಡಕೊಳ್ಳುತ್ತೀಯ ಅನಿಸತ್ತೆ.’

‘ನಿಜ ಹೇಳಬೇಕು ಅಂದರೆ ನನ್ನ ಬಗ್ಗೆ ಯಾರಿಗೆ ಏನನ್ನಿಸತ್ತೋ ಅದು ನನಗೆ ಬೇಕಾಗಿಲ್ಲ,’ ಸ್ವಿದ್ರಿಗೈಲೋವ್ ಸ್ವಲ್ಪ ಉದ್ಧಟನಾಗಿಯೇ ಹೇಳಿದ. ಮತ್ತೆ ನಗುತ್ತ, ‘ಹಾಗಾಗಿ ಸ್ವಲ್ಪ ಗಮಾರನ ಥರ ಯಾಕಿರಬಾರದು? ಈ ವಾತಾವರಣಕ್ಕೂ ಹೊಂದತ್ತೆ, ನನ್ನ ಸ್ವಭಾವಕ್ಕೂ ಹೊಂದತ್ತೆ…ʼ ಅಂದ.

‘ನಿನ್ನ ಪರಿಚಯದವರು ಇಲ್ಲಿ ಬಹಳ ಜನ ಇದಾರೆ ಅಂತ ಕೇಳಿದೇನೆ. ‘ಜನಬಳಕೆ’ ಇಲ್ಲದವನೂ ಅಲ್ಲ. ಹಾಗಿದ್ದ ಮೇಲೆ ಏನೂ ಉದ್ದೇಶ ಇಲ್ಲದೆ ನನ್ನ ಹತ್ತಿರ ಬರುವವನಲ್ಲ ನೀನು,’ ಅಂದ ರಾಸ್ಕೋಲ್ನಿಕೋವ್.

ಸ್ವಿದ್ರಿಗೈಲೋವ್ ಮುಖ್ಯ ವಿಷಯಕ್ಕೆ ಉತ್ತರ ಕೊಡದೆ, ‘ನಿಜ. ಪರಿಚಯಸ್ಥರು ಬಹಳ ಇದಾರೆ. ಆಗಲೇ ಕೆಲವರನ್ನ ಮಾತಾಡಿಸಿ ಬಂದೆ. ನಾನು ಬಂದು ಮೂರು ದಿನ ಆಯಿತಲ್ಲ. ನಾನು ಜನರನ್ನ ಬಲ್ಲೆ, ಜನ ನನ್ನನ್ನು ಬಲ್ಲರು. ಚೆನ್ನಾದ ಬಟ್ಟೇನೂ ತೊಟ್ಟಿದೇನೆ. ನನ್ನ ಯಾರೂ ಬಡವ ಅಂದುಕೊಂಡಿಲ್ಲ, ರೈತ ಸುಧಾರಣೆ ಕಾನೂನೂ ನನ್ನ ಮುಟ್ಟಲಿಲ್ಲ. ನನ್ನ ಹತ್ತಿರ ಇರುವುದೆಲ್ಲ ಅರಣ್ಯ ಪ್ರದೇಶ, ಕೆರೆ, ಕೆರೆ ಬಯಲುಗಳು. ಹಾಗಾಗಿ ಆದಾಯ ಕಡಿಮೆ ಆಗಲಿಲ್ಲ. ಆದರೆ… ವಿವರಗಳಿಗೆ ಹೋಗಲ್ಲ. ಮೊದಲೇ ನನಗೆ ಇದೆಲ್ಲ ಸಾಕಾಗಿ ಹೋಗಿತ್ತು. ಈ ಊರಲ್ಲಿ ಮೂರು ದಿನದಿಂದ ಅಲೆದಾಡತಾ ಇದೀನಿ. ಯಾರೂ ಸಿಕ್ಕಿಲ್ಲ… ಎಂಥಾ ಸಿಟಿ ಇದು! ಇಂತ ಊರು ಹೇಗ ಕಟ್ಟಿದೆವೋ ಏನೋ! ಕಾರಕೂನರ ಊರು, ಪಾದ್ರಿ ಸ್ಕೂಲುಗಳ ಊರು! ಎಂಟು ವರ್ಷದ ಹಿಂದೆ ಈ ಊರಲ್ಲಿ ಅಡ್ಡಾಡುವಾಗ ನಾನು ಏನೂ ಗಮನಿಸಿರಲಿಲ್ಲ.… ಈಗ ಏನಿದ್ದರೂ ಅನಾಟಮಿನ ಮಾತ್ರ ನಂಬತೇನೆ, ದೇವರಾಣೆ!’

‘ಅನಾಟಮಿ?’

‘ಈ ರಾಜಕೀಯದ ಕ್ಲಬ್ಬುಗಳು, ಈ ದುಸ್ಸಾತ್ ಹೋಟೆಲುಗಳು, ಸಮುದ್ರಕ್ಕೆ ಚಾಚಿಕೊಂಡಿರುವ ನಿಮ್ಮ ‘ಪಾಯಿಂಟ್‍’ಗಳು ಈ ಪ್ರಗತಿಯ ಬಗ್ಗೆ ನಿಮ್ಮ ಕೂದಲು ಸೀಳುವ ಚರ್ಚೆಗಳು ಇವಕ್ಕೂ ನನಗೂ ಸಂಬಂಧ ಇಲ್ಲ. ಅಲ್ಲದೆ ಇಸ್ಪೀಟು ಪಂಟರು ಯಾವನಿಗೆ ಬೇಕು?’ ಅವನು ವಿಷಯಕ್ಕೆ ಬರಲೇ ಇಲ್ಲ.

‘ನೀನೂ ಪಂಟರು?’

‘ಮತ್ತಿನ್ನೇನು?ʼ

‘ನೀನೂ ಅದೇ ಮೂರೆಲೆ ಠಕ್ಕ?’

‘ಮತ್ತಿನ್ನೇನು? ನಮ್ಮದೊಂದು ದೊಡ್ಡ ಗುಂಪಿತ್ತು, ಎಂಟು ವರ್ಷದ ಹಿಂದೆ. ರಶಿಯದ ಭಾರೀ ಕುಳ, ಗೌರವಸ್ಥರು, ಸಾಹುಕಾರರು, ಕವಿಗಳು, ಬಂಡವಾಳಗಾರರು, ಹೀಗೆ ಎಲ್ಲಾರೂ ಅದರಲ್ಲಿದ್ದರು. ಒಟ್ಟಿಗೆ ಕಾಲ ಕಳೆಯುತಿದ್ದೆವು, ಸಾಮಾನ್ಯವಾಗಿ ನಮ್ಮ ರಶಿಯನ್ ಸಮಾಜದಲ್ಲಿ ಅತ್ಯಂತ ಸಭ್ಯವಾಗಿ ವರ್ತಿಸುವವರು ಅಂದರೆ ಎಲೆ ಆಟದಲ್ಲಿ ಸೋತವರೇ. ಗಮನಿಸಿದ್ದೆಯಾ ಅದನ್ನ? ನಾನು ನಮ್ಮ ಹಳ್ಳಿ ಎಸ್ಟೇಟಿಗೆ ಹೋದಮೇಲಷ್ಟೆ ಮರ್ಯಾದೆಗೆ ಗಮನಕೊಡದೆ ಹಾಳಾಗಿದ್ದು. ನಾನು ಸಾಲ ತೀರಿಸಲಿಲ್ಲ ಅಂತ, ಆ ಗ್ರೀಕರವನು ಮಾಡಿದ ತರಲೆ ಕೂಡ ಸೇರಿಕೊಂಡು ನನ್ನ ಜೈಲಿಗೆ ಹಾಕಿದರು. ಆಗ ಮಾರ್ಫಾ ಪೆಟ್ರೋವ್ನಾ ಬಂದಳು, ಚೌಕಾಶಿಮಾಡಿದಳು, ಮೂವತ್ತು ಸಾವಿರ ಬೆಳ್ಳಿ ನಾಣ್ಯ ಕೊಟ್ಟು ನನ್ನ ಬಿಡಿಸಿದಳು (ನನ್ನ ಸಾಲ ಒಟ್ಟು ಇದ್ದದ್ದು ಎಪ್ಪತ್ತು ಸಾವಿರ). ನಾನು ಅವಳನ್ನ ಕಾನೂನು ಪ್ರಕಾರ ಮದುವೆ ಮಾಡಿಕೊಂಡೆ. ಮದುವೆ ಆದ ತಕ್ಷಣ ಅವಳು ನನ್ನನ್ನ ಯಾವುದೋ ಅಪೂರ್ವ ನಿಧಿ ಅನ್ನುವ ಹಾಗೆ ಅವಳ ಎಸ್ಟೇಟಿಗೆ ಕರಕೊಂಡು ಹೋದಳು. ವಯಸಿಲ್ಲಿ ಅವಳು ನನಗಿಂತ ಐದು ವರ್ಷ ದೊಡ್ಡವಳು. ನನ್ನ ಮೇಲೆ ಅವಳಿಗೆ ತುಂಬ ಪ್ರೀತಿ. ಏಳು ವರ್ಷ ನಾನು ಎಸ್ಟೇಟು ಬಿಟ್ಟು ಕದಲಲಿಲ್ಲ. ಮರೆಯ ಬೇಡ… ಅವಳ ಹತ್ತಿರ ಪತ್ರ ಇತ್ತು, ಅದಕ್ಕೆ ಸಾಕ್ಷಿನೂ ಹಾಕಿಸಿದ್ದಳು. ಮೂವತ್ತು ಸಾವಿರಕ್ಕೆ ಸಂಬಂಧಪಟ್ಟದ್ದು. ನಾನೇನಾದರೂ ಕೆಮ್ಮಿದರೆ, ಕೊಸರಾಡಿದರೆ, ಎದುರು ಮಾತಾಡಿದರೆ ಆ ಪತ್ರ ಬಳಸಿಕೊಂಡು ಸೀದಾ ಜೈಲಿಗೆ ಕಳಿಸಿಬಿಡಬಹುದಾಗಿತ್ತು. ಇಂಥ ವಿಚಾರದಲ್ಲಿ ಹೆಂಗಸರು ಹಿಂದೆ ಮುಂದೆ ನೋಡಲ್ಲ.’

