ಬಡ ಗಿರಾಕಿಗಳಿಂದ ಹಿಡಿದು ಶ್ರೀಮಂತ ಗಿರಾಕಿಗಳವರೆಗೆ ಅವರ ಶಕ್ತ್ಯನುಸಾರ ಹಣ್ಣುಗಳನ್ನು ಕೊಳ್ಳುತ್ತಿದ್ದರು. ಹಣ್ಣುಗಳನ್ನು ಕೊಳ್ಳುವಾಗ ರೇಟಿಗೆ ಸಂಬಂಧಿಸಿದ ಕೊಸರಾಟ ಮಜಾ ಅನಿಸುತ್ತಿತ್ತು. ಗಿರಾಕಿಗಳು ತಮ್ಮ ಎಲ್ಲ ತರ್ಕ ಉಪಯೋಗಿಸಿ ಕಡಿಮೆ ಬೆಲೆಗೆ ಕೇಳುತ್ತಿದ್ದರು. ಆ ಹಣ್ಣುಗಳನ್ನು ತರುವ ಕಷ್ಟ, ಅದಕ್ಕಾಗಿ ಮಾಡಿದ ಖರ್ಚು, ಗಿರಾಕಿಗಳು ಕೇಳುವ ಬೆಲೆಗಿಂತ ಹೆಚ್ಚಾಗಿದೆ ಎಂಬುದನ್ನು ಅಜ್ಜಿ ವಿವರಿಸುತ್ತಿದ್ದಳು. ಇಷ್ಟಕ್ಕಾದರೆ ಕೊಡು ಎಂದು ಹೇಳುತ್ತ ಗಿರಾಕಿಗಳು ಮುಂದೆ ಹೋದಂತೆ ಮಾಡುತ್ತಿದ್ದರು. ಅಜ್ಜಿ ಕರೆಯದೆ ಇದ್ದಾಗ ಮತ್ತೆ ವಾಪಸ್ ಬರುತ್ತಿದ್ದರು. ಕೊನೆಗೂ ಒಂದು ಬೆಲೆ ನಿರ್ಧಾರವಾಗಿ ವ್ಯಾಪಾರ ಸಾಂಗವಾಗಿ ನೆರವೇರುತ್ತಿತ್ತು.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಹದಿನೆಂಟನೆಯ ಕಂತು

 

ನಾವಿಗಲ್ಲಿಯ ನಮ್ಮ ಬಾಡಿಗೆ ಮನೆಯ ಮುಂದಿನ ರಸ್ತೆಗೆ ಆ ಕಾಲದ ಮುನಸಿಪಾಲಿಟಿಯವರೇ “ಸಂತ ಸೇನಾ ಬೀದಿ” ಎಂದು ಹೆಸರಿಟ್ಟಿದ್ದಾರೆ. ಆ ಹೆಸರಿನ ಫಲಕವನ್ನು ಅವರು ಹಾಕದಿದ್ದರೂ ಮನೆಯ ಬಾಗಿಲಿಗೆ ಬಡಿದ ಚಿಕ್ಕ ತಗಡಿನ ಪಟ್ಟಿಯಲ್ಲಿ ಆ ಹೆಸರನ್ನು ನಮೂದಿಸಿದ್ದಾರೆ.

ನಾವಿ ಸಮಾಜದವರು (ಮರಾಠಿ ಮಾತೃಭಾಷೆಯ ಹಡಪದ ಸಮಾಜದವರು) ಒಂದು ಸಲ ತಮ್ಮ ಸಮಾಜದ ಮಧ್ಯಯುಗದ ಸಂತ ಸೇನಾ ಮಹಾರಾಜರ ಸ್ಮರ‌ಣೋತ್ಸವವನ್ನು ಇದ್ದುದರಲ್ಲೇ ಅದ್ಧೂರಿಯಾಗಿ ಆಚರಿಸಿದರು. ತಾಜಬಾವಡಿ ಬಳಿಯ ಗೋಡಬೋಲೆಮಳಾದ ಮರಾಠಿ ಭಾಷಿಕ ಮಹಿಳೆಯೊಬ್ಬಳು ಸೇನಾ ಮಹಾರಾಜರ ಜೀವನ ಮತ್ತು ಅಭಂಗ ಸಾಹಿತ್ಯದ ಬಗ್ಗೆ ಮನಮುಟ್ಟುವಂತೆ ಮಾತನಾಡುತ್ತ ಒಂದು ಪ್ರಸಂಗವನ್ನು ವಿವರಿಸಿದರು. ವಿಧುರ ಸೇನಾ ಮಹಾರಾಜರು ಪಂಢರಪುರದ ವಿಠೋಬನ ನಾಮಸ್ಮರಣೆ ಮಾಡುತ್ತ ಮತ್ತು ಅಭಂಗಗಳನ್ನು ರಚಿಸುತ್ತ ಬಡತನದಲ್ಲೇ ಇದ್ದೊಬ್ಬ ಮಗನನ್ನು ಚೆನ್ನಾಗಿ ಸಾಕಿದ್ದರು. ಆದರೆ ಆ ಬಾಲಕ ಅಕಾಲ ಮರಣಕ್ಕೆ ತುತ್ತಾದ. ಈ ದುರಂತದ ಕುರಿತು ಸೇನಾ ಮಹಾರಾಜರು ಅಭಂಗವೊಂದನ್ನು ರಚಿಸಿದ್ದಾರೆ. ‘ನಿನ್ನ ಮೇಲಿನ ನನ್ನ ಪ್ರೀತಿಗೆ ಮಗನ ಮೇಲಿನ ಮೋಹ ಅಡ್ಡ ಬರುತ್ತಿದೆ ಎಂದು ಭಾವಿಸಿ ಅವನನ್ನು ಕಸಿದುಕೊಂಡೆಯಲ್ಲಾ! ಆಯ್ತು, ಇನ್ನು ಮುಂದೆ ಯಾವುದೂ ಅಡ್ಡ ಬರುವುದಿಲ್ಲ’ ಎಂಬುದು ಆ ಅಭಂಗದ ಸಾರಾಂಶ. ಮರಾಠಿ ಭಾಷೆ ಸಂಪೂರ್ಣವಾಗಿ ಗೊತ್ತಿರದಿದ್ದರೂ ನನಗಿದು ಅರ್ಥವಾಯಿತು. ಸಂತ ಸೇನಾ ಮಹಾರಾಜರ ದೃಢನಿರ್ಧಾರದ ದೈವೀ ಪ್ರೇಮ ನನ್ನ ಬಾಲ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತು. ಎಲ್ಲವನ್ನೂ ಸಕಾರಾತ್ಮಕವಾಗಿ ಸ್ವೀಕರಿಸುತ್ತ ಬಂದ ಸೇನಾ ಮಹಾರಾಜರ ವ್ಯಕ್ತಿತ್ವ ಮನದಲ್ಲಿ ಅಚ್ಚಳಿಯದೆ ಉಳಿಯಿತು.

ಮುಂದೆ ನಾನು ನನ್ನ ವಿಳಾಸದಲ್ಲಿ “ಸಂತ ಸೇನಾ ಬೀದಿ” ಎಂದು ತಪ್ಪದೇ ಬರೆಯುತ್ತಿದ್ದೆ. ಆದರೆ ಆ ಬೀದಿಯ ಮೇಲ್ಜಾತಿಯ ಯಾರೂ ಹೀಗೆ ವಿಳಾಸ ಬರೆಯುತ್ತಿರಲಿಲ್ಲ. ಅಷ್ಟೇ ಅಲ್ಲದೆ ನಾವಿಗಲ್ಲಿ ಬದಲಿಗೆ ‘ಮಠಪತಿಗಲ್ಲಿ’ ಎಂದು ಬರೆಯುತ್ತಿದ್ದರು. ನಮ್ಮ ಮನೆಯ ಹಿಂದೆಯೆ ಮಠಪತಿ ಗಲ್ಲಿ ಇದ್ದುದರಿಂದ ಪೋಸ್ಟ್ ಮ್ಯಾನ್‌ಗೆ ಇದೆಲ್ಲ ಫರಕು ಬೀಳುತ್ತಿರಲಿಲ್ಲ.

ಈ ಪೋಸ್ಟ್ ಮ್ಯಾನ್ ಅಂದಕೂಡಲೆ ನೆನಪಾಯಿತು. ನನ್ನ ಹೆಸರಿಗೆ ಯಾರೊ ಪತ್ರವೊಂದನ್ನು ಕಳಿಸಿದ್ದರು. ವಿಳಾಸದಲ್ಲಿ “ಆರ್. ಎ. ದರ್ಗಾ” ಎಂದು ಸರಿಯಾಗಿಯೆ ಕೂಗಿರಬೇಕು. ಆದರೆ ನನ್ನ ಅಜ್ಜಿ “ಇದು ಮುಸ್ಲಿಮರ ಮನೆ. ಆರೇರ (ಮರಾಠರ) ಮನೆ ಆ ಕಡೆ ಇದಾವ” ಎಂದು ಹೇಳಿ ಕಳಿಸಿದ್ದನ್ನು ನಾನು ಮನೆಗೆ ಬಂದಕೂಡಲೆ ತಿಳಿಸಿದಳು. ನಾನು ಕೂಡಲೇ ಆ ಪೋಸ್ಟ್ ಮ್ಯಾನ್ ನನ್ನು ಹುಡುಕಿಕೊಂಡು ಹೋಗಿ ಪತ್ರ ತೆಗೆದುಕೊಂಡು ಬಂದೆ.

