1. ಬಾ..

ನನ್ನೊಳಗೆ
ನೀನು ನೆಟ್ಟ
ಅಸಂಖ್ಯಾತ
ಕವಿತೆಗಳನ್ನು
ಇಷ್ಟೂ ದಿನ
ಸಲಹಿಕೊಂಡು ಬಂದೆ

ನೆತ್ತರು
ಹರಿದ ದಾರಿಗುಂಟ
ಕಣ್ಣೀರೂ
ಕೋಡಿಯಾಗಿ ಹರಿಯುತ್ತದೆ.

ಕನಸುಗಳನ್ನು
ಹೊಸಕಿಹಾಕಿದ
ದಾರಿಯಲ್ಲಿ
ನೀನೆ ನೆಟ್ಟ
ಹಸಿರು ನನ್ನ
ಚಿಗುರಿಸುತ್ತಿದೆ.
ಈ ಬಣ್ಣದ ಜಗತ್ತಿನ ತುಂಬೆಲ್ಲ


ಕ್ಕೆ
ಬೇರುಗಳನ್ನು
ಬಿಡಲು
ಕಸುವು ನೀಡು ಬಾ….!

2.ಅಜ್ಜ ಮತ್ತು ನೋವು

ಗಡಿಯಾರದ
ಕಾಲುಗಳಿಗೀಗ
ನೋವೆಂಬುದೇ ಇಲ್ಲ;
ಅಜ್ಜನಿದ್ದಿದ್ದರೆ
ಮಂಡಿನೋವಿನಿಂದ
ಅದೆಷ್ಟು
ಬಳಲುತ್ತಿದ್ದನೋ..

ಹಲ್ಲು ನೋವು
ಎಂದು ಸದಾ
ಹಲುಬುತ್ತಿದ್ದ
ಅಜ್ಜ
ಗತಕಾಲದ ಎಷ್ಟೊಂದು
ನೋವುಗಳನ್ನು
ಅಗಿದು
ನುಂಗಿದ್ದನೋ…

ಅಜ್ಜ ಸತ್ತ ಮಾರನೆಗೆ
ಕುಟ್ಟೆ ಹಿಡಿಯದ
ಮಂಚ ಮಾತ್ರ
ಸವೆದು ಸುಣ್ಣವಾಗಿದ್ದ ಅಜ್ಜನಿಲ್ಲದ
ಖುಷಿಗೋ, ದುಃಖಕ್ಕೋ
ನಿರಾಳವಾಗಿ
ನಿದ್ರಿಸುತ್ತಿದೆ

ಜೀರ್ಣವಾಗದ
ನೋವುಗಳು
ಮಣ್ಣಿನೊಳಗೆ ಹೂತು
ಕೊಳೆಯುತ್ತಿರಬಹುದು..!
ಇಲ್ಲವೇ ಮತ್ತೆ
ಮೊಳೆಯುತ್ತಲೂ ಇರಬಹುದು…!

 

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು