ಮಾರ್ಗೋಡನಹಳ್ಳಿಯ ಒಕ್ಕಲುಗೇರಿಯ ಭಾಗ್ಯಮ್ಮ ಬನ್ನೂರು ಬಸ್ಟಾಂಡಿನ ಬಳಿ ಸೊಪ್ಪು ಮಾರುತ್ತಿದ್ದವರು. ಸಮಯ ಸಿಕ್ಕಾಗ ದನದ ದಲ್ಲಾಳಿ ಕೆಲಸ, ಹೆಣ್ಣು ತೋರೋದು, ನಾಟಿ ಕೀಳೋದೂ ಇತ್ಯಾದಿಗಳನ್ನೂ ಮಾಡುತ್ತಿದ್ದರು. ಇವರ ಗೆಳತಿ ದಲಿತರ ಕೇರಿಯ ದೇವಮ್ಮನದು ಕೂಲಿಯ ಕೆಲಸ. ಸಮಯ ಒದಗಿ ಬಂದಾಗ ಭಾಗ್ಯಮ್ಮನ ಜೊತೆ ಸೊಲ್ಲು ಹೇಳಲು ಹೋಗುತ್ತಾರೆ. ಇವರಿಬ್ಬರು ಸೊಲ್ಲೆತ್ತಿ ಹಾಡಲು ತೊಡಗಿದರೆ ಇಬ್ಬರಲ್ಲಿ ಯಾರು ಹಿಂದು ಯಾರು ಮುಂದು, ಯಾರು ಜಾಣೆ ಯಾರು ಮುಗ್ಧೆ ಎಂಬುದು ಗೊತ್ತಾಗುವುದಿಲ್ಲ. ಕಳೆದ ಮಂಗಳವಾರ ಇರುಳು ತೀರಿಹೋದ ಭಾಗ್ಯಮ್ಮನವರ ನೆನಪಿನಲ್ಲಿ ಸೂರ್ಯಪುತ್ರ ಈ ಹಿಂದೆ ಬರೆದಿದ್ದ ಬರಹ

ಬಾಲ್ಯದ ಬಗ್ಗೆ ಕೇಳುತ್ತಿದ್ದಂತೆಯೇ ಮಾರ್ಗೋಡನಹಳ್ಳಿಯ ಭಾಗ್ಯಮ್ಮ ಮತ್ತು ದೇವಮ್ಮ ಬಾಲಕಿಯರೇ ಆದಂತಾದರು. ಹುಲ್ಲು ಕೀಳಲು ಜೊತೆಯಾಗಿ ಹೋಗ್ತಿದ್ದೋರು, “ಕೆಲ್ಸ ಮುಗಿಸ್ಕಂಡು ಅಳ್ಗುಳಿ ಮಣೆ ಆಡದು, ಚಿಟ್ಟೆ ಮಳೆ ಆಡದು, ಕುಂಟಬಿಲ್ಲೆ, ಆಣೆಕಲ್ಲು ಆಡದು ಮಾಡ್ತಿದ್ದೋ. ಗುಡ್ಡೆ ಹತ್ತಿ ಒಬ್ರಿಗೊಬ್ರು ತಳ್ಳಾಡ್ಕಂಡ್ ಬೀಳ್ತಿದ್ದೋ, ಎಷ್ಟೊತ್ತೇ ಆಗ್ಲಿ ಇಬ್ರೂ ಜೊತಲೇ ಓಯ್ತಿದ್ದೋ ಬತ್ತಿದ್ದೋ” ಅನ್ನುತ್ತಾರೆ. ಭಾಗ್ಯಮ್ಮನಿಗೆ ಆಗಿನಿಂದ್ಲೂ ಹಾಡೋ ಹುಚ್ಚು. ಅವಳ ನಾಲಗೆಯಲ್ಲಿ ನಿಜವಾಗಿಯೂ ಸರಸ್ವತಿ ನೆಲೆಸಿದ್ದಾಳೆ. ಹೊಲದಲ್ಲಿ ಜೊತೆಯಾದ ಗೆಳತಿಗೂ ಹಾಡು ಕಲಿಸಿ, ಇಬ್ಬರೂ ಹಾಡಿನಲ್ಲೊಂದಾಗಿದ್ದಾರೆ. ಇಷ್ಟು ವರ್ಷಗಳಲ್ಲಿ ಒಂದು ದಿನವೂ ಇವರಿಬ್ಬರೂ ಜಗಳವಾಡಿಲ್ಲವಂತೆ. ಇದರ ಗುಟ್ಟೆಂದರೆ ದೇವಮ್ಮನಿಗೆ ಭಾಗ್ಯಮ್ಮನ ಮೇಲಿರುವ ಅಮ್ಮನಂತಾ ಪ್ರೀತಿ. ಭಾಗ್ಯಮ್ಮನಿಗೆ ದೇವಮ್ಮನ ಮೇಲಿರುವ ಮಗಳೋ ತಂಗಿಯೋ ಎಂಬಂತಾ ಮಮತೆ. “ನಾನೇ ಬೋಯ್ತೀನಿ ಅವಳ್ನಾ” ಅಂತ ಪ್ರೀತಿ ತುಂಬಿದ ಅಧಿಕಾರವಾಣಿಯಿಂದ ಭಾಗ್ಯಮ್ಮ ಹೇಳಿದರೆ “ಅವರೇ ನನಗೆ ತಂದೆ ತಾಯಿ ಬಂದು ಬಳಗ ಎಲ್ಲ. ಅವ್ರು ಬೋಯ್ದ್ರೂ.. ತಳ್ಳುದ್ರೂ ನಾ ಅವರನ್ ಬುಡಕಿಲ್ಲ” ಅಂತಾರೆ ದೇವಮ್ಮ.

‘ಬಾಲ್ಯದಲೇನೋ ಜೊತೆಯಾಗಿದ್ರಿ, ಆದರೆ ಹೆಣ್ಮಕ್ಕಳು ಬೆಳೆದು ಮದುವೆಯಾದ ಮೇಲೆ ಏನು ಕತೆ ಅಂದರೆ ಪರಸ್ಪರ ನೋಡಿಕೊಳ್ಳೋ ಇಬ್ಬರ ಕಣ್ಣಲ್ಲೂ “ಸದ್ಯ ಅದೊಂದಾಗಲಿಲ್ಲ” ಎಂಬಂತಾ ನಿಟ್ಟುಸಿರು. ಭಾಗ್ಯಮ್ಮ ಅದೇ ಊರಿಗೆ ಮದುವೆಯಾದರು. ದೇವಮ್ಮ ಮದುವೆಯೇ ಆಗಲಿಲ್ಲ. ಹಾಗಾಗಿ ಇವರಿಬ್ರೂ ಊರು ಬಿಟ್ಟು ಹೋಗೋ ಪ್ರಸಂಗವೇ ಬರಲಿಲ್ಲ. ಮೊದಲಿನ ಹಾಗೇ ಹೊಲಮನೆ ತಿರುಗಾಡಿಕೊಂಡು ಜೊತೆಯಾಗಿಯೇ ಬದುಕಿಬಿಟ್ರು.. ಭಾಗ್ಯಮ್ಮನ ಗಂಡನಿಗೆ ಬಾಳಾ ಸಿಟ್ಟಂತೆ. ಅಂತಾ ಸಿಟ್ಟಿನ ಗಂಡನ ಕೈಗೆ ಸಿಕ್ಕೂ ಆ ಕಾಲದಲ್ಲೆ ತನ್ನ ಸ್ವಾತಂತ್ರ್ಯ ಉಳಿಸಿಕೊಂಡ ಗಟ್ಟಿಗಿತ್ತಿ ಈ ಭಾಗ್ಯಮ್ಮ. “ನೀ ಏನಾರೆ ಮಾಡ್ಕೋ. ನಾ ಪದಕ್ಕೂ ಓಗಬೇಕು, ದನದ್ ಯಾಪಾರಕ್ಕೂ ಓಗಬೇಕು ಅಂತ ಹೊಂಟುಬುಟ್ರೆ ಬೆಂಗಳೂರ್ಗಂಟಾ ಓಗಿ ಎಮ್ಮೆ ಯಾಪಾರ ಮಾಡ್ತಿದ್ದೆ” ಅಂತಾರೆ. ಯಾಪಾರಕ್ಕೆ ಗಂಡನ್ನ ಕರಕೊಂಡು ಹೋಗ್ತಿರಲಿಲ್ವಂತೆ. “ನಾನಾದ್ರೆ ಹೆಣ್ಣೆಂಗಸು ಪಾಪ ಭಾಗ್ಯಮ್ಮ ಬದಿಕ್ಕಳ್ಳಿ ಅಂತ ಐನೂರ ಸಾವ್ರ ಕೊಡರು. ಗಂಡಸಾದ್ರೆ ಐನೂರ ಸಾವ್ರ ನಮಗೇ ಬಿಗುದ್ ಕಳ್ಸರು. ಅದ್ಕೇ ನಾ ಒಬ್ಳೇ ಓಯ್ತಿದ್ದೆ” ಅಂತ ಯಾಪಾರದ ಗುಟ್ಟು ಬಿಚ್ಚಿಡ್ತಾರೆ.

