ಕಾಫಿ ಬೆಳೆಗಾರರು ತೋಟಗಳನ್ನು ವಿಸ್ತರಿಸುವುದಲ್ಲದೆ ಹೊರರಾಜ್ಯಗಳಿಂದ ಉದ್ಯೋಗಗಳನ್ನರಸಿ ಬರುವವರು- ಇದ್ದಿಲು ಸುಡಲು, ನಾಟ ಕೊಯ್ಯಲು, ಬಿದಿರು ಕಡಿದು ಲೋಡು ಮಾಡಲು ಬಂದವರೆಲ್ಲಾ ಕಾಡೊಳಗೆ ಹೂಡಿದ ತಮ್ಮ ತಾತ್ಕಾಲಿಕ, ಬಿಡಾರಗಳನ್ನೇ ಶಾಶ್ವತ ಮಾಡಿಕೊಂಡು ರಾಜಕೀಯ ಪಕ್ಷಗಳ ಆಶ್ರಯದಲ್ಲಿ ಓಟಿನ ಬಲದಿಂದ ಕುಳಿತು ಬಿಡುತ್ತಾರೆ. ಓಟಿನ ಬಲವಿಲ್ಲದ ಮರಗಳು ಕೇವಲ ನಾಟಾಗಳಾಗಿ ನೆಲಕ್ಕುರುಳುತ್ತವೆ. ಕಾಡಿನ ಪ್ರಾಣಿ ಸಮುದಾಯಗಳಿಗಂತೂ ಬದುಕುವುದೇ ಸವಾಲಾಗಿದೆ. ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ ರಾಜೇಶ್ವರಿ ತೇಜಸ್ವಿ ಬರಹ 

 

ಕಾಫಿಪ್ಲಾಂಟರುಗಳ ಹೆಣ್ಣುಮಕ್ಕಳು ಸಾಮಾನ್ಯವಾಗಿ ನೋಡಿದ ತಕ್ಷಣ ಚೆನ್ನಾಗಿದ್ದಾರೆ ಎಂದೆನಿಸಿಕೊಳ್ಳುತ್ತಾರೆ. ಅದೇನು ಜನಾಂಗೀಯ ಲಕ್ಷಣವೋ, ಜೀನ್ಸೋ ಅಥವಾ ಶ್ರೀಮಂತಿಕೆಯೋ ಕಾಣೆ. ಇವರಿಗೆಲ್ಲಾ ಹೆಚ್ಚಿನ ಸಂಪರ್ಕ ಬೆಂಗಳೂರು. ಯಾರಾದರೊಬ್ಬರು ನೆಂಟರು ಇದ್ದೆ ಇರ್ತಾರೆ ಅಲ್ಲಿ. ಅಥವಾ ಫ್ಲಾಟ್ ಇರುತ್ತೆ ಈಗೆಲ್ಲ. ಹೀಗೇ ವಿದ್ಯಾಭ್ಯಾಸನೂ ದೂರದೂರಿನಲ್ಲಿ. ಹಾಗಾಗಿ ಅಲ್ಲೆಲ್ಲ ಬ್ಯೂಟಿ ಪಾರ್ಲರಿಗೆ ಹೋಗೋದು, ನೀಟಾಗಿ ಕಾಣಿಸಿಕೊಳ್ಳೋದು ಅಂತ ನಾನು ತಿಳಿದಿರುವೆನು. ಹೆಚ್ಚಿನವರು ಸಹಜವಾಗೇ ಚೆನ್ನಾಗಿಯೂ ಇರುತ್ತಾರೆ. ಶಿವರಾತ್ರಿ ಕಳೆದು ಶಿವಶಿವ ಅಂತ ಚಳಿಬಿಟ್ಟು ಬಿಸಿಲಿಗೆ ಕಾಲಿಡುತ್ತಿದ್ದಂತೆ ತೋಟಕ್ಕೆ ಸ್ಪ್ರಿಂಕ್ಲರ್ ಹಾಕುವ ಯೋಚನೆ ಶುರುವಾಗುತ್ತೆ. ಹೀಗೆ ಒಂದು ಸಲ ಸ್ಪ್ರಿಂಕ್ಲರ್  ಜೆಟ್ಟು  ತರಬೇಕಾಯ್ತು. ತೇಜಸ್ವಿ ಮತ್ತು ನಾನು ಕಾರಿನಲ್ಲಿ ಮೂಡಿಗೆರೆ ಅಂಗಡಿಗೆ ಹೋದೆವು. ಅಂಗಡಿಯವನು ಗೋದಾಮಿಗೆ ಹೋಗಿ ತರಬೇಕಾಗುತ್ತೆ ಸಾರ್, ಕಾಯುವಿರಾ ಎಂದು ಕೇಳಿದನು. ಆಯ್ತೆಂದರು ಇವರು. ಮಹಾರಾಯ ಎಷ್ಟು ಹೊತ್ತಾದರೂ ಬರಲಿಲ್ಲ. ದಾರಿಯಲ್ಲಿ ಹೋಗುವವರನ್ನು ನೋಡ್ತಾ ಕಾಲ ಕಳೆಯಬೇಕಾಯ್ತು. ಆಚೆ ಕಡೆ ಈಚೆಕಡೆಯ ಅಂಗಡಿಗಳನ್ನೂ ಸಹ ನಾನು ಗಮನಿಸಲಿಲ್ಲ. ಆಗ ಇವರು ಹೇಳಿದರು, ಆಗ್ಲಿಂದ ನೋಡ್ತಾಯಿದ್ದೀನಿ, ಆ ಎದುರುಗಡೆಯ ಶಾಪ್ ನೀಟಾಗಿ ಕಾಣಿಸಿ ಕೊಳ್ತಿದೆಯೆಲ್ಲ. ಒಂದೆರಡು ಹೂಕುಂಡಗನ್ನಿಟ್ಟಿದಾರೆಲ್ಲ ಅಲ್ಲಿಗೆ ಹುಡುಗಿಯರು, ಹೆಂಗಸರು, ಹೋಗ್ತಾರೆ ಬರ್ತಾರೆ ಯಾಕೆ? ಎಂದು. ನಾನು ತಿರುಗಿ ನೋಡಿದೆ, ‘ಬ್ಯೂಟಿ ಪಾರ್ಲರ್ ಅಂತ ಬರ್‍ದಿದೆಯೆಲ್ಲ ಅದಕ್ಕೇ’ ಎಂದೆ. ಹೌದು ಅದು ಗೊತ್ತಾಗೇ ಕೇಳಿದ್ದು. ಆದರೆ ಅಲ್ಲಿಗೆ ಹೋಗಿ ಬಂದಮೇಲೂ ನಿನ್ನ ಹಾಗೆ ಕಾಣಿಸಿಕೊಳ್ತಾರಲ್ಲಂತ, ಸುರಸುಂದರಿಯರ ಹಾಗೆ ಕಾಣಿಸಿಕೊಳ್ತಾರೆಂದು ತಿಳಿದಿದ್ದೆಯೆಂದರು.  ನಾನು ನಕ್ಕಿದ್ದೆ. ನಮ್ಮ ಕಲ್ಪನೆಯೇ! ಹಾಗೆ. ಅಷ್ಟರಲ್ಲಿ ಸ್ಪ್ರಿಂಕ್ಲರ್ ಜೆಟ್ಟು ಬಂದಿತು.