ನನ್ನ ತಾಯಿಯ ದೇವರುಗಳು ಬಹಳವಿದ್ದವು. ವಾರದಲ್ಲಿ ಐದು ದಿನ ವಿವಿಧ ಪ್ರಕಾರದ ಉಪವಾಸ ವ್ರತ ಕೈಗೊಳ್ಳುತ್ತಿದ್ದಳು. ಅವಳು ದೇವರುಗಳಿಗೆ, ದರ್ಗಾಗಳಿಗೆ ತೆಂಗಿನಕಾಯಿ ಒಡೆದು ನೈವೇದ್ಯ ಅರ್ಪಿಸುವುದನ್ನು ನೋಡಿಯೆ ನಾನು ದೇವರುಗಳ ಬಗ್ಗೆ ಬೇಸರಪಟ್ಟುಕೊಂಡೆ. ಆ ಹಣದಿಂದ ನಮಗೆ ಏನಾದರೂ ಕೊಡಿಸಬಹುದಿತ್ತು ಎಂದು ಅನಿಸುತ್ತಿತ್ತು. ಆದರೆ ಅವಳ ನಂಬಿಕೆಯನ್ನು ನನ್ನ ತಂದೆಯೂ ಪ್ರಶ್ನಿಸುತ್ತಿರಲಿಲ್ಲ. ಅವಳು ಪದೆ ಪದೆ “ಒಂದೇ ಮಾತರಂ” ಎನ್ನುತ್ತಿದ್ದಳು. ಹೀಗೆ “ವಂದೇ ಮಾತರಂ” ತಾಯಿಯ ಬಾಯಲ್ಲಿ ವಿಶ್ವರೂಪ ಪಡೆದು ನನ್ನ ಬಾಳಿಗೆ ಬೆಳಕಾಯಿತು. ಅವಳ ಪ್ರಕಾರ “ಒಂದೇ ಮಾತರಂ” ಎಂದರೆ “ಎಲ್ಲರೂ ಒಂದೇ” ಎಂಬ ಅರ್ಥ ಸ್ಫುರಿಸುವಂಥದ್ದು.

ರಂಜಾನ್ ದಿನ ಹಬ್ಬದೂಟ ಮಾಡಲು ಲಿಂಗಾಯತ ಗೆಳತಿಯರು ಮನೆಗೆ ಬಾರದ ಕಾರಣ, ಅವರೂ ಹಬ್ಬದೂಟ ಮಾಡಲಿ ಎಂದು, ಅವರ ಮನೆಗಳಿಗೆ ಹೋಗಿ ಸೀದಾ (ಕಡ್ಲಿಬೇಳೆ, ಬೆಲ್ಲ, ಗೋಧಿ) ಕೊಟ್ಟು ಬರುತ್ತಿದ್ದಳು. ಆದರೆ ಕಂದೀಲು ಹಚ್ಚುವುದರಿಂದ ಸೀಮೆ ಎಣ್ಣೆ ಬಹಳ ಖರ್ಚಾಗುವುದೆಂದು ರಾತ್ರಿ ಮನೆಯಲ್ಲಿ ಚಿಮಣಿ ಹಚ್ಚುತ್ತಿದ್ದಳು. ನಾವು ಆ ಬೆಳಕಲ್ಲೇ ಓದುತ್ತಿದ್ದೆವು.

ನಮಗೆ ನಮ್ಮವೇ ಆದ ಔಷಧಿಗಳಿದ್ದವು. ನಮ್ಮ ಗಂಟಲಿಗೆ ಅಲ್ಲೇಪಾಕ ಔಷಧಿಯಾಗಿತ್ತು. ಒಬ್ಬ ಹಿರಿಯರು ಬಲಗೈಯಲ್ಲಿ ಅಗಲವಾದ ತಟ್ಟೆ ಹಿಡಿದು ಎಡಗೈಯನ್ನು ಹುಟ್ಟಿನಿಂದಲೇ ಕುಂಟಾದ ಎಡಗಾಲಿನ ಮೊಳಕಾಲಮೇಲೆ ಇಟ್ಟು ಕುಂಟುತ್ತ “ಅಲ್ಲೇಪಾಕ್” ಎಂದು ಕೂಗುತ್ತ ಬರುತ್ತಿದ್ದರು.

ತಟ್ಟೆಯಲ್ಲಿ ಅಲ್ಲೇಪಾಕಿನ ಚೌಕಾದ ಹಳದಿ ಬಣ್ಣದ ತುಕಡಿಗಳು ವ್ಯವಸ್ಥಿತವಾಗಿ ಇರುತ್ತಿದ್ದವು. ಅಲ್ಲ (ಹಸಿಶುಂಠಿ) ಮತ್ತು ಸಕ್ಕರೆಯಿಂದ ಪಾಕ ಮಾಡಿ ತಯಾರಿಸುವ ಇದನ್ನು ತಿಂದರೆ ಗಂಟಲು ಕೆರೆತ ನಿಲ್ಲುವುದು. ಆದರೆ ನಾನು ಅದನ್ನು ತಿನ್ನುವ ಬಯಕೆಯಿಂದಾಗಿ ‘ಗಂಟಲು ಕೆದರುತ್ತಿದೆ’ ಎನ್ನುತ್ತಿದ್ದೆ. “ಅಲ್ಲೇಪಾಕ್” ಎಂದು ಆ ಹಿರಿಯರು ರಾಗಬದ್ಧವಾಗಿ ಕೂಗುವುದು ಖುಷಿ ಕೊಡುತ್ತಿತ್ತು.

ಕಾಲಿಗೆ ಮುಳ್ಳು ನೆಟ್ಟಾಗ ಅದು ಒಮ್ಮೊಮ್ಮೆ ಆಳಕ್ಕೆ ಹೋಗಿ ಹೊರತೆಗೆಯಲಿಕ್ಕಾಗುತ್ತಿರಲಿಲ್ಲ. ಆಗ ಪಾದದಲ್ಲಿ ಮುಳ್ಳು ನೆಟ್ಟ ಜಾಗಕ್ಕೆ ಸೂಜಿಯಿಂದ ಮೂಗು ಮಾಡಿ ಎಕ್ಕಿಯ ಹಾಲನ್ನು ಹಾಕುತ್ತಿದ್ದೆ. ನಂತರ ಆ ಜಾಗ ಮೆತ್ತಗಾಗಿ ಮುಳ್ಳು ಹೊರತೆಗೆಯಲು ಸಾಧ್ಯವಾಗುತ್ತಿತ್ತು.

ತಲೆ ಒಡೆದರೆ ಸಕ್ಕರೆ ಅರೆದು ಹಚ್ಚುತ್ತಿದ್ದ ನೆನಪು. ಒಂದು ಸಲ ಚಣ್ ಚಣ್ ವಟ್ಟಾ ಆಡುತ್ತಿರುವಾಗ ನನ್ನಿಂದಾಗಿ ಒಬ್ಬ ಹುಡುಗನ ತಲೆಗೆ ಗಾಯವಾಯಿತು. ನನಗೋ ಗಾಬರಿಯಾಯಿತು. ಚಣ್ ಚಣ್ ವಟ್ಟಾ ಎಂಬ ಟೊಳ್ಳು ಮತ್ತು ಚೌಕಾದ ಕಬ್ಬಿಣದ ತುಂಡಿನಿಂದ ನನ್ನ ತಲೆಗೆ ಕುಟ್ಟಲು ಹೇಳಿದೆ. ಆತ ಅಳುತ್ತ ಕುಟ್ಟಿದ. ನನಗೂ ರಕ್ತ ಬಂದಾಗ ಖುಷಿಯಾಯಿತು. ಏಕೆಂದರೆ ಅವನ ತಾಯಿಯಿಂದ ಬೈಸಿಕೊಳ್ಳುವುದು ತಪ್ಪಿತು. ಮನೆಗೆ ಬಂದಾಗ ತಾಯಿ ಸಕ್ಕರೆ ಕುಟ್ಟಿ ಗಾಯಕ್ಕೆ ಹಚ್ಚಿದಳೆಂದು ಕಾಣುತ್ತದೆ.

ಆಟ ಆಡುವಾಗ ಕಾಲಿಗೆ ತರಚಿದರೆ ಗಾಯಮರಿ ತಪ್ಪಲನ್ನು ಹಿಂಡಿ ಅದರ ರಸವನ್ನು ಹಚ್ಚುತ್ತಿದ್ದೆವು.

ಆ ಬೀದಿಯ ಮೇಲ್ಜಾತಿಯ ಯಾರೂ ಹೀಗೆ ವಿಳಾಸ ಬರೆಯುತ್ತಿರಲಿಲ್ಲ. ಅಷ್ಟೇ ಅಲ್ಲದೆ ನಾವಿಗಲ್ಲಿ ಬದಲಿಗೆ ‘ಮಠಪತಿಗಲ್ಲಿ’ ಎಂದು ಬರೆಯುತ್ತಿದ್ದರು. ನಮ್ಮ ಮನೆಯ ಹಿಂದೆಯೆ ಮಠಪತಿ ಗಲ್ಲಿ ಇದ್ದುದರಿಂದ ಪೋಸ್ಟ್ ಮ್ಯಾನ್‌ಗೆ ಇದೆಲ್ಲ ಫರಕು ಬೀಳುತ್ತಿರಲಿಲ್ಲ.