ಯಾರು ಕರೆದರೂ ಪದ ಹಾಡಕೆ ಹೊಂಟುಬಿಡ್ತಿದ್ದ ಭಾಗ್ಯಮ್ಮನ್ನ, ಗಂಡ “ನಿಂಗ್ಯಾಕಿವೆಲ್ಲ ಬೇಕು? ಹಟ್ಟಿಲಿರಕಾಗದಿಲ್ವ” ಅಂದರೆ “ಊರುಕೇರಿ ಜನ ನಮ್ ಕಷ್ಟ ಸುಖಕ್ ಆಗೋರು. ಮದ್ವೆ, ಸೋಬನ, ನೀರು ಧಾರೆ ಅಂತ್ ಕರೆದ್ರೆ ಓಗಬಾರ್ದಾ?” ಅಂತ ಮರುಪ್ರಶ್ನೆ ಹಾಕ್ತಿದ್ದರು. ಗಂಡನೊಂದಿಗೆ ತಾನು ಎಂದೂ ವಾದಕ್ಕಿಳಿಯದೇ “ಅವಳು ಹಾಡ್ತಾಳೆ ಅದಕ್ ಕರೀತೀವಿ. ಎಲ್ರನೂ ಕರಿಯಕೋಯ್ತೀವಾ?” ಅಂತ ಹಾಡಿಗೆ ಕರೆದವರ ಕೈಲೇ ಹೇಳಿಸೋದು, ‘ಅವಳೇ ಮಾಡ್ತಾಳೆ. ಯಾಪಾರ ಯವಾರ ಮಾಡ್ತಾಳೆ ತ್ಯೆಪ್ಪಾ?’ ಅಂತ ದೊಡ್ಡವರ ಕೈಲೆ ಹೇಳಿಸೋದು.. ಹಿಂಗೇ ಮಾಡ್ತಾ ಗಂಡನ್ನ ದಾರಿಗೆ ತಂದ ಭಾಗ್ಯಮ್ಮ ಯಾವ ಆಧುನಿಕ ಮ್ಯಾನೇಜ್ಮೆಂಟ್ ಚತುರರಿಗೂ ಕಮ್ಮಿ ಇಲ್ಲ.

ದೇವಮ್ಮ ಬಡತನವನೇ ಹೊತ್ತುಕೊಂಡ ಮನೆಯಲಿ ಹುಟ್ಟಿದವರು. “ಲಂಗ ಹಾಕುವ ವಯಸಲೇ ತಂದೆ ಕಳಕಂಡೆ. ಅವ್ವನಿಗೆ ಬಡತನ. ನಾ ವಯಸಿಗ್ ಬತ್ತಿದ್ದಂಗೇ ಅವರೂ ತೀರೋಬುಟ್ರು. ಹೆಂಗೋ ಕೂಲಿ ಮಾಡ್ಕಂಡು, ಇವರ ಜೊತೆ ಕಟ್ಕಂಡು ಪದ ಹಾಡ್ಕಂಡು ಜೀವನ ಮಾಡ್ಕ ಓಯ್ತಾವ್ನಿ” ಅನ್ನುವ ದೇವಮ್ಮ ಅಯ್ಯೋ ನನ್ ಬದುಕು ಹೀಗಾಯ್ತಲ್ಲ ಅನ್ನೋ ಯಾವ ಡಿಪ್ರೆಶನ್ನು ಇರದೇ ಸಹಜವಾಗಿ ಸಂತೋಷವಾಗಿದ್ದಾರೆ.