‘ಆ ಪತ್ರ ಇರದಿದ್ದರೆ ತಪ್ಪಿಸಿಕೊಂಡು ಓಡಿಹೋಗುತಿದ್ದೆಯಾ?’

‘ಹಾಗೆ ಕೇಳಿದರೆ ಏನು ಹೇಳಲಿ? ಆ ಪತ್ರ ನನ್ನೇನೂ ಹಿಡಿದು ಕಟ್ಟಿಹಾಕಿರಲಿಲ್ಲ. ನನಗೇನೇ ಎಲ್ಲೂ ಹೋಗಬೇಕು ಅನ್ನಿಸತಿರಲಿಲ್ಲ. ನಾನು ಬೋರ್ ಆಗಿರೋದು ನೋಡಿ ಮಾರ್ಫಾನೇ ಸ್ವತಃ, ‘ಬೇರೆ ದೇಶಕ್ಕೆ ಹೋಗಿ ಬಾ’ ಅಂತ ಎರಡು ಸಾರಿ ಅಂದಳು. ಯಾಕೆ ಹೋಗಬೇಕು? ಮೊದಲೂ ನಾನು ಬೇರೆ ದೇಶಗಳಿಗೆ ಹೋಗಿದ್ದೆ, ಎದೇಲ್ಲೆಲ್ಲ ಒಂಥರಾ ಆಗಿ ಬೇಜಾರಾಗೋಗತ್ತೆ. ವಿಶೇಷ ಏನೇನೂ ಇಲ್ಲ. ಅದೇ ಸೂರ್ಯೋದಯ, ಅದೇ ನೇಪಲ್ಸ್ ಕೊಲ್ಲಿ, ಅದೇ ಸಮುದ್ರ, ನೋಡಿದರೆ ದುಃಖ ಆಗತ್ತೆ. ಬೇರೆ ದೇಶಕ್ಕೆ ಹೋದಾಗಲೆಲ್ಲ ಒಂದಲ್ಲ ಒಂದು ಕಾರಣಕ್ಕೆ ದುಃಖ ಆಗತ್ತಲ್ಲ ಅದನ್ನ ಸಹಿಸಕ್ಕೆ ಆಗಲ್ಲ. ನಮ್ಮೂರು, ನಮ್ಮ ದೇಶವೇ ಸರಿ. ಕೊನೇ ಪಕ್ಷ ಇಲ್ಲಿ ಪ್ರತಿಯೊಬ್ಬರಲ್ಲೂ ತಪ್ಪು ಹುಡುಕಿ ಹುಡುಕಿ ಬೈಯಬಹುದು, ನಾವೇ ಸರಿ ಅಂತ ವಾದ ಮಾಡಿ ಗೆಲ್ಲಬಹುದು. ಈವಾಗ ನನಗೆ ಉತ್ತರ ಧೃವದ ಸಾಹಸ ಯಾತ್ರೆಗೆ ಹೋಗತಾರಲ್ಲ ಅವರ ಜೊತೆ ಇರಬೇಕು ಅನ್ನಿಸತ್ತೆ. ಯಾಕೆ ಗೊತ್ತ, ಕುಡಿದಾಗ ನಾನು ಬಹಾಳ ಕೆಟ್ಟವನು. ನನಗೆ ಈಗ ಇರುವ ಕೆಲಸ ಕುಡಿಯುವುದೊಂದೇ. ತುಂಬ ಪ್ರಯತ್ನಪಟ್ಟಿದೇನೆ, ಕುಡಿಯುವುದನ್ನು ಬಿಡುವುದಕ್ಕೆ ಉತ್ತರ ಧೃವಕ್ಕೆ ಹೋಗಬೇಕು. ಅಲ್ಲಾ, ಈ ಭಾನುವಾರ ಯೂಸುಪೋವ್ ಗಾರ್ಡನ್‍ ನಿಂದ ದೊಡ್ಡ ಬೆಲೂನಲ್ಲಿ ಕೂತು ಬೆರ್ಗ್ ಹಾರತಾನಂತೆ, ಜೊತೆಗೆ ಬರುವವರಿದ್ದರೆ ಬನ್ನಿ, ಅಂತ ಕರೆದಿದಾನಂತೆ, ಬೆಲೂನಿನಲ್ಲಿ ಹಾರುವುದಕ್ಕೆ ಚಾರ್ಜು ಕೊಡಬೇಕಂತೆ,- ನಿಜಾನಾ ಅದು?’

‘ಯಾಕೇ? ನೀನೂ ಅವ ಜೊತೆ ಹೋಗಬೇಕೇನು?’

‘ಇಲ್ಲಪ್ಪಾ… ನಾನು?… ಅಲ್ಲಾ, ಯಾಕೆ ಹೋಗಬಾರದು…’ ಅನ್ನುತ್ತ ಬೆಲೂನಿನಲ್ಲಿ ಹಾರುವ ಯೋಚನೆಯಲ್ಲಿ ಮುಳುಗಿದ.
‘ನಿಜವಾಗಲೂ ಸೀರಿಯಸ್ಸಾಗಿದಾನಾ, ಏನು ಬೇಕು ಇವನಿಗೆ?’ ರಾಸ್ಕೋಲ್ನಿಕೋವ್ ಅಂದುಕೊಂಡ.

‘ಇಲ್ಲ, ಪತ್ರ ನನಗೆ ಅಡ್ಡಿಮಾಡಲಿಲ್ಲ,’ ಸ್ವಿದ್ರಿಗೈಲೋವ್ ಯೋಚನೆ ಮಾಡುತ್ತ ಮಾತಾಡಿದ ‘ನಾನು ಸ್ವಂತ ಇಚ್ಛೆಯಿಂದಲೇ ಹಳ್ಳಿಯ ಎಸ್ಟೇಟಿನಲ್ಲಿದ್ದೆ. ಹೋದವರ್ಷ, ನನ್ನ ಹುಟ್ಟಿದ ಹಬ್ಬದ ದಿನ ಮಾರ್ಫಾ ಪೆಟ್ರೋವ್ನಾ ಆ ಪತ್ರ ವಾಪಸ್‍ ಕೊಟ್ಟಳು, ಜೊತೆಗೆ ಸಾಕಷ್ಟು ದುಡ್ಡೂ ಕೊಟ್ಟಳು. ‘ನೋಡು, ನಾನು ನಿನ್ನ ಎಷ್ಟೊಂದು ನಂಬುತ್ತೇನೆ, ಗೊತ್ತಾಯಿತಾ.’ ಅಂದಳು. ಇದೇ ಮಾತು ಹೇಳಿದಳು! ನಂಬಲ್ಲವಾ? ಕೇಳು—ಸುತ್ತಲ ಹಳ್ಳಿಗಳಲ್ಲಿ ನಾನು ಜಮೀನ್ದಾರ ಅನ್ನುವ ಹೆಸರಿತ್ತು, ಎಲ್ಲಾರೂ ಗೌರವ ಕೊಡುತ್ತಾ ಇದ್ದರು. ಪೋಸ್ಟಿನಲ್ಲಿ ಪುಸ್ತಕ ತರಿಸಿಕೊಳ್ಳುತ್ತಾ ಇದ್ದೆ. ಮಾರ್ಫಾ ಮೊದಮೊದಲು ಮೆಚ್ಚಿಕೊಂಡಳು, ಆಮೇಲಾಮೇಲೆ ನಾನು ಓದಿ ಓದಿ ಮರುಳಾಗತೇನೆ ಅಂತ ಭಯಪಟ್ಟಳು.’

‘ಮಾರ್ಫಾನ ಬಹಳ ಮನಸ್ಸಿಗೆ ಹಚ್ಚಿಕೊಂಡಿದ್ದೀಯಾ?’

‘ನಾನಾ? ಇರಬಹುದು… ಇರಬಹುದು. ಅಂದಹಾಗೆ, ನೀನು ದೆವ್ವಗಳನ್ನ ನಂಬುತ್ತೀಯಾ?’

‘ಎಂಥಾ ದೆವ್ವ?’

‘ಮಾಮೂಲಿ ದೆವ್ವ. ಎಂಥಾ ದೆವ್ವ ಅಂದರೆ ಏನರ್ಥ?’

‘ನಿನ್ನ ಖುಷಿ ಮಾಡಕ್ಕೆ ಇಲ್ಲಾ ಅಂತೀನಿ, ನಂಬಲ್ಲಾ ಅಂತಲ್ಲ…’

‘ದೆವ್ವ ನಿನ್ನ ಹತ್ತಿರ ಬಂದಿದ್ದವಾ?

ಸ್ವಿದ್ರಿಗೈಲೋವ್ ವಿಚಿತ್ರವಾಗಿ ನೋಡಿದ ಅವನನ್ನ.

‘ಮಾರ್ಫಾ ಇದ್ದಳಲ್ಲ, ಅವಳು ಸತ್ತಮೇಲೆ ಅಯ್ಯೋ ಪಾಪ ಅಂದುಕೊಂಡು ನನ್ನ ನೋಡಕ್ಕೆ ಬಂದಿದ್ದಳು,’ ಬಾಯಿ ಸೊಟ್ಟಗೆ ಮಾಡಿ ಒಂದು ಥರಾ ನಕ್ಕ.

‘ಅಯ್ಯೋ ಪಾಪ ಅಂತ ಅಂದರೇ?’