ಸುಮಾರು ಹದಿನೈದು ವರ್ಷಗಳಿಂದಲೂ ನಮ್ಮ ಮನೆ ಕೆಲಸ ಮತ್ತು ಹೂ ತೋಟದ ಕೆಲಸಕ್ಕೆ ನನಗೆ ಸಹಾಯ ಮಾಡುವವಳು ಒಬ್ಬಳಿದ್ದಾಳೆ. ಒಳ್ಳೆಯ ಹೆಂಗಸು. ನಗುತ್ತಾ ಕೆಲಸಮಾಡುವಳು. (ಇವಳ ಗಂಡ ಕುಡಿದು, ಕುಡಿದೇ ರಸ್ತೆಯಲ್ಲಿ ಬಿದ್ದು ಸತ್ತುಹೋಗಿ ಎಷ್ಟೋ ವರ್ಷಗಳಾಗಿದ್ದವು. ತೇಜಸ್ವಿಗೆ ಹೇರ್ ಕಟ್ ಮಾಡಲು ಕುಡಿದು ಕೊಂಡೇ ಮನೆಗೆ ಬರುತ್ತಿದ್ದ. ಹೀಗೆ ಕುಡಿದು ಬರಬೇಡಂತ ಹೇಳಿದರೆ, ಕುಡಿಯದಿದ್ದರೆ ಕೈನಡುಗುತ್ತೆ ಸ್ವಾಮಿ, ಕೂದಲು ಕತ್ತರಿಸುವ ಬದಲು ಕಿವಿ ಕಡೆಗೇ ಕೈ ಹೋಗುತ್ತೆ ಎನ್ನುತ್ತಿದ್ದನಂತೆ.) ಇವಳ ಹಿರೇಮಗಳಿಗೆ ಮದುವೆಯಾಗಿತ್ತು. ಒಂದು ದಿನ ನನ್ನಲ್ಲಿಗೆ ಬಂದು ಬ್ಯೂಟಿ ಪಾರ್ಲರ್ ಟ್ರೈನಿಂಗ್ ಆಗಿದೆ, ಪಾರ್ಲರ್ ತೆಗೆಯಲು ಸಹಾಯ ಮಾಡಿರೆಂದಳು. ತೆರೆದಳೂ ಕೂಡ. ನಾಲ್ಕಾರು ವರ್ಷಗಳಲ್ಲಿ ಬ್ಯಾಂಕಿನ ಸಾಲವನ್ನೂ ಪೂರೈಸಿದಳು. ಕಿರಿ ಮಗಳು ಬಿ.ಎ. ಡಿಗ್ರಿ ಪೂರೈಸಿ ಕಂಪ್ಯೂಟರ್ ಬೇಸಿಕ್ಸ್ ಕಲಿಬೇಕು ಒಂದು ಅರ್ಜಿ ಬರೆದುಕೊಡಿರೆಂದು ಕೇಳಿದಳು. ಆ ಫಾರಂನಲ್ಲಿ ಸುನಯನ ಕ್ಷತ್ರಿಯರೆಂದು ಬರೆದಿದ್ದಳು. ಇನ್ನೊಂದು ದಿನ ಇವಳ ಅಮ್ಮ ಸಪ್ಪೆ ಮೊರೆ ಹಾಕಿಕೊಂಡೇ ಕೆಲಸ ಮಾಡುತ್ತಿದ್ದಳು. ಯಾಕೆಂದು ವಿಚಾರಿಸಿದೆ. ನಡುಕಲು ಮಗಳಿಗೆ ಮದುವೆ ಮಾಡಲು ಹುಡುಗ ಸಿಕ್ಕುತ್ತಿಲ್ಲವಂತೆ, ಜಾತಿಯ ಹುಡುಗರು ಮೊದಲು ನಿರೀಕ್ಷಿಸುವುದು ಹುಡುಗಿಯರು ಬ್ಯೂಟಿ ಪಾರ್ಲರ್ ಕೆಲಸ ಕಲಿತಿರುವಳಾ ಎಂದು. ಎರಡನೆಯದು ಬಂಗಾರವಂತೆ. ಅಥವಾ ಬಂಗಾರ ಹೆಚ್ಚಿಗೆ ಕೊಟ್ಟರೆ ಆಕೆ ಕೆಲಸ ಕಲಿಯದಿದ್ದರೂ ಆಗುತ್ತೇನೋ. ಅದೇ ತಾನೇ. ಆ ಮಗಳು ಎಸ್.ಎಸ್.ಎಲ್.ಸಿ. ಮಾಡಿ ನಮ್ಮ ತೋಟದ ಕೆಲಸಕ್ಕೆ ಬರುತ್ತಿದ್ದಳು. ಅವಳಿಗೂ ಪಾರ್ಲರ್ ಕೆಲಸವನ್ನು ಕಲಿಸಲು ಹೇಳಿದೆ. ಕಲಿತಳು. ಮದುವೆಯೂ ಆಯಿತು. (ಅವಳಿಗೆ ಅವನ ಊರಿನಲ್ಲಿ ಪಾರ್ಲರ್ ತೆಗೆಯುವ ಹುನ್ನಾರವಂತೆ ಈಗ) ಮೂಡಿಗೆರೆಯೆಂಬ ಸಣ್ಣ ಊರಿನಲ್ಲಿ ಹದಿಮೂರು ಬ್ಯೂಟಿ ಪಾರ್ಲರ್‌ಗಳಿವೆಯಂತೆ! ಇವಳೇ ಸುದ್ದಿ ಕೊಟ್ಟವಳು.

