ಈ ಚಿತ್ರದಲ್ಲಿ ಸ್ಪರ್ಶ ಹಾಗು ಪರಿಮಳ ಅತ್ಯಂತ ಆಪ್ತವಾಗಿ ಬಳಕೆಯಾಗಿದೆ. ಅವನು ಒಂದು ಹಳೆಯ ಟ್ರಂಕ್ ತೆಗೆದು ತಾನು ಕೂಡಿಟ್ಟುಕೊಂಡಿದ್ದ ಅವಳ ನೆನಪುಗಳನ್ನೆಲ್ಲಾ ತೋರಿಸುತ್ತಾನೆ. ಅಷ್ಟರಲ್ಲಿ ಕರೆಂಟ್ ಹೋಗುತ್ತದೆ. ದೀಪ ತರಲೆಂದು ಅವನು ಹೋಗುತ್ತಾನೆ. ಅವಳು ಹಾಡುತ್ತಾಳೆ, ಅದೇ ಹಾಡು. ಇಷ್ಟು ದಿನ ಅವನು ಬೇಡಿಕೊಂಡಿದ್ದ ಹಾಡು…. ಕತ್ತಲಲ್ಲಿ ಹುಡುಕಿ, ಒದ್ದಾಡಿ ಅವನು ದೀಪ ಹಿಡಿದು ಓಡಿ ಬರುತ್ತಾನೆ. ಆ ಹಾಡನ್ನು ಹಾಡುವಾಗಿನ ಅವಳ ಮುಖವನ್ನು ತನ್ನೆದೆಯಲ್ಲಿ ಕಾಪಿಟ್ಟುಕೊಳ್ಳುವುದು ಅವನ ಆಸೆ.. ಅವನೊಂದು ಕವಿತೆ ಬರೆದಿರುತ್ತಾನೆ. ಅದನ್ನು ಓದುತ್ತಾನೆ…’…..
ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸಿನಲ್ಲಿ ತಮಿಳು ಚಿತ್ರ “96”

 

ಒಪ್ಪಿಕೊಂಡ ಪ್ರಕಾರ ಈ ಅಂಕಣದಲ್ಲಿ ಭಾರತದ ಚಿತ್ರಗಳ ಹೊರತಾಗಿ, ಪ್ರಪಂಚದ ಸಿನಿಮಾಗಳ ಬಗ್ಗೆ ಬರೆಯಬೇಕು. ಹಾಗೆಂದೇ ಒಂದು ಚಿತ್ರ ನೋಡಿದ್ದೆ, ನೋಟ್ಸ್ ಮಾಡಿಟ್ಟುಕೊಂಡಿದ್ದೆ. ರಾತ್ರಿ ಬರೆಯೋಣ ಎಂದುಕೊಂಡವಳು, ಬಹಳ ದಿನಗಳಿಂದ ನೋಡಬೇಕೆಂದುಕೊಂಡಿದ್ದ ತಮಿಳು ಚಿತ್ರ ‘96’ ನೋಡಲು ಹೋದೆ. ಚಿತ್ರ ಶುರುವಾದ ಸ್ವಲ್ಪ ಹೊತ್ತಿನಲ್ಲೇ ತರ್ಕ, ಬುದ್ಧಿ, ಎಚ್ಚರ ಎಲ್ಲವನ್ನೂ ಮೀರಿ ಅದು ನೇರ ಎದೆಗೆ ಧಾಂಗುಡಿ ಇಟ್ಟಿತ್ತು. ಚಿತ್ರ ನೋಡಿ ಬಂದ ಮೇಲೆ ಇನ್ನೊಂದು ಚಿತ್ರದ ಬಗ್ಗೆ ಬರೆಯುವುದಿರಲಿ, ಯೋಚಿಸಲೂ ಸಾಧ್ಯವಾಗುತ್ತಿಲ್ಲ. ನಾನೇ ಒಪ್ಪಿಕೊಂಡ ನಿಯಮವನ್ನು ಮುರಿಯಲು ಈ ಪರಿಯ ತುಡಿತ ಎಂದೂ ಆಗಿರಲಿಲ್ಲ. ಒಮ್ಮೆ ಎಲ್ಲೋ ಓದಿದ್ದೆ, ಸಮುದ್ರದ ಎದಿರು ನಿಂತು ಕಣ್ಣು ಮುಚ್ಚಿಕೊಂಡಾಗ ನಿಮ್ಮ ಮನಸ್ಸಿನಲ್ಲಿ ಯಾರ ಚಿತ್ರ ಬರುತ್ತದೋ ಅವರು ನಿಮ್ಮ ಮನಸ್ಸಿನಲ್ಲಿರುತ್ತಾರೆ ಅಂತ. ಇಂದು ಚಿತ್ರ ನೋಡುವಾಗ ನನಗೇ ಗೊತ್ತಿಲ್ಲದಂತೆ ನನಗೆ ಆ ಸಾಲು ನೆನಪಾಯಿತು. ವಿಮರ್ಶೆ, ತಾಂತ್ರಿಕತೆ ಇದೆಲ್ಲದರ ಹೊರತಾಗಿ ಇದು ಒಂದು ಅನುಭೂತಿಯ ದಾಖಲಿಸುವಿಕೆ.