‘ಮೂರು ಸಾರಿ ಬಂದಿದ್ದಳು. ಅವಳ ಸಂಸ್ಕಾರ ಮಾಡಿ ಸ್ಮಶಾನದಿಂದ ವಾಪಸ್ಸು ಒಂದು ಗಂಟೆಯೊಳಗೆ ಬಂದಳು. ಅದು ಮೊದಲನೆ ಸಾರಿ. ನಾನು ಇಲ್ಲಿಗೆ ಹೊರಡುವ ಒಂದು ದಿನ ಮೊದಲು ಇನ್ನೊಂದು ಸಾರಿ, ಪ್ರಯಾಣದಲ್ಲಿ, ಬೆಳಗಿನ ಜಾವ ಮಲಯ ವಿಶೇರ ಸ್ಟೇಶನ್ನಿಗೆ ಬಂದಿದ್ದಳು. ಮೂರನೆ ಸಾರಿ ಬಂದಿದ್ದು ಎರಡು ಗಂಟೆ ಮೊದಲು, ನನ್ನ ರೂಮಿನಲ್ಲಿ ಒಬ್ಬನೇ ಇದ್ದಾಗ.’

‘ಎಚ್ಚರವಾಗಿದ್ದೆಯಾ?’

‘ಎಚ್ಚರ ಪೂರಾ ಇತ್ತು. ಅವಳು ಮೂರು ಸಾರಿ ಬಂದಾಗಲೂ ಎಚ್ಚರವಾಗೇ ಇದ್ದೆ. ಬರುತ್ತಾಳೆ, ನಾಲ್ಕು ಮಾತು ಆಡುತ್ತಾಳೆ, ಬಾಗಿಲಿಂದಾಚೆ ಹೊರಟು ಹೋಗತಾಳೆ.’

‘ಇಂಥಾದ್ದೇನೋ ಆಗುತ್ತಿರಬೇಕು ನಿನಗೆ ಅಂತ ನನಗೆ ಯಾಕೋ ಅನಿಸಿತು’ ರಾಸ್ಕೋಲ್ನಿಕೋವ್ ತಟ್ಟನೆ ಅಂದ, ತಕ್ಷಣವೇ ಹಾಗೆ ಯಾಕೆ ಹೇಳಿದೆ ಎಂದು ಆಶ್ಚರ್ಯಪಟ್ಟ. ಬಹಳ ಉದ್ವಿಗ್ನನಾಗಿದ್ದ.

‘ಹೌ-ದಾ-!’ ಸ್ವಿದ್ರಿಗೈಲೇವವ್ ಆಶ್ಚರ್ಯಪಟ್ಟ. ‘ಹಾಗೆ ಅನ್ನಿಸಿತ್ತಾ? ನಮ್ಮಿಬ್ಬರಿಗೂ ಹೋಲಿಕೆ ಇದೆ ಅನ್ನಲಿಲ್ಲವಾ ನಾನು! ಹ್ಞಾಂ?’

‘ಹಾಗೆ ಹೇಳಲೇ ಇಲ್ಲ!’ ರಾಸ್ಕೋಲ್ನಿಕೋವ್ ಸಿಟ್ಟಿನಲ್ಲಿ ಅಂದ.

‘ಹೇಳಲಿಲ್ಲವಾ?’

‘ಇಲ್ಲಾ!’

‘ಹೇಳಿದೆ ಅಂದುಕೊಂಡಿದ್ದೆ. ಆಗಲೇ ನಾನು ಬಂದೆನಲ್ಲ, ನೀನು ಕಣ್ಣು ಮುಚ್ಚಿಕೊಂಡು ಮಲಗಿದ್ದ ಥರ ಆಟ ಕಟ್ಟಿದ್ದು ನೋಡಿದೆನಲ್ಲಾ, ಆಗ ‘ಇವನು ನನ್ನ ಥರಾನೇ!’ ಅಂದುಕೊಂಡೆ.’

‘ನಿನ್ನ ಥರಾನೇ ಅಂದರೆ ಏನರ್ಥ?’ ರಾಸ್ಕೋಲ್ನಿಕೋವ್ ಜೋರಾಗಿ ಕೇಳಿದ.

‘ಏನು ಅಂದರೆ? ಏನೋ ಗೊತ್ತಿಲ್ಲಪ್ಪಾ…’ ಸ್ವಿದ್ರಿಗೈಲೋವ್ ಗೊಣಗಿದ, ಅವನಿಗೇ ಗಲಿಬಿಲಿಯಾಗಿತ್ತು..

ಒಂದೆರಡು ಕ್ಷಣ ಇಬ್ಬರೂ ಮೌನವಾಗಿದ್ದರು. ಕಣ್ಣರಳಿಸಿ ಒಬ್ಬರನ್ನೊಬ್ಬರು ನೋಡಿಕೊಂಡರು.

‘ನಾನ್ಸೆನ್‍!’ ರಾಸ್ಕೋಲ್ನಿಕೋವ್ ಚಡಪಡಿಸಿದ. ‘ಅವಳು ಬಂದಾಗ ಏನು ಹೇಳುತ್ತಾಳೆ?’ ಅಂದ.

ನನ್ನ ಯಾರೂ ಬಡವ ಅಂದುಕೊಂಡಿಲ್ಲ, ರೈತ ಸುಧಾರಣೆ ಕಾನೂನೂ ನನ್ನ ಮುಟ್ಟಲಿಲ್ಲ. ನನ್ನ ಹತ್ತಿರ ಇರುವುದೆಲ್ಲ ಅರಣ್ಯ ಪ್ರದೇಶ, ಕೆರೆ, ಕೆರೆ ಬಯಲುಗಳು. ಹಾಗಾಗಿ ಆದಾಯ ಕಡಿಮೆ ಆಗಲಿಲ್ಲ. ಆದರೆ… ವಿವರಗಳಿಗೆ ಹೋಗಲ್ಲ.

‘ಅವಳಾ? ಏನೇನೋ ಕೆಲಸಕ್ಕೆ ಬರದ ವಿಚಾರ ಮಾತಾಡತಾಳೆ.- ಆಶ್ಚರ್ಯ ಆಗತ್ತಯ್ಯಾ ಅವಳನ್ನ ನೋಡಿದರೆ—ಅದಕ್ಕೇ ನನಗೆ ಅವಳ ಮೇಲೆ ಸಿಟ್ಟು ಬರತ್ತೆ. ಅವಳು ಮೊದಲ ಸಾರಿ ಬಂದಾಗ ನನಗೆ ಬಹಳ ದಣಿವಾಗಿತ್ತು, ಅಂತ್ಯಸಂಸ್ಕಾರದ ಪೂಜೆ ಪ್ರಾರ್ಥನೆ, ಊಟ, ಗೊತ್ತಲ್ಲ—ಕೊನೆಗೆ ನಾನೊಬ್ಬನೇ ನನ್ನ ಸ್ಟಡಿರೂಮಿನಲ್ಲಿ ಉಳಿದೆ. ಸಿಗಾರ್ ಹಚ್ಚಿಕೊಂಡು ಯೋಚನೆ ಮಾಡತಿದ್ದೆ, ಬಾಗಿಲ ಹತ್ತಿರ ಬಂದಳು. ‘ಏನಿದೆಲ್ಲ ರಗಳೆ, ಊಟದಮನೆಯ ಗಡಿಯಾರಕ್ಕೆ ಕೀ ಕೊಟ್ಟೇ ಇಲ್ಲ ನೀನು,’ ಅಂದಳು. ನಿಜ ಏನೆಂದರೆ ಮದುವೆಯಾದ ಮೇಲೆ ಏಳು ವರ್ಷ ಪ್ರತಿ ವಾರವೂ ನಾನೇ ಅದಕ್ಕೆ ಕೀ ಕೊಡತಿದ್ದೆ. ಅಕಸ್ಮಾತ್ ಮರೆತರೆ ಅವಳೇ ಜ್ಞಾಪಿಸುತ್ತಿದ್ದಳು. ಮಾರನೆ ದಿನ ಇಲ್ಲಿಗೆ ಹೊರಟಿದ್ದೆ. ಬೆಳಗಿನ ಜಾವ ಎದ್ದು ಸ್ಟೇಶನ್ನಿಗೆ ನಡಕೊಂಡು ಬಂದೆ. ರಾತ್ರಿಯೆಲ್ಲಾ ತೂಕಡಿಸುತ್ತಿದ್ದೆ. ಮೈ ನೋವು. ಕಣ್ಣಲ್ಲಿನ್ನೂ ನಿದ್ದೆ ಇತ್ತು. ಕಾಫಿ ಕುಡಿದಿದ್ದೆ. ತಲೆ ಎತ್ತಿ ನೋಡಿದೆ—ಮಾರ್ಫಾ ತಟ್ಟಂತ ಬಂದು ನನ್ನ ಪಕ್ಕ ಕೂತಳು. ಕೈಯಲ್ಲಿ ಇಸ್ಪೀಟು ಪ್ಯಾಕು ಇತ್ತು. ‘ನಿನ್ನ ಪ್ರಯಾಣ ಹೇಗಿರತ್ತೆ, ಎಲೆ ನೋಡಿ ಭವಿಷ್ಯ ಹೇಳಲಾ?’ ಅಂದಳು. ಇಸ್ಪೀಟಿನ ಎಲೆ ನೋಡಿ ಭವಿಷ್ಯ ಹೇಳುವುದು ಚೆನ್ನಾಗಿ ಕಲಿತಿದ್ದಳು. ‘ಹೇಳು,’ ಅನ್ನಲಿಲ್ಲ ಅಂತ ಈಗಲೂ ಬೇಜಾರಿದೆ, ಭಯವಾಯಿತು, ಓಡಿದೆ. ಎಲ್ಲಾರೂ ಓಡುತ್ತಾ ಇದ್ದರು. ರೈಲು ಬರುವ ಬೆಲ್ ಬಾರಿಸುತ್ತಿತ್ತು.