ಇವರಿಬ್ಬರೂ ಹಾಡು ಕಲಿತ ಬಗೆಯೇ ಭಿನ್ನ. ಬಯಲೇ ಇವರ ಸಂಗೀತಶಾಲೆ. “ಹುಲ್ಲು ಕುಯ್ದು ಮಡಗ್ಬುಟ್ಟು, ನೀ ಆಪದ ಯೋಳು, ನಾ ಈ ಪದ ಯೋಳ್ತೀನಿ. ಈ ಪದ ಚೆನಾಗದ ಆಪದ ಚೆನಾಗದ ಮಾದಪ್ಪನ್ ಮ್ಯಾಲ. ಬೈರಪ್ಪನ ಮ್ಯಾಲ ಅನ್ಕಂಡು ಕಲೀತಿದ್ದೋ” ಅಂತಾರೆ. “ರಾಚಯ್ಯ ಅನ್ನೋರು ಮೈಲಾರಲಿಂಗ, ಜೋಗಿ ಹಾಡು, ದೊಡ್ಡಬಸವಯ್ಯನ್ ಹಾಡು, ನಿಂಗರಾಜಮ್ಮನ ಹಾಡು ಎಲ್ಲ ಯೋಳ್ತಿದ್ರು. ನಾವು ಬೆಳಗಾನಕ್ಯೋಳದು. ಒಂದಿಷ್ಟುದ್ದನಾರ ಕಲಿಬೇಕು ಅಂತ ಹಟ ಕಟ್ಕಂಡ್ ಕುಂತ್ಕಳಂವು. ಬೆಳಗಾನ ನಿದ್ಗೆಟ್ಬುಟ್ ಬೆಳಗಾಗೆದ್ ಏನ್ ಕೆಲ್ಸ ಮಾಡಿರಿ ಅಂತ್ ಬೊಯ್ಯೋರು ಹಟ್ಟಿಲಿ. ಬೋದ್ರೂ ಕ್ಯೋಳ್ತಿರ್ನಿಲ್ಲ, ಹೊಡದ್ರೂ ಕ್ಯೋಳ್ತಿರ್ನಿಲ್ಲ” ಅಂತ ತಮ್ಮ ಸಾಹಸ ಹಂಚಿಕೊಳ್ತಾರೆ. ‘ನಾಟಿ ಹಾಕ್ವಾಗ ಹಾಡೇಳ್ಕಂಡ್ ಕೆಲ್ಸ ಮಾಡಿದ್ರೆ ದುಗುಡ ಕಾನಲ್ಲ, ಅರ್ಸ ಆಯ್ತದೆ’ ಅನ್ನುತ್ತಾರೆ.

