”ಚಲಂರ ಹಳೆಯ ಬೇರುಗಳು ತೀರಾ ಆಳಕ್ಕೆ ಇಳಿದ್ದಿದ್ದವು. ಅವರು ಎಚ್ಚರವಾಗುವಷ್ಟರಲ್ಲಿ ಕಾಲದ ತುದಿಗೆ ಬಂದು ನಿಂತಿದ್ದರು. “ಕುಟ್ಟಿ ಜಪಾನ್”ನಂತರ ಒಂದು ಒಳ್ಳೆಯ ಕೃತಿಯನ್ನು ನನ್ನಿಂದ ಮಾಡಲಾಗಲಿಲ್ಲವಲ್ಲ ಎಂಬ ಕೊರಗು ಅವರನ್ನು ಕಾಡುತ್ತಲೇ ಇತ್ತು. ಕೆಲವೊಮ್ಮೆ ಮಾತಿನ ಮಧ್ಯೆ “ಕುಟ್ಟಿ ಜಪಾನ್” ಚಿತ್ರದ ಬಗ್ಗೆ ವಿಚಾರ ಬಂದಾಗೆಲ್ಲಾ ಅದನ್ನು ಮರೆಸಿ, ಬೇರೆಡೆಗೇ ಮಾತನ್ನು ಎಳೆಯುತ್ತಿದ್ದರು”
ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ, ಕಲಾವಿದ ಎಂ.ಎಸ್. ಪ್ರಕಾಶ್ ಬಾಬು ಬರೆದ ಒಂದು ಆತ್ಮೀಯ ವ್ಯಕ್ತಿಚಿತ್ರ.

 

ಚಲಂ ಬಗ್ಗೆ ಬರೆಯಬೇಕೆಂದು ಕುಳಿತಾಗೆಲ್ಲಾ ಕೆಲಸಗಳ ಒತ್ತಡಗಳಿಂದಾಗಿ ಬರೆಯಲಾಗಿರಲಿಲ್ಲ. ಎಷ್ಟೋ ಬಾರಿ ಬರೆಯಲೇ ಬೇಕೆಂದು ಹಠತೊಟ್ಟು ಕುಳಿತಾಗ ನೆನಪುಗಳ ಪ್ರವಾಹವೇ ಹರಿದು ಬಂದು ಎಲ್ಲಿಂದ ಆರಂಭಿಸುವುದು ಎಂದು ತಿಳಿಯದೇ ಹಾಗೇ ಆ ನೆನಪುಗಳ ಅಲೆಯಲ್ಲಿ ತೇಲಿಹೋಗಿದ್ದೇನೆ. ಎಷ್ಟೋ ಬಾರಿ ಚಲಂ ನನ್ನ ಪಕ್ಕದಲ್ಲೇ ಕುಳಿತು ಮಾತಾಡುತ್ತಿದ್ದಾರೆ ಅಂತ ಅನ್ನಿಸಿದ್ದಿದೆ. ಅವರು ನನ್ನಿಂದ ದೂರವಾಗಿದ್ದಾರೆ, ಮತ್ತೆಂದೂ ಮರಳಿ ಬರುವುದಿಲ್ಲ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಅವರ ಆ ಆತ್ಮೀಯ ಒಡನಾಟ, ಆ ತೀವ್ರವಾದ ಪ್ರೀತಿ, ಮಾನವೀಯ ಸಂಬಂಧಗಳಿಗೆ ಅವರು ಕೊಡುತ್ತಿದ್ದ ಮಹತ್ವ, ಇವುಗಳನ್ನೆಲ್ಲ ಮೆಲುಕುಹಾಕುತ್ತಾಹೋದಂತೆಲ್ಲಾ ಕಳೆದು ಹೋದ ಪುಟಗಳು ಒಂದೊಂದೇ ತೆರೆಯುತ್ತಾ ಸಾಗುತ್ತವೆ….

ಒಮ್ಮೆ ಚಲಂ ಫೋನ್ ಮಾಡಿ “ಏನ್ ಸಾರ್ ಎಲ್ಲಿದ್ದೀರಾ?”ಎಂದರು, ನಾನು “ಮನೆಯಲ್ಲಿ” ಅಂದೆ, “ಈಗಷ್ಟೆ ಮನೆಯಿಂದ ಹೊರಡುತ್ತಿದ್ದೇನೆ, ಒಂದು ಗಂಟೆಯೊಳಗೆ ನಿಮ್ಮ ಮನೆಯಲ್ಲಿರುತ್ತೇನೆ” ಅಂದರು. ಒಂದು ಬರ್ಮೊಡ, ಟೀ ಶರ್ಟ್ ಹಾಕೊಂಡು, ಸಪೂರ ದೇಹದ ಚಲಂ ಜೀವನೋತ್ಸಾಹದ ತಮ್ಮ ಎಂದಿನ ಬದುಕಿಗೆ ಅದ್ದಿದ ಪ್ರೀತಿಯ ನಗುವಿನೊಂದಿಗೆ ಬಾಗಿಲಲ್ಲಿ ನಿಂತಿದ್ದರು. ಕೈಯಲ್ಲಿ ಕೇಕಿನ ಬಾಕ್ಸ್, ಹೆಗಲಿಗೆ ಒಂದು ಚೀಲ. ಕೇಕಿನ ಬಾಕ್ಸ್ನ್ನು ಟೇಬಲ್ ಮೇಲಿಟ್ಟು ಬಿಗಿದಪ್ಪಿಕೊಂಡು ಶುಭಾಶಯ ಹೇಳಿದರು, ನನಗೆ ಏನಕ್ಕಾಗಿ ಶುಭಾಶಯ ಹೇಳುತ್ತಿದ್ದಾರೆಂದು ಈಗಾಗಲೇ ತಿಳಿದಿತ್ತು. ನನ್ನ ಮೊದಲ ಫೀಚರ್ ಫಿಲ್ಮ್ “ಅತ್ತಿಹಣ್ಣು ಮತ್ತು ಕಣಜ”ಮುಂಬಯಿ ಅಂತರ್ರಾಷ್ಟೀಯ ಸಿನೆಮೋತ್ಸವದಲ್ಲಿ, ಇಂಡಿಯಾ ಗೋಲ್ಡ್ ಸ್ಪರ್ಧಾ ವಿಭಾಗದಲ್ಲಿ ಮೊದಲ ಬಾರಿಗೆ ಪ್ರವೇಶ ಪಡೆದಿತ್ತು. ನಾನೇನು ಅಷ್ಟೇನು ಉತ್ಸುಕನಾಗಿರಲಿಲ್ಲ, ನನ್ನ ಚಿತ್ರದ ಬಗ್ಗೆ ನನ್ನ ನಿರೀಕ್ಷೆ ಗಳು ಬೇರೆನೇ ಇತ್ತು. ಆದರೆ ಚಲಂ ತಾವೇ ಗೆದ್ದಷ್ಟು ಸಂಭ್ರಮದಲ್ಲಿದ್ದರು. ಅವರು ಹೇಳಿದ್ದಿಷ್ಟೆ “ನಾವು ಮಹತ್ವಾಕಾಂಕ್ಷಿಗಳಾಗಿರಬೇಕು, ಆದರೆ, ಸಣ್ಣ ಸಣ್ಣ ಖುಷಿಗಳನ್ನು ಸಂಭ್ರಮಿಸಬೇಕು, ಇಲ್ಲಿ ಯಾವುದೂ ಸಣ್ಣದು ದೊಡ್ಡದು ಅಂತಾ ಇರುವುದಿಲ್ಲ”. ಹೀಗೆ ಚಲಂ ಬೇರೆಯವರ ಸಾಧನೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಹುರಿದುಂಬಿಸಿ, ಖುಷಿ ಪಡುತಿದ್ದರು. ಬೇರೆಯವರ ಕಷ್ಟ ಸುಖಗಳನ್ನು ತಮ್ಮದೇ ಎನ್ನುವಷ್ಟು ಭಾವ ತೀವ್ರತೆಯಿಂದ ಅನುಭವಿಸುತ್ತಿದ್ದರು. ಬದುಕಿನಲ್ಲಿ ಈ ರೀತಿಯ ಗೆಳೆಯರು ಸಿಗುವುದು ತುಂಬಾ ವಿರಳ, ಆ ರೀತಿಯಾಗಿ ಚಲಂ ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯವೆಂದು ತಿಳಿಯುತ್ತೇನೆ.

ಡಿ.ಆರ್.ನಾಗರಾಜ್ ಕೂಡ ಹಾಗೇ ಇದ್ದವರು, ಬದುಕನ್ನು ತೀವ್ರವಾಗಿ ಅನುಭವಿಸುತ್ತಿದ್ದರು. ಎಷ್ಟೋ ಜನಕ್ಕೆ ಗೊತ್ತಿಲ್ಲ ಅವರು ಎಷ್ಟು ಭಾವಜೀವಿ ಎನ್ನುವುದು. ಎಷ್ಟೋ ವಿಮರ್ಶಕರು ತಮ್ಮ ತಲೆಯ ಸುತ್ತ ಪ್ರಭಾವಳಿಯನ್ನು ನಿರ್ಮಿಸಿಕೊಂಡು ಜಡವಾಗಿರುತ್ತಾರೆ, ಇಲ್ಲಾ ತಮ್ಮ ಭಾವನೆಗಳನ್ನು ಹರಿಯಬಿಡುವುದಿಲ್ಲ, ಕವಿ ಹೃದಯದ ಡಿ.ಆರ್ ಇದೆಲ್ಲರಿಂದ ಹೊರತಾಗಿದ್ದರು. ಗೆಳೆಯರೊಂದಿಗಿನ ಅವರ ಉಪಸ್ಥಿತಿ ಜೀವನೋತ್ಸಾಹದ ಬುಗ್ಗೆಯಂತೆ. ಡಿ.ಆರ್ ರವರೊಂದಿಗಿನ ನನ್ನ ಒಡನಾಟ ಕೇವಲ ಎರಡು ಮೂರು ವರ್ಷದ್ದಾದರೂ ಅವರ ನೆನಪು ಮಾತ್ರ ಅಚ್ಚಳಿಯದೇ ಉಳಿದಿದೆ. ಡಿ.ಆರ್ ಮತ್ತು ಚಲಂ ರಲ್ಲಿ ಕೆಲವು ವಿಷಯಗಳಲ್ಲಿ ಸಾಮ್ಯತೆ ಇದೆ, ಇಬ್ಬರೂ ಹುಟ್ಟಿದ್ದು ಒಂದೇ ವರ್ಷ 1954ರಲ್ಲಿ, ಇಬ್ಬರೂ ಕೆಳವರ್ಗದ ಸಾಮಾನ್ಯ ಕೌಟಂಬಿಕ ಹಿನ್ನೆಲೆಯಿಂದ ಬಂದವರು. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತೂ, ಹಠಕ್ಕೆ ಬಿದ್ದು ಇಂಗ್ಲೀಷ್ ಕಲಿತವರು ಮತ್ತು ಅದರಲ್ಲೇ ತಮ್ಮ ಪಾಂಡಿತ್ಯವನ್ನು ಸಾಧಿಸಿದವರು. ಕಾಲೇಜು ದಿನಗಳಲ್ಲಿ ಪಕ್ಕಾ ಮಾರ್ಕ್ಸ್ ವಾದದಿಂದ ಪ್ರಭಾವಿತರಾಗಿ, ನಂತರದ ದಿನಗಳಲ್ಲಿ ತಮ್ಮದೇ ಆದ ಹಾದಿ ಹಿಡಿದವರು. ನಾನು ನನ್ನ ಜೀವನದಲ್ಲಿ ಸಂಧಿಸಿದ ವ್ಯಕ್ತಿಗಳಲ್ಲಿ ಈ ಇಬ್ಬರು ಪ್ರಮುಖರು. ಬದುಕನ್ನು ಇಷ್ಟು ತೀವ್ರವಾಗಿ ಅನುಭವಿಸಿ, ಪ್ರೀತಿಸಿ, ತಾವನುಭವಿಸಿದ, ಪ್ರೀತಿಸಿದ ಬದುಕನ್ನು ಇತರರಿಗೂ ಹಂಚಿ ಸುಖಿಸಿದ ವ್ಯಕ್ತಿಗಳು ಈ ಪ್ರಪಂಚದಲ್ಲಿ ಸಿಗುವುದು ತೀರಾ ಕಷ್ಟ. ಸಿಕ್ಕರೂ ಉಳಿಸಿಕೊಳ್ಳುವುದು ಇನ್ನೂ ಕಷ್ಟ.

ಅವರು ಹೇಳಿದ್ದಿಷ್ಟೆ “ನಾವು ಮಹತ್ವಾಕಾಂಕ್ಷಿಗಳಾಗಿರಬೇಕು, ಆದರೆ, ಸಣ್ಣ ಸಣ್ಣ ಖುಷಿಗಳನ್ನು ಸಂಭ್ರಮಿಸಬೇಕು, ಇಲ್ಲಿ ಯಾವುದೂ ಸಣ್ಣದು ದೊಡ್ಡದು ಅಂತಾ ಇರುವುದಿಲ್ಲ”. ಹೀಗೆ ಚಲಂ ಬೇರೆಯವರ ಸಾಧನೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಹುರಿದುಂಬಿಸಿ, ಖುಷಿ ಪಡುತಿದ್ದರು.

ಸಂತೇಬೆನ್ನೂರು ನಮ್ಮಿಬ್ಬರನ್ನು ಇನ್ನೂ ಹತ್ತಿರಕ್ಕೆ ತಂದಿತೆಂದು ಕಾಣುತ್ತದೆ. “ಚಲಂ ಬೆನ್ನೂರಕರ್”, ಇದೆಂಥಾ ಹೆಸರು, ಇವರು ಆಂಧ್ರಕ್ಕೆ ಸೇರಿದವರ, ತಮಿಳುನಾಡಿಗೆ ಸೇರಿದವರ ಅಥವಾ “ಕರ್” ಇರುವದರಿಂದ ಮಹಾರಾಷ್ಟ್ರಕ್ಕೆ ಸೆರಿದವರ? ಎಂದು ಮೊದಮೊದಲು ಯೋಚಿಸಿದ್ದೆ, ಆನಂತರ ತಿಳಿದದ್ದು ಸಂತೆಬೆನ್ನೂರು ಇಲ್ಲಿ ಬೆನ್ನೂರಕರ್ ಆಗಿದೆ ಎಂದು. ಸಂತೇಬೆನ್ನೂರಿನಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿ ಬೆಳ್ಳಿಗನೂಡು ಎಂಬ ಪುಟ್ಟ ಊರು ಇದೆ, ಅದೇ ನನ್ನಪ್ಪನ ಹುಟ್ಟೂರು, ಅಲ್ಲಿಗೆ ಹೋಗಲು ಬಸ್ ಕೂಡಾ ಇರಲಿಲ್ಲ, ಕಾಲ್ನಡಿಗೆಯಲ್ಲೇ ಹೋಗಬೇಕು. ಏನಾದರೂ ಸಂತೆ, ವ್ಯಾಪಾರ, ವ್ಯವಹಾರಕ್ಕೆ ಸಂತೇಬೆನ್ನೂರಿಗೇ ಬರಬೇಕು. ನಾನು ಚಿಕ್ಕವನಾಗಿದ್ದಾಗ ಬೇಸಿಗೆ ದಿನಗಳನ್ನು ಕಳೆಯುತ್ತಿದ್ದುದು ಸಂತೇಬೆನ್ನೂರು, ಚನ್ನಗಿರಿ, ಶಿವಮೊಗ್ಗ, ದಾವಣಗೆರೆ, ಮಲೇಬೆನ್ನೂರು, ಬಸವಾಪಟ್ಟಣ, ಹರಲೀಪುರ, ಕಾರಿಗನೂರು, ಹೂವಿನಮಡು, ತ್ಯಾವಣಿಗೆ ಸುತ್ತಮುತ್ತಲ ಪ್ರದೇಶಗಳಲ್ಲಿ. ಲಂಕೇಶ್ ಅವರು ತಮ್ಮ ಬಾಲ್ಯವನ್ನು ಕಳೆದದ್ದೂ ಈ ಪ್ರದೇಶದಲ್ಲಿಯೇ. ಹೀಗಾಗಿಯೇ ಲಂಕೇಶಪ್ಪನವರ ಕತೆ, ಕಾದಂಬರಿಗಳನ್ನು ತೀವ್ರವಾಗಿ ಅನುಭವಿಸಿ ಓದಿದ್ದೇನೆ.

ಚಲಂ ಕೆಲವು ವರ್ಷ ದಾವಣಗೆರೆಯ ಖ್ಯಾತ ಸೈನ್ ಬೋರ್ಡ್ ಪೇಂಟರ್ ಬ್ರುಷ್ ಮ್ಯಾನ್ ನಲ್ಲಿ ಅಸಿಸ್ಟೆಂಟ್ ಸೈನ್ ಬೋರ್ಡ್ ಪೇಂಟರ್ ಆಗಿ ಕೆಲಸ ಮಾಡಿದ್ದರು. ಚಲಂ ಕೂಡ ಈ ಪ್ರದೇಶಕ್ಕೇ ಸಂಬಂಧಿಸಿದವರಾದ್ದರಿಂದ ನಮ್ಮ ಚರ್ಚೆಯ ವಿಷಯಗಳಲ್ಲಿ ಅಲ್ಲಿಯ ಊರುಗಳು, ವ್ಯಕ್ತಿಗಳು ಆಗಾಗ್ಗೆ ಸುಳಿತ್ತಿದ್ದವು. ನನ್ನ ಚಿಕ್ಕಪ್ಪ ರಾಜಶೇಖರರಾಧ್ಯ ಕನ್ನಡ ಎಂ.ಎ ಮಾಡಿಕೊಂಡು ಅಲ್ಲೆ ಸಂತೇಬೆನ್ನೂರಿನಲ್ಲೆ ಸ್ಕೂಲ್ ಹೆಡ್-ಮಾಸ್ಟರ್ ಆಗಿದ್ದರು, ಅದೇ ಸ್ಕೂಲ್ ನಲ್ಲಿ ಚಲಂರ ತಾಯಿ ಟೀಚರ್ ಆಗಿದ್ದರು. “ನಿಮ್ಮ ಚಿಕ್ಕಪ್ಪ ನನ್ನವ್ವನಿಗೆ ಎಷ್ಟು ಕಿರುಕುಳ ಕೊಡುತ್ತಿದ್ದ ಗೊತ್ತಾ ಸಾರ್” ಎಂದು ಹಳೆಯ ನೆನಪನ್ನು ತೆಗೆದು ತೆಗೆದು ನನಗೆ ಮುಜುಗರಕ್ಕೀಡುಮಾಡುತ್ತಿದ್ದರು. “ಈಗ ನೀವು ನನಗೆ ಕಿರುಕುಳ ಕೊಡದಿದ್ದರೆ ಸಾಕು” ಎನ್ನುತ್ತಿದ್ದೆ. ನಕ್ಕು, ನಿಮ್ಮ ಚಿಕ್ಕಪ್ಪ, ಬಲ್ನನ್ಮಗ ಕಣ್ರೀ, ಮಹಾ ಹಠವಾದಿ, ಸರ್ಕಾರಕ್ಕೇ ಸೆಡ್ಡು ಹೊಡೆದು ಛಲ ಬಿಡದೆ ಹಾಗೇ ಸತ್ತು ಹೋದ ನೋಡ್ರೀ, ಎಂದರು. ಹಳೆಯ ನೆನಪುಗಳು ಎಷ್ಟೇ ಕೆಟ್ಟವಾಗಿದ್ದರೂ, ಅವುಗಳನ್ನೂ ಮಾನವೀಯ ದೃಷ್ಠಿಯಲ್ಲೇ ನೋಡುತ್ತಿದ್ದರು. ಆ ಗತಿಸಿದ ಸಂದರ್ಭವನ್ನು ಹಾಗೇ ನೆನೆದು, ಅನುಭವಿಸಿ, ಸಣ್ಣ ಪುಟ್ಟ ವಿವರಗಳನ್ನು ಹೇಳುವುದೇ ಒಂದು ಕಲೆಗಾರಿಕೆ. ಹೀಗಾಗಿಯೇ ಚಲಂ ಅವರಿಗೆ ಕ್ರಮಬದ್ಧವಾಗಿ ಕತೆ ಹೇಳುವ ಕಲೆ ದಕ್ಕಿತ್ತು ಅಂತಾ ಕಾಣುತ್ತದೆ. ನಾನು ಅವರ ಕತೆಗಳನ್ನು ಓದಿಲ್ಲ, ಕವನಗಳನ್ನು ಓದಿದ್ದೇನೆ, ಅವರು ತಮ್ಮ ಮತ್ತು ಇತರರ ಪದ್ಯಗಳನ್ನು ಓದುವುದನ್ನೂ ಕೇಳಿಸಿಕೊಂಡಿದ್ದೇನೆ. “ರಕ್ತವಿದೆ ರಸ್ತೆಯ ಮೇಲೆ, ರಸ್ತೆಯ ಮೇಲೆ ರಕ್ತವಿದೆ” ಎಂಬ ನೆರೂಡನ ಪದ್ಯದ ಸಾಲುಗಳನ್ನು ಹೇಳುತ್ತ ಭಾವೋದ್ವೇಗದಿಂದ ಅತ್ತಿದ್ದನ್ನೂ ಕಂಡಿದ್ದೇನೆ. ಚಲಂ ಎಂಥಾ ಸಂಕೋಚದ ವ್ಯಕ್ತಿ ಎಂದರೆ ತಾನು ಬರೆದದ್ದನ್ನು ಯಾರಿಗೂ ತೋರಿಸಿಕೊಂಡು ಓಡಾಡುತ್ತಿರಲಿಲ್ಲ, ತನ್ನ ಅತ್ಮೀಯರಾದ ಕೆಲವೊರೊಂದಿಗೆ ಓದಿ, ಎಲ್ಲೋ ಒಂದುಕಡೆ ಮುಚ್ಚಿಟ್ಟುಬಿಡುತ್ತಿದ್ದರು. ನನಗೆ ಗೊತ್ತಿರುವಹಾಗೆ ಅಗ್ನಿ ಪತ್ರಿಕೆಯಲ್ಲಿ “ಜವರಾಯ” ಕವನ ಪ್ರಕಟವಾದದ್ದು, ಅದರಲ್ಲೇ ಅವರ ಸಾವಿನ ಹುಡುಕಾಟವನ್ನು ಕಾಣಬಹುದಾಗಿದೆ. ನಮ್ಮ ಖ್ಯಾತ ವಿಮರ್ಶಕರಾದ ಮನು ಚಕ್ರವರ್ತಿಯವರು ಅಗ್ನಿ ಪತ್ರಿಕೆಯ ಪ್ರತಿಯನ್ನು ಹಿಡಿದುಕೊಂಡು ಚಲಂ ಮನೆಗೆ ಓಡೋಡಿ ಬಂದಿದ್ದರು.

(‘ಕುಟ್ಟಿ ಜಪಾನಿ’ ಚಿತ್ರದ ದೃಶ್ಯ)

“ಚಲಂ, ಎಂಥಾ ಒಳ್ಳೆ ಪದ್ಯ ಬರೆದ್ದಿದ್ದೀರ್ರೀ” ಎಂದು ಒಂದೇ ಉಸಿರಿಗೆ ಹೇಳಿದ್ದರು. ಚಲಂ ಏನನ್ನೂ ಪ್ರತಿಕ್ರಿಯಿಸದೇ ಒಳನಡೆದರು. ಚಲಂ ಕನ್ನಡ ಸಾಹಿತ್ಯದೊಂದಿಗೆ ಜಾಗತಿಕ ಸಾಹಿತ್ಯದ, ವಿವಿಧ ಕಲೆಗಳ, ನಾಟಕ, ಸಿನೆಮಾಗಳ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದರು. ಕೆಟ್ಟ ಕೆಟ್ಟ ಕವನಗಳನ್ನು ಬರೆಯುವವರನ್ನು, ಕೆಟ್ಟ ನಾಟಕ, ಸಿನೆಮಾ ಮಾಡುವವರನ್ನು ಕಂಡರಾಗುತ್ತಿರಲಿಲ್ಲ. ನೇರವಾಗಿ ಸ್ಕ್ರೀನಿಂಗ್ ಸಮಯದಲ್ಲೇ ಜಗಳಕ್ಕಿಳಿದ ಉದಾಹರಣೆಗಳಿವೆ. ಆದರೆ ಬರಬರುತ್ತಾ ಮೆತ್ತಗಾದರು, ಜಗಳಗಳ ಆಸಕ್ತಿಯನ್ನೇ ಕಳೆದುಕೊಂಡರು. ಕೊನೆ ಕೊನೆಗೆ ಹೇಳುತ್ತಿದ್ದರು “ಅಲ್ಲಾ ಕಣ್ರಿ, ಒಳ್ಳೆ ಜಗಳ ಆಡೋಣ ಅಂದ್ರೂ ನಾಲ್ಕ್ ಜನ ಸಿಕ್ಕೋಲ್ಲಲ್ರಿ, ಎಂಥಾ ಕೆಟ್ಟ ಕಾಲಾರಿ ಇದು” ಎಂದು ಸುಮಾರು ಬಾರಿ ಬೇಸರ ಪಟ್ಟಿದ್ದಿದೆ. ಒಳ್ಳೆಯ ಕೃತಿಯನ್ನೇನಾದರು ಕಂಡರೆ, ಎಲ್ಲರಿಗೂ ಹೇಳಿ ಸಂಭ್ರಮಿಸುತ್ತಿದ್ದರು. ಒಂದು ಒಳ್ಳೆಯ ಸಮಾಜದ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. ಬೆಳಗಾಗುವುದರಲ್ಲೇ ಹೊಸ ನಾಡೊಂದನು ಕಟ್ಟೇಬಿಡುತ್ತೇವೆಂಬ ಹುಂಬು ಉತ್ಸಾಹ ಅವರಲ್ಲಿ ಮನೆ ಮಾಡಿತ್ತು. 70, 80ರ ದಶಕದಲ್ಲಿದ್ದ ಕನಸುಗಳು, ಭರವಸೆಗಳೆಲ್ಲಾ ಮಣ್ಣುಪಾಲಾದವೆಂದು ಮರುಗುತ್ತಿದ್ದರು. ಅವರ ಆ ಸೂಕ್ಷ್ಮತೆಯೇ ಅವರನ್ನು ನಿಷ್ಕ್ರೀಯೆಗೊಳಿಸಿತೋ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ.