ಒಂದು ದಿನ ಬೆಳಿಗ್ಗೆ ಎದ್ದ ಕೂಡಲೆ ನೋಡಿದರೆ ನಲ್ಲಿಯಲ್ಲಿ ನೀರಿಲ್ಲ. ಅರೆ ರಾತ್ರಿ ಮಲಗುವಾಗ ಇತ್ತು, ಈಗೇನಾಯ್ತು ಇದಕ್ಕೆ. ಬೇಸಿಗೆಯಲ್ಲಿ ಬಾವಿಯಲ್ಲಿ ಸ್ವಲ್ಪ ಮಟ್ಟಿಗೆ ನೀರು ಇಂಗಬಹುದು. ಆದರೂ ಇಲ್ಲ ಎನ್ನುವಂತಿಲ್ಲ. ಮಲೆನಾಡಿನಲ್ಲಿ ಎತ್ತರ, ಇಳಿಜಾರು ಮತ್ತು ತಗ್ಗು ಪ್ರದೇಶವಾದ್ದರಿಂದ ಸೈಫನ್ ಸಿಸ್ಟಂನಿಂದ ನೀರು ತಂದುಕೊಳ್ಳುತ್ತೇವೆ. ಅಂದರೆ ನೀರಿರುವ ಎತ್ತರ ಪ್ರದೇಶದಲ್ಲಿ ಅಚ್ಚುಕಟ್ಟಾಗಿ ಗುಂಡಿ ತೋಡಿ ಒಂದು ಬಾವಿಯಂತೆ ಮಾಡಿ ಅದಕ್ಕೆ ಒಂದು ಒಳ್ಳೆ ಪ್ಲಾಸ್ಟಿಕ್ ಪೈಪು ಇಟ್ಟರೆ ಸಾಕು. ತಗ್ಗಿನಲ್ಲಿರುವ ನಮ್ಮ ಮನೆಯ ಎಲ್ಲ ನಲ್ಲಿಗಳಲ್ಲೂ ನೀರು ಬರುತ್ತೆ. ಸ್ಪಟಿಕದಷ್ಟು ಸ್ವಚ್ಛವಾದ ನೀರು. ಗಾಜಿನ ಲೋಟಕ್ಕೆ ಹಾಕಿಟ್ಟರೆ ನೀರೇ ಕಾಣೊಲ್ಲ. ಚೆನ್ನೈಯಿಂದ ಬಂದಿದ್ದ ಬಾಟನಿಸ್ಟ್ ಒಬ್ಬರು ಹೇಳಿದರು ಅವರ ಊರಿನಲ್ಲಿ ಇಂತ ನೀರೇ ನೋಡಿಲ್ಲವಂತೆ. ನಲ್ಲಿ ನೀರಿಗೇನಾಯ್ತೆಂದು ಇವರು ಪೈಪು ಇಟ್ಟಲ್ಲೇ ನೋಡುತ್ತಾ ಹೊರಟರು. ದಟ್ಟವಾದ ಮಂಜು ಬೇರೆ ಬೀಳುತ್ತಿದೆ. ಕಿಟಕಿಯಿಂದ ನೋಡಿದರೆ ಇವರು ಕಾಣಿಸುತ್ತಿಲ್ಲ. ಅಷ್ಟು ಮಂಜು. ಅಲ್ಲಿ ನೋಡಿದರೆ ಗಟ್ಟಿ ಪ್ಲಾಸ್ಟಿಕ್ ಪೈಪುಗಳು ಚಪ್ಪಲ್ ಚೂರಾಗಿವೆ. ಯಾವ ಬಡ್ಡಿಮಗಂದೋ ಈ ಕೆಲಸ ಅಂತ ಬೈಕೊಳ್ಳುತ್ತಲೇ ಮುಂದೆ ಹೋಗಿರಬಹುದು ಇವರು. ಮುಂದೆ ಹೋದಂತೆ  ಉಸುಕಿನ ಮಣ್ಣಲ್ಲಿ ನಾಲ್ಕು ನಾಲ್ಕು ಗುಂಡಿಗಳಿವೆ. ಅದರ ತುಂಬ ನೀರು. ಏನೋ ಗುಮಾನಿ. ಆದರೆ ನಂಬಲು ಕಷ್ಟ. ಇನ್ನೂ ಮುಂದೆ ಹೋದಾಗ ತಿಳೀತು ಕಾಡಾನೆ ಕೆಲಸ ಇದೆಲ್ಲ ಅಂತ. ಪೈಪನ್ನೆಲ್ಲಾ ಮೆಟ್ಟಿ ಲಟಲಟ ಮುರಿದಿದೆ. ಎಲ್ಲಿಂದ ಹಾದಿ ತಪ್ಪಿ ಬಂದಿತೊ ಗೊತ್ತಾಗಲಿಲ್ಲ. ಹೊಸ ಪೈಪುಗಳನ್ನು ತಂದು ಜೋಡಿಸಿಕೊಳ್ಳಬೇಕಾಯಿತು.

