ಮೊದಲು ಪುಟ್ಟ ಮೊಗ್ಗುಗಳಂತಿದ್ದ
ನನ್ನ ಮೊಲೆಗಳು
ನಿನ್ನ ಕೈಗಳಡಿಯಲ್ಲಿ
ಉಬ್ಬಿ ಕೊಬ್ಬಿ ಹೋದವು
ನನ್ನ ದನಿ ನಿನ್ನ ಉಪದೇಶ ಕೇಳಿ
ತಮ್ಮ ಮುಗ್ಧ ಸರಳತೆಯನ್ನು
ಕಳೆದುಕೊಂಡವು
ಏನು ಮಾಡಲಿ
ಈ ನನ್ನ ಪೋಷಕಿಯ
ಕೊರಳ ತೊರೆದು
ನನ್ನ ತೋಳುಗಳು
ನಿನ್ನ ಕೊರಳಿಗೆ ಸುತ್ತಿಕೊಂಡವು
ಆದರೆ ನೀನೋ
ನನ್ನ ನೆರೆಹೊರೆಯಲ್ಲಿ
ಸುಳಿವುದನೇ ಮರೆತುಬಿಟ್ಟೆ
***

ಅವಳು ಅದೆಂತೋ
ಹಗಲ ದೂಡಿಬಿಟ್ಟಳು
ಕಾಯುತ್ತಾ ಅಂದಿನಿರುಳ
ನೂರು ಸಂತೋಷಗಳನ್ನು
ಅವಳಿನಿಯನೂ ಬಂದೇಬಿಟ್ಟ!
ಶಯ್ಯೆಗೆ ಸಲ್ಲುವ ಸಮಯವೂ ಆಯಿತು
ಅವನ ಅರಸಿಕ ಬಂಧುಗಳು
ಅವನೊಡನೆ ರಸಹೀನ ಮಾತುಗಳ
ಆಡುವುದನು ನಿಲ್ಲಿಸಲಾರರು
ಬಯಕೆ ಹೆಚ್ಚಾಗಿ, ಹುಚ್ಚಾಗಿ
ಅವಳು ಚಿಟ್ಟನೆ ಚೀರಿಕೊಂಡಳು
ಅಯ್ಯೋ ನನ್ನನ್ನೇನೋ ಕಚ್ಚಿಬಿಟ್ಟಿದೆ
ಅವಳು ದೀಪದ ಮೇಲೆ
ಅವಳ ಉಡುಗೆಯನ್ನು ಕೊಡವುತ್ತಾ
ಅದನ್ನು ನಂದಿಸಿಯೇಬಿಟ್ಟಳು

***

ನಿನಗೊಂದು ಗುಟ್ಟು ಹೇಳುತ್ತೇನೆ ಬಾ
ಎಂದವನು ಆ ಯಾರೂ ಇಲ್ಲದೆಡೆಗೆ
ನನ್ನ ಕರೆದುಕೊಂಡ
ನನ್ನ ಮಗುವಿನಂತಹ
ಹೃದಯ ಅವನ ಬಳಿ
ಸಾರುತ್ತಿದ್ದಂತೆ ಡವಡವ ಬಡಿದುಕೊಂಡಿತು
ಅವನು ನನ್ನ ಕಿವಿಯಲ್ಲೇನೋ ಉಸುರಿದ
ಬಾಯ ಬಳಿ ಉಸಿರಾಡಿದ
ಬಳಿಕ ಗೆಳತೀ
ಅವನು ಜಡೆಗಳ ಹಿಡಿದು
ನನ್ನ ತುಟಿಗಳ ಇನಿಜೇನ ರಸವನ್ನೆಲ್ಲ
ಹೀರಿಕೊಂಡುಬಿಟ್ಟ.