ತಾವು ಮೆಚ್ಚಿದ ಗೆಳೆಯರೆಲ್ಲಾ ದೂರವಾಗ ತೊಡಗಿದ್ದರು, ಕೆಲವರು ಬೆನ್ನಿಗೆ ಚೂರಿ ಹಾಕಿದ್ದರು. ತಾವು ತಮ್ಮ ಸಾಕ್ಷ್ಯಚಿತ್ರ“ಆಲ್ ಎಬೌಟ್ ಅವರ್ ಪಮೆಲಾ” (ಟ್ರಾನ್ಸ್ ಜೆಂಡರ್, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಹೋರಾಟಗಾರ್ತಿ)ಕ್ಕಾಗಿ ಶೂಟ್ ಮಾಡಿಟ್ಟ ಎಷ್ಟೋ ಫೂಟೇಜ್ ಗಳನ್ನು ಕಳೆದು ಕೊಂಡಿದ್ದರು, ಮತ್ತೊಮ್ಮೆ ಶೂಟ್ ಮಾಡಬೇಕೆಂದರೆ ಪಮೆಲಾ ಆತ್ಮಹತ್ಯೆ ಮಾಡಿಕೊಂಡು ಸತ್ತಿದ್ದರು. ಇದ್ದಬದ್ದ ಫೂಟೇಜ್ ಎಲ್ಲಾ ಕಳುವಾಗಿತ್ತು. ಎರಡು ಹೊಸ ಕ್ಯಾಮರಗಳನ್ನೂ ಕಳೆದುಕೊಂಡಿದ್ದರು. ಸ್ನೇಹಿತರಿಲ್ಲದ ಬದುಕನ್ನು ಅವರು ಕಲ್ಪಿಸಲೂ ಸಾಧ್ಯವಿರಲಿಲ್ಲ. ಆ ನೋವುಗಳನ್ನು ಸಹಿಸುವಷ್ಟು ಶಕ್ತಿ ಅವರಲ್ಲಿ ಉಳಿದಿರಲಿಲ್ಲ. ಕೊನೆಗೆ ಉಳಿದದ್ದು ಗುಂಡು ಮಾತ್ರ. ಥೇಟ್“ಜುಕ್ತಿ ತಕ್ಕೊ ಆರ್ ಗಪ್ಪೊ”ಚಿತ್ರದಲ್ಲಿ ಕಾಣುವ ರಿತ್ಕ್ವಿಕ್ ದಾ ಥರ ಕಾಣಲು ಶುರುವಾಗಿದ್ದರು, ಒಳಗೆ ನೋವನ್ನು ಅದುಮಿಟ್ಟುಕೊಂಡು “ಲವ್ ಲವ್ ಲೌಲೀ…” ಎಂದು ಮುಖದ ಮೇಲೆ ನಗುವನ್ನು ತಂದುಕೊಂಡು ನಗುತ್ತಿದ್ದರು. ಆ ನಗುವಿನ ಆಳದಲ್ಲಿ ನಾನು ನೋವನ್ನು ಕಂಡಿದ್ದೇನೆ. ಎಲ್ಲಾ ತತ್ವ, ಸಿದ್ಧಾಂತಗಳ ಬಗ್ಗೆ ಭ್ರಮನಿರಸನ ಹೊಂದತೊಡಗಿದ್ದರು. ಬದುಕನ್ನು ತುಂಬಾ ಕ್ಲೋಸಪ್ ನಲ್ಲಿ ನೋಡತೊಡಗಿದ್ದರು, ಅದರ ಮಧ್ಯೆ ಒಂದು ಅಂತರವನ್ನು ಕಾಯ್ದುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ.

ಮನುಷ್ಯ ಸುಖದ, ಸುವ್ಯವಸ್ಥಿತ ವಲಯದಲ್ಲಿದ್ದಾಗ ತಿಳಿಯಬೇಕು, ಇದು ಅಪಾಯದ ಕಾಲವೆಂದು. ಮನುಷ್ಯ ಸುಖದ ಲೋಲಪತೆಯಲ್ಲಿ ತೇಲಿ ಹೋಗಬಾರದು, ಸದಾ ಎಚ್ಚರಿಕೆಯಿಂದಿರಬೇಕು. ನಾನು ಅವರೊಂದಿಗೆ ಇದರ ಬಗ್ಗೆ ಚರ್ಚಿಸಿದ್ದೆ ಕೂಡ. ಅದು ಕೊನೆ ಕೊನೆಗೆ ಅವರಿಗೆ ಅರ್ಥವಾಗತೊಡಗಿತ್ತು. ಆದರೆ ನನಗನ್ನಿಸುತ್ತದೆ, ಇಲ್ಲಿ ಯಾವುದೂ ಪೂರ್ವನಿಯೋಜಿತವಲ್ಲ. ಕೆಲವೊಮ್ಮೆ ಪ್ರಜ್ಞಾಪೂರ್ವಕವಾಗಿ ಮಾಡಬೇಕೆಂದ ಕೆಲಸಗಳು ಸಾಧ್ಯವಾಗುವುದೇ ಇಲ್ಲ. ಕಲಾವಿದನಾದವನು ತನ್ನ ಕಾರ್ಯದ ಬಗ್ಗೆ ಸದಾ ಎಚ್ಚರದಿಂದಿರಬೇಕು, ಆ ನಿಟ್ಟಿನಲ್ಲಿ ಎಷ್ಟೇ ಕಷ್ಟಗಳು, ತೊಂದರೆಗಳಿದ್ದರೂ ಅವುಗಳ ಮಧ್ಯೆಯೇ ತಮ್ಮ ಹಾದಿಯನ್ನು ಹುಡುಕಿಕೊಳ್ಳಬೇಕು. ಆದರೆ ಚಲಂರ ಹಳೆಯ ಬೇರುಗಳು ತೀರಾ ಆಳಕ್ಕೆ ಇಳಿದ್ದಿದ್ದವು. ಅವರು ಎಚ್ಚರವಾಗುವಷ್ಟರಲ್ಲಿ ಕಾಲದ ತುದಿಗೆ ಬಂದು ನಿಂತಿದ್ದರು. “ಕುಟ್ಟಿ ಜಪಾನ್”ನಂತರ ಒಂದು ಒಳ್ಳೆಯ ಕೃತಿಯನ್ನು ನನ್ನಿಂದ ಮಾಡಲಾಗಲಿಲ್ಲವಲ್ಲ ಎಂಬ ಕೊರಗು ಅವರನ್ನು ಕಾಡುತ್ತಲೇ ಇತ್ತು. ಕೆಲವೊಮ್ಮೆ ಮಾತಿನ ಮಧ್ಯೆ “ಕುಟ್ಟಿ ಜಪಾನ್” ಚಿತ್ರದ ಬಗ್ಗೆ ವಿಚಾರ ಬಂದಾಗೆಲ್ಲಾ ಅದನ್ನು ಮರೆಸಿ, ಬೇರೆಡೆಗೇ ಮಾತನ್ನು ಎಳೆಯುತ್ತಿದ್ದರು. ಅವರಿಗೆ ಅದರ ಬಗ್ಗೆ ಮಾತಾಡುವ ಆಸಕ್ತಿಯಿಲ್ಲ ಎಂದು ನನಗಾಗಲೇ ಗೊತ್ತಾಗಿ ಹೋಗಿತ್ತು. ಗೆಳೆಯ ಮನು.ಕೆ ಮೈಸೂರಿನ ರಂಗಾಯಣದಲ್ಲಿ ನಡೆದ ಬಹುರೂಪಿ ನಾಟಕೋತ್ಸವದಲ್ಲಿ, ಡಾಕ್ಯುಮೆಂಟರಿ ವಿಭಾಗದಲ್ಲಿ “ಕುಟ್ಟಿ ಜಪಾನ್” ಪ್ರದರ್ಶಿಸಲು ಚಲಂರನ್ನು ಆಹ್ವಾನಿಸಿದ್ದನು, ಪ್ರದರ್ಶನದ ವೇಳೆ ಚಲಂರನ್ನು ಚಿತ್ರದ ಬಗ್ಗೆ ಮಾತಾಡಲು ಕರೆದರು, ಆದರೆ ವೇದಿಕೆ ಹತ್ತಲು ಚಲಂ ನಿರಾಕರಿಸಿದರು, ಮೊದಲೇ ನಿತ್ರಾಣರಾಗಿದ್ದು, ಹೊಟ್ಟೆ ಸೇರಿದ ಗುಂಡು ಅವರನ್ನು ನಿಲ್ಲಗೊಡುತ್ತಿರಲಿಲ್ಲ.