ಕೆಲ ಸಮಯದ ಹಿಂದೆ. ಬೆಳಿಗ್ಗೆ ಸ್ನಾನ ಮಾಡುತ್ತಿದ್ದೆ. ಅಮ್ಮಾ! ಅಮ್ಮಾ! ಒಂದೇ ಉಸಿರಿನಲ್ಲಿ ಏದುಸಿರು ಬಿಡುತ್ತಾ ನಮ್ಮ ಹೆಣ್ಣಾಳುಗಳು ಕೂಗಿಕೊಂಡು ಓಡೋಡಿ ಬಂದಂತಾಯಿತು. ಏದುಸಿರಿನ ಬಿಸಿ ಬಚ್ಚಲ ಮನೆಗೆ ತಟ್ಟುತ್ತಿದೆ. ಏನೋ ಅಪಾಯ ತಿಳಿದೆ. ಫೋನ್ ಒಂದೇ ಸಮನೆ ಹೊಡಕೊಳ್ಳುತ್ತಿದೆ. ನಿಮ್ಮ ಕೆಲಸಗಾರರನ್ನು ಆಚೆ ಕಡೆಯಿಂದ ಕರೆಸಿಕೊಳ್ಳಿ ಅರಣ್ಯ ಇಲಾಖೆಯವರ ಬೊಬ್ಬೆ! ಬೊಬ್ಬೆಯೋ ಬೊಬ್ಬೆ. ಕಾಡಾನೆ ಬಂದಿವೆ. ಎರಡು ಗಂಡು, ಒಂದು ಹೆಣ್ಣು. ಎಲ್ಲಿಂದ ಬಂದವು. ಏನ್ಸಮಾಚಾರ ಒಂದೂ ಗೊತ್ತಿಲ್ಲ. ಮನೆ ಪಕ್ಕಕ್ಕೇ ನಮ್ಮ ಆಳುಗಳು ಕೆಲಸಮಾಡುತ್ತಿದ್ದಲ್ಲೇ ಅವನ್ನು ನೋಡಿ ಹೆದರಿ ಬಿದ್ದು ಎದ್ದು ಬಂದಿದಾರೆ. ಫಾರೆಸ್ಟು ಗಾರ್ಡುಗಳ ಕೂಗಾಟ. ಅಲ್ಲಿ ಹೋಯ್ತು ಸಾರ್. ಇಲ್ಲಿ ಬಂತು ಸಾರ್ ಅಂತ. ನನಗೋ ಅವು ಇರುವಲ್ಲಿಗೇ ಹೋಗಿ ನೋಡಬೇಕೆನ್ನುವ ಆಸೆ. ಒಬ್ಬಳು ಆಳೂ ಜೊತೆಗೆ ಬರಲೊಪ್ಪರು. ಈ ಅಮ್ಮನಿಗ್ಯಾಕೆ ಇಷ್ಟು ಧೈರ್ಯ ಅಂತ ಮಾತಾಡ್ತಿದಾರೆ. ಅಂತೂ ಹೊಂಡ ಇಳಿದು ಏರಿಹತ್ತಿ, ಜಾರುವುದನ್ನೂ ಲೆಕ್ಕಿಸದೆ ಓಡೋಡಿ ಹೋದೆ ಅಕಸ್ಮಾತ್ ಅವು ಹೊರಟೋದ್ರೆ ಅಂತ. ಅಲ್ಲಿ ಗಾರ್ಡುಗಳು ಅಲ್ಲೆ ದೂರ ನಿಲ್ಲಿ ಅಂತ ಸದ್ದು ಮಾಡದೆ ನನಗೆ ಸನ್ನೆ ಮಾಡುತ್ತಿದ್ದಾರೆ. ಅಲ್ಲಿ ದಟ್ಟಕಾಡು ಬೇರೆ. ಮೂವತ್ತು ಗಜ ದೂರದಲ್ಲೇ ದೊಡ್ಡ ದೊಡ್ಡ ದಂತ ಇರುವ ಆನೆಗಳು ತೋಟದಲ್ಲಿನ ಹಲಸಿನ ಮರದ ಕೊಂಬೆಗಳನ್ನು ಸೀಳಿ ಹಣ್ಣು ಕಾಯಿ ಪಲ್ಟಾಯಿಸುತ್ತಿದ್ದವು. ಮರನೆಲ್ಲ ಜಗ್ಗಿಸಿ ಲಟಲಟ ಮುರಿಯುತ್ತಿದ್ದವು. ಆಹಾ! ಬೃಹದಾಕಾರದ ಪ್ರಾಣಿ! ಎಷ್ಟು ಸಂತೋಷವಾಯಿತು ಅಂತ. ಏನು ಸೃಷ್ಟಿಯಪ್ಪ! ಅಷ್ಟರಲ್ಲಿ ಹಿಂದೆಯಿಂದ ನಮ್ಮ ರೈಟ್ರು ಸರ ಸರ ಬಂದು ಅಯ್ಯಾವ್ರು ಕರಿತಾಯಿದಾರೆ ಬರಬೇಕಂತೆ ಎಂದ. ಅಸಮಾಧಾನದಿಂದಲೆ ಬೇಗ ಬೇಗ ಹಿಂದಿರುಗಿದೆ. ಆ ಕಣಿವೆ, ಆ ಕಡೆ ತುಂಬ ಇಳಿಜಾರು. ಚೂರು ಹೆಚ್ಚು ಕಡಿಮೆಯಾದರೆ ಜಾರಿ ಬೀಳೋದೇ ಸೈ. ಇಳಿಯುವಷ್ಟರಲ್ಲಿ ಆನೆ ಘೀಳಿಡುತ್ತಾ ನಾನು ನಿಂತಿದ್ದ ಕಡೆಯಿಂದಲೇ ಓಡಿ ಹೋಗಿದ್ದು ಹೂಂಕಾರದ ಸದ್ದಿನಲ್ಲೇ ತಿಳಿಯಿತು. ಇವರು ಸ್ಕೂಟರ್ ತಗೊಂಡು ಇನ್ನೊಂದು ಮಾರ್ಗದಲ್ಲಿ ಹೊರಟರು ಕ್ಯಾಮರಾ ಕಣ್ಣಿನಲ್ಲಿ ನೋಡಲು ಸಾಧ್ಯವೇ ಎಂದು. ಆ ದಿನ ಕೆಲಸಕ್ಕೆ ರಜೆ ಮತ್ತು ಆನೆಯ ಬಗ್ಗೆಯೇ ಮಾತು. ಮಿಂಚಿನ ವೇಗದಲ್ಲಿ ಪತ್ರಿಕಾ ಛಾಯಾಗ್ರಾಹಕರು ಬಂದರು. ದಟ್ಟ ಕಾಡಿನಿಂದಾಗಿ ಆನೆಗಳು ಕಾಣಲಿಲ್ಲವಂತೆ. ಆದರೆ ಬೇಲಿ ಬಳಿ ದಿಢೀರನೆ ಕಂಡರು. ಇವರನ್ನು ಕಂಡು ಆನೆ ಘೀಳಿಟ್ಟು ಅತ್ತಲಾಗಿ ಓಡಿದಕ್ಕೆ ಇವರು ಇತ್ತಲಾಗಿ ಹೆದರಿ, ಬಿದ್ದು ಸಣ್ಣಪುಟ್ಟ ಗಾಯಗಳಾಗಿ ಸುರಕ್ಷಿತವಾಗಿ ತೆರಳಿದರು. ಅರಣ್ಯ ಸಿಬ್ಬಂದಿಗಳು ಅವುಗಳನ್ನೇ ಹಿಂಬಾಲಿಸುತ್ತಾ ಸಾಗುತ್ತಾ ಹೊರಟರು. ಸಂಜೆ ಹೊತ್ತಿಗೆ ದೂರದ ಕಾಡಿನಲ್ಲಿ ಅವು ವಿರಮಿಸುತ್ತಿದುದನ್ನು ನಾವಿಬ್ಬರು ನಮ್ಮ ತೋಟದ ಬೇಲಿಯ ಹತ್ತಿರ ಮರ ಹತ್ತಿ ನಿಂತು ನೋಡಿದೆವು.

ಬನ್ನೇರುಘಟ್ಟದಿಂದ ತಪ್ಪಿಸಿಕೊಂಡವು ಚಿಕ್ಕಮಗಳೂರಿನ ಮುತ್ತೋಡಿ ಅಭಯಾರಣ್ಯ ತಲುಪಿದಾಗ ಅಲ್ಲಿನ ಆನೆಗಳ ಗುಂಪು ಇವನ್ನು ಸೇರಿಸಿಕೊಳ್ಳಲಿಲ್ಲವಂತೆ. ಹಾಗೇ ಪ್ರವಾಸ ಹೊರಟು ನಮ್ಮನ್ನು ವಿಚಾರಿಸಿಕೊಂಡು ಈ ಕಡೆಯಿಂದ ಹೊರಟ ಮೇಲೆ ಅರಣ್ಯ ಸಿಬ್ಬಂದಿಯವರು ಬನ್ನೇರುಘಟ್ಟವನ್ನು ತಲುಪಿಸಿದರಂತೆ. ಈ ಆನೆಗಳು ವಿಹರಿಸಲು ತೇಜಸ್ವಿ ತೋಟವನ್ನೇ ಏಕೆ ಆರಿಸಿಕೊಂಡವೋ ಗೊತ್ತಾಗಲಿಲ್ಲವೆಂದು ನಮ್ಮ ಬೇಲಿ ಪಕ್ಕದ ಕಾಲೇಜು ಹುಡುಗಿಯರು ನಗೆಯಾಡಿದರಂತೆ. ಕೃಷ್ಣೇಗೌಡನ ಆನೆಯಂತೂ ಅಲ್ಲ ಬಿಡಿ.

(ಫೋಟೋ:ತೇಜಸ್ವಿ)

ಮೂಡಿಗೆರೆಯಲ್ಲಿ ತೇಜಸ್ವಿಯ ಜೊತೆ

ವರ್ಷ ಒಂದರಲ್ಲೇ ನೂರಿನ್ನೂರು ಇಂಚು ಮಳೆ ಸುರಿವ ನಮ್ಮ ಪ್ರದೇಶದಲ್ಲೇ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಅನುಭವಿಸುವಂತಾಗಿದೆ. ಹಾಗಾಗಿಯೇ ಮಳೆಕೊಯ್ಲು ಹೇಗೆ ಮಾಡಬಹುದು ಮತ್ತು ಏತಕ್ಕಾಗಿ ಎನ್ನುವುದೊಂದು ಕಾರ್ಯಕ್ರಮ ನಮ್ಮ ತೋಟದ ಪಕ್ಕದ ಪ್ರಾದೇಶಿಕ ಕೃಷಿ ಕೇಂದ್ರದಲ್ಲಿ ಏರ್ಪಡಿಸಿದ್ದರು. ನಾನು ಮನೆಯಿಂದ ಹೊರಗೆ ಹೋಗದೇ ಇರುವವಳು. ಕೇವಲ ಕುತೂಹಲಕ್ಕಾಗಿ ಆ ಸಭೆಗೆ ಹೋದೆನು. ಅಲ್ಲಿದ್ದವರೆಲ್ಲಾ ಸ್ಥಳೀಯರೇ. ಅಂದಿನ ಕಾರ್ಯಕ್ರಮ ಶುರು ಮಾಡುವ ಮುಂಚೆ ಸಭೆಯ ಮುಖ್ಯಸ್ಥರು ಒಂದು ಪ್ರಶ್ನೆ ಎತ್ತಿದರು. ಯಾರಲ್ಲಿ ವರ್ಷದ ಮುನ್ನೂರೈವತ್ತೈದು ದಿನವೂ ನೀರಿನ ಕೊರತೆಯಿಲ್ಲದವರು ಕೈ ಎತ್ತಿ ಎಂದರು. ಸುಮಾರು ಇನ್ನೂರೈವತ್ತು ಜನರಿದ್ದ ಇಡೀ ಸಭೆಗೆ ಕೈಯೆತ್ತಿದವಳು ನಾನೊಬ್ಬಳೇ. ಎಂತಹ ಬಿರು ಬೇಸಿಗೆಯಲ್ಲೂ ಬತ್ತದ, ಎಷ್ಟು ಧಾರಾಳವಾಗಿಯೂ ಉಪಯೋಗಿಲು ಸಿಕ್ಕುವಂತೊಂದು ಒರತೆ ನಮ್ಮ ತೋಟದಲ್ಲಿ ಕಾಡಿನೊಳಗೆ ಇದೆ ಎಂದು ಹೇಳಿದೆ. ಒಂದಾರೇಳು ತಿಂಗಳು ಜುಳು ಜುಳು ಹರಿವ ನೀರಿನ ಸದ್ದು ಕೇಳುತ್ತಲೇ ಇರುತ್ತೆ. ಹೇಳಬೇಕೆಂದರೆ ಇಂತಹ ಜಾಗ ಹುಡುಕಿಕೊಂಡೇ ನಾವು ನಮ್ಮ ಮನೆ ಕಟ್ಟಿಕೊಂಡೆವು. ಈ ಒರತೆ ಹುಟ್ಟುವ ಕಡೆ ಆಸುಪಾಸಿನಲ್ಲಿ ಮನುಷ್ಯನ ಸುಳಿವು ಇಲ್ಲದಂತೆಯೂ, ಅವನ ಯಾವ ವ್ಯವಹಾರವೂ ನಡೆಯದಂತೆ ನೋಡಿಕೊಂಡಿರುವೆವು. ಪ್ರಕೃತಿಯ ಒಡಲಿಗೆ ನಮ್ಮ ಕೈ ತಾಗೇ ಇಲ್ಲ. ಹಾಗಾಗಿಯೇ ಒರತೆ ಬತ್ತುವುದೇ ಇಲ್ಲ. ಇದೇ ಅದರ ಗುಟ್ಟು. ಈಗಾಗಲೇ ನಿಮಗೆ ಒಂದು ಝರಿಯ ಜಾಡಿನಲ್ಲಿ ನೆನಪಿಗೆ ಬಂದಿರಬಹುದು. ಎಲ್ಲಿ ಪ್ರಕೃತಿಯಲ್ಲಿ ಮನುಷ್ಯನ ಕೈವಾಡವಿರುತ್ತೋ ಅಲ್ಲಿ ಇದ್ದಿದ್ದೇ ಸ್ವಾಮಿ ಅಪಾಯ ಎನ್ನುವ  ನಡಾವಳಿಕೆಯು ಇವತ್ತಿಗೆ ಎಲ್ಲರ ಅರಿವಿಗೆ ಬಂದಿರುವುದು.

ಮೂಡಿಗೆರೆಯಲ್ಲಿ ನೀವು ಎಲ್ಲೇ ಹೋಗಿ, ಎಲ್ಲೇ ತಿರುಗಾಡಿ ಅರಣ್ಯದ ಹಿನ್ನೆಲೆ ನಿಮ್ಮನ್ನು ಅನುಸರಿಸುತ್ತಲೇ ಇರುತ್ತೆ. ಕಾಡುತ್ತಲೇ ಇರುತ್ತೆ. ಈ ಅರಣ್ಯ ಏನಿರಬಹುದು. ಬಹಳ ನಿಗೂಢ. ಆ ನಿಗೂಢತೆಯ ರಹಸ್ಯದಲ್ಲಿ ಹೊಕ್ಕೋದು ಅಂದರೆ ಒಂಥರ ದಿವ್ಯತೆಗೆ ಎದುರಾದಂತೆ.

ನಾಲ್ಕುವರೆ ದಶಕಗಳ ಹಿಂದೆ ಮೊಟ್ಟಮೊದಲಬಾರಿಗೆ ಸ್ಕೂಟರ್‌ನಲ್ಲಿ ತೇಜಸ್ವಿ ಮತ್ತು ನಾನು ಬಾಬಾಬುಡನ್ ಗಿರಿಗೆ ಹೋದಾಗ ಅಲ್ಲಿನ ಸೃಷ್ಟಿ ವೈಭವದ ಸೌಂದರ್ಯ ನೋಡಿ ಬೆರಗಾಗಿ ಹೋದೆ! ಅಲೆ ಅಲೆಯಾದ ಗಿರಿ ಶಿಖರಪಂಕ್ತಿ. ಹಸಿರುಬಣ್ಣ, ನೀಲಿ ಬಣ್ಣ, ತರತರದ ಬಣ್ಣ ಬಿಚ್ಚಿಕೊಳ್ಳುವ ಬೆಟ್ಟದ ಸಾಲುಗಳು, ಅಲ್ಲಲ್ಲಿ ಬಣ್ಣ ಬಣ್ಣದ ಬಟ್ಟ ಬೋಳು ಗುಡ್ಡಗಳು. ಒಳ ಹೊಕ್ಕರೆ ಏನೇನು ತೋರಿಸುತ್ತೋ. ಏನೆಲ್ಲ ತೆರದುಕೊಂಡು ಕೊಡುತ್ತೊ ನಮ್ಮ ಮನದಾಳಕ್ಕೆ ತಕ್ಕಂತೆ. ಅಲ್ಲಿನ ಆಗಿನ ನಿರ್ಜನ ಪ್ರದೇಶವೇ ದಿವ್ಯವಾಗಿತ್ತು ಧ್ಯಾನಿಸುವಂತಿತ್ತು. ನಮಗಾಗಿ ಸೃಷ್ಟಿ ಇಂತಹುದೆಲ್ಲ ಕೊಟ್ಟಿದೆಯಲ್ಲ ಎಂದು ಕೃತಜ್ಞತೆಯ ಧನ್ಯತೆಯ ಭಾವ ತುಂಬಿತು. ಇದನ್ನೆಲ್ಲ ಕಾಪಾಡಿ ನೋಡಿಕೊಳ್ಳಬೇಕಾಗಿರುವುದು ನಾವು…? ಸಕಲೇಶಪುರದ ಕೆಂಪು ಹೊಳೆಗೆ ತೇಜಸ್ವಿ ಜೊತೆ ಫಿಷಿಂಗ್ಗೆ ಹೋದಾಗ ಮೂಖ ವಿಸ್ಮಿತಳಾದೆ. ಎಷ್ಟು ಸಮಾಧಾನದಲ್ಲಿ ಹರಿಯುತ್ತಾ ಇದೆ ನದಿ! ಹೊಳೆಯ ಆಚೆ ಕಡೆ ದಟ್ಟ ಅರಣ್ಯ. ಈಚೆ ಕಡೆ ದಂಡೆಯಲ್ಲಿ ಎಂತೆಂತಹ ಚೆಂದ ಚೆಂದವಾದ ಕಲ್ಲುಗಳು. ಬಣ್ಣ ಬಣ್ಣದವು. ದುಂಡಾಗಿರುವುವು. ಚಪ್ಪಟೆ ಚಂದ್ರಮನಂತವು, ದೋಣಿಯಂತವು, ಗೋಲಿಯಂತವು, ಚೆಂಡಿನಂತವು ನಮುನಮೂನೆಯವು. ಎಲ್ಲವೂ ಬಂಡೆಯೊಂದು ಸಿಟ್ಟಿನಿಂದ ಸಿಡಿಸಿದ ಚೂರುಗಳಂತೆ. ನದಿಯ ನೀರು ಹರಿದೂ ಹರಿದೂ ಸುಂದರ ಕಾಯ ಪಡೆದಂತವು. ಒಂದೊಂದು ಕಲ್ಲನ್ನೂ ಬಿಡಿ ಬಿಡಿಯಾಗಿ ನೋಡುವಾಸೆ! ಒಟ್ಟಾಗಿ ನೋಡುವಾಸೆ! ಜುಗಾರಿ ಕ್ರಾಸ್ ಒಳಹೊಕ್ಕು ಬಂದಂತಾಯಿತು.

ನಮ್ಮಲ್ಲಿನ ಕಾಡು ಉಷ್ಣವಲಯದ ನಿತ್ಯ ಹರಿದ್ವರ್ಣಕಾಡು. ಇದರ ವಿಶಿಷ್ಟತೆಯಿರೋದೆ ಇಲ್ಲಿ. ಇಲ್ಲಿ ತೇಜಸ್ವಿಯ ಮಾತುಗಳನ್ನೇ ಕೇಳಿ. ಇಲ್ಲಿ ಸಸ್ಯಗಳಿಗೆ ದೊರೆಯುವ ಮಳೆನೀರು ಮತ್ತು ಸೂರ್ಯನ ಶಾಖ ವಿಫುಲವಾದುದರಿಂದ ಇಲ್ಲಿ ಸಸ್ಯಗಳ ಬೆಳವಣಿಗೆಯ ವೇಗ ಮತ್ತು ವಿಕಾಸಗೊಳ್ಳುವ ವೇಗ ಹೆಚ್ಚು. ಈ ಎರಡು ಕಾರಣಗಳಿಂದಾಗಿ ಉಷ್ಣವಲಯದ ಕಾಡುಗಳು ಕೋನಿಫರಸ್ ಮರಗಳ ಕಾಡುಗಳಿಗಿಂತ ವೈವಿಧ್ಯಮಯವಾಗಿಯೂ ತೀರ ಸಂಕೀರ್ಣವಾಗಿಯೂ ರೂಪುಗೊಂಡಿವೆ. ಸಮಶೀತೋಷ್ಣವಲಯದ ಕಾಡುಗಳ ಸರಳತೆ ಎಂದರೆ ಕೆಲವೇ ಜಾತಿಯ ಮರಗಳ ಅಸ್ತಿತ್ವ ಅಲ್ಲಿನ ಕ್ರಿಮಿಕೀಟ ಪಶುಪಕ್ಷಿಗಳ ಸಂಬಂಧವನ್ನು ಸರಳವಾಗಿ ರೂಪಿಸಿದೆ. ಎಂದರೆ ಮರ, ಮರದ ಹಣ್ಣನ್ನು ಅವಲಂಬಿಸಿರುವ ಹಕ್ಕಿ ಆ ಹಕ್ಕಿಯ ಬೀಜ ಪ್ರಸಾರಕ್ಕೆ ಅವಲಂಬಿಸಿರುವ ಮರ, ಆ ಮರವನ್ನು ಅವಲಂಬಿಸಿರುವ ಪರತಂತ್ರ ಜೀವಿ ಆರ್ಕಿಡ್‌ಗಳು, ಫರ್ನಗಳು, ಆ ಮರದ ಎಲೆಯನ್ನೇ ಅವಲಂಬಿಸಿರುವ ಕ್ರಿಮಿ ಕೀಟಗಳು, ಆ ಕ್ರಿಮಿ ಕೀಟಗಳು ಎಲೆಯನ್ನು ಪರಿವರ್ತಿಸಿ ಮಾಡುವ ಗೊಬ್ಬರವನ್ನು ಅವಲಂಬಿಸಿರುವ ಮರ ಗಿಡಗಳು. ಹೀಗೆ ಕಾಡೊಳಗೆ ಒಂದು ಜೈವಿಕ ಕ್ರಿಯೆ ಮತ್ತೆ ಪುನಃ ಸೃಷ್ಟಿ ನಡೆಯುತ್ತಲೇ ಇರುತ್ತದೆ. ಇದನ್ನೇ ನಾವು ಜೀವ ವರ್ತುಲ ಎಂದು ಕರೆಯುತ್ತೇವೆ. ಇದು ಉಷ್ಣವಲಯದ ಕಾಡುಗಳ ವೈವಿಧ್ಯದ ದೆಸೆಯಿಂದ ತೀರ ಜಟಿಲವಾಗಿಯೂ, ಸಮಶೀತೋಷ್ಣವಲಯದ ಕಾಡುಗಳ ಏಕ ಮುಖತೆಯಿಂದ ಸರಳವಾಗಿಯೂ ಇರುತ್ತದೆ.