ಚಿತ್ರ ಶುರುವಾಗುವುದು, ‘Life of Ram’ ಹಾಡಿನೊಂದಿಗೆ. ವಿಜಯ್ ಸೇತುಪತಿಯ ನಟನೆಯ ಹಲವಾರು ಸ್ತರಗಳು ಇದೊಂದು ಹಾಡಿನಲ್ಲೇ ಅನಾವರಣವಾಗಿಬಿಡುತ್ತದೆ. ಆತ ರಾಮ್, ಆತನೊಬ್ಬ ಪ್ರವಾಸಿ ಛಾಯಾಗ್ರಾಹಕ. ಅದು ಆತನ ಕೈಯಲ್ಲಿನ ಕ್ಯಾಮೆರಾ ನೋಡುವಾಗ ಗೊತ್ತಾಗಿಬಿಡುತ್ತದೆ. ಸರಿಯಾಗಿ ಬಾಚದ ತಲೆ, ಮುಖದ ತುಂಬಾ ದಾಡಿ, ತನ್ನ ಅಳತೆಗೂ ದೊಡ್ಡದಾದ ಒಂದು ಅಂಗಿ, ಜಗತ್ತಿನ ಬಗ್ಗೆ ಒಂದು ದಿವ್ಯನಿರ್ಲಕ್ಷ್ಯ. ಆದರೆ ಅದರ ಹೊರತಾಗಿಯೂ ಅವನಲ್ಲಿ ಇನ್ನೇನೋ ಇದೆ. ಅವನು ತನ್ನೊಂದಿಗೆ ಒಂದು ಸ್ತಬ್ಧತೆಯ ಪ್ರಪಂಚವನ್ನು ನಿರಂತರವಾಗಿ ಹೊರುತ್ತಿದ್ದಾನೆ. ಸುತ್ತಲಿನ ಪ್ರಕೃತಿಯ ಜೊತೆ, ಪರಿಸರದ ಜೊತೆ, ಪ್ರಾಣಿಗಳ ಜೊತೆ ತಾದಾತ್ಮ್ಯದೊಂದಿಗೆ ಬೆರೆತುಹೋಗುವ ಇವನು, ಸುತ್ತಲಿನ ಮನುಷ್ಯರ ಜೊತೆಗೆ ಒಂದು ಅಗೋಚರ ವರ್ತುಲವನ್ನಿಟ್ಟುಕೊಂಡು, ಅದರೊಳಗೆ ಇದ್ದೇ ವ್ಯವಹರಿಸುತ್ತಾನೆ. ಅದು ಅವನ ಕೋಟೆ. ಒಂದು ಹಾಡು ಮುಗಿಯುವುದರಲ್ಲೇ ನಿರ್ದೇಶಕರು ಇದನ್ನು ನಮಗೆ ದಾಟಿಸಿಬಿಡುತ್ತಾರೆ. ಹಾಡು ಮುಗಿಯುವಾಗ, ಸಮುದ್ರದ ದಂಡೆಯಲ್ಲಿ, ಯಾವ ಅಲೆಗಳೂ ಅಳಿಸದಷ್ಟು ದೂರದಲ್ಲಿ ಇವನು ಹೆಸರೊಂದನ್ನು ಬರೆಯುತ್ತಾನೆ.

ತನ್ನ ಕೆಲಸದ ಜೊತೆಜೊತೆಯಲ್ಲೇ ಆತ ಆಸಕ್ತರಿಗೆ ಫೋಟೋಗ್ರಫಿ ಸಹ ಕಲಿಸುತ್ತಾನೆ. ಆ ಗುಂಪಿನಲ್ಲೊಬ್ಬ ಹುಡುಗಿ, ಅವಳಿಗೆ ಇವನೆಂದರೆ ಆರಾಧನೆ, ಇನ್ಫ್ಯಾಚುಯೇಶನ್. ಒಂದು ಸಲ ಈತ ಬೆಳಗಾಮುಂಜಾನೆ ಎಲ್ಲಿಗೋ ಹೋಗಬೇಕಾಗಿರುತ್ತದೆ. ‘ಯಾರಿಗೆ ಡ್ರೈವಿಂಗ್ ಬರುತ್ತದೆ’ ಎಂದು ಕೇಳಿದಾಗ ಆ ಹುಡುಗಿ ಕೈ ಎತ್ತುತ್ತಾಳೆ. ಆ ಒಂದು ಪಯಣ ಮತ್ತು ಅನಿವಾರ್ಯವಾಗಿ ಆ ಹುಡುಗಿ ತೆಗೆದುಕೊಂಡ ಒಂದು ಡೀವಿಯೇಶನ್ ಇವನನ್ನು ಬೇರೊಂದು ಲೋಕಕ್ಕೆ ಕರೆದುಕೊಂಡು ಹೋಗಿಬಿಡುತ್ತದೆ. ಅಂದುಕೊಳ್ಳದೇ ಅವರು ತಂಜಾವೂರ್ ಪ್ರವೇಶಿಸುತ್ತಾರೆ. ಮಲಗಿದ್ದವನು ಎಚ್ಚರಾಗಿ ನೋಡಿ ಮೊದಲು ತಬ್ಬಿಬ್ಬಾಗುತ್ತಾನೆ. ಅವನ ಕಣ್ಣುಗಳಲ್ಲಿ ನಿಧಾನವಾಗಿ ನಿದ್ದೆಯ ಜೊತೆಜೊತೆಗೆ ಆ ಉದಾಸೀನತೆಯ ತೆರೆಯೂ ಸರಿಯುತ್ತಿದೆ. ‘ಕಿಟಕಿ ತೆಗಿ, ಊರಿನ ಪರಿಮಳ ನೋಡು’ ಎನ್ನುತ್ತಾನೆ. ಊರನ್ನು ಅವಳಿಗೆ ಪರಿಚಯಿಸುತ್ತಾ, ತನ್ನ ಮನೆ, ಸಿನಿಮಾ ಟಾಕೀಸು ಎಲ್ಲವನ್ನೂ ತೋರಿಸುತ್ತಾನೆ, ಅವನಿಗೇ ಗೊತ್ತಿಲ್ಲದಂತೆ ಅವನ ದನಿಯಲ್ಲಿ ಉತ್ಸಾಹ ಏರುತ್ತಿದೆ. ಅಷ್ಟರಲ್ಲಿ ಅಲ್ಲೊಂದು ಸೇತುವೆ, ಅಲ್ಲಿಂದ ಕವಲೊಡೆದ ಎರಡು ದಾರಿ, ಅವನ ಮುಖ ಮ್ಲಾನವಾಗುತ್ತದೆ. ‘ಸರ್ ಗಾಡಿ ನಿಲ್ಲಿಸಲಾ?’, ಹುಡುಗಿ ಕೇಳುತ್ತಾಳೆ. ‘ಬೇಡ ಬೇಡ, ಯಾರಾದರೂ ಸಿಕ್ಕರೆ ಮಾತನಾಡಬೇಕಾಗುತ್ತದೆ’ ಇವನು ಅವಸರದಲ್ಲಿ ಹೇಳುತ್ತಾನೆ. ನನಗೆ ಮೊನ್ನೆಮೊನ್ನೆ ತಾನೆ ಓದಿದ ನಲ್ಲತಂಬಿಯವರ ಹನಿಗವಿತೆಯ ಸಾಲೊಂದು ನೆನಪಾಯಿತು, ‘ಮುಚ್ಚಿದ ಮುಷ್ಠಿ ಪಡೆಯುವುದೂ ಇಲ್ಲ, ಕೊಡುವುದೂ ಇಲ್ಲ…’. ಹಾಗೆ ಮುಷ್ಠಿ ಬಿಗಿಹಿಡಿದುಕೊಂಡೇ ಬದುಕುತ್ತಿರುವವನು ಇವನು. ಭಾವನೆಗಳನ್ನು ತೋರಿಸದೆ ಬದುಕುತ್ತಿರುವವರು ಭಾವಹೀನರೇ ಆಗಬೇಕಿಲ್ಲ. ಬಹುಶಃ ಅವರು ಮಿಕ್ಕವರಿಗಿಂತ ಹೆಚ್ಚು ಭಾವನೆಗಳಲ್ಲಿ ಮುಳುಗಬಲ್ಲವರು, ಅವರು ತಮ್ಮದೇ ಭಾವನೆಗಳ ಆಳಕ್ಕೆ ಹೆದರುವವರು. ಭಾವನೆಗಳನ್ನು ಮುಚ್ಚಿಡುವುದು ಅವರ ಅಹಂಕಾರವಲ್ಲ, ಅನಿವಾರ್ಯತೆ, ಅವರ ಸರ್ವೈವಲ್ ವಿಧಾನ. ಒಂಟಿ ಬದುಕಬಲ್ಲೆ ಎನ್ನುವುದು ಎಲ್ಲಾ ಕಾಲಕ್ಕೂ ಅಹಂಕಾರವೇ ಆಗಬೇಕಿಲ್ಲ, ಇನ್ನೊಮ್ಮೆ ಕಳೆದುಕೊಂಡರೆ ಪುಡಿಪುಡಿಯಾಗಿ ಹೋದೇನು ಎನ್ನುವ ಅಸಹಾಯಕತೆಯೂ ಆಗಿರಬಹುದು.

ಅವನು ತನ್ನೊಂದಿಗೆ ಒಂದು ಸ್ತಬ್ಧತೆಯ ಪ್ರಪಂಚವನ್ನು ನಿರಂತರವಾಗಿ ಹೊರುತ್ತಿದ್ದಾನೆ. ಸುತ್ತಲಿನ ಪ್ರಕೃತಿಯ ಜೊತೆ, ಪರಿಸರದ ಜೊತೆ, ಪ್ರಾಣಿಗಳ ಜೊತೆ ತಾದಾತ್ಮ್ಯದೊಂದಿಗೆ ಬೆರೆತುಹೋಗುವ ಇವನು, ಸುತ್ತಲಿನ ಮನುಷ್ಯರ ಜೊತೆಗೆ ಒಂದು ಅಗೋಚರ ವರ್ತುಲವನ್ನಿಟ್ಟುಕೊಂಡು, ಅದರೊಳಗೆ ಇದ್ದೇ ವ್ಯವಹರಿಸುತ್ತಾನೆ.

ಯಾರನ್ನೂ ನೋಡದೆ, ಯಾರಿಗೂ ಹೇಳದೆ ಊರು ದಾಟಿ ಹೊರಟುಬಿಡುತ್ತೇನೆ ಎಂದುಕೊಂಡವನ ಕಣ್ಣೆದುರಿಗೆ ಅವನ ಹೈಸ್ಕೂಲ್ ಕಾಣುತ್ತದೆ. ಈಗವನು ಮುಂದೆ ಹೆಜ್ಜೆ ಇಡಲಾರ. ಗೇಟಿನ ಮುಂದೆ ಅದೇ ಕಾವಲುಗಾರ. ಒಂದು ಸಲ ಶಾಲೆ ಒಳಗೆಹೋಗಿ ಬರಲಾ ಎಂದು ಕೇಳಿ ಶಾಲೆಯ ಕಾಂಪೌಂಡಿನೊಳಗೆ ಹೆಜ್ಜೆ ಇಡುತ್ತಾನೆ. ಅವನಿಂದ ಅವನ ವಯಸ್ಸಿನ ಜೊತೆಜೊತೆಯಲ್ಲಿ ಅವನ ರಕ್ಷಣೆಯ ಗೋಡೆಗಳೂ ಕರಗುತ್ತಿವೆ. ಅಲ್ಲೊಂದು ಬೋರ್ಡಿನ ಮೇಲೆ ಪದಕ ಗೆದ್ದವರ ಹೆಸರುಗಳ ನಡುವೆ ತನ್ನ ಹೆಸರು ಹುಡುಕಿ, ‘ಅದು ನಾನು’ ಎಂದು ಕಿರುಚುತ್ತಾನೆ, ಶಾಲೆಯ ಬೆಲ್ ಅನ್ನು ತಬ್ಬುತ್ತಾನೆ, ಗೋಡೆಗಳನ್ನು ತಡವುತ್ತಾನೆ, ಕಡೆಗೆ ತನ್ನ ಶಾಲಾ ಕೊಠಡಿಗೆ ಬರುತ್ತಾನೆ. ಈ ದೃಶ್ಯ ಹಲವಾರು ನೆನಪಿನ ಅಲೆಗಳನ್ನು ಎಬ್ಬಿಸುತ್ತದೆ. ಕೊಠಡಿಯೊಳಗೆ ಹೆಜ್ಜೆ ಇಟ್ಟವನು ಮೊದಲ ಸಾಲಿನ ಕಡೆಗೆ ಕೂರುತ್ತಾನೆ, ಆ ಬೆಂಚು, ಮೇಜನ್ನು ಆತ್ಮದಂತೆ ಸ್ಪರ್ಶಿಸುತ್ತಾನೆ. ಅಲ್ಲಿಂದ ಎದ್ದು ಹಿಂದಿನ ಬೆಂಚುಗಳ ಕಡೆ ನಡೆದವನು ಅಲ್ಲಿ ಕೂತು, ಮುಂದಿನ ಬೆಂಚನ್ನು ದಿಟ್ಟಿಸುತ್ತಾನೆ. ನಮಗೇ ಗೊತ್ತಿಲ್ಲದಂತೆ ಒಂದು ನಿಟ್ಟುಸಿರು ನಮ್ಮನ್ನು ಸೀಳಿಕೊಂಡು ಬರುತ್ತದೆ.

ಶಾಲೆಯ ಕಾವಲುಗಾರ ನೆನಪಿಸಿಕೊಂಡ ಎಂದು ಸಹಪಾಠಿಗೆ ಮಾಡುವ ಒಂದು ಕರೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲದ ಅವನನ್ನು ಶಾಲೆಯ ವಾಟ್ಸಪ್ ಗುಂಪಿಗೆ ಸೇರುವಂತೆ ಮಾಡುತ್ತದೆ. ಎಲ್ಲರೂ ಸೇರಬೇಕು ಎಂದುಕೊಳ್ಳುತ್ತಾರೆ. ಎರಡು ತಿಂಗಳ ನಂತರ Batch of 96 ರಿಯೂನಿಯನ್ ಎಂದಾಗುತ್ತದೆ. ಆ ದಿನವೂ ಬಂದುಬಿಡುತ್ತದೆ. ಎಲ್ಲರೂ ಮಾತನಾಡುತ್ತಿರುತ್ತಾರೆ. ಇದ್ದಕ್ಕಿದ್ದಂತೆ ಗುಂಪಿನೊಳಗಿಂದ ಒಬ್ಬರು, ‘ಜಾನೂ ಸಹ ಬರುತ್ತಿದ್ದಾಳೆ’ ಅನ್ನುತ್ತಾರೆ. ಅವನ ಪ್ರಪಂಚ ಸ್ತಬ್ಧವಾಗುತ್ತದೆ. ಕಣ್ಣಿಗೆ ಕಾಣುವಂತೆ ಅವನು ತಲ್ಲಣಿಸಿ ಹೋಗುತ್ತಾನೆ. ಎಲ್ಲರ ನಡುವೆ ಕೂತಿದ್ದವನು ಎದ್ದು ಅಲ್ಲಿದ್ದ ತೆರೆಯೊಂದರ ಹಿಂದೆ ಹೋಗಿ ಶಥಪಥ ಹಾಕಲು ಪ್ರಾರಂಭಿಸುತ್ತಾನೆ. ಅವನೊಳಗಿನ ಪ್ರಕ್ಷುಬ್ಧತೆ ಅವನ ಇಡೀ ಇರುವಿಕೆಯಲ್ಲಿ ಕಾಣುತ್ತಿದೆ. ಯಾರು ಈ ಜಾನು? ಅವನ ಮನಸ್ಸಿನಲ್ಲಿ ಹಳೆಯ ಚಿತ್ರಗಳ ಮೆರವಣಿಗೆ. ಅವರ ಹೈಸ್ಕೂಲು, ಹತ್ತನೆಯ ತರಗತಿಯಲ್ಲಿನ ಈ ಜಾನೂ ಉರುಫ್ ಜಾನಕೀದೇವಿ, ಅವರ ಸ್ನೇಹ. ನಡುವೆ ಅವಳಿಗೆ ಹುಷಾರು ತಪ್ಪಿ ಅವಳು ಶಾಲೆಗೆ ಬರದೆ ಉಳಿದಾಗ ಅವನ ಚಡಪಡಿಕೆ, ಅವಳ ಮನೆಹುಡುಕಿ ಅವನು ಬೀದಿ ಬೀದಿ ಅಲೆಯುವುದು, ಆನಂತರ ಅವಳು ಮತ್ತೆ ಶಾಲೆಗೆ ಬಂದಾಗ ಅವರ ನಡುವಿನ ಸಮೀಕರಣ ಬದಲಾಗಿ, ಅವಳ ಬಗ್ಗೆ ಅವನಿಗೆ ಪ್ರೀತಿ ಮೂಡಿರುವುದು, ಅವಳ ಮಧುರವಾದ ಹಾಡುಗಳು, ‘ಯಮುನೈಕ್ಕರೈಯಿನಿಲೇ….’ ಎನ್ನುವ ಯಮುನೆಯ ದಡದಲ್ಲಿ ರಾಧೆ ಕೃಷ್ಣನಿಗಾಗಿ ಕಾಯುವ ಹಾಡನ್ನು ಹಾಡಲು ಅವಳಿಗೆ ಹೇಳು ಎಂದು ಸ್ನೇಹಿತರಿಗೆಲ್ಲಾ ದುಂಬಾಲು ಬೀಳುವ ಇವನು, ಅದೊಂದು ಹಾಡನ್ನು ಮಾತ್ರ ಹಾಡದ ಅವಳು… ಎಲ್ಲವೂ ನೆನಪಾಗುತ್ತದೆ. ಅವಳೆಂದರೆ ಅವನಿಗೆ ಭಾವ ಮಾತ್ರ ಅಲ್ಲ, ಅವಳೆದುರಲ್ಲಿ ಅವನ ಇಡೀ ವ್ಯಕ್ತಿತ್ವ ಕಂಪಿಸಲಾರಂಭಿಸುತ್ತದೆ. ‘ಅವನೆದೆ ಹೇಗೆ ಹೊಡೆದುಕೊಳ್ಳುತ್ತಿದೆ ನೋಡು’ ಎಂದು ಗೆಳತಿ ಹೇಳಿದ ಮಾತು ಕೇಳಿ ಜಾನು ಅವನ ಎದೆ ಮೇಲೆ ಮೈ ಇಡುತ್ತಾಳೆ. ಅವನ ಎದೆಬಡಿತ ಧಡ್ ಧಡ್ ಎಂದು ಏರಿ ಆತ ಮೂರ್ಛೆ ಬಿದ್ದಿರುತ್ತಾನೆ. ಇಡೀ ತರಗತಿಗೆ ಅವರ ಪ್ರೀತಿ ಗೊತ್ತಿರುತ್ತದೆ. ಹತ್ತನೆಯ ತರಗತಿಯ ಪರೀಕ್ಷೆ ಮುಗಿದ ಮೇಲೆ, ತಂಜಾವೂರಿನ ಅದೇ ಸೇತುವೆಯ ಮೇಲೆ ಅವರಿಬ್ಬರ ಹಾದಿಗಳು ಬದಲಾಗಿರುತ್ತವೆ. ಅವಳು ಹುಡುಗಾಟಿಗೆಗೆ ಎಸೆದ ಪೆನ್ನಿನ ಇಂಕಿನ ಚುಕ್ಕೆ ಅವನ ಶರ್ಟ್, ಮುಖ, ಅಷ್ಟೇ ಏಕೆ ಅವನ ನಗುವಿನ ಮೇಲೂ ತನ್ನ ಠಸ್ಸೆ ಒತ್ತಿರುತ್ತದೆ.

ರೀಯೂನಿಯನ್ ಗೆ ಜಾನು ಬರುತ್ತಾಳೆ. ಬಂದವಳು ಎಲ್ಲರೊಡನೆಯೂ ಮಾತಿಗೆ ಕೂರುತ್ತಾಳೆ. ಮಿಕ್ಕವರೆಲ್ಲರನ್ನೂ ದೂರ ಕಳಿಸಿದ ಅವಳ ಗೆಳತಿ, ನಿಧಾನವಾಗಿ, ‘ಏನಿಲ್ಲಾ, ರಾಮ್ ಸಹ ಬಂದಿದ್ದಾನೆ’ ಎನ್ನುತ್ತಾಳೆ. ನಗುತ್ತಿದ್ದ ಅವಳು ಚಲಿಸದ ಚಿತ್ರವಾಗುತ್ತಾಳೆ, ಅವಳ ಸುತ್ತಲಿನ ಜಗತ್ತೂ ಆ ಕ್ಷಣಕ್ಕೆ ಇಲ್ಲವಾಗುತ್ತದೆ. ನಿಧಾನವಾಗಿ ಎದ್ದು ಅವನನ್ನು ಹುಡುಕುತ್ತಾ ಬರುತ್ತಾಳೆ. ಸುಮಾರು ೨೩ ವರ್ಷಗಳ ನಂತರದ ಅವರಿಬ್ಬರ ಮರುಭೇಟಿ. ಅವನು ಅದೇ ಹತ್ತನೆಯ ತರಗತಿಯ ಹುಡುಗ. ಅದೇ ನಾಚಿಕೆಯ, ಹಿಂಜರಿಕೆಯ ಪೋರ. ಅವಳು ಆಗಲೂ, ಈಗಲೂ ಆತ್ಮವಿಶ್ವಾಸದ ಹೆಣ್ಣು. ಅವಳ ಆತ್ಮವಿಶ್ವಾಸಕ್ಕೆ ಕಾರಣ ಅವನ ಪ್ರೀತಿಯ ಬಗ್ಗೆ ಅವಳಿಗಿರುವ ನಂಬಿಕೆ. ಸಂಬಂಧದಲ್ಲಿರುವವರ ಆತ್ಮವಿಶ್ವಾಸದ ತಳಹದಿ ಇರುವುದು ಮತ್ತೊಬ್ಬರು ತಮ್ಮನ್ನು ಎಷ್ಟು ಪ್ರೀತಿಸುತ್ತಾರೆ, ಅವರಿಗೆ ನಾವೆಷ್ಟು ಬೇಕು ಎನ್ನುವುದರಲ್ಲಿ. ಅವಳ ನಡೆನುಡಿಗಳಲ್ಲಿ ಅವನ ಪ್ರೀತಿ ಆ ವಿಶ್ವಾಸವನ್ನು ತುಂಬಿರುತ್ತದೆ.

ಅವಳು ಊಟ ಮಾಡಿಲ್ಲ ಎಂದು ತಿಳಿದವ ಮಾತೇ ಆಡದೆ ಹೋಗಿ, ತಟ್ಟೆಗೆ ತಿಂಡಿ ಜೋಡಿಸಿಕೊಂಡು ಬರುತ್ತಾನೆ. ಒಂದೆರಡು ತುತ್ತು ತಿಂದ ಅವಳು, ‘ಒಂದಿಷ್ಟೂ ಬಿಡದ ಹಾಗೆ ತಿನ್ನಬೇಕು’ ಎಂದು ತಟ್ಟೆ ಅವನೆಡೆಗೆ ಸರಿಸುತ್ತಾಳೆ. ಈ ದೃಶ್ಯದಲ್ಲಿ ವಿಜಯ್ ಸೇತುಪತಿಯ ನಟನೆ ನಮ್ಮಲ್ಲಿ ತಲ್ಲಣ ಹುಟ್ಟಿಸಿಬಿಡುತ್ತದೆ. ಅದು ಅವಳು ತಿಂದ ತಟ್ಟೆ, ಅವಳು ಬಳಸಿದ ಚಮಚ, ಅವನ ಮಟ್ಟಿಗೆ ಅದು ಮೊದಲ ಸ್ಪರ್ಶ. ದಿನಗಳನ್ನೆಣಿಸಿ, ಕ್ಷಣಗಳನ್ನೆಣೆಸಿ ಭೇಟಿಯಾದ ಪ್ರೇಮಿಯನ್ನು ಮೊದಲ ಬಾರಿ ಸ್ಪರ್ಶಿಸಿದಾಗ ಆಗುವುದು ಕೇವಲ ಸಂತಸವಲ್ಲ, ಅದೊಂದು ಸಂಭ್ರಮ, ಅದೊಂದು ನಡುಕ, ಅದೊಂದು ಅಕಾರಣವಾದ ಹೆದರಿಕೆ. ಅವೆಲ್ಲವನ್ನೂ ಸೇತುಪತಿ ತಾವೇ ಸ್ವತಃ ಆಗಿದ್ದಾರೆ. ಆ ತಟ್ಟೆಯಲ್ಲಿನ ಊಟವನ್ನು ಅವರು ‘ತಿನ್ನುವುದಿಲ್ಲ’, ಸ್ಪರ್ಶಿಸುತ್ತಾರೆ.

ಜಾನುವಿನ ಫ್ಲೈಟ್ ಮರುದಿನ ಮುಂಜಾನೆಗೆ ಬುಕ್ ಆಗಿದೆ, ನೇರ ಟಿಕೆಟ್ ಸಿಗದೆ, ತಿರುಚಿಗೆ ಹೋಗಿ ಅಲ್ಲಿಂದ ಇನ್ನೊಂದು ವಿಮಾನ ಹಿಡಿಯಬೇಕಾಗಿದೆ. ಅವನ ಕಾರಿನಲ್ಲಿ, ಜಾನು ಮತ್ತು ಅವರ ಸ್ನೇಹಿತೆ. ಸ್ನೇಹಿತೆಯನ್ನು ಇಳಿಸಿದ ನಂತರ ಕಾರಿನಲ್ಲಿ ಇವರಿಬ್ಬರೆ. ಅವನಿಗೆ ಅವಳ ಸಾನಿಧ್ಯ ಬೇಕು, ಆದರೆ ಹೆದರಿಕೆ. ನೇರ ಕಾರ್ ಅನ್ನು ಅವಳ ಹೋಟೆಲ್ ಮುಂದೆ ನಿಲ್ಲಿಸುತ್ತಾನೆ. ‘ಹಾಗಾದರೆ ನನ್ನ ಜೊತೆ ಮಾತನಾಡಲು ನಿನಗೇನೂ ಇಲ್ಲವಾ?’, ಸಿಟ್ಟಿನಲ್ಲಿ ಕೇಳುತ್ತಾಳೆ. ಅದೇ ಸಿಟ್ಟಿನಲ್ಲಿ ಇಳಿದು ಹೋಗಿ ರೂಂ ಸೇರುತ್ತಾಳೆ. ಮನಸ್ಸು ತಡೆಯದೆ ಫೋನ್ ಮಾಡುತ್ತಾಳೆ, ‘ಎಲ್ಲಿದ್ದೀಯಾ? ತುಂಬಾ ದೂರ ಹೋಗಿರುವೆಯಾ?’, ‘ಯಾಕಮ್ಮ, ಏನಾಯ್ತು?’, ’ ಹೇಳು, ತುಂಬಾ ದೂರ ಹೋಗಿರುವೆಯಾ?’, ‘ನೀನೆಲ್ಲಿ ಬಿಟ್ಟುಹೋದೆಯೋ ಅಲ್ಲೇ ನಿಂತಿದ್ದೇನೆ, ಜಾನು….’. ಅವಳು ಓಡಿ ಬರುತ್ತಾಳೆ, ಮುಂಜಾನೆಯವರೆಗೂ ಇಲ್ಲೇ ನಿಂತಿರುತ್ತಿದ್ದೆ ಎನ್ನುವಂತೆ ಅವನು ಅವಳಿಗಾಗಿ ಕಾರ್ ಬಾಗಿಲು ತೆರೆದು ನಿಂತಿದ್ದಾನೆ. ‘ಇನ್ನೇನೂ ಬೇಡ ಕಣೋ, ಇವತ್ತು ನಾನು ಮಲಗುವುದಿಲ್ಲ, ಇದೊಂದು ರಾತ್ರಿ ನಿನ್ನ ಜೊತೆ ಮಾತನಾಡುತ್ತಾ ಕಳಿಯಬೇಕು’ ಅವಳು ಹೇಳುತ್ತಾಳೆ.

ಚಿತ್ರದ ದ್ವಿತೀಯಾರ್ಧ ಈ ಪಯಣದ ಕಾವ್ಯ ಬರೆಯುತ್ತದೆ. ಸಲೂನ್ ಗೆ ಕರೆದುಕೊಂಡು ಹೋಗಿ ಅವನ ಗಡ್ಡ ಬೋಳಿಸಿಸುತ್ತಾಳೆ, ‘೯೬ರನೆಯ ಇಸವಿಯ ಹೇರ್ ಕಟ್ ಮಾಡಿ’ ಎಂದು ಹೇಳಿ ಅದನ್ನು ಮಾಡಿಸುತ್ತಾಳೆ. ಅವನ ದೊಗಳೆ ಅಂಗಿ ಕಳಚಲು ಹೇಳಿ, ‘ನೋಡು ಈ ಟೀಶರ್ಟ್ ನಲ್ಲಿ ಎಷ್ಟು ಮುದ್ದಾಗಿದ್ದೀಯ’ ಎಂದು ಹೊಗಳುತ್ತಾಳೆ. ‘ಲೇ, ನೀನಿನ್ನೂ ವರ್ಜಿನ್ ಏನೋ?’ ಎಂದು ಕೇಳಿ ಬೆಚ್ಚಿ ಬೀಳಿಸುತ್ತಾಳೆ! ‘ಅಲ್ಲ ಕಣೋ, ನಿನ್ನಂತ ಹುಡುಗನಿಗೆ ಯಾಕೋ ಯಾರೂ ಬೀಳಲಿಲ್ಲ, ಯಾವುದೇ ಹುಡುಗಿ ಇಷ್ಟ ಪಡುವಂತಹ ಹುಡುಗ ನೀನು’ ಎಂದಾಗ ಅವನ ಮುಖದಲ್ಲಿನ ಹಿಗ್ಗು ನೋಡಬೇಕು! ಮತ್ತೆ ಅವಳ ಹೋಟೆಲ್ ಕಡೆ ಪಯಣ. ‘ನಾನು ನಿನಗಾಗಿ ತುಂಬಾ ಕಾದೆ ರಾಮ್. ನೀನು ಯಾವಾಗಲಾದರೂ ಬಂದೇ ಬರುವೆ ಅನ್ನಿಸುತ್ತಿತ್ತು. ನನ್ನ ಮದುವೆ ದಿನ ಸಹ ಛತ್ರದಲ್ಲಿ ನಿನಗೆ ಕಾಯುತ್ತಿದ್ದೆ. ಸಿನಿಮಾಗಳಲ್ಲಿ ಆದ ಹಾಗೆ, ನೀನು ಬಂದು, ‘ನನ್ನ ಜಾನು, ನನಗೆ ಕೊಟ್ಟುಬಿಡಿ’ ಅಂದು ಕರೆದುಕೊಂಡು ಹೋಗುವೆ ಎಂದು ಕಾಯುತ್ತಿದ್ದೆ’. ಅವಳ ಧ್ವನಿಯಲ್ಲಿ ಮೊದಲ ಸಲ ದುಃಖ, ನೋವು. ಅವನ ಮುಖ ಬಣ್ಣಗೆಡುತ್ತಿರುತ್ತದೆ. ‘ಹಾಗಾದರೆ ನಾನು ನಿನ್ನ ಕಾಲೇಜ್ ಹತ್ತಿರ ಬಂದದ್ದು ನಿನಗೆ ಗೊತ್ತಾಗಲೇ ಇಲ್ಲವಾ?’ ಎಂದು ಕಂಗೆಟ್ಟ ದನಿಯಲ್ಲಿ ಕೇಳುತ್ತಾನೆ. ‘ಯಾವಾಗ?’ ಅವಳ ಪ್ರಶ್ನೆ. ಒಂದು ಸಣ್ಣ ತಪ್ಪು ತಿಳುವಳಿಕೆ ಅವರ ಆ ಭೇಟಿಯನ್ನು ತಪ್ಪಿಸಿರುತ್ತದೆ. ಈಗ ಅವಳಿಗೆ ತಡೆಯಲಾಗುವುದಿಲ್ಲ, ಹೋಟೆಲ್ ಹತ್ತಿರ ನಿಲ್ಲಿಸಿದ ಕಾರ್ ನಿಂದ ಇಳಿದವಳೇ ತನ್ನ ಕೋಣೆಗೆ ಓಡುತ್ತಾಳೆ, ಗಾಬರಿಯಲ್ಲಿ ಅವನು ಹಿಂಬಾಲಿಸುತ್ತಾನೆ. ಅವಳು ಬಿಕ್ಕಿಬಿಕ್ಕಿ ಅಳುತ್ತಿರುತ್ತಾಳೆ. ಅವಳನ್ನು ಸಮಾಧಾನ ಪಡಿಸಿದವನು, ತಾನು ಹೇಗೆ ಅವಳನ್ನು ನೋಡಲು ಬಂದು, ಅವಳಿಗೆ ಕಾಣದಂತೆ ಹಿಂಬಾಲಿಸುತ್ತಿದ್ದೆ ಎಂದು ಹೇಳುತ್ತಾನೆ. ಮದುವೆಗೆ ಮೊದಲಿನ ಅವಳ ಬದುಕಿನ ಒಂದೊಂದು ಘಟನೆಗಳ ವಿವರ ಕೊಡುತ್ತಾನೆ. ‘ನಿಮ್ಮ ಕಾಲೇಜಿನಲ್ಲಿ ನೀನು ಮೊದಲ ಸಲ ಸೀರೆ ಉಟ್ಟಿದ್ದಲ್ಲಾ, ಹಂಗೇ ದೇವಸ್ಥಾನಕ್ಕೆ ಹೊತ್ತುಕೊಂಡು ಹೋಗಿ ತಾಳಿ ಕಟ್ಟಿಬಿಡಬೇಕು ಅನ್ನಿಸಿತ್ತು’ ಎನ್ನುವುದನ್ನು ಮಾತೇ ಇಲ್ಲದೆ ಅವನು ಅಭಿನಯಿಸುವುದೇ ಒಂದು ಸೊಗಸು. ಆ ನಗುವಿನ ಮಧ್ಯದಲ್ಲೇ ಅವನು ಪಿಸುಗುಡುತ್ತಾನೆ, ‘ನಿನ್ನ ಮದುವೆಗೆ ನಾನು ಬಂದಿದ್ದೆ ಜಾನು…. ಆದರೆ ತಾಳಿ ಕಟ್ಟುವವರೆಗೂ ಇರಲಾಗಲಿಲ್ಲ….’.

ಅದು ಅವಳು ತಿಂದ ತಟ್ಟೆ, ಅವಳು ಬಳಸಿದ ಚಮಚ, ಅವನ ಮಟ್ಟಿಗೆ ಅದು ಮೊದಲ ಸ್ಪರ್ಶ. ದಿನಗಳನ್ನೆಣಿಸಿ, ಕ್ಷಣಗಳನ್ನೆಣೆಸಿ ಭೇಟಿಯಾದ ಪ್ರೇಮಿಯನ್ನು ಮೊದಲ ಬಾರಿ ಸ್ಪರ್ಶಿಸಿದಾಗ ಆಗುವುದು ಕೇವಲ ಸಂತಸವಲ್ಲ, ಅದೊಂದು ಸಂಭ್ರಮ, ಅದೊಂದು ನಡುಕ, ಅದೊಂದು ಅಕಾರಣವಾದ ಹೆದರಿಕೆ. ಅವೆಲ್ಲವನ್ನೂ ಸೇತುಪತಿ ತಾವೇ ಸ್ವತಃ ಆಗಿದ್ದಾರೆ.

ಅವರ ಪ್ರೀತಿಗೆ ಆ ಕೊಠಡಿ ತುಂಬಾ ಚಿಕ್ಕದಾಗುತ್ತದೆ. ಅದನ್ನು ದಾಟಿ ಅವರು ಮತ್ತೆ ಹೊರಗೆ ಬರುತ್ತಾರೆ. ಕಾರ್ ಬಿಟ್ಟು ಮೆಟ್ರೋ ಹತ್ತುತ್ತಾರೆ. ಹೋಗುವಾಗ ಕಾಣಿಸುವ ವಿಮಾನ ನಿಲ್ದಾಣ ಇಬ್ಬರನ್ನೂ ಮಂಕಾಗಿಸುತ್ತದೆ. ‘ನಮ್ಮನೆ ಇಲ್ಲೇ ಹತ್ತಿರ, ಬರುತ್ತೀಯಾ..?’, ಅವನು ತಡೆತಡೆದು ಕೇಳುತ್ತಾನೆ, ಮೊದಲು ಛೇಡಿಸಿದರೂ ಅವಳು ಅವನನ್ನು ಹಿಂಬಾಲಿಸುತ್ತಾಳೆ. ಮಳೆಯಲ್ಲಿ ನೆಂದ ಅವಳು ಬಟ್ಟೆ ಬದಲಾಯಿಸಿ ಇವನದೇ ಟ್ರ್ಯಾಕ್ ಪ್ಯಾಂಟ್, ಶರ್ಟ್ ಹಾಕಿಕೊಳ್ಳುತ್ತಾಳೆ. ಶರ್ಟ್ ಹಾಕಿಕೊಳ್ಳುವ ಮೊದಲು ಅದನ್ನು ಮೂಗಿಗಿಟ್ಟು ಆಳವಾಗಿ ಉಸಿರೆಳೆದುಕೊಳ್ಳುತ್ತಾಳೆ. ಈ ಚಿತ್ರದಲ್ಲಿ ಸ್ಪರ್ಶ ಹಾಗು ಪರಿಮಳ ಅತ್ಯಂತ ಆಪ್ತವಾಗಿ ಬಳಕೆಯಾಗಿದೆ. ಅವನು ಒಂದು ಹಳೆಯ ಟ್ರಂಕ್ ತೆಗೆದು ತಾನು ಕೂಡಿಟ್ಟುಕೊಂಡಿದ್ದ ಅವಳ ನೆನಪುಗಳನ್ನೆಲ್ಲಾ ತೋರಿಸುತ್ತಾನೆ. ಅಷ್ಟರಲ್ಲಿ ಕರೆಂಟ್ ಹೋಗುತ್ತದೆ. ದೀಪ ತರಲೆಂದು ಅವನು ಹೋಗುತ್ತಾನೆ. ಅವಳು ಹಾಡುತ್ತಾಳೆ, ಅದೇ ಹಾಡು. ಇಷ್ಟು ದಿನ ಅವನು ಬೇಡಿಕೊಂಡಿದ್ದ ಹಾಡು…. ಕತ್ತಲಲ್ಲಿ ಹುಡುಕಿ, ಒದ್ದಾಡಿ ಅವನು ದೀಪ ಹಿಡಿದು ಓಡಿ ಬರುತ್ತಾನೆ. ಆ ಹಾಡನ್ನು ಹಾಡುವಾಗಿನ ಅವಳ ಮುಖವನ್ನು ತನ್ನೆದೆಯಲ್ಲಿ ಕಾಪಿಟ್ಟುಕೊಳ್ಳುವುದು ಅವನ ಆಸೆ.. ಅವನೊಂದು ಕವಿತೆ ಬರೆದಿರುತ್ತಾನೆ. ಅದನ್ನು ಓದುತ್ತಾನೆ…’…..ಹತ್ತು ತಿಂಗಳು ಒಡಲಲ್ಲಿ ಇಟ್ಟುಕೊಂಡಿದ್ದಕ್ಕೆ ನಿನ್ನ ಅಮ್ಮನಿಗೆ ನೀನು ಸ್ವಂತ ಆಗುವುದಾದರೆ, ಇಷ್ಟು ವರ್ಷಗಳು ನಿನ್ನನ್ನು ಎದೆಯಲ್ಲಿ ಹೊತ್ತಿದ್ದೀನಿ, ನನಗೆ ನೀನು ಸ್ವಂತ ಆಗುವುದಿಲ್ಲವಾ…..?’.

ಕಡೆಗೂ ಅವಳು ಹೊರಡುವ ಸಮಯ ಬರುತ್ತದೆ. ಏರ್ಪೋರ್ಟಿಗೆ ಬರುತ್ತಾರೆ. ಅವಳು ನಿಂತ ಜಾಗದಿಂದ ಕದಲಲೊಲ್ಲಳು… ಅವನು ಓಡಿ ಹೋಗಿ ತಾನೂ ತಿರಚಿಗೆ ಟಿಕೆಟ್ ಕೊಂಡುತರುತ್ತಾನೆ. ‘ವಿಮಾನ ಹೊರಡುವ ಕಡೆಯ ಘಳಿಗೆವರೆಗೂ ನಿನ್ನ ಜೊತೆ ಇರ್ತೀನಿ, ಆಯ್ತಾ….?’. ತನ್ನವನೊಂದಿಗೆ ಕೆಲವೇ ಕೆಲವು ಗಂಟೆ ಕಳೆಯಲು, ಮೈತುಂಬಾ ಕೆಲಸದ ನಡುವೆಯೂ ನೂರಾರು ಮೈಲು ದೂರ ಪ್ರಯಾಣ ಮಾಡಿದ ಗೆಳತಿ ನೆನಪಾದಳು… ಪ್ರೀತಿಯೊಂದು ಮಾತ್ರ ಸಾಧ್ಯವಾಗಿಸುವ ಹುಚ್ಚುತನಕ್ಕೆ ವಯಸ್ಸಿನ ಹಂಗಿಲ್ಲ… ಇಷ್ಟೆಲ್ಲಾ ಆದನಂತರ ಅವರಿಬ್ಬರೂ ದೈಹಿಕವಾಗಿ ಒಂದಾದರೆ ಅಥವಾ ಆಗಲಿಲ್ಲವೇ ಎನ್ನುವುದರ ಮೇಲೆ ಅವರಿಬ್ಬರ ಪ್ರೇಮದ ಔನ್ನತ್ಯ ನಿಂತಿದೆ ಎಂದು ನನಗನ್ನಿಸಲಿಲ್ಲ. ಅವರಿಬ್ಬರ ನಡುವಿನ ಆ ಆತ್ಮೀಯತೆ, ಹತ್ತಿರದ ನಡುವೆ ಮಿಥುನ ಒಂದು ಘಟನೆ ಮಾತ್ರ. ಅದರ ಆಗುವಿಕೆ ಅಥವಾ ಆಗದಿರುವಿಕೆ ಅವರ ಪ್ರೀತಿಯನ್ನು ಹೆಚ್ಚೂ ಮಾಡುತ್ತಿರಲಿಲ್ಲ, ಕಡಿಮೆಯೂ ಮಾಡುತ್ತಿರಲಿಲ್ಲ.

ಚಿತ್ರದ ಜೊತೆಜೊತೆಯಲ್ಲೇ ಇನ್ನೊಂದು ಪಯಣ ಇತ್ತು. ಅದು ಅವರಿಬ್ಬರ ವ್ಯಕ್ತಿತ್ವಗಳೂ ಪ್ರೇಮದಲ್ಲಿ ಮಾಗುವ ಪರಿ. ಅಷ್ಟು ಆತ್ಮವಿಶ್ವಾಸದ ನಡೆನುಡಿಯ ಅವಳು ಅವನ ಪ್ರೀತಿಗೆ ಕರಗಿ ಅವನೆದಿರು ತನ್ನೆಲ್ಲಾ ಗೋಡೆಗಳನ್ನೂ ಕಳಚಿ ಆರ್ದ್ರವಾಗುತ್ತಾಳೆ. ಅವಳ ಪ್ರೀತಿಯೇ ಅವನ ಆತ್ಮವಿಶ್ವಾಸವಾಗಿ, ನಿಧಾನವಾಗಿ ಅವನನ್ನು ಅವನ ಸಂಕೋಚದ ಹಿಂಜರಿಕೆಯ ಕೋಶದಿಂದ ಹೊರತರುತ್ತದೆ. ಆ ಬದಲಾವಣೆ ಅತ್ಯಂತ ಸೂಕ್ಷ್ಮವಾಗಿ, ರೇಶಿಮೆ ದಾರದ ಚಿತ್ತಾರದಂತೆ ಒಡಮೂಡಿದೆ.

ನಟನೆಯ ಬಗ್ಗೆ ಏನೂ ಹೇಳಬೇಕಾಗಿಲ್ಲ. ಇಲ್ಲಿ ಯಾರೆಂದರೆ ಯಾರೂ ‘ನಟಿಸಿದ’ ಹಾಗೆ ಕಾಣುವುದೇ ಇಲ್ಲ. ಸೇತುಪತಿ ನಮ್ಮ ನಡುವಿನ ಅತ್ಯಂತ ಸಹಜ ನಟರಲ್ಲಿ ಒಬ್ಬರು. ಯಾವುದೇ ಚಿತ್ರ ಕೇವಲ ಅವರ ಇರುವಿಕೆಯಿಂದ ವಿಶೇಷತೆಯನ್ನು ಪಡೆದುಬಿಡುತ್ತದೆ. ತ್ರಿಶಾ ಇದುವರೆಗಿನ ಚಿತ್ರಜೀವನದಲ್ಲಿ ಇದು ಬೆಸ್ಟ್ ಪಾತ್ರ ಎಂದು ಹೇಳಬಹುದು. ಅವರಷ್ಟೇ ಅಲ್ಲ, ಉಳಿದವರ ನಟನೆಯೂ ಅತ್ಯಂತ ಮನೋಜ್ಞವಾಗಿದೆ. ಸಂಗೀತ ಮತ್ತು ಛಾಯಾಗ್ರಹಣ ಅತ್ಯಂತ ಸಾವಯವವಾಗಿ ಚಿತ್ರದಲ್ಲಿ ಬೆರೆತಿದೆ. 2 ಗಂಟೆ 38 ನಿಮಿಷಗಳ ಚಿತ್ರದಲ್ಲಿ ಪ್ರೇಕ್ಷಕರ ಆಸಕ್ತಿಯನ್ನು ಹಿಡಿದಿಡುವುದು ಸುಲಭವಲ್ಲ, ಅದೂ ಮುಖ್ಯ ಕಥೆಯ ವ್ಯಾಪ್ತಿ ಕೇವಲ ಒಂದು ಹಗಲು ಮತ್ತು ಒಂದು ರಾತ್ರಿ ಇರುವಾಗ.

ಕೆಲವು ಸಲ ಒಂದು ಪರಿಮಳ, ಒಂದು ರುಚಿ, ಒಂದು ಹಾಡು, ಒಂದು ಶಬ್ಧ ಕೇವಲ ಅವುಗಳ ಕಾರಣಕ್ಕೇ ನಿಮಗೆ ಆಪ್ತ ಎನ್ನಿಸುವುದಿಲ್ಲ. ಅವು ತಮ್ಮೊಡನೆ ಹೊತ್ತು ತರುವ ನೆನಪಿನ ಕಾರಣಕ್ಕೆ ಅದು ನಮ್ಮದಾಗಿ ಬಿಡುತ್ತದೆ. ಈ ಚಿತ್ರ ಸಹ ಹಾಗೆಯೇ. ಇದನ್ನು ನೋಡುವಾಗ ನಿಮ್ಮ ನೆನಪಿನಾಳದಿಂದ ಎದ್ದು ಕೂಡುವ ಚಿತ್ರವೊಂದರ ಕಾರಣಕ್ಕೆ ಇದು ಆಪ್ತವಾಗಿ ಬಿಡುತ್ತದೆ. ಕಣ್ಣಂಚುಗಳು ಒದ್ದೆಯಾಗಿರುತ್ತವೆ. ನಿಮ್ಮೆದೆಯಲ್ಲಿ ನೀವು ಬಚ್ಚಿಟ್ಟುಕೊಂಡಿರುವ ಹಾಡನ್ನು ಕೇಳಲಿಕ್ಕಾಗಿಯೇ ನೋಡಬೇಕಾದ ಚಿತ್ರ ಇದು.