ಆಮೇಲೆ, ಇವತ್ತು, ಊಟದಿಂದ ಹೊಟ್ಟೆ ಭಾರವಾಗಿ ಸುಮ್ಮನೆ ಕೂತು ಸಿಗರೇಟು ಸೇದತಾ ಇದ್ದೆ. ಮಾರ್ಫಾ ಮತ್ತೆ ಬಂದಳು. ಹಸಿರು ಬಣ್ಣದ, ತುಂಬ ಉದ್ದನೆಯ ರೇಶಿಮೆ ಗೌನು ತೊಟ್ಟಿದ್ದಳು. ‘ಗುಡ್ ಮಾರ್ನಿಂಗ್. ಹೇಗಿದೆ ನನ್ನ ಹೊಸ ಗೌನು? ನಿನಗೆ ಇಷ್ಟ ಆಯಿತಾ? ಅನಿಸ್ಕಾ ಯಾವತ್ತೂ ಹೀಗೆ ಹೊಲಿಯಕ್ಕಾಗಲ್ಲ,’ ಅಂದಳು ಅನಿಸ್ಕಾ ನಮ್ಮೂರಿನ ದರ್ಜಿ, ಊಳಿಗದಾಳುಗಳ ಮನೆಯವಳು, ಮಾಸ್ಕೋದಲ್ಲಿ ಹೊಲಿಗೆ ಕಲಿತಿದ್ದಳು, ಮುದ್ದಾಗಿದ್ದಳು.. ಮಾರ್ಫಾ ನನ್ನೆದುರಿಗೆ ನಿಂತಿದ್ದಳು, ಅತ್ತ ತಿರುಗಿ, ಇತ್ತ ತಿರುಗಿ ಕನ್ನಡಿಯಲ್ಲಿ ನೋಡಿಕೊಳ್ಳುತ್ತಿದ್ದಳು. ಅವಳ ಗೌನು ನೋಡಿದೆ, ಅವಳ ಮುಖ ನೋಡಿದೆ. ‘ಮಾರ್ಫಾ, ಇಂಥ ಸಣ್ಣ ವಿಷಯಕ್ಕೆ ನನ್ನ ಹತ್ತಿರ ಬಂದು ತೊಂದರೆ ಕೊಡತೀಯಲ್ಲಾ ಯಾಕೆ?’ ‘ದೇವರೇ, ನಾನು ಬರೋದು ಇಷ್ಟ ಆಗಲ್ಲವಾ ನಿನಗೆ, ಡಿಯರ್? ರೇಗತಾ ಇದೀಯಲ್ಲ?’ ಅಂದಳು. ಅವಳನ್ನ ಇನ್ನಷ್ಟು ರೇಗಿಸಬೇಕು ಅಂತ, ‘ಮಾರ್ಫಾ ನಾನು ಮದುವೆ ಆಗುತ್ತಾ ಇದೇನೆ,’ ಅಂದೆ. ‘ಆಗೋಂಥಾವನೇ ನೀನು! ನನ್ನ ಮಣ್ಣು ಮಾಡಿ ಬಂದ ತಕ್ಷಣ ಇನ್ನೊಂದು ಮದುವೆ ಮಾಡಿಕೊಂಡರೆ ಜನ ಆಡಿಕೊಂಡು ನಗುತ್ತಾರೆ. ನಿನ್ನ ಬುದ್ಧಿ ನನಗೆ ಗೊತ್ತು. ಸರಿಯಾದ ಹುಡುಗಿಯನ್ನ ಆರಿಸಿಕೊಳ್ಳದಿದ್ದರೆ ನಿನ್ನ ಬಾಳು, ಅವಳ ಬಾಳು ಎರಡೂ ಹಾಳಾಗತ್ತೆ,’ ಅಂದು ಹೊರಟು ಹೋದಳು. ಅವಳ ಉಡುಪಿನ ಸರಬರ ಕೇಳಿಸಿತು ಅನ್ನಿಸಿತು. ಎಂಥಾ ನಾನ್ಸೆನ್ಸ್, ಅಲ್ಲವಾ?’

‘ನೀನು ಹೇಳಿದ್ದೆಲ್ಲಾನೂ ಸುಳ್ಳೇ ಇರಬಹುದಲ್ಲಾ?’ ರಾಸ್ಕೋಲ್ನಿಕೋವ್ ಅಂದ.

‘ನಾನು ಸುಳ್ಳು ಹೇಳುವುದೇ ಅಪರೂಪ,’ ಪ್ರಶ್ನೆಯ ಒರಟುತನ ಗಮನಿಸಲೇ ಇಲ್ಲ ಅನ್ನುವ ಹಾಗೆ ಸ್ವಿದ್ರಿಗೈಲೋವ್ ಹೇಳಿದ.

‘ಇದಕ್ಕೆ ಮೊದಲು ಭೂತ ನೋಡಿದ್ದೆಯಾ?’

‘ಹೌ-ದು, ಆರು ವರ್ಷದ ಹಿಂದೆ ಒಂದು ಸಾರಿ ನೋಡಿದ್ದೆ. ನಮ್ಮ ಮನೆಯಲ್ಲಿ ಒಬ್ಬ ಆಳಿದ್ದ ಅವನ ಹೆಸರು ಫಿಲ್ಕಾ. ಸತ್ತು ಹೋದ. ಮಣ್ಣು ಮಾಡಿ ಬಂದಿದ್ದೆವು. ನಾನು ಮರೆತು ಮಾಮೂಲಾಗಿ, ‘ಫಿಲ್ಕಾ, ನನ್ನ ಪೈಪು ಕೊಡು!’ ಅಂದೆ. ಅವನು ಒಳಕ್ಕೆ ಬಂದ. ಬಂದವನೇ ಸೀದ ನಾನು ಪೈಪು ಇಡುತಿದ್ದ ಬೀರುವಿನ ಹತ್ತಿರ ಹೋದ. ಯೋಚನೆ ಮಾಡುತ್ತಾ ಕೂತುಕೊಂಡೆ. ‘ನನ್ನ ಮೇಲೆ ಸೇಡು ತೀರಿಸಿಕೊಳ್ಳುತ್ತಾ ಇದಾನೆ,’ ಅನ್ನಿಸಿತು. ಯಾಕೆ ಅಂದರೆ ಅವನು ಸಾಯುವ ಹಿಂದಿನ ದಿನ ಅವನ ಹತ್ತಿರ ಜೋರಾಗಿ ಜಗಳ ಆಡಿದ್ದೆ. ‘ಮೊಳಕೈ ಹತ್ತಿರ ಹರಿದಿರೋ ಅಂಗಿ ಹಾಕಿಕೊಂಡು ನನ್ನೆದುರಿಗೆ ಬರಕ್ಕೆ ಎಷ್ಟು ಧೈರ್ಯ ನಿನಗೆ,’ ಅಂತ ಬೈದು, ‘ಇನ್ನು ಮೇಲೆ ನನ್ನ ರೂಮಿಗೆ ಕಾಲಿಡಬೇಡ,’ ಅಂದಿದ್ದೆ. ಬೆನ್ನು ತಿರುಗಿಸಿ ಹೋದ. ಹಾಗೇ ಹೋಗೇ ಬಿಟ್ಟ. ಇದನ್ನ ಮಾರ್ಫಾಗೆ ಹೇಳಲಿಲ್ಲ. ಅವನಿಗೋಸ್ಕರ ಸ್ಮಾರಕ ಕಟ್ಟಿಸಬೇಕು ಅನ್ನಿಸಿತು, ನಾಚಿಕೆ ಆಗಿತ್ತು.’

‘ನೀನು ಹೋಗಿ ಡಾಕ್ಟರನ್ನ ನೋಡಬೇಕು.’

‘ನನಗೇನೋ ಆಗಿದೆ ಅಂತ ನೀನೇನೂ ಹೇಳಬೇಕಾಗಿಲ್ಲ. ಏನಾಗಿದೆ ಅಂತ ನಿಜವಾಗಲೂ ಗೊತ್ತಿಲ್ಲ. ನಿನಗಿಂತ ಐದು ಪಟ್ಟು ಚೆನ್ನಾಗಿದೆ ನನ್ನ ಆರೋಗ್ಯ. ನಾನು ಕೇಳಿದ್ದು, ದೆವ್ವಗಳು ಇವೆ ಅಂತ ನಂಬತೀಯಾ ಅಂತ, ಅಷ್ಟೇ ಹೊರತು ದೆವ್ವಗಳನ್ನ ನೋಡುವ ಜನರನ್ನ ನಂಬತೀಯಾ ನೀನು ಅಂತಲ್ಲ.

‘ನಂಬಲ್ಲ!’ ರಾಸ್ಕೋಲ್ನಿಕೋವ್ ಕಹಿಯಾಗಿ ಹೇಳಿದ.

‘ಜನ ಏನೋ ಅನ್ನತಾರಲ್ಲಾ,’ ಸ್ವಿದ್ರಿಗೈಲೇವ್ ಪಕ್ಕಕ್ಕೆ ತಿರುಗಿ ಎಲ್ಲೋ ನೋಡುತ್ತ ತಲೆಯನ್ನು ಸ್ವಲ್ಪ ಪಕ್ಕಕ್ಕೆ ವಾಲಿಸಿ ತನ್ನಷ್ಟಕ್ಕೇ ಗೊಣಗಿಕೊಂಡ. ‘ಜನ ಹೇಳತಾರೆ—ನಿನಗೆ ಕಾಯಿಲೆ, ನಿನು ನೋಡಿದೆ ದೆವ್ವಾ ನೋಡಿದೆ, ಅದು ನೋಡಿದೆ, ಇದು ನೋಡಿದೆ ಅಂದುಕೊಳ್ಳುತ್ತೀಯಲ್ಲ ಅದು ಯಾವುದೂ ಇರುವುದೇ ಇಲ್ಲ, ಎಲ್ಲಾ ಭ್ರಮೆ, ಜ್ವರಕ್ಕೆ ಮೈ ಬಿಸಿಯಾಗಿ ಹುಟ್ಟುವ ಭ್ರಮೆ ಅನ್ನುತ್ತಾರೆ.’ ಇದು ಸರಿಯಲ್ಲ. ಕಾಯಿಲೆಯವರ ಹತ್ತಿರ ಮಾತ್ರ ಬರತವೆ ದೆವ್ವಗಳು ಅನ್ನೋದು ಒಪ್ಪುತ್ತೇನೆ. ಹಾಗಂದರೆ ಏನರ್ಥ? ಕಾಯಿಲೆ ಇರುವವರನ್ನ ಬಿಟ್ಟು ಬೇರೆ ಯಾರಿಗೂ ದೆವ್ವ ಕಾಣಲ್ಲ ಅಂತ ಅಷ್ಟೇ ಹೊರತು ದೆವ್ವಗಳೇ ಇಲ್ಲ ಅಂತಲ್ಲ.’

‘ದೆವ್ವ ಖಂಡಿತ ಇಲ್ಲ, ಅಲ್ಲವಾ?’ ರಾಸ್ಕೋಲ್ನಿಕೋವ್ ರೇಗಿ ಕೇಳಿದ.

‘ಇಲ್ಲವಾ? ಇಲ್ಲಾ ಅನ್ನುತ್ತೀಯಾ?’ ನಿಧಾನವಾಗಿ ಕಣ್ಣೆತ್ತಿ ಅವನನ್ನ ನೋಡುತ್ತ ಸ್ವಿದ್ರಿಗೈಲೇವ್ ಮಾತಾಡಿದ: ‘ದೆವ್ವಗಳು ಬೇರೆ ಲೋಕದ ತುಕಡಾ ಪೀಸುಗಳು. ಬೇರೆ ಲೋಕ ಶುರುವಾಗುವುದೇ ದೆವ್ವಗಳಿಂದ. ಆರೋಗ್ಯವಾಗಿರುವ ಮನುಷ್ಯರು ದೆವ್ವಗಳನ್ನ ನೋಡಕ್ಕಾಗಲ್ಲ. ನೋಡಬೇಕಾಗೂ ಇಲ್ಲ. ಯಾಕೆ ಗೊತ್ತಾ? ಆರೋಗ್ಯವಾಗಿರುವ ಮನುಷ್ಯ ತನ್ನನಂಥ ಬೇರೆಯ ಜನ ವಾಸ ಮಾಡುವ ಈ ಲೋಕದವನು. ಇಲ್ಲೇ ಬದುಕಬೇಕಾದವನು. ಅದೇ ಸಹಜ, ಅದೇ ನಿಯಮ. ಇಲ್ಲದೆ ಹೋದರೆ ವ್ಯವಸ್ಥೆ ತಪ್ಪಿ ಹೋಗತ್ತೆ. ಅಂಥವನು ಕಾಯಿಲೆ ಬಿದ್ದರೆ ಮಾಮೂಲೀ ಭೂಲೋಕದ ನಿಯಮಗಳು ಅವನ ಪಾಲಿಗೆ ಚದರಿ ಚೆಲ್ಲಾಪಿಲ್ಲಿ ಆಗತವೆ. ಅವನ ದೇಹದ ವ್ಯವಸ್ಥೆ ಅಲ್ಲಾಡಿ ಹೋಗತ್ತೆ. ಬೇರೆ ಲೋಕದ ಸಾಧ್ಯತೆ ಮನಸ್ಸಿಗೆ ಬರುವುದಕ್ಕೆ ಶುರು ಆಗತ್ತೆ. ಕಾಯಿಲೆ ಜಾಸ್ತಿಯಾದಷ್ಟೂ ಪರಲೋಕದ ಸಂಬಂಧ ಗಟ್ಟಿಯಾಗುತ್ತಾ ಹೋಗತ್ತೆ. ಮನುಷ್ಯ ಪೂರ ಸತ್ತಾಗ ಸಹಜವಾಗೇ ನೇರವಾಗಿ ಬೇರೆ ಲೋಕಕ್ಕೆ ಹೋಗತಾನೆ. ಹೀಗೆ ಬಹಳ ಕಾಲದಿಂದ ಯೋಚನೆ ಮಾಡುತ್ತಿದ್ದೇನೆ. ಮುಂದಿನ ಜನ್ಮದಲ್ಲಿ, ಮುಂದಿನ ಬದುಕಿನಲ್ಲಿ ನಂಬಿಕೆ ಇದ್ದರೆ ಈ ವಿಚಾರ ಕೂಡಾ ನಂಬಬಹುದು.’
‘ಬೇರೆ ಬದುಕಿದೆ, ಮರು ಜನ್ಮ ಇದೆ ಅಂತ ನಾನು ನಂಬಲ್ಲ,’ ಅಂದ ರಾಸ್ಕೋಲ್ನಿಕೋವ್.

ಸ್ವಿದ್ರಿಗೈಲೋವ್ ಯೋಚನೆ ಮಾಡುತ್ತ ಕೂತ.

‘ಬೇರೆ ಲೋಕದಲ್ಲಿ ಜೇಡರ ಹುಳಾನೋ ಅಂಥಾದ್ದೇ ಇನ್ಯಾವುದೋ ಹುಳಾನೋ ಮಾತ್ರ ಇದ್ದರೆ?’ ಅಂತ ತಟ್ಟನೆ ಕೇಳಿದ.
‘ಹುಚ್ಚ ಇವನು,’ ಅಂದುಕೊಂಡ ರಾಸ್ಕೋಲ್ನಿಕೋವ್.

‘ಅನಂತ ಅನ್ನುವುದನ್ನ ಅರ್ಥಮಾಡಿಕೊಳ್ಳುವುದಕ್ಕೆ ಆಗದ ಹಾಗೆ ಕಲ್ಪಿಸಿಕೊಂಡಿದ್ದೇವೆ. ಅದು ಅನಂತ ವಿಸ್ತಾರ ಅಂತ ವಿವರಿಸುತ್ತಾರೆ. ವಿಸ್ತಾರವಾಗೇ ಯಾಕಿರಬೇಕು? ಅದಕ್ಕೆ ಬದಲಾಗಿ ತಟ್ಟಂತ ಕಲ್ಪನೆ ಮಾಡಿಕೋ—ಅನಂತ ಅನ್ನುವುದು ಕಿರು ಕೋಣೆ. ಹಳ್ಳಿಗಳಲ್ಲಿ ಊರ ಜನ ಬಳಸುವುದಕ್ಕೆ ಇರುತ್ತಲ್ಲ ಗೋಡೆಗೆಲ್ಲ ಮಸಿ ಮೆತ್ತಿದ ಸ್ನಾನದ ಮನೆ ಅಂಥದ್ದು. ಅನಂತಾನೂ ಹಾಗೇ ಅಂದುಕೋ. ಅದರ ಮೂಲೆ ಮೂಲೆಯಲ್ಲೂ ಜೇಡ ಬಲೆ ನೇಯ್ದುಕೊಂಡಿವೆ. ಅನಂತ ಅಂದರೆ ಇಷ್ಟೇ. ಒಂದೊಂದು ಸಾರಿ ಹೀಗೆ ಕಲ್ಪನೆ ಮಾಡಿಕೊಳ್ಳತೇನೆ.’

‘ಇದಕ್ಕಿಂತ ಇನ್ನೂ ಸಮಾಧಾನ ಕೊಡುವಂಥದ್ದು, ಇನ್ನೂ ನ್ಯಾಯವಾದದ್ದು ಕಲ್ಪನೆ ಮಾಡಿಕೊಳ್ಳಬಹುದಲ್ಲಾ?’ ರಾಸ್ಕೋಲ್ನಿಕೋವ್ ಕೇಳಿದ. ಅವನ ದನಿಯಲ್ಲಿ ನೋವಿತ್ತು.

‘ಇನ್ನೂ ನ್ಯಾಯವಾದ್ದು? ಅದೇನಂತ ಯಾರಿಗೆ ಗೊತ್ತು? ನನ್ನ ಕಲ್ಪನೇನೇ ನ್ಯಾಯವಾಗಿರಬಹುದು. ನನ್ನ ಮಾತು ನಡೆಯುವ ಹಾಗಿದ್ದಿದ್ದರೆ ಖಂಡಿತ ನನ್ನ ಕಲ್ಪನೇನೇ ನಿಜ ಮಾಡತಿದ್ದೆ,’ ಅನ್ನುತ್ತ ಕಂಡೂ ಕಾಣದ ಹಾಗೆ ನಕ್ಕ.

ಈ ಭಯಂಕರ ಉತ್ತರ ಕೇಳಿ ರಾಸ್ಕೋಲ್ನಿಕೋವ್ ನ ಮೈ ತಣ್ಣಗಾಯಿತು. ಸ್ವಿದ್ರಿಗೈಲೋವ್ ಅವನನ್ನೇ ಗಮನಿಸಿ ನೋಡಿ, ತಟ್ಟನೆ ಜೋರಾಗಿ ನಕ್ಕುಬಿಟ್ಟ.

‘ಇಲ್ಲ. ನೋಡು ಇದನ್ನ—ಅರ್ಧ ಗಂಟೆ ಮೊದಲು ನಾವು ಒಬ್ಬರ ಮುಖ ಒಬ್ಬರು ನೋಡಿರಲಿಲ್ಲ. ನಾವು ಶತ್ರುಗಳಾಗಿರಬೇಕಾಗಿದ್ದವರು. ನಮ್ಮ ವ್ಯವಹಾರ ಇನ್ನೂ ಮುಗಿದಿಲ್ಲ. ಆಗಲೇ ನಾವು ಎಲ್ಲಾನೂ ಕೈ ಬಿಟ್ಟು ಯಾವ ಯಾವದೋ ಕಥೆ ಪುರಾಣಕ್ಕೆಲ್ಲ ತೇಲಿಕೊಂಡು ಹೋಗಿ ಮುಟ್ಟಿದೇವೆ! ನಾವಿಬ್ಬರೂ ಒಂದೇ ಮರದ ಹಣ್ಣು ಅಂತ ಅಂದೆನಲ್ಲ, ಅದು ನಿಜ ತಾನೇ?’

