ರಾತ್ರಿಯಿಡೀ ಸುಟ್ಟ ಕವಿತೆ
ಖಾಲೀ
ಕೋಣೆಯ ತುಂಬಾ
ವೈನ್ ಘಮ;
ಬಿಡಲೇಬಾರದು
ದಫನವಾಗದೇ
ಅಳಿದುಳಿದ ನೆನಪುಗಳೊಂದಿಗೆ
ಕುಡಿದು ಮತ್ತೇರಿಸಿಕೊಂಡು
ರಾತ್ರಿಯಿಡೀ
ಕವಿತೆಯನ್ನೇ
ಸುಟ್ಟು ಬೆಚ್ಚಗಾಗಬೇಕು..
ಮಿತಿಯಿಲ್ಲದ ಆಸೆಗಳಿಗೀಗ
ರೆಕ್ಕೆಪುಕ್ಕಗಳು ಮೂಡಿ
ಯಾವುದೋ ಊರ
ಗುಬ್ಬಿಗಳಾಗಿ
ಯಾರದೋ ಮನೆಯ ಹಜಾರದಲ್ಲಿ
ನೆನಪಿನ ಕಾಳುಗಳನ್ನು ಮೇಯುತ್ತಿವೆ..
ಇಲ್ಲಿ,
ಯಾವುದರ ಪರಿವಿಲ್ಲದೆ
ತಣ್ಣಗೆ ಅಕ್ವೇರಿಯಮ್ಮಿನ ಗಾಜಿನೊಳಗೆ
ಈಜುವ ಮೀನುಗಳು ನಿರ್ಭಿಡೆಯಿಂದ
ಈಗೀಗ
ನನ್ನನ್ನು ಪ್ರಶ್ನಿಸುತ್ತವೆ..
ರೋಗಹಿಡಿದ ಮುದುಕನಂತಾದ
ಜೀ಼ರೋ ಕ್ಯಾಂಡಲು ಬಲ್ಬೂ
ಕಣ್ಣು ಬಿಡಲು ನರಳುತ್ತದೆ..
ಈ ಕತ್ತಲ ವಾರಸುದಾರನಾರು?
ನಕ್ಷತ್ರಗಳನ್ನೇ ಕ್ಯಾನ್ವಾಸಿಗೆ
ಇಳಿಸಿದ ಚಿತ್ರಕಾರನ
ಚಿತ್ರಗಳು ಆಗಾಗ್ಗೆ ಜೀವತುಂಬುತ್ತವೆ.
ಹಳೆವರ್ಷದ ರಾತ್ರಿಗಳನ್ನು
ಹೇಗೋ ನೀಗಿಕೊಂಡು
ಯೋನಿಯಂಥಾ ನಿನ್ನ
ಕರುಣೆಯ ಸೆಲೆಯೊಳಗೆ
ಬಂಧಿಯಾದ ನಾನು
ಬಿಡುಗಡೆಗೊಳ್ಳುವುದು
ತೀರಾ ಅನುಮಾನ…!!
ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ಚೆನ್ನಾಗಿದೆ