ಇತ್ತೀಚಿಗೆ ನಡೆದ ಅಂತರ್ರಾಷ್ಟ್ರೀಯ ಸಿನೆಮೋತ್ಸವವನ್ನು ನೋಡಲು ಗೆಳೆಯ ನಟೇಶ್ ಹೆಗಡೆ ಬಂದಿದ್ದ, ನಮ್ಮ ಮನೆಯಲ್ಲಿಯೇ ಒಂದು ವಾರ ಉಳಿದುಕೊಂಡು ಚಿತ್ರಗಳನ್ನು ನೋಡಿದ ಅವನು ಕೊನೆಯ ದಿನ ಚಲಂ ಅವರ “ಕುಟ್ಟಿ ಜಪಾನ್” ನೋಡಿ “ನಾನು ಈ ಸಿನೆಮೋತ್ಸವದಲ್ಲಿ ನೋಡಿದ ಚಿತ್ರಗಳಲ್ಲಿಯೇ ಅತ್ಯುತ್ತಮವಾದದ್ದು ಈ “ಕುಟ್ಟಿ ಜಪಾನ್” ಅಂದ. ನಿಜಕ್ಕೂ ಅದೊಂದು ಅಪೂರ್ವವಾದ ಕೃತಿ, ಅದರಲ್ಲಿ ಚಲಂ ಅವರನ್ನು ಕಾಣಬಹುದು. ಸ್ವತಃ ಕವಿಯಾದ ಅವರು ಅದನ್ನು ಕಾವ್ಯಾತ್ಮಕವಾಗಿಯೇ ಕಟ್ಟಿದ್ದಾರೆ. ಈಗ ನೋಡಿದರೂ ಅದೊಂದು ಅದ್ಭುತ ಅನುಭವ. ಚಲಂ ಮಲಯಾಳಂ ಚಲನಚಿತ್ರ ನಿರ್ದೇಶಕ ಜಾನ್ ಅಬ್ರಹಮ್, ಕವಿ ಅಯ್ಯಪ್ಪನ್ ರೀತಿಯಲ್ಲೇ ಸಾವನಪ್ಪಿದ್ದು ಒಂದು ದುರಂತ. ಮಲಯಾಳಂ ಚಲನಚಿತ್ರ ನಿರ್ದೇಶಕರು, ಸಾಹಿತಿಗಳೊಂದಿಗೆ ನಿಕಟಸಂಪರ್ಕ ಹೊಂದಿದ್ದರು, ನಾನು ಚಲಂರೊಂದಿಗೆ ಕೇರಳ ಫಿಲಂ ಫೆಸ್ಟಿವಲ್ ಗೆ ಹೋದಾಗೆಲ್ಲ ಅವರ ಕೇರಳ ಮಿತ್ರರದ್ದೇ ಒಂದು ದೊಡ್ಡ ಗುಂಪು ಸೇರುತ್ತಿತ್ತು. ಅದರಲ್ಲಿ ಸಿನೆಮಾ ನಿರ್ದೇಶಕರು, ವಿಮರ್ಶಕರು, ಸಾಹಿತಿಗಳು, ಕವಿಗಳು, ಹಾಡುಗಾರರು, ಲಿಂಗಬೇಧವೆನ್ನದೆ ಎಲ್ಲರೂ ಇರುತ್ತಿದ್ದರು. ಎಲ್ಲರೂ ಸಂಜೆ ಶೋಗಳನ್ನು ಸ್ವಘೋಷಿತ ರದ್ದುಗೊಳಿಸಿ ಒಂದು ಮನೆಯಲ್ಲಿ ಸೇರುವುದು ಎಂದಿನ ವಾಡಿಕೆ, ಎಲ್ಲರೂ ಅವರವರ ಗುಂಡಿನ ಬಾಟಲ್ ಗಳೊಂದಿಗೆ, ರಾತ್ರಿ ಊಟದ ಪ್ಯಾಕೇಟ್ ಗಳೊಂದಿಗೆ ಹಾಜರಾಗುತ್ತಿದ್ದರು.

ಲೇಖಕರೊಂದಿಗೆ ಚಲಂ

ಅಲ್ಲಿ ಸಿನೆಮಾಗಳ ಬಗ್ಗೆ, ಸಿನೆಮಾ ನಿರ್ದೇಶಕರ ಬಗ್ಗೆ ಚರ್ಚೆ, ಸಂವಾದಗಳು ನಡೆಯುತ್ತಿದ್ದವು, ಆನಂತರ ಕಾವ್ಯ ವಾಚನ, ಕಾವ್ಯವಾಚಿಸುವುದು ಕೇರಳದಲ್ಲಿ ಒಂದು ಸಂಪ್ರದಾಯವೇ ಇದೆ. ಅದು ಹಾಡಿಗಿಂತ ಮತ್ತು ನಮ್ಮ ಗಮಕಕ್ಕಿಂತಾ ಭಿನ್ನವಾದದ್ದು, ಅದನ್ನು ಆಲಿಸಿಯೇ ಅನುಭವಿಸಬೇಕು. ಕೇರಳದ ಕವಿ ಕಡಮನಿಟ್ಟ ರಾಮಕೃಷ್ಣನ್ ತುಂಬಾ ಸೊಗಸಾಗಿ ವಾಚಿಸುವುದನ್ನು ನಾನು ಕೇಳಿದ್ದೇನೆ. ಹೀಗೆ ಗುಂಡು, ಧೂಪದೊಂದಿಗೆ ಒಂದು ಮಯಾ ಲೋಕವನ್ನೇ ಸೃಷ್ಠಿಸಿಬಿಡುತ್ತಿದ್ದರು ಆ ಸಂಜೆಗಳಲ್ಲಿ. ಚಿತ್ರೋತ್ಸವ ಮುಗಿಯುವವರೆಗೂ ಇದು ಪ್ರತಿದಿನದ ರಿಚುವಲ್ ಆಗಿ ನಡೆಯುತ್ತಿರುತ್ತಿತ್ತು. ಆ ಗುಂಪಿನಲ್ಲಿಯೇ ನಾನು ಮೊದಲ ಬಾರಿಗೆ ಕವಿ ಅಯ್ಯಪ್ಪನ್ ಅವರನ್ನು ಕಂಡಿದ್ದು, ಅವರು ಜಾನ್ ಅಬ್ರಹಾಮ್ ರ ಆತ್ಮೀಯ ಸ್ನೇಹಿತರಾಗಿದ್ದವರು. ಚಲಂ ಜಾನ್ ಅಬ್ರಹಾಮ್ ರ “ಅಮ್ಮ ಅರಿಯನ್” ಸಿನೆಮಾ ತಯಾರಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು, ಕೇರಳದ ಒಡಿಸ್ಸಾ ಚಿತ್ರ ಸಮಾಜದೊಂದಿಗೂ ಗುರುತಿಸಿಕೊಂಡು ಚಲನಚಿತ್ರ ಸಮಾಜದ ಚಳುವಳಿಗಳಲ್ಲಿ ಭಾಗಿಯಾಗಿದ್ದರು. ಅದರ ಬಗ್ಗೆ ಸಾಕಷ್ಟು ಬಾರಿ ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಇದರ ಪ್ರೇರಣೆಯಿಂದಲೇ ಬೆಂಗಳೂರಿನಲ್ಲಿ ಜನಮಾಧ್ಯಮ ಮತ್ತು ಬೆಂಗಳೂರು ಫಿಲಂ ಸೊಸೈಟಿ ಸ್ಥಾಪಿಸಿ, ಜಗತ್ತಿನ ಶ್ರೇಷ್ಠಚಿತ್ರಗಳನ್ನು ಪ್ರದರ್ಶಿಸಿ, ಕೇರಳದ ಥರ ಇಲ್ಲಿಯೂ ಚಿತ್ರಸಂಸ್ಕೃತಿಯನ್ನು ಹುಟ್ಟುಹಾಕಲು ಶ್ರಮಿಸಿದರು. ಇವರೊಂದಿಗೆ ಟಿ ಜಿ ವೈದ್ಯನಾಥನ್, ಅಕುಮೊಲ್ ರಾಮಚಂದ್ರ ಕೂಡ ಕೈಜೋಡಿಸಿದ್ದು ಈಗ ಇತಿಹಾಸ.