ರಾಸ್ಕೋಲ್ನಿಕೋವ್ ರೇಗಿಕೊಂಡು ಹೇಳಿದ—‘ದಯವಿಟ್ಟು ಒಂದು ಉಪಕಾರ ಮಾಡು. ನಮ್ಮ ಮನೆಗೆ ದಯಮಾಡುವ ಕಷ್ಟ ತಗೊಂಡಿದ್ದು ಯಾಕೆ? ಮತ್ತೆ… ಮತ್ತೆ… ಬೇಗ ಹೇಳು… ನನಗೆ ಕೆಲಸ ಇದೆ, ಹೋಗಬೇಕು ನಾನು.’

‘ಖಂಡಿತ, ಖಂಡಿತ. ನಿನ್ನ ಪ್ರೀತಿಯ ತಂಗಿ ಅವದೋತ್ಯ ರೊಮನೋವ್ನ ಪೀಟರ್ ಪೆಟ್ರೊವಿಚ್‍ ನ ಮದುವೆ ಆಗತಿದಾಳೆ, ಅಲ್ಲವಾ?ʼ

‘ನೀನು ಮನುಷ್ಯ ಆಗಿದ್ದರೆ ಅವಳ ಬಗ್ಗೆ ಏನೂ ಕೇಳಬೇಡ, ಅವಳ ಹೆಸರೂ ಎತ್ತಬೇಡ. ನನ್ನೆದುರಿಗೆ ಅವಳ ವಿಚಾರ ಮಾತಾಡಕ್ಕೆ ಎಷ್ಟು ಧೈರ್ಯ ಇರಬೇಡ ನಿನಗೆ?’

‘ನಾನು ಬಂದಿರೋದೇ ಅವಳ ವಿಚಾರ ಮಾತಾಡಕ್ಕೆ. ಅವಳ ಹೆಸರು ಹೇಳಬೇಡ ಅಂದರೆ?’

‘ಸರಿ, ಬೇಗ ಹೇಳಿ ಮುಗಿಸು.’

‘ಪೀಟರ್ ಪೆಟ್ರೊವಿಚ್‍ ನ ಜೊತೆ ಅರ್ಧ ಗಂಟೆ ಕಳೆದರೂ ಸಾಕು, ಅವನು ಎಂಥವನು ಅಂತ ಯಾರೂ ಹೇಳುವುದೇ ಬೇಕಾಗಿಲ್ಲ. ನಿನಗೇ ಗೊತ್ತಾಗತ್ತೆ. ನಿನಗೂ ಆಗಲೇ ತಿಳಿದಿರಬಹುದು ಅವನ ಸ್ವಭಾವ. ಅವನು ನನಗೆ ಹೆಂಡತಿಯ ಕಡೆಯಿಂದ ದೂರದ ನಂಟ. ನನ್ನ ಕೇಳಿದರೆ ನಿನ್ನ ತಂಗಿಗೆ ಸರಿಯಾದ ಜೋಡಿ ಅಲ್ಲ ಅವನು. ನಿನ್ನ ತಂಗಿಯದು ಉದಾರವಾದ ಮನಸ್ಸು. ತನ್ನ… ತನ್ನ… ಕುಟುಂಬಕ್ಕಾಗಿ ತ್ಯಾಗ ಮಾಡಕ್ಕೆ ಸಿದ್ಧವಾಗಿದಾಳೆ ಈಗ. ನಿನ್ನ ಬಗ್ಗೆ ಕೂಡ ಕೇಳಿ ತಿಳಿದಿದ್ದೇನೆ. ಯಾರಿಗೂ ತೊಂದರೆ ಆಗದೆ ಈ ಮದುವೆ ಪ್ರಸ್ತಾಪ ಮುರಿದು ಬಿದ್ದರೆ ನಿನಗೆ ಸಂತೋಷ ಆಗಬಹುದು… ಅಂದುಕೊಂಡಿದ್ದೇನೆ. ಈಗ ನಿನ್ನ ಮುಖತಃ ನೋಡಿದೆನಲ್ಲ, ನನಗೆ ಅನಿಸಿದ್ದು ನಿಜ ಅನ್ನುವುದು ಗಟ್ಟಿ ಆಯಿತು.’

‘ಇದೆಲ್ಲ ಬಹಳ ಉದ್ಧಟವಾದ ಮಾತು ಅನ್ನಬೇಕು ಅನ್ನಿಸತ್ತೆ. ಬಾಯಿಬಿಟ್ಟು ಅನ್ನಲ್ಲ, ಅಷ್ಟೇ.’ ಅಂದ ರಾಸ್ಕೋಲ್ನಿಕೋವ್.
‘ನನ್ನ ಲಾಭಕ್ಕೆ ಬೆಣ್ಣೆ ಹಚ್ಚತಾ ಇದೀನಿ ಅನ್ನುತ್ತೀಯಾ?… ಚಿಂತೆ ಮಾಡಬೇಡ, ನನ್ನ ಲಾಭ ಮಾತ್ರ ನೋಡಿಕೊಳ್ಳುವವನಾಗಿದ್ದರೆ ಇಷ್ಟು ನೇರಾನೇರ ಮಾತಾಡತಿರಲಿಲ್ಲ. ನಾನಿನ್ನೂ ಅಷ್ಟೊಂದು ಮೂರ್ಖ ಅಲ್ಲ. ಒಂದು ವಿಚಿತ್ರವಾದ ಸತ್ಯ ಹೇಳತೇನೆ, ಕೇಳು. ಸ್ವಲ್ಪ ಹೊತ್ತಿಗೆ ಮೊದಲು ನಿನ್ನ ತಂಗಿಯ ಮೇಲೆ ನನಗೆ ಪ್ರೀತಿ ಇದೆ ಅಂದೆ, ನಾನೇ ಬಲಿಪಶು ಆಗಿರಬಹುದು ಅಲ್ಲವಾ ಅಂದೆ. ಈಗ ಹೇಳತೇನೆ ಕೇಳು, ಅವಳ ಬಗ್ಗೆ ನನಗೀಗ ಪ್ರೀತಿ ಇಲ್ಲ, ಒಂದಿಷ್ಟೂ ಇಲ್ಲ. ಮೊದಲು ಏನೋ ಹಾಗನ್ನಿಸಿತ್ತು, ಯಾಕೆ ಅಂತ ಅರ್ಥ ಗೊತ್ತಿಲ್ಲ…’

‘ನೀನು ಮೈ ಬಗ್ಗಿಸಿ ದುಡಿಯದವನು, ನಡತೆ ತಪ್ಪಿದವನು, ಅದಕ್ಕೇ ಹಾಗನ್ನಿಸಿತ್ತು,’ ರಾಸ್ಕೋಲ್ನಿಕೋವ್ ಅವನ ಮಾತು ತಡೆದು ಹೇಳಿದ.

‘ನಾನು ನಡತೆಗೆಟ್ಟವನು, ನಿಜ. ಸೋಮಾರಿ, ನಿಜ. ಆದರೂ ನಿನ್ನ ತಂಗಿಯಲ್ಲಿ ಎಷ್ಟೊಂದು ಒಳ್ಳೆಯ ಗುಣ ಇವೆ ಅಂದರೆ ನಾನು ಅವಳ ಗುಲಾಮ ಆಗುವುದಕ್ಕೂ ಸಿದ್ಧ.’

‘ನಿನಗೆ ಹೀಗನ್ನಿಸಿದ್ದು ಯಾವಾಗ?’

‘ಬಹಳ ಮೊದಲೇ ಹೀಗನ್ನಿಸಕ್ಕೆ ಶುರುವಾಗಿತ್ತು. ಕೊನೇಗೆ, ಎರಡು ದಿನದ ಹಿಂದೆ, ಪೀಟರ್ಸ್‍ಬರ್ಗ್‍ ಗೆ ಕಾಲಿಟ್ಟ ತಕ್ಷಣ ನನಗೆ ಅವಳ ಮೇಲೆ ನಿಜವಾಗಲೂ ಪ್ರೀತಿ ಇಲ್ಲ ಅನ್ನಿಸಿತು. ಮಾಸ್ಕೋದಲ್ಲಿದ್ದಾಗ ನಿನ್ನ ತಂಗಿಯನ್ನು ಮದುವೆ ಮಾಡಿಕೊಡು ಅಂತ ನಿನ್ನ ಕೇಳಬೇಕು ಅನ್ನಿಸುತಿತ್ತು, ಪೀಟರ್ ಪೆಟ್ರೊವಿಚ್‍ ನನ್ನ ಎದುರಾಳಿ ಅನ್ನಿಸುತಿತ್ತು.’

‘ಕ್ಷಮಿಸಬೇಕು. ದಯವಿಟ್ಟು ಈ ಕಥೆಪುರಾಣ ಎಲ್ಲ ನಿಲ್ಲಿಸಿ ನನ್ನಿಂದ ಏನಾಗಬೇಕು, ಆ ವಿಷಯ ನೇರವಾಗಿ ಹೇಳು. ನನಗೆ ಕೆಲಸ ಇದೆ, ಹೋಗಬೇಕು.’