ಹಲ್ಲು ನೋವಾದಾಗ ತೊಗರಿ ಎಲೆ ಮತ್ತು ಉಪ್ಪು ಕುಟ್ಟಿ ನೋವಾದ ಹಲ್ಲಿನ ಮೇಲೆ ಇಡುತ್ತಿದ್ದೆವು. ಇಲ್ಲವೆ ಪೇರುಕಾಯಿ ಎಲೆ ಮತ್ತು ಉಪ್ಪು ಹಾಕಿ ಕುದಿಸಿದ ನೀರನ್ನು ಮುಕ್ಕಳಿಸುತ್ತಿದ್ದೆವು.

ಮಾವಿನಹಣ್ಣಿನ ಹಂಗಾಮಿನಲ್ಲಿ (ಸೀಜನ್) ಅಜ್ಜಿ ಬಾಳೆಹಣ್ಣು ಮಾರುವುದನ್ನು ಬಿಟ್ಟು ಮಾವಿನಹಣ್ಣು ಮಾರುತ್ತಿದ್ದಳು. ಆಗ ವಿವಿಧ ಜಾತಿಯ ಮಾವಿನ ಹಣ್ಣುಗಳನ್ನು, ಅಡಿ ಹಾಕಿದ ಸ್ಥಳಗಳಿಗೆ ಹೋಗಿ, ಚೌಕಾಸಿ ಮಾಡಿ ಹಣ್ಣುಗಳ ಸಗಟು ವ್ಯಾಪಾರ ಮಾಡಬೇಕಿತ್ತು. ಆಗ ಅಜ್ಜಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು. ಒಂದೊಂದು ಅಡಿ (ಮಾವಿನಕಾಯಿಗಳನ್ನು ಹಣ್ಣು ಮಾಡುವುದಕ್ಕಾಗಿ ಗೋಧಿಯ ಹುಲ್ಲಿನಲ್ಲಿ ಮುಚ್ಚಿ ಇಡುವ ವ್ಯವಸ್ಥೆ)ಯಲ್ಲಿ ಒಂದೊಂದು ಜಾತಿಯ ಹಣ್ಣುಗಳಿರುತ್ತಿದ್ದವು. ಸಕ್ಕರಿಗುಟ್ಲಿಯಿಂದ ಹಿಡಿದು ಆಪೂಸ್ ವರೆಗೆ ಎಲ್ಲ ಹಣ್ಣುಗಳನ್ನು ತಿನ್ನುವ ಅವಕಾಶ ನನಗೆ ಸಿಗುತ್ತಿತ್ತು. ಹಣ್ಣು ತಿನ್ನಿಸುವ ಕಾರಣಕ್ಕಾಗಿಯೆ ಅಜ್ಜಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು. (ಸಬ್ಬಸಗಿ ವಾಸನೆಯ ಹಣ್ಣು ಮಾತ್ರ ನನಗೆ ಇಷ್ಟ ವಾಗುತ್ತಿರಲಿಲ್ಲ.)

ಸಪ್ಪಗೆ, ಹುಳಿ, ಸಿಹಿ ಮುಂತಾದ ಹಣ್ಣುಗಳಿರುತ್ತಿದ್ದವು. ಕೆಲವೊಂದರಲ್ಲಿ ನಾರಿನ ಅಂಶ ಜಾಸ್ತಿ ಇದ್ದರೆ ಕೆಲವೊಂದರಲ್ಲಿ ನಾರಿನ ಅಂಶ ಇದ್ದದ್ದೇ ಗೊತ್ತಾಗುತ್ತಿರಲಿಲ್ಲ. ಕೆಲವೊಂದು ಹಣ್ಣುಗಳು ಶೀಕರಣಿಗೆ ಯೋಗ್ಯವಾಗಿದ್ದರೆ, ಇನ್ನೂ ಕೆಲವು ಹಣ್ಣುಗಳು ಹಾಗೇ ತಿನ್ನಲು ಯೋಗ್ಯವಾಗಿರುತ್ತಿದ್ದವು.

ಎಲ್ಲ ಅಡಿಗಳಲ್ಲಿ ಅಜ್ಜಿ ಎಲ್ಲ ತೆರನಾದ ಹಣ್ಣುಗಳ ಸ್ಯಾಂಪಲ್ ನೋಡಿದ ನಂತರ ನನಗೆ ತಿನ್ನಲು ಕೊಡುತ್ತಿದ್ದಳು. ಕಡಿಮೆ ರೇಟಿನಿಂದ ಹೆಚ್ಚಿನ ರೇಟಿನವರೆಗಿನ ಎರಡು ಮೂರು ತೆರನಾದ ಹಣ್ಣುಗಳ ಸಗಟು ವ್ಯಾಪಾರ ಮಾಡಿ, ಸಿದ್ಧೇಶ್ವರ ಗುಡಿಯ ಹತ್ತಿರದ ಬೇವಿನ ಗಿಡದ ಕೆಳಗೆ ಕುಳಿತು ವ್ಯಾಪಾರ ಮಾಡುತ್ತಿದ್ದಳು.

ಬಡ ಗಿರಾಕಿಗಳಿಂದ ಹಿಡಿದು ಶ್ರೀಮಂತ ಗಿರಾಕಿಗಳವರೆಗೆ ಅವರ ಶಕ್ತ್ಯನುಸಾರ ಹಣ್ಣುಗಳನ್ನು ಕೊಳ್ಳುತ್ತಿದ್ದರು. ಹಣ್ಣುಗಳನ್ನು ಕೊಳ್ಳುವಾಗ ರೇಟಿಗೆ ಸಂಬಂಧಿಸಿದ ಕೊಸರಾಟ ಮಜಾ ಅನಿಸುತ್ತಿತ್ತು. ಗಿರಾಕಿಗಳು ತಮ್ಮ ಎಲ್ಲ ತರ್ಕ ಉಪಯೋಗಿಸಿ ಕಡಿಮೆ ಬೆಲೆಗೆ ಕೇಳುತ್ತಿದ್ದರು. ಆ ಹಣ್ಣುಗಳನ್ನು ತರುವ ಕಷ್ಟ, ಅದಕ್ಕಾಗಿ ಮಾಡಿದ ಖರ್ಚು, ಗಿರಾಕಿಗಳು ಕೇಳುವ ಬೆಲೆಗಿಂತ ಹೆಚ್ಚಾಗಿದೆ ಎಂಬುದನ್ನು ಅಜ್ಜಿ ವಿವರಿಸುತ್ತಿದ್ದಳು. ಇಷ್ಟಕ್ಕಾದರೆ ಕೊಡು ಎಂದು ಹೇಳುತ್ತ ಗಿರಾಕಿಗಳು ಮುಂದೆ ಹೋದಂತೆ ಮಾಡುತ್ತಿದ್ದರು. ಅಜ್ಜಿ ಕರೆಯದೆ ಇದ್ದಾಗ ಮತ್ತೆ ವಾಪಸ್ ಬರುತ್ತಿದ್ದರು. ಕೊನೆಗೂ ಒಂದು ಬೆಲೆ ನಿರ್ಧಾರವಾಗಿ ವ್ಯಾಪಾರ ಸಾಂಗವಾಗಿ ನೆರವೇರುತ್ತಿತ್ತು.

ವಿಜಾಪುರದಲ್ಲಿ ಒಬ್ಬ ವಿಶಿಷ್ಟವಾದ ಕಳ್ಳ ಇದ್ದ. ಕಳ್ಳರು ಹೆಚ್ಚಾಗಿ ಒಂದೇ ಪ್ರಕಾರದ ವಸ್ತುಗಳನ್ನು ಕಳ್ಳತನ ಮಾಡುತ್ತಾರೆ. ಸೈಕಲ್ ಕಳ್ಳರು ಕಾರು ಕಳ್ಳತನ ಮಾಡುವ ಅವಕಾಶ ಸಿಕ್ಕರೂ ಮಾಡುವುದಿಲ್ಲ. ಬೈಕ್ ಕಳ್ಳರು ಸೈಕಲ್ ಕಳ್ಳತನ ಮಾಡುವುದಿಲ್ಲ. ಬಂಗಾರ ಕಳ್ಳರು ಬೇರೆ ವಸ್ತುಗಳ ಕಳ್ಳತನಕ್ಕೆ ಹೋಗುವುದಿಲ್ಲ. ಕಾರಣವಿಷ್ಟೇ, ಕಳ್ಳತನಕ್ಕೆ ಅದಕ್ಕೇ ಆದ ವಿವಿಧ ಹಂತಗಳಿರುತ್ತವೆ. ಒಂದು ವಸ್ತುವನ್ನು ಕದಿಯುವವನು ಆ ಕಳ್ಳ ಮಾಲನ್ನು ಕೊಳ್ಳುವವರ ಜೊತೆ ಸಂಪರ್ಕ ಹೊಂದಿರುತ್ತಾನೆ. ಆತ ತನಗಿಂತಲೂ ದೊಡ್ಡದಾದ ಕಳ್ಳಮಾಲು ಖರೀದಿಸಿ ಚೋರ್ ಬಜಾರ್ ಗೆ ಸಾಗಿಸುವ ಸಾಮರ್ಥ್ಯ ಹೊಂದಿರುತ್ತಾನೆ. ಹೀಗೆ ಅವರದೇ ಆದ ವಲಯದಲ್ಲಿ ಕಳ್ಳರು ವ್ಯವಹರಿಸುತ್ತಿರುತ್ತಾರೆ.

ಆದರೆ ವಿಜಾಪುರದ ಈ ವಿಶಿಷ್ಟ ಕಳ್ಳ ಮಾರುವ ಗೋಜಿಗೆ ಹೋಗುತ್ತಿರಲಿಲ್ಲ. ಕಳವು ಮಾಡಿದ ವಸ್ತುಗಳ ಬಳಕೆಯನ್ನೂ ಮಾಡುತ್ತಿರಲಿಲ್ಲ. ಕಳ್ಳತನ ಮಾಡಿ ರಕ್ಷಿಸಿ ಇಡುವುದರಲ್ಲಿ ಮಾತ್ರ ಆತ ತಲ್ಲೀನನಾಗಿರುತ್ತಿದ್ದ. ಗಿರಣಿಯಲ್ಲಿ ಬಿದ್ದ ಹಿಟ್ಟು ತಂದು ಮುದ್ದೆ ಮಾಡುತ್ತಿದ್ದ. ಹೆದ್ದಾರಿ ಬದಿಯ ಹುಣಸೆ ಮರದ ತೊಪ್ಪಲಿನಿಂದ ಮಾಡಿದ ಸಾರಿನ ಜೊತೆ ತಿನ್ನುತ್ತಿದ್ದ. ಆ ಬಡಕಲು ವ್ಯಕ್ತಿ ಸಿಕ್ಕಿದ್ದು ಕೂಡ ಆಕಸ್ಮಿಕವೇ ಆಗಿದೆ.

ಆಗ ಅಬ್ಕಾರಿ ಇಲಾಖೆ ಇರಲಿಲ್ಲ. ಅನೇಕರು ಕಳ್ಳಬಟ್ಟಿಗೆ ಮಾರುಹೋಗುತ್ತಿದ್ದರು. ಕೆಲವರು ಕುರುಚಲು ಅಡವಿಯಲ್ಲಿ ಕಳ್ಳಬಟ್ಟಿ ಮಾಡಿ ಕಳ್ಳತನದಿಂದ ಮಾರುತ್ತಿದ್ದರು. ಅವರನ್ನು ಹಿಡಿಯಲು ಪೊಲೀಸರು ಓಡಾಡುತ್ತಿದ್ದರು.

ಒಂದು ಸಲ ವಿಜಾಪುರದಲ್ಲಿ ಭಾರಿ ಮಳೆಬಂದಿತು. ಆ ದಿನ ಪೊಲೀಸರು ಕಳ್ಳಭಟ್ಟಿ ಮಾಡುವವರನ್ನು ಹಿಡಿಯಲು ಭೂತನಾಳ ತಾಂಡಾ ಬಳಿಯ ಕುರುಚಲು ಅರಣ್ಯದಲ್ಲಿ ಓಡಾಡುವಾಗ ಒಬ್ಬ ಪೇದೆಯ ಕಾಲು ನೆಲದಲ್ಲಿ ಸಿಕ್ಕಿಕೊಂಡಿತು. ಅಲ್ಲಿ ಹಡ್ಡಿ ನೋಡಿದಾಗ ಕಳ್ಳ ಮಾಲುಗಳ ಸಂಗ್ರಹವೇ ಅಲ್ಲಿತ್ತು!

ಅಲ್ಲಿಯೆ ದೂರದಲ್ಲಿದ್ದ ಕಳ್ಳ ಸಿಕ್ಕಿಬಿದ್ದ.

ಆ ಕಳ್ಳ ಕದ್ದ ಪ್ರತಿಯೊಂದು ವಸ್ತುವನ್ನು ಗಾಂಧೀಚೌಕ ಪೊಲೀಸ್ ಠಾಣೆಯಲ್ಲಿ ಪ್ರದರ್ಶನಕ್ಕೆ ಇಟ್ಟು ಅವನನ್ನು ಕಸ್ಟಡಿಯಲ್ಲಿ ನಿಲ್ಲಿಸಿದ್ದರು. ಆತ ಕದ್ದ ಹಲವು ಹದಿನೆಂಟು ರೀತಿಯ ವಸ್ತುಗಳು ಅಲ್ಲಿದ್ದವು. ಬಂಗಾರದ ಸರಗಳು, ಬೆಳ್ಳಿಯ ಗೆಜ್ಜೆಸರಗಳು, ಆ ಕಾಲದ ದೊಡ್ಡ ಸೈಜಿನ ರೇಡಿಯೊಗಳು, ಗ್ರಾಮೋಫೋನಗಳು, ಚದ್ದರ್ ಜಮಖಾನೆಗಳು, ಗ್ಲಾಸು ಬಟ್ಟಲುಗಳು, ತಪೇಲಿ ಪರಾತುಗಳು, ಸೈಕಲ್, ನೀರೆತ್ತುವ ಮಷೀನ್, ಎಡೆಯ ಮೇಲೆ ಮುಚ್ಚುವ ಕಸೂತಿ ಹಾಕಿದ ವಸ್ತ್ರ, ಮಕ್ಕಳ ಆಟಿಕೆ ಸಾಮಾನು, ಹಣಿಗೆ ಮುಂತಾದವು ಕಳ್ಳಮಾಲಿನಲ್ಲಿ ಸೇರಿದ್ದವು!