***

ರಸಗವಳದ ಕೆಂಪು ರಸ
ಅಲ್ಲಲ್ಲಿ ಬಿದ್ದಿದೆ ಚಿಕ್ಕೆ ಚಿಕ್ಕೆ
ಗಂಧದೆಣ್ಣೆಯ ಕಪ್ಪು ಗೆರೆ
ಕರ್ಪೂರದ ಲೇಪದ ಗುರುತು
ಕಾಲಲ್ಲಿದ್ದ ಮದರಂಗಿಯ ಕರೆಯ
ವಿನ್ಯಾಸಗಳ ಊರುಗುರುತು
ಮಗ್ಗುಲುಹಾಸಿಗೆಯ ಮಡಿಕೆಗಳಲ್ಲಿ
ಹೆರಳಿಂದುದುರಿದ ಹೂಪಕಳೆಗಳು
ಸುಖಿಸುತ್ತ ಆ ಹೆಣ್ಣು ತಳೆದಿದ್ದ
ಎಲ್ಲ ಭಂಗಿಗಳ ಕತೆಯನ್ನು
ಈ ಮಗ್ಗುಲುಹಾಸಿಕೆಯು
ಬಿಡಿಸಿ ಹೇಳುತ್ತಿದೆ.

***

ಅವನು ಮಲಗಿಬಿಟ್ಟ
ಪ್ರಿಯ ಗೆಳತಿ, ಹೋಗು
ನೀನೂ ಮಲಗು
ಹೀಗೆಂದು ಗೆಳತಿಯರು
ನನ್ನ ಬಿಟ್ಟು ಹೋದರು
ಅದೊಂದು ಕೆರಳಿದ ಹಸಿವು
ನನ್ನ ಆಪೋಶನ ತೆಗೆದುಕೊಂಡಿತ್ತು
ನಾನು ಅವನ ಬಾಯಿಗೆ ಬಾಯೊತ್ತಿದೆ
ಬಿಗಿಯಾಗಿ. ಆದರವನು
ಆಗ್ಗೇ ಉದ್ರೇಕಿತನಾಗಿದ್ದ
ನನಗದು ಅರಿವಾಯಿತು
ಅವನು ಕಣ್ಣುಗಳ ಮುಚ್ಚಿಕೊಂಡಿದ್ದು
ನನ್ನ ಏಮಾರಿಸಲು
ಅದೆಷ್ಟು ನಾಚಿಕೆಯಾಯಿತು ನನಗೆ!
ಆದರವನು ನನ್ನ ನಾಚಿಕೆಯನ್ನು
ದೂರ ಹೋಗಿಸಿಬಿಟ್ಟ
ತಡರಾತ್ರಿ ಬಯಸಿದ ಸ್ಪರ್ಶಗಳಿಂದ

***

ಇಬ್ಬರೂ ಹಾಸಿಗೆಯಲ್ಲಿ
ಆಚೆ ತಿರುಗಿ ಮಲಗಿದರು
ಸದ್ದಿಲ್ಲದೆ ಅನುಭವಿಸುತ್ತ
ಗುಟ್ಟಾಗಿ ಹೊಂದಾಣಿಕೆಯ
ನಿರೀಕ್ಷಿಸುತ್ತ, ಅದೇ ವೇಳೆ
ಅಪಮಾನವ ನಿರೀಕ್ಷಿಸಿ ಅಂಜುತ್ತ
ಯಾವುದೋ ಒಂದು ಕ್ಷಣ
ಅವರ ಕಳ್ಳನೋಟಗಳು ಬೆರೆತವು
ಅನುದ್ದೇಶಿತ ಗೊಳ್ಳನೆಯ ನಗು ನಕ್ಕರು
ಮುನಿಸು ಮುರಿಯಿತು
ಒಂದೇ ಅಪ್ಪುಗೆಗೆ

***

ಇಂಗ್ಲೀಷಿಗೆ: ಆಂಡ್ರೂ ಶೆಲ್ಲಿಂಗ್ (Andrew Schelling)