‘ಖಂಡಿತ ಹೇಳತೇನೆ. ಇಲ್ಲಿಗೆ ಬಂದಮೇಲೆ ಯಾತ್ರೆಗೆ ಹೋಗಬೇಕು ಅಂತ ತೀರ್ಮಾನ ಮಾಡಿದೆ, ಹೊರಡುವ ಮೊದಲು ಕೆಲವು ವ್ಯವಸ್ಥೆ ಆಗಬೇಕು. ಮಕ್ಕಳು ಅವರ ಚಿಕ್ಕಮ್ಮನ ಜೊತೆ ಊರಲ್ಲೇ ಉಳಿದರು. ಮಕ್ಕಳಿಗೆ ನಾನು ಜೊತೆಯಲ್ಲೇ ಇರಬೇಕು ಅಂತೇನಿಲ್ಲ! ಒಂದು ವರ್ಷದ ಹಿಂದೆ ಮಾರ್ಫಾ ನನಗೆ ಏನು ಕೊಟ್ಟಿದ್ದಳೋ ಅದನ್ನ ತೆಗೆದುಕೊಂಡಿದೇನೆ. ಅಷ್ಟು ದುಡ್ಡು ಸಾಕು ನನಗೆ. ಸಾರಿ, ಸಾರಿ! ವಿಷಯಕ್ಕೆ ಬಂದೆ. ಈ ಯಾತ್ರೆಗೆ ಹೊರಡುವುದಕ್ಕೆ ಮೊದಲು ಪೀಟರ್ ಪೆಟ್ರೊವಿಚ್‍ ಜೊತೆ ವ್ಯವಹಾರ ಮುಗಿಸಿಕೊಳ್ಳಬೇಕು ಅನ್ನಿಸಿತು. ಅವನನ್ನ ಕಂಡರೆ ನನಗಾಗಲ್ಲ ಅಂತಲ್ಲ. ಅವನ ಕಾರಣದಿಂದಲೇ ನನಗೂ ನನ್ನ ಹೆಂಡತಿ ಮಾರ್ಫಾಗೂ ಜಗಳ ಆಯಿತು. ಪೀಟರ್ ಪೆಟ್ರೊವಿಚ್‍ ಗೂ ನಿನ್ನ ತಂಗಿಗೂ ಗಂಟು ಹಾಕಿಸಕ್ಕೆ ಮಧ್ಯಸ್ಥಿಕೆ ಮಾಡಿದ್ದೇ ನನ್ನ ಹೆಂಡತಿ ಅನ್ನುವುದು ಗೊತ್ತಾಗಿ ಜಗಳ ಆಡಿದೆ. ಈಗ ನಾನು ನಿನ್ನ ತಂಗೀನ ನೋಡಬೇಕು, ಅದಕ್ಕೆ ನೀನು ಸಹಾಯಮಾಡಬೇಕು. ನಿನ್ನೆದುರಿಗೇ ಅವಳಿಗೆ ವಿವರಿಸಿ ಹೇಳತೇನೆ—ಮೊದಲನೆಯದಾಗಿ ಅವಳು ಪೀಟರ್ ಪೆಟ್ರೊವಿಚ್‍ ನ ಮದುವೆಯಾದರೆ ಏನೇನೂ ಲಾಭವಿಲ್ಲ. ಬದಲಾಗಿ ಅವಳಿಗೆ ನಿಜವಾಗಲೂ ದೊಡ್ಡ ನಷ್ಟ ಆಗತ್ತೆ. ಎರಡನೆಯದಾಗಿ, ಇತ್ತೀಚೆಗೆ ಅವಳಿಗಾದ ತೊಂದರೆಗಳಿಗೆ ಕ್ಷಮೆ ಕೇಳತೇನೆ. ಮೂರನೆಯದಾಗಿ, ಅವಳಿಗೆ ಹತ್ತು ಸಾವಿರ ರೂಬಲ್ ಕೊಡತೇನೆ, ಅದರಿಂದ ಪೀಟರ್ ಪೆಟ್ರೊವಿಚ್‍ ಜೊತೆಯಲ್ಲಿ ಆಗಬೇಕಾದ ಮದುವೆ ಮುರಿದುಕೊಳ್ಳಬಹುದು. ಈ ಮದುವೆ ನಿಂತರೆ ಒಳ್ಳೆಯದು ಅನ್ನುವುದು ಅವಳ ಮನಸ್ಸಿನಲ್ಲೂ ಇರಬಹುದು ಅಂದುಕೊಂಡಿದ್ದೇನೆ.’

‘ನಿಜವಾಗಲೂ ಹುಚ್ಚ! ಸತ್ಯವಾಗಲೂ ನೀನು ಹುಚ್ಚ! ಹೇಗಯ್ಯ ಇಂಥ ಮಾತು ಆಡುತ್ತೀಯ!’ ರಾಸ್ಕೋಲ್ನಿಕೋವ್‍ ಗೆ ಕೋಪಕ್ಕಿಂತ ಆಶ್ಚರ್ಯವಾಗಿತ್ತು.

‘ನಿನಗೆ ಆಶ್ಚರ್ಯ ಆಗತ್ತೆ ಅಂತ ಗೊತ್ತಿತ್ತು. ನಾನು ಶ್ರೀಮಂತ ಅಲ್ಲ, ಆದರೂ ಈ ಹತ್ತು ಸಾವಿರ ನನಗೆ ಬೇಕಾಗಿಲ್ಲ, ಬೇಕಾಗೇ ಇಲ್ಲ, ಈ ದುಡ್ಡು ಬೇಡ ಅಂತ ನಿನ್ನ ತಂಗಿ ಅಂದರೆ ಇನ್ನೂ ಯಾವುದಾದರೂ ಪೆದ್ದ ಕೆಲಸಕ್ಕೆ ಇದನ್ನು ಖರ್ಚು ಮಾಡತೇನೆ, ಅಷ್ಟೆ. ಇದು ಒಂದು ವಿಷಯ. ಇನ್ನೊಂದು ವಿಷಯ ಏನಪ್ಪ ಅಂದರೆ, ನನ್ನ ಅಂತಸ್ಸಾಕ್ಷಿ ಸ್ವಚ್ಛವಾಗಿದೆ. ಈ ದುಡ್ಡು ಕೊಡುತ್ತಾ ಇರುವುದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ. ನೀನು ಈ ಮಾತು ನಂಬದೆ ಇರಬಹುದು, ಮುಂದೆ ನಿನಗೂ ನಿನ್ನ ತಂಗೀಗೂ ಈ ಮಾತು ನಿಜ ಅಂತ ತಿಳಿಯತ್ತೆ. ನಿಜ ಏನಂದರೆ, ನಿನ್ನ ತಂಗಿಗೆ ಕಷ್ಟಕೊಟ್ಟಿದ್ದೇನೆ, ಕಾಡಿದ್ದೇನೆ, ನನ್ನ ಆ ತಪ್ಪಿಗೆ ದಂಡ ತೆರಬೇಕು ಅಂತಲ್ಲ, ದುಡ್ಡು ಕೊಡ್ಡು ಮನಸ್ಸು ಹಗುರ ಮಾಡಿಕೊಳ್ಳಬೇಕು ಅಂತಲ್ಲ, ನಾನು ಬರಿಯ ಕೆಟ್ಟದ್ದನ್ನೇ ಮಾಡುವವನು, ಒಳ್ಳೆಯದನ್ನೂ ಮಾಡುತ್ತೇನೆ ಅಂತ ಹೇಳಿಕೊಳ್ಳಕ್ಕೂ ಅಲ್ಲ. ಅವಳಿಗೆ ಉಪಯೋಗವಾಗುವಂಥದ್ದು ಏನಾದರೂ ಮಾಡಬೇಕು ಅನ್ನಿಸಿದೆ. ನನ್ನ ಈ ತೀರ್ಮಾನದಲ್ಲಿ ಲಕ್ಷದಲ್ಲಿ ಒಂದು ಅಂಶದಷ್ಟಾದರೂ ಸ್ವಾರ್ಥದ ಲೆಕ್ಕಾಚಾರ ಇದ್ದಿದ್ದರೆ ಇಷ್ಟು ನೇರವಾಗಿ ಹೇಳತಿರಲಿಲ್ಲ, ತಿಂಗಳ ಹಿಂದೆ ಅವಳಿಗೆ ಇನ್ನೂ ಹೆಚ್ಚು ಕೊಡುತ್ತೇನೆ ಅಂದಿದ್ದವನು ಈಗ ಬರೀ ಹತ್ತು ಸಾವಿರ ಕೊಡತೇನೆ ಅನ್ನತಿರಲಿಲ್ಲ. ಅಲ್ಲದೆ ನಾನು ಸದ್ಯದಲ್ಲೇ ಬೇರೆ ಮದುವೆಯಾದರೂ ಆಗಬಹುದು. ಆಗ ನಿನ್ನ ತಂಗಿಯ ವಿರುದ್ಧ ಏನೋ ಮಸಲತ್ತು ಮಾಡುತ್ತಿದ್ದೇನೆ ಅನ್ನುವ ಸಂಶಯ ಅಳಿಸಿ ಹೋಗತ್ತೆ. ಕೊನೆಗೆ ಹೇಳೋದು ಇಷ್ಟೆ. ನಿನ್ನ ತಂಗಿ ಪೀಟರ್ ಪೆಟ್ರೋವಿಚ್‍ ನ ಮದುವೆಯಾದರೆ ಇಷ್ಟೇ ದುಡ್ಡನ್ನ ಬೇರೆಯವರ ಕೈಯಿಂದ ಇಸಕೊಳ್ಳತಿರತಾಳೆ, ಅಷ್ಟೇ. ಸಿಟ್ಟು ಮಾಡಿಕೋಬೇಡ, ರೋಡಿಯಾನ್ ರೊಮೊನೊವಿಚ್, ತಣ್ಣಗೆ ಯೋಚನೆ ಮಾಡಿ ನೋಡು.’

ಸ್ವತಃ ಸ್ವಿದ್ರಿಗೈಲೋವ್ ಕೂಡ ಬಹಣ ತಣ್ಣಗೆ, ಶಾಂತವಾಗಿ ಇದನ್ನೆಲ್ಲ ಹೇಳಿದ.