ಬಿ ಎಲ್ ಡಿ ಇ ಸಂಸ್ಥೆಯ ಆವರಣದೊಳಗಿನ ವಿಜಯ ಕಾಲೇಜಿನಲ್ಲಿ ಕಳ್ಳತನವಾಗಿತ್ತು. ಅದೇ ಆವರಣದಲ್ಲಿ ಲಿಂಗದ ಗುಡಿಯ ನಿರ್ಮಾಣವಾಗುತ್ತಿತ್ತು. ಆಗ ಅದರ ಚರ್ಚೆ ಬಹಳವಾಗಿತ್ತು. ನನಗೋ ನೋಡುವ ಕುತೂಹಲ. ಒಂದುದಿನ ಅರ್ಜುನ ಮಾಮಾನ ತೋಟದಲ್ಲಿದ್ದಾಗ ನನ್ನ ತಮ್ಮನನ್ನು ಕರೆದುಕೊಂಡು ನೋಡಲು ಹೋದೆ. ಆಗ ಅಲ್ಲಿ ಹೋಗುವಾಗ ಒಂದಿಷ್ಟು ನಿರ್ಜನ ಪ್ರದೇಶವನ್ನು ದಾಟಿಹೋಗಬೇಕಿತ್ತು. ಕಳ್ಳರು ನಮ್ಮನ್ನು ಕೊಂದರೆ ಏನು ಗತಿ ಎಂದು ಅಂಜುತ್ತಲೆ ಹೋದೆವು. ಅಲ್ಲಿ ಕಟ್ಟಡದ ಕಲ್ಲುಗಳನ್ನು ರಾಶಿ ಹಾಕಲಾಗಿತ್ತು. ಶಿಲ್ಪಿಗಳು ಬಹುಶಃ ಬಳಪದ ಕಲ್ಲಿನಲ್ಲಿ ಚಿಕ್ಕ ಚಿಕ್ಕ ಲಿಂಗಗಳನ್ನು ತಯಾರಿಸುತ್ತಿದ್ದರು. ಅಲ್ಲಿ ನಿಂತು ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಒಬ್ಬರು ಇಲ್ಲಿ ಲಿಂಗದ ಗುಡಿ ತಯಾರಾದ ಮೇಲೆ ಒಳಗಡೆ ೭೭೦ ಲಿಂಗಗಳನ್ನು ಕೂಡಿಸಲಾಗುವುದು ಎಂದರು. (ಈಗ ಆಗಿದ್ದರೆ ಕೇಳುತ್ತಿದ್ದೆ: ಆ ಅಮರಗಣಂಗಳು ಸ್ಥಾವರಲಿಂಗ ಬಿಟ್ಟು ಇಷ್ಟಲಿಂಗಕ್ಕೆ ಬಂದವರು. ಅವರ ನೆನಪಿಗಾಗಿ ಇಷ್ಟಲಿಂಗಗಳ ಮಾದರಿ ಇಡುವುದು ಬಿಟ್ಟು ಸ್ಥಾವರಲಿಂಗಗಳ ಮಾದರಿ ಏಕೆ ಇಡುತ್ತಿದ್ದೀರಿ ಎಂದು.)

ನಾವು ಬಾಲಕರಿದ್ದಾಗಲೇ ಕುಟುಂಬ ನಿಯಂತ್ರಣದ ಕಾರ್ಯಕ್ರಮಗಳು ಪ್ರಾರಂಭವಾಗಿದ್ದವು. ಸಂಬಂಧಪಟ್ಟ ಸರ್ಕಾರಿ ಸಿಬ್ಬಂದಿ ಮನೆ ಮನೆಗೆ ಬಂದು ನಿರೋಧಗಳ ಬಗ್ಗೆ ಮಾಹಿತಿ ನೀಡಿ ಕೊಟ್ಟು ಹೋಗುತ್ತಿದ್ದರು. ನಮಗೋ ಅವು ದೊಡ್ಡ ಬಲೂನಗಳಂತೆ ಕಂಡು ಖಷಿ ಕೊಡುತ್ತಿದ್ದವು. ನಾವೆಲ್ಲ ಹುಡುಗರು ಅವುಗಳನ್ನು ಬಲೂನು ಮಾಡಿ ಉದ್ದನೆಯ ದಾರ ಕಟ್ಟಿ ಓಡಾಡುತ್ತಿದ್ದೆವು.

 (ಚಿತ್ರಗಳು: ಸುನೀಲಕುಮಾರ ಸುಧಾಕರ)