ಬೆಟ್ಟ, ಮಳೆ, ಕಾಡು, ನದಿ, ಕಟ್ಟೆ, ಪೈರು ಅನ್ನಕ್ಕೂ ನಮಗೂ ಇರುವ ಸಂಬಂಧಗಳನ್ನು ನಾವು ಮುಖ್ಯ ಎಂದು ಭಾವಿಸುವಾದಾದರೆ ಈ ಕಾಡೊಳಗಿನ ಮರ, ಎಲೆ, ಕ್ರಿಮಿ, ಕೀಟ, ಪಶುಪಕ್ಷಿಗಳ ಸಂಬಂಧವನ್ನು ನಾವು ಗೌರವಿಸಲೇಬೇಕು. ಇವೆಲ್ಲ ಒಂದು ಜೀವನ್ಮಯ ಕುಣಿಕೆಯ ಅವಿಭಾಜ್ಯ ಅಂಗಗಳಲ್ಲವೆ?

ಕಾಫಿ ಬೆಳೆಗಾರರು ತೋಟಗಳನ್ನು ವಿಸ್ತರಿಸುವುದಲ್ಲದೆ ಹೊರರಾಜ್ಯಗಳಿಂದ ಉದ್ಯೋಗಗಳನ್ನರಸಿ ಬರುವವರು- ಇದ್ದಿಲು ಸುಡಲು, ನಾಟ ಕೊಯ್ಯಲು, ಬಿದಿರು ಕಡಿದು ಲೋಡು ಮಾಡಲು ಬಂದವರೆಲ್ಲಾ ಕಾಡೊಳಗೆ ಹೂಡಿದ ತಮ್ಮ ತಾತ್ಕಾಲಿಕ, ಬಿಡಾರಗಳನ್ನೇ ಶಾಶ್ವತ ಮಾಡಿಕೊಂಡು ರಾಜಕೀಯ ಪಕ್ಷಗಳ ಆಶ್ರಯದಲ್ಲಿ ಓಟಿನ ಬಲದಿಂದ ಕುಳಿತು ಬಿಡುತ್ತಾರೆ. ಓಟಿನ ಬಲವಿಲ್ಲದ ಮರಗಳು ಕೇವಲ ನಾಟಾಗಳಾಗಿ ನೆಲಕ್ಕುರುಳುತ್ತವೆ. ಕಾಡಿನ ಪ್ರಾಣಿ ಸಮುದಾಯಗಳಿಗಂತೂ ಜನ ಬಾಹುಳ್ಯ ಮಾರಕ ಪರಿಣಾಮ ಉಂಟು ಮಾಡುತ್ತದೆ. ಇವರು ಕಾಡು ಮೃಗಗಳನ್ನು ನೇರವಾಗಿ ಕೊಲ್ಲದಿದ್ದರೂ ನಮ್ಮ ಕಂತ್ರಿನಾಯಿ, ಊರು ಕೋಳಿಗಳನ್ನು ಕಟ್ಟಿಕೊಂಡು ಕಾಡೊಳಗೆ ಕೆಮ್ಮುತ್ತಾ ಉಗಿಯುತ್ತಾ ಓಡಾಡಿ ಕಾಡು ಮೃಗಗಳ ಸಂತಾನಾಭಿವೃದ್ಧಿಗೆ ಬೇಕಾದ ಏಕಾಂತವನ್ನೇ ಹಾಳುಮಾಡಿದ್ದಾರೆ. ಸಾಕು ಪ್ರಾಣಿಗಳಂತೆಯೇ ಕಾಡು ಮೃಗಗಳೂ ಕೂಡ ಮನುಷ್ಯರ ಸಮ್ಮುಖದಲ್ಲೆ ಮರಿಹಾಕಿಕೊಂಡು ಬದುಕುವುದನ್ನು ಕಲಿಯಬೇಕಾಗಿದೆ. ನನ್ನ ಸರಣಿಯ ಸರದಿ ಮುಗಿಯುತ್ತ ಬಂದಿದೆ. ಹಾಗಾಗಿ ಇವರ ಈ ಮಾತುಗಳನ್ನೇ ಅರಹಲು ಇಚ್ಛಿಸಿದೆ ಇಲ್ಲಿ.