‘ದಯವಿಟ್ಟು ಮಾತು ಮುಗಿಸು. ಹೇಗಿದ್ದರೂ ಇದು ಕ್ಷಮಿಸಲಾಗದಷ್ಟು ಸೊಕ್ಕಿನ ಮಾತು,’ ಅಂದ ರಾಸ್ಕೋಲ್ನಿಕೋವ್

‘ಖಂಡಿತ ಇಲ್ಲ. ನೀನು ಹೇಳುವುದೇ ನಿಜವಾದರೆ ಈ ಲೋಕದಲ್ಲಿ ಪ್ರತಿಯೊಬ್ಬನೂ ಇನ್ನೊಬ್ಬನಿಗೆ ಕೆಟ್ಟದನ್ನೇ ಮಾಡಬೇಕು. ರವೆಯಷ್ಟೂ ಒಳ್ಳೆಯದು ಮಾಡುವ ಹಕ್ಕೂ ಇರಲ್ಲ. ಕೆಟ್ಟವರು ಕೆಟ್ಟವರಾಗೇ ಇರುತ್ತಾರೆ ಅನ್ನುವುದು ಅರ್ಥವಿಲ್ಲದ ಅಸಂಬದ್ಧ ಸಂಪ್ರದಾಯ. ನಾನು ಸತ್ತುಹೋದರೆ, ಇದೇ ಮೊತ್ತದ ಹಣ ನಿನ್ನ ತಂಗಿಗೆ ಸಿಗಬೇಕು ಅಂತ ಉಯಿಲು ಬರೆದಿಟ್ಟಿದ್ದರೆ ಆಗಲೂ ಅವಳು ಅದನ್ನ ಬೇಡ ಅನ್ನತಾಳಾ?’

‘ಅನ್ನಬಹುದು.’

‘ನನಗೇನೋ ಅನುಮಾನ. ಆದರೂ ಹಾಗೆ ಆಗೋದಾದರೆ ಹಾಗೇ ಆಗಲಿ, ನೀನು ಹೇಳಿದ ಹಾಗೆ. ಹತ್ತು ಸಾವಿರ ಅನ್ನೋದು ಕಡಮೆಯಲ್ಲ, ಒಂದೊಂದು ಸಲ ತುಂಬ ಉಪಯೋಗಕ್ಕೆ ಬರತ್ತೆ. ಇರಲಿ, ದಯವಿಟ್ಟು ನಾನು ಹೇಳಿದ್ದನ್ನೆಲ್ಲ ನಿನ್ನ ತಂಗಿಗೆ ತಿಳಿಸು.’

‘ತಿಳಿಸಲ್ಲ.’

‘ಹಾಗಿದ್ದರೆ ರೋಡಿಯೋನ್ ರೊಮಾನೊವಿಚ್, ನಾನು ಬಲವಂತವಾಗಿಯಾದರೂ ನಿನ್ನ ತಂಗಿ ಜೊತೆ ಖಾಸಗಿಯಾಗಿ ಮಾತಾಡಬೇಕಾಗತ್ತೆ. ಅದರಿಂದ ಅವಳಿಗೆ ತೊಂದರೆ ಆಗಬಹುದು.’

‘ನಾನು ಅವಳಿಗೆ ತಿಳಿಸಿದರೆ ನೀನು ಅವಳನ್ನ ಖಾಸಗಿಯಾಗಿ ಭೇಟಿಮಾಡಲ್ಲವಾ?’

‘ನಿಜವಾಗಲೂ ಏನು ಹೇಳಬೇಕೋ ತಿಳೀತಿಲ್ಲ. ಅವಳನ್ನ ಒಂದೇ ಒಂದು ಸಲ ನೋಡಬೇಕು ಅಂತ ಆಸೆ ಇದೆ.’

‘ಅಂಥ ಆಸೆ ಇಟ್ಟುಕೋಬೇಡ’

‘ಛೇ, ಇರಲಿ. ನನ್ನನ್ನ ನೀನಿನ್ನೂ ಅರ್ಥಮಾಡಿಕೊಂಡಿಲ್ಲ. ನಾವು ಇನ್ನೂ ಹತ್ತಿರ ಆಗಬಹುದು.’

‘ಈಗ ಹತ್ತಿರ ಆಗಿದೇವೆ ಅನಿಸತ್ತಾ?’

‘ಯಾಕಾಗಬಾರದು?’ ಸ್ವಿದ್ರಿಗೈಲೋವ್ ನಗುತ್ತ ಅಂದ. ಎದ್ದು ನಿಂತ. ಹ್ಯಾಟು ಎತ್ತಿಕೊಂಡ. ‘ನಿನಗೆ ತೊಂದರೆ ಕೊಡಬೇಕು ಅಂತಿರಲಿಲ್ಲ, ಇಲ್ಲಿಗೆ ಬಂದು ನಿನ್ನ ನೋಡಬೇಕು ಅಂತಲೂ ಇರಲಿಲ್ಲ. ಆದರೆ ಇವತ್ತು ಬೆಳಿಗ್ಗೆ ನಿನ್ನ ನೋಡಿದಾಗ ನಿನ್ನ ಮುಖಲಕ್ಷಣ ನನ್ನ ಸೆಳೆಯಿತು.’

‘ಬೆಳಿಗ್ಗೆ ನನ್ನ ಎಲ್ಲಿ ನೋಡಿದೆ?’ ರಾಸ್ಕೋಲ್ನಿಕೋವ್ ಕಸಿವಿಸಿಪಡುತ್ತ ಕೇಳಿದ.

‘ಅಕಸ್ಮಾತ್ ನೋಡಿದೆ… ನೀನೂ ನನ್ನ ಥರ ಅಂತ ನನಗೆ ಅನ್ನಿಸತಾನೇ ಇರತ್ತೆ. ಚಿಂತೆ ಮಾಡಬೇಡ. ನಿನ್ನ ತಲೆ ಕೊರೀತಾ ಕೂರಲ್ಲ. ನಾನು ಮೂರೆಲೆ ಪಂಟರುಗಳ ಜೊತೆ ಹೋಗಿದ್ದೇನೆ. ಪ್ರಿನ್ಸ್ ಸ್ವಿರ್ಬೆ ಇದಾನಲ್ಲ ಅವನನ್ನೂ ನಾನು ಬೋರ್ ಮಾಡಲಿಲ್ಲ. ಅವನೂ ನನಗೆ ದೂರದ ಸಂಬಂಧ. ಸಜ್ಜನ. ಮೇಡಂ ಪರಿಲುಕೋವ್‍ ಳ ಆಲ್ಬಮ್ಮಿನಲ್ಲಿ ರಫೇಲ್‍ ನ ಮಡೊನ್ನಾ ಚಿತ್ರದ ಬಗ್ಗೆ ಬರೆದಿದ್ದೇನೆ. ಏಳು ವರ್ಷ ಮಾರ್ಫಾ ಜೊತೆ ಬದುಕಿದ್ದೇನೆ. ಬಹಳ ಹಿಂದೆ ಒಂದೋ ಎರಡೋ ರಾತ್ರಿ ಹೇಮಾರ್ಕೆಟ್ಟಿನಲ್ಲಿ ವ್ಯಾಝೆಮ್ಸ್ಕಿ ಮನೆಯಲ್ಲಿ ಕಳೆದಿದ್ದೇನೆ. ಮತ್ತೆ ಈಗ ಬಲೂನಿನಲ್ಲಿ ಬೆರ್ಗ್‍ ಜೊತೆ ಹಾರಿದರೂ ಹಾರಬಹುದು.’

‘ಸರಿ, ಸರಿ. ನೀನು ಯಾತ್ರೆಗೆ ಹೊರಡುವುದು ಯಾವಾಗ?’

‘ಯಾವ ಯಾತ್ರೆ?’

‘ಅದೇ ಯಾತ್ರೆ, ಈಗ ತಾನೆ ಹೇಳತಾ ಇದ್ದೆಯಲ್ಲ.’

‘ಯಾತ್ರೆ? ಹ್ಞಾ, ಹೌದು! ಯಾತ್ರೆ ಬಗ್ಗೆ ನಿನಗೆ ಹೇಳಿದ್ದೆ. ಅದು ತುಂಬ ದೊಡ್ಡ ಪ್ರಶ್ನೆ… ನೀನು ಏನು ಕೇಳತಾ ಇದೀಯ ಅಂತ ನಿನಗೇ ಗೊತ್ತಿಲ್ಲ!’ ಅನ್ನುತ್ತ ತಟ್ಟನೆ ನಕ್ಕ. ‘ಯಾತ್ರೆಗೆ ಹೋಗುವ ಬದಲು ಮದುವೆ ಆದರೂ ಆಗಬಹುದು. ನನಗೆ ಅಂತ ಹೆಣ್ಣು ಹುಡುಕುತ್ತಾ ಇದಾರೆ.’

‘ಈ ಊರಲ್ಲಿ?’

‘ಹ್ಞೂಂ.’

‘ಹೆಣ್ಣು ನೋಡಕ್ಕೆ ನಿನಗೆ ಟೈಮೆಲ್ಲಿ ಸಿಕ್ಕಿತು?’

‘ನಾನು ನಿನ್ನ ತಂಗೀನ ನೋಡಬೇಕು ಅಂತಿದ್ದೆ. ಸೀರಿಯಸ್ಸಾಗಿ ಕೇಳತಾ ಇದೀನಿ ಸರಿ, ಗುಡ್‍ ಬೈ.… ಹ್ಞಾ, ನಿನ್ನ ತಂಗೀಗೆ ಹೇಳು ಮಾರ್ಫಾ ಸಾಯೋವಾಗ ವಿಲ್‍ ನಲ್ಲಿ ಅವಳ ಹೆಸರಿಗೆ ಮೂರು ಸಾವಿರ ರೂಬಲ್ ಬರೆದಿಟ್ಟಿದಾಳೆ. ಗ್ಯಾರಂಟಿ, ಇನ್ನೆರಡು ಮೂರು ವಾರದೊಳಗೆ ನಿನ್ನ ತಂಗೀಗೆ ಆ ದುಡ್ಡು ಸಿಗತ್ತೆ.’

‘ನಿಜ ಹೇಳತಿದ್ದೀಯಾ?ʼ

‘ನಿಜ. ಹೇಳು ಅವಳಿಗೆ. ಸಿಗತೀನಿ. ಇಲ್ಲೇ ನಿಮ್ಮ ಮನೆ ಹತ್ತಿರಾನೇ ಇಳಕೊಂಡಿದೀನಿ. ಬೈ.’

ಅವನು ಹೊರಕ್ಕೆ ಹೋಗುತ್ತಿರುವಾಗ ರಝುಮಿಖಿನ್‍ ಎದುರಾದ.