ಚೀತ್ಕಾರ ಶಿಲೆಯನ್ನಾದರೊ

ತಾಕಿಸಿಹರೊ ಕಡು ನೆತ್ತರು
ಈ ದೀರ್ಘ ಹಗಲಿಗಾದರೊ

ಆಕೃತಿಯೊ ದಣಿದಿರಬೇಕು
ದಾಟಿರಬೇಕು ಹಿಡಿ ಬೆಂಕಿಯನ್ನು
ಈ ಕಿರುದಾರಿಯಲಾದರೊ

ಹಪಾಹಪಿಸಿರಬೇಕು ಕಡು ಪಾರ್ಶ್ವವಾದರೊ
ಬಿತ್ತಿಹ ಕಡು ನೇತ್ರಗಳ ಈ ಮಣ್ಣಿಗಾದರೊ

ಕೀಳುತ್ತಿರಬಹುದು ದೊರೆಯಾದರೊ
ಕಡು ಕವಿತೆಯ ಈ ಪದರನ್ನಾದರೊ

ಹೆಕ್ಕಿ ಉಸಿರ ಕಡು ಕೋಟೆಯಾದರೊ
ದಾಟಲಿಲ್ಲವೇನೊ ಈ ತಾಳೆಗರಿಯನ್ನಾದರೊ

ಗಾಯಗೊಂಡಿಹನು ಚಂದಿರನೇನೊ
ಹರಿದೆಸೆದು ಕಡು ಬೆಳಕ ಈ ಕಿಟಕಿಯನ್ನಾದರೊ

ಸುಡುತ್ತಿರಬಹುದು ಉಸಿರನ್ನಾದರೊ
ಕೆರಳಿಸಿ ಕಡಲನ್ನಾದರೊ
ಮೂಕವಾಗಿತ್ತೇನೊ ಈ ರೆಪ್ಪೆಗಳ ಭಾಷೆಯಾದರೊ

ಹಿಸುಕಿ ನಕಾಶೆಯ ಕತ್ತನ್ನಾದರೊ
ಹಸಿದಿರಬೇಕು ಈ ಹೆಬ್ಬೆರಳಿಗಾದರೊ

ನೇಣಿಗೇರಿಸಿ ಚೀತ್ಕಾರ ಶಿಲೆಯನ್ನಾದರೊ
ರಮಿಸುತ್ತಿರಬಹುದೇನೊ ಈ ದೀರ್ಘ ಹಗಲನ್ನಾದರೊ

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು