ಫೆಡೆರಿಕೋ ಗಾರ್ಸಿಯಾ ಲೋರ್ಕನಿಗೊಂದು ಅಳಲು

ದೀವಳಿಗೆಯ ಮಬ್ಬಿನಿರುಳಲ್ಲಿ ಮತಾಪು ಬಣ್ಣಗಳ
ಮುತ್ತು ಸುರಿದಂತೆ ಅವ್ಯಾಹತ
ಪಾರಿಜಾತವು ಬೆಳಗಿನಲಿ ಘಮಲಡರಿ ಹೂವು ಸುರಿದಂತೆ
ಕವಿ ಬರೆದುಕೊಂಡು ಬರುವ ಕವಿತೆ

ನೆಲದ ಘಮಲು, ನೆಲವನಪ್ಪಿದವರ ಬೆವರು
ಎಲ್ಲವೂ ಅವನಿಗೆ ಪ್ರಿಯ, ಜೊತೆಗೆ ಆ ಮೀನಖಂಡದ ಹುಡುಗಿ
ಅಗತ್ಯಕ್ಕೂ ತುಸು ಮೇಲೆ ಲಂಗ ಮೇಲಕ್ಕೆತ್ತಿ
ಬಳುಕಿ ಹೊಳೆದಾಟುವ ಹುಡುಗಿ
ಕಂಡು ವಯಸು ನೆನಪು ಬಂದು ನಸುನಗುವನು ಕವಿ

ಹೊಳೆಯ ಬದಿಯ ಅವಳ ಕೂಡುವ
ಆ ಕಟ್ಟು ಮಸ್ತಿನ ಹುಡುಗ
ತಣಿದು ಮರಳಿ ಹೊಳೆದಾಟುವ ಅವಳ
ಹೊಳೆವ ಮೀನಖಂಡ, ತಣಿದ ತುಟಿ, ದಣಿದ ಮೊಲೆಯ
ಮೆಚ್ಚಿ ಹಾಡು ಬರೆದು ಹಾಡುವ ಕವಿ

ಬೆಳೆದು ನಿಂತ ಬೆಳೆಯ ಕಂಡು
ಆಡುತಿರುವ ಮಗುವ ಕಂಡು
ನಗುತ್ತಿರುವ ಗಗನ ಕಂಡು
ಕೊಳಲನೂದಿ ಮೈಯ ಮರೆಯುವ ಕವಿ

ಕೊರೆದ ಪರಿಗೆ ಉರಿದು ನಲಿದು
ಮಾಯವಾದ ಮತಾಪಿನ ಬೆಳಕಿನಂತೆ
ಕವಿಯ ಮಾತು ಹಿಂದೆ ಬಿತ್ತು ಕಗ್ಗತ್ತಲಿನ ಬೆನ್ನಿಗೆ

ಬೆಟ್ಟದಹಂಕಾರವನ್ನು ಮಾತಿನಲ್ಲೆ ಚುಚ್ಚಿ
ಕಣಿವೆಯ ದುಗುಡವನ್ನು ಮಾತಿನಲ್ಲೆ ಕಳೆದ
ಒಪ್ಪದಹಂಕಾರವನ್ನು ಧಿಕ್ಕರಿಸಿ ಸೆಟೆದ ಹಾಡು
ಒಲವಿಗೆ ವೀಳೆಯವಿಟ್ಟು ಕರೆವ ದನಿಯು
ಮರೆಯಾಯಿತು, ಮರೆಯಾಯಿತು
ಹಾಡು ಹರಿವ ತೊರೆಯಾಯಿತು
ಎಲ್ಲ ನಿಜ, ನನ್ನ ದೊರೆ
ಎಲ್ಲಿ ಹೋಯ್ತು ಅವನ ಅಳಲು ಹೇಳು ಕೊರ್ಡೋಬಾ
ಓ ಕೊರ್ಡೋಬಾ, ಓ ಕೊರ್ಡೋಬಾ!!

 

ಫೆಡೆರಿಕೋ ಗಾರ್ಸಿಯಾ ಲೋರ್ಕ :
05.06.1898ರಲ್ಲಿ ಗ್ರನಡಾದಲ್ಲಿ ಹುಟ್ಟಿದ. ಲೋರ್ಕನ ತಂದೆ ಅನುಕೂಲಸ್ಥ ರೈತ, ತಾಯಿ ಅಧ್ಯಾಪಕಿ. ಅವರು ಅವನ ಸಾಹಿತ್ಯ ಪ್ರವೇಶಕ್ಕೆ ಅನುವಾದವರು. ಅವನು ಒಳ್ಳೆಯ ಸಂಗೀತಗಾರ-ಪಿಯಾನೋ ವಾದಕ, ಸ್ವಯಂ ಉತ್ತಮ ಚಿತ್ರಕಾರನಾದ ಲೋರ್ಕ, ಸಾಲ್ವಡಾರ್ ಡಾಲಿಯ ಒಡನಾಡಿಯಾಗಿದ್ದ. ಸ್ಪೇನ್, ಅರ್ಜೆಂಟೈನಾಗಳಲ್ಲಿ ಸಂಚರಿಸಿದ್ದ ಲೋರ್ಕ ತುಂಬ ಸುಂದರ ಕವಿತೆ ಬರೆದ. ಅವನ ಕವಿತೆಗಳು ಆಂಡಲೂಸಿಯನ್ ಜಾನಪದ ಹಾಗೂ ಸರ್ರಿಯಲಿಸ್ಟಿಕ್ ಆದ ಕಾವ್ಯತಂತ್ರಗಳ ಬೆಸುಗೆ. ದಸ್ ಫೈವ್ ಇಯರ್ಸ್ ಪಾಸ್, ದ ಪಬ್ಲಿಕ್, ಡೋನ್ನಾ ರಿಸ್ಟಾ ಅವನ ಹೆಸರಿಸಲಾದ ರಚನೆಗಳು. ಅವನ ಸಮಕಾಲೀನರಾದ ಯೇಟ್ಸ್, ಎಲಿಯಟ್ರಿಗಿಂತ ಲೋರ್ಕನ ಬರೆಹಗಳು ಉತ್ತಮ ಎನ್ನುವವರಿದ್ದಾರೆ. ಉತ್ತಮ ನಾಟಕಕಾರನೂ ಆದ ಲೋರ್ಕನ ನಾಟಕಗಳು The Butterfly’s Evil Spell (1920), The Girl Who Waters the Sweet Basil Flower and the Inquisitive Prince (1923), The House of Bernarda Alba (1945) Blood Wedding (1933), The Shoemaker’s Prodigious Wife, Yerma (1934) .
ಲೋರ್ಕ ನಾಟಕಗಳ ಮೂಲಕ ಕನ್ನಡಿಗರಿಗೆ ಪರಿಚಿತನಾಗಿರುವವನು. ಅವನ Blood Wedding (1933), The Shoemaker’s Prodigious Wife, Yerma (1934) ನಾಟಕಗಳನ್ನು ಅಗಲಿದ ನನ್ನ ಹಿರಿಯ ಮಿತ್ರ ಕಿ.ರಂರ ಪತ್ನಿ – ಅಗಲಿದ ವಿಜಯಲಕ್ಷ್ಮಿ ಕನ್ನಡಕ್ಕೆ ತಂದಿದ್ದಾರೆ.
ಸ್ಪಾನಿಶ್ ಸಿವಿಲ್ ವಾರ್ ಅಗಸ್ಟ್ 9, 1936ರಲ್ಲಿ ಲೋರ್ಕನನ್ನು ಬಲಿತೆಗೆದುಕೊಂಡಿತು. ಜನರಲ್ ಫ್ರಾಂಕೋನ ಸೈನಿಕರು ಅವನನ್ನು ಬಯಲಿಗೆ ಎಳೆದುಕೊಂಡು ಹೋಗಿ ಅವನಿಗೆ ಗುಂಡಿಕ್ಕಿದರು. ಹೆಸರಿಲ್ಲದ ಗುಂಡಿಯೊಂದಕ್ಕೆ ಅವನ ಶವವನ್ನು ಎಸೆದು ಮುಚ್ಚಿ ಹಾಕಿದರು.