ಕಾಳ ರಾತ್ರಿಯೊಂದರ ಜಪ…

ಈ ನಿಶ್ಚಿಂತ ರಾತ್ರಿಗಳ ಮೇಲೆ
ಕೋಪ ಬರುತ್ತದೆ ನನಗೆ
ಅದೆಷ್ಟು ನಿಶ್ಚಿಂತೆ ಇವಕ್ಕೆ…
ಹೊದ್ದ ಚಾದರದ ಚಿತ್ತಾರ ಸೂಸುತ್ತಿದೆ
ಎಂಥದೋ ಹಸಿ ವಾಸನೆ
ನರಳುತ್ತಿವೆ ಕನಸ ಬೀಜಗಳು
ಸುನೀಲ ಆಗಸ ಅತ್ತಂತೆ
ಹೊಳೆದ ಕಾಮನ ಬಿಲ್ಲು ಮುರಿದು ಬಿದ್ದಂತೆ
ಹಗಲಿಗೆ ಹಗಲೇ ಕಪ್ಪಾದಂತೆ

ವಿಶ್ವವೇ ಕತ್ತಲೆಯ ಕಪಿ ಮುಷ್ಟಿಯಲ್ಲಿ
ಮುದುರಿ ಮಲಗಿದೆ
ಹಿಡಿ ಬೆಳಕಿನ ಕಂದೀಲಿನ ಕೆಳಗೆ
ನಮ್ಮ ಬದುಕು ಲೆಕ್ಕ ಹಾಕುತ್ತಾ ಬದುಕಿದೆ
ಹುಟ್ಟು ಹಬ್ಬದ ಕೇಕಿನ ಮೇಲೆ
ನಿಲ್ಲಲಾಗದೆ ಮುರಿದು ಬಿದ್ದ
ಕ್ಯಾಂಡೆಲ್ಲುಗಳೆಲ್ಲ ಹುಟ್ಟು-ಹಬ್ಬಗಳ
ಸಾಲನ್ನು ಜರೂರು ಸೇರಬಯಸುತ್ತಿವೆ

ಹಗಲಿಗೆ ಬಾಯಿ ತೆರೆದು ಕೂತಿರುವ
ಕರಿಗತ್ತಲ ಕಾಳ ರಾತ್ರಿಯೊಂದರ ಜಪಕ್ಕೆ
ಸೋಲುವ ಮನಸಾಗುವುದೇ ಸಾಕ್ಷಾತ್ಕಾರ
ಜಪಮಣಿಗಳು ಸ್ಪಟಿಕಶುದ್ಧವಾಗಿ ಹೊಳೆಯುತ್ತಿವೆ
ಸುಲಲಿತವಾಗಿ ಜಾರುತ್ತಿವೆ ಲೆಕ್ಕ ತಪ್ಪದೆ
ಒಂದು ಸ್ನಿಗ್ಧ ಮೂರ್ತಿಯಂಥಾ ಹೊಳಪಿನ
ಚೂರೊಂದು ಕತ್ತಲ ನೆತ್ತಿಯ ನೇವರಿಸಿ
ಮಮತೆಯಿಂದ ಮಲಗಿಸುತ್ತಿದೆ

ಚಿನ್ನಾರಿಯೊಬ್ಬಳ ಗೆಜ್ಜೆಯ ಕಿಂಕಿಣಿಯಂತಹಾ
ನಾದ ಈ ಇರುಳ ಬೆನ್ನಿಗಂಟಿರಬೇಕು
ಸದಾ ಆ ಸದ್ದನ್ನು ನಾನು ಹಿಂಬಾಲಿಸುತ್ತಿರುತ್ತೇನೆ
ನನ್ನೆಲ್ಲ ಕನಸುಗಳ ಪವರ್ ಆಫ್ ಅಟಾರ್ನಿಯನ್ನು
ಅದಕ್ಕೆ ಬರೆದುಬಿಟ್ಟಿದ್ದೇನೆ
ನನ್ನದೆಂದು ಹೇಳಿಕೊಳ್ಳಲಿಕ್ಕಾದರೂ
ಒಂದನ್ನು ಉಳಿಸಿಟ್ಟುಕೊಳ್ಳದೆ
ಕತ್ತಲೆಗೆ ಕನಸುಗಳ ಜೀತಕ್ಕಿಟ್ಟು
ಹಂಗಿನ ಬೆಳಕನ್ನು ತೋಮ ಕಟ್ಟುತ್ತಿದ್ದೇನೆ