(ಚಲಂ ಫೋಟೋಗಳು: ಶಶಿಕಾಂತ್ ಅನಂತಾಚಾರಿ)

ಹಳೆಯ ನೆನಪುಗಳು ಎಷ್ಟೇ ಕೆಟ್ಟವಾಗಿದ್ದರೂ, ಅವುಗಳನ್ನೂ ಮಾನವೀಯ ದೃಷ್ಠಿಯಲ್ಲೇ ನೋಡುತ್ತಿದ್ದರು. ಆ ಗತಿಸಿದ ಸಂದರ್ಭವನ್ನು ಹಾಗೇ ನೆನೆದು, ಅನುಭವಿಸಿ, ಸಣ್ಣ ಪುಟ್ಟ ವಿವರಗಳನ್ನು ಹೇಳುವುದೇ ಒಂದು ಕಲೆಗಾರಿಕೆ. ಹೀಗಾಗಿಯೇ ಚಲಂ ಅವರಿಗೆ ಕ್ರಮಬದ್ಧವಾಗಿ ಕತೆ ಹೇಳುವ ಕಲೆ ದಕ್ಕಿತ್ತು ಅಂತಾ ಕಾಣುತ್ತದೆ.

ಕೋಟಿಗಾನ ರಾಮಯ್ಯನವರ ಬಗ್ಗೆ ಚಲಂಗೆ ಅಗಾಧವಾದ ಪ್ರೀತಿ ಮತ್ತು ಅಭಿಮಾನ. ಜಿಂಕೆರಾಮಯ್ಯನ ಬೆಟ್ಟದಲ್ಲಿ ಆದಿಮ ಆರಂಭವಾದ ಹೊಸತರಲ್ಲಿ ರಾಮಯ್ಯನವರ ಎಲ್ಲಾ ಕೆಲಸಗಳಲ್ಲಿ ಚಲಂ ಕೈಜೋಡಿಸುತ್ತಿದ್ದರು. ಆದಿಮ ಒಂದು ಪರ್ಯಾಯ ಸಾಂಸ್ಕೃತಿಕ ಕೇಂದ್ರವಾಗಿ ರೂಪುಗೊಳ್ಳಬೇಕು, ತಳವರ್ಗದ, ನೆಲ ಸಂಸೃತಿಯ ಕಲಿಕೆಯ ಕೇಂದ್ರವಾಗಬೇಕೆಂದು ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದರು. ಅಲ್ಲಿ ಚಲನಚಿತ್ರದ ಅಧ್ಯಯನಕ್ಕೆ ಬೇಕಾಗುವ ಡಿವಿಡಿ ಗಳನ್ನು ಕೇರಳದಿಂದ ಮತ್ತು ತಮ್ಮ ಗೆಳೆಯರಿಂದ ಸಂಗ್ರಹಿಸಿ ವಿಡಿಯೋ ಲೈಬ್ರರಿಯನ್ನು ಮುತುವರ್ಜಿಯಿಂದ ಆಸಕ್ತಿವಹಿಸಿ ಮಾಡಿದ್ದರು. ರಾಮಯ್ಯನವರದು ಪ್ರವಾಹದಂತಾ ಮನಸ್ಸು, ಒಂದು ಕಡೆ ನಿಲ್ಲಲೊಲ್ಲದ ಫಕೀರನ ಮನಸ್ಸು, ಅವರ ಮನಸ್ಸು ಎತ್ತಕಡೆ ಹಾಯುತ್ತದೆ ಎನ್ನುವುದನ್ನು ಊಹಿಸುವುದೂ ಅಸಾಧ್ಯ. ಕವಿ, ಹೋರಾಟಗಾರರಾದ ರಾಮಯ್ಯ ಆಯ್ದುಕೊಳ್ಳದ ಕ್ಷೇತ್ರಗಳಿಲ್ಲ. ಕಾವ್ಯ, ನಾಟಕ, ಸಿನೆಮಾ, ಹೋರಾಟ ಎಲ್ಲವೂ ಒಟ್ಟೊಟ್ಟಿಗೇ ನಡೆಯುತ್ತಿರುತ್ತವೆ ಅವರೊಳಗೆ. ತಾವೇ ಕಟ್ಟಿ ಬೆಳಿಸಿದ ಆದಿಮದಿಂದ ದೂರವಾದರು. ರಾಮಯ್ಯನವರ ಅಶಿಸ್ತಿನಿಂದಾಗಿ ಸಾಕಷ್ಟು ಡಿವಿಡಿಗಳನ್ನು ಕಳೆದುಕೊಂಡು ಆ ವಿಡಿಯೋ ಲೈಬ್ರರಿ ಏನಾಯಿತೋ ಗೊತ್ತಿಲ್ಲ. ಆದಿಮದಿಂದಲೂ ಗೆಳೆಯರೆಲ್ಲಾ ದೂರವಾದರು. ರಾಮಯ್ಯನವರ ಬಗ್ಗೆ, ಆದಿಮದ ಬಗ್ಗೆ ಸಾಕಷ್ಟು ಕತೆಗಳಿವೆ, ಹೇಳುತ್ತಾ ಹೋದರೆ ಅದೇ ಒಂದು ಪುರಾಣವಾಗುತ್ತದೆ. ಅವೆಲ್ಲ ಇಲ್ಲಿ ಅಪ್ರಸ್ತುತ.

ವೃತ್ತಿಪರ ಡಾಕ್ಯುಮೆಂಟರಿಗಳ ಬಗ್ಗೆ ಅವರಿಗೆ ಅಸಮಾಧಾನವಿತ್ತು, ಡಾಕ್ಯುಮೆಂಟರಿ ಅವರಿಗೆ ಒಂದು ಆಕ್ಟಿವಿಸಂ ಆಗಿತ್ತು, ಹೋರಾಟದ ಅಸ್ತ್ರವಾಗಿತ್ತು. ಡಾಕ್ಯುಮೆಂಟರಿ ಎಂದರೆ ಸರಣಿ ಸಂದರ್ಶನಗಳಲ್ಲ, ಬರಿಯ ಡಾಕ್ಯುಮೆಂಟೇಶನ್ ಅಲ್ಲ, ಪ್ರಸ್ತುತತೆಯಲ್ಲಿ ನಡೆಯುತ್ತಿರುವ ರಾಜಕೀಯ, ಸಾಮಾಜಿಕ, ಆರ್ಥಿಕ, ಮತ್ತು ಸಾಂಸ್ಕೃತಿಕ ಸ್ಥಿತ್ಯಾಂತರಗಳ ಬಗ್ಗೆ ಅರಿವಿರಬೇಕು, ಮತ್ತು ಡಾಕ್ಯುಮೆಂಟರಿ ಫಿಲಂ ಮೇಕರ್ ಆದವನು ಅದನ್ನು ಕಲಾತ್ಮಕವಾಗಿ ಅಭಿವ್ಯಕ್ತಿಸುವ, ಪ್ರತಿಭಟಿಸುವ ಅಸ್ತ್ರವಾಗಿ ರೂಪಾಂತರಿಸುವ ಕುಶಲಕರ್ಮಿಯೂ, ಹೋರಾಟಗಾರನೂ ಆಗಿರಬೇಕು ಎಂದು ಬಲವಾಗಿ ನಂಬಿದ್ದರು.