ಬನ್ನೂರಿನ ಬಸ್‌ಸ್ಟಾಂಡಿನಲ್ಲಿ ಸೊಪ್ಪು ಮಾರುವ ಭಾಗ್ಯಮ್ಮ, ಸೊಪ್ಪುಗಳ ಹಲವು ಜಾತಿಗಳನ್ನು ಮಾತ್ರವಲ್ಲ, ಹಸುಗಳ ಬಗೆಗಳನ್ನೂ ಬಲ್ಲವರು. ಹಸುವಿನ, ಕೊಂಬು ಸುಳಿ, ಬಣ್ಣ ಇತ್ಯಾದಿಗಳನ್ನು ನೋಡಿ, ಹಸುವಿನ ಹಾಲು ಕೊಡುವ ಪ್ರಮಾಣ, ಅದರ ದುಡಿಮೆ ಎಲ್ಲವನ್ನೂ ಕಂಡುಹಿಡಿಯುತ್ತಾರೆ. ತನಗೊಂದು ಹಸು ಬೇಕು ಅಂತ ಹೋಗಿದ್ರಂತೆ ಭಾಗ್ಯಮ್ಮ. ಒಬ್ಬ ದಲ್ಲಾಳಿ ಅದನ್ನು ಕೊಡಿಸಿದ. ಭಾಗ್ಯಮ್ಮ ತಂದ ಹಸು ಬೇರೆಯವರಿಗೆ ಮಾರಾಟವಾಗಿಹೋಯ್ತು. ಸರಿ ಇನ್ನೊಂದು ಕೊಂಡರಾಯ್ತು ಅಂತ ಹೋದರು, ಅದೂ ವ್ಯಾಪಾರವಾಯ್ತು. ಹಾಗೇ ಹೊಸ ಹೊಸ ಹಸೂ ತರ್ತಾ, ತಾನೇ ದಲ್ಲಾಳಿ ವ್ಯಾಪಾರ ಶುರುಮಾಡಿದ್ರು. ಬೆರಳು ತೋರಿಸಿದರೆ ಹಸ್ತವೇನು, ದೇಹವನೇ ನುಂಗುವ ಛಾತಿ ಭಾಗ್ಯಮ್ಮನದು. ಸಾಮಾನ್ಯವಾಗಿ ದಲ್ಲಾಳಿ ವ್ಯಾಪಾರ ಹಳ್ಳಿಯ ಹೆಂಗಸರು ಮಾಡದ ಕೆಲಸ. ಅದನ್ನು ಮಾಡುತ್ತಿದ್ದ ಭಾಗ್ಯಮ್ಮ ನಿಜವಾಗಿಯೂ ಭಿನ್ನ ಮತ್ತು ಗಟ್ಟಿ ಹೆಣ್ಣು.

ಹೀಗೆ ಹಸುವಿಗಾಗಿ ಊರೂರು ಸುತ್ತುತ್ತಾ, ಜನರ ಪರಿಚಯವಾಗುತ್ತಾ ಹೋದ ಹಾಗೆ ಭಾಗ್ಯಮ್ಮನ ಸಂಪರ್ಕಗಳೂ ಹೆಚ್ಚಿದವು. ಹೆಣ್ಣಿಗೆ ಗಂಡು, ಗಂಡಿಗೆ ಹೆಣ್ಣು ಹುಡುಕುವವರು, ಊರೂರ್ ಮೇಲೋಗೋ ಭಾಗ್ಯಮ್ಮನಿಗೂ ಒಂದು ಮಾತು ಹೇಳತೊಡಗಿದರು. ಸೊಪ್ಪು, ಹಸುಗಳ ಗುಣ ಹಿಡಿಯುವ ಭಾಗ್ಯಮ್ಮನಿಗೆ ಮನುಷ್ಯರ ಲೆಕ್ಕಾಚಾರ ಕಷ್ಟವೇ? ನೋಡಿ, ನಿಮ್ಮ ಮನೆತನಕ್ಕೆ ಹೊಂದುವ ಗಂಡು ಅಥವಾ ಹೆಣ್ಣು ಇಲ್ಲಿದೆ ಅಂತ ತೋರಿಸುತ್ತಾರೆ. ಗಂಡು ಅಂದರೆ ಮಾತಲ್ಲಿ ಬಿಗಿ ಇರಬೇಕು. ತೂಕವಿರಬೇಕು, ಹಿಡಿತ ಇರಬೇಕು ಅನ್ನೋ ಭಾಗ್ಯಮ್ಮ ನಿಜವಾಗಿಯೂ ಸರಿಯಾದ ಆಯ್ಕೆಯನ್ನೇ ಮಾಡಬಲ್ಲವರು. ಆದರೆ ಬಲುಜಾಣೆ ಭಾಗ್ಯಮ್ಮ ಹೆಣ್ಣು, ಗಂಡು ತೋರಿಸುವಾಗ, “ಈಗ ಎಲ್ಲ ಚೆನ್ನಾಗದೆ. ನಾ ಕಂಡ ಮಟ್ಟಕ್ ಯೋಳೀನಿ. ಆದ್ರೆ ಭವಿಸ್ಯ ನನ್ ಕೈಲಿಲ್ಲ. ಅತ್ತ –ಸೊಸೆ ಕಿತ್ತಾಡ್ಕಂಡ್ರೆ ನಾ ಹೊಣೆ ಅಲ್ಲ. ಹೊಂದ್ಕಂಡ್ ಹೋಗಬೇಕು” ಅಂತ ಹೇಳುವುದನ್ನು ಮರೆಯುವುದಿಲ್ಲ.

ಸೊಪ್ಪು ಮಾರಾಟ, ಹಸು ದಲ್ಲಾಳಿ, ಗಂಡು ಹೆಣ್ಣು ತೋರಿಕೆ, ಮುಖ್ಯವಾಗಿ ಪದ ಹೇಳುವುದು. ಹೀಗೆ ಮಲ್ಟಿಟಾಸ್ಕರ್ ಆಗಿರುವ ಭಾಗ್ಯಮ್ಮನ ಜತೆಗಿರುವ ದೇವಮ್ಮ ಪದ ಮಾತ್ರ ಹಾಡಲು ಹೋಗುತ್ತಾರೆ. ಜೊತೆಯಿಲ್ಲದೇ ಎಲ್ಲಿಗೂ ಹೋಗುವುದಿಲ್ಲ. “ಮೈಸೂರ್ ಬಸ್‌ಸ್ಟಾಂಡಲ್ಲಿ ತಪ್ಪಿಸ್ಕಂಡ್ ಅಳ್ತಾ ನಿಂತ್ಕಂಡ್ಬುಟ್ಟಿದೆ. ಆಗ ಒಬ್ ಪೋಲೀಸಿನವನು ಬಸ್ ಹತ್ತಿಸಿ ಕಳಿಸಿಕೊಟ್ಟ” ಅಂತ ತನ್ನ ಪಜೀತಿ ನೆನೆಯುವ ದೇವಮ್ಮ “ಇವ್ರು ಎಲ್ಲಾ ತಾವ್ಕು ಒಂಟೋಯ್ತರೆ. ನಾ ಇವರ್ ಜೊತೆ ಇಲ್ದೆ ಎಲ್ಗೂ ಓಗಲ್ಲ” ಅಂತ ಭಾಗ್ಯಮ್ಮನ ಬಗ್ಗೆ ಹೆಮ್ಮೆಯಿಂದಲೂ ಸುರಕ್ಷತಾ ಭಾವದಿಂದಲೂ ನೋಡುತ್ತಾರೆ.

ಸದಾ ನಗುತ್ತಲೇ ಮಾತಾಡುವ ಈ ಇಬ್ಬರೂ ಆತ್ಮವಿಶ್ವಾಸದ ಸೆಲೆಗಳಂತೆ ಕಾಣುತ್ತಾರೆ. ಎಲ್ಲ ಇದ್ದೂ ಸಣ್ಣ ವಿಷಯಕ್ಕೂ ಆಕಾಶ ತಲೆಮೇಲೆ ಬಿದ್ದಂತಾಡುವ ಅನೇಕರಿದ್ದಾರೆ. ಭಾಗ್ಯಮ್ಮ ದೇವಮ್ಮರಿಗೆ ಅಂತಾ ಭಾರಗಳೇ ಇಲ್ಲ. ಹಾಡುಗಳು ಅವರ ಬದುಕನ್ನು ಹಗುರಾಗಿಸಿವೆ. ಹಸಿರಾಗಿಸಿವೆ. ಹೆಚ್ಚಿನ ಆಸೆಗಳಿಲ್ಲದೇ, ಕೊರಗುಗಳಿಲ್ಲದೇ ಚಿಕ್ಕ ಚಿಕ್ಕ ಸಂತೋಷವನ್ನೂ ದೊಡ್ಡದಾಗಿ ಸಂಭ್ರಮಿಸುತ್ತಾ ಒಂದು ಜೀವಕಿನ್ನೊಂದು ಜೀವದಾಸರೆ ಎಂಬಂತೆ ಸುದೀರ್ಘ ಗೆಳೆತನದ ಪಯಣ ಮುಂದುವರೆಸಿದ್ದಾರೆ.

(ಫೋಟೋಗಳು: ಅಬ್ದುಲ್ ರಶೀದ್)