(ಕೋಟಿಗಾನಹಳ್ಳಿ ರಾಮಯ್ಯ)

ಕೆಳವರ್ಗದವರ, ದಲಿತರ, ಆದಿವಾಸಿಗಳ, ಮುಖ್ಯವಾಹಿನಿಯಿಂದ ಅಂಚಿಗೆ ದೂಡಲ್ಪಟ್ಟ ಜನಸಮುದಾಯಗಳ ಬಗ್ಗೆ ಸದಾ ಚಿಂತಿಸುತ್ತಿದ್ದ ಚಲಂ, “ಎರವರು” ಮತ್ತು “ಡೋಂಗ್ರಿಗರಾಸಿಯ” ಬುಡಕಟ್ಟು ಜನಾಂಗಗಳ ಬಗ್ಗೆ ಸಾಕ್ಷ್ಯಚಿತ್ರ ಮಾಡಲು ಹೊರಟರು, ಇದು ಸರ್ಕಾರಿ ಪ್ರಾಯೋಜಿತ ಪ್ರಾಜೆಕ್ಟ್ ಆದ್ದರಿಂದ ಹಣ ಅಷ್ಟಾಗಿ ಸಾಕಾಗುತ್ತಿರಲಿಲ್ಲ. ಆದರೂ ಎರವರ ಮೇಲಿನ ಪ್ರೀತಿಗಾಗಿ, ಕೊಡಗಿಗೆ ಸಾಕಷ್ಟು ಬಾರಿ ಹೋಗಿ ಬಂದು ಅವರನ್ನೆಲ್ಲಾ ಗೆಳೆಯರನ್ನಾಗಿ ಮಾಡಿಕೊಂಡಿದ್ದರು. ಅವರೆಲ್ಲ ಇವರು ಬರುವುದನ್ನು ಕಾಯುತ್ತಿದ್ದರು. ಆ ಚಿತ್ರಕ್ಕಾಗಿ ಎರವರ ಜನಾಂಗ ಋತುಮತಿ ಕಾರ್ಯ, ವಿವಾಹ ಕಾರ್ಯ, ಸಾವಿನ ಕಾರ್ಯ, ಎಲ್ಲವನ್ನು ಇವರು ಮರು ಸೃಷ್ಟಿಸಿ ಚಿತ್ರಿಸಬೇಕಾಗಿತ್ತು. ಅದೇ ಸಮಯದಲ್ಲಿ ಋತುಮತಿಯಾದ ಹುಡುಗಿಯನ್ನು ಹುಡುಕಿ ಆ ಕಾರ್ಯವನ್ನು ಮುಗಿಸಿ, ಮದುವೆ ಆಗಬೇಕಾದ ಗಂಡು ಹೆಣ್ಣನ್ನು ಹುಡುಕಿ ಆ ಕಾರ್ಯವನ್ನೂ ತಮ್ಮ ಕೈಯಿಂದಲೇ ಖರ್ಚು ಮಾಡಿ ಮುಗಿಸಿದರು. ಸಾವಿನ ಕಾರ್ಯಕ್ಕೆ ಯಾರೂ ಸಿಗಲಿಲ್ಲ ಸಧ್ಯ, ಇಲ್ಲದಿದ್ದರೇ ಅದನ್ನು ಮಾಡಿಮುಗಿಸಿಬಿಡುತ್ತಿದ್ದರು. ಈ ಎಲ್ಲ ಕಾರ್ಯಗಳಲ್ಲಿ ಊಟ, ಗುಂಡು, ಇತರೆ ಖರ್ಚು ವೆಚ್ಚಗಳನ್ನು ಇವರೇ ವಹಿಸಿಕೊಂಡರು, ಹೀಗಾಗಿ ಚಲಂ ಎಂದರೆ ಎರವರಿಗೆ ಪ್ರಿಯವಾಗಿ ಹೋದರು. ಈ ಎಲ್ಲಾ ಕಾರ್ಯಗಳನ್ನು ಅವರ ಜನಾಂಗದ ರಿಚುವಲ್ ಗಳನ್ನು ನಡೆಸಿಕೊಡುತ್ತಿದ್ದುದು ಆ ಜನಾಂಗದ ಹಿರಿಯ‘ಚಾತಾ’ ಅವರು. ಚಾತಾ ಅವರನ್ನು ಕಂಡರೆ ಚಲಂಗೆ ಎಲ್ಲಿಲ್ಲದ ಪ್ರೀತಿ. ಚಲಂರೊಂದಿಗೆ “ಕುಂಡೇ ಹಬ್ಬ”ಕ್ಕೆ ಹೋದಾಗ ಅವರನ್ನು ಭೇಟಿಯಾಗಿದ್ದೆ. ತುಂಬಾ ವಿನಯದ, ಸಂಕೋಚದ ಮನುಷ್ಯ. ಚಲಂ ತಮ್ಮ ಗೆಳೆಯರಿಗೆ ಹೇಳಿ ಚಾತಾ ಅವರಿಗೆ ಸರ್ಕಾರದಿಂದ ಮಾಶಾಸನ ಕೊಡಿಸಲು ಸಫಲರಾದರು. ಹೀಗೆ ಚಲಂ ತಾವು ಪ್ರಶಸ್ತಿಗಳ ಹಿಂದೆ ಬೀಳದೆ ಗೆಳೆಯರಿಗೆ, ಬಡ, ಕೆಳವರ್ಗದ, ದಲಿತ ಕಲಾವಿದರಿಗೆ ಪ್ರಶಸ್ತಿಗಳನ್ನು, ಮಾಶಾಸನಗಳನ್ನು ಕೊಡಿಸುವುದರಲ್ಲಿ ಉತ್ಸುಕರಾಗಿರುತ್ತಿದ್ದರು.

ಚಲಂರ ಹಳೆಯ ಮನೆಯಲ್ಲಿ, ಅಂದರೆ ಲಿಂಗರಾಜಪುರದಲ್ಲಿದ್ದ ಮನೆಯಲ್ಲಿ ಆಗಾಗ್ಗೆ ಪಾರ್ಟಿಗಳು ನಡೆಯುತ್ತಿರುತ್ತಿದ್ದವು, ಯಾರಾದರು ವಿದೇಶಿ ಚಲನಚಿತ್ರ ನಿರ್ದೇಶಕರು ಅಥವಾ ಕಲಾವಿದರು ಬಂದರೆ ಅವರನ್ನು ತಮ್ಮೆಲ್ಲಾ ಸ್ನೇಹಿತರಿಗೂ ಪರಿಚಯಿಸಲೆಂದು ಗುಂಡು ಪಾರ್ಟಿಗಳನ್ನು, ಆಯೋಜಿಸುತ್ತಿದ್ದರು. ಅಲ್ಲಿ ಬಿಸಿ ಬಿಸಿ ಚರ್ಚೆ, ಹಾಡು, ಎಲ್ಲಾ ಇರುತ್ತಿತ್ತು. ಒಮ್ಮೆ ಚಲಂ ಹೆಚ್ಚು ಕುಡಿದಿದ್ದರೆಂದು ಕಾಣುತ್ತದೆ, ಯಾವುದೋ ಒಂದು ಚಿತ್ರದ ಸಿಡಿಯನ್ನು ಕಂಪ್ಯೂಟರ್ ಗೆ ಹಾಕಿ, ಆ ಚಿತ್ರವನ್ನು ತೋರಿಸುವ ಉತ್ಸುಕತೆಯಲ್ಲಿದ್ದರು. ಆದರೆ ಪರದೆಯ ಮೇಲೆ ಚಿತ್ರ ಮೂಡಲೇ ಇಲ್ಲ. ಕಾದೂ ಕಾದು ಬೇಸರವಾದ ಚಲಂ ಆ ಸಿಡಿಯನ್ನು ಹೊರತೆಗೆಯಲು ಗುಂಡಿಯನ್ನು ಒತ್ತಿದ್ದರು. ಸಿಡಿ ಹೊರಬರಲಿಲ್ಲ, ಮತ್ತೂ ಪ್ರಯತ್ನಿಸಿದರು, ಆದರೂ ಹೊರಬರಲಿಲ್ಲ. ಗುಂಡಿಯನ್ನು ಪದೇ ಪದೇ ಒತ್ತಿದರು. ಕುಕ್ಕರಗಾಲಲ್ಲಿ ಕುಳಿತು ಸಿಡಿ ಬರುವುದನ್ನು ಕಾಯುತ್ತಾ ಕುಳಿತರು. ಇಡೀ ಪ್ರಪಂಚವನ್ನೇ ಮರೆತು ಸಿಡಿ ಗಾಗಿ ಕಾಯುತ್ತಿದ್ದರು.

(‘ಕುಟ್ಟಿ ಜಪಾನಿ’ ಚಿತ್ರದ ದೃಶ್ಯ)

ಹಾ… ಸಿಡಿ ಹೊರಗೆ ಬಂತು… ಎಂದು ಇನ್ನೇನು ಕೈ ಹಾಕಿ ತೆಗೆಯಬೇಕೆನ್ನುವಷ್ಟರಲ್ಲಿ ಒಳಗೆ ಹೋಯಿತು. ಮತ್ತೆ ಕಾಯುತ್ತಾ ಕುಳಿತರು, ಹಾ… ಮತ್ತೆ ಹೊರಗೆ ಬಂತು ಎಂದು ಸಿಡಿಯನ್ನು ಎತ್ತಲು ಸಿದ್ಧರಾಗುವಷ್ಟರಲ್ಲಿ ಒಳಗೆ ಹೋಯಿತು. ಕುಕ್ಕುರಗಾಲಲ್ಲಿ ಕುಳಿತ ಚಲಂ ಎಲ್ಲರನ್ನು ಮರೆತು, ಎಲ್ಲದನ್ನೂ ಮರೆತು ಸಿಡಿ ಬರುವುದನ್ನೇ ಕಾಯುತ್ತಾ ಕುಳಿತರು. ಅದು ಹೊರ ಬರುತ್ತಿತ್ತು, ಇನ್ನೇನು ತೆಗೆಯಬೇಕು ಎನ್ನುವಷ್ಟರಲ್ಲಿ ಒಳಹೋಗುತ್ತಿತ್ತು. ಹೊರಬರುತ್ತಿತ್ತು, ಒಳಹೋಗುತ್ತಿತ್ತು, ಹೊರಬರುತ್ತಿತ್ತು, ಒಳಹೋಗುತ್ತಿತ್ತು. ಹೀಗೇ ನಡೆದಿತ್ತು ಆಟ. ನಾವು ಅದನ್ನೇ ಬೆಕ್ಕಸಬೆರಗಾಗಿ ನೋಡುತ್ತಾ ನಿಂತಿದ್ದೆವು. ಚಲಂ ಕೊನೆ ಕೊನೆಗೆ ಸಿಡಿ ತೆಗೆಯುವ ಸಾಹಸವನ್ನು ಕೈ ಬಿಟ್ಟು ಸಿಡಿ ಹೊರಬರುವುದನ್ನು, ಒಳಹೋಗುವುದನ್ನು ನೋಡುತ್ತಾ ಕುಕ್ಕರಗಾಲಲ್ಲಿ ಕುಳಿತುಬಿಟ್ಟರು.

ನನ್ನ ಮೊದಲ ಏಕವ್ಯಕ್ತಿ ಚಿತ್ರ ಪ್ರದರ್ಶನ “ಸೈಲೆಂಟ್ ಸ್ಕ್ರೀಮ್” ನೋಡಲು ಚಲಂ ಬಂದಿದ್ದರು, ಅಂದು ಡಿ.ಆರ್, ವಸಂತ್ ಮೋಕಾಶಿ ಪುಣೆಕರ್, ಜಯಂತ್ ಕೋಡ್ಕಣಿ ಕೂಡಾ ಬಂದಿದ್ದರು. ಡಿ.ಆರ್ ಚಲಂರನ್ನು ಗುರುತಿಸಲು ಸಾಧ್ಯವಾಗಲಿಲ್ಲ, ಆದೇ ಮೊದಲ ಬಾರಿಗೆ ತಮ್ಮ ಮೀಸೆ, ಗಡ್ಡವನ್ನ ಬೋಳಿಸಿಕೊಂಡು ಬಂದಿದ್ದರು, ಅವರಿಗೆ ಪರಿಚಯವಿರುವ ಯಾರೂ ಅವರನ್ನು ಗುರುತಿಸಲಿಲ್ಲ. ಆ ಪ್ರದರ್ಶನದಲ್ಲಿ ನಾನು ಚಿತ್ರದುರ್ಗದ ಬಂಡೆಗಳು, ಕೋಟೆ ಕೊತ್ತಲಗಳು, ಕಲ್ಯಾಣಿಗಳನ್ನು ಹಿನ್ನೆಲೆಯಾಗಿಟ್ಟು ಕೊಂಡು ಚಿತ್ರಗಳನ್ನು ರಚಿಸಿದ್ದೆ. ಡಿ.ಆರ್ ನನ್ನ ಒಂದು ಕೃತಿ “ವಿಸ್ಪರಿಂಗ್ ವಿತ್ ದ ಪಾಸ್ಟ್” ನೊಂದಿಗೆ ಅಡಿಗರ “ಭೂತ”ವನ್ನಿಟ್ಟು ಮಾತಾಡಿದ್ದರು.

“ವಿಸ್ಪರಿಂಗ್ ವಿತ್ ದ ಪಾಸ್ಟ್” ಚಿತ್ರ ಪೇಪರ್ ಮೇಲೆ ಚಿತ್ರಿತವಾದ್ದು, ಕಲ್ಯಾಣಿ ಇಡೀ ಪೇಪರ್ ನ ಆವರಣವನ್ನು ಆವರಿಸಿದೆ, ಕಲ್ಯಾಣಿಯ ಮಧ್ಯ ಭಾಗದಲ್ಲಿ ನೀರಿರುವ ಜಾಗದಲ್ಲಿ ರಕ್ತದಂತೆ ಕೆಂಪುಬಣ್ಣ ಆವೃತವಾಗಿದೆ, ಅದರಲ್ಲಿ ಒಬ್ಬ ಮನುಷ್ಯ ಬೋರಲಾಗಿ ಬಿದ್ದಿದ್ದಾನೆ, ಅವನ ಬಲಗೈ ಹಿಂಭಾಗಕ್ಕೆ ತಿರುಚಿಕೊಂಡು ಕೈಯಲ್ಲಿ ಖಡ್ಗವನ್ನು ಹಿಡಿದಿದೆ. ಚಲಂಗೆ ಕೂಡ ನನ್ನ ಈ ಪ್ರದರ್ಶನ ಖುಷಿಕೊಟ್ಟಿತ್ತು, ಆಗಾಗ್ಗೆ ಅದನ್ನು ಪ್ರಸ್ತಾಪಿಸಿ ಮಾತಾಡುತ್ತಿದ್ದರು. ನನ್ನ ದೃಶ್ಯಕಲೆಯ ಬಗ್ಗೆ ಮಾಡುವಾಗೆಲ್ಲಾ “ಆ ಬತ್ತಿದ ಕಲ್ಯಾಣಿಗಳ ಬಗ್ಗೆ ಇನ್ನಷ್ಟು ಕೃತಿಗಳನ್ನು ರಚಿಸಿ, ಆ ಕಲ್ಯಾಣಿಗಳೇ ನಿಮ್ಮ ಹುಡುಕಾಟವಾಗ ಬೇಕು” ಎಂದು ಪದೇ ಪದೇ ಹೇಳುತ್ತಿದ್ದರು. ಆ ಕಲ್ಯಾಣಿಯಲ್ಲೇ ನನ್ನ “ವಿಸ್ಪರಿಂಗ್ ವಿತ್ ದ ಪಾಸ್ಟ್” ಮತ್ತು ಅಡಿಗರ “ಭೂತ”ದ ರೀತಿಯಲ್ಲೇ ಚಲಂ ಬಿದ್ದು ತಮ್ಮ ಪ್ರಾಣ ಬಿಟ್ಟದ್ದು ಕಾಕತಾಳಿಯವೋ ಎಂಬಂತೆ ಭಾಸವಾಗುತ್ತಿದೆ. ಅಳಿಸಲಾರದ ಈ ಒಂದು ಪ್ರತಿಮೆ ನನ್ನ ಮನಸ್ಸಿನಲ್ಲಿ ಹಾಗೇ ಉಳಿದುಬಿಟ್ಟಿದೆ.